ಒಟ್ಟು 4256 ಕಡೆಗಳಲ್ಲಿ , 116 ದಾಸರು , 2832 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ನೋಡುವಿಯನ್ನ ಅಂತ ಹರಿಯೇ| ಕಂತುಪಿತ ಕೈವಿಡಿದು ಕಡೆಗಾಣಿಸಯ್ಯಾ ಪ ಆಶೆಯೆಂಬಾ ಮಹಾ ಹೆಸರುಳ್ಳ ಆ ನದಿಯು| ಲೇಶ ಅಂತಿ-ಲ್ಲದಾ ಚಿಂತೆ ಥಡಿಯು| ಸೂಸುತಿವೆ ಇದರೊಳಗ ಮನೋರಥವೆಂಬ ಜಲ| ಘಾಸಿ ಮಾಡುವ ಬಯಕೆ ಲಹರಿ ಬರುತಿದೆ 1 ದೋರುತಿದೆ ಸಂಸಾರ ತಾಪದಾವಾನಳವು | ಹರಿದು ಬರುತಿದೆ ಕಾಳಸರ್ಪ ತಾನು | ಅರಿಷಡ್ವರ್ಗಗಳನು ಉತ್ತುಂಗ ಜಲ ಚರವು | ತೆರಗಾಣೆ ಮೋಹಸುಳಿಯಲಿ ಬಿದ್ದ ಬಳಿಕಾ 2 ನಿನ್ನ ನಾಮವೆಂಬ ಸಂಗಡಿಯನು ಕಟ್ಟಿ| ಮುನ್ನಿನ ಪರಾಧಗಳ ಕ್ಷಮೆಯ ಮಾಡಿ| ಸನ್ನುತನೆ ಮಹಿಪತಿ ಸುತ ಪ್ರಾಣದೊಡಿಯನೆ| ನಿನ್ನ ದಾಸರ ದಾಸನೆಂದು ದಯಮಾಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂತು ಪೊಗಳಲಳವೇ ದ್ವಾರಾವತಿಯ ದೊರೆಯನ್ನು ಕಂತುಪಿತ ಶ್ರೀಕೃಷ್ಣ ಮೂರುತಿಯಾ ಪ. ಅಂತರಂಗದಲಿ ನಿಂತು ಪೊರೆಯುವ ಏಕಾಂತ ಮೂರುತಿಯ ಕರುಣಾನಿಧಿಯಾ ಅ.ಪ. ಆಲದೆಲೆಯ ಮೇಲೆ ಮಲಗಿದ ಸಿಂಧು ನಲಿಯುತ ಕನಕನ ಕಿಂಡಿಯಲಿ ನಿಂದು ಒಲಿದು ವರಗಳನೀವ ಗುಣಸಿಂಧು 1 ಕಂಠದಲಿ ಮುತ್ತಿನಹಾರ ವಜ್ರದಂಗಿಯ ಅಲಂಕಾರ ಕಂಟೀಪದಕ ವಿಸ್ತಾರ ಕರದಲಿ ವಜ್ರದುಂಗೂರ ಸೊಂಟಪಟ್ಟಿಯ ಕಟ್ಟಿದಾ ಚಂದ ನಾಭೀ ಕಮಲದಾನಂದ 2 ಕಡೆಕಣ್ಣು ಕಂಗಳಾ ನೋಟ ಕಸ್ತೂರಿ ಲಲಾಟ ಕುಡಿಹುಬ್ಬುಗಳ ನೀಟಾ ವಜ್ರಮಾಣಿಕ್ಯದ ಕಿರೀಟ ಪಿಡಿದಿರುವ ಕಡಗೋಲು ಕರದಿ ರುಕ್ಮಿಣೀಶ ವಿಠಲ 3
--------------
ಗುಂಡಮ್ಮ
