ಒಟ್ಟು 134 ಕಡೆಗಳಲ್ಲಿ , 26 ದಾಸರು , 116 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲ ಕುಲ ಕುಲವೆನ್ನುತಿಹರು ಪ ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ ಅ ಕೆಸರೊಳು ತಾವರೆ ಪುಟ್ಟಲು ಅದ ತಂದುಬಿಸಜನಾಭನಿಗರ್ಪಿಸಲಿಲ್ಲವೆಹಸುವಿನ ಮಾಂಸದೊಳುತ್ಪತ್ತಿ ಕ್ಷೀರವವಸುಧೆಯೊಳಗೆ ಭೂಸುರರುಣಲಿಲ್ಲವೆ1 ಮೃಗಗಳ ಮೈಯಲಿ ಪುಟ್ಟಿದ ಕತ್ತುರಿಯತೆಗೆದು ಪೂಸುವರು ದ್ವಿಜರೆಲ್ಲರುಬಗೆಯಿಂದ ನಾರಾಯಣನ್ಯಾವ ಕುಲಅಗಜ ವಲ್ಲಭನ್ಯಾತರ ಕುಲದವನು 2 ಆತ್ಮ ಯಾವ ಕುಲ ಜೀವ ಯಾವ ಕುಲತತ್ತ್ವೇಂದ್ರಿಯಗಳ ಕುಲ ಪೇಳಿರಯ್ಯಆತ್ಮಾಂತರಾತ್ಮ ನೆಲೆಯಾದಿಕೇಶವನುಆತನೊಲಿದ ಮೇಲೆ ಯಾತರ ಕುಲವಯ್ಯ 3
--------------
ಕನಕದಾಸ
ಕೇಳಿದರೆನಗೇನು ಗೊತ್ತಿಲ್ಲ ಹೇಳುವದ್ಹುಟ್ಟನಾ ಕಲಿತಿಲ್ಲ ಪ ಹೇಳಿದ್ದೆ ಕೇಳಿ ನಾ ಮೂಲತಿಳಿದು ಭವ ಮಾಲನ ಭಜಿಸುವೆನಲ್ಲ ಅ.ಪ ವೇದಮೊದಲು ನಾನೋದಿಲ್ಲ ವೇದಮಂತ್ರ ಗೊತ್ತೆನಗಿಲ್ಲ ಮೇದಿನಿಯೊಳು ಹರಿಪಾದದಾಸರು ನಿ ವೇದಿಸಿದ ತೆರ ಸಾಧಿಪೆನಲ್ಲ 1 ನಿತ್ಯತತ್ತ್ವಗೊತ್ತೆನಗಿಲ್ಲ ಮತ್ತು ಆವಶಾಸ್ತ್ರ ಗತಿಯಿಲ್ಲ ಸತ್ಯರು ಪೇಳಿದ ನಿತ್ಯವಾಕ್ಯಗಳ ಚಿತ್ತವಿಟ್ಟರಿಯುತ್ತ ಸತ್ಯ ನಂಬಿಹೆನಲ್ಲ 2 ಛಂದಸ್ಸು ಲಕ್ಷಣ ನೋಡಿಲ್ಲ ಒಂದು ಪುರಾಣದರ್ಥ ಮಾಡಿಲ್ಲ ಬಂಧುಭಜಕರಾನಂದ ಶ್ರೀರಾಮನ ಬಂಧುರಂಘ್ರಿ ಸ್ಮರಣೊಂದೆ ಬಲ್ಲೆನಲ್ಲ 3
--------------
ರಾಮದಾಸರು
ಖರೆ ತವಧ್ಯಾನ ಹರಿ ಬೇಗ ಮಾಡೆನ್ನಗೆ ನಿಜಮನನ ಪ ಬಾಗಿವಂದಿಪೆ ನಾ ನಿಮ್ಮ ಚರಣ ಭವ ರೋಗ ದಯದಿ ಮಾಡು ನಿವಾರಣ ಅ.ಪ ಜಾಗರಮಾಡಿದರಹುದೇನು ನಿತ್ಯ ಭಾಗವತನೋದಿದರಹುದೇನು ಯಾಗಮಾಡಿದರಹುದೇನು ಮಹ ಯೋಗ ಬಲಿಸಿದರಹುದೇನು ಸೋಗು ಹಾಕಿ ಬೈರಾಗಿ ಆಗಿ ಇಳೆಯ ಭೋಗವ ತ್ಯಜಿಸಿದರಹುದೇನು 1 ಸ್ನಾನಮಾಡಿದರಹುದೇನು ಬಹು ದಾನಮಾಡಿದರಹುದೇನು ಮೌನಮಾಡಿದರಹುದೇನು ಕೌ ಪೀಣ ಧರಿಸಿದರಹುದೇನು ಜ್ಞಾನ ಬೋಧಿಸುತ ನಾನಾದೇಶಗಳ ಮಾಣದೆ ತಿರಿಗಿದರಹುದೇನು 2 ಜಪವಮಾಡಿದರಹುದೇನು ಬಲು ಗುಪಿತ ತೋರಿದರಹುದೇನು ತಪವ ಗೈದರಹುದೇನು ಮಹ ವಿಪಿನ ಸೇರಿದರೆ ಅಹುದೇನು ಚಪಲತನದಿ ಸದಾ ಅಪರೋಕ್ಷನುಡಿದು ನಿಪುಣನೆನಿಸಿದರೆ ಅಹುದೇನು 3 ಸಾಧುವೆನಿಸಿದರೆ ಅಹುದೇನು ಚತು ಸ್ಸಾಧನಮಾಡಿದರಹುದೇನು ವೇದ ಪಠಿಸಿದರೆ ಅಹುದೇನು ಅಣಿ ಮಾದಿ ಅಷ್ಟಸಿದ್ಧಿ ಅಹುದೇನು ಓದಿತತ್ತ್ವಪದ ಛೇದಿಸಿ ಬಿಡದೆ ಬೋಧಕನೆನಿಸಿದರೆ ಅಹುದೇನು 4 ಕೋಶನೋಡಿದರೆ ಅಹುದೇನು ಬಹು ದೇಶ ನೋಡಿದರೆ ಅಹುದೇನು ಆಸನಹಾಕಿದರಹುದೇನು ಮಂತ್ರ ಅ ಭ್ಯಾಸ ಮಾಡಿದರೆ ಅಹುದೇನು ದಾಸಪ್ರಿಯ ಭಯನಾಶ ಶ್ರೀರಾಮ ನಿಮ್ಮ ಧ್ಯಾಸವೊಂದಿರೆ ಮುಕ್ತಿ ಸಿಗದೇನು 5
--------------
ರಾಮದಾಸರು
ಗಣಪತಿ ಶಾರದೆಗೆರಗಿದೆ ಇಂದೇ | ಇಬ್ಬರ ಹೃದಯದಿ ಕರುಣದಿ ಬಂದೆ | ನುಡಿಸಿದರ್ವಚನವ ಒಂದೊಂದು ತಂದೆ | ಕೇಳಿರಿ ಜನರೆಲ್ಲಾ ಕಿವಿಗೊಟ್ಟು ಬಂದೆ 1 ನರನಾಗಿ ಬಂದು ನೀ ಮಾಡಿದಿ ಏನಾ | ತಿಳಿಯದೆ ಬೊಗಳುವಿಯಾತಕೆ ಶ್ವಾನಾ | ಎಳ್ಳಷ್ಟು ಇಲ್ಲದೆ ಹೋಯಿತು ಜ್ಞಾನಾ | ಇನ್ನಾದರೂ ಮಾಡೊ ಸದ್ಗುರುವಿನ ಧ್ಯಾನಾ2 ಮಾಡಲಿಲ್ಲಾ ಪುಟ್ಟಿ ನೀ ದಾನ ಧರ್ಮಾ | ಮಾಡಿದಿ ತಿಳಿಯದೆ ನೀ ಕೆಟ್ಟ ಕರ್ಮಾ | ಆಡಿದಿ ನೀ ಸಾಧುಸಂತರಿಗೊರ್ಮಾ | ನೋಡಿಕೊ ನಿನಗಿಲ್ಲದಾಯ್ತು ಶರ್ಮಾ 3 ಮಾಡಿದ ಬದುಕನು ಸುಮ್ಮನೆ ಕಳೆದೆ | ಮಾಡುವಾಗ ಬಹು ನಿಜವೆಂದು ತಿಳಿದೆ | ನೋಡದೆ ಪೂರ್ವದ ಸುಕೃತವನಳಿದೆ | ರೂಢಿಯೊಳಗೆ ಪಾಮರನಾಗಿ ಬೆಳೆದೆ 4 ಮಾಡುವ ಕರ್ಮಕೆ ಮನವೇ ಸಾಕ್ಷೀ | ಮಾಡುವಿ ಜಪ ನಿನಗ್ಯಾಕೀ ರುದ್ರಾಕ್ಷೀ | ಮಾಡಿದನೇ ಗುರು ಹೀಗೆಂದು ದೀಕ್ಷಾ | ಆಡಲ್ಯಾತಕೊ ನಾಳೆ ಆದೀತೋ ಶಿಕ್ಷಾ 5 ಹುಣಶಿ ಹಣ್ಣ ಹಚ್ಚಿ ಬೆಳಗಿದಿ ಗಿಂಡೀ | ಎಣಕೀ ಶರಣ ಮಾಡಿ ಅಲ್ಲೇನು ಕಂಡೀ | ಸಂತರ ನಿಂದಾ ಬಲು ಮಾಡಿ ಉಂಡೀ | ಅಂತರಂಗದಿ ಇರು ಛೇ ಹುಚ್ಚ ಮುಂಡೀ 6 ಹಗಲೂ ಇರುಳೂ ಎದ್ದುಂಬುವಿ ಕೂಳೂ | ಕೂಳಿಗೆ ಆದಿ ನೀ ಒಬ್ಬರ ಆಳೂ | ಬಲು ಮಂದಿ ಮನೆಯನು ಮಾಡಿದಿ ಹಾಳೂ |ಏನು ಪುಣ್ಯ ಬಂದದ ಅದನಾರ ಹೇಳು 7 ಹಗಲೂ ಇರುಳೂ ಎದ್ದು ಮಾಡಿದಿ ಬದಕಾ | ಮಾಡುತ ಮಾಡುತ ಆದೆಲ್ಲೊ ಮುದುಕಾ | ಸಾಯುವ ತನಕಾ ಬಿಡಲಿಲ್ಲೊ ಚುದಕಾ | ಸತ್ತಮೇಲೆ ನೀ ಆಗುವಿ ಶುನಕಾ 8 ಏನೇನಿಲ್ಲದೆ ಹೋಯಿತು ಬುದ್ಧೀ | ಶಾಸ್ತ್ರ ಪುರಾಣದಿ ಕೇಳಿಲ್ಲ ಸುದ್ದೀ | ಇರುಳ ಕಂಡ ಕುಣಿ ಹಗಲ್ಯಾಕೆ ಬಿದ್ದೀ | ಮರುಳಾದ್ಯಾ ಯಮ ನಾಳೆ ಕೊಂದಾನೊ ಗುದ್ದೀ 9 ಸಂಸಾರ ನಂಬಿದಿ ನಿಜದಲಿ ಹ್ಯಾಂಗ | ಸದ್ಗುರು ಪಾದವ ನಂಬೋ ನೀ ಹಾಂಗ || ಸಂಶಯಾ ಅದಕಂಜಿ ಬಿಟ್ಟರೆ ಈಗ |ಕಾಂಶಿಲಿ ಬಡಿದಾರು ತಿಳಿದೀತು ಆಗ 10 ಬೆಳಕಿನೊಳಗ ಒಂದು ನೋಡುವ ಕಣ್ಣು | ಕತ್ತಲಿಯೊಳ ಗೊಂದು ಕಾಂಬುವ ಕಣ್ಣು | ಕತ್ತಲಿ ಬೆಳಕನ್ನು ನೋಡುವ ಕಣ್ಣು | ಅದ ಬಿಟ್ಟು ಏನ ನೋಡುತಿ ಮಣ್ಣು 11 ಅನುದಿನ ಶಾಸ್ತ್ರ ಪುರಾಣಾ | ಅದರೊಳಗಿನ ಮಾತ ತಿಳಿಯದೆ ಕೋಣಾ || ಅರ್ಥವ ಹೇಳುವಿ ಮಂದಿಗೆ ಜಾಣಾ | ರುವ್ವಿಯ ಬೇಡಲು ಹೋಯಿತು ಪ್ರಾಣಾ12 ಕಂಡರೆ ನೋಡುವಿ ಹೆರವರ ಹೆಣ್ಣು | ಚೆಲುವೆಂದೂ ಇಟ್ಟೆಲ್ಲೊ ಆಕೆಗೆ ಕಣ್ಣೂ | ಆದರೆ ಹತ್ತ್ಯಾವೊ ಆಕೆಯ ಹುಣ್ಣು | ಕಡೆಯಲಿ ಬಿದ್ದಿತು ಬಾಯಲಿ ಮಣ್ಣು 13 ನಿತ್ಯ ತೆಗೆದುಕೊಳ್ಳುವಿ ದೇವರ ತೀರ್ಥಾ | ಮತ್ತಿನ್ನು ಬಿಡಲಿಲ್ಲ ಮನದ ಸ್ವಾರ್ಥಾ || ಕತ್ತೆಯ ಹಾಂಗ ನೀನೊದರುವಿ ವ್ಯರ್ಥಾ | ಎಂದೆಂದಿಗೂ ದೊರೆಯದು ಆ ಪರಮಾರ್ಥಾ 14 ತನುವು ನಾನೆಂಬುವಿ ತನುವಿದು ತೊಗಲು | ತನುವಿಗೆ ಅವ ನೋಡು ಒಂಬತ್ತು ಹುಗಲು | ಚಿಂತಿ ಮಾಡುವದ್ಯಾಕೊ ಹಗಲೂ ಇರುಳೂ | ನಿನ್ನಾಧೀನವು ಹೀಗೆಂದು ಇರಲು 15 ದೂರ ಹೋಗದಿನ್ನು ಆಗದು ಕಾಶೀ | ದೂರ ಮಾಡಿ ಕಳಿ ನೀನು ಮೂರಾಶಿ | ತೀರದು ಶಿವಯೋಗ ಪುಣ್ಯ ರಾಶಿ | ಸೇರುವಿ ಸಾಯುಜ್ಯದಲಿ ಮಿರಾಶಿ 16 ಮಾಯಾ ಮಾಯಾ ಮಾಯಾ | ದುಡ್ಡಿನಂತೆ ಮಾಡೊ ಮನಕೆ ನಿರ್ಮಾಯಾ 17 ಮೀಶಿಯ ಹುರಿ ಮಾಡಿ ಮೇಲಕೆ ನೋಡಿ | ಕಾಲಾಗ ಸಿಕ್ಕವು ಮೋಹದ ಬೇಡಿ || ಮಾಡಬಾರದಂಥ ಕೆಲ್ಸವ ಮಾಡಿ | ಸಿಕ್ಕಿದೆಲ್ಲೊ ಗಾಂಡೂ ಇನ್ನೆತ್ತ ಓಡೀ 18 ಪಾದ ದೊರೆವುದಿನ್ನೆಲ್ಲಿ 19 ಕಾಮನ ಸುಡುವುದು ನೋಡು ಹೀಂಗಲ್ಲಾ | ಕಾಮನ ಶಿವ ಸುಟ್ಟರವ ಸಾಯಲಿಲ್ಲ || ಕಾಮನು ಸುಡುವ ಮೂರು ಲೋಕವನೆಲ್ಲ | ಕಾಮರಹಿತ ಭವತಾರಕ ಬಲ್ಲ 20 ಕಟ್ಟಿದಿ ಮನೆಯನು ನೀ ಬಲು ಛಂದಾ | ಬಿಟ್ಟು ಹೋಗುತಿ ಇದದಾವಂದಾ || ತೊಟ್ಟಿಲೊಳಗೆ ಇದ್ದ ಹೇಳಿದ ಕಂದಾ | ಎಷ್ಟಂತ ಹೇಳಲಿ ನೀ ಮತಿಮಂದಾ 21 ಪಾತಕ ಬರುವದು ಬಿಡಬ್ಯಾಡ ವಾಜಿ | ನೀತಿಯಿಂದಲಿ ಮಾಡು ನೀ ಗುರು ಪೂಜಿ | ಯಾತನ ಬಡಿಸುವ ನಾಳಿನ ಪಾಜಿ 22 ಒದರುವಿ ಯಾತಕೆ ಬಾಯನು ಕಿಸ್ತು | ಬೆದರ ಬೇಡಾದುದಕೆನ್ನು ಅಸ್ತು || ಚತುರ ತನದಲಿ ಸಾಧಿಸು ನೀ ವಸ್ತು |ಆದರಿಂದಲಾಗುವದು ಆ ಮನ ಸ್ವಸ್ತು 23 ಪಾತಕ ಬರುವದು ತಿಳಿಯದೆ ಕೋಳಿ || ನೀತಿಯಿಂದಲಿ ತತ್ತ್ವ್ವ ಮಾತನು ಕೇಳಿ | ಘಾತಕ ಯಮ ನಾಳೆ ಬರುವನು ದಾಳಿ 24 ಭವ ಬಿಟ್ಟಿ | ಮಾಡದೆ ದಾನ ಧರ್ಮವ ಕೆಟ್ಟೀ || ಮಾಡಿದುದೆಲ್ಲಾ ನೀ ಜೋಕಿಲಿ ಇಟ್ಟಿ | ಮಾಡಲು ಬಾಧೆಯ ನೀ ಬಾಯ ಬಿಟ್ಟಿ 25 ನೆನೆದರೆ ದೃಢದಲಿ ರಾಮ ನಾಮ | ತನುವಿದು ಮುಂದೆ ಬಾರದು ನೇಮ || ಮನದೊಳು ಪುಟ್ಟಿತು ತಾನೆ ನಿಷ್ಕಾಮ | ಘನಸುಖ ತೋರಿತು ಅದು ಸಾರ್ವಭೌಮ 26 ಹುಟ್ಟಿ ಹುಟ್ಟಿ ನೀ ಯಾತಕೆ ಸತ್ತೀ | ಹುಟ್ಟುತ ಸಾವುತ ನಿತ್ಯದಿ ಅತ್ತೀ || ಹುಟ್ಟು ಸಾವನ್ನು ಕಳೆಯಲೊ ಕತ್ತೀ | ಕೆಟ್ಟಿಯೊ ಇನ್ನಾರ ಬೆಳಿ ಧರ್ಮಾ ಬಿತ್ತೀ 27 ಶಾಸ್ತ್ರ ಪುರಾಣವ ಓದುವಿ ಬರಿದೇ | ಉತ್ತಮ ಸ್ತ್ರೀಯರ ಕಂಡು ನೀ ಕರೆದೆ || ನಿನ್ನೊಳು ತಿಳಿದು ನೀ ನೋಡುದು ಮರೆದೇ | ಸಾಧು ಸಂತರುಗಳ ಸೇವೆಗೆ ಮರೆದೆ 28 ಪಡಿ ಜೋಳಕೊಬ್ಬರ ಅಡಿಗಳ ಹಿಡಿವೆ | ಕೊಡುವದಿಲ್ಲೆಂದರೆ ದವಡಿಯ ಕಡಿವೆ || ಕೊಟ್ಟರೆ ಮನದೊಳು ಸಂತೋಷ ಪಡುವೆ | ಕೆಟ್ಟ ಮಾರ್ಗದಿಂದ ಕಡೆ ತನಕಾ ನಡಿವೆ 29 ಭವ ಪರಿಹರಿಸುವದಿದು ಏನು ಅರಿದು || ಭವದೊಳು ಬಿಟ್ಟರು ನಾಮವ ಮರೆದು | ಭವಕಿನ್ನು ಕರಸ್ಯಾರೊ ಆತನ ಬರದು 30 ಮಾಡಿದೆ ಏನು ಬದುಕನು ಹೇಳು | ಮಾಡಿದುದೆಲ್ಲಾ ತಿಂದೆಲ್ಲಾ ಕೂಳು || ಕೂಳಿಗಾಗಿ ಆದಿ ಒಬ್ಬರ ಆಳು | ನೋಡಿ ಏನು ಸದ್ಗತಿಯ ಹೇಳು 31 ಮನದೊಳು ಗಳಿಸಿದಿ ಕೆಂಚೀ ಹೊನ್ನು | ಗಳಿಸಿದವರು ಏನು ಒಯ್ದಾರು ಇನ್ನು || ಬಿಟ್ಟು ಹೋದರು ಹ್ಯಾಂಗ ಬಲ್ಲೆಲ್ಲಾ ನೀನು | ನಿಷ್ಠೆಯಿಂದಲಿ ಒಮ್ಮೆ ಹರಗುರು ಎನ್ನು 32 ಮಾಡಲಿಲ್ಲ ಒಂದು ನರನಾಗಿ ಯೋಗಾ | ಮಾಡುವಿ ಸುಖವೆಂದು ಸ್ತ್ರೀಯರ ಭೋೀಗಾ | ಆಡಲ್ಯಾಕೆ ಆಯುಷ್ಯ ಹಾರಿತು ಬೇಗಾ | ನೋಡಿಕೊಳ್ಳೊ ಇನ್ನು ತಿಳಿದೀತು ಈಗಾ 33 ಪರಿ ಸಂಸಾರ ಯುಕ್ತಿ | ಮಾಡಲು ಒಲ್ಲ್ಯೋ ಶ್ರೀ ಗುರು ಭಕ್ತಿ || ಹೋಯಿತೊ ದೇಹದೋಳ್ ನಿನ್ನ ಶಕ್ತಿ | ಸಾಧಿಸಲರಿಯೊ ನೀ ಜೀವನ್ಮುಕ್ತಿ 34 ಅನುದಿನ ವೇದಾ | ಸಾಧಿಸಿ ತಿಳಿಯದೆ ಜೀವಶಿವ ಭೇದಾ || ಕಾದಾಡಿ ಕೊಂಬುವದು ಸುಮ್ಮನೆ ವಾದಾ |ಬ್ಯಾಡಿನ್ನು ಶೋಧಿಸು ನಿನ್ನೊಳು ಬೋಧಾ 35 ಭವ ಬೀಜವ ಕೊಂಬೆ 36 ಮಾಯಾ ಮರವನು ತ್ಯಜಿಸು || ಧ್ಯಾನ ಮುದ್ರೆಯೋಳ್ ಮನವನು ನಿಲಿಸು | ಜಗವಿದು ನಿಜವೇ ನೋಡೆಲು ಕನಸು 37 ರೂಪದೊಳಗಿಲ್ಲಾ ಗುಣವೊಂದು ತೃಣವು | ಗುಣದೊಳಗಿಲ್ಲವು ರೂಪದ ಅಣುವು || ರೂಪ ನಾಮಕ್ರಿಯಾ ಆದೀತು ಹೆಣವು | ಆ ಪರಬ್ರಹ್ಮನೆ ತಿಳಿಯಿನ್ನು ಪ್ರಣವು 38 ಪಾದ | ಅರಿತು ಪೂಜಿಸಿದವ ಪರಶಿವನಾದ || ಅನುಭವಿ ಬಲ್ಲನು ಆ ಸುಖ ಸ್ವಾದ | ತನ್ನೊಳು ಆಲಿಸುತಲಿ ನಿಂತ ನಾದ 39
--------------
ಭಾವತರಕರು
ಗುರು ಪ್ರಜ್ಞಾನಿಧಿ ತೀರ್ಥ ಚರಣಾಬ್ಜ ಸೇವೆಯ ನಿರುತ ನೀಡಯ್ಯ ಯತಿವರ್ಯ ಯತಿವರ್ಯ ಪೂರ್ಣಪ್ರಜ್ಞಾರ್ಯರ ತತ್ತ್ವವರುಹಯ್ಯ ಅರುಹಯ್ಯ 1 ಕರುಣಾನಿಧಿಯೆ ನಿನ್ನ ಕಾರುಣ್ಯಕೆಣೆಯೆ ಶ್ರೀ ಕಾರುಣ್ಯ ವಿಠಲನಾ ದಯಾಪಾತ್ರ ದಯಾಪಾತ್ರ ಎನ್ನ ತಾಪತ್ರಯವ ಎನ್ನ ತಾಪತ್ರಯವ ಹರಿಸಿ ಸಲಹಯ್ಯ 2 ಶರಧಿ ದಾಟಿದ ಧೀರಾ ಗುರುತೂರ್ಯ ಶ್ರಮವಹಿಸಿ ಮೆರೆಯುವೆ ಮೆರೆಯುವೆ 3 ಮಾರ್ಗದೊಳು ಬರುತಿಹ ದುರ್ಮಾರ್ಗವನು ಜರಿದು ಸ ಯತಿವರ್ಯ ಎನ್ನ ಭವ ದುರ್ಗವನೆ ಹರಿಸಿ ಸಲಹಯ್ಯ ಸಲಹಯ್ಯ 4 ಗುರುವೆ ನಿನ್ನಯ ಕರುಣ ಕವಚವನೆ ತೊಡಿಸಯ್ಯ ಕಾರುಣ್ಯ ವಿಠಲನ ಅರ್ಚಿಪೆ ಅರ್ಚಿಪಾ ನಿನ್ನೊಳು ಕರುಣಾರಸಕೆ ಕುಂದುಂಟೆ ಕುಂದುಂಟೆ 5 ಹಿಂದಿಲ್ಲ ಮುಂದಿಲ್ಲ ಒಂದು ಬೋಧಿಪೋರಿಲ್ಲ ಮುಂದೆ ಬಾ ಎನ್ನುವರು ಮೊದಲಿಲ್ಲ ಮೊದಲಿಲ್ಲ ಇಂದು ನಾ ಮಂದನಾಗಿಹೆ ಎನ್ನ ಕರುಣಿಸೋ ಕರುಣಿಸೋ 6 ಬಂದುದಾಯಿತು ಜನ್ಮ ಸಂದು ಹೋಯಿತು ಆಯು ಕುಂದಿತೆನ್ನಯ ಕರಣ ಇಂದಿನಾ ಇಂದಿನಾ ಪರಿ ಪಥವೆನಗೆ ತೋರಯ್ಯ ತೋರಯ್ಯ7 ಮಂಕು ಮಾನವನ ಮನ ಡೊಂಕವನೆ ತಿದ್ದಿ ಶ್ರೀ ವೇಂಕಟೇಶನ ಭಕ್ತನೆನಿಸಯ್ಯ ಎನಿಸಯ್ಯ ನಿನ್ನಾ ಕಿಂಕರೊಳಗೆ ಕಿಂಕರನೆನಿಸಯ್ಯ 8 ಕಾರುಣ್ಯವಿಠಲಾಭಿನ್ನ ಶ್ರೀ ಉರಗಾದ್ರಿವಾಸವಿಠಲನ ನಿಜದಾಸ ನಿಜದಾಸ ನೀ ಪರಮೋದಾರ ಗುರುವರ್ಯ ಯತಿವರ್ಯ 9
--------------
ಉರಗಾದ್ರಿವಾಸವಿಠಲದಾಸರು
ಜಯ ಜಯ ಮಂಗಳಜಯ ಮಂಗಳ ಶುದ್ಧಾದೈತನಿಗೆ ಪ ಅಗಣಿತ ಮಹಿಮಗೆ ಅಕ್ಷಯರೂಪಗೆಅಖಂಡ ಸಹಜಾನಂದನಿಗೆಝಗಿ ಝಗಿತಾತ್ಮಗೆ ಝಳುಕಿಸಿ ಕರ್ಣದಿಝಣನಾದವ ಕೇಳ್ವನಿಗೆಸೊಗಯಿಸಿ ಚಂದ್ರನ ಶತಕೋಟಿಯಪ್ರಭೆ ಸಾರವ ಸವಿಸವಿದುಣ್ಣುವಗೆಬಗೆ ಆನಂದದಿ ಸುಖಿಸುವ ದೇವಗೆಭಾಸ್ಕರ ತೇಜಃಪುಂಜನಿಗೆ1 ನಿತ್ಯಾನಂದಗೆ ನಿರ್ಮಲರೂಪಗೆನಿಶ್ಚಲ ಪರಬ್ರಹ್ಮಾತ್ಮನಿಗೆನಿತ್ಯಶುದ್ಧಗೆ ನಿಜನಿರ್ಮಾಯಗೆನಿಜಬೋಧ ಜ್ಞಾನೈಕ್ಯನಿಗೆಪ್ರತ್ಯಗಾತ್ಮಗೆ ಪೂರ್ಣಬ್ರಹ್ಮನಿಗೆಪರಮ ಪರತರ ಪಂಡಿತಗೆನಿತ್ಯತೃಪ್ತಗೆ ನಿಗಮಾಗಮನಿಗೆನಿಶ್ಚಿಂತಾತ್ಮ ನಿಸ್ಪøಹಗೆ 2 ಕೈಯಲಿ ಪಿಡಿದಿಹ ಜಪಮಾಲೆಯಸರ ಕರ್ಣಕುಂಡಲವಿಟ್ಟಿಹಗೆಮೈಯೊಳು ಪೊದ್ಹಿಹ ಕಾಷಾಯಂಬರಮಿರುಪಿನ ಕೌಪೀನವುಟ್ಟಿಹಗೆಮೈಯೊಲೆದಾಡುವ ಸ್ವಾತ್ಮಾನಂದದಿನಲಿವ ಸದ್ಗುಣ ಶಾಂತನಿಗೆಮೈಯನೆ ಸದ್ಗತಿ ಭಕ್ತರಿಗೀಯುವವ್ಯಾಪಿತ ಜೀವನ್ಮುಕ್ತನಿಗೆ3 ಆರವಸ್ಥೆಯ ಧರಿಸಿಯೆ ಜಗದಲಿಅನಂತರೂಪ ತಾನಾಗಿಹಗೆಮೀರಿಯೆ ಸದ್ಗುಣ ನಿರ್ಗುಣ ರೂಪವಮೆರೆದಿಹ ಮುಮುಕ್ಷಾಂಗನಿಗೆತೋರುವ ತ್ವಂಪದ ತತ್ತ್ವಮಸಿಪದತೋರಿ ವಿರಾಜಿಪ ತುಷ್ಟನಿಗೆಧೀರೋದ್ಧಾರಗೆ ದೀನರನಾಥಗೆದೃಶ್ಯಾದೃಶ್ಯ ವಿದೂರನಿಗೆ 4 ನಿರುಪಮ ನಿರಮಯ ನಿಜ ನಿರ್ಲಿಪ್ತಗೆನಿರ್ಭಯ ನಿರ್ವಿಕಲ್ಪನಿಗೆಪರಮಪುರುಷಗೆ ನಿಗಮೋದರನಿಗೆಪರಮಾರೂಢಾ ಮಾರ್ಗನಿಗೆಗುರುಚಿದಾನಂದ ಅವಧೂತಾತ್ಮಗೆಗುಣನಿಧಿ ತುರಿಯಾತೀತನಿಗೆಸ್ಥಿರಸಿದ್ಧ ಪರ್ವತದಾಸ ಶ್ರೀಪುರುಷಗೆಬಗಳಾ ಶ್ರೀಗುರು ರೂಪನಿಗೆ 5
--------------
ಚಿದಾನಂದ ಅವಧೂತರು
