ಒಟ್ಟು 1541 ಕಡೆಗಳಲ್ಲಿ , 104 ದಾಸರು , 1320 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(37ನೇ ವರ್ಷದ ವರ್ಧಂತಿ) ದಯದೋರೊ ದೀನಾನುಕಂಪಾ ಲಕ್ಷ್ಮೀಶಾ ಭಯಹಾರಿ ಭಾಮಾ ಮುಖಾಬ್ಜ ದಿನೇಶ ಪ. ಒಂದೊಂದುಪಾಧಿ ಸಂಬಂಧಿಸಿ ಬರುವಾ ಮಂದಾಭಿಲಾಷಗಳಿಂದ ನಿಂದಿಸುವ ಕುಂದ ನಾನೆಂದಿಗು ಹೊಂದದಂದದಲಿ ನಿಂದು ಮನದಿ ಪೂರ್ಣಾನಂದ ಸಂತಸದಿ 1 ನಾವಿಬ್ಬರೊಂದೆ ವೃಕ್ಷದಿ ಸೇರಿರುವೆವು ಕೋವಿದ ನೀನಾದರಿಂದ ಎನ್ನಿರವು ಜೀವ ಕರ್ತೃತ್ವಾದಿ ಬಳಲುವದೈತು ತಾವಕನೆಂಬ ಭಾವನೆ ದೂರ ಹೋಯ್ತು 2 ಮತ್ತೇಳು ಮೂವತ್ತು ವತ್ಸರಗಳನು ಎತ್ತಿನಂದದಿ ಕಳೆವುತ್ತ ಬಾಳಿದೆನು ಎತ್ತಾಲು ಹೊಂದದೆ ಎರಡೇಳು ವಿಧದ ಭಕ್ತಿಯ ಬಯಸುವ ಭಯ ದೂರ ವರದ 3 ಮನಸಿನ ದೌರಾತ್ಮ್ಯವನು ಪೇಳಲಾರೆ ತನುವ ದಂಡಿಸಿ ಕರ್ಮಗಳ ತಾಳಲಾರೆ ಅನುಕೂಲವಲ್ಲದಿಂದ್ರಿಯಗಳನೆಲ್ಲ ವನಜಾಕ್ಷ ನಾನೆಂತು ಗೆಲ್ಲುವೆ ಶ್ರೀನಲ್ಲ 4 ಈರೇಳು ಭುವನಾಧಿನಾಥ ನಿನ್ನನ್ನು ಸೇರಿದೆ ಶೇಷಾದ್ರಿ ಶಿಖರವಾಸ ಸಾರಿದೆ ಸರ್ವಾಭೀಷ್ಟದ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
(5) ಶ್ರೀನಿವಾಸ ವಿಪ್ರವಂದಿತ ಪಾಪಕೋಟಿ ಕುಲನಾಶಾ ಶ್ರೀವೆಂಕಟೇಶಾ ಪ ನಿಜನುಡಿಯ ಭೃಗುನುಡಿಯೆ ಮುನಿಮಂಡಲಿಯ ನಡೆಯೆ ತ್ರಿಜಗಾಗ್ರಪೂಜಿತ ಪರಬ್ರಹ್ಮ ನೀನೇ 1 ಪಶುವತ್ಸಗೋಪಾಲ ಸರ್ವವೂ ನೀನಾಗೆ ಬಿಸಜಭವ ಬೆದರುತ್ತ ಪದಕೆರಗಿದ 2 ಮೋಹಿನಿಯವೇಶದಿಂ ರಕ್ಕಸನ ಭಸ್ಮಿಸಿ ಪಾಹಿಮೆನಲಾ ದಕ್ಷ ವೈರಿಯ ರಕ್ಷಿಸಿದೆ 3 ಗಿರಯನೇ ಕೊಡೆವಿಡಿದು ಗೋಕುಲವನೆ ಕಾಯ್ದೆ ಸುರರಾಜ ಗರಿಮುದುರಿ ಶರಣೆಂದು ಬಂದ 4 ವಿಧವರದಿ ಬೆರೆದ ಹಿರಣ್ಯಕಶಿಪುವ ಬಗೆದು ಸದೆದೆ ಶಿವಕಾವಲಿನ ಬಾಣನಂ ಬಿಡವೇ 5 ಸಾಸಿರಗಳರವತ್ತು ಸಗರಸುತರನು ಸುಟ್ಟು ಘಾಸಿಹರಿಸಿದೆ ಜಗದೆ ಜೀವ ಜಂತುಳಿಗೆ 6 ಪಾತಕಿಯ ರಾವಣನು ಕಾರವರ ಕೊಂದೇ 7 ಬಲಿದ ಶಾಪವ ಕಳೆದು ಕಾಯ್ವ ಬಂಧೂ 8 ಸಾವುಂಡ ಶಿಶುವನು ಗುರುವಿಗೆ ನೀ ತಂದಿತ್ತೆ ನೋವುಂಡ ಇಂದ್ರಂಗೆ ಲೋಕಗಳನಳೆದೆ 9 ಅಜಕಪಾಲವ ಬಿಡಿಸಿ ಮೃತ್ಯುಂಜಯನ ಹರಸಿ ಅಜಮಿಳನ ನೀ ಮುಕ್ತಿಸ್ಥಾನಕ್ಕೆ ತಂದೆ 10 ಸರ್ವಕಾಲಗಳಲ್ಲು ಅಪರಾಧಿ ನಾನಯ್ಯ ಗರ್ವಿಯೆನಿಸದೆ ತಪ್ಪು ಕ್ಷಮಿಸಯ್ಯ ತಂದೆ 11 ಆನೆ ಅಳುವುದು ಕೇಳಿ ಮೊಸಳೆಬಾಯನು ಸೀಳ್ದೆ ನೀನೆ ಆಪದ್ಭಂದು ಕಾರುಣ್ಯಸಿಂಧು12 ಅರಗಿನ ಮನೆಯಲ್ಲಿ ಭರದಿಂದ ಬಾಂಧವರಿಗೆ ಉರಿಭಯವ ತಪ್ಪಿಸಿ ಪೊರೆದ ಪ್ರಭುವೇ13 ದ್ರುಪದ ಪುತ್ರಿಗೆ ಮಾನ ಸಂರಕ್ಷಣೆಯನು ಮಾಡಿ ಕೃಪೆತೋರಿಪಾರ್ಥಂಗೆ ಸಾರಥಿಯು ಆದೆ 14 ಕಾಲ ವಾಲಿಪ್ರಾಣಕೆ ಶೂಲ ಲೀಲೆಯಿಂ ಭಕ್ತರಂ ಪಾಲಿಸುವೆ 15 ಪಾವನದ ಪಾದಗಳನಿಂತು ಮುಡಿಯಮೇಲೆ ಭಾವಿಸುವೆ ಭವಕಳೆಯೆ ನಾತಾಳೆ ನಾಳೆ 16 ತಾಪಗಳು ಮೂರನುಂ ಹರಿಪ ಸಂಕಟದೂರ ಕಾಪಾಡು ಶ್ರೀಹರಿ ಬಂಧುಬೇರಿಲ್ಲ ಭಕ್ತಸತ್ರಾ 17 ಶರಣಸಂರಕ್ಷಣ ಬಿರುದು ಧರಸಿಹೆ ನಿತ್ಯ ಭರದಿ ಶಾಂತಿನೀಡೋ ಚರಣಕ್ಕೆ ಶರಣು 18 ಕ್ಷಾಮಡಾಮರ ಕಳೆಯೆ ಸುವೃಷ್ಟಿಯ ಕರೆವೆ ಕಾಮಿತಾರ್ಥದ ಕಾಮಧೇನು ಸ್ವಾಮಿ ತಾಯಿತಂದೆ 19 ಚಕ್ರಧರ ಚಕ್ರಧರ ಭಜಿಪ ಭಕ್ತರ ಪಾಲ ನರಸಿಂಹ ನರಸಿಂಹ 20 ಕ್ಷೇಮಕರಗರುಡನೇ ಧ್ವಜನು ವಾಹನನು ಭೀಮ ಹನುಮ ಪ್ರೇಮ ಹೆಜ್ಜಾಜಿಶ್ಯಾಮ ಸ್ವಾಮಿ21
--------------
ಶಾಮಶರ್ಮರು
(ಅ) ಆತ್ಮನಿವೇದನಾ ಕೃತಿಗಳು ಏನು ಹೇಳಲಯ್ಯ ರಂಗ ಎಲ್ಲಿ ಹೋಗಲಯ್ಯ ನನ್ನಮನಸು ಮಂಗವಾಗಿ ದೂರ ತಳ್ಳಿಹುದಯ್ಯ ಪ ಎಲ್ಲೆಯಿಲ್ಲದ ಎನ್ನವನು ನೀ ಎಂತುನಿಂತಿಹೆ ಸುಮ್ಮನೆ ಎಲ್ಲವಾಗಿಕೂಡಿಕೊಂಡಿಹೆನಿನ್ನಚರಣಭರಿಸುಮಾಪತೇ ಕ- ಮಲಾಪತಿ ನೀ ಕರುಣದಿಂದಲಿ ನಡೆಸಲಾರೆಯಾ ನನ್ನನು ಅ.ಪ ನಡೆಯಲಾರದೆ ಕಾಲುಬಿದ್ದಿದೆ ಕೋಪಗೊಳ್ಳದೆ ಬಂದು ನನ್ನಲಿ ನಿಂತು ಸಲಹೈ ದೇವನೇ ಅಪ್ಪಶೆಲ್ವನೆ ನಿನ್ನ ಬಿಟ್ಟರೆ ಕಾದು ಕುಳಿತಿಹರಾರಯ್ಯ 1
--------------
ಸಂಪತ್ತಯ್ಯಂಗಾರ್
(ಅನಂತಚತುರ್ದಶಿಯ ದಿನದ ಪ್ರಾರ್ಥನೆ) ಪದ್ಮನಾಭ ಪರಿಪಾಲಿಸು ದಯದಿಂದ ಪದ್ಮಜಾದಿ ವಂದ್ಯ ಪರಮ ದಯಾಳೊ ಪದ್ಮಿಯಳರಸ ಹೃತ್ಪದ್ಮನಾಮಕ ಸ್ವರ್ಣ ಸದ್ಮ ವೃತ್ತಿಪದಪದ್ಮವ ತೋರೊ ಪ. ಚಿಂತಿತದಾಯಕ ಸಂತರ ಕುಲದೈವ ಕಂತು ಜನನಿಯೊಡಗೂಡಿ ನೀನು ನಿಂತು ಎನ್ನಲಿ ಕೃಪೆ ಮಾಡೆಂದು ನಮಿಪೆ ಧು- ರಂತ ಮಹಿಮ ನಿನ್ನ ಚರಣಾಬ್ಜಯುಗಲಾ 1 ಆದಿ ಮಧ್ಯಾಂತವಿದೂರ ನಿನ್ನಲಿ ಮಹ ದಾದಿ ತತ್ವಗಳೆಲ್ಲ ನಿಂತಿಹವು ಆದಿ ಭೌತಿಕ ಮೊದಲಾದ ತಾಪಗಳನ್ನು ಶ್ರೀದ ನೀ ಬಿಡಿಸಲು ಸದರವಾಗಿಹವು 2 ಒಂದರಿಂದೊಂದಾದರಿಂದ ಮೂರು ಮೂರ್ತಿ ಇಂದಿರೆ ಸಹಿತಾವಿರ್ಭೂತನಾಗಿ ಮುಂದಿನ ಮಹದಾದಿ ತತ್ವವ ನಿರ್ಮಿಸಿ ನಿಂದನಂತಾಸಂತರೂಪನಾದವನೆ 3 ಭವ ಚಕ್ರದೊಳು ತಂದು ನವ ನವ ಕರ್ಮಗಳನೆ ಮಾಡಿಸಿ ಅವರ ಯೋಗ್ಯತೆ ಮೀರದಲೆ ಫಲಗಳನಿತ್ತು ನಿತ್ಯ ತೃಪ್ತನಾಗಿರುವಿ 4 ಮಛ್ವಾದ್ಯನಂತವತಾರಗಳನೆ ಮಾಡಿ ಸ್ವೇಚ್ಛೆಯಿಂದ ಸುಜನರ ಸಲಹಿ ಕುಚ್ಛಿತ ಜನರಿಗೆ ತುಚ್ಛಗತಿಯನೀವೆ ಸ್ವಚ್ಛ ಬ್ರಮ್ಹಾದಿಕ ವಿವ್ಛಾ(?)