ಎಂತುಟೆಂದಾಡುವೆನು ಕಾಂತನಾ ಚರ್ಯೆಯನು ಸಂತತವು ಚಿಂತಿಪೆನು ಕಾಂತೆ ನಾನು ಪಾಲನೂಡಿದಳನ್ನೂ ಪಾಳುಮಾಡಿದನಕಟ ಬಾಲ ಗೋಕುಲಬಾಲ ಜಾಲಲೋಲ ಖಲತನದಿ ಗೋಪಿಯರ ನಿಲಯವನು ತಾಪುಗುತೆ ನಲಿದು ಪಾಲ್ವೆಣ್ಣೆಯನು ಕದ್ದು ತಿಂದು ಪಿಡಿದು ಬಂದಿಪೆವೆಂದು ನಡೆತಪ್ರ್ಪವರ ಮುಂದು ಗೊಡದಂದು ಮೈಗರೆದು ಜಡಿವಹಿಂದು ಕಾಳಿಯಾ ಮಡುವನ್ನು ಕಲಕಿ ಬಂದು ಕಾಲಮೇಘವಪೋಲ್ವ ರೂಪತಳೆದು ಲೀಲೆಯಿಂ ಶೇಷಗಿರಿಯಲ್ಲಿ ನಿಂದು ಜಾಲವನು ಬೀರುತಿಹ ದೀನಬಂಧು 4
--------------
ನಂಜನಗೂಡು ತಿರುಮಲಾಂಬಾ
ಎತ್ತಣ ಸಂಸ್ಕøತಿ ಎಲ್ಲಿದೀ ಕಾಯಾ ಸುತ್ತಲೂ ಸಂಕಟವೋ ಮತ್ತೆ ವೈರಿಗಳ ಮತ್ತೆರಡುಪಟಳ ಸುತ್ತೆ ಭೀತಿಮಯವೋ ಕೃಷ್ಣಾ ಪ ಸುಂದರ ದೇಹವು ಬಂದುದು ಎಂದಾನಂದ ಭರಿತನಾಗಿ ಬಂಧು ಬಳಗದ ಪೊಂದಿಕೆಯಿಂದಲಿ ಸಂದಣಿ ಹೆಚ್ಚಾಗಿ ಚಂದದ ಮಂದಿರ ಕುಂದದ ಧನ ಸುಖದಿಂದ ಯುಕ್ತನಾಗಿ ಬಂದೆಮದೂತರು ನಿಂದು ಯಳೆಯುವಾಗ ಸುಂದರ ತನುವೆಲ್ಲಿ ಬಂಧು ಬಳಗವೆಲ್ಲಿ 1 ಚತುರ ದೆಶೆಗಳಲಿ ಭರದಿ ಸಾಗುವವು ಗತಿಯ ಅರುಹು ಇಲ್ಲಾ ಚತುರದ ಮೇಲೊಂದತಿ ಕ್ಲೇಶಗಳೀ ದೇಹ ಮುತ್ತಿದವಲ್ಲಾ ಚತುರದೊಳುಣವಂದತಿ ತಾಪಗಳ್ಮಿತಿ ಮೀರಿ ಕಾಡಿದವಲಾ ಚತುರಾನನ ಪಿತ ಗರಿಯಿಲ್ಲದನ್ನ ಹಿತರು ತೋರಲಿಲ್ಲಾ 2 ಪರಿಪರಿ ವಿಷಯಗಳ ಮೆರೆವ ಶಿರಿಯ ಮೇಣರಿವರ್ಗಗಳೆರಗಿ ಹರಿಯ ನೆನೆವ ಮನ ಕರವಳ ಹೊಯ್ದು ಬೆರಸಿ ಕಾಯವ ತೂಗಿ ಮರದ ಮೇಲಿಂದ ಕರಬಿಟ್ಟ ತೆರದಂತೆ ಮೆರೆವ ದೇಹಕೆ ಆಗಿ ಸೊರಗೀ ಕೃಷ್ಣಾ 3
--------------
ನರಸಿಂಹವಿಠಲರು
ಎಂಥ ಆಟವಿದು ಕ್ಷಿತಿಜಪತಿದೆಂಥ ಆಟವಿದು ಪ ಎಂಥ ಆಟ ಶ್ರೀ ಕಂತುಜನಕ ಭ ಕ್ತಾಂತರಂಗ ಸುರಚಿಂತಾಮಣಿಯೇ ನಿನ್ನದೆಂಥ ಅ.