ಪನ್ನಗಾಶಯನ ಹರಿ ವೆಂಕಟರಮಣ ಪ
ವರ ಧ್ರುವನ ಪೊರೆದಂತೆ ಪ್ರಹ್ಲಾದಗೊಲಿದಂತೆ
ಕರಿಯ ಸಲಹಿದಂತೆ ಕರುಣವಿರಲಂತೆ 1
ತರಳೆ ದ್ರೌಪದಿಯ ಅಭಿಮಾನ ಕಾಯ್ದಂತೆ
ಧುರದೊಳು ನರನ ಶಿರವ ಉಳುಹಿದಂತೆ 2
ಶೇಷಾದ್ರಿವಾಸ ಜಗದೀಶ ಲಕ್ಷ್ಮೀಶ
ಕ್ಲೇಶಪಾಶ ವಿನಾಶ ಜನಪೋಷ ವೇಂಕಟೇಶ 3
ಪರಮ ಮಂಗಳಮೂರ್ತಿ ಪಾವನ ಕೀರ್ತಿ
ಧರೆಯ ರಕ್ಷಿಪ ಅರ್ತಿ ದಯವಾಗು ಪೂರ್ತಿ 4
ಮಕರ ಕುಂಡಲಧರ ಮಕುಟ ಕೇಯೂರ
ಸಕಲಾಭರಣ ಹಾರ ಸ್ವಾಮಿ ಉದಾರ 5
ತಾಳಲಾರೆನು ನಾನು ಬಹಳ ದಾರಿದ್ರ್ಯ
ಕೇಳುವರಿಲ್ಲ ಬಹು ಭವಭಯ ಕ್ಷುದ್ರ 6
ನೋಡಬೇಡೆನ್ನವಗುಣವ ದಮ್ಮಯ್ಯ
ಬೇಡಿದಿಷ್ಟವನಿತ್ತು ಒಡಗೂಡಿ ಸಲಹಯ್ಯ 7
ಭಕ್ತಜನ ಸಂಸಾರಿ ಬಹುದುರಿತ ಹಾರಿ
ಮುಕ್ತಿದಾಯಕ ದಾರಿ ಮುಂದೆ ನೀ ತೋರಿ8
ವರಾಹತಿಮ್ಮಪ್ಪ ಒಲವಾಗೆನ್ನಪ್ಪ
ಸಾರಿದವರ ತಪ್ಪ ಸಲಹೊ ನೀನಪ್ಪ 9