ಒಟ್ಟು 599 ಕಡೆಗಳಲ್ಲಿ , 83 ದಾಸರು , 562 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಜೀವನವೆ ನೀ ಶ್ರೀಕಾಂತನನು ಮರೆವಿ | ವಿವೇಕವೇ ನಿನಗಿದು ? ಪ ಜೋಕೆಯಿಂದಲಿ ನಿನ್ನ ಸಾಕುವ ಶ್ರೀ ಹರಿಯು | ಬೇಕಾದ ವರವೀವ ಭಕ್ತವತ್ಸಲ ದೊರೆಯಾಅ.ಪ ಲೇಸಾದರು ವಿಷಯದಾಸೆಯ ಬಿಡಲೊಲ್ಲಿ | ಏಸು ಜನ್ಮಂಗಳಾದರು ಈ ಶರೀರವು ನಿನ್ನದೆಂದು ತಿಳಿದು || ಪೋಷಿಸುವಿಯೊ ಬರಿದೆ ದೋಷರಹಿತ ಶ್ರೀನಿ- | ವಾಸನ್ನ ನೆನೆದು ನಿರ್ದೋಷವ ಕಳೆದೆನ್ನ ಪೋಷಿಸು ಎನ್ನದಲೆ 1 ಸತಿ-ಸುತರನು ನೀನು ಸಲಹುವೆನೆನುತಲಿ | ಅತಿ ಚಿಂತೆ ನಿನಗ್ಯಾತಕೊ ಗತಿ ನಿನಗಾಗುವ || ಹಿತಚಂತನೆ ಮಾಡೊ ಸದ್ಗತಿಯಾಗುವ ತನಕ | ರತಿಪತಿ ಪಿತನ ನೆನೆದು ನೀ ಪ್ರತಿಕ್ಷಣ ಹರಿಕಥೆ ಕೇಳದಲೆ2 ಪೊಟ್ಟೆಗೋಸುಗ ಭ್ರಷ್ಟರ ಸ್ತುತಿಸಿ ನೀ | ಕೆಟ್ಟು ಪೋಗುವಿ ಯಾತಕೋ ಜೀವನವೆ || ಪುಟ್ಟಿಸಿದವ ನಿನ್ನ ಪೊಟ್ಟೆಗೆ ಕೊಡನೇನೋ | ಕೆಟ್ಟುಹೋಗದೆ ವಿಜಯವಿಠ್ಠಲನ್ನ ನೆನೆದು ಸುಖಿಯಾಗು3
--------------
ವಿಜಯದಾಸ
ಯಾಕೆ ನಿರ್ದಯನಾದೆ ಲೋಕೇಶ ಪ್ರಭುವೆ ಸಾಕಲಾರದೆ ಎನ್ನ ನೂಕಿ ಭವದೊಳಗೆ ಪ ನಿನ್ನ ನಾಮಸ್ಮರಣೆ ಮಾಡದಲೆ ಹಗಲಿರುಳು ಅನ್ಯ ವಿಷಯಗಳಿಂದ ನೊಂದು ಬಳಲಿದೆನೊ ನಿನ್ನ ಧ್ಯಾನವ ಮಾಳ್ಪಚ್ಛಿನ್ನ ಭಕ್ತರೊಳಿರಿಸಿ ಚನ್ನಾಗಿ ಸಲಹೊ ಪ್ರಸನ್ನ ಮಾಧವನೆ 1 ಆಪನ್ನ ಜನರನು ಪೊರೆದೆ ಸನ್ನುತಾಂಗನೆ ದೇವ ಸರ್ವವ್ಯಾಪಕನೆ ಪನ್ನ ಗಾರಿವಾಹನ ಪ್ರಸನ್ನ ಶ್ರೀಹರಿ ಶೌರಿ ಎನ್ನ ಕಡೆಹಾಯಿಸಯ್ಯ ಜೀಯ 2 ಅಕ್ಷಯ ಫಲಪ್ರದ ಪಕ್ಷಿವಾಹನ ಕೃಷ್ಣ ಕುಕ್ಷಿಯೊಳು ಜಗವನಿಂಬಿಟ್ಟ ಶ್ರೀ ಹರಿಯೆ ರಕ್ಷ ಶಿಕ್ಷಕ ಜಗದ್ರಕ್ಷ ಪಾಂಡವ ಪಕ್ಷ ಈಕ್ಷಿಸಿ ಎನ್ನನುದ್ಧರಿಸಿ ಸಲಹದಲೆ3 ಪರಿಪರಿಯ ಕಷ್ಟಗಳ ಪರಿಹರಿಸಿ ಭವದೊಳಗೆ ದುರಿತದೂರನೆ ಕಾಯೊ ಶರಣ ಜನರ ಪರಿಸರನೊಡೆಯ ನಳನಾಮ ಸಂವತ್ಸರದಿ ಕರೆಕರೆಯ ಕಷ್ಟಗಳ ಬಿಡಿಸಿ ಸಲಹದಲೆ4 ಕನಕಗರ್ಭನ ಪಿತನೆ ಕಮಲನಾಭ ವಿಠ್ಠಲ ಮಿನಗುತಿಹ ದಿವ್ಯ ಸೌಂದರ್ಯ ಮೂರುತಿಯೆ ಸನಕಾದಿ ಮುನಿವಂದ್ಯ ಕ್ಷಣ ಬಿಡದೆ ಸ್ಮರಿಸುವರ ಇನಕುಲೇಂದ್ರನೆ ದೇವ ಬಿಡದೆ ಸಲಹದಲೆ5
--------------
ನಿಡಗುರುಕಿ ಜೀವೂಬಾಯಿ
ಯಾಕೆ ಬಾರನಕ್ಕಯ್ಯ ಎನ್ನಯ ಪ್ರಾಣನಾಥನ ಕರೆತಾರೆ ಸೈರಿಸಲಾರೆ ಪ. ಸೋಗೆಗಂಗಳ ಸನ್ನೆ ಮಾಡಿ ಪೊಳೆದು ಪೋದ ಮೇಘದ ಮಿಂಚಿನಂತೆ ಮಂದರೋದ್ಧಾರ ಬಾಗಿದ ಮುಖವೆತ್ತಿ ಎನ್ನ ನೋಡದೆ ಪೋದ ಹ್ಯಾಂಗ ಮಾಡಲಿ ಸಖಿಯೆ ಹೇಳಲಿ ಪ್ರಿಯೆ 1 ಕರವೊಡ್ಡಿ ಬೇಡಿಕೊಂಡರೆ ಒಲ್ಲದೆ ಪೋದ ಕರೆದರೆ ಪಿತನಾಜ್ಞೆ ತೋರುತಾನೆ ನಿರುತದಿ ಏಕಪತ್ನಿಯ ವ್ರತನೆನುತ ಸರಿಬಂದ ಸತಿಯರ ಒಡನಾಡುತೈದಾನೆ ಗರುವತನವ ಬಿಡನೆ ಗೋವ ಕಾಯ್ವವನೆ 2 ಸುಮ್ಮನೆ ಲಜ್ಜೆಭಂಗವ ಮಾಡಿ ಪೋದನೆ ಒಮ್ಮೆ ಮನೆಗೆ ಬಾರನೆ ವಾಜಿವಾಹನನೆ ತಮ್ಮ ಧ್ಯಾನದೊಳೆನ್ನ ಮನಸು ನಿಲ್ಲಿಸಿ ಪರ- ಬೊಮ್ಮ ಮೂರುತಿ ಹೆಳವನಕಟ್ಟೆರಂಗನ ಘಮ್ಮನೆ ಕರೆದುತಾರೆ ಸೈರಿಸಲಾರೆ 3
--------------
ಹೆಳವನಕಟ್ಟೆ ಗಿರಿಯಮ್ಮ
ಯಾದವರರಸಿಲ್ಲೆ ಸಿಕ್ಕಿದನಲ್ಲೆ ಪ. ಸಿಕ್ಕಿದನಲ್ಲೇ ದಕ್ಕಿದನಲ್ಲೆಅ.ಪ.ಗೋಪಿಯ ಕಂದನೆ ಬೆಣ್ಣೆಯ ತಿಂದನೆಪೂತಣಿಯ ಕೊಂದನೆ ಮಧುರೆಗೆ ಬಂದನೆ 1 ಮಾಧವನಿವನೇ ವೇದಕೆ ಸಿಲುಕನೆಸಾಧುಗಳರಸನೆ ಸಜ್ಜನಪೋಷನೆ 2 ಜಾಣರಜಾಣನೆ ಗಾನಕೆ ಪ್ರೀಯನೆಮುನಿಗಳ ವಂದ್ಯನೆ ಮನ್ಮಥಪಿತನೆ 3 ಕಾಮಿತವೀವೋನೆ ಭಾಮಾಪ್ರೀಯನೆನೇಮದಿಭಜಿಪರ ಸದನಕ್ಕೆ ಬರುವನೆ 4 ವೇದವ ತಂದನೆ ಗಿರಿಯ ಪೊತ್ತನೆಬೇರನು ತಿಂದನೆ ಕಂಬದಿ ಬಂದನೆ 5 ದಾನವ ಬೇಡನೆ ಕ್ಷತ್ರೇರ ಕೊಂದನೆವನಕೆ ಪೋದನೆ ದುರುಳರ ಕೊಂದನೆ6 ಕಾಳೀಯ ಭಂಜನೆ ಬತ್ತಲೆ ನಿಂದನೆಹಯವನೇರ್ದನೆ ಹಯವದನನೆ7