ವಿಷಯನೆ 5 ನಾನಾವತಾರದಿ ನಂಬಿದ ಸುರರಿಗೆ ಆನಂದವಿತ್ತು ರಕ್ಷಿಪೆ ಕರುಣದಿ ದಾನವರಿಗೆ ಅಧ:ಸ್ಥಾನವ ನೀಡುವಿ ಮಾನವರನು ಮಧ್ಯಗತರ ಮಾಡಿಸುವಿ 6 ಹಿಂದೆ ಮುಂದಿನ ಭವದಂದವ ತಿಳಿಯದ ಮಂದಾಗ್ರೇಸರ ನಾನಾದೆಂಬುದನು ಅಂಧಕರಾರಣ್ಯದಿಂದ ಮೂಢನಾದಂ ದಿಂದ ಬಿನ್ನೈಪೆನು ಇಂದಿರಾಧವನೆ 7 ಮಾಡುವ ಕರ್ಮವು ನೋಡುವ ವಿಷಯಗ- ಳಾಡುವ ಮಾತು ಬೇಡುವ ಸೌಖ್ಯವು ನೀಡುವ ದಾನವೋಲ್ಯಾಡುವ ಚರ್ಯವ ನೋಡಲು ತಾಮಸ ಪ್ರಹುಡನಾಗಿಹೆನು 8 ಆದರು ನಿನ್ನಯ ಪಾದಾರವಿಂದ ವಿ- ನೋದ ಕಥಾಮೃತ ಪಾನದೊಳು ಸ್ವಾದ ಲೇಶದಾದರ ತೋರ್ಪದ- ನಾದಿ ಮೂರುತಿ ನೀನೆ ತಿಳಿಸಬೇಕದನೂ 9 ಇದರಿಂದಲೇ ಮುಂದೆ ಮದನನಯ್ಯನೆ ನಿನ್ನ ಪದವ ಕಾಣುವೆನೆನುತೊದರುವೆನು ಹೃದಯ ಮಂಟಪದಿ ನೀ ಹುದುಗಿರುವುದರಿಂದ ಕದವ ತೆರೆದು ತೋರೊ ವಿಧಿಭವವಿನುತಾ 10 ಕನ್ನೆ ಸುಶೀಲೆಯ ಕರಸೂತ್ರ ರೂಪದ ನಿನ್ನ ತಿಳಿಯದೆ ಕೌಂಡಿಣ್ಯನಂದು ಮನ್ನಿಸದಿರೆ ಮದ ಮೋಹಗಳೋಡಿಸಿ ನಿನ್ನ ರೂಪವ ತೋರ್ದ ನಿಜಪೂರ್ಣ ಸುಖದಾ 11 ಬ್ರಹ್ಮಾದಿಗಳನೆಲ್ಲ ನಿರ್ಮಿಸಿ ರಕ್ಷಿಸಿ ತಮ್ಮ ತಾವರಿಂiÀiದ ನಿಮ್ಮ ಸ್ತುತಿಪರೆ ಕು- ಕರ್ಮಿ ನಾನೆಂದಿಗಾದರೂ ಶಕ್ತನಹುದೆ 12 ಅದು ಕಾರಣದಿಂದ ಪದುಮನಾಭ ನಿನ್ನ ಪದ ಕಮಲಗಳಲಿ ರತಿಯನಿತ್ತು ಸದರದಿ ಸಲಹಯ್ಯ ವಿಧುಶೇಖರಾರ್ಚಿತ ಮದನನಯ್ಯ ಮರುದಾದಿ ವಂದಿತನೆ 13 ದೋಷರಾಶಿಗವಕಾಶನಾದರೂ ಯೆನ್ನ ಶ್ರೀಶ ನಿನ್ನ ದಾಸದಾಸನೆಂದು ಘೋಷವಾದುದರಿಂದ ಪೋಷಿಸಬೇಕಯ್ಯ ಶೇಷಗಿರೀಶ ಸರ್ವೇಶ ನೀ ದಯದಿ 14
--------------
ತುಪಾಕಿ ವೆಂಕಟರಮಣಾಚಾರ್ಯ
(ಆ) ಆಳ್ವಾರಾಚಾರ್ಯ ಸ್ತುತಿಗಳು (1) ಆಂಜನೇಯ ನೋಡಿರೈ ಕಣ್ದಣಿಯಾ ಸಜ್ಜನರೆಲ್ಲ ಪಾಡಿರೈ ಮನದಣಿಯಾ ಪ ಗಾಢಭಕುತಿಯನಾಂತು ಭಜನೆಯ ಮಾಡುವರ ದುರಿತಗಳನೋಡಿಸಿ ಕೂಡೆನಿರ್ಮಲರೆನಿಸಿ ಪೊರೆವಾ ರೂಢನಹ ಮಾರುತಿಯ ಮೂರ್ತಿಯ ಅ.ಪ ಉಡಿಯೋಳ್ ಘಂಟೆಗಳೆಸೆಯೆ ಚರಣದೊಳುಳ್ಳ ತೊಡರುಗಗ್ಗರಮುಲಿಯೆ ರ್ಕಡೆಯ ಕರ್ಣದಿ ಪೊಳೆಯೆ ಕಡಗ ಮಣಿಮಕುಟಗಳ ಪೇರುರ ದೆಡೆಯ ವಜ್ರದಪದಕ ಮೊದಲಹ ತೊಡಿಗೆಗಳ ಸಡಗರದೊಳೊಪ್ಪುವ ದೃಢತರದ ಮಾರುತಿಯ ಮೂರ್ತಿಯ 1 ಭರದಿಂದ ಶರನಿಧಿಯಾ ಲಂಘಿಸಿ ಪೊಕ್ಕಾ ನಿರುಪಮತರ ಲಂಕೆಯ ಗುರಿಗೊಂಡರಸಿ ಸೀತೆಯಾ ಕಂಡಾರಘು ವರನುರುಮುದ್ರಿಕೆಯ ಕರದೊಳಿತ್ತಾರಮಣಿಯಿಂ ವಿ ಸ್ಫುರಿಪ ಚೂಡಾಮಣಿಯ ಕೈಕೊಂ ಡಿರದೆ ಬಂದೊಡೆಯಂಗೆ ಸಲಿಸಿದ ಪರಮಬಲಯುತನಮಳಮೂರ್ತಿಯ 2 ವಾದವಿದೂರನನು ಪಾವನ ಮೃದು ಪಾದಾರವಿಂದನನು ವೇದಾಂತವೇದ್ಯನನು-ಸನ್ನುತಪರ ನಾದಾನುಮೋದನನು ಸಾದರದೊಳೈತಂದು ಪ್ರಾರ್ಥಿಪ ಸಾಧುಸಂತತಿಗೊಲಿದು ಪರಮಾ ಮೋದದಿಂ ಪರಮಾರ್ಥವಿಷಯವ ಬೋಧಿಸುವ ಮಾರುತಿಯ ಮೂರ್ತಿಯ 3 ರಂಗನಾಥನದೂತನ ಸತ್ಕರುಣಾಂತ ರಂಗನಾರ್ತಪ್ರೀತನ ಕಂಗೊಳಿಸುವ ನೂತನಪುರವರದೊಳು ಹಿಂಗದೊಪ್ಪಿರುವಾತನ ಮಂಗಳಾತ್ಮನ ಮೋಹದೂರನ ಸಂಗರಹಿತನ ಸತ್ಯಚರಿತನ ರಂಗದಾಸಪ್ರಣಿತಮಹಿಮೋ ತ್ತುಂಗ ಶ್ರೀ ಮಾರುತಿಯ ಮೂರ್ತಿಯ 4
--------------
ರಂಗದಾಸರು
(ಆ) ಲಕ್ಷ್ಮೀಸ್ತುತಿಗಳು ನಾರಿಮಣಿಯೆ ನಿನ್ನಾಣೆ ನಾಕಾಣೆ ಕರತಂದು ತೊರೆ ಚೆಲ್ವ ರಂಗನಾ ಪ ಕರತಂದು ತೋರೆ ಮಧ್ಯರಂಗನಾ ಅ.ಪ ಪಾರವಾರನೆಂಬ ಧೀರ ಭವದೂರನೊ ಬಾರದ ಮನಸೆನ್ನ ಸೂರೆಗೊಳ್ಳುತಿದೇ 1 ಮೀರಿದ ಹದ್ದಿಗೆ ಹಾರಿಬಂದಾ ಗಿಣಿಯು ದಾರಿಯ ತಪ್ಪಿ ಹಿಂತಿರುಗಿದಂತೆ ಮಾರನಯ್ಯನ ಪಾದತೋರಿ ಪೋಗಿಯು ತಾ ತೇರಮೇಲೇರಿದ ಸಾರುವ ಬಾರೆ 2 ಉರಗೇಂದ್ರಶಯನನೆ ಸರಿಗಾಣೆ ರಮಣಿ ಶ್ರೀ ನರಗೆ ಸಾರಥಿಯಾಗಿ ಮೆರೆವ ಶ್ರೀ ಪರಮಾತ್ಮ ನಿರುತಿಹ ನೀನೋಗಿ ಕರತಾರೆ ಕಾಮಿನೀ3
--------------
ಚನ್ನಪಟ್ಟಣದ ಅಹೋಬಲದಾಸರು
(ಇ) ಆತ್ಮನಿವೇದನೆ ಎಷ್ಟು ಪ್ರೇಮಿಯೋ ಗುರುವು ಎಷ್ಟು ಪ್ರೇಮಿಯೋ ಪ ಎಷ್ಟು ಪ್ರೇಮಿ ಎನ್ನ ಬಿಡದೆ | ಸೃಷ್ಟಿಯಲ್ಲಿ ಕೈಯಪಿಡಿದ ಅ.ಪ ಭಾನುಕೋಟಿ ತೇಜ ವರದ ಸಾನುರಾಗದಿಂದ ಕರೆದು ಜ್ಞಾನ ಶಾಸ್ತ್ರ ಬೋಧಿಸುತ್ತ ಹೀನ ವೃತ್ತಿ ದೂರಿ ಪೊರೆದ 1 ನೀಲವರ್ಣ ಕಂಜನಯನ ನೀಲಕಂಠಮಿತ್ರ ಭಕ್ತ ಪಾಲ ಭೂರಿದುಃಖಭವವ ಧೂಳಿಮಾಡಿ ಬಾಲಗೊಲಿದ 2 ಶ್ರೇಷ್ಠ ಸುಮಹದೇವಪುರದೊಳಿಷ್ಟರಂಗನಾಥ ಭರದಿ ಮುಟ್ಟಿ ಮುಕ್ತಿಯಿತ್ತು ಪುನಃ ಹುಟ್ಟು ಸಾವುಗಳನು ಕಳದ 3
--------------
ರಂಗದಾಸರು
(ಇ) ಆತ್ಮನಿವೇದನೆ ಏನು ಮಾಡಲಿ ವೆಂಕಟೇಶ ಈ ಬೆಳೆಯು ಸೋನೆಯಿಲ್ಲದೆ ಉರಿದುದು ಪ ನಾನಾ ಪ್ರಕಾರದೊಳು ಹಾನಿಯಾಯಿತು ಇರವು ಹೀನರಾದೆವು ನಾವು ಶ್ರೀನಿವಾಸನೆ ಕೇಳು ಅ.ಪ ಮೂಡದೆಸೆಯಳು ಬಂದುದು, ಆ ಮಳೆಯು ಬಡಗದೆಸೆಯಳು ಸುರಿದುದು ಎಡಬಿಡದೆ ತೆಂಕ ಕಡೆಯಲಿ ಹೊಡೆದ ಮಳೆಯು ತಾ ನಡುವೆ ಬಿಡುವುದು ಯಾತಕೆ 1 ಕಟ್ಟುಕಡು ಮದಗ ಸಹಿತ, ಈ ಊರ ತಲೆ ಗಟ್ಟಿನೊಳು ನಾ ಕಾಣೆನು ಕೆಟ್ಟು ಹೋಯಿತು ಮಳೆಯು ಹೊಟ್ಟೆಯನು ಉರಿಸುತ್ತ ದೃಷ್ಟಿಯಲಿ ನೋಡು ನೀನು 2 ಮಳೆಯಿಲ್ಲದಿಳೆಯಾರಿತು, ನಟ್ಟಿರ್ದ ಫಲವೆಲ್ಲ ಬೆಳೆ ಕೆಟ್ಟಿತು ಸ್ಥಳದ ತೆರಿಗೆಯ ಬಿಟ್ಟು ಕಳುಹುವನೆ ದೊರೆ ತಾನು ಎಳೆದೆಳೆದು ಕೊಲುವನಲ್ಲ 3 ಕಷ್ಟ ಬಂದುದು ನಮ್ಮ ಕಡೆಗೆ, ಈ ವೃಷ್ಟಿ ಬಿಟ್ಟು ಪೋದುದು ಇಳೆಯನು ಸುಟ್ಟ ಊರೆಲ್ಲವನು ತಟ್ಟಿನಾರಿದ ಮೇಲೆ ಮುಟ್ಟಿ ನೋಡುವರಿಲ್ಲವೊ 4 ಹದಿನಾಲ್ಕು ಲೋಕವನು ನೀ ನಿನ್ನ ಉದರದೊಳಗಳವಟ್ಟಿಹೆ ಬೆದರುತಿದೆ ಈ ಲೋಕ ಒದರುವುದು ಜನರೆಲ್ಲ ಉದುರದೇತಕೆ ಇಳೆಗೆ ಮಳೆಯು 5 ಎಲ್ಲ ಬೇಡಿಯೆ ಕೊಂಬರು, ಈ ಹರಕೆ ಯಲ್ಲಿ ಅಂತರಬಾರದು ಹಲ್ಲು ಬಾಯಾರಿರ್ದ ಮಕ್ಕಳಿಗೆ ಎಳೆನೀರು ಬೆಲ್ಲವಾಗಿಹ ಮಳೆಯನೆರೆಯೊ 6 ನೀಲಮೇಘಶಾಮ ವರ್ಣ, ಕಾಣಲಾ ಮೂಲೋಕದೊಡೆಯಾ ನಿನ್ನ ಕಾಲಮೇಘವು ನಿನಗೆ ದೂರವಾಗುವುದುಂಟೆ ಆಲಸ್ಯ ಮಾಡಬೇಡ 7 ಬಡವರೆಲ್ಲರು ಕೂಡಿಯೇ, ಒಪ್ಪು ಕೈ ವಿಡಿದು ಬೇಡಿಯೇ ಕೊಂಡೆವು ಸಿಡಿಲು ಮಳೆ ಮಿಂಚುಗಳು ಹೊಡಕರಿಸಿ ಬರುವಂತೆ ಒಡೆಯ ದಯದೋರೊ ನೀನು 8 ಸ್ವಾಮಿ ನಿನ್ನಯ ನಾಮವು, ಜನರಿಂಗೆ ಕಾಮಿತಾರ್ಥವನೀವುದು ಪ್ರೇಮವಾಗಿಹ ಮಳೆಯ ಭೂಮಿಯಲಿ ಇಳಿಬಿಟ್ಟು ನಾಮವಾಗೆವು ಸ್ವಾಮಿ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
(ಈ) ಆತ್ಮನಿವೇದನಾ ಕೃತಿಗಳು ಅಕಟಕಟ ಬಹಳ ಬಡತನವಡಸಿದುದೆ ನಿನಗೆ ಅಕಳಂಕ ಚರಿತ ಹರಿಯೆ ಪ ಪ್ರಕಟತನದಿಂ ಗೋದಾನಕ್ಕೆ ಕೈನೀಡುವರೇ ಸುಖಮಯ ಶರೀರ ಚನ್ನರಾಯಾ ಅ.ಪ ಹಿಂದೆ ಯಜ್ಞದಲಿ ಬಲಿಯಿತ್ತ ಭೂದಾನಕ್ಕೆ ದಂದಿಗೆ ಸಾಲದಾಯಿತೆ ಅಂದು ಕರ್ಣನು ಕೊಟ್ಟ ದಾನವನು ನೀ ಪಿಡಿದು ದಂದಿಗೆ ಸಾಲದಾಯಿತೆ ಇಂದು ನಿನ್ನಯ ದಾಸಾನುದಾಸನು ಕೊಟ್ಟ ಗೋದಾನ ದೊಂದೊಂದು ಗೋಗಳಿಗೆಛಂದದಲಿ ನಿಂದು ದಾನವ ಕೊಂಡೆಯಾ ಸ್ವಾಮಿ 1 ಉರದೊಳಗೆ ಅನವರತ ವಾಸವಾಗಿರುತಿಪ್ಪ ಶರಧಿಸುತೆ ಕೈಬಿಟ್ಟಳೇ ಬೆರೆತು ಪೋದುದೇ ಪಾಲ್ಗಡಲು ಮುನಿಸಿಕೊಂಡು ಬರಡಾಯಿತೇ ಕಾಮಧೇನೂ ತಿರುಕ ಹಾರುವನಂತೆ ಪರಿಪರಿಯ ದಾನಕ್ಕೆ ಭರದಿ ಕೈ ಒಡ್ಡುತಿಹರೆ ಪುರುಷೋತ್ತಮನೆಂಬ ಅಭಿಮಾನವಿನಿತಿಲ್ಲದೇ ದೂರಿಗೊಳಗಾಗಬಹುದೆ ಸ್ವಾಮಿ 2 ಇತ್ತ ದಾನದ ಗೋವುಗಳನೆಲ್ಲ ಗುಡಿಯೊಳಗೆ ಮೊತ್ತದಿಂ ಕೂಡಿಕೊಂಡೂ ಒತ್ತಿ ಮುದ್ರೆಯನು ನಾಮವನಿಟ್ಟು ಬಾಲಗಳಿ ಗೆತ್ತಿ ಘಂಟೆಗಳ ಕಟ್ಟೀ ಅರ್ಥಿಯಿಂ ತೋರಿಸಿ ಯೆನ್ನ ಕುಲಕೋಟಿಗಳಿ ಗಿತ್ತೆ ಸುರಪದವನು ಕರ್ತುೃ ವೈಕುಂಠ ವೇಲಾಪುರಾಧೀಶ್ವರನೇ ಭೃತ್ಯನ್ನ ಕಾಯೊ ಸತತ ಸ್ವಾಮಿ 3
--------------
ಬೇಲೂರು ವೈಕುಂಠದಾಸರು
(ಊ) ಕ್ಷೇತ್ರವರ್ಣನೆ ಹುಲಿಗನಮೊರಡಿ ಶೇಷಾದ್ರಿಯನು ನೋಡಿರೋ ಸೇವಕಪರಿ ತೋಷಾದ್ರಿಯನು ಕಾಣಿರೊ ಪ ಶೇಷಾದ್ರಿಯನು ನೋಡಿ ದೋಷಾದ್ರಿ ಹುಡಿಮಾಡಿ ಶೇಷಾದ್ರೀಶನ ಪರಿತೋಷದಿಂ ಪಾಡಿ ಅ.