ಇದಕೊ ಕಾಶಿಯನು ಮನವೇ
ಬೆದಕುಗೊಳ್ಳಲು ಬೇಡ ತೋರುವೆನು ಪ
ಬಲ್ಲವನಾದರೆ ಇಲ್ಲಿಯೆ ಕಾಶಿ
ಕಲ್ಲೆದೆಯಾದವನಲ್ಲವೆ ದೋಷಿ
ಎಲ್ಲವ ತಿಳುಹುವೆ ಚಲ್ವ ಸಂತೋಷಿ
ಸೊಲ್ಲ ಲಾಲಿಸಿ ಕೇಳು ಪೇಳ್ವೆ ನಿರ್ದೋಷಿ 1
ಕಾಶಿಯ ದರುಶನವಿಲ್ಲದ ಜನರು ವಿ-
ಶೇಷವಾಗಿಯೆ ಇಲ್ಲಿ ನಡೆಕೊಂಬುತಿಹರು
ದೂಷಣ ಮಾಡದೆ ಪೋಷಿಸುವವರು
ಕಾಶಿಗಿಮ್ಮಡಿಯಾಗಿ ಲೇಸ ಪಡೆಯುವರು 2
ವೇದವನೋದಿದ ವಿಪ್ರನೆ ಕಾಶಿ
ವಾದಗಳಿಲ್ಲದ ಸೋದರನೆ ಕಾಶಿ
ಆ ಧನ ಕೈಯೊಳು ಇದ್ದರೆ ಕಾಶಿ
ಮಾಧವ ಧ್ಯಾನವು ಮನದೊಳು ಕಾಶಿ 3
ಅವ್ವೆ ತಂದೆಯ ಸೇವೆ ಮಾಳ್ಪುದೆ ಕಾಶಿ
ದೇವರ ಪೂಜೆಯ ನೋಳ್ಪುದೆ ಕಾಶಿ
ಜೀವರಕ್ಷಣ್ಯವ ಮಾಳ್ಪುದೆ ಕಾಶಿ
ಭಾವಶುದ್ಧತ್ವದಿ ಇಪ್ಪುದೆ ಕಾಶಿ 4
ಗುರುಗಳಿಗೆರಗುವ ಪರಿಯೊಂದು ಕಾಶಿ
ಹಿರಿಯರ ಆಜ್ಞೆಯೊಳಿರುವುದು ಕಾಶಿ
ಪರವುಪಕಾರವು ಸ್ಥಿರವಾದ ಕಾಶಿ
ಕರೆದು ಮೃಷ್ಟಾನ್ನವನೆರೆವುದು ಕಾಶಿ 5
ಅರಳಿಯ ವೃಕ್ಷವ ನೆಟ್ಟರೆ ಕಾಶಿ
ಕೆರೆ ಬಾವಿ ಕಟ್ಟಲು ಇಷ್ಟದ ಕಾಶಿ
ಅರವಟ್ಟಿ ನೀರಿರಿಸಲು ದೃಷ್ಟ ಕಾಶಿ
ಸಿರಿಲಕ್ಷ್ಮಿಯರಸನ ಕರೆವುದು ಕಾಶಿ 6
ದುಷ್ಟರ ಸಂಗವ ಬಿಡುವುದೆ ಕಾಶಿ
ಕಷ್ಟದ ಮಾರ್ಗವ ತೊರೆವುದು ಕಾಶಿ
ಶಿಷ್ಟರ ಸೇರುವುದು ಇಷ್ಟದ ಕಾಶಿ
ಬೆಟ್ಟದ ಒಡೆಯನ ನೆನೆವುದೆ ಕಾಶಿ 7
ಏಕಾದಶಿ ಉಪವಾಸವೆ ಕಾಶಿ
ಆಕಳ ದಾನವ ಮಾಳ್ಪುದೆ ಕಾಶಿ
ಬೇಕಾದುದಿದ್ದರೆ ಮನೆಯೆಲ್ಲ ಕಾಶಿ
ಕಾಕು ಸೇವೆಯಿಲ್ಲದ ಮನುಜನೆ ಕಾಶಿ 8
ಉದಯದಿ ಸ್ನಾನವ ಮಾಳ್ಪುದೆ ಕಾಶಿ
ಪದುಮನಾಭನ ಧ್ಯಾನ ಮೃದುವಾದ ಕಾಶಿ
ಕದನವಿಲ್ಲದ ಊರ ನೋಡಲು ಕಾಶಿ
ಉದರವು ತುಂಬಲು ಬಡವಗೆ ಕಾಶಿ 9
ರುದ್ರ ದೇವನ ಪೂಜೆ ಇದ್ದಲ್ಲಿ ಕಾಶಿ
ವಿಧ್ಯುಕ್ತ ಮಾರ್ಗದಿ ನಡೆವುದು ಕಾಶಿ
ಬದ್ಧವಾಗೈವರ ಕಟ್ಟಲು ಕಾಶಿ
ಶುದ್ಧವಾದ ಹೆಂಡತಿ ಮುದ್ದಿನ ಕಾಶಿ 10
ಸನ್ಯಾಸ ಮಾರ್ಗವು ಚೆನ್ನಾದ ಕಾಶಿ
ಅನ್ಯಾಯವಿಲ್ಲದ ಅರಸನೆ ಕಾಶಿ
ಕನ್ಯಾದಾನವು ಮುನ್ನಿನ ಕಾಶಿ
ಮನ್ನಿಸಿಕೊಂಡರೆ ತನ್ನಲ್ಲೆ ಕಾಶಿ 11
ಅಧ್ಯಾತ್ಮ ವಿದ್ಯೆಯ ಹೊದ್ದಲು ಕಾಶಿ
ಬದ್ಧ ನಡೆನುಡಿ ಇದ್ದರೆ ಕಾಶಿ
ಮಧ್ವರಾಯನು ಕುಳಿತಿದ್ದಲ್ಲಿ ಕಾಶಿ
ಪದುಮನಾಭನ ನೆನವಿದ್ದರೆ ಕಾಶಿ 12
ದಾನದೊಳಗೆ ಸಮಾಧಾನವೆ ಕಾಶಿ
ಮಾನದೊಳಗೆ ಅಭಿಮಾನವೆ ಕಾಶಿ
ಸ್ನಾನದೊಳಗೆ ಭಕ್ತಿ ಸ್ನಾನವೆ ಕಾಶಿ
ಜ್ಞಾನದೊಳಗೆ ಶುದ್ಧಜ್ಞಾನವೆ ಕಾಶಿ 13
ದೇವರೊಳಗೆ ಸಾಲಿಗ್ರಾಮವೆ ಕಾಶಿ
ಜೀವರೊಳಗೆ ಗೋವುಚಯವೆಲ್ಲ ಕಾಶಿ
ಹೂವಿನೊಳಗೆ ಬಿಲ್ವಪತ್ರಿಯೆ ಕಾಶಿ 14
ಹಲವು ಮಾತುಗಳೇನೀಪರಿ ಕಾಶಿ
ಛಲ ಭಕ್ತಿಯಿದ್ದರೆ ಜಲವೆಲ್ಲ ಕಾಶಿ
ಒಲವುಳ್ಳ ವರಾಹತಿಮ್ಮಪ್ಪನೆ ಕಾಶಿ
ಕುಲವೃಕ್ಷವೆಂಬುದು ಫಲವಾದ ಕಾಶಿ 15