ಒಟ್ಟು 41 ಕಡೆಗಳಲ್ಲಿ , 23 ದಾಸರು , 40 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧೇನಿಸೊ ಶ್ರೀಹರಿಯ ಮಹಿಮೆಯ ಪ ಧೇನಿಸು ಲಯದ ವಿಸ್ತಾರ ಚತುರಾ ನಾನಕಲ್ಪದ ವಿವರಾ ||ಆಹಾ|| ಧೇನಿಸು ಶತಾನಂದಗೆ ಶತ- ಮಾನಕಾಲದಲ್ಲಿ ಇದ್ದು ನಡೆಸುವ ಹರಿಕಾರ್ಯ ಅ.ಪ ಮೊದಲರ್ಧ ಶತಮಾನ ಸೂಕ್ಷ್ಮ ಸೃಷ್ಟಿ ಪದುಮನ ತೋರಿದ ಮಹಾಮಹಿಮ ಆಗ ಅದೆ ಪ್ರಥಮ ಪರಾರ್ಧವು ನೇಮ ಮೇಲೆ ದ್ವಿತೀಯ ಭಾಗಕ್ಕೆಲ್ಲ ಬ್ರಹ್ಮ ||ಆಹಾ|| ಅದರೊಳು ತ್ರಿದಶ ಏಳರ್ಧ ವರ್ಷವು ಪದುಮಜನಿಂದ ರಾಜ್ಯವನಾಳಿಸಿದ ಪರಿಯನು 1 ದ್ವಾದಶಾರ್ಧವರುಷ ತಾ ಉಳಿಯೆ ಆಗ ತೋರ್ದ ಅದುಭೂತವಾದ ಮಹಾಪ್ರಳಯ ಸೂಚ- ನಾದಿ ಕಾರ್ಯವು ತಾ ಮೆರೆಯೆ ಶತ ಅಬ್ದ ಅನಾವೃಷ್ಟಿ ತೋರಿರೆ ಆಹಾ|| ಉದಧಿ ಶೋಷಣೆಯಿಂದ ಸರ್ವಸಂಹಾರವು 2 ಮೇರುಪರ್ವತ ಸ್ಥಳದಲ್ಲಿ ಇದ್ದ ವಿ- ಧಿರುದ್ರಾದಿಗಳೆಲ್ಲರಲ್ಲಿ ಮಹ ತೋರುತ್ತ ಕುಣಿದಾಡುತ್ತಲಿ ||ಆಹಾ|| ಸುರರವಯವಗಳ ತಾನಲಂಕರಿಸಿದನ 3 ನರಹರಿ ನರ್ತನ ಮಾಡಿ ತನ್ನ ಕರದಿ ತ್ರಿಶೂಲವನ್ನು ನೀಡಿ ದಿ- ಕ್ಕರಿಗಳ ಪೋಣಿಸಿ ಆಡಿ ಸರ್ವರಉ- ದರದೋಳಿಟ್ಟು ಕೂಡಿ ||ಆಹಾ|| ಗ್ರಾಸ ತ್ವರಿತದಿ ತಾ ಮಾಡಿ ಕ್ರೀಡಿಸುತಿರ್ಪನ್ನ 4 ವಾಯುದೇವರ ಗದಾಪ್ರಹಾರದಿಂದ ಭಯ ಹುಂಕಾರದಿಂದ ಜೀವರ ಲಿಂಗ ಆಯತ ಸ್ಥಳದಲ್ಲಿಟ್ಟವರಾ ||ಆಹಾ|| ಲಯಕಾಲದಿ ಸಂಕರುಷಣ ಮುಖದಿಂದ ಲಯವಾಗಲು ಅಗ್ನಿ ಪೊರಟು ದಹಿಪುದಾ 5 ಕರಿಯ ಸೊಂಡಿಲಿನಂತೆ ಮಳೆಯ ಧಾರೆ ನಿರುತ ಶತವರ್ಷಗರೆಯೆ ನೋಡೆ ಸರ್ವತ್ರ ಜಲಮಯವಾಗೆ ಆಗ ನೀರಜಾಂಡವೆಲ್ಲ ಕರಗೆ ||ಆಹಾ|| ಗರುಡ ಶೇಷ ಮಾರ್ಗವರಿತು ಬರುತಿರ್ಪ ಸರ್ವಜೀವರ ತನ್ನ ಉದರದೊಳಿಟ್ಟನ್ನಾ 6 ಅರಿಯೋ ನೀ ಶೇಷಮಾರ್ಗವನ್ನೂ ಇಲ್ಲಿ ಸುರರು ಕುಬೇರನೊಳಿನ್ನು ಆತ ವರುಣನಲ್ಲಿ ಲಯವನ್ನೂ ಚಂದ್ರ ಹರಿಪಾರ್ಷಧರನಿರುದ್ಧನನ್ನು ಆಹಾ ಅನಿರುದ್ಧ ಸನತ್ಕುಮಾರನ್ನ ತಾವು ಪೊಂದಿ ಮಾರ ವಾರುಣಿಯು ಹರಿಮಡದಿಯರಲ್ಲಿ ಲಯವಾ 7 ಸುರರು ಮೊದಲು ಅಗ್ನಿಯೊಳ್ ಲಯವನ್ನೈದುವರು ಆ ಅಗ್ನಿ ತಾ ಸೂರ್ಯನ್ನ ಸೇರುವನು ಸೂರ್ಯ ತಾ ಗುರುವನ್ನ ಸೇರುವನು ||ಆಹಾ|| ಆಗಲೇ ಸರ್ವಮನುಜರು ಪಿತೃಗಳು ನಿರುಋತಿಯೊಳು ಪೊಕ್ಕು ತಾ ಯಮನಲ್ಲಿ ಸೇರುವಾ 8 ಯಮ ಪ್ರಿಯವ್ರತರಾಯರೆಲ್ಲ ಲಯ ತಮ್ಮ ಸ್ವಾಯಂಭು ಮನುವಿನಲ್ಲಿ ಮತ್ತೆ ಮ- ಹಿಮ ಭೃಗುವು ದಕ್ಷನಲ್ಲಿ ಲಯವು ಆ ಮಹಾದಕ್ಷ ಸ್ವಾಯಂಭು