ಒಟ್ಟು 12410 ಕಡೆಗಳಲ್ಲಿ , 137 ದಾಸರು , 5990 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗನಾಥ ಮಾಂ ಗಂಗಾಜನಕ ತುಂಗ ಮಹಿಮ ಮಂಗಳಾಂಗ ಪಾಹಿ ಪ ತಿಂಗಳ ತೇಜದಲಿ ಪೊಳೆಯುತ ಕಂಗೊಳಿಸುವ ಮುಕುಟ ಮಂಡಿತ ಬಂಗಾರದಾಭರಣ ಭೂಷಿತ ಶೃಂಗಾರದಿ ರಥವನೇರುತ ಮಂಗಳ ವಾದ್ಯಂಗಳುಲಿಯೆ ರಂಗನಾಥ ಪ್ರತಿವರ್ಷದಿ ತುಂಗಛತ್ರ ಚಾಮರ ವ್ಯಜ- ನಂಗಳ ವಿಭವದಿ ಬರುತಿರೆ ಕಂಗಳಿಂದ ನೋಳ್ಪ ಭಕ್ತ ಜಂಗುಳಿ ಪಾಲಿಸಲೋಸುಗ ಮಂಗಳಸಿರಿ ಜಾಲಹಳ್ಳಿ ಪುರನಿಲಯ ಪೊರೆ ಎನ್ನ1 ಹಿಂದಕೆ ಮುದಗಲ್ಲು ಪುರದಿ ಬಂದಿಹ ಉಪ್ಪಾರ ಜನದಿ ಬಂದು ಗೋಣಿಯೊಳಗೆ ಮುದದಿ ನಿಂದಿಯೊ ಪದಮೆಟ್ಟೆ ಬೆಟ್ಟದಿ ಅಂದಿನ ರಾತಿಯ ಸ್ವಪ್ನದಿ ಸಂದರ್ಶನವಿತ್ತು ಪುರದಿ ಮಂದಿರಕಾರ್ಯವ ಸೂಚಿಸ- ಲಂದು ರಾಯಗೌಡನಿಂದ ಬಂಧುರದಲಿ ನಿರ್ಮಿತ ಆ- ನಂದನಿಲಯ ಮಂದಿರ ಮು ಕುಂದನಂದ ಕಂದನೆ ಮದ್ ಹೃದಯದಲಿ ಸದಾತೋರೋ2 ವಾರಿಚರ ಮಂದರಧರ ಭೂ ಚೋರಮಥನ ಘೋರರೂಪನೆ ಚಾರು ಬ್ರಹ್ಮಚಾರಿ ವಾಮನ ಶೂರ ಪರಶುರಾಮನೆ ನಮೊ ಧಾರುಣಿ ಜಾವಲ್ಲಭ ಕಂ- ಸಾರಿ ವಸನದೂರನೆ ಹಯ ವೇರಿ ದುಷ್ಟ ದಿತಿಜರ ಭಯ ದೂರ ಮಾಡಿ ಕಾವದೇವ ಧಾರುಣಿಸುರ ಪರಿಪಾಲಕ ವಾರಿಜಭವ ನುತ ಕಾರ್ಪರಾ- ಗಾರವೀರ ನಾರಸಿಂಹ ನಮಿಸುವೆನು ರಮಾರಮಣ3
--------------
ಕಾರ್ಪರ ನರಹರಿದಾಸರು
ರಂಗನಾಥನೆ ನೀಲಘನಂಗ ದೇವರದೇವ ಗು-ಣಂಗಳ ಖಣಿಯೆ ನಿನ್ನ ಪದಂಗಳು ಗತಿಯೆಮಗೆ ಪ. ಉಭಯಕಾವೇರಿ ಮಧ್ಯದಲಭಯನೀವುತ ಪವಡಿಸಿದಬುಜಲೋಚನನೆ ನಿನ್ನ ವಿಭವಕ್ಕೆ ನಮೋಯೆಂಬೆ 1 ದೋಷದೂರನೆ ಭೂಮಿಗೆ ಭೂಮೋಹನನೆ ರಂಗಶ್ರೀಶ ನಿನ್ನ ನಂಬಿದೆ ಶೇಷÀಶಯನ ಕಾಯೊ 2 ಚೆಲುವ ನಿನ್ನನು ಪೋಲುವರಿಲ್ಲ ಮೂಜಗದೊಳು ಲಕುಮಿಯನಲ್ಲ ನಿನ್ನನು ಬಣ್ಣಿಸಲಳವಲ್ಲವೋ ಹಯವದನ 3
--------------
ವಾದಿರಾಜ
ರಂಗನಾಯಕ----ತ್ತುಂಗನಾದ ಧೊರಿಯೆ ಪ ಮೂರುತಿ ಮಹಾಮಹಿಮನಾದ ಅಂಗಜ ಜನಕ ಕೃಪಾಂಗ ದೇವೋತ್ತುಂಗ ಅ.ಪ ಸಿಂಧು ಶಯನ ದೇವ ಭಕುತರ ಬಂಧು ಮಹಾನುಭಾವ ಇಂದಿರಾ ಹೃದಯ ಧೀರಾ ಈ ಜನರಿಗಾನಂದನಾಗಿ ತೋರಾ ಮಂದರಧರ ಮುಕುಂದ ಮಾಧವ ಸುಜನ ಪೋಷಕ ಕಂದನ ಸಲಹಿದ ಕರುಣಸಾಗರ ಇಂದು ನಿಮ್ಮ ಚರಣ ದ್ವಂದ್ವಗಳ ತೋರು 1 ವೆಂಕಟಗಿರಿವಾಸ--- ಕಿಂಕರ ನಾ ಅಣುದಾಸ ಶಂಕೆಯಿಲ್ಲದ ದೋಷಾ ಮಾಡಿದಂಥ---- ಸಂಕಟಗಳೆಂಬೀ---- ಕರಗಳೆನ್ನ ಇರಲೂ ಕೊಂಕುಗಳ ಪರಿಹರಿಸ ----ದರ ಪರಮಪಾವನಾ 2 ವೇಣುಗಾನ ವಿನೋದಾ ನೀಹಿತ--ಮೂಲನಾದ ಶ್ರೀನಿವಾಸ ಗೋವಿಂದಾ ಶ್ರೀತಜನ ರಕ್ಷಣಾನಂದ ನಿಲಯನಾದ ಭಾನುಕೋಟಿ ಪ್ರಕಾಶದೇವ---- ಸೂಸುತಿರುವ ದಾನವಾಂತಕ 'ಹೆನ್ನೆ ವಿಠ್ಠಲ’ ಧೇನುರಕ್ಷಕ ದೀನಪೋಷಕ 3
--------------
ಹೆನ್ನೆರಂಗದಾಸರು
ರಂಗನ್ಯಾಕೆ ಬಾರ ತಂಗಿ ಮಂಗಳ ಮಹಿಮನ ದಿವ್ಯಾಂಗವ ಕಾಣದೆ ಎನ್ನಕಂಗಳು ಕಂಗೆಡುತಿವೆಪ. ರಂಗುಮಾಣಿಕದುಂಗುರದಂಗುಲಿಯ ಸನ್ನೆಯಿಂದಪೊಂಗೊಳಲೂದುವನ ತೋರೆ ರಮಣಿ ಅ.