ಒಟ್ಟು 292 ಕಡೆಗಳಲ್ಲಿ , 63 ದಾಸರು , 254 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈತನೀಗ ಕೃಷ್ಣನಾಥನು ಶ್ರೀನಾಥನು ಶ್ರೀನಾಥನಮ್ಮಾ ಧ್ರುವ ನಂದಕುಮಾರನೀತ ನಂದಮಹಿಮನೀತ ಕಂದರ್ಪಜನಕನೀತ ಸುಂದರವದನನೀತ 1 ಇಂದಿರೇಶನು ಈತ ವಂದಿತ ತ್ರೈಲೋಕ್ಯನಾಥ ಚಂದವಾಗಿ ಸುಳಿದ ಬಾಲ ಮುಕುಂದನೀತ 2 ಗಿರಿಯ ಬೆರಳಲೆತ್ತಿದಾತ ಕರಿಯ ಸೆರೆಯ ಬಿಡಿಸಿದಾತ ಮೊರೆಯ ಕೇಳಿ ದ್ರೌಪದಿಯ ಕರುಣಿಸಿದಾತ 3 ಅಸುವ ಪೂತನಿ ಹೀರಿದಾತ ಕಂಸನ ಮಡುಹಿದಾತ ವಂಶ ಕೌರವರ ತಾನು ಸಂಹರಿಸಿದಾತ 4 ಬಾಲಕನಹುದೀತ ಮೂಲೋಕ ಪಾಲಕ ನೀತ ಸಲಹುತಿಹ ಮಹಿಪತಿ ಮೂಲಾಗ್ರಜನೀತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಂಥಾ ಬಲವಂತನೋ ಭಾರತೀಕಾಂತಾ ಎಂಥಾ ದಯವಂತನೋ ಪ ಎಂಥ ಮಹಬಲವಂತ ಬಹುಗುಣ - ವಂತ ಸರ್ವದಾನಂತಚೇತನ ರಂತರಾದೋಳ್ನಿಂತು ಪ್ರೇರಿಪ ನಂತು ಮಹಿಮೆಯ ಅಂತು ತಿಳಿಯದೊ ಅ.ಪ ವೀರರಾಘವನಂಘ್ರಿಯ ಭಜಿಸಿ ಕಪಿ - ವೀರನಾದನು ಮಹರಾಯಾ ವಾರಿಧಿಯಾಗಾಧತೋಯ ಲಂಘಿಸಿ ಲಂಕಾ ಸಾರಿ ಪೇಳಿದ ವಾರ್ತೆಯ ವೀರ ವನವನಂಗಾರಮುಖಕೆ ಇತ್ತು ವೀರಾಕ್ಷನೆನಿಪ ಕುಮಾರನ ದಂಡಿಸಿ ಸಾರಿ ಉಂಗುರವಿತ್ತು ಮತ್ತೆ ವಾರಿಧಿ ವಾನÀರೇಶನು ತೋರಿ ರಾಮನ ಪದಕೆ ನಮಿಸಿ ಚಾರು ರಾಗಟೆ ಇತ್ತ ತ್ವರದಿ 1 ತರುಳೆ ದ್ರೌಪದಿಯನ್ನು ಶರಗು ಪಿಡಿದು ಶಳದಾನು ಕರಿಯಲು ಬ್ಯಾಗ ಹರಿ ತಾನಂಬರವಿತ್ತನು ಧುರದಿ ಭೀಮನು ನಿನ್ನ ತರಿದರಕ್ತದಿ ತಾನು ಬೆರೆಸಿ ಕೇಶವ ಕಟ್ಟಿ ಕರುಳ ದಂಡೆಯನಿಟ್ಟು ಮೇರೆವೆ ಕೇಳೆಲೋ ದುರುಳನೆಂದಾ - ತರುಣಿವಚನವ ಸ್ಥಿರವ ಮಾಡಿದ ಧರಿಯತಳದಲಿ ಸರಿಯುಗಾಣೆನೊ ವgವÀೃಕೋದರ ಪರಮ ಕರುಣಿಯೆ 2 ಭೂತೇಶ ಸರ್ವೋತ್ತುಮಾನೆಂಬುವೊ ಮಹಾ - ಪಾತಕಿ ಜನಮಾತನೇಮ ಈತ ಮಾಡಿದ ನಿರ್ಧೂಮ ಹರಿಗೆ ಶಿವ ದೂತಜನರಿಗುತ್ತುಮ ಖ್ಯಾತಿ ಮಾಡಿದ ಜೀವಜಾತಿ ಪ್ರೇರಕನಾಗಿ ಶ್ವೇತವಾಹನ ದೂತನಾಗಿಹ ನಾಥ ಗುರು ಜಗನ್ನಾಥವಿಠಲ ಧಾತನಾಂಡಕೆನಾಥ, ನಿರ್ಜರÀ ನಾಥರೆಲ್ಲರೂ ದೂತರೆಂದರು 3
--------------
ಗುರುಜಗನ್ನಾಥದಾಸರು
