ಒಟ್ಟು 1244 ಕಡೆಗಳಲ್ಲಿ , 86 ದಾಸರು , 932 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣಪತಿ ಗಜಮುಖ ನಿನ್ನನು ಭಜಿಸುವೆ ಸತತದಿ ನಿಜಮತಿಯನೆ ನೀಡೊ ಪ. ಭುಜಗ ಭೂಷಣಸುತ ರಜತಮ ಕಳೆಯುತ ಗಜವರದನ ತೋರೊ ಅ.ಪ. ಮೋದಕಪ್ರಿಯನೆ ಆದರದಲಿ ನಿನ್ನ ಪಾದಕೆ ಎರಗುವೆನೊ ನೀ ದಯದಲಿ ಹರಿ ವಿಶ್ವರೂಪವ ನಿನ್ನ ಹೃದಯದಿ ತೋರೋ 1 ಹಿಂಡು ದೈವಗಳಿಗೆ ಇಂದು ಪ್ರಥಮ ನೀನೆ ಕಂಡಮಾತ್ರ ನಿನ್ನ ವಿಘ್ನಗಳೆಲ್ಲವು ಬೆಂಡಾಗುವುದಿನ್ನೆ 2 ಅಂಬರದಭಿಮಾನಿಯೆ ಸತತದಿ ಹರಿ ಹಂಬಲ ನೀ ನೀಡೋ ಕುಂಭಿಣೀಶ ಗೋಪಾಲಕೃಷ್ಣ ವಿಠ್ಠಲನ ಮನದಿ ತೋರೋ 3
--------------
ಅಂಬಾಬಾಯಿ
ಶ್ರೀವೇಂಕಟೇಶ ಸುಪ್ರಭಾತ ಶ್ರೀವೆಂಕಟೇಶಂಗೆ ಜಯ ಸುಪ್ರಭಾತ ದೇವಾದಿದೇವಂಗೆ ನವಸುಪ್ರಭಾತ ಪ ಪಾವನ ಶರೀರಂಗೆ ಜಯ ಸುಪ್ರಭಾತ ದೇವಪರಮಾತ್ಮಂಗೆ ನವಸುಪ್ರಭಾತ ಅ.ಪ ಅಂದು ಕೌಸಲ್ಯೆಯಣುಗ ರಾಮಾ ಏಳು ಎಂದಿನಂತೆ ಆಹ್ನಿಕವ ಮಾಡೆಂದು ನುಡಿಯಾ ಮುಂದೆ ವಿಶ್ವಾಮಿತ್ರ ಮುನಿ ರಾಮಭದ್ರಂಗೆ ಮಂದಹಾಸದಿ ಪೇಳ್ದ ಸರಯೂಬಳಿಯಲ್ಲಿ 1 ಎದ್ದೇಳು ಗೊವಿಂದ ಗರುಡಧ್ವಜಸ್ವಾಮಿ ಉದ್ಧರಿಸ ಬೇಕಯ್ಯ ಕರುಣಾಂತರಂಗ ಎದ್ದೇಳು ಚೈತನ್ಯ ಪುಣ್ಯದಾತ [ಎದ್ದೇಳು ಕಮಲಾಕಾಂತರಂಗ] 2 ಮಧುಕೈಟಭಾರಿಯಾ ವಕ್ಷಸ್ಥಲದಲಿ ನಿಂದ ಹದಿನಾಲ್ಕು ಲೋಕಗಳ ಮಾತೆಯೆನಿಸಿ ಪದುಮಾಕ್ಷಿ ಲಕ್ಷ್ಮೀಗೆ ಜಯಸುಪ್ರಭಾತ 3 ಸರ್ವಭುವನೇಶ್ವರಿ ಸರ್ವ ಭಕ್ತಂಕರಿ ಸರ್ವಲೋಕ ವಿಖ್ಯಾತೆ ಜಾತೆ ವಿನೀತೇ ಸರ್ವಲೋಕೇಶನ ರಾಣಿ ಕಲ್ಯಾಣಿ ಸರ್ವಸನ್ನುತೆ ನಿನಗೆ ಸುಪ್ರಭಾತ 4 ಸಪ್ತರ್ಷಿ ಮಂಡಲವು ಔಪಾಸನೆಯಾಗೆ ತೃಪ್ತರಾಗಿರುತಿಹರು ನಭದ ನದಿಯೊಳು ವ್ಯಾಪ್ತವಾದಖಿಳ ಕರಪುಷ್ಪಗಳ ಅರ್ಪಿಸಿ ಒಪ್ಪಿರ್ಪರೇಳೇಳು ವೆಂಕಟೇಶ 5 ಅಜ ನಿರಂಜನ ಸ್ಮರಿಸಿ ತ್ರೈವಿಕ್ರಮನ ಚರಿತೆಗೇಳು ಶಿರಬಾಗಿ ವಂದಿಪರು ಗುರು ಶುಭವ ಪೇಳುವನು ವರದರಾಜ ಏಳು ವೇಂಕಟೇಶ 6 ಈಗ ವಿಕಸಿತವಾದ ಕಮಲಸೌರಭದೊಡನೆ ರಾಗ ರಸ ತಂಪಿಂಪು ಮಿಳಿತಮಾಗಿ ಸಾಗುತಿದೆ ತಂಗಾಳಿ ಉಲ್ಲಾಸಮಂ ಬೀರಿ ತ್ಯಾಗಿ ನೀನೇಳಯ್ಯ ವೇಂಕಟೇಶ 7 ಕದಳಿ ಖರ್ಜೂರಗಳ ರಸಯುಕ್ತ ಪಾಯಸ ಮುದದಿ ಸಂಸೇವಿಸುತ ಉತ್ಸಾಹದೀ ಮಧುರ ಗಾನವ ಪಾಡಿ ಶುಕಪಿಕಗಳುಲಿಯುತಿವೆ ಪದುಮನಾಭ ಏಳು ವೇಂಕಟೇಶ 8 ದೇವರ್ಷಿನಾರದನು ಮಹತಿ ವೀಣೆಯ ನುಡಿಸಿ ದೇವದೇವನೆ ನಿನ್ನ ನುತಿಸುತಿಹನು ಭಾವರಸಯುತವಾದ ಗಾನಕೇಳುತಿಹುದು ಪಾವನಾತ್ಮನೇ ಏಳು ವೇಂಕಟೇಶ 9 ಸುರಿವ ಮಕರಂದವನು ಹೀರಿ ಹೀರಿ ಅರುಣನುದಯವ ತಿಳಿದು ಅರಳುತಿಹ ಕಮಲದಿಂ ಸರಸರನೆ ಝೇಂಕರಿಸಿ ಬರುತಿರ್ಪುವೈ ಸಿರಿಯ ದುಂಬಿಗಳೇಳು ವೆಂಕಟೇಶ 10 ಮಡದಿಯರು ಕೆನೆಮೊಸರನಾಂತ ಭಾಂಡಗಳಲ್ಲಿ ಕಡೆಗೋಲಿನಿಂ ಮಥಿಸಿ ಹಾಡುತಿಹರು ಅಡಿಗಡಿಗೆ ಜಯ ಘೋಷ ಕೇಳುತಿದೆಯಯ್ಯ ಪೊಡವೀಶ ನೀನೇಳು ವೇಂಕಟೇಶ 11 ಕಮಲದಿಂದೈತಂದ ದುಂಬಿಗಳು ಸುತ್ತಲಿನ ಕುಮುದಗಳ ಮೈಗಪ್ಪಿ ಝರಿಝರಿ ಗರ್ವದಿ ಅಮರ ದುಂದುಭಿಯಂತೆ ಝೇಂಕರಿಸುತಿವೆಯಿದೋ ವಿಮಲಾಂಗ ನೀನೇಳು ವೇಂಕಟೇಶ 12 ಶ್ರೀರಮೆಯ ನಿತ್ಯಯೋಗಸ್ಥಾನ ಹೇಸ್ವಾಮಿ ಭೂರಿಭಕ್ತರ ಕಾಯ್ವ ಕರುಣಾನಿಧೇ ಸ್ವಾಮಿ ಮೂರು ಲೋಕವನಳೆದು ಪಾಲಿಸುವ ಸ್ವಾಮಿ ಮಾರಮಣ ನೀನೇಳು ವೇಂಕಟೇಶ 13 ಅಜ ರುದ್ರ ಸನಕಾದಿ ಪರಮ ಭಕ್ತರ ಬಂಧು ಭಜಿಸಿ ತವ ದರ್ಶನವ ಕಾಯುತಿಹರು ವಿಜಯ ಜಯರೀರ್ವರು ತಡೆಯುತ್ತಲಿಹರಯ್ಯ ಗಜವಿನುತ ನೀನೇಳು ವೇಂಕಟೇಶ 14 ಶೌರಿ ನಿನ್ನಾವಾಸ ತಾಣ ವೈಕುಂಠದಿಂದ ನಾರಾಯಣಾದ್ರಿ ಗರುಡಾದ್ರಿ ಎಂತೆಂಬ ಆರೇಳು ನಾಮಗಳ ಪೇಳ್ವರಿದು ಶೇಷಾದ್ರಿ ಸಾರತರ ನಾಮವೈ ವೇಂಕಟೇಶ 15 ಭುವಿಯ ಗೋಪಾಲಕರು ಅನುಮತಿಯ ಬೇಡುವರು ರವಿಯಗ್ನಿಯುಕ್ತ ನವಗ್ರಹಗಳು ಕಾದಿಹರು ಭವದೂರನೇ ನಿನಗೆ ಸುಪ್ರಭಾತ 16 ದಿವಿಮೋಕ್ಷ ಬೇಡ ತವದರ್ಶನವು ಸಾಕೆಂದು ನವಭಕ್ತಿಯಿಂ ತಳೆದು ಭಜನೆ ಮಾಡುತಿಹರು ಪವಮಾನನುತ ನಿನಗೆ ಸುಪ್ರಭಾತ 17 ನಿನ್ನ ಧಾಮದ ಶಿಖರ ವೀಕ್ಷಣೆಯೊಳಾನಂದ ವನ್ನು ಪಡುತಿಹರೆಲ್ಲ ಶರಣ ಜನರು ನಿನ್ನ ದರ್ಶನವೊಂದೆ ಪರಮ ಪದವದನು ಸನ್ನುತಾಂಗನೆ [ತೋರೇಳು]ಸುಪ್ರಭಾತ 18 ಭೂಮಿಪತಿ ಕರುಣಾಂಬುಸಾಗರನೆ| ಧೀರ ಶೂರಾನಂತ ಗರುಡ ವಿಷ್ವಕ್ಸೇನ ರಾರಾಜಿಸುತ್ತಿಹರು ನಿನ್ನ ದರ್ಶನಕಾಗಿ ನಾರಾಯಣಾ ನಿನಗೆ ಸುಪ್ರಭಾತ|| 19 ಕಮಲನಾಭ ದೇವ ಪುರುಷೋತ್ತಮಾ ಸ್ವಾಮಿ ಅಮಲಸದ್ಗುಣಧಾಮ ಕೃಷ್ಣ ವೈಕುಂಠ ಸುಮಬಾಣಕೋಟಿ ಸೌಂದರ್ಯನುತ ಮಾರಮಣ ಕಮಲನಯನಾ ನಿನಗೆ ಸುಪ್ರಭಾತ|| 20 ದೀನರಕ್ಷಣೆಗಾಗಿ ಹತ್ತುಜನ್ಮದಿ ಬಂದೆ ಮಾನವ ಶ್ರೇಷ್ಠರೂ ಆಕಾಶಗಂಗೆಯಲಿ ನಾನಾ ಸುಗಂಧಗಳ ಬೆರೆಸಿ ಕಾಯುತ್ತಿಹರು ಭಾನುತೇಜನೆ ನಿನಗೆ ಸುಪ್ರಭಾತ 21 ದಿನಪನುದಯಿಸುತ್ತಿಹನು ಕಮಲವರಳುತ್ತಿಹುದು ಬನದ ಪಕ್ಷಿಗಳೆಲ್ಲ ಹಾಡುತ್ತಲಿಹವು ಘನವೈಷ್ಣವರು ಮಂಗಳಂಗಳಂ ಪಾಡುವರು ಮನುಜಪುಂಗವ ನಿನಗೆ ಸುಪ್ರಭಾತ 22 ಕಮಲಜಾದ್ಯಮರರೂ ಸಪ್ತರ್ಷಿಯೋಗಿಗಳು ವಿಮಲ ಮಾನಸರಾಗಿ ನಿನಗಾಗಿ ಕಾದಿಹರು ತಿಮಿರಸಾಗರವನ್ನು ದಾಟಿಸುವ ಪರಮಾತ್ಮ ಕಮನೀಯಗುಣ ನಿನಗೆ ಸುಪ್ರಭಾತ|| 23 ಭಾವನೆಯೊಳೀಯದ್ರಿ ವೈಕುಂಠವಾಗಿಹುದು ಮಾವನಿತೆಯುಪಚಾರದಭ್ಯರ್ಥಿಯಾಗಿಹಳು ಶ್ರೀವೈಷ್ಣವ ಕೇಳು ಕೈಮುಗಿದು ಕಾದಿಹರು ಕಾವಕಾರುಣ್ಯನಿಧಿ [ನಿನಗೆ ಸುಪ್ರಭಾತ] 24 ಅರುಣೋದಯದೊಳೆದ್ದು ಈ ಸುಪ್ರಭಾತವನು ಪರಮ ಭಕ್ತಿಯೊಳೊಮ್ಮೆ ಪಾಡುವರಿಗೆ ಪರಮಪುರುಷನು ದಿವ್ಯತಾಣವನು ನೀಡುವನು ಹಿರಿಯರಾ ವಚನವಿದು ಪರಮ ಚರಿತಾರ್ಥ25 ಶರಣಾಗತಿ ಒಂದೆರಡು ಮೂರು ನಾಲ್ಕೈದಾರು ಮೊಗದವರು ಬಂದು ವಂದಿಸುತಿಹರು ಪುರುಷೋತ್ತಮ ಬಂಧುರ ಶರೀರನೀ ಪಾಲಿಸೆಮ್ಮ ವೆಂಕಟೇಶ 26 ನಾನಾಪರಾಧಗಳ ಮಾಡಿರುವೆನಯ್ಯ ನೀನೆಲ್ಲವನು ಕ್ಷಮಿಸಿ ಪರಿಪಾಲಿಸಯ್ಯ ನೀನೇ ಸರ್ವಾಧಾರ ಕರುಣಾಂತರಂಗನು ದಾನಶೀಲಾ ಸ್ವಾಮಿ ಶ್ರೀವೇಂಕಟೇಶ 27 ಗೋಪಿಕಾ ಪರಿವೃತನೆ ಪರವಾಸುದೇವನೆ ಗೋಪಿಕಾ ಗೀತಗುಣ ಸಂಪೂಜ್ಯ ದೇವನೆ ಗೋಪಿಕಾ ಮನ್ಮಥನೆ ದೈತ್ಯಾರಿ ಶ್ರೀಕೃಷ್ಣ ನೀ ಪೊರತು ಬೇರೆ ದೇವರ ಕಾಣೆ ವೆಂಕಟೇಶ28 ದಶರಥನ ಸುತನಾಗಿ ಜಾನಕಿಯ ಕರವಿಡಿದು ದಶಮುಖಾದ್ಯಸುರರನು ಸಂಹರಿಸಿದಾತ ಶಶಿಮೌಳಿ ವಂದ್ಯನೆ ಲೋಕಮೋಹನ ಸ್ವಾಮಿ ಕ್ಲೇಶಗಳ ಸಹಿಸಿ ಶಾಶ್ವತ ಸುಖವ ನೀಡಯ್ಯ ವೆಂಕಟೇಶ 29 ಕಂಜಾಯತಾಕ್ಷಿಯೆ ಸರ್ವಲೋಕ ಶರಣೇ ಕಂಜವದನೆಯೆ ಸರ್ವವಾತ್ಸಲ್ಯ ಪೂರ್ಣೇ ಕಂಜನಾಭನ ದಿವ್ಯ ವಕ್ಷಸ್ಥಲಾವಾಸಿ ಕಂಜಸರ್ವಾಂಗಿ ಪೊರೆ ಪುಣ್ಯಚರಿತೆ ಶ್ರೀಯೆ 30 ಸರ್ವಲೋಕ ಶರಣ್ಯ ಸರ್ವಗುಣ ಸಂಪೂರ್ಣ ಸರ್ವದೇವರದೇವ ವೇದವಂದಿತ ಸರ್ವಕಾರುಣ್ಯನಿಧಿ ಸರ್ವಾತ್ಮ ಸಂಚಾರಿ ಸರ್ವಪೂಜಿತ ನಿನಗೆ ಶರಣು ವೆಂಕಟೇಶ 31 ರಕ್ಷಿಸು ಜಗನ್ಮಯ ರಕ್ಷಿಸು ದಯಾಮಯ ರಕ್ಷಿಸು ಮನೋಮಯಾ ಮಾಯ ನಿರ್ಮಾಯ ರಕ್ಷಿಸೈ ಸರ್ವಜ್ಞ ಸರ್ವಲೋಕಾಧ್ಯಕ್ಷ ರಕ್ಷಸೈ ಹರಿ ನಿನ್ನ ಚರಣ ವೆಂಕಟೇಶ 32 ಆವನಾದಿಯನಂತನೆಂದೆನಿಪನೊ ವರವ ಈವ ಕರುಣಾಳುವೋ ಜೀವರಾಶಿಯನೆಲ್ಲ ಕಾವನೋ ಸಹಸ್ರಾಕ್ಷನೆಂದೆನಿಪ ದೇವನಾ ಶ್ರೀವನಜ ಪದವೆನಗೆ ಶರಣು ವೆಂಕಟೇಶ 33 ವೇದಗಳ ತಂದು ಮಂದರವೆತ್ತಿ ಹರಿಯ ಮೇದಿನಿಯ ನಳೆದ ಭಾರ್ಗವನಾದ ರಾಮನೀ ನಾದೆ ಕಂಸನಕೊಂದೆ ಗೋಪಾಲಕೃಷ್ಣ ನಾದ ಕಲ್ಕೀ ನಿನ್ನ ಚರಣ ವೆಂಕಟೇಶ34 ಮೂರು ವೇಣಿಗಳುಳ್ಳ ಗಂಗೆ ಪುಟ್ಟಿದ ಪಾದ ಮೂರು ಲೋಕವನಳೆದ ಸುಪ್ರಸಿದ್ಧದ ಪಾದ ಮೂರು ಕಣ್ಣಾಂತವನು ಜಪಿಸುತಿರುವ ಪಾದ ಚಾರುತರ ಪದವೆನಗೆ ಶರಣು ವೆಂಕಟೇಶ 35 ಕಾಳಿಂಗನಾ ಹೆಡೆಯ ತುಳಿದು ಕುಣಿದಾ ಪಾದ ಖೂಳ ಶಕಟನನೊದ್ದು ಕೊಂದ ಪಾದ ಚೋಳರಾಯನು ತೊಳೆದು ವಂದಿಸಿದ ಪಾದ ನಾಳೀಕ ಪದವೆನಗೆ ಶರಣು ವೆಂಕಟೇಶ36 ಕ್ಷೀರವಾರಿಧಿತನುಜೆಯೊಪ್ಪಿ ವೊತ್ತುವ ಪಾದ ನಾರದಾದಿಗಳೆಲ್ಲ ಪಿಡಿದು ನಲಿವಾ ಪಾದ ಶ್ರೀರಮಣಿ ಮುದದಿಂದ ಕಣ್ಗೊತ್ತುವ ಪಾದ ಮಾರಮೋಹಕ ನಿನ್ನ ಚರಣ ವೆಂಕಟೇಶ37 ಮಂಗಳ ಕಲ್ಯಾಣ ರೂಪಂಗೆ ಅದ್ಭುತಾಕಾರಂಗೆ ಮಾಲ್ಯಪೀತಾಂಬರಾಂಗದ ಶೋಭಿತಂಗೆ ಶಾಲ್ಯನ್ನ ಸಂಪ್ರೀತ ಶ್ರೀ ವೇಂಕಟೇಶಂಗೆ ಬಾಲ್ಯಕುಂದದವಂಗೆ ಜಯಮಂಗಳ 38 ಭಕ್ತಪರಿಪಾಲಂಗೆ ಜಗದಾದಿ ಮೂಲಂಗೆ ಭಕ್ತಿದಾತಾರಂಗೆ ರಮೆಯರಸಂಗೆ ಮುಕ್ತಿ ಸೌಖ್ಯವನೀವ ಶ್ರೀವೇಂಕಟೇಶಂಗೆ ಶಕ್ತಿ ಸ್ವರೂಪಂಗೆ ಶುಭಮಂಗಳ 39 ಶೇಷಾದ್ರಿ ವಾಸಂಗೆ ದಿನಕರ್ತ ಭಾಸಂಗೆ ಕ್ಲೇಷದಾರಿದ್ರ್ಯಾದಿ ಪರಿಹಾರ ಕರ್ತಂಗೆ ಶೇಷ ಪಂiÀರ್iಂಕಂಗೆ ಶ್ರೀ ಶ್ರೀನಿವಾಸಂಗೆ ದೋಷಾಪಹಾರಂಗೆ ಜಯಮಂಗಳ 40 ಅರವಿಂದ ವದನಂಗೆ ಅರವಿಂದ ಲೋಚನಗೆ ಅರವಿಂದನಾಭನಿಗೆ ಅರವಿಂದ ಗಾತ್ರಗೆ ಅರವಿಂದ ಪಾದನಿಗೆ ಅರವಿಂದ ಭೂಷನಿಗೆ ಅರವಿಂದ ಹಸ್ತಂಗೆ ಶುಭಮಂಗಳಂ 41 ಹಿಂದಿನಾಚಾರ್ಯರಿಗೆ ಮುನಿಮುಖ್ಯಭಕ್ತರಿಗೆ ಇಂದಿನಾ ಭೂದೇವಿ ನೀಳಾದಿ ವಧುಗಳಿಗೆ ಮಂದಾಕಿನೀಧರಗೆ ಇಂದ್ರ ದಿಕ್ಪಾಲರಿಗೆ ವಂದಿಪೆನು ಮಂಗಳಾಚರಣೆ ಮಾಡಿ 42 ಫಲಶ್ರುತಿ ಹನ್ನೆರಡು ಮಾಸವು ತಪ್ಪದೆ ಹಾಡಿದರೆ ಮುನ್ನಮಾಡಿದ ಪಾಪವೆಲ್ಲ ಕಳೆಯುವುದು ಪನ್ನಗಾರಿಧ್ವಜನ ಕರುಣೆಯೊದಗುವುದು ಬನ್ನಗುಡುವನರಕಬಾಧೆ ತಪ್ಪುವುದು 43 ಶ್ರಾವಣಾಶ್ವೀಜದಲಿ ಮಾರ್ಗಶಿರ ಮಾಸದಲಿ ಭಾವಭಕ್ತಿಯಲಿಂತು ಹಾಡುವರಿಗೆ ನೋವು ಕಾಲನಭಟರ ಕಾಟನಶಿಪುದು ಹರಿಯ ಭಾವುಕರು ಸತ್ಕರಿಸಿ ಕರೆದೊಯ್ವರು 44 ಅಪ್ಪ ಮಾಂಗಿರಿರಂಗನಪ್ಪಣೆ ಪಡೆದಿದನು ಒಪ್ಪಿಸುವೆನೈ ನಿನಗೆ ವೇಂಕಟೇಶ| ತಪ್ಪು ನೆಪ್ಪುಗಳನ್ನು ಮನ್ನಿಸೈ ಜಗದೀಶ ಒಪ್ಪದಿಂ ಸಕಲರನು ಪೊರೆ ವೇಂಕಟೇಶ|| 45
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
(3) ಶ್ರೀಕೃಷ್ಣ ಲಾಲಿ ಜೋ ಜೋ ಶ್ರೀಕೃಷ್ಣ ಗೋಪಾಲಕನೆ ಜೋ ಜೋ ಗೋಪಿಯ ಕುಮಾರನೆ ಪ ಪಾಡಿತೂಗುವೆನಯ್ಯ ಜೋಜೋಜೋ ಅ.ಪ ಹಾಲಿನ ಹೊಳೆಯಲಿ ಹರಿದು ಬಂದವನೆ ಆಲದೆಲೆಯ ಮೇಲೆ ಮಲಗಿ ಬಂದವನೆ ಕಾಲಿನ ಹೆಬ್ಬೆರಳ ಬಾಯಲಿಟ್ಟವನೆ ಹಾಲುಗಲ್ಲದ ಶಿಶುವೆನಿಸಿಕೊಂಡವನೆ ಪಾಡಿತೂಗುವೆನಯ್ಯ ಜೋಜೋಜೋ 1 ಕೆತ್ತಿದ ಚಿನ್ನದ ತೊಟ್ಟಿಲು ಇಲ್ಲ ಮುತ್ತಿನ ಮಣಿಗಳ ಸರಗಳು ಇಲ್ಲ ಮೆತ್ತನೆ ಹಾಸಿದ ಬಟ್ಟೆಯ ಮೇಲೆ ಹೊತ್ತು ಮೀರಿದೆ ಮಲಗೋ ಕಂದ ಪಾಡಿತೂಗುವೆನಯ್ಯ ಜೋಜೋಜೋ 2 ಚೆನ್ನಯ್ಯ ನೀನು ಮುದ್ದರಂಗಯ್ಯ ಅಣ್ಣಯ್ಯ ಕಾಣೋ ತುಂಟ ಕೃಷ್ಣಯ್ಯ ಸುಮ್ಮನೆ ಮಲಗಯ್ಯ ರಂಪಾಟ ಮಾಡದೆ ಕಣ್ಮುಚ್ಚಿ ಪವಡಿಸೋ ಪರಮಾನಂದನೆ ಪಾಡಿತೂಗುವೆನಯ್ಯ ಜೋಜೋಜೋ 3 ಅಂಗೈಯಲ್ಲೆ ಅದ್ಭುತ ಮಾಡುವೆ ಅಂಗಾಂಗದಲ್ಲಿ ಬ್ರಹ್ಮಾಂಡ ತೋರುವೆ ಭಂಗ ಪಾಂಡುರಂಗ ಚಂಗನೇಳದೆ ಮಲಗೊ ಜಾಜಿಪುರಿರಂಗ ಪಾಡಿತೂಗುವೆನಯ್ಯ ಜೋಜೋಜೋ 4
--------------
ನಾರಾಯಣಶರ್ಮರು
