ಒಟ್ಟು 46 ಕಡೆಗಳಲ್ಲಿ , 22 ದಾಸರು , 42 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾರುಗಾಣಿಸೊ ಎನ್ನ ಪಾವನಕಾಯ ಶ್ರೀ ಗುರು ರಾಘವೇಂದ್ರಾರ್ಯನೇ ಪ. ಶ್ರೀ ರಮಾಪತಿ ಗುಣವ ನೀ ಮನದೊಳು ತಿಳಿಸಿ ಭವ ಬಂಧ ಬಿಡಿಸೋ ಅ.ಪ. ಮಿಂಚಿನಂತಿಹ ಎನ್ನ ಚಂಚಲ ಮನದಲ್ಲಿ ಸಂಚಿತನೆ ಎನೆ ನೆಲಸೋ ಸಂಚಿತಾಗಮಿಗಳು ಕೊಂಚ ಉಳಿಯದ ತೆರದಿ ಪಂಚ ಭೇದಾರ್ಥ ತಿಳಿಸೊ ಪಂಚವಕ್ತ್ರನ ತಾತ ಮಿಂಚಿನಂದದಿ ಪೊಳೆವೊ ಹಂಚಿಕೆಯ ಎನಗೆ ತೋರೋ | ಮನಕ್ಹರುಷ ಬೀರೋ 1 ಶ್ರೀ ನರಹರಿ ಕೃಷ್ಣ ರಾಮ ವ್ಯಾಸರ ಪದವ ನೀ ನಿರ್ಮಲದಲಿ ನೆನೆವೆ ಮಾನನಿಧಿ ಮುರಹರಿಯ ಧಾಮತ್ರಯಗಳ ಮಾರ್ಗ ಕಾಮಿಸಿದ ಭಕ್ತಗೀವೆ ನಾನಧಮೆ ನಿನ್ನಡಿಗೆ ಬಾಗಿ ಭಜಿಸುವೆ ಗುರುವೆ ನೀನಿತ್ತ ನೋಡಿ ಪೊರೆಯೊ | ನೀ ದಯವ ಗರೆಯೊ 2 ತರಳತನದಲಿ ಶ್ರೀ ನರಹರಿಯ ಭಜಿಸುತ್ತ ಉರುತರದಿ ಭಾದೆ ಸಹಿಸಿ ಹರಿಯು ಸರ್ವತ್ರ ವ್ಯಾಪಕನೆಂಬೊ ಮಹಿಮೆಯ ಉರ್ವಿಯೊಳಗೆಲ್ಲ ನೆಲಸಿ ಸಿರಿ ಕೃಷ್ಣನಾ ಭಜಿಸಿ ಮರುತ ಮತವನೆ ಸ್ಥಾಪಿಸಿ | ಗುರುರಾಯನೆನಸಿ 3 ತುಂಗ ತೀರದಿ ನಿಂದು ಮಂಗಳರೂಪದಲಿ ಪಂಗು ಬಧಿರರ ಸಲಹುತ ಸಂಗೀತ ಪ್ರಿಯನೆನಿಸಿ ಶೃಂಗಾರರಾಮನ ಮಂಗಳರೂಪ ಭಜಿಸಿ ಹಿಂಗದೇ ಸುಜನರಿಗೆ ವರವ ಕೊಡುವೊ ಬಿರುದು ರಂಗನಾ ಪದದೊಲುಮೆಯೋ | ನಿನ್ನಯ ಮಹಿಮೆಯೋ 4 ಗೋಪಾಲಕೃಷ್ಣವಿಠ್ಠಲನ ಪರಿಪರಿಯಿಂದ ಪಾದ ಮೌಳಿ ನೋಳ್ಪೆ ಶ್ರೀ ಪತಿಯ ತೋರೆನಗೆ ಪಾಪ ಕಲುಷವ ಕಳದು ತಾಪಪಡಲಾರೆ ಭವದಿ ಕಾಪಾಡುವವರಿಲ್ಲ ನೀ ಕೃಪಾನಿಧಿಯೆಂದು ಪರಿ ಕೇಳ್ದೆ ಗುರುವೆ | ಭಕ್ತರ ಕಲ್ಪ ತರುವೆ5
