ಒಟ್ಟು 21 ಕಡೆಗಳಲ್ಲಿ , 10 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಧ್ವಮತವ ಪೊಂದದವನ ಭಕುತಿಯಾತಕೆ ಪ ಊಧ್ರ್ವಪುಂಡ್ರ ತಿದ್ದದವನ ಕರ್ಮವ್ಯಾತಕೆಅ.ಪ ದಾನವನ್ನು ಮಾಡದವನ ದ್ರವ್ಯವ್ಯಾತಕೆ | ಸ್ನಾನವನ್ನು ಮಾಡದವನ ಮೌನವ್ಯಾತಕೆ | ಮಾನಿನಿಯು ಇಲ್ಲದವನ ಬದುಕು ಯಾತಕೆ | ಧ್ಯಾನವನ್ನು ಅರಿಯದವನ ಪೂಜೆ ಯಾತಕೆ 1 ವಂಶವನ್ನುದ್ಧರಿಸದಂಥ ಮಗನು ಯಾತಕೆ | ಹಿಂಸೆಯನ್ನು ಪಡಿಸುವಂಥ ಅರಸು ಯಾತಕೆ || ಸಂಸಾರವನು ಒಲ್ಲದಂಥ ಸತಿಯು ಯಾತಕೆ | ಕಂಸಾರಿಯನು ತಿಳಿಯದಂಥ ಜ್ಞಾನವ್ಯಾತಕೆ 2 ಬಂಧು ಬಳಗ ಬಿಟ್ಟು ಉಂಬ ನೆಂಟರ್ಯಾತಕೆ | ಕಂದರನ್ನು ಮಾರುತಿಪ್ಪ ತಂದೆಯಾತಕೆ || ಬಂದ ಅತಿಥಿಗನ್ನವಿಕ್ಕದ ಸದನವ್ಯಾತಕೆ | ನಿಂದೆಗಳು ಮಾಡುತಿಹನಾಚಾರವ್ಯಾತಕೆ 3 ಗುರೂಪದೇಶವಿಲ್ಲದಂಥ ಮಂತ್ರವ್ಯಾತಕೆ | ಹಿರಿಯರನ್ನು ಸಾಕದವನ ಪುಣ್ಯವ್ಯಾತಕೆ || ಚರಿಸಿ ತೀರ್ಥಯಾತ್ರೆ ಮಾಡದ ದೇಹವ್ಯಾತಕೆ | ವರ-ಪ್ರಸಾದವೀಯದಂಥ ದೇವರ್ಯಾತಕೆ4 ಏಕಾದಶಿಯ ಮಾಡದವನ ವ್ರತವು ಯಾತಕೆ | ಏಕಮನಸು ಇಲ್ಲದವನ ನಡತೆ ಯಾತಕೆ || ಸಾಕಿದವನ ಕೊಲ್ಲುವಂಥ ಭಂಟನ್ಯಾತಕೆ | ಲೋಕವಾರ್ತೆ ಬಿಡದವನ ಜಪವು ಯಾತಕೆ 5 ಭಾಷೆ ಬದ್ಧವಿಲ್ಲದವನ ಮಾತು ಯಾತಕೆ | ಕಾಸುವೀಸÀಕೆ ಬಡಿದಾಡುವ ಅನುಜರ್ಯಾತಕೆ || ಲೇಸು ಹೊಲ್ಲೆಹ ನೋಡದಂಥ ಗೆಳೆಯನ್ಯಾತಕೆ | ಆಸೆಯನ್ನು ಬಿಡದ ಸನ್ಯಾಸವ್ಯಾತಕೆ 6 ತಪ್ತ ಮುದ್ರೆಯಿಲ್ಲದವನ ಜನ್ಮವ್ಯಾತಕೆ | ಗುಪ್ತದಲ್ಲಿ ನಡೆಯದಿಪ್ಪ ದಾಸನ್ಯಾತಕೆ || ಆಪ್ತಬಂಧು ವಿಜಯವಿಠ್ಠಲನ ಶ್ರೀ ಚರಣದಿ | ಕ್ಲುಪ್ತ ಮೀರದೆ ನಡೆದ ಮೇಲೆ ನರಕವ್ಯಾತಕೆ 7
--------------
ವಿಜಯದಾಸ
ಮೂಕನಾಗೋ ಮನವೆ ನಿನಗೆ ಯಾಕೀ ಲೋಕ ಗೊಡವೆ ಪ ಮೂಕನಾಗಿ ಬಹುಜೋಕೆಯಿಂದ ನಡಿ ಏಕಾಂತ ಗುಟ್ಟೀ ಲೋಕರಿಗರುಹುದೆ ಅ.ಪ ಹೇಳಿದರೇನಾದೋ ನೀ ಬಲು ಕೇಳಿದರೇನಾದೊ ಹೇಳಿಕೆ ಕೇಳಿಕೆ ಗಾಳಿಯ ಮೊಟ್ಟ್ಯೆಂದು ನೀಲಶಾಮನ ಮನದಾಲಯದೊಳಗಿಟ್ಟು 1 ಅವನಿ ಗೊಡವೆ ಯಾಕೋ ಹರಿಯೆಂದು ಭವಭಯವನು ಕಳಕೋ ದಿವನಿಶಿ ನಿಜದನುಭವದೊಳಗಾಡುತ ಭವಗೆಲುವಿನ ಸುದ್ದಿ ಭವಿಗಳಿಗುಸುರದೆ 2 ಪಾದ ಪಿಡಿಯೋ ಮುಂದಿನ್ನು ಹುಟ್ಟು ಸಾವು ಗೆಲಿಯೊ ದುಷ್ಟಮತಿಗಳ ಗೋಷ್ಠಿಗೆ ಹೋಗದೆ ಬಿಟ್ಟಗಲದೆ ನಿಜಪಿಡಿದು ನೀತಿ 3 ಮತ್ರ್ಯಜನರ ಇದಿರು ನೀ ಬಲು ಗುಪ್ತದಿಂದಿರು ಚದುರ ಸತ್ಯತಿಳಿದು ಹರಿ ಸರ್ವೋತ್ತಮನಂಘ್ರಿ ಚಿತ್ತದಿ ನಿಲ್ಲಿಸಿ ಅತ್ಯಾನಂದಗೂಡಿ 4 ನಂಬಿಗಿಲ್ಲದಲ್ಲಿ ಸುಬೋಧ ಡಂಬವೆನಿಪುದಲ್ಲಿ ಜಂಬವಡಿಯದೆ ಕುಂಭಿನಿಯೊಳು ನೀ ನಂಬಿ ಶ್ರೀರಾಮನ ಗುಂಭದಿಂ ಭಜಿಸುತ 5
--------------
ರಾಮದಾಸರು
ವಿಶೇಷ ಎಂಥ ರಾಸಿಯೊ ಶ್ರೀಕಾಂತನ ಮುಖಸೂನು ನಿಂತು ಏರುವೋ ರಾಶಿನ್ಯಾವುದೊ ಇದನೆಲ್ಲರು ಪೇಳಿರಿ 1 ರಂಗ ಮೂರುತಿ ಸುತನ್ವೊೈರಿ ಏರಿಪೋ ಹೆಸ- ರೆಂದುಕೊಂಬುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 2 ಹರಿಸುತನಟ್ಟುಳಿಯಿಂದ ಪುಟ್ಟುವುದೇನು ಪರಮ ಗುಪ್ತದ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 3 ಇರುಳು ಹಗಲು ಮೈಯ್ಯ ತೊಳೆಯುತ ಮಣ್ಣಿನ ಲ್ಲೊ ್ಹರಳುತಿಪ್ಪುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 4 ಒದ್ದು ಮಾತಂಗನ ಗದ್ರಿಸ್ತಮುರಿದ ಪ್ರ- ಸಿದ್ಧನೆನಿಪ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 5 ಜೋಡು ವಂಶುದ್ಧಾರ ಮಾಡುವುದೀ ರತ್ನೆಂ- ದಾಡಿಕೊಂಬುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 6 ಜಗದೊಳಗೆಲ್ಲ ಭಾರಕರ್ತನಾಗಿ ಏರಿಸಿಳುಹೋ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 7 ಅಂಧಕಾರದಲಿದ್ದು ಬಂದ ಜನರ ಮುಟ್ಟಿ ದುಂದೆಬ್ಬಿಸುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 8 ದೊರೆಸುತ ತಾ ಬಂದು ಸರುವ ಜನರ ಮುಂದೆ ಮುರಿದುಬಿಷ್ಠುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 9 ಭರದಿ ಬಂದು ಕಾಲಕೆದರುತ ತನ್ನ ್ಹಲ್ಲು ಮುರಿಸಿಕೊಂಬುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 10 ರುಂಡ ಮಾಲೆಗಳೆಲ್ಲ ಗುಂಡಿನಂಥ ದೇಹ- ಕ್ಕ್ಹೊಂದೇರಿಳಿವೊ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 11 ಹತ್ತರೊಳಗೆ ಒಂಬತ್ತು ಬಿಟ್ಟ ಹೆಸ ರಿಟ್ಟುಕೊಂಬುವ ರಾಸಿನ್ಯಾವುದೊ ಇದನೆಲ್ಲರು ಪೇಳಿರಿ 12 ಯೋಚನೆ ಮಾಡಿ ಆಲೋಚಿಸಿ ನೋಡರನೇಕ ಮೂಢಜ್ಞಾನಿಗೆ ತಿಳಿವೊದೆ ಇದನೆಲ್ಲರು ಪೇಳಿರಿ 13 ಈಸು ರಾಶಿಗಳು ಭೀಮೇಶಕೃಷ್ಣನ ದಯ- ದೀಕ್ಷಣದಲ್ಲೆ ತಿಳಿದು ಪೇಳಿ ಇದನೆಲ್ಲರು ಪೇಳಿರಿ 14
--------------
ಹರಪನಹಳ್ಳಿಭೀಮವ್ವ