--------------
ವಾದಿರಾಜ
ಯಾರ ಭಯವೇನಿಹುದು ಶ್ರೀವೇಂಕಟೇಶ ನೀನೆ ದಯವಾದ ಮೇಲ್ಯಾರ ಹಂಗೇನು ಪ ಪೊಡವಿಯಾಳುವ ದೊರೆಯು ಒಡವೆವೊಯ್ದರೆಯೇನು ಅಡವಿಯೊಳು ಮೃಗಬಂದು ತಡೆದರೇನು ತೊಡೆಯನೇರುವ ಮಗನ ಅಡವಿಗಟ್ಟಿದರೇನು ನೆಗಳು ಕಾಲ್ಪಿಡಿದರೇನು 1 ವ್ಯಾಳ ಬಹುರೋಷದಲಿ ಕಾಲು ಸುತ್ತಿದರೇನು ಕಾಳ ರಾಕ್ಷಸ ಕೈಯ ಪಿಡಿದರೇನು ಜ್ವಾಲೆ ನಾಲ್ದೆಸೆಯಿಂದ ಮೇಲೆ ಮುಸುಕಿದರೇನು ಹಗೆ ತನಗೆ ವಿಷವಿಕ್ಕಲೇನು 2 ಯಾಗಕೋಸುಗ ಮೃಗವ ಹೋಗಿ ತರುವೆನುಯೆಂದು ರಾಗದೊಳು ಬಲವಂತ ಕರೆಯಲಾಗಿ ಮೃಗ ಬಂದು ಬಾಗಿಲೊಳು ಕಾಲ್ಪಿಡಿಯೆ ಆಗ ಬಿಡಿಸಿದವರಾರು ನಾಗಗಿರಿವಾಸ 3 ಕಡುಗಲಿಯು ದ್ರೌಪದಿಯ ಉಡಿಮಡಿಯ ಸೆಳೆವಂದು ಒಡೆಯ ರಕ್ಷಿಸುಯೆಂದು ನಡುಗುತಿರಲು ಮಡದಿಗಕ್ಷಯವಿತ್ತು ನುಡಿದ ಭಾಷೆಯ ಸಲಿಸಿ ಕೊಡಲಿಲ್ಲವೆ ನೀನು ಒಡೆಯ ಗಿರಿವಾಸ 4 ಕೆಡೆನುಡಿದು ಬಾಲಕನ ಅಡವಿಗಟ್ಟಲು ಪಿತನು ಸಡಗರದ ಮಡದಿಯಳ ಮಾತ ಕೇಳಿ ಒಡೆಯ ನೀನೆಯೆಂದು ಕಡುತಪವನರ್ಚಿಸಲು ಉಡುಗಣಕೆ ಮೇಲಾದ ಪದವ ತೋರಿದೆಲಾ 5 ಮೃಗ ಜಲದ ಹೊಂಡದೊಳಗಾಡುತಿರೆ ಕಂಡು ಕಡು ರೋಷದಲಿ ಕಾಲ್ಪಿಡಿಯಲು ಪುಂಡರಿಕಾಕ್ಷನನು ಭಯಗೊಂಡು ಕರೆದರೆ ತುಂಡಿಸಿದೆ ಚಕ್ರದೊಳು ನೆಗಳ ಗಂಟಲನು 6 ಒಬ್ಬನೆ ಪಥದೊಳಗೆ ಸರ್ಬಬಲನೈದುತಿರೆ ಹೆಬ್ಬಾವು ಆತನನು ಮೈಸುತ್ತಲು ಗರ್ಭದೊಳು ನಡುನಡುಗಿ ಉಬ್ಬಸವ ಬಿಡುತಿರಲು ಎಬ್ಬಿಸಿದರಾರಲ್ಲಿ ನಿರ್ಭಯವ ತೋರಿ 7 ದುರುಳ ದೈತ್ಯನು ತನ್ನ ಕುವರನನು ಕೊಲುವುತಿರೆ ಭರದಿಂದ ಕಂಬದೊಳು ಹೊರಟು ಬಂದು ನರಹರಿಯ ರೂಪದಲಿ ಕರುಳ ಮಾಲೆಯ ಧರಿಸಿ ತರಳನನು ಕಾಯಿದವರಾರು ಶ್ರೀಹರಿಯೆ 8 ಉರಿಯ ಮನೆಯಂದರಿಯದರಸರೈವರ ಹೊಗಲು ಇರಿಸಿರ್ದ ಬಾಗಿಲೊಳು ಉರಿ ಮುಸುಕಲು ಬೆರಸಿರ್ದ ನಿದ್ರೆಯೊಳು ಇರಿಸಿ ಕಾಯಿದವರಾರು ಕರೆಸಿ ದ್ರೌಪದಿಯನ್ನು ಕೊಡಿಸಿದವರಾರು 9 ಚಂದ್ರಹಾಸನು ವಿಷವ ತಿಂದು ಸಾಯಲಿಯೆಂದು ತಂದೆ ಬರೆದಿಹ ಲಿಖಿತ ನಂದನನು ನೋಡಿ ಮಂದಗಮನೆಯ ಕೊಟ್ಟು ಚಂದ್ರಹಾಸನ ನಿಲಿಸಾ ನಂದಳಿದ ಮಾಯವೇನೆಂದು ಹೇಳಯ್ಯ 10 ಕಾಯ ಭಯ ಹೊರತಾಗಿ ಮೀರಿದಾಪತ್ತಿನಲಿ ಕಡೆ ಸೇರಿಸೊ ಭೂರಮಣ ವರಾಹತಿಮ್ಮಪ್ಪ ಚರಣವನು ಕುಲಿಶ ನೀನಾಗು 11
--------------
ವರಹತಿಮ್ಮಪ್ಪ
ಯಾರಿಗುಸರಲೇನು ದುರಿತಾರಿ ನೀನೆ ರಕ್ಷಿಸು ಕಂ- ಸಾರಿ ನೀನೆ ರಕ್ಷಿಸು ಮುರಾರಿ ನೀನೆ ರಕ್ಷಿಸು ಪ. ಭಾರಿ ಭಾರಿ ನಿನ್ನ ಪದವ ಸೇರಿದವರ ಕಾಯ್ದ ದೊರೆಯೆ ಅ.ಪ. ಪತಿಗಳೈವರಿದಿರೆ ಪತಿವ್ರತೆಯ ಖಳನು ಸೆಳೆಯೆ ಲಕ್ಷ್ಮೀ- ಪತಿಯೆ ನೀನೆ ಕಾಯ್ದೆಯಲ್ಲದೆ ಗತಿಯದಾರು ತೋರ್ದರಯ್ಯ 1 ಪಿತನ ತೊಡೆಯೊಳಿದ್ದ ಸುತನ ಸತಿಯು ಕಾಲಿನಿಂದೊದೆಯೆ ಖತಿಯೊಳೈದಿ ಭಜಿಸೆ ಅತಿಶಯದ ವರವನಿತ್ತೆ 2 ದನುಜ ಕೋಪದಿಂದ ತನ್ನ ತನುಜನನ್ನು ಬಾಧೆಗೊಳಿಸೆ ಮನುಜ ಸಿಂಹನಾಗಿ ಭಕ್ತಗನುಪಮಾದ ಹರುಷವಿತ್ತೆ 3 ಮಕರ ಬಾಧೆಯಿಂದ ಕರಿಯು ಸಕಲಕರ್ತನೆನುತಲೊದರೆ ಅಖಿಳ ದೈವಂಗಳಿರಲು ಬಕವಿರೋಧಿ ನೀನೆ ಪೊರೆದೆ 4 ಕೂರ್ಮ ಕ್ರೋಢ ಸಿಂಹ ಬ್ರಾಹ್ಮಣೇಂದ್ರ ರಾಮಕೃಷ್ಣ ಬುದ್ಧ ಕಲ್ಕಿ ದಾನವಾರಿ ಸಲಹೊ ಎನ್ನ 5 ಸರ್ವಲೋಕ ಜನಕ ನಿನ್ನ ಸರ್ವಕಾಲದಲ್ಲಿ ನೆನೆವೆ ವಿನುತ ಸರ್ವಸೌಖ್ಯ ನೀಡು ಹರಿಯೆ 6 ಕಂಜಜೇಶ ಪನ್ನಗೇಶ ನಿರ್ಜರೇಶ ಮುಖ್ಯ ದಾಸವರದ ಶೇಷ ಭೂಧರೇಶ ಎನ್ನ ಸಲಹೊ ಬೇಗ 7
--------------
ತುಪಾಕಿ ವೆಂಕಟರಮಣಾಚಾರ್ಯ
