ಜನನಿ ರುದ್ರಾಣಿ ರಕ್ಷಿಸು ಎನ್ನ
ಜಗದೀಶನ ರಾಣಿ ಪ.
ವನಜಭವಸುರಮುನಿಕುಲಾರ್ಚಿತೆ
ಕನಕವರ್ಣಶರೀರೆ ಕಮಲಾ-
ನನೆ ಕರುಣಾಸಾಗರೆ ನಮಜ್ಜನ-
ಮನಮುದಾಕರೆ ಮಾನಿತೋದ್ಧರೆ ಅ.ಪ.
ಆದಿಕೃತಾಯುಗದಿ ಪ್ರತಿಷ್ಠಿತ-
ಳಾದೆ ಧರಾತಳದಿ
ಆದಿತೇಯರ ಬಾಧಿಸುವ ದಿತಿ-
ಜಾಧಮರ ಭೇದಿಸಿದೆ ಸಜ್ಜನ-
ರಾದವರ ಮನ್ನಿಸಿದೆ ತ್ರೈಜಗ-
ದಾದಿಮಾಯೆ ವಿನೋದರೂಪಿಣಿ 1
ಖಂಡ ಪರಶುಪ್ರೀತೆ ನಿಖಿಲಬ್ರ-
ಹ್ಮಾಂಡೋದರಭರಿತೆ
ಚಂಡಮುಂಡವೇತಂಡದಳನೋ-
ದ್ದಂಡಸಿಂಹೆ ಅಖಂಡಲಾರ್ಚಿತೆ
ಪಾಂಡುತನುಜ ಕೋದಂಡ ವಿತರಣೆ
ಚಂಡಿಕೇ ಕರದಂಡಲೋಚನಿ2
ಸಿಂಧೂರ ಸಮಯಾನೆ ಸರಸ ಗುಣ-
ವೃಂದೆ ಕೋಕಿಲಗಾನೆ
ಸುಂದರಾಂಗಿ ಮೃಗೇಂದ್ರವಾಹಿನಿ
ಚಂದ್ರಚೂಡಮನೋಜ್ಞೆ ಸತತಾ-
ನಂದಪೂರ್ಣೆ ಮುನೀಂದ್ರನುತೆ ಸುಮ-
ಗಂಧಿ ಗೌರಿ ಶಿವೇ ಭವಾನಿ 3
ಲಂಬೋದರಮಾತೆ ಲಲಿತ ಜಗ-
ದಂಬಿಕೆ ಗಿರಿಜಾತೆ
ಕಂಬುಕಂಠಿ ಕಾದಂಬನೀಕು-
ರುಂಬಜಿತಧಮ್ಮಿಲ್ಲೆ ತವ ಪಾ-
ದಾಂಬುಜವ ನಾ ನಂಬಿದೆನು ಎನ-
ಗಿಂಬು ಪಾಲಿಸೆ ಶುಂಭಮರ್ದಿನಿ 4
ಘನವೇಣುಪುರವಾಸೆ ಸರ್ವಾರ್ಥದಾ-
ಯಿನಿ ತ್ರೈಜಗದೀಶೆ
ಸನಕನುತೆ ಶ್ರೀಲಕ್ಷುಮಿನಾರಾ-
ಯಣಭಗಿನಿ ಶ್ರೀಮಹಿಷಮರ್ದಿನಿ
ಮನಮಥಾಮಿತರೂಪೆ ಕಾತ್ಯಾ-
ಯಿನಿ ನಿರಾಮಯೆ ಮಂಜುಭಾಷಿಣಿ 5