ಒಟ್ಟು 155 ಕಡೆಗಳಲ್ಲಿ , 49 ದಾಸರು , 140 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ನಾರಪ್ಪಯ್ಯನ ಚರಣಕಮಲಯುಗ್ಮ ಮಾನವ ಪ ನಿರುತ ಸ್ಮರಿಸುವ ಶರಣು ಜನರಘ- ತರಿದಭೀಷ್ಠೆಯ ಗರಿಯಲೋಸುಗ ಧರಣಿ ವಲಯದಿ ಮೆರೆವ ವೆಂಕಟ ಗಿರಿಯ ರಮಣನ ಕರೆದು ತಂದಿಹ ಅ.ಪ ಧರೆಸುರರೊಳು ಜನಿಸಿರಲು ಭ್ರಾತ್ರರುನಾನಾ ಪರಿಬಾಧಿಸಲು ಸಹಿಸಿ ಚರಣ ಯಾತ್ರೆಯಲಿಂದ ಗಿರಿಯಕಾಣುತ ಮಲಗಿರಲು ಸ್ವಪ್ನದಿಸೂಚಿಸಿ ಧರಣಿ ದೇವನೆ ನಿನಗೆ ದರುಶನ ಕೊಡಲು ನಾ ಬರುವೆನೆಂದಾಜ್ಞಾಪಿಸಿ ಭಕ್ತನನುಸರಿಸಿ ತುರುಸ್ವರೂಪವ ಧರಿಸಿ ಬರುತಿರೆ ಕುರಿಕಿಹಳ್ಳಿಯ ಗ್ರಾಮದಿಂದಲಿ ತರುವರಾಶ್ವತ್ಥದಲಿ ಸಲೆ ಪಾಲ್ಗರಿದ ದೇವನ ಕರೆದು ತಂದಿಹ 1 ನಾರಾಯಣಾರ್ಯರು ಕಾರ್ಪರಾರಣ್ಯದಿ ಆರಾಧಿಸುತಲಿರುತ ಆರಾರು ಭಕುತರು ಗೋಧನ ಧಾನ್ಯದಿ ಸಾರಾವಸ್ತುಗಳೀಯುತ್ತ ಗೋರಕ್ಷಣವ ಮಾಡಿರೆನುತ ತಮ್ಮಯ ಬಂಧು ಬಾಲಕರಿಗೆ ಪೇಳುತ್ತ ಭಯ ಬ್ಯಾಡಿರೆನುತ ಚಾರು ಶಿಲೆಯೊಳಗೊಂದು ದಿನ ಅಂಗಾರದಲಿ ಶ್ರೀ ಭಾರತೀಶನ ಮೂರುತಿಯ ಬರೆದೀತ ಭಯ ಪರಿ- ಹಾರಕನು ನಿಮಗೆಂದು ಪೇಳಿದ 2 ಧರಣಿ ಪಾಲಕನಿಂದ ನಿರ್ಮಿತಮಾದ ಬಂ- ಧುರ ನಿಲಯದಿ ರಾಜಿತ ತರುಮೂಲದೊಳಗವ- ತರಿಸಿ ಷೋಡಶ ಸಂಖ್ಯ ಕರಗಳಿಂದಲಿ ಶೋಭಿತ ವರ ಕೃಷ್ಣಾ ಜಲದೊಳಗಿರುವ ಪ್ರತಿಮೆಯ ತಂದು ತರು ಬಳಿಯಲಿ ಸ್ಥಾಪಿತ ಶ್ರೀಭೂಸಮೇತ ಮೂರ್ತಿ ನಿರುತ ಪೂಜೆಯಕೊಳುತ ಧರೆಯೊಳು ಶರಣು ಜನರನು ಪೊರೆವ ಕಾರ್ಪರ ನಿಲಯ'ಸಿರಿನರ ಹರಿ'ಯನೊಲಿಸಿದ3
--------------
ಕಾರ್ಪರ ನರಹರಿದಾಸರು
ಗುರುಕೂರ್ಮಚಾರ್ಯರ ಚರಣಕಮಲಯುಗ್ಮ ಮಾನವ ಪ ಧರಣಿಯೊಳಗೆ ಸುಕ್ಷೇತ್ರಗಾಲವ ಪುರದಿ ಶ್ರಿ ನರಶಿಂಹಾ ಚಾರ್ಯರ ತರುಣಿಯಳ ಗರ್ಭಾಬ್ಧಿಯಲಿಹಿಮ ಕರನ ತೆರದಲಿ ಜನಿಸಿಮೆರೆದ ಅ.ಪ ವರಕೊಲ್ಹಾಪುರದಿ ಪೋಗಿರಲು ಸುಂದರವಾದ ಸಿರಿಯರೂಪವ ಕಾಣುತ್ತ ಅರಿತು ಪ್ರಾರ್ಥಿಸಲು ಶ್ರೀ ನರಶಿಂಹಾರ್ಯರಿಗೊಲಿದು ಕರುಣದಿಂದಲಿ ಕೊಟ್ಟಂಥ ಚರಣಕವಚ ಸ್ವರಣ ಸಂಪುಟದಲ್ಲಿ ನಿರುತ ಪೂಜೆಯ ಮಾಡುತ್ತ ಪ್ರವಚನಾಸಕ್ತ ಧರೆಯೊಳಗೆ ಬಹು ಶರಣು ಜನ ರಘ ತರಿದು ಸೌಖ್ಯವ ಗರಿವುದಕೆ ಸಂ ಚರಿಸುತಲಿ ಸಚ್ಛಾಸ್ತ್ರ ಮರ್ಮವ ನರುಹಿಜನರನುದ್ಧರಿಸಿದಂಥ 1 ಪೊಳೆವ ಫಾಲದಿ ಪುಂಡ್ರ ತಿಲಕ ಮುದ್ರಾಕ್ಷತಿ ವಿಲಸಿತ ಶುಭಗಾತ್ರದಿ ಅಲವ ಬೋಧರ ಮತದೊಳು ತತ್ವಬೋಧಕ ಸುಲಲಿತೋಪನ್ಯಾಸದಿ ಬಲು ವಿಧಾರ್ಥವ ಪೇಳಿಕುಳಿತಪಂಡಿತರನ್ನು ಒಲಿಸುತಿರೆ ಪೂರ್ವದಿ ಪಂಢರಪುರದಿ ಭವ ಮುದ್ಗಲಾಚಾರ್ಯರಿ ಗೊಲಿದು ಬಂದಿಹ ಚಲುವ ವಿಠ್ಠಲ ಮೂರುತಿಯ ಪದ ಜಲಜ ಮಧುಕರರೆನಿಸಿದಂಥ 2 ಜಡಜಾಪ್ತನುದಯದಿ ನಡೆದು ದ್ವಿಜಗೃಹದೇವ ರಡಿ ಗೊಂದನೆಯ ಮಾಡುತ್ತ ಎಡೆಬಿಡದಲೆ ತಮ್ಮ ಅಡಿಗೊಂದಿಸುವ ಭಕ್ತ ಗಡಣವ ಮನ್ನಿಸುತ ಬಿಡದೆ ಶತತ್ರಯ ಕೊಡ ಜಲದಲಿ ಸ್ನಾನ ದೃಢಮನದಲಿ ಮಾಡುತ್ತ ತಂತ್ರ ಸಾರೋಕ್ತ ಎಡಬಲದಿ ಶೇವೆಯನು ಮಾಡುವ ಪೊಡವಿಸುರಕೃತ ವೇದ ಘೋಷದಿ ಜಡಜನಾಭನ ಪೂಜಿಸುವ ಬಹು ಸಡಗರವ ನಾನೆಂತು ಬಣ್ಣಿಪೆ 3 ಭೂತಲದಲಿ ಶ್ರೇಷ್ಠವಾತ ಮಾತಾಂಬುಧಿ ಶೀತ ಕಿರಣನೆನಿಸಿ ಪ್ರಾತರಾರಭ್ಯ ಶ್ರೀನಾಥನೆ ಪರನೆಂಬೊ ಶಾಸ್ತ್ರದಿ ಮನವಿರಿಸಿ ಖ್ಯಾತ ಸತ್ಯಧ್ಯಾನ ತೀರ್ಥರೆಂಬುವ ಗುರು ಪ್ರೀತಿಯ ಸಂಪಾದಿಸಿ ಪುತ್ರರಿಗೆ ಬೋಧಿಸಿ ಪ್ರೀತಿಯಲಿ ಶಿಷ್ಯರಿಗೆ ಭಗವ ದ್ಗೀತೆಯನು ಪ್ರತಿದಿನದಿ ಪೇಳುತ ಪಾತಕವ ಪರಿಹರಿಸಿ ಪರಮ ಪು- ನೀತ ಗಾತ್ರರ ಮಾಡಿ ಸಲಹಿದ 4 ಧರೆಯೊಳಧಿಕಮಾದ ಗಿರಿ ವೇಂಕಟೇಶನ ದರುಶನವನೆ ಕೊಳ್ಳುತ ಗುರುವಾಜ್ಞೆಯಲಿ ಬಂದು ವರ ಸಭೆಯೊಳು ತಮ್ಮ ಪರಿವಾರದಿಂದಿರುತ ವರಷ ಶಾರ್ವರಿಯೊಳು ವರ ಮಾಘ ಪ್ರತಿಪದ ಬರಲು ಧ್ಯಾನವ ಮಾಡುವ ಹರಿಪದಾಸಕ್ತ ಪರಮ ಭಕುತಿಯಲಿಂದ ಶೇವಿಪ ಶರಣು ಜನ ಮಂದಾರ ನೆನಿಸುತ ಮೆರೆವ ಕಾರ್ಪರ ನಿಲಯ ಶಿರಿನರ ಹರಿಯ ಪುರವನು ತ್ವರದಿ ಶೇರಿದ 5
--------------
ಕಾರ್ಪರ ನರಹರಿದಾಸರು
ಗುರುರಾಜ ನಿನ್ನ ಹೊರತು ಪೊರೆವ ಧೊರೆಗಳ ಕಾಣೆ | ಶರಣಜನರಿಷ್ಟವನೆ ಸುರತರುವಿನಂತೀವೆ ಪ ತರಳಪ್ರಹ್ಲಾದನಾಗಿರಲು ವರಭಕುತಿಯಿಂ | ನರಹರಿಯ ಮೆಚ್ಚಿಸಿದೆ ಪರಮಕರುಣಾಸಿಂಧೊ 1 ವ್ಯಾಸಮುನಿಯು ನೀನೆ ವಾಸುದೇವನ ಭಜಿಸಿ | ಲೇಸಾದ ಚಂದ್ರಿಕೆಯ ಭೂಸುರರಿಗರುಹಿದೆ 2 ಶ್ರೀರಾಮಚಂದ್ರಪದಸರಸೀರುಹಾಭೃಂಗ | ಶ್ರೀ ರಾಘವೇಂದ್ರಯತಿ ಸುರುಚಿರಕೃಪಾಪಾಂಗ 3 ನರಹರಿ ಸಿರಿರಾಮ ಮುರವೈರಿ ಮುನಿವ್ಯಾಸ | ಇರುತಿಹರು ನಿನ್ನೊಳು ಧರೆಯ ಪಾಲಿಸೆ ಮುದದಿ 4 ಕರೆದಲ್ಲಿ ಬರುವೆನೆಂದೊರೆದ ವಚನವ ಸಲಿಸೆ | ಭರದಿ ನಾರಾಯಣಪುರಕೈದಿದಿಯೊ ಮುದದಿ 5 ಭೀಮಸೇತ್ವ್ಯಾಖ್ಯ ಮಠ ಸೋಮರಘುತಿಲಕರಿಂ | ದೇ ಮಹಾಸೇವೆಯ ಕೈಗೊಂಡೆಯೋ ಮುದದಿ 6 ದೋಷದೂರನೆ ಪ್ರಭುವೆ ಆಶೆಯಿಂ ಸೇವಿಪರ | ಕ್ಲೇಶವೆಲ್ಲವನಳಿದು ಶ್ರೀಶಕೇಶವನೊಲಿಸೊ 7
--------------
ಶ್ರೀಶ ಕೇಶವದಾಸರು
ಗುರುವಿನ ಧರ್ಮ ಕೋರಾಣ್ಯದ ಭಿಕ್ಷಅರಿತು ನೀಡಲು ಮೋಕ್ಷ ಪ ಮರೆತು ಬಿಟ್ಟರೆ ಕಪಾಳ ಮೋಕ್ಷಯಮನಲ್ಲಾಹೋದು ಶಿಕ್ಷ ಅ.ಪ. ಖಂಡುಗ ಜೀವವ ಕೈಲ್ಹಿಡಕೊಂಡುಮಂಡೆ ಬಾಗಿ ನಿಮ್ಮಂಗಳದೊಳಗೆಅಂಡಲೆಯಲು ಮೋರೆ ಹಿಂಡಿ-ಕೊಂಡರೆ ಯಮ ದಂಡನೆ ತಪ್ಪದೋ 1 ಜಂಗಮರು ಜಗತ್ಪಾವನರುಲಿಂಗಾಂಗಿಗಳು ನಿಸ್ಸಂಗಿಗಳುಹಿಂಗದೆ ಸೀತಾಂಗನೆ ಭರ್ತನ ಪದಉಂಗುಟ ತೊಳೆದು ಅಗ್ಗಣಿ ಧರಿಸಿರೋ 2 ಐವತ್ತಾರು ದೇಶದ ಒಳಗೆ ಇಪ್ಪತ್ತೊಂದುಸಾವಿರದಾರ್ನೂರುಕೈವಲ್ಯ ಸಾಧನ ನಮಗಿರಲು ಭಯ-ವೆತ್ತಣದೋ ಮೋಹನ್ನ ವಿಠ್ಠಲ 3
--------------
ಮೋಹನದಾಸರು
ಜೋ ಜೋ ಜೋನಂತ ಸದ್ಗುಣಧಾಮಾ ಜೋ ಜೋ ಜೋ ಯದುವಂಶಲಲಾಮ ಜೋ ಜೋ ಸಕಲ ಮಲಾಪಹ ನಾಮ ಜೋ ಜೋ ಸಮಾಲಿಂಗಿಹ ಸತ್ಯಧಾಮ ಪ. ನಿಗಮತತಿಗಳೆಲ್ಲ ಪೊಗಳುತ್ತಲಿಹನ ನಗಚಾಪ ಪಿತನನ್ನು ನಗುತ ಪೆತ್ತವನ ಸ್ವಗತ ಭೇದಶೂನ್ಯ ಖಗಪ ವಾಹನನ ಮಗುವೆಂದು ಕೂಗುವ ಮಾರಜನಕನ 1 ಮೂರು ಗುಣಂಗಳ ಮೀರಿದ ಸಿರಿನಲ್ಲ ಚೋರತನದಿ ಬೆಣ್ಣೆ ಮೆಲುವರೆ ಬಲ್ಲ ಈರೇಳು ಭುವನವ ಮೂರಡಿ ಮಾಡಿದ ಧೀರಗೆ ತಕ್ಕ ತೊಟ್ಟಿಲ ಕಾಣೆನಲ್ಲ 2 ಜಾಗ್ರತ್ಸ್ವಪ್ನ ಸುಷುಪ್ತಿ ಭಾವಗಳು ಭೋಗಿ ಶಯನತ್ವದಧೀನವಾಗಿರಲು ವಾಗೀಶವಾಯುಗಳರ್ಚಿಪ ನಿನ್ನನು ತೂಗುವ ರಾಗವ್ಯಾವದೊ ಪೇಳೊ ರನ್ನ 3 ಆದರು ಕಲುಷಾವನೋದನ ನಿನ್ನಯ ಪಾದಕಮಲಗಳ ಪೊಗಳಿ ಪಾಡುವರ ಕಾದುಕೊಳ್ಳುವೆನೆಂಬ ವೇದ ಸಾರವನ್ನು ನೀ ದಯ ಮಾಡಿದರೋದುವೆನಿದನು 4 ನೀರೊಳಗಾಡಬ್ಯಾಡೆಂದರೆ ಕೇಳದೆ ಮಂದರ ಪೊತ್ತು ಬೇರನೆ ಕಿತ್ತಿ ಘೋರ ದೈತ್ಯನ ಸೀಳಿ ತೋರಿ ವಾಮನ ಮೂರ್ತಿ ಧಾರುಣೀಶರ ಕೊಂದ ಧೀರ ರಾಘವನೆ 5 ಚಿಕ್ಕತನದಿ ಬಹು ರಕ್ಕಸ ಕುಲವ ಧಿಕ್ಕರಿಸುತ ಕೈಗೆ ಸಿಕ್ಕದೆ ಓಡಿ ಮಕ್ಕಳಾಟಿಕೆಯಿಂದ ಫಕ್ಕನೆ ಮಾವನ ಸೊಕ್ಕ ಮುರಿದು ನೆಲ ತಿಕ್ಕಿದ ಹರಿಯೆ 6 ಘೋರ ಜರಾಸಂಧ ಸಾಲ್ವೈಕಲವ್ಯರ ಗಾರಗೆಡಿಸಿ ದ್ವಾರಕಾ ಪುರ ರಚಿಸಿ ಕೌರವನೊಶದಲಿ ಸೇರಿದ ಧರಣಿಯ ಮಾರುತಿಯಲಿ ಪ್ರೇಮದೋರಿ ಪಾಲಿಸಿರಿ 7 ಎರಡು ಹೆಂಗಳನಾಳುವುದೆ ಬಹು ಘೋರ ಎರಡೆಂಟು ಸಾವಿರ ಮತ್ತೆಂಟು ನೂರ ನೆರಹಿಕೊಂಡರೆ ನಿನಗಾಗದೆ ಭಾರ ಪರಮಾತ್ಮ ನಿನಗಿದು ಲೀಲಾವತಾರ 8 ಬತ್ತಲೆ ತಿರುಗಿದರಾಗದೆ ದೃಷ್ಟಿ ಕರವಾಳ ಮುಷ್ಟಿ ಸುತ್ತ ತಿರುಹಿ ಪಾಪಿಗಳ ಕೊಂದ ಜಟ್ಟಿಯ ನಿತ್ಯ ನಂಬಿದಪರಿಗಾನಂದ ಪುಷ್ಟಿ 9 ಅಣುಗಳಿಗೆ ಪರಮಾಣುವಾಗಿ ನಿಲುವಿ ಘನಕಿಂತ ಘನವಾಗಿದನುಜರ ಕೊಲುವಿ ಕನಡಿಲಿ ಪ್ರತಿಫಲಿಸುವ ವೋಲಿರುವಿ ಕನಲುತ ಭಕ್ತರು ನೆನೆವಲ್ಲಿ ಒಲಿವಿ 10 ಜೋಗಿ ಜನರ ಸಹವಾಸ ಬೇಡೆಂದರೆ ಪೋಗಿ ಪೋಗಿ ಅವರ ಮನದೊಳಗಿರುವಿ ಶ್ರೀ ಗುರು ಮಧ್ವಮುನಿಯ ಮೇಲೆ ಕರುಣದಿ ಸಾಗಿ ಬಂದಿರುವೀಗ ರೌಪ್ಯ ಪೀಠದಲಿ 11 ಶೃಂಗಾರ ವಾರುಧಿ ಶ್ರೀ ಕೃಷ್ಣಜೀಯ ಮಂಗಳ ದೇವಿಯ ಮೋಹಿಪಕಾಯ ಗಂಗೆಯ ಪಡದಂಗುಷ್ಠವನಿಟ್ಟಪಾಯ ರಂಗನಾಥ ಶ್ರೀ ವೆಂಕಟರಾಯ 12
--------------
ತುಪಾಕಿ ವೆಂಕಟರಮಣಾಚಾರ್ಯ
ಜೋ ಜೋ ನಿಜಕಂದ | ಮುಕುಂದಾ | ಜೋ ಜೋ ಪರಮಾನಂದ ಪ ಆಲದೆಲೆಯಲಂದು | ಮಲಗಿರಲು | ಲಾಲಿಯಂದರು ಆರಲ್ಲಿ 1 ಇಂದಿರೆಪತಿ ನರರ | ಸುಖಬಯಸಿ | ಬಂದ ಫಣೀಂದ್ರನ | ತ್ಯಜಿಸಿ 2 ಗುರುಮಹೀಪತಿ ಸ್ವಾಮಿ | ರಘುವೀರಾ | ಸುರಮುನಿಜನ ಸಹಕಾರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಂಗಿ ಮೊಸರ ಸುತ್ತ ಚೆಲ್ಲಿದ ಮುದ್ದುರಂಗ ಬೆಣ್ಣೆಯ ಮೆದ್ದ ಬಲ್ಲಿದ ಪ. ಪುಟ್ಟ್ಟಿದಾಗಲೆ ಮೂಲರೂಪವ ತೋರಿಅಟ್ಟಿದ ಸುಜನರ ತಾಪವಕೊಟ್ಟ ನಮಗೆ ಜ್ಞಾನದೀಪವ ಕೃಷ್ಣತೊಟ್ಟ ದುರ್ಜನರೊಳು ಕೋಪವ1 ಯಶೋದೆಯ ಮೊಲೆವಾಲನುಂಬಾಗ ನಸುಬಿಸಿನೀರನೆ ಎರೆಸಿಕೊಂಡಾಗಶಿಶುವು ಪೂತಣಿಯ ಕೊಂದಿತೆಂಬಾಗ ರ-ಕ್ಕಸರಿಗೆ ಇವ ಬಲುದಿಮ್ಮಿಗ 2 ಇಂದಿರೆಯನು ಬಿಗಿದಪ್ಪಿದ ಸಖವೃಂದಾರಕರೊಳಗೊಪ್ಪಿದಕಂದರ ಕಲ್ಲಿಂದ ಜಪ್ಪಿದ ತಾಯಿಹಿಂದಟ್ಟಿ ಬರಲೋಡಿ ತಪ್ಪಿದ3 ಪುಟ್ಟ ಕೃಷ್ಣನ ಕಟ್ಟಬೇಕೆಂದು ತಂ-ದೊಟ್ಟಿ ಹಗ್ಗಗಳ ತಂದುಬೆಟ್ಟವಾಗಿರಲು ದುರ್ಜನರ ಕೊಂದು ಈಗಗಟ್ಟಿಮಾಡಿದಳಿವ ಹರಿಯೆಂದು4 ಒರಳನೆಳೆದ ಬಲುಮತ್ತಿಯ ದೊಡ್ಡಮರನ ಕಿತ್ತಿದ ನೋಡಿವನರ್ಥಿಯತರಳಾಕ್ಷಿ ಕೃಷ್ಣನ ನೆತ್ತಿಯ ಬೆಣ್ಣೆಸುರಿಯೆ ಪಾಡಿದಳವನ ಕೀರ್ತಿಯ5 ಗಗನಕೆ ಏರಿ ವಾತನ ಕೊಂದ ನೀರೊ-ಳಗೆ ಪೊಕ್ಕು ತಂದೆಯ ಕರೆತಂದಖಗನಂತೆ ಕಡಹದಮರದಿಂದ ಹಾರಿವಿಗಡ ಸರ್ಪನ ಹೆಡೆಯೇರಿ ನಿಂದ6 ತುಳಿದಹಿತಲೆಯನು ಬಿಚ್ಚಿದನಾಗಲಲನೆಯರುಕ್ತಿಗೆ ಮೆಚ್ಚಿದ ಅಲರು ಮಳೆಯ ಸುರಿಯ ಹಚ್ಚಿದ ಕೃಷ್ಣಖಳರಳಕೆಗಳ ಕೊಚ್ಚಿದ 7 ನಂದನ ರಾಣಿಗೆ ಮೆಚ್ಚಿದ ತಾಯಚಂದದ ಕೈಗಳಿಂದುಚ್ಚಿದಇಂದೆನ್ನ ಮನೆಯೊಳು ಸಚ್ಚಿದಾ-ನಂದ ಹಿಡಿಯೆ ಕೈಯ್ಯ ಕಚ್ಚಿದ 8 ಕಣ್ಣೊಳು ಪಾಲನುಗುಳಿ ಪೋದ ಈಚಿಣ್ಣಗೆ ನೋಡಿದೆ ವಿನೋದಮಣ್ಣಮೆದ್ದಖಿಳವ ತೋರಿದ ಕೃಷ್ಣಸಣ್ಣ ಬಾಯನು ಮುಚ್ಚಿ ಮಗುವಾದ 9 ಕುಸುಮವೆತ್ತ ಖಡುಗ ವೆತ್ತ ಈಹಸುಗೂಸು ಎತ್ತ ಪರ್ವತವೆತ್ತಹಸಿವು ತೃಷೆಯ ಬಿಟ್ಟು ಗಿರಿಯ ಪೊತ್ತ ಈಶಶಿಮುಖಿ ಜನಕಿವನು ಸುಖವಿತ್ತ10 ಮೂರು ಲೋಕವಾಳುವ ಸಖಿಯರ ಗಂಡ ನೀಲ-ವರ್ಣನು ತೊಂಡರತೊಂಡ ಬಾಲಕನೀತಸರ್ವೇಶ ಕಂಡಾ ಇವಕೀಳೆಂದವ ಜಗದಲಿ ಭಂಡ 11 ಅರಳೆಲೆ ಮಾಗಾಯಿ ಮುಂಗೈಯ್ಯಲಿಟ್ಟುಸರಭಂಗಿ ಕೂಡಿ ತ್ರಿಭಂಗಿಯವರವೇಣುವನು ತನ್ನಂಗೈಯಲಿಟ್ಟ-ಧರದಲ್ಲೂದಿದ ನಮ್ಮ ರಂಗಯ್ಯ12 ಪಶುಪಕ್ಷ್ಷಿಗಳು ತರತರದಲ್ಲಿಎಸೆವ ಗೀತವ ಕೇಳಿ ವನದಲ್ಲಿಹಸುಳೆಯ ನೆನೆಯುತ್ತ ಮನದಲ್ಲಿ ಪರ-ವಶವಾದುವು ಆಕ್ಷಣದಲ್ಲಿ13 ಕೊಳಲೂದಿ ಸುರರನ್ನು ಸೋಲಿಸಿದ ರಾಗಕಲೆಗಳಿಂದೆಲ್ಲವ ಒಲಿಸಿದಇಳೆಯೊಳು ಗೀತವ ಕಲಿಸಿದ ಇಂತುಒಲಿದು ವಿಠಲ ನಮ್ಮ ಪಾಲಿಸಿದ14 ತÀರುಲತೆಗಳು ಪುಳಕಿತವಾಗೆ ಈಚರ ಪ್ರಾಣಿಗಳೆಲ್ಲ ಸ್ಥಿರವಾಗೆಹರಿಯ ವೇಣುನಾದ ಹೊಸಬಗೆ ಅತಿಹರುಷವ ನೋಡಲೈದಿದೆವೀಗ 15 ಚೆಲ್ಲಿದ ಕೈಯಿಂದಮಲ ನೀರ ನಮ್ಮೆಲ್ಲರ ನೀರಿಗಂಜನು ಧೀರನಲ್ಲ ನಾವಂದ ಮಾತನು ಮೀರನಿವಸುಲಭನೊಮ್ಮೆ ಮೊಗವ ತೋರ 16 ಪಾಲನೊಲೆಯೊಳಿಟ್ಟು ಪೋದೆವು ಈಕಾಲಭೂಷಣ ಕೈಗಾದವುಬಾಲರ ಕೆಲರು ಮರೆತು ಪೋದೆವು ಗೋ-ಪಾಲ ಸಂಗಕ್ಕೆ ಮರುಳಾದೆವು 17 ಉಂಬುವರಿಗೆ ಬಡಿಸಲಿಲ್ಲ ಪತಿಎಂಬುವನಾಜ್ಞೆಯೊಳಗೆ ನಿಲ್ಲದೆನಂಬಿದೆವು ನಾವು ಹರಿಯಲ್ಲದೆ ಅನ್ಯರೆಂಬುದು ಭಕ್ತ ವರ್ಗಕೆ ಸಲ್ಲದೆ18 ಧೇನು ಮಾತ್ರದಿಂದ ಫಲವೇನು ಕಾಮ-ಧೇನು ಶ್ರೀಕೃಷ್ಣನ್ನ ಕರೆದೆನುಮಾನಿನಿ ಮೊದಲು ಕರೆವಧೇನು ಬಿಟ್ಟುಜಾಣೆ ಸೇರಿದಳು ಕೃಷ್ಣನ ಪದವನು 19 ಶಿಶುವ ಬಿಟ್ಟೊಬ್ಬಳು ನಿಜಕನ್ಯೆತನದೆಸೆಯ ತೋರಿಸಬಂದಳಚ್ಚುತನ್ನಎಸೆವ ಶ್ರೀಪತಿ ತನ್ನ ರಮಣನು ಎಂದುಸುಟಳು ಮೊದಲಾಳ್ದ ಗಂಡನ 20 ಲಲನೆ ಕಣ್ಣಂಜನವಬಿಟ್ಟಳು ಜ್ಞಾನಚೆಲುವನಂಜನಕೊಡಂಬಟ್ಟಳುಒಲೆಯಪಾಲಗ್ನಿಗೆ ಕೊಟ್ಟಳು ಕೃಷ್ಣ-ಗೊಲಿದಧರ ಮನವಿಟ್ಟಳು21 ಇಂತು ತೊರೆದು ವಿಷಯಂಗಳ ಆ ಶ್ರೀ -ಕಾಂತನೆ ಕಾವ ಜಗಂಗಳಚಿಂತೆಯ ತೊರೆದೆವು ಮಂಗಳ ಲಕ್ಷ್ಮೀ -ಕಾಂತನೆ ಕಾಯೊ ಜಗಂಗಳ 22 ಕೇಶಿಯೆಂಬ ದೈತ್ಯನ ಕೊಂದ ಖಳನಾಶದಲಿ ಸದಾ ಮುಕುಂದಆ ಸಮಯದಲಿ ಅಕ್ರೂರ ಬಂದ ಅವಂಗೆಲೇಸÀಪಾಲಿಸಿ ಕೃಷ್ಣ ನಡೆತಂದ 23 ಮಧುರೆಯಲಿ ಮಲ್ಲರ ಸೋಲಿಸಿದ ತನ-ಗಿದಿರಾದ ಕಂಸÀನನೊರೆಸಿದಕದನಕೋಲಾಹನೆನಿಸಿದ ನಮ್ಮಮದನಶರಕೆ ಗುರಿಮಾಡಿದ24 ಎಲ್ಲ ದೇವರನಿವ ಮೀರಿದ ಸಖಿಬಲ್ಲವರಿಷ್ಟವ ಬೀರಿದಕಲ್ಲಕಂಬದಿ ಬಂದು ತೋರಿದ ಖಳರೆÉಲ್ಲಿದ್ದರಲ್ಲಿಗೆ ಹಾರಿದ 25 ದಯದಿಂದ ಸಖನಮಗಾದವ ಚೆಲ್ವಹಯವದನ್ನ ಕೃಪೆಯಾದವನಯದಿ ಜಲವ ಪೊಕ್ಕು ಪೋದವ ವೈ-ರಿಯ ಕೊಂದು ವೇದವ ಕಾಯ್ದವ 26
--------------
ವಾದಿರಾಜ
ತಪ್ಪಲರಿಯದು ಬರೆದ ಬ್ರಹ್ಮನಿರ್ಮತವು ಒಪ್ಪುವದು ಯತಿ ಮುನಿ ಋಷಿಯ ಸಂತತಿಯು ಧ್ರುವ ಆನಿ ಮೊದಲಿರುವೆ ಕಡೆ ಅಣುಮಾತ್ರಾಕಾರವನು ಮುನ್ನ ಬರೆದಂತೆ ತಾನಡೆಯುತಿಹಂದು ಇನ್ನು ಮುತ್ತನ್ಯ ದೈವಕ ಬಯಸಿ ಬೇಡಿದರೆ ಮುನ್ನಿಗೆ ಕೊಡಬಲ್ಲವೆ ಬಿನಗುದೈವವು 1 ಭಿನ್ನವಿಲ್ಲದೆ ತನುವಿನೊಳು ಆನಂದ ಘನ ಉನ್ನತ ಮಹಿಮ ಪರಿಪೂರ್ಣವಿರಲು ಮೂರ್ತಿ ಶ್ರೀಪಾದವನು ಅನುದಿನ ಭಜಿಸಿ ಘನ ಸುಖವ ಪಡಿಯೊ ಮನವೆ 2 ಕಕ್ಕುಲಾತಿಯ ಬಟ್ಟು ಕಂಡವರ ಕಾಲ್ಗೆರಗಿ ಫಕ್ಕಸಾರಿಯ ಧರ್ಮ ಜರಿಯ ಬ್ಯಾಡ ಸಕಲ ಸಹಕಾರ ಮಹಿಪತಿಸ್ವಾಮಿ ನಿನಗಿರಲು ಭಕುತಿ ಮುಕುತಿಯ ಉಂಟು ಮೂಢ ಜನವೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಲ್ಲಣಿಸದಿರು ಕಂಡ್ಯ ತಾಳು ಮನವೆ ಪ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಅ ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆಕಟ್ಟೆಯನು ಕಟ್ಟಿ ನೀರೆರೆದವರು ಯಾರೊಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲುಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ 1 ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲಅಡಿಗಡಿಗೆ ಆಹಾರವಿತ್ತವರು ಯಾರೊ ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿಬಿಡದೆ ರಕ್ಷಿಪನು ಇದಕೆ ಸಂಶಯವಿಲ್ಲ 2 ನವಿಲಿಗೆ ಚಿತ್ರ ಬರೆದವರು ಯಾರುಪವಳದ ಲತೆಗೆ ಕೆಂಪಿಟ್ಟವರು ಯಾರುಸವಿಮಾತಿನರಗಿಳಿಗೆ ಹಸುರು ಬರೆದವರು ಯಾರುಅವನೆ ಸಲಹುವನು ಇದಕೆ ಸಂಶಯವಿಲ್ಲ3 ಕಲ್ಲಿನಲಿ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲಅಲ್ಲಲ್ಲಿಗಾಹಾರ ತಂದೀವರಾರುಬಲ್ಲಿದನು ಕಾಗಿನೆಲೆಯಾದಿಕೇಶವರಾಯಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ 4
--------------
ಕನಕದಾಸ
ತಾಳಲ್ಲಲ್ಲಲ್ಲಲ್ಯೋ ಮಾಸಾಳಲ್ಲಲ್ಲಲ್ಲಲ್ಯೋ ಪ ಹೆಚ್ಚಿದ ತಮನೆಂಬ ದನುಜ ವೇದವ ಕದ್ದುಬಚ್ಚಿಟ್ಟು ನೀರೊಳು ಮುಳುಗಿರಲುಮಚ್ಚ ರೂಪದಿಂದ ಪೋಗಿ ಅವನ ಕೊಂದಅಚ್ಯುತರಾಯನೆಂಬ ಮಾಸಾಳಮ್ಮ1 ಕೂರ್ಮ ರೂಪಿನಿಂದೆತ್ತಿದ ಗೋ-ವಿಂದನೆಂಬುವ ಮಾಸಾಳಮ್ಮ2 ವರಾಹ ರೂಪಿ ಮಾಸಾಳಮ್ಮ 3 ಲೇಸು ತಪ್ಪಿದನೆಂದು ಹಿರಣ್ಯಕ ತನಯನಘಾಸಿ ಮಾಡಲು, ಕಂಬ ಒಡೆದುದಿಸಿರೋಷದಿ ದೈತ್ಯನ ಕರುಳ ಕಿತ್ತ ನರಕೇಸರಿ ರೂಪಿನ ಮಾಸಾಳಮ್ಮ 4 ಆ ಮಹಾಸಿರಿಯ ಗರ್ವದಿ ಮುಂದರಿಯದೆಭೂಮಿಯನು ಬಲಿ ತಾನಾಳುತಿರೆನೇಮಿಸಿ ಎರಡೇ ಹೆಜ್ಜೆಯೊಳಳಕೊಂಡವಾಮನ ರೂಪಿನ ಮಾಸಾಳಮ್ಮ 5 ಕಾಮಧೇನುವಿಗಾಗಿ ಕಾರ್ತವೀರ್ಯಾರ್ಜುನಆ ಮಹಾಮುನಿಯ ಪ್ರಾಣಕೆ ಮುನಿಯೆತಾಮಸವಿಲ್ಲದೆ ಕ್ಷತ್ರಿಯರ ಸಂಹರಿಸಿದರಾಮ ಭಾರ್ಗವನೆಂಬ ಮಾಸಾಳಮ್ಮ 6 ಜನಕ ಸುತೆಯನು ಕದ್ದೊಯ್ಯಲು ಲಂಕೆಗೆಗಣಿತಾತೀತ ಶರಧಿಯ ಕಟ್ಟಿಘನ ಕೋಪದಿ ದಶಿಶಿರನ ಕತ್ತರಿಸಿದಇನಕುಲ ರಾಮನೆಂಬ ಮಾಸಾಳಮ್ಮ 7 ದೇವಕಿ ಬಸುರೊಳು ಬಂದು ಗೋಕುಲದಿಆವ ಕಾವ ಗೊಲ್ಲರ ಸಲಹಿಮಾವನ ಕೊಂದು ಮತ್ತೈವರ ಸಲಹಿದದೇವ ಕೃಷ್ಣನೆಂಬ ಮಾಸಾಳಮ್ಮ8 ಪತಿವ್ರತೆಯರ ವ್ರತವಳಿಯಬೇಕೆನುತಲಿಅತಿಶಯದಿ ತ್ರಿಪುರದ ಸ್ತ್ರೀಯರನುತ ಬೌದ್ಧ ರೂಪದಿ ಬಹು ಭಂಗಪಡಿಸಿದರತಿಪತಿಪಿತನೆಂಬ ಮಾಸಾಳಮ್ಮ 9 ಖುಲ್ಲ ಮನುಜರನು ಕೊಲ್ಲಬೇಕೆನುತಲಿಭಲ್ಲೆ ಹಿಡಿದು ತುರಗವನೇರಿಅಲ್ಲಲ್ಲೆ ಸೊಲ್ಲಡಗಿಸಿ ವಲ್ಲಭನೆನಿಸಿದಬಲ್ಲಿದ ಕಲ್ಕಿಯೆಂಬ ಮಾಸಾಳಮ್ಮ 10 ಮಂಗಳ ಮಹಿಮ ಭುಜಂಗ ಶಯನ ಕಾ-ಳಿಂಗ ಮರ್ದನ ದೇವೋತ್ತುಂಗಅಂಗಜಪಿತ ನೆಲೆಯಾದಿಕೇಶವ ಅಂತ-ರಂಗದೊಳಿರುವ ಮಾಸಾಳಮ್ಮ 11
--------------
ಕನಕದಾಸ
