ಒಟ್ಟು 18204 ಕಡೆಗಳಲ್ಲಿ , 138 ದಾಸರು , 7712 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಲಂ ಮಹಾಲಿಂಗ ದೇವನಿಗೆ ಗಂಗೋತ್ತಮಾಂಗಗೆ ಪ. ತುಂಗಬಲ ಭದ್ರಾಂಗ ಸದಯಾ- ಪಾಂಗ ಭಕ್ತಜನಾಂಗರಕ್ಷಗೆ ಅಂಗಜಾರಿ ಕುರಂಗಹಸ್ತಗೆ ಸಂಗೀತ ಪ್ರೇಮಾಂತರಂಗ ನಿಸ್ಸಂಗಗೆ 1 ವಾಮದೇವಗೆ ವಾಸವಾದಿ ಸು- ಧಾಮ ವಿಬುಧಸ್ತೋಮ ವಿನುತಗೆ ವ್ಯೋಮಕೇಶಗೆ ಸೋಮಚೂಡಗೆ ಭೀಮವಿಕ್ರಮಗೆ ಹೈಮವತಿಪತಿಗೆ 2 ಪ್ರಾಣಪತಿ ಲಕ್ಷ್ಮೀನಾರಾಯಣ- ಧ್ಯಾನಪರಗೆ ಪಾವಂಜೆಗ್ರಾಮ ಪ್ರ- ಧಾನಪುರುಷಗೆ ದೀನಜನಸಂ- ತಾನಗೀಶಾನಗೆ ಜ್ಞಾನಿ ಜಗದ್ಗುರುವಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳ ಇಂದಿರಾವರನಿಗೆ ಜಯ ಮಂಗಳ ವೃಂದಾವನಶಾಯಿಗೆ ಪ. ಆಷಾಢ ಶುಕ್ಲೈಕಾದಶಿಯಾರಂಭಿಸಿ ನಾಲ್ಕು ಮಾಸವು ನೆಲೆಗೊಂಡ ನಳಿನಾಕ್ಷಗೆ ದಾಸ ಮನೋರಥದಾಯಿ ವೃಂದಾವನ ವಾಸಿ ದಾಮೋದರ ಶ್ರೀಶನಿಗೆ 1 ಹಲವು ವಿಧದ ಪುಷ್ಪಗಳಿಕಿಂತ ಅಧಿಕ ಶ್ರೀ ತುಳಸಿ ಎಂದು ಎಲ್ಲ ತಿಳಿಯಿರೆಂದು ನೆಲೆಯದೋರಿ ಮೂಲದಲಿ ಪವಡಿಸಿದಂಥ ನಳಿನಾಕ್ಷ ಗೋಪಾಲ ಕೃಷ್ಣನಿಗೆ 2 ವಿಧಿಭವ ಶಕ್ರಾದಿ ಬುಧರು ಪರಾಕೆಂದು ವಿವಿಧ ವಿಧ ಸ್ತುತಿಸುತ ಕಾದಿರಲು ಮುದದಿಂದಲೆದ್ದು ಮುಖಾಬ್ಜ ತೋರುವ ನಮ್ಮ ಪದುಮನಾಭ ವೆಂಕಟರಾಯನಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳ ಜಯ ಜಯ ಜಯ ಮಂಗಳ ಪ. ಮಂಗಳ ಮೂರ್ತಿಗೆ ಮಂಗಳ ಕೀರ್ತಿಗೆ ಮಂಗಳ ದೇವಿಯರರಸನಿಗೆ ಮಂಗಳ ಮನುಮಥಪಿತನಿಗೆ ಮಂಗಳ ಮಂಗಳ ಮಹಿಮಗೆ ಮಂಗಳ 1 ಅಚ್ಚುತಾನಂತ ಗೋವಿಂದಗೆ ಮಂಗಳ ಸಚ್ಚÀರಿತ್ರನಿಗೆ ಸಕಲ ಮಂಗಳ ಸಚ್ಚಿದಾನಂದ ಸ್ವರೂಪಗೆ ಮಂಗಳ ಅಚ್ಚಹೃದಯನಿಗೆ ಅತಿ ಮಂಗಳ 2 ಕೇಶವ ನಾರಾಯಣನಿಗೆ ಮಂಗಳ ಕೇಶಿಸೂದನನಿಗೆ ಅತಿ ಮಂಗಳ ಶೇಷಶಯನ ಹೃಷೀಕೇಶಗೆ ಮಂಗಳ ವಾಸುದೇವನಿಗೆ ಸಕಲ ಮಂಗಳ 3 ದಾನವವೈರಿ ದೆಸೆದೆಸೆಗಳಿಗೆ ಮಂಗಳ ಹೀನಕುಲದವಗೆ ಹೆಚ್ಚು ಮಂಗಳ ಆನಂದತೀರ್ಥಮುನಿಯ ಮುದ್ದುಕೃಷ್ಣಗೆ ಶ್ರೀನಾರಿಯೆತ್ತುವ ಶುಭಮಂಗಳ 4 ನಿಗಮವ ತಂದ ಮತ್ಸ್ಯನಿಗೆ ನಿತ್ಯಮಂಗಳ ನಗಧರ ಕೂರ್ಮಗೆ ಅತಿಮಂಗಳ ಜಗತಿಯನೆತ್ತದ [ವರಾಹಗೆ]ಮಂಗಳ ಮಗುವ ಕಾಯಿದ ನೃಸಿಂಹಗೆ ಮಂಗಳ 5 ದಾನವ ಬೇಡಿದ ಸ್ವಾಮಿಗೆ ಮಂಗಳ ಕ್ಷೋಣಿಶಾಂತನಿಗೆ ಸಕಲ ಮಂಗಳ ಜಾನಕೀರಮಣ ರಾಮಗೆ ಮಂಗಳ ಶ್ರೀನಂದಾಚ್ಯುತನಿಗೆ ಶುಭಮಂಗಳ 6 ಬುದ್ಧವತಾರ ಶ್ರೀಬದ್ಧಗೆ ಮಂಗಳ ಸದ್ಧರ್ಮ ಮೂಲಸ್ವಾಮಿಗೆ ಮಂಗಳ ಮಧ್ವವಲ್ಲಭ ಹಯವದನರಾಯನಿಗಿಂಥ ಶುದ್ಧಸ್ವಭಾವಗೆ ಶುಭಮಂಗಳ 7
--------------
ವಾದಿರಾಜ
ಮಂಗಳ ಜಯ ಜಯ ಮಂಗಳ ತುಳಸಿಗೆ ಮಂಗಳ ಜಯ ಜಯ ರಂಗನಾಯಕಗೆ ಪ ವಾರಿಧಿ ಮಥÀನದಿ ವಾರಿಜನಾಭನ ವಾರಿಜನೇತ್ರನ ವಾರಿಗಳಿಂದ ತೋರಿದ ತುಳಸಿಯು ಸೇರಿದಳೆಲ್ಲ ಶ- ರೀರವ ಪಾವನ ಮಾಡಬೇಕೆನುತ 1 ತುಳಸಿಯ ನಾಮವ ಬೆಳೆಸಿಯೆ ಲೋಕವ ಬಳಸಿಕೊಂಡಿರುವೆನು ಎನುತಲೆ ಬಂದು ಕಳಸಿದ ಮನುಜರ ಉಳಿಸಬೇಕೆನುತಲೆ ಕಳಸದ ತೆರನಂತೆ ಉದಿಸಿದಳು ತುಳಸಿ 2 ಸಾಲಿಗ್ರಾಮವು ಇಲ್ಲದಾತನ ಮನೆಯೊಳು ಕಾಲೂರಿ ನಿಲ್ಲಳು ಹರುಷದೊಳಿವಳು ಪಾಲಿಪ ಹರಿಶಿಲೆಯಿರುವಂಥ ಸ್ಥಳದೊಳು ಓಲಗವಾಗಿಯೆ ತೋರುತ್ತಲಿಹಳು3 ಎಲ್ಲಿಯು ತುಳಸಿಯು ಅಲ್ಲಿಯೆ ಶ್ರೀಹರಿ ವಲ್ಲಭೆ ಸಹವಾಗಿ ಇರುತಿಪ್ಪ ಬಿಡದೆ ಫುಲ್ಲನಾಭನು ಕೃಷ್ಣ ಆಡಿದ ಪರಿಯನು ಗೊಲ್ಲತಿಯರು ಕಂಡು ನಾಚಿ ಹಿಗ್ಗಿದರು 4 ಬಂದಳು ಭಕ್ತರ ಮಂದಿರದೆಡಗೆ ಗೋ- ವಿಂದನ ಕಂಡಿರೆ ಎಂದು ಕೇಳಿದಳು ವೃಂದಾವನದೊಳು ನಿಂದಳು ತುಳಸಿಯು ಚಂದವು ನಿಮ್ಮಯ ಭವನದೊಳೆನುತ 5 ಗೋವಿನ ತುಪ್ಪದಿ ದೀವಿಗೆಯಿರಿಸಿಯೆ ಭಾವ ಶುದ್ಧತ್ವದಿ ಬಲವಂದರವಳು ಕಾವಲು ಪೋಗಿಯೆ ಕರ್ಣದ ಒಳಗಿದ್ದು ಜೀವಿತ ಮುಕ್ತಿಯ ತೋರುವೆನೆನುತ 6 ಸರ್ವತೀರ್ಥಗಳನ್ನು ಮೂಲದಿ ಧರಿಸಿಯೆ ಸರ್ವ ದೇವರ್ಕಳ ಮಧ್ಯದೊಳಿರಿಸಿ ಸರ್ವ ವೇದಂಗಳ ಶಿರದೊಳು ಧರಿಸಿಯೆ ಸರ್ವವ ಕಾಲಗೆ ನಿರ್ವಹಿಸುತಿಹಳು 7 ಅಂಗಳದೊಳಗಿಹ ಮಂಗಳ ಮಹಿಮಗೆ ರಂಗುವಲ್ಲಿಯನಿಕ್ಕಿ ಶೃಂಗಾರವಾಗಿ ಸಾಂಗ್ಯದೊಳಿಹ ಒಂದು ಮಂಗಳ ಬರೆದರೆ ಬಂಗಾರ ಮನೆಯನ್ನು ತೋರುವಳಿವಳು 8 ಮೂಲದ ಮೃತ್ತಿಕೆ ಮೂಲ ಪಣೆಯೊಳಿಟ್ಟು ಕಾಲದಿ ಸ್ನಾನವ ಮಾಡಿದ ನರರು ಭಾಳವಾಗಿಹ ಅಘರಾಶಿಯನೆಲ್ಲವ ಚಾಳಿಸಿ ಕಳೆವರು ಕಾಲನ ಗೆಲಿದು 9 ತನ್ನ ಕಾಷ್ಟವ ತಂದು ಚಿನ್ನದಿ ಸುತ್ತಿಸಿ ಕರ್ಣದಿ ಧರಿಸಿದ ಮನುಜರಿಗೆಲ್ಲ ಉನ್ನತ ಪದವಿಯ ತೋರುವೆನೆನುತಲೆ ಪನ್ನಗಶಯನಗೆ ಪ್ರೀತಿಯಾಗಿಹಳು 10 ಉತ್ತಮವಾಗಿಹ ಕಾರ್ತಿಕ ಮಾಸದಿ ಅರ್ತಿಯಿಂದಲೆ ನಲಿನಲಿಯುತ್ತ ದೇವಿಯ ಕರ್ತನ ಕೀರ್ತನೆ ರಚಿಸುವ ಮನದಿ 11 ಬ್ರಾಹ್ಮಿ ಮುಹೂರ್ತದಿ ಸ್ನಾನ ತರ್ಪಣವನ್ನು ನಿರ್ಮಲ ತೀರದಿ ತಿದ್ದಿಯೆ ಕೊಂಡು ಧರ್ಮಕ್ಕೆ ಯೋಗ್ಯಳ ಪೂಜೆಯ ಮಾಡಲು ಕರ್ಮ ಬಂಧಗಳೆಲ್ಲ ಕಡಿದುಕೊಳುವುದು 12 ಸಾಯಂಕಾಲದಿ ದೀವಿಗೆ ಹಚ್ಚಲು ಮಾಯಗಳೆಲ್ಲವು ಮರುಗಿ ಪೋಗವುವು ದಾಯವಾಗಿಯೆ ಸುರರಾಯನೊಳರ್ಥವ ಬೇವಿನವರು ಕಂಡು ಹೊರಸಾರುತಿಹರು 13 ಸರ್ವದಾನಗಳನ್ನು ಸರ್ವಪೂಜೆಗಳನ್ನು ಸರ್ವರು ಋಷಿ ಪಿತೃ ತರ್ಪಣಗಳನು ಸರ್ವಥಾ ತುಳಸಿಯ ತಪ್ಪಿಸಬೇಡೆಂದು ನಿರ್ವಾಹವಾಗಿಯೆ ಶ್ರುತಿಯು ಪೇಳಿದುದು 14 ಅಂಗದೊಳಗಿಹ ಮಂಗಳ ಮಹಿಮಗೆ ಸಾಂಗ್ಯದೊಳಿದನು ಪಠಿಸಿ ಪೇಳಿದರೆ ಗಂಗೆ ಗೋದಾವರಿ ತುಂಗಭದ್ರೆಯ ಮಿಂದು ರಂಗನ ಕ್ಷೇತ್ರವ ನೋಡಿದ ಫಲವು 15 ಅಂಗಳ ತುಳಸಿಯ ದಿನ ದಿನದಿ ತಾವೆದ್ದು ಹಿಂಗದೆ ನೋಳ್ಸ ಶ್ರೀರಂಗನ ಭಕ್ತರಿಗೆ ಬಂಗಾರಗಿರಿವಾಸ ವರಾಹತಿಮ್ಮಪ್ಪನ ಮಂಗಳಮೂರ್ತಿಯ ನೋಡಿದ ಫಲವು 16
--------------
ವರಹತಿಮ್ಮಪ್ಪ
ಮಂಗಳಂ ಜಯ ಜಯ ಮಂಗಳಂ ಪ ಪರಮಾಸನದಲಿ ಕುಳಿತವಗೆ ಪರತತ್ವವ ತಾ ತಿಳಿದವಗೆ ಕರುಣದಿಂದ ದುರಿತಾವಳಿಗಳನು ಸ್ಮರಿಸಿದ ಮಾತ್ರದಿ ಪರಿಹರಿಸುವಗೆ 1 ಪೊಡವಿಯಲಿ ಶೋಭಿಸುವವಗೆ ಕಡಲಶಯನನ ಭಕ್ತನಿಗೆ ಅಡಿಗಳ ಬಿಡದೆ ಭಜಿಪ ಸುಜನರಿಗೆಲ್ಲ ಕಡುತರ ಜ್ಞಾನವ ನೀಡುವಗೆ 2 ಸತ್ಯಧೀರರ ಕುವರನಿಗೆ ಸತ್ಯಜ್ಞಾನನೆಂದೆನಿಸುವಗೆ ಅತ್ಯಾದರದಿಂದ ರಾಮನ ಧ್ಯಾನಿಸಿ ಪ್ರತ್ಯಕ್ಷವ ಕರೆಸಿರುವವಗೆ 3 ಕಾಮಕ್ರೋಧವ ಬಿಟ್ಟವಗೆ ಪ್ರೇಮ ಆಶೆಗಳ ಸುಟ್ಟವಗೆ ಧೂಮಕೇತು ಸಖ ಸೂನುವಾಹನನ ನೇಮದಿಂದ ಆರಾಧಿಪಗೆ 4 ದಂಡ ಕಮಂಡಲ ಪಿಡಿದವಗೆ ಪಂಡಿತರಿಂದತಿ ಪೂಜಿತಗೆ ಕೊಂಡಾಡಿದರ್ಯಮ ದಂಡನೆ ತಪ್ಪಿಸಿ ಶೊಂಡನಾದ ನರಹರಿ ತೋರ್ಪಗೆ 5
--------------
ಪ್ರದ್ಯುಮ್ನತೀರ್ಥರು
