ಒಂದೇ ಬೇಡುವೆ ನಿನ್ನನು ನಿನ್ನಡಿಗಳನೆಂದಿಗು ನೆನೆವುದನು ಪ.
ಒಂದೇ ಬೇಡುವೆನು ಮುಕುಂದ ಇದರ ಬಲ
ದಿಂದ ಸರ್ವಾರ್ಥವ ಹೊಂದುವ ಮನದಿಂದ ಅ.ಪ.
ಪಾತಕಗಳನೆಲ್ಲ ಪರಿಹರಿಸುವ ದುರ್ವಿ-
ಘಾತಕವೈರ ಕತ್ತರಿಸುವುದು
ಶ್ರೀಕರುಣಿಯ ಸನ್ನಿಧಾನವನಿರಿಸುವ
ಆತತಾಯಿಗಳ ಭಂಗಿಸಿ ಬಾಧೆ ಪಡಿಸುವ 1
ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ
ತುಂಬಿದ ಜನರೊಡನಾಡುವಾಗ
ನಂಬಿದ ಸತಿಯೊಳು ನಯನುಡಿ ನುಡಿವಾಗ
ಅಂಬುದನಿಭ ನಿನ್ನ ಹಂಬಲಗೊಳುವುದ 2
ನಡೆವಾಗ ನುಡಿವಾಗ ಮಡಿಯನುಟ್ಟಿರುವಾಗ
ಪೊಡವಿ ಪಾಲಕರೊಡನಾಡುವಾಗ
ಕಡಲಶಯನ ನಿನ್ನ ನೆನೆವರೆ ನಾಚಿಕೆ
ಕಾಲ ದೃಢದಿಂದ ಸ್ಮರಿಸುವ 3
ಖೇದ ಮೋದಗಳೆಂಬ ಭೇದವಿಡದೆ ಯಾವಾ-
ಗಾದರು ಸರಿಯಾಗಿ ಸ್ಮರಿಸುವರ
ಕಾದುಕೊಂಡಿರುವಂಥ ಕರುಣಿಯೆಂಬುದರಿಂದ-
ಗಾಧ ಮಹಿಮೆ ನಿನ್ನ ಹಾದಿ ತೋರಿಸುವುದ 4
ಶ್ರಮವಿಲ್ಲದೆ ಸ್ಮøತಿ ಭ್ರಮಣೆ ಬಿಡಿಸುವ ಶ್ರೀ-
ರಮಣ ವೆಂಕಟಗಿರಿ ನಾಯಕನೆ
ನಮಿಸಿ ಬೇಡವೆನೆಂಬ ಮಮತೆಯಿರಿಸಿ ನಿನ್ನ
ಕಮನೀಯಪದಕಲ್ಪದ್ರುಮ ನೆರಳಿರಿಸೆಂದು 5