ರಾಮ ಬಂದ ನಮ್ಮ ಪ್ರೇಮ ಬಂದಾನೊ ಪ ಕೋಮಲಾಂಗ ಕಮಲಾಪತಿ ಬಂದಾನೊ ಅ.ಪ ಸರಸಿಜನಾಭ ಬಂದ ಕರಿವರದನು ಬಂದ ಕರುಣಾಕರ ನರಹರಿಯು ತಾ ಬಂದನೊ 1 ಕಂಸ ಮರ್ದನ ಬಂದ ಹಂಸ ದೇಹನು ಬಂದ ಮೋಸಗೊಳಿಸಿ ದೈತ್ಯರ ವಂಚಿಸಿದಾತ ಬಂದನೊ 2 ಚಕ್ರಪಾಣಿಯು ಬಂದ ವಕ್ರೆಗೊಲಿದವ ಬಂದ ತ್ರಿವಿಕ್ರಮ ವಿಜಯ ರಾಮಚಂದ್ರವಿಠಲ ಬಂದಾನೊ 3
ರಾಮ ರಾಮ ರಾಮ ಹರೇ ರಘೂ ಪ ರಾಮ ಜಾನಕಿ ಪ್ರೇಮ ಕೃಪಾಂಬುಧಿ ಸ್ವಾಮಿ ಪರಂಧಾಮ ಸಾರುಚಿವರದಾ ಅ.ಪ ಪತಿತಪಾವನದೇವಾ ಸದ್ಭಕ್ತರ ಸತತ ಬಿಡದೆ ಕಾಯುವಾ ಮಹಾನುಭಾವ- ನತಿಶಯದಲಿ ಮನಹಿತದಲಿ ಅನುದಿನ ಸ್ತುತಿಯನು ಮಾಡುವರಿಗೆ ಗತಿ ಕಾಣಿಸುವಂಥ 1 ಅಂಡಜವಾಹನನೆ ಅನೇಕ ಭೂ ಮಂಡಲ ನಾಳುವನೆ ಮಣಿಯ ಮುಕುಟಧರನೆ ಉದ್ದಂಡ ರಕ್ಕಸರಳಿದ ಚಂಡಪರಾಕ್ರಮಿ2 ಪನ್ನಗಾದ್ರಿಯವಾಸಾ ಭಜಕರ ಪೋಷಾ ಶ್ರೀ ಹೆನ್ನವಿಠ್ಠಲ ವೇಶಾ ಪರಮೋಲ್ಹಾಸಾ ಚಿನ್ಮಯ ಮೂರುತಿ ಶ್ರೀ ಗೌರೀವರಪ್ರಿಯ ಮದನ ಜನಕ ಹರೆ 3
ರಾಮ ವಂದಿಪೆ ಗುಣ ಧಾಮಾ ವಂದಿಪೆ ಘನ ಶ್ಯಾಮ ವಂದಿಪೆ ರಘು ರಾಮ ರಾಮ ರಾಮ ಪ ಬೋದ ಪ್ರದಾಯಕ ಸಾಧು ಜನಾವಳಿ ವೇದಾಂಗನುತ ರಘು ರಾಮ ರಾಮ ರಾಮ 1 ಇಂದ್ರಾದಿನುತ ಗುಣ ಸಾಂದ್ರಾನತಾವಳಿ ಮಂದಾರಧರ ಹರಿ ರಾಮ ರಾಮ ರಾಮ 2 ದಶರಥ ನಂದನ ದಶಶಿರ ಭಂಜನ ಶಶಿಕಲ ರಂಜನ ರಾಮ ರಾಮ ರಾಮ 3 ಸುಜನರ ಪಾಲನೆ ಕುಜನರ ಕಾಲನೆ ಭಜಕರ ಲೋಲನೆ ರಾಮ ರಾಮ ರಾಮ 4 ಅಂಬುಜನಯನನೆ ಅಬುಜೆರಮಣನೆ ನಂಬಿದೆ ತಾತನೆ ರಾಮ ರಾಮ ರಾಮ 5 ಪನ್ನಗಶಯನನೆ ಚಿನ್ಮಯ ರೂಪನೆ ಚನ್ನಕೇಶವ ರಾಮ ರಾಮ ರಾಮ 6