--------------
ಅಂಬಾಬಾಯಿ
ಪೊಡವಿ ಪತಿಯೇ ನಿನ್ನಾ ಅಡಿಗಳಿಗೆರಗುವೆ ತಡೆಯಲಾರೆನೋ ಈ ಕಡುತಾಪದಿಂದೆನ್ನ ಕಡೆಗ್ಹಾಯಿಸೆನ್ನ ಶ್ರೀ ರಾಘವಾ ಪ ಧರಣೀಶ ನಿನ್ನ ಚರಣವೇ ಗತಿ ಎಂದು ಸ್ಮರಿಸುತ್ತಲಿರುವೆನೋ ರಾಘವಾ ಸ್ಥಿರ ಭಕುತಿಯ ನಿನ್ನೊಳಿರಿಸಿ ಸತ್ವರದಿಂದ ಕರುಣಿಸಿ ಸಲಹೈಯಾ ರಾಘವಾ 1 ಪುಟ್ಟಿದುದಕೆ ನೀ ಹೊಟ್ಟೆಗೆ ಸಾಕಷ್ಟು ಕೊಟ್ಟು ಕಾಪಾಡೊ ಶ್ರೀ ರಾಘವಾ ಇಟ್ಟು ತವ ಸ್ಮರಣೆಯ ಕೊಟ್ಟೆನ್ನ ಪುಷ್ಟವ ಮಾಡೋ ಶ್ರೀ ರಾಘವಾ 2 ತನು ಧನ ನೀನೆ ಜನನಿ ಜನಕನು ನೀನೆ ವನಿತೆ ಸುತರು ನೀನೆ ರಾಘವಾ ಹನುಮೇಶ ವಿಠಲನೆ ದಿನಗಳೆಯದೇ ತ್ವರ ಮನದಘ ಬಿಡಿಸೋ ಶ್ರೀ ರಾಘವಾ 3
--------------
ಹನುಮೇಶವಿಠಲ
ಬಾರೈ ಪ್ರಭುವೆ ಬಾರೈ ಪ್ರಭುವೆ ಪ ತೋರೈ ಹರಿಪಾದವ ಗುರುವೆ ಕಮಲ ನಂಬಿದೆ ಭವ ಬಂಧನ ಹರಿಸಿ ಕರುಣದಿ ಜವನ ಭವನ ಬಿಡಿಸೋ ದೀನ ದಿವಿಜ ತರುವೆ1 ಹರಿಕಥಾ ಸುಧಾ ಸಾರ ವರ ರಹಸ್ಯವ ಪೊರೆ ಕರುಣದಿಂದಲರುಹಿಸದಾ ಪೊರೆಯೋ ವಿಭುವೆ 2 ಸುಂದರ ಸುಪ್ರೇಮ ಪಾತ್ರ ಕಂದನನುದಾಶಿಸುವದು ತಂದೆಗೆ ಥರವೆ 3
--------------
ಶಾಮಸುಂದರ ವಿಠಲ
ಬ್ರಹ್ಮಾದಿವಂದ್ಯ ಪರಬ್ರಹ್ಮಾನೆ ಕಾಯೊ ಅಹಂಬ್ರಹ್ಮಭಾವವ ಬಿಡಿಸೋ ಪ ಬ್ರಹ್ಮಾನ ಜನಕನೆ ಬ್ರಹ್ಮಾಂಡದೊಡೆಯ ಬ್ರಹ್ಮಾಂಡಾಂತರ್ಯಾಮಿ ಸಲಹೋ ಅ.