ಒಟ್ಟು 4372 ಕಡೆಗಳಲ್ಲಿ , 120 ದಾಸರು , 2472 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದೂ ಬಂಧವಿಲ್ಲ ಆತ್ಮಗೆ ಬಂಧವ ಕಲ್ಪನೆ ಮಿಥ್ಯವಿದೆಲ್ಲ ಮಂದರ ನುಡಿಯಿದು ಈ ಸಂಸಾರ ಪ ನಿತ್ಯಮುಕ್ತನೇ ತಾನಾದವಗೆ ಮಿಥ್ಯವ ಕಲ್ಪನೆ ಬರುವದೆಂತೋ ತಥ್ಯವಿಲ್ಲದ ಮಾತಿನ ಮಾಲೆ ಮತ್ತೆ ಬಂಜೆಯಾ ಮಗನೆಂಬುವವೋಲ್ 1 ಆತ್ಮನೆ ತಾನೆಂಬನುಭವ ಪಡೆಯದೆ ಮತ್ತೆ ಶಬ್ದ ಮಾತ್ರವನರಿತವಗೆ ಸುತ್ತಿಕೊಳ್ಳುವುದು ಸಂಶಯ ವಿದುವೆ ಅನುಭವದೊಳಗೇನಿಲ್ಲ ವಿಕಲ್ಪ 2 ಭಾನುವಿಗುಂಟೇ ಉದಯಾಸ್ತಗಳು ಮಾನವಕಲ್ಪನೆಗಳು ತಾನೆಲ್ಲ ತಾನೇ ತಾನಾದವಗಿನ್ನು ಹೀನಭವದ ಭಾಧೆಯುತಾನುಂಟೇ 3 ಅನುಭವರೂಪನು ತಾನಾದಾಗ ಅನುಭವ ಬರುವದು ಈ ನುಡಿ ಕೇಳೈ ಮನವಾಣಿಗೆ ಮೀರಿದ ಸ್ವಾತ್ಮನುನೀ ಚಿನುಮಯ ಶಂಕರತಾನಾದವಗೇ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಎಂದೆಂದಿಗೂ ಎರಡು ಒಂದಾಗವು | ಒಂದೆ ಕುಲದಲಿ ಜನಿಸಿದ ಪಕ್ಷಿಗಳು ಪ ಒಂದೇ ರೂಪಪಕ್ಷಿ ಒಂದರಲಿ ತಿರಗೋವು | ಒಂದೀಗ ಪಂಚವರ್ಣದ ಕೋವಿದಾ || ಒಂದೆಲ್ಲ ಸಮನೆಂದು ಪೇಳುತ ಬದುಕುವುದು | ಒಂದಕ್ಕೆ ಗುರುತು ಮತ್ತೊಂದಕ್ಕೆ ಯಿಲ್ಲ 1 ಒಂದೇ ಕೊಂಬಿನಲಿ ಎರಡು ಸೇರಿಕೊಂಡು | ಒಂದು ಸಾರವನುಂಬದೊಂದರಿಯದು || ಒಂದು ಬುದ್ಧಿಯಲ್ಲಿಪ್ಪದೊಂದು ಇರಲೊಲ್ಲದು | ಒಂದು ನಾನೆಂಬೋದು ಮತ್ತೊಂದು ಪೇಳದು 2 ಒಂದೀಗ ತನ್ನ ಫಲ ಪರರಿಗೆ ಕೊಡುವದು | ಒಂದು ತನ್ನ ಫಲ ತಾ ತಿಂಬೋದು || ಒಂದು ಏರು ಇಳಿವ ಮೆಟ್ಟಗಳು ಬಲ್ಲದು | ಒಂದೀಗ ಕಾಣದೆ ಕಮರಿ ಬೀಳುವದು 3 ಒಂದು ಸುಡಗಾಡು ಸಿದ್ಧ ಎಂದು ಕೂಗುವದು | ಒಂದು ಕೂಗುವದು ಪ್ರಸಿದ್ಧನೆಂದು || ಒಂದು ಬೆಳೆದಿಂಗಳೊಳು ಹರುಷದಲಿ ಆಡುವದು | ಒಂದು ಕತ್ತಲೆಯೊಳು ಆಡುವುದು ನಿತ್ಯಾ 4 ಒಂದಕೆ ಒಂದು ಸಂವಾದವನು ಮಾಡುವವು | ಹಾರುವುದು | ಪುರಂದರ ವಿಜಯವಿಠ್ಠಲನ್ನ | ಒಂದು ಪೊಂದಿತು | ಒಂದು ಪೊಂದದಲೆ ಹೋಯಿತು 5
--------------
ವಿಜಯದಾಸ
ಎಂದೊಡನಾಡುವೆ ಎಂದರ್ಥಿಬಡುವೆ ಎಂದಿಗೆ ತಕ್ರ್ಕೈಸಿ ಸಂತೋಷಬಡುವೆ ಪ ಉತ್ಸವ ಮಂಟಪದೊಳಗೆ ಕುಳಿತು ಭಕ್ತ ವತ್ಸಲನೆಂದು ನುತಿಸಿಕೊಂಬನ ಕೂಡ 1 ಸಕಲ ಭೂಷಿತನಾಗಿ ಅಜಹರ ಸುರಮುನಿ ನಿಕರ ಕೈಯಿಂದ ಸ್ತುತಿಸಿಕೊಂಬನ ಕೂಡ 2 ಆಪೋಹಿಷ್ಠಾ ಮಯೋಭುವನೆಂಬೋ ಮಂತ್ರ ಆ ಪುರೋಹಿತರಿಂದ ಕಲಿತುಕೊಂಬನ ಕೂಡ 3 ನಾಲ್ವತ್ತುಮೂರು ಪದಂಗಳು ಮಾಡೆಂದು ಹೇಳಿದ ಹೇಮಾದ್ರಿ ಶಿಖರಾಕಾರನಕೂಡೆ 4 ದಂಡಿಗೆ ಕರೆದಲ್ಲಿ ಕೊಟ್ಟು ಅಮೃತದ ಕರ ಮಂಡೆಯಲ್ಲಿಟ್ಟ ಮಹಮಹಿಮನ ಕೂಡ 5 ಪಲ್ಲಕ್ಕಿ ಏರಿ ಪವಳಿಯ ಸುತ್ತಿ ಸರ್ರಗೆ ನಿಲ್ಲದೆ ಗುಡಿಪೊಕ್ಕ ನಿರ್ಮಳನ ಕೂಡ6 ವಾರಶನಿ ಚತುರ್ದಶಿ ಕೃಷ್ಣಪುಷ್ಯದಿ ಈ ರೀತಿಯಲಿ ಕೂಡ ಇಂದಿರೇಶನ ಕೂಡ 7 ರೌದ್ರಿ ಸಂವತ್ಸರ ಅರ್ಧರಾತ್ರಿಯಲಿ ಭದ್ರ ಮೂರುತಿಯಾದ ಭವಹರ ಕೂಡ 8 ಗುರುಪುರಂದರ ಉಪದೇಶನ ಬಲದಿಂದ ಸಿರಿ ವಿಜಯವಿಠ್ಠಲನ ಚರಣ ತಕ್ರ್ಕೈಸಿ 9
--------------
ವಿಜಯದಾಸ
ಎದ್ದರಾಳಲ್ಲೆಂದು ಬಿದ್ದಿರುವೆನೊ ನಾನು ಮಧ್ವರಮಣನೆ ದಯದಿ ಉದ್ಧರಿಸೆಲೊ ಪ ಏನು ಮಾಡಿದರೇನು ಮಾಡದಿದ್ದರೆ ಏನು ಕಾಣಲಾರೆನೊ ನೀನೆ ತಿಳಿಸಿ ಪೊರೆಯೊ ಕಾನನದಿ ತಿರುತಿರುಗಿ ತೊಳಲಿ ಬಳಲುತಲಿ ಬಲು ದೀನನಾದೆನೊ ಶಕುತಿಯುಕುತಿ ಹೋಗಿ1 ನುಡಿದೆ ನಾ ನೂರೆಂಟು ಅಡಿಯಿಡಲು ಬಲು ಕುಂಟು ಕಡೆಗಾಲದರಿವಾಗಿ ಬಳಲುತಿಹೆನೊ ಸಡಲಿತೆನ್ನಯ ದೇಹ ಸಿಡಿಯಿತೆನ್ನಯ ಮೋಹ ನಡೆಯಾಟವೆನಗಿನ್ನು ಸಾಧ್ಯವಿಲ್ಲವು ದೇವ 2 ಕೊಟ್ಟರೆ ಹೊಗಳುವರು ಕೊಡದಿರಲು ಬೊಗಳುವರು ಕೊಟ್ಟೆನ್ನ ಕರವೆರಡು ಬೆಂಡಾದವೊ ಸುಟ್ಟಿತೆನ್ನಯ ಕೋಪ ನಿಷ್ಠುರದಿ ಬೇಸತ್ತು ಇಷ್ಟು ಜೀವನ ಸಾಕೊ ಕೃಷ್ಣ ಮೂರುತಿಯೇ3 ಗುಣವಿಲ್ಲ ಧನವಿಲ್ಲ ತನುವಿಲ್ಲ ಮನವಿಲ್ಲ ಹೊಣೆ ಹೊರೆವುದೆಂತೆಂದು ಕೈ ಬಿಡದಿರೊ ತೃಣ ಗಿರಿಯನೊದೆಯುವುದು ಒನಕೆ ತಾ ಚಿಗುರುವುದು ವನಜನಾಭನೆ ನಿನ್ನ ಮನಕೆ ಬರಲು 4 ನಾನೇನು ಬಲ್ಲೆ ನಿನಗೇನು ರುಚಿಯೆಂಬುದನು ನಾನರಿತರೂ ನಿನಗೆ ಕೊಡಬಲ್ಲನೆ ನಾನೇಕೆ ಜನಿಸಿದೆನೋ ನೀ ಬಲ್ಲೆ ನಾನರಿಯೆ ಏನೆಂದು ಕೋರದೆಲೆ ಪೊರೆಯಬೇಕೊ 5 ಸಾಯುವರ ನೋಡಿ ಮನ ನೋಯುವುದು ಮೂರುಕ್ಷಣ ಮಾಯಾಪಾಶವು ಮುಸುರೆ ಮರೆವುದೆಲ್ಲ ಪ್ರಾಯದವನಂತೆ ಬಲು ಹೇಯ ಕೃತ್ಯಗಳಾಸೆ ನಾಯಿಬಾಲದ ಡೊಂಕು ತಿದ್ದಿ ಪೊರೆಯೊ 6 ನಂಬಿದವರೆಲ್ಲ ಬಲು ಸಂಭ್ರಮದಲಿರುವರೊ ಅಂಬಿಗನ ತೆರನಾದೆ ನದಿ ದಾಟಿಸಿ ತುಂಬಿರುವ ಮನದಾಸೆ ಹಂಬಲಿಕೆ ನೀಡಿ ತಿರಿ ದುಂಬುವನ ಕನಸಿನಂತಾದವೆನಗೆÀ7 ಇಂದು ನಾನಿಟ್ಟಿಲ್ಲ ಮುಂದೆ ಎನಗೇನು ಬೇಕೆಂದರಿಯೆನೊ ಹಿಂದಾದುದಂತಿರಲಿ ಇಂದಿರುವದಿರಲಿ ಮನ ಮಂದಿರದ ದಾನವರ್ಪಿಸುವೆ ನಿನಗೆ 8 ಮನೆಗೆ ತಾ ಯಜಮಾನ ಕೆಣಕೆ ಬದುಕುವರುಂಟೆ ಕುಣಿಯುತಿದ್ದರು ಜನರು ನುಡಿದ ತೆರದಿ ತನುಸಡಲಿ ಬೀಳಲದ ಕೊನೆಗಾಲವೆಂದರಿತು ಮನೆ ಹೊರಗೆ ಕಸದಂತೆ ಬಿಸುಡುವುದ ನೋಡಿ9 ತುಂಬು ಸಂಸಾರದಲಿ ಸಂಭ್ರಮವನೇಕಗಳು ಸಂಭ್ರಮದಿ ನಿನ್ನ ಹಂಬಲವೇತಕೆ ಕಂಬ ಸಡಲಿದ ಮನೆಯ ತೆರದಿ ದೇಹವು ಸಡಲೆ ಡೊಂಬನಾಟವನಾಡಿ ಚಂಬು ಪಿಡಿದಂತೆ 10 ಕೆಲಸವಿರುವಾಗ ಬಲು ಹೊಲಸು ನಿದ್ರೆಯ ಮಾಡಿ ಹೊಲಸು ವಿಷಯದಿ ಬಹಳ ಎಚ್ಚೆತ್ತೆನೊ ಕಲಿಯು ಕರೆದೌತಣವನಿತ್ತೆ ನಾ ಬಹುವಿಧದಿ ಬಲಿಕೊಡುವ ಕುರಿಯಂತೆ ಬಳಲುತಿರುವೆನೊ ದೇವ 11 ಮರೆವು ಜನತೆಗೆ ದೊಡ್ಡವರವೆಂದು ನೀ ಕೊಟ್ಟೆ ಗಿರಿಯಂಥ ಕಷ್ಟಗಳ ಮರೆಯಲಾಯ್ತೊ ಅರಿವು ಕೊಡದಂತೆ ನಾ ಮರೆತೆನೆಂಬಪರಾಧ ಸರಿತೂಗುವುದೆ ಇದಕೆ ಗುರಿ ಯಾರೊ ದೇವ 12 ಸಾಧು ಜನರಿರುವರೊ ಮೇಧಾವಿಗಳು ಇಹರೊ ಮಾದರಿಯ ಜೀವನವ ತೋರ್ಪರಿಹರೊ ಸಾಧುವಲ್ಲವೊ ನಾನು ಮೇಧಾವಿಯಲ್ಲ ಹೊಸ ಮಾದರಿಯ ತಿರುಕನೆಂದರಿತು ಪೊರೆಯೊ13 ಅರೆಕ್ಷಣವು ನಿನ್ನನು ಸ್ಮರಿಸಲಾರದ ಜನರು ಅರಮನೆಗಳಲ್ಲಿ ವಾಸಿಸುವುದೇಕೊ ಕರಚರಣವಿಲ್ಲದ ಕಪೋತಿಕ ನಿನ್ನಯ ನಾಮ ಕಿರಿಚುತಿರುವುದ ನೋಡಿ ಹರುಷವದೇಕೊ 14 ಗಿಣಿಯಂತೆ ರಾಮ ರಾಮ ಎಂದರೇನು ಫಲ ಫಣಿಯಂತೆ ಸಾಷ್ಟಾಂಗ ನಮಿಸಲೇನು ಋಣಿಯಂತೆ ಧನಿಕನಲ್ಲಿ ಹಲ್ಲುಗಳ ಕಿರಿದರೇನು ಮನವಿಟ್ಟು ಕೆಲಸ ಮಾಡುವುದರಿಯದೆ 15 ಮನಕೆ ಬಂದುದನೆಲ್ಲ ಮಾಡÀುವವರಿರುವರೊ ಮನಕೆ ಶಾಂತಿಯ ಮಾಡುವವರ ಕಾಣೆ ಕನಕವೆರಿಚಿದರಿಲ್ಲ ವನವ ಸೇರಿದರಿಲ್ಲ ಮನಮಂದಿರದಲಿ ನೀ ಇಣಿಕಿನೋಡುವ ತನಕ 16 ಲಂಚಗಳ ಕೊಟ್ಟು ಫಲಗಳ ಬೇಡುವವನಲ್ಲ ಸಂಚುಮಾಡಲು ಶಕುತಿ ಯುಕುತಿಯಿಲ್ಲ ವಂಚಕರ ಬಹುಮತ ಪ್ರಪಂಚದಲಿ ನೀನೊಬ್ಬ ಹೊಂಚು ಕಾಯುತಲಿರುವ ಎಂಬುದರಿತು 17 ರೈಲು ಬಂಡಿಗಳಲಿ ಐಲುಪೈಲುಗಳನ್ನು ಮೌಲ್ಯವಿಲ್ಲದೆ ಸಾಗಿಸುವುದನರಿತು ಕಾಲು ಕಣ್ಣೆಲ್ಲದ ಕಪೋತಿಯೊ ನಾನೊಂದು ಮೂಲೆಯಲಿ ಕುಳಿತು ಬರಲವಕಾಶವೀಯೊ 18 ನಿನ್ನ ಗುಣಗಳನರಿಯೆ ನಿನ್ನ ವರ್ಣಿಸಲರಿಯೆ ನಿನ್ನ ಸೇರಲು ಎನಗುಪಾಯವಿಲ್ಲ ಕನ್ನ ಕತ್ತರಿಯ ಕಾಣಿಕೆಯೊಂದೆ ಸಾಧ್ಯವೊ ಇನ್ನು ತಲೆ ಎತ್ತಿನೊ ಪ್ರಸನ್ನನಾಗುವ ತನಕ 19
--------------
ವಿದ್ಯಾಪ್ರಸನ್ನತೀರ್ಥರು
ಎನಗಳವೆ ನಿನ್ನ ಮಹಿಮೆಯನು ಪೊಗಳಲು ಹೀನಮತಿ ನಾ ಪನ್ನಂಗಶಯನ ಪ ನೀಲಶಾಮನೆ ನಿಮ್ಮ ಲೀಲೆ ಪೊಗಳಲ್ಕೆ ಬ್ರಹ್ಮ ಸಾಲವು ನಾಲ್ಕುವೇದವೆಂದು ನಾಲಿಗೆಯೋಳ್ವಾಣಿನಿಟ್ಟಿರುವನಂತೆ 1 ಸಾಸಿರ ಜಿಹ್ವೆಗಳಿಂದ್ಹೊಗಳಲ್ ಈಶಭಜನೆ ತೀರದೆಂದು ಶೇಷ ಇನ್ನು ಸಾಸಿರಜಿಹ್ವೆ ಆಶಿಸಿ ಬೇಡುವನಂತೆ2 ಪ್ರಾರ್ಥಿಸಲು ನಿಮ್ಮ ಚರಿತ ಶಕ್ತಿ ಸಾಲದಂಥವರಿಗೆ ಭಕ್ತಿಯಿಂ ಪೊಗಳುವೆನಿಷ್ಟೆ ಮುಕ್ತಿದಾಯಕ ಶ್ರೀರಾಮಯೆನುತ 3
--------------
ರಾಮದಾಸರು
ಎನಗೊಬ್ಬರು ಇಲ್ಲಾ ನೋಡಿ ಸಿರಿನಲ್ಲ ಪ ಮನದಿ ಯೋಚಿಸಲು ತಂದೆ ತಾಯಿಸತಿ ತನಯ ಸಹೋದರ ಮಿತ್ರರೆಂಬುವರು ಅ.ಪ ಒಬ್ಬರಾದರೂ ಇವರಲಿ ಇದ್ದರೆ ಹಬ್ಬವಾಗಿ ಸಂತೋಷ ಪುಟ್ಟುವುದು ತಬ್ಬಲಿಯಾದೆನು ಸಂಸ್ಮರಣವೆಂಬ ಹೆಬ್ಬುಲಿಯಕೈಗೆ ಸಿಕ್ಕಿರುವೆನು ನಾಂ1 ಯಾರಿಗೆ ಮೊರೆಯಿಡಲೀ ಕಷ್ಟ ಕಿವಿ- ಯಾರ ಕೇಳಿ ಪರಿಹರಿಸುವರಾರು 2 ರಾಯ ತಂದೆ ಧರ್ಮವೆ ಸೋದರರು ಸತಿ ನೋಯಿಸದಿರುವುದು ಮಿತ್ರನು ಇವರೊಳು 3 ಈ ಬಂಧುಗಳುಳ್ಳವಗೆ ನಿರುತವು ಮ- ಹಾಭಾಗ್ಯವುಯಿಹಪರ ಸೌಖ್ಯವು ನಾ ಭ್ರಾಂತಿಯೊಳೆಲ್ಲೆಲ್ಲಿ ತಿರುಗಿದರು ವೋ ಭಗವಂತ ಮಹಂತಾನಂತನೆ 4 ಹೊರಗಿನವರ ಬಾಲ್ಯದಿ ಕಾಣದೆ ಕರೆ ಗುರುರಾಮವಿಠಲ ಹೊರವೊಳಗೂನೀ ನಿರುವೆ ಕರುಣಿಸೈ ಸರ್ವವು ನೀನೆ 5
