ಒಟ್ಟು 253 ಕಡೆಗಳಲ್ಲಿ , 55 ದಾಸರು , 228 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದಕೊ ಕಾಶಿಯನು ಮನವೇ ಬೆದಕುಗೊಳ್ಳಲು ಬೇಡ ತೋರುವೆನು ಪ ಬಲ್ಲವನಾದರೆ ಇಲ್ಲಿಯೆ ಕಾಶಿ ಕಲ್ಲೆದೆಯಾದವನಲ್ಲವೆ ದೋಷಿ ಎಲ್ಲವ ತಿಳುಹುವೆ ಚಲ್ವ ಸಂತೋಷಿ ಸೊಲ್ಲ ಲಾಲಿಸಿ ಕೇಳು ಪೇಳ್ವೆ ನಿರ್ದೋಷಿ 1 ಕಾಶಿಯ ದರುಶನವಿಲ್ಲದ ಜನರು ವಿ- ಶೇಷವಾಗಿಯೆ ಇಲ್ಲಿ ನಡೆಕೊಂಬುತಿಹರು ದೂಷಣ ಮಾಡದೆ ಪೋಷಿಸುವವರು ಕಾಶಿಗಿಮ್ಮಡಿಯಾಗಿ ಲೇಸ ಪಡೆಯುವರು 2 ವೇದವನೋದಿದ ವಿಪ್ರನೆ ಕಾಶಿ ವಾದಗಳಿಲ್ಲದ ಸೋದರನೆ ಕಾಶಿ ಆ ಧನ ಕೈಯೊಳು ಇದ್ದರೆ ಕಾಶಿ ಮಾಧವ ಧ್ಯಾನವು ಮನದೊಳು ಕಾಶಿ 3 ಅವ್ವೆ ತಂದೆಯ ಸೇವೆ ಮಾಳ್ಪುದೆ ಕಾಶಿ ದೇವರ ಪೂಜೆಯ ನೋಳ್ಪುದೆ ಕಾಶಿ ಜೀವರಕ್ಷಣ್ಯವ ಮಾಳ್ಪುದೆ ಕಾಶಿ ಭಾವಶುದ್ಧತ್ವದಿ ಇಪ್ಪುದೆ ಕಾಶಿ 4 ಗುರುಗಳಿಗೆರಗುವ ಪರಿಯೊಂದು ಕಾಶಿ ಹಿರಿಯರ ಆಜ್ಞೆಯೊಳಿರುವುದು ಕಾಶಿ ಪರವುಪಕಾರವು ಸ್ಥಿರವಾದ ಕಾಶಿ ಕರೆದು ಮೃಷ್ಟಾನ್ನವನೆರೆವುದು ಕಾಶಿ 5 ಅರಳಿಯ ವೃಕ್ಷವ ನೆಟ್ಟರೆ ಕಾಶಿ ಕೆರೆ ಬಾವಿ ಕಟ್ಟಲು ಇಷ್ಟದ ಕಾಶಿ ಅರವಟ್ಟಿ ನೀರಿರಿಸಲು ದೃಷ್ಟ ಕಾಶಿ ಸಿರಿಲಕ್ಷ್ಮಿಯರಸನ ಕರೆವುದು ಕಾಶಿ 6 ದುಷ್ಟರ ಸಂಗವ ಬಿಡುವುದೆ ಕಾಶಿ ಕಷ್ಟದ ಮಾರ್ಗವ ತೊರೆವುದು ಕಾಶಿ ಶಿಷ್ಟರ ಸೇರುವುದು ಇಷ್ಟದ ಕಾಶಿ ಬೆಟ್ಟದ ಒಡೆಯನ ನೆನೆವುದೆ ಕಾಶಿ 7 ಏಕಾದಶಿ ಉಪವಾಸವೆ ಕಾಶಿ ಆಕಳ ದಾನವ ಮಾಳ್ಪುದೆ ಕಾಶಿ ಬೇಕಾದುದಿದ್ದರೆ ಮನೆಯೆಲ್ಲ ಕಾಶಿ ಕಾಕು ಸೇವೆಯಿಲ್ಲದ ಮನುಜನೆ ಕಾಶಿ 8 ಉದಯದಿ ಸ್ನಾನವ ಮಾಳ್ಪುದೆ ಕಾಶಿ ಪದುಮನಾಭನ ಧ್ಯಾನ ಮೃದುವಾದ ಕಾಶಿ ಕದನವಿಲ್ಲದ ಊರ ನೋಡಲು ಕಾಶಿ ಉದರವು ತುಂಬಲು ಬಡವಗೆ ಕಾಶಿ 9 ರುದ್ರ ದೇವನ ಪೂಜೆ ಇದ್ದಲ್ಲಿ ಕಾಶಿ ವಿಧ್ಯುಕ್ತ ಮಾರ್ಗದಿ ನಡೆವುದು ಕಾಶಿ ಬದ್ಧವಾಗೈವರ ಕಟ್ಟಲು ಕಾಶಿ ಶುದ್ಧವಾದ ಹೆಂಡತಿ ಮುದ್ದಿನ ಕಾಶಿ 10 ಸನ್ಯಾಸ ಮಾರ್ಗವು ಚೆನ್ನಾದ ಕಾಶಿ ಅನ್ಯಾಯವಿಲ್ಲದ ಅರಸನೆ ಕಾಶಿ ಕನ್ಯಾದಾನವು ಮುನ್ನಿನ ಕಾಶಿ ಮನ್ನಿಸಿಕೊಂಡರೆ ತನ್ನಲ್ಲೆ ಕಾಶಿ 11 ಅಧ್ಯಾತ್ಮ ವಿದ್ಯೆಯ ಹೊದ್ದಲು ಕಾಶಿ ಬದ್ಧ ನಡೆನುಡಿ ಇದ್ದರೆ ಕಾಶಿ ಮಧ್ವರಾಯನು ಕುಳಿತಿದ್ದಲ್ಲಿ ಕಾಶಿ ಪದುಮನಾಭನ ನೆನವಿದ್ದರೆ ಕಾಶಿ 12 ದಾನದೊಳಗೆ ಸಮಾಧಾನವೆ ಕಾಶಿ ಮಾನದೊಳಗೆ ಅಭಿಮಾನವೆ ಕಾಶಿ ಸ್ನಾನದೊಳಗೆ ಭಕ್ತಿ ಸ್ನಾನವೆ ಕಾಶಿ ಜ್ಞಾನದೊಳಗೆ ಶುದ್ಧಜ್ಞಾನವೆ ಕಾಶಿ 13 ದೇವರೊಳಗೆ ಸಾಲಿಗ್ರಾಮವೆ ಕಾಶಿ ಜೀವರೊಳಗೆ ಗೋವುಚಯವೆಲ್ಲ ಕಾಶಿ ಹೂವಿನೊಳಗೆ ಬಿಲ್ವಪತ್ರಿಯೆ ಕಾಶಿ 14 ಹಲವು ಮಾತುಗಳೇನೀಪರಿ ಕಾಶಿ ಛಲ ಭಕ್ತಿಯಿದ್ದರೆ ಜಲವೆಲ್ಲ ಕಾಶಿ ಒಲವುಳ್ಳ ವರಾಹತಿಮ್ಮಪ್ಪನೆ ಕಾಶಿ ಕುಲವೃಕ್ಷವೆಂಬುದು ಫಲವಾದ ಕಾಶಿ 15
--------------
ವರಹತಿಮ್ಮಪ್ಪ
ಇಂದು ಧರಿಯೊಳು ಬ್ರಹ್ಮಾನಂದವನು ತುಂಬಿ ತುಳುಕತಿಹ್ಯಾನಂದಮಯ ಕಾಯದೊಳು ಕೌತುಕವು ನಾದಬಿಂದು ಕಳಿಯಲಿ ಸ್ತುತಿಸಲೆನ್ನಳವಲ್ಲ ಕ್ಷಿತಿಯೊಳು ಘನಮಹಿಮೆ ಅತಿಹರುಷವನು ದೋರುತಿಹ್ಯ ಸದ್ಗತಿ ಸುಖವು ಗುರುದಾಸರು 1 ಓಂಕಾರ ಮೊದಲಾದ ಶ್ರುತಿವೇದ ಘೋಷಗಳು ಧಿಮಿಧಿಮಿಸುವ ಮಹಾಶಬ್ದಗಳು ವಾದ್ಯಗಳು ಕೇಳುವದು ನೀದೃಶ್ಯೆಲಿ ಗರ್ಜಿಸುವ ಭೃಂಗಿಶಂಖನಾದ ಧ್ವನಿಯಗಳು ಭೋರಿಡುವ ಭೇರಿ ಮೃದಂಗ ವೇಣಿಯಗಳು ಚಿಣಿ ಚಿಣಿ ತಂತ್ರ ಮೊದಲಾದ ಸಂಕಾರಗಳು ಕೇಳಿ ಪಾವನವಾದೆನು 2 ಬೆರೆದು ನೋಡಲು ಅಂತರಾತ್ಮದೊಳು ಪ್ರಭೆಯಗಳು ಥಳಥಳಿಸುವಾ ಮಹಾತೇಜಗಳು ಪುಂಜಗಳು ಹೇಳಲಿನ್ನೇನದ ಹೊಳವಗಳು ಸುಳವಗಳು ನೋಡುವದು ಅನಿಮಿಷದಲಿ ರವಿ ಶಶಿ ತಾರೆಗಳು ಸೂಸುತಿಹ್ಯ ಕಿರಣಗಳು ಭಾಸಿಸುವ ನಾನಾವರ್ಣಗಳು ಛಾಯಗಳು ಬೆರಗಾದೆÀನಿಂದ 3 ವರ್ತಿಸುತ್ತಲಿಹ ಪ್ರವೃತ್ತಿ ನಿವೃತ್ತಿಗಳು ಅಂತರಾತ್ಮದ ವಾಯುಸ್ತುತಿಯಗಳು ಗತಿಯಗಳು ತಿಳಿವದೀ ಪ್ರಣಮ್ಯಲಿ ಸೂಸುತಿಹ ಶ್ವಾಸವುಚ್ಛ್ವಾಸನಿಯ ಭಾಸಿಗಳು ಶೋಭಿಸುವ ಜೀವನದ ಮಂತ್ರ ಸರ ಮಾಲೆಗಳು ಪಾವನವಾದೆನು 4 ಕರದ್ವಯಂ ಮುಗಿದು ವರಗುರುಚರಣಕಮಲಕಿ ನ್ನೆರಗಿ ಪರಮಾನಂದ ಹರುಷದಿ ಶಿರಸದಿ ಶ್ರೀಗುರುಮೂರ್ತಿಯ ನೆನೆವೆನು ಸದ್ಭಾವದಿಂದ ಸದ್ಗುರು ಪಾದಮಂಪಿಡಿದು ಸದ್ಬ್ರಹ್ಮರಸದೊಳು ಮುಳುಗಿ ಸದ್ಭಕ್ತಿಯಲಿ ಸದ್ಗತಿ ಸಾಧನವು ಸಾಧಿಸಿಹ್ಯ ಮಹಿಪತಿಯು ] ಶ್ರೀ ಗುರುಕೃಪೆಯಲಿನ್ನು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದ್ದೀಯಯ್ಯ ಎನ್ನೊಳಗೆನೀ ಇನಕುಲರಾಯ ಪ ಇದ್ದೀಯೈ ಸರ್ವರ ಹೃದ್ಗುಹೆಯೆಂತೆಂಬ ಪದ್ಮದೊಳಗೆನೀನು ಪದುಮೆಯಿಂದೊಡಗೂಡಿ ಅ.ಪ ಮರುತಾತ್ಮಜ ನಿನ್ನ ಚರಣವನೊತ್ತಲು ಸರಸಿಜಭವ ಮುಖ್ಯ ಪರಿವಾರಸಹಿತನು 1 ಮೂರು ಲೋಕದ ವ್ಯಾಪಾರ ನಡೆಸುತ್ತ ಯಾರಿಗು ತಿಳಿಸದೆಯೆಲ್ಲೆಲ್ಲಿಯು ನೀನೆ 2 ಪ್ರೇಮದಿಂದಲಿ ಭಕ್ತಸ್ತೋಮವೋಲೈಸುವದು ಸ್ವಾಮಿಯಾಗಿ ಗುರು ರಾಮವಿಠಲ ತಂದೆ 3
--------------
ಗುರುರಾಮವಿಠಲ
ಉ. ಲೋಕನೀತಿ ತಿಂದು ಮುಗಿಯುವುದಿಲ್ಲ ಋಣ ಬಾಧೆಯೆಲ್ಲ 1 ಎಡೆಬಿಡದ ಚಿಂತೆಗಳು ಕಡೆಗಾಣದಿಹುದು 2 ಅನ್ನಕಂಟಕ ಭೂಮಿ ಭಾರವಾಯ್ತು 3 ಬಂದಿಕಾರನವೋಲ್ ನಾನೆಂಬ ಚಿಂತೆ 4 ದೇನನುಸುರುವುದಿನ್ನು ತಾನಾದುದನ್ನು 5
--------------
ಸದಾನಂದರು
ಉದಯಲೆದ್ದು ಶ್ರೀ ಗುರುವೆನ್ನಿರೊ ಉದಧಿನಿವಾಸ ಸದ್ಗುರುವೆನ್ನಿರೊ ಧ್ರುವ ಕರುಣಕರನೆನ್ನಿ ಗುರುಮುರಹರನ್ನೆನಿ ಕರಿವರ ಹರಿ ಸರ್ವೋತ್ತಮನೆನ್ನಿ 1 ಸುರಮುನಿವರನೆನ್ನಿ ಗುರುಗಿರಿಧರನೆನ್ನಿ ನರಕೀಟಕನ ಪಾಲಿಪನೆನ್ನಿರೊ 2 ಶರಣರಕ್ಷಕನೆನ್ನಿ ವರದಾಯಕನೆನ್ನಿ ತ್ರ್ಯೆಲೋಕ್ಯನಾಥ ತಾರಕನೆನ್ನಿರೊ 3 ವಿಹಂಗವಾಹನನೆನ್ನಿ ತ್ರಿ ಕಂಚಧರ(?)ನೆನ್ನಿ ಪಾಸಾಲ(?) ಸಾಹಿತ್ಯದೇವನೆನ್ನಿ 4 ಭಕ್ತವತ್ಸಲನೆನ್ನಿ ಮುಕ್ತಿದಾಯಕನೆನ್ನಿ ಮಹಿಪತಿ ಗುರು ಭವನಾಶನೆನ್ನಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಉದರ ಪೂರ್ತಿಯ ಕೊಡದಿರು ಉದಧಿಶಯನ ಪ ಮುದದಿ ನಿನ್ನನು ನೆನೆದು ಮಲಗುವೆನೊ ಸುಖದಿ ಅ.ಪ ಮುದದಿ ನಿನ್ನ ಚರಣವನು ಸ್ಮರಿಸುವುದು | ಪರಿಹಾರವು ಬಹು ಗರ್ವ ಹೆಚ್ಚುವುದು ಎನಗೆ | ಅರವಿಂದನಾಭ ಹರಿ ವರವಿದೆ ನಿನ್ನ ಕೇಳ್ವೆ | ಪರಿಹಾಸ್ಯ ನುಡಿಯಲ್ಲ ಪರಮ ಪಾವನಗೆ 1 ತನುಮನವು ನಿನ್ನ ವಿಷಯಕ್ಕೆರಗಲಿ | ಅನುಮಾನವಿದ್ದ ಪರಿಯೆಲ್ಲ ತೊಲಗಿ || ವನಜಸಂಭವನೈಯ್ಯ ವೈಕುಂಠಪತಿ ನಿನಗೆ | ಅನವರತ ದೊರೆ ಎಂಬೊ | ಘನತೆ ತಪ್ಪದೆ ಇರಲಿ2 ಗಜಮದದಿ ಕಂಗೆಟ್ಟ ಪರಿಯನ್ನ ಮಾಡದೇ | ಅಜಮಿಳಗೆ ಒಲಿದಂತೆ ಎನಗೆ ವೊಲಿದೂ || ಸುಜನ ರಕ್ಷಕನೆಂಬೊ ಬಿರುದು ಬೇಕಾದರೆ | ನಿಜವಾಗಿ ದಯಮಾಡೊ ವಿಜಯವಿಠ್ಠಲನೇ3
--------------
ವಿಜಯದಾಸ
ಉದ್ಧರಿಸಿರೋ ನೀವು ನಿಮ್ಮ ತಿಳಿಯಬೇಕು ಪರಬೊಮ್ಮ ಪ ಮನುಜ ಜನ್ಮಕೆ ಬಂದು ಮರೆತರೆ ಕಷ್ಟವು ಮುಂದುಇನಿತು ವಿಚಾರವಿಲ್ಲ ಇದುವೆ ವಿವೇಕವದಲ್ಲ 1 ಕೊನಬುಗಳೆಲ್ಲವ ಬಿಡಿರೋ ಕೋಪವನೆಲ್ಲವ ಸುಡಿರೋತನು ಸುಖವಾಗಿಹುದಲ್ಲ ತಪ್ಪಿದರೆ ಬಳಿಕೆಲ್ಲ 2 ಭ್ರಮೆಯೆಲ್ಲವ ಬಿಡಬೇಕು ಬಂಧನ ಹರಿಯಲು ಬೇಕುನಮಗಿದು ನೀತಿಯಿದಲ್ಲ ನಾಚಿಕೆ ಕಿಂಚಿತ್ತು ಇಲ್ಲ 3 ತನ್ನ ತಿಳಿದರೆ ತಾ ಬಂಧು ತನ್ನ ಮರೆತರೆ ಶತ್ರುವಹಸನ್ನುತವಚನವಿದೀಗ ಸಾಧಿಸುವುದು ಬಹುಬೇಗ4 ಚೆನ್ನಾಗಿ ಶ್ರವಣದ ಕೇಳಿ ಚಿತ್ತ ಶುದ್ಧಿಯ ತಾಳಿಚಿನ್ಮಯನನು ನೀವು ಧರಿಸಿ ಚಿದಾನಂದ ತಾವೆಂದು ಸ್ಮರಿಸಿ5
--------------
ಚಿದಾನಂದ ಅವಧೂತರು
ಎನ್ನಯ್ಯ ಎಲ್ಲ ನಿನ್ನದಯ್ಯ ಹರಿ ನಿನ್ನ ಮಾಯ ಜಗ ವಿಷ್ಣುಮಯ ಪ ಎತ್ತನೋಡಿದರು ನಿನ್ನ ಕ್ಷೇತ್ರ ಹರಿ ಸುತ್ತ ತಿರುಗೋದೆಲ್ಲ ನಿನ್ನ ಸೂತ್ರ ನಿತ್ಯ ನಡೆವುದೆಲ್ಲ ನಿನ್ನ ಯಾತ್ರ ಹರಿ ಭವ ನಿನ್ನ ಚಿತ್ರ 1 ವೇದ ನಾದವೆಲ್ಲ ನಿನ್ನ ಮಂತ್ರ ಹರಿ ಓದು ವಾದ ಎಲ್ಲ ನಿನ್ನ ತಂತ್ರ ಬಾಧೆ ವಿನೋದ ಎಲ್ಲ ನಿನ್ನ ಯಂತ್ರ ಹರಿ ಆದಿ ಅನಾದಿ ಸರ್ವ ನಿನ್ನ ಸ್ವತಂತ್ರ 2 ರೋಗ ರಾಗ ಎಲ್ಲ ನಿನ್ನ ಶೂಲ ಹರಿ ಭೋಗ ಭಾಗ್ಯವೆಲ್ಲ ನಿನ್ನ ಜಾಲ ಜಾಗರ ಸದಾ ನಿನ್ನ ಶೀಲ ಹರಿ ಬೈಗುಬೆಳಗುಯೆಲ್ಲ ನಿನ್ನ ಲೀಲಾ 3 ಆಟ ನೋಟವೆಲ್ಲ ನಿನ್ನ ಮತಿ ಹರಿ ಝಾಟ ಮಾಟ ಎಲ್ಲ ನಿನ್ನ ಕೃತಿ ಊಟ ಕೂಟವೆಲ್ಲ ನಿನ್ನ ರತಿ ಹರಿ ಕೋಟಿ ಕೋಟಿ ಕಲ್ಪ ನಿನ್ನ ಸ್ಮøತಿ 4 ಕುಂದು ನಿಂದೆಯಲ್ಲ ನಿನ್ನ ಜಪವು ಹರಿ ಬಂದ ಬಂಧವೆಲ್ಲ ನಿನ್ನ ತಪವು ಅಂದಿಗಿಂದಿಗು ನಿನ್ನ ನಾಮ ನೆನವು ಸ್ಥಿರ ವೊಂದೆ ಕೊಟ್ಟು ಶ್ರೀರಾಮ ಸಲಹು 5
--------------
ರಾಮದಾಸರು
ಎಲೊ ರಂಗ ಎಲೋ ರಂಗನೇ ಸಲಹೊ ಶುಭಾಂಗನೆ ಪ ಜಯಕರ ಶ್ರೀಹರಿಯೆ ದಯವಂತನಾಗಯ್ಯ ಭಯ ಭಕ್ತಿಯಲಿ ನಿಮ್ಮ ದಯವ ಬೇಡುವೆನಯ್ಯ 1 ನಿನ್ನ ಭಕ್ತನು ನಾನು ಬನ್ನಬಡಿಸುವಿ ಯಾಕೋ ಮುನ್ನಿನ ಭಕ್ತರಂತೆನ್ನನು ಸ್ಮರಿಸಯ್ಯ 2 ಶರಣೆಂದು ವಿಭೀಷಣಗೆ ಕರುಣಿಸಿ ಲಂಕೆಯ ಸ್ಥಿರಪಟ್ಟ ಕೊಟ್ಟಂಥ ಕರುಣಾಳು ಮೊರೆ ಕೇಳೊ 3 ಯತಿವರನ ಯಾಗವ ಹಿತದಿ ರಕ್ಷಿಸಿದಂಥ ಪತಿತಪಾವನ ಎನ್ನ ಹಿತದಿಂದ ಕಾಯೆಲೊ 4 ಸತತ ನಿಮ್ಮಯ ಪಾದಸ್ತುತಿಯೊಳಿರಿಸಿ ಎನ್ನ ಮೃತ್ಯುಬಾಧ್ಹರಿಸಯ್ಯ ಕ್ಷಿತಿವರ ಶ್ರೀರಾಮ 5
--------------
ರಾಮದಾಸರು
ಏಕೆ ಚಿಂತಿಪೆ ನೀ ಎಲೆ ಕೋತಿಮನವೆ ಪಾದ ಗಟ್ಟ್ಯಾಗಿ ನಂಬದಲೆ ಪ ಹಿತದ ಭಕ್ತನು ಎಂದು ಮತಿಹೀನ ಭಸ್ಮಗುರಿ ಹಸ್ತವರವಿತ್ತ್ಹರನು ಮತಿದಪ್ಪೋಡುತಿರೆ ಗತಿನೀನೆ ಹರಿಯೆನಲು ಅತಿದಯದಿಂ ಶಿವನ್ನುಳಿಸಿ ಕೃತ್ತಿಮನ್ನಳದ ಹರಿ ಪತಿತಮಹಾತ್ಮರಿಯೆ 1 ಘುಡುಘುಡಿಸಿ ಹಿರಣ್ಯನು ಜಡಮತಿ ಹರಿಯೆಲ್ಲಿ ಗಡ ತೋರೀ ಕಂಬದಿ ಎಂದಾರ್ಭಟಿಸಿ ಬರಸೆಳೆಯೆ ನಡುನಡುಗಿ ಪ್ರಹ್ಲಾದ ಜಡಜಾಕ್ಷ ಪೊರೆಯೆನಲು ಮೂಡಿ ಕಂಬದಿ ಖಳನ ಒಡಲ ಬಗೆದದ್ದರ್ಹಿಯೆ 2 ಕುರುಪನ ಸಭೆಯೊಳಗೆ ಮೊರೆಯಿಟ್ಟ ದ್ರೌಪದಿಗೆ ಕರುಣದಕ್ಷಯವಿತ್ತು ಪೊರೆದ ಪರಮಾತ್ಮ ಕರುಣಾಳು ಶ್ರೀರಾಮ ಚರಣದಾಸರ ನೆರ ಅರೆಘಳಿಗೆ ಬಿಟ್ಟಿರನು ನಿರುತ ನೀ ಸ್ಮರಿಸೋ 3
