ಒಟ್ಟು 133 ಕಡೆಗಳಲ್ಲಿ , 49 ದಾಸರು , 129 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತನೇ ಪರಮಾತ್ಮ ಪರತತ್ತ್ವ ಪ್ರಣವನೆಂ-ದರಿತು ಪೂಜಿಸಬಾರದೆಆತನಾ ಪದತೋಯ ಶಿರಸಾ ವಹಿಸಿ ಪಾನ-ದಿಂದಧಿಕರಾದರು - ಜೀವಿಗಳು ಮನುಜ ಪ ದಾನಮುಖದಲಿ ಬಲಿಯ ಬೇಡಿ ಭುವನವನೊಂದುಪದದಿ ಅಳೆದವನಾವನುಮಾನದಾನವನ ನಾಲ್ಮೈಯ ಮುಡಿಗಟ್ಟಿವನಮಾನ ಉಳುಹಿದನಾವನುಮಾನ ಮರುಳಾದವನ ಮರ್ದಿಸಿದ ಬ್ರಹ್ಮಹತ್ಯೆಮಹಿಗೆ ಇಳುಹಿದನಾವನುಭಾನು ಮೊದಲಾದಖಿಳ ಬ್ರಹ್ಮಾಂಡಗಳಿಗೊಂದುಪಾದ ಹೊದಿಸಿದನಾವನು ? 1 ಕೊಟ್ಟ ವರಗಳನೆಲ್ಲ ಕೊಡಹಿ ಬಹು ದನುಜರನುಕುಟ್ಟಿ ಹಾಕಿದನಾವನುದಿಟ್ಟವರ ಕಾಲಾಂಣ(?) ಕಟ್ಟಿ ಮುನಿ ದೈವಗಳ ಪಟ್ಟದರಸು ಅದಾವನುಬೆಟ್ಟದಾತ್ಮಜೆ ಬೆನಕ ಪೆಸರ್ಗೊಂಡು ತನ ನಾಮಗುಟ್ಟಿನಲಿ ನೆನೆಸಿದುದಾವನುಗಟ್ಟಿಯಾಗಿ ಮುನಿಪೆಣ್ಗೆ ಕೊಟ್ಟಿದ್ದ ಶಾಪವನುಬಿಟ್ಟೋಡಿಸಿದನಾವನು ? 2 ಅಖಿಳ ಮಹಿ ನಟಿಸುವ ಮಹಾತ್ಮಕನಾದ ಸಾತ್ತ್ವಿಕನಾವನುಆದಿಯಲಿ ಜಗಂಗಳಿರದಂದು ವಟಪತ್ರಶಯನನಾದ ಮೂಲವದಾವನುಆದಿಕೇಶವ ದೈವವಲ್ಲದಿನ್ನಿಲ್ಲವೆಂದುಆಗಮವು ನುಡಿವುದಾವನನು ? 3
--------------
ಕನಕದಾಸ
ಆತ್ಮನಿವೇದನೆ ಅಂಜಬ್ಯಾಡ ಅಂಜಬ್ಯಾಡೆಲೋ ಜೀವ ಭವ ಭಂಜನ ಹರಿ ಶರಣರ ಕಾವಾ ಪ ಮಾತ ಹೇಳುವೆ ನಿನಗೊಂದ ಪರರಜ್ಯೋತಿ ಕಾಣುವತನಕೀ ಬಂಧ ಭೂತ ಭೇತಾಳಗಳಿಂದ ನಿನಗೆ ಭೀತಿ ಪುಟ್ಟಲಿಲ್ಲೋ ಮತಿಮಂದ 1 ಛೇದ ಭೇದಗಳು ನಿನಗೆಲ್ಲಿ ನೀ ಅ- ನಾದಿ ನಿತ್ಯವೆಂಬುದ ಬಲ್ಲಿ ವೇದ ಬಾಹ್ಯರಾಗದೆ ಇಲ್ಲಿ ಹರಿ ಪಾದ ಇನ್ಯಾಕೆ ಪೂಜಿಸಲೊಲ್ಲಿ 2 ನೀನು ನಿನ್ನದು ಅಲ್ಲವೋ ನೋಡಾ ದೇಹ ನಾನು ನನ್ನದೆಂಬರೋ ಮೂಢಾ ಮಾನಹಾನಿ ಮಾಡಿಕೊಳಬೇಡ ಬಿಡು ಸಾನುಬಂಧಿಗಳ ಸ್ನೇಹವ ಗಾಢ 3 ಅಹಿತಾದಿ ವಿಭೂತಿಯ ನೋಡೋ ಸೋಹಂ ಎಂಬರೆ ವಿಘಾತಿಯ ನೇಹವ ಪಡೆವರೆ ಗೀತೆಯ ಕೇಳಿ ಮೋಹವ ಕಳಕೋ ವಿಜಾತಿಯ 4 ಮಧ್ವವಲ್ಲಭ ಮಾಡಿದ ಗ್ರಂಥ ದೊಳಗದ್ವೈತತ್ರಯ ತಿಳಿದಂಥ ವಿದ್ವಾಂಸರು ಚರಿಸುವ ಪಂಥವನ್ನು ಸದ್ಭಕ್ತಿಲಿ ಸಾಧಿಸು ಭ್ರಾಂತ 5 ಜಾಗರ ಸ್ವಪ್ನ ಸುಷುಪ್ತಿಗಳೊಳು ವರ ಭೋಗಿಶಯನನ ರೂಪಗಳೇಳು ಭಾಗವತ ಬಲ್ಲವರ ಕೇಳು ಬೃಹ- ದ್ಯಾಗವ ಹರಿಗರ್ಪಿಸಿ ಬಾಳು 6 ಪಂಚಾತುಮ ಸಿಲುಕವ ಷಟ್ ಪಂಚ ಪಂಚಿಕೆಗಳ ಕರ್ಮವ ಮೀಟಿ ಪಂಚಿಕೆ ತಿಳಿದುಕೊಂಡರೆ ನಿಷ್ಪ್ರ ಪಂಚನಾಗಿ ನೀ ಕಡೆದಾಟಿ7 ಜ್ಞಾನೇಚ್ಛಾ ಕ್ರಿಯಾ ಶಕ್ತಿಗಳೆಂಬ ಈ ಮ- ಹಾನುಭಾವದಿ ನಿನ್ನ ಬಿಂಬ ತಾನೇ ಸರ್ವತ್ರದಲಿ ಕಾಂಬ ಇದ- ಕೇನು ಸಂದೇಹವಿಲ್ಲವೋ ಶುಂಭ 8 ತಾಪತ್ರಯಂಗಳು ನಿನಗೆಲ್ಲಿ ಪುಣ್ಯ ಪಾಪಕ್ಕೆ ಲೇಪನಾಗೋಕೆ ಹೊಲ್ಲ ಪ್ರಾಪಕ ಸ್ಥಾಪಕ ಹರಿಯೆಲ್ಲ ಜಗ ದ್ವ್ಯಾಪಕನೆಂದರಿತರೆ ಕೊಲ್ಲ 9 ಡಿಂಭದೊಳಗೆ ಚೇತನವಿಟ್ಟು ಜಗ- ದಂಬಾರಮಣ ಮಾಡಿದ ಕಟ್ಟು ಉಂಬುಡುವ ಕ್ರಿಯೆಗಳನಷ್ಟು ನಿನ್ನ ಬಿಂಬನಾಧೀನನಾದರೆ ಇಷ್ಟ 10 ಲಕ್ಕುಮಿ ಅವನ ಪಟ್ಟದ ರಾಣಿ ದೇ- ವರ್ಕಳು ಪರಿಚಾರಕ ಶ್ರೇಣಿ ವಕ್ಕಲು ನಾವೆಲ್ಲರು ಪ್ರಾಣಿ ದಶ- ದಿಕ್ಕುನಾಳುವ ನಮ್ಮ ದೊರೆಯ ನೀ 11 ಮತ್ರ್ಯಲೋಕದ ಸಂಪದ ಪೊಳ್ಳು ಜಗ ಮಿಥ್ಯಮತವೆಂದಿಗು ಜೊಳ್ಳು ಶ್ರುತ್ಯನ್ನರ್ಥ ಪೇಳ್ವದೇ ಸುಳ್ಳು ನೀ ಭೃತ್ಯನು ಕರ್ತನಾಗದಿರೆಲೋ ಕೇಳು12 ಮಾಧವನಲಿ ತನುಮನ ಮೆಚ್ಚು ಕ್ರೋಧರೂಪದ ಕಲಿಮಲ ಕೊಚ್ಚು ಮೋದತೀರ್ಥರ ವಚನವ ಮೆಚ್ಚು ವಾದಿ ಮತಕ್ಕೆ ಬೆಂಕಿಯ ಹಚ್ಚು 13 ಸವಿವುಳ್ಳರೆ ಕೇಳೆನ್ನಯ ಸೊಲ್ಲ ನಮ್ಮ ಪವನನಯ್ಯನ ಪ್ರೇರಣೆಯಿಲ್ಲ ಎವೆಯಿಕ್ಕಲರಿಯದೀ ಜಗವೆಲ್ಲ ಎಂದು ಶಿವ ತನ್ನ ಸತಿಗೆ ಹೇಳಿದನಲ್ಲ 14 ಧ್ರುವ ಬಲ್ಯಾದಿ ರಾಯರ ನೋಡು ನಿನ್ನ ಅವಗುಣಗಳನೆಲ್ಲಾ ಈಡ್ಯಾಡೋ ಅವಶ್ಯವಾಗಿ ಕರ್ಮವ ಮಾಡೋ ಮಾ- ಧವ ನಿನ್ನವನೆಂದು ನಲಿದಾಡೋ 15 ನಿಂದಾ ಸ್ತುತಿಗಳ ತಾಳಿಕೋ ಬಲು ಸಂದೇಹ ಬಂದಲ್ಲಿ ಕೇಳಿಕೋ ಬಂದವರಿಂದಲಿ ಬಾಳಿಕೋ ಗೋ- ವಿಂದ ನಿನ್ನವನೆಂದು ಹೇಳಿಕೋ 16 ತತ್ವವಿಚಾರವ ಮಾಡಿಕೋ ನಿನ್ನ ಭಕ್ತಿಯ ಆಳವ ಅಳಿದುಕೋ ಮಾಯಾ ಮೋಹ ಕಳೆದುಕೋ ನಿನ್ನ ಹತ್ತಿರ ಹರಿಯಿರುವ ನೋಡಿಕೋ 17 ಹಿಂಡು ದೈವಗಳಿಂದ್ಹಿರಿಯನೀತ ತನ್ನ ತೊಂಡನೆಂದದವರಿಗೆ ತಾ ಸೋತಾ ದಂಡಿಸಿ ದಯಮಾಡುವ ದಾತಾ ಭೂ- ಮಂಡಲದೊಳಗೆಲ್ಲ ಪ್ರಣ್ಯತಾ 18 ನಾಡ ಖೋಡಿ ದೈವಗಳಂತೆ ತನ್ನ ಬೇಡಲು ತಾ ಬೇಡಿಕೊಳನಂತೆ ನೀಡುವ ನಿಖಿಳಾರ್ಥವದಂತೆ ನಿಜ ನೋಡಿಕೋ ನಿನಗ್ಯಾತರ ಚಿಂತೆ 19 ಏನು ಕೊಟ್ಟರೆ ಕೈಚಾಚುವ ತನ್ನಾ- ಧೀನವೆಂದರೆ ನಸುನಾಚುವಾ ದಾನವ ಕೊಡಲೂರಿ ಗೀಚುವ ತನ್ನಲಿ ತಾನೇವೇ ಮನದೊಳು ಸೂಚುವ20 ಕರಕರದಲ್ಲಿ ತಾ ಬರುವಾನು ಮರತುಬಿಟ್ಟವರ ತಾ ಮರೆಯಾನು ನಿಜ ಶರಣರ ಕಾದುಕೊಂಡಿರುವಾನು ತನ್ನ ಸರಿಯಂದವರ ಹಲ್ಲು ಮುರಿದಾನು 21 ಆರು ಮುನಿದು ಮಾಡುವದೇನು ಪ್ರೇರ್ಯ ಪ್ರೇರಕರೊಳಗಿದ್ದು ಹರಿ ತಾನು ಓರಂತೆ ಕಾರ್ಯವ ನಡೆಸೋನು ಮುಖ್ಯ ಕಾರಣ ಶ್ರೀಹರಿ ಅಲ್ಲವೇನೋ 22 ಹಲವು ಹಂಬಲಿಸಲ್ಯಾತಕೆ ಹುಚ್ಚಾ ವಿದ್ಯಾ ಕುಲಶೀಲಧನದಿಂದ ಹರಿ ಮೆಚ್ಚಾ ಕಲಿಯುಗದೊಳಗಾರ್ಯರ ಪೆಚ್ಚಾ ತಿಳಿ ಸುಲಭೋಪಾಯಾದಿಗಳ ನಿಚ್ಯಾ 23 ದುರ್ಜನರೊಳು ದೈನ್ಯ ಬಡದಿರು ಸಾಧು ಸಜ್ಜನರೊಳು ವೈರ ತೊಡದಿರು ಅರ್ಜುನಸಖನಂಘ್ರಿ ಬಿಡದಿರು ನಿ- ರ್ಲಜ್ಜನಾಗಿ ಬಾಯ್ಬಿಡದಿರು 24 ಭಯರೂಪದಿ ಒಳಹೊರಗಿದ್ದು ನಿ- ರ್ಭಯ ನಾಮಕನು ಧೈರ್ಯವನೆ ಗೆದ್ದು ಭಯದೋರುವನೆಂಬುದೆ ಮದ್ದು ಮಹಾ ಭಯಕೃದ್ಭಯಹಾರಿಯನೆ ಪೊಂದು 25 ಪರಸತಿಯರ ಸಂಗವ ಬಿಡು ಹರಿ ಸರ್ವೋತ್ತಮನೆಂದು ಕೊಂಡಾಡು ಪರಮಾತ್ಮನ ಧ್ಯಾನವ ಮಾಡು ನರ ಹರಿದಾಸರಂಗಳ ಒಡಗೂಡು 26 ಸೃಷ್ಟಿಗೊಡೆಯ ಶ್ರೀದವಿಠಲ ವಿಷ್ಟಾವಿಷ್ಟನಾಗಿದ್ದೆಲ್ಲ ಇಷ್ಟಾನಿಷ್ಟವ ಕೊಡಬಲ್ಲ ಮನ- ಮುಟ್ಟಿದವರ ಬೆಂಬಿಡನಲ್ಲಾ 27
--------------
ಶ್ರೀದವಿಠಲರು
ಆತ್ಮನಿವೇದನೆ ಯಾವಾಗಲೂ ನಿನ್ನ ಸೇವೆಯೊಳಿರುವಂತೆ ಕಾವುದೆನ್ನಯ ನಿಜದೀ ಕೃಪಾನಿಧೇ ಈ ಪರಿಯಿಂದನಾ ಭಾರಿ ಭವದಿ ನೊಂದೆ ತೋರೋ ನಿನ್ನಯ ಚರಣಾ ನಾರಾಯಣ ಪ ಆಶಾಪಾಶದಲಿ ನಾ ಘಾಸಿಯಾದೆನು ದೇವಾ ವಾಸನೆಯೊಳು ತೊಳಲಿ ಬಹು ಬಳಲಿ ವಾಸುದೇವನೆ ನಿನ್ನ ಪಾದದೊಳಗೆನ್ನಯ ಬೇಸರದಲೆ ರಕ್ಷಿಸೋ ನಿಜಪಾಲಿಸೋ 1 ನೀರಮೇಲಿನ ಗುಳ್ಳೆಯಂತೆ ತೋರುವ ಕಾಯ ಸೇರಿ ನಂಬಿದೆ ಭರದಿ ಬಹು ವಿಧದಿ ದೂರನಾದೆನು ನಿಜದರಿವುನಾನರಿಯದೇ ಸೇರಿಸೊ ನಿಜ ಸುಖದಿ ಪ್ರಬೋಧದಿ 2 ನಂಬಿದವರ ಕಾಯ್ವ ಸಂಭ್ರಮ ಪೊತ್ತವ ಶಂಭು ಶಂಕರ ಪ್ರಿಯನೇ ಸರ್ವೇಶನೇ ಇಂಬು ದೋರೆನ್ನಾ ಚಿದಂಬರ ನಿಜಪದ ನಂಬಿ ನಿಲ್ಲುವ ತೆರದಿ ಸದೃಢದೀ 3 ತತ್ವಮಸಿ ಮಹಾ ವಾಕ್ಯವ ಶೋಧಿಸಿ ನಿಸ್ತರಿಸುವ ಭವವಾ ಉಪಾಯವಾ ಚಿತ್ತಚೈತನ್ಯವಾಗಿ ನಿತ್ಯಶಾಂತಿಸ್ವಸುಖ ಸತ್ಯ ಸದ್ಗುರು ಸ್ವಾನಂದಾ ಸಹಜಾನಂದಾ4 ಕಡಹದಾ ಮರನೇರಿ ಮಡುವಾ ಧುಮ್ಮಿಕೃಇದ್ಯೋ ಪಿಡಿದು ಕಾಳಿಂಗನಾ ಹೆಡೆ ಕುಳಿದು ಕುಣಿದ್ಯೋ ಸಡಗರದಿಂದಲಿ ಮಾತೆಯ ತೊಡೆಯ ಮೇಲೆ ಬಂದು ಕುಳಿತೆ5 ದುರುಳ ದುಷ್ಟರ ಶಿರವ ಶರದಿಂದಾ ಕಡಿದೆಯೊ ಶರಣ ಬಂದ ದೀನರನು ಸಲಹಿದೆಯೊ ಪರಮ ಪುರುಷನೇ ನಿನ್ನ ಸ್ಮರಣೆಯೊಳಿರಿಸೆನ್ನಾ 6 ಅನ್ಯಾಯದಲಿ ಕುರುಪತಿಯ ಮಡುಹಿದೆಯೊ ಕರ್ಣನ ಕಂಠವ ಕತ್ತರಿಸಿದೆಯೊ ಧನ್ಯಧರ್ಮಾರ್ಜುನರ ಶಿರವಾ ಸನ್ಮತದಿಂದಲಿ ಕಾಯ್ದೆ 7 ಪುಂಡಲೀಕನ ಭಕ್ತಿಗೆ ಮೆಚ್ಚಿ ಪಂಡರಪುರದಲ್ಲಿ ನಿಂತೆನಿ ಹೆಚ್ಚಿ ತಂಡತಂಡದಲ್ಲಿ ಬರುವ ಹಿಂಡುಭಕ್ತರುಗಳ ಕೂಡುವ 8 ಕಂತು ನಾರಾಯಣ ಶಾಂತಿ ಪದದಲಿ ವಿಶ್ರಾಂತಿಯ ಕೊಟ್ಟಿನ್ನಾ ಭ್ರಾಂತಿಗಳನೆಲ್ಲ ತೋರಿಸಿ ಸಂತ ಸಂಗದೊಳಿರಿಸೆನ್ನಾ 9
--------------
ಶಾಂತಿಬಾಯಿ
ಆನಂದಮಯನಾದೆ ನಾನು ದಿವ್ಯ ಜ್ಞಾನಾಮೃತವನುಂಡು ಪೇಳಲಿನ್ನೇನು ಪ ಶರೀರ ಭ್ರಾಂತಿಗಳನೆಲ್ಲ ಕಳೆದು ಕರ್ಮ ದುರಿತ ಸಂಸಾರ ಆಶಾಪಾಶವಳಿದು ನರನೊಳಗೆ ನರನಾಗಿ ಸುಳಿದು ಸರ್ವ ಪರಿಪೂರ್ಣ ಭರಿತ ತಾನೆಂಬುದು ತಿಳಿದು 1 ಗುರುಕಟಾಕ್ಷದ ನೆಲೆ ನೋಡಿ ತಿರುಗಿ ಬರುವ ಹೋಗುವ ಭ್ರಮೆಗಳನೀಡಾಡಿ ಶರಣರ ಸ್ತೋಮದಿ ಕೂಡಿ ಭವ ಶರಧಿಯ ದಾಟಿ ಹಂಸಾತ್ಮಕನೊಳಾಡಿ ಆನಂದ 2 ಗುರುಚರಣಗಳ ಧ್ಯಾನಿಸುತಾ ಒಡನೆ ಎರಕವಾದಂತೆ ಬೇರೂರಿತು ಚಿತ್ತಾ ವರವಿಮಲಾನಂದ ಗುರುದತ್ತಾತ್ತೇಯನ ಕರುಣಾಸಮುದ್ರದೊಳ್ಬೆರೆದು ನಲಿವುತ್ತಾ ಆನಂದ 3
--------------
ಭಟಕಳ ಅಪ್ಪಯ್ಯ
ಇಂಥಾ ಪ್ರಭುವ ಕಾಣೆನೋ ಈಜಗದೊಳ- ಗಿಂಥಾ ಪ್ರಭುವ ಕಾಣೆನೋ ಪ ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗ- ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ಅ.ಪ. ಬೇಡಿದಿಷ್ಟವ ಕೊಡುವ-ಭಕ್ತರ ತಪ್ಪು ನೋಡದೆ ಬಂದು ಪೊರೆವ ಗಾಡಿಕಾರನು ಗರುಡಾ - ರೂಢ್ಯ ಗುಣವಂತ ಮಹಾ ಪ್ರೌಢ ಪ್ರತಾಪಿ ಜಗದಿ ಪಾಡಿ ಪೊಗಳಿ ಕೊಂಡಾಡುವವರ ಮುಂ- ಕೇಡಿಗನೇ ನಾಡಾಡಿಗಳಂದದಿ ಈಡುಂಟೇನೋ ಈ ವೆಂಕಟಗೆ-ಇಂಥಾ 1 ನಿಗಮ ತತಿಗಳರಿಯದ- ನೀರಜಭವಾ- ಸುರರು ಕಾಣದ ಜಗದೊಡೆಯನು ಭಕ್ತ- ರುಗಳಿಗೊಲಿದು ತ್ರಿಸ್ಥಾ- ನಗಳತ್ಯಜಿಸಿ ಕಲಿ ಅಗಣಿತ ಸುಗುಣಾರ್ಣವ- ಶ್ರೀ ಹರಿಯೇ ಜಗದೊಳು ಸೇವಾದಿಗಳನು ಕೊಳುತಿಹ ಅಘಹರ ಮೋಕ್ಷಾದಿಗಳನೆ ನೀಡುತ ನಗೆಮೊಗದಲಿ ಚನ್ನಿಗನಿಂತಹನೊ - ಇಂಥಾ 2 ಭಾರ್ಗವಿ ಭೂಮಿವಲ್ಲಭ - ಭವದೂರ ಭಕ್ತ ವರ್ಗಕೆ ಇವಸುಲಭ ನಿರ್ಗುಣ ನಿರ್ವಿಕಾರ- ಸ್ವರ್ಗದೈಶ್ವರ್ಯದಿಂದಾ- ನಘ್ರ್ಯದ ಪದವನೀವ ದೀರ್ಘಾಯುವಂತನೀತ ಭಾರ್ಗವರಾಮ ನೃಪರ್ಗಳನೆಲ್ಲರ - ಣಾಗ್ರದಿ ಜಯಿಸಿದ ಉಗ್ರಪ್ರತಾಪಿ ಅಗ್ರಗಣ್ಯ ಸದ್ವಿಗ್ರಹ ಶ್ರೀಮದ - ನುಗ್ರಹ ಮಾಡುತ ದುರ್ಗುಣ ಕಳೆವ 3 ನಿರ್ದುಃಖಾನಂದ ಭರಿತಾ - ನಿರ್ವಾಣ ಸುಖಕೆ ಆದ್ರ್ರಹೃದಯ ತೋರುತ ನಿದ್ರೆಯೊಳಿದ್ದವಗು - ಪದ್ರಬಡಿಸಿ ದೈತ್ಯ ಕ್ಷುದ್ರನಂಕೊಲಿಸಿ ಸು ಭದ್ರ ಜಗಕೆ ಇತ್ತ ನಿರ್ದಯನಲ್ಲ ಸಮುದ್ರಶಯನ ಗೋ- ವರ್ಧನ ಗಿರಿಯನು ಉದ್ಧರಿಸಿದ ಯದು ವರ್ಧನ ದನುಜ ವಿಮರ್ದನ ಲಕ್ಷ್ಮೀ ಜ - ನಾರ್ದನ ವರ ಶೇಷಾದ್ರಿ ನಿವಾಸ - ಇಂಥಾ 4 ವಾರಿಜಾಸನ ಮನೋಜಾ ಈರ್ವರು ಸುತರು ಸುರತರಂಗಿಣಿ ತನುಜಾ ಪುರವೇ ವೈಕುಂಠ ಇಂದ್ರಾದ್ಯ ಮರರು ಕಿಂಕರರು ಗರುಡವಾಹನ ಉರಗ ಪರಿಯಂಕ ನಿಷ್ಕಳಂಕ ಸರಿದೊರೆಗಳ ನಾನರಿಯೆನು ವೆಂಕಟ ಗಿರಿಯಲಿ ಇರುತಿಹ ಕರುಣೆಗಳರಸನೆ ಮರೆಯದೆ ಸಲಹೋ ಶರಣಾಗತರನು ಸಿರಿ ವಿಜಯವಿಠ್ಠಲಾ - ಇಂಥಾ 5
--------------
ವಿಜಯದಾಸ
ಈ ಕ್ಷಿತಿಯ ಸಾರತರ ವೃಕ್ಷವನು ಕಂಡೆ ಪ ರಾಕ್ಷಸಾಂತಕ ದೇವ ನೀ ವಿರಚಿಸಿರುವ ಅ.ಪ ಅಡವಿಯೊಳಗೀವೃಕ್ಷಕಡಿಯ ಪಾತಿಯಿದು ದೃಢದ ಬೇರುಗಳು ಮೂರು ರಸವು ನಾಲ್ಕು ಪೊಡವಿಗಿಳಿದಿರ್ಪೈದು ಬಿಳಿಲುಂಟು ಕೊನೆ ಮೂರು ಎಡೆವ ಪರೆಯೇಳಾ ಕೊಂಬೆಗಳೆಂಟು ಫಲವೆರಡು 1 ಮೂರು ಮುಮ್ಮಡಿ ರಂಧ್ರ ಐದರಿಮ್ಮಡಿ ಪರ್ಣ ತೇರೈಸೆ ತೋರುವಾಕಾರ ಎರಡು ಮೂರೆರಡರಿಂದೆಸೆವ ಸಾರಫಲಗಳನೆಲ್ಲ ಓರಂತೆ ಭಕ್ಷಿಸುವ ಪಕ್ಷಿಯೊಂದುಂಟಯ್ಯ 2 ವೃಕ್ಷದಾ ಫಲಗಳನು ಭಕ್ಷಿಪುದನೀಕ್ಷಿಸುವ ಪಕ್ಷಿ ನೀನಾಗಿರಲು ಪರಮಕೃಪೆಯಾ ಪಕ್ಷಿಗಿತ್ತಾಗಲೊಂದೇ ಪಕ್ಷಿಯೆಂದೆನ್ನಿಸಿ ಕುಕ್ಷಿಯನ್ನುಳಿದೈದಲರಿದೇ ಮಾಂಗಿರಿಯ ರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಉದ್ಧರಿಸೆನ್ನಯ್ಯ ಮುದ್ದು ಶ್ರೀಹರಿಯೆ ಬಿದ್ದು ಬೇಡುವೆ ನಿಮ್ಮ ಪಾದಪದ್ಮದೊಳು ಪ ಬದ್ಧಗುಣ ಬಚ್ಚಿಟ್ಟು ಶುದ್ಧ ಮನದವನಂತೆ ಸುದ್ದಿ ಹೇಳುತ ಸತತ ಕದ್ದು ತಿನ್ನುವ ಎನ್ನ ಬದ್ಧ ಮನಸಿನ ಡೊಂಕ ತಿದ್ದು ಬೇಗದೊಳು 1 ನಂಬಿಗುಳ್ಳವನಂತೆ ಹೇಳುವ ಪರರ ಅಂಬುಜಾಕ್ಷಯರೊಲುಮೆ ಹಂಬಲವ ಮನದಿ ತುಂಬಿಕೊಂಡಿಹ್ಯ ಎನ್ನಡೊಂಕ ಶಂಭುವಿನುತನೆ ತಿದ್ದಿ ಇಂಬುಗೊಡು ಜವದಿ 2 ಸಫಲಮಾನಿಸನಂತೆ ಜಪಮಾತುಗಳಾಡಿ ಕಪಟತ್ವದಿಂದಿತರ ಅಪಹರಿಸುವ ಕುಪಿತ ಮನಸಿನ ಡೊಂಕ ಅಪರೂಪತಿದ್ದಿ ನುತ ಸುಫಲದಾಯಕ ಹರಿ ಕೃಪೆಮಾಡು ಜವದಿ 3 ಹಸುತೃಷಳಿದವನಂತೆ ವಸುಧೆಜನರಿಗೆ ತೋರಿ ಬಸವಳಿದು ಬಾಯಾರಿ ದೆಸೆಗೆಟ್ಟು ಪರರ ಅಶನ ಬೇಡುಂಬ ಪುಸಿಯ ಮನಸಿನ ಡೊಂಕ ಹಸನಾಗಿ ತಿದ್ದಿ ಲಕುಮೀಶ ಒಲಿ ದಯದಿ 4 ಪಾಮರಮನದ ದುಷ್ಕಾಮಿತಗಳನೆಲ್ಲ ಕ್ಷೇಮದಿಂ ಕಡೆಹಾಯ್ಸಿ ಸ್ವಾಮಿಯೇ ನಿಮ್ಮ ನಾಮಧ್ಯಾನದ ನಿತ್ಯನೇಮವನು ಪಾಲಿಸಿ ಪ್ರೇಮದ್ಹಿಡಿಕರ ಶ್ರೀರಾಮಪ್ರಭುತಂದೆ 5
--------------
ರಾಮದಾಸರು
