ಒಟ್ಟು 10544 ಕಡೆಗಳಲ್ಲಿ , 133 ದಾಸರು , 5597 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳ ಜಯ ಮಂಗಳ ಮಂಗಳ ಶ್ರೀ ನರಸಿಂಗ ಮೂರುತಿಗೆ ಪ ಅಂಗುಟಾಗ್ರದಿ ಗಂಗೆಯ ಪಡೆದ ಗಾತ್ರ ಶ್ರೀ ರಂಗನಿಗೆ ಅಂಗಜರಿಪು ಧನು ಭಂಗವ ಮಾಡಿ ಸೀ- ತಾಂಗನೆಯಳ ಕರಪಿಡಿದವಗೆ 1 ವರಮತ್ಸ್ಯಗೆ ಗಿರಿಧರ ಕ್ರೋಢಗೆ ತರುಳನ ರಕ್ಷಿಸಿ ಧರೆಯ ಬೇಡಿದಗೆ ಪರಶು ಧರಿಸಿದ ರಾಮಕೃಷ್ಣಗೆ ಧರಿಸದೆ ವಸನವ ತುರಗನೇರಿದಗೆ 2 ಕರಿವರ ಕರೆಯಲು ಭರದಿ ಬಂದವಗೆ ಸ್ಮರಿಪರ ಭಯ ಪರಿಹರಿಸುವ ದೇವಗೆ ಶರಣು ಜನಕೆ ಸುರತರುವೆಂದೆನಿಸಿದ ಸಿರಿ ಕಾರ್ಪರ ನರಹರಿ ರೂಪಗೆ 3
--------------
ಕಾರ್ಪರ ನರಹರಿದಾಸರು
ಮಂಗಳಂ ಜಯ ಮಂಗಳಂ ಲಿಂಗಾಕಾರದ ಪರಶಿವಗೆ ಪ ರಜತಾದ್ರಿಪುರದೊಳು ನಿಂದವಗೆ ಭಜಕರ ಸಲುಹಲು ಬಂದವಗೆ ನಿಜಸುರ ಸೇವಿತ ಗಜಚರ್ಮಾಂಬರ ತ್ರಿಜಗ ವಂದಿತನಾದ ಪರಶಿವಗೆ1 ಬಾಣನ ಬಾಗಿಲ ಕಾಯ್ದವಗೆ ತ್ರಾಣದಿ ತ್ರಿಪುರವ ಗೆಲಿದವಗೆ ಕಾಣದ ಅಸುರಗೆ ಪ್ರಾಣಲಿಂಗವನಿತ್ತು ಮಾಣದೆ ಭಕ್ತರ ಸಲುಹುವಗೆ 2 ಗಂಗೆಯ ಜಡೆಯೊಳು ಧರಿಸಿದಗೆ ಸಿಂಗಿಯ ಕೊರಳೊಳು ನುಂಗಿದಗೆ ತಿಂಗಳ ಸೂಡಿಯೆ ಅಂಗ ಭಸ್ಮಾಂಗದಿ ಕಂಗಳು ಮೂರುಳ್ಳ ಕೃಪಾಂಗನಿಗೆ 3 ಅಸ್ಥಿಯ ಮಾಲೆಯ ಧರಿಸಿದU É ಹಸ್ತದಿ ಶೂಲವ ಪಿಡಿದವಗೆ ವಿಸ್ತರವಾಗಿಯೆ ಭಸ್ಮಸುವಾಸಿಗೆ ಸತ್ಯದಿ ವರಗಳನಿತ್ತವಗೆ 4 ಅಂಬಿಕಪತಿಯೆಂದೆನಿಸಿದಗೆ ತ್ರಿ- ಯಂಬಕ ಮಂತ್ರದಿ ನೆಲೆಸಿದಗೆ ನಂಬಿದ ಸುರರಿಗೆ ಬೆಂಬಲವಾಗಿಯೆ ಇಂಬಾದ ಪದವಿಯ ತೋರ್ಪವಗೆ 5 ಪಂಚಾಕ್ಷರದೊಳು