ಕೃಷ್ಣವೇಣಿ ಕಲ್ಯಾಣಿ
ನಿತ್ಯ ಸಾಗರನ ರಾಣಿ ಪ
ಅಜನ ನಿರೂಪದಲಿ ಜಾಬಾಲಿಮುನಿ ಬಂದು
ಭಜಿಸಿದನು ನಿನ್ನ ಬಲುದಿವಸಂಗಳು
ನಿಜವಾಗಿ ಹರನ ಜಡೆಯಲ್ಲಿ ಉದ್ಭವಿಸಿದೆ
ತ್ರಿಜಗದೊಳಗೆ ಮೆರೆದೆ ತ್ರಿದಶಾಮರವಂದಿತೆ 1
ಕನ್ಯಾರಾಶಿಗೆ ಜೀವ ಬಂದು ಪ್ರಾಪುತನಾಗೆ
ಹನ್ನೆರಡು ವರುಷಕೆ ಒಮ್ಮೆ ಬಿಡದೇ
ಮನ್ನಿಸಿ ಭಕುತಿಯಿಂದ ಒಂದು ಮಜ್ಜನಮಾಡೆ
ಧನ್ಯನ ಮಾಳ್ಪೆ ಬಲು ಘನ್ನ ತರಂಗಿಣಿ 2
ಎತ್ತ ನೋಡಿದರತ್ತ ನಾಲ್ಕುವರೆ ಯೋಜನವು
ಕ್ಷೇತ್ರ ಪುಣ್ಯದೇವಿಯೆನಿಸಿಕೊಂಬೆ
ಸ್ತುತಿಸಲಳವೇ ನಿನ್ನ ಮಹಿಮೆಯ ಅನುಗಾಲ
ಮತ್ತಗಜಗಮನೆ ಮಲದೂರೆ ಮುಕ್ತಿಧಾರೆ 3
ಪೋಗದ ಪಾಪಗಳಿರಲು ನಿನ್ನ ದರುಶನವು
ಬಾಗಿಲ ಕಾಯ್ವ ಭಾಗ್ಯವ ಕೊಡು ಕರುಣದಲಿ 4
ಕಲಿಯುಗಕೆ ನೀನೇ ವೆಗ್ಗಳವೆಂದು ಬುಧಜನರು
ಒಲಿದು ಕೊಂಡಾಡುವರು ಸತತದಲ್ಲಿ
ಜಲನಿಧಿಯ ಎರಡು ಮೊಗದಲಿ ಮೆರೆದೆ ಮಹತಟಿನಿನೆಲೆಗೊಳಿಸು ವಿಜಯವಿಠ್ಠಲ ಚರಣದಲ್ಲಿ 5