ಒಟ್ಟು 517 ಕಡೆಗಳಲ್ಲಿ , 93 ದಾಸರು , 466 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾದಿರಾಜಾಶ್ರಮ ನೋಡಲು ಸಂಭ್ರಮ ಪಾಡಿ ಪೊಗಳುವರಿಗಾಹುದು ಪ್ರೇಮ ಪ ಕಾಡೊಳಗೆ ಸಂಚರಿಪ ಋಷಿಗಳು ಪಾಡಿಪೊಗಳುತ ಪರಮ ಪುರುಷನ ಬೇಡಿದಿಷ್ಟಾರ್ಥಗಳ ಪಡೆಯುತ ಕೂಡಿ ಸುಖಿಸುವ ಶಿಷ್ಟರಂದದಿ ಅ.ಪ ಪರಮಸಾತ್ವಿಕರೆಲ್ಲ ಪುರಂದರದಾಸರ ಪರಮ ಪುಣ್ಯದ ದಿನ ಬರಲು ಸಂಭ್ರಮದಿ ಪರಿಪರಿವಿಧದಿಂದ ಹರಿದಾಸರೆಲ್ಲರು ತ್ವರದಿಂದ ಗುರುಗಳಾಜ್ಞೆಯ ಮೀರದೆ ಭರದಿಂದ ನೆರೆದರತಿ ಶೀಘ್ರದಿಂದಲಿ ಮುದದಿಂದ ಗುರುಗಳಡಿಗೊಂದಿಸುತ ಕ್ರಮದಿಂದ ಸರಸವಾಕ್ಯಗಳಿಂದ ಶಿಷ್ಯರಿಂದ ಹರಿಸಿ ಆಶೀರ್ವಾದದಿಂದಲಿ ಸುರಿಸಿ ಅಮೃತವಾಣಿ ನುಡಿಯುತ ಹರುಷಪಡುತಿಹ ಗುರುಗಳಿಹ ಸ್ಥಳ 1 ಪವಮಾನಮತದವರೆಲ್ಲರೊಂದಾಗುತ ನಮಿಸಿ ಶ್ರೀಪತಿಗೆ ವಂದನೆ ಮಾಡುತ ವಿನಯದಿಂದಲಿ ತಮ್ಮನಿಯಮಿತ ಕಾರ್ಯವ ನÀಡೆಸುತ್ತ ತಂಬೂರಿಗಳ ಸುಸ್ವರದಿ ಮೀಟುತ ನಿಂದು ಹರುಷಿಸುತ ತಾಳಗಳ ಬಾರಿಸುತ ಶಿಷ್ಯರು ಕುಣಿಯುತ್ತ ಬಲುನಾದ ಕೊಡುತಿಹ ಕಾಲಗೆಜ್ಜೆಗಳೆಲ್ಲ ಘಲುರೆನುತ ದಾಸರಿಗೆ ಉಚಿತದ ಜೋಳಿಗೆಗಳನೆ ಪಿಡಿದು ನಡಿಯುತ್ತ ಶ್ರೀರಾಮರ ದೂತನ ಬಾರಿಬಾರಿಗೆ ನಮಿಸಿ ನಮಿಸಿ ಪೊಗಳುತ್ತ ಹರಿನಾಮ ಸ್ಮರಣೆಯಲಿ ಮಾರುತೀಶನ ಭಕುತರೆಲ್ಲರು ದ್ವಾರಬಿಡುತಲಿ ಪೊರಟು ಭಜಿಸುತ ಬೀದಿಯಲಿ ಕುಣಿಯುತ್ತ ಹರಿಗುಣ ಪಾಡಿ ಪೊಗಳುವ ಪರಮ ವೈಭವ2 ಆ ಮಾರುತನ ದಯದಿಯಾಯಿವಾರವು ಮಾಡಿ ಶ್ರೀನಿಕೇತನ ಪಾಡಿ ಪೊಗಳುತಲಿ ಜ್ಞಾನಿ ಪುರಂದರದಾಸರ ಚರಿತೆಯ ಪೇಳುವರು ಸಂಭ್ರಮದಿಂದಲಿ ನಲಿದಾಡುವರು ಹರಿದಾಸರ ಅದ್ಭುತಕಾರ್ಯಗಳ ಸುಸ್ವರದಿ ಪಾಡುವರು ಹರಿದಾಸ ಶ್ರೇಷ್ಠರ ಮಹಿಮೆಗಳ ಇನ್ನುಳಿದ ಶಿಷ್ಯರು ಪೇಳುವರು ವರ ಪಾರ್ಥಿವ ವತ್ಸರದಿ ಗುರುಗಳ ಕರುಣ ಪಡೆದವರು ನೆರೆದು ರಾತ್ರಿಕಾಲದಲಿ ಶ್ರೀ ಹರಿಯ ಭಜನೆ ಮಾಡುತಿರಲು ಹರುಷ ಪಡುತಲಿ ನಲಿದು ಕಮಲನಾಭ- ವಿಠ್ಠಲನೆ ಸಲಹು ಎನ್ನುವ3
--------------
ನಿಡಗುರುಕಿ ಜೀವೂಬಾಯಿ
ವಾಯ ದೇವರ ಮಹಿಮಾ ವರ್ಣನೆ ಮೂರವತಾರ , ಷಟ್ಪದಿ ಶ್ರೀರಮೇಶ ವಿಧೀರ ವಿಪವೃತ್ರಾರಿ ವಿನುತ ಸರ್ವಾಧಾರ ನಿರುಪಮನೆ ಸ್ವತಂತ್ರಗುಣಾರ್ಣವ ಪ್ರಭುವೇ | ಪತಿ ಓಂಕಾರ ವ್ಯಾಹೃತಿ ವಾಚ್ಯ ಸರ್ವಪ್ರೇರಕ ಬಲಸುಭಾಸಕ ಹರಿಯೆ ವಾಗ್ರಸನೆ ನಮಿಪೆ 1 ಆಪ್ತನೆಂದರೆ ಪ್ರಾಣ ಸರಿ ಪರಮಾಪ್ತ ಹರಿಯ ಯಥಾರ್ಥಜ್ಞಾನ ಪ್ರಾಪ್ತಿ ಮಾಡಿಸಿ ವಿಷ್ಣು ಕರುಣವ ಕೊಡಿಸುವನು ತಾನು | ಆಪ್ತ ನೆನ್ನೆಯಥಾರ್ಥ ಪೇಳುವ ಮತ್ತೆ ನಿಶ್ಚಯ ಜ್ಞಾನವುಳ್ಳವ ಶಕ್ತ ಕರುಣ ಪಟುತ್ವಯುತನಿರ್ವಂಚನೆಗಳಿಂದ 2 ಶಿಷ್ಯ ವಾತ್ಸಲ್ಯ ಯುತ ಗುರುಸರಿ ವಿಶ್ವ ಜನಕನ ಪ್ರಥಮ ಭಕ್ತಶ್ವಾಸಗಿಂತಲು ಬೇರೆಯವನಿಲ್ಲ ಪವಮಾನನವ | ದೋಷ ಸಂಶಯ ರಹಿತ ಹರಿ ವಿಶ್ವಾಸ ಪಾತ್ರ ವಿಶೇಷ ಮಹಿಮಸುರಾಶ್ರಯ ನಿವನು ವಂಶನೆ ನಿಸುವ ಸೂತ್ರಗಾನಮಿಪೆ 3 ಯಾವ ಜ್ಞಾನ ಬಲ ಸ್ವರೂಪ ಸುದೇವ ಕ್ರೀಡಾದಿ ಗುಣಯುತ ಭವನಾವಿಕ ಪ್ರಭು ವಾಯುವಿನಗುಣ ಚರಿತೆ ವೃಂದಗಳ | ಪಾವನ ಬಳಿತ್ಥಾದಿ ಶೃತಿಗಳು ಸಾವಧಾನದಿ ಪೊಗಳುವವೊ ಆಭಾವಿ ಬ್ರಹ್ಮನ ಮೂಲ ರೂಪವುಜ್ಞಾನ ಬಲಮಯವು 4 ಮೂಲ ರಾಮಾಯಣ ವಿಶೇಷವ ಪೇಳುವ ಹನುಮನೇ ಪ್ರಥಮ ನಿಹಖೂಳ ದಿತಿ ಜನ ಸೈನ್ಯ ಮಾರಕ ಭೀಮ ನೆರಡೆನ್ನಿ | ಶೀಲ ಸಖಗಳ ನೀವ ಶಾಸ್ತ್ರವ ಪಾಲಿಸಿದ ಗುರು ಮಧ್ವರಾಯರೆ ಮೂಲ ಮುಖ್ಯ ಪ್ರಾಣ ದೇವನ ಮೂರನೆಯ ರೂಪ 5 ಪ್ರಾಣ ನೀತ್ರಯ ರೂಪಗಳು ಸಮವೆನ್ನುವದು ಸರ್ವ ವಿಷಯದಿ ಮುಕ್ಕಣ ಪ್ರಮುಖರ ಜ್ಞಾನ ದಾತೃವಿಗಿನ್ನು ಸಮವುಂಟೆ | ಜ್ಞಾನ ವಾಚಕ ಹನುಮ ಶಬ್ದವು