ಒಟ್ಟು 69 ಕಡೆಗಳಲ್ಲಿ , 18 ದಾಸರು , 66 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲಿರಾಯ ಬಂದಿಹನು ಕಾಣಿಕೆಯ ಪಿಡಿದು ಚೆಲುವಿನಿಂದನುಸರಿಸಿ ಕುಲವನುದ್ಧರಿಸಿ ಪ ಮೂರು ಯುಗದೊಳು ತಾನು ಸೇರಿಕೊಂಡನು ವನವ ಚೋರರಾಯರ ಸಂಗ ಬೇಡವೆನುತ ವೀರನಾಗಿಯೆ ಬಂದ ನಾಲ್ಕನೆಯ ಯುಗದೊಳಗೆ ಸಾರಿ ಬನ್ನಿರೊ ನಮ್ಮ ದೊರೆಯ ಮನ್ನಿಸಲು 1 ಮದಮುಖರ ಕಾಣುತಲೆ ಮುದದಿಂದ ಮನ್ನಿಸುತ ಕದನಕರ್ಕಶರನ್ನು ಕಾಮಿಸುವನು ಒದಗಿದನ್ಯಾಯಗಳನೊಲಿಸಿಕೊಂಬನು ತಾನು ಬೆದರಿಕೆಯು ಬೇಡ ನೀವಿದಿರುಗೊಳ ಬನ್ನಿ 2 ಸತ್ಯವೆಂಬುದನೆಲ್ಲ ಹತ್ತಿಸಿದ ಬೆಟ್ಟವನು ಮಿಥ್ಯ ನಿರ್ಮಳಕೆಲ್ಲ ಕುತ್ತಿಗೆಗೆ ಬಂತು ಒತ್ತಿಯಾಳುವ ಧರ್ಮ ಸತ್ತು ಹೋದನು ಹಿಂದೆ ಮೃತ್ಯು ಭಯ ನಮಗಿಲ್ಲ ಹತ್ತಿರಕೆ ಬನ್ನಿ 3 ತಪ್ಪಿ ಹೋಯಿತು ಶಾಸ್ತ್ರ ತಪ್ಪಾಯ್ತು ಪೌರಾಣ ಮುಪ್ಪು ಬಂದುದು ವೇದ ಕಪ್ಪಾದನಗ್ನಿ ತುಪ್ಪನ್ನ ಬೇಡವಗೆ ಇಪ್ಪ ಭಯಗಳು ಹೋಯ್ತು ಒಪ್ಪಿ ಕಾಣಿಸಿಕೊಂಡು ಸುಖಿಯಪ್ಪ ಬನ್ನಿ 4 ಸ್ನಾನವೆಂಬುದು ಯೆಲ್ಲ ಮಾನಿನಿಯ ಅಡಿಗೆಯೊಳು ಮೌನ ಜಪಗಳನೆಲ್ಲ ಕೃಷಿಕೊಂಡನು ಹಾನಿಯಾದರು ಯಜ್ಞಹೀನರಾದರು ಪಿತೃಗ ಳೇನ ಮಾಡುವರಿವರು ಅನುಮಾನ ಬೇಡೆನುತ 5 ದಯಯೆನಿಪವನು ಹೋಗಿ ಕೊಯ್ಸಿಕೊಂಡನು ಕೊರಳ ಭಯವಿಲ್ಲ ಹಿರಿಯರೂ ವ್ಯಯವ ಸೇರಿದರು ನಯನೀತಿ ಹೇಳುತಿಹ ಗುರುವಿನೊಳು ಕಣ್ಣಿಲ ್ಲ ಜಯವಾಯ್ತು ದೇಶದೊಳು ಹೊಯ್ಸಿ ಡಂಗುರುವ 6 ಶಿವನು ದುರ್ಗವ ಬಲಿದ ಜವನು ದಂಡವನಿಟ್ಟ ಬವಣೆಬಡುವನು ಕಮಲಭವನು ತನ್ನೊಳಗೆ ಹವಣನರಿಯದೆ ವಿಷ್ಣು ತವಕಿಸುವ ಮನದೊಳಗೆ ಕವಲು ಮನ ಬೇಡಿರಲು ಬಹುದು ಇವನೊಳಗೆ 7 ಪತಿಯ ಮರೆತಳು ಸತಿಯು ಸುತ ಮತಿಯ ತಪ್ಪಿದನು ಯತಿ ಸತತ ಮನದೊಳಗೆ ಖತಿಗೊಂಬನು ಚತುರವರ್ಣಾಶ್ರಮವ ಜೊತೆಯಾಗಿ ನಡೆಸುತಿಹ ಮತಿಯುತನು ದೃಢವೆಂದು ಕಾಯವನುಸರಿಸಿ8 ತಾಯಿ ತಂದೆಯ ಕೊಂದು ಜೀವ ಹಾನಿಯ ಮಾಡಿ ಬಾಯ ಹೊಯ್ದರು ಕೇಳ ಬಡವರನ್ನು ಮಾಯವಾದಿಯ ಮಾತು ಕೂಡಿಸುವ ಜೀವವನು ರಾಯರಾಯರ ಮುಂದೆ ನಡೆಸುತ್ತಲಿಹರು 9 ಆಡಿಗಾರರ ತಂದು ನಾಡ ಊಳಿಗಕಿಡುವ ನೋಡಿದನ್ಯಾಯ ಮಾತುಗಳ ಹಿಡಿತರುವನು ಕೂಡಿಸುವ ಜೀವವನು ಎಳೆನೀರು ಸಕ್ಕರೆಯು ಬೇಡಿದಿಷ್ಟಾರ್ಥದೊಳು ನೋಡಿ ನಡೆಸುವನು 10 ಕೆಟ್ಟನೀತಿಯ ಒಳಗೆಯಿಟ್ಟುಕೊಂಡರೆ ನಿಮ್ಮ ಗಟ್ಟಿಬಡಿಸುವ ದೊರೆಯು ದೃಷ್ಟಿಯಲಿ ನೋಡ ಕಷ್ಟವಿಲ್ಲದೆ ಸುಖದಿ ಹೊಟ್ಟೆಯನು ಹೊರಕೊಂಡು ಸೃಷ್ಟಿಯೊಳು ವರಪತಿಯ ಮುಟ್ಟಿ ಸೇವಿಪುದು 11 ಕಾಲದರಸಿನ ನೋಡಿ ಮೂಲ ಪಡಕೊಂಬುವರು ಆಲಸ್ಯವನು ಬಿಟ್ಟು ಸೇವಿಸುವುದು ಶಾಲು ಸಕಲಾಭರಣ ತೋಲಾಗಿ ಬರುತಿಹುದು ಜಾಲರೂಪವದಾಗಿ ಮನಕೆ ತೋರುವುದು 12 ತಾಯಿ ತಂಗಿಯರನ್ನು ಮೋಹಿಸಲು ದೊರೆರಾಯ ಬಾಯಹೊಯಿಯೆಂದೆನುತ ನೋಯನುಡಿ ಪೇಳ ಆಯವಾಗಿಹ ಪುರುಷ ಸಾಯಲಾಕ್ಷಣ ಬಂದು ಕಾಯವನು ಬಳಸುವನು ಮೋಹವನು ತೋರಿ13 ಹೀಗೆಂದು ಚರನೋರ್ವ ಕೂಗಿ ಕರೆಯಲು ಬಂದು ಅಗಲೇ ಎದ್ದು ಇದಿರಾಗಿ ಪರಿಜನವು ಬೇಗದೊಳಗನುಸರಿಸಿ ಭೋಗವನು ಕೈಕೊಂಡು ರಾಗದೊಳಗಿದ್ದರಾ ಭವಜಲದ ನಡುವೆ 14 ಹೇಡಿಗಳು ಬರಬೇಡಿ ಮೂಡ ಗುಡ್ಡೆಯ ಸೇರಿ ಕಾಡಫಲವನು ಮೆದ್ದು ಕೋಡಗಲ್ಲಿನೊಳು ಆಡುತಿಹ ವರಾಹತಿಮ್ಮಪ್ಪನ್ಹತ್ತಿರದಿ ಬೇಡಿಕೊಳ್ಳಿರೊ ಎನುತ ನೋಡಿ ನಗುತಿಹರು 15
--------------
ವರಹತಿಮ್ಮಪ್ಪ
ಕಾಯ ಸುತ್ತಿ ಬಾಯ ಹೊಯ್ವುದು ಆಯ ತಪ್ಪಿ ಆಯ ಕೆಟ್ಟ ನ್ಯಾಯಬಪ್ಪುದು ಪ ಹೆತ್ತ ತಾಯಿ ತಂದೆಯನ್ನು ಒತ್ತಿ ಬಯ್ವುದು ಅತ್ತೆಯನ್ನು ಕಂಡು ಹರುಷವಿತ್ತು ನಗುವುದು ಮೃತ್ಯುವನ್ನು ತಂದು ತನ್ನ ಹತ್ತಿರಿಡುವುದು ಒತ್ತಿನವನ ಹೊರಗೆ ಸಾರೆನುತ್ತ ನುಡಿವುದು 1 ಗುರುಗಳನ್ನು ಜರೆದು ಕರೆಕರೆಯ ತಪ್ಪುದು ಕೊರಳು ಕೊಯ್ಕರನ್ನು ತಾನು ಸೆರಗ ಪಿಡಿವುದು ಮರವೆ ತೋರ್ಪುದು ಗರುವತನದಿ ಪರರ ಒಡವೆ ಇರುಳು ಸುಲಿವುದು 2 ದಾನದತ್ತವಾದುದನ್ನು ತಾನು ಸೆಳೆಯುವುದು ಮಾನವನ್ನು ಹಿಡಿದು ಮೇಲೆ ಮಾನಯಿಡುವುದು ಜ್ಞಾನಿಯನ್ನು ಕಂಡು ಮನದಿ ಬೇನೆ ತೋರ್ಪುದು ಅನಾಥರನ್ನು ಕಂಡು ಬಹು ಹೀನ ನುಡಿವುದು 3 ಅನ್ನವನ್ನು ಇತ್ತವರ ಮುನ್ನ ಬೈಯ್ವುದು ಭಿನ್ನ ಭೇದ ತೋರಿ ಮನವ ಕನ್ನ ಕೊರೆವುದು ತನ್ನವರ ಮರೆತು ಪರರ ಕನ್ಯೆಗಳುವುದು ಹೊನ್ನ ಬೊಂಬೆಯಂತೆ ಮಾಯೆ ಬೆನ್ನ ಸುಳಿವುದು 4 ತಪ್ಪಿ ನಡೆಯೆ ಈ ಪರಿಯೊಳಿಪ್ಪೆಯೆಂಬುದು ಅಪ್ಪ ವರಾಹತಿಮ್ಮಪ್ಪನ ಸೇರಿಕೊಂಬುದು ಒಪ್ಪಿ ತೋರ್ಪ ಮಾಯೆಯೆಲ್ಲ ತಪ್ಪಿ ಪೋಪುದು ಉಪ್ಪರದ ದಾಸ ಪೇಳ್ದ ಒಪ್ಪಿಕೊಂಬುದು 5
--------------
ವರಹತಿಮ್ಮಪ್ಪ
ಖುಲ್ಲ ಮಾತುಗಳು ನಿಲ್ಲದಾಯುಷ್ಕೀರ್ತಿ ಎಲ್ಲರೊಳು ಕೇಳಿ ಪ ಅರಸು ಸಣ್ಣವನೆಂದು ಸರಸವಾಡಲು ಸಲ್ಲ ಕರೆಸಿ ಕೇಳದ ಮಾತು ಆಡಸಲ್ಲ ಪರಸಖರ ಮನೆಯೊಳಗೆ ಇರಿಸಿಕೊಂಡಿರ ಸಲ್ಲ ಬೆರೆಸಿ ಬಹ ಪಾತಕರ ಅರಸುವರೆ ಸಲ್ಲ 1 ಹಗಲು ಕಳ್ಳನ ಕೈಯ ಜಗಳವಾಡಲು ಸಲ್ಲ ಹಗೆಯೊಡನೆ ಸ್ನೇಹವನು ಮಾಡಸಲ್ಲ ಜಗಳಗಂಟಿಕ್ಕುವನ ಮೊಗದೊಳಗೆ ನಗೆಯಿಲ್ಲ ಅಗಲಿ ಪೋಗುವೆನೆಂಬ ಮಗ(ನು) ಸೊಗ(ಸ)ಲ್ಲ 2 ಒಡೆಯನಿಲ್ಲದ ಊರು ಬಡವರಿಗೆ ಅಳವಲ್ಲ ಕಡು ಚೆಲ್ವೆ ಕುರುಡನಿಗೆ ಮಡದಿಯಹ ಸಲ್ಲ ನುಡಿಯ ತಿಳಿಯದೆ ಇಹನ ಸಾಕ್ಷಿಯನು ಇಡ ಸಲ್ಲ ದೃಢವಾದ ಮೂರ್ಖನೊಳು ಕದನ ಮಾತಿಲ್ಲ 3 ಹರಿದಾಸರೆನಿಸಿದರೆ ಪರಗತಿಯೊಳೆರವಿಲ್ಲ ಗುರುಹಿರಿಯರಾದವರ ಜರೆಯ ಸಲ್ಲ ಕರಕರೆಯ ಬದುಕಿನೊಳು ಬರುವ ಉಡುಗೊರೆಯಿಲ್ಲ ಪರಿ ಸಲ್ಲ 4 ಹರಿಯು ಮುನಿದರೆ ಮರೆಯೊಳಿರಿಸಿ ಕೊಂಬುವರಿಲ್ಲ ಹರಿಯೊಲಿದ ನರನೊಳಗೆ ಗೆಲುವ ಪರಿಯಿಲ್ಲ ವರಾಹ ತಿಮ್ಮಪ್ಪನಿರಲು ಬಲ್ಲ ನರನು ಹರಿದೂಷಕರ ಸರಿಯೊಳಗೆ ನಿಲ್ಲ 5
