ಒಟ್ಟು 79 ಕಡೆಗಳಲ್ಲಿ , 27 ದಾಸರು , 73 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತವತ್ಸಲ ಭಾರಕರ್ತಾ | ಕರುಣವಂತ ನಿತ್ಯ ನಿರ್ಮಲ ಸರ್ವ ಶಕ್ತ | ಶಾಂತಾತ್ಮಕ ಪ. ಸುತ್ತ ವಿರಜೆ ಉನ್ಮತ್ತ ಮುಕ್ತರ ನೃತ್ಯ ಗೀತೆ ವೈಚಿತ್ರದೋಲಗವು ಇತ್ತಂಡದಿ ಮೈಹತ್ತಿ ಕುಳಿತ ಸತಿಯ ರೆತ್ತಲಿತ್ತ ಬಂದ ಚಿತ್ರ ಮಹಿಮ ಹೇ ಅ.ಪ. ವಿಹಂಗ ಗಮನ ತು- ರಂಗರೂಪನೆ ಅಂತರಂಗದಿ ನೆಲಸಿ ಸು- ಸಂಗದಿಂದಲಿ ಲಿಂಗ ಭಂಗಗೈಸುತ ಜ- ನ್ಮಂಗಳ ಕಡೆ ಮಾಡು ರಂಗ ಕರುಣಾಪಾಂಗ ಇಂಗಡಲಳಿಯನೆ ತುಂಗ ಮಹಿಮ ನರ- ಸಿಂಗ ನಿನ್ನಯ ಚರಣಂಗಳ ತೋರಿಸೋ ಭಂಗಪಡುವೆ ಭವಹಿಂಗಿಸಿ ಪೊರೆ ಕಾ- ಳಿಂಗ ಮಥನ ಯದುಪುಂಗವ ಕರುಣಿ 1 ಗತಿ ನೀನೆ ಎಂದು ಶ್ರೀಪತಿ ನಿನ್ನ ಮೊರೆಹೊಕ್ಕೆ ಹಿತದಿಂದ ಕಾಯೊ ದ್ರೌಪದಿಯ ಕಾಯ್ದಂಥ ದೈವ ಚ್ಯುತದೂರ ಮುಕ್ತರ ಸ್ತುತಿಪ್ರಿಯ ಶ್ರೀ ವಾಯು- ಪಾದ ಪ್ರತಿ ಕಾಣೆ ನಿನಗೆಣೆ ಕರ್ಮ ಸು- ಪಥ ಕಾಣೆನು ಗತಿಯಿಲ್ಲದೆ ಶ್ರೀ- ಪತಿ ಕೃಪೆ ಮಾಡುತ ತತುವ ಮಾನಿಗಳ ಕೃತಿ ತಿಳಿಸುತ ನಿನ ತುತಿಸುವ ಮತಿಕೊಡು 2 ಗೋಪಿಕಂದನೆ ಬಾಲರೂಪಧಾರಕ ಮಧ್ವ- ರಪಾರ ಸ್ತುತಿ ಕೇಳಿ ಗೋಪೀಚಂದನದಿ ಬಂದು ಪರಿ ನಿಂತ ದೇವಪತಿ ಜನಗಳ ಪೊರೆದು ಕಾಪಾಡುವ ಕರ್ತ ಗೋಪಾಲಕೃಷ್ಣವಿಠ್ಠಲ ಶ್ರೀಪದ್ಮಜಮುಖ ಸುರಾಪ ಧರೇಂದ್ರರು ತಾಪಸಿಗಳೂ ನಿನ್ನ ವ್ಯಾಪಾರ ತಿಳಿಯದೆ ಗೋಪ್ಯಾದಿ ನುತಿಸಿ ಸ್ವರೂಪ ಯೋಗ್ಯತೆಯಂತೆ ವ್ಯಾಪಕ ನಿನ್ನಯ ರೂಪವ ಕಾಂಬರು 3
--------------
ಅಂಬಾಬಾಯಿ
ಭಯಕೃದ್ಭಯಹಾರೀ ರಾಧಾನಯನ ಮನೋಹಾರೀ ಪ ತಾಪತ್ರಯ ಪರಿಹಾರಕ ರಂಗಾ ಗೋಪೀಜನ ಹೃತ್ಪದ್ಮ ಪತಂಗಾ 1 ಸುಂದರ ಸುಸ್ಮಿತಶೋಭಿತ ವದನಾ ಮಾಧವ ಜಿತಮದನಾ 2 ದುಷ್ಟಕುಲಾಂತಕ ಈ ಧರೆಯೊಳು ಶ್ರೀದ - ವಿಠಲ ವಿಧಿಭವವಂದಿತ ಪಾದಾ 3
--------------
ಶ್ರೀದವಿಠಲರು
ಭಾಗೀರಥೀ ಜನಕಗೆ ಭಾಗವತಪ್ರಿಯಗೆ ಆಗ ನೀರೆರೆದರವಿಂದಲೋಚನನಿಗೆ ಗೋಪಿ 1 ಸಾಗರಶಯನನ ತೂಗಿ ತೊಟ್ಟಿಲೊಳಿಟ್ಟು ನಾಗಮುರಿಗೆ ವಂಕಿ ನಂದಗೋಪನ ಸುತಗೆ ಬೆರಳಿಗುಂಗುರ ಕೋಟಿಭಾಸ್ಕರತೇಜಗೆ ಹೊಳೆವೊ ಬಿಂದಲಿ ಗುಂಡು ಭುಜಕೀರ್ತಿ ಭೂಷಣ 2 ಮಲಕು ಮುತ್ತಿನ ಹಾರ ಪದಕ ಪಚ್ಚೆಯ ಕಾಂತಿ ಕೌಸ್ತುಭ ರತ್ನ ಥಳಥಳಿಸುವ ಕರ್ಣದಲ್ಲಿ ಬಾವುಲಿ ಚೌಕುಳಿ ಚಳತುಂಬು ಮುತ್ತಿನಬಟ್ಟು ಮುಂದಲೆಗೆ 3 ಹೊಸ ವಜ್ರದರಳೆಲೆ ಹುಲಿಯುಗುರು ತಾಯಿತ ಕುಸುಮನಾಭಗೆ ಕಿರುಗೆಜ್ಜೆ ಕಾಲಲಂದಿಗೆ ಮಿಸುಣಿ ಮಾಣಿಕ್ಯದುಡಿದಾರದಡ್ಡಿಕೆ ಕಟ್ಟಿ ಗೋಪಿ 4 ಕಂಜನಯ್ಯನ ನೋಡೆ ಕಂಗಳಿನ್ನೆರಡಿಲ್ಲ ಜಿಹ್ವೆ ಒಂದೆ ಸಾಲದೆನಗೆಂದು ಅಂಗಿಟೊಪ್ಪಿಗೆ ಹಾಕ್ಯಾಲಿಂಗನೆ ಮಾಡುತ ಸತಿ ತಾನಂದಾನಂದಭರಿತಳಾಗಿ5 ತನ್ನ ಮಗನ ಮುದ್ದು ತಾ ನೋಡಿ ಸಾಲದೆ ಹೊನ್ನ ಪುತ್ಥಳಿಯಂತೆ ಹೊಳೆವೊ ಕೂಸನು ಎತ್ತಿ ನಿನ್ನ ಮಗನ ಆಟ ನೀ ನೋಡೆಂದೆನುತಲಿ ತನ್ನ ಪತಿಯ ತೊಡೆಯಲ್ಲಿಟ್ಟು ನಲಿಯುತ 6 ಹೊನ್ನ ಪುತ್ಥಳಿಗೊಂಬೆ ಹೊಸ ಚಿನ್ನದರಗಿಳಿಯೆ ಹೊನ್ನು ತಾ ಗುಬ್ಬಿತಾರಮ್ಮಯ್ಯ ಎನುತಲಿ ಬಣ್ಣ ಬಣ್ಣದ ಆಟ ವರ್ಣಿಸುತಲಿ ನೀಲ- ವರ್ಣನ ತನ್ನ ತೋಳಿಂದಪ್ಪಿ ನಲಿಯುತ 7 ಸೃಷ್ಟಿಮಾಡುವರಿಲ್ಲೀ ಶಿವ ಬ್ರಹ್ಮರೊಡೆಯನ ಸೃಷ್ಟಿಕರ್ತನಾದನನ್ಹುಟ್ಟಿಸಿದ ನಾಭಿಯಿಂದಿವನು ಹೊಟ್ಟೆಲೀರೇಳು ಜಗವಿಟ್ಟು ಸಲಹುವ ಎಷ್ಟು ಸರ್ವೋತ್ತಮ ಈಗಿಲ್ಲ್ಯವತರಿಸಿದ 8 ಚತುರವದನಗೆ ವೇದ ತಂದಿಟ್ಟು ಸಾಗರ ಮಥಿಸಿ ಮಂದರವನು ಪೊತ್ತು ಅಮೃತವ ಹೀರಿ ಪೃಥಿವಿಯನು ತಂದ ಕೋರೆಯಲಂದ್ಹಿರಣ್ಯಾಕ್ಷನ ಹತವ ಮಾಡಿದ ತಾ ಭೂಪತಿ ಎಂದೆನಿಸಿದಿವನು 9 ಪರಮಭಕ್ತನು ಕರೆಯೆ ಬಿರುದು ಕಂಬದಿ ಬಂದು ಕರುಳ ಬಗೆದ ಪುಟ್ಟ ತÀರÀಳ ರೂಪವ ನೋಡಿ ಮರುಳಾಗಿ ಬಲಿ ಮೂರು ಚರಣ ದಾನ ನೀಡೆ ಬೆಳೆದು ಬ್ರಹ್ಮಾಂಡಕ್ಕೆ ಭುವನ ವ್ಯಾಪಿಸಿಕೊಂಡ10 ಕ್ಷತ್ರ ಸಂಹಾರಿ ತಾ ಎತ್ತಿ ಧನುವ ಸೀತಾ ಸೌ- ಮಿತ್ರಿಸಹಿತ್ವನದಲ್ಲಿ ಇರುತಿರಲಾಗ ಪತ್ನಿ ಒಯ್ಯಲು ಅಸುರನ್ಹತ್ತು ಶಿರಗಳ ತರಿದ ದುಷ್ಟ- ರಂತಕನೆ ನಿರ್ದುಷ್ಟ ಸಜ್ಜನಪ್ರಿಯ 11 ದೇವಾಧಿದೇವ ದೇವಕ್ಕಿ ಜಠರದಿ ಬಂದು ಮಾಯಾ- ಪೂತಣಿಯನ್ನು ಕೊಂದು ವಿಷಮೊಲೆನುಂಡು ಕಾಲಲಿ ಶಕಟನ ಕೆಡವಿದ ಯದುವೀರ ತಾ- ಗೋಪಾಲಕ ಗೋಪೀಸುತನೆಂದೆನಿಸಿಕೊಂಡ12 ವಿಪರೀತ ಮಾಯದಿ ತ್ರಿಪುರದ ಜನರಿಗೆ ದುರ್ಮತವ ಬೋಧಿಸಿ ಅಸುರಾರಿ ಮೋಹಕ ತೋರಿ ಚಪಲ ಚೆನ್ನಿಗ ಖಡ್ಗಪಿಡಿದು ತೇಜಿಯ- ನೇರಿ ಕಪಟನಾಟಕ ಕಲಿಮರ್ದನ ಕರಿಗ್ವರವಿತ್ತ13 ಜನ್ಮಕರ್ಮವು ಜರಾಮರಣಗಳಿವಗಿಲ್ಲ ಜಗದೋ- ಪರಬ್ರಹ್ಮನ ಪಾದಾಂಘ್ರಿಸ್ಮರಣಿ (ಣೆಯಿ?)ರೆ ಪರಮಾ- ದರದಿ ಕರೆದೊಯ್ವ ತನ್ನ (ಬಳಿಯ)ಲ್ಲೆ 14 ಏಸುಜನ್ಮದ ಫಲವಿನ್ನೆಷ್ಟು ಜನ್ಮದ ಸುಕೃತ ಈ ಸಮಯದಿ ಫಲಿಸಿತೀತ ಇಲ್ಲುದಿಸಿರಲು ದೋಷವರ್ಜಿತನೆ ಸಂತೋಷಭರಿತನಿವ ಭೀ- ಮೇಶಕೃಷ್ಣ ಯಶೋದೆ ಕೂಸೆಂದೆನಿಸಿಕೊಂಡ15
--------------
ಹರಪನಹಳ್ಳಿಭೀಮವ್ವ
ಮಟ್ಟುದೊರಿತು-ನಿನ್ನ ಗುಟ್ಟು ಹಾರಿತು ಪ ಸಿಟ್ಟುಗೊಳ್ಳಬೇಡವೆನ್ನ ದೃಷ್ಟಿಯಿಂದ ನೋಡಿ ಕಂಡೆ ಅಷ್ಟಸಿದ್ಧಿಗಳಿದ್ದರೂ ವೊಂದಿಷ್ಟುಕೊರತೆ ಕೃಷ್ಣನೆಂಬ 1 ಹೇಯ ಗುಣವಿಲ್ಲ ಮುನಿ-ಗೇಯ ನಿನ್ನೊಳೆಂಬ ಜನರ ಬಾಯ ಮುಚ್ಚಿಸುವೆನೆಂದತ್ಯಾಯಸಪಡುವನೆಂಬ ||ಮಟ್ಟು|| 2 ಸತ್ಯಕಾಮನಹುದು ನೀನು ಸತ್ಯಸಂಕಲ್ಪನು ನಿನಗೆ ದತ್ಯಧಿಕ-ಕೊರತೆಯೆಂಬ ||ಮಟ್ಟು|| 3 ಜ್ಞಾನವಂತನೆಂದು ಬಹುಮಾನವಂತನಾದರೂ ಅ ಜ್ಞಾನ ಶೂನ್ಯನೆಂಬ ದೊಡ್ಡ ಹಾನಿಯೊಂದಿರುವದೆಂಬ4 ಎಲ್ಲ ವಸ್ತುಗಳುಂಟು ನಿನಗೆ ಪುಲ್ಲನಾಭ ನಿನ್ನ ಬಳಿಯೋ ಳಿಲ್ಲವೆಂಬ ಶಬ್ದಮಾತ್ರವಿಲ್ಲವೆಂಬ ಮಾತು ಬಂದಿಹ5 ಪಾಪವೆಂಬ ಕತ್ತಲೆಗೆ ದೀಪನಾಗಿದ್ದರು ಜನರ ಪಾಪಗಳ ನಪಹರಿಪ ದೀಪನಾ ಬಿಡದು ಎಂಬ ||ಮಟ್ಟು||6 ಜ್ಯೋತಿಗಳಿಗೆಲ್ಲ ಪರಂಜ್ಯೋತಿಯಾಗಿರುವ ನಿನಗೆ ಆ ಜ್ಯೋತಿಗಳೆತ್ತಿದಾರತೀ ಪ್ರೀತಿಯೆಂದು ಜನರು ಪೇಳ್ವ ||ಮಟ್ಟು||7 ಹಾನಿವೃದ್ಧಿ ಶೋಕಮೋಹ ಜ್ಞಾನ ನಿನ್ನೊಳಿಲ್ಲವೆಂಬ ಹೀನವಾಕ್ಯವ ಪೇಳ್ವರೆಲ್ಲ ಮಾನನಿಧಿಗಳೆಂತೆಂಬ ||ಮಟ್ಟು||8 ನಿತ್ಯ ತೃಪ್ತನಾದರೂ ನಿಜ-ಭೃತ್ಯರನ್ನು ಪಾಲಿಸುವ ನಿತ್ಯ ಕರ್ಮದಲ್ಲಿ ಕೃತಕೃತ್ಯನು ನೀನಲ್ಲವೆಂಬ 9 ಕಷ್ಟಪಡಬೇಡವೆನ್ನೊ-ಳೆಷ್ಟು ದುರ್ಗುಣಂಗಳಿಹ ವಷ್ಟನು ವೊಪ್ಪಿಸಿ ನಿನಗಿಷ್ಟನಾಗಬೇಕೆಂಬ ||ಮಟ್ಟು|| 10 ಕ್ಷೀರದಧಿನವನೀತ-ಚೋರನಾಗಿರಲಿ ಗೋಪೀ ಜಾರನಾಗಿರಲಿ ಸಂಸಾರವೈರಿಯು ನೀನೆಂಬ ||ಮಟ್ಟು||11 ಕೊರತೆಯೆಂಬಾಜನರಿಗೆಲ್ಲ-ವರವನಿತ್ತು ಪೊರೆವೆನೆಂಬ ವರದವಿಠಲನೆಂಬ ||ಮಟ್ಟು|| 12
--------------
ಸರಗೂರು ವೆಂಕಟವರದಾರ್ಯರು
ಮದನ ಜನಕ ಮುದ್ದುರಂಗ ನಿತ್ಯ ಹೃದಯದೊಳಗೆ ಭಜಿಸುವರಂತರಂಗ ಪ ಅಜ ಭವನ ಮಿತ್ರ ಸರ್ವೇಶ ನಿನ್ನ ಕ್ಲೇಶ ನಾಶ ಮಜಡ ನೆನಗೆ ನೀ ನುಡಿಸ ಕೊಡು ಸುಜನ ಸೇವಿತ ನರಹರಿ ಲಕ್ಷ್ಮೀಶ 1 ದಯವ ನೀ ಎನ್ನೊಳುಬೀರೋ ನಿನ್ನ ಸ್ವಯಂ ಮೂಲ ನಿಜದ ಮೂರ್ತಿಯನೀಗ ತೊರೋ ಭಯಗಳನೆಲ್ಲವ ತೋರೋ ಚೆಲ್ವ ನಯವಿದ ಸರ್ವ ಸದ್ಗುಣ ನಿಧಿ ಬಾರೋ 2 ಪರಮ ಪಾವನಮೂರ್ತಿ ನಿನ್ನ ಸಿರಿ ಚರಣ ಕೆರಗುವೆ ನಾ ಮುನ್ನ ಕರುಣದಿ ಸಲಹೋ ನೀ ಎನ್ನ ನಿತ್ಯ ಪೊರೆವ ಚಿಪ್ಪಳಿ ಗೋಪೀವರ ಸುಪ್ರಸನ್ನ 3
--------------
ಕವಿ ಪರಮದೇವದಾಸರು
ಮಂದರಧರ ಗೋವಿಂದ ಜಯ ನಂದನ ಕಂದ ಬಾಲಕುಲದಾಸಾನಂದ ಪ ಬೃಂದಾವನ ಗೋಪೀಜನ ವೃಂದ ಸುಂದರ ಮುರಳೀ ಗೀತಾನಂದ ಅ.ಪ ಶ್ರೀವತ್ಸಾಂಕಿತ ಪಾವನಚರಣ ದೇವ ದೇವಾನತ ದೇವಕಿತರುಣ ಭಾವ ಸಂಭವಪಿತ ರಾಧಾರಮಣ ಭಾವುಕ ಸೇವಿತ ಕರುಣಾಭರಣ1 ಮಂಗಳನಾಮಾ ಯದುಕುಲಸೋಮಾ ಸಂಗರಭೀಮ ಜಗದಭಿರಾಮ ಭೃಂಗಕುಂತಳ ಮಾಲಿಂಗನಿಸ್ಸೀಮ ರಂಗರಥಾಂಗ ಮಾಂಗಿರಿವರಧಾಮ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮರ್ದಳವನಿದ ಮನ್ನಿಸು ಮಾರಮಣವರ್ಧಿಸುವದಾನಂದವಸಿದ್ಧವಹ ಶಬ್ದಗಳನು ಸೂಚಿಸುತಲಿದ್ದು ಪ್ರೇರಿಪುದರ್ಥವ ಪಉಭಯ ಮುಖದಿಂದಲುದಿಸಿ ತಾನಿಂತುಶುಭತರಾಕೃತಿಯೆನ್ನಿಸಿಲಭಿಸುತ್ತ ನರ್ತಕಿಯನು ಲಾಲಿಸುತವಿಭು ನಿನ್ನ ನೋಲೈಪುದು 1ಸ್ಥೂಲತರ ಸ್ವನವಾದರೂ ಕಿಂಕಿಣೀಜಾಲಕಿದು ಜೋಡಾಗುತಪಾಲಿಸುತ ಪದಗತಿಯನು ಮನದ ಬಲಕಾಲಯವದಹುದೆನ್ನಲು2ಮೊದಲ ವರ್ಣವು ರುದ್ರನು ಮಧ್ಯದಲಿಹುದುಗಿದಕ್ಷರ ವಿಷ್ಣುವುತುದಿಳಕಾರವು ಬ್ರಹನು ಇಷ್ಟಕ್ಕೆಸದನವಾಗ್ಯನುಸರಿಸಲು 3ಮೂರು ಮೂರ್ತಿಗಳಂಗವ ವರ್ಣಗಳುತೋರೆ ನಡುವೆ ದಕಾರವಸೇರಿದ ರಕಾರ ತಾನು ವ್ಯಂಜನದಿತಾರಕಬ್ರಹ್ಮವಾಗೆ 4ಇಂತು ಮರ್ದಳವೆಸೆಯಲು ಇಂದಿರಾವಂತ ನೀ ಕಟ್ಟಿದಂತೆಕಂತುಪಿತ ತಿರುಪತೀಶಾ ಇಲ್ಲಿ ನೀನಿಂತು ಕೇಳ್ವೆಂಕಟೇಶಾ 5ಓಂ ಗೋಪಗೋಪೀಶ್ವರಾಯ ನಮಃ
--------------
ತಿಮ್ಮಪ್ಪದಾಸರು
ಮಾಧವ ಜಯ ಜಯ ರಾಘವ ರಾಮ ಖರಾರೇ ಪ ಜಯತು ಸೀತಾಧವ ಪಾವನ ಶೌರೇ ಅ.ಪ ಜಯತು ಪೀತಾಂಬರಧರ ಶಕಟಾರಿ ಜಯ ಕನಕಾಂಬರಧರ ವಿಕಟಾರಿ ಜಯ ಜಯ ಮುರಳೀಧರ ಕಂಸಾರಿ ಜಯ ಜಯ ಶರಧರ ದಶಶಿರವೈರಿ 1 ಜಯತು ಗೋಪೀಜನಪ್ರಿಯ ಗೋಪಾಲ ಜಯತು ತಪೋಬಲ ಮುನಿಜನಪಾಲ ಜಯತು ಜಯತು ಕೌಸ್ತುಭಮಣಿಮಾಲ ಜಯ ಜಯತು ಭೂಪಾಲ ಸುಶೀಲಾ 2 ಸನ್ನುತ ನಾಮ ಜಯ ಜಯಾನತ ಮುನಿಜನ ಪ್ರೇಮಾ ಜಯತು ಜಯತು ರಾಮ ಮಾಂಗಿರಿಧಾಮಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮುಟ್ಟು ದೋರಿತು ನಿನ್ನ ಗುಟ್ಟು ಹಾರಿತು ಪ ಸಿಟ್ಟುಗೊಳ್ಳಬೇಡವೆನ್ನ ದೃಷ್ಟಿಯಿಂದ ನೋಡಿ ಕಂಡೆ ಅಷ್ಟಸಿದ್ಧಿಗಳಿದ್ದರೂ ಒಂದಿಷ್ಟು ಕೊರತೆ ಕೃಷ್ಣನೆಂಬ ಅ.ಪ ಹೇಯಗುಣವಿಲ್ಲ ಮುನಿಗೇಯ ನಿನ್ನೊಳೆಂಬ ಜನರ ಬಾಯ ಮುಚ್ಚಿಸುವೆನೆಂದತ್ಯಾಯಸಪಡುವನೆಂಬ 1 ಸತ್ಯಕಾಮನಹುದು ನೀನು ಸತ್ಯಸಂಕಲ್ಪನು ನಿನಗೆ ಮಿಥ್ಯಾವಚನಿಲ್ಲವೆಂಬೊಂದಿತ್ಯಧಿಕ ಕೊರತೆಯೆಂಬ 2 ಜ್ಷಾನವಂತನೆಯ ಬಹುಮಾನವಂತನಾದರೂ ಅ ಜ್ಞಾನಶೂನ್ಯನೆಂಬ ದೊಡ್ಡ ಹಾನಿಯೊಂದಿರುವುದೆಂಬ3 ಎಲ್ಲ ವಸ್ತುಗಳುಂಟು ನಿನಗೆ ಪುಲ್ಲನಾಭ ನಿನ್ನ ಬಳಿಯೋ ಳಿಲ್ಲವೆಂಬ ಶಬ್ದಮಾತ್ರವಿಲ್ಲವೆಂಬ ಮಾತು ಬಂದಿಹ 4 ಪಾಪವೆಂಬ ಕತ್ತಲೆಗೆ ದೀಪನಾಗಿದ್ದರು ಜನರ ಪಾಪಗಳನಪಹರಿಪ ದೀಪನಾ ಬಿಡದು ಎಂಬ 5 ಜ್ಯೋತಿಗಳಿಗೆಲ್ಲ ಪರಂಜ್ಯೋತಿಯಾಗಿರಿವ ನಿನಗೆ ಆ ಜ್ಯೋತಿಗಳೆತ್ತಿದಾರತೀ ಪ್ರೀತಿಯೆಂದು ಜನರು ಪೇಳ್ವ 6 ಹಾನಿವೃದ್ಧಿ ಶೋಕಮೋಹ ಜ್ಞಾನ ನಿನ್ನೊಳಿಲ್ಲವೆಂಬ ಹೀನವಾಕ್ಯವ ಪೇಳ್ವರೆಲ್ಲ ಮಾನನಿಧಿಗಳೆಂತೆಂಬ 7 ನಿತ್ಯತೃಪ್ತನಾದರೂ ನಿಜ ಭೃತ್ಯರನು ಪಾಲಿಸುವ ನಿತ್ಯ ಕರ್ಮದಲ್ಲಿ ಕೃತಕೃತ್ಯನುನೀನಲ್ಲವೆಂಬ 8 ಕಷ್ಟಪಡಬೇಡವೆನ್ನೊಳೆಷ್ಟು ದುರ್ಗುಣಂಗಳಿಹ ವಷ್ಟನು ಒಪ್ಪಿಸಿ ನಿನಗಿಷ್ಟ ನಾಗಬೇಕೆಂಬ 9 ಕ್ಷೀರದಧಿನವನೀತ ಚೋರನಾಗಿರಲಿ ಗೋಪೀ ಜಾರನಾಗಿರಲಿ ಸಂಸಾರವೈರಿಯು ನೀನೆಂಬ 10 ಕೊರತೆಯೆಂಬಾ ಜನರಿಗೆಲ್ಲಾ ವರವನಿತ್ತು ಪೊರೆವೆನೆಂಬ ಸ್ಥಿರವಾಗಿ ಶ್ರೀ ವ್ಯಾಘ್ರಗಿರಿಯೊಳಿರುವ ವರದ ವಿಠಲನೆಂಬ11
--------------
ವೆಂಕಟವರದಾರ್ಯರು
ಮೂರುತಿ ಪುಟ್ಟ ಮೂರುತಿ ಪ. ಸಾರುತಿ ಹರಿಗುಣ ಬೀರುತಿ ತ್ರಿಜಗದಿ ಅ.ಪ. ತ್ರೇತೆಯ ಯುಗದಲಿ ಜನಿಸಿ | ರಾಮ ದೂತಕಾರ್ಯಕೆ ಮನವಿರಿಸಿ ಪ್ರೀತಿಯೊಳ್ ರವಿಜನ ಉಳಿಸಿ | ಬಹು ಖ್ಯಾತಿಯ ವಾಲಿಯನಲ್ಲೇ ಅಳಿಸಿ ವಾತವೇಗದಿ ವನಧಿಯ ದಾಟಿ ಉಂಗುರ ಸೀತೆಗಿತ್ತು ಲಂಕೆ ವೀತಿಹೋತ್ರನಿಗಿತ್ತ 1 ದ್ವಾರಕಿನಿಲಯನ ಒಲಿಸಿ | ಬಲು ಧೀರ ಭೀಮಸೇನನೆನಿಸಿ ಸೋಮಕುಲದಲಿ ಜನಿಸಿ | ಬಲು ಕಾಮಿ ಕೀಚಕನನ್ನು ವರೆಸಿ ಕಾಮಿನಿಗೋಸುಗ ಕಾಮುಕ ಕುರುಕುಲ ಧೂಮವೆಬ್ಬಿಸಿದ ನಿಸ್ಸೀಮ ಸುಗುಣಧಾಮ 2 ಪುಟ್ಟಯತಿಯ ರೂಪತಾಳಿ | ಬಲು ಗಟ್ಟಿ ಗೋಪೀ ಗೆಡ್ಡೆ ಸೀಳಿ ಪುಟ್ಟ ಕೃಷ್ಣನ ಕಂಡು ತೋಳಿ | ನಿಂದ ನಿಷ್ಟೆಯೊಳ್ ನೆತ್ತಿಯೊಳ್ ತಾಳಿ ಕುಟ್ಟಿ ಕುಮತಗಳ ವೈಷ್ಣವಾಗ್ರಣಿಯಾದ 3 ಸಾಕಾಯಿತೇ ಸ್ವಾಮಿಕಾರ್ಯ | ಇಲ್ಲಿ ಬೇಕಾಯಿತೇ ಮೌನಚರ್ಯಾ ಆ ಕಾಲದ ಎಲ್ಲ ಶೌರ್ಯ ಉಡುಗಿ ಏಕಾಂತದಲಿ ಹರಿಚರ್ಯಾ ವಾಕು ಉಚ್ಚರಿಸದೆ ಈ ಕುಧರಜೆ ತೀರ ಏಕಾಂತವಾಸನೆ 4 ಅಪಾರಮಹಿಮನೆ ಹಂಪೆ | ಯಲ್ಲಿ ಪರಿ ಇರುವುದು ತಂಪೆ ಪತಿ ಪದಕಂಜ ಕಂಪೆ | ಇಲ್ಲಿ ನೀ ಪಾರಣೆಯೆ ಮಾಳ್ಪ ಸೊಂಪೆ ಗೋಪಾಲಕೃಷ್ಣವಿಠ್ಠಲದಾಸ ನಿನ್ನಲ್ಲಿ ಸ್ಥಾಪಿಸಿದರೆ ವ್ಯಾಸರೀಪರಿ ಯಂತ್ರದಿ 5
