ಒಟ್ಟು 66 ಕಡೆಗಳಲ್ಲಿ , 22 ದಾಸರು , 56 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳು ಶ್ರೀನಿವಾಸ ಕಷ್ಟವ ತಾಳಲಾರೆ ಶ್ರೀಶ ಕಂಜಜೇಶ ಪ. ಮಾತ ಕೇಳದಿರುವ ಮನ ಬಹು ಕಾತರಗೊಂಡಿರುವ ರೀತಿಯಿಂದ ಬಹು ಸೋತೆನು ಷಡ್ರಿಪು ಜಾತ ಬಂಧಿಸಿರುವ 1 ಕಟ್ಟಿ ಸಹಿಸಲಾರೆ ಮೊದಲ ವಿಠಲ ನೀ ಕೈಬಿಟ್ಟರೆ ಮಾಜದು ಅಟ್ಟಹಾಸ ತೋರೆ 2 ಉದಯ ಮೊದಲುಗೊಂಡು ನಾನಾ ವಿಧದಲಿ ಭ್ರಮೆಗೊಂಡು ಸದಯ ನಿನ್ನ ಪಾದಾಬ್ಜ ನೆನೆಯದೆ ಚದುರೆಯ ಮನಗೊಂಡು 3 ನಿತ್ಯ ಕರ್ಮವೆಲ್ಲ ಕಂಬಳಿ ಬುತ್ತಿಯಾಯಿತಲ್ಲ ಕತ್ತರಿಸಿ ಬ್ರಹ್ಮೆತ್ತಿಯನ್ನು ಪುರು- ಸಿರಿನಲ್ಲ 4 ತಲ್ಲಣಗೊಳಿಸುವುದು ತುದಿಮೋದ- ಲಿಲ್ಲದೆ ದಣಿಸುವುದು ನಿಲ್ಲೆ ನಡೆಯ ಮಲಗೆಲ್ಯು ಬಿಡದು ದೂ- ರೆಲ್ಲು ಪೇಳಗೊಡದು 5 ಮೆಲ್ಲ ಮೆಲ್ಲನೆದ್ದು ನೀ ಮನ ದಲ್ಲಿ ಸೇರುತ್ತಿದ್ದು ನಿಲ್ಲಲು ತೀರಿತಲ್ಲದೆ ಲೋಕ ದೊಳಿಲ್ಲ ಬೇರೆ ಮದ್ದು 6 ನಿತ್ಯ ನಿನ್ನ ಮುಂದೆ ಸೇವಾ ವೃತ್ತಿ ಮಾಳ್ಪದೊಂದೆ ಎತ್ತಾರಕವೆಂದಾಶ್ರಯಿಸದೆ ಮೇ- ಲೊತ್ತಿ ಬೇಗ ತಂದೆ 7 ಭೃತ್ಯರ ಬಿಡನೆಂದು ಶ್ರುತಿ ಶಿರ ವೃತ್ತಿ ವಚನವೆಂದು ಸತ್ಯವೆಂದು ನಂಬಿದ ನೀನರಿಯೆಯ ಔತ್ತರೆಯ ಬಂಧು 8 ವಿಜಯಸೂತನಿಂದ ಪಾದವ ಭಜಿಸಿದ ಮ್ಯಾಲೆನ್ನ ನಿಜ ಜನದೊಳು ಸೇರಿಸುವುದು ಚಿತ ಸಾಮಜ ವರದನೆ ಮುನ್ನ 9 ಭವ ಪರಿಪಾಲ ಪಾಲಿಸು ವ್ರಜ ಯುವತಿ ಲೋಲಾ ಪಾದ ಪಂ- ಕಜ ಕೊಡು ಗೋಪಾಲ 10
--------------
ತುಪಾಕಿ ವೆಂಕಟರಮಣಾಚಾರ್ಯ
ಜಂಗಮನು ಇಂತಿವನು ಸರ್ವಸಂಗ ದೂರಾದವನೀಗ ಜಂಗಮ ಪ ತನ್ನ ತಿಳಿದು ತಾನಾದವ ಜಂಗಮ ಜಗವಭಿನ್ನವೆಂದು ಕಾಣದವ ಜಂಗಮಹೊನ್ನು ಹೆಣ್ಣು ಬಿಟ್ಟವನು ಜಂಗಮ ಸಂ-ಪನ್ನ ಸಾಧು ಸಂಗವಿಹ ಜಂಗಮ 1 ಒಳಗೆ ಹೊರಗೆ ಒಂದಾದವ ಜಂಗಮ ಎಲ್ಲಹೊಳೆವುದೊಂದೆ ಜ್ಯೋತಿಯು ಎಂಬುವ ಜಂಗಮಹೊಲೆಯು ಶುದ್ಧವ ಕಳೆದವ ಜಂಗಮ ಎನಗೆಕುಲವು ಛಲವು ಇಲ್ಲವೆಂಬುವ ಜಂಗಮ 2 ಅಂಗ ಲಿಂಗವಾಗಿಹ ಜಂಗಮಲಿಂಗ ಅಂಗ ಏಕವಾಗಿಹ ಜಂಗಮಮಂಗಳವೇ ನಿತ್ಯವಿಹ ಜಂಗಮ ಗುರುಲಿಂಗವಾದ ಚಿದಾನಂದ ಜಂಗಮ 3
--------------
ಚಿದಾನಂದ ಅವಧೂತರು
ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ ಪ್ರಾಣನಾಯಕನ ತಿಳಿವುದೊಂದೆ ಜ್ಞಾನಾಭ್ಯಾಸ ಮಾಡಿ ಧ್ರುವ ಕರಿಮಣಿ ಒಂದಿಲ್ಲದೆ ಹೆಂಗಸಿಗೆ ಸರಮುತ್ತು ಯಾಕೆ ಸಾರ ಸಂಜೀವನಿಲ್ಲದೆ ನೂರು ಗಿಡಮೂಲಿಕೆ ಯಾಕೆ ನೆರೆ ಇಲ್ಲದೆ ಸಾಧುಸಜ್ಜನರು ಸರ್ವಬಳಗವ್ಯಾಕೆ ಪರಮ ತತ್ವಜ್ಞಾನ ಒಂದಿಲ್ಲದೆ ಸುರಿಯುವ ಮಾತಿನ್ಯಾಕೆ 1 ಪ್ರಾಣವಿಲ್ಲದ ಸುಂದರವಾದ ಶರೀರ್ಯಾಕೆ ಕಾಲ ಬದಕುವುವದ್ಯಾಕೆ ಸ್ವಾನುಭವದ ಸುಖ ನೆಲೆಯುಗೊಳ್ಳದೆ ಒಣ ಡಂಭವ್ಯಾಕೆ ತಾನಾಗಿಹ್ಯ ವಸ್ತು ದೊರಕಿಲ್ಲದೆ ನಾ ನೀನೆಂಬುದ್ಯಾಕೆ 2 ಶ್ರೀ ಹರಿಮಹಿಮೆಯ ಸೋಹ್ಯ ತಿಳಿಯದೆ ದೇಹ್ಯವ್ಯಾಕೆ ಗುಹ್ಯಗುರುತವಿಲ್ಲದೆ ಸಾಯಸಬಡುವದ್ಯಾಕೆ ಸಾಹ್ಯಮಾಡುವ ಸದ್ವಸ್ತು ನೋಡದ ಕಣ್ಣು ನೋಟವ್ಯಾಕೆ ಮಹಿಪತಿಸ್ವಾಮಿ ಸದ್ಗುರುಪಾದ ಕಾಣದ ಜನ್ಮವ್ಯಾಕೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಿಳಿದು ವಿಚಾರಿಸು ವಿಶ್ವದಲ್ಲಿ ಹಲವು ಜೀವಿಗಳೊಂದೆ ಪ್ರಕಾರ ಚರಿಸುವದು ಪ ಇರವು ನೊಣ ಪೋದರೆ ಏನಾದರೂ ಕ್ಲೇಶ ಬರುವುದೇ ಪ್ರತ್ಯಕ್ಷ ನೋಡಿದರು ಭರದಿಂದ ಆಲಿಸು ದೇಹ ಮಾತುರ ಬ್ಯಾರೆ ಇರುವದಲ್ಲದೆ ಒಳಗೆ ಚೇತನಾಡುವದೊಂದೆ 1 ಕೂಡಿಕೊಂಡವು ತಮ್ಮತಮ್ಮೊಳಗೆ ಭೂತಗಳು ಆಡಲೇನದು ಪೂರ್ವದ ನಿರ್ಮಾಣ ನಾಡೊಳಾಗಿದ್ದನಿತೆ ಸಮ್ಮಂಧವಲ್ಲದೆ ಬೀಡು ತೊರದಾಮ್ಯಲೆ ಬಿಂಕವೆತ್ತಣದೊ 2 ಹರಿಮಾಯದಿಂದಲಿ ನಾನು ನನ್ನದು ಎಂಬ ಗರುವಿಕೆ ಪುಟ್ಟುವದು ಮೋಹ ಪೆಚ್ಚಿ ನಿರಯದೊಳಿಳಿಯದೆ ವಿಜಯವಿಠ್ಠಲನ ಸ್ಮರಣೆಯಲಿ ಕುಣಿದಾಡು ಎಲ್ಲ ಸಮನ ನೋಡು3
--------------
ವಿಜಯದಾಸ
ಧ್ಯಾನವನು ಮಾಡು ಬಿಂಬ ಮೂರುತಿಯಪ ಆನಂದದಲಿ ಕುಳಿತು ಅಂತರಂಗದಲಿ ಅ.ಪ ಸದಾಚಾರನಾಗಿ ದ್ವಾದಶಗುರುಗಳಿಗೆರಗಿ ಮುದದಿಂದ ಮೂಲಮಂತ್ರವನು ಜಪಿಸಿ ಸದಮಲ ಭಕುತಿಯಲಿ ದೇಹಸ್ಥಿತಿಯನೆ ತಿಳಿದು ಪದಮಾಸನವ ಹಾಕಿ ಪರಮ ವಿಶ್ವಾಸದಲಿ1 ಅಂಗವನು ಚಲಿಸದೆ ಚೆನ್ನಾಗಿ ದೃಢವಾಗಿ ಕಂಗಳನೆ ಮುಚ್ಚಿ ಇಂದ್ರಿಯಗಳನೆ ತೆರೆದು ಮಂಗಳ ಶೋಭಿತ ಅಖಂಡ ಧ್ಯಾನದಂತ ರಂಗದೊಳಗೆ ನಿಲಿಸಿ ಎಲ್ಲವನು ಕಾಣೊ 2 ಭಗವದ್ರೂಪಗಳೆಲ್ಲ ಒಂದು ಬಾರಿ ಸ್ಮರಿಸಿ ಮಗುಳೆ ಪರಮ ಗುರುವಿನ ಮೂರ್ತಿಗೆ ತೆಗೆದು ಆಹ್ವಾನಮಾಡಿ ಅಲ್ಲಿಂದ ಹರುಷದಿ ಸ್ವಗುರು ಬಿಂಬಮೂರ್ತಿಯಲಿ ಐಕ್ಯವನೆ ಮಾಡು3 ತಿರುಗಿ ಮೆಟ್ಟಿಕೆ ಮೂರು ವೇಗದಿಂದಲಿ ನಿನ್ನ ಲ್ಲಿರುವ ಮೂರ್ತಿಯಲ್ಲಿ ಚಿಂತನೆಯ ಮಾಡೊ ಭರದಿಂದ ಎಲ್ಲವನು ತಂದು ಹೃದಯದಲ್ಲಿ ಸ್ಥಿರವಾಗಿ ಇಪ್ಪ ಮೂರುತಿಯೊಡನೆ ಕಲೆಸು 4 ಆತನೆ ಬಿಂಬ ಮೂರುತಿಯೆಂದು ತಿಳಿದುಕೊ ಆ ತರುವಾಯ ನಾಡಿಗಳ ಗ್ರಹಿಸಿ ಆ ತೈಜಸನ ತಂದು ವಿಶ್ವಮೂರ್ತಿಯಲ್ಲಿ ಪ್ರೀತಿಯುಳ್ಳವನಾಗಿ ಪತಿಕರಿಸು ಮರುಳೆ 5 ಜ್ಞಾನ ಪ್ರಕಾಶದಲಿ ಇದ್ದು ನಿನ್ನ ಹೃದಯ ಕಮಲ ಮಧ್ಯ ಮೂರ್ತಿ ನಿಲ್ಲಿಸಿ ಬಾಹ್ಯದಲಿ ಏನೇನು ಪೂಜೆಯನು ಉಳ್ಳದನು ಮಾಡೊ6 ಗುಣ ನಾಲ್ಕರಿಂದಲಿ ಉಪಾಸನವನೆ ಮಾಡು ಕ್ಷಣ ಕ್ಷಣಕೆ ಹರಿಪಾದವನು ನೋಡುತ ಅಣುರೇಣು ಚೇತನಾಚೇತನಕೆ ನೇಮಕ ಫಣಿಶಯನನಲ್ಲದೆ ಮತ್ತೊಬ್ಬರಿಲ್ಲವೆಂದು 7 ಮಮತೆಯನು ತೊರೆದು ಮೇಲೊಂದಪೇಕ್ಷಿಸದೆ ಸಮ ವಿಷಮ ತಿಳಿದೊಂದೆ ಭಕುತಿಯಲ್ಲಿ ಸ-ಮಾಧಿಗೊಳಗಾಗಿ ದಿವ್ಯ ದೃಷ್ಟಿಲಿ ಸರ್ವ ಕ್ರಮ ಅನುಕ್ರಮದಿಂದ ಭರಿತಭಾವುಕನಾಗೊ 8 ಪರಿ ಧೇನಿಸಲು ದೇವ ಕರುಣನ ಮಾಡೆ ಪಾಪ ಸಂಚಿತವು ಪ್ರಾರಬ್ಧ ನಾಶ ಅಪರೋಕ್ಷಿತನಾಗಿ ತನ್ನ ಯೋಗ್ಯತದಷ್ಟು ಗೋಪಾಲ ವಿಜಯವಿಠ್ಠಲನೊಲಿವನಾಗ9
--------------
ವಿಜಯದಾಸ
ನಗುರೋರಧಿಕಂ ನಗುರೋರಧಿಕಂ ನಗುರೋರಧಿಕೆಂಬುದೆ ಪಂಥ ಬಗೆದನುಭವ ಜಗದೊಳು ನೆಲೆಗೊಂಬುದಿದೊಂದೆ ಪಂಥ ನಿಗಮಗಳಿಗೆ ಸುಗಮಾಗಿ ತೋರುವ ಪಥ 1 ಖರೆ ಮಾಡುವದಿದೊಂದೆ ಪಥ ಯತಿ ಮುನಿಜನ ಮನೋಹರ ಮಾಡುವದಿದೊಂದೆ ಪಥ ಅತಿಶಯಾನಂದನುಪಮವಾಗಿಹ ನಿಜ ಸತ್ಯ ಸನಾತನ ಗುರುಪಥ 2 ಅನಾಥನಾಥನಾಗ್ಯನುಭವ ತೋರುವದಿದೊಂದೆ ಪಥ ಅಣು ರೇಣುಕ ಪರಿಪೂರ್ಣವಾಗಿಹದಿದೊಂದೆ ಪಥ ದೀನ ಮಹಿಪತಿಗೆ ಸನಾಥ ಮಾಡುವ ಪಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ನುಡಿಸಿದಂತೆ ನುಡಿಯುವೆನು ಮಿಕ್ಕ ಜ್ಞಾನವಿಲ್ಲ ಎನಗೇನೇನು ಪ ನೀನೆ ಜಗತ್ರಾಣ ಶ್ರೀಹರಿಯೆಂಬುದೊಂದೆ ಖೂನಮಾಡಿ ಕೊಂಡಾಡುವೆನು ಅ.ಪ ನೀ ನಡೆಸಲು ನಾ ನಡೆಯುವೆನು ಹರಿ ನೀನಾಡಿಸಲು ನಾನಾಡುವೆನು ನೀನೀಡದಿರೆ ಬಲು ಮಿಡುಕುತ ಬಳಲುವೆ ನೀ ನುಣಿಸಲು ಉಂಡು ನಲಿವೆ ಪುಂಡನಾಗಿ 1 ಕಡುಪ್ರೇಮದಿ ಚರಾಚರಗಳನು ಕಾಯ್ವಿ ಪೊಡವಿ ಈರೇಳುವ್ಯಾಪಕ ನೀನು ಕೊಡುವ ಕರ್ತ ನೀನೆ ಮೂಲೋಕಕೆಂಬ ನುಡಿ ದೃಢದಿ ನಂಬಿ ಗಟ್ಟಿಮಾಡಿಹೆನು 2 ಹೋಮ ಯಜ್ಞ ಯಾಗ ತಿಳಿಯೆ ನಾನು ಮತ್ತು ನೇಮನಿತ್ಯದ ಗುರುತರಿಯೆನು ಭೂಮಿಗಧಿಕ ಮಮಸ್ವಾಮಿ ಶ್ರೀ ರಾಮನ ಪೂರ್ಣನಂಬಿಕೊಂಡಿಹೆನು 3
--------------
ರಾಮದಾಸರು
ನೆಚ್ಚಬ್ಯಾಡ ನೀರುಗುಳ್ಳೆಗೆ ಸರಿಯಾದ ಕುತ್ಸಿತ ದೇಹವೆಂದಿಗು ಸ್ಥಿರವಲ್ಲ ನ- ಮ್ಮಚ್ಚುತನಾನಂತನ ನೆನವುತ ಅನುಗಾಲ ಸ್ವಚ್ಛನಾಗಲು ಹರಿ ಮೆಚ್ಚುವನು ಪ. ಸ್ವಾತಂತ್ರ್ಯ ಲೇಶವಾದರು ನಿನಗಿಲ್ಲದೆ ಪಾತಕ ಫಲಕಿನ್ನು ಗುರಿಯಾದಿಯಲ್ಲದೆ ಯಾತರ ಸುಖವೆಂದೀ ಸಂಸಾರ ಕೂಪದಿ ಪ್ರೀತಿ ಬಡುವಿ ಪಂಚಬಂಧದಲಿ ವಾತ ಪಿತ್ತ ಶ್ಲೇಷ್ಮ ಪೂಯ ಸೃಕ್ಪೂರಿತ ಘಾತವಾಗುವುದೊಂದು ನಿಮಿಷಾರ್ಧದಲಿ ಜಗ- ನ್ನಾಥ ನಂಬಿದರೆಂದಿಗು ಪದಪಂಕ- ಜಾತಪತ್ರದ ನೆರಳಿರಿಸುವನು 1 ದೇಹವೆ ಸ್ಥಿರವಿಲ್ಲವಾದ ಮೇಲಿದರ ಸ- ನ್ನಾಹವಾಗಿರುವದನೇನೆಂದು ಗ್ರಹಿಸುವಿ ಗೇಹಧನಾಪತ್ಯ ಸ್ನೇಹವೆಲ್ಲವು ವ್ಯರ್ಥ ಮೋಹವಲ್ಲದೆ ನಿಶ್ಚಯವಲ್ಲವು ಐಹಿಕಾಮುಷ್ಮಿಕವೆಂಬ ಸಕಲ ಸುಖ ದೋಹನ ಧೇನು ಸರ್ವೇಶ್ವರ ಹರಿಯ ಸ- ಮಾಹಿತ ಮನದಿಂದ ಭಜಿಸೆ ನಿನ್ನನು ಪಕ್ಷಿ ವಾಹ ಕೈ ಬಿಡದೆ ಕಾಪಾಡುವನು 2 ಒಂದು ದಿವಸ ನೀರೊಳದ್ದದಿದ್ದರೆ ದು- ರ್ಗಂಧ ಭೂಯಿಷ್ಠವು ಸಹಿಸಲಸಾಧ್ಯವು ಹಿಂದಿನ ಕರ್ಮಾನುಬಂಧವು ತಿಳಿಯದು ಮುಂದಿನ ಹೊಂದಿಕೆ ಒಂದಾದರು ಇಂದಿರಾವರ ವೆಂಕಟೇಶನ ಪಾದಾರ- ವಿಂದ ಧ್ಯಾನಗಳೆಂಬದೊಂದೆ ಪರಮಸುಖ ವೆಂದು ತಿಳಿದು ಭಕ್ತಿಯಿಂದ ಭಜಿಸು ನಮ್ಮ ತಂದೆ ಬಿಡದೆ ಕಾವನೆಂದೆಂದಿಗು 3