ಪ ಮಡುವಿನೊಳಡಗಿರುವ ಉರಗನ ಹೆಡೆಮೆಟ್ಟಿ ನಾಟ್ಯಮಾಡುವ ಸಡಗರದಲಿ ಗೊಲ್ಲ ರ್ಹುಡುಗರ ಕೂಡಿಸಿ ಒಡನೆ ಬಿಲ್ಲಿನಾಟ ರಚಿಸಿ ಮಧುರಪುರ ಬಿಡದೆ ಸೇರಿ ಗಡಕಡಿದು ಮಾವನ ಶಿರ ತಡೆಯದೆಮನಪುರಪಥವ ಪಿಡಿಸಿದ್ದು 1 ಗೋವಳರೊಡಗೂಡಿ ಗೋವುಗಳ ಕಾಯಲ ಡವಿಸೇರಿ ಮಾಯವೃಷ್ಟಿ ಅತಿಭರದಿ ಗೈಯಲಾಗ ಗೋವರ್ಧನ ಗಿರಿಯೆತ್ತೆ ಏಳುದಿನ ಗೋವುಗಳನು ಮತ್ತು ಗೋವಳರೆಲ್ಲರ ಜೀವ ಸಮಾನಮಾಡಿ ಪ್ರೇಮದಿ ಸಲಹಿದ್ದು 2 ಎಷ್ಟು ಕ್ಷೀರ ನೀಡೆ ಜನನಿಗಿನ್ನಿಷ್ಟೆಂದ್ಹಟ ಮಾಡೆ ಸಿಟ್ಟಿನಿಂದ ತಾಯಿ ಕಟ್ಟಲು ಒರಳಿಗೆ ಅಟ್ಟಹಾಸದಿ ಡುರುಕಿಟ್ಟು ನಡೆದು ಶಾಪ ಪಟ್ಟು ಪಟ್ಟಣಮುಂದೆಷ್ಟೋಕಾಲದಿಂದ ಕಷ್ಟಪಡುವರ ದಯದೃಷ್ಟಿಯಿಂ ಸಲಹಿದ್ದು 3 ದುರುಳ ಭಸ್ಮನಂದು ಹರನಿಂ ಉರಿಹಸ್ತವನು ಪಡೆದು ಪರಮಪಾಪಿ ವರ ಕರುಣಿಸಿದವನಿಗೆ ಮರುಳಮಾಡವನ ಕರವೆ ಅವನ ಮೇ ಲ್ಹೊರೆಸಿ ಉರುವಿಸಿ ಹರನ ರಕ್ಷಿಸಿದ್ದು 4 ಬತ್ತಲೆ ಪುರಗಳನ್ನು ಪೊಕ್ಕು ನೀ ಸತಿಯರ ವ್ರತಗಳನು ಹತಗೈದು ತ್ರಿಪುರದ ಪಥಪಿಡಿಸೆಮಪುರ ಹಿತದಿಂ ಸುರಗಣಕತಿಸೌಖ್ಯವ ನಿತ್ತು ಜತನಗೈದಿ ಸಿರಿಪತಿಯ ಶ್ರೀರಾಮನೆ ಸತತದಿಂಥ ಮಹಪತಿತ ಮಹಿಮದಿಹ 5
--------------
ರಾಮದಾಸರು
ಎಂಥ ಕರುಣನಿಧಿಯೊ ನಮ್ಮನಂತ ರೂಪನು ಎಂಥ ಕರುಣನಿಧಿಯೊ ನಮ್ಮನಂತ ರೂಪನು ಕಂತುಪಿತನು ಸಂತತ ಭಕ್ತರ ಹೃದಯದಿ ನಿಂತು ಕಾರ್ಯ ಮಾಡುತಿಹನು ಪ ಏಕದಶಿಯ ನಿಶಿಯೊಳಾನು ತೋಕರುದರಕೆ ಬೇಕಾದೀತು ನೀಡಿ ಹೊರಗೇಕ ಕಾಲಕೆ ಕಡದಿದೇಕ ಸರ್ಪಪಾವಕೆ ಶೋಕಹರಣ ಹರಿಯ ನೆನೆ ಶ್ರೀಕರನೆನಕೈಯ ಪಿಡಿದಾ 1 ಕಡಲಶಯನನನುದಿನದೊಳು ಬಿಡದೆ ಭಜಿಸುತಾ ಕಡಲ ಮಗಳ ಕರುಣವಿಲ್ಲದೆ ಬಡವನೆನಿಸುತಾ ಇಡಲು ಹೆಜ್ಜೆ ಮಡದಿಯೆನ್ನನೊಡಸಿ ನುತಿಸುತಾ ಸಡಗರ ದಿಗ್ವಿಜಯರಾಮ ನುಡಿಯವಿಡಿದ ಧ್ಯಾನತೀರ್ಥ ಮನದಿ ನಲಿವ ಹರಿಯು 2 ಕಾಲ ಕಳೆಯುತಾ ಇರಲು ಕಾಯಕೆ ವ್ಯಾಧಿ ತೊಡರಿ ಬಾಧೆಗೊಳಿಸುತಾ ಹರಿ ಪೂಜೆಗೆ ಹರಿವ ಮನವ ಕಟ್ಟುಮಾಡುತ ಹರಿಯ ಧ್ಯಾನದರಿವು ಹಾರಿ ಉರುಳುತಿರಲು ಧರೆಯ ಮೇಲೆ ಕರುಣದಿ ನರಸಿಂಹವಿಠಲ ದಣುವನಳಿದು ತನುವ ಪೊರೆದಾ 3
