ಒಟ್ಟು 1076 ಕಡೆಗಳಲ್ಲಿ , 109 ದಾಸರು , 890 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೀ ಪಸುಳೆಯನು ಪರಮ ಪುರುಷ ಪ. ಬಾಲೆ ನಿನ್ನವಳೆಂದು ಶ್ರೀ ಕರಿಗಿರೀಶ ಅ.ಪ. ನರಹರಿಯೆ ಲಕ್ಷೀಶ ತರಳೆ ನಿನ್ನವಳಿನ್ನು ತ್ವರಿತದಲಿ ಕಾಪಾಡು ತಡಮಾಡದೆ ಕರಕರೆಯ ರೋಗ ಬಾಧೆಯ ಬಿಡಿಸಿ ಹರಿ ನಿನ್ನ ಕರುಣಾಮೃತವಗರೆದು ಕಡುಕೃಪೆಯೊಳಿನ್ನು 1 ಫಣಿರಾಜಶಯನ ಪರ್ಯಂಕ ದೇವರದೇವ ಬಿನಗು ದೇವರ ಗಂಡ ಎಣೆಯುಂಟೆ ನಿನಗೆ ಮಣಿಯದಾಗ್ರಹದೇವಗಣ ಉಂಟೆ ನಿನಗಿನ್ನು ಕ್ಷಣ ಬಿಡದೆ ಸರ್ವಬಾಧೆಯ ಬಿಡಿಸಿ ಸತತ 2 ಪ್ರಾಣದೇವನೆ ಸರ್ವ ದೇವತೆಗಳಧಿನಾಥ ಪ್ರಾಣದೇವನು ನಿನ್ನ ಪ್ರಾಣ ಪದಕ ಪ್ರಾಣದೇವಗೆ ಪೇಳಿ ಪ್ರಾಣ ಭಯವನೆ ಬಿಡಿಸಿ ಪ್ರಾಣಸೂತ್ರವ ನಡಿಸಿ ತ್ರಾಣಗೆಡದಂತೆ 3 ನಿನ್ನ ದಾಸರ ದಾಸಳಿವಳು ಶ್ರೀಹರಿ ಕೇಳು ಎನ್ನ ಬಿನ್ನಪವ ನೀ ಬರಿದೆನಿಸದೆ ಚನ್ನಾಗಿ ಆಯುರಾರೋಗ್ಯ ಸಂಪದವಿತ್ತು ಮನ್ನಿಸಿ ಕಾಪಾಡು ಮಂಗಳಾತ್ಮಕನೆ 4 ಗುರುಕರುಣ ವರಬಲದಿ ಪುಟ್ಟಿದಾ ಶಿಶು ಇವಳು ಪರಮ ಮಂಗಳೆ ಎನಿಸಿ ಪಾಲಿಸೈ ಜಗದಿ ನಿರುತದಲಿ ನಿನ್ನ ಪದಭಕ್ತಿ ಜ್ಞಾನವ ಕೊಟ್ಟು ಹರಸಿ ಪೊರೆ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ಪಾಲಿಸು ಪರಮಾತ್ಮನೆ ಪಾವನ ಗುಣ- ಶೀಲ ಸದ್ಗುಣಧಾಮನೆ ಪ ಶ್ರೀಲಕುಮಿಯ ಪ್ರಿಯ ಶ್ರೀಶಸರ್ವೋತ್ತಮ ವಾಸವವಂದಿತ ವಾಸುದೇವನೆ ಹರಿ ಅ.ಪ ಕೇಶವ ನಾರಾಯಣ ಮಾಧವ ಗೋವಿಂದ ವಿಷ್ಣುವೆ ನಮಿಪೆ ಮಧುಸೂದನ ತ್ರಿವಿಕ್ರಮ ವಾಮನ ಶ್ರೀಧರ ಹೃಷಿಕೇಶ ಪದ್ಮನಾಭನೆ ಪೊರೆ ದಾರಿ ಕಾಣೆ ದಾಮೋದರ ಸಂ_ ವಾಸುದೇವ ಪ್ರದ್ಯುಮ್ನನನಿ- ರುದ್ಧ ಪುರುಷೋತ್ತಮ ಅಧೋಕ್ಷಜ ನಾರಾಸಿಂಹ ಅಚ್ಚುತ ಜನಾರ್ದನ ಉ- ಪೇಂದ್ರ ಹರಿ ಶ್ರೀ ಕೃಷ್ಣ ಶೌರಿ1 ವಾರಿ ವಿಹಾರದಲಿ ಬೆನ್ನಿಲಿ ಗಿರಿ ಭಾರವನ್ನೆ ತಾಳಿ ಕೋರೆ ತೋರುತ ಕರುಳ್ಹಾರವ ಮಾಡಿದ ಮೂರಡಿ ಭೂಮಿಯ ಬೇಡಿ ಭೂಪಾಲನ ಕಾಡಿ ಕೆಡಹುತ ಕೂಡಿ ಕಪಿಗಳ ಬೇಡಿ ಪಾಲ್ಮೊಸರ್ಬೆಣ್ಣೆ ಬುದ್ಧನೀ- ನಾಗಿ ಖಡ್ಗವಧರಿಸಿ ಕುದುರೆಯ- ನೇರಿ ಮೆರೆಯುವ ಶ್ರೀ ರಮಾಪತೆ 2 ಶಾಂತೀಶ ಅನಿರುದ್ಧನೆ ಶರಣೆಂಬೆ ನಿನ್ನ ಕೃತಿಪತಿ ಪ್ರದ್ಯುಮ್ನನೆ ಜಗದೀಶ ಜಯಾಪತಿ ಜಯ ಸಂಕರ್ಷಣ ದೇವ ನಮಿಪೆ ಮಾಯಾಪತಿ ವಾಸುದೇವನೆ ನಿನ್ನ ಪಂಕಜ ತೋರು ಲಕ್ಷ್ಮೀ- ರಮಣ ನಾರಾಯಣ ನಮೋ ಗರಡು ಗಮನನೆ ಕಮಲನಾಭ ವಿ-ಠ್ಠಲನೆ ಶ್ರೀಹರಿ ಪರಮ ಕರುಣಿಯೆ 3
--------------
ನಿಡಗುರುಕಿ ಜೀವೂಬಾಯಿ
ಪಾಲಿಸು ಶ್ರೀಶನೆ ಪರಮ ಪವಿತ್ರನೆ ಪಾವನ್ನ ಚರಿತನೆ ಪಾಲಿಸೆನ್ನ ಪ ಕಾಲಕಾಲಕೆ ನಿನ್ನ ಮಹಿಮೆಯ ತೋರಿಸಲಹುದು ಸರ್ವವ್ಯಾಪಕ ಮಾಯಾದೇವಿಯರಮಣ ಶ್ರೀಪತೆ ಕಾಯೊ ಶ್ರೀಹರಿವಾಸುದೇವನೆಅ.ಪ ವಾಸುದೇವನೆ ನಿನ್ನ ಸೋಸಿಲಿ ಭಜಿಪರ ಕ್ಲೇಶಗಳ್ಹರಿಸಿ ಸಂತೋಷವಿತ್ತು ದೋಷದೂರನ ನಾಮ ಆಸೆಯಿಂದ ಭಜಿಪರಸಂಗವನೂ ನೀಡೆನುತ ಬಿನ್ನೈಸುವೆನೂ ಎನ್ನೊಡೆಯ ನೀನೆಂದೆನುತ ಅಡಿಗಳಿಗೆರಗುವೆನೂ ಧೃಡಭಕುತಿ ನಿನ್ನೊಳಗಿರಿಸಿ ರಕ್ಷಿಪುದೆಂದು ಬೇಡುವೆನೂ ನುಡಿನುಡಿಗೆ ನಿನ್ನಯ ನುಡಿಗಳನು ನುಡಿವಂಥ ಭಕ್ತರ ಅಡಿಗಳಾಶ್ರಯ ಕೊಟ್ಟು ಕಾಯ್ವುದು ಬಡವನೆನ್ನಲಿ ಬೇಡ ಎನ್ನನು ಬಡವರಾಧಾರಿ ಶ್ರೀಹರಿ 1 ಶಂಖು ಚಕ್ರವು ಪದ್ಮಗದೆಯು ಹೊಳೆಹೊಳೆಯುತ್ತ ಬಿಂಕದಿಂದಲಿ ನಿಂತು ನೋಡುತಲಿ ಮಂಕುಮತಿಗಳನ್ನು ಶಂಕೆಯೊಳಗೆ ತಳ್ಳಿನೋಡುತ್ತ ನಿನ್ನಯ ಸದ್ಭಕ್ತರ ಶಂಕೆಗಳೆಲ್ಲವನು ಕ್ಷಿಪ್ರದಿ ಕಳೆಯುತ್ತ ಶ್ರೀಹರಿ ನಿನ್ನ ಪಾದ ಪಂಕಜಗಳೆ ಚಿಂತಿಸುವರಿಗೆ ಹರುಷ ನೀಡುತ್ತ ವೈರಿ ನಿನ್ನಯ ವಿಧವಿಧದ ಲೀಲೆಗಳ ತೋರುತ್ತ ಉದಯ ಭಾಸ್ಕರನಂತೆ ಪೊಳೆಯುತ್ತ ಮುದದಿ ಸಿರದಿ ಕಿರೀಟ ಹೊಳೆಯುತ್ತ ಸದಮಲಾತ್ಮಕ ಸತ್ಯಮೂರುತಿ2 ಹೃದ್ಗೋಚರನಾಗು ಪದ್ಮಾನಾಭ ಉದ್ಧರಿಸೆನ್ನನು ಉದ್ಧವಸಖನೆಂದು ನಂಬಿರುವೆ ಮನ್ಮನದ ಭಯಗಳವದ್ದು ಬಿಸುಡುತ ಸಲಹೊ ನರಹರಿಯೆ ಮಮಸ್ವಾಮಿ ನಿನ್ನಯ ಪದ್ಮ- ಪಾದಕೆ ನಮಿಪೆ ಶ್ರೀಹರಿಯೆ ಮೋಹಕ ಬಂಧವ ಬಿಡಿಸಿರಕ್ಷಿಸುತೆನ್ನ ಸಲಹು ಮಾಯಾಪತಿಯೆ ಬಹು ವಿಧದಿ ಪ್ರಾರ್ಥಿಪೆ ತೋಯಜಾಕ್ಷನೆ ತೋರು ನಿನ್ನಯ ಚಾರು ಚರಣಕೆ ಬಾಗಿ ನಮಿಸುವೆ ಕಾಯ್ವುದೆನ್ನನು ಕಮಲನಾಭವಿಠ್ಠಲನೆ ಶ್ರೀಹರಿ ವಾಸುದೇವನೆ 3
--------------
ನಿಡಗುರುಕಿ ಜೀವೂಬಾಯಿ
ಪಾಲಿಸೆನ್ನ ಪಾರ್ವತೀಶ ಫಾಲಲೋಚನ ಲಾಲಿಸೆನ್ನ ನುತಿಯ ದೇವ ಕಾಲಕಂಧರ ಪ ಪುಲ್ಲನಯನ ಚಲ್ವವದನ ಮಲ್ಲಿಕಾರ್ಚಿತ ಬಿಲ್ವ ಪಲ್ಲವಾದಿಪ್ರಿಯನೆ ಶೈಲಜಾಪತೆ 1 ವಿನುತ ಪಂಕಜಪ್ರಿಯ ಸಂಕಟಾದ್ರಿ ದೇವರಾಜ ಲೋಕಪಾಲಕ 2 ಪಾಹಿ ಪಾಹಿ ಕಾಲಕಾಲ ಮೋಹನಾಶಕ ಸ್ನೇಹದಿಂದಲೆನ್ನ ಬಿಡದೆ ವಾಮದೇವನೆ 3 ಧಾನವಾಂತಕಾದಿ ಹೃದಯ ಜೀವ ರೂಪನೆ ಕಮಲ ಭಾನುರೂಪನೆ 4
--------------
ಬೇಟೆರಾಯ ದೀಕ್ಷಿತರು
ಪಾಲಿಸೆನ್ನನು ದೇವಾ ಪರಮ ಪುರುಷಾ ಶ್ವೇತ ವರಹಾ ಪ ಸ್ವಾಯಿಚ್ಛೆಯಲಿ ಬಂದು ಮೆರೆದು ಮಹಾಕೀರ್ತಿಯನು ಪಯೋನಿಧಿಸುತೆಯಿಂದ ತುತಿಸಿಕೊಳ್ಳುತಾ ಜಯಜಯದೇವನಾಶ್ರಯ ಕಾಮಧೇನು ನೀ ದಯಮಾಡಿ ನೋಡುವದು ದಾಸ ನೆನೆಸುವದು 1 ಪರಾಕು ಬೊಮ್ಮಾಂಡವನು ಹೊತ್ತು ನಸುನಗು ನಾಗಾರಿಗಮನಾ ಮಣಿ ಮಯದಾಭರಣದಿಂದೆಸೆವ ದೇ ವೋತ್ತಮನೆ ದಾನವರ ಬಲವಳಿದಾ ಧೈರ್ಯ 2 ನಿತ್ಯ ಪುಷ್ಕರಣಿಯಲಿ ನಿರುತ ಪೂಜೆಯಗೊಂಡು ಪ್ರತ್ಯಕ್ಷವಾಗಿ ವರಗಳನೀವುತ ಸಿರಿ ವಿಜಯವಿಠ್ಠಲ ವರಹ ಭೃತ್ಯನೆನೆಸಿ ನಿನ್ನ ಸ್ತೋತ್ಯದೊಳಗಿಡು ದೇವಾ3
--------------
ವಿಜಯದಾಸ