--------------
ಅಂಬಾಬಾಯಿ
ರಂಗ ಬಾರೊ ನರಸಿಂಗ ಬಾರೊ ಪ. ಸಾಸಿರ ಮೂರುತಿ ವಾಸವವಂದ್ಯನೆಸಾಸಿರನಾಮದೊಡೆಯನೆಸಾಸಿರನಾಮದೊಡೆಯನೆ ನರಹರಿಕೇಶವ ನಮ್ಮ ಮನೆದೈವ 1 ವಾರಣವಂದ್ಯನೆ ಕಾರುಣ್ಯರೂಪನೆಪುರಾಣಗಳಲ್ಲಿ ಪೊಗಳುವಪುರಾಣಗಳಲ್ಲಿ ಪೊಗಳುವ ನರಹರಿನಾರಾಯಣ ನಮ್ಮ ಮನೆದೈವ2 ಯಾದವಕುಲದಲ್ಲಿ ಸಾಧುಗಳರಸನೆಭೇದಿಸಿ ದನುಜರ ಗೆಲಿದನೆಭೇದಿಸಿ ದನುಜರ ಗೆಲಿದನೆ ನರಹರಿಮಾಧವ ನಮ್ಮ ಮನೆದೈವ 3 ದೇವೆಂದ್ರ ಮಳೆಗರೆಯೆ ಗೋವರ್ಧನ ಗಿರಿಯೆತ್ತಿಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿ ಕಾಯಿದನೆಗೋವಿಂದ ನಮ್ಮ ಮನೆದೈವ 4 ಸೃಷ್ಟಿಗೆ ಕರ್ತನೆ ದುಷ್ಟಕಂಸನ ಗೆಲಿದುಶಿಷ್ಟಪರಿಪಾಲನೆನಿಸಿದಶಿಷ್ಟಪರಿಪಾಲನೆನಿಸಿದ ನರಹರಿವಿಷ್ಣುವೆ ನಮ್ಮ ಮನೆದೈವ5 ಮಧುವೆಂಬೊ ದೈತ್ಯನ ಮುದದಿಂದ ಗೆಲಿದನೆವಿದುರನ ಮನೆಯಲಿ ನಲಿದುಂಡವಿದುರನ ಮನೆಯಲಿ ನಲಿದುಂಡ ನರಹರಿಮಧುಸೂದನ ನಮ್ಮ ಮನೆದೈವ 6 ಚಕ್ರವ ಪಿಡಿದನೆ ಭೂಚಕ್ರವ ಗೆಲಿದನೆಅಕ್ರೂರನೊಡನೆ ಮಧುರೆಗೆಅಕ್ರೂರನೊಡನೆ ಮಧುರೆಗೆ ಪೋದ ತ್ರಿ-ವಿಕ್ರಮ ನಮ್ಮ ಮನೆದೈವ7 ಸಾಮವನೋದುತ್ತ ದಾನವ ಬೇಡುತ್ತನಾಮದ ಮಹಿಮೆ ಪೊಗಳುತ್ತನಾಮದ ಮಹಿಮೆ ಪೊಗಳುತ್ತ ನರಹರಿವಾಮನ ನಮ್ಮ ಮನೆದೈವ8 ಶ್ರೀಧರ ಎಸಿಸಿದ ಶ್ರೀವತ್ಸ ಲಾಂಛನಶ್ರೀಧರ ಗೋಪೀತನಯನೆ ಶ್ರೀಧರ ಗೋಪೀತನಯನೆ ನರಹರಿಶ್ರೀಧರ ನಮ್ಮ ಮನೆದೈವ 9 ಋಷಿಜನ ವಂದ್ಯನೆ ಬಿಸಜನಾಭನೆ ದೇವಋಷಿಜನರಿಗೆಲ್ಲ ಅಭಯವಋಷಿಜನರಿಗೆಲ್ಲ ಅಭಯವ ಕೊಡುವೋನೆಹೃಷಿಕೇಶನೆ ನಮ್ಮ ಮನೆದೈವ10 ಪದುಮಸಂಭವಪಿತ ಪದುಮದಾಮೋದರ[ಪದುಮ]ದಿಂದಭಯವ ಕೊಡುವೋನೆ[ಪದುಮ]ದಿಂದಭಯವ ಕೊಡುವೋನೆ ನರಹರಿಪದುಮನಾಭನೆ ನಮ್ಮ ಮನೆದೈವ 11 ನಾಮದ ಮಹಿಮೆಯ ಪ್ರೇಮದಿ ಪೊಗಳಲುಕಾಮಿತಾರ್ಥಗಳ ಕೊಡುವೋನೆಕಾಮಿತಾರ್ಥಗಳ ಕೊಡುವೋನೆ ನರಹರಿದಾಮೋದರ ನಮ್ಮ ಮನೆದೈವ 12 ಸಂಕಟಗಳ ತರಿವೋನೆ ಪಂಕಜನಾಭನೆಶಂಕೆಯಿಲ್ಲದೆ ಅಸುರರಶಂಕೆಯಿಲ್ಲದೆ ಅಸುರರ ಸಂಹರಿಸಿದಸಂಕರ್ಷಣ ನಮ್ಮ ಮನೆದೈವ 13 ವಸುದೇವತನಯನೆ ಶಿಶುಪಾಲನ ಗೆಲಿದನೆವಶವ ಮಾಡಿದೆಯೊ ತ್ರಿಪುರರವಶವ ಮಾಡಿದೆಯೊ ತ್ರಿಪುರರ ನರಹರಿವಾಸುದೇವ ನಮ್ಮ ಮನೆದೈವ14 ಶುದ್ಧಸ್ವರೂಪನೆ ಶುದ್ಧ ಭಕ್ತರನು ಸಲಹಯ್ಯಹದ್ದುವಾಹನನಾದ ದೇವನೆಹದ್ದುವಾಹನನಾದ ದೇವನೆ ನರಹರಿಪ್ರದ್ಯುಮ್ನ ನಮ್ಮ ಮನೆದೈವ 15 ವನಜಲೋಚನ ಹರಿ ವಿನಯ ಉಳ್ಳವನೆಧ್ವನಿಕೇಳಿ ಬಂದ ಕುಬುಜೆಯ ಧ್ವನಿಕೇಳಿ ಬಂದ ಕುಬುಜೆಯ ನರಹರಿಅನಿರುದ್ಧ ನಮ್ಮ ಮನೆದೈವ 16 ಪಾರಿಜಾತದ ಹೂವ ನಾರಿಗೆ ಇತ್ತನೆವೀರ ದಾನವರ ಗೆಲಿದನೆವೀರ ದಾನವರ ಗೆಲಿದನೆ ನರಹರಿಪುರುಷೋತ್ತಮ ನಮ್ಮ ಮನೆದೈವ 17 ಅಕ್ಷಯಪದವೀವ ಪಕ್ಷಿವಾಹನಸ್ವಾಮಿಕುಕ್ಷಿಯೊಳೀರೇಳು ಭುವನವಕುಕ್ಷಿಯೊಳೀರೇಳು [ಭುವನವನಾಳಿದ] ನರಹರಿ ಅ-ಧೋಕ್ಷಜ ನಮ್ಮ ಮನೆದೈವ18 ನರಕಾಸುರನ ಕೊಂದು ಹಿರಣ್ಯನ ಮರ್ದಿಸಿಕರುಳ ಬಗೆದು ವನಮಾಲೆ ಹಾಕಿಕರುಳ ಬಗೆದು ವನಮಾಲೆ ಹಾಕಿದ ಹರಿನರಸಿಂಹನೆ ನಮ್ಮ ಮನೆದೈವ19 ಅಚ್ಚ್ಚುತಾನಂತನೆ ಸಚ್ಚಿದಾನಂದನೆ[ಮಚ್ಚಾವತಾರದಿ] ನಲಿದನೆ[ಮಚ್ಚಾವತಾರದಿ] ನಲಿದನೆ ನರಹರಿಅಚ್ಚುತ ನಮ್ಮ ಮನೆದೈವ 20 ಜಾನಕಿರಮಣನೆ ದಾನವಾಂತಕನೆದೀನರಕ್ಷಕನೆ ಸಲಹಯ್ಯದೀನರಕ್ಷಕನೆ ಸಲಹಯ್ಯ ನರಹರಿಜನಾರ್ದನ ನಮ್ಮ ಮನೆದೈವ 21 ಅಪರಿಮಿತಮಹಿಮನೆ ವಿಪರೀತ ಚರಿತನೆ[ಗುಪಿತವೇಷಗಳ] ತಾಳಿದನೆ[ಗುಪಿತವೇಷಗಳ] ತಾಳಿದ ನರಹರಿಉಪೇಂದ್ರ ನಮ್ಮ ಮನೆದೈವ 22 ಹರನ ಭಸ್ಮಾಸುರನು ಮರಳಿ ಬೆನ್ನ್ಹತ್ತಲುತರುಣಿರೂಪವನು ತಾಳಿದÀನೆತರುಣಿರೂಪವನು ತಾಳಿದ ನರಹರಿ ಶ್ರೀ-ಹರಿಯೆ ನಮ್ಮ ಮನೆದೈವ 23 ಕೃಷ್ಣಾವತಾರದಲಿ ದುಷ್ಟರ ಗೆಲಿದನೆವೃಷ್ಣಿಯರ [ಕುಲತಿಲಕನೆ]ವೃಷ್ಣಿಯರ [ಕುಲತಿಲಕನೆ] ನರಹರಿ ಶ್ರೀ-ಕೃಷ್ಣನೆ ನಮ್ಮ ಮನೆದೈವ 24 ಇಪ್ಪತ್ತು ನಾಲ್ಕು ನಾಮಂಗಳ ಪಾಡುವೆನುಅಪ್ಪ ಕೇಶವನ ಚರಿತೆಯನುಅಪ್ಪ ಕೇಶವನ ಚರಿತೆಯನು ಪಾಡಲುಒಪ್ಪಿಸಿಕೊಳ್ಳುವ ಹಯವದನ25
--------------
ವಾದಿರಾಜ
ಲಾಲಿ ಲಾಲಿ ನಮ್ಮ ಹರಿಯೆ ಲಾಲಿ ಪ ಶ್ರೀಲತಾಂಗಿಯೊಡನೆ ಮೆರೆವದೊರೆಯೆ ಲಾಲಿ ಅ.ಪ ನಂದಲಾಲಿ ಗೋವಿಂದ ಲಾಲಿ ಕಂದನಾಗಿ ಲೋಕ ತಂದೆ ಲಾಲಿ 1 ಬಾಲಲಾಲಿ ತುಲಸಿಮಾಲ ಲಾಲಿ ಕಾಲಕಾಲವಂದ್ಯ ಗೋಪೀಲೀಲ ಲಾಲಿ 2 ವಾಸುದೇವ ಲಾಲಿ ದೇವಕೀತನಯ ಸದ್ಭಾವಲಾಲಿ 3 ರಂಗಲಾಲಿ ಮಂಗಳಾಂಗಲಾಲಿ ಗಂಗಾತಾತ ಲೋಕೋತ್ತುಂಗ ಲಾಲಿ4 ರಾಮಲಾಲೀ ಭಕ್ತಪ್ರೇಮ ಲಾಲಿ ಶ್ಯಾಮಸುಂದರಾಂಗ ನಮ್ಮ ಸ್ವಾಮಿ ಲಾಲಿ 5 ಸತ್ಯ ಲಾಲಿ ಮೌನಿಸ್ತುತ್ಯ ಲಾಲಿ ನಿತ್ಯ ನಿಗಮವೇದ್ಯ ಅನ್ಯುಕ್ತಲಾಲಿ6 ರಾಜಲಾಲಿ ರತ್ನತೇಜ ಲಾಲಿ ರಾಜರಾಜಪೂಜ್ಯ ಜಾಜಿಶ್ರೀಶ ಲಾಲಿ 7
--------------