ಪೂರ್ಣ ಹರಿ ಸಂದೇಶವೈದನು ಜಾನಕಿಗೆ ನಿರ್ದೋಷ ವಾಕ್ಯಗಳನ್ನು ಧೀಮಂತ 6 ಪಂಚರಾತ್ರಾಗಮ ಪುರಾಣ ವಿರಂಚಿ ಜನಕನ ತೋರ್ಪವೇದವು ವಂಚಿಸದ ಇತಿಹಾಸಗಳು ಕೂಡುತಲಿ ಸಪ್ತಗಳ | ಮಿಂಚಿಸುತ ಸುಜ್ಞಾನ ಪಾಪದ ಸಂಚಯ ತರಿವ ಕಾರಣದಿ ಬಲಿವಂಚಕನ ಭಕ್ತರು ಕರೆಯುವರು ಸಪ್ತಶಿವ ವೆಂದು7 ಶಾಸ್ತ್ರ ವಚನಕೆ ಮಾತೃ ವೆಂಬರು ಸಪ್ತ್ರ ಶಿವಕರ ಮಾತೃಗಳ ಧರಿಸಿಪ್ಪ ನಿವನೆಂದು | ಖ್ಯಾತನಾಗಿಹ ಭೀಮ ನಾಮದಿ ತೀರ್ಥವೆನ್ನಲು ಶಾಸ್ತ್ರವಿದಿತವು ಮತ್ತೆ ಮಧುವೆನೆ ಸುಖವು ಮುಕ್ತಿಯನೀವ ಶಾಸ್ತ್ರವನು 8 ಇತ್ತ ದೇವನೆ ಮಧ್ವನೆಂಬರು ಸುತ್ತುತೀತ್ರಯ ನಾಮದರ್ಥವ ನಿತ್ಯ ತಿಳಿಯುತ ಪಠಿಸಿ ಪಾಡಲುವಾಯು ದೇವನನು | ಭಕ್ತ ಬಾಂಧವನಾತ ವಲಿಯುತ ತತ್ವವೇತ್ತನ ಮಾಳ್ವ ನಿಶ್ಚಯ ಭೃತ್ಯನಾನೆಂತೆಂದು ಮಧ್ವರ ಸಾರಿ ಭಜಿಸುತಿರಿ9 ಪ್ರೌಢ ಮಧ್ವಗೆ ಪೂರ್ಣ ಪ್ರಜ್ಞನೆ ಈತ ಶ್ರುತಿ ಸಿದ್ದ | ಬೀಡು ಮಾಡಿಹ ವಿದ್ಯೆ ನೂಕುತ ತೊಂಡ ನೆಂದಿವರಡಿಗೆ ಬೀಳಲು ಪಾಂಡುರಂಗನ ಬಿಚ್ಚಿ ತೋರುವ ಗೋ ಸಮುದ್ರದಲಿ10 ಏನ ಪೇಳಲಿ ಏನಪೇಳಲಿ ಜ್ಞಾನನಿಧಿ ಸರ್ವಜ್ಞ ಗುರುವರ ತಾನು ಗೈದ ಮಹೋಪಕಾರವ ಮುಕ್ತಿಯೋಗ್ಯರಿಗೆ | ಜ್ಞಾನ ಬಾಹುದೆ ಬಿಟ್ಟರೀತನ ಶೂನ್ಯವೆ ಸರಿ ಎಲ್ಲ ಆತಗೆ ಮನ್ನಿಸುವನೆ ಅನನ್ಯವನು ಹರಿ ಶರಣು ಆಚಾರ್ಯ 11 ಈತನೇ ಆನಂದ ತೀರ್ಥನು ಈತನೇ ಆಚಾರ್ಯ ನಿಶ್ಚಯ ಈತನೇ ಸರಿಮಾತರಿಶ್ವನು ವಾಯುವಿನರೂಪ | ಈತ ಚರಿಸುವ ಶಾಸ್ತ್ರವ್ಯೂಹದಿ ದೈತ್ಯರಿಂದಾಚ್ಛಾದಿತ ಗುಣಯುತ ಆತ್ಮಪೂರ್ಣಾನಂದ ದೇವನ ಶಾಸ್ತ್ರಮಥಿಸುತಲಿ 12 ಸಾರ ವೃಂದಕ್ಕೆ ಚುಚ್ಚುವನು ದುರ್ವಾದಿ ಮತಗಳ ಕೆಚ್ಚೆದೆಯವನು ಗರ್ಜಿಸುತವೇದೋಕ್ತವಾಕ್ಯಗಳ | ಹೆಚ್ಚು ಹೆಚ್ಚೇ ಸರಿಯು ವಿಷ್ಣುವು ಸ್ವಚ್ಛ ಪೂರ್ಣಾನಂದ ಸುಖಮಯ ಪೃಚ್ಛ ಪರಿವಾರ ಸರಿ ವಿಧ್ಯಾದಿಗಳು ಹರಿಗೆಂದು 13 ಕಚ್ಚಿಲತೆಗಳ ಬಿಸುಡುವಂದದಿ ನುಚ್ಚು ಮಾಡುವ ಪ್ರಶ್ನೆನೀಕವ ಅಚ್ಚನಾರಾಯಣನೆ ಪ್ರೇರಕ ನಿವಗೆ ಜನಕನಿಹ | ಮೆಚ್ಚು ಮಗ ಶ್ರೀ ಲಕ್ಷೀ ದೇವಿಗೆ ರಚ್ಚೆತನುವನು ಕಿತ್ತುವೋಡಿಸಿ ಹೆಚ್ಚಿಸುವ ಸುಜ್ಞಾನ ದೀಪವ ಹರಿಯ ಪ್ರಧಮಾಂಗ14 ಕೊಟ್ಟು ಉಂಗುರ ಸುಟ್ಟುಲಂಕೆಯ ಬಿಟ್ಟು ಕಾಮವ ಮೆಟ್ಟಿಖಳರನು ಜಟ್ಟಿ ಹನುಮನು ಪಟ್ಟ ಪುತ್ರನ ಪದವಿ ಸಾಧಿಸಿದ | ಹುಟ್ಟಿ ಕುಂತಿಲಿ ಕುಟ್ಟಿ ಕುರುಕುಲ ಇಟ್ಟು ಮನದಲಿ ದಿಟ್ಟ ಕೃಷ್ಣನ ಅಟ್ಟಿ ಹಾಸದಿ ಮೆರೆದ ಭೀಮನು ಜ್ಞಾನ ಭಾಸ್ಕರನು15 ಹುಟ್ಟು ಸಾವಿನ ಕಟ್ಟು ಬಿಡಿಸಲು ಘಟ್ಟ ದಡಿಯಲಿ ಭಟ್ಟನೆನಿಸುತ ಬಟ್ಟೆ ತವಕದಿ ಭ್ರಷ್ಟದಸ್ಯುಗಳ | ಕೆಟ್ಟ ಮತಗಳ ಸುಟ್ಟು ವಾದದಿ ಸೂತ್ರ ಭಾಷ್ಯವ ನೆಟ್ಟ ಸಂತರ ಮನದಿ ವಿಷ್ಣುವ ಶ್ರೇಷ್ಠಗುರುಮಧ್ವ16 ಏಕೆ ಭಯ ನಮಗಿನ್ನು ನಿರಯದ ಏಕೆ ಸಂಶಯ ಮುಕ್ತಿ ವಿಷಯದಿ ಏಕೆ ಕಳವಳ ಮಧ್ವರಾಯರ ಶಾಸ್ತ್ರ ಪೀಯೂಷ | ಜೋಕೆಯಿಂ ಪ್ರತಿದಿನವು ಸೇವಿಸೆ ಶ್ರೀಕಳತ್ರನು ಕೈಯ ಬಿಡುವನೆ ನಾಕಪತಿಯಿಂಬಿಟ್ಟು ಸಲಹುವ ಶಾಸ್ತ್ರಸಿದ್ಧವಿದು 17 ಹೆಚ್ಚು ಮಾತೇಕಿನ್ನು ಹರಿಮನ ಮೆಚ್ಚುಯೆನಿಸಿಹ ಮಧ್ವರಾಯರು ಬಿಚ್ಚಿತೋರಿದ ತೆರದಿ ಶೃತಿಗಳ ಭಜಿಸಿಖಳ ಜನಕೆ | ಬಚ್ಚಿಡುತ ವಿಜ್ಞಾನ ಮರ್ಮವ ನುಚ್ಚು ನೂಕುತ ದುರ್ಮತಕಿಡಿರಿ ಕಿಚ್ಚು ಕಮಲೇಶ ನೊಲಿಮೆಗೆ ಬೇರೊಂದು ಪಥವಿಲ್ಲ 18 ನಮ್ಮಹಿರಿಯರ ಖಿನ್ನನುಡಿಗಳ ನೊಮ್ಮನದಿ ನೀವೆಲ್ಲ ಕೇಳಿರಿ ರಮ್ಮೆಯರಸಗೆ ಸಮ್ಮತದ ಸಚ್ಛಾಸ್ತ್ರದರ್ಪಣವ | ಹೆಮ್ಮೆಯಿಂದಲಿ ಕೊಟ್ಟು ಬಂದೆವು ಒಮ್ಮೆಯಾದರು ನೋಡುವರೆ ಈ ನಮ್ಮ ಸಂತತಿ ಹಾ ಹರಿ ಹರೀಯೆಂಬ ಕ್ರಾಂತಿಯುತ19 ಉಣ್ಣಿರುಣ್ಣಿರಿ ಮಧ್ವಕಂದರೆ ಭವ ಹುಣ್ಣುವಳಿಯಿರಿ ಅಣ್ಣ ಪ್ರಾಣನದಯವ ಯಾಚಿಸಿಘನ್ನ ಶಾಸ್ತ್ರಾನ್ನ | ಅನ್ನ ಶೃತಿಗಳು ವಿವಿಧ ಸ್ಮøತಿಪ ಕ್ವಾನ್ನ ಪಾಯಸ ಗೀತೆ ಭಕ್ಷ್ಯಗಳೆನ್ನಿ ಬಗೆ ಬಗೆ ಸರ್ವ ಮೂಲವ ಸೂತ್ರಗಳೆ ಸಾರು 20 ತುಪ್ಪವೆನ್ನಿರಿ ನ್ಯಾಯ ಸುಧೆಯನು ಗೊಪ್ಪರಾಜರ ಗ್ರಂಥ ಹಲ್ಪವು ಅಪ್ಪರಾಯರ ವಾಣಿ ಕ್ಷೀರವು ದಾಸ ಸಾಹಿತ್ಯ | ತಪ್ಪದೆಲೆ ತಿಂಬಂಥ ತಿಂಡಿಯು ಚಪ್ಪರಿಸಿ ಭಾರತದ ಕೂಟನು ವಪ್ಪುವನು ಶ್ರೀ ಕೃಷ್ಣ ದೇವನು ಭಕ್ತ ನುಣ್ಣಲಿವ 21 ಎಂತು ಪೊಗಳಲಿ ನಿಮ್ಮ ಗುರುವರ ಹಂತ ಸುರಗಣ ವೆಲ್ಲ ನಿಮ್ಮಡಿ ನಿಂತು ಪಡೆದರು ಜ್ಞಾನ ಪ್ರಾತರ್ನಾಮಕನೆಶರಣು | ಕಂತೆ ಮತಗಳ ನಾಶಗೈದನ ನಂತ ಮಹಿಮನೆ ದೀನ ನಾನಿಹೆ ಕುಂತಿ ನಂದನ ನೀನೆ ತಿಳಸೈ ಸಕಲ ಶಾಸ್ತ್ರಾರ್ಥ 22 ಮೂರ್ತಳೆನಿಸುವ ಚಂದ್ರಮಾನಿನಿನಾಥ ಸೂರ್ಯ ನೊಳ್ ಆದಿತ್ಯ ನಾಮದಿ ನಿಂತು ದಿಕ್ಪತಿಗಳಿಗೆ ಶಕ್ತಿಗಳ | ಇತ್ತು ಸೃಷ್ಠಿಯ ಕಾರ್ಯ ವೆಸಗುವೆ ಉತ್ತರಾಯಣ ಪಗಲು ಮಾನಿಯೆ- ನಿತ್ಯ ಪ್ರೇರಿತ ನೀಪ್ರಜಾಪತಿನಾಮ ಹರಿಯಿಂದ 23 ಖ್ಯಾತ ಮೂರ್ತಾ ಮೂರ್ತ ಧಾರಕೆ ತತ್ವಪತಿಗಳ ಪೋಷತನುವಲಿ ಮೃತ್ಯುಹಾಗಶನಾಪಿಪಾಸಾಪಾನ ನಾಮಗಳ | ಎತ್ತಿ ನಡಿಸುವೆ ದೇಹ ಕಾರ್ಯವ್ರಾತ ಬಿಡಲೇನೊಂದು ನಡೆಯದು ಮಾತರಿಶ್ವನೆ ನಿಧಿಗು ಆರ್ಯುರ್ದಾತ ನೆನಿಸಿರ್ಪೆ 24 ಅನ್ನ ವಿಧಿಯಿಂ ಕೊಂಬೆ ಸಮಸರಿ ಯನ್ನ ಬ್ರಹ್ಮಗೆ ಜೀವ ಗಣತಾವುಣ್ಣಲಾರರು ನಿನ್ನ ಬಿಡೆ ಪ್ರಾಣದಿ ಪಂಚಕನೆ | ಸ್ವಪ್ನ ನಿದ್ರಾ ಸಮಯದೊಳ್ ಹರಿಯನ್ನು ಕೂಡಿರೆ ಕರಣಪರು ಘನಯಜ್ಞ ನಡಿಸಿ ಸರ್ಮರ್ಪಿಸುವೆ ನೀನೊಬ್ಬ ದೇವನಿಗೆ 25 ನಿನ್ನ ನಂಬಿದ ಭಕ್ತನಿಗೆ ಭವ ಹುಣ್ಣು ಮುಟ್ಟದು ವಿಷ್ಣು ವಲಿಯುತ ಮನ್ನಿಸುವ ಹರಿಯಾಜ್ಞೆಯಿಂಮುಕ್ತಿದನು ನೀ ಹೌದು | ವಿಶ್ವ ವಂಶನೆ ನಿನ್ನ ಮಹಿಮೆಯಗಣ್ಯ ಸಿದ್ಧವು ನಿನ್ನ ಧೊರೆ ಹರಿ ಒಬ್ಬ ಜೀವೋತ್ತುಮನೆ ಅಶರೀರ26 ಜ್ಞಾನ ಬಲ ಐಶ್ವರ್ಯಗಳು ಪರಿಪೂರ್ಣ ಸರಿ ವೈರಾಗ್ಯ ಹಾಗೆಯೆ ಪ್ರಾಣನಿನ್ನಲಿ ಕರಿಸುವೆಯೊ ಆಧ್ಯರ್ಧ ನಾಮದಲಿ | ಮಾನ್ಯ ವಿಷ್ಣುಸಹಾಯ ನಿನಗೈನ್ಯೂನ ವಿಲ್ಲವು ಯಾವ ತೆರದಲುಕಾಣೆ ಅಪಜಯ ಜೀವ ಸಾಧನೆಯೆಲ್ಲ ನಿನ್ನಿಂದ 27 ಶೇಷಗಸದಳ ನಿನ್ನ ಪೊಗಳಲು ಶೇಷ ಸರಿ ಬಡದಾಸನಹೆ ವಿಶ್ವಾಸದಿಂ ಸಂವತ್ಸರನೆ ನೀಕಾಯಬೇಕೆಂಬೆ | ಏಸು ಜನ್ಮಗಳನ್ನು ಕೊಟ್ಟರು ಶ್ವಾಸ ಪತಿತವ ಮತದಿ ಪುಟ್ಟಿಸಿ ದಾಸ ಭಾಗ್ಯವ ನೀಡು ಹರಿಯೊಳ್ ಶುದ್ಧ ಭಕ್ತಿಯುತ28 ಎರಡು ಸಹ ಮೂವತ್ತು ಲಕ್ಷಣ ವಿರುತಿಹ ಜಗದ್ಗುರುವೆ ವಿಷ್ಣುವಿಗೆರಡು ಎರಡು ಸರಿಯೆಂತೆಂದು ಸ್ಥಾಪಿಸಿ ಎರಡು ವಿದ್ಯೆಗಳಿರವು ತೊರುವ ಲೆರಡು ಸುಖಗಳ ಪಡೆಯೆಸಾಧನ ಮಾರ್ಗ ನೀಡ್ವೆಬತ 29 ಸರ್ವ ಶಕ್ತನೆ ಶರ್ವ ವಿನುತನೆ ಸರ್ವ ಸರ್ವಗ ಹಿರಿಯ ತನಯನೆ ಸರ್ವ ಜಗದಾಧಾರ ಪೋಷಕ ಸರ್ವ ತೋವರನೆ | ಸರ್ವ ಕಾಲದಿ ಸರ್ವ ದೇಶದಿ ಸರ್ವ ಗುಣದಿಂ ಹರಿಯ ಯಜಿಸುವ ಸರ್ವ ಸದ್ಗುಣ ಪೂರ್ಣ ದೋಷವಿದೂರ ಸರ್ವಜ್ಞ 30 ಹಿಂದೆ ಪೂರ್ವಜರೆಲ್ಲ ಕೂಡುತಲೊಂದು ಪಾಯವಗೈದು ಮೃತ್ಯುವತಂದು ದಿವಿಜ ವೃಂದಕೆ ಕುಂದು ವದಗಿಸಲು | ಕಂದುತಳಿಯಲ್ ನಿಖಿಲ ಸುರಗಣ ಕುಂದು ಮೃತ್ಯುವ ಗೈದು ಪುಡಿಪುಡಿ ವಂದನಾರ್ಹನು ಒಬ್ಬನೀನೇ ಯೆಂದು ಸ್ಥಾಪಿಸಿದೆ 31 ಪಾಹಿ ಅಮ ಶುಚಿ ಯೊಗ ಕ್ಷೇಮನೆ ಪಾಹಿ ಅಮರಲಲಾಮ ಅನಿಲನೆ ನಿರವದ್ಯ | ಪಾಹಿ ಸತ್ಯ ವಿಶುದ್ಧ ಸತ್ವನೆ ಪಾಹಿ ಲಕ್ಷ್ಮೀ ಪುತ್ರ ಭೃತ್ಯನೆ ಪಾಹಿ ಜೀವಗ ಬಾದರಾಯಣಪ್ರೀಯ ಮಹರಾಯ 32 ಪಾಹಿ ಹನುಮನೆ ಭೀಮ ಮಧ್ವನೆ ಪಾಹಿ ದುರ್ಮತ ಧ್ವಾಂತ ಸೂರ್ಯನೆ ಪಾಹಿ ನತಜನ ಪಾಲ ಪ್ರಾಣನೆ ಪಾಹಿ ಶ್ರೀಸುತನೆ | ಪಾಹಿ ಜಗದಾಧಾರ ಸೂತ್ರನೆ ಪಾಹಿ ಸಾಮನೆವಂಶ ದೂರನೆ ಪಾಹಿ ಹರಿಯಚ್ಛಿನ್ನ ಭಕ್ತನೆ ಪಾಹಿ ವಿಜ್ಞಾನ 33 ಪಾಹಿ ಋಜುಪತಿ ವಾಯುಕೂರ್ಮನೆ ಪಾಹಿ ಜೀವ ಲಲಾಮ ಗುಣನಿಧಿ ಪಾಹಿ ಶುಚಿ ಸರ್ವಜ್ಞ ಸಾಮಗಭಾವಿ ಶತಮೋದ | ಪಾಹಿ ಸತ್ಯನೆ ಕಲಿವಿದಾರಣ ಪಾಹಿ ಗುರು ಗೋವತ್ಸ ರೂಪಿಯೆ ಪಾಹಿ ಮಿಷ್ಣು ಪದಾಬ್ಜಮಧುಕರ ಭಾರತೀ ಕಾಂತ 34 ಪಾಹಿ ಅಮೃತನೆ ವಿಶ್ವರಜ್ಜುವೆ ಪಾಹಿ ಬೃಹತೀ ಛಂದ ಮಾನಿಯೆ ಪಾಹಿ ಹಂಸೋಪಾಸಕ ಪ್ರಭು ಆಖಣಾಶ್ಮಸಮ | ಪಾಹಿ ಸಾಯಂಖ್ಯಾತ ಜೀವಗ ಪಾಹಿ ಜಗಚೇಷ್ಠಾ ಪ್ರವರ್ತಕ ಪಾಹಿ ಅನಿಲನೆ ಶೇಷವಿಪಶಿವ ವಂದಿತಾಂಘ್ರಿಯುಗ 35 ಪಾಹಿ ಪರಿಸರ ಪಂಚ ಕೋಶಗ ಪಾಹಿ ಗುಣನಿಧಿ ಕೊವಿದೋತ್ತಮ ಪಾಹಿ ನಮಿಸುವೆ ಅಣುಮಹದ್ಘನ ರೂಪ ವಿಖ್ಯಾತ | ಪಾಹಿ ವಿಶ್ವಗ ವ್ಯಸನ ವರ್ಜಿತ ಪಾಹಿ ಹರಿಯನು ನಿತ್ಯನೋಳ್ಪನೆ ಪಾಹಿ ವಿಷ್ಣುದ್ವಾರ ಶರಣೈ ಪಾಹಿ ಹರಿ ಸಚಿವ 36 ಜಯ ಜಯವು ಶ್ರೀ ಹನುಮ ಭೀಮಗೆ ಜಯ ಜಯವು ಶ್ರೀ ಮಧ್ವರಾಯಗೆ ಜಯ ಜಯವು ತತ್ವೇಶರರಸಗೆ ಮುಖ್ಯಪ್ರಾಣನಿಗೆ | ಜಯ ಜಯವು ಜಯತೀರ್ಥ ಹೃಸ್ಥಗೆ
--------------
ಕೃಷ್ಣವಿಠಲದಾಸರು
ವಿಜಯಗುರು ನಿನ್ನಡಿಯ ಭಜಿಸುವೆನೋ ಸತತದಲಿ ವಿಜಯ ಕೊಡು ದಾಸತ್ವದಿ ಪ. ಪಾದ ಭಜನೆಯ ಮಾಳ್ಪಂಥ ಮತಿ ರುಜು ಮಾರ್ಗ ತೋರಿ ಸಲಹೋ ದಯದಿ ಅ.ಪ. ವಿಧಿ ವಶದಿ ಘನ ಕಷ್ಟ ಒದಗುತಿರೆ ಚರಿಸಿ ಯಾತ್ರೆ ಪದುಮನಾಭನ ದಯದಿ ಕಾಶಿಕ್ಷೇತ್ರದಲಿರುವ ಅದೆ ಕಾಲದಲಿ ಸ್ವಪ್ನದಿ ವಿಧಿಸುತಾಂಶರು ಪುರಂದರದಾಸರಿತ್ತಂಥ ಅದುಭುತದ ಉಪದೇಶದಿ ಉದಿತವಾಗಲು ಜ್ಞಾನ ಒದೆದು ದುಷ್ಕರ್ಮಗಳ ಪದುಮೇಶ ದಾಸನಾದಿ ಮುದದಿ 1 ಪರಮ ವೈರಾಗ್ಯದಲಿ ಚರಿಸಿ ತೀರ್ಥಕ್ಷೇತ್ರ ತರುಣಿ ಶಿಷ್ಯರ ಸಹಿತದಿ ಪರಿಪರಿಯ ಮಹಿಮೆಗಳವರ ಭಕ್ತಿಗೆ ತೋರಿ ಕರುಣಾಳುವೆನಿಸಿ ಮೆರೆದಿ ಪುರಂದರ ಗುರು ಆಜ್ಞೆ ತೆರದಂತೆ ಪದಲಕ್ಷ ವಿರಚಿಸಿದೆ ಪದ ಸುಳಾದಿ ನರವರರಿಗನ್ನದಾನಗಳನು ಮದುವೆ ಮುಂಜಿ ತೆರವಿಲ್ಲದೆಲೆ ಚರಿಸಿದಿ ದಯದಿ 2 ನಿನ್ನ ಕರುಣವು ದಾಸಕುಲದವರ ಮೇಲೆ ಬಹು ಉನ್ನತವಾಗಿಹುದು ಘನ್ನ ಗುರು ವಿಜಯವಿಠ್ಠಲದಾಸರೆಂತೆಂದು ನಿನ್ನ ಸ್ಮರಿಸಲು ಕಾವುದು ಎನ್ನ ಗುರು ತಂದೆ ಮುದ್ದುಮೋಹನರ ದಯದಿ ನಿನ್ನ ಸ್ಮರಿಸಲು ಬಾಹುದು ಘನ್ನ ಶ್ರೀ ಗೋಪಾಲಕೃಷ್ಣವಿಠ್ಠಲನ ದಯದಿ ಉನ್ನತ ಜಯವೀವುದು 3
--------------
ಅಂಬಾಬಾಯಿ
ವಿಜಯರಾಯ ಭಜಿಸೋ ಹೇ ಮನುಜಾ ನೀ ಪ ಪಾದ ಭಜಿಸುವ ಮನುಜರ ವೃಜಿನ ವಾರಿಧಿಗೆ ಕುಂಭಜರೆನಿಸಿದ ಗುರು ಅ.ಪ ಮೊದಲು ಬೃಗುಮುನಿರೂಪದಿ ಶೀ- ಘ್ರದಿ ಪೋಗಿ ಬರಲು ಶ್ರೀಹರಿ ಲೋ- ವಿಧಿ ವಿಷ್ಣು ಶಿವರೊಳು ಪದುಮನಾಭನಕಿಂತ ಅಧಿಕರಿಲ್ಲೆಂದು ನಾ ರದ ಮುನಿಗರುಹಿದ 1 ಜಗದೊಳು ಸಕಲ ಕ್ಷೇತ್ರ ತೀರ್ಥಗಳ ಮಹಿಮೆಯ ವರ್ಣಿಸುತ ಖಗರಾಜ ಗಮನ ಶ್ರೀ ಭಗವದ್ಗುಣಗಳನ್ನು ಬಗೆ ಬಗೆ ಪದಸುಳಾದಿಗಳಿಂದ ತುತಿಸಿದ 2 ಕಾಶಿಯೊಳಗೆ ಸಂಪ್ರಾಪ್ತ ಪುರಂದರ ದಾಸರಿಂದಲಿ ಅಂಕಿತ ಶೇಷಶಯನ ಶ್ರೀನಿವಾಸ 'ಕಾರ್ಪರನರ- ಕೇಸರಿ ' ಗತಿ ಪ್ರಿಯ ದಾಸರೆಂದೆನಿಸಿದ 3
--------------
ಕಾರ್ಪರ ನರಹರಿದಾಸರು
ವಿಜಯವಿಠಲರಾಯಾ | ನಂಘ್ರಿಯುಗ ಭಜಿಸುವ ವಿಜಯರಾಯನೆ ಜೀಯ ರಜದೂರ ತವಪದ ಭಜಕ ನಾನೆನಿಸಯ್ಯ ಋಜುರಾಜ ಪ್ರೀಯ ಕುಜನ ಸಂಗದಿ ಬೆರೆದು ಮನಹರಿ ಭಜನೆಗೊದಗದು ಎಷ್ಟು ಬೇಡಲು ದ್ವಿಜವರೇಣ್ಯನೆ ಎಮ್ಮ ಬಾಂಧವ ಸೃಜಿಸು ಶ್ರೀಧರನೊಲಿಮೆ ಶಕ್ತಿಯ 1 ಸೂನು ಎನಿಸಿದೆ ನಾನು ಕುಲಸ್ವಾಮಿ ಕೃಷ್ಣನ ಧ್ಯಾನ ಪಾಲಿಸು ಇನ್ನು ದಾನಿ ಸುರಧೇನು ಜ್ಞಾನ ಭಕ್ತಿ ಧ್ಯಾನಯೋಗದಿ ವೇಣುಗೋಪಾಲನ್ನ ಹೃದಯ ಪ್ರ ಧಾನ ನಾಡಿಯ ಮಧ್ಯ ಕುಣಿಸುವ ತ್ರಾಣ ತರಿಸು ತೀವ್ರ ಮಹಿಮನೆ 2 