ಪಾಲಿಸೋ ಪರಿಪಾಲಿಸೋ ಪ ಪಾಲಿಸೋ ನೀ ಕಾಲನಾಮಕ-ಶ್ರೀಲೋಲ ಕಾಲಕರ್ಮದಲೆನ್ನಕರುಣಿಸಿ ನೀನೀಗ ಅ.ಪ ದುಷ್ಟಜನರ ಸಂಹಾರಕ-ಸರ್ವ ಶಿಷ್ಟಜನರ ಪರಿಪಾಲಕ-ದೇವ ಸೃಷ್ಟ್ಯಾದ್ಯಷ್ಟಕರ್ತುಕ-ತ್ವದ್ಭಕ್ತರಾ- ಭೀಷ್ಟದಾಯಕಾ 1 ಜಗದ್ಭರಿತ ಜಗದಂತರ್ಯಾಮಿ-ಸರ್ವ ಜಗದಾದ್ಯಂತ ಭಿನ್ನನೇಮಿ-ನೀನೆ ಸ್ವಗತಭೇದಶೂನ್ಯಮಹಿಮಾ ಇನ್ನು ಜಗದ್ಭುಕು ಮಮಕುಲಸ್ವಾಮಿ 2 ಪರಮೇಷ್ಟಿಭವಇಂದ್ರವಂದಿತ-ಕ್ಷರಾ- ಕ್ಷರ ಪುರುಷ ಪೂಜಿತ-ಪಾದ ನಿರವಧಿಕಗುಣಗಣಾನ್ವಿತ ನೀನೆ ಜರಾಮರಣನಾಶ ವರ್ಜಿತ 3 ಮುಕ್ತಾಮುಕ್ತಾಶ್ರಯದೇವನೆ-ಸರ್ವ ಭಕ್ತಮುಕ್ತಿಪ್ರದಾತನೆ-ವ್ಯಕ್ತಾ ವ್ಯಕ್ತಪುರುಷದೇವನೆ ಪುರುಷ- ಸೂಕ್ತಸುಮೇಯ ಅಪ್ರಮೇಯನೆ 4 ಸ್ವರವರ್ಣ ಶಬ್ದವಾಚ್ಯನೆ-ದೇವ ಸುರಾಸುರಾರ್ಚಿತ ಪಾದನೆ ಓಂ- ಕಾರ ಪ್ರಣವ ಪ್ರತಿಪಾದ್ಯನೆ ನಿತ್ಯ ನಿಖಿಳಾಗಮದೊಳು ಸಂಚಾರನೆ5 ಅಚಿಂತ್ಯಾನಂತರೂಪಾತ್ಮಕ-ನಿನ್ನ ಭಜಕರ ಭವಬಂಧ ಮೋಚಕ-ಸರ್ವ ಅಬುಜಾಂಡ ಕೋಟಿನಾಯಕ ನೀನೆ ಜಗದಾದ್ಯಂತ ವ್ಯಾಪಕ6 ವೇದ ವೇದಾಂತ ವೇದ್ಯನೆ-ನೀನೆ ಆದಿಮಧ್ಯಾಂತದೊಳ್ ಖ್ಯಾತನೆ ಗುರು ಮೋದತೀರ್ಥರ ಹೃತ್ಕಾಂತನೆ ಶ್ರೀ ವೇಂಕಟೇಶ ಉರಗಾದ್ರಿವಾಸವಿಠಲನೆ 7
--------------
ಉರಗಾದ್ರಿವಾಸವಿಠಲದಾಸರು
ಪಾಲಿಸೋ ಮಗುವ ನೀ | ಪಾಲಿಸೋ ಪ ಪತಿ ಸಖ | ಕಾಲಿಗೆ ಬೀಳುವೆ ಅ.ಪ. ಬನ್ನ ಬಡಿಸ ಬೇಡ 1 ನಿನ್ನ ಪ್ರಾರ್ಥನೆ ಬಿಟ್ಟು | ಅನ್ಯ ಗತಿಯ ಕಾಣೆಪನ್ನಗ ನಗಪತಿ ಆ | ಪನ್ನ ಪರಿಪಾಲ 2 ಭಯ ಕೃದ್ಭಯ ನಾಶ | ದಯೆ ಪರಿಪೂರ್ಣ ನಿಭಯವ ನೀನಿತ್ತೀಗ ಅ | ಭಯವ ಪಾಲಿಸೋ 3 ಪಾದ್ಯ 4 ಮೊರೆಯನಿಡುವ ತಾಯ | ಮೊರೆಯ ಕೇಳಿಸದೇನೊತ್ವರಿತದಿ ಕಾಯೊ ಶ್ರೀ | ಕರಿರಾಜ ವರದಾ 5 ವತ್ಸನ ಕರೆ ತಂದು ಉತ್ಸಾಹ ಕೊಡು ಭೃತ್ಯವತ್ಸಲನುಬಂಧ | ಬಿರಿದುಳ್ಳ ದೇವನೇ 6 ಭಾರ ನಿನ್ನದೊ ಹರಿನಾರಸಿಂಹನೆ ಗುರು | ಗೋವಿಂದ ವಿಠ್ಠಲ 7
--------------
ಗುರುಗೋವಿಂದವಿಠಲರು