ಪ ಚಿನ್ನದಗಿರಿಯಂದದಿ ರಂಜಿಸುವುದು ಬಣ್ಣದೊಳತಿ ದೂರದಿ ಸಣ್ಣದಾಸರು ಗಿರಿ ರನ್ನಪೋಲು ವರ್ಣಹ ಶಯನನ ಕಣ್ಣಲಿ ಕಾಣಿಪ 1 ಬಗೆ ಬಗೆ ವೃಕ್ಷಗಳು ಬನಂಗಳು ಬಗೆ ಬಗೆ ಪಕ್ಷಿಗಳು ಬಗೆ ಬಗೆ ಮೃಗಗಳು ಸೊಗಸಿನೊಳಿರೆ ಬಹು ಬಗೆ ಬಗೆ ಧಾತುಗಳಿಗೆ ನೆಲೆಯಾಗಿಹ 2 ಯುಗಗಳ ಸಂಖ್ಯೆಯೊಳು ನಾಮಂಗಳು ಯಗಳದ್ವಯ ಮೆನಲು ಯುಗಮೊದಲೊಳಗೆ ಪನ್ನಗಗಿರಿಯನೆ ತ್ತೇತಾ ಯುಗದಲ್ಲಿ ಹೇಮದ ನಗವೆಂಬ ಪೆಸರಿನ 3 ದ್ವಾಪರಯುಗದೊಳಗೆ ವೆಂಕಟನಾಮ ವೀ ಪರ್ವತತಕ್ಕೊದಗೆ ಶ್ರೀಪುಲಗಿರಿಮುಖ ರೂಪನೀಯುಗದೊಳು ಶ್ರೀಪತಿಯುತ್ತ ನಿರೂಪದೊಳೊಪ್ಪುವ 4 ದೂರದಿ ಶೋಭಿಸುವ ದುರ್ಜನರಿಗೆ ದೂರವೆ ಮಂದಿರವು ಚಾರುವಿಮಾನ ಪ್ರಾಕಾರವ ತೋರಿಪ ವಾರಿಜಾಸನ ಪಿತ ವರದ ವಿಠಲನಿಹ 5
--------------
ವೆಂಕಟವರದಾರ್ಯರು
(ಋ) ವಿಶೇಷಸಂದರ್ಭದ ಹಾಡುಗಳು ಬರಗಾಲವನ್ನು ಕುರಿತ ಹಾಡುಗಳು ವನಜಭವಾದಿಗಳನು ಪಾಲಿಪ ದೇವ ಪ ಸದಯ ನೀನಾದರೆ ಬದುಕಿಸಿ ಪಶುಗಳ ಮುದವನು ತೋರಿಸು ಮಧುಸೂಧನ ಈಗ 1 ಇದಿರಿಗೆ ನೋಡಲಾರದೆ ನಿನ್ನ ದೂರಿದೆ ಇದು ಒಂದು ತಪ್ಪು ಎನ್ನದು ಎಂದು ಮನ್ನಿಸು 2 ವಿಷದ ನೀರನು ಕುಡಿದಸುವನ್ನು ಕಳಕೊಂಡು ಪಶುಪಾಲರಿಗೆ ನೀನಸುವಿತ್ತು ಪೊರೆದೆ 3 ಹೊಟ್ಟಯೊಳಗೆ ಸತ್ತು ಹುಟ್ಟಿದ ಶಿಶುವನು ಮುಟ್ಟಿ ಜೀವವನಿತ್ತೆ ಕೃಷ್ಣಾಕೃಪಾಕರ 4 ಗುರುಸುತನನು ಯಮಪುರದಿಂದ ಕರೆತಂದ ಪರಮ ಶ್ರೀ ಪುಲಿಗಿರಿ ವರದ ವಿಠಲರಾಯ 5
--------------
ವೆಂಕಟವರದಾರ್ಯರು
(ಏ) ವಿಶೇಷ ಸಂದರ್ಭದ ಹಾಡುಗಳು (1) ಶ್ರೀ ಶೃಂಗೇರಿ ಸ್ವಾಮಿಗಳ ಜಯತಿಯ ಮೆರವಣೆಗೆ ಗುರುವೆ ಪೂಜಿಪೆ ನಿಮ್ಮಯ ಚರಣಗಳನೂ ಪ ದರುಹಿನೊಳಗೆನ್ನನಿರಿಸಿ ಪಾಲಿಸೊ ದುರಿತದೂತವಿಚಾರ ಶ್ರೀಮದ್ಗುರು ಅ.ಪ ಶ್ರೀಸರಸ್ವತಿಸುಪ್ರಸನ್ನ ವಿಶೇಷ ದಿವ್ಯಪಾದಾಬ್ಜ ಕುಶಲನೆ ಬೇಸರಾಂತಕಮಾದ ಶಾಸ್ತ್ರಾಭ್ಯಾಸ ನಿಜಸನ್ಯಾಸಿ ಕಾರಣ 1 ವೇದನಾಲ್ಕು ಪ್ರಣವ ಪ್ರಸಾದ ವಿದ್ಯ ಸಬೋಧದಾಯಕ ಆದಿಗುರು ಶೃಂಗೇರಿಮಠವೆಂದೋದಿಹೇಳುವುದಾದ ಕಾರಣ 2 ರಾಜಸೋಮಿ ಜಗದ್ಗುರು ಜಯ ಆದಿ ಬೀಜಸಪೂಜ ದೈವಸಮಾಜ ಸತ್ಯಸಭೋಜ ಕಾರಣ 3 ರಾಜ ರಾಜ ಸಮಾಜದೊಳು ದುರ್ಬೀಜ ವಸ್ತುಗಳಿಡಲು ನಿಜಯತಿ ರಾಜಧಾನಿಗೆ ರಮ್ಯವಾದ ಸುವಸ್ತು ಪುಷ್ಪಗಳಾದಕಾರಣ 4 ಕುಂಪಿಣೀಧೊರೆಯ ನೀನೆ ಪರಮಪದನೆಂದೊಗಳಿ ಇಂಪಾದ ಸವಾರಿಯೆದುರಿಗೆ ದಂಪತಿಗಳಡಿಯಾದ ಕಾರಣ 5 ಎಲ್ಲ ದೇಶದ ರಾಜರೆಲ್ಲರು ಬಲ್ಲ ಗುರು ನೀನೆಂದು ನಿಮಗತಿ ಬಿಲ್ಲು ಬಾಣಗಳಿತ್ತು ಗುರುತುಗಳುಳ, ಸತ್ಯಸಮಾಜಭೋಜನೆ 6 ಆನೆಕುದುರೆಗಳೆತ್ತಲೆತ್ತಲು ಮತ್ತೆ ಮುತ್ತಿನ ತೊಂಪೆ ವೈಭವ ಏನು ಸಂಭ್ರಮದಿಂದ ಬಂದೆಯೊ ಭಾನುಕೋಟಿಪ್ರಕಾಶ ಕಾರಣ 7 