ಇಂದ್ರನಲ್ಲೀ-ಆಹಾ ಅಮರಪತಿಯು ತಾ ಸೌಪರಣಿಯನು ಪೊಂದಿ ಈ ಮಾರ್ಗದಿ ತಾನು ಗರುಡನ್ನ ಸೇರುವುದು 9 ಶೇಷಗರುಡರೊಡಗೂಡಿ ಆಗ ಸರಸ್ವತಿಯನ್ನೆ ಪೊಂದುವರು ಮತ್ತೆ ಆಸುವಿರಂಚಿ ವಾಯುಗಳು ತಾವು ಸರಸ್ವತಿಯನ್ನೆ ಪೊಂದುವರು ಆಹಾ ಈ ಸೂಕ್ಷ್ಮಲಯವನ್ನೆ ಕ್ರಮವರಿತು ನೀನೀಗ 10 ಸೂತ್ರನಾಮಕ ವಾಯುದೇವ ರುದ್ರ ಉಮೆಪ್ರದ್ಯುಮ್ನದ್ವಾರ ತ್ರಾತ ಸಂಕುರುಷಣನಾ ದಯದಿ ಜಗ- ನ್ಮಾತೆ ಲಕ್ಷ್ಮಿಯೊಳು ಸೇರುವರು ||ಆಹಾ|| ಚತುರಾಸ್ಯ ಜೀವರ ತನ್ನುದರದೊಳಿಟ್ಟು ಅತಿಮೋದದಿಂದ ವಿರಾಟನ್ನೈದುವುದು11 ವಿರಾಟ್ ಬ್ರಹ್ಮನು ತಾನೆಲ್ಲಾ ತನ್ನ ಆ ವರಣದಲ್ಲಿ ಇಪ್ಪಂಥ ತನ್ನ ಧರೆಯಲ್ಲಿ ಲೀನವಾಗುವ ಆಗ ಪರಿಪರಿಯಿಂದ ತನ್ಮಾತÀ್ರ ಆಹಾ ಅರಿತು ಶಬ್ದಸ್ಪರ್ಶರೂಪರಸಗಂಧ ಪರಿಪರಿಯಿಂದಲಿ ಲಯವನ್ನೈದುವುದಾ12 ಗಂಧದ್ವಾರ ಲಯತನ್ನ ಬಿಲದಿ ಜಾತ ವೇದದಲ್ಲಿ ರಸ ಲಯವು ರೂಪ ದ್ವಾರ ಲಯ ಆಕಾಶದೊಳು-ಆಹಾ- ಶಬ್ದದ್ವಾರ ಲಯತಮ ಅಹಂಕಾರಾದಿ ತದಾಂತರ್ಗತÀ ಭಗವದ್ರೂಪದಲ್ಲ್ಯೆಕ್ಯವಾ 13 ಅಹಂಕಾರತ್ರಯದಲಿ ಬಂದಾ ತತ್ತ ್ವ ದೇಹಸೂರರೆಲ್ಲರ ಲಯವು ಇಹ ತತ್ವಾಂತರ್ಗತ ಭಗವದ್ರೂಪಕೆ ||ಆಗ|| ಅಲ್ಲಲ್ಲಿ ತನ್ನೊಳೈಕ್ಯವೂ-ಆಹಾ ಅಹಂಕಾರತ್ರಯ ಮಹತ್ತತ್ವದಲ್ಲಿ ಲಯ ಮಹತ್ತತ್ತ ್ವವು ಮೂಲಪ್ರಕೃತಿಯಲ್ಲಿ ಲಯವು 14 ವಾಸುದೇವಾದಿ ಚತುರ ರೂಪ ಮತ್ಸ್ಯ ಶ್ರೀಶನನಂತಾದಿರೂಪ ಮತ್ತು ಶ್ರೀಶನಷ್ಟೋತ್ತರ ರೂಪ ||ಆಹಾ|| ತಾ ಸಕಲರೂಪಗಳು ಮೂಲರೂಪದೊಳೈಕ್ಯ ಶಾಶ್ವತನಾದ ಶ್ರೀ ಸಚ್ಚಿದಾನಂದನ್ನಾ 15 ಗುಣಮಾನಿ ಶ್ರೀ ಭೂ ದುರ್ಗಾ ಅಂ- ಭ್ರಣಿ ರೂಪವನ್ನೆ ತಾ ಧರಿಸೀ ಸಂ- ಪೂರ್ಣನ್ನ ಸಾಮೀಪ್ಯ ಸೇರಿ ಪೂರ್ಣ ಕಾಮನ್ನ ಎಡಬಿಡದೆ ನೋಡೀ ||ಆಹಾ|| ಕ್ಷಣ ಬಿಡದೊಡೆಯನ ಅಗಣಿತಗುಣಗಳ ಕಡೆಗಾಣದೆ ನೋಳ್ಪ ನಿತ್ಯಮುಕ್ತಳ ಸಹಿತಾ16 ಏಕೋ ನಾರಾಯಣ ಆಸೀತ ಅ- ನೇಕ ಜನರ ಸಲಹಲಿನ್ನು ತಾನೆ ಸಾಕಾರದಲಿ ನಿಂದಿಹನು ಇಂತು ವೇಂಕಟಾಚಲದಿ ಇನ್ನು ಮುನ್ನು ||ಆಹಾ|| ಏಕಮನಸಿನಿಂದ ಭಜಿಪ ಭಕ್ತರನ ತಾ ನಿ- ನಿತ್ಯ 17
--------------
ಉರಗಾದ್ರಿವಾಸವಿಠಲದಾಸರು
ನಂಬದಿರು ಈ ದೇಹ ನರಲೋಕವೆಂಬುದು ಸುಖವೆಂದು ಮಾಯಾ ಪ್ರಪಂಚವನು ಅನುಗಾಲಾ ನಂಬು ನಮ್ಮಂಬುಜಾಂಬಕನ ಪಾದಾಂಬುಜವ ನಂಬಿದರೆ ಮುಕ್ತಿಯಲಿ ಇಂಬುಂಟು ಮರುಳೆ ಪ ತಂದೆ ತಾಯಿ ತಮ್ಮ ಸುಖಕೆ ಏಕಾಂತದಲಿ ಒಂದು ದಿನಲಿರಲಾಗಲವರರೇತಸು ಬಿಂದುವಿನಲಿ ಉತ್ಪತ್ಯವಾಗಿ ಬೆರೆದಾಗ ದು ರ್ಗಂಧದೊಳು ಬಂದು ನಿಂದೂ ಬಂಧನದೊಳಗೆ ಸಿಲುಕಿ ಒಂದೆಂಟು ತಿಂಗಳು ಪೊಂದಿ ಯಾತನೆಬಟ್ಟು ಮಲಮೂತ್ರ ಹೇಸಿಕೆಯಿಂದ ಕುದಿದು ಬಿಂದು ಕೆಳಗೆ ಹೊರಳಿದಿರು ಮರುಳೆ 1 ತಾಮಸವ ಕವಿದು ಕಾವಳಗೊಂಡ ಕತ್ತಲೆಯ ಸೀಮೆಯೊಳಗೆ ಸಿಲ್ಕಿ ಬಾಲತ್ವತನದಲ್ಲಿ ನೀ ಮಂದನಾಗಿ ಮರುಳಾಟಕ್ಕೆ ಮನವು ಉಬ್ಬಿ ಮುಂಜಿಯನು ಕಟ್ಟಿ ಬಂಧುಬಳಗ ಪ್ರೇಮದಿಂದಲಿ ನೆರೆದು ಮೋಹದಲಿ ಒಬ್ಬ ಕೋಮಲೆಯ ಜತೆಮಾಡಲು ನೋಡಿ ಹಿಗ್ಗುತ್ತಾ ಛೀಮಾರಿಯಾಗಿ ತಿರುಗಲಿ ಬೇಡ ಮರುಳೆ 2 ಮದ ಮತ್ಸರ ಲೋಭ ಮೋಹ ಕಾಮಾದಿಯಲಿ ಮದನ ಬಲಿಗೆ ಬಿದ್ದು ಅಹಂಮತಿ ಪಂಕದಾ ಹುದಲಿನೊಳಗೆ ಮುಣುಗಿ ಮುಂಗಾಣದಲೆ ತನು ರೂಹ ತುಂಬಿ ಕಾಲವನು ಕಳೆದು ಮಕ್ಕಳ ಪಡೆದು ತುದಿಮೊದಲು ಧರ್ಮವನು ಮರೆದು ಮಮತೆಯಲ್ಲಿ ಸದರೆಂದಿಲ್ಲದಾ ದುಷ್ಕರ್ಮಗಳು ಮಾಡಿ ಮುದದಿಂದ ನರಕದೊಳು ಬೀಳುವಾ ಹುರುಳೆ 3 ಇದ್ದಾಗ ನೆಂಟರಿಷ್ಟರು ಬಂದು ಚೆನ್ನಾಗಿ ಹೊದ್ದಿಕೊಂಡು ನಿನ್ನ ಕೊಂಡಾಡಿ ನೂರಾರು ಸುದ್ದಿಯನು ಪೇಳಿ ನಡುಮನೆಯೊಳಗೆ ಇದ್ದು ನಿನ್ನಯ ಬದುಕು ಉದ್ದಿನ ಕಾಳಿನಷ್ಟು ಉಳಿಯಲೀಸದೆ ನಿತ್ಯಾ ಬದ್ಧವಿಲ್ಲದಲೆ ಕರಗಾತಿಂದು ಬಡತನಾ ಸಿದ್ಧನಾಗಲು ತಿಂದವರು ಹರದೋಡಿ ಎದ್ದು ಪೋಗಲು ಕೆಟ್ಟಬಾಯಿದೆರವಾ ಮರುಳೆ 4 ಬಿಡು ಬಿಡು ಅಕಟ ಸಂಸಾರ ಸಾಗರದ ಮಡುವಿನೊಳಗೆ ಬಿದ್ದು ಕಾಲ್ಗೆಡೆದು ಪೋಗದೆ ಹಿಡಿ ಹಿಡಿ ಪರಮ ಭಾಗವತರ ಸಂಗತಿಯ ಸರ್ವಜ್ಞತೀರ್ಥರ ಮತದ ಕರುಣವನು ಪಡೆಯಲು ಅಧಿಕಾರನಾಗಿ ಸಿರಿದೇವಿಯ ವೊಡಿಯ ವಿಜಯವಿಠ್ಠಲನಂಘ್ರಿ ನೆರೆ ನಂಬಿ ತಡಿಯದಲೆ ಸದ್ಗತಿಗೆ ಸೇರುವದು ಮರುಳೆ5
--------------
ವಿಜಯದಾಸ
ನೀನೆ ದಯಾನಿಧಿಯು ಶ್ರೀ ಗುರುರಾಯ ನೀನೆ ದಯಾನಿಧಿಯು ಧ್ರುವ ಕರುಣದಿ ಕುಂತಿಯ ಪುತ್ರರಿಗೆ ಒಲಿದು ಕಾಳ ನಿರ್ಮಿಸಿ ಕೌರವರಳಿದು ಉಳಿಯದೆ ಇಳೆಯೊಳು ವಂಶವ ಸವರಿದ ಶೇಷಶಯನ ಶ್ರೀ ಕೇಶವ ನೀನೆ 1 ನರಗೊಲಿದು ನರಕಾಸುರನ ಮರ್ದಿಸಿ ನಾರಗನೆಂದಜಮಿಳನ ನೀ ತಾರಿಸಿ ನಾರದಗೊಲಿದು ನಾಟ್ಯವನಾಡಿದ ನರಹರಿಯು ನಾರಾಯಣ ನೀನೆ 2 ವೇದವ ಕದ್ದೊಯಿದಸುರನ ಸೀಳಿ ಮಚ್ಛವತಾರದ ರೂಪವ ತಾಳಿ ಮಾವನ ಕೊಂದ ಮಾನ್ಯರ ಮಡುಹಿದ ಮಾಧವ ನೀನೆ 3 ಗೋಕುಲದಲಿ ಪುಟ್ಟಿ ಧರೆಯೊಳು ಬೆರಳಲಿ ಗೋವರ್ಧನ ಗಿರಿಯನೆತ್ತಿ ಗೋಕುಲ ಕಾಯ್ದಿ ಗೋಪಿಯರಿಗೊಲಿದ ಗೋಪಾಲಕೃಷ್ಣ ಗೋವಿಂದನು ನೀನೆ4 ಸೃಷ್ಟಿನೆಲ್ಲ ಬೆನ್ನಿಲಿ ತಾಳಿದ ಶೇಷನ ಸಂ ಕಷ್ಟವ ಪರಿಹರಿಸಿದ ಶಿಷ್ಟ ವಿಭೀಷಣಗೊಲಿದು ಪಟ್ಟವಗಟ್ಟವು ವಿಷ್ಣವು ನೀನೆ 5 ಮದನನೊಲಿದು ಕಾಳಿಂಗನ ತುಳಿದು ಕದನದಲಿ ಬಾಣಾಸುರನಳಿದು ಮೇದಿನಿಯೊಳು ಮರೆ ಇಲ್ಲದೆ ದೈತ್ಯರ ಮರ್ದಿಸಿದ ಮಧುಸೂದನನು ನೀನೆ 6 ತ್ರಿಪುರವನಳಿದು ತ್ರಿಗುಣವ ತಾಳಿದ ತೆತ್ತೀಸ ಕೋಟಿ ದೇವರುಗಳಿಗಾಳಿದ ಅಕ್ರೂರಗೊಲಿದು ಚರಿತ್ರವದೋರಿದ ತ್ರಿಜಗಪತಿ ತ್ರಿವಿಕ್ರಮ ನೀನೆ7 ವಾಲಿಯನಳಿದು ವಾಲ್ಮೀಕಿಗೊಲಿದು ಬಲಿಚಕ್ರನ ಮುನಿಮುಂದಲಿ ಸುಳಿದು ಬ್ರಾಹ್ಮಣನಾಗಿ ದಾನವ ಬೇಡಿದ ಮಾನ್ನವಗೊಲಿದ ಶ್ರೀ ವಾಮನ ನೀನೆ 8 ಸೃಷ್ಟಿನೆಲ್ಲ ನಿರ್ಮಿಸಿ ವಕ್ಷ ಸ್ಥಳದಲಿ ಶ್ರೀ ಮಹಾಲಕ್ಷ್ಮಿಯ ಧರಿಸಿದ ಶ್ರೀನಿಧಿ ಶ್ರೀಪತಿ ಶ್ರೀಗುರುಮೂರುತಿ ಶ್ರೀದೇವಿಗೊಲಿದಿಹ ಶ್ರೀಧರ ನೀನೆ 9 ದಾಸರ ಕ್ಲೇಶಕಿಲ್ಮಿಷಗಳ ತೊಳೆದು ಅಂಬರಿಷ ರುಕ್ಮಾಂಗದಗೊಲಿದು ಶುಕ ಶೌನಕ ಪರಾಶರ ಮುನಿಗಳಿಗೆ ಹರುಷನಿತ್ತ ಹೃಷಿಕೇಶನು ನೀನೆ 10 ಕ್ಷಿತಿಯೊಳು ದೃಢ ಪತಿವ್ರತೆಗೊಲಿದು ಯತಿ ಮುನಿಗಳಿಗಿನ್ನು ಗತಿಗಳನಿತ್ತು ಪತಿತರ ತಾರಿಸಿ ಪಾವನಗೈಸಿದ ಪರಂಜ್ಯೋತಿ ಪದ್ಮನಾಭನು ನೀನೆ 11 ದೇವಕಿಗೊಲಿದು ಸ್ಥಾಪಿಸಿ ಧರೆಯೊಳು ದ್ವಾರಕಿಯಲಿ ನಿಜ ಲೀಲೆಯು ತೋರಿದ ದುರಿತ ವಿಧ್ವಂಸನ ದೇವಕಿ ಪುತ್ರ ದಾಮೋದರ ನೀನೆ 12 ಸಿದ್ದ ಶರಣರಿಗೊಲಿದ ಸದ್ಗತಿ ಸುಖಸಾಧನ ಸಹದೇವಗದೋರಿದ ಸಂಭ್ರಮದಿ ಸುಧಾಮಗ ಒಲಿದು ಸಂತೋಷವನಿತ್ತ ಸಂಕರುಷಣ ನೀನೆ 13 ವಸುಧಿಯೊಳು ಭಸ್ಮಾಸುರನ ಮರ್ದಿಸಿ ಭಾಷೆಯನಿತ್ತು ಭಕ್ತರ ಪಾಲಿಸಿ ಋಷಿ ವೇದವ್ಯಾಸಗೊಲಿದಾತನು ವಸುದೇವಸುತ ವಾಸುದೇವನು ನೀನೆ 14 ವಿದುರುದ್ಧವ ಗರುಡಗೊಲಿದು ಭೃಗುಮುನಿ ಕಪಿಲ ಯೋಗೇಂದ್ರನ ಸಲಹಿದ ಸ್ಥಿರಪದವಿತ್ತರೊಂದು ಮಂದಿಗೆ ಪ್ರಸನ್ನವಾದ ಪ್ರದ್ಯುಮ್ನನು ನೀನೆ 15 ಸೀತಾ ಸುದ್ದಿಯ ತಂದವಗೊಲಿದು ಹತ್ತು ತಲೆಗಳ ಇದ್ದವನಳಿದು ಕದ್ದುಬೆಣ್ಣೆಯ ಮುದ್ದೆಯ ಮೆದ್ದು ಉದ್ದವಗೊಲಿದ ಅನಿರುದ್ಧನು ನೀನೆ 16 ಸೋಕಿಸಿ ಪೂತಣಿಯ ಕಾಯವು ಹೀರಿದ ಭಕ್ತ ಪುಂಡಲೀಕನ ಸಲಹಿದ ಭಕ್ತಿಗೆ ಒಲಿದು ಮುಕ್ತಿಯನಿತ್ತ ಪರಮ ಪರುಷ ಪುರುಷೋತ್ತಮನು ನೀನೆ 17 ಅಕ್ಷಯವೆಂದು ರಕ್ಷಿಸಿ ಸಭೆಯೊಳು ದ್ರೌಪದಿ ಕರುಣಕಟಾಕ್ಷದಿ ಸಲಹಿದ ಭಕ್ತವತ್ಸಲನಾಗಿ ಗಜೇಂದ್ರಗೆ ಅಧೋಕ್ಷಜ ನೀನೆ 18 ನರನಾರಿಯು ನಾಂಟೀಶರನಾಗಿ ನಖಮುಖದಲಿ ಹಿರಣ್ಯಕನ ಸೀಳಿ ಭಕ್ತಪ್ರಹ್ಲಾದಗ ಒಲಿದು ಸ್ತಂಭದಿ ಪ್ರಕಟಿಸಿದ ನರಸಿಂಹನು ನೀನೆ 19 ಅನಿಳ ಸ್ನೇಹಿತ ಅಜಗ್ನಾನಗ ಒಲಿದು ಅಹಲ್ಯಾ ಶಾಪ ವಿಮೋಚನ ಮಾಡಿದ ನೆಚ್ಚಿದ ಧ್ರುವನ ನಿಜ ಭಕ್ತಿಗೆ ಒಲಿದು ಅಚಲ ಪದವಿತ್ತುಚ್ಯುತ ನೀನೆ 20 ಜಗದೊಳು ಭಕ್ತಜನರಿಗೆ ಒಲಿದು ಜಾಹ್ನವಿ ನಿರ್ಮಿಸಿ ಜನಕನ ಸಲಹಿದ ಸಾಧು ಸಜ್ಜನ ಮುನಿ ಸಂಜೀವನ ಜಾನಕೀಪತಿ ಜನಾರ್ಧನನು ನೀನೆ 21 ಅಂಗದಗೊಲಿದಾನಂದವನಿತ್ತು ಕುಂದದೆ ಕರೆದುಪಮನ್ಯುನ ಸಲಹಿದ ದಿನಕರ ಚಂದ್ರ ಕಳಿಯಗಳಿತ್ತು ಇಂದ್ರಗೆ ಒಲಿದ ಉಪೇಂದ್ರನು ನೀನೆ 22 ಧರೆಯೊಳು ಭಕ್ತನ ಜನ್ಮವು ಹರಿಸಿ ಹರಿಶ್ಚಂದ್ರನ ಕ್ಲೇಶವು ಪರಿಹರಿಸಿದ ಸುರಮುನಿಗೊಲಿದ ಶ್ರೀ ಹರಿಯು ನೀನೆ 23 ಕಾಳಿ ಮಥನವು ಮಾಡಿ ಕರುಣದಿ ಸುರರಿಗೆ ಅಮೃತವನಿತ್ತು ಸಲಹಿದ ಕಲ್ಕ್ಯಾವತಾರದ ಲೀಲೆಯ ತೋರಿದ ಕಪಟ ನಾಟಕ ಶ್ರೀ ಕೃಷ್ಣನು ನೀನೆ 24 ಸಂಧ್ಯಾನದ ಸಾಹಾಯವನಿತ್ತು ಕಾಯದಿ ಸದ್ಗತಿ ಸಾಧನದೋರಿದ ನರಕೀಟಕ ಮಹಿಪತಿ ತಾರಕ ಗುರುಮೂರ್ತಿಯ ಪರಮ ದಯಾನಿಧಿಯು ನೀನೆ 25
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾರುಗಾಣಿಸೊ ಎನ್ನ ಪಾವನಕಾಯ ಶ್ರೀ ಗುರು ರಾಘವೇಂದ್ರಾರ್ಯನೇ ಪ. ಶ್ರೀ ರಮಾಪತಿ ಗುಣವ ನೀ ಮನದೊಳು ತಿಳಿಸಿ ಭವ ಬಂಧ ಬಿಡಿಸೋ ಅ.ಪ. ಮಿಂಚಿನಂತಿಹ ಎನ್ನ ಚಂಚಲ ಮನದಲ್ಲಿ ಸಂಚಿತನೆ ಎನೆ ನೆಲಸೋ ಸಂಚಿತಾಗಮಿಗಳು ಕೊಂಚ ಉಳಿಯದ ತೆರದಿ ಪಂಚ ಭೇದಾರ್ಥ ತಿಳಿಸೊ ಪಂಚವಕ್ತ್ರನ ತಾತ ಮಿಂಚಿನಂದದಿ ಪೊಳೆವೊ ಹಂಚಿಕೆಯ ಎನಗೆ ತೋರೋ | ಮನಕ್ಹರುಷ ಬೀರೋ 1 ಶ್ರೀ ನರಹರಿ ಕೃಷ್ಣ ರಾಮ ವ್ಯಾಸರ ಪದವ ನೀ ನಿರ್ಮಲದಲಿ ನೆನೆವೆ ಮಾನನಿಧಿ ಮುರಹರಿಯ ಧಾಮತ್ರಯಗಳ ಮಾರ್ಗ ಕಾಮಿಸಿದ ಭಕ್ತಗೀವೆ ನಾನಧಮೆ ನಿನ್ನಡಿಗೆ ಬಾಗಿ ಭಜಿಸುವೆ ಗುರುವೆ ನೀನಿತ್ತ ನೋಡಿ ಪೊರೆಯೊ | ನೀ ದಯವ ಗರೆಯೊ 2 ತರಳತನದಲಿ ಶ್ರೀ ನರಹರಿಯ ಭಜಿಸುತ್ತ ಉರುತರದಿ ಭಾದೆ ಸಹಿಸಿ ಹರಿಯು ಸರ್ವತ್ರ ವ್ಯಾಪಕನೆಂಬೊ ಮಹಿಮೆಯ ಉರ್ವಿಯೊಳಗೆಲ್ಲ ನೆಲಸಿ ಸಿರಿ ಕೃಷ್ಣನಾ ಭಜಿಸಿ ಮರುತ ಮತವನೆ ಸ್ಥಾಪಿಸಿ | ಗುರುರಾಯನೆನಸಿ 3 ತುಂಗ ತೀರದಿ ನಿಂದು ಮಂಗಳರೂಪದಲಿ ಪಂಗು ಬಧಿರರ ಸಲಹುತ ಸಂಗೀತ ಪ್ರಿಯನೆನಿಸಿ ಶೃಂಗಾರರಾಮನ ಮಂಗಳರೂಪ ಭಜಿಸಿ ಹಿಂಗದೇ ಸುಜನರಿಗೆ ವರವ ಕೊಡುವೊ ಬಿರುದು ರಂಗನಾ ಪದದೊಲುಮೆಯೋ | ನಿನ್ನಯ ಮಹಿಮೆಯೋ 4 ಗೋಪಾಲಕೃಷ್ಣವಿಠ್ಠಲನ ಪರಿಪರಿಯಿಂದ ಪಾದ ಮೌಳಿ ನೋಳ್ಪೆ ಶ್ರೀ ಪತಿಯ ತೋರೆನಗೆ ಪಾಪ ಕಲುಷವ ಕಳದು ತಾಪಪಡಲಾರೆ ಭವದಿ ಕಾಪಾಡುವವರಿಲ್ಲ ನೀ ಕೃಪಾನಿಧಿಯೆಂದು ಪರಿ ಕೇಳ್ದೆ ಗುರುವೆ | ಭಕ್ತರ ಕಲ್ಪ ತರುವೆ5
