ದುರ್ಜನರ ಸಂಗವನು ತ್ಯಜಿಸು ಮನವೆ, ಸಾಧು
ಸಜ್ಜನರ ಸಂಗವನು ಭಜಿಸಿ ಸುಖಿಯಾಗೆಲವೊ ಪ
ದುಷ್ಟ ವ್ಯಾಘ್ರನ ಕೈಯ ಮುಟ್ಟಿ ಹಿಡಿ ತರಬಹುದು
ಅಟ್ಟಿಬಹ ಮದಕರಿಯ ಕಟ್ಟಬಹುದು
ಕೃಷ್ಣಸರ್ಪನ ಹುತ್ತ ಕಲಕಿ ಜೀವಿಸಬಹುದು
ದುಷ್ಟಾತ್ಮರಾದವರ ಬಿಟ್ಟು ಕಳೆ ಮನವೆ 1
ಚೇಳಬಾಲದ ಉರಿಯ ಜ್ವಾಲೆ ತಾಳಲುಬಹುದು
ಕಾಲಮೇಘದ ಸಿಡಿಲು ಬೀಳಬಹುದು
ಶೂಲಪಾಣಿಯ ಫಣೆಯ ಆಲಿ ಕೀಳಲುಬಹುದು
ಕಾಳುಮೂಳರ ಸಂಗ ಮರೆದು ಕಳೆ ಮನವೆ 2
ಹರಿವ ಗರಗಸಿನಲ್ಲಿ ಶಿರವನೊಡ್ಡಲುಬಹುದು
ಬೆರಸಿಬಹ ಕಾಡ್ಗಿಚ್ಚ ಧರಿಸಬಹುದು
ಸರಿಸದಲಿ ನಿಂತು ಕೇಸರಿಯ ಕೆಣಕಲುಬಹುದು
ಮರೆಸಿ ಕೊರಳನು ಕೊಯ್ವ ನರರ ಮರೆ ಮನವೆ 3
ಒಂದು ಜಾತಿಗೆ ವಿಷವು ಪುಚ್ಚದೊಳಗಿರುತಿಹುದು ಮ-
ತ್ತೊಂದು ಜಾತಿಗೆ ದಂತದೊಳಗೆ ವಿಷವು
ಒಂದು ಜಾತಿಗೆ ಮೈಯ ಅಂದವೆಲ್ಲವು ವಿಷವು
ಹಿಂದೆಯಾಡುವ ನುಡಿಯು ಘೋರ ವಿಷ ಮನವೆ 4
ತೇರ ಕಂಡರೆ ತೊಲಗು ಮಾರೈದನಾಕ್ಷಣದಿ
ವಾರುವಗೆ ಕಡೆ ಸಾರು ಈರೈದು ಮಾರುವನು
ದಾರಿಯನು ಬಿಡು ಗಜಕೆ ಮೂರು ಸಾವಿರವನ್ನು
ಊರ ಬಿಡು ದುರ್ಜನರ ಸೇರದಿರು ಮನವೆ 5
ಸತ್ಯವಂತರ ಕಂಡರರ್ಥಿಯಿಂದಲೆ ಎರಗು
ನಿತ್ಯದೊಳು ಶ್ರೀಹರಿಯ ಕೀರ್ತನೆಯ ಮಾಡು
ಉತ್ತಮೋತ್ತಮ ಪದವ ಹತ್ತಿಸುವವರ ಬೇಡು
ಧೂರ್ತಮನುಜರ ಸಂಗ ಕಿತ್ತು ಕಳೆ ಮನವೆ 6
ಶುದ್ಧಮನವೆ ಎನ್ನ ಬುದ್ಧಿಯೊಳಗಡಗಿರ್ದು
ಉದ್ಧರಿಸು ವರಾಹತಿಮ್ಮಪ್ಪನನು ನೆನೆದು
ಮದ್ದನರೆ ಜನ್ಮದೊಳು ಮರಳಿಬಾರದ ಹಾಗೆ
ಗದ್ದುಗೆಯ ಹಾಯ್ಕೆನ್ನ ಹೃದಯ ಮಧ್ಯದಲಿ 7