ಒಟ್ಟು 86 ಕಡೆಗಳಲ್ಲಿ , 38 ದಾಸರು , 78 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗೆ ನಿಮ್ಮ ಪದ ಕಾಂಬೆನೊ | ಗುರು ಎಂದಿಗೆ ನಿಮ್ಮ ಪದ ಕಾಂಬೆನೊ ಪ. ಎಂದಿಗೆ ನಿಮ್ಮ ಕಾಂಬೆ ಅಂದಿಗೆ ಮುಕ್ತಳಹೆ ಅ.ಪ. ಸಕಲ ಶಾಸ್ತ್ರಗಳನೆ ಶೋಧಿಸಿ | ಬಹು ಅಕಳಂಕ ತತ್ವವ ಸಾಧಿಸಿ | ಬೇಗ ಮುಕುತಿ ಯೋಗ್ಯರಿಗೆಲ್ಲ ಸುಖವ ತೋರುವ ಗುರು 1 ಮನದಿ ನೆಲಸಿ ಲೀಲೆ ತೋರುತ | ದೃಢ ಮನದಿ ಮನಸಿಜನ ಗೆಲ್ಲುತ | ದೇವ ಮನಸಿಜನಯ್ಯನ ಮನಸಿನೊಳ್ ತೋರುತ 2 ಕಷ್ಟಪಡುವುದು ಕಾಣುತ | ಬಹು ತುಷ್ಟರಾಗಿ ಅಭಯ ನೀಡುತ | ಮನ ಮುಟ್ಟಿ ರಕ್ಷಿಪೆನೆಂದು ಇಷ್ಟು ಸಲಿಪ ಗುರು 3 ನರಹರಿ ಧ್ಯಾನಿಪ ಶ್ರೀ ಗುರು | ಬಹು ಕರುಣಾಳುವೆ ದೇವತರು | ನಿಮ್ಮ ಅರಘಳಿಗೆ ಬಿಟ್ಟು ಇರಲಾರೆ ಧರೆಯೊಳು 4 ಮುಕ್ತಿ ಸೌಭಾಗ್ಯವ ನೀಡುವ | ಬಹು ಶಕ್ತರಹುದು ನಿಮ್ಮ ಭಾವವ | ನಾನು ಎತ್ತ ಯೋಚಿಸೆ ಕಾಣೆ ಸತ್ಯವಚನವಿದು 5 ಆನಂದಪಡಿಸುವ ಶ್ರೀ ಗುರು | ನಿಮ್ಮ ಏನೆಂದು ಸ್ತುತಿಹಲಿ ಪಾಮರರು | ನಿಮ್ಮ ಕಾಣರು ಜಗದಲಿ ಏನೆಂಬೆ ಮಹಿಮೆಯ 6 ಗೋಪಾಲಕೃಷ್ಣವಿಠ್ಠಲನ | ಶುಭ ರೂಪವ ತೋರುವ ಕಾರುಣ್ಯ | ದೇವ ಪರಿ ನಿಮ್ಮ ಸ್ತುತಿಸಿ ನಾ ಪಾರು ಕಾಂಬೆನು 7
--------------
ಅಂಬಾಬಾಯಿ
ಏತಕೆ ನೀ ಚಿಂತಿಸುವೆ ಹೇಡಿ ಜೀವವೇ ಪ ವೀತಮೋಹರಾಗನಾಗಿ ವಿಧಿಪಿತ ದಾತತಾನೆಂದು ತಿಳಿಯಲು ಹೃತ್ತಾಪನಾಶನಾ ಅ.ಪ ಹೊನ್ನು ಹೆಣ್ಣು ಮಣ್ಣು ಮೂರು ನಂಬಬ್ಯಾಡಲೊ ನಿನ್ನೊಳಿರುವ ಮೂರ್ತಿಯನ್ನು ಅರಿತು ಬಾಳೆಲೊ 1 ವಂದಿಸುತ ಸಜ್ಜನರ ಕಂಡರಾನಂದ ಪೊಂದುತ ಸಂದೇಹಗಳೆಲ್ಲ ತೊರೆದು ಸತತ ನಲಿಯುತ 2 ಆತ್ಮವತ್ ಸರ್ವಭೂತನೆಂಬೊ ವಚನವು ಆತ್ಮನಲ್ಲಿ ಸಮರ್ಪಿಸಿದರೆ ಪಡೆವೆ ಸೌಖ್ಯವು 3 ಸಾಮಜೇಂದ್ರ ವರದ ಶ್ರೀ ಗುರುರಾಮವಿಠಲನ ಪ್ರೇಮದಿಂ ನಿಷ್ಕಾಮನಾಗಿ ಸೇವಿಸುನುದಿನ 4
--------------
ಗುರುರಾಮವಿಠಲ
ಕರುಣಾಸಾಗರ ದೀನೋದ್ಧಾರಣ ಎನ್ನನು ಕಾಯ್ವ ಪರಿಯ ಚಿಂತಿಸಿ ರಕ್ಷಿಸೊ ಪರಮ ಪಾವನ ನಾಮಸ್ಮರಣೆಯಲ್ಲದೆ ಕರ್ಮ ಚರಣರಹಿತ ಪಾಪಕರನಾಬ್ಧಿಪತಿತನ ಪ. ವರ್ಣಾಶ್ರಮಾಚಾರ ಕರ್ಮಕೃತ್ಯವ ನೀಗಿ ನಿರ್ಮಲಚಿತ್ತದಿ ನಿನ್ನ ಪೂಜಿಸದೆ ವರ್ಮವಿಡಿದು ವರ ದ್ರೋಹ ಚಿಂತೆಗಳಿಂದ ಧರ್ಮಮಾರ್ಗವ ದೂರದಲಿ ತ್ಯಜಿಸಿ ನಿರ್ಮಲಾಂತ:ಕರಣ ನಿಜಕುಲ ಧರ್ಮರತ ಸಜ್ಜನರ ದೂಷಿಸಿ ದುರ್ಮದಾಂಧರ ಸೇರಿ ಕೂಪದ ಕೂರ್ಮನಂದದಿ ಬರಿದೆ ಗರ್ವಿಪೆ 1 ನೇತ್ರ ದರ್ಶನಕೆ ಸಂಸ್ಮರಕೆ ಜಿಹ್ವೆಯ ಗಾತ್ರ ಸೇವೆಗೆ ನೈರ್ಮಲ್ಯಕೆ ಶಿರವ ಶ್ರೋತ್ರವ ಮಾಹಾತ್ಮ ಶ್ರವಣಕೆ ಪಾದಗಳ ಕ್ಷೇತ್ರಯಾತ್ರೆಗೆ ಕರಗಳ ಪೂಜಾವಿಧಿಗೆ ಇತ್ತ ದೊರೆಯನು ಮರೆತು ಇಂದ್ರಿಯ ವೃತ್ತಿಗಳ ಸ್ವೈರಿಣಿಯ ದರುಶನ ಭುಕ್ತಿ ಚುಂಬನ ಧ್ಯಾನ ದುಷ್ಟ ಕಥಾ ಶ್ರವಣಸಲ್ಲಾಪಕಿತ್ತೆನು 2 ಪತಿತ ಪಾವನ ನೀನು ಪತಿತಾಗ್ರೇಸರ ನಾನು ಅತಿಶಯಿತನು ನೀನು ಅತಿನೀಚನು ನಾನು ಗತಿಹೀನ ಜನಕ ಸದ್ಗತಿಯೆಂಬ ಬಿರುದುಳ್ಳ ಮಿತಚಿತ್ರ ಚರಿತಾತ್ಯದ್ಘುತರೂಪ ಗುಣಪೂರ್ಣ ಪಶುಪತಿ ಸುರೇಶ ಪ್ರ- ಭೃತಿ ದಿವಿಜಗಣ ಸುತ ಪದಾಂಬುಜ ಕ್ಷಿತಿಜಲಾಗ್ನಿ ಮರುನ್ನಭೋಹಂ ಕೃತಿ ಮಹ ಸುಖತತಿನಿಯಮಕ 3 ಕರಿರಾಜ ಧ್ರುವಾಕ್ರೂರನರ ವಿಭೀಷಣ ನಾರದರು ಮೊದಲಾಗಿ ನಿನ್ನನುದಿನವು ಸ್ಮರಿಸಿ ಪೂಜಿಸಿ ಮನವೊಲಿಸಿದವರನ್ನು ಪರಿಪಾಲಿಸಿದನೆಂಬೊ ಗರುವದಿಂದ ನಿರುಪಮಾನಂದೈಕ ಸದ್ಗುಣ ಭರಿತರೆಂಬುದ ಹೆಮ್ಮೆಯಿಂದಲಿ ಮರೆತರೆನ್ನನು ಪರಮಕರುಣಾ ಶರಧಿಯೆಂದ್ಹೆಸರಿರುವುದೇತಕೆ 4 ನಾ ನಿನ್ನ ಮರೆತರು ನೀ ಎನ್ನ ಮರೆದರೆ ಹಾನಿಯಾಗದೆ ನಿನ್ನ ಭಕ್ತ ವತ್ಸಲಕೆ ದಾನವಾಂತಕ ಅಕಿಂಚನಾರೆ ಎಂಬ ಪ್ರಮಾಣ ಉನ್ನತ ವಚನವಾಗದೆ ಮಾನನಿಧಿ ಪವಮಾನ ತತ್ವಮತ ಮಾನಿಜನ ಸಂಸ್ತುತ ಪದಾಂಬುಜ ಶ್ರೀನಿವಾಸ ಕೃಪಾನಿಧೆ ಕಮಲಾ ನಿಲಯ ವೆಂಕಟನಿಜಾಲಯ 5 ವೇದವನು ತಂದು ಭೂಧರನ ಬೆನ್ನಲಿ ನೆಗಹಿ ಈ ಧರೆಯ ಸಲಹೆ ಪ್ರಹ್ಲಾದನನು ಕಾಯ್ದೆ ಮೇದಿನಿಯನಳೆದಿ ಕಾರ್ತದಶಾಸ್ಯ ಕಂ ಸಾದಿಗಳ ತರಿದ ಬೌದ್ಧಾದಿ ಕಲ್ಕಿ ಧಾರಣನೆ ಪತಿತ ಪಾವನನೆಂಬ ಪರಮ ಬಿರುದನು ವಹಿಸಿ ಜತನ ಮಾಡುವಿ ಭಕ್ತತತಿಗಳನು ಬಿಡದೆ ಪತಿತ ಶೇಖರನನ್ಯಗತಿಯಾಗಿರುವ ಎನಗೆ ಗತಿಯ ಪಾಲಿಸು ರಮಾಪತಿಯೆನ್ನುಪೇಕ್ಷಿಸದೆ 6 ನಾರದಕ್ರೂರ ನರ ಹೈರಣ್ಯಕಾದಿಗಳು ಪಾದ ನೀರರುಹಗಳನು ಘೋರತರ ಸಂಸಾರಪಾರವಾರವ ದಾಟಿ ಧೀರರೆನಿಸಿದರೆಲ್ಲಪಾರಸನ್ಮಹಿಮ ತರಣಿ ಉದಿಸಿದ ಮೇಲೆ ತಿಮಿರದೊಂದಿರವ್ಯಾಕೆ ಗರಳ ಭಯವ್ಯಾಕೆ ಸಿರಿಸಹಿತ ಶೇಷಾದ್ರಿ ವರ ನಿನ್ನಪಾದ ಸಂ- ದರುಶನವು ದೊರೆತಮ್ಯಾಲರಿಬಾಧೆಯಾಕೆ ಎನಗೆ 7
--------------
ತುಪಾಕಿ ವೆಂಕಟರಮಣಾಚಾರ್ಯ
ಕೃಷ್ಣ ರುಕ್ಮಿಣಿ ವಿವಾಹದೈದು ದಿನದಲ್ಲಿ ಅರ್ಥಿ(ಯಿಂ)ಂದೋಕುಳಿಯನಾಡಿ ಕುಂಕುಮ ಗಂಧ ಬುಕ್ಕಿ ್ಹಟ್ಟಲೂ(ಲುರು?) ಟಣಿಯ ಮಾಡಿ ಆರತಿನೆತ್ತಿ ಮುತ್ತೈದೇರು ಪಾಡಿ ವೀಳ್ಯಗಳ ನೀಡಿ ಸರ್ಪಶಯನನು ತನ್ನ ಸತಿಯ ಎತ್ತಿ ಬರುವೋ ಕಾಲದಲ್ಲಿ ಚಿಕ್ಕ ಸುಭದ್ರೆ ತಾ ಬಾಗಿಲು ಕಟ್ಟಿ ತಾ ನಗುತ ನುಡಿದಳು 1 ಪಟ್ಟದರಸಿಕೂಡ ಮತ್ತೆಲ್ಲಿ ಪಯಣ ಈ ವಾರ್ತೆ ಹೇಳುವುದೆನಗೆ ಕೇಳುವೆ ಕೊಟ್ಟು ಎನಮನ ಕಾಮಿತಾರ್ಥವ ದಯಮಾಡಣ್ಣಯ್ಯ ಶ್ರೀಕೃಷ್ಣಯ್ಯ 2 ನಾರಿಮಣಿಯೆ ನವರತ್ನದ ಹೆರಳು ಬಂ- ಗಾರ ರಾಗಟೆಯು ಗೊಂಡ್ಯ ಕಂಕಣ ವಂಕಿ ದ್ವಾರಾ ಹರಡಿಯು ಚೆಂದ ಒಪ್ಪುವ ಗೆಜ್ಜೆ ನಾಗಮುರಿಗೆಯು ಕಾಲ ಪೈಜಣ ಗೆಜ್ಜೆ ರುಳಿ ವೈಡೂರ್ಯದ್ವೊಡ್ಯಾಣವನೆ ಮಾಣಿಕ್ಯದ್ವಾಲೆ ಮೋಹನ್ಮಾಲೆ ಕೊಡುವೆನು ಕದವ ಬಿಡು ತಂಗಿ ಕೋಮಲಾಂಗಿ 3 ಪಚ್ಚಮಾಣಿಕದ ಗೊಂಡ್ಯಗಳು ಬಾಜುಬಂದು ರತ್ನಹ್ಹೆರಳುಬಂಗಾರ ಕಂಕಣವಂಕಿ ಹಸ್ತಕಡಗವು ದ್ವಾರ್ಯ ಪುತ್ಥಳಿ ಏಕಾವಳಿಯ ಸರ ಚಿಂತಾಕು ಸರಿಗೆ ತೆತ್ತಿಸಿಯರಚಂದ್ರರಾಗಟೆÉ ಮತ್ತೆ ಎನಗಮ್ಮಯ್ಯಕೊಡುವಳು ಅರ್ಥಿಯಿಂದೀಗೆನ್ನ- ಮನೋರಥ ದಂiÀiಮಾಡಣ್ಣಯ್ಯ ಶ್ರೀಕೃಷ್ಣಯ್ಯ 4 ಹರದಿ ನಿನಗೆ ಹವಳದ ಕಾಲ್ವಜ್ರದ ಮಂಚ ಜರದ ಸುಪ್ಪತ್ತಿಗೆಯು ಹಾಸಿಕೆ ಲೋಡು ವರಪೀಠ ವಸನಂಗಳು ಚ- ಪ್ಪರ ಮಂಚಕ್ಕೊಲೆವೋ ಮುತ್ತಿನ ಗೊಂಚಲು ರವಿಪೋ- ಲ್ವ ರಥವು ಕರಿತುರಗ ಕರೆವೆಮ್ಮೆ ಗೋವ್ಗಳು ತರತರದ ಛತ್ತರಿಗೆ ಚಾಮರ ಜರತಾರಂಚಿನ ಸೀರೆ ಕೊಡುವೆನು ಕದವ ಬಿಡು ತಂಗಿ ಕೋಮಲಾಂಗಿ 5 ಪನ್ನಂಗಶಯನ ಕೇಳೆನ್ನ ಗಲ್ಲದಲೊಪ್ಪೋ ಸಣ್ಣ ಮುತ್ತಿನ ಗೊಂಚಲು ದ್ರಾಕ್ಷಿಯ ಬಳ್ಳಿ ಹೊನ್ನಾ ್ವಲೆ ಸರಪಳಿಯು ಹೊಸ ಪ್ರೀತಿಯಲಿನ್ನು ನಾ ಬೇಡಿದ್ದು ಕೊಡುವನು ಮನ್ಮಥನ ಪಿತ ಎನ್ನ ಮನೋರಥ ದಯಮಾಡಣ್ಣಯ್ಯ ಶ್ರೀಕೃಷ್ಣಯ್ಯ 6 ಮುದ್ದು ಸುಭದ್ರ ಮೇಲಾದ ಜೊತೆಯ ಮುತ್ತು ವÀಜ್ರ ಕೆಂಪನು ಕೆತ್ತಿಸಿ ಕೊಡುವೆನೀಗ ತಿದ್ದಿ ಮಾಡಿದ ಮೂಗುತಿ ಪಾರ್ಥನ ರಥಕಿದ್ದು ಆಗುವೆ ಸಾರಥಿ ನಡೆಸುವೆನು ಕೀರ್ತಿ ಉಗ್ರಸೇನಗೆ ಹೇಳಿ ಇದರೊಳ- ಗರ್ಧ ರಾಜ್ಯವ ಕೊಡಿಸಿ ನಾ ನಿನ್ನುದ್ದ ಹಣ ಬಿಡು ತಂಗಿ ಕೋಮಲಾಂಗಿ 7 ಅಚ್ಚುತ ಬಲರಾಮರೆಂಬೊ ಎನಗೆ ಜೋಡು ಹೆಚ್ಚಿನ ಭುಜಗಳಿನ್ನು ಯಶೋದ ದೇವಕ್ಕಿ ರೋಹಿಣೀದೇವೇರು ಇರಲು ತಂದೆ ಶ್ರೇಷ್ಠನಾದ್ವಸುದೇವನು ನೀ ಕೊಡುವುದೇನು ಮುತ್ಯನಾಗಿದ್ದುಗ್ರಸೇನನು ಮತ್ತೆ ನಾ ಬೇಡಿದರೆ ಈ ಕ್ಷಣ ಕೊಟ್ಟು ಬಿಡನೇ- ನಧರ್À ರಾಜ್ಯವ ದಯಮಾಡಣ್ಣಯ್ಯ ಶ್ರೀಕೃಷ್ಣಯ್ಯ 8 ಎಷ್ಟು ಹೇಳಿದರು ಸನ್ಮತವಿಲ್ಲೆ ಸುಭದ್ರೆ ಮತ್ತೇನು ಕೊಡಲೆ ನಾನು ಮನಕೆ ಬೇಕಾದಿಷ್ಟವ ಬೇಡೆ ನೀನು ಭಾರ ಎಷ್ಟು ತಡೆಯಲಾರೆನೆ ನೀನು ಕೈಬಿಟ್ಟು ಬಿಡುವೆನು ಬೆಟ್ಟವನು ಕಿರು ಬೆಟ್ಟಿಲಿಂದೆ ಎತ್ತಿನಿಂತಿದ್ದೇಳು ದಿವಸ ಕದವ ಬಿಡು ತಂಗಿ ಕೋಮಲಾಂಗಿ 9 ಪಕ್ಷಿವಾಹನ ನಿನ್ನ ಚೊಚ್ಚಲಮಗಳ ಎನ್ನಚ್ಛದ ಅಭಿಮನ್ಯುಗೆ ಮಾಡುವುದು ಅ- ಪೇಕ್ಷವಾಗೇದೆ ಎನಗೆ ಬೇಡುವೆನು ನಿಶ್ಚಯ ಮಾಡಿ ಜನರೊಳಗೆ ಕೊಡು ಕೀರ್ತಿ ನಿನಗೆ ಪಟ್ಟದರಸಿಯ ಸಹಿತ ನೀ ಒಡಂಬಟ್ಟು ಎನಗ್ವಚನವನೆ ಪಾಲಿಸು ಕಟ್ಟಿದ್ಹಾದಿಯ ಬಿಟ್ಟು ಪೋಗುವೆ ದಯಮಾಡಣ್ಣಯ್ಯ ನೀ ಕೃಷ್ಣಯ್ಯ 10 ತರವಲ್ಲೆ ರುಕ್ಮಣಿ ಬೀಗತನವ ಭಾಳ ಪರಿ- ಯಾಲೋಚನೆ ಮಾಡು ರುಕುಮನ ಗಡ್ಡ ಶಿರ ಪಟ್ಟಿ ಪನ್ನಿ ನೋಡು ದೊರೆ ಶಿಶುಪಾಲ ವರನವಸ್ಥೆಯ ಕೊಂಡಾಡು ಧೈರ್ಯವನೆ ಮಾಡು ಬರೆದು ಓಲೆಯ ಕಳಿಸಿ ಎನ್ನ ಕರೆಸಿ ಬೆನ್ನ ್ಹತ್ತೋಡಿಬಂದ ಬಿರುದನರಿಯೇ ನ್ವರ ಶುಭಾಂಗಿನಿ ಕದವ ಬಿಡು ತಂಗಿ ಕೋಮಲಾಂಗಿ 11 ಕೃಷ್ಣ ಸುಭದ್ರೆ ಮಾತುಗಳ ರುಕ್ಮಿಣಿ ಕೇಳಿ ಮತ್ಯಾತಕೆನ್ನ ದೂರು ಯತಿಗಳ ಬೆನ್ನ ್ಹತ್ತಿ ಹೋದವರು ದಾರು ಕೃತ್ಯವ ನಡೆಸಿದರೆನ್ನ ನಾದಿನೇರು ಚಿತ್ರಾಂಗಿಯೇರು ಹಸ್ತಿನಾವತಿ ಅರಸು ಧರ್ಮರು ಹೆಚ್ಚಿನ್ಹಿರಿ ಯಣ್ಣಯ್ಯ ಭೀಮನು ಪಾರ್ಥಸುತ ಎನ್ನ ಸೋದರಳಿಯಗೆ ಕೊಟ್ಟೇನು ತೌರುಮನಿಗ್ಹೆಣ್ಣು 12 ರಂಗ ಸುಭದ್ರೆ ಮಾತಿಗೆ ಬಪ್ಪಿ ್ವ್ವಳ್ಯವ ಕೊಟ್ಟು ಚಂದ್ರಗಾವಿಯ ಕುಪ್ಪಸ ಜರದ ಪೀ- ತಾಂಬ್ರದುಡುಗೊರೆ ಕೊಡುತ ಮುತ್ತಿನ ಹಾರ ತಂದು ಕೊರಳಿಗೆ ಹಾಕುತ ರುಕ್ಮಿಣಿಯ ಸಹಿತ ಬಂದ ಭೀಮೇಶ ಕೃಷ್ಣ ಪಾರ್ಥನ ರಂಭೆ ಕನ್ಯವಗೆದ್ದಳೆನುತಲಿ ಸಂಭ್ರಮದಿ ದೇವೇಂದ್ರ ಬ್ಯಾಗನೆ ಚೆಂದದÀಲ್ಹೂಮಳೆಯ ಕರೆದರು 13
--------------
ಹರಪನಹಳ್ಳಿಭೀಮವ್ವ
ಕೇಳಿಸಲೊಲ್ಲದೇನೋ ಕೃಷ್ಣಾ ಕೇಳಿಕೇಳದಂತಿರುವಿಯೇನೋ ಪ ಬಾಳುವೆಯೊಲು ಕೀಳಾದೆನಾನಿಂತುಏಳಿಸೆನ್ನನು ಎಂದು ಕೇಳಿಕೊಳ್ಳುವದಿನ್ನು ಅ.ಪ ಯಾವತ್ತೂ ತಿಳಿದವನು ಎಂಬರು ಎನ್ನನೋವು ತಿಳಿಯದಾಯ್ತೇನುಸಾವಿರ ವಿಥಿಗಳಿದ್ದೆನ್ನಯ ಪಾಲಿಗೆದೇವಾ ಅವಲ್ಲವು ಕಿವುಡಾದವೇನೋ 1 ತುಂಬಿ ನಿಂತಿಹನೆಂಬೀಭಾವಕೆ ನೀನೆಂಬಿ ಆವಾವಜೀವರ ಭಾವವರಿತು ನೀಕಾವುದೆಂತೆಂಬೊ ಈ ವಚನವು ನಿನಗೆ 2 ಭೇದಭಾವವು ಇಲ್ಲೆಂದೂ ಸಾಧಿಸುವವುವೇದಗಳೆಲ್ಲ ಎಂದುಬಾಧೆಯ ಬಿಡಿಸೆಂದು ಬೇಡಿಕೊಳ್ಳುವೆಗದುಗಿನ ಆಧಾರಿ ದೇವನೆ ವೀರನಾರಾಯಣ 3
--------------
ವೀರನಾರಾಯಣ
ಕೇಳು ಶ್ರೀನಿವಾಸ ಕಷ್ಟವ ತಾಳಲಾರೆ ಶ್ರೀಶ ಕಂಜಜೇಶ ಪ. ಮಾತ ಕೇಳದಿರುವ ಮನ ಬಹು ಕಾತರಗೊಂಡಿರುವ ರೀತಿಯಿಂದ ಬಹು ಸೋತೆನು ಷಡ್ರಿಪು ಜಾತ ಬಂಧಿಸಿರುವ 1 ಕಟ್ಟಿ ಸಹಿಸಲಾರೆ ಮೊದಲ ವಿಠಲ ನೀ ಕೈಬಿಟ್ಟರೆ ಮಾಜದು ಅಟ್ಟಹಾಸ ತೋರೆ 2 ಉದಯ ಮೊದಲುಗೊಂಡು ನಾನಾ ವಿಧದಲಿ ಭ್ರಮೆಗೊಂಡು ಸದಯ ನಿನ್ನ ಪಾದಾಬ್ಜ ನೆನೆಯದೆ ಚದುರೆಯ ಮನಗೊಂಡು 3 ನಿತ್ಯ ಕರ್ಮವೆಲ್ಲ ಕಂಬಳಿ ಬುತ್ತಿಯಾಯಿತಲ್ಲ ಕತ್ತರಿಸಿ ಬ್ರಹ್ಮೆತ್ತಿಯನ್ನು ಪುರು- ಸಿರಿನಲ್ಲ 4 ತಲ್ಲಣಗೊಳಿಸುವುದು ತುದಿಮೋದ- ಲಿಲ್ಲದೆ ದಣಿಸುವುದು ನಿಲ್ಲೆ ನಡೆಯ ಮಲಗೆಲ್ಯು ಬಿಡದು ದೂ- ರೆಲ್ಲು ಪೇಳಗೊಡದು 5 ಮೆಲ್ಲ ಮೆಲ್ಲನೆದ್ದು ನೀ ಮನ ದಲ್ಲಿ ಸೇರುತ್ತಿದ್ದು ನಿಲ್ಲಲು ತೀರಿತಲ್ಲದೆ ಲೋಕ ದೊಳಿಲ್ಲ ಬೇರೆ ಮದ್ದು 6 ನಿತ್ಯ ನಿನ್ನ ಮುಂದೆ ಸೇವಾ ವೃತ್ತಿ ಮಾಳ್ಪದೊಂದೆ ಎತ್ತಾರಕವೆಂದಾಶ್ರಯಿಸದೆ ಮೇ- ಲೊತ್ತಿ ಬೇಗ ತಂದೆ 7 ಭೃತ್ಯರ ಬಿಡನೆಂದು ಶ್ರುತಿ ಶಿರ ವೃತ್ತಿ ವಚನವೆಂದು ಸತ್ಯವೆಂದು ನಂಬಿದ ನೀನರಿಯೆಯ ಔತ್ತರೆಯ ಬಂಧು 8 ವಿಜಯಸೂತನಿಂದ ಪಾದವ ಭಜಿಸಿದ ಮ್ಯಾಲೆನ್ನ ನಿಜ ಜನದೊಳು ಸೇರಿಸುವುದು ಚಿತ ಸಾಮಜ ವರದನೆ ಮುನ್ನ 9 ಭವ ಪರಿಪಾಲ ಪಾಲಿಸು ವ್ರಜ ಯುವತಿ ಲೋಲಾ ಪಾದ ಪಂ- ಕಜ ಕೊಡು ಗೋಪಾಲ 10
--------------
ತುಪಾಕಿ ವೆಂಕಟರಮಣಾಚಾರ್ಯ
ಕೊಡು ಬ್ಯಾಗಭೀಷ್ಟವ ತ್ವರದೀ - ನೀ ಸನ್ಮನದೀ ಪ ಕೊಡುವೊದೆನುತ ನಿನ್ನಡಿಯನು ಭಜಿಸುವ ಬಡವನ ಕರವನು ಪಿಡಿದೀ ಕಾಲದೀ ಅ.ಪ ವಡೆಯ ನೀನೆನುತತಿ ಹರುಷದಲಿ ನಂಬಿದೆ ನಿನ್ನಾ ಬಿಡದಲೆ ಪೊರೆ ಎನ್ನ ಕರುಣದಲಿ ಎನ್ನಯ ಕರವ ಪಿಡಿದು ಭವಶ್ರಮ ಕಳಿಯುತಲಿ - ಬಹು ತೋಷದಲೀ ನುಡಿದ ವಚನವ ಚಿತ್ತಕೆ ತಂದು ಪತಿ ಗುರುರಾಯನೆ ನೀ 1 ನಮಿಪ ಜನರಿಗೆ ಸುರಧೇನು ಭಜಿಸುವ ಜನಕೆ ಸುಮನಸೋತ್ತಮ ವರತರು ನೀನು - ಚಿಂತಿಪ ಜನಕೆ ಅಮರೋತ್ತಮ ರತುನವು ನೀನು - ಎನುತಲಿ ನಾನು ಅಮಿತ ಮಹಿಮವ ತೋರುತಲೀಗ ಶ್ರಮವ ಕಳೆದು ಸುಖಸುರಿಸುತ ನೀ 2 ಭೂತಳ ಮಧ್ಯದಲತಿ ಖ್ಯಾತ - ನೆನಿಸಿದ ನಾಥ ಪಾತಕ ಕುಲವನ ನಿರ್ಧೂತಾ - ಮಾಡುತ ನಿಜಪದ ದೂತಜನ ತತಿಮನೋರಥ - ಪೂರ್ತಿಪ ದಾತಾ ವಾತ ಗುರುಜಗನ್ನಾಥ ವಿಠಲಗತಿ ಪ್ರೀತಿಪಾತ್ರ ಸುಚರಿತ್ರ ಸುರಮಿತ್ರ3
--------------
ಗುರುಜಗನ್ನಾಥದಾಸರು