--------------
ನರಸಿಂಹವಿಠಲರು
ಎಂಥ ಶೂರನೊ ರಾಮ ಎಂಥ ಧೀರನೊ ಪ ಕಂತುಹರನ ಧನುವನೆತ್ತ ಪಂಥದಿಂದ ಮುರಿದು ಬಿಸುಟ ಅ.ಪ. ಹಲವು ಶೂರರಾಜರದನು ಚಲಿಸಲಾಗದ ಧನುವ ಸುಲಭದಿಂದಲೆತ್ತಿ ಮುರಿದು ಲಲನೆ ಸೀತೆಯೊಲಿಸಿದವನು 1 ಸಕಲ ಕ್ಷತ್ರಿಯರನು ಗೆಲಿದು ಪ್ರಕಟನಾದ ಪರಶುರಾಮ ಶಕುತಿಯನ್ನು ತಾನು ಪರಮ ಯುಕುತಿಯಿಂದ ಗೆಲಿದು ಬಂದ 2 ಸಾಲು ಶಿರನ ಕೀಟವೆಂದು ಬಾಲದಲ್ಲಿ ತಂದ ವೀರ ವಾಲಿಯನೇಕ ಬಾಣದಲಿ ಲೀಲೆಯಿಂದಲಿರಿದ ಜಾಣ 3 ಹತ್ತನಾಲ್ಕು ಲೋಕಗಳನು ಸುತ್ತಿಗೆಲಿದು ಖ್ಯಾತನಾದ ಹತ್ತು ತಲೆಯ ದುಷ್ಟನನ್ನು ಕತ್ತು ಕಡಿದು ಕೆಡಹಿದವನು 4 ರಾಸಿ ದೈತ್ಯರನ್ನು ಕೊಂಡು ದೇಶವನ್ನು ಉದ್ಧರಿಸಿದ ವಾಸವಾದಿ ಸುರನುತ ರಂ- ಗೇಶವಿಠಲರೇಯನವನು 5
--------------
ರಂಗೇಶವಿಠಲದಾಸರು
ಎಂಥಾ ಜಾಣೆಯೋ ಸುಪ್ರವೀಣೆಯೋ ಮುನ್ನಾಕೆಎಂಥಾ ನೋಂಪಿಯನೋಂತ ಫಲವೋಕಾಂತನ ಪರಕೀಯ ಕಾಂತೆಯೆಡೆಗ ಬಿಡ-ದಂತೆ ಸಂತಸದೊಳೇಕಾಂತ ಸುಖದೊಳಿರ್ಪ ಪ ನುತ ಹಂಸತೂಲತಲ್ಪದೊಳು ನಾನಾ ಬಂಧಗತಿಯಲಿ ಕಾಮಕೇಳಿಯನೆಸಗಿರತಿಸುಖಪಾರವಶ್ಯದೊಳೊಂದು ವರುಷದಮಿತಿಯನು ತೃಟಿಕಾಲವೆಂದುಸುರುವಳು ತಾ 1 ಹೆಣ್ಣು ಜನ್ಮದಿ ಹುಟ್ಟಿದುದಕೆ ಫಲವದುಕನ್ನೆಯರೊಳಗೆ ಕಟ್ಟಾಣಿಯಾಕೆಮುನ್ನೆಷ್ಟುಗಾಲ ತಪವ ಮಾಡಿ ತಾನಿಂಥಾಪುಣ್ಯವ ಪಡೆದಳಾಕೆಯ ಜನ್ಮ ಸಫಲವೋ2 ವರುಷವಾಗಲಿ ಒಂದು ದಿನವಾದರಾಗಲಾತರುಣಿಯ ಭೋಗದಂತಿರಬೇಡವೆಇರುಳು ಹಗಲು ಕಾಣದಂತೆ ಶ್ರೀ ಕೆಳದಿಯಪುರದ ರಾಮೇಶನೊಳ್ಪರಸದೊಳಿರುವಳಿಂ 3
--------------
ಕೆಳದಿ ವೆಂಕಣ್ಣ ಕವಿ
ಎಂಥಾ ನಿರ್ದಯನಾದ್ಯೋ ಎಲೆ ದೇವನೆ ಕಂತುಪಿತ ನಿನ್ನ ಅಂತ:ಕರುಣ ಎನ್ನ ಮೇಲೆ ಇಲ್ಲದೆ ಪ ಅಂತರಂಗದಿ ಮನದಿ ಅನುದಿನವು ಬಿಡದೆ ನಿಮ್ಮಾ ಚಿಂತನೆಯ ಮಾಡಿದರೆ ಚಿತ್ತಕರಗದೇಕೆ ಅಂಥ ಮಹಾದೋಷ ದತಿಶಯನಗೇನುಂಟ- ನಂತಗುಣ ಪರಿಪೂರ್ಣ ಆದಿನಾರಾಯಣ 1 ವಾಸುದೇವನೆ ನಿಮ್ಮ ವರ್ಣಿಸುವೆನು ವಸುಧಿಯೊಳು ಭೂಸುರರ ಪೋಷಿಸುವ ಪುಣ್ಯಪುರುಷಾ ಘಾಸಿಗೊಳಗಾಗಿ ನಿಮ್ಮ ಧ್ಯಾಸವೇಗತಿಯೆಂದು ಏಸೋ ಪರಿಯಲಿ ಭಜಿಸಿ ಈಶ ನಿನ್ನ ಕೃಪೆಯಾಗದೂ 2 ಸಕಲಲೋಕಾಧೀಶ ಸಕಲಭಾರಕರ್ತನಾಗಿ ಪ್ರಕಟ ಭಕುತರೊಳಗೆ ಪಾಲಿಸದೆ ಎನ್ನಾ ಮುಕುತಿದಾಯಕ ಹೆನ್ನ ವಿಠ್ಠಲ ನೀನೆ ಗೋವಿಂದ ಅಕಲಂಕ ಮಹಿಮ ನಿನ್ಹರುಷವನು ತೋರದಿನ್ನಾ 3
--------------
ಹೆನ್ನೆರಂಗದಾಸರು
ಎಂಥಾ ಬಲವಂತನೋ ಭಾರತೀಕಾಂತಾ ಎಂಥಾ ದಯವಂತನೋ ಪ ಎಂಥ ಮಹಬಲವಂತ ಬಹುಗುಣ - ವಂತ ಸರ್ವದಾನಂತಚೇತನ ರಂತರಾದೋಳ್ನಿಂತು ಪ್ರೇರಿಪ ನಂತು ಮಹಿಮೆಯ ಅಂತು ತಿಳಿಯದೊ ಅ.ಪ ವೀರರಾಘವನಂಘ್ರಿಯ ಭಜಿಸಿ ಕಪಿ - ವೀರನಾದನು ಮಹರಾಯಾ ವಾರಿಧಿಯಾಗಾಧತೋಯ ಲಂಘಿಸಿ ಲಂಕಾ ಸಾರಿ ಪೇಳಿದ ವಾರ್ತೆಯ ವೀರ ವನವನಂಗಾರಮುಖಕೆ ಇತ್ತು ವೀರಾಕ್ಷನೆನಿಪ ಕುಮಾರನ ದಂಡಿಸಿ ಸಾರಿ ಉಂಗುರವಿತ್ತು ಮತ್ತೆ ವಾರಿಧಿ ವಾನÀರೇಶನು ತೋರಿ ರಾಮನ ಪದಕೆ ನಮಿಸಿ ಚಾರು ರಾಗಟೆ ಇತ್ತ ತ್ವರದಿ 1 ತರುಳೆ ದ್ರೌಪದಿಯನ್ನು ಶರಗು ಪಿಡಿದು ಶಳದಾನು ಕರಿಯಲು ಬ್ಯಾಗ ಹರಿ ತಾನಂಬರವಿತ್ತನು ಧುರದಿ ಭೀಮನು ನಿನ್ನ ತರಿದರಕ್ತದಿ ತಾನು ಬೆರೆಸಿ ಕೇಶವ ಕಟ್ಟಿ ಕರುಳ ದಂಡೆಯನಿಟ್ಟು ಮೇರೆವೆ ಕೇಳೆಲೋ ದುರುಳನೆಂದಾ - ತರುಣಿವಚನವ ಸ್ಥಿರವ ಮಾಡಿದ ಧರಿಯತಳದಲಿ ಸರಿಯುಗಾಣೆನೊ ವgವÀೃಕೋದರ ಪರಮ ಕರುಣಿಯೆ 2 ಭೂತೇಶ ಸರ್ವೋತ್ತುಮಾನೆಂಬುವೊ ಮಹಾ - ಪಾತಕಿ ಜನಮಾತನೇಮ ಈತ ಮಾಡಿದ ನಿರ್ಧೂಮ ಹರಿಗೆ ಶಿವ ದೂತಜನರಿಗುತ್ತುಮ ಖ್ಯಾತಿ ಮಾಡಿದ ಜೀವಜಾತಿ ಪ್ರೇರಕನಾಗಿ ಶ್ವೇತವಾಹನ ದೂತನಾಗಿಹ ನಾಥ ಗುರು ಜಗನ್ನಾಥವಿಠಲ ಧಾತನಾಂಡಕೆನಾಥ, ನಿರ್ಜರÀ ನಾಥರೆಲ್ಲರೂ ದೂತರೆಂದರು 3
--------------
ಗುರುಜಗನ್ನಾಥದಾಸರು
ಎಂಥಾ ಭಾಗ್ಯವೆ ಎಂಥಾ ಪುಣ್ಯವೆ ಗೋಪಿ ಪ. ಎಂತು ಸಾಕಲಿಂಥ ದುಷ್ಟನ ಎಂತನಿಂತು ಚಿಂತೆಯಾಂತು ಅ.ಪ. ಪುಟ್ಟಿದೇಳು ದಿವಸದಲ್ಲಿ ದುಷ್ಟಪೂತನಿ ಕೊಂದ ದೇವ ದೃಷ್ಟಿವಂತನೆ ದಿಟ್ಟ ತೃಣ ಕೇಶೀಯರ ಪುಟ್ಟಕಾಲಲಿ ಶಕಟನಳಿದ ಕಟ್ಟಿ ಸಕಲ ದನುಜರನ್ನು ದೃಷ್ಟಿ ತಾಕಿತೆ ಕೃಷ್ಣಗೆನುತ 1 ವಿಪ್ರನು ನಿನ್ನ ಮನೆಗೆ ಬಂದು ಕ್ಷಿಪ್ರದಿ ಪೂಜೆ ಕೃಷ್ಣೆಗೆನಲು ಅಪ್ರಮೇಯನು ವಿಪ್ರನ ಮುಟ್ಟೆ ಕಟ್ಟಿ ಕಂಬಕೆ ಬರಲು ನಿಂದು ಕೃಷ್ಣಗರ್ಪಿಸೆ ನೈವೇದ್ಯವಾಗ ಸುಪ್ರಕಾಶದಿ ತೆಗೆದುಕೊಂಡ ಕೃಷ್ಣನನು ನೀನಪ್ಪಿ ಮುದ್ದಿಸೆ2 ಚಂದಿರನ ನೀ ತೋರು ಎನಲು ಇಂದುವದನ ಕೇಳಲಾಗ ಸುಂದರಾನನನಂದದಿ ಗೋವ ಚಂದದಿಂದ ಕಾದು ಕಾಳಿಂಗನಂದದಿ 3 ಸುರರು ಶ್ರೀ ಶ್ರೀನಿವಾಸನ ಶಿರದಿ ಪುಷ್ಪ ಮಳೆಗೆರೆಯಲು ನೆರೆದು ಗೋಪೇರ ಸೀರೆ ಸೆರಗ ಸೆಳೆದು ವರಳನೆಳೆದು ಮುರಿದು ಮರವ ಗರೆದು ಅಮೃತಸದೃಶ ವಾಣಿ ನೆರೆದು ಗೋಪಿಯರೊಡನೆ ನಾಟ್ಯಗರೆದು ರಾಸವಾಡೆ ರಂಗನಕರೆದೆರೆವೆ ಮಗುವೆನ್ನುವ 4
--------------
ಸರಸ್ವತಿ ಬಾಯಿ
ಎಂದಿಗೆ ಕಾಂಬುವೆ ಇಂದಿರೇಶನೆ ನಿನ್ನ ಪಾದ ಕೃಪೆಯ ಪ ಒಂದರಲವ ನಿಂದು ಒಂದೇ ಮನದಿ ನಿನ್ನ ಮಂದ ಭಾಗ್ಯನು ನಾನು ಅ.ಪ ಎನ್ನ ಮನಸಿನ ಚೇಷ್ಟೆ ವರ್ಣಿಸಲಳವಲ್ಲ ಕ್ಷಣಕೊಂದು ಪರಿಯಪ್ಪುದು ಘನದೃಢ ಹರಿಪಾದ ನೆನೆಯುವುದು ನಿಮಿಷದಿ ಎಣಿಯಿಲ್ಲದೈಶ್ವರ್ಯವನು ಭೋಗಿಸುವುದು 1 ಗಳಿಗೆಯೊಳ್ದಶಲಕ್ಷ ಸುಲಭದಿಂ ಗಳಿಸರ್ಥ ಬಲವಾಗಿ ನಿಲಯದಿಟ್ಟು