ಶಾಮಶರ್ಮರು
ಲಾಲಿ ಶ್ರೀ ಹಯವದನ ಲಾಲಿ ರಂಗವಿಠಲÁಲಿ ಗೋಪೀನಾಥ ಲಕ್ಷ್ಮೀಸಮೇತ ಪ. ಮುತ್ತು ಮಾಣಿಕ ಬಿಗಿದ ತೊಟ್ಟಿಲೊಳಗೊಲ ಮನೆಯೊಳಗೆ ಇರನೀತ ಬಹುರಚ್ಚೆವಂತಮನೆವಾರ್ತೆ ಯಾರು ಮಾಡುವರು ಶ್ರೀಕಾಂತಗುಣಿಗುಣಗಳೊಳಗಿಪ್ಪ ಬಹು ಗುಣವಂತಗುಣಬದ್ಧನಾಗದಿಹÀ ಶ್ರೀ ಲಕ್ಷ್ಮೀಕಾಂತ2 ಕ್ಷೀರಾಂಬುನಿಧಿಯೊಳಗೆ ಸೆಜ್ಜೆಯೊಳಗಿರುವಶ್ರೀರಮಣ ಭಕ್ತರಿಚ್ಚೆಗೆ ನಲಿದು ಬರುವಕಾರುಣ್ಯ ಹಯವದನ ಕಾಯ್ವ ತುರುಕರುವನೀರೆ ಗೋಪಿಯರೊಳು ಮೆರೆವ ಕಡುಚೆಲುವ 3
--------------
ವಾದಿರಾಜ
ವಂದೇ ಗೋಪಾಲಂ ಕೃಷ್ಣಾನಂದ ಜಲಪಾಲಂ ಮಂದಹಾಸ ಮುನಿವೃಂದ ವಿಶಾಲಂ ಇಂದಿರೇಶ ಯದುನಂದನ ಬಾಲಂ ಪ ಸಾರಿದನು ಸಾರಂ ಕೃಷ್ಣ ಚಾರು ಮೋಹನಾ ಕಾರಂ ಸಾರೋದ್ದಾರಂ ಸುಜನಮಂದಾರಂ ಶ್ರೀರಮಣೀ ಮುಖ ಚಂದ್ರ ಚಕೋರಂ 1 ಕಾಂಚೀ ಮಣಿಹಾರಂ ಕೃಷ್ಣ ವಾಂಛಿತದನುಸಾರಂ ಪಂಚಭೂತ ಪಂಚಸ್ಯಾಕಾರಂ ಪಾಂಚ ಜನ್ಯ ಭೃಗುಲಾಂಛನ ಧಾರಂ 2 ಚಾಪಲ ಗುಣಧಾಮಂ ಕೃಷ್ಣ ಗೋಪೀಜನ ಕಾಮಂ ನೀ ಪರಮಾತ್ಮ ಸ್ವರೂಪ ಸುನಾಮಂ ಶ್ರೀಪತಿ ಯದು ಕುಲದೀಪ ನಿಸ್ಸೀಮಂ 3 ಪಾಂಡವ ಸಾಕಾರಂ ಕೃಷ್ಣ ಪಂಡಿತನುಸಾರಂ ಚಂಡ ಕಿರಣ ಮಣಿಕುಂಡಲ ಧಾರಂ ಮಂಡಲದೊಡೆಯ ಉದ್ದಂಡತಿ ಶೂರಂ 4 ಶರಣರ ಭವದೂರಂ ಕೃಷ್ಣ ಸುರಜನ ಸಾಕಾರಂ ಹರಿಸೂನು ಕೋಣೆ ಲಕ್ಷ್ಮೀಶ ಶೃಂಗಾರಂ ಪರಮಾತ್ಮಕ ಸದ್ಗುರು ಮಂದಾರಂ 5
--------------
ಕವಿ ಪರಮದೇವದಾಸರು
ಶರಣೆಂಬೆ ಗುರುರಾಯಾ ಶರಣ ಜನರಾಶ್ರಯಾ ಶರಣು ಸಮೀರ ಕುಮಾರ ಉದಾರನೆ ಶರಣು ಪಾವನ ಕಾಯಾ ಪ ಹರಿ ಪೂರ್ಣಾಂಶದಿ ಜನಿಸಿ ಹರಿ ಕುಲೋದ್ಬವ ನೆನಿಸಿ ಹರಿಯತುಡಕಿ ಬಂದು ಹರಿತೇಜದಿ ನಿಂದು ಹರಿಸೆ ಧನುಜ ಮೃಗವಾ ಹರಿರೂಪದಲಿ ನಿಂದೆಹರಿಮಂದಿರದಲಿನಲಿದೆ ಹರಿಬರಲು ನಮಿಸಿ ಹರಿದಶ್ವಜ ಗೊಲಿಸಿ ಹರಿಹಯಜಗ ಮುನಿದೇ 1 ಗೋಪೆಂದ್ರ ನಾಜÉ್ಞಯಲಿ ಗೋಪದಾಂಬುಧಿ ಪರಿಲಿ ಗೋಪನಲಂಘಿಸಿ ಗೋಪುತ್ರಿಯ ಕಂಡು ಗೋಪೀಡಕರ ಮುರಿದೇ ಗೋಪಾಲಗಿದಿರಾಗಿ ಗೋಪಾಸ್ತ್ರವಶವಾಗಿ ಗೋಪುರವ ನುರುಹಿ ಗೋಪಾನ್ವಯ ಗುರುಹಿ ಗೋಪದವಿಯ ಪಡೆದೆ 2 ಮಹಿದರಾನೇಕವತಂದು ಮಹೋದಧಿಯನೆ ಜಿಗಿದು ಅಹಿ ಮಹಿರಾವಣಾನ್ವಯ ಮಹಿರುಹದಲಿ ತರಿದೇ ಮಹಿಯೋಳು ಮೂರವತಾರಿ ಮಹಿಮಾನೆಕವಬೀರಿ ಮಹಿಪತಿ ಸುತಪ್ರಭು ಮಹಿಜಳ ಕೂಡಿಸಿ ಮಹದಾ ಗ್ರಣಿಯಾದೆ ||
--------------
ಕಾಖಂಡಕಿ ಶ್ರೀ ಕೃಷ್ಣದಾಸರು