ಗಣಪತಿ ಶಾರದೆಗೆರಗಿದೆ ಇಂದೇ | ಇಬ್ಬರ ಹೃದಯದಿ ಕರುಣದಿ ಬಂದೆ | ನುಡಿಸಿದರ್ವಚನವ ಒಂದೊಂದು ತಂದೆ | ಕೇಳಿರಿ ಜನರೆಲ್ಲಾ ಕಿವಿಗೊಟ್ಟು ಬಂದೆ 1 ನರನಾಗಿ ಬಂದು ನೀ ಮಾಡಿದಿ ಏನಾ | ತಿಳಿಯದೆ ಬೊಗಳುವಿಯಾತಕೆ ಶ್ವಾನಾ | ಎಳ್ಳಷ್ಟು ಇಲ್ಲದೆ ಹೋಯಿತು ಜ್ಞಾನಾ | ಇನ್ನಾದರೂ ಮಾಡೊ ಸದ್ಗುರುವಿನ ಧ್ಯಾನಾ2 ಮಾಡಲಿಲ್ಲಾ ಪುಟ್ಟಿ ನೀ ದಾನ ಧರ್ಮಾ | ಮಾಡಿದಿ ತಿಳಿಯದೆ ನೀ ಕೆಟ್ಟ ಕರ್ಮಾ | ಆಡಿದಿ ನೀ ಸಾಧುಸಂತರಿಗೊರ್ಮಾ | ನೋಡಿಕೊ ನಿನಗಿಲ್ಲದಾಯ್ತು ಶರ್ಮಾ 3 ಮಾಡಿದ ಬದುಕನು ಸುಮ್ಮನೆ ಕಳೆದೆ | ಮಾಡುವಾಗ ಬಹು ನಿಜವೆಂದು ತಿಳಿದೆ | ನೋಡದೆ ಪೂರ್ವದ ಸುಕೃತವನಳಿದೆ | ರೂಢಿಯೊಳಗೆ ಪಾಮರನಾಗಿ ಬೆಳೆದೆ 4 ಮಾಡುವ ಕರ್ಮಕೆ ಮನವೇ ಸಾಕ್ಷೀ | ಮಾಡುವಿ ಜಪ ನಿನಗ್ಯಾಕೀ ರುದ್ರಾಕ್ಷೀ | ಮಾಡಿದನೇ ಗುರು ಹೀಗೆಂದು ದೀಕ್ಷಾ | ಆಡಲ್ಯಾತಕೊ ನಾಳೆ ಆದೀತೋ ಶಿಕ್ಷಾ 5 ಹುಣಶಿ ಹಣ್ಣ ಹಚ್ಚಿ ಬೆಳಗಿದಿ ಗಿಂಡೀ | ಎಣಕೀ ಶರಣ ಮಾಡಿ ಅಲ್ಲೇನು ಕಂಡೀ | ಸಂತರ ನಿಂದಾ ಬಲು ಮಾಡಿ ಉಂಡೀ | ಅಂತರಂಗದಿ ಇರು ಛೇ ಹುಚ್ಚ ಮುಂಡೀ 6 ಹಗಲೂ ಇರುಳೂ ಎದ್ದುಂಬುವಿ ಕೂಳೂ | ಕೂಳಿಗೆ ಆದಿ ನೀ ಒಬ್ಬರ ಆಳೂ | ಬಲು ಮಂದಿ ಮನೆಯನು ಮಾಡಿದಿ ಹಾಳೂ |ಏನು ಪುಣ್ಯ ಬಂದದ ಅದನಾರ ಹೇಳು 7 ಹಗಲೂ ಇರುಳೂ ಎದ್ದು ಮಾಡಿದಿ ಬದಕಾ | ಮಾಡುತ ಮಾಡುತ ಆದೆಲ್ಲೊ ಮುದುಕಾ | ಸಾಯುವ ತನಕಾ ಬಿಡಲಿಲ್ಲೊ ಚುದಕಾ | ಸತ್ತಮೇಲೆ ನೀ ಆಗುವಿ ಶುನಕಾ 8 ಏನೇನಿಲ್ಲದೆ ಹೋಯಿತು ಬುದ್ಧೀ | ಶಾಸ್ತ್ರ ಪುರಾಣದಿ ಕೇಳಿಲ್ಲ ಸುದ್ದೀ | ಇರುಳ ಕಂಡ ಕುಣಿ ಹಗಲ್ಯಾಕೆ ಬಿದ್ದೀ | ಮರುಳಾದ್ಯಾ ಯಮ ನಾಳೆ ಕೊಂದಾನೊ ಗುದ್ದೀ 9 ಸಂಸಾರ ನಂಬಿದಿ ನಿಜದಲಿ ಹ್ಯಾಂಗ | ಸದ್ಗುರು ಪಾದವ ನಂಬೋ ನೀ ಹಾಂಗ || ಸಂಶಯಾ ಅದಕಂಜಿ ಬಿಟ್ಟರೆ ಈಗ |ಕಾಂಶಿಲಿ ಬಡಿದಾರು ತಿಳಿದೀತು ಆಗ 10 ಬೆಳಕಿನೊಳಗ ಒಂದು ನೋಡುವ ಕಣ್ಣು | ಕತ್ತಲಿಯೊಳ ಗೊಂದು ಕಾಂಬುವ ಕಣ್ಣು | ಕತ್ತಲಿ ಬೆಳಕನ್ನು ನೋಡುವ ಕಣ್ಣು | ಅದ ಬಿಟ್ಟು ಏನ ನೋಡುತಿ ಮಣ್ಣು 11 ಅನುದಿನ ಶಾಸ್ತ್ರ ಪುರಾಣಾ | ಅದರೊಳಗಿನ ಮಾತ ತಿಳಿಯದೆ ಕೋಣಾ || ಅರ್ಥವ ಹೇಳುವಿ ಮಂದಿಗೆ ಜಾಣಾ | ರುವ್ವಿಯ ಬೇಡಲು ಹೋಯಿತು ಪ್ರಾಣಾ12 ಕಂಡರೆ ನೋಡುವಿ ಹೆರವರ ಹೆಣ್ಣು | ಚೆಲುವೆಂದೂ ಇಟ್ಟೆಲ್ಲೊ ಆಕೆಗೆ ಕಣ್ಣೂ | ಆದರೆ ಹತ್ತ್ಯಾವೊ ಆಕೆಯ ಹುಣ್ಣು | ಕಡೆಯಲಿ ಬಿದ್ದಿತು ಬಾಯಲಿ ಮಣ್ಣು 13 ನಿತ್ಯ ತೆಗೆದುಕೊಳ್ಳುವಿ ದೇವರ ತೀರ್ಥಾ | ಮತ್ತಿನ್ನು ಬಿಡಲಿಲ್ಲ ಮನದ ಸ್ವಾರ್ಥಾ || ಕತ್ತೆಯ ಹಾಂಗ ನೀನೊದರುವಿ ವ್ಯರ್ಥಾ | ಎಂದೆಂದಿಗೂ ದೊರೆಯದು ಆ ಪರಮಾರ್ಥಾ 14 ತನುವು ನಾನೆಂಬುವಿ ತನುವಿದು ತೊಗಲು | ತನುವಿಗೆ ಅವ ನೋಡು ಒಂಬತ್ತು ಹುಗಲು | ಚಿಂತಿ ಮಾಡುವದ್ಯಾಕೊ ಹಗಲೂ ಇರುಳೂ | ನಿನ್ನಾಧೀನವು ಹೀಗೆಂದು ಇರಲು 15 ದೂರ ಹೋಗದಿನ್ನು ಆಗದು ಕಾಶೀ | ದೂರ ಮಾಡಿ ಕಳಿ ನೀನು ಮೂರಾಶಿ | ತೀರದು ಶಿವಯೋಗ ಪುಣ್ಯ ರಾಶಿ | ಸೇರುವಿ ಸಾಯುಜ್ಯದಲಿ ಮಿರಾಶಿ 16 ಮಾಯಾ ಮಾಯಾ ಮಾಯಾ | ದುಡ್ಡಿನಂತೆ ಮಾಡೊ ಮನಕೆ ನಿರ್ಮಾಯಾ 17 ಮೀಶಿಯ ಹುರಿ ಮಾಡಿ ಮೇಲಕೆ ನೋಡಿ | ಕಾಲಾಗ ಸಿಕ್ಕವು ಮೋಹದ ಬೇಡಿ || ಮಾಡಬಾರದಂಥ ಕೆಲ್ಸವ ಮಾಡಿ | ಸಿಕ್ಕಿದೆಲ್ಲೊ ಗಾಂಡೂ ಇನ್ನೆತ್ತ ಓಡೀ 18 ಪಾದ ದೊರೆವುದಿನ್ನೆಲ್ಲಿ 19 ಕಾಮನ ಸುಡುವುದು ನೋಡು ಹೀಂಗಲ್ಲಾ | ಕಾಮನ ಶಿವ ಸುಟ್ಟರವ ಸಾಯಲಿಲ್ಲ || ಕಾಮನು ಸುಡುವ ಮೂರು ಲೋಕವನೆಲ್ಲ | ಕಾಮರಹಿತ ಭವತಾರಕ ಬಲ್ಲ 20 ಕಟ್ಟಿದಿ ಮನೆಯನು ನೀ ಬಲು ಛಂದಾ | ಬಿಟ್ಟು ಹೋಗುತಿ ಇದದಾವಂದಾ || ತೊಟ್ಟಿಲೊಳಗೆ ಇದ್ದ ಹೇಳಿದ ಕಂದಾ | ಎಷ್ಟಂತ ಹೇಳಲಿ ನೀ ಮತಿಮಂದಾ 21 ಪಾತಕ ಬರುವದು ಬಿಡಬ್ಯಾಡ ವಾಜಿ | ನೀತಿಯಿಂದಲಿ ಮಾಡು ನೀ ಗುರು ಪೂಜಿ | ಯಾತನ ಬಡಿಸುವ ನಾಳಿನ ಪಾಜಿ 22 ಒದರುವಿ ಯಾತಕೆ ಬಾಯನು ಕಿಸ್ತು | ಬೆದರ ಬೇಡಾದುದಕೆನ್ನು ಅಸ್ತು || ಚತುರ ತನದಲಿ ಸಾಧಿಸು ನೀ ವಸ್ತು |ಆದರಿಂದಲಾಗುವದು ಆ ಮನ ಸ್ವಸ್ತು 23 ಪಾತಕ ಬರುವದು ತಿಳಿಯದೆ ಕೋಳಿ || ನೀತಿಯಿಂದಲಿ ತತ್ತ್ವ್ವ ಮಾತನು ಕೇಳಿ | ಘಾತಕ ಯಮ ನಾಳೆ ಬರುವನು ದಾಳಿ 24 ಭವ ಬಿಟ್ಟಿ | ಮಾಡದೆ ದಾನ ಧರ್ಮವ ಕೆಟ್ಟೀ || ಮಾಡಿದುದೆಲ್ಲಾ ನೀ ಜೋಕಿಲಿ ಇಟ್ಟಿ | ಮಾಡಲು ಬಾಧೆಯ ನೀ ಬಾಯ ಬಿಟ್ಟಿ 25 ನೆನೆದರೆ ದೃಢದಲಿ ರಾಮ ನಾಮ | ತನುವಿದು ಮುಂದೆ ಬಾರದು ನೇಮ || ಮನದೊಳು ಪುಟ್ಟಿತು ತಾನೆ ನಿಷ್ಕಾಮ | ಘನಸುಖ ತೋರಿತು ಅದು ಸಾರ್ವಭೌಮ 26 ಹುಟ್ಟಿ ಹುಟ್ಟಿ ನೀ ಯಾತಕೆ ಸತ್ತೀ | ಹುಟ್ಟುತ ಸಾವುತ ನಿತ್ಯದಿ ಅತ್ತೀ || ಹುಟ್ಟು ಸಾವನ್ನು ಕಳೆಯಲೊ ಕತ್ತೀ | ಕೆಟ್ಟಿಯೊ ಇನ್ನಾರ ಬೆಳಿ ಧರ್ಮಾ ಬಿತ್ತೀ 27 ಶಾಸ್ತ್ರ ಪುರಾಣವ ಓದುವಿ ಬರಿದೇ | ಉತ್ತಮ ಸ್ತ್ರೀಯರ ಕಂಡು ನೀ ಕರೆದೆ || ನಿನ್ನೊಳು ತಿಳಿದು ನೀ ನೋಡುದು ಮರೆದೇ | ಸಾಧು ಸಂತರುಗಳ ಸೇವೆಗೆ ಮರೆದೆ 28 ಪಡಿ ಜೋಳಕೊಬ್ಬರ ಅಡಿಗಳ ಹಿಡಿವೆ | ಕೊಡುವದಿಲ್ಲೆಂದರೆ ದವಡಿಯ ಕಡಿವೆ || ಕೊಟ್ಟರೆ ಮನದೊಳು ಸಂತೋಷ ಪಡುವೆ | ಕೆಟ್ಟ ಮಾರ್ಗದಿಂದ ಕಡೆ ತನಕಾ ನಡಿವೆ 29 ಭವ ಪರಿಹರಿಸುವದಿದು ಏನು ಅರಿದು || ಭವದೊಳು ಬಿಟ್ಟರು ನಾಮವ ಮರೆದು | ಭವಕಿನ್ನು ಕರಸ್ಯಾರೊ ಆತನ ಬರದು 30 ಮಾಡಿದೆ ಏನು ಬದುಕನು ಹೇಳು | ಮಾಡಿದುದೆಲ್ಲಾ ತಿಂದೆಲ್ಲಾ ಕೂಳು || ಕೂಳಿಗಾಗಿ ಆದಿ ಒಬ್ಬರ ಆಳು | ನೋಡಿ ಏನು ಸದ್ಗತಿಯ ಹೇಳು 31 ಮನದೊಳು ಗಳಿಸಿದಿ ಕೆಂಚೀ ಹೊನ್ನು | ಗಳಿಸಿದವರು ಏನು ಒಯ್ದಾರು ಇನ್ನು || ಬಿಟ್ಟು ಹೋದರು ಹ್ಯಾಂಗ ಬಲ್ಲೆಲ್ಲಾ ನೀನು | ನಿಷ್ಠೆಯಿಂದಲಿ ಒಮ್ಮೆ ಹರಗುರು ಎನ್ನು 32 ಮಾಡಲಿಲ್ಲ ಒಂದು ನರನಾಗಿ ಯೋಗಾ | ಮಾಡುವಿ ಸುಖವೆಂದು ಸ್ತ್ರೀಯರ ಭೋೀಗಾ | ಆಡಲ್ಯಾಕೆ ಆಯುಷ್ಯ ಹಾರಿತು ಬೇಗಾ | ನೋಡಿಕೊಳ್ಳೊ ಇನ್ನು ತಿಳಿದೀತು ಈಗಾ 33 ಪರಿ ಸಂಸಾರ ಯುಕ್ತಿ | ಮಾಡಲು ಒಲ್ಲ್ಯೋ ಶ್ರೀ ಗುರು ಭಕ್ತಿ || ಹೋಯಿತೊ ದೇಹದೋಳ್ ನಿನ್ನ ಶಕ್ತಿ | ಸಾಧಿಸಲರಿಯೊ ನೀ ಜೀವನ್ಮುಕ್ತಿ 34 ಅನುದಿನ ವೇದಾ | ಸಾಧಿಸಿ ತಿಳಿಯದೆ ಜೀವಶಿವ ಭೇದಾ || ಕಾದಾಡಿ ಕೊಂಬುವದು ಸುಮ್ಮನೆ ವಾದಾ |ಬ್ಯಾಡಿನ್ನು ಶೋಧಿಸು ನಿನ್ನೊಳು ಬೋಧಾ 35 ಭವ ಬೀಜವ ಕೊಂಬೆ 36 ಮಾಯಾ ಮರವನು ತ್ಯಜಿಸು || ಧ್ಯಾನ ಮುದ್ರೆಯೋಳ್ ಮನವನು ನಿಲಿಸು | ಜಗವಿದು ನಿಜವೇ ನೋಡೆಲು ಕನಸು 37 ರೂಪದೊಳಗಿಲ್ಲಾ ಗುಣವೊಂದು ತೃಣವು | ಗುಣದೊಳಗಿಲ್ಲವು ರೂಪದ ಅಣುವು || ರೂಪ ನಾಮಕ್ರಿಯಾ ಆದೀತು ಹೆಣವು | ಆ ಪರಬ್ರಹ್ಮನೆ ತಿಳಿಯಿನ್ನು ಪ್ರಣವು 38 ಪಾದ | ಅರಿತು ಪೂಜಿಸಿದವ ಪರಶಿವನಾದ || ಅನುಭವಿ ಬಲ್ಲನು ಆ ಸುಖ ಸ್ವಾದ | ತನ್ನೊಳು ಆಲಿಸುತಲಿ ನಿಂತ ನಾದ 39
--------------
ಭಾವತರಕರು
ಗುರುರಾಜ ಗುರುಸಾರ್ವಭೌಮ ಪ ಗುರುರಾಜ ತವ ಪಾದ ಸರಸಿಜಯುಗಲಕ್ಕೆ ಮೊರೆಪೊಕ್ಕ ಜನರನ್ನ ಪೊರೆ ಎಂದೇ ಅ.ಪ ಶರಣ ಪಾಲಕನೆಂಬೊ - ಬಿರುದು ಬೀರುತಲಿದೆ ಶರಣರ ಮರೆವೊದು ಥರವೇನೋ 1 ಸಾರಿದಜನರ‌ಘ ದೂರಮಾಡುವೆನೆಂಬೊ ಧೀರರ ವಚನವು ಸಾರುತಿದೆ 2 ದೂರದೇಶದಿ ಜನ - ಸಾರಿ ಬಂದರೆ ವಿ - ಚಾರಿಸಿ ಹರಕೆ ಪೊರೈಸುವೀ 3 ಕುಷ್ಟಾದಿ ಮಹರೋಗ ನಷ್ಟಮಾಡುತಲ - ಭಿಷ್ಟೇಯ ಪೂರ್ತಿಪ ಮಹ ಶ್ರೇಷ್ಠನೆ 4 ಆದಿವ್ಯಾಧಿ ಉ-ಪಾಧಿ ಸಂಘಗಳನ್ನು ಮೋದ ಸಲಿಸುವಿ 5 ಸತಿಜನರಿಗೆ ಅತಿ ಹಿತದಿಂದ ಸುತರನ್ನ ಸತತ ನೀಡುವಿ ಯತಿ ಕುಲನಾಥ 6 ಮತಿ ಹೀನ ಅತಿ ಮೂರ್ಖ ತತಿನಿನ್ನ ಭಜಿಸಲು ವಿತತ ಭಕುತಿ ಜ್ಞಾನ ನೀಡುವೀ 7 ಮೂಕ - ಬಧಿರ - ಪಂಗು - ಏಕೋಭಾವದಿ ಸೇವೆ ಏಕಮನದಿ ಮಾಡೆ ರಕ್ಷೀಪಿ 8 ಅವರ ಮನೋ ಬಯಕೆ ಹವಣಿಸಿ - ನೀಡುತ ಅವನಿಯೊಳಗೆ ನೀ ಮೆರೆಯುವೀ 9 ಅಂಧಜನಕೆÀ ಚಕ್ಷು - ವಂಧ್ಯಜನಕೆ ಸುತರು ಬಂದ ಬಂದವರರ್ಥ ಪೂರೈಸುವೀ 10 ಪರಮಂತ್ರ ಪರಯಂತ್ರ ಪರಕೃತ್ಯಪರಮಾಹಿ ಪರಿಪರಿ ವ್ಯಥೆಗಳ ಹರಿಸುವೀ 11 ದುರುಳಜನರ ಬಾಧೆ ಮೊರಳುಮಾಯದ ಮೊದ್ದು ಕಿರಳುಪದ್ರಗಳೆಲ್ಲ ಕಳೆಯುವೀ 12 ಕಾಮಿತ ಫಲಗಳ - ಕಾಮಿಪ ಜನರಿಗೆ ಪ್ರೇಮದಿ ನೀಡುವೊ ಧ್ವರಿ ನೀನೇ 13 ಅನ್ನ ವಸನ ಧನ - ಧಾನ್ಯ ಹೀನರಗಿನ್ನು ಮನ್ನಿಸಿ ನೀನಿತ್ತು ಸಲಹುವೀ 14 ಅಧಿಕಾರ ಕಳಕೊಂಡು ಬದಕಲಾರದ ಜನ ವದÀಗಿ ನಿನ್ನನು ಭಜಿಸೆ ಕರುಣಿಪೀ 15 ಮಾನವ ನಿನ್ನ ಸೇವೆ ಮಾಡುವನವ ಕೋವಿದನಾಗುವ ನಿಶ್ಚಯಾ 16 ಇನಿತೆ ಮೊದಲಾದ ಘನತರ ಮಹಿಮವು ಜನರಿಗೆ ಶಕ್ಯವೆ ಗುರುರಾಯಾ 17 ಸುರತರು ಸುರಧೇನು ವರಚಿಂತಾಮಣಿ ನೀನೆ ಶರಣವತ್ಸಲ ಬಹು ಕರುಣೀಯೇ 