--------------
ಅಂಬಾಬಾಯಿ
ಪ್ರಭು ನಿಮ್ಮ ಮರೆಹೊಕ್ಕೆ ಅಭಿಮಾನ ಬಿಡಿಸೊ ಶುಭಕಾಯ ಸುಖಕರ ಪ ವಿಲಸಿತವಮಹಿಮೆ ತಿಳಿದು ಉಳಿಯದೆ ನಾನು ಕುಲಕುಲೆಂದ್ಹೋರಾಡ್ವ ಕುಲಾಭಿಮಾನ ಬಿಡಿಸೈ 1 ಈಶ ನಿಮ್ಮಯ ಪಾದಧ್ಯಾಸ ಮರೆಸಿ ಕಡೆಗೆ ನಾಶವೊಂದುವ ದೇಶಾಭಿಮಾನ ಬಿಡಿಸೈ 2 ಮಹಾಮಾಯವೆನಿಪ ಧರೆಮೋಹದಿ ಮುಳುಗಿಸದೆ ಮಹ ಶ್ರೀರಾಮ ದೇಹದಭಿಮಾನ ಬಿಡಿಸೈ 3
--------------
ರಾಮದಾಸರು
ಬತ್ತಿಗೆ ಹತ್ತದ ಜ್ಯೋತಿಯು ನಡು ನೆತ್ತಿಯೊಳಿಂ ಬಿಟ್ಟು ಜತನ ಮಾಡಣ್ಣಾ ಪ ತೈಲ್ಯವು ಸರಿಯಾಗದು ನೋಡು ಅಶುದ್ಧ ಮೈಲಿಗೆಯಿದ್ದರೆ ಕಳದೀತು ಕೈಲಾಸಪತಿಯ ಧ್ಯಾನವ ಮಾಡು ಬಟ್ಟ ಬೈಲಲ್ಲಿ ಬೆಳಗಾಗುತಿದೆ ಮುಂದೆ ನೋಡು 1 ಕತ್ತಲೆ ಬೆಳಕಲ್ಲಿ ಉಳಿಯದು ಮಾಯಾ ಮೃತ್ಯುಪಾಶಗಳಲ್ಲಿ ಸುಳಿಯದು ನಿತ್ಯ ನಿರ್ಮಲವೆಂಬ ಗೆಲವದು ಪರ ವಸ್ತುವಿನೊಳಗೆ ಕೂಡಿರುವುದು ಅಣ್ಣಾ 2 ನಿಂದಿಹ ನಿಜಕೆ ತಾ ನಿಲುವದು ಪರ ದ್ವಂದ್ವಾಕಾರಗಳೆಲ್ಲ ಗೆಲುವದು ಕುಂದು ದುಷ್ಕರ್ಮವ ಕೊಲುವದು ವಿಮಲಾ ನಂದನ ಚರಣಕೆ ಸಲುವದು ಅಣ್ಣಾ 3
--------------
ಭಟಕಳ ಅಪ್ಪಯ್ಯ
ಬಾರೆ ಸಖಿ ಪೋಗಿ ರಾಸ ಕ್ರೀಡೆಯಾಡುವ ಪ ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ ಅ.ಪ ಜಾರನೆಂದು ಸಣ್ಣಮಾತನಾಡಿದ್ದಾಯಿತು ಚೋರನೆಂದು ಬಹಳ ದೂರು ಮಾಡಿದ್ದಾಯಿತು ಮೂರು ನಿಮಿಷ ಅವನ ಮರೆಯಲಾಗದಾಯಿತು ಬೀರುತಿರುವ ಮೋಹಜಾಲ ಸಡಲದಾಯಿತು 1 ಯಾವನೀತನೆಂದು ಚಿಂತೆ ಮಾಡಿದ್ದಾಯಿತು ಗೋವಳನಿವನಲ್ಲವೆಂದು ನಿರ್ಧರಾಯಿತು ಯಾವನಾದರೇನು ಇವನ ಕ್ಷಣವು ಕಾಣದೆ ಜೀವನ ಕಳೆಯುವುದೆ ದೊಡ್ಡ ಭಾರವಾಯಿತು 2 ಮಂದಹಾಸದಿಂದ ಸಕಲ ಜಗವ ಬೆಳಗುವ ಚಂದ್ರನು ತಾನಿವನ ನೋಡಿ ಬಹಳ ನಾಚುವ ಸಾಂದ್ರವಾಯಿತಂತರಿಕ್ಷ ಮಧುರ ನಾದದಿ ಮಲಯ ಮಾರುತ ತಾ ತಲೆಯನಾಡುವ 3 ನಾದದ ಸುಧೆ ಸಾಗರದಲಿ ತೇಲುವಂತಿದೆ ಮಾಧವ ತಾ ಸುಧೆಯ ರಸವನೆರಚುವಂತಿದೆ ಬಾಧಿಸುತಿಹ ಭವದ ತಾಪವಡಗಿದಂತಿದೆ ಮಾದರಿಫಲ ರಾಸಕ್ರೀಡೆ ತೋರುವಂತಿದೆ 4 ಸಕಲ ಲೋಕನಾಥನೀತನೆಂದು ತಿಳಿಯಿತು ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು ಲಕುಮಿ ಮುರುಳಿ ರೂಪದಲ್ಲಿ ಇಹುದು ಹೊಳೆಯಿತು ಭಕುತಿ ಹರಿದು ಎನ್ನ ವiನ ಪ್ರಸನ್ನವಾಯಿತು 5
--------------
ವಿದ್ಯಾಪ್ರಸನ್ನತೀರ್ಥರು