ಮಂಗಳಂ ಜಯ ಮಂಗಳಂ ಮಂಗಳಂ ಬೆಟ್ಟದೊಡೆಯ ಹರಿಗೆ ಜಯ ಪ. ಮಂಗಳಂ ಕೊಳಲನೂದುವ ದೊರೆಗೆ ಮಂಗಳಂ ಶ್ರೀ ಶ್ರೀನಿವಾಸ ವೆಂಕಟನಿಗೆ ಮಂಗಳಂ ಶೇಷಾಚಲ ಹರಿಗೆ ಅ.ಪ. ವೈಕುಂಠದಲಿ ಬಂದವಗೆ ಆ ಕೋಲಗಿರಿಯಲಿ ನಿಂದವಗೆ ತಾ ಕಾಸುಕಾಸಿಗೆ ಬಡ್ಡಿಯ ಕೊಳುತಲಿ ಬೇಕಾದ ವರಗಳ ಕೊಡುವನಿಗೆ 1 ಬುತ್ತಿ ಪೊಂಗಲುಗಳ ಮಾರುವಗೆ ಮತ್ತೆ ದರ್ಶನ ಕೊಡದೆ ಒದೆಸುವಗೆ ನಿತ್ಯ ಸ್ವಾಮಿಪುಷ್ಕರಣಿ ತೀರದಿ ನಿಂತು ಭೃತ್ಯವರ್ಗಗಳನು ಪೊರೆವವಗೆ 2 ಶಂಖ ಚಕ್ರ ವರ ಹಸ್ತನಿಗೆ ಶಂಕೆಯಿಲ್ಲದೆ ಅಭಯ ಕೊಡುವನಿಗೆ ಶಂಕರಮಿತ್ರಗೆ ಪರಮಪವಿತ್ರಗೆ ಸಂಕೋಲೆ ಹನುಮಗ್ಹಾಕಿಸಿದವಗೆ 3 ವೃಂದಾವನದಲಿ ಮೆರೆದವಗೆ ಮಂದಗಮನೆಯರ ಮೋಹಿಪಗೆ ಚಂದದ ಪೊಂಗೊಳಲೂದಿ ಗೋಪಿಯರ ಕಾಯ್ದ ಗೋಪಿ ಕಂದನಿಗೆ 4 ನಾಗರಾಜನ ಗಿರಿ ನಿಲಯನಿಗೆ ಯೋಗಿಗಳಿಗೆ ನಿಲುಕದ ಹರಿಗೆ ಸಾಗರನಿಲಯ ಗೋಪಾಲಕೃಷ್ಣವಿಠ್ಠಲ ಭೋಗಿಶಯನ ಲಕ್ಷ್ಮೀಪತಿಗೆ 5
--------------
ಅಂಬಾಬಾಯಿ
ಮಂಗಳ ಜಯ ಮಂಗಳ ಮಂಗಳ ಶ್ರೀ ನರಸಿಂಗ ಮೂರುತಿಗೆ ಪ ಅಂಗುಟಾಗ್ರದಿ ಗಂಗೆಯ ಪಡೆದ ಗಾತ್ರ ಶ್ರೀ ರಂಗನಿಗೆ ಅಂಗಜರಿಪು ಧನು ಭಂಗವ ಮಾಡಿ ಸೀ- ತಾಂಗನೆಯಳ ಕರಪಿಡಿದವಗೆ 1 ವರಮತ್ಸ್ಯಗೆ ಗಿರಿಧರ ಕ್ರೋಢಗೆ ತರುಳನ ರಕ್ಷಿಸಿ ಧರೆಯ ಬೇಡಿದಗೆ ಪರಶು ಧರಿಸಿದ ರಾಮಕೃಷ್ಣಗೆ ಧರಿಸದೆ ವಸನವ ತುರಗನೇರಿದಗೆ 2 ಕರಿವರ ಕರೆಯಲು ಭರದಿ ಬಂದವಗೆ ಸ್ಮರಿಪರ ಭಯ ಪರಿಹರಿಸುವ ದೇವಗೆ ಶರಣು ಜನಕೆ ಸುರತರುವೆಂದೆನಿಸಿದ ಸಿರಿ ಕಾರ್ಪರ ನರಹರಿ ರೂಪಗೆ 3
--------------
ಕಾರ್ಪರ ನರಹರಿದಾಸರು
ಮಂಗಳಂ ಜಯ ಮಂಗಳಂ ಲಿಂಗಾಕಾರದ ಪರಶಿವಗೆ ಪ ರಜತಾದ್ರಿಪುರದೊಳು ನಿಂದವಗೆ ಭಜಕರ ಸಲುಹಲು ಬಂದವಗೆ ನಿಜಸುರ ಸೇವಿತ ಗಜಚರ್ಮಾಂಬರ ತ್ರಿಜಗ ವಂದಿತನಾದ ಪರಶಿವಗೆ1 ಬಾಣನ ಬಾಗಿಲ ಕಾಯ್ದವಗೆ ತ್ರಾಣದಿ ತ್ರಿಪುರವ ಗೆಲಿದವಗೆ ಕಾಣದ ಅಸುರಗೆ ಪ್ರಾಣಲಿಂಗವನಿತ್ತು ಮಾಣದೆ ಭಕ್ತರ ಸಲುಹುವಗೆ 2 ಗಂಗೆಯ ಜಡೆಯೊಳು ಧರಿಸಿದಗೆ ಸಿಂಗಿಯ ಕೊರಳೊಳು ನುಂಗಿದಗೆ ತಿಂಗಳ ಸೂಡಿಯೆ ಅಂಗ ಭಸ್ಮಾಂಗದಿ ಕಂಗಳು ಮೂರುಳ್ಳ ಕೃಪಾಂಗನಿಗೆ 3 ಅಸ್ಥಿಯ ಮಾಲೆಯ ಧರಿಸಿದU É ಹಸ್ತದಿ ಶೂಲವ ಪಿಡಿದವಗೆ ವಿಸ್ತರವಾಗಿಯೆ ಭಸ್ಮಸುವಾಸಿಗೆ ಸತ್ಯದಿ ವರಗಳನಿತ್ತವಗೆ 4 ಅಂಬಿಕಪತಿಯೆಂದೆನಿಸಿದಗೆ ತ್ರಿ- ಯಂಬಕ ಮಂತ್ರದಿ ನೆಲೆಸಿದಗೆ ನಂಬಿದ ಸುರರಿಗೆ ಬೆಂಬಲವಾಗಿಯೆ ಇಂಬಾದ ಪದವಿಯ ತೋರ್ಪವಗೆ 5 ಪಂಚಾಕ್ಷರದೊಳು ಒಲಿದವಗೆ ಪಂಚಮ ಶಿರದೊಳು ಮೆರೆವವಗೆ ಪಾತಕ ಸಂಚಿತ ಕರ್ಮವ ವಂಚಿಸಿ ಭಕ್ತರ ವಾಂಛಿತವೀವಗೆ 6 ಪಾಶುಪತವ ನರಗಿತ್ತವಗೆ ಶೇಷಾಭರಣವ ಹೊತ್ತವಗೆ ಕಾಶಿಗಧಿಕವಾಗಿ ಕೈವಲ್ಯವಿತ್ತು ವಿ- ಶೇಷದಿ ಜನರನು ಸಲುಹುವಗೆ7 ಯಕ್ಷ ಸುರಾಸುರ ವಂದಿತಗೆ ದಕ್ಷನ ಮಖವನು ಕೆಡಿಸಿದಗೆ ಕುಕ್ಷಿಯೊಳೀರೇಳು ಜಗವನುದ್ಧರಿಸಿಯೆ ರಕ್ಷಿಸಿಕೊಂಬಂಥ ದೀಕ್ಷಿತಗೆ 8 ಕಾಮಿತ ಫಲಗಳ ಕೊಡುವವಗೆ ಪ್ರೇಮದಿ ಭಕ್ತರ ಸಲಹುವಗೆ ಭೂಮಿಗೆ ವರಾಹತಿಮ್ಮಪ್ಪನ ದಾಸರ ಸ್ವಾಮಿಯೆಂದೆನಿಸುವ ಈಶನಿಗೆ 9
--------------
ವರಹತಿಮ್ಮಪ್ಪ
ಮಂಗಳಂ ಜಯ ಮಂಗಳಂ ರಾಮ ಮುನಿಜನ ಸ್ತೋಮ ಮಂಗಳಂ ಲೋಕಾಭಿರಘುರಾಮ ಸದ್ಗುಣ ಸ್ತೋಮ ಪ ದಶರಥನ ವರಪುತ್ರ ನೀನಾಗಿ ಕೌಶಿಕನ ಯಜ್ಞದಿ ಅಸಮಸಾಹಸ ದೈತ್ಯರನು ಗೆಲಿದಿ ವಸುಧೆಯೊಳು ಗೌತಮನ ಸತಿಯಳನು ಉದ್ಧರಿಸಿ ತಾಟಕಿ ಹೊಸಪರಿಯ ದೈತ್ಯರನು ಸಂಹರಿಸಿ ಎಸೆವ ಮಿಥಿಲಾ ಪುರದಿ ಜಾನಕಿ ಬಿಸಜನೇತ್ರೆಯ ಕೈಪಿಡಿದು ರನ್ನ ಹೊಸ ಪರಿಯ ರಥದೊಳಗೆ ಪೊರಟು ಸತಿಸಹಿತ ಅಯೋಧ್ಯೆಯಲಿ ಮೆರೆದಗೆ1 ದಶರಥನು ಪುತ್ರಗೆ ಪಟ್ಟವನು ಕಟ್ಟುವೆನು ಎನಲು ದಶದಿಕ್ಕಿಗೆ ಪತ್ರವನು ಕಳುಹಿಸಲು ಎಸೆವ ಮಂಗಳ ವಾದ್ಯ ಕೇಳುತಲೆ ಕೈಕೇಯಿ ಬರಲು ಅಸದಳದವರ ಬೇಡಿ ಕಾಡಿಸಲು ವಸುಧೆಗೀಶನ ವನಕೆ ಕಳುಹಲು ಕುಶಲವಿಲ್ಲದೆ ಮರುಗೆ ದಶರಥ ಮಿಸುಣಿಮಣಿ ಸಿಂಹಾಸನ ತ್ಯಜಿ- ಸುತಲಿ ಪಿತೃ ವಾಕ್ಯವ ನಡೆಸಿದಗೆ 2 ಮಡದಿ ಸೀತಾ ಲಕ್ಷ್ಮಣರ ಕೂಡಿ ಬಿಡದೆ ದೈತ್ಯರನೆಲ್ಲ ಕಡಿದಾಡಿ ಒಡತಿ ಸೀತೆಗೆ ಉಂಗುರವ ನೀಡಿ ಹನುಮಂತ ಬರಲು ಕಡುಜವದಿ ಸಾಗರದಿ ಸೇತುವೆಯ ಮಾಡಿ ತಡೆಯದಲೆ ರಾವಣನ ಮೂಲವ ಕಡಿದು ಕಮಲನಾಭ ವಿಠ್ಠಲನು ಮಡದಿಸಹಿತಾಯೋಧ್ಯೆ ಪುರದಲಿ ಸಡಗರದಿ ಸಾಮ್ರಾಜ್ಯವಾಳ್ದಗೆ3
--------------
ನಿಡಗುರುಕಿ ಜೀವೂಬಾಯಿ
