ಒಟ್ಟು 121 ಕಡೆಗಳಲ್ಲಿ , 49 ದಾಸರು , 116 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಕಾಂಬೆನೆ ಯದುವರನಾ| ತಂದು ಲೋಲಿಸೆ ಸಖಿಜಿತ ರೂಪಸ್ಮರನಾ ಪ ಶಿರಿದೇವಿ ಪ್ರೀಯನ ಶರಣಾಶ್ರಯನಾ| ಭವ ಭವ ಮುಖರೊಡೆಯನಾ 1 ವಿಮಲೆ ಚರಣನಾ ಕಮಲೇಕ್ಷಣನಾ| ದುರಿತ ಕುಲದೀನೋದ್ಧರನಾ 2 ಹೇಮಾಂಬರನಾ ಶಾಮಸುಂದರನಾ| ಕಾಮಿತಾರ್ಥವ ನೀವ ಕರುಣಾ ಸಾಗರನಾ 3 ತಂದೆ ಮಹಿಪತಿಯಾ ನಂದನ ಸಾರಥಿಯಾ| ಹೊಂದಿದವ ಕಾಂಬಾನಂದ ಮೂರಿತಿಯಾ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನಾಯ್ತು ಹರಿಪಾದ ನೆನೆವಲ್ಲಿ ಮನವೆ ದೀನನೆ ನಿನ್ನ ಬಾಯಿಗ್ಹುಣ್ಣ್ಹುಟ್ಟಿತೇನೋ ಪ ನಿಷ್ಠೆಯಿಂ ಕೈತಾಳವಿಟ್ಟು ಉಲ್ಲಾಸದಿ ಕಷ್ಟಹರನಂಘ್ರಿ ಮನಮುಟ್ಟಿ ಪಾಡುವಲ್ಲಿ ಕೆಟ್ಟಾಸೆಯಿಂ ಪರರಲ್ಹೊಟ್ಟ್ಹೊಟ್ಟ್ಹೊಡಕೊಂಡು ಬೇಡ್ದ ಪೆಟ್ಟಿಗೆ ಕರವರೆಡು ಮುರಿದಿರುವವೇನೋ 1 ವನಜನಾಭನ ದಿವ್ಯ ವನರುಹಂಘ್ರಿಯ ಚರಿತ ಘನವಾಗಿ ಪೊಗಳುತ ಕುಣಿದಾಡವಲ್ಲಿ ಮೊಣಕಾಲು ಕೀಲ್ಮುರಿದು ನೆಲಕಿ ಬಿದ್ದಿಹ್ಯವೆ 2 ನೀಲಶಾಮನ ವಿಮಲಲೀಲೆಗಳು ಶೀಲಮನದಾಲಸಾನಂದೊಳು ಲೋಲ್ಯಾಡವಲ್ಲಿ ಹಾಳು ಸಂಸಾರದ ಗೋಳಾಟ ಕೇಳಿ ಕೇಳಿ ಶೂಲೆಯೆದ್ದೆರಡು ಕಿವಿ ಕಿವುಡಾದವೇನು 3 ಸಾಗರನಿಲಯನ ನೀಗದ ಮಹಿಮೆಗಳ ಜಾಗರದಿಂ ಪಾಡಿ ಭವರೋಗ ಗೆಲಿವಲ್ಲಿ ಸೋಗಿನ ಸೂಳೆಸುದ್ದಿ ರಾಗದ್ಹಾಡ್ಹ್ಯಾಡಿ ಭವ ಜಿಹ್ವೆ ಕಳಕೊಂಡಿದ್ಯೇನೋ 4 ದಾಸನುದಾಸರ ವಾಸದಿಗೂಡಿಯನು ಮೇಷನು ವಿಚಾರದಿಂ ಶ್ರೀಶನ ಚರಣ ಧ್ಯಾಸದೊಳಗಿರ್ದು ಯಮಪಾಶವನು ಗೆಲಿದು ದಯ ಭೂಷ ಶ್ರೀರಾಮನ ಮುಕ್ತಿ ಪಡಿವಲ್ಲಿ 5
--------------
ರಾಮದಾಸರು
ಏನೆಂದ್ಹೇಳಲಿ ತಂಗಿ _ ಏನೆಂದ್ಹೇಳಲಿ ತಂಗಿ _ ಏನೆಂದ್ಹೇಳಲಿ ರಂಗನ ಮಹಿಮೆಯ ಏನೆಂದ್ಹೇಳಲಿ ಪ ಘನ್ನಸಿರಿವಿಧಿ ಧ್ಯಾನಕೆ ನಿಲುಕದ ಅಗಣಿತ ಮಹಿಮೆಯ ಅ ಎಲ್ಲವ ಬಲ್ಲನು ಎಲ್ಲವ ಮಾಡುವ ಎಲ್ಲರ ಒಡೆಯನು ಇಲ್ಲದ ಸ್ಥಳವಿಲ್ಲ ಬಲ್ಲವರಿಲ್ಲವೆ ಫುಲ್ಲನಾಭನ ನಲ್ಲನು ಲಕ್ಷ್ಮಿಗೆ ಗೊಲ್ಲನು ಆದನೆ 1 ಅಂಗನೆ ಲಕ್ಷ್ಮಿಯ ಸೊಗಸಿಗೆ ನಿಲುಕದ ಅಂಗನೆ ಇಲ್ಲದೆ ಮಗನನು ಪಡೆದವ ಹಿಂಗದ ತಾನೆ ಅಂಗನೆ ಯಾದವ ರಂಗನ ಗೋಕುಲ ಹೆಂಗಳ ಕೂಡಿದನೆ2 ತಂದೆಯ ಕೊಂದನು ಕಂದನ ಸಲಹಿದ ಕಂದನ ಕೊಂದನು ತಂದೆಯ ಸಲಹಿದ ಬಂಧುಗಳೆನ್ನದೆ ಕೊಂದನು ವಂಶವ ತಂದೆಯು ಇಲ್ಲದೆ ಕಂದನು ಆಗುವನೇ 3 ದಾನವ ನೀಡಿದ ದಾನಿಯ ತುಳಿದನು ಮಾನವ ತೆಗೆದಾ ಹೀನನ ಸಲಹಿದ ದೀನರ ಸಲಹುವ ದಾನವರಳಿವನು ಜ್ಞಾನಿಗಮ್ಯನು ಮಾನಸ ಹಂಸನ 4 ಹಸಿವೆಯ ಅರಿಯದ ಅಸಮದೇವನು ಸೊಸಿಯು ನೀಡಿದ ಶಾಖವ ತಿಂದನೆ ಪಶುಪತಿ ಋಷಿಯನು ವಶವಾಗಿ ಮಾಡಿದ ಮಾಸದಮಹಿಮನು 5 ನಾಲ್ಮೊಗನಯ್ಯನು ಸುಳ್ಳನು ಹೇಳುತ ಕಳ್ಳನು ಆದನು ಗೊಲ್ಲರ ಭಕ್ತರಿಗೆ ಮೆಲ್ಲನೆ ಕುರುಕುಲ ಎಲ್ಲವ ಸವರಿದ ಬಲ್ಲಿದ ಕೃಷ್ಣಗÉ ಇಲ್ಲವೆ ಸಮರಧಿಕ 6 ಜಗವನು ಮಾಡುವ ಜಗವನು ಪಾಲಿಪ ಜಗವನು ಅಳಿಸುವ ಮಗುವಾಗಿ ಬಂದನೆ ಜಗಜೀವ ಭಿನ್ನನು ಜಗದೊಳು ವ್ಯಾಪ್ತನು ನಗುತಲಿ ಬಾಯಲಿ ಜಗವನು ತೋರಿದನೆ7 ಯಾಗವ ನಡೆಸಿದ ಯಾಗವ ಕೆಡಿಸಿದ ಯೋಗವ ಚರಿಸುತ ಯೋಗವ ಬೋಧಿಪನೆ ಬಾಗುವ ಭಕ್ತರ ನೀಗುವ ಕಲುಷವ ಆಗಮವಂದಿತ ಸಾಗರಶಯನನೆ8 ಹತ್ತವತಾರವ ನೆತ್ತಿದ ಮಹಿಮನು ಉತ್ತಮ ಭಕುತರ ತೆತ್ತಿಗನಾದನೆ ಬತ್ತಲೆ ಶಿಶುವಾಗಿ ಬಿತ್ತಿದ ಮೋಹವ ಬೆಸ್ತರಕುವರಿಗೆ ಆತ್ಮಜನಾದವನೆ9 ಚಕ್ರವಪಿಡಿದವ ನಕ್ರನ ತರಿದವ ಶಕ್ರನಕಾಯ್ದವ ವಕ್ರೆಯ ಕೂಡಿದನೆ ರಕ್ಕಸಯವನನ ಠಕ್ಕಿಲಿ ಅಳಿಸುತ ಭಕ್ತನಪೊರೆದಾ ಯುಕ್ತಗಳೊಡೆಯನೆ 10 ನಾರೆಂದೊದರಿದ ಉರುತರ ಪಾಪಿಯ ಭರದಿಂಪೊರೆಯೊ ಕರುಣಾಸಾಗರನೆ ನರಹರಿದೇವನು ಪರಿಪರಿರೂಪನು ಪರಿಪರಿಲೀಲೆಗೆ ಮೇರೆಯೆ ಇಲ್ಲಾವೇ 11 ವಾರಿಯಲಾಡುವ ಭಾರವ ಹೊರುವಾ ಕೋರೆಯ ತೀಡುವ ಘೋರವ ತೋರುವನೇ ವೀರರತರಿಯುವ ಕ್ರೂರರಸವರುವ ಜಾರನು ಆಗುವ ವೈರಿಗಳ್ವಂಚಿಪ ಏರುವ ತೇಜಿಯನೆ 12 ಅದ್ಬುತ ರೂಪವ ಕದನದಿ ತೋರಿದ ಬದರಿಯನಿಲಯಗೆ ತುದಿಮೊದಲಿಲ್ಲಾವೆ ಉದರದಿ ಮಗುವನು ಮುದದಿಂಸಲಹಿದ ಮುದಮುನಿ ಪ್ರಿಯನು ಹೃದಯದಿ ವಾಸಿಪನೆ 13 ವಿಷವನು ಕುಡಿದಾ ವೃಷಭವಾಹನ ಅಸುರನ ಭಯದಿಂ ಘಾಸಿಲಿ ಓಡುತಿರೇ ಮೋಸದಿ ಯುವತಿಯ ವೇಷವ ಧರಿಸುತ ಪಶುಪತಿ ಸಲಹಿದನೇ 14 ಭರದಿಂ ರಥವೆತ್ತಿ ನರನಂ ಕಾಯ್ದನು ಧರಣಿಯ ಒತ್ತುತ ಕುರುಪನ ಕೆಡಹಿದನೇ ಮರೆಸುತ ರವಿಯನು ಪೊರೆದನು ಚೇಲನ ಸುರವರಪೋಷಕ ಸಿರಿಪತಿ ಚದುರನ 15 ಗಂಗೆಯಪಡೆದ ಮಂಗಳ ಮಹಿಮನು ಹಿಂಗದೆ ಗೋಪರ ಸಂಗಡ ಆಡಿದನೇ ತಿಂಗಳ ಬೆಳಕಲಿ ಶೃಂಗರ ಸೊಬಗನು ಹೆಂಗಳ ಕೂಡುತ ಸಂಗೀತ ಪಾಡಿದನೆ 16 ಕಾಳಿಯ ಫಣೆಯಲಿ ಕಾಳಿಂದೀಶನು ತಾಳಕೆ ಕುಣಿಯುತ ಕೊಳಲನ್ನೂದಿದನೆ ಘೂಳಿಗಳಳಿಯುತ ನೀಲಳತಂದವ ಊಳಿಗ ಮಾಡಿದನೇ 17 ನಾರಿಯು ಮೊರೆಯಿಡೆ ಸೀರೆಯನೀಡಿದ ವಾರಿಜಾಕ್ಷನು ಸೀರೆಯ ಚೋರನೆ ನೀರೊಳು ಮುಳುಗಿದ ಪೋರರಿಗೆಲ್ಲ ತೋರಿದ ಜಗವನು ಸೂರಿಗಳೊಡೆಯನೆ 18 ಗರುಡನ ಏರುವ ಧರಣಿಯ ರಮಣನು ಏರುತಹುಡುಗರ ತುರುಗಳ ಕಾಯ್ದನೆ ಮಾರನಪಡೆದ ಮುರಹರಕೃಷ್ಣನು ಗಿರಿಯನು ಎತ್ತುತ ಹರುಷವ ಬೀರಿದನೇ 19 ಶೃತಿಗಳು ಪೊಗಳುವ ವ್ಯಾಪ್ತನ ನಿತ್ಯನ ಪಾತಕ ಹೋಗುವುದೇ ಅಂತಕ ಗತಿ ಮತಿ ಪ್ರೇರಕ ದಾತನು ಎಂತೆನೆ ಪ್ರೀತಿಲಿ ಸಲಹುವನೆ 20 ಮಜ್ಜಿಗೆ ಕಡೆಯುವ ರಜ್ಜುವಿನಿಂದಲಿ ಮೂರ್ಜಗನಯ್ಯನು ಕಟ್ಟಿಸಿಕೊಂಡಾನೆ ಲಜ್ಜೆಯ ಬಿಡುತಲಿ ಗೆಜ್ಜೆಯ ಕಟ್ಟುತ ಘರ್ಜಿಸಿ ಪಾಡಲು ಹೆಜ್ಜೆಯ ತೋರುವನೆ 21 ದಾಸರ ಪೋಷಿಪ ಶೇಷಗಿರೀಶನ ವಿಶೇಷವೆ ಬಣ್ಣಿಸೆ ಶೇಷಗೆ ಆಗದೆ ದೋಷವು ಇಲ್ಲದ ವಾಸುದೇವನೆ ತೋಷವ ನೀಡುವ ಸಾಸಿರ ನಾಮಕನೆ22 ಜಯಮುನಿ ಅಂತರ ವಾಯುವಿನಲ್ಲಿಹ ಜಯಕೃಷ್ಣವಿಠಲನು ಜೀಯನೆ ಜಗಕೆಲ್ಲ ನಯಭಯದಿಂದಲಿ ಹಯಮುಖನೊಲಿಸಲು ಭಯವನು ಹರಿಸುತ ನ್ಯಾಯದಿ ಪಾಲಿಪನೇ 23
--------------
ಕೃಷ್ಣವಿಠಲದಾಸರು
ಕಂಡೆ ನಾ ಕಣ್ಣಾರೆನಾ | ಕಂಡೆನಾ ಪ ಕಂಡೆನು ಕರುಣಾಸಾಗರನ | ಕರ ದಂಡ ನಾಮಕೊಲಿದವನ | ಆಹಾ ದಂಡ ಧಂಡದ ಲೀಲೆ ತೋಂಡರೊಡನಾಡು ಮೂರ್ತಿ 1 vಟಿಟತಮತ್ಕೋಟಿ ಸನ್ನಿಭನ | ದೇವ | ತಟಿನಿಯ ಪದದಿ ಪೆತ್ತವನ | ಚಾರು ಕರವ ನಿಟ್ಟವನ | ನಿಜ ಭಟ ಜನರಿಗೆ ಮುಕ್ತಿ ಪ್ರದನ ||ಆಹಾ || ಜಠರದಿ ಜಗವಿಟ್ಟು ವಟದೆಲೆಯೊಳು ಮಲಗಿ ವಟುರೂಪದಲಿ ಪಾದಾಂಗುಟವನು ಮೆಲುವನ 2 ಭುವನದೊಳು ಸಂಚರಿಸುವನ | ಕೂರ್ಮ ಮಾನವ ಪಂಚಮುಖನ | ಋಷಿ ಕುಮಾರ ಕುವರರ ಕಡಿದವನ ಮಹಿ ಕರವ ಕುವಲಯ ಸಖ ಕುಲೋಧ್ಭವ ಭವಮಾರ್ಗಣ ಬವರದಿ ಹಯವೇರಿ ಯವನರ ಬಡಿದನ 3 ಲ್ಮೊಗನ ನಾಭಿಲಿ ಪಡೆದವನ | ರವಿ ಮಗನಿಗೆ ಮಗನಾದವನ ತನ್ನ ಪೊಗಳುವಂಥರಫÀ ಕಳೆಯವವನ ಆಹಾ ಜಗನ್ನಾಥದಾಸರಿಗೆ | ಸೊಗಸಾದ ಮೃಷ್ಟಾನ್ನ ಬಗೆ ಬಗೆ ಉಣಿಸಿದ ಖಗಪತಿ ಗಮನನ4 ಸಾಸಿರನಯನನುಜನ | ಮಹಿ ದಾಸ ಕಪಿಲದತ್ತಾತ್ರೇಯನ ವೇದ ವ್ಯಾಸ ವೃಷಭ ಹಯಮುಖನ ಭಾರ ಶ್ರೀಶ ಮಾನಸಮಂದಿರ ||ಆಹಾ || ಶ್ರೀಶ ತಂದೆ ವೆಂಕಟೇಶ ವಿಠಲಂಘ್ರಿ ದಾಸರ ಸತ್ಯಹವಾಸದಿಂದಲಿಯಿಂದು 4 ತಂದೆ ತಾಯ್ಗಳ ಸುಕೃತವೊ | ನಮ್ಮ ಒಂದೂರಾರ್ಯರ ಅನುಗ್ರಹವೋ | ಸ್ತಂಭ ಮಂದಿರ ರಾಯರ ದಯವೊ | ದಾಸ ವೃಂದ ಕೃತಾಶೇಷ ಫಲವೊ | ಆಹಾ ಇಂದು ಭಾಗದಿ ಭಕ್ತಾವೃಂದಕೆ ದರುಶನಾ ನಂದಗರೆವ ಶಾಮಸುಂದರ ವಿಠಲನ 5
--------------
ಶಾಮಸುಂದರ ವಿಠಲ
ಕದವ ತೆಗೆಯೆ ಸುಂದರಿವಯ್ಯಾರಿ ಮುತ್ತಿನ ಪ ಕಡಲ ಶಯನನೆ ಮಡದಿ ಹರುಷದಿ ಸಡಗರದಿ ಮುಂದಡಿ ಇಡುತ ನಿನ್ನ ಒಡೆಯ ಬಂದಿಹನೆಂದು ಹರುಷದಿ ಬೆಡಗು ಮಾಡದೆ ಬಿಡಿಯ ಮುತ್ತಿನ 1 ಯಾರು ನಿನ್ನಯ ಪೆಸರ ಏನೆಂದು ತಿಳಿಯದೆ ಹೇಗೆ ತೆಗೆಯಲಿ ಕದವಾ ಘೋರ ರಾತ್ರಿಯ ವೇಳೆಯಲಿ ಬಂ- ದೀಗ ಬಾಗಿಲ ಬಡಿಯ ನಿಂದಿರೆ ನಾರಿಯರು ಏನೆಂದು ಕೇಳ್ಪರು ದ್ವಾರ ಬಿಡುಬಿಡುತಲಿ ಸಾಗು ಮುಂದಕೆ2 ತೆಗೆಯಲೊಲ್ಲೆನು ಕದವ ಸಮರಾತ್ರಿ ವೇಳದಿ ರುಕ್ಮನ ಅನುಜೆ ಕೇಳೆ ಪೃಥ್ವಿಯೊಳು ಎನ್ನನು ಚಕ್ರಿ ಎನ್ನುತ ಪೇಳ್ವರೆ ಅರ್ಥಿವಚನಗಳನ್ನು ಕೇಳುತ ಸತ್ವರದಿ ನೀ ಬಂದು ಮುಂದಕೆ ಮುತ್ತಿನ ಕದತೆಗೆದು ಬೇಗನೆ ರತ್ನ ಪೀಠದಿ ಕುಳ್ಳಿರಿಸೆ ಹೊಸ ಮುತ್ತಿನರಗಿಣಿ ಸತ್ಯವಾಣಿಯೆ3 ಕೇಳಿ ಹರ್ಷಿತನಾದೆನು ನಿನ್ನಯ ಮಾತ ಕೇಳಿ ನಗುವರು ಜನರು ಹೇಳಿ ಕೇಳುವರಿಲ್ಲ ನಿನ್ನ ಮನಸಾರ ಮಾತುಗಳಾಡಲೇತಕೆ ಕು- ಲಾಲ ಭವನವಿದಲ್ಲ ಸುಮ್ಮನೆ ಹೇಳ ಕೇಳದೆ ಹೊರಡು ಮುಂದಕೆ 4 ಹೀಗೆ ನುಡಿಯುವದೇತಕೆ ಈಗೆನ್ನ ಮಾತಿಗೆ ಬೇಗದಿ ತೆಗೆ ಕದವ ನಾಗವೇಣಿಯೆ ನಗುತ ಪೇಳುವೆ ಬೇಗದಲಿ ಇನ್ನೊಂದು ನಾಮವ ಈಗ ಧರಣಿಧರನು ಬಂದಿಹೆ ಸಾಗರನ ಸುತೆ ಸರ್ಪವೇಣಿಯೆ 5 ಧರಣೀಧರ ನೀನಾದರೆ ಈ ಧರೆಯನೆಲ್ಲವ ಸಿರದ ಮೇಲಿರಿಸುವೆಯ ಸರ್ವ ಜನರಿಗೆ ಭಯವ ಪಡಿಸುವ ಉರಗರಾಜ ನೀನೆಂದು ತಿಳಿದೆನು ಇರುತ ಸರ್ಪಗಳೊಳಗೆ ನೀ ಬಲು ಹರುಷದಿಂದಲಿ ಸಾಗುಮುಂದಕೆ6 ಹರಿಣಾಕ್ಷಿ ಕೇಳೆ ನೀನು ಎನ್ನನು ಜನರು ಹರಿಯೆಂದು ಕರಿಯುವರು ಕರೆ ಕರೆಯ ಮಾಡದಲೆ ಬೇಗನೆ ವರ ಕನಕ ಕದ ತೆಗೆದು ಸುಮ್ಮನೆ ಇರಿಸು ಸುಖ ಸಾಮ್ರಾಜ್ಯ ಪೀಠವ ಹರುಷದಿಂ ಕುಳಿತೆಲ್ಲ ಪೇಳುವೆ 7 ಕೋತಿ ನೀನಹುದಾದರೆ ಮಾತುಗಳ್ಯಾಕೆ ಜಾತಿ ಕಪಿಗಳ ಕೂಡುತ ಪ್ರೀತಿಯಿಂದಲಿ ಮನಕೆ ಬಂದೆಡೆ ನೀತೆರಳುತಲಿ ಪೋಗು ಮುಂದಕೆ ಕೋತಿಗಳ ಗುಂಪಿದಲ್ಲ ತಿಳಿಮಹ- ರೂಪವತಿಯರಿರುವ ಸ್ಥಳವಿದು 8 ಪ್ರೀತಿಸತಿಯೆ ನೀ ಕೇಳೆ ನಿನ್ನೊಳು ಬಹು ಪ್ರೀತಿಯಿಂದಲಿ ಬಂದೆನು ಶ್ರೀಶನ ನುಡಿಕೇಳಿ ರುಕ್ಮಿಣಿ ಆತುರದಿ ಬಾಗಿಲನೆ ತೆಗೆಯುತ ನಾಥ ಕಮಲನಾಭ ವಿಠ್ಠಲನಿಗೆ ತಾನಮಿಸಿ ವಂದಿಸುತ ಭಕುತಿಯಲಿ ಬಾಗಿಲು ತೆಗೆದಳಾಗ ಭಕುತಿಯಲಿ ಶ್ರೀಶಗೆ ಬಾಗಿಲು ತೆಗೆದಳಾಗ9
--------------
ನಿಡಗುರುಕಿ ಜೀವೂಬಾಯಿ
ಕಮಲನಯನನ ಕರತಾರೆ ಕರುಣ ಸಾಗರನ ಕರಿರಾಜ ವರದನ ಪ -------ಪನ ಕಂಬುಕಂಧರನ ಲೋಕನಾಯಕ ಶ್ರೀಯದು ವೀರನಾ ರಾಕೇಂದು ಮುಖಿ ವರ ಲಕ್ಷ್ಮೀನಾಯಕನ ನೀರಜ ನಾಭನಾ 1 ಸುಜನ ವಿಲಾಸನಾ ಕಂದ ಪ್ರಹ್ಲಾದನಾ ಕಾಯ್ದದೇವನಾ ಸುಂದರ ವದನ ಗೋವಿಂದ ಮುಕುಂದನಾ ಮಾಧವ ಕೃಷ್ಣನಾ 2 ಯದುಕುಲಾಬ್ಧಿಚಂದ್ರ ವೇದಗೋಚರನಾ ಮಧÀು ಸೂದನ ರೂಪ ಮಹಿಮ ಪ್ರಕಾಶನಾ ಬುದ್ಧ ಜನರ ಸಿರಿಯ ನಾ ಪೂರ್ಣಾನಂದನ ಚದುರೆ ನೀ ಬೇಗ ಹೋಗಿ ಚಲುವ ಸಂಪನ್ನನಾ 3 ಆನಂದ ನಿಲಯನಾದ ಅಖಿಲವೈಭವನಾ ಜ್ಞಾನಿಗಳ ಪೊರೆವ ಘನ ಗಂಭೀರನಾ ಧೇನು ಪಾಲಕ ದೇವಾದಿ ದೇವನ ಗಾನಲೋಲನಾದ ವೇಣು ಗೋಪಾಲನ 4 ಗರುಡವಾಹನನಾ-----ಜನ ಕಾಯ್ದವನಾ ಸ್ಥಿರ ಹೆನ್ನ ತೀರದಿ ವಾಸವಾಗಿಹನ ದೊರೆ 'ಹೆನ್ನ ವಿಠ್ಠಲನ’ ----ದೇವನಾ ಪೊರೆವನು ನಮ್ಮ ನಿಂದು ಪರಮಹರುಷದಿಂದಾ5
--------------
ಹೆನ್ನೆರಂಗದಾಸರು
ಕರುಣಸಾಗರನಹುದೊ ಶರಣ ಜನರ ಪ್ರಿಯ ಧ್ರುವ ಕರಿರಾಜ ಮೊರೆ ಇಡಲು ಭರದಿಂದೊದಗಿ ಬಂದ್ಯೊ ದುರಿತ ಬಂದಡರಿದಾವಸರದೊಳು ನೀ ಪರಿಹರಿಸಿದ್ಯೊ ಶ್ರಮ ಪರಮ ದಯಾಳು 1 ದುರಿತ ನಿರ್ಮಿಸಿದವನ ಬೆರಳಲಿ ಸೀಳಿದ್ಯೊ ಪೂರ್ಣ ಹರಿಯಂದಾ ಮಾತಿಗೆ ಕರುಣದಿಂದೊದಗಿ ನೀ ಪರಪರಗಾಯಿದ್ಯೊ ತರಳ ಪ್ರಹ್ಲಾದನ 2 ಧರ್ಮಪತ್ನಿಯ ಸೆರಗೆ ಭರದಿಂದೆಳೆಯುವ ಸಮಯ ಸ್ಮರಣಿ ಒದಗಿ ಬಂದೊ ಪರಿಪರಿ ವಸ್ತುವ ಪೂರಿಸಿದ್ಯೊ ಶ್ರೀ ಹರಿ ಕೃಷ್ಣ ಕೃಪಾಳು 3 ಅರಗಿನ ಮನೆಯೊಳು ಮರೆ ಮೋಸ ಮಾಡಿರಲು ಶರಣಾಗತವತ್ಸಲ ಪಾಂಡವಪ್ರಿಯ 4 ಹಲವು ಪರಿಯಲೆನ್ನ ಸಲಹುವ ಸದ್ಗುರುಪೂರ್ಣ ಬಾಲಕ ಮಹಿಪತಿಯ ಪಾಲಕ ನೀನಹುದೊ ಮೂಲೋಕದೊಡೆಯ ಶ್ರೀ ಹರಿ ದಯಾಳ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಾರಸಮಾರ್ಜಿತ ಸಂತಾಪಂ ಪ ಮುನಿಮಾನಸ ಪೂಜಿತ ನಿರ್ಲೇಪಂ ವನರುಹಾಸನ ಮುಖ್ಯ ವಂದಿತ ಗೌರವಂ ನರ ಪುಂಗವಂ ಮನುಕುಲಾರ್ಚಿತ ಪಾದಪಂಕಜ ರಾಘವಂ ಸುರಧೇನುವಂ 1 ಶೋಭಿತ ಪಾವನ ಕೀರ್ತಿಯುತಂ ಪಶುಪತಿ ಪ್ರಿಯಮವ್ಯಯಂ ಸುರಪೂಜಿತ ಗುಣಭೂಷಿತಂ ಶಶಧರಾನನೆ ಜಾನಕೀ ಪ್ರಿಯ ಭಾಸುರಂ ಕರುಣಾಕರಂ 2 ಖರದೂಷಣ ಶಾಸಕ ದೇವಂ ಶರಣಾಗತ ಸಂರಕ್ಷಣ ನಿರತಂ ಚರಣಪಲ್ಲವನುನ್ನ ದುಂದುಭಿಕಾಯಂ ಅಕ್ಷಯಂ ಅದ್ವಯಂ ಸುರವರಂ ವರಧೇನುನಾಮಕ ನಗರನಾಯಕಂ ಹಾಯಕಂ 3
--------------
ಬೇಟೆರಾಯ ದೀಕ್ಷಿತರು
ಕರುಣಿಸುವುದು ಎನ್ನಾ ಕರಿವರದ ಕೇಶವ ಕರಪಿಡಿದು ಸುಖಪೂರ್ಣಾ ನಿನ್ನಡಿಗಳಂಬುಜ ಸ್ಮರಿಪರಲ್ಲಿಡ ಮುನ್ನಾ ಪರಿಹರಿಸು ಬನ್ನಾ ಪ ಸರಸಿಜಾಪತಿ ಸರಸಿಜೋದ್ಭವ ಹರಸುರಾಧಿಪ ವಂದ್ಯ ನಿನ್ನಯ ಎರವು ಮಾಡದೆ ತ್ವರ್ಯ ಸೌಖ್ಯವುಗರದು ಕರುಣದಿ ಅ.ಪ. ಜನನಿ ಜಠರದಿಂದ ನಿನ್ನಾಜ್ಞದಲಿ ನಾ ಜನಸಿದೆನೊ ಗೋವಿಂದಾ ಬಾಲತ್ವ ಕೆಲದಿನ ಕಳೆದೆನೊ ಮುಕುಂದಾ ಯೌವ್ವನವು ಬರುತಲೆ ವನಿತೆ ಮುಖ ಅರವಿಂದಾ ನೋಡುತಲೆ ಬಲು ಛಂದಾ ಮನವು ನಿಲ್ಲದು ಮಮತೆ ವಿಷಯದಿ ಮುನಿದು ಸಜ್ಜನರ ಸೇವಿಸಿ ಕೊನೆಯಗಾಣದೆ ಮಣಿವೆ ಅಂಘ್ರಿಗೆ ವನದಿಗಳ ವಮ್ಮನೆ (?) ನಡಿಸು ವೆಂಕಟಾ ಘನತೆ ನಿನಗಿದು ತಿಳಿದು ವೇಗದಿ ಅನುದಿನದಲಿ ಸಲಹುತಿಪ್ಪನೆ ಅನಿಮಿಷರ ಆಧಾರ ಮೂರುತಿ 1 ಮೊರೆಯ ಲಾಲಿಸು ಜೀಯಾ ಅರೆ- ಮೊರೆಯ ಮಾಡಲು ಪೊರೆವರ್ಯಾರೆಲೊ ಕಾಯಾ ಅ- ನ್ಯರನು ಕಾಣದೆಯರಗಿದೆನು ಸುರ ಸಹಾಯ ಸುರಧೇನು ಮನೆಯೊಳಗಿರಲು ವಿಠ್ಠಲರೇಯಾ ಮಾಯಾ ಬಲ ತಡದು ನಿಕ್ರವ ತರಲು ಜನರೊಳು (?) ಯರಗಿರಲು ನಿನಗೆಂದಿಗಾದರು ಅರಿದು ಅಗ್ಗಕೆ ಪೊರೆದು ಮಾನವ ಕರಿಯು ಕರೆಯಲು ಬರುವುದುಂಟೇ ಕರುಣಾಸಾಗರನೆಂಬೊ ನಿನ್ನಯ ಬಿರುದು ಉಳ್ಳದಕೊಂಡು ಸಾಧನೆ ಧರೆಯ ದುಷ್ಟರ ಬಾಧೆ ತಪ್ಪಿಸಿ ಹರುಷವನು ಅತಿಗರೆದು ನಿರುತದಿ 2 ಬಿಡೆನೊ ಕಡಲೊಡಗಾಡಿ ಬಿಂಕದಲಿ ಅದ್ರಿಯ ನಿಡಲಿ ಬೆನ್ನಲಿ ನÉೂೀಡಿ ಪಾದಗಳ ಎಳೆಯುತ ನಡೆದು ಕೋಪವ ಮಾಡಿಬಿಡು ದೈನ್ಯದಲಿ ಪೊಡವಿ ದಾನವ ಬೇಡಿ ಬಿಡೆ ನೋಡಡವಿಯೊಳ್ ಕಾಡಿನ ಮಡುವಿನೊಳು ಗಿಡವೇರಿ ಧುಮುಕಲು ಅಂಬರ ಬಿಟ್ಟು ಖಡ್ಗವ ಪಿಡಿದು ವಾಜಿಯನೇರಿದನು ಜರ ಕಡಿಯಪೋಗಲು ಕಂಡು ನಿನ್ನನು ಬಿಡೆನೊ ನಿನಗೆಂದಿಗಾದರು ಪೊಡವಿಪತಿ ಶ್ರೀದವಿಠ್ಠಲ ವಡಿಯ ನೀನೆಂತೆಂದು ನಂಬಿದೆ 3 (ಈ ನುಡಿಯ ಅರ್ಥ ಸ್ಪಷ್ಟವಾಗುತ್ತಿಲ್ಲ-ಅಶುದ್ಧ ಪ್ರತಿಯ ಕಾರಣದಿಂದ.)