ಒಲಿದವಗೆ ಪಂಚಮ ಶಿರದೊಳು ಮೆರೆವವಗೆ ಪಾತಕ ಸಂಚಿತ ಕರ್ಮವ ವಂಚಿಸಿ ಭಕ್ತರ ವಾಂಛಿತವೀವಗೆ 6 ಪಾಶುಪತವ ನರಗಿತ್ತವಗೆ ಶೇಷಾಭರಣವ ಹೊತ್ತವಗೆ ಕಾಶಿಗಧಿಕವಾಗಿ ಕೈವಲ್ಯವಿತ್ತು ವಿ- ಶೇಷದಿ ಜನರನು ಸಲುಹುವಗೆ7 ಯಕ್ಷ ಸುರಾಸುರ ವಂದಿತಗೆ ದಕ್ಷನ ಮಖವನು ಕೆಡಿಸಿದಗೆ ಕುಕ್ಷಿಯೊಳೀರೇಳು ಜಗವನುದ್ಧರಿಸಿಯೆ ರಕ್ಷಿಸಿಕೊಂಬಂಥ ದೀಕ್ಷಿತಗೆ 8 ಕಾಮಿತ ಫಲಗಳ ಕೊಡುವವಗೆ ಪ್ರೇಮದಿ ಭಕ್ತರ ಸಲಹುವಗೆ ಭೂಮಿಗೆ ವರಾಹತಿಮ್ಮಪ್ಪನ ದಾಸರ ಸ್ವಾಮಿಯೆಂದೆನಿಸುವ ಈಶನಿಗೆ 9
--------------
ವರಹತಿಮ್ಮಪ್ಪ
ಮಂಗಳಂ ಜಯ ಮಂಗಳಂ ಪ ಆದಿನಾರಾಯಣನೆನಿಸಿದಗೆ ಪಾದದಿ ಗಂಗೆಯ ಪಡೆದವಗೆ ಸಾಧುಸಜ್ಜನರನ್ನು ಸಲುಹುವ ದೇವಗೆ ವಿ ನೋದ ಮೂರುತಿಯಾದ ವೆಂಕಟಗೆ 1 ಶಂಖ ಚಕ್ರಧರಿಸಿಪ್ಪವU ಪಂಕಜ ಹಸ್ತವ ತೋರ್ಪವಗೆ ಬಿಂಕದೊಳಸುರರ ಕೆಡಹಿದ ಧೀರಗೆ ಮೀ ನಾಂಕನ ಪಿತನಾದ ವೆಂಕಟಗೆ 2 ಪೀತಾಂಬರಧರನೆನಿಸಿದಗೆ ನೂತನ ನಾಮದಿ ಮೆರೆವವಗೆ ಪಾತಕನಾಶನ ಪರಮಪಾವನಗೆ ಅ ತೀತ ಮಹಿಮನಾದ ವೆಂಕಟಗೆ 3 ಖಗವಾಹನನೆಂದೆನಿಸಿದಗೆ ನಗಧರನಾಗಿಹ ಅಘಹರಗೆ ಮೃಗಧರರೂಪಗೆ ಮುಂಚಕಲಾಪಗೆ ಜಗದಾಧಾರಕ ವೆಂಕಟಗೆ 4 ಲೋಕನಾಯಕನಾದ ಕೇಶವಗೆ ಶೋಕಭಂಜನನಾದ ಮಾಧವಗೆ ಸಾಕಾರ ರೂಪಗೆ ಸರ್ವಾತ್ಮಕನಿಗೆ ಶ್ರೀಕರನೆನಿಸುವ ವೆಂಕಟಗೆ 5 ಆಲದ ಎಲೆಯೊಳ್ವೊರಗಿದಗೆ ಆ ಕಾಲದಿ ಅಜನನು ಪೆತ್ತವಗೆ ನಿಗಮ ವಿದೂರಗೆ ಕಾಲಕಾಲಾಂತಕ ವೆಂಕಟಗೆ 6 ಸ್ವಾಮಿ ಪುಷ್ಕರಣಿಯ ವಾಸನಿಗೆ ಭೂಮಿ ವರಾಹತಿಮ್ಮಪ್ಪನಿಗೆ ಪ್ರೇಮದಿ ಜಗವನು ಸಲುಹುವ ನಾಮದ ಸೋಮ ಸನ್ನಿಭನಾದ ವೆಂಕಟಗೆ 7