ಎನ್ನ ಕಂಗಳಿಗೆ ತೋರೊ ಶ್ರೀಕೃಷ್ಣಪ. ಕರಿಯ ಮೊರೆ ಲಾಲಿಸಿದಿ ಬೇಗನೆನೆರೆದ ಸಭೆಯಲಿ ದ್ರೌಪದಿಗೆ ಅಭಯವನಿತ್ತಿ ಅಡವಿಅರಣ್ಯದಿ ಅಹಲ್ಯೆಯ ಸಲಹಿದಿಮುಚುಕುಂದನ ರಕ್ಷಿಸಿದಿ 1 ಸೂರ್ಯನುದಿಸುತ ಅಂತ್ಯಕಾಲದಿಶರತಲ್ಪದಲಿ ಅವಗೆ ತೋರಿದಿಶರಣು ಕಾಳೀಪಣೆಯ ಮೇಲಿಟ್ಟ ಮುದ್ದುಚರಣವ ತೋರೊ ರಂಗನಾಥ 2 ಪುಟ್ಟ ಪ್ರಹ್ಲಾದನ ಸಲಹಿದಿಪಟ್ಟವನು ವಿಭೀಷಣನಿಗೆ ಸ[ಲಿಸಿ]ದಿನೆಟ್ಟನಡವಿಲಿ ಬಂದ ಧ್ರುವನಆದರಿಸಿ ಕಾಯ್ದಿ ರಂಗನಾಥ 3 ಘನವಾಗಿ ಕ್ಷೀರಾಬ್ಧಿಯಲಿ ನಿಂತಿಉನ್ನಂತವಾಗಿದ್ದ ಸತ್ಯಲೋಕವನಾಳಿದಿ ಪ್ರಸನ್ನನಾಗಿಕ್ಷ್ವಾಕು ಕಾಯಗೆಒಲಿದ ಪಾದವ ತೋರೊ ರಂಗನಾಥ 4 ಎಷ್ಟು ಹೇಳಲಿ ನಿಮ್ಮ ಮಹಿಮೆಯಸೃಷ್ಟಿಸ್ಥಿತಿಲಯವನ್ನು ಅಳೆದೀ ಪುಟ್ಟ ಪಾದವ ಎನ್ನ ಮನದಲಿಇಟ್ಟು ದಯಮಾಡೊ ಶ್ರೀಕೃಷ್ಣ ರಂಗನಾಥ 5 ದÀಕ್ಷಿಣಮುಖವಾಗಿ ಪವಡಿಸಿದಿ ದೇವಶಿಖಾಮಣಿ ಏಳೈ ಬಂದ ಭಕ್ತರಿ-ಗೆಲ್ಲ ಅಭಯ ಹಸ್ತವ ಕೊಡುವಿರಾಜೀವನೇತ್ರ ಹಯವದನ[ರಂಗನಾಥ] 6
--------------
ವಾದಿರಾಜ
ಎಲ್ಲಿದ್ದರು ಕಾಯ್ವ ಯದುಕುಲತಿಲಕ| ಭಕ್ತ ರೆಲ್ಲಿದ್ದರು ಕಾಯ್ವ ಯದುಕುಲತಿಲಕ ಪ ಅಡವಿಯೊಳಿರಲು ಅರಣ್ಯದೊಳಿರಲು ಮಡುವಿನೊಳಿರಲು ಮರದ ಮೇಲಿರಲು ಪೊಡವಿಗೀಶ್ವರ ತಾನು ದೃಢಭಕ್ತನಂ ಬಿಡದೆ ರಕ್ಷಿಸುವ ಯೆಂತೆಂಬೊ ಬಿರುದು 1 ತಂದೆಯ ಬಾಧೆಗೆ ಕಂದ ನಿಮ್ಮನು ಕರೆಯೆ ಬಂದು ಕಂಭದಲಿ ನೀ ಕಾಯ್ದೆ ಗೋವಿಂದಾ ಅಂದು ದ್ರೌಪದಿ ಹಾಯೆಂದು ಬದರಲು ಕೇಳಿ ಆ ನಂದದಿಂದಕ್ಷಯವನಿತ್ತ ರಂಗನು ನೀನು 2 ಭರದೆ ಭಗದತ್ತನು ಅಸ್ತ್ರ ಬಿಡಲು ಕೊರಳ ಚಾಚಿದನಾಗ ಕರುಣಾವಾರಿಧಿಯು ವರುಣಗದೆಯನಾಗ ಮರುಳತನದಿ ಬಿಡೆ ಮರಳಿ ಅವನ ಉರುಳಿಸಿತು ಶೃತಾಯುವು 3 ಸಿಂಧುರಾಜನ ಶಿರವ ಅವನ ತಂದೆ ಕೈಯಲಿ ಹಾಕಿ ಬಂದ ಭಾರವನೆಲ್ಲಾ ಕಾಯ್ದೆ ಗೋವಿಂದ ಕರ್ಣ ಅಪ್ರಮೇಯನು ಭೂಮಿ ಕ್ಷಿಪ್ರದಿಂ ಒತ್ತಿದಾ 4 ಅಂದು ಅರ್ಜುನ ತನ್ನ ಕಂದನೊಡನೆ ಕಾದೆ ಹಿಂದಿನ ವೈರದಿಂ ಶಿರವನ್ನು ಹರಿಯೆ ಬಂದು ಮುಕುಂದ ಸಂಧಿಸಿ ಶಿರವನ್ನು ಆ ಇಂದಿರೆ ರಮಣ5 ಉತ್ತರೆ ಗರ್ಭವು ಬತ್ತಿ ಬೀಳಲು ಆಗ ಉತ್ತಮ ಋಷಿಗಳೆಲ್ಲರ ನೋಡಿ ನಿತ್ಯಬ್ರಹ್ಮಚಾರಿಗಳು ಪಾದದೀ ಮೆಟ್ಟಿದರೆ ಬದುಕುವುದೆಂದನು ಕೃಷ್ಣ 6 ಸನತ್ಕುಮಾರರು ಶೌನಕರು ಮೊದಲಾಗಿ ಪರುಶುರಾಮ ಹನುಮಾದಿಗಳು ಬ್ರಹ್ಮಚರ್ಯವು ನಮಗಿಲ್ಲವೆನುತ ಬ್ರಹ್ಮಚರ್ಯಕ್ಕೆ ಆಧಾರ ನೀನೆನ್ನಲು ವಾಮಪಾದದಿ ತುಳಿದೆಬ್ಬಿಸಿದನು