--------------
ತುಪಾಕಿ ವೆಂಕಟರಮಣಾಚಾರ್ಯ
ನೋಡಿದ್ಯಾ ಗುರುರಾಯರ ನೋಡಿದ್ಯಾ ಪ ನೋಡಿದ್ಯಾ ಮನವೆ ನೀನಿಂದು - ಕೊಂ - ಡಾಡಿದ್ಯ ಪುರದಲ್ಲಿ ನಿಂದು - ಆಹಾ ಮಾಡಿದ್ಯ ವಂದನೆ ಬೇಡಿದ್ಯ ವರಗಳ ಈಡು ಇಲ್ಲದೆ ವರ ನೀಡುವೊ ಗುರುಗಳ ಅ.ಪ ಸುಂದರ ತಮ ವೃಂದಾವನದಿ ತಾನು ನಿಂದು ಪೂಜೆಯ ಕೊಂಬ ಮುದದಿ - ಭಕ್ತನೀ ನಂದ ನೀಡುವೆನೆಂದು ತ್ವರದಿ ಇಲ್ಲಿ ಬಂದು ನಿಂತಿಹನು ಪ್ರಮೋದಿ ಆಹಾ ಹಿಂದಿನ ಮಹಿಮವು ಒಂದೊಂದೆ ತೋರುವಾ ಮಂದಜನರ ಹೃ - ನ್ಮಂದಿರಗತರನ್ನ 1 ದೂರದಿಂದಲಿ ಬಂದ ಜನರ - ಮಹ ಘೋರ ವಿಪತ್ಪರಿಹಾರಾ - ಮಾಡಿ ಸಾರಿದಭಿಷ್ಟವು ಪೂರಾ - ನೀಡಿ ಪಾರುಮಾಡುವ ತನ್ನ ಜನರಾ - ಆಹಾ ಆರಾಧಿಸುವರ ಸಂ -ಸಾರವಾರಿಧಿಯಿಂದ ಸೂರಿ ಕೊಡುವೊರನ್ನ 2 ಪಾದ - ಯುಗ ಸತ್ಯಪೂರ್ವಕದಿ ನಂಬೀದ - ನಿಜ ಭೃತ್ಯನಪೇಕ್ಷಮಾಡೀದ - ಕಾರ್ಯ ಸತ್ಯಮಾಡುವ ಪೂಜ್ಯಪಾದ - ಆಹಾ ಮತ್ರ್ಯಾದಿ ಸುರರೊಳು - ಎತ್ತ ನೋಡಿತಗಿನ್ನು ಉತ್ತುಮರಾರಯ್ಯ - ಭತ್ಯವತ್ಯಲರನ್ನ 3 ಅಂತರದಲಿ ತಾನು ನಿಂತು ಜನ ಸಂತತ ಕಾರ್ಯಗಳಿಂತು - ಮಾಡಿ ಕಂತುಪಿತಗೆ ಅರ್ಪಿಸ್ಯಂತು ತಿಳಿಸ ದಂತೆ ಎಮ್ಮೊಳಗಿರೊವೊ ತಂತು - ಆಹಾ ಸಂತತ ಕರ್ಮಗಳಂತು ಮಾಡುತ ಜೀವ ರಂತೆ ಗತಿಯು ತಾ ಪ್ರಾಂತಕ್ಕೆ - ನೀಡುವರ 4 ಅಗಣಿತ ಮಹಿಮವಗಾಧಾ - ಬಹು ಸುಗುಣನಿಧಿ ಮಹಾ ಭೋಧ - ನಾನು ಪೊಗಳುವದೇನು ಸಮ್ಮೋದ - ತೀರ್ಥ ಮೊದಲಾದ ಸುರರ ಪ್ರಮೋದ - ಆಹಾ ಮೊಗದಿಂದ ಶ್ರೀಗುರು ಜಗನ್ನಾಥ ವಿಠಲ ಸಂ ಮೊಗನಾದ ಕಾರಣ ಜಗದಿ ಮೆರೆವೊರನ್ನ 5
--------------
ಗುರುಜಗನ್ನಾಥದಾಸರು
ಪಂಥವ್ಯಾಕೋ ಪ್ರತಿಜ್ಞೆ ಯಾಕೋ ಪ ಸಂತಸದಿ ನಿನ್ನಂತರಂಗದಿ ಕಂತುಪಿತ ನೀನೆನಲು ಸಾಕೊ ಅ.ಪ ಕೋಪವ್ಯಾಕೊ ತಾಪವ್ಯಾಕೋ ತಾಪತ್ರಯಗಳ ಲೋಪ ಸಿರಿವರ ಕಾಪಾಡೆನಲದೊಂದೆ ಸಾಕೊ 1 ಕುಂದು ಯಾಕೋ ನಿಂದೆ ಯಾಕೋ ಸಿಂಧುಶಯನಗೋವಿಂದಗರ್ಪಿ ತೆಂದು ನೋಡ್ಹೆಚ್ದಿಂದ್ಯಾಕೆ ಬೇಕೊ 2 ಕ್ಷೇತ್ರ ಯಾಕೋ ಯಾತ್ರವ್ಯಾಕೋ ಖಾತ್ರಿಯಿಂದ ಜಗತ್ರಯಕೆ ಸು ಸೂತ್ರಾಧಾರಿಯೆಂದ ಮಾತ್ರ ಸಾಕೊ 3 ಸ್ನಾನವ್ಯಾಕೋ ಸಂಧ್ಯಾನವ್ಯಾಕೋ ಜ್ಞಾನವಿಡಿದು ಭಕ್ತಪ್ರಾಣನಾಥನ ಧ್ಯಾನಗೈಯಲದೊಂದೆ ಸಾಕೊ 4 ಜಪವು ಯಾಕೋ ತಪವು ಯಾಕೋ ಕಪಟನೀಗಪರಿಮಿತ ಹರಿಯ ಗುಪಿತದಿಂದರ್ಚಿಸಲು ಸಾಕೊ 5 ಮಂತ್ರವ್ಯಾಕೋ ತಂತ್ರವ್ಯಾಕೋ ಮಂತ್ರಮೂರ್ತಿ ಸರ್ವಾಂತರ್ಯಾಮಿಯ ಅಂತರಂಗ ತಿಳಿಯೆ ಸಾಕೊ 6 ನೇಮವ್ಯಾಕೋ ನಿತ್ಯವ್ಯಾಕೋ ಸ್ವಾಮಿಯೆನುತ ಪ್ರೇಮಿಯ ಶ್ರೀ ರಾಮನ ನಂಬಿಕೊಳ್ಳಲು ಸಾಕೊ 7