ವೀಣೆ ಧರಿಸಿದ ಕಾರಣೇನೊ ಹನುಮಾ ಜಾಣತನವಿದು ಏನು ಪೇಳೊ ಬಲಭೀಮ ಪ. ತ್ರೇತೆಯಲಿ ಶ್ರೀ ರಾಮದಾಸತ್ವ ಚರಿಸಿದುದು ಖ್ಯಾತಿ ಬರಲಿಲ್ಲೆಂದು ಮನದಿ ತಿಳಿದೂ ಪ್ರೀತಿಯಿಂದಲಿ ಕೃಷ್ಣನಂಘ್ರಿ ಗುಪ್ತದಿ ಭಜಿಸಿ ನೀ ತಪೋನಿಧಿ ಎನಿಸಿ ಮುನಿಯಾದ ಮಹಿಮಾ 1 ಮೂರು ಅವತಾರದಲಿ ತೋರದಂತ್ಹರಿ ದಾಸ್ಯ ಆರಾಧಿಸುತ ಮೀಸಲಾಗಿ ಚಲಿಸೇ ಧೀರಭಕ್ತರು ಬಯಲಿಗೆಳೆದು ಖ್ಯಾತಿಯ ಪಡೆಯೆ ತೋರದಂತಾಗೆ ಬೇಗನೆ ದಾಸ್ಯ ವಹಿಸೀ 2 ದಾಸರನುಭವಿಪ ಆನಂದ ನೋಡುತ ಭಾರ ತೀಶ ನೀ ಮೊದಲು ದಾಸನು ಎನಿಸಲು ವಾಸುಕೀಶಯನ ಗೋಪಾಲಕೃಷ್ಣವಿಠ್ಠಲಗೆ ದಾಸನಾಗುತ ವೀಣೆ ಪುಸ್ತಕವ ಪಿಡಿದಿಯಾ 3
--------------
ಅಂಬಾಬಾಯಿ
ಶರಣು ಹೋಗುವೆನಯ್ಯ ನಾನು ಪ ಸಿರಿ ಅಜಭವ ಶಕ್ರ ಸುರಸ್ತೋಮಗಳನೆಲ್ಲ ಸರಸದಿಂದ ಆಳ್ವ ಪರಮಪುರುಷ ಹರಿಗೆ ಶಿರಬಾಗಿ ನಮಿಸುತ ಅ.ಪ. ನಿರುತ ಆನಂದದಿ ಮೆರೆದು ಇರುವಂಥ ನಿರಜ ನಿತ್ಯನು ಆದ ಉರಗನ ಮೇಲ್ವರಗುತ ಪರಮ ಪರಾತ್ಪರ ಪರಮವೇದದ ಸಾರ ಪರಮ ಸದ್ಗುಣ ಪೂರ್ಣ ಪುರುಷಸೂಕ್ತ ವಂದ್ಯ ಪರಿಪರಿ ರೂಪದಿ ಸರ್ವತ್ರ ಇರುವಂಥ ನಿರ್ಗುಣ ನಿರಾಕಾರ ನಿರುಪಮ ನಿಸ್ಸೀಮ ನಿರುತ ತೃಪ್ತನು ಆದ ಸರ್ವಸಾರ ಭೋಕ್ತ ಸರ್ವರ ಬಿಂಬನು ಸರ್ವಗುಣ ಪೂರ್ಣ ಸರ್ವರ ಆಧಾರ ಸರ್ವೇಶ ಸ್ವತಂತ್ರ ಸರ್ವಶಬ್ದ ವಾಚ್ಯ ಸರ್ವರಿಂ ಭಿನ್ನನು ಸರಸಸೃಷ್ಟಿಯ ಮಾಳ್ವ ನೀರಜನಾಭಗೆ ಚರಣವ ಪಿಡಿಯುತ್ತ ಉರುಗಾಯನ ದೇವ ಸಲಹು ಸಲಹೆಂದು 1 ವಾರಿಯೊಳಾಡುವ ಭಾರವಹೊರುವ ಕೋರೆಯತೀಡುವ ಕರುಳಾನು ಬಗೆಯುವ ವರವಟು ಆಗುವ ಪರಶುವ ಪಿಡಿಯುವ ನಾರಿಯ ಹುಡುಕುವ ನಾರಿಯ ಕದಿಯುವ ಬರಿಮೈಯ್ಯ ತೋರುವ ತುರುಗವನೇರುವ ನಾರಿಯು ಆದವ ಭಾರತ ಮಾಡುವ ವರ ಸಾಂಖ್ಯ ಹೇಳುವ ಕರಿಯನು ಪೊರೆಯುವ ಪೋರಗೆ ಒಲಿದವ ವರ ಋಷಭನಾದ ಹರಿ ಯಜ್ಞ ನಾದವ ತರಿವ ರೋಗಂಗಳ ವರಹಂಸ ರೂಪನು ತುರುಗ ವೇಷಧಾರಿ ನಾರಾಯಣ ಮುನಿಯೆ ಗುರು ದತ್ತಾತ್ರೇಯನೆ ಪರಿಸರ ಪರಮಾಪ್ತ ಪೊರೆಯೊ ಮಹಿದಾಸನೆಂದು ಕರವೆತ್ತಿ ಮುಗಿಯುತ 2 ಪಾಪಿಯ ಪೊರೆದವಗೆ ತಾಪ ಇಲ್ಲದವಗೆ ಅಪವರ್ಗದಾತಗೆ ವಿಪನ ಏರಿದವಗೆ ಗೋಪತಿಯಾದವಗೆ ತಾಪವ ಮೆದ್ದವಗೆ ಚಾಪವ ಮುರಿದವಗೆ ಚಪಲ ಇಲ್ಲ ದವಗೆ ಕಪಟರ ವೈರಿಗೆ ಗುಪ್ತದಿ ಇರುವಗೆ ವಿಪ್ರನ ಸಖನಿಗೆ ಅಪ್ರಮೇಯನಿಗೆ ಗೋಪೇರ ವಿಟನಿಗೆ ತಾಪಸ ಪ್ರೀಯಗೆ ವಿಪ್ರಶಿಶು ತಂದವಗೆ ಮುಪ್ಪಿಲ್ಲ ದವಗೆ ತ್ರಿಪುರಾರಿ ಸಖಗೆ ಕೃಪಣ ವತ್ಸಲನಿಗೆ ತಪ್ಪು ಮಾಡದವಗೆ ಆಪ್ತತಮನಿಗೆ ಸಪ್ತ ಶಿವವ್ಯಕ್ತನಿಗೆ ಶ್ರೀಪತಿಯಾದವಗೆ ಕಪಟನಾಟಕ ಪ್ರಭು ಗೋಪಾಲಕೃಷ್ಣಗೆ ಒಪ್ಪಿಸಿ ಸರ್ವಸ್ವ ಅಪ್ಪನೆ ಅಪ್ಪನೆ ತಪ್ಪದೆ ಸಲಹೆಂದು 3 ಅನ್ನವು ಆದವಗೆ ಅನ್ನಾದ ನೆಂಬುವಗೆ ಅನ್ನದ ಖ್ಯಾತನಿಗೆ ಚಿನ್ಮಯ ರೂಪಗೆ ಬೆಣ್ಣೆಯ ಕಳ್ಳಗೆ ಅನಾಥನಾದವಗೆ ಕನಕಮಯನಿಗೆ ಅನಂತರೂಪನಿಗೆ ಉಣ್ಣದೆ ಇರುವವಗೆ ಉಣ್ಣುತ ಉಣಿಸುವವಗೆ ಜ್ಞಾನಿಗಮ್ಯನಿಗೆ ಜ್ಞಾನ ದಾಯಕನಿಗೆ ಗುಣತ್ರಯ ದೂರಗೆ ಭಾನುವ ತಡೆದವಗೆ ಆನತ ಬಂಧುವಿಗೆ ಅನುಪಮನಾದವಗೆ ತನುಮನ ಪ್ರೇರಿಪಗೆ ದಾನವ ವೈರಿಗೆ ತನ್ನಲ್ಲೆ ರಮಿಸುವನಿಗೆ ಮನ್ಮಥ ಪಿತನಿಗೆ ಪೆಣ್ಣಿನ ಪೊರೆದವಗೆ ಅಣುವಿಗೆ ಅಣುವಿಹಗೆ ಘನಕೆ ಘನ ತಮನಿಗೆ ಕಣ್ಣಿಲ್ಲದೆ ನೋಳ್ಪ ಉನ್ನತ ಪ್ರಭುವಿಗೆ ಬೆನ್ನು ಬೀಳುವೆ ನಾನು ಇನ್ನು ಕಾಯೋ ಎಂದು 4 ಹೇಯನಾಗದ ಶೃತಿ ಗೇಯನು ಸುಜನರ ಪ್ರೀಯನು ಸರ್ವರ ಕಾಯುವ ಸುಂದರ ಹಯಮುಖ ಸರ್ವದ ಪ್ರಾಯದಿ ಮೆರೆಯುವ ಗಾಯನ ಪ್ರಿಯನಾದ ಮಾಯಾರಮಣ ಭಾವ ಮಾಯೆ ಹರಿಸಿ ಮುಕ್ತಿ ಭಾಗ್ಯ ಭಕ್ತರಿಗೀವ ತೋಯಜಾಂಬಕ ಸುರ ನಾಯಕರಿಗೆ ಭಕ್ತಿ ತೋಯದಿ ಮುಳುಗಿಪ ಶ್ರೀಯರಸಾಭಯ ದಾಯಕ ಗುರು ಮಧ್ವ ರಾಯರ ಪ್ರಿಯನಾದ ಜೇಯ ಜಯಮುನಿ ವಾಯುವಿನ ಅಂತರದಿ ನವನೀತ ಧರಿಸಿರ್ಪ ತಾಂಡವ ಸಿರಿಕೃಷ್ಣ ವಿಠಲ ರಾಯನಿಗೆ ಕಾಯ ವಾಚಮನದಿ ಗೈಯ್ಯುವ ಸಕಲವನು ಈಯುತ ನಮಿಸುತ ಜೀಯನೆ ಜೀಯನೆ ಕಾಯಯ್ಯ ಕಾಯೆಂದು 5
--------------
ಕೃಷ್ಣವಿಠಲದಾಸರು
ಶ್ರೀಹರಿಸ್ತುತಿ ಅಪ್ಪವೆಂಕೋಬನ ನೇತ್ರದಲಿ ನೋಡಿ ಪವಿತ್ರಳಾದೆನೋ ಇಂದಿಗೆ ತಪ್ಪುಗಳೆಲ್ಲ ನಿನಗರ್ಪಿಸುವೆ ನಾನೀಗ ಒಪ್ಪಿಕೋಬೇಕೋ ತಿಮ್ಮಪ್ಪ ಕರುಣಾನಿಧಿಯೆ ಹೆದÀರದೆ ಭೃಗುಋಷಿಯು ಒದೆಯೆ ಪಾದಗಳಿಂದ ಎದೆಯ ಮೇಲಿರುವ ಲಕ್ಷ್ಮಿ ಕದನಮಾಡುತವೆ ಕೊಲ್ಲಾಪುರಕೆ ನಡೆತರಲು ಒದಗಿ ವೈಕುಂಠ ಬಿಟ್ಟು ಯದುನಾಥ ಯಾರಿಲ್ಲದಂತೆ ಗುಡ್ಡವ ಸೇರೆ ಇದು ನಿನಗೆ ಸದನಾಯಿತೊ ದೇವ 1 ಹುತ್ತಿನೊಳಗಡಗಿ ನೀ ಗುಪ್ತದಿಂದಿರುತಿರಲು ಉತ್ತಮ ಗೋವು ಬಂದು ನಿತ್ಯದಲ್ಲಿ ಕ್ಷೀರವನು ಕರೆಯೆ ಗೋವಳನಿಂದೆ ನೆತ್ತಿಯನೊಡೆದುಕೊಂಡು ಸಿಟ್ಟಿನಿಂದಲಿ ಚೋಳರಾಯಗೆ ಶಾಪವನು ಕೊಟ್ಟು ಕಿರೀಟವನು ಇಟ್ಟು ಮೆರೆಯುವ ದೇವ 2 ಮಾಯಾರಮಣನೆ ನಿನ್ನ ಗಾಯದೌಷಧಕ್ಹೋಗಿ ಭೂರಮಣನ್ವರಾಹನಿಂದ ನೂರುಪಾದ ಭೂಮಿಕೊಟ್ಟರೆ ಸಾಕೆಂದು- ಪಾಯದಿಂದದನ್ವ್ಯಾಪಿಸಿ ತಾಯಿ ಬಕುಳಾದೇವಿಯಿಂದ ಪೂ ಜೆಯಗೊಂಬೊ ಶ್ರೀಯರಸು ನಿನಗೆ ಸರಿಯೆ ದೇವ 3 ನಾಟಕಧಾರಿ ಕಿರಾತರೂಪವ ಧರಿಸಿ ಬೇಟೆಗೆನುತಲಿ ಪೋಗಲು ತೋಟದಲಿ ಚೆಲ್ವೆ ಪದ್ಮಾವತಿಯ ಕಡೆಗಣ್ಣ ನೋಟದಲಿ ಮನಸೋಲಿಸಿ ಬೂಟಕತನದಿ ಜಗಳಾಟವನ್ನೆ ಮಾಡಿ ಪಾಟುಬಟ್ಟು ಕಲ್ಲಲೇಟುತಿಂದೆಯೋ ದೇವ 4 ಗದಗದನೆ ನಡುಗುತಲಿ ಕುದುರೆಯನು