ಎಂತು ಮೀರುವೆ ಮಾಯವಾ ಪ.
ಮಾಯಾ ಕಂತು ಕಂತು ಜನಕ ಹರಿಯೆ
ಸಂತತ ಗೃಹಧನ ಭ್ರಾಂತಿಗೆ ಸಿಲುಕುತಾ
ತಂತ್ರವಾದೆನು ಸರ್ವತಂತ್ರ ನೀ ಕರುಣಿಸು ಅ.ಪ.
ದೇಹವೆ ನಾನೆಂಬ ಮೋಹದಿ ಬಹು ವಿಧ
ಮೋಹಗೊಂಡನುದಿನವು
ಆಹಾರ ನಿದ್ರಾ ಮೈಥುನಗಳೆ ಗತಿ ಎಂಬ
ಹಾಹಾಕಾರವು ಬಿಡದು
ಇಹಪರಗಳ ಸನ್ನಾಹ ಒಂದನು ಕಾಣೆ
ಗೇಹಾಂಧಕೂಪಮಹಾಹಿಮುಖದಿ ಸಿಕ್ಕಿ 1
ವೇದವಿಹಿತ ಕರ್ಮವಾದರು ಮಾಡದೆ
ಸಾಧು ಮಾರ್ಗವ ಮೀರಿದೆ
ಮಾದಿಗನಂತೆ ಮನಸಿನಲಿ ಬಹು ವಿಧ
ಕಪಟ ತಾಳಿದೆ
ವ್ಯಾಧಿ ಪೀಡಿತ ದೇಹ ಬಾಧೆಯ ಸಹಿಸದೆ
ಶ್ರೀದ ನಿನ್ನಯ ಪದ್ಮ ಪಾದವೆ ಗತಿಯೆಂಬೆ 2
ಮತಿವಂತ ಜನರ ರಕ್ಷಿಪುದು ದುರ್ಘಟವೆ ಶ್ರೀ-
ಪತಿ ನಿನಗುಸುರುವದೆ
ಶತಕೋಟಿ ಮಿತ ಜನ್ಮಾರ್ಜಿತ ಪಾಪ ತತಿ ನೀ ಸಂ-
ಸೃತನಾಗೆ ನಿಲುವುಂಟೆ
ಪತಿತ ಪಾವನನೆಂಬ ಪರಮಾತ್ಮ ಶೇಷಾದ್ರಿ
ಪತಿ ನೀನೆ ಗತಿಯೆಂದು ಸತತ ನಂಬಿದೆ ದೇವ 3