--------------
ಗುರುರಾಮವಿಠಲ
ಎನೊ ಎಂತೊ ತಿಳಿಯದು ತಿಳಿಯದು ಸ್ವಾನಂದದ ಸುಖದಾಟ ಧ್ರುವ ಒಳಗೊ ಹೊರಗೊ ಬೈಗೊ ಬೆಳಗೊ ಕಾಳೊ ಬೆಳದಿಂಗಳವೊ ಮಳಿಯೊ ಮಿಂಚೊ ಹೊಳವೊ ಸಳವೊ ತಿಳಿಯದ ಕಳೆಕಾಂತಿಗಳು 1 ಉದಿಯೊ ಅಸ್ತೊ ಆದ್ಯೊ ಅಂತ್ಯೊ ಮಧ್ಯೋ ತಾ ತಿಳಿಯದು ತುದಿಮೊದಲಿಲ್ಲದೆ ಸದಮಲ ಬ್ರಹ್ಮವು ಉದಿಯವಾಗಿಹ್ಯದು ನೊಡಿ 2 ಜೀವೋ ಭಾವೋ ಶಿವೊ ಶಕ್ತೋ ಆವದು ತಾ ತಿಳಿಯದು ಘವಘವಿಸುವ ಅವಿನಾಶನ ಪ್ರಭೆಯಿದು ಮಹಿಪತಿ ವಸ್ತುಮಯವೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎನ್ನ ಕಂದ ಹಳ್ಳಿಯ ಹನುಮ ಪ ಚೆನ್ನಾಗೈದಾರ ಲಕ್ಷ್ಮಣ ದೇವರು ಅ ತುಪ್ಪ ಪಂಚಾಮೃತವಂದು ಅಡವಿಗಡ್ಡೆಗಳಿಂದುಕರ್ಪೂರ ವೀಳ್ಯವಂದು ಕುರುಕು ಇಂದುಸುಪ್ಪತ್ತಿಗೆ ಮಂಚವಂದು ಹುಲ್ಲು ಹಾಸಿಗೆಯಿಂದುಶ್ರೀಪತಿ ರಾಘವ ಕ್ಷೇಮದಲೈದಾರೆ1 ನವ ವಸ್ತ್ರಗಳು ಅಂದು ನಾರಸೀರೆಗಳಿಂದುಹೂವಿನ ಗಂಟು ಅಂದು ಜಡೆಗಳಿಂದುಜವ್ವಾಜಿ ಕತ್ತುರಿಯಂದು ಭಸಿತ ಧೂಳಿಂದುಶ್ರೀವರ ರಾಘವ ಕ್ಷೇಮದಲೈದಾರೆ2 ಕನಕ ರಥಗಳಂದು ಕಾಲುನಡಿಗೆಯಿಂದುಘನ ಛತ್ರ ಚಾಮರವಂದು ಬಿಸಿಲು ಇಂದುಸನಕಾದಿಗಳೋಲೈಪ ಆದಿಕೇಶವ ನಮ್ಮಹನುಮೇಶ ರಾಘವ ಕ್ಷೇಮದಲೈದಾರೆ 3
--------------
ಕನಕದಾಸ
ಎನ್ನ ಪ್ರಿಯನಾ ನೀ ತಂದು ತೋರೇ ಸುಜ್ಞಾನೇ ಪ ಕನಸಿನೊಳಗ ಕಂಡ ಪರಿಯಾರೂಪದ ದೋರಿ ದಾವ ತೇಜಮುಸುಕಿತು ಧರಿಯೇ | ತ್ರೈ ಭುವನವ ರಕ್ಷಿಸ ಬಂದಾ ಹರಿಯೇ | ಮುಜ್ಜೆಮರಿಯೇ 3 ಮುಟ್ಟಿಲೀ ತಗಧನುಏಳಲಿ ಝಮ್ಮೆನೇ ನಾವು ನೆಟ್ಟನೆಪೂಜಿಪೆವು ಗೌರಮ್ಮನೇ ಎಂದು ಬಿಟ್ಟ ಮಗಳು ಬೇಡಿಕೊಂಡರು ಸುಮ್ಮನೇ ಅಡಿಯಿಟ್ಟುನಲಿದು ಬರುವ ರಾಮೋ ಘಮ್ಮನೇ ಪರಬೊಮ್ಮನೆ4 ಬಂದು ನೋಡಿಬಿಲ್ಲನೆತ್ತಿದ್ದಾಚಕ್ಕನೇ ಅರುವಿಂದ ಲೋಚನೆ ಮಾಲಿ ಹಾಕಲು ಘಕ್ಕನೇ ವೃಂದ ಕಾಣುತ ಹೆದರಿತುಧಕ್ಕನೇ ನಮ್ಮ ತಂದೆ ಮಹಿಪತಿ ನಂದನ ಪ್ರಭು ಠಕ್ಕನೇ ಪಾಲಕ್ಕುನೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎನ್ನನು ನೀ ಜರೆವೆ ಜೀವನೆನಿನ್ನನೀ ತಿಳಿದೆನೆಂದೂಮುನ್ನ ಮಾಡಿದ ಪುಣ್ಯಕರ್ಮಂಗಳೆನ್ನಿಂದ ಮನ್ನಿಸದುಪಕಾರವಾ ಜೀವಾ ಪದೇಹವು ಹೇಯವೆಂಬೆ ಮತ್ತೀಗದೇಹದೊಳಿರುತಿರುವೆದೇಹದಾಧಾರದಲ್ಲೀ ಧ್ಯಾನಿಸಿಸೋಹಂ ಭಾವನೆ ಬಂದುದೂಉಹಾಪೋಹಗಳಲ್ಲಿ ಚದುರನು ನಾನೆಂಬೆಓಹೊ ನಾನಿಲ್ಲವೆ ಜೀವಾ 1ಚಿತ್ತೆ ತಾ ಪ್ರಕೃತಿಯಾಗೀ ಭೂತದಮೊತ್ತವೆಂದೆನಿಸಿತಲ್ಲೈಮತ್ತೆ ಭೂತಂಗಳವೂ ನಾಲ್ಕುಳ್ಳತತ್ವವಿಪ್ಪತ್ತಾುತುಹತ್ತಿಂದ್ರಿಯಂಗಳಿಂದ ವಿಕರ್ಮಗಳು ಪುಟ್ಟಿಮುತ್ತೆರನಾುತಲ್ಲೈ ಜೀವಾ 2ಕನಕವೆ ಕುಂಡಲಾದಿ ಭೂಷಣಭಣಿತೆಯ ತಾಳಿರಲುಕನಕವಲ್ಲವೆ ಭೂಷಣ ಯೆಣಿಸಲುಚಿನುಮಯಾತ್ಮಕನಿಂದಲೆಜನಿಸಿ ದೃಶ್ಯತ್ವದಿ ತೋರಿದಡೇನಾುತುತನುವಾತ್ಮನಲ್ಲವೇನೈ ಜೀವಾ 3ಮಾಡಿದ ಉಪಕಾರವ ಮರೆಯುವಮೂಢಗೆ ನರಕವೆಂದುಆಡದೆ ಶೃತಿನಿಕರ ನೀನದನೋಡದೆ ನುಡಿಯುತಿಹೆಕೂಡಿಕೊಂಡೆನ್ನನು ನಿಜದೊಳು ಬೆರೆದರೆಪ್ರೌಢ ನೀನೆನಿಸಿಕೊಂಬೆ ಜೀವಾ 4ಕಾರ್ಯಕಾರಣ ರೂಪವಾ ನೋಡಲುಕಾರ್ಯಕಾರಣವಲ್ಲವೆಸೂರ್ಯನಿಂದಾದುದಕ ಬೆರೆಯದೆಸೂರ್ಯನ ಮರಳಿ ನೋಡೂಧೈರ್ಯಶಾಲಿಯೊಳಿಪ್ಪ ಧೈರ್ಯತ್ವವಾತನವೀರ್ಯವಲ್ಲವೆ ನೋಡಲೂ ಜೀವಾ 5ರೂಪನಾಮಗಳೆರಡೂ ಸತ್ತಾನುವ್ಯಾಪಿಸಿ ಜಗವಾದುದುದೀಪದೊಳಗೆ ಕಾಳಿಕೆ ತೋರ್ಪಂತೆಈ ಪರಿಯಲಿ ಮಾಯೆಯುವ್ಯಾಪಾರಂಗಳನುಪಸಂಹರಿಸಲು ಕಾಯವ್ಯಾಪಕನೊಳು ನಿಂದುದೂ ಜೀವಾ 6ಪೊಳೆದೆನು ನಾ ಮೊದಲೂ ಆಮೇಲೆಪೊಳೆದೆ ನೀ ಪ್ರತಿಫಲಿಸಿಜಲಗತ ಪ್ರತಿಬಿಂಬವೂ ನಿಜವಲ್ಲದಳಿವಂತುಪಾಧಿುಂದಾನಿಲುವುದು ನಿಜಬಿಂಬವಾಭಾಸ ನೀ ಪುಸಿನಿಲುವೆ ನಾ ನಿಜದೊಳಗೆ ಜೀವಾ 7ಬಂಜೆಯ ಮಗ ನಿಜವೊ ಅವನಿಗೆಮುಂಜಿಯೆಂಬುದು ನಿಜವೋಅಂಜಿಕೆದೋರಿಸಿತು ರಜ್ಜುವುರಂಜಿಸಿ ಸರ್ವನಾಗಿವ್ಯಂಜಿಸಿ ಕರಣದಿ ನಿದ್ರೆಯೊಳಭಂಜಿಸಿ ಮಂಜಿನಂದದಿ ಪೋಪೆಯೈ ಜೀವಾ 8ಇರಿಸಲು ಬೇರೆನ್ನನು ತೆರಹಿಲ್ಲಬೆರೆಸಾತ್ಮನೊಳು ಬಿಡದೆಕಿರಣಂಗಳು ರವಿಯ ಬಿಟ್ಟೊಮ್ಮೆಇರಬಲ್ಲವೆ ನೋಡಲುತಿರುಪತಿನಿಲಯ ಶ್ರೀ ವೆಂಕಟರಮಣನಚರಣನಾನಲ್ಲವೇನೈ ಜೀವಾ 9 ಕಂ||ಇಂತೀ ಪರಿಯಲಿ ಜೀವನನಿಂತಿರುವವನಿಲ್ಲದವನ ನುಡಿವದು ಸಹಜವುಎಂತಾದರು ತನ್ನ ತಿಳಿಯದೆಮುಂತೋರದ ನುಡಿುದೇನೆನೆ ಮುಳಿದಂ ಜೀವಂ
--------------
ತಿಮ್ಮಪ್ಪದಾಸರು
ಎನ್ನನುದ್ಧರಿಸಲು ಘನ್ನ ಬಿರುದುಗಳು ಪ ಇನ್ನು ಉನ್ನತವಾಹವು ಕೇಳೊ ಹರಿಯೆ ಅ.ಪ ಅನವರತದಿ ದುರ್ವಿಷಯ ಲಂಪಟದೊಳು ಚನ್ನಾಗಿ ಪತಿತ ಎನ್ನಂತಜಾಮಿಳನೆ ಇನ್ನಿದು ತಿಳಿದು ನೀ ಎನ್ನ ಪೂತನ ಮಾಡೆ ನಿನ್ನನಿಮಿತ್ತ ಬಂಧುತನವೆ ವೆಗ್ಗಳವೊ 1 ಮನ್ನಿಸಿದವನಲ್ಲ ಪೂಜಿಸಲಿಲ್ಲ ತನ್ನ ಸಂಬಂಧಿಯು ಮೊದಲಿಗನಲ್ಲ ಎನ್ನಂತೆ ಗಜೇಂದ್ರನೆ ಎನ್ನನುದ್ಧರಿಸಲು ನಿನ್ನ ಪತಿತಪಾವನತೆ ಘನ್ನವೊ 2 ಏಸಪರಾಧ ಮಾಡಿದ ಚೈದ್ಯಾದಿಗಳು ಈಸಪರಾಧ ರಾಶಿಗಳ ಮಾಡಿದರೆ ವಾಸುದೇವವಿಠಲ ಎನ್ನ ರಕ್ಷಿಸಲು ಸೂಸುವುದೋ ನಿನ್ನ ಭಕುತ ವಾತ್ಸಲ್ಯತನವೊ 3
--------------
ವ್ಯಾಸತತ್ವಜ್ಞದಾಸರು