ಶಿಶುವ 7 ಸರಸಿರುಹನಯನಾ ಫಣಿರಾಜಶಯನ ಶರಣಾಗತದುರಿತಾಪಹರಣ ದೈತೇಯಸಂಹರಣ ಗೋವರ್ಧನೋದ್ಧರಣ ಪೀತಾಂಬರಾಭರಣ ಕೌಸ್ತುಭಾಭರಣ 8 ಅಶ್ವತಾಮನ ಅಸ್ತ್ರ ವಿಶ್ವವನು ಸುಡುತಿರೆ ವಿಶ್ವನಾಯಕ ಶಮನ ಮಾಡಿ ಕಾಯ್ದು ಅಸಮಸಾಹಸದಿ ಚಕ್ರವ ಪಿಡಿದು ಗರ್ಭದ ಶಿಶುವನ್ನು ಕಾಯ್ದ ಕುಶಲಿ ವೆಂಕಟಕೃಷ್ಣ 9
--------------
ಯದುಗಿರಿಯಮ್ಮ
ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ ಪ ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನುಅ ತರಳ ಪ್ರಹ್ಲಾದ ಹರಿ ವಿಶ್ವಮಯನೆಂದುಬರೆದೋದಲವನ ಪಿತ ಕೋಪದಿಂದಸ್ಥಿರವಾದಡೀ ಕಂಬದಲಿ ತೋರು ತೋರೆನಲುಭರದಿಂದ ಬರಲದಕೆ ವೈಕುಂಠ ನೆರೆಮನೆಯೇ1 ಪಾಪ ಕರ್ಮವ ಮಾಡಿದಜಮಿಳನ ಯಮಭಟರುಕೋಪದಿಂದೆಳೆಯುತಿರೆ ಭೀತಿಯಿಂದತಾ ಪುತ್ರನನು ಕರೆಯೆ ಕೇಳಿ ರಕ್ಷಿಸೆ ಶ್ವೇತದ್ವೀಪವೀ ಧರೆಗೆ ಸನಿಹದಲ್ಲಿಹುದೆ 2 ನೆಗಳು ನುಂಗುತಿರೆ ಭಯದಿಂದಮೊರೆಯಿಡಲು ಕೇಳಿ ತ್ವರಿತದಲಿ ಬಂದುಕರುಣದಲಿ ಬಂಧನವ ಪರಿಹರಿಸೆ ಗಜರಾಜನಿರುವ ಸರಸಿಯು ಅನಂತಾಸನಕೆ ಮುಮ್ಮನೆಯೆ 3 ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆತರುಣಿ ಹಾ ಕೃಷ್ಣ ಎಂದೊದರೆ ಕೇಳ್ದುಭರದಿಂದ ಅಕ್ಷಯಾಂಬರವೀಯೆ ಹಸ್ತಿನಾಪುರಿಗೆ ದ್ವಾರಾವತಿಯು ಕೂಗಳತೆಯೆ 4 ಅಣು ಮಹತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯಗಣನೆಯಿಲ್ಲದ ಮಹಾಮಹಿಮನೆನಿಪಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನುನೆನೆದವರ ಮನದೊಳಿಹನೆಂಬ ಬಿರುದುಂಟಾಗಿ5
--------------
ಕನಕದಾಸ
ಏಕಿಷ್ಟು ಕರುಣವೊ ಶ್ರೀಕೃಷ್ಣದೇವ ಪ ನಾಲ್ಕ್ಹತ್ತು ಲೋಕದಲಿ ಸುಖ ಸೂರೆ ಮಾಳ್ಪೊ ಹರಿ ಅ.ಪ ಮುಕ್ತಗಣ ನೋಡಯ್ಯ ನಿತ್ಯಮುಕ್ತಳ ನೋಡು ಶಕ್ತವಿಧಿ ವಾಣೀಶ ಭಕ್ತಿ ದೇವ ಫಣಿ ರುದ್ರ ಇವರ ಸತಿಯರ ನೋಡು ಉತ್ತಮೋತ್ತಮ ಸುಖವ ಸೂರೆಗೊಂಬರೊ ಹರಿಯೆ 1 ನಿನ್ನಾರು ಮಹಿಷಿಯರ ಸುರಪ ಸುರಗಣ ನೋಡು ಪುಣ್ಯತಮ ಸುರಮನಿಯ ಭೃಗುವ ನೋಡು ಚಿಣ್ಣ ಪ್ರಹ್ಲಾದನನ್ನ ಬಲಿ ಧ್ರುವ ಭೀಷ್ಮನ್ನ ಇನ್ನು ದ್ರೌಪದಿ ಶುಕನ ಆನಂದ ನೋಡಂiÀi್ಯ 2 ಅಂಬರೀಷನ ನೋಡು ರಾವಣಾನುಜ ಜನಕ ಪರೀಕ್ಷಿತ ವೃತ್ತ ಶಬರಿ ತುಂಬಿದ ಸದ್ಭಕ್ತ ಋಷಿಪತ್ನಿಯರ ನೋಡು ಕಂಬನಿಯ ಸುರಿಸುವೆನೊ ಕರುಣಿಸೊ ಹೃದ್ಗøಹದಿ 3 ನೀಯೆನ್ನ ಸತ್ವ ನೀಯೆನ್ನ ಜ್ಞಾನ ನೀಯೆನ್ನ ಮನ ಬುದ್ಧಿ ಕರುಣ ನಿಧಿಯೆ ನೀಯೆನ್ನ ಪ್ರಾಣರತಿ ನೀಯೆನ್ನ ಸತ್ಕರಣ ನೀಯೆನ್ನ ಧೃತಿ ಶಾಂತಿ ನೀಯೆನ್ನ ಸರ್ವನಿಧಿ 4 ನೀ ಮಾಡೆ ನಾ ಮಾಳ್ಪೆ ನೀನಾಡಿಸಿದರಾಡ್ವೆ ಕಾಮದನೆ ಕಾಮಪಿತ ಜಯೇಶವಿಠಲ ಶ್ರೀ ರಮಣ ಸರ್ವೇಶ ಈ ಮನಸು ನಿನ್ನಲ್ಲಿ ಪ್ರೇಮದಿ ನೆಲಸಿ ಇರುವಂತೆ ಕೃಪೆಮಾಡು 5
--------------
ಜಯೇಶವಿಠಲ
ಏಕೆ ಚಿಂತಿಪೆ ನೀ ಎಲೆ ಕೋತಿಮನವೆ ಪಾದ ಗಟ್ಟ್ಯಾಗಿ ನಂಬದಲೆ ಪ ಹಿತದ ಭಕ್ತನು ಎಂದು ಮತಿಹೀನ ಭಸ್ಮಗುರಿ ಹಸ್ತವರವಿತ್ತ್ಹರನು ಮತಿದಪ್ಪೋಡುತಿರೆ ಗತಿನೀನೆ ಹರಿಯೆನಲು ಅತಿದಯದಿಂ ಶಿವನ್ನುಳಿಸಿ ಕೃತ್ತಿಮನ್ನಳದ ಹರಿ ಪತಿತಮಹಾತ್ಮರಿಯೆ 1 ಘುಡುಘುಡಿಸಿ ಹಿರಣ್ಯನು ಜಡಮತಿ ಹರಿಯೆಲ್ಲಿ ಗಡ ತೋರೀ ಕಂಬದಿ ಎಂದಾರ್ಭಟಿಸಿ ಬರಸೆಳೆಯೆ ನಡುನಡುಗಿ ಪ್ರಹ್ಲಾದ ಜಡಜಾಕ್ಷ ಪೊರೆಯೆನಲು ಮೂಡಿ ಕಂಬದಿ ಖಳನ ಒಡಲ ಬಗೆದದ್ದರ್ಹಿಯೆ 2 ಕುರುಪನ ಸಭೆಯೊಳಗೆ ಮೊರೆಯಿಟ್ಟ ದ್ರೌಪದಿಗೆ ಕರುಣದಕ್ಷಯವಿತ್ತು ಪೊರೆದ ಪರಮಾತ್ಮ ಕರುಣಾಳು ಶ್ರೀರಾಮ ಚರಣದಾಸರ ನೆರ ಅರೆಘಳಿಗೆ ಬಿಟ್ಟಿರನು ನಿರುತ ನೀ ಸ್ಮರಿಸೋ 3
--------------
ರಾಮದಾಸರು
ಏನೆಂಬೆ ನಿಮ್ಮ ಕರುಣವು ದೇವವರ್ಯ, ಶ್ರೀಮ- ಪ ದಾನಂದತೀರ್ಥಾರ್ಯ ಹರಿಕಾರ್ಯಧುರ್ಯ ಅ.ಪ. ವಾರಿಧಿಯ ಗೋಷ್ಪಾದ ನೀರಂತೆ ದಾಟ್ಯಂದುಮಾರು ಮಲೆತಾಕ್ಷನನು ಮುರಿದು ಮೆರೆದೆಸಾರಿ ಬಹ ರಕ್ಕಸರ ಮುರಿದÉೂಟ್ಟಿ ನೀನಿಂದುಮೇರೆಯಿಲ್ಲದ ಭವಾಂಬುಧಿಯ ದಾಟಿಸಿದೆ 1 ದಾನವನಶೋಕವನ ಕಿತ್ತು ಈಡ್ಯಾಡಂದುಶ್ರೀನಾಥಗೆನುತ ಲಂಕೆಯನುರುಪಿದೆಮಾನವರ ಶೋಕವನ ಬೇರೊರಸೆ ಕಿತ್ತಿಂದುದಾನವರಿಹ ಪುರವ ಪೂರೈಸಿ ಮೆರೆದೆ 2 ಬೇಗ ಸಂಜೀವನವ ತಂದಿತ್ತು ಪೊರೆದ್ಯಂದುನಾಗಪಾಶದಿ ನೊಂದ ಕಪಿಕಟಕವಈಗ ಹರಿಭಕುತಿ ಸುಧೆಯ ನೆರೆದು ಪಾಲಿಸಿದೆರಾಗದಿಂ ಭವಪಾಶಬದ್ಧ ಜನರುಗಳನ್ನು 3 ಭವಾಬ್ಧಿ ಮಗ್ನ ಜನಗಳನಿಂದು 4 ಹತ್ತು ದಿಕ್ಕನು ಗೆಲಿದು ರಾಜಸೂಯದಿ ಅಂದುಚಿತ್ತೈಸಿ ಹರಿಗಗ್ರ ಪೂಜೆಯನು ಮಾಡಿದೆಹತ್ತೆರಡು ಮತ್ತೊಂದು ದುರ್ಭಾಷ್ಯ ಜರಿದಿಂದು ಬಿತ್ತರಿಸಿದೆ ಭಾಷ್ಯದಿಂದಗ್ರಪೂಜೆಯನು 5 ದ್ರೌಪದಿಯ ಸಂತವಿಟ್ಟಂದು ಮುಡಿ ಪಿಡಿದೆಳೆದಪಾಪಿ ದುಶ್ಶಾಸನನ ಬಸುರನ್ನು ಬಗೆದೆಪಾಪಿ ಜನರುಗಳೆಳೆಯೆ ವೇದಾಂತ ದೇವಿಯರಶ್ರೀಪತಿಗೆ ಸೇರಿಸಿದೆ ಭಾವವರಿದಿಂದು 6 ಅಂದು ಕಲಿಯಂಶ ದುರ್ಯೋಧನನ ಸಂದುಗಳಕುಂದದೆ ಮುರಿದೆ ಗದೆಯಿಂದ ಸದೆದುಇಂದು ಕಲಿಯನನೇಕ ಶಾಸ್ತ್ರ ಶಸ್ತ್ರಗಳಿಂದಕೊಂದೆಳೆದೆ ಹರಿಯ ಮನ್ನೆಯದಾಳು ಭಳಿರೆ 7 ಶ್ರುತಿಪಂಕಜಗಳರಳೆ ಅಜ್ಞಾನ ತತಿಯೋಡೆಗತಿಗಳಡಗೆ ಮಿಥ್ಯವಾದಿ ಖಳರಕುಮತಗಳು ಮುರಿಯೆ ಸತ್ಪಥವು ಕಾಣಿಸಲುವಿತತವಾಯಿತು ನಿನ್ನ ಪ್ರಭೆ ಸೂರ್ಯನಂತೆ 8 ಜ್ಞಾನಚಂದ್ರಿಕೆ ಪೊಳೆಯೆ ಭಕ್ತಿವಾರಿಧಿಯುಕ್ಕೆಮನ ಚಕೋರವು ವಿಷ್ಣುಪದದಿ ನಲಿಯೆದೀನ ಜನ ಭಯವಡಗೆ ತಾಪತ್ರಯಗಳೋಡೆಆನಂದತೀರ್ಥೇಂದು ಶ್ರೀ ಕೃಷ್ಣ ತಾ ಮೆಚ್ಚೆ 9
--------------
ವ್ಯಾಸರಾಯರು
ಏಳು ರಂಗಯ್ಯ ನೀನೇಳು ಕೃಷ್ಣಯ್ಯ ಏಳಯ್ಯ ದೊರೆ ಬೆಳಗಾಯಿತೇಳೆಂದು ಪಾಲ್ಗಡಲೊಡೆಯ ಹರಿಯನೆಬ್ಬಿಸಿದಳಂದು ಬಾಲೆ ಯಶೋದೆಯು ಬಹು ಸಂಭ್ರಮದಿಂದ ಪ ಶಕ್ರನುಪಟಳವ ನೀ ಪರಿಹರಿಸಬೇಕು ವಿಕ್ರಮದಿ ಗೋವರ್ಧನ ಎತ್ತಬೇಕು ಚಕ್ರಧರ ನಿನ್ನ ಮಧುರೆಗೆ ಕರೆದೊಯ್ಯೆ 1 ಮಾವ ಕಂಸನು ನಿನ್ನ ಬಾ ಎಂದನಂತೆ ಸಾವು ಅವನಿಗೆ ಸಮೀಪದಲಿದೆಯಂತೆ ದೇವಕಿ ವಸುದೇವ ಸೆರೆಯಲಿರುವರಂತೆ ಕಾವುದಕೆ ನೀ ಪೋಗಲೇಬೇಕಂತೆ 2 ಬಿಲ್ಲ್ಹಬ್ಬದಲಿ ಜಯಶೀಲನಾಗಬೇಕು ಖುಲ್ಲ ರಕ್ಕಸ ದಲ್ಲಣನೆನಿಸಬೇಕು ಬಲ್ಲಿದ ಮಗಧನ ಕೊಲ್ಲಿಸಲುಬೇಕು 3 ದೇವಿ ದ್ರೌಪದಿಗೆ ಸುಚೇಲವೀಯಬೇಕು ಭಾವಮೈದುಗೆ ಬೋವÀನಾಗಬೇಕು ಪಾವಿನ ಶರದಿಂದವನ ಪೊರೆಯಬೇಕು ಯಾವತ್ತು ಭೂ ಭಾರವನಿಳುಹಬೇಕು 4 ಮಧ್ವರಾಯರ ಹೃತ್ಪದ್ಮದಿ ನಿಲಬೇಕು ಇದ್ದು ಉಡುಪಿಯೊಳು ಪೂಜೆಗೊಳಲುಬೇಕು ಶುದ್ಧ ವೈಷ್ಣವರಿಷ್ಟಗಳ ಸಲಿಸಬೇಕು ಮುದ್ದು ರಂಗೇಶವಿಠಲನೆನಿಸಬೇಕು 5
--------------
ರಂಗೇಶವಿಠಲದಾಸರು
ಔಷಧದ ಬೇರೊಂದನು ನಾರದನು ತಂದ ಪೋಷಣೆಗೆ ಸಕಲರೂ ಸವಿಯಲೆಂದ ಪ ಜ್ವರಭೇದಗಳಿಗೆಲ್ಲ ನರಹರಿ ಎಂಬ ಬೇರು ಶಿರವೇಧೆ ಎಂಬುದಕೆ ಹರಿಹರಿ ಎಂಬ ಬೇರು ವಾತ ರುಜೆಗಳಿಗೆ ಸಿರಿಲೋಲನೀ ಬೇರು ಪರಿಪರಿಯ ಭವಗಳಿಗೆ ನಾರಾಯಣಾ ಎಂಬ ಬೇರು 1 ಪಿತ್ತರೋಗಂಗಳಿಗೆ ಚಿತ್ತಜನಪಿತನೆಂಬ ಪೃಥ್ವಿಯೊಳಗತ್ಯಧಮ ವಿಭಂದ ರೋಗಗಳಿ ಗರ್ಥಿಯಿಂ ಲೇಪಿಸುವ ಸತ್ವಗುಣನಿಧಿಯೆಂಬ ನಿತ್ಯಶೌರಿಯ ನಾಮ ಶಿವಬೇರು 2 ನಾರದನು ಬೇರೂರೆ ನೀರೆರೆದ ಪ್ರಹ್ಲಾದ ಧೀರಬಲಿ ಬೆಳೆಯಿಸಿದ | ನೀರ ಗಜನೆರೆದ ವೀರದಶಶಿರನನುಜನೆಚ್ಚರದೊಳಿದ ಕಾಯ್ದ ನಾರಿ ದ್ರೌಪದಿ ಶಿರದಿ ಮೊಗ್ಗಾಗಿ ಧರಿಸಿದಂಥ 3 ಅರಳಿದ ಸುಮಗಳನು ಅಕ್ರೂರ ಪೋಷಿಸಿದ ತ್ವರಿತದಿ ಕಾಯ್ಗಳನು ಶುಕದೇವ ಕಾಯ್ದ ನರರೆಲ್ಲರೀ ಫಲವ ದಿನದಿನವು ಮೆಲಲೆಂದು ವರದ ಮಾಂಗಿರಿರಂಗ ಪೇಳುತಿಹನು 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಂಡೆ ಕಂಡೆ ಸ್ವಾಮಿಯ ಕಂಡೆ ಕಂಡೆ ನಾ ಬ್ರಹ್ಮಾಂಡದೊಡೆಯನ ಪಾಂಡವರ ಪರಿಪಾಲಿಸುವನ ಪ್ರ- ಚಂಡ ಅಸುರರ ಶಿರವ ಚಕ್ರದಿ ಚೆಂಡನಾಡಿದ್ದ ಚೆಲುವ ಕೃಷ್ಣನ ಪ ಪಾದನಖದಿ ಭಾಗೀರಥ್ಯುದಿಸಿದಳು ಈರೇಳು ಲೋಕವನಿಟ್ಟ ಉದರದೊ- ಳಾದಿ ಮೂರುತಿ ಸಾರ್ವಭೌಮ 1 ಎಳೆದುಳಸಿ ಶ್ರೀವತ್ಸ ಕೌಂಸ್ತುಭ ಅ- ರಳು ಮಲ್ಲಿಗೆ ಹಾರ ಪದಕವು ಕೊ- ವೈಜಯಂತಿ ಮಾಲೆಯಂ- ತ್ಹೊಳೆವೊ ಮಾಣಿಕಾಭರಣ ಭೂಷಿತ 2 ಶೀಘ್ರದಲಿ ಜರೆಸುತನ ವಧÉ ಮಾ ಡ್ಯಜ್ಞದಲಿ ಶಿಶುಪಾಲರಂತಕ ರುಕ್ಮಿಣೀಪತಿ ಧರ್ಮಭೀಮರಿಂ- ದಗ್ರಪೂಜೆ ತಕ್ಕೊಂಡ ಕೃಷ್ಣನ 3 ಕಂಕಣ ಕರದಲಿ ಶಂಖ ಚಕ್ರವು ಅರ- ವಿಂದ ರೇಖವು ಚರಣದಲಿ ಪಂಕಜಾಕ್ಷನ ಮುಖದ ಕಾಂತಿಯು ಶಂಕೆಯಿಲ್ಲದೆ ಸೂರ್ಯರಂದದಿ 4 ಎಂಟು ಮಂದ್ಯೆರಡೆಂಟು ಸಾವಿರ ಸತಿಯ- ರಿಂದ ದ್ವಾರಾವತಿಯನಾಳಿದ ಪತಿತಪಾವನ ಪಾರಿಜಾತವ ಸತಿಗೆ ತಂದ ಶ್ರೀಪತಿಯ ಪಾದವ 5 ನಳಿನಮುಖಿ ದ್ರೌಪದಿಯು ಕರೆಯಲು ಸೆಳೆಯೆ ವಸ್ತ್ರ ಅಕ್ಷಯವ ಮಾಡಿಸಿ ಖಳರ ಮರ್ದನ ಕರುಣ ಸಾಗರೆಂ ದಿಳೆಯೊಳಗೆ ಹೆಸÀರಾದ ಕೃಷ್ಣನ 6 ನಂಬಿದವರನು ಬಿಡದೆ ತಾನಿ- ದ್ದಿಂಬಿನಲಿ ಸ್ಥಳಕೊಟ್ಟು ಕರೆವನು ಸುಂದರಾಂಗ ತಾ ಸೋಮಕುಲದಲಿ ಬಂದುದಿಸಿದ ಭೀಮೇಶ ಕೃಷ್ಣನ 7
--------------
ಹರಪನಹಳ್ಳಿಭೀಮವ್ವ
ಕಂಡೆ ಕಂಡೆನು ಸ್ವಾಮಿಯ ಸುಪ್ರೇಮಿಯಾ ಪ ಕಂಡೆ ಕಂಡೆನು ಕೃಷ್ಣರಾಯನ ಪುಂಡರೀಕ ದಳಾಯತಾಕ್ಷನ ಪಾಂಡವಪ್ರಿಯ ಪಾರ್ಥಸಖನ ಉ ದ್ದಂಡ ಮಹಿಮ ಸುರೇಂದ್ರವಂದ್ಯನ ಅ.ಪ. ಕನಕ ನವಮಣಿ ಖಚಿತ | ವಾಗಿಹ ಸಿಂಹಾ ಸನದೊಳು ಸಲೆ ಶೋಭಿತ | ಸುರುಚಿರ ದಿವ್ಯ ಘನನೀಲನಿಭರಂಜಿತ | ನಿರ್ಮಲಗಾತ್ರ ಕುಂಡಲ ಮಣಿ ಗಣದ ಹಾರಾದಿ ಬಹು ಭೂ ಷಣಗಳನುಪಮ ಕಾಂತಿಯಿಂದಲಿ ಮಿನುಗುವತಿ ಲಾವಣ್ಯ ಮೂರ್ತಿಯ 1 ಕೋಟಿ ಮನ್ಮಥರೂಪನ | ಶ್ರೀಕೃಷ್ಣನ ಹಾಟಕಾಂಬರಧಾರನ | ಕರುಣಾಮಯ ಕಂಬು ಕಂಠನ ಆಟಮಾತ್ರದಿ ಪ್ರಬಲ ದೈತ್ಯ ಮ ಹಾಟವಿಯ ನಿರ್ಧೂಮಗೈದನ ಖೇಟವಾಹನನೆನಿಪ ತ್ರಿಜಗದಿ ಸಾಟಿಯಿಲ್ಲದ ದೇವದೇವನ 2 ಮೆರೆವ ದ್ವಾರಕಾಧೀಶನ | ದ್ರೌಪದಿದೇವಿ ಮೊರೆ ಕೇಳಿ ಸಲಹಿದನ | ಭಜಿಪರ ಅವ ಸರಕೊದಗುವ ದೇವನ | ಶ್ರೀ ಕೃಷ್ಣನ ತರಳತನದಲಿ ಗೋಕುಲದಿ ತಾ ಪರಿಪರಿಯ ಲೀಲೆಗಳ ತೋರಿದ ಪರಮ ಪುರುಷನ ಕರಿಗಿರೀಶನ ಸರಿಯಧಕರಿಲ್ಲದ ಸುರೇಶನ 3
--------------
ವರಾವಾಣಿರಾಮರಾಯದಾಸರು
ಕಂಡೆವೆ ಕೌತುಕಕಪಟದ ಬಾಲೆಯ ಕಂಡೆವೆ ಕೌತುಕವ ಪರಹೆಂಡಿರು ಸಹಿತಾಗಿಗಂಡನ ಬೆರೆಯೋದು ಪ. ಪಟ್ಟದರಸಿಗೆ ಸಿಟ್ಟು ತುಂಬಿಸಿ ಭಾಳ ಕುಟ್ಟಿ ಮೈದುನರ ಸವರಿಸಿಕುಟ್ಟಿ ಮೈದುನರ ಸವರಿಸಿ ದ್ರೌಪತಿಇಂಥವಳು ಹುಟ್ಟಬೇಕಿನ್ನು ಜಗದೊಳು 1 ಗಂಡನ ಬಳಗವ ಚಂಡನಾಡಿಸಿ ಬಿಟ್ಟೆಪುಂಡಗಾರ್ತಿಯೆ ಜಗದೊಳುಪುಂಡಗಾರ್ತಿಯೆ ಜಗದೊಳು ನಿನಕೀರ್ತಿ ಕೊಂಡಾಡುತಾರೆ ದ್ರೌಪದಿ2 ನೂರು ಮಂದಿಯ ಕೊಂದು ಊರು ಕೇರಿಯಪಡೆದುಯಾರ್ಯಾರನ್ನೆಲ್ಲ ಅಡವಿಗೆ ದ್ರೌಪದಿಯಾರ್ಯಾರನ್ನೆಲ್ಲ ಅಡವಿಗೆ ಅಟ್ಟಿದೆಮಹಾರಾಯಳೆ ನಿನಗೆ ಭಯ ಉಂಟೆ3 ಜಾಣಿಯೆಂಬೊ ನುಡಿಯಿಂದ ವಾಣಿ ಜನಿಸಿಸುಶ್ರೇಣಿ ತಾತನ್ನು ದ್ರೌಪತಿಸುಶ್ರೇಣಿ ತಾತನ್ನು ಮದುವ್ಯಾದಿ ಇದಕಿನ್ನುಜಾಣಿಯರು ನಗರೆ ಜಗದೊಳು4 ಎಂತೆಂಥ ಪತಿಗಳ ಎಂತೆಂತು ಮಾಡಿದೆಕೊಂಚರೆ ಭೀತಿ ನಿನಗಿಲ್ಲಕೊಂಚರೆ ಭೀತಿ ನಿನಗಿಲ್ಲ ಧರ್ಮನ ಶಾಂತ ಗುಣದಿಂದ ಉಳಿದಿದಿ ದ್ರೌಪತಿ5 ಒಂದೊಂದು ನಿನ್ನ ಗುಣವು ಚಂದಾಗಿ ವರ್ಣಿಸಲುಎಂದಿಗೆ ವಶವ ಎಲೆನಾರಿಎಂದಿಗೆ ವಶವ ಎಲೆನಾರಿ ಐವರಿಗೆ ಕುಂದು ಬಂದೀತು ಬಿಡುಕಂಡೆ ದ್ರೌಪತಿ 6 ಇಷ್ಟಮಿತ್ರರೊಳು ಉಟ್ಟ ಸೀರೆಯಸೆಳೆದುಒಟ್ಟಿದನಾಗ ಸಭೆಯೊಳು ಒಟ್ಟಿದನಾಗ ಸಭೆಯೊಳು ರಮಿಯರಸು ಧಿಟ್ಟಿ ನಿನಮಾನ ಉಳಿಸಿದ ದ್ರೌಪತಿ7
--------------
ಗಲಗಲಿಅವ್ವನವರು