(5) ಶ್ರೀನಿವಾಸ ವಿಪ್ರವಂದಿತ ಪಾಪಕೋಟಿ ಕುಲನಾಶಾ ಶ್ರೀವೆಂಕಟೇಶಾ ಪ ನಿಜನುಡಿಯ ಭೃಗುನುಡಿಯೆ ಮುನಿಮಂಡಲಿಯ ನಡೆಯೆ ತ್ರಿಜಗಾಗ್ರಪೂಜಿತ ಪರಬ್ರಹ್ಮ ನೀನೇ 1 ಪಶುವತ್ಸಗೋಪಾಲ ಸರ್ವವೂ ನೀನಾಗೆ ಬಿಸಜಭವ ಬೆದರುತ್ತ ಪದಕೆರಗಿದ 2 ಮೋಹಿನಿಯವೇಶದಿಂ ರಕ್ಕಸನ ಭಸ್ಮಿಸಿ ಪಾಹಿಮೆನಲಾ ದಕ್ಷ ವೈರಿಯ ರಕ್ಷಿಸಿದೆ 3 ಗಿರಯನೇ ಕೊಡೆವಿಡಿದು ಗೋಕುಲವನೆ ಕಾಯ್ದೆ ಸುರರಾಜ ಗರಿಮುದುರಿ ಶರಣೆಂದು ಬಂದ 4 ವಿಧವರದಿ ಬೆರೆದ ಹಿರಣ್ಯಕಶಿಪುವ ಬಗೆದು ಸದೆದೆ ಶಿವಕಾವಲಿನ ಬಾಣನಂ ಬಿಡವೇ 5 ಸಾಸಿರಗಳರವತ್ತು ಸಗರಸುತರನು ಸುಟ್ಟು ಘಾಸಿಹರಿಸಿದೆ ಜಗದೆ ಜೀವ ಜಂತುಳಿಗೆ 6 ಪಾತಕಿಯ ರಾವಣನು ಕಾರವರ ಕೊಂದೇ 7 ಬಲಿದ ಶಾಪವ ಕಳೆದು ಕಾಯ್ವ ಬಂಧೂ 8 ಸಾವುಂಡ ಶಿಶುವನು ಗುರುವಿಗೆ ನೀ ತಂದಿತ್ತೆ ನೋವುಂಡ ಇಂದ್ರಂಗೆ ಲೋಕಗಳನಳೆದೆ 9 ಅಜಕಪಾಲವ ಬಿಡಿಸಿ ಮೃತ್ಯುಂಜಯನ ಹರಸಿ ಅಜಮಿಳನ ನೀ ಮುಕ್ತಿಸ್ಥಾನಕ್ಕೆ ತಂದೆ 10 ಸರ್ವಕಾಲಗಳಲ್ಲು ಅಪರಾಧಿ ನಾನಯ್ಯ ಗರ್ವಿಯೆನಿಸದೆ ತಪ್ಪು ಕ್ಷಮಿಸಯ್ಯ ತಂದೆ 11 ಆನೆ ಅಳುವುದು ಕೇಳಿ ಮೊಸಳೆಬಾಯನು ಸೀಳ್ದೆ ನೀನೆ ಆಪದ್ಭಂದು ಕಾರುಣ್ಯಸಿಂಧು12 ಅರಗಿನ ಮನೆಯಲ್ಲಿ ಭರದಿಂದ ಬಾಂಧವರಿಗೆ ಉರಿಭಯವ ತಪ್ಪಿಸಿ ಪೊರೆದ ಪ್ರಭುವೇ13 ದ್ರುಪದ ಪುತ್ರಿಗೆ ಮಾನ ಸಂರಕ್ಷಣೆಯನು ಮಾಡಿ ಕೃಪೆತೋರಿಪಾರ್ಥಂಗೆ ಸಾರಥಿಯು ಆದೆ 14 ಕಾಲ ವಾಲಿಪ್ರಾಣಕೆ ಶೂಲ ಲೀಲೆಯಿಂ ಭಕ್ತರಂ ಪಾಲಿಸುವೆ 15 ಪಾವನದ ಪಾದಗಳನಿಂತು ಮುಡಿಯಮೇಲೆ ಭಾವಿಸುವೆ ಭವಕಳೆಯೆ ನಾತಾಳೆ ನಾಳೆ 16 ತಾಪಗಳು ಮೂರನುಂ ಹರಿಪ ಸಂಕಟದೂರ ಕಾಪಾಡು ಶ್ರೀಹರಿ ಬಂಧುಬೇರಿಲ್ಲ ಭಕ್ತಸತ್ರಾ 17 ಶರಣಸಂರಕ್ಷಣ ಬಿರುದು ಧರಸಿಹೆ ನಿತ್ಯ ಭರದಿ ಶಾಂತಿನೀಡೋ ಚರಣಕ್ಕೆ ಶರಣು 18 ಕ್ಷಾಮಡಾಮರ ಕಳೆಯೆ ಸುವೃಷ್ಟಿಯ ಕರೆವೆ ಕಾಮಿತಾರ್ಥದ ಕಾಮಧೇನು ಸ್ವಾಮಿ ತಾಯಿತಂದೆ 19 ಚಕ್ರಧರ ಚಕ್ರಧರ ಭಜಿಪ ಭಕ್ತರ ಪಾಲ ನರಸಿಂಹ ನರಸಿಂಹ 20 ಕ್ಷೇಮಕರಗರುಡನೇ ಧ್ವಜನು ವಾಹನನು ಭೀಮ ಹನುಮ ಪ್ರೇಮ ಹೆಜ್ಜಾಜಿಶ್ಯಾಮ ಸ್ವಾಮಿ21
--------------
ಶಾಮಶರ್ಮರು
(ಆರೋಹಣ ಕ್ರಮದಲ್ಲಿ ದಾಸ-ಗುರು-ದೇವತಾನಮನ) ಅಕ್ಕ ನೋಡೆ ನಾನಾ ನಿನ್ನ ದಯದಿಂದ ಗುರು ರಂಗವಲಿದದಾಸರ ಕನುಷಿನೊಳಗುಳ್ಳ ರಕ್ಕಸರಿಗೆಲ್ಲ ಕಕ್ಕಸವಾಗುತಿದೆ ದಕ್ಕಲಾರದು ಇನ್ನು ರೊಕ್ಕ ರೊಕ್ಕಕ್ಕೆ ಸಿಕ್ಕಿ ಬಲುಪರಿಯಿಂದ ಸೊಕ್ಕಿ ಧಕ್ಕೆ ತಿನ್ನುತ ಇದ್ದು ಶಕ್ಕುತಿಯಿಲ್ಲದೆ ಯನಗೆ ಪುಕ್ಕಟೆ ಸಿಕ್ಕಿತುಯೆನ್ನ ಕಕ್ಕನು ಇವರಕ್ಕಮುಕ್ಕಿ ಮಹ ಪಕ್ಕಿವಾಹನ ತಂದೆವರದಗೋಪಾಲವಿಠಲನ ತೋರುವಾ 1 ವತ್ಸರ ಇಂದಿರೆ ಕರ್ತು ನಾನಲ್ಲ ಚಂದ್ರ ಪುರಕೆ ಪೋಗು ಭಾಗಣ್ಣನೆಂಬುವನುಂಟು ಶಿರಿ ಅರಸ ವರದಗೋಪಾಲವಿಠಲನ ದಯದಿಂದಾ ಬಂದು ಸೇರಿದರು 2 ಅಪರೋಕ್ಷ ಪಾಲಿಸಿ ಮಂತ್ರಗಳುಪದೇಶಿಸಿ ಚರಣಂಗಳ ಲಯ ಮಾಡಿಸಿ ನಿರುತದಿ ಪಾಲಸಾಗರಶಾಯಿ ತಂದೆವರದಗೋಪಾಲವಿಠಲನ ನಿಲ್ಲಿಸಿ ಕೊಟ್ಟುಬಿಡದೆ3 ವಾಸವ ಮಾಡುತ ದಾಸರ ಪೋಷಿಸಬೇಕೆನುತ ಆಶೆಯುಕ್ತ ದೋಷರಹಿತಭಾವಿ ವಾಯುಪದಸ್ಥ ಸ್ವಾದಿರಾಜರ ಆಜ್ಞಾವ ಧರಿಸಿ ಶೇರಿ ಅರಸನ ಮಹಿಮೆಯ ಶೋಧಿಸಿ ಭಾಗವತಾದಿ ಶಾಸ್ತ್ರ ಅರ್ಥಸಮ್ಮತ ಕವನದಿ ರಚಿಸಿ ಹರಿಕಥಾಮೃತಾಖ್ಯ ಗುಣಸಾಗರ ಸಾರವೆಂದು ನಾಮವೆನಿರ್ಮಿಸಿ ಕುಮತವ ಭೇದಿಸಿ ಹಾನಿ ವೃದ್ಧಿಯ ಭೇದಿಸಿ ನೀತಿ ಹಿತನ ದ್ವಾರ ಜಗನ್ನಾಥವಿಠಲನೆಂಬೊ ಪೆಸರು ಪಡೆದು ತೀರ್ಥಕ್ಷೇತ್ರಾದಿಯಾಟಿಸಿ ಗಾತ್ರವ ಘೋಟಿಸಿಸೂತ್ರವ ಮೀಟುತ ಪಾತ್ರರ ಸಂಗಡ ಚಿತ್ರವೇಷವ ಧರಿಸಿ ವರ್ತನೆಗ್ಯಯ್ಯುತ ಸೂತ್ರನಾಮಕ ಕೃಷ್ಣನಂತರ್ಯಾಮಿ ಸೂತ್ರವಂದಿತ ತಂದೆವರದಗೋಪಾಲವಿಠಲನ ಭಜಿಸಿ ಮಹಪದವೈದ 4 ಆನಂದ ಆನಂದ ಮಹಾಸಾಗರದೊಳಗೆ ಮುಳುಗಿ ಶಿಂಧುಶಯನ ಅರವಿಂದನಯನನ ಪೊಂದಿ ಮಹ ಪೊಂಗೊಳಲನೂದುತ ಜಗಂಗಳ ಪೋಗುತ ಗಂಗಾಜನಕ ಹರಿ ಗೋವಿಂದನಾಶ್ರಯಿಸಿ ದ್ವಂದ್ವಾವ ಭಜಿಸುತ ಮಂಗಳ ಮೂರುತಿ ಸ್ವಪನದಿ ಬಂದು ನಂದಾದಿ ಕವನ ಪೇಳಿ ಪವಿತ್ರನ ಮಾಡಿದಿ ಭಾವಿ ಭಾರತಿ ವರನ ಮಹಿಮೆಗೆಣೆಯುಂಟೆ ಹನುಮ ಭೀಮ ಮಧ್ವಾತ್ಮಕ ರೂಪಧಾರಿಗುರುರಾಜಾಂತರ್ಗತ ತಂದೆವರದಗೋಪಾಲವಿಠಲನು ಬಂದು ವದಗಿದ ವಾಸನಾಮಯದಿ 5 ಜತೆ :ಪಾತಕ ಪೋಯಿತು ಪೂತಾತ್ಮಕನ ಸೇವಿಪ ಜಗನ್ನಾಥರಾಯನ ಕಂಡೇ ಹರಿರೂಪಧಾರಿ ಗುರು ತಂದೆವರದಗೋಪಾಲವಿಠಲನ ದಯದಿಂದಾ 6