--------------
ರಾಮದಾಸರು
ಪರಮ ಕಾರುಣ್ಯ ಗುರು ಕರುಣಿಸೆನಗ್ಹರಿ ಪದವ ಶರಣೆಂದು ನಮಿಪೆ ನಿಮಗೆ ಪ. ಹರಿಯ ದಾಸತ್ವದಲಿ ವರದೀಕ್ಷೆಯನೆ ಕೊಟ್ಟು ಕರುಣಿಸಿ ಕೃಪೆಗೈದಿರಿ ಗುರುವೆ ಅ.ಪ. ಅಂಕಿತವ ಮೊದಲಿತ್ತು ಹೃದಯಾಂಕದಲಿ ನಿಲಸಿ ಮಂಕುಬುದ್ಧಿಯ ತೊಲಗಿಸಿ ಶಂಖ ಚಕ್ರಾಂಕಿತನ ಪದಕಮಲವನು ಮನ ಪಂಕಜದೊಳಗೆ ತೋರಿ ಶಂಕರಾರ್ಚಿತನ ಕೃಪೆ ಎನ್ನೊಳಾಗಲಿ ಎಂದು ಶಂಕಿಸದೆ ವರವಿತ್ತಿರಿ ಗುರುವೆ 1 ಶ್ರೀನಿವಾಸನು ನಿಮ್ಮೊಳ್ ಸಾನುರಾಗದಿ ನೆಲಸಿ ತಾನಿತ್ತ ದಾಸತ್ವವ ಏನೆಂಬೆ ಈಗಭಿಮಾನವ ತೊರೆ ಎನುತ ತಾ ನುಡಿಸುತಿಹನು ನಿಮ್ಮೊಳ್ ಮಾನಾಭಿಮಾನ ಹರಿ ಗುರುವಶವಾಗಿರಲು ನಾನಳುಕಲಿದಕೇತಕೆ ಗುರುವೆ 2 ಸ್ವಪ್ನದಲಿ ದಾಸತ್ವ ಸಿದ್ಧಿಸಲಿ ಎಂದೆನುವ ಅಪ್ರತಿಮ ನುಡಿ ಕೇಳಿದೆ ಕ್ಷಿಪ್ರದಿಂದಲಿ ಕರುಣಿಸಿದಿರೆನಗಾಗಿದನಿನ್ನು ತಪ್ತವಾಯಿತು ಭವದ ದುರಿತ ಆಪ್ತಗುರು ನಿಮ್ಮಂಥ ಮಹಿಮರನು ನಾ ಕಾಣೆ ಗುಪ್ತದಲಿ ಜಗದಿ ಮೆರೆವ ಗುರುವೆ 3 ಇತ್ತಿರೆನಗೊಂದೊಂದೆ ದಾಸತ್ವ ಸಾಮಗ್ರಿ ಅತ್ಯಧಿಕ ಕರುಣೆಯಿಂದ ನಿತ್ಯವಾಗಿರಲಿ ಹರಿದಾಸತ್ವ ಇಹ ಪರದಿ ಸತ್ಯವಂತರ ಕೃಪೆಯಲಿ ನಿತ್ಯದಲಿ ನೀತ ಗುರು ನಿಮ್ಮಿಂದ ನಿಜ ರೂಪ ವ್ಯಕ್ತವಾಗಲಿ ಜ್ಞಾನದೀ ಗುರುವೆ 4 ಸಿರಿ ತಂದೆ ಮುದ್ದುಮೋಹನದಾಸರಾಯ ಗುರುವೆ ನಿಮ್ಮ ಕರುಣದಿ ಪರಿ ಪರಿ ಭವಪಾಶ ದುರಿತಗಳು ದೂರಾದವು ಪರಮ ಸಾತ್ವಿಕರೆ ಸಿರಿವರನ ಪದ ಭಜಿಪಂಥ ವರದೇವತಾಂಶರೆನಿಪ ಗುರುವೆ 5 ಮಂದರಿಗೆ ಬಹು ಮಲಿನರಂದದಲಿ ತೋರುತ ಕಂದರ್ಪಪಿತನ ಸ್ಮರಿಪ ಒಂದೊಂದು ವ್ಯಾಪಾರ ಅರಿಯಲಳವಲ್ಲಿನ್ನು ಮಂದಮತಿಯಾದ ಎನಗೆ ಬಂದು ಭೂಲೋಕದಲಿ ಸಜ್ಜನರನುದ್ಧರಿಪ ತಂದೆ ನಿಮ್ಮರಿವರ್ಯಾರೊ ಗುರುವೆ 6 ಅರಿಯೆ ಅನ್ಯರನಿನ್ನು ಶ್ರೀ ಗುರುವೆ ಕರುಣಿಸಿರಿ ವರಜ್ಞಾನ ಸುಧೆಯನಿತ್ತು ವರಶೇಷಶಯನನ ನಿರುತ ಸೇವಿಸುವಂಥ ಪರಮಭಾಗ್ಯವ ಕರುಣಿಸಿ ಸಿರಿವರ ಗೋಪಾಲಕೃಷ್ಣವಿಠ್ಠಲನ ರೂಪ ತ್ವರಿತದಿಂ ತೋರಿ ಪೊರೆಯೊ ಗುರುವೆ 7
--------------
ಅಂಬಾಬಾಯಿ