--------------
ವರಹತಿಮ್ಮಪ್ಪ
ಜಾಣರಾಯಗೆ ಇಟ್ಟ ಕಾಣಿಕೆಯನು ಕೊಟ್ಟು ಪ ಕಷ್ಟಗಳೆಲ್ಲವು ಬೆನ್ನಟ್ಟಿ ಬರುವಾಗ ಕಟ್ಟಿದ ಹರಕೆಗಳೆಲ್ಲವನು ಸಿಟ್ಟು ಮಾಡುವ ಸ್ವಾಮಿ ಇಟ್ಟುಕೊಂಡರೆ ಇನ್ನು ಮುಟ್ಟಿಸಿಕೊಡಬೇಕಲ್ಲಿ ತಿಮ್ಮಪ್ಪನಲ್ಲಿ 1 ಗಂಡ ಹೆಂಡತಿಯು ಮಕ್ಕಳು ಸಹವಾಗಿ ದಂಡು ಮಾಳ್ಪೆವು ತಾವು ಎನುತಲಿ ಉಂಡೆವು ಸ್ಥಿರವಾರ ಊಟವ ಏಕವ ಕಂಡು ಬಹರೆ ಹೋಗುವ ದಯವಾಗುವ 2 ಕಟ್ಟಿದ ಕಾಣಿಕೆ ಇಟ್ಟು ಚರಣದಲ್ಲಿ ಸಾಷ್ಟಾಂಗವು ಎರಗಿದರೆ ದೃಷ್ಟಿಯಿಂದಲೆ ನೋಡಿ ದಯಮಾಡಿ ಕಳುಹುವ ವರಾಹ ನಮ್ಮಪ್ಪ ತಿಮ್ಮಪ್ಪನು 3
--------------
ವರಹತಿಮ್ಮಪ್ಪ
ತಪ್ಪ ಪಾಲಿಸಯ್ಯ ತಿಮ್ಮಯ್ಯ ತಪ್ಪ ಪಾಲಿಸಯ್ಯಪ. ತಪ್ಪ ಪಾಲಿಸದೆಯಿಪ್ಪರೆ ಯೆನ್ನೊಳು ಒಪ್ಪಿಗೆ ಪಟ್ಟೊಲಿಯಪ್ಪ ತಿಮ್ಮಪ್ಪನೆಅ.ಪ. ಜಲಜನಾಭ ನಿನ್ನ ಮಹಿಮೆಯ ನೆಲೆಯನರಿಯದೆನ್ನ ಮನವದು ನೆಲೆಯಿಲ್ಲದ ಭವಜಲಧಿಯೊಳಾಡುತ್ತ ಲಲನಾ ವಿಷಯದ ಬಲೆಗೆ ಮೋಹಿಸಿ ಮನ ಸಿಲುಕಿ ಮಲಿನವಾಯ್ತು ತತ್ವದ ನೆಲೆಯನರಿಯದಾಯ್ತು ಹೀಗೆನ್ನುತ ಕಳೆದುಹೋಯ್ತು ವಿಂಶತಿ ವತ್ಸರಗಳು ತೊಳಲಿ ಸಕಲ ಭವದೊಳಗಾರ್ಜಿತವಹ1 ಹಾಳು ಮನವು ಕೂಡಿ ನಾನಾ ಚಾಳಿ ಮಾಳ್ಪುದಾಡಿ ಬುದ್ಧಿಯ ಪೇಳಿದಷ್ಟು ದುಶ್ಯೀಲವೆ ಮಾಳ್ಪುದು ಆಲೋಚನೆಯೊಳಗೆ ಬಿದ್ದರೆ ಮೇಲಿಲ್ಲವು ಕ್ಷಣಕೆ ತನ್ನಯ ಶೀಲವನೆ ಸ್ವೀಕರಿಸುತಿರುವುದು ಪೇಳಲೇನು ಕರುಣಾಳು ನೀ ಯೆನ್ನಯ2 ನಾನಾ ಕಷ್ಟಪಟ್ಟೆ ಇನ್ನಾದರು ಮಾನಿಸಬೇಕಷ್ಟೆ ಎನ್ನೊಳು ಊನ ಗ್ರಹಿಸಿ ಅನುಮಾನ ಸಾಧಿಸಿದರೆ ನಾನೆಂಬುವದೇನು ಸ್ವತಂತ್ರವ ಕಾಣೆನು ಎನ್ನೊಳಗೆ ಸಂತತ ನೀನೇ ಗತಿಯೆನಗೆ ಇದಕನು- ಮಾನವಿಲ್ಲ ಪಾದಾನತಜನರಾ ಧೀನನೆಂಬ ಬಿರುದಾನಬೇಕಾದರೆ3 ಅಪರಾಧಿಯೆ ನಾನು ಹೇಗೈ ಅಖಿಲಾತ್ಮನು ನೀನು ಹೃದಯದಿ ಕೃಪೆಯ ಬೀರಿ ತೋರಿಪ ಪರಮಾತ್ಮನೆ ಚಪಲನಾಗಿ ಎನ್ನುಪಮೆಗೆಯೊಡ್ಡಿದೆ ಸಫಲವಾಯ್ತು ಎನಗೆ ಕೀರ್ತಿಯು ಅಪಕೀರ್ತಿಯು ನಿನಗೆ ಪಾದವ ಜಪಿಸುವಂತೆ ಕರುಣಿಪುದಿನ್ನಾದರೂ ಕಪಟವಾಯ್ತೆ ಸರೀಸೃಪಗಿರಿರಾಜನೆ4 ದೂಷಣಾರಿ ನಿನ್ನ ಪಾದದ ದಾಸಗೈಯ್ಯೊ ಎನ್ನ ಎನ್ನೊಳು ದೋಷವಿಲ್ಲ ಜಗದೀಶ ಜನಾರ್ದನ ದಾಶರಥಿಯ ಕರುಣಾಶರಧಿಯೊಳಗೆ ಈಸಾಡಿದ ದಾಸ ಕಾರ್ಕಳಾ ಧೀಶ ಶ್ರೀನಿವಾಸ ರವಿಶತ ಭಾಸ ಶ್ರೀಲಕ್ಷ್ಮೀನಾರಾಯಣ ಸ ರ್ವೇಶ ಭಕ್ತಜನಪೋಷ ನೀಯೆನ್ನಯ5
--------------
ತುಪಾಕಿ ವೆಂಕಟರಮಣಾಚಾರ್ಯ
ತಪ್ಪುಗಳೆಲ್ಲವು ಒಪ್ಪುಗೊಳ್ಳಯ್ಯ ಶ್ರೀ ಚಪ್ಪರ ಶ್ರೀನಿವಾಸಪ. ಸರ್ಪರಾಜಗಿರಿಯಪ್ಪ ತಿಮ್ಮಪ್ಪನೆ ದರ್ಪಕತಾತನೆ ತಾ ಸಜ್ಜನಪ್ರೀತಅ.ಪ. ಮಾಧವ ನಿನ್ನಯ ಮಹಿಮೆ ತಿಳಿಯದಪ- ರಾಧವ ಮಾಡಿದೆ ದಾರಿದ್ರ್ಯದ ಪಾದ ದರುಶನದ ಗಾದಿಯ ಕಾಣದಾದೆ ನಾ ದ್ರೋಹಿಯಾದೆ1 ತ್ರಾಣವಿರುವಾಗ ಕಾಣಿಕೆ ಹಾಕಿದೆ ದೀನದಾರಿದ್ರ್ಯದ ಹೊತ್ತಿನಲಿ ಮೇಣದರಿಂದಲಿ ತೆಗೆದು ತೆಗೆದು ಪಂಚ ಪ್ರಾಣಕ್ಕಾಹುತಿಯ ಕೊಟ್ಟೆ ಅಪರಾಧ ಪಟ್ಟೆ2 ಮಂದವಾರದಿಕ್ಕೊಂದೂಟವ ಸತ್ತ್ವ ದಿಂದಿರುವಾಗ ನಾ ನೇಮಗೈದೆ ಮಂದಭಾಗ್ಯ ಜ್ವರದಿಂದ ಪೀಡಿತನಾದ- ರಿಂದೆರಡೂಟವನೂ ಮಾಡಿದೆ ನಾನು3 ಶನಿವಾರಕ್ಕೊಂದಾಣೆ ಕಾಣಿಕೆ ಹಾಕುತ್ತ ಮಿನುಗುವ ಡಬ್ಬಿಯ ನಾ ಮಾಡಿದೆ ಎನಗೆ ದಾರಿದ್ರ್ಯವ ಕೊಟ್ಟ ಕಾರಣದಿಂದ ಹಣವೆಲ್ಲ ಗುಣ ನುಂಗಿತು ಪಾದಕೆ ಗೊತ್ತು4 ದೊಡ್ಡದಾರಿದ್ರ್ಯದ ಗುಡ್ಡೆ ಬಿದ್ದುದರಿಂದ ದುಡ್ಡೆಲ್ಲ ತೆಗೆದೆ ನಾ ದಡ್ಡನಾಗಿ ಅಡ್ಡಬಿದ್ದು ಕೈಯೊಡ್ಡಿ ಬೇಡುವೆ ಸ್ವರ್ಣ ಗುಡ್ಡೆಯ ಮೇಲಿರುವ ಮಹಾನುಭಾವ5 ಭಂಡಾರದ್ರೋಹ ಬ್ರಹ್ಮಾಂಡಪಾಪಾಗ್ನಿಯು ಮಂಡೆಯೊಳುರಿವುದು ಖಂಡಿತದಿ ಪುಂಡರೀಕಾಕ್ಷನೆ ಕರುಣಾಮೃತರಸ ಕುಂಡದೊಳ್ ಮೀಯಿಸಯ್ಯ ವೆಂಕಟರಾಯ6 ದೃಢಭಕ್ತಿಯನು ಕೊಟ್ಟು ಸಲಹಬೇಕಲ್ಲದೆ ಕೆಡುಕು ಮಾಡುವುದೇನು ಜಡಜನಾಭ ಕಡಲಶಯನ ಲಕ್ಷ್ಮೀನಾರಾಯಣ ನ- ಮ್ಮೊಡೆಯ ಪಡುತಿರುಪತೀಶ ರವಿಕೋಟಿಭಾಸ7
--------------
ತುಪಾಕಿ ವೆಂಕಟರಮಣಾಚಾರ್ಯ
ತಿರುಪತಿಯ ಶ್ರೀ ವೆಂಕಟೇಶ ಕಮಲ ಪ ಹೇಮಮುಖದೀ ನದಿಯ ಕಂಡೇ ಗೋಮಿನೀ ಪದ್ಮಾವತಿ ಕಂಡೆಭೂಮಿಸುರರ ಮೇಳವ ಕಂಡೆ ಆ ಮಹಾ ಗಾಳಿಗೋಪುರ ಕಂಡೆ 1 ಸ್ವಾಮಿ ಪುಷ್ಕರಿಣೀಯ ಕಂಡೆ ಭೂಮಿ ವರಹಾ ದೇವರ ಕಂಡೆರಾಮದೂತನ ಪಾದವ ಕಂಡೆ ಸ್ವಾಮಿಯ ಮಹಾದ್ವಾರವ ಕಂಡೆ 2 ಹರಿಯು ಅಡಗಿದ ಹುತ್ತನು ಕಂಡೆ ಹರಿಯಧ್ವಜದ ಸ್ತಂಭವ ಕಂಡೆಪರಿಪರಿ ವೈಭವವನು ಕಂಡೆ ಪರಮಪುರುಷನಾ ಮೂರ್ತಿಯ ಕಂಡೆ 3 ಹರಿಹರಿ ಎನ್ನುವರನು ಕಂಡೆ ಹರಿದು ಒಳ ಪೋಗುವರನು ಕಂಡೆಹರಿಣಾಂಜನದ ತಾಡನ ಕಂಡೆ ಮಣಿಮಯಿಮುಕುಟವನು ಕಂಡೆ 4 ಹಣೆಯಲ್ಲಿಯ ನಾಮವ ಕಂಡೆ ಅನುಪಮಾದಂಗವನೂ ಕಂಡೆಕೊರಳ ಸರಗೀ ಸರಗಳ ಕಂಡೆ ಹರಳು ರತ್ನದಾಭರಣಗಳನು ಕಂಡೆ 5 ಉರದಿ ಶ್ರೀ ಭೂದೇವಿಯರ ಕಂಡೆ ಕರದಿ ಶುಭಶಂಖ ಚಕ್ರಗಳ ಕಂಡೆಗುರು ಶ್ರೀವಾದಿರಾಜರ್ಪಿಸಿದ ವರ ಶಾಲಿಗ್ರಾಮ ಹಾರವ ಕಂಡೆ 6 ಉದಗಿ ಪೀತಾಂಬರವ ಕಂಡೆ ನಡುವಿನೊಡ್ಯಾಣವನು ಕಂಡೆಜಡಿದ ಮಣಿಗಣ ಭೂಷಣನ ಕಂಡೆ ಜಡಜನಾಭನ ಮೂರ್ತಿಯ ಕಂಡೆ 7 ಅಂದದೀ ಕಾಲ್ಗಡಗವ ಕಂಡೆ ಸುಂದರ ಪಾದಗಳ ಕಂಡೆಮಂದಹಾಸ ಮುಖಾಬ್ಜ ಕಂಡೆ ಇಂದಿರೆಯ ರಮಣನ ಕಂಡೆ 8 ಆಗಮ ಶೃತಿ ಘೋಷವ ಕಂಡೆ ಭಾಗವತರಾ ಮೇಳವ ಕಂಡೆಬಾಗಿಲಾ ಬಲ ಹಸ್ತವ ಕಂಡೆ ಭಾಗೀರಥಿಯಾ ಪಿತನವ ಕಂಡೆ 9 ಚಿನ್ನದ ಕೂಪವನೂ ಕಂಡೆ ಅನ್ನಪೂರ್ಣಾದೇವಿಯ ಕಂಡೆರನ್ನದ ಹರಿವಾಣವ ಕಂಡೆ ಉಂಬುವ ವೈಭವವನು ಕಂಡೆ 10 ಕಪ್ಪದ ಕಣಜವನೂ ಕಂಡೆ ತಪ್ಪದೇಹಾರುವವರನು ಕಂಡೆಇಪ್ಪತ್ತು ದುಡ್ಡಿಗೆ ತೀರ್ಥ ಒಪ್ಪಿಲೇಮಾರುದನುರನು ಕಂಡೆ 11 ಸಾಸಿರ ನಾಮಗಳ ಒಡೆಯಾ ವಾಸುದೇವಾಚ್ಯುತನ ಕಂಡೆಕಾಸಿಗೆ ಕೈಚಾಚುವಂಥ ಕೇಸಕ್ಕ ತಿಮ್ಮಪ್ಪನ ಕಂಡೆ 12 ಆವ ಜನುಮದ ಸುಕೃತವೋ ಎನಗೆ ಭೂವೈಕುಂಠವನ್ನೇ ಕಂಡೆಶ್ರೀವಿಧಿಭವಾದಿ ವಂದ್ಯ ಐಹೊಳಿ ವೆಂಕಟೇಶನ ಕಂಡೆ 13 ಶುಭ ಮಂಗಲಂ ಸಿರಿಗೆಜಯ ಪುದವೀ ಪದ ಕೇಳಿ ಪೇಳಿದರೆ ಒಲಿದು ಫಲವೀವ ಕುಲಸ್ವಾಮಿ ಅವರೀಗೆ 14
--------------
ಐಹೊಳೆ ವೆಂಕಟೇಶ
ದಾಸರು ಭಜಿಸುವೆ ನಿನ್ನನು ವಿಜಯದಾಸಾರ್ಯನೆ ಪೊರೆಯೊ ಪ ಭಜಿಸುವೆ ನಿನ್ನ ಪಾದಭಜಕಜನರ ಪಾದ ರಜದೊಳಿಟ್ಟು ನನ್ನ ರಜತಮ ಹರಿಸೊಅ.ಪ ವಿಜಯಸಾರಥಿಪ್ರಿಯ ನಿಜದಾಸ ನೀನೆಲೋ ಗುರುವೆ ಅಜಪಿತನಜಸುತ ನಿಜಲೋಕಗಳೆಲ್ಲ ಬಿಜಯ ಮಾಡಿ ನಿಜಗತಿಪ್ರದನಾರೆಂದು ನಿಜವನರಿತು ದೈವಾವೆಂದರುಹಿದ ಭೃಗುಮುನಿ1 ರಕ್ಷಿಸಬೇಕೋ ಶ್ರೀ ಲಕ್ಷ್ಮೀಶ ದಾಸನೆ ಗುರುವೆ ಪಕ್ಷಿವಾಹನನ ನೀ ವಕ್ಷತಾಡನ ಮಾಡೆ ತಕ್ಷಣ ಕ್ಷಿತಿ ಕುಕ್ಷಿಯೊಳು ಜಗದ್ರಕ್ಷಕನಾದ ಮು ಮುಕ್ಷುಗಳೊಡೆಯನೆ ನೀಕ್ಷಿಸಿದಾ ಧೀರಾ2 ದ್ವಾಪರದಲ್ಲಿ ನಿಕಂಪನೆಂದೆನಿಸಿದೆ ಮೆರೆದೆ ಶಾಪತನದಿ ವ್ಯಾಧರೂಪದಿಂದ ಶ್ರೀ ಗೋಪಾಲಗೆ ಬಾಣ ಮ್ಮಪ್ಪನೆಂದು ತ್ರಿಜಗಕೆ ತೋರ್ದೆ 3 ಉದ್ಧರಿಸಲು ನೀನುದ್ಭವಿಸಿದೆಯೋ ಮಧ್ವಪತಿಯ ಅಭಿದಾನದಿ ನೀನು ಮಧ್ವಾಗಮ ಶೋಧಿಸಿ ಸುಧೆಯ ತಂದು ಶುದ್ಧ ದುಗ್ಧರನೆಲ್ಲ ಉದ್ಧಾರಮಾಡಿ ಪ್ರ ಸಿದ್ಧಿ ಪಡೆದ ಅನಿರುದ್ಧನ ದಾಸನೆ 4 ಪುರಂದರದಾಸರ ವರ ಸುಕುಮಾರ ಧೀರಾ ಉರಗಾದ್ರಿವಾಸವಿಠಲನ ದಾಸ ಭೂಸುರನಾಗಿ ಚಿಪ್ಪಗಿರಿಯೊಳು ಪರಿಪರಿ ಸಾಧನ ತೋರಿ ಮೆರೆವ ಗುರು 5
--------------
ಉರಗಾದ್ರಿವಾಸವಿಠಲದಾಸರು
ದುರ್ಜನರ ಸಂಗವನು ತ್ಯಜಿಸು ಮನವೆ, ಸಾಧು ಸಜ್ಜನರ ಸಂಗವನು ಭಜಿಸಿ ಸುಖಿಯಾಗೆಲವೊ ಪ ದುಷ್ಟ ವ್ಯಾಘ್ರನ ಕೈಯ ಮುಟ್ಟಿ ಹಿಡಿ ತರಬಹುದು ಅಟ್ಟಿಬಹ ಮದಕರಿಯ ಕಟ್ಟಬಹುದು ಕೃಷ್ಣಸರ್ಪನ ಹುತ್ತ ಕಲಕಿ ಜೀವಿಸಬಹುದು ದುಷ್ಟಾತ್ಮರಾದವರ ಬಿಟ್ಟು ಕಳೆ ಮನವೆ 1 ಚೇಳಬಾಲದ ಉರಿಯ ಜ್ವಾಲೆ ತಾಳಲುಬಹುದು ಕಾಲಮೇಘದ ಸಿಡಿಲು ಬೀಳಬಹುದು ಶೂಲಪಾಣಿಯ ಫಣೆಯ ಆಲಿ ಕೀಳಲುಬಹುದು ಕಾಳುಮೂಳರ ಸಂಗ ಮರೆದು ಕಳೆ ಮನವೆ 2 ಹರಿವ ಗರಗಸಿನಲ್ಲಿ ಶಿರವನೊಡ್ಡಲುಬಹುದು ಬೆರಸಿಬಹ ಕಾಡ್ಗಿಚ್ಚ ಧರಿಸಬಹುದು ಸರಿಸದಲಿ ನಿಂತು ಕೇಸರಿಯ ಕೆಣಕಲುಬಹುದು ಮರೆಸಿ ಕೊರಳನು ಕೊಯ್ವ ನರರ ಮರೆ ಮನವೆ 3 ಒಂದು ಜಾತಿಗೆ ವಿಷವು ಪುಚ್ಚದೊಳಗಿರುತಿಹುದು ಮ- ತ್ತೊಂದು