ಒಟ್ಟು 171 ಕಡೆಗಳಲ್ಲಿ , 46 ದಾಸರು , 122 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿಹನು ದೇವನೆಂದೆಲ್ಲು ಜನ ನುಡಿವರು ಸಲ್ಲುವುದೆ ಆಲಿಸಲು ಬಲ್ಲಗೀ ನುಡಿಯು ಇಲ್ಲೆಂದು ನುಡಿವರ್ಗೆ ಬಲ್ಲನಿತು ಪೇಳುವೆನು ಪುಲ್ಲನಾಭನ ಚರಿತವಾ ಹಿತವಾ ಪ ಕಲ್ಲಾಗಿ ಬಿದ್ದಿಪ್ಪಹಲ್ಯೆ ತಾ ಬಲ್ಲಳು ಎಲ್ಲ ಜಗ ಪಾವನನ ಸುಳ್ಳೆನ್ನಬಹುದೇ ಅಲ್ಲೆಂದರೀ ನುಡಿಗೆ ಹೊಲ್ಲ ಜಗವ ತುಂಬುವನು ಕಲ್ಲು ಮುಳ್ಳನು ಉದರದಿ ಜವನಿ 1 ತೋರೆಲವೊ ಹರಿಯನೆಂದೊದರಾಡೆ ರಕ್ಕಸನು ಘೋರ ಕಂಭದಿ ತೋರೆ ಹಾರಿ ತಲ್ಹಣವು ಘೋರ ರೂಪವ ತಾಳಿ ನಾರಸಿಂಹಾಖ್ಯದಿ ಚೂರ ಮಾಡಿದವನÀನು ಪರನು 2 ಧsÉೀನಿಪರ ಮನದೊಳಗೆ ಸಾನುರಾಗದಿ ಹರಿಯು ಸ್ಥಾನಗೊಳಿಪನು ಮನಕೆ ಆನಂದವೀವಾ ದಾನವಾಂತಕ ಶ್ರೀ ನರಸಿಂಹವಿಠಲನು ಆನತರ ನೆರೆ ಪೊರೆವನು ಬಿಡನು 3
--------------
ನರಸಿಂಹವಿಠಲರು
ಒಂದಾನೊಂದು ದಿವಸದಲ್ಲಿ ಗುರುವ್ಯಾಸರಾಯರು | ಪ ಅಂದದಿಂದ ಪುರಂದರದಾಸರಿ | ಗಿಂದು ಭೋಜನಕ್ಕೆ ಬನ್ನಿರೆಂದು ಕರೆದರೂ ಅ.ಪ ಪೇಳಿತೆಂದು ದಾಸರು ಪೋಗಿ ತಾವು ನಿರ್ಮಲ ಸ್ನಾನ ಜಪಮಂತ್ರ ಹರಿಪೂಜೆಯನೆ ಮಾಡಿ || ಧಳಥಳಿಸುವ ವಿಠಲನ ದಿವ್ಯ ಪಾದ ಗಳ ಧ್ಯಾನಿಸಿ ಕುಳಿತರು ಜನಗಳೆಲ್ಲ ಕೇಳಿ 1 ವಿಠಲನ ದಿವ್ಯ ಮೂರ್ತಿಯ ಪಾಡಿ ದೃಷ್ಟಿಯಿಂದಲಿ ನೋಡಿ | ಮುಟ್ಟಿ ಮುಂದೊಲಿದು ಕುಣಿಕುಣಿದಾಡಿ || ಥಟ್ಟನೆ ವೇದಕ್ಕೆ ಸಮನಾದ ಪದಗಳು | ನಿಷ್ಠೆಯಿಂದ್ಹೇಳಿ ಅಭೀಷ್ಟವ ಪಡೆದರು2 ಎಡೆಯೊಳು ಷಡ್ರಸದನ್ನವ ನೀಡೆ | ಕಡು ಮಮತೆಗಳಿಂದ | ಬಿಡದೆ ದಾಸರ ದಾರಿಯ ನೋಡಿ || ಯೆಡ ಬಲದಷ್ಟ ದಿವ್ಯದಿಂಡೆಯರೆಲ್ಲಾ | ಕಡೆಯದೆಶೆ ಧರಿಸಿದರು ದಾಸರಾ 3 ಹಗಲು ಒಂಭತ್ತು ತಾಸಾಗಿರಲು | ಆಗೆದ್ದು ಬೇಗ ಗುರುಗಳ ಸಮೀಪಕ್ಕೆ ಬರಲು || ಮುಗಿದು ಕರಯುಗ್ಮವ ಬಗೆ ಬಗೆ ಸ್ತುತಿಸುತಾ | ಜಗದೊಳು ನಾನಪರಾಧಿಯೆಂದರೂ 4 ಭೋಜನವ ಮಾಡಿ ಗುರುಗಳಂದು ಸಿಂಹಾಸನದಲ್ಲಿ | ರಾಜಿಸುತ್ತ ಬಂದು ಕುಳಿತಿರಲಂದೂ || ಆ ಜನದೊಡಗೀ ದಾಸರು ಕರೆಯಲು | ನೈಜಭಾವದಿಂದು ಬಂದು ಕುಳಿತರೂ 5 ಪದಗಳು ಬರದ ವಹಿಯಕೊಂಡು ಪೋಗಿ | ಮಧ್ವಶಾಸ್ತ್ರದ ಮೇಲೆ ಕುಳ್ಳಿರಲಾಗ || ಅದನರಿಯದೆ ದಿಂಡೆಯನೊಬ್ಬನು ಆ | ಪದವಹಿಯ ತೆಗೆದು ಬಿಸುಟನಾಗಾ 6 ಯೆರಡಾವರ್ತಿ ತೆಗೆಯಲು ಆಗ | ತಿರುತಿರುಗಿ ಬಂದು ವರಪುಸ್ತಕದ ಮ್ಯಾಲೆ ಕುಳ್ಳಿರಲಂದೂ || ಗುರು ವ್ಯಾಸರಾಯರು ನೋಡಿ ಹರುಷದಿಂದ | ಕರೆದು ಬೈದರವಗೆ ಕಡು ಮೂರ್ಖನೆಂದೂ 7 ಪದದೊಹಿ ತೆಗೆದು ಬಿಸಾಡಿದರೆ ತಿರುತಿರು ಗ್ಯದರಮ್ಯಾಲೆ ವರನಾಲ್ಕು ವೇದಾರ್ಥದರೊಳಗುಂಟು || ನರರುತ್ತಮರೆಲ್ಲ ನೋಡಿ ಹರುಷದಿಂದ | ಪುರಂದರ ಉಪನಿಷತ್ತೆಂದರೂ 8 ಗುರುರಾಯರು ದಾಸರ ನೋಡಲಾಗ ಭರದಿಂದ ಯೆದ್ದು | ಅರಿವೆಯ ಕೈಯಿಂದೊರಸಲು ಆಗ || ತ್ವರಿತದಿ ಕೇಳಲು ವಿಠಲನ ಗುಡಿಯೊಳು | ಪಡದಗುರಿ ಹತ್ತವು ವರಿಸಿದೆವೆಂದರು 9 ಹಾಗೆಂದು ನುಡಿದಾಕ್ಷಣದಲಿ ಬೇಗ ಶಿಷ್ಯರಿಗೆ | ಹೋಗಿ ನೋಡಿ ಬಾರೆಂದೆನಲಾಗಿ || ಬೇಗದಿಂದಲಿ ಬಂದು ಕೇಳಲು ಅವರು | ಈಗ ದಾಸರು ಬಂದು ಪರಿಹರಿಸಿದರೆಂದು 10 ಆ ಮಾತು ಕೇಳಿದಾಕ್ಷಣದಿ ಬೇಗ | ಪ್ರೇಮದಿ ಬಂದು ಸ್ವಾಮಿರಾಯರಿಗೆ ಪೇಳಲು ಆಗ || ನಾಮವ ಸ್ಮರಿಸುತ ಪ್ರೇಮಾಲಿಂಗನವಿತ್ತು | ಕಾಮಿತಾರ್ಥ ಫಲವೀವ ಕಲ್ಪತರುವೆಂದರೂ 11 ಇಂತು ಅನುಭವ ಮಾತುಗಳನಾಡಿ ಲಕ್ಷ್ಮೀಕಾಂತನ | ಅಂತರಂಗದಲಿ ಅತಿಮಾನವ ಮಾಡಿ || ಮೂರ್ತಿ | ಶಾಂತತ್ವದಿ ನೋಡುತ ಶರಣು ಮಾಡಿದರೂ 12 ಗಜಪುರದಲ್ಲಿ ಇರುವರು ಕೂಡಿ ವಿಜಯವಿಠ್ಠಲನ್ನ | ಭಜನೆಯಿಂದ ದಿನ ದಿನ ಪೊಗಳಿ || ತ್ರಿಜಗದೊಡೆಯ ಗುರು ಪುರಂದರವಿಠಲನ | ನಿಜ ವೈಕುಂಠದ ಮುಕ್ತಿಯೈದಿದರೂ 13
--------------
ವಿಜಯದಾಸ
ಕಂಡೆ ಕಂಡೆನು ಸ್ವಾಮಿಯ ಸುಪ್ರೇಮಿಯಾ ಪ ಕಂಡೆ ಕಂಡೆನು ಕೃಷ್ಣರಾಯನ ಪುಂಡರೀಕ ದಳಾಯತಾಕ್ಷನ ಪಾಂಡವಪ್ರಿಯ ಪಾರ್ಥಸಖನ ಉ ದ್ದಂಡ ಮಹಿಮ ಸುರೇಂದ್ರವಂದ್ಯನ ಅ.ಪ. ಕನಕ ನವಮಣಿ ಖಚಿತ | ವಾಗಿಹ ಸಿಂಹಾ ಸನದೊಳು ಸಲೆ ಶೋಭಿತ | ಸುರುಚಿರ ದಿವ್ಯ ಘನನೀಲನಿಭರಂಜಿತ | ನಿರ್ಮಲಗಾತ್ರ ಕುಂಡಲ ಮಣಿ ಗಣದ ಹಾರಾದಿ ಬಹು ಭೂ ಷಣಗಳನುಪಮ ಕಾಂತಿಯಿಂದಲಿ ಮಿನುಗುವತಿ ಲಾವಣ್ಯ ಮೂರ್ತಿಯ 1 ಕೋಟಿ ಮನ್ಮಥರೂಪನ | ಶ್ರೀಕೃಷ್ಣನ ಹಾಟಕಾಂಬರಧಾರನ | ಕರುಣಾಮಯ ಕಂಬು ಕಂಠನ ಆಟಮಾತ್ರದಿ ಪ್ರಬಲ ದೈತ್ಯ ಮ ಹಾಟವಿಯ ನಿರ್ಧೂಮಗೈದನ ಖೇಟವಾಹನನೆನಿಪ ತ್ರಿಜಗದಿ ಸಾಟಿಯಿಲ್ಲದ ದೇವದೇವನ 2 ಮೆರೆವ ದ್ವಾರಕಾಧೀಶನ | ದ್ರೌಪದಿದೇವಿ ಮೊರೆ ಕೇಳಿ ಸಲಹಿದನ | ಭಜಿಪರ ಅವ ಸರಕೊದಗುವ ದೇವನ | ಶ್ರೀ ಕೃಷ್ಣನ ತರಳತನದಲಿ ಗೋಕುಲದಿ ತಾ ಪರಿಪರಿಯ ಲೀಲೆಗಳ ತೋರಿದ ಪರಮ ಪುರುಷನ ಕರಿಗಿರೀಶನ ಸರಿಯಧಕರಿಲ್ಲದ ಸುರೇಶನ 3
--------------
ವರಾವಾಣಿರಾಮರಾಯದಾಸರು
ಕನ್ನೆ ಪ್ರಾಯದ ಹೆಣ್ಣು ಕಾಣಿರೊ [ಅ ದನ್ನ] ಕಂಡು ಪರಲೋಕ ಸೂರೆಯ ಮಾಡಿರೊ ಪ ಸನ್ನೆಯು ತೋರುವ ಗುರುಗಳಿಗೆರಗೂ ಪ್ರ ಸನ್ನಳಾಗುತ್ತಿಹ ಕಡುಚೆಲ್ವೆಯೀನಮ್ಮಾ ಅ.ಪ ಬ್ರಹ್ಮನ ಮಗನಾಗಿ ಹೇತ್ತಳು ಪರ ಬ್ರಹ್ಮವೆ ತಾನಾಗಿ ನಿಂತಳು ಸಂಹಾರ ಉತ್ಪತ್ತಿ ಪೋಷಕತ್ವದೊಳೊಳ್ಳೆ ಸಿಂಹಾಸನದೊಳಗಿರುತಾಳೆ 1 ಕಾಮಾದಿಗಳನೆಲ್ಲ ನೀಗಿಯೂ ಗುರು ನೇಮದೊಳು ತಲೆ ಬಾಗಿಯೂ ಆ ಮಹಾ ಜ್ಯೋತಿ ಬೆಳಕಿನೊಳಿರುವಾ ಈ ಮಹ ಮೋಕ್ಷಕಾಮಿನಿಯೆಂಬುವ ಕನ್ನೆ 2 ವನಗೂಡುವಂದಾವ ಕಾಣಿರೋ ನಿಮ್ಮ ಮನದೊಳು ನಿಚ್ಚಯ ಮಾಡಿರೋ ಘನಗುರು ತುಲಸೀರಾಮದಾಸನೂ ಅನುಮತಿಕೊಂಡಿಹ ಕಡುಚೇಲ್ವೆ ಯೀನಮ್ಮಾ 3
--------------
ಚನ್ನಪಟ್ಟಣದ ಅಹೋಬಲದಾಸರು
ಕರುಣಾಸಾಗರ ಬಂದೆಯ ಸುದಿನವಿಂದಾನಂದ ಸಂದೋಹನೆವರ ಸಿಂಹಾಸನವೀವೆ ಮಂಡಿಸು ಪದಾಂಭೋಜಂಗಳಂ ಪಾಲಿಸೈಸುರಸಿಂಧೂದಕದಿಂದ ಮುಟ್ಟಿ ತೊಳೆವೆಂ ಹಸ್ತಂಗಳಂ ನೀಡಬೇಕರವಿಂದಾಕ್ಷನೆ ತೋಯವಘ್ರ್ಯವಿದಕೋ ಶ್ರೀ ವೆಂಕಟಾದ್ರೀಶನೇ 1ಮೂರಾವರ್ತಿಯಲಾಚಮಾನಕಿದಕೋ ಕ್ಷೀರಂ ಜಗನ್ನಾಥನೇಸ್ಮೇರಾಸ್ಯಾಂಘ್ರಿ ಕರಂಗಳನ್ನೊರಸುವೆಂ ದಿವ್ಯಂಬರ ಕ್ಷೌಮದಿಂದಾರಿದ್ರ್ಯಾರ್ತಿನಿವಾರಣಾರ್ಥಕೊಲವಿಂ ಮಧ್ವಾಜ್ಯದಧ್ಯಾದಿುಂಪಾರಾವಾರಶಯನ ನಿನ್ನ ಭಜಿಪೆಂ ಶ್ರೀ ವೆಂಕಟಾದ್ರೀಶನೇ 2ಮಧುಪರ್ಕಂ ಮಧುಸೂದನಂಗೆ ನಿನಗೈ ಮತ್ತಾಚಮನೋದಕಂಬುಧರಿಂ ಪೂಜಿಪ ಪಾದಪದ್ಮಯುಗಳಕ್ಕೀ ಪಾದುಕಾಯುಗ್ಮಮಂವಿಧಿುಂದಿತ್ತೆನು ಮೆಟ್ಟಿ ದೇವ ಬಿಜಯಂಗೈ ಮಜ್ಜನಸ್ಥಾನಕಂಸುಧೆಯಂ ನಿರ್ಜರರಿಂಗೆ ಕೊಟ್ಟ ವಿಭುವೇ ಶ್ರೀ ವೆಂಕಟಾದ್ರೀಶನೇ 3ಸ್ನಾನಂ ಶುದ್ಧಜಲಂಗಳಿಂ ದಧಿಮದುಕ್ಷೀರಾಜ್ಯದಿಂ ಶರ್ಕರಾಸ್ನಾನಂ ಪೌರುಷಸೂಕ್ತ ಮಂತ್ರವಿಧಿುಂ ಸ್ನಾನಂ ರಮಾಸೂಕ್ತದಿಂಸ್ನಾನಂ ಸಾಗರ ನಾಲ್ಕರಿಂ ಶ್ರುತಿಗಳಿಂ ವಸ್ತ್ರದ್ವಯಂ ಪಾದುಕಾಶ್ರೀನಾಥಂಗುಪವೀತಯುಗ್ಮವಿದಕೋ ಶ್ರೀ ವೆಂಕಟಾದ್ರೀಶನೇ 4ಶ್ರೀಗಂಧಾಗುರು ಲೇಪನಂ ಮೃಗಮದಂ ಯೋಗೀಂದ್ರ ವಂದ್ಯಾಂಘ್ರಿಯೇಭೋಗದ್ರವ್ಯವಿದೀಗ ಭೂಷಣಚಯಂ ಕಂಠಾಂಗುಲೀಶ್ರೋತ್ರಕುಂಶ್ರೀ ಗೌರೀಪ್ರಿಯಮಿತ್ರ ದಿವ್ಯ ಮಕುಟಂ ಪುಷ್ಪಂಗಳಿಂ ಪೂಜಿಪೆಂಬೇಗಾನಂದವನಿತ್ತು ನಮ್ಮ ಸಲಹೈ ಶ್ರೀ ವೆಂಕಟಾದ್ರೀಶನೇ 5ಓಂ ಬಲಭದ್ರಪ್ರಿಯಾನುಜಾಯ ನಮಃ
--------------
ತಿಮ್ಮಪ್ಪದಾಸರು
ಕಾಯಯ್ಯಾ ಎನ್ನದಯದೀ ಸಿಂಹಾದ್ರೀಶಾ ಪ ಅಖಿಲದೊಳಗೆ ಅತಿ ದುರ್ಜನ ಪ್ರಭೆಯಲಿ ನಿಖಿಳ ಧರ್ಮಗಳಡಗಲು ಕಂಡು ಭಕುತರ ಗೋಸುಗ ಅವತಾರವತಾಳಿ ಪ್ರಕಟಿಸಿದಿಳೆಯೊಳು ಚಿನ್ಮಯನೇ1 ಪರಿ ಸಾಧನದಿಂದಲಿ ದೇಹವ ನಿರುಪಮ ವಜ್ರದಂದದಿ ಮಾಡೀ ಮೆರೆವ ಗೋರಕ್ಷಗ ಬೋದಿಸ್ಯಕಲ್ಪಿತ ಶರೀರವ ಮಾಡಿ ನಿಲಿಸಿದೆಯ್ಯಾ2 ಅನಸೂಯಾ ಜಠರದಲುದ್ಭವಿಸಿ ಅನುದಿನ ಮುನಿ ಮಾನಸಲಿರುವಾ ಅನುಪಮ ಚರಿತನೆ ಮಹಿಪತಿ ನಂದನ ಮನ ದೈವಾಗಿಹೆ ಘನ ಕರುಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಲಕಾಲದಲಿ ಕೇಶವನೆನ್ನಿರೊ ಬಾಲ ಮುಕುಂದ ಮಾಧವನೆನ್ನಿರೊ ಧ್ರುವ ಉದಯಕಾಲದಲಿ ಅನಂತಮಹಿಮನೆನ್ನಿ ಮಧ್ಯಾಹ್ನದಲಿ ಪದ್ಮನಾ¨sನೆನ್ನಿ ಸಂಧ್ಯಾಸಾಯಂಕಾಲದಲಿ ಶ್ರೀಧರನೆನ್ನಿ ಸದಾ ಕಾಲದಲಿ ಶ್ರೀ ಹರಿಯೆನ್ನಿರೊ 1 ಏಳುತ ಮಚ್ಛಾವತಾರ ಅಚ್ಯುತನೆನ್ನಿ ಮಲಗುತ ಶೇಷಶಯನನೆನ್ನಿರೊ ಹೇಳುತ ವಿಷ್ಣುವರಾಹವತಾರನೆನ್ನಿ ಕೇಳುತ ಕೃಷ್ಣಾವತಾರನೆನ್ನಿ 2 ನಡೆಯುತ ಸುಗುಣ ನಿರ್ಗುಣ ಸರ್ವೋತ್ತಮನೆನ್ನಿ ನುಡಿಯುತ ನಾರಯಣನೆನ್ನಿರೊ ಮಾಡುತ ಕೃಷ್ಣನಿರ್ಮಿತ ದಾಮೋದರನೆನ್ನಿ ಕೂಡುತ ಕೂರ್ಮಾವತಾರನೆನ್ನಿ3 ಆಡುತ ಗರುಡವಾಹನ ತ್ರಿವಿಕ್ರಮನೆನ್ನಿ ಬೇಡುತ ಸ್ವಾಮಿ ವಾಮನನೆನ್ನಿರೊ ನೋಡುತ ವಾರಿಜನೇತ್ರ ಪ್ರಸಿದ್ದನೆನ್ನಿ ಪಾಡುತ ಪರಮಾತ್ಮನೆನ್ನಿರೊ 4 ಉದ್ಯೋಗದಲಿ ಸಹಕಾರನಿರುದ್ದನೆನ್ನಿ ಉದರ ಕಾಯದಲಿ ಉಪೇಂದ್ರನೆನ್ನಿ ಮೇದಿನೊಯೊಳು ಹರಿಮಧುಸೂದನನೆನ್ನಿ ಆದಿ ಅಂತಿಮ ಅಧೋಕ್ಷಜನೆನ್ನಿರೊ 5 ಹೃದಯಕಮಲದೊಳು ಹೃಷೀಕೇಶನು ಎನ್ನಿ ಶಬ್ದಜಿಹ್ವೆಲಿ ಜನಾರ್ಧನನೆನ್ನಿರೊ ಬುದ್ಧಿಯಲಿ ಸಿದ್ಧಬೌದ್ದಾವತಾರನೆನ್ನಿ ಅದಿಅನಾದಿ ಗೋವಿಂದನೆನ್ನಿ 6 ಅನುದಿನ ಮನದೊಳು ಘನಮಹಿಮನು ಎನ್ನಿ ತನುವಿನೊಳು ಪುರುಷೋತ್ತಮ ನಾನೆನ್ನಿ ಅನ್ನವುದಕ ಸೇವಿಸುವ ಹರಿಭೋಕ್ತನೆನ್ನಿ ಘನಭೂಷಣದಿ ಸಂಕರುಷಣನೆನ್ನಿ 7 ಸತಿಪತಿ ಸಂಯೋಗದಲಿ ಪ್ರದ್ಯುಮ್ನನೆನ್ನಿ ಪತಿತಪಾವನ ಪರಬ್ರಹ್ಮನೆನ್ನಿ ಭಕ್ತವತ್ಸಲ ನರಸಿಂಹಾವತಾರನೆನ್ನಿ ಮುಕ್ತಿದಾಯಕ ದೇವೋತ್ತಮನೆನ್ನಿರೊ 8 ಪಾವನಮೂರುತಿ ಪರಶುರಾಮನೆನ್ನಿ ಜೀವಸಂಜೀವ ಶ್ರೀ ರಾಮನೆನ್ನಿ ಭವಭಯನಾಶ ಕಲ್ಕ್ಯಾವತಾರನೆನ್ನಿ ಮಹಿಪತಿಗುರು ವಾಸುದೇವನೆನ್ನಿ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೊಡು ಕಂಡ್ಯಾ ಹರಿಯೇ | ಶ್ರೀಪತಿ ಉತ್ತಮರ ಸಂಗತಿಯಲೆನ್ನಯಿಟ್ಟು ಪ ಬಂದು ಕುಳ್ಳಿರುವಲ್ಲಿ ಸಿಂಹಾಸನನಾಗುವೆನು | ನಿಂದಲ್ಲಿ ಮೆಟ್ಟುವ ಹಾವಿಗೆಯಾಗುವೆ | ಮಿಂದ ಬಚ್ಚಲಿಗೆ ಹಚ್ಚಿದ ಶಿಲೆಯಾಗುವೆ | ಗಂಧವಾಗುವೆ ನಿನ್ನ ಅಂಗಾಲಿಗೆ 1 ಉಂಬಲ್ಲಿ ಬಿದ್ದ ಎಂಜಲ ತಿಂದು ಬದುಕುವೆ | ಕರವ ತೊಳಿವೆ | ಅಂಬುಜ ಕುಸುಮವಾಗಿ ಹಾಸಿಕೆಯಾಗುವೆ ಬಾಯ | ದೊಂಬಲಿಗೆ ಕರವಡ್ಡಿ ಛಲ ಹೊರುವೆ2 ಪವಡಿಸುವ ಮನೆಯೊಳಗೆ ಸೂಜ್ಯೋತಿಯಾಗುವೆ | ಸಿರಿ ವಿಜಯವಿಠ್ಠಲ | ಜವನ ದೂತರನೊದದು ಸುಶುಚಿಯಾಗುವೆ3
