ಒಟ್ಟು 191 ಕಡೆಗಳಲ್ಲಿ , 37 ದಾಸರು , 156 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಕಾಂಬೆನು ನಾನುಗೋ- ವಿಂದ ನಿನ್ನಯ ಪಾವನ್ನ ಪಾದವನ್ನು ನಾ ಪೊಂದಿಸೇವಿಸಿ ಆನಂದಪಡುವುದಕಿನ್ನು ಕರುಣಿಸೈ ಮುನ್ನ ಪ ಪೊಂದಿ ಮಹದಾನಂದ ಪಡೆಯಲು ಕಂದಿಕುಂದಿತು ತನುಮನೇಂದ್ರಿಯ ಇಂದೆ ತೋರಿಸೊ ಪಾದಕಮಲವ ಅ.ಪ ಬಾಲತನದಲಿ ನಾನು ಶ್ರೀಲೋಲ ನಿನ್ನಿಂದ ಪಾಲಿತನಾದೆನೊ ಬೆಲೆಯುಳ್ಳ ಆಯುವನೆಲ್ಲ ಕಳೆದು ಬಿಟ್ಟೆನು ನಾನು ಕೆಲಕಾಲದಲಿ ನಾ ಕಲುಶಕ್ರಿಯೆಗಳನ್ನು ಫಲವಿಲ್ಲದೆಸಗಿದೆನು ಎಲ್ಲರೊಳು ನೀ ನೆಲಸಿ ಜೀವರ ಎಲ್ಲಕರ್ಮವ ಮಾಡಿಸಿ ಫಲವೆಲ್ಲ ಅವರಿಗೆ ಇತ್ತು ನೀ ನಿರ್ಲಿಪ್ತನೆಂದು ತಿಳಿಯದಲೆ ಖುಲ್ಲಮಾನವರೊಡನೆ ಬೆರೆತು ಪುಲ್ಲಲೋಚನ ನಿನ್ನ ಮರೆದು ಇಲ್ಲ ಎನಗೆ ಎಣೆಯೆನುತ ನಾ ಬಲುಹೆಮ್ಮೆಯಿಂದಲಿ ದಿನಗಳ ಕಳೆದೇ ಇಲ್ಲನಿನಗೆಸರಿಯಿಲ್ಲ ನೀ ನಿಲ್ಲದಾಸ್ಥಳವಿಲ್ಲ ಜಗದಾ ಎಲ್ಲ ಕಾಲಗಳಲ್ಲಿ ಇಹ ಶ್ರೀನಲ್ಲ ನೀನೆಲ್ಲ ಬಲ್ಲೆಯೊ 1 ಬರಿದೇ ಕಾಲವ ಕಳೆದೇ ಶ್ರೀಹರಿಯೆ ನಿನ್ನಯ ಸ್ಮರಣೆಯನ್ನು ಮಾಡದೇ ಪರಿಪರಿಯ ತನುಮನ ಕ್ಲೇಶಗಳಿಗೊಳಗಾದೆ ನಾಮಸ್ಮರಣೆಯೊಂದಲ್ಲದೇ ಇನ್ನೆಲ್ಲಾ ಬರಿದೇ ಪರಮಕರುಣಾಶರಧಿ ಎಂಬುವ ಕರಿಧ್ರುವಬಲಿಮುಖ್ಯರೆಲ್ಲರ ಪೊರೆದ ಕೀರುತಿ ಕೇಳಿ ನಂಬಿದೆ ಶರಣಜನಮಂದಾರನೆಂದು ಅರಿಯೆ ನಾನವರಂತೆ ಸಾಧನ ಅರಿತು ಮಾಡುವ ಪರಿಯು ತಿಳಿಯದು ಬಿರುದು ಭಕ್ತಾಧೀನನೆಂದು ಹರಿಯೆ ನಿನ್ನಯ ಮರೆಯಹೊಕ್ಕೆನು ದುರಿತಶರಧಿಯೊಳಾಡುತಿರುವನ ಉ- ತ್ತರಿಸಲೊಂದೇ ನಾವೆಯಂತಿಹ ಚರಣಸ್ಮರಣೆಯಕೊಟ್ಟು ರಕ್ಷಿಸು ಪುರುಷಸೂಕ್ತಸುಮೆಯ ಜೀಯಾ2 ಶೇಷಗಿರಿಯವಾಸ ಶ್ರೀ ಶ್ರೀನಿವಾಸ ದೋಷರಹಿತ ಸರ್ವೇಶ ಮನೋ- ಕಾಶದಲಿ ಅನವರತ ನಿಲ್ಲೊ ಶ್ರೀಶಾ ಬಿಡಿಸೆನ್ನ ಭವಬಂಧ ಗ್ರಂಥಿಯ ಪಾಶಾ ಹರಿಸುವುದು ಕ್ಲೇಶಾ ಶ್ರೀಶ ನಿಗಗತಿಶಯವೆ ಎನ್ನಯ ವಿಷಯದಭಿಲಾಷೆಗಳ ಬಿಡಿಸೀ ದೋಷರಹಿತನ ಮಾಡಿಸೀ ಎನ್ನ ಪೋಷಿಸೋ ನಿನ್ನಸ್ಮರಣೆಯಿತ್ತು ದ್ವಾಸುಪ- ರ್ಣ ಶ್ರುತಿಗಳಿಂದಲಿ ಈಶ ದಾಸರ ಭಾವ ತಿಳಿಯದೆ ಮೋಸಹೋದೆನೊ ಬೋಧೆ ಇಲ್ಲದೆ ವಾಸುದೇವನೆ ರಕ್ಷಿಸೆನ್ನನು ಏಸುಕಾಲಕು ನೀನೆ ಗತಿ ಎಂದು ಆಸೆ ಮಾಡುವೆ ನಿನ್ನ ಕರುಣಕೆ ಬೇಸರದಲೆ ಮೊರೆಯ ಲಾಲಿಸಿ ಶ್ರೀಶ ಶ್ರೀ ವೆಂಕಟೇಶನೆ 3
--------------
ಉರಗಾದ್ರಿವಾಸವಿಠಲದಾಸರು
ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ ಪ ನಗೆಮೊಗದ ನತಜನ ಬಂಧು ಬಾಬಾರೆನ್ನ ಬಿ - ಟ್ಟಗಲದಲೆ ಮನ ಮಂದಿರದೊಳಿರು ಮುನ್ನಾದರು ಸುಪ್ರಸನ್ನ ಮುಂದೆ ಗತಿ ಏನಯ್ಯ ಮುಕುತರ ಹಿಂದುಳಿದವನಲ್ಲದಲೆ ತನು ಸಂ - ಬಂಧಿಗಳ ವಶನಾಗಿ ದುರ್ವಿಷ - ಯಾಂಧಕಾರದಿ ಮುಳುಗಿದೆನೊ ನಾ ಅ.ಪ. ಹಲವು ಜನ್ಮದ ನೋವಾ ನಾ ಹೇಳಿಕೊಳಲೇನೆಲವೊ ದೇವರ ದೇವಾ ನೀ - ನಲ್ಲದಲೆ ಭೂವಲಯದೊಳಿಗಿನ್ನಾವಾ ನಂಬಿದರ ಕಾವ ಸುಲಭರೊಳಗತಿ ಸುಲಭನೆಂಬುವ ಅಲವಬೋಧಮತಾನುಗರು ಎನ - ಗೊಲಿದು ಪೇಳಲು ಕೇಳಿ ನಿಶ್ಚಂ - ಚಲದಿ ನಿನ್ನನೆ ಧೇನಿಸುವೆ ನಾ ಕಲುಷ ಸಂಸ್ಕಾರಗಳ ವಶದಿಂ ಹೊಲಬುಗಾಣದೆ ಹರುಷಗುಂದುವೆ ಹೊಲೆ ಮನದ ಹರಿದಾಟ ತಪ್ಪಿಸಿ ನೆಲೆಗೆ ನಿಲ್ಲಿಸದಿರ್ದ ಬಳಿಕಿನ್ನೆಂದು 1 ಭಾರತೀಪತಿಪ್ರೀಯಾ ಎಂದೆಂದು ಭಕುತರ ಭಾರ ನಿನ್ನದೊ ಜೀಯಾ ಜಗವರಿಯೆ ಕರುಣಾ - ವಾರಿಧಿಯೆ ಪಿಡಿ ಕೈಯ್ಯಾ ಫಣಿರಾಜಶಯ್ಯಾ ತಾರಕನು