18 ದಿನ ದಿನ ಮಹಿಮವು ಘನ ಘನ ತೋರೋದು ಬಿನಗು ಮಾನವರಿಗೆ ತಿಳಿಯಾದೋ 19 ಕರುಣಾನಿಧಿಯೆ ನೀನು ಶರಣ ಮಂದಾರನೆ ಶರಣ ವತ್ಸಲ ನಿನಗೆ ಶರಣೆಂಬೆ 20 ವಸುಧಿತಳದಿ ನೀನೆ ವಶನಾಗೆ ಜನರಿಗೆ ವ್ಯಸನಗಳುಂಟೇನೊ ಪೇಳಯ್ಯಾ 21 ದುರಿತ ದುಷ್ಕøತವೆಲ್ಲ ದೂರದಲೋಡೋವು ಕರಿಯು ಸಿಂಹನ ಕಂಡತೆರನಂತೆ 22 ನಿನ್ನ ನಾಮದ ಸ್ಮರಣೆ ಘನ್ನ ರೋಗಗಳನ್ನು ಚೆನ್ನಾಗಿ ನಾಶನ ಮಾಳ್ಪೋದೋ 23 ರಾಘವೇಂದ್ರ ಗುರು ಯೋಗಿಕುಲಾಗ್ರಣಿ ವೇಗಾದಿ ಪೊರೆದೆನ್ನ ಪಾಲಿಪೆ 24 ಜನನಿ ಜನಕರು ತಮ್ಮ ತನಯರ ಪೊರೆದಂತೆ ದಿನದಿನ ನೀನೇವೆ ಸಲಹೂವಿ 25 ಅನಿಮಿತ್ತ ಬಾಂಧವ ಅನುಗಾಲ ನೀನಿರೆ ಜನರು ಮಾಡುವ ಬಾಧೆÉ ಎನಗೇನೋ 26 ಮನಸಿನೊಳಗೆ ನಿತ್ಯ ನೆನೆಯುತ ತವ ಪಾದ ವನಜ ಯುಗಳ ಮೊರೆ ಪೊಂದಿದೆ 27 ನಿನ್ನ ಮಹಿಮ ಶ್ರವಣ ನಿನ್ನ ಗುಣಕೀರ್ತನ ನಿನ್ನ ಮೂರ್ತಿಧ್ಯಾನ ನೀಡೈಯ್ಯಾ 28 ನಿನ್ನ ಉಪಾಸನ ನಿನ್ನ ದಾಸತ್ವವ ಚನ್ನಾಗಿ ಎನಗಿತ್ತು ಸಲಹೈಯ್ಯಾ 29 ನಿನ್ನನುಳಿದು ಈಗ ಮನ್ನಿಸಿ ಪೊರೆವಂಥ ಘನ್ನ ಮಹಿಮರನ್ನ ಕಾಣೆನೋ 30 ದಾತ ಗುರು ಜಗ ನ್ನಾಥ ವಿಠಲಗತಿ ಪ್ರೀತಿ ಪಾತ್ರನು ನೀನೆ ನಿಜವಯ್ಯೊ 31
--------------
ಗುರುಜಗನ್ನಾಥದಾಸರು
ಗುರುರಾಜ ನಿನ್ನ ಹೊರತು ಪೊರೆವ ಧೊರೆಗಳ ಕಾಣೆ | ಶರಣಜನರಿಷ್ಟವನೆ ಸುರತರುವಿನಂತೀವೆ ಪ ತರಳಪ್ರಹ್ಲಾದನಾಗಿರಲು ವರಭಕುತಿಯಿಂ | ನರಹರಿಯ ಮೆಚ್ಚಿಸಿದೆ ಪರಮಕರುಣಾಸಿಂಧೊ 1 ವ್ಯಾಸಮುನಿಯು ನೀನೆ ವಾಸುದೇವನ ಭಜಿಸಿ | ಲೇಸಾದ ಚಂದ್ರಿಕೆಯ ಭೂಸುರರಿಗರುಹಿದೆ 2 ಶ್ರೀರಾಮಚಂದ್ರಪದಸರಸೀರುಹಾಭೃಂಗ | ಶ್ರೀ ರಾಘವೇಂದ್ರಯತಿ ಸುರುಚಿರಕೃಪಾಪಾಂಗ 3 ನರಹರಿ ಸಿರಿರಾಮ ಮುರವೈರಿ ಮುನಿವ್ಯಾಸ | ಇರುತಿಹರು ನಿನ್ನೊಳು ಧರೆಯ ಪಾಲಿಸೆ ಮುದದಿ 4 ಕರೆದಲ್ಲಿ ಬರುವೆನೆಂದೊರೆದ ವಚನವ ಸಲಿಸೆ | ಭರದಿ ನಾರಾಯಣಪುರಕೈದಿದಿಯೊ ಮುದದಿ 5 ಭೀಮಸೇತ್ವ್ಯಾಖ್ಯ ಮಠ ಸೋಮರಘುತಿಲಕರಿಂ | ದೇ ಮಹಾಸೇವೆಯ ಕೈಗೊಂಡೆಯೋ ಮುದದಿ 6 ದೋಷದೂರನೆ ಪ್ರಭುವೆ ಆಶೆಯಿಂ ಸೇವಿಪರ | ಕ್ಲೇಶವೆಲ್ಲವನಳಿದು ಶ್ರೀಶಕೇಶವನೊಲಿಸೊ 7
--------------
ಶ್ರೀಶ ಕೇಶವದಾಸರು
ಜಗಜಗಿಸುವ ಈ ಸೊಗಸಿನ ಪೀಠಕೆ ನಗುನಗುತ ಬಾರೊ ದೇವ ಪ ಗಗನರಾಯನಿಗೆ ಮಗಳೆಂದೆನಿಸಿದ ಜಗಕೆ ಜನನಿ ಕೈಮುಗಿದು ಪ್ರಾರ್ಥಿಸುವಳು ಅ.ಪ ಅಂಗನೆಯರು ಶ್ರವಣಂಗಳ ತುಂಬುವ ಸಂಗೀತದ ಸಾರಂಗಳರ್ಪಿಸುವರೊ 1 ನಾದಸ್ವರದ ಸೊಗಸಾದ ಧ್ವನಿಗಳಲಿ ನಾದ ಬ್ರಹ್ಮನು ತಾ ಕಾದು ನೋಡುತಲಿಹ 2 ಪರಿಮಳ ಪುಷ್ಪದ ಸುರಿಮಳೆ ನೋಟವು ಸ್ಮರಣೆಗೆ ತರುವುದು ಸಿರಿಯ ವಿವಾಹವ 3 ಭೂಸುರರೆಲ್ಲರು ಆಶೀರ್ವಚನವ ಶ್ರೀಶ ನಿನ್ನಯ ಸಂತೋಷಕೆ ನುಡಿವರು 4 ಸುಖ ಸಂತೋಷವು ಮುಖ ಮುಖದಲಿಹುದು ತವ ಸುಖಾಗಮನದಿಂ ಲಕುಮೀ ಪ್ರಸನ್ನನೇ 5
--------------
ವಿದ್ಯಾಪ್ರಸನ್ನತೀರ್ಥರು
ತತ್ವಸುವಾಲಿಗಳು ಓಂಕಾರ ಪ್ರತಿಪಾದ್ಯ ಶ್ರೀಕಾಂತನೇ ನಿನ್ನ ಭವ ಭಂಗವ ಗೈಸಿ ಶುಭಾಂಗನೆ ಕಾಯಯ್ಯ ಶ್ರೀರಂಗ 1 ಕಾಲತÀ್ರಯಕೃತ ವಿಕಾರವಿಲ್ಲದೆ ನೀನೆ ಮೂಲರೂಪನೆ ಬಹು ರೂಪ-ಬಹುರೂಪ ಸ್ವಗತಭೇದ ವಿವರ್ಜಿಕನೆ ಸಲಹಯ್ಯ 2 ಆವಕಾಲಕು ನೀನೆ ಚತುರ ರೂಪದೊಳಿದ್ದು ಜೀವ ನಿಯಾಮನು ನೀನಾಗಿ-ನೀನಾಗಿ ವಿಶ್ವ ತೈಜಸ ಪ್ರಾಜ್ಞ ತುರ್ಯಾತ್ಮ3 ಶುಭ ವಿಷಯಂಗಳಾ ಮಾಡಿ ಉಣಿಸುವೆ 4 ವಿಶ್ವದಲಿ ವ್ಯಾಪಿಸಿಹೆ ವಿಶ್ವನಂಬೋರು ನಿನ್ನ ನಾಶರಹಿತನೆಂದೂ ನರನೆಂದೂ-ನರನೆಂದೂ ನಿನ್ನ ವೈಶ್ವಾನರನು ಎಂದು ಪೇಳ್ವಾರೊ 5 ಹರಿ ನಿನ್ನ ವಿಶ್ವನೆಂದು ಉಪಾಸನೆಯನು ಮಾಡಿ ಹೇರಂಬ ನಿನ್ನ ಒಲಿಸಿದಾ-ಒಲಿಸಿದಾ ಗಜವಕ್ತ್ರನಾಗಿ ನಿನ್ನ ಸ್ತುತಿಪಾನೋ 6 ದೇಹದೊಳು ಸ್ವಪನದಲಿ ನೀ ನೀಡಿ-ನೀ ನೀಡಿ ಜೀವರುಪಭೋಗಿಸುವ ಸಾರವನು ರಕ್ಷೀಪೆ 7 ತೈಜಸನೆ ವಾಸನಾಮಯವೆಲ್ಲ ತೋರೀಪೆ8 ತತ್ವಗಳ ವ್ಯಾಪಾರವೇ ವ್ಯಾಪಾರ9 ಸುಪ್ತಕಾಲದಿ ಜೀವ ಸ್ವರೂಪಕೆ ತಕ್ಕ ಕ್ಲುಪ್ತ ಅಜ್ಞಾನ ಮೊದಲಾದ-ಮೊದಲಾದ ಕಾಲವನನುಸರಿಸಿ ಜೀವನಿಗೆ ತನ್ನ ತಿಳಿಯಗೊಡದೆ 10 ಪ್ರಾಜ್ಞಮೂರುತಿ ನೀನೆ ಹೃದಯಸ್ಥಾನದೊಳಿದ್ದು ಅಜ್ಞಾನಿ ಜೀವನ ಕಾಲಾವ-ಕಾಲಾವ ನನುಸರಿಸಿ ಜೀವ ಸ್ವರೂಪಾನಂದವÀನು ನೀನೀವೆ11 ಸ್ವಪನ ಜಾಗ್ರತ ಜ್ಞಾನವಿನಿತಿಲ್ಲವೆಂದು ಕೂಡುವ ಜೀವ ಆನಂದ ಹಿಂದೆಂದೂ ಕಾಣನೊ12 ಘನ ಬಹಿ ಪ್ರಾಜ್ಞ ತೈಜಸಾಂತ ಪ್ರಾಜ್ಞ ಘನ ಪ್ರಾಜ್ಞ ಮೂರುತಿ-ಮೂರುತಿ ಗಳುಪಾಸನೆ ಮಾಳ್ವ ಬುಧರೇನು ಧನ್ಯರೊ 13 ನಾಗಿ ನೀ ಕೊಡುತಿರುವೆ ಮುಕ್ತರಿಗೆ ಆನಂದ 14 ಮುಕ್ತರಿಗೆ ದೃಷ್ಟನೋ ಅದೃಷ್ಟನೋ ಅ- ಗುರುಪ್ರಾಣನನುಗ್ರಹದಿ ಲಭ್ಯನಹುದಯ್ಯಾ ಹೇ ಜೀಯ 15 ಕಣ್ಮನ ಹೃದಯ ತ್ರಿಧಾಮಗಳಲ್ಲಿ ಇದ್ದು ಉಣಿಸೂವೇ ಜೀವರಿಗೆ ಫಲಭೋಗ-ಫಲಭೋಗವು ವಿಶ್ವತೈಜಸ ಪ್ರಾಜ್ಞ ಸ್ಥಿತಿಯೊಳು 16 ಸರ್ವರೂಪವು ಪೂರ್ಣ ಸರ್ವಗುಣ ಸಂಪೂರ್ಣ ಸರ್ವೋತ್ಪಾದಕ ಸುಖರೂಪಿ-ಸುಖರೂಪಿ ಸರ್ವಲೋಕ ಜೀವರೊಳಿದ್ದು ನಿರ್ಲಿಪ್ತಾ 17 ವರ್ಣತ್ರಯಯುತ ಓಂಕಾರದೊಳಾದ್ಯವರ್ಣ ವಿಶ್ವ ನೀನೆ-ವಿಶ್ವನು ನೀನೆ ಉಕಾರವೇ ತೈಜಸನು ಮಕಾರ ವಾಚ್ಯನೇ ಶ್ರೀಪ್ರಾಜ್ಞ 18 ನಾದದೊಳು ನೀ ವಾಚ್ಯ ತುರ್ಯರೆಂಬೋರು ನಿನ್ನ ಸದನವಾಗಿಹುದೈ ಶಿರಸ್ಥಾನ-ಶಿರಸ್ಥಾನ ನಾಶಿಕಾಗ್ರದಿ ಊಧ್ರ್ವ ದ್ವಾದಶಾಂಗುಲದಲ್ಲಿ ನೆಲೆಸಿರ್ಪೆ 19 ತೈಜಸನೊಡಗೂಡಿ ವಾಸನಾ-ವಾಸನಾಮಯ ಕಳೆವ ಅಜ್ಞಾನಿ ಜೀವನನ್ನಾಡಿಸುವೆ ಶ್ರೀಪ್ರಾಜ್ಞ 20 ಸರ್ವಶಕ್ತನು ನೀನೆ ಸರ್ವಕತರ್Àನು ನೀನೆ ಸವೋತ್ತಮನು ನೀನೆ ಸರ್ವಜ್ಞ-ಸರ್ವಜ್ಞ ಪೂರ್ಣಪ್ರಜ್ಞಾಂತರ್ಯಾಮಿ ಸಲಹಯೈ21 ಪಲವಿಲ್ಲ ವಾಸುದೇವನೆ ನಿನ್ನ ದಯ ಬೇಕೊ 22 ನೀ ಸುಮ್ಮನಿರದೆ ಎನ್ನನೂ-ಎನ್ನನು ಪ್ರೇರಿಸುವೆ ಲೇಸುಮನ ನಿನ್ನಲ್ಲಿ ನೆಲೆಸಲೋ 23 ಕಂಡಕಂಡಲ್ಲಿ ನಾ ಉಂಡುಂಡು ಓಡಾಡಿ ಧಾಂಡಿಗನಾಗಿ ಬೆಳೆದೆನೊ-ಬೆಳೆದೆನೊ ಪುಂಡರೀಕಾಕ್ಷ ನಿನ್ನ ಮರೆತೆನೋ24 ಅವಾವ ಕಾಲದೊಳು ನೀನಿದ್ದು ಉಣಿಸುವೆ ಜೀವಕೃತ ಕರ್ಮಫಲಗಳ-ಫಲಗಳ ಶ್ರೀ ವೇಂಕಟೇಶ ನೀನಿತ್ತು ಸಲಹೂವೇ 25 ವಂದನೆಯು ಒಂದೆ ಮನದಿಂದೆ-ಮನದಲಿ ನಿನ್ನ ಪಾದಾರವಿಂದವ ತೋರಯ್ಯ26 ಬಂಧುಗಳು ಹಿತರೆನ್ನೆ ಬಂಧಕರಾಗಿಹರು ಬಂಧನಕೆ ನಾ ಇನ್ನು ಸಿಲುಕಿದೆ 27 ಘನವಾಗಿ ತನು ಬೆಳೆಸಿ ಹಿತದಿಂದ-ಹಿತದಿಂದ ಮುಂದೆ ಪರಗತಿಯ ಕಾಣುವುದೆಂತೊ ಗೋವಿಂದ28 ವಿತ್ತಾಪಹಾರಕರು ಹೃತ್ತಾಪಕಳೆವರೆ ಉತ್ತಮಗತಿಯ ತೋರಿಸು29 ಹರಿಕಥಾಪುರಾಣಶ್ರವಣ ನಿತ್ಯದೀ ಮಾಡೀ ಪರಿಯಿಂದ ನಿಜತತ್ವವರಿಯಾದೆ-ಅರಿಯಾದೆ ಬರಿದೇ ವಿಪರೀತ ಜ್ಞಾನಕೆ ವಶನಾದೆ30 ಮದ್ಯ ತುಂಬಿದ ಭಾಂಡ ಗದ್ಗುಗೆಯ ಮೇಲಿಟ್ಟು ಶ್ರಧ್ದೆಯಿಂದಲಿ ಅದನ ಪೂಜಿಸೆ-ಪೂಜಿಸೆ ಪೂತÀ ದುರ್ಗಂಧ ಫಲವದು ಬಿಟ್ಟೀತೆ 31 ಮಂದಹಾಸದಿ ಜನರ ಸಂದೋಹದಲಿ ಕುಳಿತು ನಿಂದೆ ಮಾತುಗಳಾಡಿ ಮದತುಂಬೀ-ಮದತುಂಬಿಬಿದಾ ದುರ್ಮ ದಾಂಧರಿಗೆ ಗತಿಯು ಮುಂದೆ ಇನ್ನೆಂತೊ32 ಕಂಡಕಂಡವರಲ್ಲಿ ಕೊಂಡೆ ಮಾತುಗಳಾಡಿ ಪುಂಡರೀಕಾಕ್ಷ ನಿನ್ನ ಸ್ಮರಿಸಾದೆ-ಸ್ಮರಿಸದಲೆ ಪರದಿ ಯಮದಂಡಕ್ಕೆ ಗುರಿಯಾದೆ33 ಹಿಂದೆ ಮಾಡಿದ ಪುಣ್ಯದಿಂದ ಇಂದಿನ ಭಾಗ್ಯ ವೆಂದು ತಿಳಿದು ಮುಂದೆ ನಡೆಯಾದೆ-ನಡೆಯಾದೆ ತಿಳಿಗೇಡಿ ಬುದ್ಧಿಯಿಂದ ಕುಂದುಪೊಂದುವೆ 34 ಬಾಯಿಮಾತಲ್ಲ ಶ್ರೀ ತೋಯಜಾಕ್ಷನ ಭಕ್ತ- ರಾಯತನ ತಿಳಿವುದು ಶ್ರಮಸಾಧ್ಯ-ಶ್ರಮಸಾಧ್ಯ ವನು ಸದುಪಾಯದಿಂದ ತಿಳಿದು ನಲಿದಾಡೊ 35 ನಿಂದಕರ ನುಡಿಯಿಂದ ಹಿಂದೆ ಮಾಡಿದ ಪಾಪ ಒಂದೊಂದು ಪರಿಯಲ್ಲಿ ಪರಿಹಾರ-ಪರಿಹಾರವಾಗಿ ನಿಂದಕರು ಬಂಧನಕೆ ಬೀಳ್ವಾರೋ 36 ಸ್ಮøತಿಯುಕ್ತಿಯನೆ ಬಿಟ್ಟು ಯುಕ್ತಿಮಾತುಗಳಿಂದ ಹೊತ್ತು ಕಳೆಯುತ ಉನ್ಮತ್ತನೆನಿಸಿ-ಉನ್ಮತ್ತನೆನಿಸಿದವ ಇ- ನ್ನೆತ್ತÀ್ತ ಭವಶರಧಿಯ ದಾಟÀುವ 37 ಅರೆಘಳಿಗೆ ಕಳೆದುದಿಹ ನರಜನ್ಮ-ನರಜನ್ಮ ಬಂದುದು ನರಕಯಾತನೆಗಲ್ಲದಿನ್ನಿಲ್ಲ 38 ಪರಿಯಂತ ಉದರಭರಣಕಾಗಿ ಉದಧಿಶಯನ ನಾ ನಿನ್ನ ಭಜಿಸಾದೆ-ಭಜಿಸಾದೆ ಮದದಿಂದ ಬುಧಜನರ ನಿಂದೆಯ ಮಾಡೀದೆ39 ಇನ್ನಲ್ಲ ಪರಗತಿಯ ಸಾಧನ-ಸಾಧನವು ತನ್ನೊಳು ತÀನ್ನಿರವರಿತು ಸುಮ್ಮನಿರುವುದು ಅದು ನಿಧಾನ40 ಭಿನ್ನಧರ್ಮಂಗಳ ಗ್ರಹಿಸಾದೆ-ಗ್ರಹಿಸಾದೆ ನೀನೆಣಿಸಿದೆ ತನ್ನಗುಣಧರ್ಮದಂತನ್ಯರಿಹನೇನೊ 41 ಕಾಯವೇ ತಾನೆಂದು ಮಾಯಕೆ ಒಳಗಾಗಿ ಕಾಯಯಾತನೆಗೊಂಡು ನೋಯುವಾ 42 ವಚನ ವಚನವು ಸರ್ವ ಉಚಿತ ದೇಹದ ಕಾರ್ಯ ನಿಚಯದೊಳು