ಯಾವಪರಾಧ ಮಾಡಿದೆನೋ ರಂಗ ಈ ವಸುಧೆಯೊಳಿನ್ನು ಬಳಲುವೆನೋ ರಂಗ ಪ ಯಾವ ಪಕ್ಷಿಗೆ ಬಲೆ ಬೀಸಿದೆನೋ ರಂಗ ಯಾವ ಜೀವಿಗೆ ಗಾಳ ಹಾಕಿದೆನೋ ರಂಗ ಅ.ಪ ಯಾವ ಎಳಗೂಸನು ಬಾವಿಗೆ ತಳ್ಳಿದೆ ಯಾವ ತಪಸಿಗೆ ಭಂಗವಗೈದೆ ಯಾವ ದಂಪತಿಗಳ ಬೇರೆಗೈದೆನೊ ರಂಗ ಜೀವನು ನಾನೇನ ವಂಚನೆಗೈದೆನೊ 1 ಅಪರಾಧಂಗಳು ವಿಪರೀತವಾದರೂ ವಿಪುಲ ಕೃಪಾಕರ ನೀನಹುದಯ್ಯ ಅಪಕೃತಿಗೈದರೂ ಉಪಕೃತಿಗೈವೆ ನೀ ಕುಪಿತನಾಗದೆ ಕಾಯೋ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯೋಗಿವರ್ಯ ಶಿರಬಾಗಿ ನಮಿಸುವೆನು ಶ್ರೀ ರಾಘವೇಂದ್ರನೆ ಪ ಹೇಳಿದ ವಚನವ ಕೇಳಿ ಮನದಲಿ ಬಹಳ ಸುಖಿಸುತಲಿಕಾಲಕಾಲಕೆ ಶ್ರೀ ಲಲಾಮನ ಲೀಲೆ ಪಾಡುತ ವ್ಯಾಳೆ ನೋಡುವಿ 1 ಸತ್ಯವಾಣಿಯು ಮಿಥ್ಯವಾಗದು ಮತ್ತೆ ಲೋಕದೊಳುಚಿತ್ತದೊಳು ಅನಿತ್ಯ ಚಿಂತಿಸಿ ವೃತ್ತಿ ಕೃಷ್ಣನೊಳು ಇತ್ತು ಪಾಡುವಿ 2 ಎಲ್ಲ ಬಿಟ್ಟವ ಸುಳ್ಳನಾಡೊದು ಎಲ್ಲಿ ಕಾಣಿಸದುಫುಲ್ಲನಾಭನ ಭಕ್ತನಲ್ಲಿ ಹೇಳಿದ ಸುಳ್ಳು ಕಾದುಕೋ 3 ಆಶೆ ತೋರಿಸಿ ನಿರಾಶೆ ಮಾಡುವುದು ದಾಸ ಜನರೊಳಗೆಈಶ ನಿಜ ಬಹು ತೋಷವೆಂಬುದು ಭಾಷಿಸದೆಯತಿವೇಷ ದಿವಿಜನೆ 4 ಶಕ್ತಿವಚನವ ಕೃತ್ಯಮಾಡಲು ಶಕ್ತನಾರದನು ಒತ್ತಿ ಪೇಳಿದಹತ್ತರಾತನ ಭೃತ್ಯರಾಶಯ ಪೂರ್ತಿಮಾಡಿಸು 5 ನೀನೇ ಬಾಂಧವ ನೀನೇ ದೈವತ ನೀನೇ ಗುರುಪಿತನುನಾನು ನಂಬಿದೆ ಮೌನಿ ತೋರಿಸು ವೇಣು ಬಾಲಕನ ಜವ 6 ಇಂದು ಎನ್ನೊಳುನಿಂದು ಪ್ರಾರ್ಥಿಸು 7
--------------
ಇಂದಿರೇಶರು
ರಂಗ ಬಾರ ಕುರಂಗನಯನೆ ಮಂಗಳಾಂಗನ ಕರೆದುತಾರೆ ಪ ಅಂಗ ಸಂಗ ಸುಖವನಿತ್ತು ತಂಗೀ ಮನವ ಸೆಳೆದುಕೊಂಡ ಅ.ಪ ಸಂಚಿನಿಂದ ಒಳಗೆಬಂದು ಮಂಚಕೆನ್ನ ಗಂಡನ ಕಟ್ಟಿ ಮಿಂಚಿನಂತೆ ತೋರಿಪೋದ 1 ಕಂಚುಕದೊಳಿರುವ ಪಣ್ಗಳ ವಂಚಿಸದೆ ಕೊಡುಯೆಂದೆಂಬ ಸಂಚಿತಾರ್ಥದ ಪುಣ್ಯವೆಂದು ವಿರಿಂಚಿಪಿತನು ರೋಜಪಿಡಿದ 2 ಉಲ್ಲಸದೊಳಗಾಲಿಂಗಿಸುತ ಫುಲ್ಲಲೋಚನ ಪರವಶಗೈದ 3 ಮುನಿದುನಾನು