--------------
ಗುರುತಂದೆವರದಗೋಪಾಲವಿಠಲರು
(ಊ) ಯತಿವರರು ಶ್ರೀ ಜಯತೀರ್ಥರು ಎದುರಾರೊ ಗುರುವೆ ಸಮರಾರೊ ಪ ಮದನ ಗೋಪಾಲನ ಪ್ರಿಯ ಜಯರಾಯ ಅ.ಪ ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದಗಡಣೆಯ ಕೇಳುತ ನುಡಿ ಮುಂದೋಡದೆಗಡಗಡ ನಡುಗುತ ಮಾಯ್ಗೋ ಮಾಯ್ಗಳುಅಡವಿಯೋಳಡÀÀಗೋರು ನಿಮ್ಮ ಭೀತಿಯಲಿ 1 ಕುಟಿಲ ಮತಗಳೆಂಬೊ ಚಟುಲಂಧಕಾರಕ್ಕೆಪಟುತರ ತತ್ವ ಪ್ರಕಾಶಿಕೆಂತೆಂಬಚಟುಲಾ ತಪದಿಂದ ಖಂಡಿಸಿ ತೇಜೋ-ತ್ಕಟದಿ ಮೆರೆದೆ ಬುಧಕಟಕಾಬ್ಜ ಮಿತ್ರ2 ಅಮಿತ ದ್ವಿಜಾವಳಿ ಕುಮುದಗಳರಳಿಸಿವಿಮತರ ಮುಖ ಕಮಲಂಗಳ ಬಾಡಿಸಿಸ್ವಮತರÀ ಹೃತ್ಸಂತಾಪಗಳೋಡಿಸಿವಿಮಲ ಸುಕೀರ್ತಿಯ ಪಡೆದೆಯೊ ಚಂದ್ರ 3 ವೇದ ಶಾಸ್ತ್ರಗಳೆಂಬೊ ಶೃಂಗಗಳಿಂದ ಸು-ಧಾದಿ ಗ್ರಂಥಗಳೆಂಬೊ ಸ್ತನದಿಂದೊಪ್ಪುತ ತತ್ವಬೋಧನೆಯೆಂಬ ದುಗ್ಧ ಶಿಷ್ಯವತ್ಸಂಗಳಿಗೆಆದರದಲಿ ಕೊಟ್ಟ ಯತಿಸುರಧೇನು 4 ವ್ಯಾಸ ಸೂತ್ರಗಳೆಂಬ ಮಂದರವನು ವೇದರಾಸಿಯೆಂಬ ವಾರಾಶಿಯೊಳಿಟ್ಟುಶ್ರೀ ಸರ್ವಜ್ಞರ ವಾಕ್ಯ ಪಾಶದಿ ಸುತ್ತಿಭಾಸುರ ನ್ಯಾಯಸುಧಾ ಪಡೆದೆ ಯತೀಂದ್ರ5 ವನಜನಾಭನ ಗುಣಮಣಿಗಳು ಸರ್ವಜ್ಞಮುನಿಕೃತ ಗ್ರಂಥಗಳವನಿಯೊಳಡಗಿರೆ ಸ-ಜ್ಜನರಿಗೆ ಟೀಕಾಂಜನದಿಂದ ತೋರಿಸಿಘನ ಸುಖಸಾಧನ ಮಾಡಿದ್ಯೊ ಧೀರ 6 ಅರ್ಥಿಮಂದಾರ ವೇದಾರ್ಥ ವಿಚಾರ ಸ-ಮರ್ಥ ಶ್ರೀಕೃಷ್ಣ ಪಾದಾಂಬುಜಲೋಲ ಪ್ರ-ತ್ಯರ್ಥಿ ಮತ್ತೇಭಕಂಠೀರವಕ್ಷೋಭ್ಯ-ತೀರ್ಥಕರ ಜಾತ ಜಯತೀರ್ಥ ಯತೀಂದ್ರ 7
--------------
ವ್ಯಾಸರಾಯರು
(ಊ) ಲೋಕನೀತಿ ಹರೇ ಪಾಹಿ ಮಾಂ ಸದಾ ಪ ಭವದೊಳೆನ್ನ ಬಳಲಿಸಲಿ ತವ ಹಿತವೇನಿಹುದಿದರೊಳು ತವಕದಿಂದ ಕೊಡು ದಯಾಳು ನವವಿಧ ಭಕುತಿ ನಿನ್ನೊಳು 1 ಲೋಕ ಪಾಲಕನೆಂಬೊ ಬಿರುದು ಈ ಕಾಲಕೆ ತೋರೊ ಒಲಿದು ಸಾಕಲಾರೆನೆನಲು ಬಿಡದು ನೀ ಕರುಣಿಸು ದÀಯಾಸಿಂಧು 2 ಧೀರ ಶ್ರೀ ಹನುಮೇಶವಿಠಲಾ ಮೀರಿದ ಕಾರ್ಯವು ಇದಲ್ಲಾ ಸಾರ ಮಾರ್ಗ ತೋರಿ ಸುಫಲಾ ಮಾರಜನಕ ಕೊಡು ಗೋಪಾಲ 3
--------------
ಹನುಮೇಶವಿಠಲ
(ಕಾರ್ತೀಕ ದಾಮೋದರನನ್ನು ನೆನೆದು) ಗೋವಿಂದ ಪಾಲಯ ಗೋಪಾಲ ಬಾಲ ಗೋಪಗಣೇಡಿತಗುಣ ವರುಣಾಲಯ ಪ. ದೀನ ದಯಾಪರ ದಿತಿಜವಿದಾರ ನಾನಾವತಾರ ನಂಬುವರಿಗಾಧಾರ ಏನು ತಪ್ಪಿದ್ದರು ಕ್ಷಮಿಸು ರಮಾವರ 1 ಭೂಧರ ಬಲಭದ್ರ ಸೋದರವೇಷ ಆದರದಲಿ ನಿನ್ನ ಪೊಗಳುವೆ ಶ್ರೀಶ ಶ್ರೀದ ಕಾರ್ತೀಕ ದಾಮೋದರ ಹಾಸ 2 ಪರಮ ಪಾವನ ಶೇಷಗಿರಿವರ ಮೂರ್ತೆ ನೀನರಿಯೆಯಾ ದಾಸರ ಮನದಿರವಾರ್ತೆ ಪರಿಹರಿಸಾರ್ತಿಯ ಪದ್ಮಜನುತಕೀರ್ತೆ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಪಾರ್ವತಿ) ಬಾರಮ್ಮ ಬಾ ಬಾ ಬೊಮ್ಮನ ಮಗನಾಂಗೀ ಪ ತೋರೆ ತೋರೆ ತವ ಕರುಣಾಪಾಂಗೀ ಅ.ಪ. ಮನವೆಲ್ಲಾ ತಿರುತಿರುಗಿದೆ ಮದನಾಂಗೀಮಾವನ ಮಗನಿಗೆ ಪೇಳೆ ಶುಭಾಂಗೀಮನೋಹಾರನ ತಾಪವ ಹರಿಸು ಕೃಪಾಂಗೀ ಮಧ್ಯದಯಾಂಗೀಮದಪಿತ ಪತಿಯ ಮೋಹಿತಳಾಗಿ ಮರೆಪೊಕ್ಕುದು ಪದೋಪದಿಗೆ ಸ್ಮರಿಸುತ ಬೇಗಾ 1 ಗತಿಯಾರು ಪೇಳಮ್ಮಾ ನಿನ್ಹೊರತು ಮತ್ತೊಬ್ಬನ ನಾ ಕಾಣೆನಮ್ಮಾಬೊಮ್ಮನ ಮಗನಿಹನಮ್ಮಾ ಮದುವ್ಯಾದೆಯಮ್ಮಾಮದುವಿಯ ಮಾಡಿಕೊಂಡು ಮರುಳುಮಾಡಿ ನಿನ್ನ ಕರಪುಟದೊಳಗಿಟ್ಟು ಬಾಯ್ಬಾಯ್ಬಿಡಿಸಲು 2 ಯಷ್ಟೆಂದು ಪೇಳಲಮ್ಮಾ ಇನ್ನೆಷ್ಟೆಂತು ತುತಿಸಾವೆಮ್ಮ ಕಷ್ಟಪಡಲಾರೆ ನಮ್ಮಾ ಬಲು ಭ್ರಷ್ಟನಾದೆನಮ್ಮಾಇಷ್ಟನ ಕರಪುಟ ಜೇಷ್ಠ ಸುರರ ಗೆಲಿದಗುರುಕೃಷ್ಣವಂದಿತ ತಂದೆವರದಗೋಪಾಲವಿಠಲನ ಪಠಿಸುವ 3