ಜಯತೀರ್ಥ ಮುನಿವರ್ಯ ಪ ದಯತೋರಿ ಪೊರೆಯಯ್ಯ ವಿಜಯಸಾರಥಿಪ್ರಿಯ ಅ.ಪ ಶ್ರೀಶಶಯನಾವೇಶ ಮಹೇಶ ಪ್ರತಿಬಿಂಬ ಸು ರೇಶ ಯತಿಕುಲಾಧೀಶ ಪಾಲಿಸಯ್ಯ ಏಸು ನಿನ್ನಯ ಕರುಣರಾಶಿ ಎಂತಿಹುದಯ್ಯ ಆಸೆ ಸಲಿಸಲು ಮನೆಗೆ ಲೇಸಾಗಿ ನೀ ಬಂದೆ 1 ಪಶುಪತಿಯ ಮತ ದಹಿಸಿ ಅಸುಪತಿಯ ಮತ ಮೆರೆದೆ ವಸುಮತಿಯ ಸುರನಾಗಿ ಬಂದು ನಿಂದೆ ಪಶುಪ್ರಾಯನೆಂದೆನ್ನ ಉದ್ಧರಿಸಲೋಸುಗದಿ ಬಿಸಜತವಪಾದ ಪಾಂಸವನಿತ್ತೆ 2 ಜಯಗುರುವೆ ಶ್ರೀ ವಿಜಯದಾಸರಲ್ಲೆನ್ನ ಮನೋ ಜಯವು ಪುಟ್ಟಿಸಿದ ನಿನ್ನ ಕರುಣವೆಂತೊ ಸೃಜಿಸಿ ತೋರಿದ ಸ್ವಪ್ನ ನಿಜವು ಆಗಲಿ ಎಂದು ಬಿಜಯ ಮಾಡಿದೆ ನಿನ್ನ ನಿಜದಾಸರೊಡನೆ 3 ಜಯಗುರುವೆ ನಿಮ್ಮ ಹುದ್ಗುಹದಲಿ ನಲಿಯುತಿಹ ವಾಯುವಂತರ್ಗತ ಕೃಷ್ಣನ ತೋರೋ ಜಯತು ಶ್ರೀ ವೇಣುಗೋಪಾಲ ಮೂರ್ತೇ ಜಯತು ಶ್ರೀ ವೇಣುಗೋಪಾಲನೆಂದೆನಿಸಿಯ್ಯ 4 ಸೃಷ್ಟಿಗೆ ಬಂದು ನಾನೆಷ್ಟು ಜನ್ಮವ ಕಳೆದೆ ಪುಟ್ಟಿದೆನೋ ನಾನೀಗ ಈ ಜನ್ಮದಿ ಪುಟ್ಟಲಿಲ್ಲವೋ ಜ್ಞಾನ ಹರಿ ಗುರುಸ್ಮರಣೆಗೆ ಇಟ್ಟಕಡೆಗಣ್ಣÂನೋಳಿಷ್ಟು ನೋಡಯ್ಯ5 ವಾದಿಮಸ್ತಕ ಭೇದಿ ಮೋದತೀರ್ಥರ ತತ್ತ್ವ ಛೇದಿಸಿ ವಾಕ್ ಯುದ್ದ ಯೂಥಪಗಳನೆಲ್ಲ ಗೆದ್ದು ಸತ್ತತ್ತ್ವದಾ ಸಿಂಹನಾದವ ಮಾಡ್ದೆ 6 ಮಧ್ವರಾಯರಿಗೆ ನೀ ಮುದ್ದುಮೊಮ್ಮಗನಯ್ಯ ಸದ್ವಿದ್ವದ್ಗ್ರಂಥ ಭಾರವನೆ ವಹಿಸಿ ಮುದ್ದು ತೊತ್ತೆನಿಸಿ ಎತ್ತಾಗಿ ಸೇವಿಸಿ ಯತಿಯಾಗಿ ನಿಂದ ತತ್ತ್ವಮುತ್ತಿನ ಖಣಿಯೆ 7 ಇಳೆಯೊಳಗೆ ನಿನ್ನಂಥ ಕರುಣಾಳುಗಳ ಕಾಣೆ ಅಳವಲ್ಲ ವರ್ಣಿಸಲು ನಿನ್ನ ಗುಣಗಳನು ಮಳಖೇಡವಾಸ ಯತಿಕುಲಾಧೀಶಾ 8 ಗುರುವೆ ನಿನ್ನಯ ಕರುಣಕವಚ ತೊಟ್ಟವರ ಚರಣಕಮಲದೊಳಿಹ ಮಧುಪನೆಂದೆನಿಸೋ ನಿರುತ ದೃಢಭಕುತಿ ಶ್ರೀ ವೇಂಕಟೇಶನೊಳಿಟ್ಟುಪೊರೆಯೊ ಶ್ರೀ ಗುರುವರಾಗ್ರಣಿಯೆ ನಮೋ ಎಂಬೆ9
--------------
ಉರಗಾದ್ರಿವಾಸವಿಠಲದಾಸರು
ಜಯತು ಸೀತಾರಾಮ ರಾಮ ಚರ- ಣಾರವಿಂದದ ಭಕ್ತಿ ದೃಢವಾಗಿ ಕೊಡು ಜಯ ರಾಮ ರಾಮ ಕ್ರೂರಕಾಮಾದಿಗಳ್ಸೂರೆಗೊಂಬರು ಸೀತಾರಾಮ ರಾಮ ರಾವ- ಣಾರಿ ನೀನಲ್ಲದೆ ಯಾರಿಲ್ಲ ಗತಿ ಜಯ ರಾಮ ರಾಮ 1 ಬುದ್ಧಿ ಜ್ಞಾನ ಶಕ್ತಿ ಸಿದ್ಧಿದಾಯಕ ಸೀತಾರಾಮ ರಾಮ ಗುಣ- ವೃದ್ಧಿಕಾರಣ ಭಕ್ತಿಶ್ರದ್ಧೆಯ ಕೊಡು ಜಯ ರಾಮ ರಾಮ ಬಿದ್ದೆನಜ್ಞಾನಸಮುದ್ರಮಧ್ಯದಿ ಸೀತಾರಾಮ ರಾಮ ಎನ್ನ- ನುದ್ಧರಿಸುವರೆ ಪ್ರಸಿದ್ಧ ನೀನೆ ಜಯ ರಾಮ ರಾಮ 2 ನಿನ್ನ ನಾಮವೆ ಪ್ರಸನ್ನ ಪಾವನ ಸೀತಾರಾಮ ರಾಮ ಸ- ರ್ವೋನ್ನತ ಮಹಿಮವರೇಣ್ಯ ಶಾಶ್ವತ ಜಯ ರಾಮ ರಾಮ ನಿನ್ನಾಧೀನವು ನಿಖಿಲ ಜಗವು ಸೀತಾರಾಮ ರಾಮ ಪರಿ- ಪೂರ್ಣಾತ್ಪೂರ್ಣವರೇಣ್ಯ ಶಾಶ್ವತ ಜಯ ರಾಮ ರಾಮ 3 ಸ್ವಾಂತರಂಗಭಕ್ತಿಚಿಂತಾಮಣಿ ಸೀತಾರಾಮ ರಾಮ ಆತ್ಮ- ತಂತ್ರನಿಯಂತ್ರ ಸರ್ವಾಂತರಾತ್ಮಕ ಜಯ ರಾಮ ರಾಮ ಭ್ರಾಂತಿ ತ್ಯಜಿಸುವುದಕೆಂತುಪಾಯವು ಸೀತಾರಾಮ ರಾಮ ಏ- ಕಾಂತಸ್ಮರಣೆಯ ನಿರಂತರ ಕೊಡು ಜಯ ರಾಮ ರಾಮ 4 ಸೀತಾರಾಮ ರಾಮ ದುಷ್ಟ- ರಕ್ಕಸಾಳಿಯ ಸೊಕ್ಕಡಗಿತು ಜಯ ರಾಮ ರಾಮ ಕರ್ಕಶಕಲಿಕಾಲ ಮಿಕ್ಕಿ ಬಂದುದು ಸೀತಾರಾಮ ರಾಮ ಮನ- ಸೊಕ್ಕಿ ಮೋಹದ ಬಲೆಗೆ ಸಿಕ್ಕಿಬಿದ್ದುದು ಜಯ ರಾಮ ರಾಮ 5 ದಾಸಜನರ ಹೃದಯಸ್ಥಿತ ಸೀತಾರಾಮ ರಾಮ ಶ್ರೀನಿ- ವಾಸ ನಿನ್ನವರಭಿಲಾಷೆಯ ಕೊಡು ಜಯ ರಾಮ ರಾಮ ಸೀತಾರಾಮ ರಾಮ ಸಾಧು- ವಾಸಸಂತೋ ಪ್ರಕಾಶವ ಕೊಡು ಜಯ ರಾಮ ರಾಮ 6 ಜ್ಞಾನವಜ್ಞಾನವು ಭಾನುತಿಮಿರ ಸೀತಾರಾಮ ರಾಮ ಸತ್ಯ- ಜ್ಞಾನ ಭಕ್ತಿಭಾಗ್ಯ ನೀನಿತ್ತು ಪೊರೆ ಜಯ ರಾಮ ರಾಮ ಹೀನರೈವರು ಸ್ವಾಧೀನಗೊಂಬರು ಸೀತಾರಾಮ ರಾಮ ಪವ- ಮಾನವಾಹನ ನಿನ್ನ ಧ್ಯಾನವ ಕೊಡು ಜಯ ರಾಮ ರಾಮ 7 ಚಿತ್ತಕೆ ನಿಲವಿಲ್ಲ ಚಿಂತೆ ಹಲವು ಸೀತಾರಾಮ ರಾಮ ತವ ಭೃತ್ಯನಾಗಿರುವ ಸದ್ಭಕ್ತಿಯ ಕೊಡು ಜಯ ರಾಮ ರಾಮ ಸೀತಾರಾಮ ರಾಮ ಪರ- ವಸ್ತುತ್ವದೇಕಾಸಕ್ತಿಯ ಕೊಡು ಜಯ ರಾಮ ರಾಮ 8 ಆಧಿವ್ಯಾಧಿ ಭವಾಂಬೋಧಿಕುಂಭಜ ಸೀತಾರಾಮ ರಾಮ ತವ ಪಾದಾಂಭೋಜಪ್ರಸಾದಪಾಲಿಸು ಜಯ ರಾಮ ರಾಮ ಸಾಧುಸಂಗಸುಖಬೋಧೆಯ ಕೊಡು ಸೀತಾರಾಮ ರಾಮ ಕಲಿ- ಬಾಧೆ ಪರಿಹರಿಪ ಹಾದಿ ತೋರಿಸು ಜಯ ರಾಮ ರಾಮ 9 ಧ್ಯಾನವಿರಲಿ ಎನ್ನ ಮಾನಸದಲಿ ಸೀತಾರಾಮ ರಾಮ ವಿಷ ಯಾನುಭವದಿ ಬಲು ಹಾನಿಯಾದೆನು ಜಯ ರಾಮ ರಾಮ ದೀನಜನರ ಕಾಮದೇನು ರಘುವರ ಸೀತಾರಾಮ ರಾಮ ಖಲ- ದಾನವಾರಣ್ಯಕೃಶಾನು ಮಾನದ ಜಯ ರಾಮ ರಾಮ 10 ದುಷ್ಟರ ಸಂಗದಿಂದೆಷ್ಟೊ ನೊಂದೆನು ಸೀತಾರಾಮ ರಾಮ ಸುವಿ- ಶಿಷ್ಟರ ಸಂಗವ ಕೊಟ್ಟು ಸಲಹೊ ಜಯ ರಾಮ ರಾಮ ಭ್ರಷ್ಟ ಪ್ರಕೃತಿಯನ್ನು ಕುಟ್ಟಿ ಕಳಚು ಸೀತಾರಾಮ ರಾಮ ಪರ- ಮೇಷ್ಟ್ಯಾದಿ ಸುಮನಸರಿಷ್ಟದಾಯಕ ಜಯ ರಾಮ ರಾಮ 11 ತನ್ನ ಕೇಡು ತಾನರಿಯದಾದೆ ಸೀತಾರಾಮ ರಾಮ ಸುಪ್ರ- ಸನ್ನ ನಿನ್ನ ಸ್ಮರಣೆಯನಿತ್ತು ಪೊರೆ ಜಯ ರಾಮ ರಾಮ ಹಣ್ಣೆಂದು ದೀಪವ ತಿನ್ನ ಪೋದೆನು ಸೀತಾರಾಮ ರಾಮ ಹೆಣ್ಣು ಹೊನ್ನಿಗಾಗಿ ಪರವನ್ನು ಮರೆತೆ ಜಯ ರಾಮ ರಾಮ 12 ನಿತ್ಯ ನಿನ್ನ ದಾಸ್ಯವಿತ್ತು ರಕ್ಷಿಸು ಸೀತಾರಾಮ ರಾಮ ಯಾವ- ಚ್ಚಿತ್ತ ತವ ಧ್ಯಾನದಿ ತೃಪ್ತಿಯಾಗಲಿ ಜಯ ರಾಮ ರಾಮ ಸತ್ಯಾತ್ಮರ ಸಂಗಸತ್ವ ವರ್ಧಿಸು ಸೀತಾರಾಮ ರಾಮ ಪರ- ಮಾರ್ಥವಿಚಾರ ಸತ್ತತ್ತ್ವವರುಹು ಜಯ ರಾಮ ರಾಮ 13 ಕರ್ತಾಕಾರಯಿತನು ಭರ್ತಾರನು ಸೀತಾರಾಮ ರಾಮ ಪುರು- ಷಾರ್ಥರೂಪ ತವ ಭಕ್ತಿ ಪ್ರಾರ್ಥನೆ ಜಯ ರಾಮ ರಾಮ ಪ್ರತ್ಯಗಾತ್ಮ ಮನೋವೃತ್ತಿಯೊಳಿರು ಸೀತಾರಾಮ ರಾಮ ಸ್ವಾಮಿ- ಭೃತ್ಯನ್ಯಾಯದಿ ನಿಯಮಿಸುತ್ತ ನಡೆಸು ಜಯ ರಾಮ ರಾಮ 14 ಸೀತಾರಾಮ ರಾಮ ವಾಯು- ಸಖಸ್ಪರ್ಧಾತ್ಮಕ ಸಾಧುಪ್ರಕೃತಿಪಾಲಿಸು ಜಯ ರಾಮ ರಾಮ ಸೀತಾರಾಮ ರಾಮ ಬ್ರಹ್ಮಾ- ದ್ಯಖಿಳ ಚೇತನಾತ್ಮಕ ಸರ್ವೋತ್ತಮ ಜಯ ರಾಮ ರಾಮ 15
--------------
ತುಪಾಕಿ ವೆಂಕಟರಮಣಾಚಾರ್ಯ
ಜೀವ ನಿಮ್ಮದೊ ಗುರು ಭಾವ ನಿಮ್ಮದೊ ಜೀವ ಭಾವದ ಶಿವಸೂತ್ರ ನಿಮ್ಮದೊ ಧ್ರುವ ಕಾಯ ಮಾಯ ನಿಮ್ಮದು ಅಂತ್ರ ಬಾಹ್ಯ ನಿಮ್ಮದು ನಿರ್ಮಿಸಿಹ್ಯ ಇದು ಉಪಾಯ ನಿಮ್ಮದು 1 ಪೃಥ್ವಿ ಅಪ್ಪು ನಿಮ್ಮದು ತೇಜ ತತ್ತ್ವ ನಿಮ್ಮದು ವಾಯುವಾಕಾಶವೆ ತಾ ತತ್ತ್ವನಿಮ್ಮದು 2 ಪ್ರಾಣವೇ ನಿಮ್ಮದು ಪಾನವೇ ನಿಮ್ಮದು ವ್ಯಾನ ಉದಾನ ಸಮಾನ ನಿಮ್ಮದು 3 ಅಂತಃಕರಣ ನಿಮ್ಮದು ಬುದ್ದಿಮನ ನಿಮ್ಮದು ಚಿತ್ತ ಚೈತನ್ಯ ಚೇತನ ನಿಮ್ಮದು 4 ನುಡಿನೋಟ ನಿಮ್ಮದು ಆಟಕೂಟ ನಿಮ್ಮದು ಕರ್ನ ಕೇಳಿಕೆಯಾಟವು ನಿಮ್ಮದು 5 ಸ್ಥೂಲ ಸೂಕ್ಷ್ಮ ನಿಮ್ಮದು ಕಾರಣವು ನಿಮ್ಮದು ಮಹಾ ಕಾರಣವು ಆನಂದ ನಿಮ್ಮದು6 ಜಾಗ್ರತೆ ನಿಮ್ಮದು ಶೀಘ್ರತಿ ನಿಮ್ಮದು ಪ್ರವೃತ್ತಿನಿವೃತ್ತಿ ಸುವ್ಯಕ್ತಿ ನಿಮ್ಮದು 7 ಸ್ವಪ್ನಾವಸ್ಥೆ ನಿಮ್ಮದು ಸುಷಪ್ತಿ ನಿಮ್ಮದು ಸರ್ವಾವಸ್ಥೆಗಳ ಲಕ್ಷಣ ನಿಮ್ಮದು 8 ಅರಹು ಮರಹು ನಿಮ್ಮದು ಖೂನ ಕುರಹು ನಿಮ್ಮದು ಸೂತ್ರ ನಿಮ್ಮದು 9 ಇಹಪರ ನಿಮ್ಮದು ಸಾಹ್ಯ ಸರ್ವ ನಿಮ್ಮದು ಗುಹ್ಯ ಗುರುತ ದೋರುವ ಸೋಹ್ಯ ನಿಮ್ಮದು 10 ಮಹಿಪತಿ ಜೀವ ನಿರ್ಮಿತ ಙÁ್ಞತಿ ನಿಮ್ಮದು ಸದ್ಗತಿಗೈಸುವ ಖ್ಯಾತಿ ನಿಮ್ಮದು 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜೋ ಜೋ ಜೋ ಜೋ ಜೋ ಎನ್ನ ಗುರುವೆ ಜೋ ಜೋ ಜೋ ನಿಜ ಕಲ್ಪತರುವೆ ಜೋ ಜೋ ಎಂದು ಜನ್ಮಕ್ಕೆ ಬರುವೆ | ಜೋ ಜೋ ನಿಮ್ಮ ಚರಣದಲ್ಲಿರುವೆ ಜೋ ಜೋ ಪ ಅಷ್ಟ ಸಿದ್ಧಿಗಳೆಲ್ಲ ಬಡ್ಡಿಯ ಕೊರೆಸಿ | ಗಟ್ಟ್ಯಾಗಿ ವೇದದ ಕಾಲವ ನಿಲ್ಲಿಸಿ ಅಷ್ಟತತ್ತ್ವದ ಹುರಿ ಹೆಣಿಕಿಲಿ ಬಿಗಿಸಿ | ತೊಟ್ಟಿಲೊಳರುವಿನ ಹಾಸಿಗೆ ಹಾಸೀ || ಜೋ ಜೋ 1 ಸಾಧನ ನಾಲ್ಕೆಂಬೋ ಹಗ್ಗವ ಹೊಸೆದು | ಬೋಧದ ಗಂಟು ತುದಿಯಲ್ಲಿ ಬಿಗಿದು | ನಾದ ಅನಾಹತ ಗಂಟೆಯ ಹೊಡೆದು | ಆದಿ ಗುರುವಿನ ಮಲಗಲಿ ಕರೆದು || ಜೋ ಜೋ || 2 ಕಾಲಿಗೆ ಯೋಗದ ಪಾಶವ ಕಟ್ಟಿ | ಮೂಲೈದು ಬ್ರಹ್ಮರಂಧ್ರಕ್ಕೆ ಮುಟ್ಟಿ | ಮೇಲಿನ ಜೋತೆಗೆ ಭಾಸದ ಬುಟ್ಟಿ | ಲೀಲೆಯಿಂದಲಿ ನೋಡು ಗುರುವಿನ ದೃಷ್ಟಿ || ಜೋ ಜೋ 3 ಮನಸೀಗೆ ಬಾರದ ಮಾತುಗಳಾಡಿ |ನೆನೆಹಿಗೆ ನಿಲ್ಕದ ನಿತ್ಯನ ಕೂಡಿ | ಕನಸು ಎಚ್ಚರದ ಗಾಢವ ನೋಡಿ |ಉನ್ಮನಿ ಬೆಳಗುವ ಮೂರ್ತಿಯ ಪಾಡಿ || ಜೋ ಜೋ 4 ಭಕ್ತಿ ವಿರಕ್ತಿಗೆ ಸಿಲ್ಕುವನೀತಾ | ಸತ್ಯ ಶರಣ್ಯ ಸದ್ಗುರು ನಾಥಾ | ಕರ್ತೃತ್ವ ಇಟ್ಟನು ಮೌನದಲ್ಲೀತಾ | ವೃತ್ತಿ ವಿರಹಿತ ಗಿರಿ ಪಾಲಿಸು ಗುರುತಾ || ಜೋ ಜೋ 5
--------------
ಭೀಮಾಶಂಕರ
ಜೋ ಜೋ ಜೋ ಶ್ರೀ ಆತ್ಮಾರಾಮಾ | ಜೋ ಜೋ ಜೋ ನೀ ಸುಖ ಧಾಮಾ | ಜೋ ಜೋ ಸಾಧು ಸಜ್ಜನ ಪ್ರೇಮಾ | ಜೋ ಜೋ ಸಾಧು ಸಿದ್ಧ ಜ್ಞಾನಿ ನಿಃಸೀಮಾ ಪ ಪಂಚಭೂತ ರತ್ನ ತೊಟ್ಟಿಲು ಮಾಡಿ | ಪಂಚ ವಿಂಶತಿ ತತ್ತ್ವ ನವಾರ ಹೂಡಿ | ಪಂಚಕೋಶವೆಂಬೊ ಹಾಸುಕೆ ನೋಡಿ |ಪಂಚ ತತ್ತ್ವಾತೀತ ಮೂರ್ತಿಯ ಪಾಡಿ | ಜೋ ಜೋ | 1 ನಿತ್ಯ ಪರ ಸಚ್ಚಿದಾನಂದ ಕೀರ್ತಿಪ್ರತಾಪ | ಉರುತರ ಮಹಿಮನೆ ವಿರಹಿತ ಪಾಪ |ಶರಣ ಧ್ಯಾನಿಪ ನಿಜ ಹೃದಯ ಚಿದ್ದೀಪ || ಜೋ ಜೋ 2 ನಿರುತ ಸಿಂಧುಗಿ ಸಖ ಯತಿರಾಜ ಪುಂಗ | ಪರಿಪರಿ ವರವೀವ ಸಾಮಥ್ರ್ಯಸಂಗ | ಕರುಣಿಸೊ ಬೇಗದಿ ಗುರು ಕುಲೋತ್ತುಂಗ | ಧರೆಯೋಳ್ಯಾಳಗಿ ಶ್ರೀ ಗುರುರಾಮಲಿಂಗ 3
--------------
ಗುರುರಾಮಲಿಂಗ
ಟೀಕಾಕೃತ್ಪಾದ ಕರುಣಾಕರ ಗುರು ಶ್ರೀಕಾರಸರಿತವಾಸ ನಾಕಾಧಿಪನೆ ಮನಶೋಕಾ ಹರಿಸಿ ನಿತ್ಯ 1 ಪೂರ್ಣಬೋಧರ ಮತಾರ್ಣವಚಂದಿರ ನಿರ್ಣಯಿಸಿದೆ ಟೀಕಾರ್ಣವದೊಳು ಸುಧ ಉಣ್ಣಿಸಿದೆಯೊ ಗ್ರಂಥ ವರ್ಣಿಸಿಇರುವೆ ಸತ್ಯ 2 ಮಿಥ್ಯಾವಾದಿಗಳ ಸತ್ಯ ತತ್ತ್ವವೆಲ್ಲ ಕತ್ತರಿಸಿದೆ ನಿತ್ಯ ದೈತ್ಯೋನ್ಮತ್ತರನೆಲ್ಲಾ ಸದೆದೆ3 ನಾಕಾಪತಿಗೆ ದೈತ್ಯಲೋಕಗಳಾ ಬಾಧೆ ತಾ ಕಳೆಯಲು ನಿತ್ಯ ಶ್ರೀಕರದಮೃತವ ಶ್ರೀಕಾಂತನಿತ್ತಂತೆ ನೀ ಸುಧೆಯನು ತಂದೆ 4 ದಶಪ್ರಮತಿಸುಶಾಸ್ತ್ರಶರಧಿಯೊಳು ವಾಸಿಸುವೆಯೊ ನಿತ್ಯ ಮೀಸಲಮನ ಕೊಟ್ಟೆನ್ನಾಸೆಯ ಹ ರಿಸಿ ಪದಸೇವೆಯ ಕೊಡೊ ನಿತ್ಯ5 ಪಾಕಶಾಸನ ಸುಖ ಬೇಕಾಗಿ ತೊರೆದು ನೀ ನೇಕಾಂತದಲಿ ನಿಂತೇ ಲೋಕಸುಖದಿ ಭವಶೋಕದಲ್ಲಿಹ ಎ ನ್ನ ಕಾಪಾಡುವುದು ನಿತ್ಯ6 ಶೇಷಾವೇಶ ಆವೇಶಾಮಹಿಮ ಎನ್ನ ದೋಷರಾಶಿಯ ಕಳೆದು ಶೋಷಿಸು ಮನಕಲ್ಮಷವಿಷವನೆಲ್ಲ ನಿ ಶ್ಶೇಷವ ಮಾಡಿ ಸಲಹೊ 7 ಹಲವು ವಿಷಯದ ಹಂಬಲದಿಂದ ಎನ್ನ ಜ್ಞಾನ ಹೊಲಬುಗೆಟ್ಟುದು ನಿತ್ಯ ಅಲವಬೋಧರ ತತ್ತ್ವ ಲವಮಾತ್ರವಾದರು ನೀ ಎನಗೆ ಪಾಲಿಸೊ8 ಮುಕ್ತಿಮಾರ್ಗಕೆ ಜ್ಞಾನಭಕ್ತಿವೈರಾಗ್ಯಗುರು ಭಕ್ತಿಯೆ ಮುಖ್ಯಕಾರಣ ಯುಕ್ತಶಾಸ್ತ್ರ ಪ್ರಸಕ್ತಿ ಇಲ್ಲದ ತ್ವ ದ್ಭಕ್ತನಾದೆನ್ನ ಸಲಹೊ9 ಅಕ್ಷೋಭ್ಯ ಕಟಾಕ್ಷದಿ ಯತಿ ಹ ರ್ಯಕ್ಷನಾಗಿಹೆ ದೀಕ್ಷಾ ಶಿಕ್ಷೆಮಾಡಿ ಪರಪಕ್ಷವಾದಿಗಳನ್ನು ಸ ತ್ಶಿಕ್ಷಕನಾಗಿ ಮೆರೆದೆ10 ಮರುತಾಂತರ್ಗತ ಶ್ರೀ ವೇಂಕಟೇಶನ ಪಾದ ಚರಣಕಮಲಮಧುಪ ನಿರುತ ನೀ ಕರುಣಿಸು ಉರಗಾದ್ರಿವಾಸವಿಠಲನ ನಿಜದಾಸ 11
--------------
ಉರಗಾದ್ರಿವಾಸವಿಠಲದಾಸರು
ತತ್ತ್ವ ತಿಳಿಯದು ಅಹಂಮತ್ವ ಅಳಿಯದನಕ ಧ್ರುವ ವಿದೇಹ ಸುದೇಹಾಗದನಕ ಸಂದೇಹ ಸಂಶಯ ಸಂಕಲ್ಪ ಹೋಗದನಕ 1 ಪ್ರವೃತ್ತಿ ನಿವೃತ್ತಿ ಸುವೃತ್ಯಾಗಕನಕ ಸ್ವಪ್ನ ಸುಷಪ್ತಿ ಜಾಗ್ರ್ಯತ್ಯಾಗದನಕ 2 ದೃಷ್ಟ ಅದೃಷ್ಟ ಸದ್ರಷ್ಟಾಗದನಕ ದುಷ್ಟನಷ್ಟಗಳ ಸಂಕಷ್ಟೋಗದನಕ 3 ಲಬ್ಧ ಅಲಬ್ಧ ಪ್ರಾಲಬ್ಧಾಗದನಕ ಶಬ್ಧ ನಿಶ್ಯಬ್ಧ ಸುಶಬ್ದಾಗದನಕ 4 ಭಾವ ಅಭಾವ ಸ್ವಭಾವಾಗದನಕ ಮಾಯ ಮೋಹದ ಮನೆಯು ಮುಕ್ಕಾಗದನಕ 5 ಸದ್ಗುರು ದಯಕರುಣ ಕೃಪೆ ಅಗದನಕಮಹಿಪತಿ ನಿನ್ನೊಳು ನೀ ಬೆರಿಯತನಕ 6
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತನ್ನ ತಾ ತಿಳಿದು | ಧನ್ಯನಾಗೊ ಬಗೆ ಇದು | ಖಿನ್ನವಳಿದು ಪೂರ್ಣ ಬ್ರಹ್ಮವನ್ನು ಕಾಂಬುದು ಪ ತತ್ತ್ವ ಶಾಸ್ತ್ರವನ್ನು ಓದಿ | ಭಕ್ತಿಯಿಂದ ಮನನ ಮಾಡಿ | ಯುಕ್ತಿ ಭಾವವೆಲ್ಲ ಕಳೆದು ಮುಕ್ತನಾಗುತಾ || ನಿತ್ಯವಾದ ವಸ್ತು ತಾನೆ | ಮತ್ತೆ ಬೇರೆ ಇಲ್ಲವೆಂದು | ಸತ್ಯ ಶರಣರಡಿಯ ಪಿಡಿದು ಚಿತ್ತದಲ್ಲಿ ನಲಿವುದು 1 ಆಶೆ ಮೂರರಲ್ಲಿ ಇನ್ನು | ಬೇಸರಾಗಿ ವಿಷಯದ | ವಾಸನೆಗಳ ಜರಿದು ಪಾಶ ಕ್ಲೇಶವಳಿಯುತ || ನಾಸಿಕಾಗ್ರದಲ್ಲಿ ಮನವ | ಸೂಸದಂತೆ ನಿಲಿಸಿ ಜಗ- | ದೀಶನಾಟವನ್ನು ನೋಡಿ ನಾದ ಘೋಷ ಕೇಳ್ವುದು 2 ಹಿಂದೆ ಒಂದು ನೆನೆಸದಿನ್ನು | ಮುಂದೆ ಉಳಿದ ಕರ್ಮವನ್ನು | ಬಂದುದೆಲ್ಲ ಉಂಡು ಗೆದ್ದು ಹರುಷದಿಂದಲಿ || ತಂದೆ ಭವತಾರಕನ | ಹೊಂದಿ ಸದಾನಂದದಿಂದ | ಮುಂದೆ ಭವಕೆ ಬೀಳದಂತೆ ಛಂದದಿಂದ ನಲಿವುದು 3
--------------
ಭಾವತರಕರು
ತನ್ನ ತಾನು ಕಂಡರೆ ಜೀವಶಿವರೆಂಬ ಭೇದವೆಲ್ಲಿಹುದೋ ಪ ಶ್ರವಣ ಮನನ ನಿದಿಧ್ಯಾಸವು ಬಲಿದರೆ | ಭುವನದ ಜನಪದ ಪುಸಿಯಹುದೊ 1 ರೂಪನಾಮಕ್ರಿಯಾ ವರ್ಣಗಳು | ಕಾಯದಿ ತೋರಲು ನಿಜವಲ್ಲಾ 2 `ತತ್ತ್ವಮಸಿ’ ಮಹಾ ವಾಕ್ಯವು ಬಂದರೆ | ಮಿಥ್ಯೆಗಳೆಲ್ಲಾ ನೀಗುವವು 3 ಆಗಮದಲಿ ಶಿವಯೋಗವ ಮಾಡಲು | ಈಗಲೆ ಜೀವನ್ಮುಕುತಿಯು ಸಿಗುವದೊ 4 ಭವತಾರಕನ ಕರುಣವ ಪಡೆದರೆ | ಜನನ ಮರಣ ಭಯ ಹಿಂಗುವದೊ 5
--------------
ಭಾವತರಕರು