ಬೆಂಕಿಗಿರುವೆಗಳ ಕಾಟುಂಟೇ ಹರಿ ಭವ ಭಯಮುಂಟೆ ಪ ಪಂಕಜಸಖನಿಗೆ ಕತ್ತಲಂಜಿಕೆಯುಂಟೆ ಪಂಕಜಾಕ್ಷನ ಧ್ಯಾನಕ್ಕೆಣೆಯುಂಟೆ ಅ.ಪ ವಜ್ರಾಯುಧಕೆ ಗಿರಿ ಉಳಿಯಲುಂಟೆ ಗಂಗೆ ಮಜ್ಜನದಿಂ ಮೈಲಿಗೆಯಿರುಲುಂಟೆ ಸಜ್ಜನರಿಂಗೂಡಿ ನಿರ್ಜರೇಶನ ಭಜ ನ್ಹೆಜ್ಜೆಜ್ಜ್ಹಿಗಿರೆ ಜನ್ಮ ಬರಲುಂಟೆ 1 ಮೌನಧಾರಿಗೆ ಅಭಿಮಾನ ಉಂಟೆ ನಿಜ ಧ್ಯಾನಿಕರಿಗೆ ಹೀನ ಬವಣೆಯುಂಟೆ ಜ್ಞಾನದೊಳೊಡಗೂಡಿ ಗಾನಲೋಲನ ಪಾದ ಆನಂದಕರಿಗಿಹ್ಯಸ್ಮರಣುಂಟೆ 2 ತಾಮಸ್ಹೋಗಲು ಕ್ಷೇಮ ಬೇರುಂಟೆ ದು ಷ್ಕಾಮಿ ತಳೆಯಲು ಮುಕ್ತಿದೂರುಂಟೆ ಭೂಮಿಗಧಿಕ ನಮ್ಮ ಸ್ವಾಮಿ ಶ್ರೀರಾಮನ ಪ್ರೇಮಪಡೆದ ಮೇಲೆ ಬಂಧ ಉಂಟೆ 3
--------------
ರಾಮದಾಸರು
ಭಾರತೀಶ ಹರಿದಾಸನಾದನಿಲ್ಲೀ ವೀಣೆಯ ಧರಿಸುತಲೀ ಪ. ಭಾರಿಭಾರಿಗವತಾರ ಮಾಡಿ ಬಳಲೀ ಆನಂದದಲ್ಲೀ ಅ.ಪ. ತ್ರೇತೆಯಲ್ಲಿ ಶ್ರೀ ರಾಮದೂತನಾಗಿ ತನುಸುಖವ ನೀಗಿ ಪ್ರೀತಿ ಭಕ್ತಿಯಲಿ ರಾಮ ಕಾರ್ಯಕಾಗಿ ತನುವಪ್ಪಿಸಿ ಬಾಗಿ ಖ್ಯಾತಿ ಪಡೆದು ಶರಧಿಯ ಲಂಘಿಸಿ ಪೋಗಿ ಸೀತೆಯ ಕಂಡೆರಗಿ ವೀಹೋತ್ರಗೆ ಪುರವಪ್ಪಿಸಿ ತಿರುಗೀ ರಾಮರ ಕಂಡೆರಗಿ 1 ಕುಂತಿಯ ಜಠರದಿ ಜನಿಸಿ ಭೀಮನೆನಿಸೀ ಬಕಮುಖರನೆ ಜೈಸಿ ಸಂತೋಷದಿ ಸೌಗಂಧ ಸತಿಗೆ ಸಲಿಸೀ ಕೌರವರ ಸಂಹರಿಸೀ ಅಂತರಂಗದಲಿ ಕೃಷ್ಣನಂಘ್ರಿ ಭಜಿಸಿ ಪಾಂಡವರನೆ ಮೆರಸೀ ಕಂತುಪಿತನ ಕಡುಕೃಪೆಯ ಪಡೆದು ಸುಖಿಸೀ ಮೇಲ್ತೋರದೆ ಸ್ಮರಿಸೀ 2 ಮೂರನೆ ರೂಪದಿ ಮುನಿಯಾಗವತರಿಸೀ ದುರ್ಮತಗಳ ಜೈಸೀ ಸಾರತತ್ವಮತ ಸಜ್ಜನರಿಗೆ ತಿಳಿಸೀ ಸರ್ವೋತ್ತಮ ಹರಿ ಎನಿಸೀ ಆರು ಅರಿಯದಂತೆ ದಾಸತ್ವವಚರಿಸೀ ದುರ್ಮತಗಳ ಜೈಸೀ ತೋರಿ ತೋರದಂತೆ ಸದ್ಗ್ರಂಥದಿ ತಿಳಿಸೀ ಯತಿ ಕುಲಜರೋಳ್ ನಿಲಿಸೀ 3 ಮೀಸಲ ದಾಸ್ಯವ ಮೂರವತಾರದಲ್ಲಿ ಚರಿಸಲು ಕಲಿಯಲ್ಲೀ ವ್ಯಾಸ ಮುನಿಯು ಬಹಿರಂಗಪಡಿಸೆ ಚಲ್ಲೀ ನಾರದ ಮುನಿಯಲ್ಲೀ ಪುರಂದರ ಗುರುವೆನಿಸುತಲೀ ಮೆರೆಯಲು ಜಗದಲ್ಲೀ ಮೀಸಲು ಉಳಿಯದೆ ಪೋಯಿತೆಂದು ಇಲ್ಲೀ ದಾಸ ತಾನಾಗುತಲೀ 4 ದಾಸತನದ ಆನಂದವನನುಭವಿಸೇ ದೇವತೆಗಳು ಬಯಸೇ ಭೂಸುರ ಜನ್ಮದಿ ಭೂಮಿಯಲವತರಿಸೇ ಹರಿದಾಸರಾಗಿ ಸುಖಿಸೇ ವಾಸುದೇವಗೆ ತಾ ನಿಜದಾಸನು ಎನಿಸೇ ಮಾರುತಿ ಇದ ಬಯಸೇ ಶ್ರೀಶ ಗೋಪಾಲಕೃಷ್ಣವಿಠಲದಾಸಾ ಬೆಳಗಾವಿ ವಾಸಾ 5
--------------
ಅಂಬಾಬಾಯಿ