ಕಂತುಪಿತನೆ ನಿನ್ನ ಎಂತು ವರ್ಣಿಪೆ ಲಕ್ಷ್ಮೀ -ಕಾಂತ ಪಾಲಿಸೆನ್ನನು ನಿರಂತರದಲಿ ಪ ಕುಂತಿಪುತ್ರಗೆ ನೀನತ್ಯಂತ ಸಾರಥಿತ್ವವ ಮಾಡಿನಿಂತು ದುರ್ಯೋಧನನ ಶಿರವ ಅಂತಕನಿಗೊಪ್ಪಸಿದ ಧೀರ ಅ.ಪ ಸುಂದರವದನ ನಿನ್ನ ಕಂದ ಭಜಿಸಲು ಮುದದಿಂದ ಕಂಬದೊಳ್ಬಂದೆ ಮಂದರೋದ್ಧರಸಿಂಧುಶಾಯಿ ರಕ್ಕಸನ ಕೊಂದು ಕರುಳ ಮಾಲೆಯನ್ನುಚೆಂದದಿಂ ಕಂಧರದೊಳ್ಧರಿಸಿದಾನಂದಮೂರ್ತಿ ಇಂದಿರೇಶ1 ಕದಂಬ ಪೂಜಿತಾಂಘ್ರಿಯುಗಳನಂಬಿದ ಭಕ್ತರ ಕಾಯ್ವ ಅಂಬುಜನೇತ್ರಅಂಬರೀಷ ದ್ವಾದಶಿ ವ್ರತವ ಸಂಭ್ರಮದಿ ಮಾಡುತಿರೆಡೊಂಬಿಯಿಂ ದೂರ್ವಾಸ ಶಪಿಸೆ ಬೆಂಬಿಡದೆ ಚಕ್ರದಿ ಸಲಹಿದ2 ಗಂಗೆಯ ಜನಕ ನಿನ್ನ ಅಂಗನೆ ದ್ರೌಪದಿದೇವಿಭಂಗಬಿಡಿಸೆಂದು ಕೂಗೆ ಮಂಗಳಾಂಗನೆಸಾಂಗದಿಂದ ವಸ್ತ್ರಂಗಳ ಹಿಂಗದೆ ಪಾಲಿಸಿದಂಥರಂಗವಿಠಲ ಪಾಲಿಸೀಗ ತುಂಗ ವಿಕ್ರಮ ಎನ್ನ ಮಾತ 3
--------------
ಶ್ರೀಪಾದರಾಜರು
ಕದರ ಉಂಡಲಿಗಿಯ ಹನುಮಾ | ಕಾಯೊಉದಧಿ ಶಯನಗೆ ಬಲು ಪ್ರೇಮಾ ಪ ಸದಮಲಾಂತಃಕರಣದೊಳು ತವ | ಪದವನಜ ದ್ವಯ ಸೇವಿಸೂವರಮುದದಿ ಪಾಲಿಪ ಗುರು ದಯಾಕರ | ವದಗಿ ಭಾಸಿಸೊಮ ಮಹೃದಾಗರ ಅ.ಪ. ಪ್ರಥಮಾಂಗ ಹರಿಗೆ ನೀನೆನಿಸೀ | ಜೀವ ತತಿಯೊಳಂತರ ಬಾಹ್ಯ ನೆಲಸೀ |ತತುವ ಮಾನಿಗಳ್ಕಾರ್ಯ ನಡೆಸೀ | ಹರಿಗೆ ಪೃಥಕ್ಪøಥಕ್ಕವುಗಳರ್ಪಿಸೀ |ವಿತತ ಹರಿ ಸತ್ಪಾತ್ರನೆನಿಸುತ | ಯತನ ಜ್ಞಾನೇಚ್ಛಾದಿ ನಡೆಸುತಸತತ ವಿಶ್ವವ ಪಾಲಿಸುವ ಶ್ರೀ | ಪತಿಯ ಪದಕರ್ಪಿಸುತಲಿರುವ 1 ಶರಧಿ ದಾಟುವ ಲಂಕಾಪುರವ | ಸೇರಿವರ ಮಾತೆಗಿತ್ತೆ ಉಂಗುರವಾ |ಪುರದೊಳಗಶೋಕ ವನವಾ | ಕಿತ್ತುತರಿಯಲಕ್ಷನು ತೆತ್ತ ದೇಹವಉರು ಪರಾಕ್ರಮಿ ಇಂದ್ರ ಜಿತುವಿನ ವರಸುಅಸ್ತ್ರಕೆ ತಾನೆ ಸಿಲುಕುತಪರಿಪರಿಯಲಸುರನನು ಹಿಂಸಿಸಿ | ಉರಿಸಿ ಲಂಕೆಯ ಹರಿಗೆ ಎರಗಿz À 2 ಹದಿನೆಂಟು ಕ್ಷೋಹಿಣಿ ಬಲವಾ | ನೆರಸಿಸದೆದು ಹಾಕಿದ್ಯೊ ದೈತ್ಯಕುಲವಾ |ಮುದದಿ ದ್ರೌಪದಿಗಿತ್ತ ವರವಾ | ಸಲಿಸಿವಧಿಸಿದ್ಯೋ ದುರಳರ ಕುಲವಾ |ಮಧುಮಥನ ನರಹರಿಯ ಸ್ಮರಿಸುತ | ಅದುಭುತವು ಎಂದೆನಿಪ ಕಾರ್ಯವವಿಧಿಸಿ ಭೂಭಾರವನೆ ಕಳೆಯುತ | ಮುದದೊಳಚ್ಯುತಗಿತ್ತೆ ಭೀಮ 3 ವೇದ ವಾದಿ ಜನ ಕೊರಗೀ | ಹರಿಪಾದದ್ವಯವು ವನಜಕೆರಗೀ |ಮೋದದಿ ಸ್ತುತಿಸೈವ ಮರುಗೀ | ಕಳುಹೆ ವೇದಗಳುದ್ಧಾರಕ್ಕಾಗೀ |ಬೋಧಿಸುತ ಬುಧ ಸ್ತೋಮಗಳಿಗಾ | ವೇದಗಳ ಸಾರಾರ್ಥವೆಲ್ಲವವಾದಿಗಳ ಜೈಸುತಲಿ ಪೂರ್ಣ | ಭೋದಯತಿ ಪಾಲಿಸುವುದೆಮ್ಮ 4 ಪಂಕ ಕರ್ಮ ಸ್ವಾಂತ ದೊಳಗನವರತ ಕಾಣುವ 5
--------------
ಗುರುಗೋವಿಂದವಿಠಲರು