ನೀನೆಂದು ತಿಳಿಯದ ಕಾರಣದಿ ಸುಖ ದುಃಖಮಯ ಸಂ - ಸಾರ ದುಸ್ತರ ಶರಧಿಯೊಳು ನಾ ಪಾರಗಾಣದೆ ಪರಿದು ಪೋಪೆನೊ ದೂರನೋಳ್ಪದು ಧರ್ಮವಲ್ಲವೊ ದ್ವಾರಕಾಪುರನಿಲಯ ಪರಮೋ - ದಾರ ತನುವೆಂದೆನ್ನ ಪಾಲಿಗೆ ಬಾರದಲ್ಲದೆ ಭವವಿಮೋಚನ 2 ವಿಕಸನಾರ್ಚಿತಪಾದ ವಿಶ್ವೇಶ ಜನ್ಮಾ - ದ್ಯಖಿಲ ಕಾರಣನಾದ ನಿರ್ದೋಷ ಸತ್ಯಾ - ಸುಖಗುಣಾರ್ಣವ ಶ್ರೀದವಿಠಲಪ್ರಸೀದ ಸಕಲ ಕ್ರಿಯ ಯೋಗಗಳು ತನು ಬಂ- ಧಕವು ನಿನಗೊಪ್ಪಿಸದಿರಲು ಎನೆ ನಿಖಿಳ ಜೀವರ ಭಿನ್ನ ನಿನ್ನಯ ಯುಕುತಿಗೆ ನಮೊ ಎಂಬೆನಲ್ಲದೆ ಯುಕುತ ಯುಕ್ತಿಗಳೊಂದರಿಯದ - ರ್ಭಕನ ಬಿನ್ನಪ ಸಲಿಸಿ ನವವಿಧ ಭಕುತಿ ಭಾಗ್ಯವ ಕೊಟ್ಟು ತವ ಸೇ - ವಕರ ಸೇವಕನೆನಿಸದಿರ್ದೊಡೆ 3
--------------
ಶ್ರೀದವಿಠಲರು
ಓಂ ನಮೋ ನಾರಾಯಣಾಯ ತೇ ನಮೋ ನಮೋ ನಮೋ ಪ ಓಂ ನಮೋ ಓಂಕಾರಾದಿ ನೀ ಘನ್ನ ಮಹಿಮ ಅಷ್ಟಾಕ್ಷರಾತ್ಮಕನೆ ಅ.ಪ ಪ್ರಣವ ಪ್ರತಿಪಾದ್ಯ ನೀ ಅಷ್ಟಾಕ್ಷರದೊಳು ವಿಶ್ವತÉೈಜಸ ಪ್ರಾಜ್ಞ ತುರ್ಯಾತ್ಮ ಅಂತರಾತ್ಮ ಪರಮಾತ್ಮ ಜ್ಞಾನಾತ್ಮ ವರ್ಣಾತ್ಮಕ ನೀ ಓಂಕಾರದೊಳು ಅಉ ಮನಾದಬಿಂದು ಘೋಷ ಶಾಂತ ಅತಿಶಾಂತದೊಳು ಪ್ರತಿಪಾದ್ಯಮೂರುತಿ ಹರೆ1 ಪ್ರಣವದೊಳು ಆದಿವರ್ಣದಿಂದಭಿವ್ಮಕ್ತಿ ಕಾಲಗಳ್‍ವ್ಯಕ್ತವೊ ಪ್ರಾಣ ಲಕುಮಿಯಭಿಮಾನಿಗಳನಂತ ವೇದಗಳಿಂ ವಿಶ್ವಮೂರುತೀ ಹರೆ2 ವಯ್ಯ ಕವರ್ಗ ವರ್ಗವೈದು ಪಂಚಭೂತಗಳಂ ವರ್ಣದೊಳಭಿಮಾನಿಗಳ್ ಭೂತಕ ಗಣಪ ಪ್ರಹವವಾಯು ತೈಜಸ ಮೂರುತೇ3 ಪ್ರತಿಪಾದ್ಯನೆ ಮಕಾರ ವಾಚ್ಯ ಶ್ರೀ ಪ್ರಾಜ್ಞ ನಿನ್ನಿಂದಭಿ- ವ್ಯಕ್ತಿ ಚವರ್ಗ ಪಂಚಕ ಜ್ಞಾನೇಂದ್ರಿಯ ವೈದು ಸೂರ್ಯ ಪ್ರಾಣ ದಿಗ್ದೇ- ವತೆಗಳಿಹರು ಪ್ರತಿಗಾಣಿನೊ ಶ್ರೀ ಪ್ರಾಜ್ಞಮೂರುತಿ ಹರೆ4 ನಾದವಾಚ್ಯಪ್ರತಿಪಾದ್ಯ ತುರ್ಯನೆ ಅಭಿವ್ಯಕ್ತ ಪಂಚವರ್ಣ ಟವರ್ಗ ಕರ್ಮೇಂದ್ರಿಯಗಳ್ ಶ್ರೀ ತುರ್ಯ ಮೂರುತೆ 5 ಬಿಂದುವಾಚ್ಯ ಪ್ರತಿಪಾದ್ಯ ನೀನಾತ್ಮ ಬಿಂದುವಿಂದ ತವರ್ಗ ಪೊಂದಿಕೊಂಡಿಹುದು ತನ್ಮಾತ್ರಪಂಚಕ ಪಂಚವಾಯುಗಳಿಹರಯ್ಯ ಬಂಧ ಮೋಚಕ ನೀ ಕಾರಣ ಹರೆ 6 ಘೋಷದಿಂದಲಭಿವ್ಯಕ್ತಿ ಪಂಚಮನೋ ವೃತ್ತಿಗಳದರಭಿಮಾನಿ ಓಷಧೀಧರ ಖಗಪ ಶೇಷೇಂದ್ರ ಕಾಮರು ಪಕಾರ ಪಂಚವರ್ಣ ದೋಷರಹಿತ ಮನೋಧಾಮದಿ ನೀ ದೊರೆ 7 ಕಾರಾದಿ ಸಪ್ತವರ್ಣ ಸಪ್ತಧಾತುಗಳಲ್ಲಿ ಪರಿ ಅರಿಯೆನೊ ಹರಿಯೆ 8 ಅತಿ ಶಾಂತದೊಳು ಪ್ರತಿಪಾದ್ಯನಾಗಿಹೆ ಜ್ಞಾನಾತ್ಮ ಹಕಾರಾದಿ ತ್ರೈವರ್ಣ ಅದರಿಂದ ಗುಣಕ್ರಿಯವೊ ತತುಕ್ರಿಯ ಜಾಗೃತ ಸ್ವಪ್ನ ಸುಷುಪ್ತಿ ವಿಶ್ವಾದಿರೂಪದಿಂದ ಉರಗಾದ್ರಿವಾಸವಿಠಲ ಮೂರುತೇ 9
--------------
ಉರಗಾದ್ರಿವಾಸವಿಠಲದಾಸರು
ಕರ ಪಿಡಿಯೊ ಬೇಗಾ ಪ ಸಿರಿ | ಮಾಧವನೆ ಭಿನ್ನವಿಪೆಕಾದುಕೊ ಬಿಡದಿವನ | ಹೇ ದಯಾಪೂರ್ಣ 1 ಪ್ರಾಚೀನ ಕರ್ಮಗಳ | ಯೋಚಿಸಲು ಯನ್ನಳವೆಮೋಚ ಕೇಚ್ಛೆಯ ತೋರೊ | ಕೀಚಕಾರಿ ಪ್ರೀಯನೀಚೋಚ್ಛ ತರತಮವ | ವಾಚಿಸಿವನಲಿ ನಿಂತುವಾಚಾಮ ಗೋಚರನೆ ಸಾಕ್ಷಿ ವೇದ್ಯಾ 2 ಭಾಗವತ ಪೀಯೂಷ | ವೇಗ ಉಣಿಸುತಲಿವನನೀಗೊ ಭವರೋಗವನು | ನಾಗಾರಿವಾಹಾಜಾಗರ ಸ್ವಪ್ನದಲಿ | ನೀಗಿ ಭ್ರಮವೆರಡನ್ನುಜಾಗು ಮಾಡದೆ ಸಲಹೋ ಭೊಗಿಶಯನಾ 3 ಭವ | ಅಂಬುಧಿಯ ದಾಂಟಿ ನೀ-ಲಾಂಬು ದಾಭ ಹರಿ ಹೃದಯಾಂಬರದಿ ತೋರಿಇಂಬಿಟ್ಟು ಭಕ್ತನ್ನ | ಸಲಹೆ ಬಿನ್ನವಿಪೆ ಕೃ-ಪಾಂಬುಧಿಯೆ ತವ ಪಾ | ದಾಂಬುಜದಲಿಡುವೆ 4 ಭಾವ ಕ್ರಿಯ ದ್ರವ್ಯದೊಳು | ಅದ್ವಯನು ನೀನೆಂಬಭಾವದನುಭವವಿತ್ತು | ಇವನ ಪಾಲಿಪುದುಕಾವ ಕರುಣಿಯೆ ಗುರು | ಗೋವಿಂದ ವಿಠ್ಠಲನೆಗೋವತ್ಸಧ್ವನಿದಾವು | ಧಾವಿಸೂವಂತೆ 5
--------------
ಗುರುಗೋವಿಂದವಿಠಲರು
ಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ ಚರಣಾಬ್ಜದಲಿ ಭಕುತಿ ವಿಷಯದಿ ವಿರಕುತಿ ಪ ಬಿಂಬನೇ ಸರ್ವ ಪ್ರಯೋಜನವ ಮಾಡಿ ಪ್ರತಿ ಬಿಂಬರಿಗೆ ತತ್ಫಲಗಳೀವ ಕಾವ ಬಿಂಬನೆ ಸ್ವತಂತ್ರ ಪ್ರತಿಬಿಂಬಾ ಸ್ವತಂತ್ರತಮ ನೆಂಬ ಸುಜ್ಞಾನ ಪೂರ್ವಕ ನಿನ್ನ ಭಜಿಪ ಸುಖ 1 ಕಾರ್ಯ ಕಾರಣ ಅಂಶಿ ಅಂಶಾವತಾರ ಅಂ ತರ್ಯಾಮಿ ವ್ಯಾಪ್ಯ ವ್ಯಾಪಕ ಪ್ರೇರಕ ಪ್ರೇರ್ಯ ಬಾಧಕ ಬಾಧ್ಯ ಪೋಷ್ಯ ಪೋಷಕ ರೂಪ ಆರ್ಯರಿಂದರಿತು ಅನುದಿನದಿ ಸುಖಿಸುವ ಭಾಗ್ಯ 2 ತಾರತಮ್ಯದ ಜ್ಞಾನ ದುರ್ವಿಷಯಗಳಲಿ ಸ ದ್ವೈರಾಗ್ಯ ಹರಿದ್ವೇಷಿಗಳಲಿ ದ್ವೇಷಾ ಸೂರಿಗಳ ಸಂಗ ಗುಣರೂಪಕ್ರಿಯೆಗಳನು ಸುವಿ ನಿತ್ಯ ಅನುಮೋದ ಬಡುವಂತೆ 3 ಮಿಂದೋದಕಗಳೆಲ್ಲ ಮಜ್ಜನವು ದೇಹಾನು ಬಂಧಿ ಜನರೆಲ್ಲ ನಿನ್ನ ಪರಿವಾರವು ನಿಂದ್ಯ ಕರ್ಮಗಳೆಲ್ಲ ಪಾದುಕಗಳೆಂಬ ಅನು ಸಂಧಾನ ಮನಕೆ ನಿತ್ಯದಲಿ ಬರುವಂತೆ4 ಚೇತನಾಚೇತನಗಳೆರಡು ಪ್ರತಿಮೆಗಳು ಸಂ ಪ್ರೀತಿಯಲಿ ಸುರಕ್ಷಿಸುವುದು ಪೂಜೆ ಈ ತನುವೆ ಸದನವೆಂದರಿತು ನಿತ್ಯದಿ ಜಗ ನ್ನಾಥ ವಿಠ್ಠಲನೆಂಬ ವಿಷಯವೇ ಮುಖವೆಂದು 5
--------------
ಜಗನ್ನಾಥದಾಸರು
ಕರ್ಮ ಬೇರೆ | ಬ್ರಹ್ಮದೊಳಗೆ ಕ್ರಿಯಾಕರ್ಮವಿಲ್ಲ |ಕರ್ಮ ಬ್ರಹ್ಮವಲ್ಲ ಪ ಶಿವನೊಳು ನೋಡಲು ಜಗವೇ ಇಲ್ಲ | ಜಗ ಶಿವನಲ್ಲ. ಶಿವನೂ ಜಗವೂಎಂಬೊ ಮಾತು ಸಲ್ಲ | ಅರಿದಾತನೆ ಬಲ್ಲ 1 ಬೀಜದಿ ನೋಡಲು ವೃಕ್ಷವೆ ಇಲ್ಲ | ವೃಕ್ಷಬೀಜವಲ್ಲ | ವೃಕ್ಷ ಬೀಜದಿ ಫಲಸ್ವಾದವಿಲ್ಲ |ತಿಂದಾತನು ಬಲ್ಲ 2 ಪಾಮರ ನರರೆಲ್ಲ ಭವತಾರಕನ ಭಕ್ತರಲ್ಲ | ಭವತಾರಕನ ಭಕ್ತನು ನರನಲ್ಲ | ಗುರುನಾಥನೆ ಬಲ್ಲ 3
--------------
ಭಾವತರಕರು
ಕವನ ಪೇಳು ನೀ ಮನವೆ ಆವಾವ ನೆವದಿದಾದ್ದು ಘನವೆ ಪ ಭುವನ ಪಾವನ ಲಕ್ಷ್ಮೀ - ಧವನ ನವಗುಣ ರೂಪ ಕ್ರಿಯವನ್ನೆ ಅ.ಪ ಸ್ತವನ ಮಾಡಬೇಡÀ ನ್ಯಪನನ್ನು ನವ ಯುವತೇರ ಮೆಚ್ಚಬೇಡ ಭವ ಮತ ಬಿಡಬ್ಯಾಡ ಭವದೊಳು ಮಮತೆ ಕೊಡಬ್ಯಾಡÉ 1 ಹರಿಕಥಾ ಶ್ರವಣ ಬಿಡಬ್ಯಾಡ ಹರಿದಾಸರೊಳು ಛಲ ಇಡಬ್ಯಾಡ ದುರುಳ ಮಾಯವಾದಿರ ಸ್ನೇಹ ಅರಿತು ಮಾಡಲು ಅದು ಮಹಾಮೋಹ 2 ಅಜನಪಿತನ ಸ್ಮರಣೆ ಮರಿಬ್ಯಾಡ ರುಜುಮಾರ್ಗವ ಬಿಟ್ಟು ನಡಿಬ್ಯಾಡ ವಿಜಯ ರಾಮಚಂದ್ರವಿಠಲನ ಮರೆದು ಗೋಜು ಕರ್ಮವ ಮಾಡಲಲ್ಲೇನು ಮಾತು 3
--------------
ವಿಜಯ ರಾಮಚಂದ್ರವಿಠಲ
ಕವಿ ಕವಿದು ಪೊಳೆವ ಭುವನಪಾವನ ಚರಿತ ಇಂದೀವರಾಕ್ಷ ಪ ತವಪೂರ್ಣ ನಿಜ ಒಲಿಮೆ ಪ್ರಭುಪೂರ್ಣ ಕವನದಲಿ ಮೋದ ಕರಿವರದ ಭವಭಂಗ ಪರಿಹಾರ ಕವನ ವೋದಿದ ಮಾತ್ರ ಧವಳ ಕೀರುತಿ ಬೆಳುದಿಂಗಳನು ಮೀರಿಹುದೊ 1 ತವಪೂರ್ಣ ಗುಣ ಕ್ರಿಯೆ ರೂಪ ಘನ ಭಾವಗಳು ಲವಲವಿಕೆ ಎಮ್ಮ ಚೇತನಕೆ ಕೊಟ್ಟು ಭವಭೀತಿಗೆ ಭೀತಿ ತಂದೊಡ್ಡುವುದೊ ಕಮಲೇಶ ಸವಿದುಣ್ಣುವಾ ಜನಕೆ ಜಡದಲ್ಲೂ ನೀ ಬರುವೆ 2 ಶ್ರವಣ ಮಾತ್ರಕೆ ಮೈಮರೆಸುವುದು ಮಹಸಿರಿಯು ಶುಕ ಪಿತ ಸವಿದ ರುಚಿಯು ಇಹುದು ಪವಮಾನ ಕೃಷ್ಣಾರ್ಯ ರಾಮಾರ್ಯರತಿ ವಲುಮೆ | ಶ್ರವಿಸುವುದು ಪಠಿಪರನು ಭಕ್ತಿಮತ್ತರ ಮಾಡಿ 3 ಕವಲುಮತಿಯಲಿ ಮುಳುಗಿ ಚಲಿಸದಿರು ಇದರಿಂದ ಭವಮೂಲಕುನ್ಮೂಲ ಇದರ ಮಹಿವi ಅವಲಿಯನು ತಿಂದವನು ಅಗಲಿರದೆ ಒಡನಿಹನು ಜವನ ದೂತರು ತಲೆಮಣಿದು ಓಡುವರೊ 4 ತತ್ವಾಭಿಮಾನಿಗಳಿಗಾಹಾರವಿದು ಸತ್ಯ ತತ್ವಾರ್ಥ ಬಲು ಸುಲಭದಲ್ಲೆ ಮನಕವಗಾಹ್ಯ ಸತ್ಕøತಿಯ ಮಾಡಿ ಚಿತ್ಸುಖವ ಉಣು ನಿತ್ಯ ವಾತಾತ್ಮ ಗುರು ಶ್ರೀ ಜಯೇಶವಿಠಲನ ನೋಡು 5