--------------
ತಂದೆವರದಗೋಪಾಲವಿಠಲರು
(ಶೇಣಿಯ ಗೋಪಾಲಕೃಷ್ಣನನ್ನು ನೆನೆದು) ತಾಪವ ಬಿಡಿಸು ದಯಾಪರ ಶ್ರೀ ಗೋಪಾಲ ಕೃಷ್ಣ ನೀ ಕಾಪಾಡು ಸಂಸಾರ ಪ. ಲೋಕನಾಯಕ ನಿನ್ನ ಕರುಣವಂದಿದ್ದರೆ ಸಾಕೆಂಬೆ ಜ್ಞಾನಾನಂದಕರ ಪಾಕಶಾಸನ ಸುತಗೊಲಿದಾತನ ಭಂಡಿ ನೂಕಿ ನಡೆಸಿದ ಕೃಪಾಕರ ಮೂರುತಿ 1 ನಡೆವುದು ನುಡಿವುದು ಕೊಡುವುದು ಕೊಂಬುದು ಮಡದಿ ಮಂದಿರ ಮಮತಾಸ್ಪದದ ಒಡವೆ ವಸ್ತುವು ಮೊದಲಾದುದೆಲ್ಲವನು ಶ್ರೀ- ಮುಡಿಯ ಸಂವರಿಸುವ ಕರದಿ ಸಂಗ್ರಹಿಸುತ2 ನಿನ್ನಡಿಗಳ ನಂಬಿ ನಿಂದಿಹೆನಿಲ್ಲಿ ಪ್ರ- ಸನ್ನ ಮುಖಾಂಬುಜ ಪಾಲಿಸೆಂದು ಅನ್ಯರಿಗೆಂದೆಂದು ದೈನ್ಯ ತೋರಿಸಲಾರೆ ಪನ್ನಗಾಚಲವಾಸ ಪರಮ ದಯಾಳೊ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀ ವಾದಿರಾಜರು) ದಿಟ್ಟದಿ ನಿನ್ನಯ ಪದಪದ್ಮವನ್ನು ಮನಮುಟ್ಟಿ ಭಜಿಸುವೆ ಕೃಷ್ಣರಾಯ ಪ ಸೃಷ್ಟಿ ನಿನ್ನಂಥ ಇಷ್ಟ ಪುಷ್ಟನ ಕಾಣೆ ಶ್ರೀ ಕೃಷ್ಣರಾಯ ಅ.ಪ ಇಷ್ಟನು ದುಷ್ಟ ಪಾಪಿಷ್ಠನಾಗುವುದುಚಿತವೇ ಕೃಷ್ಣರಾಯಾ ನಿನ್ನ ದೃಷ್ಟೀಲಿ ನೋಡೆನ್ನ ಶ್ರೇಷ್ಠ ಶ್ರೀಷ್ಮಿಪನಿಷ್ಟ ಕೃಷ್ಣರಾಯಾ 1 ಪಾಲನ ಪಾಲಿಪನನಿಲ್ಲಿಸಿದೇ ಕೃಷ್ಣರಾಯಾ 2 ಗರಳ ಸೇವಿಸಲು ಕಂಡುತ್ಯಜಿಸಿದೆ ಕೃಷ್ಣರಾಯಾತರಳೆಗೆ ನೀ ನಿನ್ನ ಸುಧಿಮಳೆಗರೆಯುತ ಅರಳಿಸೊ ಕೃಷ್ಣರಾಯಾ3 ವಡವುಟ್ಟಿದವರಂತೆ ದುಷ್ಟ ಪಾಪಿಷ್ಟ ಬೆನ್ನಟ್ಟುವನೋ ಕೃಷ್ಣರಾಯಾಗುಟ್ಟದಿ ನಿನ್ನಯ ದೃಷ್ಟಿಲಿ ನೋಡಿ ಆ ದುಷ್ಟನ ಸುಟ್ಟು ಹಾಕೊ ಕೃಷ್ಣರಾಯಾ4 ಮಧ್ಯಾನ್ಹ ಸಮಯದಿ ಮಧ್ವದಾಸನ ಭೂಷಿಪ ಶೇಷನ ವೈರಿಯ ಕೃಷ್ಣರಾಯಾದಾನವ ಗೈದು ದೂತಿಯ ಕರದಿಂದ ದೋಷಿಯೆಂದೆನಿಸಾದೆಸಲಹಿದೊ ಕೃಷ್ಣರಾಯಾ 5 ಅರಿಯದೆ ಪೋಗಿ ನಾಥಾ ತ್ರಿನಾಮನ ಕೂಡ ಭುಂಜಿಸಿದೆ ಕೃಷ್ಣರಾಯಾಅರಿಯು ನೀನಲ್ಲದೆ ಅನ್ಯರ ನಾಕಾಣೆ ಮೈಗಣ್ಣ ಕೃಷ್ಣರಾಯಾ 6 ಎನ್ನ ತನುಮನ ಧನಧಾನ್ಯ ಮನೆಯ ಮಕ್ಕಳೆಲ್ಲಾ ನಿನ್ನ ಚರಣಾಲಯವೋ ಕೃಷ್ಣರಾಯಾನಿನ್ನ ಗುಣಗಣಗಳೆಲ್ಲಾ ಅಗಣಿತವೋ ಅನ್ನಪೂರ್ಣೆಗೆಕೃಷ್ಣರಾಯಾ7 ಆದಿ ಅನಾದಿ ಅನೇಕನಾದಿ ಜನುಮದಿ ಎನ್ನಲ್ಲಿದ್ಯೋ ಕೃಷ್ಣರಾಯಾ ದೇವ ದೇವೇಶ ನೀನೆಂದು ದಯದಿಂದ ತೋರೋಕೃಷ್ಣರಾಯಾ 8 ಚರಣದ ಚರ್ಮಲ ಚಂದಸುವಸನ ತೋದ್ರ್ಯೋ ಕೃಷ್ಣರಾಯಾ ಆಲಸ್ಯ ಮಾಡುತ ತಾಳದೆ ನಿನ್ನ ಬಲಿನ ತೋದ್ರ್ಯೋಕೃಷ್ಣರಾಯಾ 9 ನಾರಂಗಿ ಫಲವನ್ನು ತಿಂದು ನೀ ನವರಸ ಭರಿತದಿ ನಿಂತ್ಯೋ ಕೃಷ್ಣರಾಯಾ ನಾರಿಯ ಮನವ ನೀನರಿತು ನಿನ್ನ ಮನವನಿತ್ತೆ ಕೃಷ್ಣರಾಯಾ 10 ಮೂರಾರು ಎರಡೊಂದು ನಿಂದಿಪ ಮತವನ್ನು ಛಂದದಿಖಂಡಿಸಿದೊ ಕೃಷ್ಣರಾಯಾಗಂಗಾದಿ ಕ್ಷೇತ್ರವು ಹಾಗದೇ ಚರಿಸಿ ತುಂಗದಿ ಬಂದು ಮೈಗಂಧ ತೋದ್ರ್ಯೋ ಕೃಷ್ಣರಾಯಾ 11 ಅಂಗದಿದ್ದುಕೊಂಡು ಪಂಚಭೇದವ ನರುಹಿದೆ ಕೃಷ್ಣರಾಯಾ ತಾರತಮ್ಯವನಿತ್ತು ನಿರುತದಿ ಸ್ಮರಿಸೆಂದು ತರುಳರಿಗುಪದೇಶಿಸಿದೆ ಕೃಷ್ಣರಾಯಾ 12 ಅರ್ಥಿಯಿಂದಲಿ ವೇದ ವೇದ್ಯತೀರ್ಥರ ಪ್ರಬಂಧ ತೀರ್ಥವ ತೋರಿ ನೀ ಕೃತಾರ್ಥನ ಮಾಡಿದೋ ಕೃಷ್ಣರಾಯಾಸತಿಸುತ ಜನನಿ ವಡಗೂಡಿ ವಿರೋಧಿಸೆ ಶಾಪವನಿತ್ತೆಕೃಷ್ಣರಾಯಾ 13 ಸತಿಜಾರನರಿತು ಮನದಲ್ಲಿ ಯೋಚಿಸಿ ಚೋರನಂದದಿ ಜರಿದು ಚರಿಸಿದಿ ಕೃಷ್ಣರಾಯಾಚರಿಸುತ ಧರೆಯೊಳು ಚೋರ ಜಾರನ ಪೊರೆದೆ ಕೃಷ್ಣರಾಯಾ14 ಅಂಗದಿ ಅಂಗಿತೊಟ್ಟು ಭಂಗವಿಲ್ಲದೆ ಕೂಡಲಗಿರಿಯಲಿ ಭುಂಜಿಸಿದೆ ಕೃಷ್ಣರಾಯಾತೀರ್ಥಗಿಂಡಿಯ ಮುಟ್ಟೆಂದು ಅಂಧಕರಾಯನು ಪೇಳಲು ಮುಟ್ಟಲಂಜದೆ ಗಾಡಿ ಧರಿಸಿದೆ ಕೃಷ್ಣರಾಯಾ 15 ತಂಡುಲವಿಲ್ಲದೆ ಪವಾಡತನದಿ ಕೂತುದ್ದಂಡ ಭೀಮನ ಸ್ಮರಿಸಿದೊ ಕೃಷ್ಣರಾಯಾ ತೊಂಡನ ಸತಿಯ ಕೈಗೊಂಡು ಪುಂಡ ಕಂಸಾರಿಯ ಸ್ಮರಿಸಿದೊ ಕೃಷ್ಣರಾಯಾ16 ಸ್ವಾದಿ ಕ್ಷೇತ್ರದಿ ಪೋಗಿ ಛತ್ರದಿ ಅರ್ಚಿಸಿಕೊಂಡ್ಯೋ ಕೃಷ್ಣರಾಯಾ ಮನವನ ಚರಿಸುತ ತಪವನೆಗೈಯುತ ಕಪಿಯನ್ನೇ ಪುಡುಕಿದ್ಯೊ ಕೃಷ್ಣರಾಯಾ 17 ಚಿಕ್ಕ ಬದಿರಲಿ ಪೋಗಿ ಬಲು ಅಕ್ಕರದಿ ನಿನ್ನ ಪಡೆದನ ಕಪ್ಪುಗೊರಳನ ರೂಪದಿ ಕಂಡ್ಯೋ ಕೃಷ್ಣರಾಯಾ ಸ್ವಪ್ನದಿ ಸರ್ವರ ಕಾಣುತ ಸ್ವಪದವಿಯನೇರಿದ್ಯೋಕೃಷ್ಣರಾಯಾ 18 ತಾಮಸ ಜೀವನು ಜವನಂತೆ ಜೂಜಿಸೆ ಜೀವನವರಿಸಿದ್ಯೋ ಕೃಷ್ಣರಾಯಾಲೇಖವು ಬರೆಯಲು ಲೋಕಾವಧರಿಸಿದ ವಾರುಣೀಶನಂತೆ ಪೌರುಷ ತೋರಿ ಫಣಿರೋಗ ನಿತ್ಯೋ ಕೃಷ್ಣರಾಯಾ 19 ಎನ್ನ ಜನ್ಮವಾದ ದಿನದಲ್ಲಿ ಜೀವೇಶರಾಯನ ಪೂಜಿಸಿದ್ಯೋ ಕೃಷ್ಣರಾಯಾಪೂಜಾದಿ ಪೂಜಿಸಿ ಪೂರ್ಣ ಆಯುವಿತ್ತು ಜೀವನುದ್ಧರಿಸಿ ಜೋಕೆಯೋ ಕೃಷ್ಣರಾಯಾ 20 ಅಕ್ಕನ ಕೈಯಲ್ಲಿ ದಿಕ್ಕಿಲ್ಲದವರಂತೆ ಸಿಕ್ಕು ಸುಖಬಟ್ಯೋ ಕೃಷ್ಣರಾಯಾ ದಿಟ್ಟದಿ ನಿನ್ನಯ ಗುಟ್ಟು ತಿಳಿಸಿ ಬೆಟ್ಟದೊಡೆಯ ತಂದೆವರದಗೋಪಾಲವಿಠಲನಪದಪದ್ಮಗಳನ್ನೆ ಮುಟ್ಟಿ ಭಜಿಸುವಂತೆ ದಿಟ್ಟನ ಮಾಡುಶ್ರೀ ಗುರು ಕೃಷ್ಣರಾಯಾ 21
--------------
ತಂದೆವರದಗೋಪಾಲವಿಠಲರು
(ಶ್ರೀ ವಿಷ್ಣುತೀರ್ಥರು) ಮೋದ ಬೀರುತ ತಾ ಮೋದಪುರಕೆ ಬಂದವನ್ಯಾರೆಪೇಳಮ್ಮಯ್ಯಾ ಪ ಶುಕಮುನಿ ಪೇಳಿದ ಶಾಸ್ತ್ರದ ಸಾರವ ಸುರಿಸಿದ ಧೀರ ಶ್ರೀ ವಿಷ್ಣುತೀರ್ಥಾರ್ಯ ಕಾಣಮ್ಮಾಅ.ಪ. ಶುದ್ಧವೃತ್ತಿಗಳಿಂದನುಭೋಗಿಪನ್ಯಾರೆ ಪೇಳಮ್ಮಯ್ಯಾ ಶುದ್ಧ ಜೀವರತಾ ಬುದ್ಧಿ ಭೇದಿಪನ್ಯಾರೆ ಪೇಳಮ್ಮಯ್ಯಾ ಶುದ್ಧ ಶೂನ್ಯರುಪದ್ರವ ಬಿಡಿಸುವನ್ಯಾರೆ ಪೇಳಮ್ಮಯ್ಯಾ ಶುದ್ಧ ಶೃತಿ ಸ್ಮøತಿ ಪದ್ಧತಿ ತಪ್ಪದೆ ಇರುವೋ ಯತೀಶ್ವರರೇ 1 ಮರೆಪೊಕ್ಕವರನು ಮರೆಯದೆ ಪೊರೆವನದಾರೆ ಪೇಳಮ್ಮಯ್ಯಾ ಮೋರೆಯ ತೋರೆಂದು ಮಾರನಯ್ಯ ಮುರಾರಿಗೆ ಪೇಳ್ವವನಾರೆ ಪೇಳಮ್ಮಯ್ಯಾ ಮೋರೆ ಮೋಹಿಸಿ ಮೂಲೋಕವ ಸುತ್ತಿದನ್ಯಾರೆ ಪೇಳಮ್ಮಯ್ಯಾ ಮೋರೆ ಒಂದು ಮೂರು ಕಣ್ಣುಳ್ಳ ಬೊಮ್ಮನ ಪ್ರೀತಿಯ ಮಗನಮ್ಮ 2 ಬಂದು ಸೇವಿಸೆ ಘನ ಬಂಧನ ಬಿಡಿಸುವನ್ಯಾರೆ ಪೇಳಮ್ಮಯ್ಯಾ ಹಿಂದು ಮುಂದು ತನ್ನ ನಂಬಿದವರ ಮನಮಂದಿರ ದಿಪ್ಪುವನ್ಯಾರೆ ಪೇಳಮ್ಮಯ್ಯಾ ಇಂದುಧರ ಖಳವೃಂದ ಮೋಹನ ಗುರು ನಂದಿವಾಹನನೇ ಪೇಳಮ್ಮಯ್ಯಾ ಇಂದಿರೇಶ ತಂದೆವರದಗೋಪಾಲವಿಠಲನ ಸೇವಿಪ ನೀಲಕಂಠ ಕಾಣಮ್ಮಾ 3
--------------
ತಂದೆವರದಗೋಪಾಲವಿಠಲರು
(ಸರಸ್ವತಿ) ಸುಂದರೆ ಸುಗುಣಮಂದಿರೆ ನಿನ್ನ ಚರಣ ಚಂದಿರೆ ನಂಬಿದ ಶರಣಗಮನ ಸಿಂಧುರೆ ಅರವಿಂದನಯನ ಗಂಭೀರೆಅದ್ಭುತ ಮಹಿಮ ಶಂಕರೆ ಸುರಸೋಮ ಸಂತವಹರೆ ಪಂಕಜಪಾಣಿಧಾರೆ ಜಪಮಣಿ ಪುಸ್ತಕವಿರೆ ವೀಣಾಯುತ ಸಾರೆ ಸಾರುತ ವದನದಿ ಬಾರೆ ಬಂದು ಕರುಣಾವ ಬೀರೆ ಬೀರುತ ಮೊಗ ತೋರೆತೋರುತ ತಂದೆವರದಗೋಪಾಲವಿಠಲನಯನಿಸೆರೆಂತರೆ 1 ಸದನ ಸರಳೆ ನಿನ್ನ ಕಾಣುವ ಶರಣಳೆ ಯಂದ್ಯನಿಸು ಮನಬಾಗಿ ಬೇಡುವೆ ಸಾಧನವಾಗುವಂತೆ ವೈರಿಗಳುಪಟಳವ ಬಿಡಿಸೆ ತಾಯಿ ನಿನ್ನ ಪಾವನ ಪದುಮ ಪಾದನುಗ್ರಹದಿಂದಜಲಧಿಯೊಳಗಿಪ್ಪ ಜೀವಿಗಳಂತೆ ತಂಪಿನೊಳಿಪ್ಪೆ ಮಂತ್ರವಾಹನನ ರಾಣಿರಂಗಾ ತಂದೆವರದಗೋಪಾಲವಿಠಲನ ಮಂತ್ರವ ಬೋಧಿಸೆ 2 ಸಾರಥಿ ಸತಿ ಶಚಿ ಶಾಮಲ ಮಿಕ್ಕಿದವರ ಪೊರೆದಂತೆ ಪೊರೆಯಬೇಕು ಪರಶುಧಾರಿ ತಂದೆವರದಗೋಪಾಲವಿಠಲನ ತೋರೇ 3 ನಖ ಶಿಖ ಪರ್ಯಂತಾನಿಲವೋ ಹೃತ್ಸರಸಿಜದೊಳಗೆ ಪೊಳದು ನರಹರಿ ರೂಪಧಾರಿ ತಂದೆವರದಗೋಪಾಲವಿಠಲನ ಪ್ರೀಯೆ 4 ಮಂಗಳಾಂಗಿ ಮಹಾ ತುಂಗ ಮಹಿಮ ತುರಂಗ ವದನ ಚತುರಂಗ ಧರನ ಸರ್ವಂತರಂಗದೊಳು ತಂತುಬಿಡದೆ ಮಹಂತನೊಡಗೂಡಿ ಶಿರಿಕಂಠನುತ ತಂದೆವರದಗೋಪಾಲವಿಠಲನ ಪಠಿಸುವಳೆ 5 ಪಾದ ಕಂಡಮ್ಯಾಲೆ ಪಾತಕವೆಲ್ಲಿಹದೆ ತಂದೆವರದಗೋಪಾಲವಿಠಲನ ದಯದಿಂದ 6