ಕಳಕೊಂಡು ಪದ್ಮಾವತಿ ವಾರ್ತೆಯನ್ನು ಬಳಿಯ ಲಿದ್ದ ಬಕುಳಮಾಲಿಕೆಗೆ ಬೋಧಿಸಿ ಕಳಿ ಸಿದಾಕಾಶನಲ್ಲಿ ಚದುರಮಾತಿನ ಚಪಲ ಕೊರವಂಜಿ ನೀನಾಗಿ ಕಣಿಯ ಹೇಳಲು ಎಲ್ಲಿ ಕಲಿತೆಯೊ ಮಹದೇವ5 ಬಂಧುಬಳಗವ ಕೂಡಿ ಭಾರಿ ಸಾಲವ ಮಾಡಿ ಕರ ವೀರದಿಂದೆ ಅಂಡಲೆದು ಕರೆಸಿ ಕಾಣುತಲಿ ಲಕ್ಷ್ಮಿಯನಪ್ಪಿ ಕೊಂಡು ಪರಮ್ಹರುಷದಿಂದ ಮಂದಗಮನೆಯೆ ನಿನ್ನ ಮಾತುಲಾಲಿಸಿ ಮಾಡಿ ಕೊಂಡೆ ಪದ್ಮಾವತಿಯ ಅಂದೆಯೊ ಎಲೆ ದೇವ 6 ಆಕಾಶರಾಜ ಅನೇಕ ಹರುಷದಿ ಮಾಡೆ ತಾ ಕನ್ಯಾದಾನವನ್ನು ಹಾಕಿದ ರತ್ನಮಾಣಿಕ್ಯದ ಕಿರೀಟವನು ಬೇಕಾದಾಭರಣ ಭಾಗ್ಯ ಸಾಕಾಗದೇನೊ ಬಡವರ ಕಾಡಿ ಬೇಡುವುದು ಶ್ರೀಕಾಂತ ನಿನಗೆ ಸರಿಯೆ ದೇವ 7 ಹೇಮಗೋಪುರದಿ ವಿಮಾನ ಶ್ರೀನಿವಾಸ ದೇವರನು ನೋಡಿ ನಮಿಸಿ ಕಾಮಿಸಿ ಕಂಡೆ ಹೊನ್ನ್ಹೊಸ್ತಿಲು ಗರುಡ ಗಂಬದ ಸುತ್ತ ಪ್ರಾಕಾರವೊ ಸ್ವಾಮಿಪುಷ್ಕರಣಿಯಲಿ ಸ್ನಾನ ಪಾನವ ಮಾಡಿ ನೋಡಿದೆನು ನಿನ್ನ ಭಕುತರ ದೇವ 8 ಪÀನ್ನಗಾದ್ರಿ ವೆಂಕಟನ್ನ ರಥ ಶೃಂಗಾರ ವರ್ಣಿಸಲಳವೆ ನಮಗೆ ಕಣ್ಣಾರೆಕಂಡೆ ಗರುಡೋತ್ಸವದಲಂಕಾರ ಇನ್ನೆಲ್ಲು ಕಾಣೆ ಜಗದಿ ಎನ್ನ ಕಿವಿಗಾನಂದವೊ ದೇವ 9 ಪಾದದಲ್ಲೊಪ್ಪೋ ಪಾಗಡ ರುಳಿ ಕಿರುಗೆಜ್ಜೆ ಮೇಲಲೆವೊ ಪೀತಾಂಬರ ಮಾಲೆ ಶ್ರೀವತ್ಸದ್ಹಾರ ಮೇಲಾದ ಸರಿಗೆ ಸರ ಪದಕವೊ ಕಮಲ- ದಳಾಯತಾಕ್ಷನ ನೋಡಿದೆ ದೇವ 10 ಕರಗಳಲ್ಲಿಟ್ಟು ಕಂಕಣ ಕಡಗ ಭುಜಕೀರ್ತಿ ವರ ಶಂಖ ಚಕ್ರಧಾರಿ ಗಿರಿಯ ಭೂವೈಕುಂಠವೆಂದು ತೋರುತ ನಿಂತ ಶಿರದಿ ಕಿರೀಟ ಧರಿಸಿ ಬಿಳಿಯ ತ್ರಿನಾಮ ಭೀಮೇಶಕೃಷ್ಣನ ಮುಖದಿ ಹೊಳೆವ ಮೂರ್ತಿಯ ನೋಡಿ ಹೇ ದೇವ11
--------------
ಹರಪನಹಳ್ಳಿಭೀಮವ್ವ