ನಿಂದಿರಲು ಕನಿಕರದಿಂದ ಕುಣಿದು ಹಾಡಿ ಮನವನುಬ್ಬಿಸಿ ತನುವಮರೆಯಿಸಿ ಇವನತೆರದೊಳೆನ್ನನಾಳ್ದ 4 ಮೊಸರ ಕಡೆದು ಬೆಣ್ಣೆತೆಗೆಯೆ ಮೆಲ್ಲನೆ ಬೆನ್ನಹಿಂದೆ ಬಂದು ಅಸಮರೂಪ ತೋರುತಾಗ ಒಸೆಯುತದನು ಕದ್ದು ಮೆದ್ದ 5 ಹೋರಿಯೆನ್ನೊಡೆ ದಾರಿಬಿಡದೆ ಓರಿಗೆಯರ ಕಂಡು ಜಾರಿದ 6 ಕೊಳಲನೂದಿ ಒಳಗೆ ಬಂದು ಲಲನೆಯೇಳೆ ಎಂದವನ 7 ನೀರಮುಳಗಿ ಭಾರಹೊತ್ತು ಕೋರೆ ಮಸೆದ ನಾರಸಿಂಹ ಬುದ್ಧ ಕಲ್ಕಿ 8 ಪಕ್ಷಿವಾಹನ ಹೆಜ್ಜಾಜಿ ಯಧ್ಯಕ್ಷ ಚನ್ನಕೇಶವದೊರೆಯೆ ರಕ್ಷಿಸೆಂದು ನಂಬಿದವರ ಪಕ್ಷನಾಗಿ ಪಾಲನೆಗೈವ 9
--------------
ಶಾಮಶರ್ಮರು
ರಂಗ ಬಾರೋ ರಂಗ ಬಾರೋ ರಂಗ ಬಾರೋ ಶ್ರೀರಂಗ ಬಾರೋ ಪ ತುಂಗ ಕೃಪಾಂಬಿಕ ಮಂಗಳದಾಯಕ ಅ.ಪ ಮೆಲ್ಲಮೆಲ್ಲನೆ ಬಾ ಮೆಲ್ಲಡಿಯಿಡು ಬಾ ಮೆಲ್ಲುಲಿಯುಲಿ ಬಾ ಮೆಲ್ಲು ಬೆಣ್ಣೆಯ ಬಾ ಸಲ್ಲಲಿತಾಂಗ ಬಾ ಪಲ್ಲವಾಧರ ಬಾ ಫುಲ್ಲಲೋಚನ ಬಾ ಚೆಲ್ವಮೂರ್ತಿಯೆ ಬಾ1 ಗಂಗೆಯ ಜನಕ ಬಾ ಅಂಗಜಪಿತನೆ ಬಾ ಮೂರ್ತಿ ಬಾ ಹೊಂಗೊಳಲೂದು ಬಾ ಸಂಗೀತಲೋಲ ಬಾ ಮಾಂಗಿರಿಯರಸ ಬಾ ಬಾಬಾರೊಬಾರೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಂಗಬಾರನ್ಯಾತಕೆ ಸಖಿಯೆ ಮುದ್ದು ಪ ಶರಧಿಯ ಪೊಕ್ಕನೇನೆ ಸುರರೆಲ್ಲರು ಕೂಡಿ ಗಿರಿಯ ಬೆನ್ನಾಲಿ ಅವರು ಪೊರಿಸಿದರೇನೆ 1 ಧರೆಯನೆತ್ತಲು ಪೋಗಿ ನರಹರಿಯಾದನೇನೇ ಗರುವರಹಿತ ಬ್ರಹ್ಮಚಾರಿಯಾದನೇನು 2 ಪರಶುಪಿಡಿದು ಕ್ಷತ್ರಿಯರ ಸವರುವೆನೆಂದು ಗಿರಿವನಗಳಲಿ ತಾನು ಚರಿಸುತಲಿಹನೇನೇ 3 ಸ್ಮರನ ಪಿತನು ತಾನು ನಾರಿ ಪಾಂಚಾಲೆಯ ಮೊರೆಯ ಕೇಳುತ ಭರದಿ ಸಾರಿದನೇನೆ 4 ಮಾನವ ತಾ ಸೂರೆಗೊಳ್ಳಲು ತೇಜಿ ಏರಿ ಪೋದನೇನೆ ಶ್ರೀ ರಂಗೇಶವಿಠಲ 5
--------------
ರಂಗೇಶವಿಠಲದಾಸರು