ಪ. ತಿಂಗಳು ಮೂಡಿತು ಪಿಕ ಸಂಗೀತವ ತೊಡಗಿತುಭೃಂಗ ತನ್ನಂಗನೆಯರ ಸಂಗಡ ನಲಿದು ಬಂದಶೃಂಗಾರವನದ ಮೃದು ತಂಗಾಳಿ ಬೀಸಿತು ನೋಡಾ-ನಂಗ ನೆಚ್ಚ ಬಾಣಗಳೆಂತೊ ಅಂತರಂಗವ ತಾಕಿದರೆನ್ನ ಇಂಗಿತವರಿತು ದೇವೋ-ತ್ತುಂಗ ಕಾಯದಿರೆ ಉಳಿವಂಗನ ನಾಕಾಣೆ ನಮ್ಮಪೆಂಗಳಿಗೆ ಬಂದ ಬಲುಭಂಗ ತನ್ನದಲ್ಲವೆ ಸಾ-ರಂಗಾಕ್ಷಿ ಬೇಗವನ ತೋರೆ ರಮಣಿ 1 ಕೌಸ್ತುಭ ರತ್ನಕರ್ಣಕುಂಡಲಸರಸಿಜಮುಖದಿ ಕಸ್ತೂರಿ ತಿಲಕವೆಸೆಯೆಪರಿಮಳಿಸುವ ಪೂಮಾಲೆಮೆರೆಯೆ ಪೊಳೆವ ಪೀತಾಂಬರದ ಸುತ್ತಲೊಲೆವಕಿರುಗೆಜ್ಜೆ ಮಣಿಮಯಕಾಂತಿ ಮಿಂಚುತಿರಲುಚರಣನೂಪುರ ಘಲುಘಲುಕೆನೆ ಕುಣಿವÀ ಶ್ರೀಹರಿಯನು ಕರೆದುತಾರೆ ರಮಣಿ 2 ಮಂದಜಾಸನನ ತಂದೆಯೆಂದೆನಿಪ ಗೋವಿಂದನಕಂದರ್ಪ ವೃಂದಾದಿಗಳ ಕಂದಿಸುವ ಕುಂದಿಲ್ಲದಸೌಂದರ್ಯಸಂದೋಹದೊಳಗೊಂದೊಂದನಾರು ಬಲ್ಲರುಎಂದೆಂದಿವನನು ಪೊಂದಿಪ್ಪಇಂದಿರೆ ಇವನ ಗುಣಸಾಂದ್ರ ಕಿರುಬೆರಳಿನಂದವನೋಡುತ್ತ ಆನಂದಸಿಂಧುವಿನೊಳ್ಮುಣುಗಿದಳಿಂದು ಹಯವದನ ಮುಕುಂದನ ತಂದೆನ್ನ ಮುಂದೆಇಂದುಮುಖಿ ಕರೆದುತಾರೆ ರಮಣಿ3
--------------
ವಾದಿರಾಜ
ರಂಗಪ್ಪ ಬಂದವ್ನೆ ಬಾಗ್ಲಲ್ಲಿ ನಿಂತವ್ನೆ ಸಿಂಗಾರದಿಂದವ್ನೇ ತೆಂಗಿನಕಾಯ್ಬಾಳೆಹಣ್ತಂದು ನೋಡಿರೋ ಹೊಂಗೂಳನೊತ್ತವ್ನೇ ಪ ನಾಕ್ಮಳ ನಿಂತವ್ನೆ ನೀರಲ್ಲಿ ನಿಂತವ್ನೆ ನಾಕೈಯಾ ಪಡೆದವ್ನೇ ಇಕ್ಕೆಲದಲಿ ಸಂಕುಚಕ್ರವ ಹಿಡಿದವ್ನೆ ರಾಕ್ಷಸನ್ನ ಮೆಟ್ಟವ್ನೆ1 ಗಟ್ಟಿ ಬೆನ್ನಿನ ಮ್ಯಾಗೆ ಬೆಟ್ಟವ ಹೊತ್ತವ್ನೆ ಗಟ್ಟಿ ಗದೇ ಹಿಡಿದವ್ನೇ ಮಟ್ಟಸವಾದ ನಾಕ್ಕಾಲಲ್ಲಿ ನಿಂತವ್ನೆ ಸಿಟ್ಟಿಲ್ಲ ನಗತವ್ನೇ 2 ಮೊಳದುದ್ದ ಮೂಗ್ಯ್ಮಾಲೆ ಭೂಮಿಯ ಹೊತ್ತವ್ನೇ ಬೆಳಸವ್ನೇ ಕೋರೆಹಲ್ಲಾ ತೊಳಲಿಬಳಲವನಪ್ಪ ನಮ್ಮಪ್ಪ ರಂಗಪ್ಪ ಯೆಳನಗೆ ನಗ್ತಾನೇ 3 ಮೂಡ್ತವ್ನೆ ಕಂಬ್ದಲ್ಲಿ ನರಸಿಮ್ಮನಾಗವ್ನೆ ಹಿಡಿದವ್ನೆ ದೊಡ್ರಾಕ್ಷಸ್ನಾ ದೊಡ್ದುಗ್ರಲೊಟ್ಟೆಯ ಬಗಿತವ್ನೆ ಸಿಗಿತವ್ನೆ ಕೊಡುತೀನ್ವರವನೆಂತಾನೇ 4 ಗಿಡ್ಡ ಹಾರುವನಂತೆ ಮೂರೆಜ್ಜೆ ಭೂಮಿಯನಡ್ಡಡ್ಡ ಅಳೆದವ್ನೆ ಪಾಡ್ಯದ ಹಬ್ದಲ್ಲಿ ಬಲಿಯ ಕರೆತರುತಾನೆ ಬೇಡಿದ್ದ ಕೊಡುತಾನೇ 5 ಜಯ ಜಯ ಜಯವೆಂತಾನೇ ಕೈಯಲ್ಲಿ ಹಿಡಿದವ್ನೆ ಗಂಡುಗೊಲ್ಲಿಯ ನೋಡೋ ಭಯವಿಲ್ಲ ಕೈಮುಗಿಯೋ 6 ಶಿವನ ಬಿಲ್ಮುರಿದವ್ನೆ ರಾವಣನ ತರಿದವ್ನೆ ಭೂಮಿಯೆಲ್ಲವಾಳ್ತವ್ನೆ ತವಕದಿ ನೋಡಿರೆಲ್ಲಾ 7 ಮಡುವಿಗೆ ಧುಮುಕಿ ಕಾಳಿಂಗನ ತುಳಿದವ್ನೆ ಹಿಡಿದವ್ನೆ ಹೊಂಗೊಳಲಾ ಮಾನವ ಕಡುರೂಪವಂತ ನಮ್ಮ 8 ಮತ್ತರ ಮಡದೀರ ವ್ರತವನು ಕೆಡಿಸಲು ಬೆತ್ತಲೆ ನಿಂತವ್ನೇ ಕೃತ್ತಿವಾಸನ ಕೈಯ್ಯೊಳಿಂಬಾಗಿ ನಿಂದವ್ನೆ ಉತ್ತಮ ದೇವನಮ್ಮ 9 ದುರುಳರನೊದೆಯಾಕೆ ಹೊಂಟವ್ನೇ ಪದಕಮಲಕೆ ಯೆರಗೋ 10 ಮುದ್ದು ರಂಗಪ್ಪನಿಗೆ ಪೊಂಗಲು ನೇವೇದ್ಯ ಸಿದ್ಧ ಮಾಡಿರಯ್ಯಾ ಬದ್ಧವು ಅವ ನಮ್ಮ ಕಾಯೋದು ಸಟೆಯಲ್ಲ ಎದ್ದೆದ್ದು ತಲೆಬಾಗಿರೊ 11 ರಾಮನು ಅವನೇ ಕಾಮನಪ್ಪನು ನಿಸ್ಸೀಮ ನಮ್ಮ ರಂಗನೇ ರಾಮದಾಸನ ಮನದೊಳು ಮನೆ ಮಾಡ್ಯವ್ನೇ ಪಾಮರ ವರದನೆಂಬ ಮಾಂಗಿರಿ 12
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಂಗಬಾರನ್ಯಾತಕೆ ಸಖಿಯೆ ಮುದ್ದು ಪ ಶರಧಿಯ ಪೊಕ್ಕನೇನೆ ಸುರರೆಲ್ಲರು ಕೂಡಿ ಗಿರಿಯ ಬೆನ್ನಾಲಿ ಅವರು ಪೊರಿಸಿದರೇನೆ 1 ಧರೆಯನೆತ್ತಲು ಪೋಗಿ ನರಹರಿಯಾದನೇನೇ ಗರುವರಹಿತ ಬ್ರಹ್ಮಚಾರಿಯಾದನೇನು 2 ಪರಶುಪಿಡಿದು ಕ್ಷತ್ರಿಯರ ಸವರುವೆನೆಂದು ಗಿರಿವನಗಳಲಿ ತಾನು ಚರಿಸುತಲಿಹನೇನೇ 3 ಸ್ಮರನ ಪಿತನು ತಾನು ನಾರಿ ಪಾಂಚಾಲೆಯ ಮೊರೆಯ ಕೇಳುತ ಭರದಿ ಸಾರಿದನೇನೆ 4 ಮಾನವ ತಾ ಸೂರೆಗೊಳ್ಳಲು ತೇಜಿ ಏರಿ ಪೋದನೇನೆ ಶ್ರೀ ರಂಗೇಶವಿಠಲ 5
--------------
ರಂಗೇಶವಿಠಲದಾಸರು
ರಂಗವಲಿದರಾಯಾ ನೀ ಸತ್ಸಂಗ ಪಾಲಿಸಯ್ಯಾ ಪ ಮಂಗಳಪ್ರದ ಪ್ರಥಮಾಂಗಾ ಪ್ರಥಮಾಂಗ ಮತಾಂಬುಧಿ ಕವಿ ಜಂಗುಳಿಗೆ ಅ.ಪ ಬುಧಜನನುತ ಮನುಜಾ ಪಂಚವದಾನಾರ್ಯರ ತನುಜಾ ಪಾದ ಪದುಮವ ಭಜಿಸದೆ ಅಧಮನಾದೆ ನಾ ಸದಮಲ ಕಾಯಾ1 ಕ್ಷಿತಿಯೊಳು ಪೂರ್ವದಿ ಪತಿತರ ಸಲಹಲು ಶತಕ್ರತುರಾಯರ ಸುತನೆನಿಸಿದ ಗುರು 2 ವೃಂದಾರಕ ಸ್ತೋಮಾ ವಂದಿತ ನಂದನಂದನ ಶಾಮ ಸ್ತಂಬ ಸು ಮಂದಿರದೊಳು ಘನ ಸಿಂದು ಮೆರೆವ ಗುರು 3
--------------
ಶಾಮಸುಂದರ ವಿಠಲ
ರಘುಕುಲ ತಿಲಕ ವಿಠಲ ಇವಳ ಘಾವಳಿಗಳನುಬಗೆಹರಿಸಿ ಕಾಪಾಡ ಬೇಕೋ ಹರಿಯೇ ಪ ಭೃಗುವರದ ನಿನ್ನಂಘ್ರಿ ಸೇವೆಯಲಿ ಮಹಭಕ್ತಿಮಿಗೆ ಜ್ಞಾನ ಕೊಟ್ಟಿವಳ ಕಾಪಾಡ ಬೇಕೋ ಅ.ಪ. ಶಬರಿ ಎಂಜಲನುಂಡ | ಕಾರುಣ್ಯ ಮೂರುತಿಯೆಅಭಯದನು ನೀನಾಗಿ ವಂಶ ಉದ್ಧರಿಸೋ |ಕುಭವ ಪರಿಹರಕಾಗಿ ಸಾಧನವು ಎಂದೆನಿಪಶುಭ ಸದಾಗತಿ ಮತದಿ ದೀಕ್ಷೆಯನೆ ಈಯೋ 1 ಪಾದ ಸೇವಕಳೀಗೆಭೇದ ಪಂಚಕ ತಿಳಿಸಿ ಸಾಧನವಗೈಸೋ 2 ಸರ್ವಜ್ಞ ಸರ್ವೇಶ ಹಯಮೊಗಾತ್ಮಕನಾದಸರ್ವ ಸುಂದರ ಗುರುಗೋವಿಂದ ವಿಠಲ |ಸರ್ವದಾ ಸರ್ವತ್ರ ನಿನ್ನ ಸ್ಮøತಿಯನೆ ಕೊಟ್ಟುದರ್ವಿಜೀವಿಯ ಸಲಹೆ ಬಿನ್ನವಿಪೆ ನಿನಗೇ 3
