ಒಟ್ಟು 2437 ಕಡೆಗಳಲ್ಲಿ , 116 ದಾಸರು , 1864 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸು ರಘುನಂದನ ರಾಮಾ ನಿರುತವು ನಿನ್ನನೆ ಸ್ಮರಿಸುವ ಭಾಗ್ಯವ ಪ ಪರಮಮಂಗಳನಾಮಾ ದುರಿತಭಂಜನ ನಾಮ ಗಿರಿಜೆಪಾಡುವ ನಾಮಾ | ಜಾನಕೀರಾಮ ಅ.ಪ ರಾಮನೆನೆ ಪಾಪವು ಲಯವಹುದಂತೆ ರಾಮಾಯೆನೆ ಭಯಗಳು ಪರಿಹರವಂತೆ 1 ರಾಮನೆನೆ ಮಾಯೆಯು ಹರವಂತೆ ರಾಮನ ನುತಿಸೆ ಮನ ಪರವಶವಂತೆ2 ಜಯರಾಮ ಜಯರಾಮ ಎನುತಿರುವಂತೆ] ದಯಮಾಡೊ ಮಾಂಗಿರಿರಂಗ ನೀನಂತೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕರುಣಿಸೊ ಶ್ರೀ ಗುರುರಾಜ ಬರದ್ಯಾಕೆ ಎನ್ನೊಳು ದಯ ಪ ದಯಮಾಡೊ ಶ್ರೀ ಗುರುರಾಜ ಹಯವದನನಿಗತಿ ಪ್ರಿಯ ಅ.ಪ ಒಲಿಸಾದೆ ವಿದ್ಯೆಗಳನ್ನು ಬಾಲತನದಿ ಬಹುಕಾಲ ಕಳೆದೆ ಕುಲೀಲೆಗಳಲ್ಲಿ ಛಲವ್ಯಾಕೆ ಎನ್ನೊಳು ಬಲ್ಲಿ 1 ಜ್ಞಾನರಹಿತ ಪ್ರಾಯದಿ ಮಾನಾಪೇಕ್ಷೆಯನೆ ಮಾಡಿ ಮೌನಿ ವೇಷವನೆ ಧರಿಸಿ ಹೀನಾಚರಣೆಯಲ್ಲಿರುವೆ 2 ಪತಿತಾಗ್ರಣಿಯು ನಾ ಬಲ್ಲಿ ಪತಿತಪಾವನ ನೀ ಬಲ್ಲೆ ಗತಿಪದ ಮತಿಯನಿತ್ತು ರತಿಪತಿಪಿತನ ತೋರಿ3 ಬಲ್ಲವರನು ರಕ್ಷಿಪುದು ಅಲ್ಲ ಬಿರುದು ಘನವಾದ್ದು ಅಲ್ಪನ ಪೊರೆಯಲು ನಿನಗೆ ಒಳ್ಳೆ ಕೀರುತಿ ಬರುವುದು 4 ಸರ್ವಜ್ಞ ನಿನಗೆ ನಾನೆಂತೋ ಉರ್ವೀಭಾರನು ನಾ ಪೇಳ್ವೆ ಪರ್ವ ಪಂಚಕಗಳ ಕಳೆ ಶ್ರೀ ನರಹರಿಯನೆ ಪೊಂದಿಸಿ 5
--------------
ಪ್ರದ್ಯುಮ್ನತೀರ್ಥರು
ಕರುಣಿಸೋ ಕೃಷ್ಣ ಕರುಣಿಸೊ | ಕರುಣಿಸಿದರೆ ನಾ ನಿನ್ನನೆಂದಿಗು ಮರೆಯ ಪ ಭೂತಳದೊಳು ನಾನು ಈ ತನುವುತೆತ್ತು | ಪಾತಕದಲಿ ಯಮಯಾತನೆ ಪಟ್ಟೆ 1 ಇಂದೆನ್ನ ಹೃದಯವೆಂಬೊ ಮಂದಿರದೊಳು | ಇಂದಿರೆ ರಮಣ 2 ಹಿಂದಿನ ಅವಗುಣ ಒಂದೂ ಎಣಿಸದೆ | ಮುಂದೆ ದೋಷಕ್ಕೆ ಮನವೆರಗಿಸದೆ 3 ಪಾಪ ಪುರುಷನೆಂಬೊ ಪಾಪಿಯ ಕೈಗೆ | ಪೋಪಗೊಡದೆ ಎನ್ನ ಕಾಪಾಡೊ ರನ್ನ 4 ಅಂತ್ಯಕಾಲದಲಿ ಅಂತಕರು ಬಂದು | ನಿಂತಾಗಲಿ ನಿನ್ನ ಚಿಂತೆ ಒದಗಲಿ 5 ಕನಸಿನೊಳಗೆ ನಿನ್ನ ನೆನಸಿಕೊಂಬಂತೆ | ಮನಸು ಸುಸ್ಥಿರವಾಗಲಿ ಅನುಗಾಲವಿರಲಿ 6 ಇದ್ದಾಗ ದಾಸರದಾಸನೆನಿಸೊ ಬೇಗ | ಸಿರಿ ವಿಜಯವಿಠ್ಠಲ ಕರುಣಿಸೊ 7
--------------
ವಿಜಯದಾಸ
ಕರುಣೆ ತೋರೋ ಕಣ್ಣ ತೆರೆದು ಗುರುವು ನೀನೆ ಗತಿಯು ನೀನೆ ಪ ತ್ವರದಿ ಜಪವ ಪೂರ್ಣ ಮಾಡಿ ಕರವ ಶಿರದಲಿಡುತ ಅ.ಪ. ಸಿರಿಯ ವರನ ಪರಮ ಭಕುತ ಸಿರಿದಮಣಿಗಳಲ್ಲಿ ನೀನು ಹಿರಿಯ ಅಹುದೊ ಜಗದ ಗುರುವೆ ಪರಮ ಕರುಣಾಕರನೆ ದೇವ 1 ಹರಿಯ ಆಜ್ಞದಂತೆ ನೀನು ಸರುವ ಪ್ರಾಣಿಗಳಲಿ ನಿಂದು ಹಿರಿದು ಜಪವನಾಚರಿಸಿ ಅವರು ಅರಿಯದಂತೆ ನಿರುತ ಪೊರೆವೆ 2 ಶರಧಿ ಮಥನದಿಂದ ಬಂದ ಗರಳನಂದು ಭುವನಗಳನು ಉರುಹುತಿರಲು ಹರಿಯ ಮನವ ಅರಿತು ನೀನು ಭರದಿ ಕುಡಿದೆ 3 ಪೊಗಳಲವೆ ನಿನ್ನ ಮಹಿಮೆ ಸುಗುಣಮಣಿ ಭಾರತಿಯ ಪತಿಯೆ ಅಗಜೆಯರಸನನ್ನು ಪೆತ್ತ ನಗಧರನ ಪ್ರೀತಿ ಪಾತ್ರ 4 ಅಜನಪದಕೆ ಅರುಹನಾದೆ ದ್ವಿಜ ಫಣೀಶಾದಿಗಳ ಗುರುವೆ ಭಜನೆಗೈವೆನೆಂತು ನಿನ್ನ ತ್ರಿಜಗವಂದ್ಯ ತ್ರಿಜಗಪೂಜ್ಯ 5 ತ್ರೇತೆಯಲಿ ಅಂಜನಿಯಳ ಪೂತ ಗರ್ಭದಿಂದ ಬಂದು ಪೋತನಾದ ರವಿಜನನ್ನು ಪ್ರೀತಿಯಿಂದ ಸಲಹಿದೆಯ್ಯ 6 ಅಂದು ಕಪಿಯ ವೃಂದವೆಲ್ಲ ಬಂದು ಶರಿಧಿ ತಟದಿ ನಿಂದು ಮುಂದೆ ದಾರಿ ಕಾಣದಿರಲು ಸಿಂಧುವನ್ನು ದಾಟಿ ಬಂದೆ 7 ಮಂಗಳಾಂಗಿ ಸೀತೆಯನ್ನು ಕಂಗಳಿಂದ ನೋಡಿ ಹಿಗ್ಗಿ ಅಂಗನೆಯ ಪಾದಕೆರಗಿ ಉಂಗುರವನಿತ್ತ ಧೀರ 8 ಫಲವ ಸವಿವ ನೆವದಿ ನೀನು ನಲಿದು ವನವ ಮುರಿದು ತುಳಿದೆ ಕಲಹಕಿಳಿದು ಬಂದ ಅಕ್ಷನ ಬಲಿಯಹಾಕಿ ಕುಣಿಯುತಿರ್ದೆ9 ಕುಲಿಶಧರನ ಗೆಲಿದ ವೀರ ಜಲಜಭವನ ಶರವ ಬಿಡಲು ಛಲದಿ ನೀನು ಅದನು ತಡೆದು ಮಲೆತು ನಿಂತ ಮಹಿಮಯುತನೆ 10 ವನಜಭವ ನಾಮನ ಕೇಳಿ ಕನಲಿ ಬಂದಾ ಶರಕೆ ಸಿಲುಕಿ ದನುಜ ಸಭೆಗೆ ಬಿಜಯಮಾಡಿ ಅನುವ ತಿಳಿದು ಬಂದ ದೇವ 11 ರಕ್ಕಸನ ಲೆಕ್ಕಿಸದೆ ಧಿಕ್ಕರಿಸಿ ಮಾತನಾಡಿ ಪಕ್ಕಿರಥನ ಬಲುಮೆಯನ್ನು ಹೆಕ್ಕಳಿಸಿ ನೀ ಪೊಗಳಿ ನಿಂದೆ 12 ಉಕ್ಕಿ ಬಂದ ರೋಷದಿಂದ ರಕ್ಕಸನು ಚರರ ಕರೆದು ಇಕ್ಕಿರಿವನ ಬಾಲಕುರಿಯ ತಕ್ಕ ಶಿಕ್ಷೆ ಮಾಡಿರೆನಲು 13 ಸುಟ್ಟಬಾಲ ನೆಗಹಿಕೊಂಡು ದಿಟ್ಟ ನೀನು ಪುರವನೆಲ್ಲ ಅಟ್ಟಹಾಸದಿಂದ ಮೆರೆದೆ 14 ಶರಧಿ ಹಾರಿ ಬಂದು ಸತ್ಯಸಂಧ ರಾಮಗೆರಗಿ ಇತ್ತು ಚೂಡಾಮಣಿಯನವನಾ ಚಿತ್ತ ಹರುಷಗೈದ ಧೀರ 15 ಹರಿಯು ತನ್ನ ಬೆರಳಿನಲ್ಲಿ ಗಿರಿಯನೆತ್ತಿ ನಿಂತನೆಂದು ಸರುವ ಗಿರಿಗಳನ್ನು ನೆಗಹಿ ಶರಧಿಗೊಡ್ಡಿ ಸೇತುಗೈದೆ 16 ಸುರರಿಗಮೃತವಿತ್ತನೆಂದು ಅರಸಿ ಸಂಜಿವನವ ನೀನು ಭರದಿ ತಂದು ಒರಗಿ ಬಿದ್ದ ಹರಿಯ ವೃಂದಕೆರೆದು ಮೆರೆದೆ 17 ಮಂದರಾದ್ರಿಯನ್ನು ಒಡೆಯ ಅಂದು ಬೆನ್ನಲಿ ಪೊತ್ತು ನಿಂದು ಸಿಂಧುವನ್ನು ಗೆಲಿದನೆಂದು ಬಂದೆ ಹಾರಿ ಲಂಕಪುರಿಗೆ 18 ಧರಣಿಧವಗೆ ನೆರಳಿನಂತೆ ಕಾಲ ಚರಿಸಿ ನೀನು ಅರಸಿನಂತೆ ಬಂಟನೆಂಬ ಕರೆಯವಾರ್ತೆ ಖರೆಯಗೈದೆ 19 ಕಾಲನೇಮಿ ಯತಿಯ ರೂಪ ಜಾಲದಿಂದ ವೇಳೆ ಕಳೆಯೆ ಶೀಲವಂತ ಅವನ ಸೀಳಿ ಬಾಲದಿಂದ ನಗವ ತಂದೆ 20 ವ್ಯಾಸಮುನಿಯ ಯಂತ್ರದಲ್ಲಿ ವಾಸವೆಂದು ತೂರಿಕೊಳುತ ದಾಸ ಜನರ ಆಸೆಗಳನು ಬೇಸರಾದೆ ನೀ ಸಲಿಸುವೆ 21 ನೀನು ಒಲಿಯೆ ರಾಮನೊಲಿವ ನೀನು ಮುನಿಯೆ ರಾಮ ಮುನಿವ ನಾನು ನಿನಗೆ ಅನ್ಯನಲ್ಲ ಸೂನುವಲ್ಲೇ ತಿಳಿದು ನೋಡೊ 22 ನಿನ್ನ ನಂಬಿ ಸರಮೆಯರಸ ಪನ್ನಗಾರಿರಥನ ಒಲುಮೆ- ಯನ್ನು ಪಡೆದು ಹರುಷವಾಂತು ಧನ್ಯನಾದ ಧರೆಯೆ ಮೇಲೆ 23 ನಿನ್ನ ಜರೆದ ಅವನ ಅಣ್ಣ ತನ್ನ ಬಂಧು ದೇಶ ಕೋಶ- ವನ್ನು ನೀಗಿಕೊಂಡು ಕೊನೆಗೆ ಮಣ್ಣುಗೂಡಿ ಪೋದನಯ್ಯ 24 ದಂತಿಪುರದ ದೊರೆಯೆ ಮಡದಿ ಕುಂತಿದೇವಿ ಕುವರನಾಗಿ ಕಂತುಪಿತನ ಮತವ ತಿಳಿದು ನಿಂತು ಖಳರ ಸದೆದ ಶೂರ 25 ಏಕಚಕ್ರ ನಗರದಲ್ಲಿ ಶೋಕ ಪಡುತಲಿರ್ದ ಜನರ ಕಾಕು ಬಕನ ಏಕಮುಷ್ಠಿಯಿಂದ ಕೊಂದೆ 26 ಕೀಚಕಾರಿ ನಿನ್ನ ಮಹಿಮೆ ಯೋಚನೆಗೆ ನಿಲುಕದಯ್ಯ ಯಾಚಿಸೂತಿ ದೀನನಾಗಿ ಮಾಚದಂತೆ ಸಲಹೊ ಸ್ವಾಮಿ 27 ಜರೆಯ ಸುತನ ಗರುವ ಮುರಿದು ಭರದಿ ಅವನ ತನುವ ಸೀಳಿ ಧರಣಿಧವರ ಸೆರೆಯ ಬಿಡಿಸಿ ಪರಮ ಹರುಷಗರೆದ ಧೀರ 28 ದುರುಳ ದುಶ್ಶಾಸನನ ಅಂದು ಧುರದಿ ಕೆಡಹಿ ಉರವ ಬಗೆದು ತಿರೆಯ ಹೊರೆಯ ಹರಿಸಿದಂಥ ಸರುವ ಪುಣ್ಯ ಹರಿಗೆ ಇತ್ತೆ 29 ಮಲ್ಲಯುದ್ಧದಲ್ಲಿ ನೀನು ಖುಲ್ಲ ದುರ್ಯೋಧನನ ತೊಡೆಗ ಸುರರು ನೋಡಿ ಫುಲ್ಲ ಮಳೆಯಗರೆದರಾಗ 30 ಸೃಷ್ಟಿಕರ್ತ ಕೃಷ್ಣ ನಿನ್ನ ಇಷ್ಟದೈವವೆಂದು ಅವನ ನಿಷ್ಠೆಯಿಂದ ಭಜಿಸಿ ಇಳೆಯ ಶಿಷ್ಟ ಜನರ ಕಷ್ಟ ಕಳೆದೆ 31 ಖಲರು ನಿನ್ನ ಬಲುಮೆ ನೋಡಿ ಗೆಲುವು ತಮಗೆ ಆಗದೆಂದು ಕಲಿಯುಗದಿ ವಿಪ್ರರಾಗಿ ಇಳೆಯ ಧವನ ಹಳಿಯುತಿರಲು 32 ಜಡಜನೇತ್ರ ನಿನ್ನ ಕರೆದು ಅಡಗಿಸಿವರವಾದವೆನಲು ನಡುವೆ ಮನೆಯು ಎಂಬ ದ್ವಿಜನ ಮಡದಿ ಗರ್ಭದಿಂದ ಬಂದೆ 33 ಯತಿಯು ನೀನೆಂದೆನಿಸಿಕೊಂಡು ಚ್ಯುತಿ ರಹಿತ ಪ್ರೇಕ್ಷರಿಂದ ಶ್ರುತಿಪುರಾಣ ವೇದಮಂತ್ರ ತತಿಗಳನು ಪಠಣಗೈದೆ 34 ಹರಿಯೆ ಹರನು ಹರನೆ ಹರಿಯೆಂ- ದುರುಳ ಖಳರ ಕರೆದು ಕರೆದು ಜರೆದು ಭರದಿ ಹರಿಯೆ ಶರಣೆಂದರುಹಿ ಮೆರೆದೆ 35 ಮಾಯ ಮತವ ಧಿಕ್ಕರಿಸಿ ನ್ಯಾಯ ಶಾಸ್ತ್ರವನ್ನು ರಚಿಸಿ ಕಾಯಭವನ ಪಿತನ ಹಳಿದ ನಾಯಿಗಳನು ಬಡಿದು ನಿಂದೆ 36 ಕೃತಕಭಾಷ್ಯ ರಚಿಸಿದಂಥ ದಿತಿಜರನ್ನಾನತರ ಮಾಡಿ ಗತಿಯ ತೋರಿ ಜನಕೆ ಸತ್ಯಾ- ವತಿಯ ಸುತನ ಒಲುಮೆ ಪಡೆದೆ 37 ಮಧ್ವಮತವ ಉದ್ಧರಿಸಿ ಶುದ್ಧವಾದ ಬುದ್ಧಿಗಲಿಸಿ ಹದ್ದುವಾಹನ ಮುದ್ದುಕೃಷ್ಣನ ಶ್ರದ್ಧೆಯಿಂದ ಬದ್ಧಗೈದೆ 38 ಅಷ್ಟಮಠವ ರಚನೆ ಮಾಡಿ ಶಿಷ್ಟಜನರ ಬಾಧೆ ಕಳದೆ ತುಷ್ಟರಾದ ದ್ವಿಜರು ನಿನ್ನ ಎಷ್ಟು ಪೊಗಳಿ ತೀರದಯ್ಯ 39 ದಾನಧರ್ಮವ ಮಾಡಲಿಲ್ಲ ಜ್ಞಾನಮಾರ್ಗ ಹಿಡಿಯಲಿಲ್ಲ ದೀನತನದ ಭವಣೆಯಿಂದ ನಾನು ಮರುಗಿ ಬಂದೆನೀಗ 40 ವಚನ ಮಾರ್ಗದಲ್ಲಿ ನಿನ್ನ ಪ್ರಚನೆ ಮಾಳ್ಪೆ ಕೇಳೊ ದೇವ ರಚಿಸಲಾರೆ ನಿಯಮಗಳನು ಉಚಿತ ತೋರಿದಂತೆ ಮಾಡೊ 41 ನಾರಸಿಂಹ ರಾಮಕೃಷ್ಣ ನಾರಿ ಸತ್ಯವತಿಯ ಮಗನ ಮೂರುತಿಗಳ ಹೃದಯದಲ್ಲಿ ಸೇರಿ ಭಜಿಪ ಭಾವಿ ಬ್ರಹ್ಮ 42 ವಾಯು ಹನುಮ ಭೀಮ ಮಧ್ವ ರಾಯ ನಿನ್ನ ನಂಬಿ ಬಂದೆ ಮಾಯ ಪಾಶದಿಂದ ಬಿಡಿಸಿ ಕೃಪಣ ಬಂಧು 43 ಜನುಮ ಜನುಮದಲ್ಲಿ ನೀನೆ ಎನಗಿ ಜನನಿ ಜನಕನಾಗಿ ಕನಸು ಮನಸುನಲ್ಲಿ ನಿನ್ನ ನೆನೆಸುವಂತೆ ಮತಿಯ ನೀಡೊ 44 ತುಂಗಭದ್ರ ತೀರ ವಾಸ ಭಂಗಬಾಳನು ಹೊರೆಯಲಾರೆ ಮಂಗಳಾಂಗ ಕಳುಹೊ ಎನ್ನ ರಂಗಈಶವಿಠಲ ಪುರಿಗೆ 45
--------------
ರಂಗೇಶವಿಠಲದಾಸರು
ಕರೆವರು ಬಾ ಮನೆಗೆ ಶ್ರೀ ಕೃಷ್ಣ ಮೂರ್ಜಗಂಗಳಿಗೆ ರಾಜಾಧಿರಾಜ ಪ ರಾಜಿಸುವ ಸೋಜಿಗದ ಬಲು ಸೋಜಿಗದ ಮನೆಗೆ ಶ್ರೀ ಕೃಷ್ಣ ಅ.ಪ ಸಾರಸಲೋಚನೆ ಭೀಷ್ಮಕ ಕುವರಿ ನೂರು ವಿಧದ ಬಲು ಪರಿಮಳದ ಚಾರು ಕುಸುಮಗಳ ಹಾರವ ಪಿಡಿದು ಮಾರಜನಕ ನಿನ್ನ ಕೋರುವಳು 1 ಚಿತ್ತಜನಯ್ಯನ ಚಿತ್ತದ ರಾಣಿ ಯತ್ನದಿ ನಿನ್ನನು ಕರೆಸಿದಳು ಚಿತ್ರವಿಚಿತ್ರದ ಮುತ್ತುರತ್ನಗಳ ಉತ್ತಮ ಪೀಠಕೆ ದಯಮಾಡೊ 2 ಯದುಕುಲ ನಂದನ ನೀ ಬಾರೋ ಮಧುರಾನಾಥಾ ನೀ ಬಾರೋ ಮದಗಜಗಮನದಿ ಬಾರೊ ಪ್ರಸನ್ನ ವದನೆಯರಾರತಿ ಬೆಳಗುವರು3
--------------
ವಿದ್ಯಾಪ್ರಸನ್ನತೀರ್ಥರು
ಕಷ್ಟ ಕಷ್ಟವೋ ಕೃಷ್ಣ ದೃಷ್ಟಿಯಲಿ ನೋಡದಿರೆ ತುಷ್ಟಿಪಡಿಸಲು ನಿನ್ನ ನಾನೆಷ್ಟರವನಯ್ಯ ಪ ಭ್ರಷ್ಟನಾಗಿಹೆ ನಾ ಅಷ್ಟಾಂಗಯೋಗವ ತಿಳಿಯೆ ಒಂ- ದಿಷ್ಟು ಭಕುತಿಯ ಕೊಟ್ಟು ಕಡೆಹಾಯಿಸಯ್ಯ ಅ.ಪ ಸತ್ಯ ಅಸ್ತೇಯ ಬ್ರಹ್ಮಚರ್ಯ ಅಹಿಂಸಾ ಧೃತಿ ದಯಾ ಕ್ಷಮಾರ್ಜಿತ ಮಿತಭುಕ್ತವು ನಿತ್ಯ ಬಾಹ್ಯಾಂತರ ಶೌಚಾದಿ ದಶಗುಣ ಯುತವಾದಯಮ ಉಪಾಸನೆಗಳಿನಿತಿಲ್ಲವೋ ದೇವಾ 1 ನಿಯಮ ಮೊದಲಿಲ್ಲ ಜಪತಪ ಸಂತೃಪ್ತಿ ನಿಯತ ಸಿದ್ಧಾಂತ ಶ್ರವಣ ಲಜ್ಜಮತಿಯು ಶ್ರೀಯಃಪತಿಯ ಪೂಜನ ಆಸ್ತಿಕ್ಯವ್ರತ ದಾನೋ- ಪಾಯವಿಲ್ಲದೇ ಕಡೆ ಹಾಯ್ವುದೆಂತಯ್ಯ 2 ಘಾಸಿಯಾಗಿಹುದಯ್ಯ ಷಡ್ವಿಧಾಸನಗಳೂ ಸ್ವಸ್ತಿಕ ಭದ್ರಪದ್ಮ ಅರ್ಧಾಂಗಾಸನದಿ ಸಿದ್ಧ ಪರ್ಯಂಕಗಳೆಂಬ ಆಸನದಿ ಕುಳಿತು ನಾ ಧೇನಿಸಲರಿಯೆ ಹರಿಯೇ 3 ಪ್ರಾಣಾಯಾಮವ ಕ್ರಮವು ರೇಚಕ ಪೂರಕವು ದಣಿವಿಲ್ಲದೆ ಕುಂಭಕದ ಕ್ರಮವಿಲ್ಲ ತ್ರಾಣವಿಲ್ಲವೋ ವಾಯುಬಂಧ ಮಾಡಲರಿಯೆ ಪ್ರಾಣಪತಿ ನಿನ್ನ ಕರುಣವಿಲ್ಲದಾತನಕ 4 ವಿಷಯಾಭಿಲಾಷೆಯಿಂದ್ಹರಿದು ಹೋಯಿತು ಮನಸು ವಿಷಮವಾಗಿಹುದಯ್ಯ ಮತ್ಸಾಧನ ಪ್ರತ್ಯಾಹಾರ ಸಾಧನವಿಲ್ಲ ಕೃಷಿಮಾಡಿ ಸ್ಥಿರಮನದಿ ಧೇನಿಸಲು ನಾನರಿಯೆ 5 ಧಾರಣೋಪಾಯದೊಳು ಅಣುಮಾತ್ರ ನಾನರಿಯೆ ನರಕ್ರಿಮಿಯಾಗಿ ನಾ ಧರೆಯೊಳುಳಿದೆ ಅರಿಯೆ ಬಾಹ್ಯಾಂತರದಿ ಭೂತಪಂಚಕವಿರುವ ಪರಿ ತಿಳಿದು ಪ್ರಾಣವಾಯು ಸಡಿಲಬಿಡಲರಿಯೆ 6 ಧ್ಯಾನಿಸಲು ಏಕಾಗ್ರಚಿತ್ತವೇ ಎನಗಿಲ್ಲ ಸಂಸ್ತುತಿಸೆ ಸಂಪ್ರಜ್ಞಾ ಅಸಂಪ್ರಜ್ಞವೆಂಬ ಘನಸಮಾಧಿಯೊಳ್ ಪರಿವಿಲ್ಲದಲೆ ನಿನ್ನ ಕರುಣವೆಂತಾಗುವುದೋ ಶ್ರೀ ವೇಂಕಟೇಶಾ 7 ಶುದ್ಧವಾದ ದ್ವೈತತ್ರಯ ತಿಳಿಯದಲೆ ಮುಗ್ಧನಾಗಿಹೆ ನಾನಪರಿಶುದ್ಧನೊ ಶಬ್ದಗೋಚರ ನಿನ್ನ ಪರಿಶುದ್ಧ ಭಾವದಿಂ ಬುದ್ಧಿಪೂರ್ವಕ ತಿಳಿಯೆ ಬದ್ಧಪಾಮರನಯ್ಯ 8 ಕರಣತ್ರಯದಲಿ ಮಾಳ್ವ ಕ್ರಿಯೆಗಳೆಲ್ಲವು ಸತತ ಹರಿಯೇ ಬಿಂಬಕ್ರಿಯವ ನಾನರಿಯದೇ ಕರುಣಶರಧಿಯೆ ನೀ ಕೃಪೆಮಾಡಿ ಪೊರೆಯದಿರೆ ಉರಗಾದ್ರಿವಾಸವಿಠಲ ನಿನ್ನ್ಹ್ಹೊರತು ಗತಿಯುಂಟೆ 9
--------------
ಉರಗಾದ್ರಿವಾಸವಿಠಲದಾಸರು