--------------
ವಿಜಯದಾಸ
ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲು ಶ್ರೀಹರಿಯ ಬಲಗೊಂಬೆ ಕೋಲೆ ಧ್ರುವ ನಿಗಮ ಚೋರ ರಾಕ್ಷಸನ ಕೊಂದು ರಕ್ಷಿಸಿ ವೇದವನುಳುಹಿದ ಕೋಲೆ ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು ಮಚ್ಛಾವತಾರನ ಬಲಗೊಂಬೆ ಕೋಲೆ 1 ಧರ್ಮ ನಡೆಯಲಾಗಿ ವರ್ಮವ ತಾಳಿದ ಕರ್ಮಹರ ಶ್ರೀ ಮೂರ್ತಿಯ ಕೋಲೆ ಕರ್ಮಹರ ಶ್ರೀಮೂರ್ತಿಯ ಧರೆಯ ಪೊತ್ತ ಕೂರ್ಮಾವತಾರನ ಬಲಗೊಂಬೆ ಕೋಲೆ 2 ಧರೆಯ ಕದ್ದಸುರನ ಕೋರೆದಾಡಿಂದ ಸೀಳಿ ಹೋರಿ ಹೊಯ್ದಾಡಿದ ನರಹರಿ ಕೋಲೆ ಹೋರಿ ಹೊಯ್ದಾಡಿದ ನರಹರಿ ಧರೆಯ ಗೆದ್ದ ವರಹಾವತಾರನ ಬಲಗೊಂಬೆ ಕೋಲೆ3 ದುರುಳ ದೈತ್ಯನ ಕೊಂದು ಕರುಳು ವನಮಾಲೆಯ ಧರಿಸಿದ ಕೋಲೆ ಕರುಳು ವನಮಾಲೆಯ ಧರಿಸಿದಾ ಹರಿ ನರಸಿಂಹಾವತಾರನ ಬಲಗೊಂಬೆ ಕೋಲೆ 4 ಪಾದ ಭೂಮಿಯ ಬೇಡಿ ಹೆಮ್ಮೆಯ ತಾ ಪರಿಹರಿಸಿದ ಕೋಲೆ ಹೆಮ್ಮೆಯ ತಾ ಪರಿಹರಿಸಿದ ಬ್ರಾಹ್ಮಣನಾಗಿ ವಾಮನಾವತಾರನ ಬಲಗೊಂಗೆ ಕೋಲೆ 5 ಆಜ್ಞೆಯ ಮೀರದೆ ಅಗ್ರಜಳ ಶಿರ ಶೀಘ್ರದಿಂದಲಿ ಇಳುಹಿದ ಕೋಲೆ ಶೀಘ್ರದಿಂದಲೆ ಇಳುಹಿದ ಶಿರವನು ಭಾರ್ಗವ ರಾಮನ ಬಲಗೊಂಬೆ ಕೋಲೆ 6 ಕಾಮದಿ ಸೀತೆಯನೊಯ್ದ ತಾಮಸದವನ ಕೊಂದು ನೇಮ ಸ್ಥಾಪಿಸಿದ ಇಳೆಯೊಳು ಕೋಲೆ ನೇಮ ಸ್ಥಾಪಿಸಿದ ಇಳೆಯೊಳು ರಾಮಾವತಾರನ ಬಲಗೊಂಬೆ ಕೋಲೆ 7 ದುಷ್ಟ ದೈತ್ಯರನೆಲ್ಲ ಕುಟ್ಟಿ ಮಡುಹಿದ ನೆಟ್ಟನೆ ಗಿರಿಯನೆತ್ತಿದ ಕೋಲೆ ನೆಟ್ಟನೆ ಗಿರಿಯನೆತ್ತಿದ ಬೊಟ್ಟಿಲೆ ಕೃಷ್ಣಾವತಾರನ ಬಲಗೊಂಬೆ ಕೋಲೆ 8 ಕದ್ದು ತ್ರಿಪುರವ ಪೊಕ್ಕು ಇದ್ದ ಸತಿಯರ ವ್ರತ ಸಿದ್ದಿಯ ತಾನು ಅಳಿದನು ಕೋಲೆ ಸಿದ್ದಿಯ ತಾನು ಅಳಿದನು ಬುದ್ದಿಯಲಿ ಭೌದ್ದಾವತಾರನ ಬಲಗೊಂಬೆ ಕೋಲೆ 9 ಮಲ್ಲ ಮಾನ್ಯರನೆಲ್ಲ ಹಲ್ಲು ಮುರಿಯಲಾಗಿ ನಲ್ಲ ತೇಜಿಯನೇರಿದ ಕೋಲೆ ನಲ್ಲ ತೇಜಿಯ ನೇರಿದ ಬಲ್ಲಿಹನಾಗಿ ಕಲ್ಕ್ಯಾವತಾರನ ಬಲಗೊಂಬೆ ಕೋಲೆ 10 ವಸ್ತು ಪರಾತ್ಪರ ವಿಸ್ತಾರ ತೋರಲಾಗಿ ಹತ್ತಾವತಾರ ಧರಿಸಿದ ಕೋಲೆ ಹತ್ತಾವತಾರ ಧರಿಸಿದ ಮಹಿಪತಿಯ ಅಂತರಾತ್ಮನ ಬಲಗೊಂಬೆ ಕೋಲೆ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುಂಜಾ ನರಸಿಂಹಾ-ಪಾಹಿ ಮಾಂ ಪಾಹಿ ಪ ಅಜಭವ ಫÀಣಿ ದ್ವಿಜರಾಜ ಸುಪೂಜಿತ ತ್ರಿಜಗದೊಡೆಯ ನರಹರಿಯೆ-ದುರಿತ ಹರಾ ಅ.ಪ ಪಟುತರ ಭಾಧೆ ಸಂಕಟಪಡುತಲಿ ಸುರ- ಕಟಕ ನುತಿಸಿ ಕೋಟಿತಟಿತ್ಕಾಯನೆ ಕೋಟಿ ಖಳರೆದೆ ಕುಟ್ಟಿ ಯಮಪುರ ಕಟ್ಟಿ ದಿಟ್ಟತನದಲಿ ನಿಶಾಚರನಳುಹಿದ 1 ಸಿಡಿಲೋಪಮ ಘುಡು ಘುಡಿಸುತ ಕಿಡಿಯ ಕಡೆಗಣ್ಣಿಂದಲಡಿಗಡಿಗುಗುಳುತ ಕೂಡಿನಖಗಳ ನೀಡಿಶಿರವನ- ಲ್ಲಾಡಿಸಿ ಜಡಜಂಗಮರ ನಡುಕ ಬಿಡಿಸಿದೆಯೊ2 ಅಡಿಗಡಿಗೆಡರನು ಪಡುತಿಹ ಹುಡುಗನ ದೃಢತರ ಭಕುತಿಯ ನುಡಿಯುನು ಕೆÉೀಳುತ ನೋಡಿ ಅಭಯವ ನೀಡಿ ನೀ ದಯ ಮಾಡಿ ಬಿಡುಗಣ್ಣರನು ಬಿಡದೆ ಸಲಹಿದೆಯೊ 3 ಕೇಳಿ-ಹರುಷವ ತಾಳಿ-ದನುಜರ ಧೂಳೀಪಟಮಾಡಿ ನಲಿದು ನಿಂದಾಡಿದೆ 4 ಸಿಂಧುಶಯನ ಭವಬಂಧವಿಮೋಚಕ ಇಂದಿರೆಯರಸ ಶ್ರೀ ವೇಂಕಟೇಶ ನೀ ಬಂದೂ ಸ್ತಂಭದಿ ನಿಂದೂ ಭಕುತರ ಬಂಧೂ ಸುರವೃಂದಕೆ ಆನಂದವ ನೀಡಿದ 5 ಕಡಲುಗಳೇಳಡಿಗಡಿಗುಕ್ಕುತ ಪಥ ತಪ್ಪಿ ಬೀಳುತಲಿರೆ ದಾಡಿ ಕುಣಿದಾಡೀ ಸ್ಮಶ್ರುಗಳ ತೀಡಿ ಬಡಬಾನಲಲ್ಲಾಡಿಸಿ ನಿಂದ 6 ಪರಿಪರಿ ಸುರರವಯವಗಳನು ಧರಿಸಿ ಉರುತರ ಕ್ರೀಡೆಯ ಮಾಡಿ ಪ್ರಳಯದಿ ತೋರಿ ಧಿಕ್ಕರಿಸಿ ತಾಳಿ ಹರುಷದಿ ಕೇಳಿಯೊಳು ಉರಗಾದ್ರಿವಾಸವಿಠಲ ನೀ ನಿಂದೆಯೊ 7
--------------
ಉರಗಾದ್ರಿವಾಸವಿಠಲದಾಸರು
ಚಾಮುಂಡೇಶ್ವರಿ ಚಾಮೇಂದ್ರನೃಪನನ್ನು ಪ್ರೇಮದಿಂ ರಕ್ಷಿಸಮ್ಮ ಪ ಜೀಮೂತಶ್ಯಾಮಳೆ ಕೋಮಲಶುಭಗಾತ್ರೆ ಕಾಮಿತ ಫಲದಾಯಕಿ ಕಲ್ಯಾಣಿ ಅ.ಪ. ನಿನ್ನ ಸನ್ನಿಧಿಗೆ ನಾ ಬಂದು ಪ್ರಾರ್ಥಿಸೆ ಪ್ರ ಸನ್ನಳಾಗಿ ನೃಪನ ರನ್ನದ ಸಿಂಹಾಸನವೇರಿಸಿ ಎನ ಗುನ್ನತೋನ್ನತವಾದಾನಂದವನಿತ್ತೆ 1 ಆಯುರಾರೋಗ್ಯ ರಾಜೈಶ್ವರ್ಯ ಪುತ್ರರಿಂ ದಾನಂದವನೈದಿ ನಾಯಕಮಣಿಯಂದದಿಂ ನರನಾಥರ್ಗೆ ನಾಥನಾಗಿ ನಲಿಯುತ್ತಲಿರಲಿ ಸದಾ2 ಗಿರಿಯೊಳುತ್ತಮ ಮಹಾಬಲಗಿರಿಯೊಳು ನಿಂದು ಕರುಣಾರಸವೆರಸಿ ಪೊರೆವೆ ನಾರಾಯಣದಾಸನ ಬಿನ್ನಪವ ತಿರುಪತೀಶನ ಸೋದರಿ ಶುಭವರ್ಧಿನಿ 3
--------------
ನಾರಾಯಣದಾಸರು
ಚಾಮುಂಡೇಶ್ವರಿ ಚಾಮೇಂದ್ರನೃಪನನ್ನುಪ್ರೇಮದಿಂ ರಕ್ಷಿಸಮ್ಮ ಪಜೀಮೂತಶ್ಯಾಮಳೆ ಕೋಮಲಶುಭಗಾತ್ರೆಕಾ'ುತ ಫಲದಾಯಕಿ ಕಲ್ಯಾಣಿ ಅ.ಪ.ನಿನ್ನ ಸನ್ನಿಧಿಗೆ ನಾ ಬಂದು ಪ್ರಾರ್ಥಿಸೆ ಪ್ರಸನ್ನಳಾಗಿ ನೃಪನರನ್ನದ ಸಿಂಹಾಸನವೇರಿಸಿ ಎನಗುನ್ನತೋನ್ನತವಾದಾನಂದವನಿತ್ತೆ 1ಆಯುರಾರೋಗ್ಯ ರಾಜೈಶ್ವರ್ಯ ಪುತ್ರರಿಂದಾನಂದವನೈದಿನಾಯಕಮಣಿಯಂದದಿಂ ನರನಾಥರ್ಗೆನಾಥನಾಗಿ ನಲಿಯುತ್ತಲಿರಲಿ ಸದಾ 2ಗಿರಿಯೊಳುತ್ತಮ ಮಹಾಬಲಗಿರಿಯೊಳು ನಿಂದುಕರುಣಾರಸವೆರಸಿಪೊರೆವೆ ನಾರಾಯಣದಾಸನ ಬಿನ್ನಪವತಿರುಪತೀಶನ ಸೋದರಿ ಶುಭವರ್ಧಿನಿ 3
