ಇನ್ನೇತರೊಳಗಾಸೆ ಎನಗಿಲ್ಲವೋ ಈಗಳಿನ್ನು ಹರಿನಾಮ
ಸಂಕೀರ್ತನೆಯೊಂದು ಹೊರತಾಗಿ ಪ
ನೋಡಿ ಸಾಕಾಯ್ತು ಲೋಕದ ಪ್ರಪಂಚವನು ಪೇ
ಚಾಡಿ ಸಾಕಾಯ್ತು ದರಮಂ ಪೊರೆಯಲು
ಆಡಿ ಸಾಕಾಯ್ತು ಸುಜನರೊಳ ನೃತಗಳನು ಒಡ
ನಾಡಿ ಸಾಕಾಯ್ತು ಕುಜನರ ಸಂಗದೊಳಗೆ 1
ಉಂಡು ಸಾಕಾಯ್ತು ಸಂಸಾರ ಸುಖ ದುಃಖವನು ನಾ
ಕಂಡು ಸಾಕಾಯ್ತು ಸುಜನರ ಭಂಗವನು
ತಂಡಿ ಸಾಕಾಯ್ತು ಪರಸೇವೆಯನು ಮಾಡಿ ಜನ
ರಂಡಲೆದು ಬೇಡಿ ಸಾಕಾಯ್ತು ಈ ಭವಕೆ 2
ತಿರು ತಿರುಗಿ ಸಾಕಾಯ್ತು ತಲೆ ಹುಳಿತ ನಾಯಂತೆ
ಪರಿ ಪರಿಯ ದುಃಖಗಳನುಣ್ಣುತ
ಚರಿಸಿದೆನು ಮರುತಸುತ ಕೋಣೆ ಲಕ್ಷ್ಮೀರಮಣ
ಇರಿಸಿದಂತಿರ ಬೇಕು ಸಕಲಜನರು 3