--------------
ವರಹತಿಮ್ಮಪ್ಪ
ಮಂಗಳಂ ಜಯ ಮಂಗಳಂ ಪ. ನಿತ್ಯ ಮಂಗಳ ನಗಧÀರ ಕೂರ್ಮಗೆ ಅತಿ ಮಂಗಳ ಜಗವವನುದ್ಧರಿಸಿದ ವರಾಹಗೆ ಮಂಗಳ ಮಗುವ ಕಾಯ್ದ ನರಸಿಂಹನಿಗೆ 1 ದಾನವ ಬೇಡಿದ ವಾಮನಗೆ ಮಂಗಳ ಕ್ಷೋಣಿಪರನು ಕೊಂದಗೆ ಮಂಗಳ ಜಾನಕಿ ರಮಣ ರಾಮಗೆ ಮಂಗಳ ಜ್ಞಾನಿಗಳ ಕಾಯ್ದ ಗೋಪಾಲಗೆÀ 2 ಬುದ್ಧ ರೂಪದಲಿಹ ದೇವಗೆ ಮಂಗಳ ಮಧ್ವವಲ್ಲಭ ಹಯವದನಗೆ ಮಂಗಳ ಉದ್ಧರಿಸುವ ದೇವರ ದೇವಗೆ 3
--------------
ವಾದಿರಾಜ
ಮಂಗಳಂ ಜಯ ಮಂಗಳಂ ರಾಮ ಮುನಿಜನ ಸ್ತೋಮ ಮಂಗಳಂ ಲೋಕಾಭಿರಘುರಾಮ ಸದ್ಗುಣ ಸ್ತೋಮ ಪ ದಶರಥನ ವರಪುತ್ರ ನೀನಾಗಿ ಕೌಶಿಕನ ಯಜ್ಞದಿ ಅಸಮಸಾಹಸ ದೈತ್ಯರನು ಗೆಲಿದಿ ವಸುಧೆಯೊಳು ಗೌತಮನ ಸತಿಯಳನು ಉದ್ಧರಿಸಿ ತಾಟಕಿ ಹೊಸಪರಿಯ ದೈತ್ಯರನು ಸಂಹರಿಸಿ ಎಸೆವ ಮಿಥಿಲಾ ಪುರದಿ ಜಾನಕಿ ಬಿಸಜನೇತ್ರೆಯ ಕೈಪಿಡಿದು ರನ್ನ ಹೊಸ ಪರಿಯ ರಥದೊಳಗೆ ಪೊರಟು ಸತಿಸಹಿತ ಅಯೋಧ್ಯೆಯಲಿ ಮೆರೆದಗೆ1 ದಶರಥನು ಪುತ್ರಗೆ ಪಟ್ಟವನು ಕಟ್ಟುವೆನು ಎನಲು ದಶದಿಕ್ಕಿಗೆ ಪತ್ರವನು ಕಳುಹಿಸಲು ಎಸೆವ ಮಂಗಳ ವಾದ್ಯ ಕೇಳುತಲೆ ಕೈಕೇಯಿ ಬರಲು ಅಸದಳದವರ ಬೇಡಿ ಕಾಡಿಸಲು ವಸುಧೆಗೀಶನ ವನಕೆ ಕಳುಹಲು ಕುಶಲವಿಲ್ಲದೆ ಮರುಗೆ ದಶರಥ ಮಿಸುಣಿಮಣಿ ಸಿಂಹಾಸನ ತ್ಯಜಿ- ಸುತಲಿ ಪಿತೃ ವಾಕ್ಯವ ನಡೆಸಿದಗೆ 2 ಮಡದಿ ಸೀತಾ ಲಕ್ಷ್ಮಣರ ಕೂಡಿ ಬಿಡದೆ ದೈತ್ಯರನೆಲ್ಲ ಕಡಿದಾಡಿ ಒಡತಿ ಸೀತೆಗೆ ಉಂಗುರವ ನೀಡಿ ಹನುಮಂತ ಬರಲು ಕಡುಜವದಿ ಸಾಗರದಿ ಸೇತುವೆಯ ಮಾಡಿ ತಡೆಯದಲೆ ರಾವಣನ ಮೂಲವ ಕಡಿದು ಕಮಲನಾಭ ವಿಠ್ಠಲನು ಮಡದಿಸಹಿತಾಯೋಧ್ಯೆ ಪುರದಲಿ ಸಡಗರದಿ ಸಾಮ್ರಾಜ್ಯವಾಳ್ದಗೆ3