ಕಷ್ಟಹರಿಸೊ ಪರಮೇಷ್ಟಿಪಿತನೆ ನೀ ಕೈ ಬಿಟ್ಟರೆ ಸೃಷ್ಟಿಯೊಳು ಪಾರುಗಾಣುವುದೆಂತೂ ಪ ಇಷ್ಟದಿಂದಲೋ ಅನಿಷ್ಟದಿಂದಲೋ ನಾನೇ ಹುಟ್ಟಿಬಂದೆನೆ ದೇವ-ನಿನ್ನಿಷ್ಟದಿಂದಲ್ಲವೇ ಅ.ಪ ಬಿಂಬನೆನಿಸಿದೆ ಎನಗೆ ಪ್ರತಿಬಿಂಬ ನಾ ನಿನಗೆ ಬಿಂಬ ಪ್ರತಿಬಿಂಬಕೆ ಉಪಾಧಿಯು ನಿತ್ಯ- ವೆಂಬನ್ವಯಕೆ ಗುಣತ್ರಯಬದ್ಧವೇ ಕಾರಣ- ವೆಂಬ ಗುಣಜೀವಸ್ವರೂಪೋಪಾಧಿಯು ಬೆಂಬಲನೀನಿದ್ದೂ ಗುಣಕಾರ್ಯಕನುವಾಗಿ ಇಂಬುಕೊಡುವೆ ಫಲಭೋಗಿಸಲೀವೇ ಎಂಬನುಡಿ ಶ್ರುತಿಶಾಸ್ತ್ರಸಿದ್ಧವು ನಂಬಿಹುದು ಜಗವೆಲ್ಲ ಸತ್ಯವು ಶಂಬರಾಂತಕ ಪಿತನೆ ಎನ್ನ ಹೃದ- ಯಾಂಬರದಿ ನಿನ್ನ ಬಿಂಬ ತೋರೈ 1 ಕಾಲಕರ್ಮಾದ್ಯಷ್ಟಗುಣಗಳೆಲ್ಲವು ನಿಜ- ವೆಲ್ಲಜಡಗಳು ಮತ್ತು ಅಚೇತನಂಗಳೈ ಶೀಲ ಮೂರುತಿ ನೀ ಪರಮ ಚೇತನನಾಗಿ ಎಲ್ಲ ಕಾಲದಿ ನಿನ್ನ ನಿಯಮನಂಗಳೈ ಕಾಲಕರ್ಮಗುಣಂಗಳೇನಿಹುದೆಲ್ಲ ಫಲಪ್ರದಾನವ ಮಾಡೆ ಶಕ್ತಿ ಜಡಕೆಂತಿಹುದಯ್ಯ ಕಾಲನಾಮಕ ನೀನೆ ಸರ್ವ ಕಾಲದಲಿ ಸ್ವಾತಂತ್ರ್ಯ ನಿನ್ನದೋ ಇಲ್ಲ ಘನ ಸಮರಿಲ್ಲ ಸರ್ವಕರ್ಮ ಫಲವೆಲ್ಲ ನೀನೆ ದಾತೃವೋ 2 ಮರ್ಮವರಿಯೆನೊ ದೇವ ಧರ್ಮಭ್ರಷ್ಟನಾದೆ ಕರ್ಮಫಲಾನುಭವಮಾಡಿ ಬೆಂಡಾದೆನು ಕರ್ಮ ತಾ ಶಿಕ್ಷಿಸಲರಿಯದು ನ್ಯಾಯ ಧರ್ಮಾಧಿಪತಿ ಭೀಕರ ಫಲಕೊಟ್ಟು ಶಿಕ್ಷಿಪಂತೆ ಧರ್ಮಮೂರುತಿ ಶುದ್ಧನಿಷಿದ್ಧಕರ್ಮಂಗಳಿಗೆ ಪೂರ್ಣಫಲವಿತ್ತು ಸಮನೆಂದೆನಿಸಿರುವೆ ಕರ್ಮಮೋಚಕ ನೀನೆ ಸಕಲ ಕರ್ಮಪ್ರದನೆಂದೆನಿಸಿ ಪೂರ್ವ- ಕರ್ಮಫಲ ಭೋಗಿಸಲು ಜನ್ಮವನಿತ್ತು ಕರ್ಮಪ್ರವಹದೊಳಿಡುವೇ 3 ವಿಮುಖನಾಗಿಹೆ ಶ್ರುತಿಸ್ಮøತಿಶಾಸ್ತ್ರಧರ್ಮಕೆ ಪ್ರಮುಖನಾಗಿಹೆ ದುಷ್ಕರ್ಮ ಮಾರ್ಗದಲ್ಲಿ ಕರ್ಮಕಲಾಪದ ಧರ್ಮ ಮರ್ಮವನರಿಯೆ ಹೆಮ್ಮೆಯಿಂದಲಿ ನಾನಾ ಕರ್ಮಕೂಪದಲಿರುವೆ ಪೆರ್ಮೆಗೋಸುಗ ಅಧರ್ಮವೆಷ್ಟೋ ಮಾಡ್ದೆ ಒಮ್ಮೆಗಾದರು ಸದ್ಧರ್ಮಾಚರಿಸಲಿಲ್ಲ ಕರ್ಮ ಅಕರ್ಮ ವಿಕರ್ಮ ಪರಿಚಯವಿಲ್ಲ ಜನ್ಮಕೆ ಧರ್ಮಪುತ್ರನೆ ದ್ವಂದ್ವಕರ್ಮಸಮರ್ಪಿಸಲು ಸನ್ಮತಿಯ ಕೊಟ್ಟಿನ್ನು 4 ಬೆಟ್ಟದೊಡೆಯನೆ ಶ್ರೀ ವೇಂಕಟೇಶ ನೀ ತುಷ್ಟಿಯಾದರೆ ನಿನ್ನಿಷ್ಟದಂತೆ ಫಲವು ಸೃಷ್ಟಿಯೊಳು ಪುಟ್ಟಿಸಿ ದುಷ್ಟಕರ್ಮದ ಪಾಶ ಕಟ್ಟಿನೊಳಿಟ್ಟೆನ್ನ ಕಷ್ಟಪಡಿಸುವರೇ ಸೃಷ್ಟೀಶ ಉರಗಾದ್ರಿವಾಸ ವಿಠಲ ಎನ್ನ ನೀನಿಟ್ಟಿರುವಷ್ಟುಕಾಲ ಧಿಟ್ಟಭಕುತಿಯ ಕೊಟ್ಟು ದಿಟ್ಟ ರಕ್ಷಿಸು ಇಷ್ಟಮೂರುತಿಯೆ ಇಷ್ಟದಾಯಕನೆಂದು ನಾನಿಷ್ಟು ನುಡಿದೆನೋ ನಿನ್ನ ಎನ್ನ ಮನೋಭೀಷ್ಟೆ ಸಲಿಸೆ ನಿನ್ನಿಷ್ಟವಯ್ಯ5
--------------
ಉರಗಾದ್ರಿವಾಸವಿಠಲದಾಸರು