--------------
ಜಯೇಶವಿಠಲ
ಕಷ್ಟ ಕಷ್ಟವೋ ಕೃಷ್ಣ ದೃಷ್ಟಿಯಲಿ ನೋಡದಿರೆ ತುಷ್ಟಿಪಡಿಸಲು ನಿನ್ನ ನಾನೆಷ್ಟರವನಯ್ಯ ಪ ಭ್ರಷ್ಟನಾಗಿಹೆ ನಾ ಅಷ್ಟಾಂಗಯೋಗವ ತಿಳಿಯೆ ಒಂ- ದಿಷ್ಟು ಭಕುತಿಯ ಕೊಟ್ಟು ಕಡೆಹಾಯಿಸಯ್ಯ ಅ.ಪ ಸತ್ಯ ಅಸ್ತೇಯ ಬ್ರಹ್ಮಚರ್ಯ ಅಹಿಂಸಾ ಧೃತಿ ದಯಾ ಕ್ಷಮಾರ್ಜಿತ ಮಿತಭುಕ್ತವು ನಿತ್ಯ ಬಾಹ್ಯಾಂತರ ಶೌಚಾದಿ ದಶಗುಣ ಯುತವಾದಯಮ ಉಪಾಸನೆಗಳಿನಿತಿಲ್ಲವೋ ದೇವಾ 1 ನಿಯಮ ಮೊದಲಿಲ್ಲ ಜಪತಪ ಸಂತೃಪ್ತಿ ನಿಯತ ಸಿದ್ಧಾಂತ ಶ್ರವಣ ಲಜ್ಜಮತಿಯು ಶ್ರೀಯಃಪತಿಯ ಪೂಜನ ಆಸ್ತಿಕ್ಯವ್ರತ ದಾನೋ- ಪಾಯವಿಲ್ಲದೇ ಕಡೆ ಹಾಯ್ವುದೆಂತಯ್ಯ 2 ಘಾಸಿಯಾಗಿಹುದಯ್ಯ ಷಡ್ವಿಧಾಸನಗಳೂ ಸ್ವಸ್ತಿಕ ಭದ್ರಪದ್ಮ ಅರ್ಧಾಂಗಾಸನದಿ ಸಿದ್ಧ ಪರ್ಯಂಕಗಳೆಂಬ ಆಸನದಿ ಕುಳಿತು ನಾ ಧೇನಿಸಲರಿಯೆ ಹರಿಯೇ 3 ಪ್ರಾಣಾಯಾಮವ ಕ್ರಮವು ರೇಚಕ ಪೂರಕವು ದಣಿವಿಲ್ಲದೆ ಕುಂಭಕದ ಕ್ರಮವಿಲ್ಲ ತ್ರಾಣವಿಲ್ಲವೋ ವಾಯುಬಂಧ ಮಾಡಲರಿಯೆ ಪ್ರಾಣಪತಿ ನಿನ್ನ ಕರುಣವಿಲ್ಲದಾತನಕ 4 ವಿಷಯಾಭಿಲಾಷೆಯಿಂದ್ಹರಿದು ಹೋಯಿತು ಮನಸು ವಿಷಮವಾಗಿಹುದಯ್ಯ ಮತ್ಸಾಧನ ಪ್ರತ್ಯಾಹಾರ ಸಾಧನವಿಲ್ಲ ಕೃಷಿಮಾಡಿ ಸ್ಥಿರಮನದಿ ಧೇನಿಸಲು ನಾನರಿಯೆ 5 ಧಾರಣೋಪಾಯದೊಳು ಅಣುಮಾತ್ರ ನಾನರಿಯೆ ನರಕ್ರಿಮಿಯಾಗಿ ನಾ ಧರೆಯೊಳುಳಿದೆ ಅರಿಯೆ ಬಾಹ್ಯಾಂತರದಿ ಭೂತಪಂಚಕವಿರುವ ಪರಿ ತಿಳಿದು ಪ್ರಾಣವಾಯು ಸಡಿಲಬಿಡಲರಿಯೆ 6 ಧ್ಯಾನಿಸಲು ಏಕಾಗ್ರಚಿತ್ತವೇ ಎನಗಿಲ್ಲ ಸಂಸ್ತುತಿಸೆ ಸಂಪ್ರಜ್ಞಾ ಅಸಂಪ್ರಜ್ಞವೆಂಬ ಘನಸಮಾಧಿಯೊಳ್ ಪರಿವಿಲ್ಲದಲೆ ನಿನ್ನ ಕರುಣವೆಂತಾಗುವುದೋ ಶ್ರೀ ವೇಂಕಟೇಶಾ 7 ಶುದ್ಧವಾದ ದ್ವೈತತ್ರಯ ತಿಳಿಯದಲೆ ಮುಗ್ಧನಾಗಿಹೆ ನಾನಪರಿಶುದ್ಧನೊ ಶಬ್ದಗೋಚರ ನಿನ್ನ ಪರಿಶುದ್ಧ ಭಾವದಿಂ ಬುದ್ಧಿಪೂರ್ವಕ ತಿಳಿಯೆ ಬದ್ಧಪಾಮರನಯ್ಯ 8 ಕರಣತ್ರಯದಲಿ ಮಾಳ್ವ ಕ್ರಿಯೆಗಳೆಲ್ಲವು ಸತತ ಹರಿಯೇ ಬಿಂಬಕ್ರಿಯವ ನಾನರಿಯದೇ ಕರುಣಶರಧಿಯೆ ನೀ ಕೃಪೆಮಾಡಿ ಪೊರೆಯದಿರೆ ಉರಗಾದ್ರಿವಾಸವಿಠಲ ನಿನ್ನ್ಹ್ಹೊರತು ಗತಿಯುಂಟೆ 9
--------------
ಉರಗಾದ್ರಿವಾಸವಿಠಲದಾಸರು
ಕಾಯ ಪಾದ ಪದುಮ ದಾಸ್ಯವನಿತ್ತು ಪ ಕಂಸಾರಿ ತವ ಪಾದಪಾಲಿಸುವನೆ ಶಿರದೊಳಗಸಂಶಯದಿ ಧರಿಸೀ |ವಿಂಶತಿಯ ಮತ್ತೊಂದು ಭಾಷ್ಯ ದೂಷಕ ಮರು-ತ್ತಂಶ ಸಂಭೂತ ಶ್ರೀ ಮಧ್ವ ಮತದವನಾ 1 ಆವ ಭವರೋಗ ಹ | ಭಾವ ಕ್ರಿಯ ದ್ರವ್ಯಾಖ್ಯಅದ್ವೈತ ತ್ರಯಗಳನು ಸಂಧಾನವಿತ್ತೂ |ದೇವ ದತ್ತದಿ ತೃಪ್ತಿ ಭಾವವನೆ ನೀನಿತ್ತುಭಾವದಲಿ ತವರೂಪ ಓವಿ ತೋರುವುದೂ 2 ಆಗಮಸುವೇದ್ಯ ಭವರೋಗ ವೈದ್ಯನೆ ದೇವನಾಗಾರಿ ವಾಹನನೆ | ಯೋಗಿಧ್ಯೇಯಾಆಗು ಹೋಗುಗಳೆರಡು | ನೀನಿತ್ತುದೆಂಬಂಥಜಾಗ್ರತೆಯ ನೀನಿತ್ತು ಕಾಪಾಡು ಹರಿಯೇ 3 ಕುಡುತೆ ಪಾಲನು ಭಕ್ತ ಕೊಡಲದನು ಕುಡಿಯುತ್ತಕಡಲಂತೆ ಹಾಯಿಸಿದೆ ಬಡವರಾಧಾರೀ |ಧೃಡಭಕ್ತಿ ಸುಜ್ಞಾನ ವೈರಾಗ್ಯ ಭಾಗ್ಯಗಳಕಡು ಕರಣಿ ನೀನಿತ್ತು ಕಡೆಹಾಯ್ಸು ಭವವಾ 4 ಸರ್ವಜ್ಞ ಸರ್ವೇಶ ಸರ್ವಾಂತರಾತ್ಮಕನೆದರ್ವಿಜೀವನ ಕಾಯೊ ದುರ್ವಿಭಾವ್ಯಾ |ಗುರ್ವಂತರಾತ್ಮ ಮತ್ಪ್ರಾರ್ಥನೆಯ ಸಲಿಸಯ್ಯಶರ್ವವಂದ್ಯನೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಕ್ರಿಯ ರೂಪ ಗುಣ ನಾಮ ದರ್ಶನ ಕರ್ತಾ ಪ ದಯವನಧಿ ಗೋಪಾಲಗೈಸು ಅಹಂ ನಾಶ ಅ.