ಒಂದು ದಿನದಲಿ ಇಂದಿರೇಶನು
ಚಂದದಿಂದಲಿ ವನಕೆ ಬಂದನು
ಸುಂದರಾಂಗನು ಗೋಪ ವೃಂದದಿ
ನಿಂದು ಕೊಳಲನು ಸ್ವರವಗೈದನು 1
ಕೊಳಲ ಧ್ವನಿಯನು ಕೇಳುತಾಕ್ಷಣ
ಖಗಮೃಗಂಗಳು ಮಯ್ಯ ಮರತವು
ತರುಣಿ ಮಣಿಯರು ಮನೆಯ ಕೆಲಸಕೆ
ಮರತು ಮಯ್ಯನು ತೆರಳಿ ಬಂದರು 2
ಕೊಳಲ ಧ್ವನಿಯನು ಕೇಳಿ ಗೋಪೇರು
ನಳಿನನಾಭನ ಬಳಿಗೆ ಬಂದರು
ನಳಿನಮುಖಿಯರ ನೋಡಿ ಕೃಷ್ಣನು
ಮುಗುಳುನಗೆಯಲಿ ಮಾತನಾಡಿದನು 3
ನಾರಿಮಣಿಯರೆ ರಾತ್ರಿ ವೇಳೆಯು
ಈಗ ಇಲ್ಲಿಗೆ ಬಂದಿರೇತಕೆ
ಮಾರನಯ್ಯನ ಮಾತುಕೇಳುತ
ಮಡದಿ ಮಣಿಯರು ನುಡಿದರಾಗಲೆ4
ಬಾಲಕೃಷ್ಣನೆ ನಿನ್ನ ಕೊಳಲಿನ
ಈಗಲೆಮ್ಮಯ ಮನವು ಹರುಷಿಸೆ
ಬೇಗ ನಿನ್ನನು ಬೇಡಿಕೊಂಬೆವೊ 5
ಇಂತು ಕೃಷ್ಣನು ಸರಸವಾಡುತ
ನಿಂತನವರಿಗೆ ಹರುಷ ತೋರುತ
ಚಿಂತೆಯೆಲ್ಲವ ಬಿಟ್ಟು ಗೋಪೇರು
ಅಂತರಾತ್ಮನ ಭಜಿಸುತಿದ್ದರು 6
ಏನು ಪುಣ್ಯವೊ ನಮ್ಮದೆನುತಲಿ
ದಾನವಾರಿಯ ಸ್ಮರಿಸುತಿದ್ದರು
ನಾರೇರೆಲ್ಲರ ನೋಡಿ ಕೃಷ್ಣನು
ಬೇಗದಿಂದಲಿ ಅಂತರ್ಧಾನನಾದನು 7
ಸ್ಮರನ ಪಿತನನು ಸ್ಮರಿಸಿಪಾಡುವ
ತರುಣಿಯರಿಗೆ ಮೈ ಸ್ಮರಣೆ ಮರೆತಿರೆ
ಭರದಿ ಕಂಗಳ ತೆರೆದು ನೋಡಲು
ಮುರಳೀಧರನ ಕಾಣದಲೆ ಚಿಂತಿಸಿ 8
ಜಾಜಿ ಸಂಪಿಗೆ ಸೂಜಿ ಮಲ್ಲಿಗೆ
ರಾಜೀವಾಕ್ಷನ ಕಾಣಲಿಲ್ಲವೆ
ಬಿಳಿಯ ಮಲ್ಲಿಗೆ ಎಳೆಯ ತುಳಸಿಯೆ
ನಳಿನನಾಭನ ಸುಳಿವು ಕಾಣಿರಾ 9
ಸರಸದಿಂದಲಿ ಹರಿವ ಯಮುನೆಯೆ
ಪಾದ ಕಾಣೆಯಾ
ಚಿಗರಿ ಮರಿಗಳೆ ನಿಮ್ಮ ಕಂಗಳು
ನಳಿನನಾಭನ ಸುಳವು ಕಾಣವೆ 10
ಯಾರ ಕೇಳಲು ಹರಿಯ ಕಾಣರು
ನಾರಿಮಣಿಯರೆ ನಾವೆ ಕರೆಯುವ
ಮುದ್ದು ಕೃಷ್ಣನೆ ಪದ್ಮನಾಭನೆ
ಶ್ರದ್ಧೆಯಿಂದಲಿ ನಿಮ್ಮ ಭಜಿಪೆವೊ 11
ಜಯತು ಜಯತು ಶ್ರೀ ಲಕ್ಷ್ಮೀ ರಮಣನೆ
ಜಯತು ಜಯತು ಶ್ರೀ ಗರುಡಗಮನನೆ
ಜಯತು ಜಯತು ಶ್ರೀ ಉರಗಶಯನನೆ
ಜಯತು ಜಯತು ಶ್ರೀ ಪರಮ ಪುರುಷನೆ 12
ಜಯತು ಜಾಹ್ನವಿಜನಕÀ ಶ್ರೀಶನೆ
ಜಯತು ಭಕ್ತರ ಭಯವಿನಾಶನೆ
ಜಯತು ಪಾವನ ಪುಣ್ಯ ಚರಿತನೆ
ಜಯತು ಜಯತು ಲಾವಣ್ಯರೂಪನೆ 13
ಎಳೆಯ ಚಿಗುರಿನಂತಿರುವ ಪಾದವು
ರುಳಿಯ ಗೆಜ್ಜೆಯು ಕಾಲಪೆಂಡೆಯು
ಎಳೆಯ ಪಾದದಿ ಹೊಳೆವ ಪೈಜನಿ
ಘಲಿರು ಘಲಿರು ಎಂದೆನುತ ಮೆರೆವುದು 14
ಪುಟ್ಟ ನಡುವಿಗೆ ಪಟ್ಟೆ ಮಡಿಗಳು
ಇಟ್ಟ ಚಲ್ಲಣ ಪುಟ್ಟ ಕೃಷ್ಣಗೆ
ಉಡುಗೆಜ್ಜೆಯು ಗಂಟೆ ಸರಪಳಿ
ಒಪ್ಪಿ ಮೆರೆಯುವ ಕಾಂಚಿಧಾಮವು 15
ಚತುರ ಹಸ್ತದಿ ಶಂಖುಚಕ್ರವು
ಗದೆಯು ಪದುಮವು ಹೊಳೆಯುತಿರುವುದು
ಕಡಗ ಕಂಕಣ ತೋಳ ಬಾಪುರಿ
ವಜ್ರದೊಂಕಿಯು ಮೆರೆಯುತಿರುವುದು 16
ಕೌಸ್ತುಭ ವೈಜಯಂತಿಯು
ಸುರಗಿ ಸಂಪಿಗೆ ಸರಗಳೊಲಿಯುತ
ಎಳೆಯ ತುಳಸಿಯ ಸರಗಳೊಪ್ಪುತ
ಜರದವಲ್ಲಿಯು ಜಾರಿ ಬೀಳಲು 17
ವÀಕ್ಷ ಸ್ಥಳದಿ ಶ್ರೀಲಕ್ಷ್ಮಿ ಒಪ್ಪಿರೆ
ರತ್ನ ಪದಕಗಳೆಲ್ಲ ಶೋಭಿಸೆ
ಮಕರ ಕುಂಡಲ
ರತ್ನದ್ಹಾರಗಳಿಂದ ಒಪ್ಪಿರೆ 18
ಗುರುಳು ಕೂದಲು ಹೊಳೆವೊ ಫಣೆಯಲಿ
ತಿಲುಕ ಕಸ್ತೂರಿ ಶೋಭಿಸುತ್ತಿರೆ
ಎಳೆಯ ಚಂದ್ರನ ಪೋಲ್ವ ಮುಖದಲಿ
ಮುಗುಳು ನಗೆಯು ಬಾಯ್ದಂತ ಪಂಕ್ತಿಯು 19
ಪದ್ಮನೇತ್ರಗಳಿಂದ ಒಪ್ಪುತ
ಪದ್ಮ ಕರದಲಿ ಪಿಡಿದು ತಿರುವುತ
ಪದ್ಮಲೋಚನೆಯನ್ನು ನೋಡುತ
ಪದ್ಮನಾಭನು ಕೊಳಲನೂದುತ 20
ರತ್ನ ಮುತ್ತಿನ ಕಿರೀಟ ಶಿರದಲಿ
ಮತ್ತೆ ನವಿಲಿನ ಗರಿಗಳೊಪ್ಪಿರೆ
ಹಸ್ತಿ ವರದನು ಎತ್ತಿ ಸ್ವರವನು
ಮತ್ತೆ ಕೊಳಲನು ಊದೊ ದೇವನೆ 21
ಸುಂದರಾಂಗನೆ ಮಂದಹಾಸನೆ
ಮಂದರೋದ್ಧರ ಬಾರೋ ಬೇಗನೆ
ಇಂದಿರೇಶನೆ ಇಭರಾಜವರದನೆ
ರಂಗನಾಥನೆ ಬಾರೊ ಬೇಗನೆ22
ಮದನ ಮೋಹನ
ಪಾರಮಹಿಮನೆ ಬಾರೊ ಬೇಗನೆ
ಶ್ರೀರಮಾಪತೆ ಶ್ರೀ ನಿಕೇತನ
ವಾರಿಜಾಕ್ಷನೆ ಬಾರೊ ಬೇಗನೆ 23
ಹೀಗೆ ಗೋಪೇರು ಮೊರೆಯನಿಡುತಿರೆ
ಮಂಗಳಾಂಗನು ಬಂದನೆದುರಿಗೆ
ಧ್ವಜ ವಜ್ರಾಂಕುಶ ಪದ್ಮ ಪಾದವು
ಅಡಿಯನಿಡುತಿರೆ ಧರಣಿ ನಲಿವಳು 24
ಹರಿಯ ನೋಡುತ ಪರಮ ಹರುಷದಿ
ತರುಣಿಮಣಿಯರು ಹರುಷ ಪಡುತಲಿ
ಪರಮ ಮಂಗಳ ಚರಿತ ದೇವಗೆ
ಸ್ವರವನೆತ್ತಿ ಮಂಗಳವ ನುಡಿದರು 25
ಶುಭ ಕಂಬು ಕಂಠಗೆ
ಮಂಗಳಂ ಮಹಾ ಮಾರನಯ್ಯಗೆ
ಮಂಗಳಂ ಮಹಾ ಮುದ್ದುಕೃಷ್ಣಗೆ
ಮಂಗಳಂ ಜಯ ಮಂಗಳಾಂಗಗೆ 26
ಕಮಲ ಮುಖಿಯರು ನಮಿಸಿ ಕೃಷ್ಣಗೆ
ಸರಸವಾಡುತ ಹರುಷ ಪಡುತಲಿ
ಕಮಲನಾಭ ವಿಠ್ಠಲನ ಕೂಡುತ
ಮನದಿ ಸುಖವನು ಪಡುತಲಿದ್ದರು 27