ಹರಿ ಪ್ರಚುರನಾಗಿ-ಪ್ರಚುರನಾಗಿ ಕಾಯಕುಪಚಯವಿತ್ತು ಸಲಹೂವ 43 ದೇಹ ಕಾಯದ ಕಾರ್ಯಪ್ರಕ್ರಿಯವ ತಿಳಿಯಾದೆ ಮಾಯೆಗೊಳಗಾಗದಿರು ಹೇ ಮಾನವಾ-ಮಾನವನೆ ತಿ- ಳಿಯೊ ಮಾಯಾರಮಣನ ಬಿಂಬಕ್ರಿಯವಾ44 ಅನ್ಯರೊಳು ನೀ ಹೋರಾಡಬಲ್ಲೆಯ-ಬಲ್ಲೆಯಾ ನಿನ್ನ ವೈರಿಗಳ ಜಯಿಸಲರಿಯದ ಖೂಳ ರಣಹೇಡಿ 45 ಕೊಳೆತು ನಾರುವ ದೇಹದೊಳಗಿರುವ ಹುಳುಕುಗಳ ಕೊಳೆಯ ಕಳೆಯದ ಮನುಜ ನೀನೆಂತೊ-ನೀನೆಂತೊ ಕೊಳೆತÀ ಸಗಣಿಯೊಳಗಿಹ ಹುಳುವೆ ನಿನ್ನ ಗತಿಯೆಂತೊ46 ಆದದ್ದು ಆಯಿತು ಯತ್ನ ತಪ್ಪಿತು ಎಂದು ಹೆದ್ದಾರಿ ಹಿಡಿದು ಪರಮಾರ್ಥ-ಪರಮಾರ್ಥವ ಬುದ್ಧಿ ತಿದ್ದಿಕೊಳ್ಳಲು ಮುಂದೆ ಅನುವಾಗೊ47 ತತ್ತ ್ವದೇವತೆಗಳು ತತ್ತತ್ವಕಾರ್ಯಜಿ- ವೋತ್ತಮನಾಜ್ಞೆಯಿಂ ತಾವ್ ಗೈವರೊ-ತಾವ್‍ಗÉೈ ಯುತ್ತಲಿರೆ ನಾನೆತ್ತ ಮೃತ್ತಿಕಾಪ್ರತಿಮೆಯೋ48 ಒಂದೊಂದು ರೀತಿಯಿಂ ಚೆಂದಾಗಿ ಯೋಚಿಸು ಮಂದಮತಿಯು ನೀನು ಹಿಂದೆಂತೂ-ಹಿಂದೇನು ವಂದನೆಯೊಂದಲ್ಲದಿನ್ನಿಲ್ಲ49 ಡಾಂಭಿಕತನ ಬಿಟ್ಟು ಡಿಂಬದೊಳು ಸರ್ವದಾ ಅಂಬುಜನಾಭನೇ ಇಂಬಾಗಿ-ಇಂಬಾಗಿ ಸರ್ವತ್ರ ತುಂಬಿಕೊಂಡಿಹನೆಂದು ನಲಿದಾಡೋ 50 ತುಷ್ಟಿಯಾಗಿರು ನೀನು ಕೊಟ್ಟಷ್ಟು ಲಾಭಕ್ಕೆ ದುಷ್ಟವಿಷಯಗಳಿಗೆ ಎರಗಾದೆ-ಎರಗಾದೆ ಇರಲು ಸಂ- ತುಷ್ಟ ನಾಗುವನಯ್ಯ ಶ್ರೀಕೃಷ್ಣ51 ಕಾಯ ನಿನ್ನದು ಅಲ್ಲ ಮನವು ಅಧೀನವಲ್ಲ ಹೇಯವಿಲ್ಲದೆ ಮಾಯಕೊಳಗಾಗಿ ಮರುಳಾಗದಲೆ-ಮರುಳಾಗದಲೆ ಮಾಯಾರಮಣನ್ನ ನೆನೆಯೊ ನಿರ್ಭಯದಿಂದ 52 ಹಲವು ಶಾಸ್ತ್ರವ ನೋಡಿ ತಲೆಹರಟೆಯ ಬಿಟ್ಟು ಅಲವಬೋಧರ ತತ್ತ ್ವಸುಧೆಯನ್ನು- ಸುಧೆಯನ್ನು ಸವಿದು ನಿ-
--------------
ಉರಗಾದ್ರಿವಾಸವಿಠಲದಾಸರು
ತುಳಸಿ ತುಳಸಿ ಪೂಜೆ ಮಾಡಿ ಹರಿ ಪ್ರೇಮದ ಪ. ಹಳದಿ ಕುಂಕುಮ ಪರಿಮಳದ ಗಂಧದಿ ಅಂಗಳದಿ ಶೋಭಿಪ ಹರಿಸತಿ ಅ.ಪ. ಆದಿಯಲಿ ತಾ ಮೋದದಿಂದಲೆ ಮಾಧವ ಪ್ರಿಯೆಯನು ದ್ರೌಪದಿ ಪೂಜಿಸೆ ಮೋದದಿಂದಕ್ಷಯ ಪಾತ್ರೆಯೊಳ್ ಪಾಕವ ಸತಿ ತುಳಸಿ 1 ಪರಿಪರಿ ಭಾಗ್ಯಕೆ ಹಿರಿಮೆ ಶ್ರೀ ತುಳಸಿ ಯೆಂ ದರುಹಿದ ನಾರದ ವರ ವಚನವು ಎಂದು ಪರಮಾದರದೊಳು ಪೂಜಿಸಿ ತುಳಸಿಯ ಹರಿಗೆ ಅರ್ಪಿಸೆ ಹರುಷವ ಕೊಡುವ 2 ಉದಯ ಕಾಲದಿ ಮುದದಿ ಪೂಜಿಸಿ ಮಧುರ ಸ್ವರದಿ ಮಾಘದ ಮಾಸದಲಿ ಮುದದಲೊಂದಿಸೆ ವದಗಿದಾಪತ್ತನು ಚದರಿಸಿ ಕಳೆದು ಶ್ರೀ ಶ್ರೀನಿವಾಸನ ಮುದದಿ ತೋರುವ ಶ್ರೀ ತುಳಸಿ 3
--------------
ಸರಸ್ವತಿ ಬಾಯಿ
ದಾಸ ನಾನೆಂಬೇ ಗುರು ಭಕುತರಾ ಪ ಗುರುವೇ ಜನಕ ಘನ ಗುರುವೇ ಜನನಿಯ | ಗುರುವೇ ಗೆಳೆಯ ನಿಜ ಗುರುವೇ ಆತ್ಮನು | ಗುರುವೇ ಬಂಧುವು ಗುರುವೇ ಇಷ್ಟನು | ಗುರುವೇ ಗತಿಮತಿ ಗುರುವೆಂದವರಾ 1 ಗುರುವೇ ಚತುರ್ಮುಖ ಗುರು ಕಮಲಾಂಬಕ | ಗುರುವೇ ಸದಾಶಿವ ಗುರುವೇ ಸಂತರು | ಗುರುವೇ ಸುರಭಿಯ ಗುರು ಚಿಂತಾಮಣಿ | ಗುರು ಧನದ್ರವ್ಯನು ಗುರುವೆಂದವರಾ 2 ಗುರು ವಚನವೇ ಶೃತಿ ಗುರುದಯ ಮುಕ್ತಿಯು | ಗುರು ಗೃಹ ಕ್ಷೇತ್ರವು ಗುರು ನೋಟ ಪರಸವು | ಗುರು ಸ್ಮರಣೆಯೇ ಜಪ ಗುರು ಮಹಿಪತಿ ಪ್ರಭು | ಗುರು ಭಕ್ತಿಯೇ ತಪ ಗುರುವೆಂದವರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾಸರ ನೋಡಿರೈ ಮನದಭಿಲಾಷೆಯ ಬೇಡಿರೈ | ಭಾಸುರ ಕಾರ್ಪರಾಧೀಶನಾ ಸನ್ನಿಧಿ ವಾಸ ಕೃತನತ ಪೋಷಾ || ಹಿಂದೆ ಪ್ರಲ್ಹಾದನು ಮಾತೆಯ ಗರ್ಭದೊಳಿರಲು ಮುಂದೆ ಈತ ಹರಿಭಕ್ತಾಗ್ರೇಸರನೆಂದು ಮನಸ್ಸಿಗೆ ತಂದು | ಛಂದದಿ ಹರಿಪರನೆಂಬೊ ತತ್ವ ಬೋಧಿಸಿದ ಜ್ಞಾನವ ಗರೆದ || ವೃಂದಾರಕ ಮುನಿಯೆಂದಿವರನು ಭಾವಿಸುತ ಅಭಿವಂದಿಸುತ 1 ಬೋಧ ಸಚ್ಛಾಸ್ತ್ರ ಧರ್ಮವ ಮುದದಿ ತಿಳಿಗನ್ನಡದದಿ ಸತಿ ಸುಳಾದಿ ರೂಪದಿ ವಿರಚಿಸಿ ದಯದಿ ಸಾರುತ ಜಗದಿ | ಬಲುವಿಧ ಭವದೊಳು ಬಳಲುವ ಸಜ್ಚನ ಕೊಲಿದ ಕಲುಷವ ಕಳೆದ | ಇಳೆಯೊಳು ಇವರು ಪೇಳಿದ ವಚನವು ವೇದ ದೊಳಗಿನ ಸ್ವಾದ 2 ಈ ಮಹಾಕ್ಷೇತ್ರದ ಸ್ವಾಮಿ ನರಸಿಂಹ ಪಾದ ಅರ್ಚಕರಾದ | ಭೀಮಾರ್ಯರ ಸದ್ಭಕ್ತಿಗೆ ನೆಲಸಿಹರಿಲ್ಲಿ ಅನುದಿನದಲ್ಲಿ || ನೇಮದಿ ತನ್ನನು ಸೇವಿಪ ಭಕುತರ ಕರವ ಕರುಣದಿ ಪಿಡಿವ || ಜಗದೊಳು ಮೆರೆದ 3
--------------
ಶಾಮಸುಂದರ ವಿಠಲ