ಊರ್ವಶಿ : ಬಂದ ಕಾಣೆ ಗೋವಿಂದ ಕ್ಷೀರ- ಸಿಂಧುಶಯನ ವನದಿಂದ ಇಂದಿರೇಶ ಮುದದಿಂದ ಮೌನಿಮುನಿ- ವೃಂದದಿಂದ ಸ್ತುತಿವಂದನೆಗೊಳ್ಳುತ1 ಏಸು ಲೋಭಿಯೊ ತಿಮ್ಮಶೆಟ್ಟಿ ಒಂದು ಕಾಸಿಗೆ ಮಾರುವ ರೊಟ್ಟಿ ದಾಸರ ಕೂಡಿ ಜಗಜಟ್ಟಿ ಬಹು ದೇಶವ ತಿರುಗುವ ಶೆಟ್ಟಿ ದೂಷಣಾರಿ ಪಾದಾಶ್ರಿತಜನರಭಿ- ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ2 ದೊಡ್ಡವನೈ ಮಹಾರಾಯ ಹಳೆ ದುಡ್ಡಿಗೆ ನೀಡುವ ಕೈಯ ಅಡ್ಡಿಗೈದರೆ ಬಿಡನಯ್ಯ ಇವ ಬಡ್ಡಿಕೇಳುವ ತಿಮ್ಮಯ್ಯ ದಡ್ಡುಕೇಸಕ್ಕಿಯ ಮಡ್ಡಿಪ್ರಸಾದವ ಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ3 ತಿರುಪತಿಗೆ ಪ್ರತಿಯಾಗಿ ಪಡು ತಿರುಪತಿಯೆಂದಿಹ ಯೋಗಿ ಮೆರಸುವನೈ ಸ್ಥಿರವಾಗಿ ಶ್ರೀ ವರ ವೆಂಕಟ ಲೇಸಾಗಿ ಶರಣರು ಏನೆಂದು ಸಂತೋಷಿಪ ಕರುಣಾಕರ ಚಪ್ಪರ ಶ್ರೀನಿವಾಸನು4 ಈ ಪರಿಯಲಿ ಒಲಿದಿಪ್ಪಾ ಬಹು ಕಾಪಟ್ಯರಿಗೆ ತಾನೊಪ್ಪನಮ್ಮ ಗೋಪಾಲಕ ಜಗದಪ್ಪ ಶ್ರೀಪರಮಾತ್ಮ ನಾನಾಪರಿ ವಿಭವದಿ ಗೋಪುರದಲಿ ತಾ ವ್ಯಾಪಿಸಿ ನಿಂದನು5 ರಂಭೆ : ನಾರೀವರ್ಯಾರಮ್ಮ ನೋಡಲು ಸಾರಹೃದಯರಮ್ಮ ತೋರಣಛತ್ರಚಾಮರ ಬಿರುದುಗಳಿಂದ ಭೂರಿ ವಿಭವದಿಂದ ಸಾರಿಬರುವರಮ್ಮ1 ಕರದಿ ಕಲಶವಿಹುದು ಶಾಲಿನ ನಿರಿ ಮುಂದಿರುತಿಹುದು ಬೆರಳಿನೊಳುಂಗುರು ವರ ದ್ವಾದಶನಾಮ ಧರಿಸಿ ಸಮಂತ್ರೋಚ್ಚರಿಸುತ ಬರುವರು2 ಮಂದಿಗಳೊಡ್ಡಿನಲಿ ಬರುವರು ಮಂದಸ್ಮಿತದಲಿ ಚಂದದಿ ಜನಗಳ ಸಂದಣಿ ಮಧ್ಯದಿ ಇಂದಿರೆಯರಸನ ಧ್ಯಾನದಿ ಬರುವರು3 ಹಿಂಗದೆ ಬರುತಿಲ್ಲಿ ಮನಸಿನ ಇಂಗಿತವರಿತಿಲ್ಲಿ ಬಂಗಾರದ ಭೂಷಣಸಮುದಾಯದಿ ಅಂಗಜಪಿತನಿಗೆ ಶೃಂಗಾರಗೈವರು4 ವಿಪ್ರೋತ್ತಮರ ಗುಣ- ಕೆಂತು ಸೈರಣೆಯಾಂತು ನಾನಿರಲಿ ಚಿಂತಿತಾರ್ಥವನೀವ ಲಕ್ಷ್ಮೀ- ಸಂತಸದಿ ಪೂಜಾದಿ ಸತತಿ- ಯಾಂತಕೊಂಡಿಹೇಕಾಂತಭಕ್ತರು1 ಕೀರ್ತಿಯನು ಧರಿಸಿ ಮ- ತಾವೆಂದು ಧರ್ಮವನು ಪಾಲಿಸಿ ಸಿಂಧುಶಯನನ ಚಾರುಚರಣ- ದ್ವಂದ್ವಕಾನತರಾಗಿ ಲೋಕದಿ ವಂದ್ಯರೆನಿಸಿಯಾನಂದ ಪರರಿವ- ರೆಂದು ಶ್ರೀಗೋವಿಂದ ನಡೆಸುವ2 ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿ ಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿ ವಾದಗೈವ ಕುವಾದಿಗಳ ಮನ- ಭೇದಿಸುತ ನಿಜವಾದ ಮಾರ್ಗವ ಸಾಧುಗಳಿಂದ ದೃಢವಾದ ಮಾತಿದು3 ಮೇಗರೆಡಂಭಮಾತಲ್ಲ ಧನಿಯ ಕು- ಗೊಂಬರೆ ಎಲ್ಲ ಸಂತಸ ಸಂಭ್ರಮದಿ ವೇದ್ಯಾಂಬುನಿಧಿಯಲಿ ತುಂಬಿರುವರೀ ಕುಂಭಿನಿಯೊಳು ಜ- ಸಂಬಡುವುದು ವಾಸಿಷ್ಠಗೋತ್ರಜ- ರೆಂಬ ವಿಪ್ರಕದಂಬಪೂಜ್ಯರು4 ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆ ಆಲಯದೊಳಿದ್ದ ಜನಜಾಲವಿಂದೀ ನೆಲೆಗೆ1 ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆ ಮಹಾಲೀಲೆ2 ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇ ಲೀಲೆಯ ನಾನರಿಯೆ3 ಫಾಲೇಂದು ಕುಂದದ ವರ್ಣಕೋಲು ಚಾಮರಗಳ ನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು4 ಚಂಡವೈಶ್ವಾನರನ ತೇಜಾಖಂಡದಿಂದೋರಂತೆ ಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ5 ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿ ಆದಿನಾರಾಯಣ ಮದುಸೂದನನೆ ಮುದದಿ6 ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರು ನಾದಿನಿ ಕೇಳಿದರ ಪರಿಯನೀ ದಯದಿಂದುಸುರು7 ಊರ್ವಶಿ :ಭಾವೇ ನೀ ಕೇಳೆ ಇದನು ತ್ರೈಲೋಕ್ಯ- ದೇವನಾಗಮನವೆಲ್ಲನೂ ದೀವಟಿಗೆ ಸೇವೆಯೆಂದು ಪೇಳುವರು ಭಾವುಕರು ಮನದೊಳಂದು1 ಸಾಯನವನು ಸುರಿದು ಸಾವಿರ ಸಾಲದು ಶ್ರೀಯರಸನ ಮಹಿಮೆಯರಿವದಾರಿಗಳವಲ್ಲ3 ದೈತ್ಯವಿನಾಶನ ಜಯಜಯ ಜಾಹ್ನವಿತಾತ ಜಯಜಯ ಜಗದಾತ ಆಶ್ರಿತ ಸುರಭೂಜ ತೋರುತ ಒಲಿದು4 * * * ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ- ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ1 ಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ 2 ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ- ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ3 ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ- ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ4 ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥ ಮೌರಿ ಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ5 ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ- ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ6 ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ- ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ7 ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ- ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ8 ನಿತ್ಯ ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ9 ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದ ಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ10 ನೋಡೆ ತಂಗಿ ನಮ್ಮ ದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ11 ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ- ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ12
--------------
ತುಪಾಕಿ ವೆಂಕಟರಮಣಾಚಾರ್ಯ
ಎನ್ನ ಹಣೆಯ ಬರಹಕೆ ಎಂಥಾ ಗಂಡ ದೊರೆತನೇಎನ್ನ ಮನವೆಂಬ ಗಂಡನ ಪರಿಯ ಪೇಳುವೆನೆ ಪ ಅಡಕಿಲಿಗಳನೆಲ್ಲವ ಹುಡುಕುವನೇಅಡುಗೆಯ ಮಡಕೆಯನೆಲ್ಲ ಒಡೆದನೇಗುಡುಗುಟ್ಟುತ ಯಾವಾಗಲೂ ಇಹನೇಗುಡ್ಡವನೇರುವನೇ 1 ಮುನಿಸಿಕೊಂಡು ಮೇಲಟ್ಟದಿ ಕೂರುವನೇಘನ ಹುಟ್ಟನೆ ಮುಂದಿಹನೇಮನೆಯಲೆಲ್ಲರ ಬಡಿವನೇಮತವನು ಕೆಡಿಸಿದನೆ 2 ದುಡಿವ ಕೋಣನನು ಕೊಂದನೇಕಡಿದುಬಿಟ್ಟನೆ ಕಾಯುವ ನಾಯನುಪುಡಿ ಮಾಡಿದ ಕಟ್ಟುವ ಹಗ್ಗವನೇ ಪಂಕ್ತಿಯ ಸೇರದಿಹನೆ 3 ಒತ್ತೆಯ ಒಡವೆಯನೆ ತಿಂದನೇಬತ್ತಿಯ ಹಿರಿದಾಗೆ ಚಾಚುವನೇಕಿತ್ತು ಒಗದನೇ ದೇವರನೇ ಕಡಿದನೇ ಮರವನ್ನೇ 4 ತ್ಯಜಿಸಿದ ನೆಚ್ಚಿದ ಮಡದಿಯನೇತ್ಯಜಿಸಿದ ಮೋಹದ ಮನೆಯನ್ನೇಭಜಿಸಿದ ಚಿದಾನಂದ ಗುರುವನ್ನೇನಿಜದಲಿ ಬೆರೆತನು ಅವರನ್ನೇ 5