--------------
ನಿಡಗುರುಕಿ ಜೀವೂಬಾಯಿ
ಮಂಗಳಂ ಜಯ ಮಂಗಳಂ ರಾಮ ಸಜ್ಜನರ ಪ್ರೇಮ ಮಂಗಳಂ ಲೋಕಾಭಿರಘುರಾಮ ಪಟ್ಟಾಭಿರಾಮ ಪ ಮಂಗಳಂ ಶ್ರೀ ದಶರಥಾತ್ಮಜಗೆ ಮಂಗಳಂ ಅಯೋಧ್ಯವಾಸಿಗೆ ಮಂಗಳಂ ಜನಕಜಾಮಾತೆಗೆ ಮಂಗಳಂ ಶ್ರೀ ರಾಮಚಂದ್ರಗೆ ಅ.ಪ ದೇವದೇವೋತ್ತಮ ವೈಕುಂಠದೊಳಗೆ ಶ್ರೀ ಭೂಮೇರಿಂದ ಸೇವೆಗಳ ಕೈಗೊಳ್ಳುತ ಮಲಗಿರಲು ದೇವಋಷಿ ಬ್ರಹ್ಮೇಂದ್ರಾದಿಗಳು ಸಹಿತ ಶ್ರೀಧರನ ಸ್ತುತಿಸುತ ರಾವಣಾಸುರನುಪಟಳ ವರ್ಣಿಸಲು ಸಂತೈಸಿ ಅವರನು ಭೂಮಿಪತಿ ದಶರಥನ ಪ್ರೇಮ ಕುಮಾರನಾಗುದಿಸುತಲಯೋಧ್ಯದಿ ಪ್ರೇಮ ತೋರುತ ಮೆರೆದವಗೆ ಜಯ1 ದಶರಥನ ಸುತರಾಗಿ ಬೆಳೆಯುತಲಿ ಕೌಶಿಕನÀಯಜ್ಞವ ಕುಶಲದಲಿ ರಕ್ಷಿಸುತ ಹರುಷದಲಿ ಶಶಿಮುಖಿಯ ಕೂಡುತ ಕುಶಲದಲಿ ವನವಾಸ ಚರಿಸುತಲಿ ದಶಶಿರನು ಜಾನಕಿಯ ಕದಿಯಲು ಶಶಿಮುಖಿಯನರಸುತಲಿ ವನವನ ವಸುಧಿಪತಿ ಕಪಿಗಳ ಕಳುಹಿ ಸತಿ ಕುಶಲ ತಿಳಿಯುತ ನಲಿದವಗೆ ಜಯ 2 ಬಂದ ಕಪಿ ಕಟಕವನೆ ನೋಡುತ್ತ ಸಾಗರಕೆ ಸೇತುವೆ ಒಂದೇ ನಿಮಿಷದಿ ರಚಿಸಿ ಶೀಘ್ರದಲಿ ಮಂದಮತಿ ರಾಕ್ಷಸರ ವಧಿಸುತಲಿ ಅಂದಣವ ಕಳುಹಿ ಮಂದಗಮನೆಯ ಕರೆಸಿ ಬೇಗದಲಿ ಬಂದ ರಾಮನು ಎಂದು ಮಾರುತಿ ಮುಂದೆ ಭರತಗೆ ಕುಶಲ ತಿಳಿಸಲು ತಂದೆ ಕಮಲನಾಥ ವಿಠಲ ಮುಂದೆ ಪ್ರಜೆಗಳ ಪೊರೆದವಗೆ ಜಯ 3
--------------
ನಿಡಗುರುಕಿ ಜೀವೂಬಾಯಿ
ಮಂಗಳ ಜಯಮಂಗಳ | ಶುಭಮಂಗಳ | ಮಂಗಳ ಮಹೀಪತಿ ಗುರುಮೂರ್ತಿಗೆ | ಮಂಗಳ ಶರಣರ ಸಾರಥಿಗೆ ಪ ಹಲವು ಸಾಧನದಿಂ ತೊಳಲುತ ತತ್ವದ | ನೆಲೆಗಾಣದವರನು ತಾರಿಸಲಿ | ಒಲಿದು ಶ್ರೀಗುರು ರೂಪದಿಂದಲಿ ನರದೇಹ | ಇಳೆಯೊಳು ಧೃಡಿಸ್ಯವತರಿಸಿದಗೆ 1 ಬೇಡಿದಿಷ್ಟಾರ್ಥವ ಕಾಮ್ಯ ಭಕುತರಿಗೆ | ನೀಡುತ ನಿರುಪಾಧಿಕ ಜನರಾ | ಮಾಡಿ ಜೀವನ್ಮುಕ್ತರ ನಿಜಬೋಧದ ಲಾಡುವ ಕರುಣಾಸಾಗರಗೆ 2 ಎಡಬಲದಲಿ ಯೋಗ ಭೋಗ ಚಾಮರದಿಂ | ದೃಢಸಿಂಹಾಸನ ಲೊಪ್ಪವಗೆ | ಪೊಡವಿಲಿ ಮೂಢ ನಂದನ ಕೈಯ್ಯವ | ಬಿಡನೆಂದಭಯವಿತ್ತ ಸ್ವಾನಂದಗೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಂಗಳ ಪದ್ಯಗಳು ಜಯ ಜಯ ಶ್ರೀ ಮಹಾಕಾಳಿ ಗೋಕರ್ಣೆ ಮಹಾಬಲ ಪೂಣ್ಯವಧು ಭಯವಿರಹಿತ ಭವನಾಶಿನಿ ಸುಲಲಿತೆÀ ಭಕ್ತ ಜಿಹ್ವಾಗ್ರ ಮಧು ಪ ಪರಮೇಶ್ವರಿ ಪರಿಪೂರ್ಣಾಂಬಿಕ ನಿಜ ಪರಮಾನಂದ ಪರೇ ಪರತರವಸ್ತು ಪರಾತ್ಪರ ಶಾಂಭವಿ ಸುರಮುನಿ ಅಭಯಕರೇ ಜಯಜಯ 1 ವೀಣಾ ಪುಸ್ತಕಧಾರಿಣೆ ಅಗಣಿತ ಪಾನಪಾತ್ರಪ್ರಿಯೇ ವಾಣಿನಿತ್ಯಕಲ್ಯಾಣಿ ವಂದಿತಗುಣ ಶ್ರೇಣಿ ಮುನೀ ಸಾಹ್ಯೇ ಜಯಜಯ 2 ಹರಿಮೋಹಿನಿ ಹರಿವಾಹಿನಿ ಗಿರಿಸುತೆ ಹರಿಣಾಂಕಿಣಿ ಭವ್ಯಮುಖೆ ಹರಿಸಖ ಪ್ರಾಣಸಖೇ ಜಯಜಯ 3 ಸರ್ವಗುಣನಿಲಯೇ ಸರ್ವಾತ್ಮಕಿ ಸರ್ವಯಂತ್ರರೂಪೇ ಶರ್ವಾಣೆ ಸರ್ವೇಶ್ವರಿ ಸದಾಶಿವೇ ಸರ್ವ ಮಂತ್ರರೂಪೇ ಜಯಜಯ 4 ಮೂಲಾಧಾರೇ ಮುಕುಂದಾರ್ಚಿತ ಪದ ಬಾಲಾ ತ್ರಿಪುರಹರೇ ಮಾಲಿನಿ ಮಂತ್ರಾತ್ಮಕಿ ಮಹಾದೇವಿ ತ್ರಿ ಶೂಲಿನಿ ಶಶಿಶಿಖರೇ ಜಯಜಯ 5 ನಿತ್ಯಾರ್ಚನಿ ಸುಖಭೋಗಿನಿ ಸುಲಲಿತೇ ನಿತ್ಯಾನಂದಮಯೇ ನಿತ್ಯಾನಿತ್ಯ ಸ್ವರೂಪಿಣಿ ನಿರ್ಗುಣೆ ಸತ್ಯ ಸಾಧು ಹೃದಯೇ ಜಯಜಯ 6 