ವೀರಶೈಯ್ಯಾಚಾರ ರತ್ನ ತಿರಿವುಮುತ್ತಿನಹಾರ ನಿರ್ಗುಣ ಧೀರ ತತ್ವವಿಚಾರ ಕಲ್ಮಷದೂರ ಅದ್ವಯಸಾರ ಕಾರಣ8 ಗೌರ್ನಮೆಂಟಿನೊಳಿತ್ತ ಸತ್ಯಾ ಮುಖ್ಯ ಜನರಲ್ ಬಾವುಟಗಳೂ ಶೌರಿ ತಮ್ಮ ಸವಾರಿಯೊಳಗದು ಫಾರಮೆಂಟಿನನೊಳಿರುವ ಕಾರಣ9 ಪಾದಸೇವೆಗೆ ಬರುವ ಭಕ್ತರ ಪಾಪಅಂತಕ ಪರಮಹಂಸನೆ ದೀಪವಿಲ್ಲದ ಬೆಳಕು ತಮ್ಮೊಳಗಾ ಪಯೋನಿಧಿ ಕಂಡ ಕಾರಣ10 ದಿಕ್ಕು ದೇಶದಿ ನಿಬಿಡಮಾಗಿದೆ ನಿಮ್ಮ ನಾಮಜಯಂತಿಯುತ್ಸವ ಮುಕ್ತಿಯಂಬೆನಗೀವ ನಿಜಪದ ಮೋಕ್ಷದಾಯಕನಾದ ಕಾರಣ11 ಕೈವಲ್ಯ ಪರಶಿವನೆಂಬೊ ನಿಶ್ಚಯ ಬಲ್ಲೆನೆಂಬುವ ಭಾಗ್ಯವಂ ಜನಕಿಲ್ಲಿ ಕೊಟ್ಟಕಾರಣ 12 ವಿಜಯನಗರಕ್ಕೈದ ಸಂಪದ ಅಜನು ಪೊಗಳಲ್ ತೋರಿಸಾಕ್ಷಾತ್ ದ್ವಿಜಪ್ರಜಾವತಿ ನಿಮ್ಮಭಜಿಸುವೆ ನಿಜಗುರು ನೀನಾದ ಕಾರಣ 13 ಸೀಮೆ ಭೂಮಿಯ ಜನಗಳೆಲ್ಲರು ಕಾಮಿತಾರ್ಥವ ಬೇಡುತಿರ್ಪರು ಸ್ವಾಮಿಯಹುದೋ ಜಗದ್ಗುರು ಶೃಂಗೇರಿಮಠದೊಳಗಿರುವಕಾರಣ 14 ವೀರಕಂಕಣ ಧೀರ ತತ್ವವಿಚಾರ ಶುಭಕರ ಧೀರನಹುದೆಲೊ ದಾರಿತೋರಿದ ಗುರುವು ತುಲಸೀಹಾರ ಕಂಟಕದೂರ15
--------------
ಚನ್ನಪಟ್ಟಣದ ಅಹೋಬಲದಾಸರು
(ಏ) ವಿಶೇಷ ಸಂದರ್ಭದ ಹಾಡುಗಳು ಬರಗಾಲ ಮತ್ತು ಯುದ್ಧವನ್ನು ಕುರಿತು ನಿರ್ದಯನಾಗಬೇಡವೋ ಭಗವಂತ ದುರ್ದಿನ ದೂರಮಾಡೋ ದೇಶಕ್ಕೆ ಪ್ರಶಾಂತ ಪ ಮಳೆಗಾಲ ಮರೆತುಹೋಗಿ ಬೇಸಗೆ ಬೆಳೆದು ಬಂದು ನೆಲವೆಲ್ಲ ದುರ್ಭಿಕ್ಷ ತಾಂಡವವಾಡುತಿದೇ 1 ಕೆರೆಕಟ್ಟೆತೊರೆಭಾವಿ ಹೊಳೆಯಲ್ಲಿ ನೀರಿಲ್ಲ ಧರೆಯಲ್ಲಿ ತೃಣವಿಲ್ಲ ಬರಿಗಾಡಾಯ್ತೋ 2 ಹೊಲಗದ್ದೆ ತೋಟಗಳ ಬೆಳೆಯೆಲ್ಲ ಒಣಗಿತು ಫಲವಿಲ್ಲ ಜನವೆಲ್ಲ ಗೋಳಾಡುತಿಹರೋ 3 ಅನ್ನಾಹಾರಗಳಿಲ್ಲ ಗೋಗಳಿಗೆ ಗ್ರಾಸವಿಲ್ಲ ಚಿನ್ನದಂಥ ಮಕ್ಕಳೆಲ್ಲ ಉಣಿಸಿಲ್ಲದಿಹರೋ4 ಧನಿಕರ್ಗೆ ಧನದಾಸೆ ಬಡವರ್ಗೆ ಕೂಳಿಲ್ಲ ದಿನಕಳೆವುದು ಕಷ್ಟವಾಗಿ ಬರಗಾಲ ಬಂತೋ 5 ಕಳವು ಕೊಲೆಯು ದಂಗೆ ದಾರಿದರೋಡೆಯು ಉಳಿಗಾಲ ಬರಲಿಲ್ಲ ಯುದ್ಧದ ಭಯವು6 ಒಂದೊಂಬತ್ತಾರೈದು ಹತ್ತು ಹನ್ನೊಂದರ ಮಧ್ಯೆ ಬಂದು ಜಗದ ಕುತ್ತು ಕತ್ತಿಯಂತೆ ಕಂಡಿತು 7 ಬೆಳಗುಪೂರ್ವ ಆಶ್ವಿಜ ಕಾರ್ತಿಕದೆ ಧೂಮಕೇತು ಇಳೆಗಂಡಕಳೆ ಯಮದ್ವಾರವ ಮುಚ್ಚಿ 8 ಅವಿಶ್ವಾಸದ ವಿಶ್ವವಸುವ ಪರಾಭವದಿಂ ಪ್ರೀತಿತೋರಿ ಭಂಗ ಹರಿಸೋ 9 ಪಾಕಿ-ಚೀನಾ ಪತನಗೈದು ಜೋಕೆಯಿಂ ಭಾರತವ ರಕ್ಷಿಸಿ ಲೋಕಕ್ಕೆ ಕ್ಷಾಮಹರಿಸಿ ಕ್ಷೇಮಕೊಟ್ಟು ಪೊರೆಯೋ10 ನಗೆಯಿಲ್ಲ ಸಂತೋಷ ಸುದ್ಧಿ ಕೇಳುತಲಿಲ್ಲ ಮಿಗಿಲಾಗಿ ಜನರೆಲ್ಲ ಸೊರಗಿ ಸುತ್ತುವರೋ11 ಕನ್ನಡದ ನಾಡಿಗೆ ಹೊನ್ನಿನ ಬಿರುದಿದೆ ಖಿನ್ನತೆ ತಾರದೆ ಉನ್ನತಿ ಕಾಪಾಡು 12 ಮುಂದೆಮಗೆ ಗತಿಯೇನು ಬಾಳುವಬಗೆಯೆಂತು ಬಂಧು ನೀನಿದ್ದುಕೊಂಡು ಅನ್ಯಾಯವಾಗಿದೆ13 ತಂದೆ ತಾಯಿಯು ನೀನು ಹೊಂದಿದ ಬಳಗ ನೀನು ಕುಂದಿಲ್ಲದೆಮ್ಮನ್ನು ಕಾವ ಪ್ರಭು ನೀನು 14 ಸುವೃಷ್ಟಿ ಸಸ್ಯವೃದ್ಧಿ ಜೀವನ ಸಮೃದ್ಧಿಯು ಸುವೃತ್ತಿ ಕರುಣಿಸಿ ಪೊರೆ ಜಾಜಿಶ್ರೀಶ 15
--------------
ಶಾಮಶರ್ಮರು
(ಕಾಂಚಿ ವರದರಾಜಸ್ವಾಮಿ) ಕಾಂಚಿ ವರದರಾಜ ಪರಮ ದಯಾಳೊ ವಂಚನೆಯಿಲ್ಲದ ಬಿನ್ನಹ ಕೇಳೊ ಪ. ಐಂದ್ರ ನಕ್ಷತ್ರ ವಾಗೀಂದು ವಾರದಲಿ ದಿ- ನೇಂದ್ರನುದಯಲಗ್ನ ಸಲುವ ಸಮಯದಿ ಇಂದ್ರಾದಿ ದಿವಿಜರು ಪೊಗಳಲು ನಭದಿ ರಾಜೇಂದ್ರ ನೀ ಪೊರಮುಟ್ಟುದನು ಕಂಡೆ ಮುದದಿ 1 ಭರದಿಂದ ಧ್ವನಿಗೈವ ಭೇರ್ಯಾದಿ ವಾದ್ಯ ತಿ¾ುವಾಯ್ಮೊ¾õÉÉಯೆಂಬ ದ್ರಾವಿಡ ಪದ್ಯ ನೆರೆದ ವಿಪ್ರರು ಪೇಳ್ವ ವೇದ ಸಂವೇದ್ಯ ನಿರವದ್ಯ 2 ಎರಡು ಸಾಲಿನಲಿ ಸಾವಿರ ಸಂಖ್ಯೆ ದೀಪ ಮೆರೆವ ಭೂಛತ್ರಿ ಪಿಡಿದಿರುವ ಪ್ರತಾಪ ಗರುಡ ಗಮನನಾಗಿ ಗೋಪುರ ಮಧ್ಯ ಬರುವ ನಿನ್ನನು ನೋಡಿದರೆ ಮುಕ್ತಿ ಸಿದ್ಧ 3 ಖಂಡ ಮಂಡಲ ನಾಯಕನ ಭೇಟಿ ದೊರೆಯೆ ಖಂಡಿತವಾಗೋದು ದಾರಿದ್ರ್ಯ ಮರೆಯೆ ವಾಹನ ಅಖಿಳಾಂಡಕೋಟಿ ಬ್ರಹ್ಮಾಂಡನಾಯಕ ನಿನ್ನ ಕಂಡೆನು ದೊರೆಯೆ 4 ಶೇಷಗಿರಿಯೊಳಿದ್ದು ಪೋಷಿಪೆ ಜನರ ದೋಷವಿದೂರ ಕಾಂಚೀಶ ಶ್ರೀವರದ ಆಶೆ ಪೂರಿಸಿ ಎನ್ನ ಭಾಷೆಯ ಸಲಿಸೊ ಶ್ರೀಶ ಕೃಪಾರಸ ಸೂಸೆನ್ನ ಶಿರದಿ 5
--------------
ತುಪಾಕಿ ವೆಂಕಟರಮಣಾಚಾರ್ಯ
(ಕಾಣೂರು ಮಠದ ನರಸಿಂಹ) ನೋಡಿರಯ್ಯ ನರಸಿಂಹ ಮೂರ್ತಿಯ ಪಾಡಿರೋ ಕೀರ್ತಿಯನು ಪ. ಚಿಕ್ಕವನ ಗೋಳಿಕ್ಕಿಸುತಲತಿ ಸೊಕ್ಕಿದಸುರನನು ಧಿಕ್ಕರಿಸುತಿಹ ಕಕ್ಕುಲತೆಯಿಂದುಕ್ಕಿ ರೋಷವನು ಮಿಕ್ಕ ದೇವರ ಲೆಕ್ಕಿಸದವನ ತಿಕ್ಕಿ ತೊಡೆಯೊಳಗಿಕ್ಕಿ ನಖಗಳನಿಕ್ಕರಿಸಿ ಸಾಲಿಕ್ಕಿ ತರುವ ಕರುಳಕ್ಕರದಿ ತೆಗೆದ್ಹಕ್ಕಿಗಮನನ 1 ವೇದಮುಖ ಸುರರೆಲ್ಲ ದೂರದಿ ಕಾದುಕೊಂಡಿರಲು ಸಿರಿನಡು ಹಾದಿಯಲಿ ಚಿನ್ಮೋದನಿರಕಾಲ್ಹಾದ ಬಡುತಿರಲು ಪಾದಪದ್ಮಗಳನ್ನು ಭಕ್ತಿರಸಾರದರದಿ ಶಿರಕಿಕ್ಕಿರುವ ಪ್ರ- ಲ್ಹಾದನನು ಪಿಡಿದೆತ್ತಿ ಪರಮವಿನೋದಗೊಂಡ ಪರಾಪರೇಶನ 2 ಅರ್ಥಿಯಿಂದಲಿ ಬಂದಿರುವರು ಪೂರ್ಣಾರ್ಥದಾಯಕನಾ ವ್ಯರ್ಥವೈರದ ದ್ವ್ಯರ್ಧಿದೈತ್ಯರ ಮೂರ್ತಿದಹಿಸುವನಾ ಅರ್ತಿಹರ ಶೇಷಾದ್ರಿವರ ಪುರುಷಾರ್ಥ ಪಾಲಿಪೆನೆಂದು ವಾಮನ ತೀರ್ಥ ಕೃತ ಪೂಜಾರ್ಥವಿಲ್ಲಿಗೆ ಕೀರ್ತಿಕರ ನಿಲಯಾರ್ಥದಾತನ 3
--------------
ತುಪಾಕಿ ವೆಂಕಟರಮಣಾಚಾರ್ಯ