ಪ ಸತ್ಯವ್ರತನೆ ನೀ ಸತ್ಯಪರನು ಜಗ ಸತ್ಯ ಸೃಜಿಸಿ ಪೊರೆವೇ ನಿತ್ಯ ನಿರ್ಲಿಪ್ತನಹುದೋ 1 ಏಕರೂಪನೆ ಅನೇಕ ರೂಪದಿ ಎಲ್ಲಾ ಲೋಕಗಳೆಲ್ಲಾ ಪಾಲಿಪೆ ಲೋಕಗಳನೆಲ್ಲ ಮಾಳ್ವೆ 2 ನಿನ್ನಾಶ್ರೈಸಿದ ಭಿನ್ನಪ್ರಕೃತಿ ತ್ರಿಭಿನ್ನಗೈಸಿ ಅಂದು ಜಗದಾ ಬನ್ನ ಪಣ್ಣನ್ನ ನಿರ್ಮಿಸಿದೆಯೋ 3 ಪಣ್ಣಿಗೆ ನಾಲ್ಕು ರಸವೋ ಘನ್ನಷಡೂರ್ಮಿಗಳನ್ನೆ ನಿರ್ಮಿಸಿ ಪೊರೆವೇ 4 ಕೊಟ್ಟೆ ಸಪ್ತಧಾತು ಅಷ್ಟವಿಟಪಿಗಳನಿಟ್ಟೆ ನವಾಕ್ಷಪೊಟರೆ ದಟ್ಟದಶಚ್ಛದ ಕೊಟ್ಟು ಜಗವೃಕ್ಷ ಸೃಷ್ಟಿಯ ಮಾಡಿ ಮೆರೆದೇ 5 ಅಟ್ಟಹಾಸದಿ ಫಲಮುಟ್ಟದೆ ಇಹ ಖಗಶ್ರೇಷ್ಟನೆ ನೀ ತುಷ್ಟನೋ ಕೊಟ್ಟ ಫಲವನುಂಡಷ್ಟೂ ಸುಖಿಪ ಜೀವರೆಷ್ಟೋ ಜಗವರಿಯೇ 6 ವ್ಯಷ್ಟೀಸಮಷ್ಟಿಯ ಸೃಷ್ಟೀಯೊಳು ನೀನೆ ಶ್ರೇಷ್ಠನೇ ವ್ಯಾಪಿಸಿರುವೇ ದೃಷ್ಟಿಗೋಚರವಲ್ಲ ಅಷ್ಟಕರ್ತೃ ಪರಮೇಷ್ಟೀಜನಕ ಸಲಹೋ 7 ಅಪ್ರಾಪ್ಯಮನೋವಚ ತ್ವತ್ ಪ್ರಾಪ್ತಿಎಂತಯ್ಯ ತ್ವತ್ಪ್ರಸಾದವಿಲ್ಲದೇ ಎನ್ನ ಬಂಧಪ್ರಕೃತಿಯನೆ ಹರಿಸೋ 8 ಸೃಷ್ಟಿಯೊಳಗೆ ಸ್ವನಿಷ್ಠೆಯಿಂದಲೀ ಜಗದೃಷ್ಟೀಗೋಚರನಾಗುವೆ 9 ಮುಮುಕ್ಷುಗಳಿಗೆ ಸಾಕ್ಷಿ ಮನದಕ್ಷಿಯೊಳು ಪೊಳೆವೇ 10 ಭಕ್ತಿವಿರಹಿತ ದುರ್ಯುಕ್ತಕಾರ್ಯದಿ ಮನ ಸಕ್ತವಾಗಿಹುದು ತ್ವಧ್ಭಕ್ತಿಯ ಕೊಡು ನಿತ್ಯ11 ಹತ್ತಿಬಹುದೂ ಬೆನ್ಹತ್ತಿಕರ್ಮವು ಮತ್ತೆ ಸುತ್ತೀಸುತ್ತುತ ಜನ್ಮವಾ ಎನಗೆ ಉತ್ತಮಗತಿ ತೋರದೇ12 ಘೋರದುರಿತ ಪರಿಹಾರ ಮಾಡಿ ಪೊರೆ ಮಾರಾರಿಪಿತವಂದ್ಯ ಚಾರು ಚರಣಸ್ಮರಣಾರಾಧನೆ (ಅದು) ಸಾಕೋ 13 ಸಾರಿದೆನೋ ಶ್ರೀ ವೇಂಕಟೇಶಾಭಿನ್ನ ಉರಗಾದ್ರಿವಾಸ ವಿಠಲಾ ಪಾರುಗಾಣಿಸಿ ಪೊರೆಯೋ 14
--------------
ಉರಗಾದ್ರಿವಾಸವಿಠಲದಾಸರು
ಭವ ತಾರಿಸೊ ಸುಜ್ಞಾನ ಪ್ರೇರಿಸೊ ಪ ಮಾಯದ ಮೃಗದ ಬಾಯಿಗೀಡಾದೆ ಕಾಯುವದಾತರ ಕಾಣೆ ಹರಿಯೆ ನಾಯಿಯ ತೆರದಲಿ ಮಬ್ಬಿಲಿ ಮೆರೆದೆ ದೋಷ ನೋಡದೆ ಕಾಯೋ 1 ಬಂದೆನು ಭೂಸುರನಾಗುತ ಜಗದಿ | ಪೊಂದಿದೆ ತವ ಪದ ಹರಿಯೆ ನಂದನಸುತ ನೀ ಬಂಧನ ಬಿಡಿಸೋ ಕಂದನ ಮರೆಯುವರೇನೋ 2 ಮನ್ನಿಸೋ ಶಾಮಸುಂದರವಿಠಲ ಭಾರ ನಿನಗೊಪ್ಪಿಸಿದೆ | ಹರಿಯೆ ಇನ್ನು ತೋರಿಸೈ ನಿನ್ನಯ ಚರಣ ಕರುಣಾಭರಣ ದೇವ 3
--------------
ಶಾಮಸುಂದರ ವಿಠಲ
ಭೂಮಿಯನೆ ಬಿಡಿಸೋ ಭೂದೇವಿ ರಮಣಾ ನಾ ಮಾಡುವೆ ನಿನಗೆ ಶರಣಾ ಪ. ಕರಿ ಕರಿಯಾ ಸಂಸಾರ ಥೆರಿಯಾ ಅ.ಪ. ಯನ್ನಿಂದ ದುಷ್ಟಕಾರ್ಯವನು ಮಾಡಿಸಿದಿಯೋ ನೀನು ಇಷ್ಟು ನಾನೀಗ ಉದಾಶೀನಳಾಗಿ ಇರುವೊದುಕಿಂತಾ ವೊಂದಷ್ಟು ಪ್ರಾಣವನು ಬಿಡಿಸೊ ಶ್ರೀಶಾ ಶ್ರೀನಿವಾಸಾ 1 ಸರ್ವಜ್ಞರ ಮತದೊಳಗೆನ್ನ ಪುಟ್ಟಿಸಿದೆಯೋ ಅಜ್ಞಾನ ಅಧಃಪತದಲಿ ಮಗ್ನಳಾಗಿರುವೆನು ಸುಜ್ಞಾನವನು ನಾನರಿಯೆನು ಭವಾಬ್ಧಿಯನು ದಾಟಿಸು ನೀನು 2 ದುರ್ಜನರ ಸಂಗವಾ ಕೊಡಬ್ಯಾಡ ಸಜ್ಜನರ ಸಂಗವ ಕೊಡು ಬ್ಯಾಗ ಮೂರ್ಜಗದೊಡೆಯನೇ ನೀಯನ್ನ ಪಾಲಿಸಯ್ಯ ಕಾಳಿಮರ್ಧನ ಕೃಷ್ಣರಾಯ 3
--------------
ಕಳಸದ ಸುಂದರಮ್ಮ
ಮಾಧವ ಗೋವಿಂದ ಪ ಪಾದಭಕುತಿ ನೀಡೋ ದೇವ ಅ.ಪ ಅನವರತವು ಮನದಿ ನಿನ್ನಯ ಘನಮಹಿಮೆಗಳನ್ನು ಮೋದದಿ ನೆನೆಯುವಂತೆ ಮಾಡೋ ದೇವ 1 ಅಭಿಮಾನವ ಬಿಡಿಸೋ ವಿಷಯದ ಅಭಿಮಾನವ ಬಿಡಿಸೋ ನಿನ್ನಯ ಅಭಯಕರ ನೀಡೋ ದೇವ 2 ಎಂದಿಗು ಹೃದಯದಲಿ ರಾಗದ ಗಂಧವು ಬರದಂತೆ ದೇವ ಸುಂದರ ಗೋಪಾಲ ಎನ್ನ ಹೃ ನ್ಮಂದಿರದಲಿ ನಿಲ್ಲೋ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಮೂಲ ಕಾರಣ ವಿಠಲ | ಪಾಲಿಸಿವಳಾ ಪ ಲೀಲಾ ಮನೋರೂಪ | ಬಾಲಗೋಪಾಲಾ ಅ.ಪ. ಕರ್ಮಕರ್ಮಗಳ | ಮರ್ಮಗಳ ತಿಳಿಸುತ್ತಕರ್ಮ ನಾಮಕ ಕಾಯೊ | ಪೇರ್ಮೆಯಲಿ ಇವಳಾದುರ್ಮತಧ್ವಾಂತಾಕ | ಸಮೀರ ಮತ ತಿಳಿಸಿನಿರ್ಮಲಾತ್ಮನೆ ಸಲಹೊ | ಭರ್ಮ ಗರ್ಭಾತ್ಮ 1 ಸುಖ ದುಃಖ ದ್ವಂದಗಳು | ಸಕಲಕ್ಕು ಶ್ರೀ ಹರಿಯೆಮುಖ್ಯ ಕಾರುಣಾನೆಂಬ | ಸುಖತೀರ್ಥ ಭಾವಾ |ಕಕುಲಾತಿಯಿಲ್ಲದೆ | ತ್ರೈಕರಣ ಪೂರ್ವಕದಿನಿಖಿಲಾತ್ಮ ಕೃತವೆಂಬ | ಯುಕುತಿಯನೆ ತಿಳಿಸೋ 2 ಪತಿಸುತರು ಹಿತರಲ್ಲಿ | ವ್ಯಾಪ್ತನಾಗಿಹ ಹರಿಯಹಿತದಿಂದ ಸೇವೆಯಲಿ | ಕೃತಕೃತ್ಯಳೆನಿಸಿಮತಿಮತಾಂವರರಂಘ್ರಿ | ಶತಪತ್ರ ನಮಿಪ ಸ-ನ್ಮತಿಯನ್ನೆ ಪಾಲಿಸೋ | ಕೃತಿರಮಣದೇವ 3 ಗಜ ಪಂಚಾಸ್ಯ | ಪರಿಹರಿಸಿ ಇವಳ ಘವಸರ್ವದ ಪೊರೆಯಲ್ಕೆ | ಹರಿಯೆ ಬಿನ್ನವಿಪೇ 4 ಸೃಷ್ಟಿ ಸ್ಥಿತಿ ಸಂಹಾರ | ಅಪ್ಟ ಕರ್ತೃತ್ವಗಳಸುಷ್ಠು ಚಿಂತನೆಯಲ್ಲಿ | ನೆಟ್ಟ ಮನವಿರಿಸೀಕೃಷ್ಣ ಗುರು ಗೋವಿಂದ | ವಿಠಲನೇ ಗತಿಯೆಂಬಶ್ರೇಷ್ಠ ಮತಿಯಲಿ ಭವದ | ಕಟ್ಟನೇ ಬಿಡಿಸೋ5
--------------
ಗುರುಗೋವಿಂದವಿಠಲರು
ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ | ಮೋಕ್ಷದಾಯಕ ಯಂತ್ರೋದ್ಧಾರಕ ಹನುಮಂತಾ ಪ ಗತಿಯ ಕಾಣೆನೊ ಸದಾ ಗತಿಯೊ ಎನ್ನ ಮನಸು | ನಿನ್ನ ನಾಮವ ಬೇಡಿದೆ | ಹಾಡಿ ಪಾಡಿದೇ | ಪ್ರತಿದಿನ ದಯ ಮಾಡಿದೆ ವರವನ ಬೇಡಿದೆ | ಅತಿಶಯದಿಂದಲಿ ವಿಪ್ರಜಿತು ವಿರೋಧಿಯ ವಿಪ್ರ1 ವೀಣಾರೋಚನಾ ವಿಜ್ಞಾನಾಭಿಮಾನಿ ನಿ | ದಾನ ತ್ರಿಜಗದ್ಗುರುವೆ ಸುರತರುವೇ | ಕರವ ಮುಗಿದು ಕರವೇ | ಧ್ಯಾನದಿಂದಲಿ ಬೆರವೆ ಸುತ್ಯನ್ಯರವೇ | ಜನನವ ಬಿಡಿಸೋದು ಗಾನವ ನುಡಿಸೋದು 2 ಭಾಷಿಸುವ ಮಾತಂಗ ಪರ್ವತದಲಿ ತುಂಗಾ | ವಾಸವ ವಿನುತ ಸತ್ವಕಾಯಾ | ನಿತ್ಯ ಜಪಿತಾ | ಲೇಸು ಸುದರುಶನ ತೀರ್ಥ ತೀರದಲ್ಲಿಪ್ಪಾ |ಶ್ರೀಶ ವಿಜಯವಿಠ್ಠಲನ ದಾಸನ ಮಾಡಿ ಮುನ್ನಾ 3
--------------
ವಿಜಯದಾಸ
ರಂಗವಲಿದ ರಾಯಾ ಸಜ್ಜನ ಸಂಗ ಪಾಲಿಸಯ್ಯಾ ಮಂಗಳ ಚರಿತ ಕೃಪಾಂಗನೆ ಎನ್ನಂತ ರಂಗದಿ ನಿಲಿಸುತ ತವಾಂಘ್ರಿ ಸೇವಕನೆಂದು ಅ.ಪ ನತಜನ ಸುರಧೇನು ನೀನೆಂದು ನುತಿಸಿ ವಂದಿಸುವೆನೋ ರತಿಪತಿಪಿತ ನುತ ಕಥಾಮೃತ ಗ್ರಂಥದಿ ಸತತ ಎನಗೆ ಮತಿ ಹಿತದಲಿ ಪ್ರೇರಿಸು 1 ಧನ್ಯನ ನೀಮಾಡೋ ಕರುಣದಿ ಮನ್ನಿಸಿ ಕಾಪಾಡೋ ಘನ್ನ ಮಹಿಮಕಿನ್ನು ನಿನ್ನ ಹೊರತು ಇನ್ನಾರು ಕಾವರರಿಯೆ ಕಾಣೆ ಗುರೋ 2 ಮಂದಮತಿ ಬಿಡಿಸೋ ಈ ಭವ ಬಂಧನ ಪರಿಹರಿಸೊ ಪತಿ ಶಾಮಸುಂದರವಿಠಲ ದ್ವಂದ್ವ ಪದದಿ ಮನಹೊಂದಿಸೊ ಪೋಷಿಸೊ 3
--------------
ಶಾಮಸುಂದರ ವಿಠಲ
ರಾಯ ಬಾರೋ ತಾಯಿ ಬಾ ಎನ್ನ ಕಾಯಲು ತ್ವರ ಬಾರೋ ನೀ ಗುರು ಪ ದಿನದಿನಕೆ ಮನಸಿನ ತಾಪವು ಘನವಾಗುವುದನ್ನು ಬಿಡಿಸಲು ಬಾರದು 1 ಅರಸನಾಗಿ ನೀ ಧರೆಯನಾಳಿದಿ ಭರತ ಭೂಮಿಯಲಿ ಅವತರಿಸಿದಿ ಮತಿ-2 ವರಗುಣಮಣಿಯೇ ಕರುಣದ ಖಣಿಯೇ ಶರನಾದವನನ್ನು ಬಿಡಿಸೋ ಬಾ ಗುರು 3 ಬಾಲ್ಹೀಕನೇ ಬಾ ಪ್ರಲ್ಹಾದನೇ ಬಾ ತಲ್ಲಣಿಸುವೆ ಯತಿ ಆಗಿ ಬಂದ ಗುರು 4 ಸುಮ್ಮನಿರುವೆ ಮತ್ತೊಮ್ಮೆ ಮರಗುವೆ ಒಮ್ಮನಸಿÀಲ್ಲವೋ ಸನ್ಮುಖನಾಗೈ 5
--------------
ಹನುಮೇಶವಿಠಲ