--------------
ರಾಮದಾಸರು
ಏತಕೆ ಒಣಭ್ರಾಂತಿ ತಿಳಿಯದು ಮೂರುದಿನದ ಸಂತಿ ನೀತಿಗೆಟ್ಟು ಸತಿಮೋಹದಿ ಕುಳಿತೆಮದೂತರೆಳೆಯುವಾಗೇನಂತಿ ಪ ಬರುವಾಗೊರ್ವಬಂದಿ ಬರುತಲೆ ಮಂದಿ ಮಕ್ಕಳೆಂದಿ ಇರು ಇರುತೆಲ್ಲ ನನ್ನದೆಂದಿ ಮರೆವಿನ ಆಲಯದೊಳು ನಿಂದಿ ಕರುಣವಿಲ್ಲದೆತುಸು ಹೆಡತಲೆಮೃತ್ಯು ಮುರಿದು ತಿನ್ನುವಾಗ್ಯಾರಿಲ್ಲ ಹಿಂದೆ 1 ತನುಜನರು ಇವರು ಧನಕನಕಿರುವತನಕ ಹಿತರು ಜನಕಜನನಿಯರು ಕೊನೆಗೆ ಸಂಗಡ ಬರರ್ಯಾರು ಕನಿಕರವಿಲ್ಲದೆ ಕಾಲದೂತರು ಘನಬಾಧೆಪಡಿಸಲು ಬಿಡಿಸರೋರ್ವರು 2 ಭೂಮಿ ಸೀಮೆಯೆಲ್ಲ ಈ ಮಹರಾಜ್ಯ ಭಂಡಾರ ಸುಳ್ಳು ಪಾಮರ ಸಂಸಾರ ಕಾಮಿಸಿ ಕೆಡಬೇಡೇಲೆ ಮಳ್ಳ ಕಾಮಜನಕ ನಮ್ಮ ಸ್ವಾಮಿ ಶ್ರೀರಾಮನ ನಾಮಭಜಿಸಿ ಭವಗೆಲಿದು ನೀ ಬಾಳೋ3
--------------
ರಾಮದಾಸರು
ಏನಾಗುವುದು ತಾನಾಗಿದೆ ಜಗ ನೀನ್ಯಾಕದರೋಳ್ಪಾಲಿಡುವ್ಯೋ ಪ ಕಾಣುಕಾಣುತಲಿ ಶೂನ್ಯವೆನಿಪುದೆಲ್ಲ ಜಾಣನಾಗಿ ಭವಗೆಲಿಯೆಲವೋ ಅ.ಪ ಸತತದಿ ಸತಿಸುತರ್ಹಿತಕಾಗಿ ಬಲು ಮತಿಗೆಟ್ಟತಿಯಾಗ್ವ್ಯಥೆಬಡುವ್ಯೋ ಪೃಥಿವಿ ಮೇಲೆ ನಿನ್ನ ಮತಿಯಲಿಂದ ಮಣ್ಣು ಪ್ರತಿಮೆಮಾಡಿ ಸೃಷ್ಟಿಗೊಳಿಸಿದೆಯೋ 1 ಹಲವುವಿಧದಿ ನಾನೆ ದುಡಿದು ಧಾನ್ಯಧನ ಗಳಿಸಿದೆನೆಂದು ಬಲು ಭ್ರಮಿಸುವೆಯೋ ತಿಳಿದುನೋಡೆಲೆ ಬೀಜದೊಳಗೆ ಮೊಳಕೆ ತಿದ್ದಿ ಬೆಳೆಯ ಬೆಳೆಸಿ ಸ್ಥಿತಿಮಾಡಿದೆಯೋ 2 ಎಷ್ಟುದಿನಿರ್ದರು ಬಿಟ್ಟು ಹೋಗುವುದನು ಗಟ್ಟಿಮಾಡ್ಯಾಕೆ ಭ್ರಷ್ಟನಾಗುವೆಯೋ ಸೃಷ್ಟಿಸ್ಥಿತಿಲಯಕರ್ತ ಶ್ರೀರಾಮನ ನಿಷ್ಠೆಯಿಂ ಪಾಡಿ ಮುಕ್ತಿಸುಖ ಪಡೆಯೋ 3
--------------
ರಾಮದಾಸರು