ಜಾತಿಗೆ ದಂತದೊಳಗೆ ವಿಷವು ಒಂದು ಜಾತಿಗೆ ಮೈಯ ಅಂದವೆಲ್ಲವು ವಿಷವು ಹಿಂದೆಯಾಡುವ ನುಡಿಯು ಘೋರ ವಿಷ ಮನವೆ 4 ತೇರ ಕಂಡರೆ ತೊಲಗು ಮಾರೈದನಾಕ್ಷಣದಿ ವಾರುವಗೆ ಕಡೆ ಸಾರು ಈರೈದು ಮಾರುವನು ದಾರಿಯನು ಬಿಡು ಗಜಕೆ ಮೂರು ಸಾವಿರವನ್ನು ಊರ ಬಿಡು ದುರ್ಜನರ ಸೇರದಿರು ಮನವೆ 5 ಸತ್ಯವಂತರ ಕಂಡರರ್ಥಿಯಿಂದಲೆ ಎರಗು ನಿತ್ಯದೊಳು ಶ್ರೀಹರಿಯ ಕೀರ್ತನೆಯ ಮಾಡು ಉತ್ತಮೋತ್ತಮ ಪದವ ಹತ್ತಿಸುವವರ ಬೇಡು ಧೂರ್ತಮನುಜರ ಸಂಗ ಕಿತ್ತು ಕಳೆ ಮನವೆ 6 ಶುದ್ಧಮನವೆ ಎನ್ನ ಬುದ್ಧಿಯೊಳಗಡಗಿರ್ದು ಉದ್ಧರಿಸು ವರಾಹತಿಮ್ಮಪ್ಪನನು ನೆನೆದು ಮದ್ದನರೆ ಜನ್ಮದೊಳು ಮರಳಿಬಾರದ ಹಾಗೆ ಗದ್ದುಗೆಯ ಹಾಯ್ಕೆನ್ನ ಹೃದಯ ಮಧ್ಯದಲಿ 7
--------------
ವರಹತಿಮ್ಮಪ್ಪ
ಧನವು ಇದ್ದರೆ ಸಾಕು ಜನರಿಗೆ ಧನವು ಇದ್ದರೆ ಸಾಕು ಪ ಧನದೋರದಾತಗೆ ಗುಣವಿಲ್ಲವನುದಿನ ಧನವಿಲ್ಲದಾತನು ವನದ ಪಾಮರನು ಅ.ಪ ತಂದೆ ತಾಯಿಗಳಿಲ್ಲ ಬಂಧುಬಾಂಧವರಿಲ್ಲ ಹಿಂದುಮುಂದುದಿಸಿದ ತಮ್ಮಂದಿರನೊಲ್ಲ 1 ಒಡವೆಯುಳ್ಳಾತಗೆ ನಡೆಯಬಾರದು ಕಾಲು ನಡೆವಾಗ ಬಡವರ ಎಡವುತ್ತ ಕಾಣನು 2 ಅರ್ಥವ ಪುಂಜಕನರ್ಥ ಯಥಾರ್ಥವು ಧೂರ್ತನಾದರು ತಾನು ಕೀರ್ತಿಸಿಕೊಂಬನು 3 ಸೆಡವೆಂಬ ಪುತ್ರನು ಒಡಲೊಳು ಜನಿಸುವ ಮಡದಿ ಗರ್ವಿತೆಯಾಗಿ ಪಿಡಿದಳು ಕರವನು 4 ಉತ್ತಮೋತ್ತಮನಾಗಿ ಅಧಮನುತ್ತಮನಪ್ಪ ಮೃತ್ಯುಮಾನಿನಿ ವ್ಯರ್ಥ ಮಗನ ಪಡೆಯುವಳು 5 ಉಡಿಗೆ ಆಭರಣಕ್ಕೆ ನುಡಿಯಬಾರದು ಬಾಯಿ ಕಿಡಿಯಿಡೆ ಕಂಗಳು ಜಡದ ಕರ್ಣಗಳು 6 ಕಟ್ಟಲು ಅರ್ಥವ ಹೊಟ್ಟೆಯೊಳು ಹಸುವಿಲ್ಲ ಭ್ರಷ್ಟ ಅನಾಥರ ಶ್ರೇಷ್ಠ ಸೃಷ್ಟಿಯೊಳಾತ 7 ಬಡಮನಸಾಗಿಯೆ ನುಡಿಯ ಬಂದವನೊಳು ಸಡಗರದಿಂದಲೆ ಸೆಡಕ ತೋರುವನು 8 ಅರಸು ಆತನ ಕಂಡು ಕರೆಸಿ ಉಚಿತವಿತ್ತು ಸರಸವನಾಡಿ ವಿಹರಿಸುತ್ತಲಿಹನು 9 ಫಣಿಗಿರಿಯೊಳು ನಿಂತ ವರಾಹತಿಮ್ಮಪ್ಪನು ಹಣವನಿತ್ತವರಿಗೆ ಉಣಿಸುವಭೀಷ್ಟವ 10
--------------
ವರಹತಿಮ್ಮಪ್ಪ
ನಮ್ಮಪ್ಪನ ಕಂಡೆ ಅಪಾರ ಮಹಿಮೆಯುಳ್ಳನ ಧ್ರುವ ಅಪ್ಪನ ಕಂಡೆನಗೆ ತಾ ಅಪಾರ ಸಂತೋಷವಾಯಿತು ಅಪ್ಪಿಕೊಂಬ್ಹಾಗೆ ಎನಗೆ ಅರ್ಪಿಸಿ ಪ್ರಾಣವ 1 ತುಂಬಿ ತುಳುಕಿತಾನಂದ ಗುಂಭಗುರುತ ಕಂಡಿನ್ನು ಕುಂಭಿನಿಯೊಳಗೆ ಪೂರ್ಣ ಅಂಬುಜಾಕ್ಷನ 2 ಗುಪ್ತಲಿದ್ದ ಧನ ತಾ ಪ್ರಾಪ್ತ ವ್ಯಾನಂತವಾಯಿತು ತಪ್ಪದೆ ಮಹಿಪತಿಗೆ ತೃಪ್ತಿ ಹೊಂದಿತು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿದ್ರೆ ಬಾರದೆ ಕನಸು ಬಿದ್ದುದನು ಕೇಳಿ ಬದ್ಧದೊಳು ಇದರ ಫಲವಿದ್ದರೇನು ಪೇಳಿ ಪ ಊರ ಗೆಲುವೆನು ಎಂದು ದಾರಿಯನು ಸಂವರಿಸಿ ಈರೈದು ಸಾವಿರವ ಹೇರಿಕೊಂಡು ಚೋರತ್ವದೊಳು ಸೇರಿ ಭಾರಿಯಗಳನು ಹಾರಿ ಧೀರರೈವರು ವ್ಯರ್ಥ ಸೂರೆಗೊಟ್ಟುದನು 1 ಹಸಿದ ಮಾರಿಯ ಹೊಲನ ನುಸಿವ ಕುರಿಯಂದದಲಿ ಎಸೆವ ಮೋಹಕದಿಂದ ಭರವಸೆಯೊಳು ಬೆಸನವನು ಮಾಡಿ ನಿಪ್ಪಸರದೊಳು ಮೈಮರೆದು ಬಿಸಿಯಾದ ಮಂಚದೊಳು ಹಮ್ಮೈಸಿಕೊಂಡುದನು2 ಮತಿಯಿಲ್ಲದಾತನಿಗೆ ಜೊತೆಯಾದ ಸೇವಕರು ಹಿತವಾದ ದಾರಿಯನು ತೋರುತಿಹರು ಮಿತಿಗಾಣೆನಿದರೊಳಗೆ ರಥಕೆ ಸಾರಥಿಯಿಲ್ಲ ಅತಿಶಯದ ಚತುರ ಶಿತಿಲಕ್ಷ ಸುಳಿವುದನು 3 ತೋರದಿಹ ಸೂತ್ರದೊಳು ಮೂರು ಕರಗಳ ಬಿಗಿದು ಭಾರಿ ಶಿಲೆಯನು ಹೇರಿ ಚೋರನಂದದಲಿ ಊರೊಳಗೆ ಮೆರೆಸುವುದು ತೋರುತಿಹ ಸ್ವಪ್ನಗಳು ಚಾರ ಫಲವೇನಿದಕೆ ಹೇಳಿ ಬಲ್ಲವರು4 ಮಳೆಗಾಲ ತುದಿಯೊಳಗೆ ಇಳೆಯಾರಿ ಬೆಳೆ ಕೆಡಲು ಕೊಳಕಾಲ್ಪೆಸರ ಬತ್ತಿ ಬಳಲುತಿರಲು ಸ್ಥಳದ ತೆರಿಗೆಗೆ ದೂತರೆಳೆದು ಕೇಳುತ್ತಿರಲು ಹಳೆಯ ಸಂಬಳದವರು ಒಳಒಳಗೆ ಸೇರುವುದ 5 ಬುದ್ಧಿ ತಪ್ಪಿದ ತೆರಿಗೆ ತಿದ್ದಿಕೊಳಬೇಕೆನುತ ಎದ್ದು ಬಹುಕ್ಲೇಶದಲಿ ಒದ್ದು ಕೈ ಕಾಲುಗಳ ತಿದ್ದಿ ಹೋದನು ಪುರಕೆ ಸಿದ್ಧ ಮಾಡುವರೆ 6 ಅಚ್ಚರಿಯ ಸ್ವಪ್ನಗಳು ಎಚ್ಚರದಿ ತೋರುತಿದೆ ಹುಚ್ಚನೆಂದು ಜನರು ನಚ್ಚರಿದನು ಮುಚ್ಚುಮರೆಯಾಕೆ ವರಾಹತಿಮ್ಮಪ್ಪನನು ಬಚ್ಚಿಟ್ಟು ಮನದೊಳಗೆ ಸ್ವೇಚ್ಛನಾಗುವುದು 7
--------------
ವರಹತಿಮ್ಮಪ್ಪ
ನಿನಗೇನು ಘನವೇನು ವನಜಾಕ್ಷ ವೆಂಕಟೇಶ ಮನಕೆ ಬೇಕಾದುದ ಇತ್ತು ರಕ್ಷಿಸುವರೆ ಪ ದೇಶ ನಿನ್ನದು ಬಹುಕೋಶ ನಿನ್ನದು ಜಗ ದೀಶ ನಿನ್ನನು ಭಾಗ್ಯಲಕುಮಿ ಸೇವಿಸುವಳು ಆಸೆಯಿಂದಲಿ ನಿನ್ನ ಚರಣವ ಮೊರೆಹೊಕ್ಕೆ ದೋಷವ ಕಳೆದು ಎನ್ನ ಲೇಸಿತ್ತು ಸಲಹಯ್ಯ 1 ಅಣುವಾಗಲೂ ಬಲ್ಲೆ ಮಹತ್ತಾಗಲೂ ಬಲ್ಲೆ ಅಣುಮಹತ್ತಿನೊಳಗೆ ಗುಣವ ತೋರಲು ಬಲ್ಲೆ ಕ್ಷಣಕೆ ಮುನಿಯ ಬಲ್ಲೆ ಆ ಕ್ಷಣಕೆ ರಕ್ಷಿಸಬಲ್ಲೆ ಗುಣಗಳವಗುಣಗಳ ನೋಡದೆ ಸಲಹಯ್ಯ 2 ಬಟ್ಟೆನು ಕೈಯ ಮುಟ್ಟಿ ರಕ್ಷಿಪರಿಲ್ಲ ಬೆಟ್ಟದೊಡೆಯ ಮನದಭೀಷ್ಟವೆಲ್ಲವನಿತ್ತು ದೃಷ್ಟಿಯಿಂದಲೆ ನೋಡಿ ಒಟ್ಟೈಸಿ ಸಲಹಯ್ಯ 3 ತಂದೆ ತಾಯಿಗಳಿಲ್ಲ ಬಂಧು ಬಾಂಧವರಿಲ್ಲ ಕುಂದು ಹೆಚ್ಚಿಯೆ ನಿರ್ಬಂಧ ಬಡಿಸುತಿದೆ ಮಂದರಾದ್ರಿಯ ಗೋವಿಂದ ನಿನ್ನಯ ಪಾದ ದ್ವಂದ್ವವ ತೋರಿಸಿ ಚಂದದಿ ಸಲಹಯ್ಯ 4 ಮನದ ಸಂಕಲ್ಪಕೆ ಅನುಗುಣವಾಗಿಯೆ ಘನವಿತ್ತು ಕರೆದೊಯ್ದು ವಿನಯದಿ ಮನ್ನಿಸಿ ಮನೆಗೆ ಕಳುಹು ನಮ್ಮ ವರಾಹತಿಮ್ಮಪ್ಪನೆ ತನು ಮನದೊಳಗನುದಿನದಿನ ಸಲಹಯ್ಯ 5
--------------
ವರಹತಿಮ್ಮಪ್ಪ
ನೋಡಿದೆ ನಾ ನೋಡಿದೆ ಮಾಡಿದೆ ನಾ ಮಾಡಿದೆ ಪ ಬೆಟ್ಟವ ಕಂಡೆನು ಸೋಪಾನಂಗಳು ನಿಟ್ಟುಸುರಿಕ್ಕದೆ ಏರಿದೆ ಕಟ್ಟ ಕಡಿಯಣ ಗೋಪುರ ಶಿಖರ ದಿಟ್ಟಿಸಿ ಕಣ್ಣಿಲಿ ನೋಡಿದೆ 1 ಈ ಸಮಸ್ತರ ಗುರುವಾದ ಭಾರತಿ ಈಶನ ಪಾದಕ್ಕೆ ಎರಗಿದೆ ಕ್ಲೇಶನ ಕಳೆದು ಎದುರಾಗಿ ಪೊಳೆವ ಶ್ರೀಶನ ಮಹದ್ವಾರ ನೋಡಿದೆ 2 ಬಲವಾಗಿ ಬಂದು ಸ್ವಾಮಿ ಪುಷ್ಕರಣಿ ಒಳಗೆ ವರಹನ ನೋಡಿದೆ ಜಲದಲಿ ಮಿಂದು ವೇಗದಲಿ ತಿರುವೆಂ ಗಳ ದೇವನ ನೋಡ ಸಾಗಿದೆ 3 ಗುಡಿಯ ಪೊಕ್ಕೆನು ಗರುಡಗಂಬದ ಸಡಗರವನು ನಾ ನೋಡಿದೆ ಒಡನೆ ಪ್ರಾಣಾಚಾರದವರು ಪಡೆದ ವರಗಳ ಕೇಳಿದೆ 4 ಮುನ್ನ ಅವಸರ ಮನಿಯೊಳಗೆ ಅನ್ನಪೂರ್ಣಿಯ ನೋಡಿದೆ ಚನ್ನಾಗಿ ಮಂಟಪದೊಳು ಶ್ರೀನಿವಾ ಸನ್ನ ಮೂರುತಿಯ ನೋಡಿದೆ 5 ತೊಟ್ಟಲ ತೀರ್ಥವ ಕೊಂಡು ಪ್ರಸಾದ ಇಟ್ಟು ಮಾರುವದು ನೋಡಿದೆ ಇಷ್ಟ ಭಕ್ತರು ಸಮ್ಮುಖದಲಿ ಮುಟ್ಟಿ ಪಾಡುವದು ನೋಡಿದೆ6 ದ್ವಾರಪಾಲಕರಿಗೆ ಸಾಷ್ಟಾಂಗದಲಿ ನಮ ಸ್ಕಾರವನು ಮಾಡಿದೆ ಭೋರನೆ ಕಟಾಂಜನದ ಫಲ್ಗುಣಿ ಬಂ ಗಾರ ಬಾಗಿಲವ ನೋಡಿದೆ 7 ಇಂದು ರವಿ ಶತಕೋಟಿ ತೇಜದ ವಿಂದ ಯುಗ್ಮವ ಪುಳಕೋತ್ಸಹÀದಿಂದ ಸಂದರುಶನ ನಾ ಮಾಡಿದೆ 8 ಇಟ್ಟಿದ್ದ ಅಂದಿಗೆ ಉಟ್ಟ ಪೀತಾಂಬರ ಕಟ್ಟಿದ್ದ ಧಟ್ಟಿ ವಢ್ಯಾಣ ಝಟಿ ಕಂಕಣಾಕಾರದಾಲಾಯುಧ ಇಟ್ಟ ಕಸ್ತೂರಿಯ ನೋಡಿದೆ 9 ಮಾಸದಾ ಪೂವು ಪೂಸಿದ ಗಂಧ ಭೂಷಣಾ ನಾನಾ ಪರಿವಿಧ ಏಸು ಬಗೆಯಲ್ಲಿಟ್ಟು ಶ್ರೀನಿ ವಾಸನ ಶೃಂಗಾರ ನೋಡಿದೆ 10 ಜಯಜಯ ಜಗದೀಶ ಜಗನ್ನಿವಾಸ ಜಯ ಜಯ ಲಕುಮಿ ಪರಿತೋಷ ಜಯ ಜಯ ವಿನಾಶ ಜಯ ಜಯ ಸರ್ವೇಶ ಜಯವೆಂದು ಸ್ತೋತ್ರವ ಮಾಡಿದೆ11 ಕೇಸಕ್ಕಿ ದಧ್ಯೋದನ ಪರಮಾನ್ನ ದೋಶಿ ಬಿಸಿಬಿಸಿ ಮನೋಹರ ಲೇಸಾಗಿ ಚತುರ್ವಿಧ ಪ್ರಸಾದವನ್ನು ಈಸು ಅವಸರ ನೋಡಿದೆ 12 ಕರ್ಪೂರದಾರತಿ ವಪ್ಪಿನಿಂದಲಿ ತಂದು ತಪ್ಪದಲಿ ಬೆಳಗೋದು ನೋಡಿದೆ ರೆಪ್ಪೆಯವಿ ಹಾಕದೆ ಮನದಣಿಯ ತಿ ಮ್ಮಪ್ಪನ ವಿಗ್ರಹ ನೋಡಿದೆ 13 ಹಿಮಋತು ಪ್ರಥಮ ಮಾಸÀ ದಶಮಿ ಹಿಮಕರ ವಾರದದಿನದಲ್ಲಿ ಕ್ರಮದಿಂದಲಿ ಪೋಗಿ ಬಿಂಬ ಮೂರುತಿಯ ವಿಮಲ ಚಾರಿತ್ರವ ನೋಡಿದೆ 14 ಶತ ಅಪರಾಧವ ಮಾಡಲು ಕಳೆದು ಪತಿ ವಿಜಯವಿಠ್ಠಲ ಪುರಂದರನ ಸಂ ಗತಿಯಲ್ಲಿ ಸತತ ಸಾಕಿದಾ15
--------------
ವಿಜಯದಾಸ
ನೋಡುವ ಬನ್ನಿರೆಲ್ಲರು ಲೋಕ ನಾಯಕ ಚೆಲ್ವ ಮೂಡಲ ಗಿರಿವಾಸ ಶ್ರೀವೆಂಕಟೇಶನ ಪ ಭೂಮಿಗೆ ವೈಕುಂಠವೆಂದು ತೋರುತ ನಿಂತ ಸ್ವಾಮಿ ಪುಷ್ಕರಣಿಯ ತೀರದೊಳು ಪ್ರೇಮದಿ ಭಕ್ತರ ಸಲಹಿಕೊಂಬುವನಂತೆ ಕಾಮಿತಾರ್ಥವನಿತ್ತು ಕಳುಹುವನಂತೆ 1 ಬ್ರಹ್ಮಾದಿ ಸುರರಿಂದ ಪೂಜಿಸಿಕೊಂಬನಂತೆ ನಿರ್ಮಲ ರೂಪದಿ ತೋರ್ಪನಂತೆ ಕರ್ಮಬಂಧಗಳನ್ನು ಕಡಿದು ಕೊಡುವನಂತೆ ಹೆಮ್ಮೆಯ ಪತಿಯೆಂದು ತೋರ್ಪನಂತೆ 2 ಆಡಿ ತಪ್ಪುವರಿಗೆ ಕೇಡ ಬಗೆವನಂತೆ ನೋಡಿಯೆ ನಡೆಯಲು ಕೊಡುವನಂತೆ ಮೂಡಿದ ಆದಿತ್ಯ ಶತಕೋಟಿ ತೇಜನಂತೆ ರೂಢಿಗೊಡೆಯ ನಮ್ಮ ವರಾಹತಿಮ್ಮಪ್ಪನಂತೆ 3
--------------
ವರಹತಿಮ್ಮಪ್ಪ