ಮಂಗಳಂ ಜಯ ಮಂಗಳಂ ರಾಮ ಸಜ್ಜನರ ಪ್ರೇಮ ಮಂಗಳಂ ಲೋಕಾಭಿರಘುರಾಮ ಪಟ್ಟಾಭಿರಾಮ ಪ ಮಂಗಳಂ ಶ್ರೀ ದಶರಥಾತ್ಮಜಗೆ ಮಂಗಳಂ ಅಯೋಧ್ಯವಾಸಿಗೆ ಮಂಗಳಂ ಜನಕಜಾಮಾತೆಗೆ ಮಂಗಳಂ ಶ್ರೀ ರಾಮಚಂದ್ರಗೆ ಅ.ಪ ದೇವದೇವೋತ್ತಮ ವೈಕುಂಠದೊಳಗೆ ಶ್ರೀ ಭೂಮೇರಿಂದ ಸೇವೆಗಳ ಕೈಗೊಳ್ಳುತ ಮಲಗಿರಲು ದೇವಋಷಿ ಬ್ರಹ್ಮೇಂದ್ರಾದಿಗಳು ಸಹಿತ ಶ್ರೀಧರನ ಸ್ತುತಿಸುತ ರಾವಣಾಸುರನುಪಟಳ ವರ್ಣಿಸಲು ಸಂತೈಸಿ ಅವರನು ಭೂಮಿಪತಿ ದಶರಥನ ಪ್ರೇಮ ಕುಮಾರನಾಗುದಿಸುತಲಯೋಧ್ಯದಿ ಪ್ರೇಮ ತೋರುತ ಮೆರೆದವಗೆ ಜಯ1 ದಶರಥನ ಸುತರಾಗಿ ಬೆಳೆಯುತಲಿ ಕೌಶಿಕನÀಯಜ್ಞವ ಕುಶಲದಲಿ ರಕ್ಷಿಸುತ ಹರುಷದಲಿ ಶಶಿಮುಖಿಯ ಕೂಡುತ ಕುಶಲದಲಿ ವನವಾಸ ಚರಿಸುತಲಿ ದಶಶಿರನು ಜಾನಕಿಯ ಕದಿಯಲು ಶಶಿಮುಖಿಯನರಸುತಲಿ ವನವನ ವಸುಧಿಪತಿ ಕಪಿಗಳ ಕಳುಹಿ ಸತಿ ಕುಶಲ ತಿಳಿಯುತ ನಲಿದವಗೆ ಜಯ 2 ಬಂದ ಕಪಿ ಕಟಕವನೆ ನೋಡುತ್ತ ಸಾಗರಕೆ ಸೇತುವೆ ಒಂದೇ ನಿಮಿಷದಿ ರಚಿಸಿ ಶೀಘ್ರದಲಿ ಮಂದಮತಿ ರಾಕ್ಷಸರ ವಧಿಸುತಲಿ ಅಂದಣವ ಕಳುಹಿ ಮಂದಗಮನೆಯ ಕರೆಸಿ ಬೇಗದಲಿ ಬಂದ ರಾಮನು ಎಂದು ಮಾರುತಿ ಮುಂದೆ ಭರತಗೆ ಕುಶಲ ತಿಳಿಸಲು ತಂದೆ ಕಮಲನಾಥ ವಿಠಲ ಮುಂದೆ ಪ್ರಜೆಗಳ ಪೊರೆದವಗೆ ಜಯ 3
--------------
ನಿಡಗುರುಕಿ ಜೀವೂಬಾಯಿ
ಮಂಗಳಂ ಜಯ ಮಂಗಳಂ ಶುಭಮಂಗಳೆನ್ನಿರೇ ಹಿಂಗದಂತರಂಗಲಿಪ್ಪಾ ನಂಗನಯ್ಯಗೆ ಪ ಹೆಣ್ಣ ಮಾಡಿತಮನ್ನ ವಿಕ್ರಮ ಹೆಣ್ಣವೆನಿಸಿ ಹೆಣ್ಣಿಗೊಲಿದು ಹೆಣ್ಣು ತೊ ಡಿಯೊಳಿನ್ನು ತಾಳಿ ಹೆಣ್ಣ ಮಡ ದಂಗೆ ಹೆಣ್ಣಿನಳಿದು ಹೆಣ್ಣೆ ನೆಬ್ಬಿಸಿ ಹೆಣ್ಣ ಹಲವರೊಡನೆ ಆಡಿದ ಹೆಣ್ಣ ವೃತಗೆಡಿಸಿ ಕುದುರೆ ಯಾರೋಹಣ ಗೈದಂಗೆ 1 ನಿಗಮ ತಂದು ನಗವನೆತ್ತಿ ಜಗವನುಳಹಿ ಮಗುವಿಗೊಲಿದು ತುಂಬಿ ಮಿಗಿಲ ಭೂಸುರಗಳ ಹೊರದಂಗೆ ಬಿಗಡಗೊಲಿಸಿದ ಸಗಟನೊತ್ತಿ ವಿಗಡ ಕಲ್ಕಿಗೆ 2 ಮತ್ಸ್ಯರೂಪದಿ ಕಚ್ಚಪಾಗಿ ಸ್ವಚ್ಛಕೋಡದಿ ಬೆಚ್ಚ ನರಹರಿ ಅಚ್ಚ ವಾಮನ ನಿಚ್ಛ ಕೊಡಲಿಯ ಮಚ್ಚು ಜನ ಕಂಗೆ ಇಚ್ಛ ನಡೆಸಿದ ಮೆಚ್ಚಿ ಗೋಕುಲ ಹುಚ್ಚು ಮಾಡಿದ ಬಾಲನೆನಿಸಿ ಸಚ್ಚರಿತ ಕಲಿನಾಶ ಮಹಿಪತಿ ನಂದ ನೊಡಿಯಂಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಂಗಳಂ ನರಶಿಂಗ ಮೂರುತಿಗೆ ಲಕ್ಷ್ಮೀಸಮೇತಗೆ ವಿಹಂಗ ವಾಹನಗೆ ಅಂಗಜನಪಿತಗೆ ಅಂಗುಟದಿ ಗಂಗೆಯನು ಪಡೆದವಗೆ ಮಾ ತಂಗವರದಗೆ ಪ ವಾರಿಜಾಸನ ಮುಖ್ಯಸುರನುತಗೆ ಉ- ದಾರ ಚರಿತಗೆ ಸೇರಿದವರಘದೂರ ಮಾಡುವಗೆ ಕಾರ್ಪರ ಋಷಿಗೆ ಘೋರ ತಪಸಿಗೆ ಒಲಿದು ಬಂದವಗೆ ಅಶ್ವತ್ಥ ರೂಪಗೆ 1 ಕುಕ್ಷಿಯೊಳು ಜಗವಿಟ್ಟು ರಕ್ಷಿಪಗೆ ಕರುಣಾಕ- ಟಾಕ್ಷಗೆ ವಕ್ಷದೊಳು ಶ್ರೀ ವತ್ಸಲಾಂಛನಗೆ ದ್ರೌಪದಿ ದೇವಿಗೆ ಅಕ್ಷಯಾಂಬರವಿತ್ತು ಸಲಹಿದಗೆ ಲಕ್ಷ್ಮೀನೃಸಿಂಹಗೆ 2 ಕೃಷ್ಣವೇಣಿ ತಟವಿರಾಜಿತಗೆ ಸೃಷ್ಟ್ಯಾದಿ ಕರ್ತಗೆ ಶ್ರೇಷ್ಠತರು ಪಿಪ್ಪಲದಿ ಪ್ರಕಟಿತಗೆ ದುಷ್ಟನಿಗ್ರಹಗೆ ದ್ಯಷ್ಟ ಬಾಹುಗಳಿಂದ ಭಜಕರಿಗೆ ಇಷ್ಟಾರ್ಥಗರಿವಗೆ 3 ಹಿಂದೆ ಗೋರೂಪದಲಿ ಬಂದವಗೆ ಬಹುಸುಂದರಾಂಗಗೆ ವಂದಿಸುವೆ ಶೀ ವೇಂಕಟೇಶನಿಗೆ ಮಂದರೋದ್ಧರಗೆ ಭವ ಬಂಧ ಬಿಡಿಸುವಗೆ ಆನಂದವೀವಗೆ 4 ತರುಳ ಪ್ರಹ್ಲಾದನ್ನ ಕಾಯ್ದವಗೆ ಸುರಸಾರ್ವಭೌಮಗೆ ಶರಣು ಜನ ಮಂದಾರನೆನಿಸುವಗೆ ಭೂಸುರರ ಪೊರಿವಗೆ ಧರಣಿಯೊಳು ಕಾರ್ಪರ ಸುಮಂದಿರಗೆ ಶಿರಿನಾರಶಿಂಹಗೆ 5
--------------
ಕಾರ್ಪರ ನರಹರಿದಾಸರು
ಮಂಗಳಂ ನರಹರಿಗೆ ಜಯ ಜಯ ಮಂಗಳ ಮುರಹರಗೆ ಪ ಮಂಗಳ ಮದನಗೋಪಾಲ ಶ್ರೀಕೃಷ್ಣಗೆ ಮಂಗಳ ಮಾಧವಗೆ ಅ.ಪ ವಸುದೇವ ಸುತನಾಗಿ ಗೋಕುಲದೊಳು ಮೊಸರು ಬೆಣ್ಣೆಯ ಕದ್ದು ಶಶಿಮುಖಿಯರ ಕೂಡಿ ನಿಶಿರಾತ್ರಿಯಲಿ ರಾಸ ಕ್ರೀಡೆಯಾಡಿದ ಹರಿಗೆ 1 ನಳಿನಮುಖಿಯರೆಲ್ಲ ನೀರೊಳಗಾಡಿ ಬಳಲಿ ಮೇಲಕೆ ಬರಲು ಲಲನೆಯರ ಕಂಡು ಪರಿಹಾಸ್ಯ ಮಾಡಿದ ಚೆಲುವ ಗೋಪಾಲಕೃಷ್ಣಗೆ2 ಬೆಟ್ಟವ ಬೆರಳಿನಲಿ ಎತ್ತಿದ ಭಕ್ತವತ್ಸಲ ಹರಿಗೆ ಮಿತ್ರೆಯರಿಗೆ ಮೊಸರು ಬುತ್ತಿಯ ಭುಕ್ತಿಯನೆವದಲಿ ಮುಕ್ತಿ ತೋರಿದ ದೊರೆಗೆ 3 ಪುಟ್ಟಬಾಲಕನಾಗಿ ಗೋವ್ಗಳನೆಲ್ಲ ಅಟ್ಟಿಯ ಮನೆಗೆ ಪೋಗಿ ದುಷ್ಟ ಕಾಳಿಂಗನ ಮೆಟ್ಟಿ ತುಳಿದ ಹರಿಗೆ ರತ್ನದಾರತಿ ಎತ್ತಿರೆ 4 ಕೊಂದು ಕಂಸನÀ ಬೇಗ ಮಧುರೆಲಿ ನಿಂತ ಮಹಾನುಭಾವಗೆ ತಂದೆ ಶ್ರೀ ಕಮಲನಾಭವಿಠ್ಠಲಗೆ ಕುಂದಣದಾರತಿಯ 5
--------------
ನಿಡಗುರುಕಿ ಜೀವೂಬಾಯಿ
