ಒಟ್ಟು 8509 ಕಡೆಗಳಲ್ಲಿ , 134 ದಾಸರು , 5107 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹನುಮಂತ ಬಲವಂತ ಅತಿ ಗುಣವಂತಾ | ಇನ ಶಶಿ ಶಿಖಿನೇತ್ರ ರೂಪ ಚರಿತ್ರ | ವನಚರ ಪುಂಗವ ಸನಕ ಸನಂದನ | ವಿನುತ ಹರಿಚರಣನನುದಿನ ಜಪಿತಾ ಪ ಗಜ ಕಂಠೀರಾ | ರಾಯ ಕಪಿಗೆ ಹರಿಯಾ | ತೋರಿದ ಸಿರಿಯಾ | ಶ್ರೀಯರಸನ ನಾಮ ಸವಿದ ನಿಸ್ಸೀಮ | ಪ್ರಿಯ್ಯಾದಿಕೊಂಡು ಗುರುತು ಸಾಗರನರಿತು | ಮಾಯಾಛಾಯಾ ಗ್ರೀಯಾ ನೋಯ | ಸಾಯಬಡದ ಸೀತೆಯ ಮುಂದೆ ನಿಂದು | ಕೊಂಡ ಸ | ಮಾಯದ ಲಂಕಿಯ ನ್ಯಾಯವುರಹಿದ ಧೇಯಾಂಜನೇಯಾ 1 ವರ ಕುಂತಿನಂದನಾ ಕಲಿಯ ಭಂಜನಾ | ಉರಗ ಭಂಜನಾ | ಉರಿತಾಪ ಪರಿಹಾರ | ಕರುಣ ಸಾಗರಾ | ದುರುಳ ಕೀಚಕರ ಹಿಡಂಬಕಾಂತಕ | ಕೌರವಾ ಪಾರಾವಾರಾ ಉರಹಿದ ಬಲುಧೀರ ಶರ ಗದಾಧಾರಾ | ಗುರುವರ ಸುತದಿನ | ಕರಜನುವರದೊಳು | ಪರಿ ಪರಿಹರಿಸಿದೆ ಸಮರಾ 2 ಆನಂದತೀರ್ಥನಾಗಿ ಅತಿ ಹರುಷಯೋಗಿ ಕಾನನ ಪರಮತಾ ದಹಿಸಿದ ಖ್ಯಾತಾ | ಭಾನುಕುಲ ಸಾಂದ್ರಾ ಎನಿಸುವ ಚಂದ್ರಾ | ಧ್ಯಾನಾಮೃತ ಪಾನಾ | ಮುಕ್ತಿ ಸೋಪಾನಾ | ಜ್ಞಾನಾಹೀನಾ ದೀನಾ ಜನಾ | ಮಾನಿಸಫಲದಾನಾ ನಿರತ ನಿಧಾನಾ | ಶ್ರೀನಿಧಿ ವಿಜಯವಿಠ್ಠಲ | ಶ್ರೀನಿವಾಸನ ಮಾನಸ ಪೂಜಿಪೆ ಗಾನನ ಮುನಿಗಳ ಆನನಮಣಿ ಪವಮಾನಸೂನು 3
--------------
ವಿಜಯದಾಸ
ಹನುಮಂತ ಬಲವಂತ ಅತಿ ದಯವಂತಾ | ಘನವಂತ ಕೀರ್ತಿವಂತ ಅತಿ ಜಯವಂತಾ || ಅನುದಿನದಲಿ ನಿನ್ನ ನೆನೆಸುವೆ ಎನ್ನ ಮನದಾಸೆ | ಯ ನೀಯೋ ದನುಜ ಕೃತಾಂತಾ ಪ ಪಾವಮಾನಿ ಸತತ ಪಾವನ್ನ ಚರಿತಾ | ಪಾವಕಾಂಬಕನುತಾ ಪ್ಲವಂಗನಾಥಾ || ದೇವ ಕರುಣಪಾಂಗಾ ಭಾವುಕತುಂಗಾ | ಗ್ರೀವಾ ಶತಶೃಂಗ ಗ್ರಾವವೆ ಭಂಗಾ || ಕಾವಾ ವರವೀವಾ ಭೋದೇವ ಸಂಭವಾ | ಸು | ಗ್ರೀವ ಸಹಾಯ ಸರ್ವ ದೇವನರಸಿ ಯತಿವರ ಹಾರಿದಾ | ಕೋವಿದಾ ಕಪಿವರ ದೇವಕಿ ತನುಜನಾ || ಮಾವನ ಮಾವನಾ | ಜೀವಕೆ ಮುನಿದನೆ | ಜೀವೇಶ ಮತವನ ಪಾವಕಾ ಜಯ ಜಯ 1 ಧರಣಿಜಾತಿಗೆ ಭದ್ರಕರವಾದ ಮುದ್ರಾದರದಿಂದ ಇತ್ತ ನಿದ್ರಾ | ಗರಳ ದುರುಳರ ವರವದ್ದಾ | ನೆರದಲ್ಲಿ ಶಲ್ಯ ಎದುರ ಬರಲಾಗಿ ಗೆದ್ದಾ | ಮರುತಾ ಸುಖ ಗುರುವೆ ಸುರತರುವೆ | ಫಲ | ನಿರ್ಜರ ಗಣದಲ್ಲಿ ಇಹ | ಪರದಲಿ ದೇವ | ಶರಧೀ ಬಾಗಿದ ಧೀರಾ | ಸೂನು ಆವಾಸ ಯೋಗಕೆ ಸಂ | ಸುರನದಿ ದಾಟಿದಾ ಪರಮಹಂಸ 2 ಕರಡಿ ವಾನರಬಲಾ ನೆರಹಿ ಮಹಾ ಪ್ರಬಲ | ಶಿರ ಹತ್ತುವುಳ್ಳವನ ಕುಲ ವರಿಸಿದಾ ಸುಬಲಾ | ಕುರುಪತಿ ನಿಜ ತಮ್ಮ ಬರಲವನ ಹಮ್ಮು | ಬೊಮ್ಮ ಪೊರೆವನೆ ನಮ್ಮ | ಮರುತಾ ಸುಖ ಭರಿತಾ ಸಂಹರಗೈಸುವ | ಸಂ | ಕರ ಗರ್ವಹರ ಸರಯು ತೀರದಲ್ಲಿದ್ದಾ | ಪುರದಲ್ಲಿ ಮೆರದನೆ | ಕರ ಕಮಲೋದ್ಭವ | ವರ ವೃಕೋದರನೆ ವಿಜಯವಿಠ್ಠಲನ |ಶರಣರ ಪಾಲಾ ಬದರಿವಾಸಾ ಯಂತ್ರೇಶಾ 3
--------------
ವಿಜಯದಾಸ
ಹನುಮಂತ ವಿಠ್ಠಲಾ | ಪೊರೆಯ ಬೇಕಿವಳಾ ಪ ಘನ ಮಹಿಮ ನಿನ್ಹೊರತು | ಅನ್ಯರನು ಕಾಣೇ ಅ.ಪ. ಸ್ವಾಪದಲಿ ಗುರುದರ್ಶ | ಅಂತೆ ಅಂಕಿತ ಪತ್ರತಾ ಪಿಡಿದು ನಿಂತಿಹಳೊ | ಶ್ರೀಪ ಸೀತಾಪತೇ |ಕಾಪಟ್ಯರಹಿತಳನು | ಕೈಪಿಡಿದು ಸಲಹೆಂದುನಾ ಪ್ರಾರ್ಥಿಪೆನೊ ನಿನ್ನಾ | ತಾಪಸ ಸುವಂದ್ಯಾ 1 ಕನ್ಯೆಯಗಭಯದನಾಗಿ | ಮುನ್ನಪತಿ ಸೇವೆಯನುಚೆನ್ನಾಗಿ ದೊರಕಿಸುತ | ಕಾಪಾಡೊ ಹರಿಯೇ |ಅನ್ನಂತ ಮಹಿಮ ಕಾರುಣ್ಯ | ಸಾಗರನೆ ಹರಿನಿನ್ನನೇ ನಂಬಿಹಳೊ | ಭಾವಜ್ಞಮೂರ್ತೇ 2 ಭವ ಶರಧಿ ಸನ್ನುತ ಸ್ವಾಮಿ | ಭೂಮಗುಣ ಧಾಮಾ 3 ಮರುತ ಮತ ತತ್ವಗಳು | ಸ್ಛುರಿಸಲಿವಳಿಗೆ ಹರಿಯೇತರತಮಾತ್ಮಕ ಜ್ಞಾನ | ದರಿವು ವೃದ್ಧಿಸಲೀ |ಹರಿಯ ಸರ್ವೋತ್ತಮತೆ | ಸ್ಥಿರವಾಗಿ ಇವಳೀಗೆಪರಮಸಾಧನ ಮಾರ್ಗ | ಕ್ರಮಿಸುವಂತೆಸಗೋ 4 ಕಾಮಿತಪ್ರದ ದುಷ್ಟ | ಆಮಯವ ಪರಿಹರಿಸಿಈ ಮಹಿಳೆಯುದ್ಧರಿಸೊ | ಸ್ವಾಮಿ ರಾಮಚಂದ್ರಾ |ನಾಮಾಂತ ಇತ್ತುದಕೆ | ಸಾರ್ಥಕವ ಮಾಡೆಂದುಸ್ವಾಮಿ ಗುರು ಗೋವಿಂದ | ವಿಠಲ ಭಿನ್ನವಿಪೆ 5
--------------
ಗುರುಗೋವಿಂದವಿಠಲರು