ಕಾಗಿಣಿ ತೀರದ ಯೋಗಿವರ್ಯ ಗುರುವೇ | ನಿನ್ನಲಿ ಮೊರೆಯಿಡುವೆ ಪ ಭೋಗಿಶಯನ ಗುಣ ಯೋಗದಿಂದ ಭಜಿಪಾ | ಹರಿ ಪದಾಬ್ಜ ಮಧುಪಾ ಅ.ಪ. ಸಿಂಗರವೆನಿಸಿದ ಮಂಗಳವೇಡಿಯಲಿ |ನೀನುದಿಸುತಲಲ್ಲೀಸಿಂಗರಿಸಿಹ ಬಲು ರಂಗ ಕುದುರೆ ನೇರಿ | ರಾವುತರೊಡಸೇರೀ ||ಕಂಗೆಡುತಲಿ ಬಲು ತುಂಗೆ ಕಾಗಿಣೀಯಾ | ಸಾರುತ ತನಹಯಾ ಹಿಂಗದೆ ನದಿಯಲಿ ಮಂಗಳ ಹಯವೇರಿ | ನೀರ್ಗುಡಿದ ಬಾಯಾರಿ 1 ಆಚೆ ತಟದಿ ಅಕ್ಷೋಭ್ಯಮುನಿಪ ನೋಡಿ | ಸ್ವಪ್ನದರ್ಥ ಮಾಡೀಸೂಚಿಸಿದನು ತವ ಶಿಷ್ಯನ ಕೈಯಲ್ಲೀ | ಬಂದ ಸಾದಿ ಅಲ್ಲೀ ||ಯಾಚಿಸಿದನು ಮುನಿ ಪದಕೇ ಬಾಗೀ | ತುರ್ಯಾಶ್ರಮಕಾಗೀಖೇಚರ ವಹನಾಜ್ಞೆಯೆಂದು ತ್ವರ್ಯಾ | ಮಾಡ್ದ ಸಾದಿ ಯತಿಯಾ 2 ತಂದೆ ಬಹು ಕೋಪದಿಂದ ಬಂದೂ | ಯತಿಯ ನಿಂದಿಸ್ಯಂದೂತಂದು ಮಗನ ಏಕಾಂತ ಗೃಹಕೆ ಆಗ | ಸತಿಯನು ಕೂಡಿಸಿ ವೇಗ ||ಅಂದು ಕಂಡು ಸರ್ಪಾಕೃತಿ ಪತಿಯಾ | ಚೀರಿದಳ್ ಬಲ್ಪರಿಯಾತಂದೆ ಕೊಂಡು ಮಗನರ್ಪಿಸಿದನುಯತಿಗೇ | ಕ್ಷಮೆ ಬೇಡಿದನಾಗೇ 3 ತ್ರ್ಯಕ್ಷನಂಶ ಅಕ್ಷೋಭ್ಯ ಮುನಿಪ ಆಗ | ಸನ್ಯಾಸ ವೇಗಭಿಕ್ಷುಕ ಮಧ್ವರ ಗ್ರಂಥ ಪೊತ್ತ ವೃಷಭ | ಎನುತೀತನ ಪ್ರಭಾ ||ಲಕ್ಷಿಸಿವರ ಕರೆದನೂ ನಾಮಾನ್ವರ್ಥ | ಯತಿಯನೆ ಜಯತೀರ್ಥಕುಕ್ಷಿಲಿ ಮೆರೆವರಗೋಳ ಗುಹೆಯು ಅಲ್ಲೀ | ರಚಿಸಿದ ಟೀಕೆಗಳಲ್ಲೀ4 ಮಧ್ವಭಾಷ್ಯಕೇ ರಚಿತ ಟೀಕಾ ಗ್ರಂಥಾ | ನೋಡಿದ ಮುನಿ ಮತ್ತವಿದ್ಯಾರಣ್ಯರ ಗೆದ್ದ ಆರ್ಯ ಧೀರಾ | ಅಕ್ಷೋಭ್ಯರ ಕುವರ ||ಅದ್ವೈತಾದಿಗಳೇಕವಿಂಶ ಪಂಥ | ಗೆಲ್ಲುತ ಸುಧೆ ಗ್ರಂಥಅದ್ವಿತೀಯ ಗುರುಗೋವಿಂದ ವಿಠ್ಠಲಗೇ | ಅರ್ಪಿಸಿದನು ಆಗೇ 5
--------------
ಗುರುಗೋವಿಂದವಿಠಲರು
ಕಾಡುತಲಿಹ್ಯದು ಬೆಡಗಿನ ಕೋಡಗ ಬಡವರಿಗಳವಲ್ಲ ಪೊಡವಿಯಲಿ ಧ್ರುವ ಮಾಯದ ಮುಖವದು ಮೋಹದ ನಾಸಿಕ ಮಾಯಮಕರ ಕಿವಿಕಣ್ಣುಗಳು ಹ್ಯಾವ ಹೆಮ್ಮೆಯ ಹುಬ್ಬು ಕಪಿಕಣ್ಣಯೆವೆಗಳು ಬಾಯಿ ನಾಲಿಗೆ ಹಲ್ಲು ಬಯಕಿಗಳು 1 ಗಾತ್ರ ಸರ್ವಾಂಗವು ದುರುಳ ದುರ್ಬುದ್ಧಿಯ ಬೆರಳುಗಳು ಎರಡು ತುಟಿಗಳೆಂಬ ನಿಂದೆ ದೂಷಣಗಳು ಕೊರಳು ಕುತ್ತಿಗೆ ದುಷ್ಕರ್ಮಗಳು 2 ಹಣಿಯು ದಾಡಿಯು ಗಲ್ಲ ಪ್ರಪಂಚ ಶೋಭಿತ ಕಣ್ಣಭಾವಗಳಿವು ಚಂಚಲವು ಬಣ್ಣಬಣ್ಣದಿ ಕುಣಿದಾಡುವ ಕಪಿ ಗುಣ ಏನೆಂದ್ಹೇಳಲಿ ಕಪಿ ವಿವರಣ£ 3 ಉದರಬೆನ್ನುಗಳಿವು ಸ್ವಾರ್ಥಬುದ್ಧಿಗಳು ಮದಮತ್ಸರಗಳೆಂಬ ಕೈಗಳು ಪಾದ ಕಾಲುಗಳಿವು ಕಾಮಕ್ರೋಧಗಳು ಮೇದಿನಿಯೊಳು ಕುಣಿದಾಡುವದು 4 ಆಶಿಯೇ ಪಂಜವು ವಾಸನೆ ಬಾಲವು ಮೋಸಮೂಕರ ಗುಣಕೇಶಗಳು ಏಸು ಮಂದಿಯ ಕಪಿ ಘಾಸಿಯ ಮಾಡಿತು ಮೋಸಗೈಸಿತು ಭವಪಾಶದಲಿ 5 ಅಶನ ವ್ಯವಸನ ತೃಷಿ ಕಪಿಗಿದು ಭೂಷಣ ಮೀಸಲಾಗಿಡಿಸಿತು ಸುವಾಸದ ಹಸಗೆಡಿಸುದು ಯತಿ ಮುನಿಗಳ ತಪಸವು ಮುಸುಕಿತು ಮೋಸವು ಕಪಿಯಿಂದಲಿ 6 ಕಂಡದ್ದು ಬೇಡುತಾ ಅಂಡಲಿಯುತಿಹುದು ಮಂಡಲದೊಳು ತಾ ಕಾಡುತಲಿ ಪಿಂಡ ಬ್ರಹ್ಮಾಂಡದಿ ಲಂಭಿಸುತಿಹದು ಹಿಡದು ಬಿಡದು ಮುಷ್ಟಿಬಿರುದುಗಳು 7 ಪಂಡತನದಿ ಬಲು ಪುಂಡನಾಗಿಹದು ಹಂಡೀಗತನದಲಿ ಬಾಳುವದು ಭಂಡಿನಾ ಅಟಿಗೆ ಗಂಡಾಗಿಹುದು ಕಂಡಕಡಿಗೆ ಹರಿಡಾಡುತಲಿ 8 ಮೂಢಮಹಿಪತಿಯ ಕಾಡುವ ಕಪಿಗಿನ್ನು ಜಡಸೀದ ಗುರುಜ್ಞಾನ ಸಂಕೋಲಿಯು ಕಾಡುವ ಕಪಿಕೈಯ ಬಿಡಿಸಿದ ಗುರು ಎನ್ನ ಕಡೆಯ ಮಾಡಿದ ಬ್ರಾಹ್ಮಣ ಜನ್ಮಲಿ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಡುವ ದುರಿತಗಳನು ಬಿಡಿಸೆಂದುಬೇಡಿಕೊಂಬೆನೊ ದೇವ ನಾ ನಿನ್ನ ಪ ಅಡಿದಾಸನೆಂಬೋ ಎನಗೊಂದು ದೃಢ ಬುದ್ಧಿಯು ಇಲ್ಲದೆಮಡದಿ ಮಕ್ಕಳೆಂಬೊ ಕಡಲೊಳು ಮುಳುಗಿದೆಕಡೆ ಹಾಯಿಸೊ ಎನ್ನೊಡೆಯ ನೀನಾದಡೆ 1 ಆಸೆಗಳ ಆಧಿಕ್ಯದಿಂದೀ ಪರಿಯ ಯಮಪಾಶಕ್ಕೆ ಒಳಗಾದೆನೋಮೀಸಲೂಳಿಗವ ಮಾಡದೆಯೆ ಪರಿಪರಿಯಕ್ಲೇಶದಿಂದಲಿ ಗಾಸಿಗೊಂಡೆನಯ್ಯ 2 ಪಾಡುವೆನು ನಿನ್ನ ನಾಮ ಸೀತಾರಾಮಆಡುವೆನು ಮನದಣಿವ ತನಕಬೇಡಿಕೊಂಬೆನೊ ನಿನ್ನ ಭಕ್ತರ ಸೇವೆಯನುಬಾಡದಾದಿಕೇಶವ ಭಕ್ತವತ್ಸಲನೆ3
--------------
ಕನಕದಾಸ
ಕಾಪಾಡೆಲೆ ಸಕಲಾಪಧ್ಹಾರಿಣಿ ಕೊಲ್ಲಾಪುರಗತ ಕಮಲೆ ಪ. ಪರಿ ಹರಿಯ ದಯಾಪಾತ್ರಳೆ ಶುಭನೂಪುರಾದಿ ಸುಕಲಾಪೆ ಶೋಭಿತೆ ಭ್ರೂ-ಚಾಪ ಚಲನದಿಂದ ಪವಮಾನನಿ-ಗೆ ಪದದೇ ಭವತಾಪಗಳಳಿದು ಅ.ಪ. ಇಂದೀವರವರಮಂದಿರನಂದಿನಿ ಚಂದ್ರಜಯಿಪ ವದನೆಬೃಂದಾರಕ ಮುನಿವಂದಿತ ಪದಯುಗೆ ಕುಂದಕುಟ್ಮಲರದನೆ ಮದನೆ ಮುಕುಂದ ಹೃದಯಸದನೆಇಂದ್ರನೀಲನಭ ಸುಂದರತನು ಗುಣ-ಸಾಂದ್ರ ಇಂದುಮುಖಿ ಮಂದರಧರಗೋ-ವಿಂದ ಬಂಧುನುತೆ ಬೃಂದಾವನಪತಿನಂದನಂದನನಾನಂದಿನಿ ವಂದಿತೆ 1 ಕನ್ಯಾಮಣಿ ಜಗನ್ಮಾನ್ಯಾಮೃತ ಪಾವನ್ನಾಧರ ಬಿಂಬೆಘನ ಕಲಶ ಕುಚವನ್ನು ಧರಿಪ ಕಟಿಸಣ್ಣ ಘನನಿತಂಬೆ ಅಂಬೆ ಚಿನ್ನಪುತ್ಥಳಿ ಬೊಂಬೆಅನ್ನವಸನ ಧನಧಾನ್ಯಕಾಗಿ ಪರ-ರನ್ನ ಯಾಚಿಸಿ ಬಲು ಖಿನ್ನನಾಗುತಲಿನಿನ್ನನು ಮರೆದೆನು ಎನ್ನವಗುಣಗ-ಳನ್ನು ಎಣಿಸದಿರು ಮನ್ನಿಸು ಬಿನ್ನಪ 2 ಕಪೋಲ ಶೋಭಿತ ಕೀಲಾಲಜಾತಪಾಣಿಕೇಳಿಲಿ ಯಮುನಾಕೂಲದಿ ಹರಿ ದು-ಕೂಲಚೋರನ ರಾಣಿ ಜಾಣೆ ಶುಶ್ರೋಣೆ ಜಗತ್ರಾಣೆಕಾಳಕೂಟಸಮ ಕೀಳು ವಿಷಯದಲಿಬೀಳುವುದೆನ್ನ ಮನ ಕೀಳಿಸಿ ಶ್ರೀಗೋ-ಪಾಲವಿಠಲನನುಗಾಲ ಸೇವಿಪಂತೆಶೀಲವೀಯೆಯೆಂದು ಕೇಳುವೆ ಲಾಲಿಸೆ 3
--------------
ಗೋಪಾಲದಾಸರು
ಕಾಮವೈರಿಜಾಯೆ ಪಾಹಿ ಕೋಮಲಾಂಗಿಯೇ ಶಿವೆ ಪ ಹೇಮಕನಕ ದಾಮಭೂಷೆ ಕಾಮಿನೀಪ್ರಿಯೆ ಶಿವೆ ಅ.ಪ. ಅಷ್ಟಬಾಹು ಶೋಭಿತಾಂಗಿ ದುಷ್ಟನಾಶಿನಿ ಶಿವೆ ಅಷ್ಟಮೂರ್ತಿ ವಾಮರೂಪೆ ಇಷ್ಟದಾಯಕಿ ಶಿವೆ1 ಬಾಲಚಂದ್ರ ಭಾಸಮಾನ ಫಾಲಶೋಭಿತೆ ಶಿವೆ ನೀಲವೇಣಿ ವಿಮಲವಾಣಿ ಕಾಲರೂಪಿಣಿ ಶಿವೆ 2 ಚಕ್ರರಾಜ ಮಧ್ಯವರ್ತಿ ಶಕ್ತಿಕಾರಿಣಿ ಶಿವೆ ವಕ್ರಕೇಶಿ ಮುಖ್ಯದನುಜ ಶಕ್ತಿಹಾರಿಣಿ ಶಿವೆ3 ಕರುಣಿಸಿಂದು ವರವ ದೇವಿ ಚರಣಕೊಂದಿಪೆ ಶಿವೆ ಸುರನರಾದಿ ಗೀಯಮಾನ ಪಾದಪಲ್ಲವೆ ಶಿವೆ 4 ನಾಗವೇಣಿ ಧೇನುನಗರ ಸರ್ವಮಂಗಳ ಶಿವೆ ಭೋಗ ಭಾಗ್ಯ ಸುಖಗಳಿತ್ತು ಪೊರೆಯೆ ಪಾರ್ವತಿ ಶಿವೆ 5
--------------
ಬೇಟೆರಾಯ ದೀಕ್ಷಿತರು