ಎನ್ನಲ್ಲಿ ಅವಗುಣ ಶತಸಾವಿರವಿರೆ | ಅನ್ಯರ ಕರೆದಾನು ನಡತೆ ಇದೇನೆಂಬೆ ಪ ವೇದವನೋದಿದೆ ಪರರಿ | ಗಾದÀರಿಸಿ ಮುಕುತಿಗೆ | ಹಾದರಹಳು ನಾರಿ | ಮಾದಿಗÀನ ಪೋದಂತೆ 1 ಧನದಾಸೆಯಿಂದ ಸಾಧನವಾಗದೆಂದು | ಜನರಿಗೆ ಉಪದೇಶವನು ಮಾಡುವೆ | ತೃಣ ಹತ್ತದಿದ್ದ | ವಧನರಾಶಿ ಕದ್ದಂತೆ2 ರಸನೇಂದ್ರಿಯಗಳ ಬಂ | ಧಿಸಬೇಕೆಂದು ನಾನು | ಉಸುರುವೆ ಅಲ್ಲಲ್ಲಿ ಕುಶಲನಾಗಿ | ಅಮೃತ | ರಸವಲ್ಲೆನೆಂದಾವ ಮುಸುರಿಯ ಮೆದ್ದಂತೆ 3 ಒಡಿವೆ ವಸ್ತುಗಳು ಸಂಗಡ ಬಾರವು ಮಮತೆ | ಬಿಡು ಸಂಸಾರವಿದು ಕಡಿಗೆ ಭವದ | ಮಡವು ಸಿದ್ಧವೆಂದು ನುಡಿವೆನೊ ಪರರಿಗೆ | ಯಡಹಿಯೊ ಎಂದಾವ ಗಿಡನೇರಿ ಬಿದ್ದಂತೆ 4 ಭಕುತಿ ಕೂಡಿದ ವಿರಕುತಿ ಲೇಶವಿಲ್ಲಾ | ಯುಕುತಿ ಬಾಯಲಿ ನಾರಕಕೆ ಸಾಧನಾ | ಲಕುಮಿವಲ್ಲಭ ನಮ್ಮ ವಿಜಯವಿಠ್ಠಲ ನಿನ್ನ ಅ | ರ್ಚಕನಾಗಿ ಬದುಕತಕ್ಕದ್ದು ಮಾರ್ಗವ ತೋರೊ 5
--------------
ವಿಜಯದಾಸ
ಎನ್ನಾಣೆ ಬ್ಯಾಡ ಬ್ಯಾಡವೋ ರಂಗ ನಿನಗಿದುಚೆನ್ನಗಿತ್ತೇರ ಮನೆ ಗೋವಿಂದ ಪ. ಗೋಪೇರ ಮನೆಗಳ ಪೊಕ್ಕು ಬಹುಪರಿ-ತಾಪವ ಮಾಡುವರೇ ಕಂದ ಗೋವಿಂದಕಾಪಟ್ಯಸತಿಯರ ಮಾತ ನೀನಾಲಿಸಿಕೋಪಿಸಬೇಡವಮ್ಮಾ ಗೋಪೆಮ್ಮ 1 ಎನ್ನಪ್ಪ ಕಂದನೆ ಚಿಣ್ಣ ಗೋಪೇರು ಬಂದುನಿನ್ನ ದೂರುತಲೈದಾರೋ ಗೋವಿಂದಕನ್ನೇರು ಕೊಬ್ಬಿಂದ ಅನ್ಯಾಯ ನುಡಿತಾರೆÀಇನ್ನೇನು ಮಾಡಲಮ್ಮ ಗೋಪೆಮ್ಮ 2 ದಧಿ ದುಗ್ಧ ಭಾಂಡ ಒಡೆದು ಗೋಪಿಯರನ್ನುಸದರ ಮಾಡುವರೇ ಕಂದ ಗೋವಿಂದಉದಯದಿ ಗುದ್ದ್ಯಾಡಿ ಮಾರ್ಜಾಲಂಗಳು ಬೀಳೆದÀಧಿಭಾಂಡ ಜಾರಿತಮ್ಮ ಗೋಪೆಮ್ಮ 3 ಬಸವನ ಆಟದಿ ಶಿಶುಗಳೆಲ್ಲರ ಕೂಡಿಮಸಿಮಣ್ಣು ಮೈಯ್ಯಾದವೊ ಗೊವಿಂದಬಿಸಜಾಕ್ಷಿಯರು ತಮ್ಮ ಮನೆಕೆಲಸದ ಕೈಯ್ಯಮಸಿಮಣ್ಣು ಒರೆಸಿದರೆ ಗೋಪೆಮ್ಮ 4 ಒರಗಿದ್ದ ಹಸುಗಳೆಬ್ಬಿಸಿ ಕರುಗಳ ಬಿಟ್ಟುದುರುಳತನವ ಮಾಡೋರೆ ಗೋವಿಂದನೆರೆದಿದ್ದ ಶಿಶುಗಳಾಡುವ ಗುಲ್ಲ ತಾವ್ ಕೇಳಿತುರುಶಿಶು ಬೆದರಿತಮ್ಮಾ ಗೋಪೆಮ್ಮ 5 ಅಣ್ಣ ಬಲರಾಮ ನಿನ್ನ ಬನ್ನಣೆ ಸುದ್ದಿಯಚೆನ್ನಾಗಿ ಪೇಳಿದನೊ ಗೋವಿಂದಉನ್ನಂತ ದಾಯಾದಿಯ ಮಾತುಗಳ ನೀನುಮನ್ನಿಸ ಬೇಡವಮ್ಮ ಗೋಪೆಮ್ಮ 6 ಬಾಯೆನ್ನ ರನ್ನವೆ ಬಾಯೆನ್ನ ಚಿನ್ನವೆಬಾಯೆನ್ನ ಮೋಹದ ಗಿಣಿಯೆ ಗೋವಿಂದಬಾಯೆಂದು ಯಶೋದೆ ಕರೆದಳು ಬಿಗಿದಪ್ಪಿಬಾಯೆನ್ನ ಹಯವದನ ಗೋವಿಂದ7
--------------
ವಾದಿರಾಜ
ಎಂಬ ನಾಮವನು ಉಚ್ಚರಿಸೆ ಸಾರುವರು ಭಕುತರಾದವರು ವೈಕುಂಠವನು ಆರಾದರೇನು ಮರೆಯದೆ ಹರಿಯಧ್ಯಾನಿಸಲು ಸಿರಿಯರಸ ಕಾಯ್ದು ಕೊಂಬ ಪ ಅರಸಕೇಳೈ ಬಳೀಕ ಪಾಂಡ್ಯದೇಶದೊಳೋರ್ವ ಪತಿ ಪೆಸರು ಇಂದ್ರ ದ್ಯುಮ್ನಧರಾತ್ಮ ಹರಿ ಪರಾಯಣನೆನಿಸಿ ನಿರುತಸತ್ಯ ಸುಶೀಲ ಕರಿತುರಗದಾಸೇಯ ತೊರೆದು ವಿರತನಾಗಿಯೆ ಪುರವ ಪೊರಟು ಸುಸ್ಥಿರನಾಗಿ ಬರವಾಯ್ತ ಗಸ್ತ ಶಿಷ್ಯವೆರಸಿ 1 ಸದಮಳಾತ್ಮರನ ಚಿಂತೆಯಿಂದ ಭೂಪೇಳದಿರೆ ಮದಮುಖನ ತಪವ ನೋಡುವೆನೆನುತ ಮುನಿ ಮುನಿದು ತದುಬಿಗರ್ಜಿಸಿ ಶಾಪವೀಯಗಜವಾಗೆನುತ ಸದು ಹೃದಯನೆದ್ದು ಬಳಿಕ ಪಾದಕ್ಕೆ ವಂದಿಸಿ ಶಾಪ ವೆಂದು ಬಿಗುಗಡೆಯೆನಲು ಸಾದರದಿಂ ಮುನಿಪನೆಲ ನೆಗಳು ಪಿಡಿಯೆಗತಿನಿನ ಗೆಂದು ಹೋದ ಮುನಿಪತಿ ಇತ್ತಲು 2 ಇಂತು ಭೂಮೀಶ ಶಾಪವ ತಾಳ್ದು ಬಿಸುಸುಯ್ದು ಕಂತು ಜನಕನೆ ಬಲ್ಲನೆಂತು ಗೆಲಿದಪೆನ್‍ನುತ ದಂತಿ ಮುಖವಾಗಿ ಭೂಕಾಂತೆಯೊಳು ಜನಿಸಿ ಸುರ ಸಂತತಿಗಳಲ್ಲು ಮಾ ಇಂತೆಸೆದನು 3 ತರುನಿಕರ ಚೂತಾಮಲಕ ಸುರಹೊನ್ನೆ ಪುನ್ನಾಗ ಮೆರೆವಬಿಲ್ವಶ್ವತ್ಥಮಾ ಕಿರುಗಿಡುವಿನೊಳಗೆ ಚರಿಸುವ ಕರಡಿ ಸೀಳ್ನಾಯಿ ಭೇರುಂಡ ಮುಂತಿರುತಿರಲು ಗರುಡ ಗಂಧರ್ವ ಚಾರಣರು ಸುರಕಿನ್ನರರು ಇರುತಿಹರು ಕಿಂಪುರುಷರು 4 ತ್ರಿಜಗದೊಳಗೆಣೆ ಗಾಣೆ ಭುಜಗಶಯನನೆ ಬಲ್ಲ ಗಜರಾಜ ಬೆಳೆದು ಕುಜನರ ಮಾರ್ಗವಂ ಪಿಡಿದು ಅಜಸೃಷ್ಟಿ ಬಿರಿಯೆ ಒದರಿ ನಿಜಪುತ್ರ ಮಿತ್ರಸ್ತ್ರೀಜನ ಸಹಿತಲೊಡಗೊಂಡು ಬುಜ್ಜಸತ್ವದಿಂದ ವನವನು ಮುರಿದು ಸಂಹರಿಸಿ ಭೂಜಲವ ನರಸಿ ಬಂದ 5 ಗಂಡು ಹೆಣ್ಣಾನೆಗಳ ತಂಡ ಸಹಿತಲೆ ಬಂದು ಕಂಡು ಜಲವನು ಈಂಟಿಗುಂಡಿ ಮಡುವನುಸಾರಿ ಚಂಡಿಗೊಳಿಸುತ ಧರಣಿಯ ಅಂಡೆಲೆವ ಮದದ ಸ್ತ್ರೀಯರ ಕೂಡಿ ನೆಗಳು ಖತಿಗೊಂಡು ಮಡುವಿನೊಳಗೆಳೆಯಲು 6 ನೆಗಳು ಸುತ್ತಲಿಹ ಕರಿಘಟೆಗಳೇನಿದದ್ಬುತವೆಂದು ಮತ್ತೆ ಸತ್ವದಲೆಳೆಯೆ ತೆತ್ತಿಗನು ಬಾರದಿರೆ ತಮ್ಮಗುತ್ತಿಗುಳಿದಿಹ ಹಸ್ತಿ ಇತ್ತ ಗಜರಾಜ ಕಾದುತಿರಲು ಹಲಕಾಲ ಬತ್ತಿ ಅಸುಗುಂದಿ ಚಿತ್ತದಿ ತಿಳಿದು ಧ್ಯಾನಿಸುತ ಮತ್ತಾರು ಕಾಯ್ವರೆನುತ 7 ಇಕ್ಕರ್ತರಿಂತು ಕಾದುತ್ತಿರಲು ಕರಿವರನ ಸೊಕ್ಕು ಮುರಿದುದು ತಮವುಚೊಕ್ಕಿ ಮುಖವನು ನಭಕೆ ಸೊಕ್ಕಿದುದುನೆಗಳು ಬಳಿಕ ಮುಕ್ಕುರು ದಿವ್ಯಸಾಗರ ವರುಷ ಪರಿಯಂತ ಸಿಕ್ಕಿ ನಗಳೊಳು ಕಾದಿ ಕುಕ್ಕುರಿಸಿ ನೀರಿನೊಳು ದಿಕ್ಕನೊಡುತ್ತ ಕಕ್ಕನೆ ಕರಗಿ ಜ್ಞಾನದಲಿ ಭಕ್ತವತ್ಸಲನ ನೆನೆದ 8 ರಕ್ಷಿಸೆನ್ನನು ಬಿಡದೆ ಪಕ್ಷಿವಾಹನಗಮನ ಸೇವ್ಯ ಕುಕ್ಷಿಯೊಳಗಿಂಬಿಟ್ಟು ರಕ್ಷಿಸುವೆ ಭಜಕರನು ಮೋಕ್ಷದಾಯಕನೆ ಕಾಯೋ ಲಕ್ಷ್ಮೀಶ ಕೇಶವ ಉಪೇಕ್ಷಿಸದೆ ನೀ ಬಂದು ಭಕ್ಷಿಸುವ ನೆಗಳನೀ ಶಿಕ್ಷಿಸಲು ಬೇಕು ಅಕ್ಷಿಯನು ಇಟ್ಟುಬಂದು 9 ಸರಸಿರುಹದಳನಯನ ಮೂರ್ತಿ ಪರಿ ಹರಿಸೋ ಕ್ಷೀರಾಬ್ಧಿ ಶಯನನೆಂದು ಪರಿ ಪರಿಯ ಸ್ತುತಿಸಲಾಕ್ಷಣ ಮಹಿಮ ಧ್ವನಿಗೇಳ್ದು ನಾಗಿಕರದಿ ಚಕ್ರವ ಕೊಂಡು ಭರದಿ ಭಕುತನ ಕಂಡು ಕರಿರಾಜಗಭಯವಿತ್ತ 10 ಸಿರಿ ಮೊಗದ ನಳಿನಾಯತೇಕ್ಷಣದ ತೊಳಪ ಕದಪಿನ ಮಿಸುಪ ನವರತ್ನ ಕುಂಡಲದ ಕೌಸ್ತುಭ ಹಾರದುರಸ್ಥಳದ ಹೊಳೆವ ಮಣಿಮಕುಟ ನೇಳಿವದಂತಪಂಕ್ತಿಯ ಚಾರು ಕೋರವಿಸೆ ಕಂಡ 11 ಮೇಲೆ ಕೈವಾರಿಸುವ ಸುರರ ದುಂದುಭಿ ಮೊಳಗೆ ಹೊಳೆಯ ಎತ್ತಿದ ತೋರ ಸತ್ತಿಗೆಯ ತೋರಣದ ಸಾಲುಗಳ ಸಂದಣಿಯ ಸಂಭ್ರಮದ ಜಾಲವನು ಕಂಡುಗಜವು ಪಾಲಿಸೈ ಗೋವಿಂದನಾಥ ಬಂಧು ತ್ರಾಹಿ ಭವಾಬ್ಧಿಸಾರ ತ್ರಾಹಿ ಪಾಲಿಸೈ ತ್ರಾಹಿ ಎನುತ 12 ಗಡಗಡನೆ ನಡುಗತಿರೆ ಕಡಲಶಯನನು ಕಂಡು ಕಡುಕೃಪೆಯೊಳೈ ತಂದು ಮಡುವ ಧುಮುಕಿಯ ಗಜವ ಪಿಡಿದಾಗ ವಾಮಕರದಿಂದಳೆಯನೆಗಳು ಸಹತಡಿಗೆ ಬರಲಾಗಕಂಡು ಘುಡು ಘುಡಿಸಿ ಕೋಪದಿಂ ತುಡುಕಿ ಚಕ್ರವತೆಗೆದು ಪಿಡಿದು ನೆಗಳನು ಕಡಿಯೆ ಒಡನಾಗ ನಿಜರೂಪ ಬಿಡುಗಡೆಯಾಯಿತೆಂದು ನಡೆದು 13 ಹರಿ ಬಳಿಕ ಕರಿವರಗೆ ವಿಶ್ವರೂಪವತೋರಿ ತರಣಿಕೋಟಿ ಸಹಸ್ರತೇಜದಿಲ ರಂಜಿಸಿಯೆ ಪರಿದುಹರಿವೋಲೆಸೆದನು ಬಳಲಿದೆಯಾ ಎಂದು ಕರುಣಾಕಟಾಕ್ಷದಿಂ ಕರಿವರನ ಸಹಿತ ವಾಸ ದೆಡೆಗೆ 14 ಅವನುದಯ ಕಾಲದೊಳೆದ್ದು ಪೇಳುವನು ಆವರಿದ ಭಕ್ತಿ ಭಾವದಲಿದನು ಕೇಳುವರು ಪಾವನರು ಪುಣ್ಯಾತ್ಮರು ಕೋವಿದರು ಧರಗೆ ಗಜರಾಜೇಂದ್ರ ಮೋಕ್ಷವನು ಸಾವದಾನ ದಲಿದನು ನೇಮದಲಿ ಕೇಳ್ವವರ ನೆನೆದವರ ಕಾಯ್ವನೆಂದು 15
--------------
ಕವಿ ಪರಮದೇವದಾಸರು
ಎಂಬೆನು ವಿವೇಕ ಮನುಜಗೆ ಇರೆ ಎಂಬೆನು ಬ್ರಹ್ಮನು ಎಂಬೆಎಂಬೆನು ವಿವೇಕ ಮನುಜಗೆ ಇಲ್ಲದಿರೆ ಕತ್ತೆಯಮರಿಯದು ಎಂಬೆ ಪ ವೇದದ ನಿಜ ಅರ್ಥವ ತಿಳಿದಡೆ ಉತ್ತಮೋತ್ತಮನು ಎಂಬೆಕ್ರೋಧದಿ ತರ್ಕದಿ ಕಾದಾಡುವವನು ಕೋಳಿಯ ಹುಂಜನು ಎಂಬೆನಾನಾರೆನುತಲಿ ನಿಜವನು ತಿಳಿವನ ನಾರಾಯಣನು ಎಂಬೆನಾದದ ತಿಳಿವನು ನಿಂದಿಸುವಾತನ ಸರಸವಾಡೋ ಪಶು ಎಂಬೆ 1 ಮತಿಯ ವಿಚಾರದಿ ಜಗ ಬ್ರಹ್ಮವೆಂಬನ ವಿಚಾರವಾದಿಯು ಎಂಬೆಯತಿಗಳು ಬರೆ ಕುಳಿತೇಳದ ಮನುಜನಎಮ್ಮೆಯ ಮಗನವನೆಂಬೆಸುತ್ತಮುತ್ತಂಗನೆ ಮೋಹವ ತೊರೆದನ ಯೋಗಪುರುಷ ತಾನೆಂಬೆಗತಿಮತಿ ತೊರೆದಿಹ ನರನನು ಈಗಲೆ ಎಂಜಲು ತಿಂಬುವ ನಾಯೆಂಬೆ 2 ಪರಮಾರ್ಥದಿ ಶಮದಮದಿಂದಿಹನನು ಪಂಡಿತನೀಗಲು ಎಂಬೆಹಿರಿಯರ ಕಾಣಲು ಹಲ್ಲನೆ ಕಿರಿವನ ಹಿರಿಯಮುಸುವನು ತಾನೆಂಬೆಗುರಿಯನು ತಪ್ಪದೆ ದೃಷ್ಟಿಸಿ ನಡೆವನ ಗುಣಕೆ ಅತೀತನು ಎಂಬೆಬರಿಯ ಪ್ರತಿಷ್ಟೆಯ ಸಾಧಿಸುತಿರುವನ ಬರಡು ಗೊಡ್ಡು ಎಂದೆಂಬೆ 3 ನಾದದ ಧ್ವನಿಯನು ಕೇಳುತಲಿಹನನು ಜಗಜೀವನನು ಎಂಬೆನಾದದ ಸುಖವನು ಅರಿಯದ ನರನನು ಜೀನುಗಾರನು ಎಂದೆಂಬೆದಿನಕರ ಕೋಟಿಯ ತೇಜದಿ ಹೊಳೆವನ ದಿವ್ಯ ಮೂರುತಿ ಎಂದೆಂಬೆವನವನ ಅಲೆಯುವ ಬರಡು ಮುನಿಯನುವನಕೆಯ ತುಂಡದು ತಾನೆಂಬೆ4 ಆತ್ಮದ ಕಳೆಯನು ಅರಿತವನಿದ್ದರೆ ದೃಢದಲಿ ಬ್ರಹ್ಮನು ಎಂಬೆಸತ್ವಶಾಲಿ ಆ ಮಹಿಮರ ಜರೆವರ ಗುಡ್ಡದ ಗೂಗೆಯಮರಿ ಎಂಬೆಚಿನುಮಯ ಚಿನ್ಮಾತ್ರನೆ ತಾನಾದವನನು ಚಿದಾನಂದ ಗುರುವೆಂಬೆಕರೆಕರೆ ಎನಿಸುವ ಸಾಧು ವೇಷವನು ದೂರಕೆ ನೀ ನಿಲ್ಲೆಂಬೆ5
--------------
ಚಿದಾನಂದ ಅವಧೂತರು