ತಿರುಮಲೇಶನೆ ನಿನ್ನ ಚರಣ ಪಂಕಜಯುಗಲ ನೆರೆನಂಬಿದವ ಧನ್ಯನೋ ಪ ಗುರು ಮೂಲ ಪುರುಷ ನಾರಪ್ಪಯ್ಯ ಮುನಿಗೊಲಿದು ಕುರಿಕಿಹಳ್ಳಿಯಲಿ ಬಂದಾ ನಿಂದಾ ಅ.ಪ ವರಋಷಿಯ ಪೂರ್ವದಲಿ ತಿರುಪತಿಯ ಮುಟ್ಟಿ ಮಲ- ಗಿರಲು ಸ್ವಪ್ನವ ಕಾಣುತ ತುರುರೂಪದಲಿ ನಾನೆ ಬರುವೆ ಕಾ- ರ್ಪರ ವನಕೆ ದರುಶನವÀÀ ಕೊಡುವೆ ನಿರುತ ಬರುತ ಬರುತಲಿ ವಿಪ್ರ ತಿರುಗಿ ನೋಡಲು ಪದದಿ ಕಿರುಗಜ್ಜೆಗಳ ನುಡಿಸುತಾ ಕುರಿಕಿ ಹಳ್ಳಿಯ ಸುಮಂದಿರನೆನಿಸಿ ಸಿರಿಸಹಿತ ವರಶಿಲೆಯ ಮೇಲೆ ಪಾ ಲ್ಗರಿದು ನೆಲೆಸಿರುವಂಥ 1 ತೋಂಡಮಾನಕ್ಷಿತಿಪ ಪುಂಡಲೀಕಾದಿ ಬಹು ತೋಂಡರಿಗೆ ಒಲಿದು ದೇವಾ ಕುಂಡಲಿ ಪರ್ವತದಿ ತಂಡತಂಡದಿ ಭಕುತ ಮಂಡಲಿಗೆ ಫಲವ ಕೊಡುವ ದುಂಡುಮುತ್ತಿನಹಾರ ಮುಕುಟ ರತ್ನಾಭರಣ ಮಂಡಿತನಾಗಿ ಮೆರೆವ ಕಂಡೆನಾನಿಮ್ಮ ಪದ ಪುಂಡಲೀಕವನು ಈ ಗುಂಡಿನಾ ತಿಮ್ಮಯ್ಯನೆಂದು ಕರೆಸಿಕೊಳುವಿ 2 ಕರಮುಗಿವೆ ಮನ್ಮನದಿ ಕರುಣದಲಿ ತೋರೋತವ ಪರಮ ಸುಂದರ ಚರಣವ ನಿರುತ ಸ್ಮರಿಸುವ ಜನರ ದುರಿತ ತಿಮಿರಕೆ ದಿವಾ ಕರನೆನಿಸಿ ಸುಖವಗರಿವಾ ಸೇವ್ಯ ಕಾರ್ಪರನಿಲಯನೆನಿಸೆ ಬಹು ಶರಣು ಜನರನು ಪೊರಿಯುವಾ ವರಕೃಷ್ಣ ಗರ್ಭದಲಿ ಒಪ್ಪುವ ಪಿಪ್ಪಲಸ್ಥಶ್ರೀ ನರಹರಿಯ ಬಳಿಯಲಿರುವಾಮೆರೆವಾ 3
--------------
ಕಾರ್ಪರ ನರಹರಿದಾಸರು
ತಿಳಿಯಿರೋ ಸಮ್ಮಿಂದ ಹೇಳುವೆ ಸುಧಾನಂದ ಪ ಉಂಬವ ತಾನಾರು ಉಣಬಲ್ಲವನಾರುಸಂಭವಿಸುವನಾರು ಸಮನಿಸಿ ಇಂಬಾಗಿಹನಾರು 1 ಕಣ್ಣಿಂದಲೆ ನೋಡಿ ನೋಡುವ ಕಣ್ಣು ಕಾಂಬುದೆ ಖೋಡಿಕಣ್ಣೊಳಗದೆ ನೋಡಿ ಕಂಡಾ ಕಣ್ಣಹುದೆಂದಾಡಿ 2 ಕಿವಿಯಿಂದಲೆ ಕೇಳಿ ಕಿವಿಯನು ಕಿವಿಯೆ ಗಯ್ಯಾಳಿಕಿವಿಯೆ ದಿವಾಳಿ ಕಿವಿಗಾ ಕಿವಿಗರಿವಹುದ್ದೇಳಿ 3 ನಾಲಗೆ ನುಡಿಯಿರಲಿ ನುಡಿವುದೆ ನಾಲಗೆ ಬರಿ ತೊಗಲುನಾಲಗೆಯೊಳಗಿರಲು ಮೂಲದ ನಾಲಗೆಯಲಿ ಬರಲು 4 ಮೂಗಿನ ಮೂಲಕ ಪ್ರಾಣ ಅರಿವಡೆ ಮೂಗು ಬಲ್ಲುದೆ ಕೋಣಮೂಗರಿದವ ಜಾಣ ಮೂಗದು ನಿರ್ವಾಣ5 ತನುವಿನ ಒಳಗಿರ್ದು ಚೇತನ ಜನಿಸುತಲಿರುತಿರ್ದುಇನಿತಾದಲಿರ್ದು ಬೆಳಗುವ ತಾನೆ ತಾನಿರ್ದು 6 ರೂಪಕೆ ವಿರಹಿತನೆ ತೋರ್ಪಾ ರೂಪವೇ ತಾನಿಹನಾಲೇಪಕೆ ದೂರಿಹನಾ ಚಿದಾನಂದಪತಿ ಗುರುವವನಾ7
--------------
ಚಿದಾನಂದ ಅವಧೂತರು
ತುತಿಸಬಲ್ಲೆನೆ ನಾ ನಿನ್ನೆ ವೆಂಕಟರನ್ನ ಪ ಪತಿ ನಿನ್ನ ಬ್ರಹ್ಮ ಪಾ ರ್ವತಿ ಪತ್ಯಾದ್ಯಳವಡದುತುಳ ಮಹಿಮೆಗಳ ಅ.ಪ. ನಮಿಪ ಜನರ ಕಲ್ಪದ್ರುಮ ದುಷ್ಟದಾನವ ದಮನ ದಿವಿಜಕುಲೋತ್ತಮ ಲಕ್ಷ್ಮೀ ಪವನಾದಿ ಸುಮನಸಾರ್ಚಿತ ಪಾದಕಮಲ ಯುಗ್ಮನೆ ಅನು ಕಾಯ ಹೃ ತ್ತಿಮಿರ ಭಾಸ್ಕರ ಶ್ರೀ ಭೂರಮಣ ಸರ್ವಗ ಸದಾ ಗಮವೇದ್ಯ ವೇದವ್ಯಾಸ ಕಪಿಲ ದತ್ತ ಕುಮುದಾಪ್ತ ಕೋಟಿ ಭಾಸಾ ತದ್ಭಕ್ತರ ಸಮುದಾಯಕೀಯೋ ಲೇಸಾ ಆನತ ಬಂಧು ಸುಮುಖ ಸುಲಭನೆಂದಾ ನಮಿಪೆ ಎನ್ನರಸಾ 1 ಘನಮಹಿಮನೆ ವೃಂದಾವನವಾಸಿ ಸ್ವಪ್ರಯೋ ಜನವಿವರ್ಜಿತ ಗೋವರ್ಧನಧಾರಿ ಗೋ ಗೋಪೀ ಜನ ಮನೋರಂಜನ ಜನಕಜಾರಮಣ ಪೂ ತನಿ ಪ್ರಾಣಾಂತಕ ವೇದವಿನುತ ಶ್ರೀ ವತ್ಸಲಾಂ ಕೌಸ್ತುಭ ಮಣಿ ವೈಜಯಂತೀ ಸ ದ್ವನ ಮಾಲಾಂಚಿತ ಕಂಧರಾ ಸತ್ಕಲ್ಯಾಣ ಗುಣ ಜ್ಞಾನಾತ್ಮಕ ಶರೀರಾ ಸಂತತ ನಿಷ್ಕಿಂ ಚನ ಭಕ್ತಜನಮಂದಾರಾ ವಂದಿಸುವೆ ಮ ನ್ಮನದಲಿ ನಿಲಿಸೋ ಕರುಣಾ ಪಾರಾವಾರಾ 2 ಕವಿಭಿರೀಡಿತ ಪುಣ್ಯ ಶ್ರವಣ ಕೀರ್ತನ ಮತ್ಸ್ಯಾ ದ್ಯವತಾರಂತರ್ಯಾಮಿ ಪ್ರವಿವಿಕ್ತ ಭುಗ್ವಿಭು ಭುವನ ನಿಧಿಯ ಪೆತ್ತ ಸವನ ತ್ರಯಾಹ್ವಯ ಶಿವರೂಪಿ ಶಿವದ ಭೂರ್ಭೂವಸ್ವಸ್ಥ ಸ್ವಶ ಭಾ ರ್ಗವ ನಿನ್ನೊಳಿಪ್ಪ ದಾನವನ ಸಂಹರಿಸುವ ನೆವದಿಂದ ದಾಶರಥೀ ಸಂಗಡ ಯುದ್ಧ ತವಕದಿ ಮಾಡಿ ಭೀತಿ ಬಟ್ಟವನಂತೆ ಅವನಿಗೆ ತೋರ್ದ ರೀತಿ ವರ್ಣಿಸಲಿನ್ನು ಪವನಮುಖಾದ್ಯರಿಗವಶ ನಿನ್ನಯ ಖ್ಯಾತಿ3 ಗತಶೋಕ ಗಾಯಿತ್ರಿ ಪ್ರತಿಪಾದ್ಯ ತತ್ವಾಧಿ ಪತಿಗಳೆನಿಸುವ ದೇವತೆಗಳೊಳಗಿದ್ದು ಮಾ ರುತನಿಂದ ಒಡಗೂಡಿ ಪ್ರತಿದೇಹಗಳಲಿ ಯೋ ಗ್ಯತೆಯನರಿತು ಕರ್ಮಗತಿಗಳನೀವೆ ಸಾಂ ಪ್ರತ ಬೇಡಿಕೊಂಬೆ ಆನತರ ಸಂತೈಸೆಂದು ಪ್ರಥಮಾಂಗ ಪ್ರಿಯ ಸತ್ತಮ ಸೌಭಾಗ್ಯ ಸಂ ಭೃತಸಾರ ಸರ್ವೋತ್ತಮ ನೀನೆ ಪಾಂಡು ಸುತರಾದ ಧರ್ಮ ಭೀಮಾ ಪಾರ್ಥರ ಕಾಯ್ದೆ ಪ್ರತಿಗಾಣೆ ನಿನಗೆ ಸಂತತ ಪರಂಧಾಮಾ 4 ಕಲಿ ಮುಖ್ಯ ದೈತ್ಯ ಗಂಟಲಗಾಣ ಗುರುತಮ ಬಲಿಬಂಧಮೋಚಕ ಸುಲಭ ಚೆತ್ಸುಖದಾಯಿ ಫಲ ಚತುಷ್ಟಯನಾಮ ಫಲಸಾರ ಭೋಕ್ತø ಶಂ ಬಲನಾಗಿ ಭಕತರ ಸಲಹುವ ಕರುಣಿ ಶಂ ಫಲಿಪುರವಾಸಿ ಬಾಂಬೊಳೆಯ ಜನಕ ಲಕ್ಷ್ಮೀ ನಿಲಯ ನಿರ್ಗತ ದುರಿತಾ ಮನ್ಮನದ ಚಂ ಚಲವ ಬಿಡಿಸೋ ನಿರುತಾ ಬೇಡಿಕೊಂಬೆ ತಲೆ ಬಾಗಿ ಸರ್ವಗತಾ ನೀನಹುದೆಂದು ತಿಳಿಸೋ ತೀವ್ರದಿ ಮುಪ್ಪೊಳಲುರಿಗನ ತಾತಾ 5 ಉದಿತ ಭಾಸ್ಕರನಂತೆ ಸುದತೇರಿಂದೊಡಗೂಡಿ ಉದರ ನಾಮಕ ನೀನು ಉದರದೊಳಿದ್ದೆನ್ನ ಉದಕಗಳಿಗೆ ನಿತ್ಯಾಸ್ಪದನಾಗಿ ಜೀವರ ಹೃದಯದೊಳಿರುತಿಪ್ಪೆ ಸದಸದ್ವಿಲಕ್ಷಣಾ ವಿಧಿಭವ ಶಕ್ರಾದಿ ತ್ರ್ರಿದಶರೊಂದಿತ ಪಾದ ಬದಿಗನಾಗಿರಲು ಪಾಪ ಕರ್ಮಗಳು ಬಂ ದೊದಗುವುವೇನೋ ಶ್ರೀ ಪಾ ಬಿನ್ನೈಸುವೆ ಬುಧ ಜನರಂತಸ್ತಾಪಾ ಕಳೆದು ನಿತ್ಯ ಬೆದರದಂದದಲಿ ಮಾಳ್ಪುದು ದೋಷ ನಿರ್ಲೇಪಾ 6 ಪಣಿಗಣ್ಣ ಸ್ವರದಿಂದಾಗ್ರಣಿಯಾದ ದುಷ್ಟ ರಾ ವಣನ ಬಾಹುಬಲ ಗಣಿಸಿದೆ ನಿಶಿತ ಮಾ ರ್ಗಣದಿ ಸದೆದು ವಿಭೀಷಣಗೆ ನೀ ಲಂಕಾಪ ಟ್ಟಣ ಭೋಗ ತತ್ಕಾಲ ಉಣಲಿತ್ತು ಭಕ್ತಗೆ ಪ್ರಣತ ಕಾಮದನೆಂಬೋ ಗುಣ ನಿನ್ನಲ್ಲಿದ್ದ ಕಾ ರÀಣದಿ ಪ್ರಾರ್ಥಿಸುವೆ ನಿನ್ನಾ ದಾಸರೊಳು ಗಣಿಸು ನೀ ದಯದಿ ಎನ್ನಾ ತಪ್ಪುಗಳ ನೀ ನೆಣಿಸಲಾಗದು ಪ್ರಸಾನ್ನಾ ಪಾಲಕನೆ ಕುಂ ಭಿಣಿಸುರರನು ಕಾಯೊ ಕ್ಷಣಾ ಲಕ್ಷ್ಮನಣ್ಣಾ 7 ಬಿಸಜ ಸಂಭವನ ನಿರ್ಮಿಸಿ ನಾಭಿಕಮಲದಿ ಸಶರೀರದೊಳು ಸುಮನಸರ ಪಡೆದು ನಿನ್ನಾ ಪೆಸರಿಟ್ಟು ಅವರವರೊಶನಾದೋಪಾದಿ ತೋ ರಿಸಿದಿ ನೀ ಸ್ವಾತಂತ್ಯ ಅಸಮನೆಸಿಕೊಂಡು ಬಸಿರೊಳಗಿಟ್ಟು ಪೊಂಬಸರಾದಿ ಸುರರ ಪಾ ಲಿಸುವಿ ನೀ ಪ್ರತಿ ಕಲ್ಪದಿ ನರಕ ಸ್ವರ್ಗ ವಸುಮತಿ ಯಮ ಲೋಕದಿ ನರಕ ಸ್ವರ್ಗ ವಸುಮತಿ ಯಮ ಲೋಕದಿ ವಾಸಿಸುತ ರ ಕ್ಕಸರನಂಧಂತಮದಿ ದಣಿಸುತಿಪ್ಪ ಪ್ರಸವಿತ್ತ ನಾಮ ವಂದಿಸುವೆ ಪ್ರಮೋದೀ 8 ಆಪದ್ಭಾಂಧವ ಬಹುರೂಪಾ ರುಕ್ಮಿಣೀಶಾ ತಾಪಸ ಜನರ ಹೃತ್ತಾಪದರ ಧರ್ಮ ಸುಜನ ಲೋ ಕೋಪಕಾರಕ ಧರ್ಮ ವ್ಯೂಪ ಊಧ್ರ್ವಗ ನಿರ್ಗು ಣೋಪಾಸಕರ ಸಲಹಲೋಸುಗದಿ ಸ ಲ್ಲಾಪದಿ ಬಹ ಕಲಹಾ ಮನ್ನಿಸೋ ಭವಾ ಕೂಪಾರ ನಾವಿಕ ಭೂಪತಿ ವರಹಾ 9 ಕೂರ್ಮ ಕ್ರೋಡ ವಪುಷ ಹಿರಣ್ಯಕ ಶಿಪುವಿನ ಸೀಳ್ದ ಕಾಶ್ಯಪಿಯಾಚಿಕನೆ ದುಷ್ಟ ನೃಪರ ಸಂಹರಿಸಿದ ಕಪಿವರ ಪೂಜಿತ ದ್ರುಪದಾತ್ಮಜೆಯ ಕಾಯ್ದ ತ್ರಿಪುರಾರಿ ಕಲಿಮುಖ್ಯ ರುಪಟಳ ಬಿಡಿಸಿದ ಕೃಪಣವತ್ಸಲ ಕಲ್ಕಿ ಅಮಿತ ರೂಪಾತ್ಮಕ ಸುಫಲ ಚಿತ್ಸುಖ ಭರಿತಾ ತ್ರೈ ಲೋಕಕ್ಕೆ ಪ್ರಪಿತಾಮಹನೆ ನಿರುತಾ ಪ್ರಾರ್ಥಿಸುವೆ ನಿ ನ್ನಪರೋಕ್ಷವಿತ್ತು ಪಾಲಿಪುದೆಮ್ಮ ಸ್ವರತಾ 10 ವಟಪತ್ರಶಯನ ವೆಂಕಟಗಿರಿ ನಿಲಯ ನಿ ಷ್ಕುಟಿಲ ದುರ್ವಿಷಯ ಲಂಪಟವ ಸದೆದು ನಿನ್ನ ಭಟಜನರಿಗೆ ಧರ್ಮ ಘಟಕನಾಗುವೆ ನಿತ್ಯ ವಟುರೂಪಿ ಎಡಪಾದಂಗುಟದಿ ಅಬ್ಬಜಾಂಡ ಕಟಾಹ ಭೇದಿಸಿ ದೇವ ತಟನೀಯ ಪಡಿಯೋ ಧೂ ರ್ಜಟಿ ತಲೆಯೊಳು ಧರಿಸಿ ನಿನ್ನ ನಾಮ ಪರಿಸುತ್ತ ಸತಿಗೆರಸಿ ಕುಣಿದನೆಂದು ತ್ಕಟದಿ ಕೈಗಳ ಬಾರಿಸಿ ಜಗನ್ನಾಥ ವಿಠಲ ಸರ್ವೋತ್ತಮ ದಿಟನೆಂದುದ್ಫಟಸೀ11
--------------
ಜಗನ್ನಾಥದಾಸರು
ತ್ರಾಣಿ ಶ್ರೀ ಕೃಷ್ಣವೇಣಿ ಪ್ರಾಣಪತಿ ಪದಕಮಲ ಕಾಣಿಸು ಹೃದಯದಿ ತ್ರಾಣಿ ಶ್ರೀ ಕೃಷ್ಣ ವೇಣಿ ಪ ಯಮಧರ್ಮತನಯೆ ಶ್ರೀ ಕೃಷ್ಣ ಸಂಗದಿ ಜನಿಸಿ ಕಮಲ ಸಂಭವನ ಲೋಕದಲಿ ಮೆರೆದೆ ಸುಮನಸರ ನುಡಿಗೇಳಿ ಲೋಕಗಳ ದುರಿತೋಪ ಶಮನ ಗೊಳಿಸಲು ಬಂದೆ ತುಮಲ ಹರುಷದಲಿ 1 ಭೂತನಾಥನ ಜಟಾಜೂಟದಿಂದುದ್ಭವಿಸಿ ಶ್ವೇತಪಿಂಗಳ ಶೈಲಶಿಖರಕಿಳಿದೇ ಭೂತಳಕೆ ಭೂಷಣಳೆನಿಸಿ ಪೂರ್ವವನಧಿ ನಿ ಕೇತನವನೈದಿ ಸುಖಿಸಿದಿ ನಿನ್ನ ಪತಿಯೊಡನೇ 2 ಪ್ರಾಣಿಗಳು ನಿನ್ನ ಜಲಪಾನವನು ಗೈಯೆ ನಿ ತ್ರಾಣ ಸಂಹಾರ ವ್ಯಾಧಿಗೆ ಭೇಷಜಾ ಪ್ರಾಣ ಪ್ರಯಾಣ ಪಾಥೇಯವೆಂದರಿಯೆ ನಿ ರ್ವಾಣಪದವಿತ್ತು ಕಲ್ಯಾಣವಂತರ ಮಾಳ್ಪೆ 3 ಜನಪದಗಳಾಗಿ ಕಾನನವಾಗಿ ಮನ್ವಾದಿ ದಿನಗಳಲ್ಲಾಗಿ ಮತ್ತೇನಾಗಲೀ ಮನುಜ ಮಜನಗೈಯೆ ವಾಜಪೇಯಾದಿ ಮಖ ವನುಸರಿಸಿದಕೆ ಫಲವೇನು ತತ್ಪಲವೀವೆ 4 ಅರವತ್ತು ಸಹಸ್ರ ವರುಷಂಗಳಲ್ಲಿ ನಿ ರ್ಜರ ತರಂಗಿಣಿಯ ಮಜ್ಜನದ ಫಲವು ಗುರುವು ಕನ್ಯಸ್ಥನಾಗಿರಲು ಒಂದಿನ ಮಿಂದ ನರರಿಗಾ ಪುಣ್ಯಸಮನೆನಿಸಿ ತತ್ಫಲವೀವೇ 5 ಮನನಶೀಲ ಸುಯೋಗಿಗಳಿಗಾವ ಗತಿಯು ಇಹ ವನುದಿನದಿ ನಿನ್ನ ತೀರದಲಿ ಇಪ್ಪಾ ಮನುಜೋತ್ತಮರಿಗೆ ಆ ಗತಿಯಿತ್ತು ಪಾಲಿಸುವೆ ಅನುಪಮ ಸುಕಾರುಣ್ಯಕೆಣೆಗಾಣಿ ಜಗದೊಳಗೆ 6 ತಾಯೆ ಎನ್ನನುದಿನದಿ ಹೇಯ ಸಂಸಾರದೊಳ ಗಾಯಾಸ ಗೊಳಿಸದಲೆ ಕಾಯಬೇಕೊ ವಾಯುಪಿತ ಶ್ರೀ ಜಗನ್ನಾಥ ವಿಠ್ಠಲ ಹೃ ತ್ತೋಯಜದೊಳಗೆ ಕಾಂಬುಪಾಯ ಮಾರ್ಗವ ತೋರೆ 7
--------------
ಜಗನ್ನಾಥದಾಸರು
ದಶಾವತಾರ ಸ್ತೋತ್ರ ನಾರಾಯಣ ಗೋವಿಂದ | ಹರಿ |ನಾರಾಯಣ ಗೋವಿಂದ |ಪಾರಾಶರ ಸುತನಂದ | ಹರಿ |ನಾರಾಯಣ ಗೋವಿಂದ ಪ ವೇದವ ಕದ್ದೊಯ್ಯಲು ಆತಮನಾ |ಬಾಧಿಸಿ ನಿಗಮವ ತಂದ 1 ದಿವಿಜರು ಚ್ಯುತಬಲರಾಗಿರಲಮೃತವ |ದಿವಿಜರಿಗುಣಿಸಿದ ನಂದಾ 2 ಖಳನು ಭೂಮಿಯ ಕದ್ದೊಯ್ಯಲುತಾ |ಪೊಳೆವ ಕೋರಿಯಲಿ ತಂದಾ 3 ತರುಳನ ಪರಿಪರಿ ಬಾಧಿಸುತಿರಲಾ |ದುರುಳ ದೈತ್ಯನ ಕೊಂದ 4 ಬಲಿಯಪರಾಧವ ನೊಂದೆಣಿಸದೆ ತಾ |ವರಿದು ಬಾಗಿಲಲಿ ನಿಂದ 5 ಕ್ಷತ್ರಿಯ ಬಲವನೆಲ್ಲ ಸವರಿ ನಿ |(ಶ್ಚ) ಕ್ಷತ್ರರ ಮಾಡಿದ ನಂದಾ 6 ವರಮುನಿ ಶಾಪದಿ ಶಿಲೆಯಾಗಿರಲು |ದ್ಧರಿಸಿದ ಪರಮಾನಂದಾ 7 ಮಡದಿ ಗೋಪಿಯರ ಒಡನಾಡಿದ |ಪಾಲ್ಗಡಲ ಶಯನ ಮುಕ್ಕುಂದಾ 8 ತ್ರಿಪುರದ ಸ್ತ್ರೀಯರ ವೃತಗೆಡಿಸಿದ | ವಟು |ವಪು ಮೃಡಮುಖ ಸುರವಂದ್ಯಾ 9 ಪುರುಷೋತ್ತಮ ಯವನರ ಸಂಹರಿಸಿ |ತುರಗವನೇರಿ ನಿಂದಾ 10 ಶ್ರೀಶ ಪ್ರಾಣೇಶ ವಿಠಲ ಈ ಸರ್ವರ |ಪೋಷಕ ನಾನಹುದೆಂದಾ 11
--------------
ಶ್ರೀಶಪ್ರಾಣೇಶವಿಠಲರು