ಲಲನೆಯೊಳೊಡಗೂಡಿ ಬಲುಸೌಖ್ಯ ಬಡುಕೊಂಡು ಗಳಿಗೆಯೊಳ್ ದೇಶಾಂತರಕೆಳಸುವುದಭವ 2 ಅರಿಗಳಂ ಬಂಧಿಸಿ ಸೆರೆಯೊಳಿಟ್ಟರಲವದಿ ಶಿರವರಿಪೆನೆನುತಿಹ್ಯದು ಪರಮ ವೈರಾಗ್ಯದಿಂ ಚರಿಸುವುದರಲವದಿ ಪರಲೋಕ ಸಾಧನದಿರುತಿಹ್ಯದಕಟ3 ದೃಢದಿ ನಡೆವುದು ನಿಮಿಷ ಪೊಡವಿಜನಕೆ ಸತ್ಯ ನುಡಿಯು ಬೋಧಿಸುತಿಹ್ಯದು ದೃಢತರಬಲದಿ ತಾ ಕಡುಗಲಿಯೆನಿಸೊಂದೇ ಕೊಡೆಯಿಂದಲಾಳುವುದು ಪೊಡವಿಯಂ ಸಕಲ 4 ಕಾಮಿಸುತೀಪರಿ ಕಾಮಕೊಳಪಡಿಸೆನ್ನ ಪಾಮರನೆನಿಸುವುದು ಸ್ವಾಮಿ ಶ್ರೀರಾಮ ಎನ್ನ ಪಾಮರಮನಸಿನ ಕಾಮಿತವಳುಕಿಸಿ ಪ್ರೇಮದಿಂ ಸಲಹಯ್ಯ 5
--------------
ರಾಮದಾಸರು
ಎಂದಿಗೆ ದೊರಕುವನೋ ಪ. ಎಂದಿಗೆ ದೊರಕುವ ಸುಂದರ ಪುರುಷನು ಒಂದು ಗಳಿಗೆ ಯುಗ ಒಂದಾಗಿ ಕಳೆದೆನು ಅ.ಪ. ಸರಿರಾತ್ರಿ ವೇಳ್ಯದಲಿ ಮೆಲ್ಲನೆ ಒಂದು ಸರಸವಾಡುತಲಿ ಪರಿಪರಿ ವಿಧದಲಿ ಸ್ಮರನ ಕಲೆಯ ತೋರಿ ವಿರಹಗೊಳಿಸಿ ನಾಳೆ ಬರುವೆನೆನ್ನುತ ಪೋದ 1 ಕೌಸ್ತುಭ ರತ್ನಾ- ಲಂಕೃತ ಶುಭಗ್ರೀವನ ಶಂಕರಾರ್ಚಿತನು ಮೀನಾಂಕಜನಕ ನಿಷ್ಕ- ಲಂಕ ಮಹಿಮನು ಶ್ರೀವೆಂಕಟರಮಣನು 2 ಅಂಗಜಕೋಟಿರೂಪ ಪರಮ ಸದಯಾ- ಪಾಂಗನಿರತ ನಿರ್ಲೇಪ ಮಂಗಲ ಚರಿತ ಭುಜಂಗಶಯನ ನರ- ಸಿಂಗ ವರದ ಮಾತಂಗ ಶ್ರೀರಂಗನು3 ಚಂದಿರಶತವದನ ಶೋಭಿಪ ನವ ಕುಂದ ಕುಟ್ಮಲರದನ ಸಿಂಧುಶಯನ ಮುಚುಕುಂದಾಪ್ತ ಸಚ್ಚಿದಾ- ನಂದ ಗೋವಿಂದ ಮುಕುಂದ ನಂದನಕಂದ4 ಅಕ್ಷರಾರ್ಚಿತ ದೇವನು ಶರಣ ಜನ ಪಕ್ಷ ಪರಾತ್ಪರನು ಪಕ್ಷೀಂದ್ರ ತುರಗ ಪದ್ಮಾಕ್ಷ ತ್ರಿಲೋಕ ವಿ- ಲಕ್ಷಣಮೂರ್ತಿ ಶ್ರೀಲಕ್ಷ್ಮೀನಾರಾಯಣ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎಂದಿಗೆ ದೊರಕುವನೋಪ. ಎಂದಿಗೆ ದೊರಕುವ ಸುಂದರ ಪುರುಷನು ಒಂದು ಗಳಿಗೆ ಯುಗ ಒಂದಾಗಿ ಕಳೆದೆನುಅ.