ಪುಣ್ಯ ಪೂರ್ವಾರ್ಜಿತವಿದು ಸುರ ಮಾನ್ಯ ಶ್ರೀ ನಿಲಯನ ದರುಶನ ಪ ಚೆನ್ನಿಗನೀತನು ಸುಜನರ ಪೊರೆಯಲು ಪನ್ನಗಾಚಲದಿ ಬಂದಿರುವುದು ಬಲು ಅ.ಪ ರಾಜ್ಯವಿವಗೆ ಹದಿನಾಲ್ಕು ಲೋಕಗಳು ಭೋಜ್ಯ ಚರಾಚರಜಗವೆಲ್ಲ ರಾಜೀವಾಲಯನಾಥನಿವನು ಬಲು ಸೋಜಿಗದಲಿ ಬಂದಿಹ ನೋಡಿ ಪೂಜ್ಯಚರಣ ಗುರುವ್ಯಾಸರಾಜ ಯತಿರಾಜ ರಚಿತ ದ್ವಿಕ್ಷಡಬ್ಧದ ಪೂಜೆಯ 1 ಸೌಂದರ್ಯದ ಗಣಿ ಇವನು ಎಲ್ಲರನು ತಂದೆಯಂತೆ ಸಲಹುವ ಸತತ ಒಂದೊಂದೆಡೆಯಲು ವ್ಯಾಪ್ತನಿವನು ತಾ ನೊಂದೆಡೆಯಲು ಸುಲಭದಿ ಸಿಗನು ನಂದತೀರ್ಥ ಪರಿವಾರ ಜನರು ಇವರೆಂದು ಹರುಷದಲಿ ಮುಂದೆ ನಿಂತಿಹುದು 2 ಪದ್ಮಾವತಿ ವಲ್ಲಭನಿವ ಮುನಿಜನ ಹೃದ್ಗತ ಪ್ರಕಟಾಮಿತ ಚರಿತ ಮುಗ್ಧಜನರು ಪರಮಾದರ ತೋರಲು ಸ್ನಿಗ್ಧನಾಗುವನು ಹರುಷದಲಿ ಛದ್ಮಕೆ ದೂರನು ಭಕ್ತ ಪ್ರಸನ್ನನು ಉದ್ಧರಿಸಲು ಈ ಸದ್ಮಕೆ ಬಂದಿಹ 3
--------------
ವಿದ್ಯಾಪ್ರಸನ್ನತೀರ್ಥರು
ಪೋದರಯ್ಯ ತೆರಳಿ ಪೋದರು | ಸಾಧುನರಸಿಂಹಾರ್ಯರು ಮಾಧವನ ಮಂದಿರಕೆ ಪ ಶ್ರೀಕರ ಕೃಷ್ಣಾತಟದಿ ಐಕೂರು ಗ್ರಾಮದಿ ನೆಲೆಸಿ | ಏಕೋ ಭಾವದಿಂ ಸದಾ ಶ್ರೀಕಾಂತನ್ನ ಧ್ಯಾನಂಗತರು 1 ಭಾಗವತ ಸಾರೋದ್ಧಾರ ಸತ್‍ಶಿಷ್ಯರಿಗೆ ಸಾರುತ ಸದ್ಭಕ್ತಿಜ್ಞಾನ | ವೈರಾಗ್ಯಮಾರ್ಗವ ತೋರಿ 2 ಮಧ್ವಮತದಿ ಸಿದ್ಧಾಂತ ಪದ್ಧತಿಯನುಸರಿಸಿ | ಸದ್ಧರ್ಮದಿ ನಡೆಸುವ ಪ್ರಸಿದ್ಧ ವಿದ್ವಾಂಸರು 3 ವ್ಯಾಸದಾಸಕೂಟ ಮರ್ಮಲೇಸಾಗಿ ಸಜ್ಜನ ತತಿಗೆ ಬ್ಯಾಸರಿಲ್ಲದಲೆ ಪ್ರತಿವಾಸರುಪದೇಶಿಸುವರು 4 ನಿತ್ಯಗೈವ ಕೃತ್ಯಂಗಳು | ತತ್ವೇಶ್ವರ ದ್ವಾರಾ ಹರಿಗೆ ಚಿತ್ತಪೂರ್ವಕರ್ಪಿಸುವ ಸೋತ್ತುಮರೋತ್ತುಮರು ಲೋಕಕೆ 5 ಅಂತರಂಗದಲ್ಲಿ ಲಯದ ಚಿಂತನೆಯಗೈದು ಮುಕ್ತಿ ಪಂಥವನ್ನೆ ಪಿಡಿದು | ಜ್ಞಾನ ಸಂತತಿಯ ಜಗದಿ ನೆಲೆಸಿ 6 ಯಾವ ಸಂಶಯವ್ಯಾಕೆ ಕೋವಿದವರ್ಯರಾದ | ಭಾವಜ್ಷರ ಮುಖದಿಂದ ದೇವಾಂಶರೆನಿಸಿಕೊಂಡವರು 7 ವ್ಯಯ ಸಂವತ್ಸರಂತ್ಯಮಾಸ | ದ್ವಯತಿಥಿ ಸಿತವರ್ಷ ಹಯಸಪ್ರಸುತನ ವಾರದಿ ತ್ರಯ ಝಾವ ರಜನಿಯಲ್ಲಿ 8 ಆಸನಸ್ಥರರಾಗಿ ನಾಸಿಕಾಗ್ರದಲಿಟ್ಟು ಶ್ವಾಸಮಂತ್ರ ಜ ಪಿಸಿ ಬಿಂಬೋಪಾಸನಗೈವ ಬುಧರು 9 ಸಾಗರಶಯನನ ಧ್ಯಾನ ಯೋಗ ಬಲದಿ ತಿಳಿದು ಭುವಿ ಭೋಗ ತೀರಿತೆಂದು ಕೊಯಿಲು ತಾಗಿದ್ದೊಂದೆ ನೆವನದಿಂದ 10 ಆಶೆಕ್ರೋಧಂಗಳನಳಿದು | ಕ್ಲೇಶಮೋದ ಸಮ ತಿಳಿದು | ಭೂಸುರ ವೃಂದಕೆ ಸುಗ್ರಾಸವಿತ್ತು ತೋಷಿಸುವರು 11 ಹರಿಯಪುರಕೆ ಪೋಪ ಸಮಯ ಹರಿಸು ಬಂದು ಕೃಪ್ಣೆ ಇವರ ಚರಿಯ ನರೆÉದ ಜನಕೆ ತೋರಿ 12 ಸ್ವಾಮಿಶಾಮಸುಂದರನ | ನಾಮದ ಸನ್ಮಹಿಮ ಸತತ | ಪಾಮರ ಜನಕೆ ಪೇಳಿ ಪ್ರೇಮದಿಂ ಸಲಹಿದವರು 13
--------------
ಶಾಮಸುಂದರ ವಿಠಲ
ಬಾರೆ ಸಖಿ ಪೋಗಿ ರಾಸ ಕ್ರೀಡೆಯಾಡುವ ಪ ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ ಅ.ಪ ಜಾರನೆಂದು ಸಣ್ಣಮಾತನಾಡಿದ್ದಾಯಿತು ಚೋರನೆಂದು ಬಹಳ ದೂರು ಮಾಡಿದ್ದಾಯಿತು ಮೂರು ನಿಮಿಷ ಅವನ ಮರೆಯಲಾಗದಾಯಿತು ಬೀರುತಿರುವ ಮೋಹಜಾಲ ಸಡಲದಾಯಿತು 1 ಯಾವನೀತನೆಂದು ಚಿಂತೆ ಮಾಡಿದ್ದಾಯಿತು ಗೋವಳನಿವನಲ್ಲವೆಂದು ನಿರ್ಧರಾಯಿತು ಯಾವನಾದರೇನು ಇವನ ಕ್ಷಣವು ಕಾಣದೆ ಜೀವನ ಕಳೆಯುವುದೆ ದೊಡ್ಡ ಭಾರವಾಯಿತು 2 ಮಂದಹಾಸದಿಂದ ಸಕಲ ಜಗವ ಬೆಳಗುವ ಚಂದ್ರನು ತಾನಿವನ ನೋಡಿ ಬಹಳ ನಾಚುವ ಸಾಂದ್ರವಾಯಿತಂತರಿಕ್ಷ ಮಧುರ ನಾದದಿ ಮಲಯ ಮಾರುತ ತಾ ತಲೆಯನಾಡುವ 3 ನಾದದ ಸುಧೆ ಸಾಗರದಲಿ ತೇಲುವಂತಿದೆ ಮಾಧವ ತಾ ಸುಧೆಯ ರಸವನೆರಚುವಂತಿದೆ ಬಾಧಿಸುತಿಹ ಭವದ ತಾಪವಡಗಿದಂತಿದೆ ಮಾದರಿಫಲ ರಾಸಕ್ರೀಡೆ ತೋರುವಂತಿದೆ 4 ಸಕಲ ಲೋಕನಾಥನೀತನೆಂದು ತಿಳಿಯಿತು ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು ಲಕುಮಿ ಮುರುಳಿ ರೂಪದಲ್ಲಿ ಇಹುದು ಹೊಳೆಯಿತು ಭಕುತಿ ಹರಿದು ಎನ್ನ ವiನ ಪ್ರಸನ್ನವಾಯಿತು 5
--------------
ವಿದ್ಯಾಪ್ರಸನ್ನತೀರ್ಥರು
ಬ್ಯಾಡವೊ ಕುವಾದಿ ಬ್ಯಾಡವೊ ಪ ಬ್ಯಾಡವೊ ಕೇಳು ಕುವಾದಿ ನೀ ನಾಡುವದುಚಿತವಲ್ಲ ಧಾದಿ | ಆಹಾ | ಮೂಢ ನಿನಿಗದಾವ ಖೋಡಿ ಬೋಧಿಸಿದನೊ ನಾಡಿಗೊಡಿಯ ರಂಗಗೀಡು ನೇನೆಂಬದುಅ.ಪ ಎಲ್ಲ ಜೀವರು ದೇವವೊಂದೆ ಭೇದ ವಿಲ್ಲೆಂದಾಡುವುದು ಧಂದೆ ಯಮ ಕೊಲ್ಲದೆ ಬಿಡ ನಿನ್ನ ಮುಂದೆ ನಿನ್ನ ಹಲ್ಲು ಮುರಿವನೊಂದೊಂದೆ || ಆಹಾ || ಉಳ್ಳಿಗಡ್ಡಿಯ ಉದ್ದಿ ಬೆಳ್ಳಗೆ ತೊಳೆದರೆ ಅಲ್ಲಕ್ಕೆ ಸರಿಯೇನೊ ಬಲ್ಲವರೊಪ್ಪಾರು 1 ಇದ್ದು ನೀ ಇಲ್ಲೆಂತೆಂಬಿ ಕಾಲಿ ಲೊದ್ದರೆ ಬಲು ನೊಂದು ಕೊಂಬಿ ಇ ಲ್ಲಿದ್ದವರೆಲ್ಲ ಬ್ರಹ್ಮ ನಾನೆಂಬಿ ಆ ಪರ ಬುದ್ಧಿಯಿಂದ ಶುದ್ಧ ಎಂತೆಂಬಿ || ಆಹಾ || ಬಿದ್ದುಹೋಯಿತು ನಿನ್ನ ಸಿದ್ದಾಂತವೆಲ್ಲವು ಸದ್ದು ಎನ್ನ ಕೂಡ ಗೆದ್ದು ಹೋಗಲಾರಿ ಬ್ಯಾಡವೊ 2 ಒಬ್ಬ ಬ್ರಹ್ಮ ಎಲ್ಲಾ ಮಾಯವೊ ಇ ನ್ನೊಬ್ಬನೆ ಎಲ್ಲಿಹ ಸುಖವೊ ಕುಹಕ ಶಾಸ್ತ್ರವೆಲ್ಲ ಮೃಷವೋ ಉಬ್ಬಿ ಆಡುವುದು ನಿರಯವು || ಆಹಾ || ಈ ಬಗೆಯಾಯಿತು ನಿನಗೊಬ್ಬಗೆ ಈ ಮಾತು ಬ್ಯಾಡವೊ 3 ಒಂದೆ ಆದರೆ ನಿನಗೆಲ್ಲ ನಿನ ತಂದೆಯಿಂದ ನೀ ಪುಟ್ಟಿದ್ದೆಲ್ಲ ನಿನ್ನ ತಂದೆ ನೀನು ಒಂದೆ ಎಲ್ಲಿ ಇನ್ನು ಛಂದಾಗಿ ನೀ ತಿಳಿಯೊ ಸೊಲ್ಲ || ಆಹಾ || ಸತಿ ನಿನಗೇನಾದಳೊ ಮನುಜ ಮಂದ ಮತಿಯೆ ತಾಯಿಗಂಡ ನೀನಾದೆಲ್ಲೋ 4 ಅನ್ನಕ್ಕೆ ಪರಬ್ರಹ್ಮನೆಂಬಿ ಈಗ ಅನ್ನ ಚಲ್ಲಲು ದೋಷವೆಂಬಿ ನಿತ್ಯ ಚನ್ನಾಗಿ ಪರಿಪೂರ್ತಿಗೊಂಬಿ ಈ ಅನ್ನ ನಾನು ವೊಂದೆ ಎಂಬೀ || ಆಹಾ || ನಿನ್ನ ದೇಹಕ್ಕೆ ರೋಗವು ಬಂದರೆ ನೀನು ಅನ್ನವ ಬಿಟ್ಟಿನ್ನು ಚನ್ನಾಗಿ ಮಲುಗುವಿ 5 ಭೇದವಿಲ್ಲೆಂತೆಂದರೆ ನೀನು ಮಾದಿಗರೆಲ್ಲ ಒಂದೇನೊ ಸರಿ ಹೋದವರೆಂಜಲ ತಿನ್ನೋ ಕಹಿ ಸ್ವಾದವು ನಿನಗಿಲ್ಲವಿನ್ನು ||ಆಹಾ|| ಓದನಾದರು ವೊಂದೆ ಮೇದ್ಯವಾದರು ವಂದೇ ಭೇದವಿಲ್ಲದೆ ತಿಂದು ಹೋದಿಯೋ ನರಕಕ್ಕೆ 6 ಎಲ್ಲವೂ ಬ್ರಹ್ಮಸ್ವರೂಪಾ ಬ್ಯಾರೆ ಇಲ್ಲೆಂದು ನಿನಗೆ ರೂಪಾ ಭೇದವಿಲ್ಲೆಂತೆಂಬುವದು ನಿಶ್ಚಯವು ವಾಕು ಸಲ್ಲದೆ ಇನ್ನು ಪೋದಾವು ||ಆಹಾ || ಬಲ್ಲಿದ ಪುರುಷನು ಮೆಲ್ಲನೆ ನಿನ್ನ ಸತಿ ಯಲ್ಲಿ ಮಲಗಿದರೆ ನೆಲ್ಲಿ ನೀ ಸೈರಿಸಿ7 ನಾಶವಿಲ್ಲೆಂಬುದೆ ಸತ್ಯ ದೋಷ ಮಿಥ್ಯ ಜಗ ಭೃತ್ಯ ಬಿಡದೆ ನಿತ್ಯ ||ಆಹಾ|| ದ್ವಾಸುಪರ್ಣವೆಂಬೊ ಈ ಶ್ರುತಿಗರ್ಥವು ಲೇಸಾಗಿ ತಿಳಿಯದೆ ಘಾಶಿಪಡುವಿ ವ್ಯರ್ಥ 8 ಈಶನು ನೀನಾದರೇನು ಸರ್ವ ದೇಶ ಪೋಷಿಸದೆ ಇಪ್ಪೋರೆ ನಿನ್ನ ಸಾ ಹಸ ವ್ಯರ್ಥ ಮಾಡೋರೆ ಹರಿ ದಾಸರು ಕಂಡು ಸಹಿಸೋರೆ ||ಆಹಾ || ಸತಿ ಸುತರು ಕ್ಲೇಶ ಪಡುವುದು ಬಿಡಿಸಲಾರಿಯೊ ಲೇಶ 9 ಗುರುದೈವವಿಲ್ಲವೊ ನಿನಗೆ ಒಬ್ಬ ಸರಿಯಿಲ್ಲ ಈ ಧರೆಯೊಳಗೆ ಯಾರು ಹಿರಿಯ ಕಿರಿಯರಿಲ್ಲ ನಿನಗೆ ನೀನು ಖರ ಶಬ್ದಕಿಂತ ಹೊರಗೆ ||ಆಹಾ || ಎರಡಿಲ್ಲಾಯೆಂಬೊದೆ ಇರುಳಿಲ್ಲ ಹಗಲಿಲ್ಲಾ ನರಕ ಸ್ವರ್ಗ ವಂದೇ ಅರಿಯಾದೆ ಮುಳುಗುವಿ 10 ವಂದನೆ ನಿಂದ್ಯಗಳೊಂದೇ ನಿನಗೆ ಗಂಧ ದುರ್ಗಂಧವು ವಂದೇ ಕೆಟ್ಟ ಹಂದಿಯೆಲ್ಲ ನೀನು ವಂದೇ ನಿನ್ನ ಕೊಂದರೆ ದೋಷವಿಲ್ಲವೆಂಬೆ ||ಆಹಾ|| ಎಂದಿಗೂ ಈ ಮಾತು ನಿಂದಾವೆ ನಿನಗಿನ್ನು ಮುಂದಕ್ಕೆ ಬರಲಾರಿ ಮಂದಮತಿಯೆ ಖೋಡಿ11 ಜಗದೊಳಗೆ ನೀ ನಿಂತು ಇದು ಜಗವಲ್ಲವೆಂಬೋದಕ್ಕಿಂತು ನೋಡಿ ನಗುವರೋ ಅಶುದ್ಧ ಜಂತು ಜಿಂಹ್ವೆ ಬಿಗಿದು ಕೋಯಿಸುವ ಯಮನಿಂತು ||ಆಹಾ || ಹಗಲು ಇರುಳು ವಂದೆ ನಗುತ ನಗುತಾ ಕಂಡು ತೊಗಲು ದೇಹವು ನಿನ್ನದಗೆ ಮಾಡುವುದು ವ್ಯರ್ಥ 12 ಸ್ವಾಮಿ ನಿನಗೆ ಬ್ಯಾರಿಲ್ಲಾ ನಿತ್ಯ ನೇಮ ಕರ್ಮವು ಬ್ಯಾರೆ ಸಲ್ಲ ಒಂದು ಕಾಮಿನಿ ನಿನಗೆ ಬೇಕಲ್ಲ ಪೂರ್ಣ ಕಾಮನು ನೀನೆಂಬೆಯಲ್ಲಾ ||ಆಹಾ|| ಗ್ರಾಮ ಭೂಮಿಗಳ್ಯಾಕೊ ತಾಮಸ ನಿನಗಿನ್ನು ತಾಮಸರಿಗೆಲ್ಲ ಸ್ವಾಮಿಯಾಗಿರು ಹೋಗೋ 13 ಕಾಣದೆ ಬಗಳುವೆ ಮಾಯಿ ನಾಯಿ ನಿನಗೆ ತಂದೆ ತಾಯಿ ಇನ್ನು ಕಾಣುತ ಬೊಗಳೋದು ನಾಯಿ ಈ ನಾಯಿ ಕಚ್ಚಿ ನೀ ಸಾಯಿ ||ಆಹಾ || ಬಾಯ ಮುರಿವಾ ನಿನ್ನ ನ್ಯಾಯದಿಂದಲಿ ವಾಯು ಕಾಯ ಖಂಡ್ರಿಸುವನೊ 14 ಇಷ್ಟು ಹೇಳಿದರೆ ನೀ ಕೇಳಿ ನೀ ವ್ಯರ್ಥ ನಿಷ್ಠುರಾಡಿ ನೀ ಬಾಳೀ ನಿನ್ನ ಕಟ್ಟಿಗೆ ಮುರಿದಂತೆ ಶೀಳಿ ಬಾಯ ಕುಟ್ಟಿ ತುಂಬುವ ಯಮಧೂಳಿ ||ಆಹಾ|| ಸೃಷ್ಟಿಗೊಡಿಯ ನಮ್ಮ ವಿಜಯವಿಠ್ಠಲನ ಮುಟ್ಟಿ ಭಜಿಸದಲೆ ಭ್ರಷ್ಟ ಮನುಜ ನೀ ಅಷ್ಟವೆಂದೆಂಬೋದು ಬ್ಯಾಡವೊ 15
--------------
ವಿಜಯದಾಸ