ಕಾಮಿತವನು ಪಡಿಯೋ ಪ ಈ ಮಹಿಯೊಳು ರಘುವೀರ ತೀರ್ಥರ ಕರ- ತಾಮರಸೋದ್ಭವರೆನಿಸಿ ಮೆರೆದ ಗುರು ಅ.ಪ ಧರೆಸುತ ಮಂಡಿತ ಸುರಪುರದಲಿ ದ್ವಿಜ ವರ ಕುಲದಲಿ ಜನಿಸಿಯಳಿಮೇ- ಲಾರ್ಯರ ಬಳಿಯಲಿ ಶಬ್ದಾವಳಿ ಶಾಸ್ತ್ರವ ಪಠಿಸಿ ಇಳಿಸುರನುತ ಕರ ಜಲಜೋದ್ಭವ ರೆನಿಸಿ ಕಲಿತು ಗುರುಮುಖದಿ ಮರುತ ಶಾಸ್ತ್ರವನು ತಿಳಿಸುತ ಬುಧಜನ ರೊಲಿಸಿದಂಥ ಗುರು 1 ಹೇಮಮಂಟಪದಿ ಭೂಮಿ ಸುತಾನ್ವಿತ ರಾಮನ ಪೂಜಿಸು ತಾ ಶ್ರೀಮನ್ಮಧ್ವಕ ರಾಬ್ಜಾದಾಗತ ಸೌಮಿತ್ರಿಯ ಸಹಿತ ಸಾಮವ ಪಠಿಸುವ ಭೂಮಿಸುರಜನ ಸ್ತೋಮದಿ ಶೋಭಿಸುತ ಧೀಮಜನರಿಗೆ ಪ್ರೇಮದಿಂದ ಮೃಷ್ಟಾನ್ನದಾನ ಸನ್ಮಾನ ಮಾಡುತಿಹ 2 ಭೂತಳದಲಿ ಸುಕ್ಷೇತ್ರ ಬಹು ಆರ್ಥ ಯಾತ್ರಿಗಳಾ ಚರಿಸಿ ಭೂತಬಾಧೆ ರೋಗಾತುರ ಜನಗಳ ಭೀತಿಯ ಪರಿಹರಿಸಿ ಶಾಸ್ತ್ರಸುಧಾರಸ ಸತ್ಯಮೋದ ಯತಿ- ನಾಥರಿಂದ ಗ್ರಹಿಸಿ ಖ್ಯಾತ ಕಾರ್ಪರ ಕ್ಷೇತ್ರದಿ ನರಮೃಗನಾಥನ ಪ್ರೀತಿಗೆಪಾತ್ರರೆನಿಸಿರುವ 3
--------------
ಕಾರ್ಪರ ನರಹರಿದಾಸರು
ಕಾಯ ಪ ಗತಿ ನೀನೆ ಎನಗೆ ಸಂತತ ಪರಂಧಾಮಾ ಅ ಕೃಪಣ ವತ್ಸಲನೆ ಎಮ್ಮಪರಾಧಗಳ ನೋಡಿ ಕುಪಿತನಾಗುವರೇನೋ ಸುಫಲದಾಯೀ ನೃಪಗನಿರುದ್ಧ ಬಿನ್ನಪವ ಮಾಡುವೆ ನಿನಗೆ ಚಪಲ ಚಿತ್ತರಾದ ಕಾಶ್ಯಪಿಸುರರನ ಕಾಯೋ 1 ಮಾನ್ಯಮಾನದನೆ ಬ್ರಹ್ಮಣ್ಯದೇವ ನೀನೆಂದು ಉನ್ನತ ಶ್ರುತಿಗಳು ಬಣ್ಣಿಸುವುವು ಸನ್ನುತ ಮಹಿಮನೆ ನಿನ್ನ ಪೊಂದಿದವರ ಬನ್ನ ಬಡಿಸುವುದು ನಿನಗಿನ್ನು ಧರ್ಮವು ಅಲ್ಲ 2 ಹಲವು ಮಾತುಗಳಾಡಿ ಫಲವೇನು ಬ್ರಾಹ್ಮಣರ ಕುಲಕೆ ಮಂಗಳವೀಯೋ ಕಲುಷದೂರ ಸುಲಭ ದೇವೇಶ ನಿನ್ನುಳಿದು ಕಾವರ ಕಾಣೆ ಬಲಿಯ ಬಾಗಿಲ ಕಾಯ್ದ ಜಗನ್ನಾಥ ವಿಠಲಾ 3
--------------
ಜಗನ್ನಾಥದಾಸರು
ಕಾಯ ಬೇಕಿವಳಾ ಪ ಪದುಮನಾಭನೆ ನಿನ್ನ ಸೇವೆ ಕಾತುರಳಾ ಅ.ಪ. ಸುಕೃತ ರಾಶಿಗೇ ಫಲರೂಪದಾಸದೀಕ್ಷೆಯ ವಹಿಸೆ ಆಶಿಸುತ್ತಿಹಳೊ |ಕೇಶವನೆ ಹೃದಯಾಬ್ಜವಾಸ ತವ ಸೇವೆಯನುಲೇಸಾಗಿ ಕೊಟ್ಟು ಮನದಾಶೆ ಪೂರೈಸೋ 1 ನಯವಿನಯ ಗುಣಯುಕ್ತೆ ಕನ್ಯೆ ಬಹು ಭಕ್ತಿಯುತೆವಯಸು ಕಾರಣವಲ್ಲ ಪ್ರಿಯ ನಿನ್ನ ಭಜಿಸೆ |ದಯತೋರಿ ಈ ಶಿಶುವ ಹಯಮೊಗನೆ ಉದ್ಧರಿಸೊವಯನಗಮ್ಯನೆ ಹರಿಯೆ ಭಿನ್ನಯಿಪೆ ನಿನಗೇ 2 ಮರುತ ಮತದಲಿ ದೀಕ್ಷೆ ಹರಿಗುರೂ ಸದ್ಭಕ್ತಿನೆರೆ ಬಂಧು ಜನ ಪ್ರೇಮ ಮರಳಿ ಆಧಮರಲಿಕರುಣೆಯನು ಮಾಳ್ಪಂಥ ವರಮತಿಯ ಕರುಣಿಪುದುಗರುಡವಾಹನದೇವ ಸರ್ವಾಂತರಾತ್ಮ 3 ಘೋರಭವ ಶರನಿಧಿಗೆ ತಾರಕವು ತವನಾಮವಾರವಾರಕೆ ನುಡಿಸು ಮರುತಾಂತರಾತ್ಮತಾರತಮ್ಯ ಜ್ಞಾನ ಸಾರವನೆ ತಿಳಿಸುತ್ತತೋರೋ ತವರೂಪವನೆ ಹೃದ್ಗುಹದಿ ಹರಿಯೇ 4 ಕಾಲ ಸರ್ವಗುಣಪೂರ್ಣಸರ್ವಜ್ಞ ಹರಿ ಎನ್ನ ಭಿನ್ನಪವ ಸಲಿಸೆಂದುಸರ್ವಗುರು ಗೋವಿಂದ ವಿಠಲ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು