ಒಟ್ಟು 99 ಕಡೆಗಳಲ್ಲಿ , 35 ದಾಸರು , 93 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡು ಬ್ಯಾಗಭೀಷ್ಟವ ತ್ವರದೀ - ನೀ ಸನ್ಮನದೀ ಪ ಕೊಡುವೊದೆನುತ ನಿನ್ನಡಿಯನು ಭಜಿಸುವ ಬಡವನ ಕರವನು ಪಿಡಿದೀ ಕಾಲದೀ ಅ.ಪ ವಡೆಯ ನೀನೆನುತತಿ ಹರುಷದಲಿ ನಂಬಿದೆ ನಿನ್ನಾ ಬಿಡದಲೆ ಪೊರೆ ಎನ್ನ ಕರುಣದಲಿ ಎನ್ನಯ ಕರವ ಪಿಡಿದು ಭವಶ್ರಮ ಕಳಿಯುತಲಿ - ಬಹು ತೋಷದಲೀ ನುಡಿದ ವಚನವ ಚಿತ್ತಕೆ ತಂದು ಪತಿ ಗುರುರಾಯನೆ ನೀ 1 ನಮಿಪ ಜನರಿಗೆ ಸುರಧೇನು ಭಜಿಸುವ ಜನಕೆ ಸುಮನಸೋತ್ತಮ ವರತರು ನೀನು - ಚಿಂತಿಪ ಜನಕೆ ಅಮರೋತ್ತಮ ರತುನವು ನೀನು - ಎನುತಲಿ ನಾನು ಅಮಿತ ಮಹಿಮವ ತೋರುತಲೀಗ ಶ್ರಮವ ಕಳೆದು ಸುಖಸುರಿಸುತ ನೀ 2 ಭೂತಳ ಮಧ್ಯದಲತಿ ಖ್ಯಾತ - ನೆನಿಸಿದ ನಾಥ ಪಾತಕ ಕುಲವನ ನಿರ್ಧೂತಾ - ಮಾಡುತ ನಿಜಪದ ದೂತಜನ ತತಿಮನೋರಥ - ಪೂರ್ತಿಪ ದಾತಾ ವಾತ ಗುರುಜಗನ್ನಾಥ ವಿಠಲಗತಿ ಪ್ರೀತಿಪಾತ್ರ ಸುಚರಿತ್ರ ಸುರಮಿತ್ರ3
--------------
ಗುರುಜಗನ್ನಾಥದಾಸರು
ಕೋಲ ಕೋಲೆನ್ನಿ ಮುತ್ತಿನ ಕೋಲ ಕೋಲೆನ್ನಿಗೋಪಾಲರಾಯನ ನೋಡುವ ಬಾಲೆಯರೆÉ ಬನ್ನಿ ಪ. ದಿಕ್ಕು ತುಂಬಿತು ಈ ದಿಕ್ಕು ತುಂಬಿತುಲೆಕ್ಕವಿಲ್ಲದ ಜನರು ರುಕ್ಮಿಣಿಯ ಮುಯ್ಯಕ್ಕೆ1 ಕಾಶ ತುಂಬಿತು ಎಲ್ಲ ಕೋಶ ತುಂಬಿತು ಆಶೆ ಬಡುತಲೆ ಜನರು ಸೋಸಿನ ಮುಯ್ಯಕ್ಕೆ 2 ಹಾದಿ ತುಂಬಿತು ಎಲ್ಲ ಬೀದಿ ತುಂಬಿತು ಆದರದಿಂದಲೆ ಜನರುಮೋದದಿ ಮುಯ್ಯಕ್ಕೆ 3 ಅಂಬರ ತುಂಬಿತುಸಂಭ್ರಮದಿಂದಲೆ ಜನರು ರಂಭೆಯರ ಮುಯ್ಯಕ್ಕೆ 4 ಪಟ್ಟಣ ತುಂಬಿತು ಒಂದಿಷ್ಟು ಬಿಡದಲೆ ಕೃಷ್ಣ ರಾಮೇಶನ ಜನರು ಶ್ರೇಷ್ಠದ ಮುಯ್ಯಕ್ಕೆ 5
--------------
ಗಲಗಲಿಅವ್ವನವರು
ಗುರುಕೂರ್ಮಚಾರ್ಯರ ಚರಣಕಮಲಯುಗ್ಮ ಮಾನವ ಪ ಧರಣಿಯೊಳಗೆ ಸುಕ್ಷೇತ್ರಗಾಲವ ಪುರದಿ ಶ್ರಿ ನರಶಿಂಹಾ ಚಾರ್ಯರ ತರುಣಿಯಳ ಗರ್ಭಾಬ್ಧಿಯಲಿಹಿಮ ಕರನ ತೆರದಲಿ ಜನಿಸಿಮೆರೆದ ಅ.ಪ ವರಕೊಲ್ಹಾಪುರದಿ ಪೋಗಿರಲು ಸುಂದರವಾದ ಸಿರಿಯರೂಪವ ಕಾಣುತ್ತ ಅರಿತು ಪ್ರಾರ್ಥಿಸಲು ಶ್ರೀ ನರಶಿಂಹಾರ್ಯರಿಗೊಲಿದು ಕರುಣದಿಂದಲಿ ಕೊಟ್ಟಂಥ ಚರಣಕವಚ ಸ್ವರಣ ಸಂಪುಟದಲ್ಲಿ ನಿರುತ ಪೂಜೆಯ ಮಾಡುತ್ತ ಪ್ರವಚನಾಸಕ್ತ ಧರೆಯೊಳಗೆ ಬಹು ಶರಣು ಜನ ರಘ ತರಿದು ಸೌಖ್ಯವ ಗರಿವುದಕೆ ಸಂ ಚರಿಸುತಲಿ ಸಚ್ಛಾಸ್ತ್ರ ಮರ್ಮವ ನರುಹಿಜನರನುದ್ಧರಿಸಿದಂಥ 1 ಪೊಳೆವ ಫಾಲದಿ ಪುಂಡ್ರ ತಿಲಕ ಮುದ್ರಾಕ್ಷತಿ ವಿಲಸಿತ ಶುಭಗಾತ್ರದಿ ಅಲವ ಬೋಧರ ಮತದೊಳು ತತ್ವಬೋಧಕ ಸುಲಲಿತೋಪನ್ಯಾಸದಿ ಬಲು ವಿಧಾರ್ಥವ ಪೇಳಿಕುಳಿತಪಂಡಿತರನ್ನು ಒಲಿಸುತಿರೆ ಪೂರ್ವದಿ ಪಂಢರಪುರದಿ ಭವ ಮುದ್ಗಲಾಚಾರ್ಯರಿ ಗೊಲಿದು ಬಂದಿಹ ಚಲುವ ವಿಠ್ಠಲ ಮೂರುತಿಯ ಪದ ಜಲಜ ಮಧುಕರರೆನಿಸಿದಂಥ 2 ಜಡಜಾಪ್ತನುದಯದಿ ನಡೆದು ದ್ವಿಜಗೃಹದೇವ ರಡಿ ಗೊಂದನೆಯ ಮಾಡುತ್ತ ಎಡೆಬಿಡದಲೆ ತಮ್ಮ ಅಡಿಗೊಂದಿಸುವ ಭಕ್ತ ಗಡಣವ ಮನ್ನಿಸುತ ಬಿಡದೆ ಶತತ್ರಯ ಕೊಡ ಜಲದಲಿ ಸ್ನಾನ ದೃಢಮನದಲಿ ಮಾಡುತ್ತ ತಂತ್ರ ಸಾರೋಕ್ತ ಎಡಬಲದಿ ಶೇವೆಯನು ಮಾಡುವ ಪೊಡವಿಸುರಕೃತ ವೇದ ಘೋಷದಿ ಜಡಜನಾಭನ ಪೂಜಿಸುವ ಬಹು ಸಡಗರವ ನಾನೆಂತು ಬಣ್ಣಿಪೆ 3 ಭೂತಲದಲಿ ಶ್ರೇಷ್ಠವಾತ ಮಾತಾಂಬುಧಿ ಶೀತ ಕಿರಣನೆನಿಸಿ ಪ್ರಾತರಾರಭ್ಯ ಶ್ರೀನಾಥನೆ ಪರನೆಂಬೊ ಶಾಸ್ತ್ರದಿ ಮನವಿರಿಸಿ ಖ್ಯಾತ ಸತ್ಯಧ್ಯಾನ ತೀರ್ಥರೆಂಬುವ ಗುರು ಪ್ರೀತಿಯ ಸಂಪಾದಿಸಿ ಪುತ್ರರಿಗೆ ಬೋಧಿಸಿ ಪ್ರೀತಿಯಲಿ ಶಿಷ್ಯರಿಗೆ ಭಗವ ದ್ಗೀತೆಯನು ಪ್ರತಿದಿನದಿ ಪೇಳುತ ಪಾತಕವ ಪರಿಹರಿಸಿ ಪರಮ ಪು- ನೀತ ಗಾತ್ರರ ಮಾಡಿ ಸಲಹಿದ 4 ಧರೆಯೊಳಧಿಕಮಾದ ಗಿರಿ ವೇಂಕಟೇಶನ ದರುಶನವನೆ ಕೊಳ್ಳುತ ಗುರುವಾಜ್ಞೆಯಲಿ ಬಂದು ವರ ಸಭೆಯೊಳು ತಮ್ಮ ಪರಿವಾರದಿಂದಿರುತ ವರಷ ಶಾರ್ವರಿಯೊಳು ವರ ಮಾಘ ಪ್ರತಿಪದ ಬರಲು ಧ್ಯಾನವ ಮಾಡುವ ಹರಿಪದಾಸಕ್ತ ಪರಮ ಭಕುತಿಯಲಿಂದ ಶೇವಿಪ ಶರಣು ಜನ ಮಂದಾರ ನೆನಿಸುತ ಮೆರೆವ ಕಾರ್ಪರ ನಿಲಯ ಶಿರಿನರ ಹರಿಯ ಪುರವನು ತ್ವರದಿ ಶೇರಿದ 5
--------------
ಕಾರ್ಪರ ನರಹರಿದಾಸರು
ಗುರುಸ್ತುತಿ ದಾಸರ ಭಜಿಸುತ ಕ್ಲೇಶವ ಕಳೆಯಿರೊ ವಾಸುದೇವನ ಭಕ್ತರಾದ ಶ್ರೀಪುರಂದರ ಪ ಮೀಸಲ ಮನದಲಿ ಕೇಶವನಡಿಗಳ ಆಸೆಲಿ ಪೂಜಿಪ ದಾಸರೊಳಗೆ ಶ್ರೇಷ್ಠ ಅ.ಪ ಪುರಂದರ ಗಡದೊಳು ಹಿರಿಯನೆಂದೆನಿಸಿದ ವರದಪ್ಪನಿಗೆ ವರಕÀುವರ ನೆಂದೆನಿಸಿದೀ ಧರೆಯೊಳು ತನಗ್ಯಾರು ಸರಿಯಿಲ್ಲದಂತೆ ಮೆರೆಯೆ ಸಿರಿಯರಸನು ಶೀಘ್ರದಲಿ ತಾನರಿಯುತ 1 ಬಂದನು ಮಗನಿಗೆ ಮುಂಜಿಯೆಂದೆನುತಲಿ ಚಂದದಿಂದಲಿ ಬೇಡಲು ಧಣಿಯ ಬಂದೆಯಾತಕೆ ನಮ್ಮ ಚಂದದ ಬೀದಿಲಿ ಹಿಂದಕೆ ತೆರಳೆನೆ ಬಂದನು ಬಾರಿ ಬಾರಿ 2 ಹರಿಯೆಂದು ತಿಳಿಯದೆ ಜರಿಯುತ ನುಡಿಯಲು ಮರಳಿ ಮರಳಿ ಯಾಚಿಸೆ ಬಿಡದೆ ತೆರಳನು ಈ ವೃದ್ಧ ತೆರಳಿಪೆನೆನುತಲಿ ಸರಸರ ತೆಗೆಯುತ ಸುರಿದನು ನಾಣ್ಯವ 3 ನೋಡುತ ಶ್ರೀಹರಿ ಗಾಡದಿ ಕೈನೀಡೆ ನೀಡಿದ ಸವೆದ ರೊಕ್ಕವ ನೋಡೀ ಗಾಡನೆ ಬಂದು ನಾಯಕನ ಸತಿಯಳನು ಬೇಡಿದ ಪುಣ್ಯವು ಬಾಹೋದೆನುತಲಿ 4 ಏನು ನೀಡಲಿ ಎನಗೇನಿಹುದೆನ್ನಲು ಮಾನಿನಿ ಮೂಗುತಿ ನೀಡೆಂದೆನಲು ಮಾನಿನಿ ಮಾಡಲು ಜ್ಞಾನಿಗಳರಸನು ಗಾಡ ಹಿಂತಿರುಗುತ 5 ಗಾಡನೆ ಮೂಗುತಿ ನೀಡುತ ದ್ರವ್ಯವ ಬೇಡಲು ಬೇಗದಿ ನೀಡುತ ನುಡಿದನು ನೋಡುತ ವಡವೆಯ ನೀಡಿದ ಭರಣಿಲಿ ಸತಿ ಮುಖವಾ 6 ಮೂಗುತಿ ಎಲ್ಲೆನೆ ಬೇಗದಿ ನಡುಗುತ ನಾಗವೇಣಿಯು ಪ್ರಾರ್ಥಿಸಿ ಹರಿಯ ಆಗ ಕುಡಿವೆ ವಿಷವೆನ್ನುತ ಕರದಲಿ ನಾಗವಿಷದ ಬಟ್ಲಲಿ ಇರಲು 7 ತೋರಿದಳಾಗಲೆ ತನ್ನಯ ರಮಣಗೆ ತೋರದಿರಲು ಮುಂದಿನ ಕಾರ್ಯ ಭಾರಿ ಆಲೋಚನೆಯ ಮಾಡುತ ಮನದಲಿ ಸಾರಿದ ತನ್ನ ವ್ಯಾಪಾರದ ಸ್ಥಳಕೆ 8 ತೆರೆದು ನೋಡಲು ಆ ವಡವೆಯ ಕಾಣದೆ ಮಿಗೆ ಚಿಂತೆಯು ತಾಳುತ ಮನದಿ ನಗಧರನ ಬಹು ಬಗೆಯಲಿ ಪೊಗಳುತೆ ತೆಗೆದ ಅಸ್ಥಿರ ರಾಜ್ಯದಿ ಮನವ 9 ಕಳವಳ ಪಡುತಲಿ ಆ ಲಲನೆಯ ಸಹಿತದಿ ತನುಮನ ಧನ ಹರಿಗರ್ಪಿಸುತಾ ಕ್ಷಣ ಬಿಡದಲೆ ಹರಿ ಚರಣವ ಸ್ಮರಿಸುತ ಕಮಲನಾಭ ವಿಠ್ಠಲನೆನ್ನುವ ಹರಿ 10
--------------
ನಿಡಗುರುಕಿ ಜೀವೂಬಾಯಿ
ಚರಣವ ತೋರೈ ಚಲುವರಸನೇ ಚರಣವ ತೋರೈ ಪ ಸ್ಮರಣೆಮಾತ್ರದಲಿ ಮುಕುತಿಯ ಕೊಡುವ ಚರಣವ ತೋರೈ ಅ.ಪ ರಮ್ಮೆಯ ಮನಕೆ ಬೆಡಗು ತೋರುವ ಚರಣ ಬೊಮ್ಮಾದಿಗಳ ಮನಕೆ ನಿಲುಕದ ಚರಣವ ತೋರೈ ಚಿಮ್ಮಿ ರಾವಣನ ಬಲು ದೂರಗೈದ ಚರಣವ ತೋರೈ ಘಮ್ಮನೆ ಮೊಸರು ಮೆದ್ದು ಓಡುವ ಚರಣ ತೋರೈ 1 ಗೋಕುಲ ಭೂಮಿಯ ಪಾವನ ಮಾಡಿದ ಚರಣವ ತೋರೈ ಲೋಕವನೆಲ್ಲಾ ಅಡಗಿಸಿಕೊಂಡಾ ಚರಣವ ತೋರೈ ಬೇಕೆಂದು ಕುಬುಜಿಯ ಮನೆಗೆ ಪೋದ ಚರಣವ ತೋರೈ ಭವಾಬ್ಧಿ ಬತ್ತಿಸಿ ಬಿಡುವಾ ಚರಣವ ತೋರೈ 2 ಬಿಡದಲೆ ಸರ್ವಜ್ಞತೀರ್ಥರಿಗೊಲಿದಾ ಚರಣವ ತೋರೈ ಬಡವರಾಧಾರ ದಿವ್ಯಭೂಷಣವಿಟ್ಟು ಚರಣವ ತೋರೈ ಕಡು ಮುದ್ದು ಸಿರಿಕೃಷ್ಣ ವಿಜಯವಿಠ್ಠಲ ನಿನ್ನ ಚರಣವ ತೋರೈ ಪೂಜೆಯಗೊಂಬ ಚರಣವ ತೋರೈ3
--------------
ವಿಜಯದಾಸ
ಚಿಂತೆಯಾತಕೆ ಮನವೆ ಗುರುಗಳ ಪಾದ ಚಿಂತನೆಯನು ಮಾಡದೆಪ ಸಂತತ ಬಿಡದಲೆ ಚಿಂತನೆ ಮಾಳ್ಪರ ಅಂತರಂಗವ ತಿಳಿವರು ಗುರುವರರು ಅ.ಪ ಉದಯ ಕಾಲದಲಿವರ ಧ್ಯಾನವ ಮಾಡೆ ಮದಗರ್ವ ಪರಿಹರವು ಮುದದಿಂದ ಮೂರು ವೇಳೆಗಳಲ್ಲಿ ಸ್ಮರಿಸಲು ಹೃದಯ ತಾಪವ ಕಳೆವರು ಗುರುವರರು1 ದೇಶದೇಶವ ತಿರುಗಿ ತನುಮನಗಳ ಬೇಸರಗೊಳಿಸಲೇಕೆ ಪೋಷಿಪ ಗುರುಗಳಪಾದ ನಂಬಿದ ಮೇಲೆ ವಾಸುದೇವನೆ ನಲಿವ ಮುಂದೊಲಿವ 2 ವೇದವಾದಿಗಳೆಲ್ಲರೂ ವಾದವ ಮಾಡಿ ಮಾಧವನನು ಕಾಣಿರೊ ಮೋದತೀರ್ಥರ ಮತಬೋಧನೆ ಮಾಡುವ ಸಾಧು ಗುರುಗಳನೆ ಕೂಡು ಸಂಶಯಬಿಡು3 ಚಿತ್ತದಿ ಸ್ಮರಿಸುವರು ಹರಿ ಮಹಿಮೆಯ ಭಕ್ತಿಲಿ ನಲಿಯುವರು ಚಿತ್ರಗಾಯನ ನೃತ್ಯಗಾನಗಳಿಂ ಪುರು- ಷೋತ್ತಮನನೊಲಿಸುವರು ಹರುಷಿತರು4 ಕತ್ತಲೆ ಮನೆಗಳಲ್ಲಿ ಅಡಗಿಹ ವಸ್ತು ಲಕ್ಷಪರಿಮಿತಿ ಇದ್ದರು ಹಸ್ತದಿ ಜ್ಯೋತಿಯನೆತ್ತಿ ತೋರುವ ಪರಿ ಭಕ್ತರ ಸಲಹುವರು ಗುರುವರರು 5 ಸರಸೀಜಾಕ್ಷನ ನಾಮವು ಹಗಲಿರುಳು ಬಿಡದೆ ಧ್ಯಾನಿಸುತಿರ್ಪರು ಸಿರಿನಾರಾಯಣನನ್ನು ಸ್ಮರಿಸುತ್ತ ಮನದೊಳು ಪರಮಸಂಭ್ರಮ ಪಡುವರು ಗುರುವರರು 6 ಕರುಣದಿ ಸಲಹುವರು ಶಿಷ್ಯರ ಮನ ವರಿತು ವರಗಳನೀವರು ವರ ಕಮಲನಾಭವಿಠ್ಠಲನ ಧ್ಯಾನಿಪಉರಗಾದ್ರಿವಾಸ ವಿಠ್ಠಲದಾಸರನೆ ನಂಬು7
--------------
ನಿಡಗುರುಕಿ ಜೀವೂಬಾಯಿ
ತುತಿಸಲೆನ್ನೊಶವೆ ನಿನ್ನ ಶ್ರೀ ಗುರುರನ್ನ ಪ ತುತಿಸಲೆನ್ನೊಶವೆ ನಿ -ನ್ನತುಳ ಮಹಿಮ ಮಹಾ ಮತಿವಂತ ಜನರು ಸು - ಮತಿಗೆ ಸಿಲ್ಕದ ನಿನ್ನ ಅ.ಪ ಸ್ಮರಿಪ ಜನರ ಸುರ ತರು ಪಾಪಕಾಂತಾರ ನರ ಸಮ ಸಜ್ಜನ | ಶರಜನಿಚಯ ದಿನ ಪಾದ | ಸರಸಿಜ ಭಜಿಸುವ ಪರಮ ಭಕ್ತರ ಕುಮುದ | ವರ ನಿಚಯಕೆ ಸುಧಾ - ಪರಮ ಕರುಣಿಯು ಎಂದು ನಿನ್ನಯ ಪಾದ ಮೊರೆಯ ಪೊಕ್ಕೇನೊ ನಾನಿಂದು ನೀನೆ ಎನ್ನ ಮೊರೆಯ ಲಾಲಿಸು ಎಂದು ಬಿನ್ನೈಸಿದೆ ಪರಮಕೃಪಾಕರ ಪೊರೆಯೊ ಅನಾಥ ಬಂಧೂ 1 ದಯಕರ ನಿಜ - ಭಕ್ತಾ | ಮಯ ಹರ ಸುಖಸಾರಾ ಶ್ರಯವಾಗಿ ಸಂತತ | ನಯದಿಂದ ನಿಜಜನ ಭಯಕರ ಭವಹರ | ಜಯ ಜಯ ಜಯದಾತ ಜಯ ವಿಜಯಾತ್ಮಜ | ಜಯಕುಲ ದಿಗ್ವಿಜಯ ಜಯ ಕಾಲದಲಿ ನಿಜ | ಹಯಗ್ರೀವಮೂರ್ತಿಯ ದಯದಿಳೆಯೊಳು ಜನಿಸೀ | ಜನ್ಮದಿ ಮೂರ್ತಿ ತ್ರಯ ಪಾದವನೆ ಭಜಿಸಿ - ಧರಿಯೊಳು ಕ್ಷ - ತ್ರಿಯ ಕುಲದೊಳು ಜನಿಸಿ ಯುಧಿ ಭೀಮ - ಶಯನನಿಂದ ಹತನಾಗ್ಯಭüಯ ಸ್ಥಾನವನೆ ಬಯಸಿ 2 ಭೂಸುರ ವರನಾಗಿ | ಕಾಶ್ಯಪಿ ಸ್ಥಳದಲ್ಲಿ ವಾಸಮಾಡಿ ಶಿರಿ ವ್ಯಾಸ ಕೃಷ್ಣ ಪಾದೋ - ಪಾಸನ ಮಾಡುತ | ವ್ಯಾಸಮುನಿ ಆಗಿ ಭಾರ | ತೀಶ ಪ್ರತೀಕವ ವಾಸವಾಸರ ಸ್ಥಾ - ಪಿಸಿ ಯಂತ್ರೋದ್ಧಾರಾ ಶ್ರೀಶ ಮಧ್ವಮುನಿಯಾ - ಸ್ಥಾಪಿಸಿ ಅಲ್ಲಿ ವಾಸವ ಮಾಡಿ ತಾನೂ - ಪುರಂದರ ದಾಸರಾಯರಿಗೆ ಇನ್ನು - ಸುಮಂತ್ರೋಪ - ಅನುದಿನ ವಾಸಮಾಡಿದಿ ನೀನು 3 ಕ್ಷೋಣಿತಳದಿ ಕುಂಭ | ಕೋಣನಗರದಲ್ಲಿ ಕ್ಷೋಣಿದೆವೋತ್ತುಮ | ವೀಣವೆಂಕಟನಾಮಾ - ಕ್ಷೀಣಬಲ ಙÁ್ಞನ ತಾಣ | ಗೊಡದೆ ನಿನ್ನ ಜಾಣತನದಿ ನರ | ಮಾಣವಕನಂತೆ ಪಾಣಿ ಭಿಕ್ಷಾನ್ನವಾ | ಟಾಣಿ ಮಾಡುತ ನೀನು ಕ್ಷೋಣಿಪ ಮನಿಗೆ ಬಾರೇ - ನಿನ್ನ ವೀ - ಶುಭ ಲ - ಕ್ಷಣ ಬ್ಯಾರೆ ಬ್ಯಾರೇ ಇರಲು ನಿನ್ನ ಕ್ಷಣ ಬಿಡದಲೆ ಜನ ಮಣಿದು ನಮಿಸುತಿರೆ 4 ಜನಪ ನಿನ್ನಯ ಮಹ | ಘನ ಚರ್ಯವನೆ ನೋಡಿ ದಿನದಿನದಲಿ ಬಹು | ವಿನಯಪೂರ್ವಕ ಪಾದ ವನಜ ಸೇವಕÀನಾಗಿ |ತನು ಮನ ಧನ ಧಾನ್ಯ ಘನ ನಿನಗರ್ಪಿಸಿ | ನಿನ ಸಂಗವಾಗಲೂ ಜನುಮ ಇಲ್ಲೆಂಬುವ | ಘನ ಙÁ್ಞನ ಭಕುತಿಯ ಮನದಲ್ಲಿ ಯೈದುತಲೆ - ತಾನು ನಿತ್ಯ ಅನುಮಾನ ಮಾಡದಲೆ - ಇರಲು ಅವನ ಘನಸುಖ ರೂಪದಲ್ಲೆ - ಇರುವಂತೆ ಮನಪೂರ್ತಿ ಕರುಣಸಿದ್ಯನುಪಮ ಚರಿತಲ್ಲೆ 5 ಸತ್ಯನಾಮಕ ಸುತ | ಮೃತ್ಯುನಿಂದಲಿ ತಾನು ಸತ್ತುಪೋದ ವಾರ್ತೆ | ಬಿತ್ತರಿಸೆ ಲೋಕದಿ ಉತ್ತುಮ ನೀನಾಗ | ಸತ್ಯ ಸಂಕಲ್ಪವ ಗೊತ್ತು ತಿಳಿದು ಅವನ | ಮತ್ತೆ ಈ ಲೋಕಕ್ಕೆ ತತ್ಕಾಲದಲಿ ತಂದು | ಉತ್ತುಮ ಭಾರ್ಯಳ ಜತ್ತು ಮಾಡಿದ ವಾರ್ತೆಯಾ - ಕೇಳೀ ಶೈವ - ರುತ್ತುಮನಾತ್ಮಜನಾ - ಇವಾನಂತೆ ಸತ್ಯವೆಂದು ಪೇಳಿ ಮತ್ತೆ ಪೊರೆದ್ಯೊ ಜೀಯಾ 6 ಇನತೆ ಮೊದಲಾದ | ಫನತರ ನಿನ ಮಹಿಮೆ ನಿತ್ಯ | ಅನಿಮಿಷ ಮುನಿಜನ ಮನಕೆ ಸಿಲ್ಕದೆ ವೃಂದಾ - |ವನದಲಿ ನೀ ನಿಂತು ವನುತೆ ಸುತ ಧನ | ಧಾನ್ಯ ಮೊದಲಾದ ಅನುದಿನ ಸಲಿಸುತ್ತ ಜನರ ಪಾಲಿಸೊಗೋಸುಗಾ - ಹರಿಯು ನಿನಗೆ ಜನುಮಾವನಿತ್ತನೀಗ - ಅದಕೆ ನಿನ್ನ ಅನುದಿನ ತವಪಾದ ವನಜ ನಂಬಿದೆ ವೇಗ 7 ರಕ್ಷಿಸೋ ನೀ ಎನ್ನ | ಲಕ್ಷ್ಮೀರಮಣ ದೂತ ಮೋಕ್ಷಾದಿ ಪುರುಷಾರ್ಥ - | ಪೇಕ್ಷ ಪ್ರದಾಯಕ ಲಕ್ಷ ಜನರೊಳೆನ್ನ | ವೀಕ್ಷಿಸಿ ಪರಜನಾ - ಪೇಕ್ಷಾ ಮಾಡದಂತೆ | ಲಕ್ಷ್ಮೀಶ ನಾತ್ಮಜ ಭಿಕ್ಷಾನ್ನ ಬೇಡೋದು | ಲಕ್ಷಣವೇನಿದು - ಪೇಕ್ಷಾ ಮಾಡದೆ ನೀ ಎನ್ನಾ - ಕಾಯಲಿಬೇಕು ವಿಕ್ಷೀಸಿ ಙÁ್ಞನವನ್ನಾ - ಭಕುತಿ ಇತ್ತು - ರಕ್ಷಿಸು ಎಂದೆ ನಿನ್ನಾ ಇದೆ ಒಂದಾ ಪÉೀಕ್ಷೆ ಪೂರ್ತಿಸೊ ಕಲ್ಪವೃಕ್ಷ ನೀ ಎನಗೆ ಇನ್ನ 8 ಕಿಟಿಜ ಸರಿದ್ವರ | ತಟ ಕೃತ ಮಂದಿರ ಚಟುಲ ಮಧ್ವಮುನಿ | ಪಟು ಶಾಸ್ತ್ರದಿಂದಲಿ ಕುಟಿಲ ದುರ್ವಾದಿಗ | ಳ್ಥಟನೆ ಮುರಿದು ನಿಜ ಘಟನೆ ಮಾಡಿ ಪ್ರತಿ | ಭಟರಿಲ್ಲದಲೆ ನೀನು ಧಿಟನಾಗಿ ತ್ರಿಜಗದಿ - ಮೆರೆಯುತ ಶಠÀಜನರನು ತ್ವರದಿ - ಮರಿದು ಙÁ್ಞನಿ ಕಟಕ ಸುಪಾಲನದಿ ಪಟೋ ಎನಿಸಿ ಧಿಟಗುರು ಜಗನ್ನಾಥ ವಿಠಲನ್ನ ಭಜಿಸಿದೆ 9
--------------
ಗುರುಜಗನ್ನಾಥದಾಸರು
ದಯ ಮಾಡೊ ಪ್ರೀಯಾ ದಾಸರ ಶುಭೋ-ದಯ ವಿಜಯರಾಯ ಸಾ |ಹಯವಾಗಿ ಒದಗುವೋಭಯ ನಿವಾರಣ ಮಾಡಿ ಪ ಪ್ರಬಲವಾಗಿಹ ಮೋಹ ನಿಬಿಡವಾದದರಿಂದಅಭಯದಾಯಕ ನಿನ್ನ ಶುಭವಾದ ಪಾದಕ್ಕೆಅಭಿವಂದಿಸದಲೆ ಅಲ್ಪರ ಸೇರಿಅಬಲನಾಗುತಲೆ ಪಾಪದ ವನಧಿUಭೀರ ನೋಡದಲೆ ಬಾಳಿದೆ ಯನ್ನಅಭಿಮಾನದೊಡೆಯನೆ ಅಗಡು ಮಾಡದಲೆ 1 ದುರಿತ ಪರಿ ವರಗಳ ಗರೆವ ಕಾರಣ ನಿನ್ನಬಿರಿದು ನಾ ಬಲ್ಲೆ ಎನ್ನಯ ಭಾರಸರಿ ನಿನ್ನದಲ್ಲೆ ಲೌಕೀಕದಪರಿ ಮತ್ತೊಂದೊಲ್ಲೆ ಇಹಪರದಲ್ಲೆ ಪರಮ ಸೌಖ್ಯಕೆ ನಿನ್ನ ಸ್ಮರಣೆ ವಂದಲ್ಲೆ 2 ಪಾಮರ ಜನರಿಗೆ ಸುಮಾರ್ಗಗೋಸುಗಶ್ರೀಮನೋಹರ ನಿನ್ನ ಪ್ರೇಮದಿಂದಲಿ ಸೃಜಿಸಿಭೂಮಿಯೊಳಿಡಲೂ ಹರಿಯ ದಿವ್ಯನಾಮ ನಾ ಬಿಡಲು ದುರ್ವಿಷಯವಕಾಮಿಸಿ ಕೆಡಲೂ | ಸುಮ್ಮನಿರದೆಯಾಮ ಯಾಮಕೆ ನಿನಗೆ ನಾ ಮೊರೆಯಿಡಲೂ 3 ಜಗದಂತರ್ಯಾಮಿಯ ಹಗಲು ಇರುಳು ಬಿಡದೆಸುಗುಣ ಮಾರ್ಗದಲಿದ್ದು ಬಿಗಿಯಾದ ಕವನಕ್ಕೆಬಗೆ ತೋರಿದವನೆ ಹರಿಯ ಕ್ಷಣ ಅಗಲದಿದ್ದವನೆ ಕಾಮದ ಬಲಿಗೆಸಿಗದೆ ನಡೆವವನೆ ಅನುನಯದಿ ಕರವಮುಗಿದು ಬೇಡುವರಲ್ಲಿ ಮುದದಿಂದ ನಲಿವನೆ 4 ಎನ್ನೊಬ್ಬಗಲ್ಲ ಈ ಬಿನ್ನಪ ಕರುಣಾಳೆನಿನ್ನ ಪೊಂದಿದವರ ಮನ್ನಿಸಿ ಸಲಹಯ್ಯಾಬೆನ್ನು ಬಿಡದಲೆ ವ್ಯಾಸ ವಿಠ-ಲನ್ನ ಪಾಡುತಲೆ ಕಾಲವ ಕಳೆವ ಸನ್ಮಾರ್ಗವನೆ ತೋರೋ ತಡಮಾಡದಲೆ 5
--------------
ವ್ಯಾಸವಿಠ್ಠಲರು
ದಾಸರ ಮೊರೆ ಲಾಲಿಸೋ ವೆಂಕಟಾಚಲ ವಾಸ ಬಿನ್ನಪ ಲಾಲಿಸೊ ಪ ಲೇಸು ಭಕುತಿಯು ಮಾಡದಲೆ ಬಲು ಘಾಸಿಯಾಗುತ ಮನದಿ ನೊಂದು ದಾಸನಾಗದೆ ಕ್ಲೇಶಪಟ್ಟೆನೊ ಈಸುದಿನಗಳ ಕಳೆದೆನೊ ವೃಥಾ1 ತಳಿರು ಪೋಲುವ ನಿನ್ನಯ ಪಾದ- ಕ್ಕೆರಗದೆನ್ನಯ ಸಿರವು ದಣಿಯನೋಡದೆ ನಿನ್ನನು ಮಹಾಪಾಪ ಗಳನೆ ಮಾಡುತ ನೊಂದೆನು 2 ಅನಿಮಿಷೇಶನೆ ನಿನ್ನ ಮಹಿಮೆಯ ಕ್ಷಣಬಿಡದೆ ಧ್ಯಾನವನೆ ಮಾಡುವ ಅನಲಸಖತನಯನಿಗೆ ನಮಿಸುವೆ ಕ್ಷಣ ಬಿಡದೆ ಎನ್ನ ಪೊರೆವ ಕರುಣಿ3 ಕಟಿಯ ಕಾಂಜಿಯ ದಾಮವು ನವರತ್ನದ ಸ್ಫ್ಪಟಿಕ ಮುತ್ತಿನ ಹಾರವು ಲಕುಮಿ ಧರಿಸಿದ ವಕ್ಷ ಕೌಸ್ತುಭಹಾರ ಸ್ಫುಟದಿ ಶೋಭಿಪ ಉರವು 4 ವಟುವಿನಂದದಿ ಪ್ರಕಟನಾಗುತ ಕುಟಿಲ ದಿತಿಜರಿಗಖಿಳ ವಿಧ ಸಂ- ಕಟಗಳನೆ ಸಂಘಟನೆ ಮಾಡುವ ನಟನ ತೆರ ವಟಪತ್ರಶಾಯಿ 5 ನೊಸಲ ಕಸ್ತೂರಿ ತಿಲಕ ರಂಜಿಸುವ ಚಂ- ಪಕವ ಪೋಲುವ ನಾಸಿಕ ಎಸೆದು ಶೋಭಿಪ ಮೌಕ್ತಿಕ ಪೋಲುವ ದಂತ ನಸುನಗುತಿಹ ಹಸನ್ಮುಖ6 ಶಶಿಯ ಧರಿಸಿದ ಅಸಮ ಭಕುತನು ನಿಶಿಹಗಲು ತನ್ನ ಸತಿಗೆ ಬೆಸಸಿದ ಅತಿಶಯದ ಮಹಿಮೆಯನೆ ಕೇಳುವ ಮತಿಯ ಕೊಡು ಮನ್ಮಥನ ಪಿತನೆ 7 ಚಿತ್ತದೊಳಗೆ ನಿನ್ನಯ ಪಾದಾಂಬುಜ ಭಕ್ತಿಯಿಂದಲಿ ಕಾಂಬುವ ಭಕ್ತಜನರ ವೃಂದವ ಕರುಣದಿ ಕಾಯ್ವ ವಿಷ್ಣು ಮೂರುತಿ ಕೇಶವ 8 ಎತ್ತನೋಡಿದರಿಲ್ಲ ನಿನ್ನ ಸಮ ಉತ್ತಮರ ಕಾಣುವುದೆ ಮಿಥ್ಯವೊ ಸತ್ಯವಿದು ಪುರುಷೋತ್ತಮನೆ ಎನ್ನ ಚಿತ್ತದಲಿ ನಲಿನಲಿದು ಶ್ರೀಶ 9 ಕಮಲಸಂಭವ ಪಿತನೆ ಪ್ರಾರ್ಥಿಸುವೆ ಶ್ರೀ- ರಮೆಧರೆಯರಿಂ ಸೇವ್ಯನೆ ಕ್ಷಣಬಿಡದಲೆ ನಿನ್ನನೆ ಚಿಂತನೆ ಮಾಳ್ಪ ಸುಜನರಿಗೊಲಿಯುವನೆ 10 ಶ್ರವಣ ಮನನಕೆ ಒಲಿವ ದೇವನೆ ದಿನದಿನದಿ ನಿನ್ನ ಮಹಿಮೆ ತೋರು ಶ್ರೀ- ಕಮಲನಾಭ ವಿಠ್ಠಲನೆ ಕರುಣದಿ ಶ್ರಮವ ಹರಿಸುಸುಧಾಮ ಸಖನೆ11
--------------
ನಿಡಗುರುಕಿ ಜೀವೂಬಾಯಿ
ದಾಸರಾಗಿರೊ ವೈಷ್ಣವ ದಾಸರಾಗಿರೊ ದಾಸರಾಗಿ ಬಯಲಾಸೆಯ ನೀಗಿ ರ- ಮೇಶನ ಗುಣವಾರಾಶಿಯೊಳಿರಿಸುವ ಪ. ಸುಂದರ ಮಾನಾನಂದತೀರ್ಥಮತ ಸಾಂದ್ರ ಸುಖಾಂಬುಧಿಮಿಂದ ಮಹಾತ್ಮರ 1 ದಿವ್ಯಲೋಕಜನ ಭವ್ಯೋಭಯವಿಧ ಕಾವ್ಯರಚನ ಲಾತವ್ಯಯತೀಂದ್ರರ 2 ಸೀತಾಪತಿ ರಘುನಾಥನ ಮನದೊಳ- ಗಾತು ಭಜಿಪ ಗಣನಾಥ ಜನಕನ 3 ಶ್ರೀ ಮಹೇಶ ವಟು ವಾಮನ ಪದಯುಗ ಸಾಮಜವಾಹನ 4 ಕಾಕರಟನದೊಳ ಭೀಕರ ಮತವ ನಿ- ರಾಕರಿಸಿರುವ ಸುಧಾಕರ ಮೂರ್ತಿಯ 5 ತಂತ್ರ ದೀಪಿಕಾ ಯಂತ್ರವ ರಚಿಸಿದ ಮಂತ್ರಾಲಯವರ ಮಂತ್ರದೇವತೆಯ 6 ಗೋಪಿನಾಥನೆ ಭೂಪನೆಂದು ಸಂ- ತಾಪವ ಬಿಡಿಸುವ ಶ್ರೀಪಾದರ ಪದ 7 ಮಂದಕಲಿಯ ಕಾಲಿಂದಲೊರಿಸಿದ ಪು- ರಂದರದಾಸರ ಹೊಂದಿ ಹರಿಯ ನಿಜ8 ಸುಜನ ಹೃದಂಬುಜ ಸುಖಕರ ದಿನಮಣಿ ವಿಜಯರಾಜ ಪದ ಭಜನೆಯ ಮಾಡುತ 9 ಭಂಗುರ ಭವಭಯ ಭಂಗದ ಸುಗುಣ ತರಂಗನ ಒಲಿಸಿದ ಮಂಗಳ ಮಹಿಮರ 10 ಹರಿಕಥಾಮೃತದ ತೆರೆಗಳೊಳಾಡುವ ಪರತರಸಾರವ ಸುರಿದ ಮಹಾತ್ಮರ 11 ಸಿಡುಕರ ಸಂಸ್ಕøತಿ ಕಡಲೊಳು ಮುಳುಗಲು ಬಿಡದಲೆ ಕೈಪಿಡಿದೊಡೆಯನ ತೋರ್ಪರ 12 ಅರಿಷಡ್ವರ್ಗವ ತರಿದು ಬಿಸುಟು ಶ್ರೀ- ವರನ ಕೃಪಾರಸ ಸುರಿಸಿದ ಧನ್ಯರ 13 ಮೂಕನ ವಾಗ್ಮಿಯ ಮಾಡಿ ಮುರಾರಿಗೆ ಸಾಕ ಕೊಟ್ಟಿ ದೀನಾಕರದಾಸರ 14 ಮಾತಿಗೆ ಕಂಸಾರಾತಿನಲಿಯೆ ಜಗ ನ್ನಾಥರೆಂ¨ ವಿಖ್ಯಾತಿ ಪಡೆದವರ 15 ತಾಪತ್ರಯಗಳ ತಪ್ಪಿಸಿ ವೆಂಕಟ ಭೂಪನ ಸದಯಾರೋಪಗೈದವರು 16
--------------
ತುಪಾಕಿ ವೆಂಕಟರಮಣಾಚಾರ್ಯ
ದಾಸರಾಯಾ ಎನ್ನ | ಬೆಂಬಿಡದಲೆ ಕಾಯೋ ಬಹು ಪರಿಯಿಂದ ದಾಸರಾಯಾ ಪ ಈರೇಳು ವರುಷವಾರಂಭಿಸಿ ಪ್ರತಿದಿನ | ದಾಸರಾಯ ಜಾವು ಮೂರುಗಳಲ್ಲಿ ಮುಕುಂದನ ಚರಣವ | ದಾಸರಾಯಾ | ಚಾರು ಮನಾಬ್ಜದಿ ಬಹಿರದಿ ಬಗೆ ಬಗೆ | ದಾಸರಾಯಾ | ಭೂರಿ ಭಕುತಿ ಭರಿತನಾಗಿ | ದಾಸರಯ್ಯಾ1 ಪುಂಗವ ಸುಮತೀಂದ್ರ ರಾಯ ಕರೆದ ನಿನ್ನ | ದಾಸರಾಯಾ | ಸಂಗೀತ ರಸನ ಪಾನಮಾಡಿ ಹರುಷದಿ | ದಾಸರಾಯಾ | ಹರಿ | ಡಿಂಗರೊಳುತ್ತುಂಗನೆನಿಸಿಕೊಂಡೆ ದಾಸರಾಯ 2 ಕುಶಲಗಾನವ ಕೇಳಿ ಗುರುಸತ್ಯ ಪೂರ್ಣರು | ದಾಸರಾಯಾ | ಪರಾ ವಸುನಾಮ ಗಂಧರ್ವನವತಾರ ನೀನೆಂದು | ದಾಸರಾಯಾ | ಪೆಸರಿಟ್ಟರಂದು ವಿದ್ವಜ್ಜನ ಮೆಚ್ಚಲು ದಾಸರಾಯಾ | ಎನ ಗೊಶವಹುದೇ ನಿಮ್ಮ ಮಹಿಮೆ ಕೊಂಡಾಡಲು |ದಾಸರಾಯಾ | 3 ಚರಿಸಿದೆ ಪುಣ್ಯಕ್ಷೇತ್ರಗಳ ಭಕುತಿಯಿಂದ | ದಾಸರಾಯಾ | ಪ್ರತಿ | ವರುಷ ಬಿಡದೆ ಶೇಷಗಿರಿಯವಾಸನ | ದಾಸರಾಯಾ | ಪರಿಯಂತ | ದಾಸರಾಯಾ | ಪರಿ ಚರಿಯವ ಕೈಕೊಂಡು ಪಡೆದೆ ಮಂಗಳಗತಿ ದಾಸರಾಯ 4 ಮುನಿಯು ಉಪೇಂದ್ರರಾಯರು ನಿಮ್ಮ ಚರಿತೆಯ | ದಾಸರಾಯಾಕೇಳಿ ಸಾನುರಾಗದಿ ಸರ್ವ ಮಂತ್ರೋಪದೇಶವ | ದಾಸರಾಯಾ | ಆನುಪೂರ್ವಕಮಾಡಿ ಅತಿ ಸಂತೋಷದಿ | ದಾಸರಾಯಾ | ಕೊಟ್ಟರು ಶ್ರೀ ನರಸಿಂಹ ಪ್ರತಿಮೆ ಸಾಲಿಗ್ರಾಮ | ದಾಸರಾಯಾ | 5 ಕಿಂಕರನೆನಿಸಿ ಪರಂದರದಾಸರೆ | ದಾಸರಾಯಾ | ಅವರಿಂ ದಂಕಿತ ವಹಿಸಿ ನಿಶ್ಯಂಕೆಯಿಂದ ನೀನು ದಾಸರಾಯಾ | ಪೊಂಕವ ಪೊಗಳುತ ಪೊಡವಿಯೊಳು ಚರಿಸಿದೆ | ದಾಸರಾಯಾ|ಭವ ಪಂಕವ ದಾಟ ಪರೇಶನನೈದಿದೆ | ದಾಸರಾಯಾ 6 ಪರಿಯಂತ ಕರ ಒಡ್ಡಲೊಲ್ಲೆನೆಂಬುವ ಛಲ | ದಾಸರಾಯಾ | ನಿನಗೆ ಸಲ್ಲಿತು ನಿಜ ಭಾಗವತರ ಪ್ರಿಯ | ದಾಸರಾಯಾ | ನಿಮ್ಮಾ ಅನುಭವೋಪಾಸನೆ ಏನು ತಿಳಿಯದು ದಾಸರಾಯಾ 7 ಕಮಲ ಧ್ಯಾನ ದಾಸರಾಯಾ | ಸ್ನಾನ ವರ ಮಂತ್ರ ಜಪ ತಪ ವಿಹಿತಾಚರಣೆಗಳು | ದಾಸರಾಯಾ ಪೆರತೊಂದು ಸಾಧನ ಮನ ವಾಕ್ಕಾಯಗಳಲಿ | ದಾಸರಾಯಾ | ನಾನೊಂದರಿಯೆ ದಯಾಬ್ಧಿ ಉದ್ಧರಿಸೆನ್ನ ಭವದಿಂದ ದಾಸರಾಯಾ 8 ನಾರಾಯಣಾತ್ಮಜ ಅನಂತಾರ್ಯರುದರದಿ ದಾಸರಾಯಾ |ಪುಟ್ಟಿ | ನೂರೊಂದು ಕುಲಗಳುದ್ಧಾರ ಮಾಡಿದೆ | ದಾಸರಾಯಾ | ಕಾರುಣ್ಯನಿಧಿ ಜಗನ್ನಾಥವಿಠಲ | ದಾಸರಾಯಾ | ನಿಮ್ಮ ಚಾರು ಚರಿತ್ರೆಯ ತುತಿಸಿ ಪಾವನನಾದೆ | ದಾಸರಾಯಾ 9
--------------
ಜಗನ್ನಾಥದಾಸರು
ದಿನದಿನದೊಳು ಬಿಡದೊನಜಾಕ್ಷ ಪಾದ ಭಜಿಸಿ ನೀ ಸುಖಿಯಾಗೊ ಮನವೆ ಪ ನಂಬುಗೆ ಕಾರಣ ಅಂಬುಜಾಕ್ಷನ ಶ್ರೀಪಾ ದಾಂಬುಜ ಒಲಿಸಲು ಕುಂಭಿಣಿಯೊಳಗೆ ನಂಬಿ ಪ್ರಹ್ಲಾದ ಕರೆಯೆ ಕಂಬದಿಂ ಬಂದವನ ಬೆಂಬಿಡದಲೆ ಕಾಯ್ದನೆಂಬೋಕ್ತಿ ಕೇಳಿ ತಿಳಿದು 1 ದುರಿತದ ತವರಿದು ನರಕಕ್ಕೆ ಬೇರೆಲೊ ಮರವೆಸಂಸಾರ ಮಹಸರಸಿನಸರೋವರ ಸುರಸಿನೊಳ್ ಸಿಲ್ಕಲು ತಿರುಗರೆಂಬುವ ಹರಿಶರಣರ್ವಾಕ್ಯಗಳು ಸ್ಥಿರನಂಬೀ ಅರಿತು 2 ಕಿರಿಕಿರಿ ಸಂಸಾರ ಪರಿಪರಿಬಾಧಿಪ ಉರಿಕಿನ ತಿಂಡಿಯಿದು ನೆರೆನಂಬಬೇಡ ಜರಸುಖವಿಲ್ಲದ ಎರವಿನ ಕಾಯಕ್ಕೆ ಹಿರಿಹಿರಿ ಹಿಗ್ಗಿ ಕೆಡದಿರು ವಿವರಿಸಿನೋಡಿ 3 ಸತಿಸುತರಿವರೆಲ್ಲ ಅತಿಭಾಗ್ಯ ಇರುವನಕ ಸತತ ನಿನ್ನಯ ಸೇವೆ ಹಿತದಿಂ ಮಾಳ್ಪರು ಗತಿಸಿ ಪೋಗಲು ಭಾಗ್ಯ ಸತಿಸುತರೆ ನಿನ ಗತಿವೈರಿಗಳು ಕಾಣೊ ಮತಿಹೀನ ಮನಸೆ 4 ಇರುಳು ಹಲವು ಪಕ್ಷಿ ನೆರೆದುಂಡು ವೃಕ್ಷದಿ ತಿರುಗಿ ಉದಯದೊಳು ಹಾರಿಹೋಗ್ವ ತೆರದಿ ಸರುವ ಅಸ್ಥಿರವೆಂದು ಅರಿತು ವಿಚಾರಿಸಿ ಸ್ಥಿರಸುಖವನು ಪಡೆಯೊ ಶ್ರೀರಾಮನಡಿಗ್ಹೊಂದಿ 5
--------------
ರಾಮದಾಸರು
ದುರಿತ ಜೀಮೂತವಾತ ಪೊರಿಯಯ್ಯ ನಿನಗೆ ನಿರುತ ಧರಣಿಯೊಳಗೆ ವಿಸ್ತರಿಸಿ ಬಲ್ಲವರಾರು ಗುರುವೆ ನಿಜ ನಮಿತರ ಸುರತರುವೆ ಪ ನಂಬಿದೆ ನಿನ್ನ ಪಾದವಂಬುಜವನು ಗಾಲ ಬೆಂಬಿಡದಲೆ ನಾನೆಂಬೋದು ಬಿಡಿಸಿಂದು ಬೆಂಬಲವಾಗು ಆರೆಂಬ ಖಳರ ನೀಗು ಇಂಬಾಗಿ ನೋಡು ದಿವ್ಯಾಂಬಕದಿಂದ ವೇಗ ಡಿಂಬಾರೋಪಿರೆ ಡಂಬಕತನವೆಂಬುದು ಕೊಡದಲೆ ಸಂಭ್ರಮದಲಿ ಹರಿದೊಂಬಲ ಬಯಸುವ ಹಂಬಲಿಗರ ಕೂಡ ಇಂತು ತೋರು ಬಲು ಗಂಭೀರ ಕರುಣಿ 1 ಎಣೆಗಾಣೆÉ ನಿಮಗೆ ಕುಂಭಿಣಿಯೊಳಗೆಲ್ಲ ಯತಿ ಮಣಿಭೂಷಣ ಚರಣಾರ್ಚನೆ ಮಾಳ್ಪ ಮಹಿಮ ಮನಸಿಜ ಶರಭೀಮ ಮನದಣೆ ಗುಣಿಸಿ ಈ ದಿನ ಮೊದಲು ಪಿಡಿದು ಜನುಮ ಜನುಮದ ಸಾ ಧನ ಫಲಿಸುತು ಯೋಚನೆಗೊಳಲ್ಯಾಕೆ ಅನುಮಾನ ಸಲ್ಲದು ಘನತರ ಕೀರ್ತಿ ನೂರಾರಕೆ ಕಾಯ 2 ವರಹಜೆ ಸರಿತೆಯಲ್ಲಿ ಸ್ಥಿರನಾಗಿ ನಿಂದು ಕ್ಷಣ ಸುರರಿಂದಾರಾಧನೆ ಸರಸರನೆ ಹಗಲು ಇರಳು ಕೈಗೊಳುತ ವಕ್ಕಾರಗಳು ಹರಸಿ ಸುಂ ದರ ವರಗಳನಿತ್ತು ಚಿರಕಾಲ ಬಿಡದಲೆ ಪರವಾದಿಯ ಬಲ ಉರುದಲ್ಲಣ ಪೂ ತುರೆ ಸುಧೇಂದ್ರರ ಕರಾರವಿಂದಜ ಅರಸರಸರ ಪ್ರಿಯ ವಿಜಯವಿಠ್ಠಲನ ಬಿರಿಯ ಹೊಯಿಸುವ ಧೀರಾ ಗುರು ರಾಘವೇಂದ್ರ3
--------------
ವಿಜಯದಾಸ
ನಂದಪುತ್ರನ ಆಜ್ಞೆಯಿಂದಲುದ್ಧವ ಬ್ಯಾಗ ಬಂದು ಗೋಕುಲ ಹೊಕ್ಕಾನಂದದಿಂದಲಿ 1 ಬಾಲನ್ವಾರ್ತೆಯ ಕೇಳೆಶೋದ ಗೋಪನು ಕೊಂ- ಡಾಡಿ ಗುಣಗಳ ಮನಕೆ ತಾಳಿದರ್ಹರುಷವ 2 ತಾಪ ಬಿಡದಲೆ ಅಗಲಿ ಶ್ರೀಪತಿ ಕಾಣದೆ ಸಂತಾಪದಿಂದಿರೆ 3 ಸತಿಯರೆಲ್ಲರು ಗೋಪಿಸುತನ ಪಾಡುತ ದಧಿಯ ಮಥಿಸಿ ಕದವನೆ ತೆಗೆಯೆ ರಥವ ಕಂಡರು 4 ದಾವ ಕಾರಣ ನಮ್ಮ ಭಾವಭಕ್ತಿಗೆ ಸ್ವಾಮಿ ತಾನೆ ಬಂದಾನೋ ತನ್ನಕ್ರೂರನ ಕಳಿಸ್ಯಾನೊ 5 ಭದ್ರೆರೆಲ್ಲರೂ ಕೂಡಿ ಎದ್ದು ಬರುತಿರೆ ಮಧ್ಯಮಾರ್ಗದಿ ಅಲ್ಲುದ್ಧವನ ಕಂಡರು 6 ಕಾಂತೇರೆಲ್ಲರು ಕೂಡೇಕಾಂತ ಸ್ಥಳದಲ್ಲಿ ನಿಂತು ಕಂತುನಯ್ಯನು ಲಕ್ಷ್ಮೀಕಾಂತ ಕ್ಷೇಮವೆ 7 ಇಂದಿರೇಶನ ಬಿಟ್ಟಗಲಿ ವ್ರಜದೊಳು ಕಾಲ ಹಿಂದೆ ಕಳೆವೋದ್ಹ್ಯಾಗಿನ್ನ ್ಹಗಲು ಇರುಳನೆ 8 ಮುಂದೆ ಕಾಣದೆ ನೇತ್ರ ಅಂಧಕರಂದದಿ ಮು- ಕ್ಕುಂದನಿಂದಲಿ ರಹಿತರೆಂದಿಗಾದೆವೊ 9 ತೊಡಿಗೆ ಬಂಗಾರ ಶಿರದಿ ಮುಡಿವೊ ಮಲ್ಲಿಗೆ ದೇಹ- ಕ್ಕುಡಿಗೆ ಭಾರವೊ ಬಿಟ್ಟು ಪೊಡವಿಗೊಡೆಯನ 10 ಉದ್ಧವ ನಾವು ಜಾಳು ಸ್ತ್ರೀಯರು ಒಲ್ಲದೆ ಕಾಳಿಮರ್ದನ ಕಾಲಲೊದ್ದು ಪೋದನು 11 ಜಾರಸ್ತ್ರೀಯರುಯೆಂದು ನಗದಿರುದ್ಧವ ಬಿಗಿದ ಮೋಹಪಾಶದಿ ಈ ವಿಚಾರ ಮಾಡಿದ 12 ಬಲೆಯಗಾರಗೆ ಸಿಕ್ಕು ಬಳಲಿದಾಕ್ಷಣ ಅದರ ಕೊ- ರಳ ಕೊಯ್ಯದೆ ಅವಗೆ ಕರುಣ ಬರುವುದೆ 13 ಎಷ್ಟು ಹೇಳಲೊ ಅವನ ಗಟ್ಟಿಯೆದೆಗಳ ಒಲ್ಲದೆ ಬಿಟ್ಟು ನಮ್ಮನು ಮಧುರಾಪಟ್ಟಣ ಸೇರಿದ 14 ಭ್ರಮರಕುಂತಳೆ ಒಂದು ಭ್ರಮರಕಾಣುತ ಬ್ಯಾಡ ಕಮಲನಾಭನ ವಾರ್ತೆ ಕಿವಿಗೆ ಸೊಗಸದು 15 ಮದನಮೋಹನ ಹೋಗಿ ಮಧುರಾಪುರಿಯಲಿ ಅಲ್ಲಿ ಚÉದುರೆರಿಂದಲಿ ಅವಗೆ ಸೊಗಸು ಸಮ್ಮತ 16 ಕ್ರೂರನೆನ್ನದೆ ಇವಗಕ್ರೂರನೆನುತಲಿ ದಾರ್ಹೆಸರಿಟ್ಟರೋ ನಮಗೆ ತೋರಿಸೊ ಅವರನು 17 ಯಾತಕ್ಹೇಳುವಿ ಅವನ ವಾರ್ತೆ ಸೊಗಸದು ಹರಿಯು ಪ್ರೀತಿ ವಿಷಯನು ನಮಗೆ ಘಾತಕನೆನಿಸಿದ 18 ಜಲನ ಭೇದಿಸಿ ಹಯನ ಕೊಂದು ವೇದವ ಹ್ಯಾಗೆ ಹರಣ ಮಾಡಿದ 19 ಕ್ಷೀರ ಮಥನವ ಮಾಡಿ ಸ್ತ್ರೀಯರೂಪದಿಂದಸುರರ ಮೋಹಿಸಿದ್ವಂಚನೆ ನಮಗೆ ಪೂರ್ಣ ತಿಳಿಸಿದ 20 ಭೂಮಿ ಬಗಿದನು ತನ್ನ ಕ್ವಾರೆಯಿಂದಲಿ ನಮ್ಮನ್ನು ಸೀಳಿ ಪೋದರೆ ಇನ್ನೀ ಘೋರ ತಪ್ಪುವುದು21 ಕಂದ ಕರೆಯಲು ಕಂಬದಿ ಬಂದು ಸಲಹಿದನೆಂದು ನಂಬಿ ಕೆಟ್ಟೆವೊ ಇನ್ನಿವನ ಹಂಬಲ ಸಾಕಯ್ಯ 22 ಕೊಟ್ಟ ದಾನವ ಬಲಿಯ ಕಟ್ಟಿ ಪಾಶದಿಂದವನ ಮೆಟ್ಟಿದ ಪಾತಾಳಕಿಂಥಾಕೃತ್ಯಮರುಂಟೇನೊ 23 ಕೊಡಲಿ ಕೈಯ್ಯೊಳು ಪಿಡಿದು ಹಡೆದ ಮಾತೆಯ ಶಿರವ ಕಡಿದ ಪುರುಷಗೆ ನಮ್ಮೊಳು ಕರುಣ ಬರುವುದೆ 24 ಬಂದ ಸತಿಯಳ ಮೋರೆ ಅಂಗ ಕೆಡಿಸಿದ ತ- ನ್ನಂಗನೆ ಕಾಣದೆ ತಿರುಗಲೆಮಗೆ ಸನ್ಮತ 25 ಪತಿಯ ಸುತರನೆ ಬಿಟ್ಟೆವಶನ ವಸನವ ಅಗಲಿದ್ವಸುನಂದನಗೆ ನಮ್ಮೆಲ್ಲರುಸುರು ಮುಟ್ಟಲ್ಯೊ 26 ಬೌದ್ಧರೂಪದಿ ಸ್ತ್ರೀಯರ ಲಜ್ಜೆಗೆಡಿಸಿದನೆಂಬೊ ಸುದ್ದಿ ಬಲ್ಲೆವೊ ನಾವಿಲ್ಲಿದ್ದವರುದ್ಧವ 27 ಕಲಿಯ ಮನಸಿರೆ ಇವಗೆ ಕಲ್ಕ್ಯನೆಂಬೋರೊ ಕತ್ತಿ ಪಿಡಿದ ಪುರುಷಗೆ ನಮ್ಮೊಳು ಕರುಣ ಬರುವುದೆ 28 ಬ್ಯಾಡವೆನುತಲಿ ಅವಗೆ ಬೇಡಿಕೊಂಡೆವೊ ಗಾಡಿಕಾರನು ನಮ್ಮ ನೋಡದ್ಹೋದನು 29 ನಮ್ಮ ವಚನವ ಹೋಗಿ ಮನ್ನಿಸುದ್ಧವ ಪನ್ನಂಗಶಯನನ ಪಾದಕ್ಕಿನ್ನು ನಮಿಸೆವೊ 30 ಬಿಟ್ಹ್ಯಾಗಿರುವೊಣೋ ಭೀಮೇಶಕೃಷ್ಣನ ನಮ್ಮ ದೃಷ್ಟಿಗೆ ತೋರಿಸೊ ಮುಕ್ತಿ ಕೊಡುವೊ ದಾತನ31