ಏನು ಸೇವಿಸಿದೆ ಗುರು ಯೆಲೊ ಮಾರುತಿ | ಭಾನು ವಂಶೋತ್ತಮನೆ ನಿರುತ ಧಾರ್ಮಿಕನೆಂದು ಪ ಉದಧಿ | ಭೀತಿ ಇಲ್ಲದೆ ಹಾರಿ ಲಂಕಾಪುರವ ದಹಿಸಿ | ಸೀತೆ ವಾರ್ತೆಯ ತÀಂದು ಪೇಳಿದಕೆ ಸುಫಲಾ 1 ವನಧಿ ಭೂತಳವ ತಿರುಗಿ ಪ್ರತಾಪದಿಂದ | ಗೋತುರೋನ್ನತ ತಂದು ತಡಿಯದೆ ಪ್ರಖ್ಯಾತದಿ | ಸೇತುವಿಯ ಕಟ್ಟಿ ಕುಣಿದಾಡಿದದುಕೇನು ಫಲಾ 2 ಅಂದು ವಿಂಶತಿ ಹಸ್ತ ರಣದೊಳಗೆ ರಥವೇರಿ | ಬಂದಿರಲು ನೋಡಿ ಈ ಧನುರ್ಧಾರಿಯಾ ನಿಂದು ಚಾಲ್ವರಿದು ಬೊಬ್ಬಿರಿದದುಕ್ಕೇನು ಫಲಾ 3 ಒಂದೇ ಹಾರಿಕಿಯಲಿ ಜಿಗಿದು ಕುಪ್ಪಳಿಸಿ ನೀ | ಗಂಧಮಾದನಗಿರಿಯ ಕಿತ್ತು ತಂದು | ಅಂದದಲಿ ದೇವತತಿ ಕೊಂಡಾಡುತಿರೆ ಕಪಿ | ವೃಂದವೆಬ್ಬಿಸಿ ಖಳರ ಮಡುಹಿದದುಕ್ಕೇನು ಫಲಾ 4 ಅಪರಿಮಿತ ಉಪಕಾರ ಮಾಡಿದಲ್ಲದೆ ನಿನ್ನ | ಕೌಪೀನ ಬಿಡಿಸಲಿಲ್ಲಾ | ವನಧಿ ನಿಜವೆಂದು ತುತಿಸಿದದುಕ್ಕೇನು ಫಲಾ 5
--------------
ವಿಜಯದಾಸ
ಏನೆಂದು ಕೊಂಡಾಡಿ ಸುತ್ತಿಸೆಲೊ ನಿನ್ನಾ ಪ ದಾನವಾಂತಕ ಕೃಷ್ಣ ಆನಂದ ಗುಣ ಪೂರ್ಣ ಅ.ಪ. ಮತ್ಸರೂಪಿಯೆ ನಿನ್ನ ಉತ್ಸಹದಿ ಕರೆಯಲಾಕುತ್ಸಿತನ ಸೊಲ್ಲ ನೀನೆತ್ತ ಕೇಳುವಿಯೋ |ಮತ್ಸ್ಯಕೇತನ ಜನಕ | ಮತ್ಸರವ ಕಳೆಯಯ್ಯಸಚ್ಚಿದಾನಂದಾತ್ಮ | ಚಿತ್ಸುಖಪದನೇ 1 ಕೂರ್ಮರೂಪಿಯೆಂದು | ಪೇರ್ಮೆಯಲಿ ಕರೆಯಲಾಭರ್ಮ ಗರ್ಭನ ಪಿತನೆ | ಗಿರಿಯ ಧರಿಸಿರುವೇ |ನಿರ್ಮಲಾತ್ಮಕನೆ ಯೆನಗೆ | ನಿರ್ಮಮತೆ ನೀಡಯ್ಯಾ ಊರ್ಮಿಳಾಪತಿ ಭ್ರಾತೃ | ಪರಮ ಮಂಗಳನೇ 2 ವರಹ ರೂಪಿಯೆ ನಿನ್ನ | ಕರೆಯುವುದು ಹೇಗಯ್ಯಾ ಕೋರೆ ದಾಡಿಯ ಮೇಲೆ | ಧರೆಯೆ ಧರಿಸಿರುವೇ | ವಾರೆ ನೋಟದಿ ಯೆನ್ನ | ಪರಿಕಿಸೀ ಪೊರೆಯಯ್ಯಾಧೀರ ಭೂವರಹ ವರ | ಧರಣಿ ಪರಿಪಾಲಾ 3 ನಾರಸಿಂಹನೆ ನಾನು | ಕರೆಯಲಾಪನೆ ನಿನ್ನಘೋರರೂಪವ ನೋಡಿ | ದೂರ ಸಾರುವರೋವಾರಿಜಾಕ್ಷಿಯು ಬಂದು | ಘೋರ ಪ್ರಹ್ಲಾದನ್ನಚಾರು ತವ ಚರಣದಲಿ | ಇರಿಸಬೇಕಾಯ್ತು 4 ದಧಿ | ವಾಮನನೆ ಬಾರೆಂದುಸಾಮಸನ್ಮುತ ನಿನ್ನ | ನಾಮಗಳ ನೆನೆಯೆಲಾ |ಭೂಮಿ ಬೇಡುವ ನೆವದಿ | ಬಲಿಯ ಭೂಮಿಗೆ ತುಳಿದೆಸೀಮೆ ಮೀರಿದ ಮಹಿಮ | ಮರ್ಮವಿನ್ನೆಷ್ಟೋ | 5 ಪರಶುರಾಮನೆ ನಿನ್ನ | ಕರೆಯಲಾರೆನು ನಾನುದುರುಳ ಕ್ಷತ್ರಿಯರ | ಶಿರಗಳನೆ ತರಿದೂ |ಭಾರಿ ಪರಶುವಿನಿಂದ | ವರಮಾತೆ ಶಿರ ತರಿದಿಸರಿ ಕಾಣೋ ಇದು ನಿನಗೆ | ಪರಮ ಪಾವನ್ನಾ 6 ರಾಮ ರೂಪಿಯೆ ನಿನ್ನ | ಆ ಮಹಾ ಮಹಿಮೆಗಳಸೀಮೆಗಾಣಳು ಲಕುಮಿ | ಪಾಮರನಿಗಳವೇ |ಆ ಮರಾ ಈ ಮರಾನೆಂದ ಆ | ಪಾಮರನ ಪೊರೆದುಆ ಮಹಾತ್ಮನ ಗೈದ | ಪರಿಯೆನ್ನ ಮಾಡೋ 7 ಕೃಷ್ಣ ಕೃಷ್ಣಾ ಎಂದು ಕರೆಯುವೆನೆ ನಾ ನಿನ್ನಕಷ್ಟದೊಳು ಸಿಲುಕಿರುವೆ | ಗಿರಿಯನ್ನೆ ಪೊತ್ತು |ವೃಷ್ಟಿಕುಲ ಸಂಪನ್ನ | ಕೃಷ್ಣ ಮೂರುತಿ ನೀನುಇಷ್ಟ ಭಕುತರ ಮನೋ | ಭೀಷ್ಟ ಸಲಿಸುವಿಯಾ 8 ಬುದ್ಧ ದೇವನೆ ಎನಗೆ ಸ | ದ್ಭುದ್ಧಿ ಕೊಡು ಎಂದುಬುದ್ಧಿ ಪೂರ್ವಕವಾಗಿ ನಿನ್ನ ಕರೆಯಲಾ |ಬುದ್ಧಿಯಿಂದಲಿ ನೀ | ಭೋಧಿಸಿದೆ ದುಶ್ಯಾಸ್ತ್ರಬೌದ್ಧ ನಿನ್ನನು ಪೊದ್ದು | ಬುಧರ ಪಾಡೇನೊ 9 ಕಲ್ಕಿ ಕಲ್ಕೀ ಎಂದೇ ಕರೆಯಲಾಪೆನೆ ದೇವಾಶುಲ್ಕ ಮೇಲಾಗಿಹುದು ಕಲಿಯುಗದೊಳು |ಉಲ್ಕ ಮುಖ ಮೊದಲಾದ | ಕಲ್ಕಿರಾಜರು ನಿನ್ನಕಲ್ಕ್ಯಾತ್ಮ ಸತ್ಯ ತವ | ವ್ರತವ ಮಾಳ್ಪರು ಬಿಡದೆ 10 ಸರ್ವರೂಪಾತ್ಮಕನೆ | ಸರ್ವ ವ್ಯಾಪಕ ಸ್ವಾಮಿಸರ್ವಜಿತು ಸರ್ವಾತ್ಮ ಸರ್ವೇಶನೇ |ಶರ್ವಾರಿ ವಂದ್ಯ ಗುರು | ಗೋವಿಂದ ವಿಠಲನೇಗುರು ಹೃದಂಬರದಲ್ಲಿ | ತೋರಿ ಪೊರೆಯನ್ನ 11
--------------
ಗುರುಗೋವಿಂದವಿಠಲರು
ಏಳೊ ಬಾಲನೆ ವೇಳೆ ಮೀರುತಿಹುದು ಪ ಕೇಳುತಿಹರು ಯದುಮೌಳಿಯೆಲ್ಲಿ ಎಂದು ಅ.ಪ ಎದ್ದು ಬಾರೆಲೋ ಮುದ್ದು ಬಾಲಕೃಷ್ಣ ಪದ್ಧತಿಯಲಿ ಕ್ಷೀರ ಸಿದ್ಧವಾಗಿಹುದು 1 ಜಾಣ ನಿನ್ನಯ ವೇಣುನಾದ ಕೇಳೆ ಏಣನಯನೆಯರು ಕಾಣ ಬಯಸುತಿಹರು 2 ಯಮುನಾ ತೀರದಿ ಸುಮಲತೆಗಳಲ್ಲಿ ಕಮಲನಯನ ನಿನ್ನ ರಮಿಸ ಬಯಸುತಿಹರು 3 ಮೌನಿಜನರು ತಮ್ಮ ಸ್ನಾನ ಮುಗಿಸಿ ನಿನ್ನ ಜ್ಞಾನ ಪೊಂದೆ ಗುಣಗಾನ ಮಾಡುತಿಹರು 4 ನಿನ್ನ ಪ್ರಿಯ ಜನರನ್ನು ಕಾಯಿಸಲು ಇನ್ನು ತರವೇನೋ ಪ್ರಸನ್ನವದನನಾಗಿ 5
--------------
ವಿದ್ಯಾಪ್ರಸನ್ನತೀರ್ಥರು