--------------
ಗುರುಗೋವಿಂದವಿಠಲರು
ರಘುನಂದನ ಬಾರೈ ಹಸೆಗೆ ನಿಗಮಾಗಮಾ ವಳಿಸನ್ನುತ ಪ ಶ್ರೀ ಜಾನಕಿ ಸಹಿತ ಅ.ಪ. ವೈರಿ ಕುಲಭಂಜನ ಪರಮೇಶವರ ಚಾಪಖಂಡನ ಕರುಣಾಕರ ಖರದೂಷಣಾದಿ ಹರನಾಶ್ರಿತ ವರ ಲೋಕಪಾಲ 1 ನವನೀರದಾಭ ನವಸುಂದರ ನವಮೀ ಸಂಜಾತ 2 ಶರಣಾಗತ ಭರಣಾಧೃತ ವರ ರಾಮಚಂದ್ರ 3
--------------
ಬೇಟೆರಾಯ ದೀಕ್ಷಿತರು
ರಘುನಂದನ ರಘುನಂದನ ರಘುನಂದನ ರಘುನಂದನ ಪಸುಖದಾಯಕ ಸಕಲಾಗಮ ನಿರುತಖಗವಾಹನ ಮಣಿಭೂಷಣ ಕರುಣಾಕರ ಚರಿತಕೌಸಲ್ಯ ವರನಂದನ ಘನಕುಂಡಲ ಮಣಿಮಂಡಲನಾರಾಯಣ ದಾಮೋದರ ಮಧುಸೂದನ ಕೃಷ್ಣ 1ಗೋ'ಂದ ಮುಕುಂದಾಚ್ಚುತ ಕೃಷ್ಣಾಂಬುಜನಾಥಲಕ್ಷ್ಮೀಶ ಕೃಪಾಳೋ, ಜಗದೀಶವಂದ್ಯ 'ಷ್ಣುಶ್ರೀ ರಾಘವ ರಾಮಾನುಜ ಪಾ' ಮುಕುಂದಸೀತಾರಮಣ ತ್ರಿನಯನ ಗೋಪಾಲ ಗಿರೀಶ 2ಗೋಪಾಲ ಗೋಪಾಲ ಗೋಪಾಲ ಗೋಪಾಲಭಕ್ತಪ್ರಿಯ ಗೋ'ಂದ ಮುಕುಂದ ಅತಿಭೀಷಣ ಕಟುಭಾಷಣ ಯಮಕಿಂಕರ ಪಠಳಂಕೃತತಾಡನ ಪರಪೀಡನ ಮರಣಾಗಮ ಸಮಯೇ 3ಶಿವ ಶಂಕರ ಶಿವ ಶಂಕರ ಶಿವ ಶಂಕರ ಶಿವ ಶಂಕರಉಮಯಾಸಾಮಮಪೇಕ್ಷಿತ ಯಮಶಾಶ್ವತ ಶೂಲಿಂಪರಮೇಶ್ವರ ಹರಗೌರಿರಮಣ * 4
--------------
ವೆಂಕಟದಾಸರು
ರಘುನಾಥ ದೀನಾನಾಥ ಸದ್ಗತಿದಾತ ನೋಡಿರ್ಯೋ ಜಾನಕಿ ಧವಗರ್ಪಿತವೆನೆ ಅವನಿಯೊಳಗೆ ಶಬರಿ ಘವಘವಿಸುತಿಹ ಅವಿರಳ ಪದದನುಭವ ನೀಡಿದಾ1 ದಾವನು ಶೃತಿಗಳು ಭಾವಿಸೆ ನುಡಿಯದು ದೇವನು ಹಿತಗುಜ ಕೇವಲ ವನಚರ ಜೀವರೊಳಾಡುತ ಸೇವೆಗೆ ನಲಿಯುತ ಕೈವಿಡಿ ಬಿತ್ತನು ಕೈವಲ್ಯಾದಾ 2 ಕುಂದದೆ ಬಾಂಧವ ನಿಂದಿಸಿ ನೂಕಲು ನೊಂದು ವಿಭೀಷಣ ಬಂದರ ಶರಣವ ತಂದೆ ಮಹಿಪತಿ ನಂದನ ಪ್ರಭು ಆ ನಂದದ ಸ್ಥಿರಪದ ಹೊಂದಿಸಿದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಘುರಾಮಗೆ ಬೆಳೆಗಿರೆ ಬೇಗ ಆರತಿ ಪ. ಪಶುಪತಿ ಮಿತ್ರಗೆ ಋಷಿಗಳ್ಯಾಗವ ಕಾಯ್ದವಗೆ ಶಶಿಮುಖಿ ಅಹಲ್ಯೆ ಶಾಪವ ಕಳೆದ ಅತುಳ ಮಹಿಮ ಶ್ರೀಹರಿಗೆ 1 ಶಿವನ ಧನುವ ಮುರಿದವನಿಜೆಯಳ ತಂದು ಜವದಿ ಪರಶುರಾಮನಿಗೆ ತವಕದಿ ಗರ್ವವ ಮುರಿದವನೀಶಗೆ ಕಮಲಾಕ್ಷಿಯರೀಗ ಬೇಗಾ 2 ಅನುಜನವಡಗೂಡಿ ವನಿತೆ ಸಹಿತಲೀ ತನುಜನಗೂಡಿದನುಜನ ಮುರಿದ ಘನದ ಶ್ರೀ ಶ್ರೀನಿವಾಸನಿಗೆ 3
--------------
ಸರಸ್ವತಿ ಬಾಯಿ
ರಘುರಾಮಚಂದ್ರ ಬಾರೈ ಹರೆ ದಿವ್ಯ ರತ್ನಪೀಠಕೆ ಪ ದೇವತಾಳಿ ನುತಿಯ ಕೇಳಿ ಭಾವದಲ್ಲಿ ಮುದವ ತಾಳಿ ರಾವಣಾದಿ ದನುಜ ವೃಂದವ ಸೀಳಿ ಜಗವ ಪೊರೆದ ವಿಭುವೆ 1 ಇಂದು ಸುಂದರ ಫಾಲರಾಮ ಇಂದು ವಂಶಜಲೋಲ ದಶರಥನಂದನಾಶ್ರಿತ ವತ್ಸಲ ವಿಭುವೆ 2 ಪಂಕಜ ಮಲ್ಲಿಕಾಕುಸುಮಾಳಿ ಭಾಸುರ ಪುಲ್ಲ ಚಂಪಕ ಮಾಲಕ ರಂಜಿತ ಉಲ್ಲಸನ್ಮøದುವಾಣಿ ವಿಭುವೆ 3 ಭಕ್ತ ಹೃದಯ ಕುಮುದ ಚಂದ್ರ ಶಕ್ತಿವಿಜಿತ ರಾಕ್ಷಸೇಂದ್ರ ಭುಕ್ತಿ ಮುಕ್ತಿದಾಯಕ ವಿಭುವೆ 4 ಮಾನವೇಂದ್ರ ಸುರೇಂದ್ರ ವಂದಿತ ಸೂನ ಶರ ಸಹಸ್ರ ಸುಂದರ ಚಕೋರ ಧೇನುನಗರ ಶ್ರೀರಾಮ ವಿಭುವೆ5
--------------
ಬೇಟೆರಾಯ ದೀಕ್ಷಿತರು