ಪ ಉಂಡು ಉಣಿಸುವಿ ನೀನು ದಣುವಿಕೆಗೆ ನಾನಯ್ಯ ಥಂಡ ಥಂಡದಿ ನಿನ್ನ ಲೀಲ ಜಾಲ ಕಂಡರೂ ಕಾಣದಲೆ ಬೆಂಡಾದೆ ಬಹುನೊಂದು ಮಂಡೆ ತಾಗಿದರು ಮನಕೆಚ್ಚರಾಗದು ಸ್ವಾಮಿ 1 ನಾಯಿಯಂದದಿ ವಿಷಯಕ್ಹಾರುವುದು ಈ ಮನಸು ದಾಯಾದಿಗಳ ವಶದಿ ಸಿಕ್ಕಿ ಸತತ ಕಾಯಜಾಪಿತ ನಿನ್ನ ರೂಪ ಧ್ಯಾನಕೆ ಬರದು ಮಾಯೇಶ ಮಾರಮಣ ಕಾಯೆನ್ನ ಕರುಣಾಬ್ಧಿ 2 ತೆಗಿ ನನ್ನ ಭೋಗ ಬಲೆ ನಗೆ ಮುಖವ ತೋರಯ್ಯ ನಿಗಮ ವೇದ್ಯ ಜಯೇಶವಿಠಲರಾಯ ಖಗಧ್ವಜ ಪರೆ ತೆಗೆದು ಜ್ಞಾನ ಚಕ್ಷುಸು ನೀಡು 3
--------------
ಜಯೇಶವಿಠಲ
ಖಗವರನೇ ಪಾಲಿಸೋ ಪ ಪೆಗಲೊಳು ಹರಿಯನು | ಮಿಗೆ ಭಕುತಿಲಿ ಪೊತ್ತುನಗಧರ ಬಿಂಬವ | ನಗುತ ನಖದಿ ನೋಳ್ಪ ಅ.ಪ. ವೇದೋದಿತ ಕ್ರಿಯ | ಕಾದ್ಯಭಿಮಾನಿಯೆವೇದಮಯನೆ ಹರಿ | ಗಾದೆಯೊ ವಾಹನಸಾಧಿಸಿ ಶ್ರೀಹರಿ | ಪಾದಾಂಬುಜಗಳಹಾದಿಯ ತೋರೊ ಅ | ಗಾಧ ಮಹಾತ್ಮಾ 1 ಸಾಸಿರ ಬೃಹತಿಯ | ಸೂಸಿ ನೀ ಪೊಗಳುತಸಾಸಿರ ನಾಮನು | ಕೇಶವ ನೊಲಿಮೆಯಪೋಷಿತ ನಾಗಿಹೆ | ಆಶುಗ ಹೃದಯಾಕಾಶದೊಳಿರುತಿಹ | ಶ್ರೀಶನ ತೋರಿಸಿ 2 ಪಾವಮಾನಿಸುತ | ಪಾವಿಸಿ ಮನ್ಮನಭಾ5¥5 | ಗೋವಿಂದ ವಿಠಲನ |ಪಾವನ ನಾಮ ಸು | ಭಾವನ ಉಣಿಸುತಕೋವಿದ ಸಂಗತಿ | ಈವುದು ನೀ ಸದ 3
--------------
ಗುರುಗೋವಿಂದವಿಠಲರು
ಖೋಡಿಗುಣ ಜಗದಲ್ಲಿ ಹೂಡಿ ನೀ ನಲಿವಾಗ ನಾಡೆದ್ದು ಕುಣಿಯುವದೊ ನಾಸ್ತಿಕಾದಲ್ಲಿ ಪ ಮಾಡಿ ದುಪ್ಕ್ರಿಯ ಜಾಲ ಮತಿಭ್ರಷ್ಟತನದಲ್ಲಿ ನೋಡರೂ ಸನ್ಮಾರ್ಗ ಗಾಡಿಕಾರನೆ ಹರಿಯೆ ಅ.ಪ ಗತಿಸಿದಾ ತನುಗಳಲಿ ರತಿವಿಷಯಗಳ ಮಾಡಿ ಮತಿ ಮನಸು ದುರ್ಭಾವಗಳಲಿ ನೆಯದು ಮತ್ರ್ಯರನು ನೋಡಲತಿ ಭೀತಿ ಆಹುದೊ ಮನಕೆ 1 ನಾನಾಭಾವವ ಪೊಂದಿ ಹಾನಿವಶರಾಗಿಹರು ಜ್ಞಾನನಿಧಿ ತವಕರುಣಕೆರವಾಗಿ ನಡೆದು ನಾನಾ ದುಃಖದಿ ನರಳಿ ನರಕ ಯಾತನೆಗೊಂಬ ಜ್ಞಾನಹೀನರ ನೋಡಿ ನಡುಗುವೆನೊ ಹರಿಕಾಯೊ 2 ಕ್ವಚಿತು ಸಜ್ಜನ ತಾವು ಶುಚಿ ಮನದಿ ನಿನ್ನಲ್ಲಿ ರುಚಿಗೊಳಲು ಎತ್ತೆನಿಸೆ ಎದೆ ಬಿಚ್ಚುವಂತೆ ಹೆಚ್ಚಿ ಆದಿವ್ಯಾಧಿ ನುಚ್ಚು ಮಾಳ್ಪದೊ ಮನಸು ಸಚ್ಚಿದಾನಂದ ಹರಿ ಸಜ್ಜನಾಧಾರಿ ಧೊರಿ3 ವಿಧಿ ಲಕ್ಷ್ಮಿ ಸನ್ನತ ಮಹಿಮ ಬಂದ ಭಯಗಳು ನಿನ್ನ ಇಚ್ಛೆಯಿಂದ ಬಂದದಲ್ಲದೆ ಬೇರೆ ಒಂದು ಕಾರಣ ಕಾಣೆ ಸಿಂಧು ಕೊಡುವವ ನೀನೆ4 ತಾಮಸರ ವಿಕಾರ ದುಃಖರಸÀ ಸೃಜಿಸುವುದು ಸೌಮ್ಯ ಜನ ಸದ್ಭಾವ ಸುಖಸಾರ ಸೃಷ್ಟಿ ಕಾಮಧೇನು ಜಯೇಶವಿಠಲಯ್ಯ ನಿನ್ನ ಮಹ ನೇಮ ಇಂಥಾದ್ದೆ ಪತಿತ ಪಾವನ ಪಾಹಿ 5
--------------
ಜಯೇಶವಿಠಲ
ಗಜೇಂದ್ರ ಮೋಕ್ಷ ವರಶಂಖಗದೆ ಪದ್ಮಕರದಿ ಚಕ್ರವ ಪಿಡಿದ ಗರುಡಗಮನ ನಮ್ಮ ಕರಿವರದಹರಿಯನ್ನ ನಿರುತ ನೆನೆನೆನೆದು ಬದಿಕಿರಯ್ಯಾ ಪ ಹರಿಧ್ಯಾನ ಹರಿಸೇವೆ ಹರಿಭಕ್ತಿ ಹರಿಚರಿತೆ ದುರಿತದುರ್ಗಕೆಕುಲಿಶ ವರಮುಕ್ತಿಸೋಪಾನ ಕಾಣಿರಯ್ಯಾ ಅ.ಪ. ಕ್ಷೀರಸಾಗರ ಮಧ್ಯೆ ಗಿರಿತ್ರಿಕೂಟ ದೊಳಗೆ ಇರುವುದೂ ಋತುಮಂತ ವರುಣನ ವರವನವು ಅಲ್ಲಿ ಪರಿಪರಿಯ ಲತೆಬಳ್ಳಿ ಸರಸಸ್ಥಾನಗಳಲ್ಲಿ ಮೆರೆವೋರು ಸುರಸಂಘ ನಾರಿಯರ ಸಹಿತಾ 1 ಪದ್ಮಗಾಶ್ರಯವಾದ ಪದ್ಮಕೊಳಾದೊಳಗೆ ಮದಿಸಿದಾ ಗಜವೊಂದು ಐದಿತು ಪರಿವಾರ ಸಹಿತ ವಿಧಿಯ ಬಲ್ಲವರಾರು ಮುದದಿರ್ದ ಆ ಗಜಕೆ ವಿಧಿ ವಕ್ರಗತಿಯಿಂದ ಪಾದವನೆ ಪಿಡಿಯಿತು ನಕ್ರವೊಂದು 2 ಒಂದು ಸಾವಿರ ವರುಷ ಕುಂದದೆಲೆ ಕರಿಮಕರಿ ನಿಂದು ಹೊರಾಡೆ ಸುರವೃಂದ ಬೆರಗಾಯಿತು ಬಂಧು ಬಳಗವು ಮತ್ತೆ ಅಂದ ಹೆಂಡಿರು ಎಲ್ಲ ಕುಂದು ಅಳಿಸದೆ ಇರಲು ಛಂದದಲಿ ಯೋಚಿಸಿತು ಗಜವೂ 3 ಏನಿದ್ದರೇನಯ್ಯ ಶ್ರೀನಿವಾಸನಕೃಪೆಯು ಇನ್ನಿಲದಾಮೇಲೆ ಕುನ್ನಿಗೆ ಸರಿಎಂದು ಹೀನ ಎನ್ನಯ ಜನ್ಮ ದೀನ ಭಾವದಿ ಹರಿಯ ಮಾನವನು ಬದಿಗಿಟ್ಟು ಧ್ಯಾನಿಸಿ ಸ್ತುತಿಸಿದಾ 4 ಸತ್ಯಶಾಶ್ವತಭೋಕ್ತ ಸೃಷ್ಟ್ಯಾದಿಕರ್ಮವಿಗೆ ನಿತ್ಯ ತೃಪ್ತನು ಆದ ಶಾಡ್ಗುಣ್ಯಪರಿಪೂರ್ಣನೆ ವಂದಿಸುವೆನೋ ಓತಪ್ರೋತದಿ ಜಗದಿ ವ್ಯಾಪ್ತ ಆಪ್ತನು ಆದ ಆರ್ತದಲಿ ಕರೆವೆನೋ 5 ಎಲ್ಲಕಡೆಯಲಿ ಇರ್ಪ ಎಲ್ಲರೂಪವ ತಾಳ್ವ ಎಲ್ಲ ಪ್ರೇರಣೆಮಾಳ್ವ ಎಲ್ಲರಿಂ ಭಿನ್ನನಿಗೆ ವಂದಿಸುವೆನೋ ಎಲ್ಲರಿಂ ಉತ್ತಮಗೆ ಎಲ್ಲರಾ ಬಿಂಬನಿಗೆ ಎಲ್ಲರ ವಾಚ್ಯನಿಗೆ ನಲ್ಲನೆಂತೆಂದು ನಾಕರೆವೆನೋ 6 ಎಲ್ಲರನು ಗೆದ್ದವಗೆ ಎಲ್ಲರಾನಲ್ಲನಿಗೆ ಎಲ್ಲ ದೋಷವಿಹೀನ ಒಳ್ಳೆ ಗುಣ ಪೂರ್ಣನ ಕರೆವೆನೋ 7 ನಿನ್ನ ತಿಳಿದವರಿಲ್ಲ ನಿನ್ನ ಮೀರಿದುದಿಲ್ಲ ಜನನ ಮರಣಗಳಿಲ್ಲ ನಿನಗಿಲ್ಲ ಸಮ ಅಧಿಕ ವಂದಿಸುವೆನೋ ನಿನ್ನನಾಮಕೆ ಗುಣಕೆ ನಿನ್ನ ಅವಯವಕೆ ನಿನ್ನ ಕ್ರಿಯ ರೂಪಗಳಿಗೆ ಇನ್ನಿಲ್ಲವೊ ಭೇದಸಾರಿ ನಾಕರೆವೆನೋ 8 ವೇದಗಮ್ಯನುನೀನೆ ವೇದದಾಯಕ ನೀನೆ ವೇದಾತೀತನು ನೀನೆ ಸಾಧು ಪ್ರಾಪ್ಯನುನೀನೆ ವಂದಿಸುವೆನೋ ಖೇದವರ್ಜಿತನೀನೆ ಅಂದ ಸಾರವು ನೀನೆ ಬಂಧನೀಡುವ ನೀನೆ ಅದ್ಭುತ ಅಚಿಂತ್ಯಶಕ್ತಿವಂತನ ಕರೆವೆನೋ 9 ಜ್ಞಾನಿಗೋಚರನೀನೆ ಗುಣಾತೀತನು ನೀನೆ ಗುಣಪ್ರವರ್ತಕನೀನೆ ಅನಾಥ ಸರ್ವಸಮ ವಂದಿಸುವೆನೋ ಜ್ಞಾನದಾಯಕನೀನೆ ಆನಂದಮಯನೀನೆ ನೀನೇ ಸರ್ವಾಧಾರ ನೀನೆ ಏಕನು ಎಂದು ಕೂಗಿ ನಾಕರೆವೆನೋ 10 ಸಾಕಾರ ನಿರಾಕಾರ ಆಕಾರ ಅಹೇಯ ಓಂಕಾರ ವಾಚ್ಯನೆ ಸಾಕಲ್ಯಸಿಗದವನೆ ಸ್ವೀಕಾರ ಮಾಡೋ ವಿಕಾರ ವರ್ಜಿತನೆ ಲೋಕೈಕವೀರಾನೆ ನೀ ಕೆವಲನು ಮುಕ್ತೇಶ ಸಲಹೋ 11 ಏನು ಕೊಡಲೊ ದೇವ ದೀನನು ನಾನಯ್ಯ ನಿನ್ನದೇ ಈ ಭಾಗ್ಯ ಮನ್ನಿಸುತ ದಯಮಾಡಿ ಸಲಹೋ ಘನ್ನಕರುಣಾಳುವೆ ಅನ್ಯರನು ನಾ ನೊಲ್ಲೆ ನಿನ್ನವನು ನಿನ್ನವನೋ ನಿನ್ನ ಚರಣಕೆ ಶರಣು ಶರಣೂ 12 ಕರಿ ತಾನು ಮೊರೆಯಿಡುತ ಕೂಗಲು ಸುರವೃಂದ ಯೋಚಿಸುತ ಹರಿಯಲ್ಲದನ್ಯತ್ರ ಅರಿಯೆವೀಗುಣವೆಂದು ಅರಿತು ಸುಮ್ಮನಿರಲೂ ಹರುಷದಿಂದಲಿ ಹರಿಯು ಗುರುಡನೇರುತ ಬರಲು ತರಿದು ನಕ್ರನ ಭರದಿ ಕರಿಯಪೊರೆಯೆ ಆದ 13 ಏನೆಂದು ವರ್ಣಿಸಲಿ ಶ್ರೀನಿವಾಸನ ಕರುಣ ದೀನ ಭಕ್ತರ ಮೇಲೆ ಸಾನುರಾಗದಿ ಕರಿಯ ಹಿಡಿದೆತ್ತಿದಾ ಇನ್ಯಾಕೆ ಭಯವಯ್ಯ ಘನ್ನ ಇಂದ್ರದ್ಯುಮ್ನನೆ ಏಳು ಮುನ್ನಿನಾ ದೋಷವಿದು ಇನ್ನು ನೀ ಧನ್ಯನಹುದೋ 14 ದೇವಲನ ಶಾಪದಲಿ ಆ ವರ ನಕ್ರನಾಗಿದ್ದ ಶ್ರೀವರನ ಭಕ್ತ ಹೂಹೂ ಗಂಧರ್ವನೆರಗಿ ಬಿದ್ದನು ಹರಿಗೇ ದೇವೇಶ ಹುಸಿನಗುತ ಈವೆ ವರವನು ಕೇಳಿ ಯಾವಾತ ಈ ಕಥೆಯ ಭಾವಶುದ್ಧದಿ ಭಜಿಸೆ ಉದಯದಲಿ ನಾ ಒಲಿವೆ ತವಕದಲಿ ಎಂದನೂ 15 ಹರಿಗೆ ಸಮರಾರಿಲ್ಲ ಹರಿಭಕ್ತ ಗೆಣೆಯಿಲ್ಲ ಸುರರು ಮೊರೆಯಿಟ್ಟರಾಗ ಹರಿವಾಯುಗುರುಗಳು ಕರುಣದಿಂದಲಿ ಇದನು ಮನ್ನಿಪುದು ಬುಧರೂ 16 ಮುದ್ದುಜಯತೀರ್ಥರ ಹೃದಯದಲಿನಲಿಯುವ ಮಧ್ವಾಂತಃಕರಣದಿ ಮುದ್ದಾಗಿ ಕುಣಿಯುವಂಥ ಮಾಧವ ಶ್ರೀಕೃಷ್ಣವಿಠಲರಾಯನು ಬೇಗ ಮೋದ ಸುರಿಸುವ ಈ ಪದವ ಪಠಿಸಲೂ 17
--------------
ಕೃಷ್ಣವಿಠಲದಾಸರು