ರತ್ನದೊಳಗಿದು ರತ್ನ ನವರತ್ನಗಳೊಳಗಿದು ರತ್ನ ಪ ಚಿತ್ತಜಪಿತನೆಂಬ ರತ್ನ ನಮ್ಮ ನಿತ್ಯಮುಕ್ತರಂಗರತ್ನ ಅ.ಪ ಭಕ್ತಪಾಲಕನೆಂಬ ರತ್ನ ಸತ್ಯಾಸಕ್ತ ವರದನೆಂಬ ರತ್ನ ಮುಕ್ತಿದಾಯಕ ರಾಮರತ್ನ ನಮ್ಮ ಯುಕ್ತಿಭರಿತ ಕೃಷ್ಣರತ್ನ1 ಗೋಪಾಲಕೃಷ್ಣನೆಂಬ ರತ್ನ ವರತಾಪಸವಿನುತ ಮಾರತ್ನ ಶ್ರೀಪತಿಯೆಂಬ ಜೀವರತ್ನ ನಮ್ಮ ಪಾಪವಿನಾಶಕರತ್ನ 2 ಚಾರು ವೇದದೊಳಿಹ ರತ್ನ ನಮ್ಮಶ್ರೀರಮಣ ಎಂಬರತ್ನ 3 ಕರಿರಾಜವರದ ಸುರತ್ನ ನಮ್ಮ ಕರುಣಾಕರಯೆಂಬ ರತ್ನ ಶರಣ ಜನರ ಹಸ್ತರತ್ನ ನಮ್ಮ ತರಳಧ್ರುವನ ಕಾಯ್ದ ರತ್ನ 4 ಪ್ರೇಮರಸಾನ್ವಿತ ರತ್ನ ಇದು ಶ್ರೀಮಾಂಗಿರಿರಂಗರತ್ನ ನಮ್ಮ ರಾಮದಾಸಾರ್ಚಿತ ರತ್ನ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಮಣಿ ಕೇಳೆಲೆ ಮೋಹನ ಶುಭಕಾಯನ ಅಮರ ವಂದಿತ ರವಿಶತಕೋಟಿ ತೇಜನ ವಿಮಲ ಚರಿತ್ರದಿ ಮೆರೆವ ಶ್ರೀ ಕೃಷ್ಣನಕಮಲವದನೆ ನೀ ತೋರೆ ಪ ಬಾಯೊಳಗಿಹಳ ಗಂಡನ ನಿಜ ತಮ್ಮನತಾಯ ಪಿತನ ಮಡದಿಯ ಧರಿಸಿದನಸ್ತ್ರೀಯಳ ಸುತನ ಕೈಯಲಿ ಶಾಪಪಡೆದನದಾಯಾದಿಯ ಮಗನಸಾಯಕವದು ತೀವ್ರದಿ ಬರುತಿರೆ ಕಂಡುಮಾಯಾಪತಿ ಭೂಮಿಯನೊತ್ತಿ ತನ್ನಯಬೀಯಗನ ತಲೆಗಾಯಿದಂಥರಾಯನ ಕರೆದು ತೋರೆ 1 ನಾಲಗೆ ಎರಡರವನ ಭುಂಜಿಸುವನಮೇಲೇರಿ ಬಹನ ತಂದೆ ಇಹ ಗಿರಿಯನುಲೀಲೆಯಿಂದಲಿ ಕಿತ್ತೆತ್ತಿದ ಧೀರನಕಾಳೆಗದಲಿ ಕೊಂದನಲೋಲಲೋಚನೆಯ ಮಾತೆಯ ಪುತ್ರನಣುಗನಮೇಲು ಶಕ್ತಿಗೆ ಉರವನಾಂತು ತನ್ನವರನುಪಾಲಿಸಿದಂಥ ದಾತನಹ ದೇವನಲೋಲೆ ನೀ ಕರೆದು ತೋರೆ 2 ಉರಿಯೊಳು ಜನಿಸಿದವನ ನಿಜ ತಂಗಿಯಸೆರಗ ಪಿಡಿದ ಖಳನಣ್ಣನ ತಂಗಿಯವರನ ತಲೆಯನು ಕತ್ತರಿಸಿದ ಧೀರನಗುರುವಿನೊಳುದಿಸಿದನಶರವ ತಪ್ಪಿಸಿ ತನ್ನ ದಾಸರ್ಗೆ ಅನುದಿನಕರೆದು ವರವನಿತ್ತು ಮನ್ನಿಸಿ ಸಲಹುವಉರಗಗಿರಿಯ ವೆಂಕಟಾದಿಕೇಶವನ ಗರತಿ ನೀ ಕರೆದು ತಾರೆ 3
--------------
ಕನಕದಾಸ
ರಮಾ ಮನೋಹರ ಶ್ಯಾಮಸುಂದರ ವಿಮಾನ ಶೋಭಿತ ಹರೇ ಹರೇ ಪ ಕುಮಾರಪಿತನುತ ಶವi ದಮಾಯುತ ಸಮಾನ ವಿರಹಿತ ನಮೋ ನಮೋಅ.ಪ ಸುರೇಶ ಪಶುಪತಿ, ನಾರಾಯಣಾ ಧರೇಶ ರಘುಪತಿ ಲಾವಣ್ಯಮೂರುತಿ ಹರೀಶ ಮಾರುತಿ ಪಾರಾಯಣ 1 ಗೋಪಾಂಗನಾ ಪ್ರಿಯ ಗೋಪಾಲ ಬಾಲ ಚಾಪಾಂಬುಕರ ಭಯಹಾರ ಪ್ರಮೇಯ ಶ್ರೀಪಾದ ಚಿನ್ಮಯ ಸೌಂದರ್ಯ ಶೀಲ ಭೂಪಾಲ ಮಾಂಗಿರಿ ಶೃಂಗಾರ ನಿಲಯ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊ ನೀಗಿ ಭವದ ಬಂಧದಿಂದ ಮುಕ್ತರಾಗಿರೊ ಪ ಶಂಕೆಯಿಲ್ಲದೆ ವರಗಳ ಕೊಟ್ಟು ಚಿಂತೆ ಹರಿಸುವರ ಕಂತುಪಿತನ ಭಕ್ತರಿಗೆ ನಿರಂತರ ಸಂತಸ ನೀಡುವರ ಪಂಕಜನಾಭನ ಕಿಂಕರರ ಭಯ ಚಿಂತೆಯ ನೀಗುವರ ಶಂಖು ಕರ್ನರಿವರೆನ್ನುತ ಅಭಯದ ಕಂಕಣ ಕಟ್ಟಿಹರ 1 ಹಾಟಕಶ್ಯಪುತ್ರನು ವಿನಯದಿ ಪ್ರಾರ್ಥಿಸಿ ಪೂಜಿಸಿದ ಮಾಟಮುಖದ ದೇವನ ಪಾದಾಂಬುಜ ಧ್ಯಾನಿಸಿ ಸೇವಿಸಿದ ಕೋಟಲೆ ಭವದೊಳು ತಾಪವ ಪಡುವರ ಆಪದ ಪರಿಹರಿಸಿ ಭ- ವಾಟವಿದಾಟಿಸಿ ಪೊರೆದ ಪ್ರಹ್ಲಾದರ ಉಲ್ಲಾಸದಿ ಭಜಿಸಿರಿ2 ವ್ಯಾಸರಾಯರೆಂದು ಜಗದಿ ಪ್ರಖ್ಯಾತಿ ಪಡೆದವರ ದೇಶ ದೇಶದ ಭಕುತರ ಉಲ್ಲಾಸ ಕೊಡುವರ ಶ್ರೀ ಸುಧೀಂದ್ರಾರ್ಯರ ಪುತ್ರರೆನಿಸಿಕೊಂಬರ ಕ್ಲೇಶಗಳನೆ ಕಳೆವರೆಂಬ ಕೀರ್ತಿಪಡೆದರ3 ಕಂಗೊಳಿಪ ಕೋರೆಯಿಂದ ಬಂದ ಭದ್ರೆಯ ತೀರದಿ ಚಂದದಿಂದ ಮೆರೆವ ರಾಘ- ವೇಂದ್ರ ರಾಯರ ಕೊಂಡಾಡಿ ಪಾಡಿರೊ ಮನಕೆ ಸಂಭ್ರಮ ನೀಡುವರು ಪೊಂದಿದ ಪಾಪಗಳೆಲ್ಲವ ನೀಗಿಸಿ ಚಂದದಿ ಸಲಹುವರು 4 ಕರುಣದಿಂದ ಭಕ್ತರನೆಲ್ಲ ಸಲಹುತಿರ್ಪರ ಕಮಲನಾಭ ವಿಠ್ಠಲನಂಘ್ರಿ ಭಜನೆ ಮಾಳ್ಪರ ಕನಕಮಯದ ಮಂಟಪದಲಿ ಮರೆಯುತಿರ್ಪರ ಕರೆದು ಪ್ರಾರ್ಥಿಸುವವರ ಮನಕೆಹರುಷ ತೋರ್ಪರ 5
--------------
ನಿಡಗುರುಕಿ ಜೀವೂಬಾಯಿ