ಮದ ಮತ್ಸರವ ಬಿಡದನಕಾ ವಿಧ
ವಿಧದ ಸಾಧನವ ಮಾಡಲೇನೋ ಪ
ವೇದ ಶಾಸ್ತ್ರಗಳೋದಲೇನು ಗಂಗಾ
ಗೋದಾವರಿಯಲಿ ಸ್ನಾನವ ಮಾಡಲೇನು
ಸಾಧು ಕರ್ಮವಾಚರಿಸೇನು ವಿಷ್ಣು
ಪಾದದಿ ಪಿಂಡ ದಾನವ ಮಾಡಲೇನು 1
ಸನ್ಯಾಸಾಶ್ರಮ ಧರಿಸಲೇನೂ ಗೋಹಿ
ರಣ್ಯಾದಿಗಳಲಿ ಮಮತೆ ಬಿಟ್ಟರೇನು
ಪುಣ್ಯ ಕ್ಷೇತ್ರಕೆ ಪೋಗಲೇನು ಅನ್ನ
ಕನ್ಯಾದಿ ದ್ರವ್ಯದಾನವ ಮಾಡಲೇನು 2
ಪಾಪ ಕರ್ಮವ ತೊರೆದರೇನೊ ಲಕ್ಷ
ದೀಪಾರಾಧನೆ ದಿನ ದಿನ ಮಾಡಲೇನು
ಶಾಪಾನುಗ್ರಹ ಶಕ್ತಿ ಇದ್ದೇನು ಪೂಜಾ
ಸೋಪಸ್ಕರ ಬಹುತರವಿರಲೇನು 3
ಶ್ವಾಸ ನಿರೋಧಿಸಲೇನು ಪಕ್ಷ
ಮಾಸೋಕ್ತ ಧರ್ಮ ಕರ್ಮವ ಮಾಡಲೇನು
ಆಸನ ಜಯ ಸಂಪಾದಿಸಲೇನು ಉಪ
ವಾಸ ವ್ರತದಿ ದೇಹ ಬಳಲಿಸಲೇನು 4
ಜ್ಯೋತಿಷ್ಟೋಮ ಮಾಡಲೇನು ಲಕ್ಷ
ಶ್ರೀ ತುಳಸಿ ಅರ್ಪಿಸಲೇನು
ಭೂತದಯವು ಇದ್ದರೇನು ಜಗ
ನ್ನಾಥ ವಿಠಲನಂಘ್ರಿ ಪೊಂದಿದ್ದವರೊಳು 5