ಹನುಮಂತಾ | ಮದ್ಗುರುವೆ | ಹನುಮಂತ ಪ ಹನುಮಂತ - ಗುಣಗಣ ನಿಲಯ | ಮುನಿಸನಕಾದಿ ಜನ ಮನಾಲಯ | ಆಹಮನ ಆದೀಂದ್ರಿಯ ನಿಯ | ಮನವನೆ ಮಾಡುತ್ತಅನುನಯದಿಂದಲಿ | ಪಾಲಿಪೆ ಸರ್ವರ ಅ.ಪ. ಅಂಜನೆ ಕುವರನೆ ಹನುಮ | ಚಿಣ್ಣಕಂಜ ಸಖಗೆ ಹಾರ್ದನಮ್ಮಾ | ಇಂದ್ರಸಂಜಯನನ ಹೊಡೆದನಮ್ಮಾ | ಶಿಶುಅಂಜಲಿಲ್ಲವು ನೀ ನೋಡಮ್ಮಾ | ಆಹಸಂಜಯಪಿತ ತನ್ನ | ಶ್ವಾಸ ನಿರೋಧಿಸೆಅಂಜಲು ಮೂರ್ಜಗ | ಕಂಜಾಕ್ಷ ಸಲಹೀದ 1 ರಾಮರ ಭಂಟ ಧೀಮಂತಾ | ಬಲಭೀಮ ಭಯಂಕರ ಅಮಿತಾ | ರೂಪನಾಮಗಳ್ ಪೊಂದುವ ಸತತಾ | ನೋಡುಕಾಮನಯ್ಯನ ಕಾಣ್ವ ನಿರತಾ | ಆಹಭೀಮ ಪ್ರಾಣಾನಂದ | ಮುನಿಯೆಂದು ಕರೆಸುತ್ತಬೊಮ್ಮನ ಪದವಿಯ | ಸಮ್ಮುದದಿ ಪಡೆವಂಥ 2 ಹರಿಯೆ ನೀನು ಪ್ರತಿಬಿಂಬಾ | ಪುರಹರಿಗೆ ನೀನು ಗುರು ಬಿಂಬಾ | ಸುರಾಸುರರ ನೀದಂಡಿಪಾ ಡಿಂಬಾ | ನಿನ್ನವರಣ ವರ್ಣಿಸುವುದು ಗುಂಭಾ | ಆಹಹರ ಮುಖಾದ್ಯರು ನಿನ್ನ | ನಿರುತದಿ ಸುತ್ತಿಸುತ್ತಪರಿಪರಿ ಗುಣರೂಪ | ಕ್ರಿಯೆಗಳ ನೋಳ್ಪರು 3 ನಿನಗೆಣೆ ಯಾರೊ ಸಮೀರ | ಮಹವನಧಿಯ ದಾಟಿದ ಧೀರ | ದೈತ್ಯಜನರ ನೀ ಸವರಿದ್ಯೋ ವೀರ | ದಶಾನನನ ನೀ ಸದದೆಯಾ ಶೂರ | ಆಹಜನಕಜ ರಮಣನ | ನೆನೆ ನೆನೆ ನೆನೆಯುತಅನುಗಾಲ ಕಿಂಪುರುಷ | ಖಂಡದಲಿರುವಂಥ 4 ಕುರುಕುಲ ವನಕೆ ಕುಠಾರ | ದುಷ್ಟಜರೆಯ ಸುತನ ಸೀಳ್ದ ಧೀರ | ಸತಿತರಳೆ ದ್ರೌಪದಿ ಕಾಯ್ದ ವೀರ | ದುರುಳದುರ್ಯೋಧನನ ಅಸು ಹರ | ಆಹಕುರುವಂಶಕನಳನೆ | ಧರಣಿ ಭಾರವ ನಿಳುಹನರಮೃಗ ಲೀಲೆಯಂ | ದರಿಗಳ ತರಿದಂಥ 5 ಯತಿಕುಲ ಕುಮುದಕೆ ಸೋಮ | ದಶಮತಿಯೆ ಮಾಯ್ಗಳ ತರಿದ ಭೀಮ | ಅಹಂಮತಿಯ ಕಳೆ ಸಾರ್ವಭೌಮ | ಜಗತ್ಪತಿಗೆ ನೀ ಸುಪವಿತ್ರ ಧಾಮಾ | ಆಹವಿತತ ಶ್ರೀ ಹರಿಯೆ ಸ | ರ್ವೋತ್ತಮನೆಂಬಂಥಸೂತ್ರಾರ್ಥ ರಚಿಸಿ ಸ | ಚ್ಛಾಸ್ತ್ರವನರುಹಿದ 6 ಪವಮಾನ ಪೊಗಳುವೆ ನಿನ್ನ | ಭವಭವಣೆಯ ಪಡಲಾರೆ ಘನ್ನ | ಗುರುಗೋವಿಂದ ವಿಠಲಾನ | ಚರಣ | ತೋರೊತವಕದಿ ನಿನ್ನೊಳು ಪವನ | ಆಹನವ ವಿಧ ಭಕುತಿಗೆ | ನೆಲೆಯು ನೀನಾಗಿಹೆತವಕೀರ್ತಿ ಪೊಗಳಲು | ಶಿವನಿಗು ಅಳವಲ್ಲ 7
--------------
ಗುರುಗೋವಿಂದವಿಠಲರು
ಹನುಮನ ಬಲಗೊಂಬೆ ಹರುಷದಲೆನಮ್ಮ ತನುಮನ ಧನ ಈತಗೊಪ್ಪಿಸುತಲೆ ಪ. ರಾಣಿಗೆ ಮುದ್ರೆಯನಿಟ್ಟ ಜಾಣನೆನುತಲೆಮುಖ್ಯ ಪ್ರಾಣ ಮುಯ್ಯಾ ಗೆಲೆಸೋ ಈ ಕ್ಷಣ ಎನುತಲೆ 1 ಕೋತಿಯ ಸ್ವರೂಪನಾದ ಈತನೆನುತಲೆ ದೈತ್ಯ ಜಾತಿಯ ಸಂಹರಿಸಿ ಬಂದ ಖ್ಯಾತನೆನುತಲೆ2 ಸೀತೆಯ ಮನೆಗೆ ತಂದ ಮಹಾತ್ಮನೆನುತಲೆಈತಗೆ ಜೋಡ್ಯಾರು ಮುಂದೆ ಖ್ಯಾತನೆನುತಲೆ 3 ಕೃಷ್ಣನ ಸೇವೆಗೆ ಅತಿ ನಿಷ್ಠ ನೆನುತಲೆದುಷ್ಟ ಕೌರವರ ಕೊಂದ ಶ್ರೇಷ್ಠ ನೆನುತಲೆ 4 ಶ್ರೀಶ ರಾಮೇಶಗೆ ಮುಖ್ಯದಾಸನೆನುತಲೆ ವಾಸವಾದ ಬದರಿಯಲಿ ಮಧ್ವೇಶನೆನುತಲೆ5
--------------
ಗಲಗಲಿಅವ್ವನವರು
ಹನುಮವಂದಿತ ವಿಠಲ | ಅಣುಗನನ ಪೊರೆಯೋಮಣಿದು ಪ್ರಾರ್ಥಿಪೆನಯ್ಯ | ಪಿಡಿ ಇವನ ಕೈಯ ಪ ಯೇಸೋ ಜನ್ಮದ ಪುಣ್ಯ | ರಾಶಿವದಗುತ ನಿನ್ನದಾಸತ್ವ ಪ್ರಾರ್ಥಿಸುವ | ಯೆನ್ನೊಳಗೆ ಹರಿಯೇ |ಕೇಶವನೆ ಸ್ವಪ್ನದೊಳು | ಸೂಸಿಸೂಚಿಸಿದ ಉಪ-ದೇಶವಿತ್ತಿಹೆ ಇವಗೆ | ಶ್ರೀಶಉದ್ಧರಿಸೋ 1 ತೀರ್ಥಕ್ಷೆತ್ರವ ಚರಿಸಿ | ಗಾತ್ರಪಾವಿತ್ರತೆಲಿಅರ್ಥನಾಗಿಹ ಭಕ್ತ | ಪ್ರಾರ್ಥನೆಯ ಸಲಿಸೇ |ಕೀರ್ತಿಸಿಹೆ ರಾಮತವ | ಮೂರ್ತಿಜಪಿಸಲು ನಿತ್ಯಗೋತ್ರಾರಿಸುಪ್ರಿಯ | ಸೂತ್ರಾಂತರಾತ್ಮಾ 2 ಶ್ರವಣಸಾಧನವಿತ್ತು | ಭವವನದಿ ಉದ್ಧರಿಸುಪವನ ಮೂರಲಿ ನಿನ್ನ | ಪಾವನಸ್ಮøತಿಯಾ |ಹವಣಿಸುತ ತ್ರೈತಾಪ | ಬವಣೆಗಳ ಕಳೆಯೊತ್ರೈಭುವನಗಳ ಒಡೆಯ ಮಾಧವನೆ ಭಿನ್ನವಿಪೇ 3 ಸುಪ್ತಿಜಾಗರತ್ರಯಾ | ವಸ್ಥೆಗಳ ಪ್ರೇರಕನೆಉತ್ತಮನು ಸಾಧನದಿ | ಯುಕ್ತನೆನಿಸಿವನಾ |ಕರ್ತೃಕರ್ಮವುಕರಣ | ಎತ್ತನೋಡಿದರುತವಾವ್ಯಾಪ್ತಿಯನೂ ತಿಳಿಸೂ | ಸರ್ವೋತ್ತಮನೆ ಹರಿಯೇ 4 ಶರ್ವಾದಿ ದಿನಿ ಜೇಡ್ಯ | ನಿರ್ವಿಕಾರನೆ ದೇವಗುರ್ವಂತರಾತ್ಮಗುರು | ಗೋವಿಂದ ವಿಠಲಾ |ಸರ್ವಜ್ಞ ನೀನಿರಲು | ಪೇಳ್ವುದೇನಿಹುದಿನ್ನುದುರ್ವಿಜೀವಿಯ ಕಾವ ಹವಣೆನಿನದಲ್ಲೇ 5
--------------
ಗುರುಗೋವಿಂದವಿಠಲರು
ಹನುಮೇಶ ವಿಠ್ಠಲನೆ ಸಲಹ ಬೇಕಿವಳಾಗುಣಪೂರ್ಣ ನಿರ್ದೋಷ ಚಿದ್ಭವನೆ ಹರಿಯೇ ಪ ನಾಗಕಾಳೀಯ ಮದ ಭಂಜನನೆ ಶಿರಿಕೃಷ್ಣನೀಗಿ ಹೃದ್ರೋಗವನು ಆಗು ಹೋಗುಗಳಾ |ನಾಗಶಯನನೆ ನೀನೆ ಮಾಳ್ಪುದನೆ ತಿಳಿಸುತ್ತಾಭೋಗ ವಿಹ ಪರಧ್ವಂಸ ಭೋಗ ತಿಳಿಸುವುದೋ1 ಮಧ್ವ ಶಾಸ್ತ್ರಜ್ಞಾನ ಉದ್ಭೋಧ ಕೊಟ್ಟಿವಳಶುದ್ಧ ತರತಮ ಭೇದ ಪಂಚಕವ ತಿಳಿಸಿ |ಅದ್ವಿತೀಯನೆ ಭಾವ ದ್ರವ್ಯ ಕ್ರಿಯಗಳು ಎಂಬಅದ್ವೈತ ತ್ರಯಜ್ಞಾನವಿತ್ತು ಪಾಲಿಪುದು 2 ಖಗವರಧ್ವಜದೇವ ಗೋವಿಂದ ಮೂರುತಿಯೆಬಗೆಬಗೆಯ ತವಲೀಲೆ ಮಿಗಿಲು ಸ್ಮøತಿಯಿತ್ತು |ಹಗರಣದ ಸಂಸಾರ ಸಾಗರವ ದಾಟಿಸುತನಿಗಮ ವೇದ್ಯನೆ ತೋರೊ ಹೃದ್ಗುಹದಿ ಹರಿಯೇ 3 ಪತಿಸೇವೆಯಿತ್ತಿವಳ ಕೃತಕಾರ್ಯಳೆಂದೆನಿಸೊಪಿತೃ ಮಾತೃ ಬಂಧುಗಳು ಹಿತ ಜನಾಂತಸ್ಥಕೃತಿ ಪತಿಯೆ ನಿನವ್ಯಾಪ್ತಿ ಮತಿಯಿತ್ತು ಪಾಲಿಸುತಹಿತದಿ ಸಾಧನಗೈಸೊ ವಾತಾತ್ಮ ಹರಿಯೇ 4 ನಿರುತ ತವ ದಾಸತ್ವ ಅರ್ಥಿಯಲಿ ಇರುವಂಥತರಳೆಯನು ಸ್ವೀಕರಿಸಿ ದಾಸಳೆಂದೆನಿಸೊಶರಣ ಜನ ವತ್ಸಲನೆ ಕರುಣಿ ಭಿನ್ನಪ ಸಲಿಸೊಮರುತಾಂತರಾತ್ಮ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಹಂಬಲ ಮರೆವುದುಂಟೆ ಪ ಬೆಂಬಲವಾಗಿಯೆ ಇಂಬುದೋರದ ನೀನು ಡೊಂಬಿಗಾರರ ಮುಂದೆ ಕಂಬದಂದದಿ ನಿಂದೆ ಅ.ಪ ತೃಣವಾದ ಕಾಯಗಳು ಮನದೊಳಗೆ ಘನವಾಗಿ ತೋರುತಿದೆ ಗುಣವಿಲ್ಲ ಬದುಕಿನೊಳು ಅಣಿತಪ್ಪಿ ಹೋಯಿತು ಪ್ರಣವರೂಪನೆ ಕೇಳು ಕ್ಷಣ ಜೀವ ನಿಲ್ಲದು 1 ಆಯ ತಪ್ಪಿದ ಮಾತನು ಆಡುತ ಎನ್ನ ಬಾಯನು ಹೊಯ್ಪವರ ಸಾಯ ಬಡಿದು ಮುಂದೆ ನ್ಯಾಯ ತೋರದ ಹಾಗೆ ಕಾಯಬೇಕೆನ್ನ ಉಪಾಯದಿಂದಲೆ ಜೀಯ 2 ಎರವು ಮಾಡಿದ ಕಾಲದೊಳಗೆ ಸೂರೆಗೊಂಡವರನೆಲ್ಲ ವಾರಿಜಾಕ್ಷನೆ ನೀ ವಿಚಾರವ ಮಾಡದೆ ದೂರುಗಳೆಲ್ಲವ ಪಾರು ಮಾಡಿದೆ ನಿನ್ನ 3 ಹಸ್ತ ಬಲಿದ ಕಾಲದಿ ಮಸ್ತಕದೊಳು ಹಸ್ತಿಯಂದದಿ ಹೊತ್ತೆನು ಸ್ವಸ್ಥವಿಲ್ಲದ ನರನಸ್ಥಿ ಚರ್ಮದ ಮೇಲೆ ಕಷ್ಟಾಗಿ ಕರುಣವ ನಾಸ್ತಿ ಮಾಳ್ಪೆಯ ಎನ್ನ 4 ಎನ್ನ ಸರ್ವಸ್ವವನು ತಿಂದವರೀಗ ಇನ್ನೇನು ಸುಕೃತಿಗಳೊ ನಿನ್ನ ಮನಸಿಗದು ಚನ್ನವಾದರೆ ಮೇಲೆ ಇನ್ನಾರು ಕೇಳ್ವರು ವರಾಹತಿಮ್ಮಪ್ಪ ನಿನ್ನ 5
--------------
ವರಹತಿಮ್ಮಪ್ಪ
ಹಯ ಮುಖ ಪದಾಬ್ಜ ಮಧುಪಾ | ದುರ್ಭವಭಯವ ತಾರಿಸು ಮುನಿಪಾ ಪ ವ್ರಯವಾಯಿತು ಮಮ | ಆಯುವು ಎಲ್ಲವುಪ್ರಿಯ ನೀನಲ್ಲವೆ | ಭಯ ಪರಿಹರಿಸೈ ಅ.