--------------
ಚಿದಾನಂದ ಅವಧೂತರು
ಎಲ್ಲಿ ನೋಡಿದರಲ್ಲಿ ರಾಮ - ಇದ ಪ ಬಲ್ಲ ಜಾಣರ ದೇಹದೊಳಗೆ ನೋಡಣ್ಣ ಅ ಕಣ್ಣೇ ಕಾಮನ ಬೀಜ - ಈಕಣ್ಣಿಂದಲೆ ನೋಡು ಮೋಕ್ಷ ಸಾಮ್ರಾಜ್ಯಕಣ್ಣಿನ ಮೂರುತಿ ಬಿಗಿದು - ಒಳಗಣ್ಣಿಂದಲೇ ದೇವರ ನೋಡಣ್ಣ 1 ಮೂಗೇ ಶ್ವಾಸ ನಿಶ್ವಾಸ - ಈಮೂಗಿಂದಲೇ ಕಾಣೊ ಯೋಗ ಸಂನ್ಯಾಸಮೂಗನಾದರೆ ವಿಶೇಷ - ಒಳಮೂಗಲಿ ನೋಡಣ್ಣ ಲೀಲಾವಿಲಾಸ 2 ಕರ್ಮ ಕುಠಾರ - ಒಳಗಿವಿಯಲ್ಲಿ ಕಾಣೊ ನಾದದ ಬೇರ 3 ಬೊಮ್ಮ ಮಾಡಿದ ತನುಬಿಟ್ಟು - ವಿಶ್ವಕರ್ಮನು ಮಾಡಿದ ಬೊಂಬೆಯನಿಟ್ಟುಸುಮ್ಮನೆ ಕೂಗುಗಳಿಟ್ಟು - ಅದನಂಬುವನೆಂಬೋನು ಹೋಹ ಕಂಗೆಟ್ಟು4 ರೂಢಿಯೊಳಗೆ ಶುದ್ಧ ಮೂಢ - ಈಕಾಡುಕಲ್ಲುಗಳನ್ನು ನಂಬಬೇಡನಾಡಾಡಿ ದೈವಗಳನೆಲ್ಲ - ನಮ್ಮಬಡದಾದಿ ಕೇಶವನೊಬ್ಬನೆ ಬಲ್ಲ 5
--------------
ಕನಕದಾಸ
ಏಣನಯನೆ ಏಣಭೋಜ ಮಧ್ಯಳೆ ತೋರೆಏಣಾಂಕ ಬಿಂಬ ಮುಖಿಏಣವೈರಿಯ ವೈರಿಯ ಶಿರಕುಚಯುಗೆ ಕರೆತಾರೆಏಣಾಂಕಧರ ಸಖನ ಪ ಚಳಿಯ ಮಗಳ ತಾಯಳಿಯನ ತನಯನಇಳುಹದೆ ಪೊತ್ತಿಹನಬಳಿದುಣ್ಣಲೀಸದೆ ಸೆಳೆದುಂಡನಣ್ಣನಸಲಹಿದಾತನ ಸುತನಕಳದೊಳು ತಲೆ ಚೆಂಡಾಡಿದ ಧೀರನಬಳಿ ವಾಘೆಯನು ಪಿಡಿದನಇಳೆಯ ಮೊರೆಯನು ಕೇಳಿ ಖಳರುತ್ತಮಾಂಗವನಿಳುಹಿದಾತನ ತೋರೆಲೆ 1 ಇಪ್ಪತ್ತುನಾಲ್ಕು ನಾಮಗಳೊಳಗೇಳನುತಪ್ಪದೆಣಿಸಿ ಕಳೆದುಬಪ್ಪ ಎಂಟನೆಯ ನಾಮದ ಪೆಸರಿನೊಳ್‍ಇಪ್ಪ ಕಡೆಯ ಬೀಡಲಿಅಪ್ಪ ಜಯದರಸನ ಕೂಡೆ ಜನಿಸಿದಕಪ್ಪು ವರ್ಣದ ಮೈಯಳಅಪ್ಪನ ಮಿತ್ರನ ಮಗನೆಂಬ ಬೊಮ್ಮನಬೊಪ್ಪನ ತೋರೆನಗೆ2 ಬಿಡುಗಣ್ಣ ಬಾಲೆ ತನ್ನೊಡೆಯನ ನುಡಿಗೇಳಿದೃಢದಿಂದ ನಡೆದು ಬಂದುಜಡಿವ ಕೋಪಕೆ ಶಾಪ ಪಡೆದುಕೊಂಡಾಕ್ಷಣನುಡಿದ ದಿನವು ದಾಟಲುಪಡೆಯನೆಲ್ಲವ ನಡು ರಣದಲಿ ಸೋಲಿಸಿಜಡಿದು ಗೋವುಗಳನೆಲ್ಲಒಡನೆ ತನ್ನಯ ಪುರಕೆ ಹೊಡೆತಂದ ಧೀರನಒಡೆಯನ ತೋರೆನಗೆ 3
--------------
ಕನಕದಾಸ
ಏಳು ನಿದ್ದೆಯು ಸಾಕು ರಂಗನಾಥ ಪ ತಾಳು ತಾಳೆನಲೇಕೆ ಮಾಂಗಿರಿ ನಿವಾಸ ಅ.ಪ ಜಗವ ಪೋಷಿಪಚಿಂತೆ | ಮಿಗಿಲಾದ ದೇವಂಗೆ ಸೊಗಸಾದ ನಿದ್ದೆಯಾಪರಿವುಂಟೇ ನಗಜಗವ ಪೊತ್ತವನ ಬಳಗವು ಏನೆಂಬೇ ನಗೆಬೇಡ ಕಣ್ತೆರೆಯೊ ಮಾಂiÀiಕಾರ 1 ನಿದ್ದೆಗೆಡಿಸಲು ಪಾಪ ಇದ್ದರೆ ನನಗಿರಲಯ್ಯ ಸದ್ದಿಲ್ಲದಿಹುದೇ ಭಕ್ತರು ಹಾಡಿ ಕುಣಿಯೇ ಒದ್ದಮುನಿಗಾ ಪಾಪವಿದ್ದಿತೇ ಕರುಣಾಳು ಎದ್ದು ಬಾ ಬಾರೈಯ ಮಾರನಯ್ಯ 2 ಬಲ್ಲೆ ಬಲ್ಲೆನು ನಿನ್ನ ಚೆಲ್ಲಾಟಗಳನೆಲ್ಲ ಬೆಲ್ಲವನು ಕಂಡಿರುವೆ ಮುತ್ತದಿಹುದೇ ಸಿರಿ ಮಾಂಗಿರಿಯ ರಂಗ [ಒಲ್ಲೆನದೆ ಈಯಯ್ಯ ಎನಗು ಬೆಲ್ಲದಸವಿಯ]3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಏಳು ಮಾರುತಿ ಎಂದೆಬ್ಬಿಸಿದಳಂಜನೆಯು ಪ. ಶ್ರೀರಾಮರ ಸೇ[ವೆ]ಗೆ ಹೊತ್ತಾಯಿತೇಳೆಂದುಅ.ಪ. ಸೇತುವೆಯ ಕಟ್ಟಬೇಕು ಸಮುದ್ರವನೆ ದಾಟಬೇಕುಸೀತೆಗುಂಗುರವನ್ನು ಕೊಡಲಿಬೇಕುಪಾತಕಿ ರಾವಣನ ವನವ ಕೀಳಬೇಕುಸೀತೆಯನು ರಾಮರಿಗೆ ಒಪ್ಪಿಸಲಿಬೇಕು 1 ನಿಂತು ಮಾಡಲಿಬೇಕು ಅಜ್ಞಾತವಾಸವನುಅಂತು ಕೀಚಕರನ್ನ ಸವುರಬೇಕುಕಂತುಪಿತನಾಜ್ಞದಿಂ ಕೊಲ್ಲಬೇಕು ಕೌರವರಕುಂತಿ ಸುತನು ಎಂದೆನಿಸಬೇಕಯ್ಯ 2 ಮಧ್ವರಾಯರು ಎಂದು ಪ್ರಸಿದ್ಧರಾಗಲಿ ಬೇಕುಅದ್ವೈತಮತವನು ಗೆದ್ದು ಮುರಿಯಲಿ ಬೇಕುಶುದ್ಧಮಾಡಲಿ ಬೇಕು ಸಕಲ ಶಾಸ್ತ್ರಗಳನೆಲ್ಲಮುದ್ದು ಹಯವದನನ ದಾಸನೆನಿಸಬೇಕು 3
--------------
ವಾದಿರಾಜ
ಒಂದೇ ಬೇಡುವೆ ನಿನ್ನನು ನಿನ್ನಡಿಗಳನೆಂದಿಗು ನೆನೆವುದನು ಪ. ಒಂದೇ ಬೇಡುವೆನು ಮುಕುಂದ ಇದರ ಬಲ ದಿಂದ ಸರ್ವಾರ್ಥವ ಹೊಂದುವ ಮನದಿಂದ ಅ.ಪ. ಪಾತಕಗಳನೆಲ್ಲ ಪರಿಹರಿಸುವ ದುರ್ವಿ- ಘಾತಕವೈರ ಕತ್ತರಿಸುವುದು ಶ್ರೀಕರುಣಿಯ ಸನ್ನಿಧಾನವನಿರಿಸುವ ಆತತಾಯಿಗಳ ಭಂಗಿಸಿ ಬಾಧೆ ಪಡಿಸುವ 1 ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ ತುಂಬಿದ ಜನರೊಡನಾಡುವಾಗ ನಂಬಿದ ಸತಿಯೊಳು ನಯನುಡಿ ನುಡಿವಾಗ ಅಂಬುದನಿಭ ನಿನ್ನ ಹಂಬಲಗೊಳುವುದ 2 ನಡೆವಾಗ ನುಡಿವಾಗ ಮಡಿಯನುಟ್ಟಿರುವಾಗ ಪೊಡವಿ ಪಾಲಕರೊಡನಾಡುವಾಗ ಕಡಲಶಯನ ನಿನ್ನ ನೆನೆವರೆ ನಾಚಿಕೆ ಕಾಲ ದೃಢದಿಂದ ಸ್ಮರಿಸುವ 3 ಖೇದ ಮೋದಗಳೆಂಬ ಭೇದವಿಡದೆ ಯಾವಾ- ಗಾದರು ಸರಿಯಾಗಿ ಸ್ಮರಿಸುವರ ಕಾದುಕೊಂಡಿರುವಂಥ ಕರುಣಿಯೆಂಬುದರಿಂದ- ಗಾಧ ಮಹಿಮೆ ನಿನ್ನ ಹಾದಿ ತೋರಿಸುವುದ 4 ಶ್ರಮವಿಲ್ಲದೆ ಸ್ಮøತಿ ಭ್ರಮಣೆ ಬಿಡಿಸುವ ಶ್ರೀ- ರಮಣ ವೆಂಕಟಗಿರಿ ನಾಯಕನೆ ನಮಿಸಿ ಬೇಡವೆನೆಂಬ ಮಮತೆಯಿರಿಸಿ ನಿನ್ನ ಕಮನೀಯಪದಕಲ್ಪದ್ರುಮ ನೆರಳಿರಿಸೆಂದು 5
--------------
ತುಪಾಕಿ ವೆಂಕಟರಮಣಾಚಾರ್ಯ
ಕಂಡೆ ಕನಸಿನಲಿ ಕಾರುಣ್ಯ ಮೂರುತಿ ಹರಿಯ ಪ ಪುಂಡರೀಕಾಕ್ಷ ಪುರುಷೋತ್ತಮನ ಸಿರಿಯ ಅ.ಪ ಚಂಡು ರನ್ನದ ತಾಯ್ತಿ ಮಲುಕು ಅರಳೆಲೆ ಹೊನ್ನಗೊಂಡೆಗಳ ಬಿಗಿದ ಶಿಖಿ ದಾರದೆಡೆಯದುಂಡು ಮಲ್ಲಿಗೆಯ ಪರಿಮಳವು ಘಮಘಮಿಪ ಅಳಿ-ವಿಂಡುಗಳ ಜರಿವಂಥ ಸುಳಿಗುರುಳಿನಿರವ1 ಸಿರಿ ನಾಮ ಕಸ್ತೂರಿ ತಿಲಕದಎಸೆವ ಕುಡಿ ಹುಬ್ಬುಗಳ ಕುಂಡಲದ ಕಾಂತಿಗಳದÉಸೆದೆಸೆಗೆ ಬೆಳಗುತಿಹ ವರದೀಪ್ತಿಗಳನು 2 ಕೆತ್ತನೆಯ ಪದಕೆ ಕೆಲಬಲಕೆ ಒಲಿದಾಡುತಿಹಮುತ್ತು ಮಾಣಿಕದ ಹುಲಿಯುಗುರು ಸರದ ಮಣಿ ಒತ್ತಿನಲಿ ಶಿರಿವತ್ಸ ವೈಯಾರದಿರವ 3 ತÉೂೀಳ ಬಳೆ ತಾಯ್ತಿ ಕಡಗ್ಹವಳ ಕಂಕಣವಾಕು ನೀಲ ಮಾಣಿಕ್ಯದ ಬೆರಳುಂಗುರಗಳ ಸಾಲು ಗಂಟೆಗಳ ರಂಜಿಸುವ ಕಾಂತಿಗಳ ಈ- ರೇಳು ಭುವನಗಳ ಧರಿಸಿದ ಉದರವನು 4 ಬಟ್ಟದೊಡೆಗಳಿಗೆ ಬಿಗಿದುಟ್ಟ ಚಲ್ಲಣ ಮೈಯ ತೊಟ್ಟ ಜರತಾರದಂಗಿಯ ಚರಣದಿ ಕಾಲ ಕಡಗಗಳ ದಟ್ಟಡಿಯನಿಡುತ ಬಹ ಪುಟ್ಟ ಗೋಪಾಲಕನ 5 ಬಾಲಕನು ಕರೆಯೆ ಬಹು ಕಂಬದಲಿ ಬಂದೊಡೆದು ಬಾಲಕನ ತರಿದು ಸಾಂದೀಪಗಿತ್ತ ಬಾಲೆ ಚೀರಿದರೆ ಅಕ್ಷಯವಿತ್ತ ದೇವಕಿಯ ಬಾಲಕನ ಬಹು ಬಗೆಯ ಲೀಲೆಗಳನೆಲ್ಲ 6 ಪೊಗಳಲೆನ್ನಳವಲ್ಲ ಪೊಸಬಗೆಯ ಮಹಿಮೆಗಳ ಅಘಹರನ ಅಗಣಿತದ ಗುಣ ಗಣಗಳ ನಿಗಮ ನಿಕರಕೆ ಮೈಯಗೊಡದ ಉಡುಪಿನ ಕೃಷ್ಣ ನೊಗುಮಿಗೆಯ ಉನ್ನತದ ವೈಯಾರಗಳನು 7
--------------
ವ್ಯಾಸರಾಯರು