ಮಂಗಳ ಪದ್ಯಗಳು ಜಯ ಜಯ ಶ್ರೀ ಮಹಾಕಾಳಿ ಗೋಕರ್ಣೆ ಮಹಾಬಲ ಪೂಣ್ಯವಧು ಭಯವಿರಹಿತ ಭವನಾಶಿನಿ ಸುಲಲಿತೆÀ ಭಕ್ತ ಜಿಹ್ವಾಗ್ರ ಮಧು ಪ ಪರಮೇಶ್ವರಿ ಪರಿಪೂರ್ಣಾಂಬಿಕ ನಿಜ ಪರಮಾನಂದ ಪರೇ ಪರತರವಸ್ತು ಪರಾತ್ಪರ ಶಾಂಭವಿ ಸುರಮುನಿ ಅಭಯಕರೇ ಜಯಜಯ 1 ವೀಣಾ ಪುಸ್ತಕಧಾರಿಣೆ ಅಗಣಿತ ಪಾನಪಾತ್ರಪ್ರಿಯೇ ವಾಣಿನಿತ್ಯಕಲ್ಯಾಣಿ ವಂದಿತಗುಣ ಶ್ರೇಣಿ ಮುನೀ ಸಾಹ್ಯೇ ಜಯಜಯ 2 ಹರಿಮೋಹಿನಿ ಹರಿವಾಹಿನಿ ಗಿರಿಸುತೆ ಹರಿಣಾಂಕಿಣಿ ಭವ್ಯಮುಖೆ ಹರಿಸಖ ಪ್ರಾಣಸಖೇ ಜಯಜಯ 3 ಸರ್ವಗುಣನಿಲಯೇ ಸರ್ವಾತ್ಮಕಿ ಸರ್ವಯಂತ್ರರೂಪೇ ಶರ್ವಾಣೆ ಸರ್ವೇಶ್ವರಿ ಸದಾಶಿವೇ ಸರ್ವ ಮಂತ್ರರೂಪೇ ಜಯಜಯ 4 ಮೂಲಾಧಾರೇ ಮುಕುಂದಾರ್ಚಿತ ಪದ ಬಾಲಾ ತ್ರಿಪುರಹರೇ ಮಾಲಿನಿ ಮಂತ್ರಾತ್ಮಕಿ ಮಹಾದೇವಿ ತ್ರಿ ಶೂಲಿನಿ ಶಶಿಶಿಖರೇ ಜಯಜಯ 5 ನಿತ್ಯಾರ್ಚನಿ ಸುಖಭೋಗಿನಿ ಸುಲಲಿತೇ ನಿತ್ಯಾನಂದಮಯೇ ನಿತ್ಯಾನಿತ್ಯ ಸ್ವರೂಪಿಣಿ ನಿರ್ಗುಣೆ ಸತ್ಯ ಸಾಧು ಹೃದಯೇ ಜಯಜಯ 6 ಶಂಭಾಸುರಮಹಿಷಾ ಸುರಮೇಕ್ಷಕ ದಂ¨ ಮುಕುಟಧರೇ ಅಂಬಾ ಶ್ರಿ ಮಹಾಕಾಳಿ ವಿಮಲಾನಂದ ಸುಖ ಶರೀರೇ ಜಯ ಜಯ 7 ಇತಿ ಶ್ರೀ ಮಹಾಕಾಳ್ಯಷ್ಟಕ ಸ್ತೋತ್ರಂ ತ್ರಿಕಾಲಪಠತೆ ನಿತ್ಯಂ ನಿತ್ಯಂ ನತಿಸುತಧನ ಪೌತ್ರಾದಿ ಕೃತಾರ್ಥಂ ಭವತಿ ಸತ್ಯಂ ಸತ್ಯಂ ಜಯಜಯ 8
--------------
ಭಟಕಳ ಅಪ್ಪಯ್ಯ
ಮಂಗಳ ಪದ್ಯಗಳು ಜಯತು ಕರಿಕಾನೇಶ್ವರಿ ಜಯತು ನೀಲ್ಕೋಡೇಶ್ವರಿ ಪ ಜಯತು ಪರಮೇಶ್ವರಿ ಜಯತು ಶ್ರೀ ಮಹೇಶ್ವರಿ ಜಯತು ಶ್ರೀ ಭುವನೇಶ್ವರಿ ಜಯತು ಶ್ರೀ ವಜ್ರೇಶ್ವರಿ 1 ಜಯತು ಶ್ರೀ ಕಮಲಾಕ್ಷಿದೇವಿ ಜಯತು ಶ್ರೀ ಮಹಾಲಕ್ಷಿದೇವಿ ಜಯತು ಶ್ರೀ ಗಾಯಿತ್ರಿ ದೇವಿ ಜಯತು ತ್ರೈಪುರ ಭೈರವಿ 2 ಜಯತು ತಾರಾ ಕಾಳಿದೇವಿ ಜಯತು ಶ್ರೀ ಮಹಾಕಾಳಿದೇವಿ ಜಯತು ಛಿನ್ನಮಸ್ತದೇವಿ ಜಯತು ಶ್ರೀ ಮಾತಂಗಿದೇವಿ 3 ಜಯತು ಷೋಡಶಿ ಶಕ್ತಿದೇವಿ ಜಯತು ಬಹುಚರಾ ಶಾಂಭವಿ ಜಯತು ಪೀತಾಂಬರ ಸುದೇವಿ ಜಯತು ಮಹಾಮಾಯಿ ದೇವಿ 4 ಜಯತು ಶ್ರೀ ಲಲಿತಾಂಬಿಕಾ ಜಯತು ಶ್ರೀ ದುರ್ಗಾಂಬಿಕಾ ಜಯತು ಶ್ರೀ ಮೂಕಾಂಬಿಕಾ ಜಯತು ಶ್ರೀ ಜಗದಾಂಬಿಕಾ 5 ಜಯತು ಶ್ರೀ ಧೂಮಾವತಿ ಜಯತು ಮಹಾಸರಸ್ವತಿ ನಿತ್ಯ ಕಲಾವತಿ ಜಯತು ಮಾತಾ ಪಾರ್ವತಿ 6
--------------
ಕರ್ಕಿ ಕೇಶವದಾಸ