ಪ. ರಜತ ಪುರಿಲಿ ನಿಂದೂ | ವಿಧಿಸಿದಿಅಜಪಿತ ಭಜನೆಯ ನಂದೂ |ಋಜಗಣದಲಿ ಬಹು | ರಾಜಿಪ ಗುರುವೇಅಜನ ಸುಪದವಿಗೆ | ನಿಜದಿ ಬರುವ ಯತಿ 1 ಸೋದೆ ಪುರದಿ ವಾಸಾ | ಭಕ್ತರ$ಗಾಧ ದೋಷ ನಾಶಾ ||ವಾದಿ ಜನರ ಮದ | ಛೇದನ ದಶಮತಿಬೋಧಪ್ರೀಯ ಗುರು | ಮೋದವ ಪಾಲಿಸು 2 ಪಂಚ ವೃಂದಾವನವಾ | ರಚಿಸುತಪಂಚರೂಪಿ ಹರಿಯಾ ||ಸಂಚಿಂತಿಸಿ ಭಕ್ತ | ವಾಂಛಿತ ಗರೆಯಲುಸಂಚುಗೊಳಿಸಿ ಪ್ರ | ಪಂಚವ ತೊರೆದೇ 3 ಅಮರೇಂದ್ರ ನಾಳ್ಬರಲೂ | ತ್ರೈವಿಕ್ರಮ ದುತ್ಸವದೋಳೂ ||ಸಮಯವಲ್ಲವಿದು | ನಿಮಗೆಂದೆನುತಲಿಕ್ರಮಿಸುವ ತೆರ ನೀ | ಮಾಡಿದೆ ಯತಿವರ 4 ಪೂವಿಲ್ಲನ ಪಿತನಾ | ಗುರುಗೋವಿಂದ ವಿಠ್ಠಲನಾ ||ಭಾವದಿ ಕಾಣುತ ಮೈಮರೆದ್ಹಿಗ್ಗುವಈ ವಿಧ ಸುಖ ಯಾವಾಗಲೂ ಕಾಣುವ 5
--------------
ಗುರುಗೋವಿಂದವಿಠಲರು
ಹಯಗ್ರೀವ ವಿಠಲ | ಪೊರೆಯ ಬೇಕಿವನಾ ಪ ಭಯ ಭರಿತ ಭಕ್ತಿಯಿಂ | ಪ್ರಾರ್ಥಿಸುತ್ತಿಹನು ಅ.ಪ. ಗುರುತಂದೆ ಮುದ್ದು ಮೋಹ | ನರಿತ್ತಂಕಿತ ಪದಮರೆಯಾಗಿ ಕಾಣದಲೆ | ಪೋದುದಕ್ಕಾಗೀಪರಿತಪಿಸಿ ಬಹುವಾಗಿ | ಮೊರೆಯನಿಡುತಿಹ ಹರಿಯೆಕರುಣಿಗಳು ಗುರು ಪರವು | ಪದರಚಿಸಿ ಇತ್ತೇ 1 ಪರಿ ಪರಿಯಸೂಚಿಸೋ ಸನ್ಮಾರ್ಗ | ಸಾಧನಕೆ ಹರಿಯೇ ವಾಚಾಮ ಗೋಚರನೆ | ನೀಚೋಚ್ಚ ತರತಮವವಾಚಿಸುತ ಇವನಲ್ಲಿ | ಮೋಚಕನು ಆಗೋ 2 ಭವ ಶರಧಿ ದಾಟಿಸಲುತವನಾಮ ಸಂಸ್ಮøತಿಯ | ಶ್ರವಣ ಸುಖವಿತ್ತೂಭವರೋಗ ವೈದ್ಯ ಗುರು | ಗೋವಿಂದ ವಿಠ್ಠಲನೆಹವಣದಲಿ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ 3
--------------
ಗುರುಗೋವಿಂದವಿಠಲರು
ಹರಕೆಯ ಮಾಡಿಕೊಳ್ಳೀ ಕೇಶವನಿಗೆ ಹರಕೆಯ ಕಟ್ಟಿಕೊಳ್ಳೀ ಪ ಹರಕೆಯ ತೀರಿಸಿಷ್ಟಾರ್ಥವ ಪಡಕೊಳ್ಳೀ ಹರುಷದಿ ಹರಿಗಾತ್ಮವರ್ಪಿಸಿಕೊಳ್ಳೀ ಅ.ಪ. ಭಜನೆಯ ಮಾಳ್ಪೆನೆಂದೂ ಕೇಶವನಿಗೆ ಭಜನೆಯರ್ಪಿಸುವೆನೆಂದೂ ಅಜಪಿತ ಶ್ರೀಹರಿದಾತನಾಗಿರುವಾಗ ಭಜಕರು ಕೊಡುವ ಭೋಜನ ಭಕ್ಷವ್ಯಾಕೇ 1 ಸ್ಮರಣೆಯ ಮಾಳ್ಪೆನೆಂದು ಕೇಶವನಿಗೆ ಸ್ಮರಣೆಯರ್ಪಿಸುವೆನೆಂದೂ ನಿತ್ಯ ತೃಪ್ತನುಯಿರೆ ಬರಿದೆ ನೈವೇದ್ಯವ ಸಲಿಸುವುದ್ಯಾಕೇ 2 ಸೇವೆಯ ಮಾಳ್ಪೆನೆಂದು ಕೇಶವನಿಗೆ ಸೇವೆಯರ್ಪಿಸುವೆನೆಂದೂ ಭಾವಜನಯ್ಯನೆ ತ್ರಿಜಗಪಾಲಕನಾಗಿ ದೇವತಾನಿರುತಿರೆ ಭವಭಯವ್ಯಾಕೇ 3 ವಂದನೆ ಮಾಳ್ಪೆನೆಂದು ಕೇಶವನಿಗೆ ವಂದನೆ ಕೊಡುವೆನೆಂದೂ ಚಂದದಿ ಹರಿತಾನೇ ಸೃಷ್ಟಿಗೀಶನುಯಿರೆ ಅಂದದಿ ಕೊಡುವ ದಾನಗಳವಾಗ್ಯಾಕೇ 4 ಆತ್ಮವ ಕೊಡುವೆನೆಂದೂ ಕೇಶವನಿಗೆ ಅತ್ಮವರ್ಪಿಸುವೆನೆಂದೂ ಸಾತ್ವಿಕ ಜನವಂದ್ಯ ದೂರ್ವಾಪುರದೊಳಿರೆ ಮತ್ಯಾಕೆ ಯೋಚನೆ ಭಕ್ತಿಯುಳ್ಳವಗೇ 5
--------------
ಕರ್ಕಿ ಕೇಶವದಾಸ
ಹರಣ ಸೀಳಿದ ದಾರಿತಾರಾತಿಸಂಘ ನಮಿಪೆನನವರತ ಪ ಜ್ಞಾನ ಜ್ಞೇಯ ಜ್ಞಾತೃನಾಮಕ ರಮಾಪತಿಗೆ ಕರ್ಮ ಕರಣಾ ನೀನೆನಿಸಿ ತತ್ವದೇವತೆಗಳಿಂದೊಡಗೂಡಿ ಪ್ರಾಣಪಂಚಕ ರೂಪ ಜಗವ ಪಾಲಿಸುವೆ1 ಕಾರುಣ್ಯನಿಧಿಯೆ ಇಪ್ಪತ್ತೊಂದು ಸಾವಿರದ ಈ ರೀತಿ ಮಾಳ್ಪೆನೆಂದೆಲ್ಲರಿಗೆ ತೋರ್ಪಿ 2 ಉದ್ಧರಿಸಬೇಕು ಯಂತ್ರೋದ್ಧಾರ ಪ್ರಾಣ ಶ್ರೀ ಮದ್ಧನುಮ ಭೀಮ ಗುರುಮಧ್ವ ಮುನಿಪ ಸಿದ್ಧಾಂತ ತತ್ವಜ್ಞ ಸದ್ವೈಷ್ಣವರ ಸಭಾ ಮಧ್ಯದೊಳಗಸಮ ಸದ್ವಿದ್ಯೆಗಳನೊರೆದೆ3 ದಾಶರಥಿ ಪ್ರೀಯತಮ ವಿಭೀಷಣನ ಮನದಭಿ ಲಾಷೆಗಳನೆಲ್ಲ ಪೂರೈಸಿ ನಿಂದೆ ವ್ಯಾಸಮುನಿ ಹೃತ್ಕುಮುದ ಭೇಶ ಬಿನ್ನೈಪೆ ಸಂ ತೈಸು ನಿನ್ನವರ ಭವಕ್ಲೇಶಗಳ ಕಳೆದು 4 ಅಪರೋಕ್ಷ ಪವ ಮಾನ ನಿನ್ನವತಾರ ಅಂಶಗಳಲಿ ನ್ಯೂನವಿಲ್ಲದೆ ಜಗನ್ನಾಥವಿಠಲನ ಚರಿ ತಾನುಸಾರದಲಿ ತವ ಚರಿತೆ ತೋರಿಸುವೆ 5
--------------
ಜಗನ್ನಾಥದಾಸರು
ಹರತನ್ನ ಕರದಲಿ ಪ್ರಾಣಲಿಂಗವನು ಧರಿಸಿಪ್ಪನೆಂಬುದ ಕೇಳಿ ರಾವಣನು ತರುವೆನೆನುತ ಪೋಗಿ ಭಜಿಸೆ ಶಂಕರನ ಕರುಣಿಸಲಾತನ ಮನದಭೀಷ್ಟವನು ದುರುಳ ಖಳತಾ ಕೊಂಡು ಲಿಂಗವ ಪುರಕೆ ಗಮಿಸುವ ವ್ಯಾಳ್ಯದಲಿ ವಿಧಿ ಸುರಪ ಮುಖ್ಯ ಅಮರರು ನಿಮ್ಮಯ ಸ್ಮರಿಸೆ ಮೆಚ್ಚಿದ ಪಾರ ಮಹಿಮನೆ ಮೊರೆ ಹೊಕ್ಕೆ ನಿಮ್ಮ ಪಾದವನು ವಿಘ್ನೇಶ 1 ಕರುಣಿಸೋ ಎನ್ನ ವಾಂಛಿತವ ಸರ್ವೇಶ ಪರಮ ಪಾವನ ವೇಷ ಮುನಿ ಜನರ ಪೋಷಾ ನಿರುತ ಭಕ್ತ ವಿಲಾಸ ನಿರೂಪ ಮಹೇಶ ಹರಿ ಮುಂತಾದವರೆಲ್ಲ ನುತಿ ಸುತ್ತಲಿಂದು ಕರಿವಕ್ತ್ರ ನೀ ಕೇಳು ಪರಮೇಶನಂದು ಕರದ ಲಿಂಗವ ನಿತ್ತನಾ ದಶಶಿರಗೆ ವರ ದೈವ ದ್ರೋಹಿ ರಕ್ಕಸನಾತನಿಂಗೆ ವರ ಮಹಾಲಿಂಗವದು ಸೇರಲು ತಿರುಗಿಡುವಯತ್ನವನು ಪೇಳಿಯೋ ಪೊರೆಯ ಬೇಕೆನಲ ಭಯನಿತ್ತ ನಾ ಮೊರೆಹೊಕ್ಕೆ 2 ಇವಗೆ ಚಕ್ರವನಾಗಹರಿ ಪಿಡಿದಿರಲು ಧನುಜೇಶ ಸಂಧ್ಯಾವಂದನೆಗೆ ಯೋಚಿಸಲು ಘನ ಮಹಿಮನೆ ನೀನು ವಟುರೂಪಿನಿಂದ ಮಣಗುತ್ತಿರಲು ಕಂಡು ಖಳ ಕರದಿಂದ ಅಣುಗನಿಮ್ಮಯ ಮಹಿಮೆಯರಿಯದೆ ಪೇಳೆ ವಿನಯದಿಂ ಲಿಂಗವನು ಖಳಬರುವ ತನಕ ಕರದಲಿ ಪಿಡಿದಂತಹ ಪರಮ ಮಹಿಮನೆ 3
--------------
ಕವಿ ಪರಮದೇವದಾಸರು
ಹರಷದಿ ತಾ ಸಖಿ ತ್ವರದಿ ಆರುತಿಯ ದ್ವಿರದ ವರದ ಶಿರಿನರಹರಿಗೆ ಪ ನಿಗಮ ತಂದವಗೆ ನಗಧರ ಕ್ರೋಢಗೆ ಮಗುವಿನ ಸಲಹಿ ಜಗವ್ಯಾಪಿಸಿದಗೆ ಭೃಗುಜಾ, ರಘುಜಾ ವ್ರಜಜಾರ್ತಿ ಹರಣ ವಿಗತವಸನ ತುರುಗನೇರಿದಗೆ 1 ಗರುಡ ಗಮನಗೆ ಶರಧಿಶಯನಗೆ ಸುರನದಿ ಪಿತ ಭೂಸುರ ಪ್ರಿಯಗೆ ಅರುಣಾ, ಚರಣಾ ಕರುಣಾಕರಮಂ- ದರಧರ ಶರಣರ ಪೊರೆವ ಸಿರಿವರಗೆ 2 ಛಳಿಮಳೆ ಸಹಿಸುತ ಛಲದಲಿಧೇನಿಪ ಬಲುವಿಧ ಭಕ್ತಾವಳಿ ಹೃನ್ಮಧ್ಯದಿ ಪೊಳೆವಾ, ನಲಿವಾ ಕಳೆವಾಘವ ಭೂ-ವಲಯದಿ ಕಾರ್ಪರ ನಿಲಯ ನರಹರಿಗೆ 3
--------------
ಕಾರ್ಪರ ನರಹರಿದಾಸರು
ಹರಹರ ಮಹಾದೇವ ಮಹಾನುಭಾವಾ | ಭವ ಯ್ಯೋಮಕೇಶ | ಅಂಧಕ ಸುರರಿಪು ಜಾಣಾ | ಸುರವರ ಪುರ ಮುರಹರ ಪದವಿನುತಾ ಪ ಸಂಜೀವ | ವಿಷ ಕರ್ತುವಾಭರಣ ಜಗದ ಸೂತ್ರಾಣ | ಎಸೆವ ರುಂಡಮಾಲಾ ಪಾರ್ವತಿಯ ಲೋಲ | ಪಶುಪತಿ ಪಾವನ್ನ ವರಸುಪ್ರಸನ್ನ | ಅಸಮಾನಸಮಾ ಕುಸುಮಾಭಿಸಮ | ನಿಶಕರ ದಿನಕರ ಬಿಸಿ ನಯನ | ದಶಶಿರ ಪ್ರಸನ್ನ ಭಜಿಪರ 1 ಗುರುಕುಲೋತ್ತ,ಮ ತುಂಗ ವೃಷಭ | ಸುರನದಿ ಧರ ಧೀರ ಜಗದೋದ್ಧಾರ | ನಿರಂಜನ ಸುಂದರ ವದನ | ಕರಿ ಚರ್ಮಾಂಬರ ಶೋಭಾಂತರವಾದನಾ ಭಾ | ಹರಣ ಚರಾಚರ ಸುರವರ ಡಮುರಗ ತ್ರಿಶೂಲಧರ | ನರವರ ಶರಭೂತ ಪರಿವಾರ ಭಯಂಕರ | ದುರಿತ ವಿದೂರಾ 2 ಅಂಬರ ವ್ಯಾಘ್ರಾವಾಸಾ | ಯ್ಯೋಮ | ಕೇಶ ಸ್ಮಶಾನವಾಸ | ಭಾಸುರೋನ್ನತ ಲೀಲಾ | ಸುರಮುನಿಪಾಲಾ | ಚಾಪ ಪಿನಾಕಿ ಚಮುಪಾ | ಕಾಸೀವಾಸಿ ತೋಷಿಸೆ | ದಾಶರಥಿ ನಾಮತಾರಕ ಉಪದೇಶಿ | ಕೋಶ ಶ್ರೀ ವಿಜಯವಿಠ್ಠಲ ವೆಂಕಟೇಶನ | ಪುರಂದರ ದಾಸನ ದಾಸನ ಕ್ಲೇಶವಿನಾಶಾ 3 (ಔ) ಶ್ರೀತುಳಸೀ
--------------
ವಿಜಯದಾಸ