ಪ. ಸರಿರಾತ್ರಿ ವೇಳ್ಯದಲಿ ಮೆಲ್ಲನೆ ಒಂದು ಸರಸವಾಡುತಲಿ ಪರಿಪರಿ ವಿಧದಲಿ ಸ್ಮರನ ಕಲೆಯ ತೋರಿ ವಿರಹಗೊಳಿಸಿ ನಾಳೆ ಬರುವೆನೆನ್ನುತ ಪೋದ 1 ಕೌಸ್ತುಭ ರತ್ನಾ- ಲಂಕೃತ ಶುಭಗ್ರೀವನ ಶಂಕರಾರ್ಚಿತನು ಮೀನಾಂಕಜನಕ ನಿಷ್ಕ- ಲಂಕ ಮಹಿಮನು ಶ್ರೀವೆಂಕಟರಮಣನು2 ಅಂಗಜಕೋಟಿರೂಪ ಪರಮ ಸದಯಾ- ಪಾಂಗನಿರತ ನಿರ್ಲೇಪ ಮಂಗಲ ಚರಿತ ಭುಜಂಗಶಯನ ನರ- ಸಿಂಗ ವರದ ಮಾತಂಗ ಶ್ರೀರಂಗನು3 ಚಂದಿರಶತವದನ ಶೋಭಿಪ ನವ ಕುಂದ ಕುಟ್ಮಲರದನ ಸಿಂಧುಶಯನ ಮುಚುಕುಂದಾಪ್ತ ಸಚ್ಚಿದಾ- ನಂದ ಗೋವಿಂದ ಮುಕುಂದ ನಂದನಕಂದ4 ಅಕ್ಷರಾರ್ಚಿತ ದೇವನು ಶರಣ ಜನ ಪಕ್ಷ ಪರಾತ್ಪರನು ಪಕ್ಷೀಂದ್ರ ತುರಗ ಪದ್ಮಾಕ್ಷ ತ್ರಿಲೋಕ ವಿ-ಲಕ್ಷಣಮೂರ್ತಿ ಶ್ರೀಲಕ್ಷ್ಮೀನಾರಾಯಣ5
--------------
ತುಪಾಕಿ ವೆಂಕಟರಮಣಾಚಾರ್ಯ
ಎಂದಿಗೆ ನೀ ಕರುಣಿಸುವಿ ಸುಂದರಾಂಗ ಎನ್ನೊಳು ಕುಂದಿ ಪೋದೆನಲ್ಲೊ ಬೇಗ ಬಂದು ಕಾಯೊ ಕರುಣಾಳು ಪ. ಧರ್ಮ ಕರ್ಮಗಳು ಮಾಳ್ಪ ಮರ್ಮವರಿಯದಿದ್ದರು ಭರ್ಮದಾಶೆಗಾಗಿ ಹೀನ ಕರ್ಮದೊಳಗೆ ಬಿದ್ದರು ದುರ್ಮದಾಂಧರನು ಗೆಲುವ ನಿರ್ಮಲ ಚಿದಾತ್ಮ ನಿನ್ನ ಹಮ್ರ್ಯದ ಮುಂದೊದರಿ ಸರ್ವಶರ್ಮಪೊಂದಿಚ್ಛಿಸುವೆನು 1 ಜೀಯ ನಿನ್ನ ಪೊಗಳಿ ಪಾಡುವಾಯವಿರಲು ಸಾಕಯ್ಯ ರಾಯರೊಲವು ತನ್ನಂತೆ ನಿರಾಯಾಸದಿಂದಹುದೈಯ್ಯ ವಾಯುವೀಯ ಜನರ ಕೂಡಿ ಮಾಯ ಗೆಲಲು ಮಾನವೀಯ ಕಾಯವನ್ನು ನೋಯದಂತೆ ಕಾಯೊ ಸಕಲದಾಯಕಾರಿ 2 ನಿತ್ಯಾನಂದ ನಿನ್ನ ಪಾಡಿ ಹೊತ್ತ ಕಳೆವ ಕಾರ್ಯಕ್ಕೆ ಒತ್ತಿ ಬರುವ ವಿಘ್ನಬಾಧೆ ಹತ್ತದಂತೆ ಓಡಿಸು ಸತ್ಯರಮಣ ಶರಣ ಪುರುಷೋತ್ತಮ ಶ್ರೀ ವೆಂಕಟೇಶ ಚಿತ್ತದಲ್ಲಿ ನಿನ್ನ ದಿವ್ಯ ಮೂರ್ತಿದೋರೊ ಮರಿಯದಿರು 3
--------------
ತುಪಾಕಿ ವೆಂಕಟರಮಣಾಚಾರ್ಯ