ಲೋಕನಾಥನ ಪ್ರೇಮ | ಭೋಗಿಸುವ ಯೋಗಿಯೆ ಸಾಕು ಸದ್ಗುಣಧಾಮ ಬಾಗಿದಿನೊ ನಿನ್ನ ಅಂಘ್ರಿಗೆ | ಶೋಕ ಸಲ್ಲದೊ ನೇಮ ಸ್ವೀಕರಿಸು ಎಮ್ಮ ಏಕ ಭಕ್ತಿಯ ಭಾಗ್ಯ ಪಾಲಿಸು ಶ್ರೀ ಕಳತ್ರನ ಸಂಗಮತ್ತನೆ ಅ- ನೇಕ ಭಕ್ತಗ್ಹರಿಯ ತೋರಿದೆ ನಾಕ ತರು ಕರುಣಾಳು ಗುರುವರ 3 ದಾಸ ವರ್ಗದ ದೊರೆಯೆ | ಲಜ್ಜೆಯಾಗುತಿದೆನ್ನ ದೋಷರಾಶಿಗಳೊರಿಯೆ ಹಸಗೆಟ್ಟು ಬಗೆ ಬಿನ್ನೈಸಲಾಗದೊ ಖರಿಯೆ ಬ್ಯಾಸರದ ಪೊರಿಯೆ ಕಾಸು ಬಾಳದ ಎನ್ನಕರಗಳ ಶ್ರೀಶ ಪಿಡಿವನು ಲೇಸು ಕರುಣದಿ ವಾಸುದೇವಗೆ ದಾಸ ಜನರೊಳು ಸೂಸಿ ಸುರಿವುದು ಸ್ನೇಹ ಸಂತತ 4 ದಾತರೊಳು ಸರಿದಾರೊ | ಹರಿದಾಸವರ್ಯನೆ ಆತುಮಪ್ರದ ತೋರೋ ನಿನ್ನಂಥ ದಾತರ ನಾ ತಿಳಿಯ ದಯ ಬೀರೊ ಆರ್ತಿಯನು ಹೀರೋ ಖ್ಯಾತ ನಿನ್ನಯ ಮಾತು ಒಮ್ಮೆಗು ಮಾತರಿಶ್ವನನಾಥ ಮೀರನು ಆತುರದಿ ನಿನ್ನಂಘ್ರಿಗೆರಗುವೆ ಭೂತ ಪಾಲಿಸು ಹರಿಯ ಒಲುಮೆಗೆ 5 ಸುರತರು ಚಿಂತಾಮಣಿಗಳಂದದಿ ಮಹ ವರಗಳೀವ ಶ್ರೀಮಂತ ಭಾರತೀಶನ ಶ್ರೀ ಚರಣ ಬಿಡದಿಹ ಸ್ವಾಂತ ಪರಮ ನಿಶ್ಚಿಂತ ಚರಣ ಕಮಲದಿ ಮೊರೆಯನಿಟ್ಟನ ಕರದ ಶಿಶುಗಳಂತೆ ಪಾಲಿಸಿ ಮರುತ ಮಂದಿರ ಜಯೇಶವಿಠಲನ ಭರದಿ ತೋರಿದ ಕರುಣ ಸಾಗರ 6
--------------
ಜಯೇಶವಿಠಲ
ವಿಠಲಯ್ಯ ವಿಠಲಯ್ಯ ಪ ತಟಿತ್ಕೋಟಿನಿಭಕಾಯ ಜಗನ್ನಾಥ ವಿಠಲಯ್ಯಾ ಅ.ಪ. ಭಜಿಸುವೆ ನಿನ್ನನು ಅಜಭವ ಸುರನುತ ಭಜಕಾಮರತರು ಕುಜನ ಕುಠಾರಾ 1 ನೀ ಕರುಣಿಸದೆ ನಿರಾಕರಿಸಲು ಎನ್ನ ಸಾಕುವರಾರು ದಯಾಕರ ಮೂರುತಿ 2 ಶರಣಾಗತರನು ಪೊರೆವನೆಂಬ ತವ ಬಿರಿದು ಕಾಯೋ ಕರಿವರದ ಜಗನ್ನಾಥ 3
--------------
ಜಗನ್ನಾಥದಾಸರು
ವಿಪರೀತ ಮತಿವಂತೆ ಸರಸ್ವತಿಯೆ ನಿನ್ನ ಕೃಪೆ ಬಯಸಿ ಭಜಿಸುವೆನು ಸಫಲನೆನಿಸೆನ್ನ ಪ ಶುಂಭಾರಾವಣಗಿತ್ತ ಮತಿಯೆನಗೆ ಬೇಡಮ್ಮ ಗುಂಭದಿಂ ವಿಭೀಷಣಗೆ ಕೊಟ್ಟ ಮತಿ ನೀಡು ಕುಂಭಕರ್ಣನಿಗಿತ್ತ ಮತಿ ಕನಸಿನಲಿ ಬೇಡ ಕುಂಭಿನಿಯೊಳ್ಹನುಮನಂಥ ಮತಿ ನೀಡಿ ಸಲಹು 1 ಕೀಲ ಮಾರೀಚಗಿತ್ತ ಕೀಳಮತಿ ನೀಡದಿರು ಪಾಲಿಸು ಜಟಾಯುನಂಥ ಶೀಲಮತಿಯೆನಗೆ ವಾಲಿಗೆ ನೀನಿತ್ತ ಜಾಳುಮತಿ ನೀಡದೆ ಸುಗ್ರೀವಗಿತ್ತ ಮೇಲುಮತಿ ನೀಡು 2 ಮೂಡಣಾಧಿಪನಂತೆ ಕೇಡುಮತಿ ನೀಡದೆ ರೂಢಿಯೊಳ್ಕರಿಯಂಥ ಗಾಢಮತಿ ನೀಡು ನೀಡದಿರು ಶಶಿಯಂಥ ಖೋಡಿ ದುರ್ಮತಿಯನು ನಾಡಿನಲಿ ಧ್ರುವನಂತೆ ಮಾಡುದಯ ಸುಮತಿ 3 ದುರುಳ ಕೌರವನಂತೆ ಕಿರಿಮತಿಯ ಕೊಡಬೇಡ ಪರಮ ಪಾಂಡವರಂಥ ಖರೆಮತಿಯ ನೀಡು ಧರೆಯೊಳ್ಜಯದ್ರಥನಂತೆ ನರಿಮತಿಯ ಕೊಡದಿರು ವರ ವಿದುರನಂತೆ ಬಲು ನಿರುತಮತಿ ನೀಡು 4 ಮರವೆ ಮತಿ ಒಲ್ಲೆನೌ ಹರಿಯ ನಿಜ ದಾಸರಂಥ ಸ್ಥಿರತಿಮತಿಯ ನೀಡು ಹರಣ ಪೋದರು ಬಿಡದೆ ವರದ ಶ್ರೀರಾಮನಡಿ ಅರಿವಿಟ್ಟು ಭಜಿಸುವಪಾರಮತಿ ನೀಡು 5
--------------
ರಾಮದಾಸರು
ವೃಂದಾವನ ನೋಡಿದೆ | ಸತ್ಯ ಪ್ರೀಯರವೃಂದಾವನವ ನೋಡಿದೇ ಪ ಸತ್ಯ ಪೂರ್ಣ ಕರಜರೆನಿಸಿ | ಸುತ್ತಿಕ್ಷೇತ್ರಗಳನೆಲ್ಲಮತ್ತೆ ಬರಲು ಶ್ರೀರಂಗಕ್ಕೆ | ಫತ್ತೇಸಿಂಗ ಭೇಟಿಯಾದ 1 ಶತೃಗಳ ಗೆದ್ದು ಬಂದು | ಸತ್ಯಪ್ರಿಯರಿಗೆರಗಿ ಅವನೂ ಇತ್ತು ಊರುಗಳನೆರಡು | ನೆತ್ತಿ ಚಾಚಿ ನಮಿಸೀದ 2 ಮಾನಮಧುರಿ ಊರಿನಲ್ಲಿ | ಪ್ರಾಣೋತ್ಕ್ರಮಣ ಸಮಯದಲ್ಲಿಜ್ಞಾನಿ ರಾಮಾಚಾರ್ಯರಿಗೆ | ದಾನ ಮಾಡ್ದ ತುರ್ಯಾಶ್ರಮ 3 ಮಾಧವನ ದಯದಿಂದೆ | ಸಾಧಿಸುತ ಬದರಿ ಯಾತ್ರೆವೇದವತಿ ತೀರದಲ್ಲಿ | ಸಾಧುಗಳ ವೃಂದಾವನ 4 ವೇದ ವೇದ್ಯನಾದ ಗುರು | ಗುರುಗೋವಿಂದ ವಿಠಲನಮೋದದಿಂದ ಭಜಿಸುತ್ತ | ಆದರದಿ ಧ್ಯಾನಾಸಕ್ತ 5
--------------
ಗುರುಗೋವಿಂದವಿಠಲರು
ವೃಂದಾವನದೊಡೆಯ ಸ್ವಾಮಿ ಮಂತ್ರಾಲಯನಿಲಯ ಚಂದದಿ ಬಂದು ದರುಶನವಿತ್ತರು ಸ್ವಾಮಿ ಯತಿರಾಯ ಪ. ಮೂಢಮತಿಯು ನಾನು ಎನ್ನಗಾಢ ನಿದ್ರೆಯಲಿ ಮಾಡುತ ಪೂಜೆಯ ಎನಗಾನಂದ ಪಡಿಸಿದನು 1 ಗುರುನಾರದ ದಿನದಿ ಸ್ವಾಮಿ ಹರಿದಾಸರ ಗೃಹದಿ ಕರುಣ ತೋರಿ ದರುಶನವಿತ್ತು ಎನಗಾನಂದ ಪಡಿಸಿದರು 2 ಕರಿರಾಜವರದಾ ಗುರುರಾಜರಿಗೊಲಿದು ಪರಮಭಕ್ತರ ಮಂದಿರದಿ ಎನಗಾನಂದ ಪಡಿಸಿದರು 3 ತುಂಗಾತೀರದಲಿ ತಾವು ಚಂದದಿ ನಿಂತು ಎನಗಾನಂದ ಪಡಿಸಿದರು 4 ರಾಮ ಪೂಜೆಯ ಮಾಡಿ ರಾಮಧ್ಯಾನದಿ ನಿರಂತರ ರಮಾವಲ್ಲಭವಿಠಲ ಭಜಿಸುವ ಪ್ರಿಯರಿವರು 5
--------------
ಸರಸಾಬಾಯಿ
ವೆಂದೆನುತ ಬಂದೆನು ನಾ ಪ ಬಂದಾ ಬಂದಜನಕಾನಂದ ಕೊಡುತಲಿ ವಂದಿಸಿ ಭಜಿಪರಘಂಗಳ ಕಳೆದು ಸಲಹುವಿಯೋ ಸದ್ಗುರು ರಾಘವೇಂದ್ರಾ 1 ಭೀತರಾಗುತ ನಿನ್ನಡಿಗಳ ಸೇವಿಸಲು ಆದರದಿಂದಲವರ ಭವ-ಭಯವ ಪರಿಹರಿಸಿ ಸಲಹಿ ಉದ್ಧರಿಸುವೆ ಗುರುರಾಘವೇಂದ್ರಾ 2 ದುಷ್ಟ ಜನರು ಕೂಡಿ ಕೆಟ್ಟಯೋಚನೆ ಮಾಡಿ ಗುಟ್ಟಾಗಿ ನಿಮ್ಮ ಪರೀಕ್ಷಿಸ ಬೇಕೆಂಧು ಜೀವ ವಿದ್ದವನ ನಿರ್ಜೀವನೆನುತ ತರಲು ಸತ್ಯದಿ ನಿರ್ಜೀವನನ್ನಾಗಿ ಮಾಡಿದೆ ಪ್ರಭವೆ 3 ಕುಹಕಿ ಜನರು ಎಲ್ಲಿ ವನಕೆತುಂಡನು ತಂದು ಚಿಗುರಿಸ ಬೇಕೆನುತಲಿ ಕೇಳಲು ಕಮುಂಡದೊಳಿದ್ದ ದಿವ್ಯೋದಕ ಪ್ರೋಕ್ಷಿಸಿ ಚಿಗುರಿಸಿ ಫಲ ಮಾಡ್ದೆ ಅದ್ಭುತ ಮಹಿಮಾ 4 ಮಾವಿನರಸದೊಳು ಮುಳುಗಿ ಮೃತನಾದಾ ಬಾಲಕನಿಗೆ ಪ್ರಾಣಗಳನಿತ್ತೆ ದಯದೀ ಭುವಿಯೊಳು ನಿಮ್ಮ ಮಹಿಮೆಗೆಣೆಕಾಣೆ ಮಂತ್ರಾಲಯದೊರೆ ಗುರು ರಾಘವೇಂದ್ರಾ 5 ``ಶ್ರೀರಾಘವೇಂದ್ರಾಯ ನಮಃ'' ಎಂಬ ದಿವ್ಯನಾಮವ ಮನುಜನು ಪ್ರತಿದಿನ ಭಜಿಸುತ್ತಲಿರಲು ಘೋರ ದುರಿತಗಳೆಲ್ಲ ದೂರವ ಮಾಡಿ ನಿನ್ನ ಚರಣಸೇವಕರನ್ನು ಸಲಹುವಿಯೋಗುರುವೇ6 ಶ್ರೀ ರಘುರಾಮನ ಪ್ರಿಯಭಕ್ತನಾದ ಶ್ರೀ ಗುರು ರಾಘವೇಂದ್ರರ ಚರಣ ಭಜಿಸಿರೊ ನಂಬಿದ ಭಕ್ತರ ಬೆಂಬಿಡದೆ ಸಲಹುವ ಘನ್ನಕೃಪಾನಿಧಿ ನಮ್ಮ ಗುರು ರಾಘವೇಂದ್ರಾ 7
--------------
ರಾಧಾಬಾಯಿ
ವೈಕುಂಠಗಿರಿಯವಾಸನ ಮಹಿಮೆ ಸ್ಮರಿಸು ಜೋಕೆಯಿಂದಲಿ ಪೊರೆವ ಶ್ರೀಹರಿಯ ಭಜಿಸು ಪ. ಭಕ್ತ ರಕ್ಷಕ ಹರಿಯು ಭಾಗ್ಯೋದಯದ ಸಿರಿಯು ಮುಕ್ತಿದಾಯಕ ದೇವ ಮುನಿವರದ ಕಾವ ಮುಕ್ತಿಯೋಗ್ಯರ ಸಂಗ ಮುದದಿಂದ ನೀಡೆಂದು ಭಕ್ತಿಯಿಂದಲಿ ಭಜಿಸೆ ಬಂದು ಪೊರೆಯುವನು 1 ಭಾರ ಬೆನ್ನೊಳು ವಹಿಸಿ ಕೋರೆ ಹಲ್ಲನು ತೆರೆದು ಕಂಭದಲಿ ಬಂದ ಮೂರಡಿಯ ಭೂ ಬೇಡಿ ಕ್ಷತ್ರಿಯ ಕುಲವನೆ ಸವರಿ ವೀರ ರಾವಣನಸುವ ಹೀರಿದ ಹರಿಯು 2 ಶ್ರೇಷ್ಠ ಯದುಕುಲದಲ್ಲಿ ಪುಟ್ಟಿ ಬತ್ತಲೆ ಕಲಿಯ ಕುಟ್ಟಿ ಜಗ ರಕ್ಷಿಸಿದ ಸೃಷ್ಟಿಕರ್ತ ದಿಟ್ಟ ಮೂರುತಿ ಸತತ ಕಾಯ್ವ ಶ್ರೀ ಗೋಪಾಲ- ಕೃಷ್ಣವಿಠಲ ಶ್ರೀನಿವಾಸ ಜಗದೊಡೆಯ 3
--------------
ಅಂಬಾಬಾಯಿ
ವ್ಯಗ್ರಬುದ್ಧಿಯು ನಿನಗೆ ಶ್ರೀಹರಿಯೆ ಸುಗ್ರಾಸನವು ನನಗೆ ಅಗ್ರದೈವರು ನೀನೇ ಗತಿಯೊ ಉಗ್ರತಪದಲಿ ಭಜಿಸುವಾತ್ಮಗೆ ಉಗ್ರರೂಪವ ತೋರಿ ವಿಧವಿಧಾ- ನುಗ್ರಹಿಪೆ ಅಮೃತಾನ್ನ ಭೋಜನ ಪ ಜನಿಸಲಮೃತ WಟÀವು ಸಿಂಧುವಿನೊಳು ವನಜನಾಭನೆ ವಂಚಿಸಿ ದನುಜ ಕಣಕದು ಇಲ್ಲದಾಗಿ ಅನುಮಿಷರಿಗತ್ಯಂತಮಿಕ್ಕೆ ಘನಹರುಷ ತೋರಿದೆಯು ಸುರರಿಗೆ ನಿನಗೆ ಮೆಲ್ಲಲು ಇರಿಸಲಿಲ್ಲಾ 1 ಧೀರ ದೂರ್ವಾಸ ಮುನಿ ಶಿಷ್ಯರ್ವೆರಸಿ ಹೋರಿದಾಹಾರಕ್ಕಾಗಿ ನೀರಜಾಕ್ಷಿಯು ಘೋರ ಬಂತೆಂದಾ ರಾತ್ರಿಯಲಿ ನೆನೆಯೆ ನಿನ್ನನು ಆ ರಭಸದೊಳು ಬಹುನಿಮಿಷÀದಿ ಸೂರಿ ಮಾಡ್ದೆಯೋ ಇಷ್ಟು ಭೋಜನಾ 2 ಸಖ ಸುದಾಮನು ಕಾಣಲು ಶ್ರೀಹರಿಯೆ ಭಕುತಿ ನೋಡಿ ಮೆಚ್ಚಿದಿ ಮುಕುತಿದಾಯಕ ಪರಮ ಪುರುಷನೆ ಭಕುತಿ ಭೋಜನವಿತ್ತೆನಗೆ ಸದಾ ಪ್ರಕಟ ನರಸಿಂಹವಿಠಲನೆ ಬಲು ನಿಕಟಮನ ಕೊಡು ನಿನ್ನ ಭಜಿಸುವಾ 3
--------------
ನರಸಿಂಹವಿಠಲರು
ವ್ಯಾಸರಾಯರ ಚರಣವನೆ ಸೇವಿಸಿ ಪ ವ್ಯಾಸರಾಯರ ಚರಣ ಸರಸಿಜದ ಸೇವೆ ಬಲು ಮೀಸಲ ಮನದಿ ಮಾಡೆ ಆಶೆಪಾಶೆಯ ತೊರೆದು ಕ್ಲೇಶವೆಲ್ಲವ ಹರಿಸಿ ಭಾಸಿಸುವ ಬಿಡದಲೇ ಹೃದ್ದೇಶ ಖೇಶದೊಳಗೇ ಅ.ಪ. ಬನ್ನೂರು ಪುರದಲ್ಲಿ ಮುನ್ನೋರ್ವ ಬ್ರಾಹ್ಮಣನಮನ್ನೆಯೋಳ್ಳುದಿಸಲೂ ಸ್ವರ್ಣ ಪಾತ್ರೆಲಿ ತರಿಸಿಘನ್ನ ಮಹಿಮನ ತಂದು ಬ್ರಹ್ಮಣ್ಯ ಯತಿವರರು ತಮ್ಮ ಆಶ್ರಮದಿ ಪೊರೆಯೆ ||ಉನ್ನತದ ಗುಡ್ಡದಲಿ ಗವಿಯ ಮನೆಯಾಗಿರಲು ಚಿಣ್ಣನಾ ತೊಟ್ಟಿಲಿನ ಮೇಲಿನ ಗವಾಕ್ಷದಿಂಚೆನ್ನಗೋವ್ ದಿನದಿನದಿ ಪಾಲ ಕರೆಯುತ ಚಿಣ್ಣನನು ತಾ ಬಲು ಸಲಹಿತು 1 ತಾಪಸೋತ್ತಮರಾದ ಶ್ರೀಪಾದರಾಯರ ಸ-ಮೀಪದೊಳು ಆ ಪರಮ ಶಾಸ್ತ್ರ ವ್ಯಾಸಂಗದೀಭಾಪು ಭಾಪನೆ ಮೆರೆದು ಭಕ್ತಿ ಸುಪಥವ ಪಿಡಿದು ಮೈ ಮರೆದು ಕುಣಿಯುತಿರುವ ||ಶ್ರೀಪಾದ ಮುನಿಪ ತಾ ಮುಚ್ಚಳವ ತೆರೆಯದಿಹ ಸಂಪುಟವ ತೆರೆಯುತ್ತ ಶ್ರೀ ಪತಿಯನೆ ನೋದುತಶ್ರೀಪ ಶ್ರೀ ವೇಣುಗೋಪಾಲ ಕೃಷ್ಣನ್ನ ಕಾಣುತ್ತ ಕುಣಿ ಕುಣಿದಾಡಿದ 2 ಶಾಲಿಗ್ರಾಮವ ಪಿಡಿದು ತಾಳವನೆ ಹಾಕುತ್ತಬಲುಭಕ್ತಿ ಭರದಿಂದ ಘಲ್ಲು ಘಲ್ಲನೆ ಕುಣಿಯೆಖುಲ್ಲ ಜನರಿದರ ವಳ ಮರ್ಮವನೆ ತಿಳಿಯದಲೆ ಗುಲ್ಲುಗುಲ್ಲೆಂದು ನಗಲೂ || ಬಲ್ಲಿದ ಶ್ರೀಪಾದರಾಯರಿದ ಕೇಳಿ ಕಂಗಳಲಿ ಗಂಬನಿ ಗಲ್ಲದಲಿ ಕೈಯಿಡುತ ಸೊಲ್ಲ ಕೇಳಿರಿ ಸುಜನರೆಲ್ಲರು ಶ್ರೀ ಕೃಷ್ಣ ನಮ್ಮ ವ್ಯಾಸರೋಶನಾದನು 3 ಸಾರಥಿ ಹರಿಯನಿಜ ಮತವ ಬೋಧಿಸುತ ನಿಜ ಜನರ ಪೊರೆಯುತ್ತಕುಜನ ಕುತ್ಸಿತ ಮಾಯಿಮತ ಜೈಸಿಅಜನನಯ್ಯನ ಪ್ರೀತಿ ಸಂಪಾದಿಸಿ ||ಸುಜನ ಪಾಲಕ ಕೃಷ್ಣರಾಜನಿಗೆ ಕುಹುಯೋಗಗಜಬಜಿಸಿ ಬರುತಿರ್ಪುದನು ನಿಜ ಮನದಿ ತಿಳಿದುಗಜವರದ ನಂಘ್ರಿಯನೆ ಭಜಿಸುತ್ತ ವಿಜಯ ಪುರಿ ಸಿಂಹಾಸನವನೇರ್ಧರ 4 ಪರಿ ಗ್ರಂಥ ರಚನೆಯಲಿ ಕಳೆಯೆ ಕಾಲವಕಲು ಮನದ ಜನರಿವರ ಬಲು ಪರಿಯ ಮಹಿಮೆಗಳನೂ ತಾವ್ ತಿಳಿಯಲೊಶವೆ 5 ಇಂಪುಗೊಳ್ಳುತ ಮನದಿ ತಂಪಿನಿಂದಲಿ ಮೆರೆವಪಂಪೆ ಸುಕ್ಷೇತ್ರದಲಿ ಬಾಂಬೊಳೆಯ ಜನಕನ್ನಸಂಪ್ರೀತಿಯನೆ ಪಡೆದಿರುವ ಯಂತ್ರ ಉದ್ಧಾರರನ ಸ್ಥಾಪಿಸುತಲಿ||ನೋಂಪಿನಿಂದಲಿ ಬ್ರಾಹ್ಮಲಕ್ಷ ಗುಂಪಿಗೆ ಉಣಿಸಿ |ಸಂಪುಲ್ಲ ಲೋಚನನ ಶಂಫಲಿಯ ಪುರಗನನುಸಾಂಪ್ರದಾಯಕದಿಂದ ಸಂಪ್ರೀತಿ ಬಡಿಸಿದರ ಪದ ಪಾಂಸುವನೆ ಸಾರಿರೋ 6 ಪರಿ ಪರಿಯ ಪೂಜೆಯನೆ ಗೈಯ್ಯುತಲಿ ||ಶ್ರೀಶನ ಸುಪೂಜಾ ವಿಧಾನವನೆ ಗೈಸುತ್ತದೋಷದೂರನ ಸೇವೆ ಮೀಸಲಳಿಯದ ಮನದಿ ಒಸೆದು ತಾವ್ ಗೈಯ್ಯುತ ಭಾಸಿಸುವ ಸತ್ಕೀರ್ತಿಯುತರಾಗಿ ಮೆರೆಯುತಿಹರ 7 ಪುರಂದರ ವಿಠಲ ದಾಸನೆಂದೂದಾಸ ಪೀಠದಿ ನಿಲಿಸಿ ದಾಸ ಕೂಟವ ರಚಿಸಿ ಸತ್ಪಂಥವನೆ ಸಾರಿದ ||ಆಶುಕವಿತೆಯ ರಚಿಸಿ ಪ್ರಾಕೃತ ಸುಭಾಷೆಯಲಿಕೇಶವನ ಗುಣಧಿಯಲಿ ಲೇಸಾಗಿ ಈಸುತಲಿದಾಸರೊಡನಾಡುತಲಿ ಮೀಸಲಾಗಿರಿಸಿ ತನು ಕೇಶವನ ಗುಣ ಪೊಗಳಿದ 8 ಜಯ ಜಯತು ಶುಭಕಾಯ ಜಯ ಜಯತು ವ್ಯಾಸಾರ್ಯಜಯ ಮಧ್ವಮುನಿ ಪ್ರೀಯ ಜಯ ಚಂದ್ರಿಕಾಚಾರ್ಯಜಯತು ವಿದ್ವದ್ದಾರ್ಯ ಜಯತು ಸುರಮುನಿ ಪ್ರೀಯ ಜಯ ಜಯತು ಯತಿವರ್ಯನೆ ||ಕಾಯಭವ ಪಿತ ಗುರೂ ಗೋವಿಂದ ವಿಠ್ಠಲಗೆಪ್ರೀಯ ಗುರು ವ್ಯಾಸಾರ್ಯ ಸ್ತೋತ್ರವನು ಭಾವ ಶುದ್ಧಿಯೊಳಾವ ಭಜಿಸುವನವಗೆ ಭವವನಧಿ ಉತ್ತರಿಸೆ ನಾವೆಯೆನಿಸುವುದಿದು 9
--------------
ಗುರುಗೋವಿಂದವಿಠಲರು
ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ ನಾಶವಾಗುವುದು ನಿಮ್ಮಾಶೆ ಸಿದ್ಧಿಸುವುದು ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ ವಾಸವಾಗುವುದು ನಿಜ ಭಕುತಿಯಲಿ ಬಿಡದೆ ಪ ಪಿತನಿಂದ ನೊಂದು ರತಿಪಿತನ ಸ್ಮರಿಸುತ ಪ್ರತಿಬಂಧಕಗಳ ಪ್ರತಿಯಾಗಿ ಬಂದಿರಲು ಬಲು ಮತಿವಂತನಾಗಿ ಮುದದೀ ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ ಸ್ತುತಿಸುತಲ್ಲಿದ್ದು ಮಿತಿಕಾಲ ಹಿಂಗಳದು ಅಚ್ಯುತನ ವರದಿಂದ ಬಂದು 1 ಅಲ್ಲಿ ತ್ರಿಣಿನೇತ್ರ ಶ್ರೀ ವಲ್ಲಭನ ಶ್ರೀಪಾದ ಪಲ್ಲವಾರುಣಿ ಚಿತ್ತದಲ್ಲಿ ಪ್ರತಿದಿವಸದಲಿ ನಿಲ್ಲಿಸಿ ನಿಗಮಾರ್ಥದಿಂದ ಪೂಜಿಸುತ್ತಿದ್ದ ಬಲ್ಲ ಭಕುತಿಂದ ಸತತ ಖುಲ್ಲನಲಿ ಪುಟ್ಟಿದ ಪ್ರಲ್ಹಾದ ದೇವನು ಬಲ್ಲಿದಾನಾಗೆಲ್ಲಿ ಸಂಸಾರನುತ್ತರಿಸಿ ಮುನಿ ಮೆಲ್ಲನೇ ನಡತಂದನು2 ಬಂದ ನಾರದಗೆ ಪ್ರಲ್ಹಾದ ದೇವನು ಎರಗಿ ನಿಂದು ಕಂಗಳ ಮುಗಿದು ತ್ರಾಹಿ ತ್ರಾಹಿ ಎಂದು ಇಂದು ನಿಮ್ಮಯಾ ದರುಶನಾ ಛಂದವಾಯಿತೆನಗೆತ್ತಲಿಂದ ಬಂದಿರಿ ಇತ್ತ ಬಂದ ವಿಚಾರ ಪೇಳೆಂದು ಬಿನ್ನೈಸಲು ನಂದದಲಿ ಹಾಹಾ ಎನುತಾ 3 ವೃಕೋದರನಿಂದ ನೊಂದು ದೇಹವನು ಬಿಡುವಾಗ ಬಾ ಲ್ಹಕರಾಯನಾಗಿ ಹುಟ್ಟಿದ ಪ್ರಲ್ಹಾದನು ವೈದಿಕ ಮಾರ್ಗವನ್ನೇ ಧರಿಸಿ ಉಕುತಿಯನೇ ಸಾಧಿಸಿ ಕಲಿಯೊಳಗೆ ನಿಮ್ಮ ಪೂ ಜಕನಾಗಿಪ್ಪೆನೆಂದು ತಲೆವಾಗಲು ಇಂದು ಪ್ರಕಟವಾಯಿತು ಧರೆಯೊಳು 4 ದಿಕ್ಕುಗಳಂ ಮರದು ಧಿಗಿಧಿಗಿನೆ ಚಿಗಿದಾಡುತ್ತ ಉಕ್ಕಿದವು ಕಣ್ಣಿಂದ ಅಶ್ರು ಜಲಧಾರೆ ತಾ ಮೈಮರೆದು ದೇವಕಿ ನಂದನನ ನೆನೆದು ನಕ್ಕು ಕಿಲಿಕಿಲಿ ರಾಹಸ್ಯಗಳನುಚ್ಚರಿಸುತಾ ತಕ್ರ್ಕೈಸಿ ತಿಳುಪಿದನು ಮುಂದಣಾಗಮವೆಲ್ಲ ವೃತ್ತಾಂತ ಅಕ್ಕಟ ಅದ್ಭುತವೇನೆಂಬೆ 5 ಬನ್ನೂರು ಗ್ರಾಮದಲಿ ಜನಿಸಿದನು ಭೂಸ್ವರೂಪ ಮುನ್ನಿಲ್ಲದೇ ಬೆಳೆದು ಮುನಿ ಸುಬ್ರಾಹ್ಮಣ ರನ್ನು ಪಾಲಿಸುವ ಪರಮಾನಂದವುಳ್ಳ ಬ್ರಹ್ಮಣ್ಯತೀರ್ಥರ ಕರದಿ ಚೆನ್ನಾಗಿ ಪೋಷಿಸಿಕೊಂಡು ಉಪನೀತವಾಗಿ ಸನ್ಯಾಸಿ ಪಟ್ಟವನೆ ಧರಿಸಿ ಧರ್ಮದಲಿ ಸ ವಿದ್ಯವನೋದಿ ಧನ್ಯ ಕೀರ್ತಿಯಲಿ ಮೆರೆದಾ 6 ರಾಯಗದ್ದುಗೆನೇರಿ ಅವನಿಗೆ ಬಂದ ಮಹಾ ಕುಹುಯೋಗವ ನೂಕಿ ರಾಜ್ಯದೊಳಗೆ ಇದ್ದ ಸುವರ್ಣ ಛಾಯದಂತೆ ಕಾಂತಿಲೀ ನ್ಯಾಯಾಮೃತ ತರ್ಕ ತಾಂಡವ ಚಂದ್ರಿಕೆ ಎಂಬ ಸ್ಥಾಯವಾದರು ಪೊಂಪದಿ7 ಯಂತ್ರೋದ್ಧಾರಕನ ಪ್ರತಿಷ್ಠಿಸಿ ವಿಜಯೀಂದ್ರ ಸಂತ ವಾದಿರಾಜಗೊಲಿದು ಪುರಂದರ ಮಂತ್ರ ಸಿದ್ಧಿಯನೆ ಕೊಟ್ಟು ಭ್ರಾಂತಗೊಳಿಸುವ ಮಹಾ ಅನ್ಯಾಯ ಮತವೆಂಬ ಕಾಂತಾರ ಪಾವಕನೆ ವ್ಯಾಸಾಬ್ಧಿಯನು ಬಿಗಿದು ಚಿಂತಿತಾ ಫಲದಾಯಕ 8 ಮಧ್ವಮತವೆಂಬ ದುಗ್ಧಾಬ್ಧಿಗೆ ಪೂರ್ಣೇಂದು ಹೃದ್ವನಜದೊಳಗಿರಿಸಿ ಕೃಷ್ಣನ ಪದಾಂಬುಜವ ಚಿದ್ವಾತ್ಯದಲಿ ನಿಲಿಸಿ ಕಾವ್ಯದಲಿ ಕೊಂಡಾಡಿ ಸದ್ವೀರ ವೈಷ್ಣವರಿಗೆ ಪದ್ಧತಿಯನು ಪೇಳಿ ತವಕದಿಂದಲಿ ತಾವು ಸದ್ವೈಷ್ಣವ ಲೋಕ ಸಿರಿಮರಳೈದಿದರು ಪಾದದ್ವಯವ ಭಜಿಸುವವರೂ ಕೇಳಿ 9
--------------
ವಿಜಯದಾಸ
ವ್ಯಾಸರಾಯರು ಗೋಪಾಲಕೃಷ್ಣನ ಭಕ್ತಿಯಿಂದಲಿ ಭಜಿಸುವ ನಮ್ಮ ಗುರು ವ್ಯಾಸಮುನಿರಾಯ ಪ. ಹೇಸಿ ವಿಷಯಗಳಿಗೆ ಮೋಸ ಹೋದೆನು ನಾನು ಭಿಲಾಷೆಗಳ ಪೂರೈಸೊ ಅ.ಪ. ಹಿಂದೇಳ ಜನ್ಮಗಳು ಬಂದು ಪೋದವಯ್ಯಾ ಇಂದು ವಸುಧಿಯೊಳಗೆ ಬಂದೆನಯ್ಯಾ ಭವದೊಳಗೆ ನೊಂದೆನಯ್ಯಾ ಬಹಳ ಬೆಂದೆನಯ್ಯ ಅಘಕೂಪದೊಳು ಬಿದ್ದೆನಯ್ಯ ಉದ್ಧರಿಸು ಜೀಯ್ಯಾ 1 ವಂದಿಸುವೆನು ನಿಮಗೆ ನವವೃಂದ ವನದಲಿ ಇರುವೋರು ಇಂದಿರೇಶನ ನೋಡುವೋರು ಆನಂದಪಡುವೋರು ಸಿಂಧುಶಯನ ತಂದು ತೋರಿಸೋ ಇಂದು ನಿಮ್ಮಯ ಪಾದವೊಂದೆ ಭಜಿಪೆ ತಂದೆ ಮಾಡೆಲೊ ಸತ್ಕøಪೆ 2 ಯೆಷ್ಟು ಜನುಮದ ಪುಣ್ಯ ಫಲಿಸಿತು ಎನಗೆ ವೈಷ್ಣವಾ ಜನ್ಮ ದೊರಕಿತು ಕೊನೆಗೆ ದುಷ್ಟ ಸಂಗವಾ ದೂರದಿ ಮಾಡಯ್ಯ ಶಿಷ್ಟ ಜನ ಸಂಗದೊಳಗೆನ್ನಿಡಯ್ಯಾ ಅಭೀಷ್ಟಗಳ ನೀಡಯ್ಯ ಕಾಳಿಮರ್ಧನ ಕೃಷ್ಣನ ತೋರಿಸಯಾ ಪಾಲಿಸಯ್ಯಾ 3
--------------
ಕಳಸದ ಸುಂದರಮ್ಮ