--------------
ನಾರಾಯಣದಾಸರು
ಚಾಮುಂಡೇಶ್ವರಿ ಪಾಲಿಸು ಬೇಗದಿಂಚಾಮರಾಜೇಂದ್ರ ನೃಪನ ಪಪ್ರೇಮದಿಂ ರಾಜ್ಯಾಭಿಷೇಕವ ಮಾಡಿಸಿಈ ಮ'ಯನ್ನೀತನಿಂದಾಳಿಸು ತಾಯೆ ಅ.ಪನವರಾತ್ರಿಯು ಬಂತೆನ್ನುತ ಜನಗಳುತವಕಿಸುತಿಹರಮ್ಮಅವನೀಶಾಧಿಪನ ಸಿಂಹಾಸನವೇರಿಸಿನವರಾತ್ರಿಯುತ್ಸವವಂ ಮಾಡಿಸು ತಾಯೆ 1ಈ ಪಟ್ಟಣಕಭಿಮಾನಿ ನೀನಿರೆ ಜನತಾಪ ಪಡುವುದುಂಟೆಪಾಪ ಕೃತ್ಯಂಗಳ ಮಾಳ್ಪರ ಪರಿದು ನೀತಾಪವಳಿದು ತಂಪಿಸಿ ಜನವನು ಪೊರೆಯೆ 2ಧರೆಯೊಳುತ್ತಮ ಮಹಾಬಲಗಿರಿವಾಸಿನಿಗುರು ವಾಸುದೇವ ರೂಪಿಣಿಕರುಣದಿಂ ನಾರಾಯಣದಾಸನ ಮನಕೆಹರುಷವ ಕೊಡು ವೆಂಕಟಪತಿ ಸೋದರಿ3
--------------
ನಾರಾಯಣದಾಸರು
ಚೌತಿಯ ದಿವಸ ರಂಭೆ : ವಾರಿಜಗಂಧಿನಿ ನೋಡಿತ್ತ ಶ್ರುತಿ- ಮೌರಿ ರಭಸದಿ ಲಕ್ಷ್ಮೀಕಾಂತ ಭೂರಿ ವೈಭವದಿ ಪೊರಟನೆತ್ತ ಯಾವ ಕಾರಣವೆಂದು ಪೇಳೆಲೆ ಸತ್ಯ 1 ಊರ್ವಶಿ : ದೇವಿ ಕೇಳೆಲೆ ಸುಮ್ಮಾನದಿಂದ ಕುಲ- ದೇವರ ಪೂಜೆಗೋಸುಗ ಬಂದ ಪಾವನಮೂರ್ತಿಯಾದುದರಿಂದ ನಮ್ಮ ಕಾವನು ಕರುಣಾಕಟಾಕ್ಷದಿಂದ2 ರಂಭೆ : ನೂತನವಾಯ್ತೆ ಕೇಳಲೆ ಜಾಣೆ ಜಗ- ನ್ನಾಥನಿಗ್ಯಾವ ಕುಲವು ಕಾಣೆ ರೀತಿಯನರುಹಬೇಕೆಲೆ ಬಾಲೆ ಸರ್ವ ಚೇತನಾತ್ಮನ ನಾಟಕದ ಲೀಲೆ3 ಊರ್ವಶಿ : ಪಾಂಡವರಾಯುಧಗಳನ್ನೆಲ್ಲ ಪೊತ್ತು- ಕೊಂಡ ಕಾರಣದಿ ಪೂಜೆಗಳೆಲ್ಲ ಕಂಡು ಪೊಗಳಲು ಕವಿಗು ಸಲ್ಲ ಇನ್ನು ಪುಂಡರೀಕಾಕ್ಷನವನೆ ಬಲ್ಲ4 ರಂಭೆ : ರಾಜವದನೆ ಪೂಜೆಯಾದ ಮೇಲೆ ಅಂ- ಭೋಜನಾಭನು ತಾಕ್ಷ್ರ್ಯನ ಮೇಲೆ ರಾಜಬೀದಿಯೊಳ್ ಬರುವದೇನೆ ಇಂಥ ಸೋಜಿಗವೇನು ಪೇಳೆಲೆ ಜಾಣೆ5 ಊರ್ವಶಿ : ಪಟಹ ಡಿಂಡಿಮವಾದ್ಯರವದಿಂದ ತಂ- ಬಟೆನಿಸ್ಸಾಳರವದಿ ಬರುವ ಚಂದ ಸಟೆಯಲ್ಲ ಕೇಳು ಕರುಣದಿಂದ ನಮ್ಮ ಕಟಕ ರಕ್ಷಿಸಲು ಬರುವ ಗೋವಿಂದ6 ರಂಭೆ : ಬಳಿಕ ಪಲ್ಲಂಕಿಯೇರಿದ ಕಾಣೆ ಜನ- ಗಲಭೆಗಳಿಂದ ಪೋಗುವದೇನೆ ನಲವಿನಿಂದಲಿ ಪೊರಟೆಲ್ಲಿಗೆನೆ ಮಹಾ- ಜಲಜನಾಭನ ಮಹಿಮೆಯ ಜಾಣೆ7 ಊರ್ವಶಿ :ಚಾಪಲನೇತ್ರೆ ಚೌತಿದಿನದಿ ಕೆರೆ- ದೀಪವೆಂದೆನುತ ಭಕ್ತರು ಮುದದಿ ಶ್ರೀಪರಮಾತ್ಮ ವಿಲಾಸದಿ ಭಕ್ತ- ರಾಪೇಕ್ಷೆಗಳನು ಸಲ್ಲಿಸುವಂದದಿ8 ರಂಭೆ : ಸೋಮಾರ್ಕಜ್ಯೋತಿಹಿಲಾಲುಗಳು ಜನ- ಸ್ತೋಮ ಜೇನುಂಡೆ ಬಿರುಸು ಮಿಗಿಲು ವ್ಯೋಮಕೇಶಗಳ ಪೊಗಳತೀರದು ಸರಿ ಭೂಮಿಯೊಳ್ ಕಾಣೆನೆಂಬಂತಾದುದು9 ಅಮಮ ಇದೇನೆ ಇಂದಿನ ಲೀಲೆ ಜನ- ರಮರಿಕೊಂಡಿಹರೇನಿದು ಬಾಲೆ ಸಮವಿಲ್ಲ ಇಂತೀ ವೈಭೋಗಕ್ಕೆಲೆ ನ- ಮ್ಮಮರಾವತಿಗಿಂತಧಿಕ ಬಾಲೆ10 ಊರ್ವಶಿ : ಸಾರ್ಥಕಾಗುವದು ಜನ್ಮವು ಕಾಣೆ ಸಕ- ಲಾರ್ತಿ ಹರಣವಾಗ್ವದು ಜಾಣೆ ಕೀರ್ತಿತರಂಗಮಾಗಿಹುದೇನೆ ಶೇಷ- ತೀರ್ಥವೆಂದರೆ ಕೇಳಿದು ಪ್ರವೀಣೆ11 ರಂಭೆ : ಏಸು ದೊಡ್ಡಿತೆ ಕೇಳಲೆ ಬಾಲೆ ಅನಂ- ತಾಸನದಂತೆ ಮರೆವುದಲ್ಲೇ ನಾಸಿರ ದೀಪಸೋಪಾನದಲೆ ಮಹಾ- ಶೇಷನಿಹನು ಮಧ್ಯದೊಳಿಲ್ಲೇ12 ಊರ್ವಶಿ : ಕರುಣಾಕರನು ನಮ್ಮೆಲ್ಲರನು ನಿತ್ಯ ಪೊರೆಯಲೋಸುಗ ಬಂದನು ತಾನು ಸುರುಚಿರ ಮಂಟಪವೇರಿದನು ಭೂ- ಸುರರಿಂದ ವೇದಘೋಷವ ಕೇಳ್ವನು13 ದೃಷ್ಟಾಂತವಾಗಿ ಪೇಳುವದೇನೆ ಬ್ರಹ್ಮ ಸೃಷ್ಟಿಗೆ ಪೊಸತಾಗಿಹುದು ಕಾಣೆ ಕಟ್ಟಿಸಿದವನು ಪುಣ್ಯೋತ್ತಮನು ಪರ- ಮೇಷ್ಠಿ ಜನಕನ ಕೃಪೆಯಿನ್ನೇನು14 ಭಜಕರ ಮುಖದಿಂದೆಲ್ಲ ತಾನು ಭೂ- ಭುಜನಾಗಿ ನಡೆಸುವನಿದನೆಲ್ಲನು ನಿತ್ಯ ಸಾಕಾರವನು ತೋರಿ ತ್ರಿಜಗವನೆಲ್ಲ ರಕ್ಷಿಸುತಿಹನು15 ರಂಭೆ : ಬಿಡದೆ ಇನ್ನೊಂದು ಕೇಳುವೆ ನಾರಿ ಜಗ- ದೊಡೆಯ ಪೊರಡುವ ಕಾಲದಿ ಭಾರಿ ಬೆಡಿಖಂಬ ಧ್ವನಿಯು ಇದೇನೆ ಪೇಳೆ ಇಂಥ ಕಡು ಬೆಡಗನು ಉಸುರೆಲೆ ಬಾಲೆ16 ಊರ್ವಶಿ: ಜನರು ಎಲ್ಯಾದರಂಜಿದÀ ಭಯವ ತಮ್ಮ ತನುವಿಗೆ ಸೋಂಕಲದನೆಲ್ಲವ ಮನದಿ ಝುಮ್ಮೆನಿಸಿ ಬೆಚ್ಚೋಡಿಸುವ ಖಂಬ- ಧ್ವನಿಯೆಸಗಿದರು ಕೇಳಿದರಂದವ17 ತಿರುಗಿಯೇರಿದನು ಪಲ್ಲಂಕಿಯಲ್ಲಿ ಸುತ್ತು- ಬರುವನು ವೇದನಿನಾದದಲಿ ವರರತ್ನ ಖಚಿತ ಮಂಟಪದಲ್ಲಿ ನಿಂತ ನಿರವದಿ ಸುಖದಾಯಕನಲ್ಲಿ18 ಶರಣರ ಪಾಪ ಮನಕೆ ತಾರ ದುಡಿದ ವರ ಭೇರಿಗೆರೆವ ಬಿಸಿನೀರ ವರಲಕ್ಷ್ಮೀನಾರಾಯಣಧೀರ ಸುರು- ಚಿರ ಸಿಂಹಾಸನವೇರಿದ ವೀರ19
--------------
ತುಪಾಕಿ ವೆಂಕಟರಮಣಾಚಾರ್ಯ
ಜನ್ಮ ಸಫಲ ಕಾಣಿರೋ ನಮ್ಮ ಗುರು ವಾದಿರಾಜರಾಯರ ಕಂಡು ಜನ್ಮ ಸಫಲ ಕಾಣಿರೋ ಪ ಯುಕ್ತಿ ಮಲ್ಲಿಕೆಯೆಂಬ ಗ್ರಂಥ ಮಾಡಿಹರು ಮತ್ತೆ ಮುತ್ತಿನ ಸಿಂಹಾಸನವನೇರಿಹರು ಮತ್ತೆ ದುರ್ವಾದೀಭಗಳಿಗೆ ಮೃಗೇಂದ್ರರು ಸೂತ್ರನಾಮದಿ ಮುಂದೆ ಮೆರೆವರು 1 ದಾಸಕೂಟಗಳಲ್ಲಿ ರತ್ನದಂತಿಹರು ಭಾಸುರಕಾಯದಿ ನೂರ ಇಪ್ಪತ್ತು ವರ್ಷಗಳೊಳಗಿದ್ದು ಮೆರೆದವರು 2 ಮೂಜಗದೊಳಗಿಂಥ ಗುರುಗಳೆಲ್ಲಿಹರು ಕಂಜಸುತನ ಪದವೇರುವವರು ರಾಜೇಶ ಹಯಮುಖ ಕಿಂಕರಾಗ್ರಣಿಗಳು ರಾಜಿಪ ಶ್ರೀಸೋದಾಪುರದೊಳಗಿಹರು 3
--------------
ವಿಶ್ವೇಂದ್ರತೀರ್ಥ