--------------
ಹರಪನಹಳ್ಳಿಭೀಮವ್ವ
ನದಿಗಳ ಸ್ತೋತ್ರ ಕಾವೇರಿ ಕಲುಷ ಸಂಹರಳೆ ಕಾವೇರಿ ಪ ವಿಧಿ ಸುತೆ ನಮ್ಮ | ಕಾವುದು ಬಿಡದಲೆ ಅ.ಪ. ಅಮಿತಾಭ ಕವೇರ ನೃಪನು | ಪುಣ್ಯಶಮದಮದಿಂದಯುತನು | ಸಾರಿಹಿಮನಗ ತಪ್ಪಲುಗಳನು | ದಿವ್ಯಸಮಶತದಶ ವರ್ಷಗಳನು | ಆಹಸುಮನ ಸೋತ್ತಮನಾದ | ಬೊಮ್ಮನ ಧೇನಿಸಿಅಮಮಸುಘೋರವು | ವಿಮಲ ತಪವ ಗೈದ 1 ಬೊಮ್ಮ | ಅಚ್ಚ್ಯುತ ಮಾಯ ತನ್‍ಇಚ್ಛೆಯ ಸುತೆ ನಿನ | ಮೆಚ್ಚು ಪುತ್ರಿಯಹಳು 2 ಸ್ಮರಣೆ ಮಾತ್ರದಿ ವಿಷ್ಣುಮಾಯಾ | ದಿವ್ಯತರುಣಿ ರೂಪದಿ ಬ್ರಹ್ಮರಾಯ | ನೆದುರುಕರವ ಮುಗಿದು ಪೇಳು ಜೀಯಾ | ಎನೆಬರೆದನಾ5ದು ಕವೇರ್ಕನ್ಯಾ | ಆಹಸರಿತು ರೂಪದಿ ಮೋಕ್ಷ | ವg್ವ5ರ ವಹುದು ನೀಸರುವ ತೀರಥ ಮಯಿ | ಪರಿವುದು ಈ ಪರಿ 3 ಎರಡು ಅಂಶವು ನಿನಗಿಹುದೂ | ಒಂದುಸರಿತಾಗಿ ಪ್ರವಹಿಸುವೂದು | ಮತ್ತೆತರುಣಿ ರೂಪದಿ ಪತ್ನಿಯಹುದು | ಮುನಿವರ ಕುಂಭ ಸಂಭವಗಹುದು | ಆಹಕರೆಸಿ ಲೋಪಾಮುದ್ರೆ | ಮೆರೆವುದು | ಪತಿವ್ರತೆಶಿರೋಮಣಿ ಎನಿಸಿ ನೀ | ಮೆರೆವುದು ಭುವಿಯಲ್ಲಿ 4 ವರವಿತ್ತು ಮರೆಯಾಗೆ ಅಜನು | ನೃಪವರ ಸುತೆಯೊಡನೆ ಪೊರಟನು | ಕಾಲಕರ ಮರತನದಿ ಕಳೆದಾನು | ಮುಂದೆವ್ಯೆರಾಗ್ಯದಿಂ ಪೇಳಿದಾನು | ಆಹಪರಿಶುದ್ಧನಿಹೆ ನಿನ್ನ | ದರುಶನ ಮಾತ್ರದಿಪರಮ ನಿಷ್ಕಾಮದ | ಕರ್ಮವನೆಸಗುತ್ತ 5 ಹರಿಧ್ಯಾನದೊಳು ಬಲುರತ | ನಿರೆನರಪತಿ ಹರಿಲೋಕ ಗತ | ನಾಗೆತರುಣಿ ಕಾವೇರಿಯು ಸ್ಥಿತ | ಘೋರವರ ತಪವನ್ನು ಗೈಯ್ಯುತ್ತ | ಆಹಇg5ರಲೀ ಪರಿ ಪರಿ ಪರಿ ಬೇಡಿದಳ್ 6 ಸರಿದ್ರೂಪಳಾಗಿನ್ನು ಪರಿದೂ | ಹರಿಶರಣರ ಪಾಪವ ತರಿದೂ | ಮತ್ತೆಸರುವರ ತಾಪವ ಕಳೆದೂ | ಇನ್ನುಸರಿತು ಗಂಗಾದಿಗೆ ಹಿರಿದೂ | ಆಹವರ ಕೀರ್ತಿಯಿಂದಲಿ | ಮೆರೆಯುತ ಲೋಕೋಪಕರಳೆನಿಸಿ ಪ್ರವಹಿಸಿ | ಶರಧಿಯ ಸೇರ್ವಂಥ 7 ಸ್ಮರಣೆ ಮಾತ್ರದಿ ಪಾಪನಾಶಾ | ಮಾಳ್ಪಗಿರಿಯುಂಟು ಸಹ್ಯ ಆದ್ರೀಶ | ಅಲ್ಲಿತರು ರೂಪಮಲಕ ದೊಳ್ವಾಸಾ | ನಿನ್ನಚರಣ ಕಮಲವ ವಾಣೀಶಾ | ಆಹವಿರಜೆ ಪುಣ್ಯದ ಜಲ | ವರ ಕಂಬುವಿಲಿ ತುಂಬಿಎರದಭಿಷೇಚಿಸೆ | ಪರಿವುದದರ ಸಹ 8 ವರ ದತ್ತಾತ್ರೇಯ ನೆಂದೆನಿಸಿ | ತವಶಿರ ಸ್ಥಾನದಲ್ಲಿ ವಾಸೀಸಿ | ಎನ್ನಶರಣರ ಅಘಗಳ ಹರಿಸೀ | ನಿನ್ನವರ ದಕ್ಷಗಂಗೆಂದು ಕರೆಸೀ | ಆಹವರ ತವೋತ್ಸಂಗದಿ | ಶಿರವಿಟ್ಟು ಮಲಗುತ್ತಸರಿದ್ವರಳೆನಿಸುತ್ತ | ಮೆರೆಸುವೆ ನಿನ್ನನು 9 ಮಂಗಳ ಜಪತಪ ಸ್ನಾನ | ಮಿಕ್ಕಗಂಗಾದಿ ತೀರ್ಥಾನುಷ್ಠಾನ | ನಾಲ್ಕ್ಯುಗಂಗಳೊಳಗೆ ಮಾಳ್ಪ ನಾನಾ | ಕರ್‍ಮಂಗಳ್ತವೋತ್ಸುಂಗ ಶಿರಸ್ಥಾನ | ಆಹಮಂಗಳಾಮಲಕ ಜಲಂಗಳಿಗ ಸಮ ಕ-ಳೆಂಗಳ್ಷೋಡಶಕ್ಕೊಂದಂಗ ಸರಿ ಬರೆದು 10 ದಾತ | ತನ್ನಕಾಮಂಡುಲಿನೊಳ್ ನಿನ್ನ ಧೃತ | ಆಹನೇಮದಿಂದೊಂದಂಶ | ಲೋಪಾ ಮುದ್ರೆಯು ಆಗಿಆ ಮಹ ಮುನಿಯನ್ನ | ಪ್ರೇಮದಿ ವರಿಸುವೆ 11 ವರವಿತ್ತು ಮರೆಯಾಗೆ ಹರಿಯು | ಅತ್ತವರ ಮುನಿ ತಪಸಿನ ಧಗೆಯು | ಕಂಡುಸುರಜೇಷ್ಠ ಅವನೆದುರು ಹೊಳೆಯು | ಆಗಬರೆದನು ಜೀವನ ಧೊರೆಯು | ಆಹಹೊರಲಾರದವ ತಾನು | ವರ ಸನ್ಯಾಸದಿ ಮನವಿರಸಿರುವುದು ನಿರಾ | ಕರಿಸುತ್ತ ಪೇಳ್ದನು 12 ಚಕ್ರಧರ | ತುಂಬಿದ ಮನದಿಂದಹಂಬಲಿಸಿ ಕೈಗೊಂಡು | ಬೆಂಬಿಡದೆ ಸಲಹುವ 13 ಮುನಿವರಗಸ್ತ್ಯನು ಅಜನ | ಮಾತಮನವಿಟ್ಟು ಕೇಳುತ್ತ ವಚನ | ಪೇಳ್ದಅನುಕೂಲ ಭಾರ್ಯಳಾಳ್ವುದನ | ಯೋಗಅನುಕೂಲಿಸುವುದೆಂಬ ಹದನ | ಆಹವನಜ ಗರ್ಭನು ತನ್ನ | ತನುಜೆಯ ಸುಕನ್ಯಾಮಣಿಯ ಕಾವೇರಿಯ | ವಿನಯದಿ ವರಿಸೆಂದ 14 ನಗ ಶೃಂಗದಿರಿಸುತ್ತಮಿಗೆ ಚೆಲ್ವ ಸರಿತಾಗಿ | ಪೋಗಲನುಗ್ರಹಿಸು 15 ಮೋದ ತಾಳುತ್ತಸುಗುಣೆಯ ಬೆಸಸೀದ | ನಗು ಮುಖದಿಂದಲಿ 16 ಹೊರ ಮುಖಳಾದಳ್ ಕಾವೇರಿ | ಮುನಿವರನ ಸತ್ಕರಿಸಲು ನಾರಿ | ದ್ವಿಜವರ ಪೇಳೆ ಬ್ರಹ್ಮಗನುಸಾರಿ | ಆಕೆವರಗಳ ಬೇಡಲು ಭಾರಿ | ಆಹಸುರಜೇಷ್ಠ ನ್ವೊರೆದಂತೆ | ವರಗಳ ನೀಯಲುಸುರಕನ್ಯಾಮಣಿಯಾಗ | ವರಿಸಿದಳಾ ಮುನಿಯ 17 ವಾಹನ ಪತ್ನಿ ಸೇರಿ | ಶಿರಿಕಂಸಾರಿ ಗರುಡನ್ನ ಏರಿ | ಕ್ರತುಧ್ವಂಸಿ ಉಮಾ ನಂದಿ ಏರಿ | ಇಂದ್ರಶಂಸಿ ಸೈರಾವತನೇರಿ | ಆಹಸಾಂಶರು ಯೋಗ್ಯ ನಿರಂಶರು ಸೇರಿ ಪ್ರ-ಶಂಸನ ಗೈಯುತ್ತ ವೈವಾಹ ನಡೆಸಿದರ್ 18 ಮದುವೆ ವೈಭವ ಪೇಳಲಾರೆ | ಜಗದುದಯಾದಿ ನಡೆಪರಿಹಾರೆ | ಹರಿಮುದ ಪೊಂದಲಿನ್ನೆದುರ್ಯಾರೆ | ಎಲ್ಲರ್ವೊದಗಿ ಆಶೀರ್ವದಿಶ್ಯಾರೆ | ಆಹವಿಧ ವಿಧ ದುಡುಗೊರೆ | ಅದ ಪೇಳಲಳವಲ್ಲಅದುಭುತ ಜರುಗಿತು | ಉದ್ವಾಹ ಕಾರ್ಯವು 19 ಗಮನ | ಮತ್ತೆಕಾವೇರಿ ಸಹ ಮುನಿ ಹಿಮನ | ಕೇಳ್ಕೆಭಾವಿಸುತಲ್ಲೆ ಕೆಲದಿನ | ಆಹಆವಾಸಿಸಿರೆ ಋಷಿ | ಸಾರ್ವರ ಮನ ತಿಳಿದುಆಹ್ವಾನ ವಿತ್ತಳು | ಸಹ್ಯಾದ್ರಿ ಸನಿಯಕ್ಕೆ 20 ಗಮನ | ಆಹಇಂಬಿಟ್ಟನ್ನೊಂದಂಶ | ಲೋಪಾಮುದ್ರೆಯು ಕುಂಭಸಂಭವ ಸಹ ಸಹ್ಯ ಅದ್ರಿಗೆ ಗಮಿಸಿದಳ್ 21 ಉತ್ತರ ಹಿಮನಗ ಬಿಡುತ | ವನಸುತ್ತುತ ವಿಂಧ್ಯ ಮೀರುತ್ತ | ಹಾಂಗೆಉತ್ತಮ ಸಹ್ಯಾಚಲೇರುತ್ತ | ಅಲ್ಯುನ್ನತ್ತ ಬ್ರಹ್ಮಗಿರಿ ಸಾರುತ್ತ | ಆಹಉತ್ತಮ ಕ್ಷೇತ್ರದಿ ಜತ್ತಾಗಿ ಕಮಂಡಲಒತ್ತಟ್ಟಿಗಿರಿಸುತ್ತ ಪತ್ನಿಗೆ ಬೆಸಸಿದರ್ 22 ಕಾಲ ಮುದದಿ ಕರಕದಿಂದಅದುಭೂತವೆನೆ ಸರಿದ್ವರಳಾಗಿ ಪ್ರವಹಿಸು 23 ಪರಿ ಕಾಲ ಸಮೀಪವಾಗಲು ಸುರಪ 24 ಹರಿ ಮನೋಭಾವಾನು ಸಾರಿ | ಮಳೆಗರೆಯಲನ್ಯತರುವ ಸಾರಿ | ಶಿಷ್ಯರುಗಳಾಶ್ರಯಿಸಲು ಮೀರಿ | ಕುಂಡಸರುವೆ ತೀರಥಗಳು ಉಸುರಿ | ಆಹಪರ್ವ ಕಾಲವು ಇದು | ಪೊರಮಡು ಕಾವೇರಿಪರಿವೆವು ನಿನ ಪಿಂತೆ | ತೀರ್ಥಗಳಗ್ರಣಿಯೆ 25 ವಿಧಿ ಬಂದ ಹಂಸವನೇರಿ | ಆವಮುದದಿಂದ ವನಗಳ್ ಸಂಚಾರಿ | ಇನ್ನುಅದುಭೂತಾಮಿತ ತೀರ್ಥ ಗಿರಿ | ಕಂಡುಒದಗಿ ಕರಕದ ಜಲ ಭಾರಿ | ಆಹಮುದದಿ ಮೀಯುತ ಜಪ ಅದುಭೂತಾಷ್ಟಾಕ್ಷರಪದುಮ ಸಂಭವ ಹರಿಧ್ಯಾನದಿ ರತನಾದ 26 ಮಂದ ಮಾರುತ ಬೀಸೆ ವಿಮಲ | ಧಾತ್ರಿಗಂಧ ವೆಂದೆನುತಲಿ ಬಹಳ | ಮುದದಿಂದೆಚ್ಚರಗೊಂಡು ಕಂಗಳ | ಮುಂದೆಸುಂದರಾಮಲಕಾ ಕೃತಿಗಳ | ಆಹಎಂದು ಕಾಣದ ದೃಶ್ಯ | ವೆಂದೆನುತಲಿ ಮನದಿಂದ ಧೇನಿಸೆ ಅದು | ಛಂದದಿ ಮರೆಯಾಯ್ತು27 ಸಿರಿ ಹರಿಯು | ಸಿರಿವತ್ಸಾಂಕಿತನು ಬಾಹು ದ್ವಿದ್ವಯು | ಇಂದಮೆಚು5Àೂಪವ ತೋರೆ ವಿಧಿಯು | ಆಹ |ಸಚ್ಚರಿತೆಯ ಪಾಡೆ | ನಿಚ್ಚಳಾಮಲಕದಉಚ್ಚರೂಪವ ಕಂಡು | ಅರ್ಚಿಸಿದನು ಬಹಳ 28 ಗಾತ್ರ ಪಾದ | ಬಿಸಜಗಳ್ವಂದಿಸಿಬಿಸಜ ಸಂಭವ ಗೈದ | ಅಸಮ ಸಂಪೂಜೆಯ 29 ಧಾತಾ ಸ್ವ ಕುಂಡಿಕಾಸ್ಥಿತ | ವಿಮಲ ತೀರ್ಥವು ವಿರಜೆಯಿಂ ಹೃತ | ಶಂಖಪೂರ್ತಿಸಿ ಪೂಜಾ ಪದಾರ್ಥ | ಪ್ರೋಕ್ಷಿಸಿಪೂತಾತ್ಮಾಮಲಕದಿ ಸ್ಥಿv5 ಆಹಶ್ರೀ ತರುಣೀಶನ | ದತ್ತಾತ್ರೇಯನ ರೂಪಖ್ಯಾತ ಪೂಜಿಸುತಿರಲಶರೀರ ವಾಕ್ಕಾಯ್ತು 30 ಪರಿ ಗೈಯ್ಯುವ ಭಾಮಾ ಮಣಿಕುರಿತು ಪೇಳಿತು ವಾಣಿ ನೇಮ | ನೀನುಶರಧೀ ಸೇರುವ ಮನೋ ಕಾಮಾ | ಆಹಪರಿಪೂರ್ಣವಹುದೀಗ | ವರ ತುಲಾಪರ್ವದಿಶರತ್ಕಾಲ ಮುಕ್ತಿದ | ಪರಿವುದು ಕಾವೇರಿ31 ತತುಕ್ಷಣ ಮುನಿಯ ಕಮಂಡ್ಲು | ದೊಳುಸ್ಥಿತ ಸರ್ವ ತೀರ್ಥಮಾನಿಗಳೂ | ಪೇಳೆತುತುಕಾಲ ಕವೇರ ತನುಜಳೂ | ಶೀಘ್ರಉತು ಪತ್ತಿ ತಾಳಿ ಪರಿದಾಳೂ | ಆಹಇತರ ತೀರಥಗಳು | ಸರಿತು ರೂಪದಿ ಹಿಂದೆಅತಿ ತ್ವರೆಯಲಿ ಪ್ರವ | ಹಿತರಾಗಿ ಪೋದರು 32 ಋಷಿವರ್ಯ ಸ್ನಾನವ ಮಾಡಿ | ಪರಿಕ್ಷಿಸಲಾಗ ವಿಸ್ಮಯ ಕೂಡಿ | ಶಿಷ್ಯರಿಗುಸರಲಾಕ್ಷೇಪದ ನುಡಿ | ಅವರುಸಿರಿದರ್ ಮಳೆಯ ಗಡಿಬಿಡಿ | ಆಹರಸ ರೂಪದಲಿ ಪರಿವ | ಅಸಮ ಪತ್ನಿಯ ಕೂಗೆಋಷಿಗೆ ಶಾಂತಿಯ ಸೊಲ್ಲ | ಒಸೆದು ಪೇಳಿದಳವಳೂ 33 ಸುರವರ ಪೂಜ್ಯ ಧಾತ್ರಿಯು | ಇನ್ನುತರುವು ಆ ಮಲಕದ ಬಳಿಯು | ತೀರ್ಥವರ ಶಂಖ ಸಂಜ್ಞಿತ ತಿಳಿಯು | ಇಲ್ಲಿವಿರಜೆಯ ದೊಂದಿಹ ಕಳೆಯು | ಆಹವರ ನಭೊ ಗಂಗೆಯು | ಸರಿ ಸಹ್ಯಾಮಲಕವುವರಣಿಸಲಳವಲ್ಲ | ಸರಿದ್ವರ ಮಹಿಮೆಯ 34 ಕೈವಲ್ಯ | ದಾತನ ಒಲಿಮೆಯು 35 ಗಂಗಾನದೀಗಗಳು ತಮ್ಮ | ಪಾಪಹಿಂಗಿಸಲೋಸುಗವಮ್ಮ | ತುಲಾಮಂಗಳ ಮಾಸದಲಮ್ಮ | ಒಂದುತಿಂಗಳಿಹರಿಲ್ಲಿ ಸಂಭ್ರಮ್ಮಾ | ಆಹಗಂಗೆ ದಕ್ಷಿಣಾಖ್ಯೆ | ಮಂಗಳೆ ಜನಗಳಘಂಗಳ ಕಳೆಯುತ್ತ | ತುಂಗೋಪಕಾರಿಯೆ 36 ಕಾವೇರಿ ಪ್ರವಹಿಸಿ ಭರತ | ವರ್ಷಪಾವಿಸುತಿಹಳು ತಾ ನಿರುತ | ಬಂದುಸೇವಿಸೂವರ ಪಾಪ ತ್ವರಿತ | ದೂರಗೈವಳೆಂಬುವದೆ ನಿಶ್ಚಿತ | ಆಹಈ ವಿಧ ಮಹಿಮೆಯ ಓವಿ | ಪಾಲಿಸಿದನು |ಶ್ರೀವರ ಶ್ರೀ ಗುರು | ಗೋವಿಂದ ವಿಠಲಯ್ಯ 37
--------------
ಗುರುಗೋವಿಂದವಿಠಲರು