ಶೌರಿ ನಿನ್ನಯ ಭಕ್ತ ನಾನೆನ್ನಿಸೊ ಪ ಇಂದುವರನಂದದಲಿ ಬಂದೆ ನೀ ಕನಸಿನಲಿ ಇಂದಿರಾಪತಿಯೆಂದೆ | ಹುಸಿನಗೆಯಲಿ ಒಂದು ಶಿವಚರಿತೆ ಪೇಳೆಂದು ಗುರುರೂಪದಲಿ ಅಂದಿತ್ತ ದರ್ಶನವೆ ಸಾಕು ಎನಗೆ 1 ವಾರಿನಿಧಿಯೊಳು ಮುಳುಗಿ ದಾರಿಕಾಣದ ಮುನಿಗೆ ತೋರಿದಾ ಶಿಶುರೂಪ ಸಾಕು ಎನಗೆ ಘೋರ ಕಾನನದಲ್ಲಿ ಜಾನಿಸಿದ ಬಾಲನಿಗೆ ಸಿರಿ ಮೊಗವೆ ಸಾಕು ಎನಗೆ 2 ಅರಸಿಯಾಲಿಂಗನವ ಅರೆಘಳಿಗೆ ಬಿಡದವಗೆ ಕರುಣದಿಂ ನೀತೋರ್ದ ಚರಣ ಸಾಕೆನಗೆ ಪರರ ದಂಡಿಸಿ ಧನವ ಅಪಹರಿಸಿದಾತಂಗೆ ಗುರುವೆನಿಸಿದಾ ರೂಪ ಸಾಕು ಎನಗೆ 3 ಘೋರ ರೂಪವ ಗಳಿಸಿ ನಾರಣಾಯೆಂದವಗೆ ತೋರಿದಾ ಕಾರುಣ್ಯವಿರಲಿ ಎನ್ನೊಳಗೆ [ಹದಿ ನಾ]ರು ಸಾಸಿರ ಜನರ ಗುಂಪಿಂದಲೈತಂದು ತೋರಿದಾ ದ್ವಿಜರೂಪ ಸಾಕು ಎನಗೆ4 ರಂಗನಾಥನು ನೀನೆ ಗಂಗಾಧರನು ನೀನೇ ಮಾಂಗಿರಿಯ ಶೃಂಗಾರ ನಿಲಯ ನೀನೇ ಅಂಗಜನ ಪಿತನೀನೆ | ಅಂಗಜಾರಿಯು ನೀನೆ ಮಂಗಳಾಂಗನೆ ಭವದ ಹಂಗ ಬಿಡಿಸೋ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಪ್ರಾಣದೇವರು ಹನುಮಂತ ಹನುಮಂತ ಮುನಿವ್ಯಾಸ ಕರಕಮಲಾರ್ಚಿತ ಜಯವಂತ ಪ ಭೂಲೋಲ ಕೋಲಜ | ಕೂಲ ಸುಮಂದಿರ ಪತಿ ವಂದಿತ ಕಾಲ ಕಾಲದಿ ನಿನ್ನ ವಾಲೈಸುವರ ಸಂಗ ಪಾಲಿಸು ಕರುಣದಿ | ಕಾಳಿಮನೋಹರ 1 ಬಾಣರೂಪನೆ ಪಂಚಬಾಣ ವಿವರ್ಜಿತನೆ | ಷ ಟ್ಕೋಣ ಮಧ್ಯದಿ ಬಂದು ನೀನೆಲಸಿ ಕ್ಷೋಣಿಗೀರ್ವಾಣ ಸುಶ್ರೇಣಿಯಿಂದರ್ಚನೆ ಮಾಣದೆ ಕೈಗೊಂಬ \ ವಾಣೀಶ ಸ್ಥಾನಾರ್ಹ 2 ಸಿಂಧು ಬಂಧನ ಶಾಮಸುಂದರ ವಿಠಲನಾ ದ್ವಂದ್ವಪಾದಾರವಿಂದಕ ಮಧುಪನೆಂದೆನಿಸಿದ ಗುರು ಭವಬಂಧನ ಬಿಡಿಸೋ ಕಾಯೋ 3
--------------
ಶಾಮಸುಂದರ ವಿಠಲ