ಶಂಭಾಸುರಮಹಿಷಾ ಸುರಮೇಕ್ಷಕ ದಂ¨ ಮುಕುಟಧರೇ ಅಂಬಾ ಶ್ರಿ ಮಹಾಕಾಳಿ ವಿಮಲಾನಂದ ಸುಖ ಶರೀರೇ ಜಯ ಜಯ 7 ಇತಿ ಶ್ರೀ ಮಹಾಕಾಳ್ಯಷ್ಟಕ ಸ್ತೋತ್ರಂ ತ್ರಿಕಾಲಪಠತೆ ನಿತ್ಯಂ ನಿತ್ಯಂ ನತಿಸುತಧನ ಪೌತ್ರಾದಿ ಕೃತಾರ್ಥಂ ಭವತಿ ಸತ್ಯಂ ಸತ್ಯಂ ಜಯಜಯ 8
--------------
ಭಟಕಳ ಅಪ್ಪಯ್ಯ
ಮಂಗಳ ಪಾಡಿರೆ ಭಾವೆಯರೇ ರಂಗನ ರಮಣಿಯ ಭಾವಿಸಿರೇ ಪ ಅಂಗಜಜನನಿಯ ಕೃಪೆಯಿ ಸ- ತ್ಸಂಗತಿ ಪಡೆದೆವು ನಿಶ್ಚಯಂಅ.ಪ ಭೋಗವತೀಪತಿಶಾಯಿಯೊಳು ಅನು ರಾಗಗೊಂಡಿಹ ದೇವಿಯಿವಳ್ ಭಾಗ್ಯಲಕ್ಷ್ಮಿಯ ಪಾದದೊಳು ಬಾಗುತ ಶಿರವನು ರಾಗದೊಳು 1 ವೇದಸಾರದ ವಾಕ್ಯದಲಿ ಮಾಧವಿಯಂ ಸ್ತುತಿ ಮಾಡುತಲಿ ಭೇದವೆಣಿಸದೆ ಸಲಹೆನ್ನುತಲಿ ಮಾಧವನಂ ಕೊಂಡಾಡುತಲಿ 2 ತಾಪತ್ರಯಗಳ ಪರಿಹರಿಸಿ ಆಪತ್ತುಗಳಿಂದುದ್ಧರಿಸಿ ಕಾಪಾಡುವಳಿವಳೆಂದೆನಿಸಿ ಶ್ರೀಪದ್ಮಿನಿಯನು ಸಂಸ್ಮರಿಸಿ 3 ಶರಣಾಗತ ಸಂರಕ್ಷಕಿಗೆ ವರಶೇಷಗಿರಿನಿಲಯನಿಗೆ ಕರುಣಾರೂಪಿಣಿ ಪದ್ಮಿನಿಗೆ ಕರಗಳ ಮುಗಿಯುತೆ ಮಾಧವಿಗೆ 4
--------------
ನಂಜನಗೂಡು ತಿರುಮಲಾಂಬಾ
ಮಂಗಳಂ ಮಂಗಳಂ ಮಾರಮಣಗೆ ಪ ಕುಂಡಲಿ ಶಯನಗೆ ಗುಣನಿಧಿಗೆ ಪುಂಡರೀಕಾಕ್ಷ ಶ್ರೀ ಪುರುಷೋತ್ತಮಗೆ 1 ಸರ್ವಪ್ರಾಣಿಗಳ ಹೃತ್ಕಮಲನಿವಾಸಗೆ ಉರ್ವಿಭಾರವ ಪರಿಹರಿಸಿ ಭಕ್ತರ ಕಾಯ್ವ ಸಾರ್ವಭೌಮ ಹರಿಸರ್ವೋತ್ತಮಗೆ 2 ಭಾಗ್ಯವಲ್ಲಿ ಹನುಮನೊಡೆಯನಮ್ಮ ಗುರುರಾಮ ವಿಠಲ ಶ್ರೀ ಕೃಷ್ಣಮೂರುತಿಗೆ3
--------------
ಗುರುರಾಮವಿಠಲ