ಗಣಪತಿ ಶಾರದೆಗೆರಗಿದೆ ಇಂದೇ | ಇಬ್ಬರ ಹೃದಯದಿ ಕರುಣದಿ ಬಂದೆ | ನುಡಿಸಿದರ್ವಚನವ ಒಂದೊಂದು ತಂದೆ | ಕೇಳಿರಿ ಜನರೆಲ್ಲಾ ಕಿವಿಗೊಟ್ಟು ಬಂದೆ 1 ನರನಾಗಿ ಬಂದು ನೀ ಮಾಡಿದಿ ಏನಾ | ತಿಳಿಯದೆ ಬೊಗಳುವಿಯಾತಕೆ ಶ್ವಾನಾ | ಎಳ್ಳಷ್ಟು ಇಲ್ಲದೆ ಹೋಯಿತು ಜ್ಞಾನಾ | ಇನ್ನಾದರೂ ಮಾಡೊ ಸದ್ಗುರುವಿನ ಧ್ಯಾನಾ2 ಮಾಡಲಿಲ್ಲಾ ಪುಟ್ಟಿ ನೀ ದಾನ ಧರ್ಮಾ | ಮಾಡಿದಿ ತಿಳಿಯದೆ ನೀ ಕೆಟ್ಟ ಕರ್ಮಾ | ಆಡಿದಿ ನೀ ಸಾಧುಸಂತರಿಗೊರ್ಮಾ | ನೋಡಿಕೊ ನಿನಗಿಲ್ಲದಾಯ್ತು ಶರ್ಮಾ 3 ಮಾಡಿದ ಬದುಕನು ಸುಮ್ಮನೆ ಕಳೆದೆ | ಮಾಡುವಾಗ ಬಹು ನಿಜವೆಂದು ತಿಳಿದೆ | ನೋಡದೆ ಪೂರ್ವದ ಸುಕೃತವನಳಿದೆ | ರೂಢಿಯೊಳಗೆ ಪಾಮರನಾಗಿ ಬೆಳೆದೆ 4 ಮಾಡುವ ಕರ್ಮಕೆ ಮನವೇ ಸಾಕ್ಷೀ | ಮಾಡುವಿ ಜಪ ನಿನಗ್ಯಾಕೀ ರುದ್ರಾಕ್ಷೀ | ಮಾಡಿದನೇ ಗುರು ಹೀಗೆಂದು ದೀಕ್ಷಾ | ಆಡಲ್ಯಾತಕೊ ನಾಳೆ ಆದೀತೋ ಶಿಕ್ಷಾ 5 ಹುಣಶಿ ಹಣ್ಣ ಹಚ್ಚಿ ಬೆಳಗಿದಿ ಗಿಂಡೀ | ಎಣಕೀ ಶರಣ ಮಾಡಿ ಅಲ್ಲೇನು ಕಂಡೀ | ಸಂತರ ನಿಂದಾ ಬಲು ಮಾಡಿ ಉಂಡೀ | ಅಂತರಂಗದಿ ಇರು ಛೇ ಹುಚ್ಚ ಮುಂಡೀ 6 ಹಗಲೂ ಇರುಳೂ ಎದ್ದುಂಬುವಿ ಕೂಳೂ | ಕೂಳಿಗೆ ಆದಿ ನೀ ಒಬ್ಬರ ಆಳೂ | ಬಲು ಮಂದಿ ಮನೆಯನು ಮಾಡಿದಿ ಹಾಳೂ |ಏನು ಪುಣ್ಯ ಬಂದದ ಅದನಾರ ಹೇಳು 7 ಹಗಲೂ ಇರುಳೂ ಎದ್ದು ಮಾಡಿದಿ ಬದಕಾ | ಮಾಡುತ ಮಾಡುತ ಆದೆಲ್ಲೊ ಮುದುಕಾ | ಸಾಯುವ ತನಕಾ ಬಿಡಲಿಲ್ಲೊ ಚುದಕಾ | ಸತ್ತಮೇಲೆ ನೀ ಆಗುವಿ ಶುನಕಾ 8 ಏನೇನಿಲ್ಲದೆ ಹೋಯಿತು ಬುದ್ಧೀ | ಶಾಸ್ತ್ರ ಪುರಾಣದಿ ಕೇಳಿಲ್ಲ ಸುದ್ದೀ | ಇರುಳ ಕಂಡ ಕುಣಿ ಹಗಲ್ಯಾಕೆ ಬಿದ್ದೀ | ಮರುಳಾದ್ಯಾ ಯಮ ನಾಳೆ ಕೊಂದಾನೊ ಗುದ್ದೀ 9 ಸಂಸಾರ ನಂಬಿದಿ ನಿಜದಲಿ ಹ್ಯಾಂಗ | ಸದ್ಗುರು ಪಾದವ ನಂಬೋ ನೀ ಹಾಂಗ || ಸಂಶಯಾ ಅದಕಂಜಿ ಬಿಟ್ಟರೆ ಈಗ |ಕಾಂಶಿಲಿ ಬಡಿದಾರು ತಿಳಿದೀತು ಆಗ 10 ಬೆಳಕಿನೊಳಗ ಒಂದು ನೋಡುವ ಕಣ್ಣು | ಕತ್ತಲಿಯೊಳ ಗೊಂದು ಕಾಂಬುವ ಕಣ್ಣು | ಕತ್ತಲಿ ಬೆಳಕನ್ನು ನೋಡುವ ಕಣ್ಣು | ಅದ ಬಿಟ್ಟು ಏನ ನೋಡುತಿ ಮಣ್ಣು 11 ಅನುದಿನ ಶಾಸ್ತ್ರ ಪುರಾಣಾ | ಅದರೊಳಗಿನ ಮಾತ ತಿಳಿಯದೆ ಕೋಣಾ || ಅರ್ಥವ ಹೇಳುವಿ ಮಂದಿಗೆ ಜಾಣಾ | ರುವ್ವಿಯ ಬೇಡಲು ಹೋಯಿತು ಪ್ರಾಣಾ12 ಕಂಡರೆ ನೋಡುವಿ ಹೆರವರ ಹೆಣ್ಣು | ಚೆಲುವೆಂದೂ ಇಟ್ಟೆಲ್ಲೊ ಆಕೆಗೆ ಕಣ್ಣೂ | ಆದರೆ ಹತ್ತ್ಯಾವೊ ಆಕೆಯ ಹುಣ್ಣು | ಕಡೆಯಲಿ ಬಿದ್ದಿತು ಬಾಯಲಿ ಮಣ್ಣು 13 ನಿತ್ಯ ತೆಗೆದುಕೊಳ್ಳುವಿ ದೇವರ ತೀರ್ಥಾ | ಮತ್ತಿನ್ನು ಬಿಡಲಿಲ್ಲ ಮನದ ಸ್ವಾರ್ಥಾ || ಕತ್ತೆಯ ಹಾಂಗ ನೀನೊದರುವಿ ವ್ಯರ್ಥಾ | ಎಂದೆಂದಿಗೂ ದೊರೆಯದು ಆ ಪರಮಾರ್ಥಾ 14 ತನುವು ನಾನೆಂಬುವಿ ತನುವಿದು ತೊಗಲು | ತನುವಿಗೆ ಅವ ನೋಡು ಒಂಬತ್ತು ಹುಗಲು | ಚಿಂತಿ ಮಾಡುವದ್ಯಾಕೊ ಹಗಲೂ ಇರುಳೂ | ನಿನ್ನಾಧೀನವು ಹೀಗೆಂದು ಇರಲು 15 ದೂರ ಹೋಗದಿನ್ನು ಆಗದು ಕಾಶೀ | ದೂರ ಮಾಡಿ ಕಳಿ ನೀನು ಮೂರಾಶಿ | ತೀರದು ಶಿವಯೋಗ ಪುಣ್ಯ ರಾಶಿ | ಸೇರುವಿ ಸಾಯುಜ್ಯದಲಿ ಮಿರಾಶಿ 16 ಮಾಯಾ ಮಾಯಾ ಮಾಯಾ | ದುಡ್ಡಿನಂತೆ ಮಾಡೊ ಮನಕೆ ನಿರ್ಮಾಯಾ 17 ಮೀಶಿಯ ಹುರಿ ಮಾಡಿ ಮೇಲಕೆ ನೋಡಿ | ಕಾಲಾಗ ಸಿಕ್ಕವು ಮೋಹದ ಬೇಡಿ || ಮಾಡಬಾರದಂಥ ಕೆಲ್ಸವ ಮಾಡಿ | ಸಿಕ್ಕಿದೆಲ್ಲೊ ಗಾಂಡೂ ಇನ್ನೆತ್ತ ಓಡೀ 18 ಪಾದ ದೊರೆವುದಿನ್ನೆಲ್ಲಿ 19 ಕಾಮನ ಸುಡುವುದು