ಶ್ರೀ ಮನೋಹರ ಸಲಹೋ ಎನ್ನ ಕಾಮಿತ ಫಲವಿತ್ತು ಸಾಮಜಪತಿ ಪರಿಪಾಲಕ ನಂಬಿದೆ ಪ ಅಂಡಜಗಮನ ದಶರುಂಡವೈರಿ ರಾಜೀವಾಕ್ಷ ಕುಂಡಲಿಶಯನ ಕೋದಂಡ ಪಾಣಿಯ ತೋಂಡಮಾನಗೊಲಿದ ಮಾರ್ತಂಡ ತೇಜ ಪಾದ ಪುಂಡರೀಕ ಸೇವಿಸುವ ತೋಂಡರೊಳಿಡು ಪಾಂಡವಪಕ್ಷ1 ನಾಳಿತ ಸಂಭವಪಿತ ಶೈಲಜಾವಲ್ಲಭನುತ ಭಂಜನ ವನಮಾಲಿ ಭೂಲೋಲ ಕಾಲ ಕೋಲರೂಪಿ ಕೋಮಲಾಂಗ ತಾಲ ಕೇತನನುಜ ಕೀಲಾಲಜ ಬಾಂಧವ ಬಾಲಕ ಪೋಷಕ 2 ಇಂದು ಕೋಟಿ ನಿಭ ನರಸಿಂಧುರಾರಿ ಸಿಂಧುಶಾಯಿ ದಾತ ನಂದಕ ಹಸ್ತ ನಂದಮುನಿವಂದಿತ ಸಂಕ್ರಂದನ ನಂದನವರದ ಬಂಧನ ಬಿಡಿಸೋ ಶಾಮಸುಂದರವಿಠಲ ಬಂಧುರ ಮಹಿಮ 3
--------------
ಶಾಮಸುಂದರ ವಿಠಲ
ಶ್ರೀ ವಾದಿರಾಜರು ಕರುಣದಿ ನೋಡೋ ಮದ್ಗುರುವರ ವಾದಿರಾಜನಂಬಿದ ಭಕ್ತರ ಸುರತರುವೇ ಪ ಪರಿಪರಿ ಭವಸಾಗರದಲಿ ಮುಳುಗುವತರಳನ ಮರೆವುದು ಥರವೇ ಅ.ಪ. ನಿಗಮ ವಿನುತ ಹಯವದನನಬೇಗ ಒಲಿಸಿದೆ ನೀ ಮುದದಿಯೋಗ ಜಿತಾಸನನಾಗಿರುವನೆ ತಲೆಬಾಗುವೆ ಭಯವಳಿ ತ್ವರಿತ 1 ವಾದದೊಳ್ ವಾದಿಗಳನೆ ಗೆದ್ದು ಗುರುಮತಸಾಧಿಸಿದೆಯೊ ಬಲವಂತಸಾಧು ಸೇವಿತ ನಿನ್ನ ಪಾದವ ನಂಬಿದೆ ಭವಬಾಧೆ ಕಳೆಯೋ ಮಹಂತಕ್ರೋಧ ರಹಿತ ಪಂಚಭೇಧ ಸುಜ್ಞಾನವಬೋಧಿಸುವ ದಯವಂತ 2 ಅತಿ ವಿಮಲನೆ ನಿನ್ನ ಸ್ತುತಿಸಲರಿಯೆ ನಾನುಮತಿವಂತನೆ ಮಹಾದಾತಾಸತತ ಬೇಡುವೆನು ಶ್ರೀಪತಿ ಭಜನೆಗೆ ಮನಜಿತವಾಗಿ ಇರಲಯ್ಯ ತಾತಕ್ಷಿತಿಯೊಳು ಕಂಡ ದುರ್ಮತಿಗಳ ಬಿಡಿಸೋದತಿ ಅಧಿಕವೇನೋ ಅನಾಥನಾಥಪತಿತ ಪಾವನ ರಮಾಪತಿ ವಿಠಲನ ನಿರುತ ನೋಳ್ಪ ಲಾತವ್ಯಬ್ಯಾತ 3
--------------
ರಮಾಪತಿವಿಠಲರು