ಮಂಗಳಂ ಮಂಗಳಂ ರಂಗನಿಗೇ | ಜಯಮಂಗಳವೆನ್ನಿ ಶ್ರೀ ವೆಂಕಟಗೇ ಪ ಪತಿ ಮಾಧವ ಹರಿಗೇ 1 ನೀರಜಜ ಗೋರೂಪಿ | ಸಾರಿ ಪುತ್ತಾಶ್ರಿತಗೆಕ್ಷೀರಾಭಿಷೇಚಿಸಿ | ಸಾರುತಿರೆ ನೃಪ ಗೃಹ |ಮಾರನೆ ದಿನ ಗೋ | ಚಾರ ಕೊಡಲಿ ಹತಿಗೆದೂರ ಸರಿಸಿ ಗೋವ | ಶಿರವನೊಡ್ಡಿದಗೇ 2 ನಗ ವೆಂಕಟಾದ್ರೀಲಿಅಘಹರ ಲೀಲೆಗಳ್ | ಸೊಗಸಾಗಿ ತೋರ್ವಗೇ 3 ಆವಾವ ಬಗೆಯಿಂದ | ಜೀವನಧ್ಯಾತ್ಮದಿಓಧಿ ಸಾಧನೆಗೈದು | ದೇವನ ಪದ ಸಾರುವಭಾವವನರುಹುಲು | ಊರ್ವಿಯೊಳವತರಿಸಿಮಾವಾರಿ ನಟಿಸುತ್ತ | ಜೀವರ ಪೊರೆವಗೇ 4 ದೇವ ದೇವ ನಮ್ಮ | ಗೋವ ಪರಿಪಾಲಕಮಾವಿನೋದಿಯು ಗುರು | ಗೋವಿಂದ ವಿಠಲಭೂವೈಕುಂಠಸ್ಥನು | ಕಾವ ಭಕ್ತರನೆಲ್ಲ ಈ ವಿದಧಿ ತುತಿಪರ್ಗೆ | ಭಾವದಿ ಒದಗುವಗೇ5
--------------
ಗುರುಗೋವಿಂದವಿಠಲರು
ಮಂಗಳ ಮಣಿಮಲ ಲಂಘಿತಾಂಗಳ ಕಪಿಸಾಂಗ ವಂದಿತ ಭೂಷಿತಾಂಗ ಮಾರುತಿಗೆ ಪ ವ್ಯಾಳ್ಯದಂದದಿ ಪುಚ್ಛಮ್ಯಾಲೆ ತೂಗುತಲೆಂಕಿಲೆಂಕಿರಾಮಗ ಸೀತಾಲಂಕನಿತ್ತವಗೆ 1 ಹೂಂಕರಿಸುತ ಬಾಲ ಬೆಂಕಿಯಿಂದಲ್ಲೆ ಸುಟ್ಟಏಳುಚಿರಿಪ ಸಣ್ಣ ಬಾಲ ಹನುಮನಿಗೆ 2 ದಾಶರಥಿಯ ಮುಂದೆ ವಾಸಮಾಡುತ ಕೆಂಪುರುಷ ಬಾಡದಿ ಸಮ ಘೋಷನಿತ್ತವಗೆಇಂದಿರೇಶನರ್ಚಿಪಗೆ ದ್ರೌಪದೀಶ ವಂದಿತಗೆ 3
--------------
ಇಂದಿರೇಶರು
ಮಂಗಳಂ ರಘುರಾಮಗೆ ಜಯಮಂಗಳಂ ಗುಣಧಾಮಗೆ ಮಂಗಳಂ ಮದನಾರಿವಂದ್ಯಗೆ ಮಂಗಳಂ ಮನ್ನಾಥಗೆ ಪ. ರಾಮಗೆ ನತಕಾಮಗೆ ಘನಶ್ಯಾಮಗೆ ಸುಪ್ರೇಮಗೆ ಕಾಮಿತಾರ್ಥಪ್ರದಾತಗೆ ವರರಾಮಣೀಯಕ ರೂಪಗೆ 1 ಶ್ರೀಶಗೆ ಜಗದೀಶಗೆ ಭಯನಾಶಗೆ ಸರ್ವೇಶಗೆ ದಾಸಜನಮನೋಲ್ಲಾಸ ಲಕ್ಷ್ಮೀಶಕೇಶವ ಮೂರ್ತಿಗೆ 2 ಮಾರುತಾತ್ಮಜಪÀರಿಸೇವ್ಯಗೆ ನತಪಾರಿಜಾತ ಸಮಾನಗೆ ವಾರಿಜಾಯತನೇತ್ರ ಶ್ರೀಶೇಷಶೈಲ ನಿವಾಸಗೆ 3