ಪಾಲಿಸೋ ಸದಾ ಪರಿಪಾಲಿಸೋ ಪಾಲಿಸೋ ಪಾರ್ವತಿ ರಮಣ | ತ್ರಿದ ನಾಲಿಗೆಯಿಂದಲಿ | ಶ್ರೀಲಕುಮೀಶನ ಕಾಲ ಕಾಲಕ್ಕೆ ಕೊಟ್ಟು ಅ.ಪ ಭೇಷಪಾವಕ ಪತಂಗ | ನಯನ ಭಾಸುರ ಸ್ಪಟಿಕ ನಿಭಾಂಗ | ಹರಿ ದಾಸ ಜನರ ಸುಸಂಗವಿತ್ತು ದೋಷ ಕಳೆಯೊ ರಾಮಲಿಂಗ ಆಹಾ 1 ಕೇರ ಕುಮಾರ ಕುಮಾರ | ಪಿತ ಕೀರನಾಮಕನವತಾರ |ಕೀರಾ ದೇವನ ಗರ್ವಪರಿಹಾರ | ತಾಟ ಕಾರಿನಾಮ ಸವಿಗಾರ | ಆಹಾ ಶರಧಿ ವೈಕಾರಿಕÀ | ತತ್ವಾಧಿ ಕಾರಿ ವಿಕಾರಿ ಷಕಾರ ಪದಾರ್ಚಕ 2 ನಂದಿವಾಹನ ನಾಗಶರನೆ | ನೀಲ ಸುರನದಿ ಧರನೆ | ಶಾಮ ಸುಂದರ ವಿಠಲನ ಸಖನೆ ಮಹಿ ಶ್ಯಂದನ ಶಿವಶಂಕರನೆ | ಆಹಾ ಒಂದೂರಾರ್ಯರ ಕರದಿಂದ ಪೂಜಿತನಾಗಿ ನಿಂದು ಭಜಿಪರಿಗಾನಂದವೀವ ದೇವ 3
--------------
ಶಾಮಸುಂದರ ವಿಠಲ
ಪಾವನ ಮಹಿಮನೇ ದೇವಾಧಿದೇವನೇ ಪ ವರಲಕುಮಿ ಕರಕಮಲಪೂಜಿತ ನಮಿಪೆ ನೀರಜಾಕ್ಷ ಮಂಗಳವನು ಕೊಡು ದೇವಾ ಅ.ಪ. ಸೃಷ್ಟಿಸ್ಥಿತಿ ಕಾರಣಕರ್ತಾ ಮುಕ್ತಿಪ್ರದ ಹನುಮೇಶವಿಠಲವರ 1
--------------
ಹನುಮೇಶವಿಠಲ
ಪಾಷಾಣವಲ್ಲವದು ಭೂಷಣವು ಕರಕೆ ದೋಷವಾ ದೂರಿಪುದು ತೋಷ ಜನಿಪುದು ಮನಕೆ ಪ ದಾಸಳುದಕದಿ ಜನಿಸಿ ಶ್ರೀಶನಂಕಿತ ವಹಿಸಿ ವಾಸುದೇವನ ಭಜಕರೆದೆ ಪಿರಿದು ಎನಿಸಿ ದಾಸಜನರಿದನು ನಿತ್ಯದಿ ಪಾಡಿ ಪೂಜಿಸಲು ಘಾಸಿಯಕ್ಷಯ ಲೋಕಪಥವ ಸಲೆ ಕರುಣಿಪುದು 1 ಶ್ರೀದೇವಿ ವಲ್ಲಭನು ಭೂದೇವಿ ರಮಣನು ಸಾಧುಗಳ ಪ್ರಿಯ ಶ್ರೀಗಿರಿನಿಲಯನು ಮೋದದಲಿ ಶಕ್ತ ಮೌಕ್ತಿಕ ಸ್ವರ್ಣಸರಿಯಲ್ಲ ಭೇದ ತೋರಲು ದೃಶನ್ಮಾಯಯಂತಿಹ ಸ್ವಾಮಿ 2 ಭಕ್ತರೊಳು ನಿಜದಾಸ ಯುಕ್ತ ಚಂದ್ರಹಾಸ ವಕ್ತøದೊಳ್ಗೊಳಸಿಹನು ನರಸಿಂಹದಾಸ ಮುಕ್ತಿಪಂಥ ಕಂಡನವ ಸಂದೇಹ ಬೇಡಿದಕೆ ಶಕ್ತ ನರಸಿಂಹವಿಠ್ಠಲ ಸಾಲಿಗ್ರಾಮವು 3
--------------
ನರಸಿಂಹವಿಠಲರು
ಪಾಹಿಮಾಂ ಜಗದೀಶ ಭಕ್ತವಿಲಾಸ ಶ್ರೀ ಶ್ರೀನಿವಾಸನೆ ಹೇಳಲೊಶವಲ್ಲ ದೇವನೆ ಪ ಚಂಡಶಾಸಕ ಬಿರುದುವುಳ್ಳ ಪ್ರಚಂಡ ದೇವೋತ್ತುಂಗನೆ ಮದನ ಜನಕ ಕೋದಂಡಧರ ಶ್ರೀರಾಮನೆ 1 ವಿಕಟದಾನವ ಮೂಲ ಚ್ಛೇದನ ವಿಶ್ವರೂಪ ವಿನೋದನೆ 2 ಅಮಿತ ಮಹಿಮಾನಂದ ಹರನುತ ಕಮಲಸಂಭವ ನಯ್ಯನೆ ಸುಮನರಾದ ಸುಜನರಾ ಹೃದಯ ಕಮಲದಲಿ ನೀ ವಾಸನೆ 3 ಮಂಗಳಾಂಗ ವಿಹಂಗವಾಹನ ಮಾರಕೋಟಿ ಲಾವಣ್ಯನೆ ಅಂಗನಾಮಣಿ ಲಕುಮಿಪುರದಲಿ ಅಡಗಿಸಿಪ್ಪ ಶ್ರೀ ಲೋಲನೆ 4 ಶೌರಿ ಮಹಾಗುಣ ಶಾಂತನೆ ಕರುಣೆಸೆನ್ನನು ಕಾಯೊ ಬೇಗನೆ ವರದ `ಹೆನ್ನ ವಿಠ್ಠಲನೆ' 5
--------------
ಹೆನ್ನೆರಂಗದಾಸರು
ಪೀಠಕೀಗ ಬಾರೊ ದೇವನೆ ಆದ ಪಾಠ ಸಾಕೊ ಕೃಷ್ಣನೆ ಪ. ಮುತ್ತಿನಾಭರಣವ ತೊಡಿಸುವೆನು ಕಸ್ತೂರಿ ತಿಲಕವ ತಿದ್ದುವೆನೊ ಕೃಷ್ಣ ಮಸ್ತಕದರಳೆಲೆ ಮಾಗಾಯಿ ಪೊಳೆಯುತ ಕಸ್ತೂರಿ ರಂಗ ಬಾರೊ 1 ಕಂಗಳಿಗೆ ಕಪ್ಪು ಹಚ್ಚುವೆನೊ ರÀಂಗಗೆ ಪೀತಾಂಬರುಡಿಸುವೆನೊ ಮಂಗಳಾಂಗಗೆ ನಾ ಶೃಂಗಾರ ಮಾಡಿ ಕಂಗಳಿಂ ನೋಡುವೆನೊ 2 ಕಾಲಲಂದಿಗೆ ಗೆಜ್ಜೆ ಫಳಿರೆನುತ ನೀಲಮೇಘ ಶ್ಯಾಮ ಶ್ರೀ ಶ್ರೀನಿವಾಸ ಬಾಲ ಗೋಪಾಲ ಸುಶೀಲ ಮುರಳಿಧರ ರಮಾಲೋಲ ಶ್ರೀ ಕೃಷ್ಣ ಬಾರೋ3
--------------
ಸರಸ್ವತಿ ಬಾಯಿ
ಪೀಠಸಮರ್ಪಣೆಕಂ|| ಮಾನಸ ಪೂಜೆಯ ವಿರಚಿಸಿಶ್ರೀನಿಲಯನ ಚರಣಗಳಿಗೆ ಪಾವುಗೆಗಳ ನಾಂಆನತನಾಗುತಲೊಪ್ಪಿಸಿಭಾನುವಿನ ಪಥದಲಿಳುಹಿ ಬಿಂಬದಿ ಭಜಿಪೆಂಬಂದೀ ಪೀಠದಿ ನೆಲಸೊ ಹೃÀದಯಮಂದಿರದಿಂದಾ ಕರುಣದಿಂ ವೆಂಕಟರಾಯಾ ಪಪುರದೊಳು ವಿಮಲೆಯುತ್ಕುರುಷಣಿಯಗ್ನಿ ಯೊಳಿರುವಳು ಜ್ಞಾನೆ ದಕ್ಷಿಣದೇಶದಿನಿರುರುತಿಯೊಳು ಕ್ರಿಯೆ ವರುಣನೊಳ್ಯೋಗಾಖ್ಯೆಮರುತನೊಳ್ಪ್ರಹ್ವಿ ಸೋಮನೊಳ್ ಸತ್ಯೆುಹಳಾಗಿ 1ಈಶನೊಳೀಶಾನೆ ಮಧ್ಯದೊಳನುಗ್ರಹೋಪಾಸಿಕೆಯಾದಿಯಾಗಿರುತಿಹರುವಾಸುದೇವನೆ ನಮ್ಮನೊಲಿದು ರಕ್ಷಿಸುವರೆಸಾಸಿರ ನಾಮಸನ್ನುತನೆ ಸಂತಸದಿಂದ 2ಅನಲನೊಳ್ ಧರ್ಮ ನಿರುರುತಿಯೊಳ್ ಜ್ಞಾನವುತನುಗೊಂಡು