--------------
ತಂದೆವರದಗೋಪಾಲವಿಠಲರು
101. ಹರಿಹರ ಧ್ರುವತಾಳ ಹರಿಹರರಿಬ್ಬರು ಒಂದೇ ರೂಪವ ಧರಿಸಿ | ದುರುಳ ಗುಹಾಸುರನ ಕೊಂದರೆಂದೂ | ಮರಳು ಮಾನವರು ತಿಳಿಯಾದೆ ನುಡಿವರು | ಹರಿಹರರೀರ್ವರು ಏರವಾದರೆ ಅಂದು | ಹರನು ಮೈಮರೆದು ನಿಂದನ್ಯಾತಕೆ | ಧಾರುಣಿಯೊಳಗೆ ಹಿರಣ್ಯಕಶಿಪು ದೈತ್ಯ | ಸುರರ ಓಡಿಸಿ ಪ್ರಬಲನಾಗಿರೆ | ಪರಮ ಪುರುಷ ಹರಿ ನರಹರಿರೂಪವನ್ನು | ಧರಿಸಿ ರಕ್ಕಸನ್ನ ಕೊಲ್ಲುವಾಗಲಿ, ಕೇ | ಸರಿಯಾ ಬಳಿಗೆ ಪೋಗಿ ಮಾರೆಯಾ ಬೇಡಿಕೊಂಡು | ಮೆರದಾನೇನೋ ಅವತಾರ ಮಾಡಿ | ಹರಿಯ ಅದ್ಭೂತ ಶಕ್ತಿ ನಾನಾ ಲೀಲಾ ವಿನೋದ | ಚರಿಸೂವ ಪರಬೊಮ್ಮ ಗುಣಪೂರ್ಣ ನೂ | ತುರಗವದನ ಮತ್ಸ್ಯಕೂರ್ಮಸೂಕರ ವೇಷ | ಧರಿಸಿದಾತನು ಕಾಣೋ ಯುಗಯುಗದೀ | ಕರುಣಾಸಿಂಧು ನಮ್ಮ ವಿಜಯವಿಠಲರೇಯಾ | ಹರಿಹರ ರೂಪ ಧರಿಸಿದ ಕಾಣಿರೋ 1 ಮಟ್ಟತಾಳ ದೀಪದ ಉಪಕಾರ ದಿನಪಗೆ ಏನಾಹದು | ಭೂಪತಿಗಾಳಿನ ಅನುಸುಣ್ಯಾತಕೆ | ಕೋಪವನು ತಾಳಿ ಭೃಗುಮುನಿ ಕೈಯಿಂದ | ಶಾಪನ ಕೈಕೊಂಡನಂದು ಭಸ್ಮಾ ಸುರನ | ಆ ಪತ್ತಿಗಾರದೆ ಮೊರೆ ಇಡಲು ಕೇಳಿ | ಶ್ರೀಪತಿ ಮೊಗದಲಿ ಕಾಯದದ್ದು ಕಾಣದೆ | ಗೋಪಾಲ ವಿಜಯವಿಠಲ ಹರಿಹರ | ರೂಪವು ತಾನಾದ ಅನೇಕ ರೂಪನೊ 2 ತ್ರಿವಿಡಿತಾಳ ಕಂತು ಜನಕ ಶಿವನ ಬೇಡಿಕೊಂಡದ್ದು ಪುರಾ | ಣಾಂತರದಲ್ಲಿ ಪೇಳುತಿವೆ ನೋಡಿಕೊ | ಎಂತಾಹದೀ ನುಡಿ ಸಿದ್ಧವಲ್ಲವೊ ಶ್ರೀ | ನಖ ಮೌಳಿ ಅಭೀದಾನು | ವೈರಿ ಅರ್ಧಂಗವನೆ ತಾಳಿ | ನಿಂತಿಪ್ಪ ಶ್ರೀ ಹರಿಯಾ ಕೂಡಾ | ನಂತಾ ಕಲ್ಪರೆ ನಿಗಮಾ ಗೋಚರ ಸರ್ವ | ಸ್ವತಂತ್ರನು ಒಬ್ಬಾರ ಹಂಗಿಗಾನೆ | ಚಿಂತಾಮಣಿಯಾ ಬಳಿಯಾ ನಾಡ ಹರಳನೆ ತಂದು | ಸಂತತವಿಟ್ಟರೆ ಸರಿಯಾಗೋದೆ | ಸಂತೋಷ ಪೂರ್ಣಗೆ ದೈತ್ಯನ ಕೊಲ್ಲುವುದಕೆ | ಚಿಂತೆಮಾಡಿದನೆಂಬೊ ವಾರ್ತಿಯೇನೂ | ನಿತ್ಯ ಮೇಹಕವನೆ ತೋರಿ | ಅಂತು ಗಾಣದ ನರಕಕ್ಕೆ ಹಾಕೂವ | ದಂತಿ ವರದ ದೇವ ವಿಜಯವಿಠಲ ಜಗ | ದಂತರಿಯಾಮಿಗೆ ಅಸಾಧ್ಯ ಬಂದಿಲ್ಲ 3 ಅಟ್ಟತಾಳ ಹರಗೆ ಈ ಪ್ರತಿಪ ಉಳ್ಳರೆ ಭಸುಮಾ | ಸುರಗಂಜಿ ಹರಿಗೆ ಮೊರೆ ಇಡುವನೇನೊ | ಜರಸಂಧನಿಗೆ ಇತ್ತಾವರ ಮತ್ತೇನಾಯಿತು | ಮರಳಿ ರಾಮನಕೂಡ ಶರಧನು ಪಿಡಿದು ಮೈ | ಮರೆದು ನಿಂದದ್ದು ಸರ್ವ ಜಗ ವೆಲ್ಲ ಬಲ್ಲದು | ಕರಿ ರಾಜಾ ಆ ಮೂಲಾವೆಂದು ಕರೆವಾಗ | ಪರಮೇಷ್ಠಿ ಶಿವನೊ ಮತ್ತಾವನೊ ಕಾಯ್ದವ | ಸುರರೊಳಗೀತಾ ಗಿಂದಧಿಕ ದೇವರು ಇಲ್ಲಾ | ಹರಿಹರರೂಪಾ ಶ್ರೀ ವಿಜಯವಿಠಲರೇಯಾ | ಚರಿತೆಯ ತೋರುವ ಅವರ ಯೋಗ್ಯತಾದಷ್ಟು 4 ಆದಿತಾಳ ತ್ರಿಶೂಲ ಡಮರುಗ ಭಸಿತ ರುದ್ರಾಕ್ಷಿಯು | ಪಶುವಾಹನನಾಗಿ ಇಪ್ಪದಿದೆ | ಅಸುರಾರಿಯಲ್ಲದೆ ಅನ್ಯರೂಪಗಳಲ್ಲ | ಹಸನಾಗಿ ತಿಳಿದು ಈತನ ಮಹಿಮೆ ಕೊಂಡಾಡಿ | ಕೆಸರು ಕಸ್ತೂರಿಯಾದರೆ ಕೌತುಕವಲ್ಲವೇನೊ | ಶಶಿಧರ ಹರಿರೂಪ ದೊ[ಳು]ಕೂಡುವನೆ | ವಶವಾಗಿ ಇಪ್ಪನು ತದ್ರೂಪಾದಂತೆ ಕಾಣೊ | ಕುಶನ ಬಯಸುವನು ಸಮನಾಗಿ ನಿಲ್ಲುವನೆ | ಪಶುಗಳ ಕಾಯ್ದ ನಮ್ಮ ವಿಜಯವಿಠಲ ಪ | ರಶುರಾಮ ಕ್ಷೇತ್ರದಲಿ ಹರಿಹರ ರೂಪನಾದಾ 5 ಜತೆ ತುಂಗಮಹಿಮೆ ದೇವೋತ್ತುಂಗಾ ತುಂಗಾವಾಸ | ರಂಗ ವಿಜಯವಿಠಲ ಹರಿಹರ ಮೂರುತಿ 6
--------------
ವಿಜಯದಾಸ
ಅ. ಗಣೇಶ ಸ್ತುತಿ ಕರಿಮುಖನೇ ನಮಿಸುವೆ ಕರೆಕರೆ ಪಡಿಸದೆಕರಪಿಡಿದು ಸಲಹೊ ಪ ಕೋಮಲಾಂಗನೆ ನಿನ್ನ ಕೋಮಲ ಚರಣಕೆರಗಿ ಬಿನ್ನೈಸುವೆಅ.ಪ. ಕಡೆಹಾಯಿಸು 1 ಕಾಮಗೆದ್ದ ನಿಷ್ಕಾಮತನದಿಂದ ಕಾಮನಯ್ಯನ ಜಪಿಸುವ 2 ಕಾಮಹರನ ಸಖ ತಂದೆವರದಗೋಪಾಲವಿಠ್ಠಲನ ತೋರಿಸು ಎಂದು3
--------------
ತಂದೆವರದಗೋಪಾಲವಿಠಲರು