--------------
ನಂಜನಗೂಡು ತಿರುಮಲಾಂಬಾ
ಮಂಗಳಂ ರಾಮಕೃಷ್ಣಾರ್ಯ ದಿವ್ಯಮಂಗಳ'ಗ್ರಹ ಸದ್ಗುರುವರ್ಯ ಪವಾದಿ ಜನರ ಮನೋಬಾಧೆಯ ಬಿಡಿಸುತಬೋಧೆಯ ಬಲಿಸಿ ಬ್ರಹ್ಮಾನಂದದಹಾದಿಯ ತೋರಿಸಿಯಾದರಿಸಿಯೆ ಕಾಯ್ವಬೋಧ'ಗ್ರಹ ನಿನ್ನ ಪಾದಪದ್ಮಗಳಿಗೆ 1ಭೂರಿ ಜನ್ಮಗಳೆತ್ತಿ ಸೇರಲು ತಡಿಯನುದಾರಿಗಾಣದೆ ಭವ ವಾರಿಧಿಯಹಾರೈಸಿದವರಿಗೆ ತೋರಿ ಜ್ಞಾನದ ನಾವೆಯೇರಿಸಿ ತಡಿಗೈದಿಸಿದ ಮೂರ್ತಿಗೆ 2ಕರುಣದಿಂ ಧರಣಿಯೊಳವತರಿಸಿಯೆ ಭಕ್ತಪರಿಪಾಲನಾರ್ಥದಿ ಯುಗಯುಗಕೂನರಹರಿ ರಾಮ ಶ್ರೀಕೃಷ್ಣ ರಾಮಕೃಷ್ಣಾರ್ಯತಿರುಪತಿ ವೆಂಕಟರಮಣನಿಗೆ3ಓಂ ಲೀಲಾಮಾನುಷ 'ಗ್ರಹಾಯ ನಮಃ
--------------
ತಿಮ್ಮಪ್ಪದಾಸರು
ಮಂಗಳಂ ಶ್ರೀ ಗುರುವರ್ಯರಿಗೆ | ಮಂಗಳಾಂಗರಿಗೆ ಮಂಗಳಂ ಶ್ರೀ ಗುರುವರ್ಯರಿಗೆ ಪ. ರಂಗನಾಥನ ಪದ ಸರೋಜಕೆ ಭೃಂಗರೆನಿಸಿ ಮೆರೆಯುವರಿಗೆ ಅ.ಪ. ತಂದೆ ಮುದ್ದುಮೋಹನರೆಂ ತೆಂದು ಮೆರೆಯುತ ಮಂದಮತಿಯ ಬಿಡಿಸಿ ಎನ್ನ ತಂದೆಯಂತೆ ಪೊರೆಯುವರಿಗೆ 1 ನಾಗಶಯನ ಹರಿಯ ಭಜಿಪ ಭೋಗಿವರರಿಗೆ ಭಾಗವತರ ಸಂಘದೊಳಗೆ ಯೋಗಿಯಾಗಿ ಚರಿಸುವರಿಗೆ 2 ಪರಮಪ್ರಿಯರಾಗಿ ಹರಿಗೆ ಪರಮಪ್ರಿಯರೆಂದು ಕರೆಸಿಕೊಳುತ ನರಹರಿಯ ಚರಣ ಮನದಿ ಸ್ಮರಿಸುವರಿಗೆ 3 ಕರ್ಮಗಳನೆ ಕಡಿದು ಜ್ಞಾನ ಧರ್ಮಮಾರ್ಗದಿ ಧರ್ಮತತ್ವ ಬೋಧಿಸಿ ಅ- ಧರ್ಮಗಳನೆ ಬಿಡಿಸುವರಿಗೆ4 ಗೋಪಾಲಕೃಷ್ಣವಿಠ್ಠಲನ ರೂಪ ತೋರುತ ಪಾಪಗಳನೆ ತರಿದು ಭವ ಕೂಪದಿಂದ ಪೊರೆಯುವರಿಗೆ 5
--------------
ಅಂಬಾಬಾಯಿ