ವೈರಾಗ್ಯ ಮರುತನೊಳುವಿನಯದಿಂದೈಶ್ವರ್ಯನೀಶದೇಶದಿ ಸೇವೆಗನುಕೂಲರಾಗಿ ಕಾದಿರುವರೆನ್ನೊಡೆಯನೆ 3ಮುಂದೆಯಧರ್ಮ ದಕ್ಷಿಣದೊಳಜ್ಞಾನವುಹಿಂದೆಡೆಯೊಳಗವೈರಾಗ್ಯ ತಾನುಇಂದುದೇಶದೊಳನೈಶ್ವರ್ಯನೊಂದಿರುವನುಇಂದೆಮ್ಮನೊಲಿದು ರಕ್ಷಿಸಲು ಗೋವಿಂದನೆ 4ಕಲಶದೊಳ್ ಗಂಗಾದಿ ನದಿಗಳು ಶಂಖದಜಲದೊಳು ಬ್ರಹ್ಮಾದಿಗಳ ತೀರ್ಥಸಂಘವುಒಲಿದಘ್ರ್ಯ ಪಾದ್ಯಾಚಮನ ಸ್ನಾನ ಶುದ್ಧಾಂಬುಗಳ ಪಂಚಪಾತ್ರೆಗಳೊಳು ನೆಲಸಿವೆ ಸ್ವಾಮಿ 5ಪುರುಷಸೂಕ್ತದಿಂದೆನ್ನ ಶರೀರದೊಳ್ಪೂಜಿಪವರಬಿಂಬದೊಳು ನ್ಯಾಸಗೈದಿಹೆನುಪರಮ ಮಂತ್ರಾಧಿದೇವತೆಗಳನೆಂಟು ಪನ್ನೆರಡಕ್ಕರದ ವಿದ್ಯೆುಂದಲು ಜಗದೀಶ 6ಗುರುವಾಸುದೇವಾರ್ಯರೂಪದಿ ಶ್ರೀರಂಗಪುರದ ಕಾವೇರಿ ತೀರದೋಳು ನೀನೆಕರುಣಿಸಿದತಿ ಗೋಪ್ಯ ಮಾರ್ಗದಿಂದರ್ಚಿಪೆತಿರುಪತಿ ಕ್ಷೇತ್ರದ ದೊರೆಯೆ ವೆಂಕಟರಾಯ 7ಓಂ ನಂದಗೋಪಪ್ರಿಯಾತ್ಮಜಾಯ ನಮಃ
--------------
ತಿಮ್ಮಪ್ಪದಾಸರು
ಪುಟ್ಟಿಸಿದ್ದೇನು ಕಾರಣವೋ ಸೃಷ್ಟಿಗೋಡೆಯಾ ಪ. ಶ್ರೀಕೃಷ್ಣ ಮೂರುತಿವೊಂದಿಷ್ಟು ತಿಳಿಯದೋ ಮಾಯಾ ಜೀಯಾ ಅ.ಪ. ಆವಾವ ಸಾಧನವಾಗಲಿಲ್ಲಾ ಯನ್ನಿಂದ ಶ್ರೀದೇವಾ ಕರವ ಬಿಡುವುದುಚಿತವೇನು ಮಾಧವಾ ನಿನ್ನ ಮನದಣಿಯ ನೋಡಾದೆ ಹಾಗಾದೆ 1 ಹರಿಮೂರ್ತಿ ನೋಡಲೊಲ್ಲಾದು ಯನ್ನಮನವು ಪರಪುರುಷರ ನೋಡಿತು ಮನಸು ಹೊಲೆಗೆಡಿಸಿತು ಪುರುಷೋತ್ತಮನ ಮರಿತಿತು 2 ಹರಕಥಾ ಶ್ರವಣ ಕೇಳದು ಎನ್ನ ಕರ್ಣಂಗಳು ಪರವಾರ್ತೆಗೆ ಹೊತ್ತು ಸಾಲದು ಸರ್ವೋತ್ತಮನೆ ನಿನ್ನ ಮರೆತೆನು ಉನ್ಮತ್ತಳಾದೆ 3 ಹರಿನಿರ್ಮಾಲ್ಯವ ಕೊಳ್ಳದು ಯನ್ನ ಮೂಗು ಪರಪುರುಷರಾ ಮೈಗಂಧವಾ ಆಘ್ರಾಣಿಸುವುದು ನಿನ್ನ ನಾಮ ಸ್ಮರಣೆಯನು ಮರೆತೆನು 4 ಹರಿಯಾತ್ರೆಯಾ ಮಾಡಲಿಲ್ಲ ಯನ್ನ ಕಾಲು ಜಾರಸ್ತ್ರೀಯರ ಮನೆಮನೆ ತಿರುಗುವೆನು ಪರಿ ನೀಯನ್ನ ಮರೆಯುವುದುಚಿತವೆ 5 ಎನ್ನ ಇಂದ್ರಿಯಗಳು ಈ ಪರಿವ್ಯರ್ಥವಾಯಿತು ಸಾರ್ಥವಾಗಲಿಲ್ಲ ಪಾರ್ಥಸಾರಥಿ ನಿನ್ನ ನೋಡಿ ಪವಿತ್ರಳಾಗಲಿಲ್ಲ ಏಕಿನ್ನ ಈ ಪರಿಯ ಮರುಳು ಮಾಡುವಿದೇವಾ ಧರೆಯೊಳಗೆನ್ನ ತಂದುದಕೆ ಬಂದಕಾರ್ಯವಾಗಲಿಲ್ಲ 6 ಆವಬಾಧೆಯು ನಾನರಿಯೆ ಪರಜಾತಿಯ ಆ ಮನಸು ಪೋಗುವುದು ಕೋತಿಯಂದದಿ ಕುಣಿಸುವರು ಇದು ರೀತಿಯೆ 7 ಭವಸಾಗರದೊಳು ಇದ್ದು ಸೊರಗಲಾರೆನೊ ಘಾಸಿಗೊಳಿಸುವುದು ನಿನಗೆ ಧರ್ಮವೆ ವಾಸುದೇವನೆ ನಿಮ್ಮ ನಾಮವನು ನೆನೆಯದೇ 8 ಇರುಳು ಹಗಲು ಹೀಗೆ ದುರುಳತನದಲಿ ತಿರುಗಿದೆನು ಗುರು ಹಿರಿಯರಂಘ್ರಿಗೆ ಶಿರವ ಬಾಗದೆ 9 ಎಷ್ಟು ಮೊರೆ ಹೊಕ್ಕರೇನು ಒಂದಿಷ್ಟು ದಯಪುಟ್ಟದು ನಾನೀಗ ದ್ವೇಷಿಯೇನೋ ಶೇಷಶಯನನೆ ನಮ್ಮ ಕಾಳೀಮರ್ಧನಕೃಷ್ಣನೆ 10
--------------
ಕಳಸದ ಸುಂದರಮ್ಮ
ಪುರಂದರ ಗುರುವರ ಇನ್ನು ಭಾಳ ಹೊತ್ತಾಯಿತು ಭಕುತ ಜನಪ್ರಿಯ ಪ. ಶ್ರೀಶನಪ್ಪಣೆಯಿಂದ ಭೂಲೋಕದಲಿ ಪುಟ್ಟಿ ಆಶೆಯಿಂದಲಿ ಧನ ಗಳಿಸಿ ಕೋಟಿ ವಾಸುದೇವನು ಎಚ್ಚರಿಸಲು ವೈರಾಗ್ಯ ದಾಸತ್ವದಲಿ ಜಗದಿ ಮೆರೆಯಬೇಕು 1 ವ್ಯಾಸ ಮುನಿಯಿಂದುಪದೇಶಕೊಳ್ಳಲುಬೇಕು ದಾಸತ್ವ ಜಗದಲಿ ಸ್ಥಾಪಿಸಬೇಕು ದೋಷರಹಿತ ಮಧ್ವಶಾಸ್ತ್ರ ತತ್ವಗಳ ಪ್ರ ಕಾಶಗೈಸುತ ಕವನಗೈಯ್ಯಬೇಕು 2 ಸತಿಸುತ ಪರಿವಾರ ಭೂ ಸಂಚರಿಸಬೇಕು ಸ್ತುತಿಸುತ್ತ ಹರಿಯನ್ನು ಕುಣಿಸಬೇಕು ಜತನದಿ ನಿಜತತ್ವಗಳನರಿಯಲಿಬೇಕು ಕ್ಷಿತಿಗೆ ಅಚ್ಚರಿ ಮಹಿಮೆಯ ತೋರಬೇಕು 3 ಪುಷ್ಯದಮಾವಾಸೆ ಹರಿಪುರ ಸೇರಲು ಶಿಷ್ಯಕುಲವು ಜಗದಿ ಬೆಳೆಯಲೆಂದು ಶಿಷ್ಯ ವಿಜಯದಾಸರಿಗೆ ಅಂಕಿತವನಿತ್ತು ಶಿಷ್ಯ ಪ್ರಶಿಷ್ಯ ಸಂತತಿ ಬೆಳಸಬೇಕು 4 ಪಾಪಿ ಜನಗಳ ಪಾವನಗೈಯಲಿಬೇಕು ತಾಪಪಡುವರ ಪೊರೆಯಲೆತ್ನಿಸಬೇಕು ಶ್ರೀಪತಿ ದಾಸತ್ವ ಜಗದಿ ನಿಲ್ಲಿಸಬೇಕು ಗೋಪಾಲಕೃಷ್ಣವಿಠ್ಠಲನ ಸ್ಮರಿಸಬೇಕು 5
--------------
ಅಂಬಾಬಾಯಿ