ರಘುವೀರನ ಕಂಡನು ಕಪಿವೀರ ಕಲಿಕಲ್ಮಷದೂರ ಪ ಅಘವರ್ಜಿತ ಪನ್ನಗಶಯನನೆಂದು ಬಗೆದು ಮನದಿ ಕರಮುಗಿದನು ದೂರದಿ ಅ.ಪ. ಶಿರಭಾಗದಿ ಮೆರೆವ ಜಟಾಮಕುಟ | ಚಿಕುರಾಳಿಯಿಂದ ಪರಿಶೋಭಿಪ ಸುಂದರ ಲಲಾಟ | ಕಮಲಾಕ್ಷಗಳಲಿ ನಾಸಿಕ ಬಲು ಮಾಟ ಸ್ಮರಲಾವಣ್ಯ ಧಿಕ್ಕರಿಸುವ ಸುಂದÀರ ಶರಧಿ ಗಂಭೀರನ 1 ಆಜಾನುಬಾಹುಗಳತಿ ಪ್ರಶಸ್ತ | ಸುರಚಾಪದಂತೆ ರಾಜಿಪ ಧನುವ ಧರಿಸಿದ ಹಸ್ತ | ವಿಶಾಲ ವಕ್ಷಕೆ ಈ ಜಗದೊಳಗುಪಮೇಯದೆತ್ತ | ದೋಷನಿರಸ್ತ ಮೂಜಗದೊಳಗತಿ ಸೋಜಿಗನೆನಿಪ ಸು ತೇಜದಿ ರಾಜಿಪ ರಾಜಕುಮಾರನ 2 ಸುಂದರ ತ್ರಿವಳಿಗೊಪ್ಪುವ ಉದರ | ನೆರೆ ಗಂಭೀರ ಚಂದದಿ ಶೋಭಿಪ ನಾಭಿಕುಹರ | ಚೀರಾಂಬರಧರ ಬಂಧುರ ಕಟಿತಟ ಬಲು ರುಚಿರ | ನೋಳ್ಪರ ಚಿತ್ತಹರ ಕುಂದಿಲ್ಲದ ಪದದ್ವಂದ್ವ ಸುಶೋಭಿತ ಸುಂದರಾಂಗ ಶ್ರೀ ಕರಿಗಿರೀಶನ 3
--------------
ವರಾವಾಣಿರಾಮರಾಯದಾಸರು
ರತ್ನದೊಳಗಿದು ರತ್ನ ನವರತ್ನಗಳೊಳಗಿದು ರತ್ನ ಪ ಚಿತ್ತಜಪಿತನೆಂಬ ರತ್ನ ನಮ್ಮ ನಿತ್ಯಮುಕ್ತರಂಗರತ್ನ ಅ.ಪ ಭಕ್ತಪಾಲಕನೆಂಬ ರತ್ನ ಸತ್ಯಾಸಕ್ತ ವರದನೆಂಬ ರತ್ನ ಮುಕ್ತಿದಾಯಕ ರಾಮರತ್ನ ನಮ್ಮ ಯುಕ್ತಿಭರಿತ ಕೃಷ್ಣರತ್ನ1 ಗೋಪಾಲಕೃಷ್ಣನೆಂಬ ರತ್ನ ವರತಾಪಸವಿನುತ ಮಾರತ್ನ ಶ್ರೀಪತಿಯೆಂಬ ಜೀವರತ್ನ ನಮ್ಮ ಪಾಪವಿನಾಶಕರತ್ನ 2 ಚಾರು ವೇದದೊಳಿಹ ರತ್ನ ನಮ್ಮಶ್ರೀರಮಣ ಎಂಬರತ್ನ 3 ಕರಿರಾಜವರದ ಸುರತ್ನ ನಮ್ಮ ಕರುಣಾಕರಯೆಂಬ ರತ್ನ ಶರಣ ಜನರ ಹಸ್ತರತ್ನ ನಮ್ಮ ತರಳಧ್ರುವನ ಕಾಯ್ದ ರತ್ನ 4 ಪ್ರೇಮರಸಾನ್ವಿತ ರತ್ನ ಇದು ಶ್ರೀಮಾಂಗಿರಿರಂಗರತ್ನ ನಮ್ಮ ರಾಮದಾಸಾರ್ಚಿತ ರತ್ನ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್