--------------
ಶ್ರೀದವಿಠಲರು
ಕರೆತಾರೆ ನೀ ಮನದಾ ಮೋಹನನಾ ಸುಜ್ಞಾನೇ ಪ ಸ್ಮರನ ಬಾಣಕ ಶಿಲ್ಕಿ ಬಲಿಯೊಳಗಾದೆ | ಹರಿಯಾ ನಗಲಿ ಅಸುವಿಡಿಯೇ ನಿನ್ನಾಣೆ 1 ಮರುಳು ಮಾನಿನಿಯಳ ಮಾನ್ಯಳ ಮಾಡೀ | ಕೊರತೆ ನೋಡುವದಿನ್ನು ಉಚಿತವೇ ಜಾಣೆ 2 ಗುರುವರ ಮಹಿಪತಿ ನಂದನ ಸ್ವಾಮಿ | ಕರುಣಾ ಸಾಗರನೆಂಬಾ ಬಿರುದ ಕಿದೇನೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಮಾನ ಜನನಿಯೆ ಸೋಮಾನ ಸೋದರಿ ಸಾಮಾಜ ವರದನ ಪ್ರೇಮವ ಕೊಡಿಸಮ್ಮ ಪ ನೇಮಾದಿಂದಲಿ ಹರಿ ನಾಮಾವ ನುಡಿಸುತ ತಾಮಾಸ ಓಡುವಂತೆ ನೀಮಾಡಬೇಕಮ್ಮ ಅ.ಪ ನಿತ್ಯ ತೃಪ್ತಳೆನಿನ್ನ ನಿತ್ಯದಿ ಬೇಡಿಕೊಂಬೆ ಭೃತ್ಯರೊಳಗೆ ಎನ್ನ ಎತ್ತಿ ಸೇರಿಸೆ ತಾಯೆ || ಮತ್ತನಾಗದೆ ಭವದಿ ಉತ್ತುಮನೆನಿಸುತ ಆತ್ಮದಿ ಹರಿ ತೋರಿ ಕೃತಕೃತ್ಯನೆನಿಸಮ್ಮ 1 ದೇಶಕಾಲದಿನೀನು ಶ್ರೀಶಗೆ ಸಮಳಮ್ಮ ನಾಶಮಾಡುತ ದೋಷ ದಾಸಾನು ಎನಿಸಮ್ಮ || ಶ್ವಾಸಾಶೇಷರನೆಲ್ಲ ಲೇಸಾಗಿ ಆಳುವಳೆ ವಾಸುದೇವನಲ್ಲಿ ಆಸೇಯ ನೀಡಮ್ಮ 2 ಶೃತಿಯಲ್ಲಿ ನೀನಿದ್ದು ಸ್ತುತಿಸೀ ಶ್ರೀಹರಿಯನ್ನ ಮತ್ತೆಸೃಜಿಸುವಂತೆ ಎತ್ತಿಗಾನವ ಮಾಳ್ವೆ || ಎತ್ತ ನೋಡಲು ಬಲು ಕತ್ತಲೆಕಣಿ ತಾಯೆ ಸತ್ಯವ ಬಿಡದಂತೆ ಹತ್ತೀಸೆ ಹರಿದಾರಿ3 ಹರಿಯಂತೆ ಅವತಾರ ನಿರುತನೀ ಮಾಡುತ ಪರಿ ರೂಪದಿಂದ ಪರಿಚರಿಯ ನೀಮಾಳ್ವೆ || ಸರ್ವೇಶ ಹರಿಯಿಂದ ಸರ್ವಕಾಲದಿ ಕೂಡಿ ಸರ್ವಕಾರ್ಯವ ಮಾಳ್ವೆ ಸರಿಯಾರೆ ನಿನಗಮ್ಮಾ 4 ಅಕ್ಷರ ರೂಪಳೆ ಈಕ್ಷಿಸುಕರುಣದಿಂದ ತ್ರ್ಯಕ್ಷೇಶ ವಿಧಿಮಾತೆ ಅಕ್ಷರನರ್ಧಾಂಗಿ || ಕುಕ್ಷೀಲಿ ಬ್ರಹ್ಮಾಂಡ ಲಕ್ಷ್ಯವಿಲ್ಲದೆ ಪಡೆದಿ ಅಕ್ಷಯ ಮಾಡಿ ಜ್ಞಾನ ಮೋಕ್ಷಾವ ಕೊಡಿಸಮ್ಮಾ5 ವಿಕಾರ ಶೂನ್ಯಳೆ ಪ್ರಕೃತಿಗೆ ಮಾನಿಯೆ ನೀಕಾರ್ಯ ಕಾರಣಕ್ಕೆ ಮುಖ್ಯ ಹೇತುವೆ ತಾಯೆ || ಪ್ರಕೃತಿ ಬಂಧವ ಬಿಡಿಸಿ ಸಾಕಾರ ಮೂರುತಿ ಲೋಕನಾಯಕ ಹರಿಯ ಏಕಾಂತದಲಿ ತೋರೆ6 ತ್ರಿಗುಣ ಕಾರ್ಯಗಳೆಲ್ಲ ಸುಗುಣಿ ನೀ ಮಾಡುತ ನಿತ್ಯ ಪೊಗಳಿ ಹಿಗ್ಗುವೆ ಮಾತೆ || ಜಗವೆಲ್ಲ ಕುಣಿಸುತ ನಗುತಲೀಲೆಯಿಂದ ನಿಗಮಾದಿಗಳ ಮೀರಿ ಬಗೆ ಬಗೆ ಲೀಲೆ ಕಾಂಬೆ 7 ನಿತ್ಯಾ ಮುಕ್ತಳು ನೀನು ಪ್ರೀತಿಲಿ ನಮಿಪೆನೆ ಮಾತುಲಾಲಿಸಿ ಎನ್ನ ನಿತ್ಯದಿ ಸಲಹೆಮ್ಮ || ಹೆತ್ತ ತಾಯಿಯು ನೀನು ಎತ್ತಿ ಪೊರೆಯದಿರೆ ಎತ್ತ ಪೋಗಲಿ ನಾನು ಉತ್ತುಮರಮೆ ಹೇಳೆ 8 ಸಾಗರನ ಮಗಳೆ ಆಗಮರೂಪಳೆ ಹೋಗೀಸುಲಿಂಗವ ಸಾಗಿಸಿಗುಣಕಾರ್ಯ || ಭಾಗ್ಯ ಸ್ವರೂಪಳೆ ಬಾಗಿ ನಮಿಸುವೆ ಆಗು ಮಾಡಿಸು ಹರಿ ಗೀತೆಗಳೆನ್ನಿಂದ 9 ಮರುತ ದೇವನ ಪಿತನ ಉರದಲಿ ವಾಸಿಪಳೆ ಹರಿಗುರು ಚರಣದಿ ನಿರುತ ಭಕ್ತಿಯ ಕೊಟ್ಟು || ವಾರಿಜನಾಭನಲ್ಲಿ ಧಾರೆ ಧಾರೆಯ ಭಕ್ತಿ ಸಾರಸ ದಳನಯನೇ 10 ಮಾತು ಮಾತಿಗೆ ನಮ್ಮ ಖ್ಯಾತಾಜಯತೀರ್ಥ ನವನೀತ ಧರಿಸೀಹ || ಶ್ರೀ ತಾಂಡವ ಕೃಷ್ಣ ವಿಠಲರಾಯನ ಸ್ಮರಣೆ ಆತ್ಮಾದೊಳಗೆ ನಿಂತು ಖ್ಯಾತೀಲಿನಡಿಸಮ್ಮಾ 11
--------------
ಕೃಷ್ಣವಿಠಲದಾಸರು
ಕಾಯವ ನೆರೆನಂಬಿ ಕೆಡದಿರು ಮಾಯೆಯ ತಿಳಿದೇಳು ಪ. ನ್ಯಾಯವನರಿಯದೆ ನೀ ಮಾಯಾಮೋಹವೆ ಹೇಯಕಾರ್ಯರಿದೊಳಪಾಯದಿ ನರಳುವ ಅ.ಪ. ತನುಮನಕನಕವಿದು ನಿತ್ಯದಿ ತನದಾಗಿಹುದೆಂದು ಹೊನ್ನು ಮಣ್ಣು ಹೆಣ್ಣೆಂಬೀ ಮೂರರ ಬಣ್ಣದೆ ಬಗೆಗೆಟ್ಟು ಕಣ್ಣು ಕಾಣದೆ ಮುಂಬರುತಿಹ ಭಿನ್ನವನೆಣಿಸದೆಯೆ ಸಣ್ಣತನದಿ ಜೀವನ ವ್ಯರ್ಥವೆನಿಸುವ 1 ಸುಜನರ ಸಂಗತಿ ತ್ಯಜಿಸಿ ಮದದಲಿ ಕುಜನರ ಕೂಟವ ಬಯಸಿ ಋಜುಮಾರ್ಗವ ತೊರೆದು ಕಾಲವ ಅಜಗರನಂದದಿ ಕಳೆದು ಗಜಪತಿ ವರದನ ಪದಪಂಕಜ ಮಹಿಮೆಯ ನಿಜವರಿಯದೆ ದುರ್ಜೀವನವೆನಿಸುವ 2 ನೀರಗುಳ್ಳೆಯ ತೆರದಿ ಕರಗುವ ಸಾರವಿಲ್ಲದ ಭವದಿ ಮೂರುದಿನದ ಬಾಳೆಂದು ನೆನೆಯದೆ ಹಾರಾಡುವರೇ ನಿಂದು ಮಾರಪಿತನ ಪದಸಾರಸವನು ನೆನೆ [ನೆನೆದು] ನೀರ ಶೇಷಗಿರಿವರನೆÀ ಗತಿಯೆನೆ 3
--------------
ನಂಜನಗೂಡು ತಿರುಮಲಾಂಬಾ
ಕಾರುಣ್ಯಸಾಗರನೇ ನಾ ಸೇರುವೆ ಮಾರನ ಪಡೆದವನೇ ಪ ಭಾವಾತೀತನೆ ಯೆನ್ನ ಅವಗುಣವೆನಿಸದೆ ಸೇವಕನಿಗೆ ನಿನ್ನ ಭಕ್ತಿಯ ನೀಡೋ 1 ದೇವಕಿ ಕಂದನೇ ಸನಕವಂದಿತನೇ ಸೇವೆಯ ಮಾಡುವೆ ಚರಣವ ನೀಡೋ 2 ಅಜನಿಗೆ ಪಿತನಾಗಿ ದ್ವಿಜರಿಗೊಡೆಯನಾಗಿ ಗಜನನ್ನು ಪೊರೆದ ಶ್ರೀ ಲಕ್ಷ್ಮೀ ಸೇವಿತನೇ 3 ಪಾದ ಯುಗ್ಮಗಳನ್ನು ಭಜಕನ ಸಲಹಯ್ಯ ಚನ್ನಕೇಶವನೇ 4
--------------
ಕರ್ಕಿ ಕೇಶವದಾಸ
ಕೃಷ್ಣವೇಣಿ ಕಲ್ಯಾಣಿ ನಿತ್ಯ ಸಾಗರನ ರಾಣಿ ಪ ಅಜನ ನಿರೂಪದಲಿ ಜಾಬಾಲಿಮುನಿ ಬಂದು ಭಜಿಸಿದನು ನಿನ್ನ ಬಲುದಿವಸಂಗಳು ನಿಜವಾಗಿ ಹರನ ಜಡೆಯಲ್ಲಿ ಉದ್ಭವಿಸಿದೆ ತ್ರಿಜಗದೊಳಗೆ ಮೆರೆದೆ ತ್ರಿದಶಾಮರವಂದಿತೆ 1 ಕನ್ಯಾರಾಶಿಗೆ ಜೀವ ಬಂದು ಪ್ರಾಪುತನಾಗೆ ಹನ್ನೆರಡು ವರುಷಕೆ ಒಮ್ಮೆ ಬಿಡದೇ ಮನ್ನಿಸಿ ಭಕುತಿಯಿಂದ ಒಂದು ಮಜ್ಜನಮಾಡೆ ಧನ್ಯನ ಮಾಳ್ಪೆ ಬಲು ಘನ್ನ ತರಂಗಿಣಿ 2 ಎತ್ತ ನೋಡಿದರತ್ತ ನಾಲ್ಕುವರೆ ಯೋಜನವು ಕ್ಷೇತ್ರ ಪುಣ್ಯದೇವಿಯೆನಿಸಿಕೊಂಬೆ ಸ್ತುತಿಸಲಳವೇ ನಿನ್ನ ಮಹಿಮೆಯ ಅನುಗಾಲ ಮತ್ತಗಜಗಮನೆ ಮಲದೂರೆ ಮುಕ್ತಿಧಾರೆ 3 ಪೋಗದ ಪಾಪಗಳಿರಲು ನಿನ್ನ ದರುಶನವು ಬಾಗಿಲ ಕಾಯ್ವ ಭಾಗ್ಯವ ಕೊಡು ಕರುಣದಲಿ 4 ಕಲಿಯುಗಕೆ ನೀನೇ ವೆಗ್ಗಳವೆಂದು ಬುಧಜನರು ಒಲಿದು ಕೊಂಡಾಡುವರು ಸತತದಲ್ಲಿ ಜಲನಿಧಿಯ ಎರಡು ಮೊಗದಲಿ ಮೆರೆದೆ ಮಹತಟಿನಿನೆಲೆಗೊಳಿಸು ವಿಜಯವಿಠ್ಠಲ ಚರಣದಲ್ಲಿ 5
--------------
ವಿಜಯದಾಸ
ಗಂಗಾ ಭಾಗೀರಥೀ ಮಂಗಳಾಂಗಿ ಅಳಕನಂದನ ನೀ ಮಹಾ ಸುಂದರಾಂಗಿ ಸಿಂಧುರಾಜನ ರಾಣಿ ಸಿರಿಯು ಸಂಪತ್ತು ಕೊಡು ಕಂಗಳಿಂದಲಿ ನೋಡಿ ಕರುಣಿಸೆನ್ನ ಪ ಕಾಶಿ ಪಟ್ಟಣದಲಿ ವಾಸವಾಗಿ ಸರಸ್ವತಿಯನು ಕೂಡಿ ನೀ ಸರಸವಾಗಿ ಸೋಸಿಲಿಂದಲಿ ಸೂರ್ಯಪುತ್ರಿ ಯಮುನೆಯನು ಕೂಡಿ ಉ- ಲ್ಲಾಸದಿದ್ಹರಿದು ವಾರ್ಣಾಸಿಗ್ಹೋಗಿ 1 ಹಾಲಿನಂತೆ ಹರಿವೊ ಗಂಗೆ ನೀನು ನೀಲದಂತಿದ್ದ ಯಮುನೆಯನು ಕೂಡಿ ಲೀಲೆಯಿಂದಲಿ ಸರಸ್ವತಿಯನು ಕೂಡಿ ಓಲ್ಯಾಡುತ ಬಂದೆ ಒಯ್ಯಾರದಿಂದ 2 ಭಗೀರಥನ ಹಿಂದೆ ನೀ ಬಂದೆ ಓಡಿ ಸಗರನ ಸುತರ ಉದ್ಧಾರ ಮಾಡಿ ಜಗವ ಪಾವನ ಮಾಡೋ ಜಾಹ್ನವಿಯೆ ನೀ ಎನ್ನ ಮಗುವೆಂದು ಮುಂದಕೆ ಕರೆಯೆ ತಾಯಿ 3 ಬಿಂದುಮಾಧವ ವೇಣುಮಾಧವನ್ನ ಆ- ನಂದ ಭೈರವ ಕಾಳ ಭೈರವನ್ನ ಚಂದದಿಂದ್ವಿಶ್ವನಾಥನ್ನ ಗುಡಿಮುಂದೆ ಹೊಂದಿ ಹರಿದ್ಹನುಮಂತ ಘಾಟಿನ್ಹಿಂದೆ 4 ಪೊಡವಿ ಮ್ಯಾಲಿಂಥ ಸಡಗರದಿ ಹರಿದು ಕಡಲಶಯನನ್ನ ಕಾಲುಂಗುಷ್ಠದ ಮಗಳು ಕಡಲರಾಣಿಯೆ ಕಯ್ಯ ಪಿಡಿಯೆ ನೀನು 5 ಮರದ ಬಾಗಿಣ ಕುಂಕುಮರಿಷಿಣವು ಗಂಧ ಪರಿಪರಿಯಿಂದ ಪೂಜೆಯಗೊಂಬುವಿ ಸ್ಥಿರವಾದ ಮುತ್ತೈದೆತನ ಜನುಮ ಜನುಮಕ್ಕು ವರವ ಕೊಟ್ಟು ವೈಕುಂಠವನು ತೋರಿಸೆ 6 ಮಧ್ಯಾಹ್ನದಲಿ ಮಲಕರ್ಣಿಕೆಯ ಸ್ನಾನ ಶುದ್ಧವಾಗಿ ಪಂಚಗಂಗೆಯಲಿ ಭವ ಸ- ಮುದ್ರವನು ದಾಟಿಸೆ ಭಾಗೀರಥಿ 7 ಸುಕೃತ ಒದಗಿತೆಂದು ಗಂಗ ಭೆÀಟ್ಟಿಯಾಗೊ ಪುಣ್ಯ ಬಂದಿತಿಂದು ಚಕ್ರತೀರ್ಥದ ಸ್ನಾನ ಸಂಕಲ್ಪದ ಫಲವ ಕೊಟ್ಟು ರಕ್ಷಿಸು ತಾಯಿ ತರಂಗಿಣಿ 8 ಸಾಸಿರ ಮುಖದಿ ಶರಧಿಯನು ಕೂಡಿ ಹೋಗಿ ಬಾ ಊರಿಗೆ ಭಕ್ತಿಮುಕ್ತಿ ನೀಡಿ ನೀನು ಭೀಮೇಶ ಕೃಷ್ಣನಲಿ ಹುಟ್ಟಿದ್ದು ಪಾದವನು ತೋರೆನ್ನ ಪೊರೆಯಬೇಕೆ 9
--------------
ಹರಪನಹಳ್ಳಿಭೀಮವ್ವ