ನೋಡು ಹೀಂಗಲ್ಲಾ | ಕಾಮನ ಶಿವ ಸುಟ್ಟರವ ಸಾಯಲಿಲ್ಲ || ಕಾಮನು ಸುಡುವ ಮೂರು ಲೋಕವನೆಲ್ಲ | ಕಾಮರಹಿತ ಭವತಾರಕ ಬಲ್ಲ 20 ಕಟ್ಟಿದಿ ಮನೆಯನು ನೀ ಬಲು ಛಂದಾ | ಬಿಟ್ಟು ಹೋಗುತಿ ಇದದಾವಂದಾ || ತೊಟ್ಟಿಲೊಳಗೆ ಇದ್ದ ಹೇಳಿದ ಕಂದಾ | ಎಷ್ಟಂತ ಹೇಳಲಿ ನೀ ಮತಿಮಂದಾ 21 ಪಾತಕ ಬರುವದು ಬಿಡಬ್ಯಾಡ ವಾಜಿ | ನೀತಿಯಿಂದಲಿ ಮಾಡು ನೀ ಗುರು ಪೂಜಿ | ಯಾತನ ಬಡಿಸುವ ನಾಳಿನ ಪಾಜಿ 22 ಒದರುವಿ ಯಾತಕೆ ಬಾಯನು ಕಿಸ್ತು | ಬೆದರ ಬೇಡಾದುದಕೆನ್ನು ಅಸ್ತು || ಚತುರ ತನದಲಿ ಸಾಧಿಸು ನೀ ವಸ್ತು |ಆದರಿಂದಲಾಗುವದು ಆ ಮನ ಸ್ವಸ್ತು 23 ಪಾತಕ ಬರುವದು ತಿಳಿಯದೆ ಕೋಳಿ || ನೀತಿಯಿಂದಲಿ ತತ್ತ್ವ್ವ ಮಾತನು ಕೇಳಿ | ಘಾತಕ ಯಮ ನಾಳೆ ಬರುವನು ದಾಳಿ 24 ಭವ ಬಿಟ್ಟಿ | ಮಾಡದೆ ದಾನ ಧರ್ಮವ ಕೆಟ್ಟೀ || ಮಾಡಿದುದೆಲ್ಲಾ ನೀ ಜೋಕಿಲಿ ಇಟ್ಟಿ | ಮಾಡಲು ಬಾಧೆಯ ನೀ ಬಾಯ ಬಿಟ್ಟಿ 25 ನೆನೆದರೆ ದೃಢದಲಿ ರಾಮ ನಾಮ | ತನುವಿದು ಮುಂದೆ ಬಾರದು ನೇಮ || ಮನದೊಳು ಪುಟ್ಟಿತು ತಾನೆ ನಿಷ್ಕಾಮ | ಘನಸುಖ ತೋರಿತು ಅದು ಸಾರ್ವಭೌಮ 26 ಹುಟ್ಟಿ ಹುಟ್ಟಿ ನೀ ಯಾತಕೆ ಸತ್ತೀ | ಹುಟ್ಟುತ ಸಾವುತ ನಿತ್ಯದಿ ಅತ್ತೀ || ಹುಟ್ಟು ಸಾವನ್ನು ಕಳೆಯಲೊ ಕತ್ತೀ | ಕೆಟ್ಟಿಯೊ ಇನ್ನಾರ ಬೆಳಿ ಧರ್ಮಾ ಬಿತ್ತೀ 27 ಶಾಸ್ತ್ರ ಪುರಾಣವ ಓದುವಿ ಬರಿದೇ | ಉತ್ತಮ ಸ್ತ್ರೀಯರ ಕಂಡು ನೀ ಕರೆದೆ || ನಿನ್ನೊಳು ತಿಳಿದು ನೀ ನೋಡುದು ಮರೆದೇ | ಸಾಧು ಸಂತರುಗಳ ಸೇವೆಗೆ ಮರೆದೆ 28 ಪಡಿ ಜೋಳಕೊಬ್ಬರ ಅಡಿಗಳ ಹಿಡಿವೆ | ಕೊಡುವದಿಲ್ಲೆಂದರೆ ದವಡಿಯ ಕಡಿವೆ || ಕೊಟ್ಟರೆ ಮನದೊಳು ಸಂತೋಷ ಪಡುವೆ | ಕೆಟ್ಟ ಮಾರ್ಗದಿಂದ ಕಡೆ ತನಕಾ ನಡಿವೆ 29 ಭವ ಪರಿಹರಿಸುವದಿದು ಏನು ಅರಿದು || ಭವದೊಳು ಬಿಟ್ಟರು ನಾಮವ ಮರೆದು | ಭವಕಿನ್ನು ಕರಸ್ಯಾರೊ ಆತನ ಬರದು 30 ಮಾಡಿದೆ ಏನು ಬದುಕನು ಹೇಳು | ಮಾಡಿದುದೆಲ್ಲಾ ತಿಂದೆಲ್ಲಾ ಕೂಳು || ಕೂಳಿಗಾಗಿ ಆದಿ ಒಬ್ಬರ ಆಳು | ನೋಡಿ ಏನು ಸದ್ಗತಿಯ ಹೇಳು 31 ಮನದೊಳು ಗಳಿಸಿದಿ ಕೆಂಚೀ ಹೊನ್ನು | ಗಳಿಸಿದವರು ಏನು ಒಯ್ದಾರು ಇನ್ನು || ಬಿಟ್ಟು ಹೋದರು ಹ್ಯಾಂಗ ಬಲ್ಲೆಲ್ಲಾ ನೀನು | ನಿಷ್ಠೆಯಿಂದಲಿ ಒಮ್ಮೆ ಹರಗುರು ಎನ್ನು 32 ಮಾಡಲಿಲ್ಲ ಒಂದು ನರನಾಗಿ ಯೋಗಾ | ಮಾಡುವಿ ಸುಖವೆಂದು ಸ್ತ್ರೀಯರ ಭೋೀಗಾ | ಆಡಲ್ಯಾಕೆ ಆಯುಷ್ಯ ಹಾರಿತು ಬೇಗಾ | ನೋಡಿಕೊಳ್ಳೊ ಇನ್ನು ತಿಳಿದೀತು ಈಗಾ 33 ಪರಿ ಸಂಸಾರ ಯುಕ್ತಿ | ಮಾಡಲು ಒಲ್ಲ್ಯೋ ಶ್ರೀ ಗುರು ಭಕ್ತಿ || ಹೋಯಿತೊ ದೇಹದೋಳ್ ನಿನ್ನ ಶಕ್ತಿ | ಸಾಧಿಸಲರಿಯೊ ನೀ ಜೀವನ್ಮುಕ್ತಿ 34 ಅನುದಿನ ವೇದಾ | ಸಾಧಿಸಿ ತಿಳಿಯದೆ ಜೀವಶಿವ ಭೇದಾ || ಕಾದಾಡಿ ಕೊಂಬುವದು ಸುಮ್ಮನೆ ವಾದಾ |ಬ್ಯಾಡಿನ್ನು ಶೋಧಿಸು ನಿನ್ನೊಳು ಬೋಧಾ 35 ಭವ ಬೀಜವ ಕೊಂಬೆ 36 ಮಾಯಾ ಮರವನು ತ್ಯಜಿಸು || ಧ್ಯಾನ ಮುದ್ರೆಯೋಳ್ ಮನವನು ನಿಲಿಸು | ಜಗವಿದು ನಿಜವೇ ನೋಡೆಲು ಕನಸು 37 ರೂಪದೊಳಗಿಲ್ಲಾ ಗುಣವೊಂದು ತೃಣವು | ಗುಣದೊಳಗಿಲ್ಲವು ರೂಪದ ಅಣುವು || ರೂಪ ನಾಮಕ್ರಿಯಾ ಆದೀತು ಹೆಣವು | ಆ ಪರಬ್ರಹ್ಮನೆ ತಿಳಿಯಿನ್ನು ಪ್ರಣವು 38 ಪಾದ | ಅರಿತು ಪೂಜಿಸಿದವ ಪರಶಿವನಾದ || ಅನುಭವಿ ಬಲ್ಲನು ಆ ಸುಖ ಸ್ವಾದ | ತನ್ನೊಳು ಆಲಿಸುತಲಿ ನಿಂತ ನಾದ 39
--------------
ಭಾವತರಕರು