ಮಳೆಯ ದಯಮಾಡೊ ರಂಗಯ್ಯ ನಿಮ್ಮ ಕರುಣ ತಪ್ಪಿದರೆ ಉಳಿಯದೀ ಲೋಕ ಪ. ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ ಹಸಿದು ಬಾಯಾರಿ ಬತ್ತಿದ ಕೆÀರೆಗೆ ಬಂದು ತೃಷೆಯಡಗದೆ ತಲ್ಲಣಿಸಿ ಮೂರ್ಛೆಗೊಂಡು ದೆಸೆದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ 1 ಧಗೆಯಾಗಿ ದ್ರವಗುಂದಿ ಇರುವ ಬಾವಿಯ ನೀರ ಮೊಗೆ ಮೊಗೆದು ಪಾತ್ರೆಯಲಿ ನಾರಿಯರು ಹಗಲೆಲ್ಲ ತರುತಿಹರು ಯೋಚನೆಯ ಮಾಡುತ್ತ ಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ2 ಸಂದು ಹೋದವು ಜ್ಯೇಷ್ಠ ಆಷಾಢ ಶ್ರಾವಣ ಬಂದಿದೆ ಭಾದ್ರಪದ ಮಾಸವೀಗ ಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೊ ಸಂದೇಹವಿನ್ಯಾಕೆ ಹೆಳವನಕಟ್ಟೆಯ ರಂಗ3
--------------
ಹೆಳವನಕಟ್ಟೆ ಗಿರಿಯಮ್ಮ
ಮಾಧವನ ಚರಣಾರವಿಂದೆ ಪಾದೆ ಪ ಎದ್ದೋಡಿ ತಿರುಗಿ ನೋಡದೆ ಹೋಹವು ಸದ್ಬಕ್ತಿಯಿಂದ ನಿನ್ನನು ನೋಡಬೇಕೆನುತ ಉದ್ಯುಕ್ತವಾಗೆ ಬ್ರಹ್ಮಹತ್ಯ ಪರಿಹಾರವೊ 1 ಬಂದು ಹರುಷದಲಿ ಕಣ್ಣಲಿ ಕಂಡು ಶಿರವಾಗಿ ವಂದನೆಯ ಮಾಡಿ ಸಾಷ್ಟಾಂಗೆರಗಲೂ ದುರಿತ ರಾಸಿಗಳೆಲ್ಲ ಒಂದು ಉಳಿಯದಂತೆ ಬೆಂದು ಹೋಹವು 2 ಅತಿವೇಗದಿಂದ ಬಂದು ಸ್ನಾನವನು ಮಾಡಲು ಮತಿವಂತರನ ಮಾಡಿ ದುರ್ಮಾರ್ಗ ಬಿಡಿಸಿ ಸಿರಿ ವಿಜಯವಿಠ್ಠಲನ್ನ ಸ್ತುತಿಸಿ ಗತಿ ಪಡೆವಂತೆ ಧನ್ಯರನು ಮಾಡುವ ತಾಯಿ3
--------------
ವಿಜಯದಾಸ
ಮಾಯಾ ಪ ನರದೇಹ ಎಂಬುದು ಎಂಥಾ ಮರವುನೀನೇ ಬ್ರಹ್ಮಾಂತ ತೋರಿದಿ ಅರಿವು 1 ತತ್ತ್ವಮಸಿ ಮಹಾವಾಕ್ಯ ಕೇಳಿ ಹಾರಿ ಹೋಯಿತು ದ್ವೈತದ ಧೂಳಿ 2 ಮುತ್ತು ಮಾಣಿಕ ಪೆಸರಾಯಿತು ಲೋಪತುಂಬಿ ಉಳಿಯಿತು ಚಿದಾನಂದ ಸ್ವರೂಪ 3
--------------
ಚಿದಾನಂದ ಅವಧೂತರು
ಯೆಂದು ಪಿಡಿಯುವಿ ಕೈಯ್ಯ ಇಂದಿರೇಶ ಚಲುವ ಕೃಷ್ಣನೆ ಪ ಮುಂದೆ ಹೋಗಲು ಬಂಧಮಾಡುತ ಕುಂದು ಅಳಿಯುತ ತಂದೆ ದಯೆತೊರಿ ಅ.ಪ ಮಂದ ನಾನಯ್ಯ ಕಂದಿ ಕುಂದಿದೆ ಭವದಿ ಕೇಳಯ್ಯ ಬಂಧು ಬಳಗವು ಯಾರು ಇಲ್ಲಯ್ಯ ನಿಂದು ಮುಂದಿನ ದಾರಿ ನಡೆಸಯ್ಯ ಜೀಯಾ ಅಂದು ಸಭೆಯೊಳು ಮಂದಗಮನೆಯ ಒಂದು ನೊಡದೆ ಬಂದು ಸಲಹಿದ ಸಿಂಧು ಶಯನಾನಂದ ಮೂರುತಿ ನಂದನಂದನ ಶ್ಯಾಮಸುಂದರ ಬಂಧು ಸರ್ವರ ಬಂಧಮೋಚಕ ಮಂದರಾದ್ರಿ ಧರನೆ ಯದುಕುಲ ಚಂದ್ರ ಶೋಭಾಸಾಂದ್ರ ಕೃಷ್ಣನೆ ಬಂದು ಚಂದದಿ ಸಲಹಿ ಎನ್ನನು 1 ಬಾಲತನದಲ್ಲಿ ಲೀಲೆಗೋಷ್ಠಿಲಿ ಮೆರೆದೆ ನಾನಲ್ಲಿ ಮೇಲೆ ಯೌವನ ಒಡನೆ ಬಂತಲ್ಲಿ ಲಲನೆ ಕೇಳಿಲಿ ಮುಳುಗಿ ಹೋದೆನು ಅಲ್ಲಿ ಮೆಲ್ಲಮೆಲ್ಲನೆ ಮುಪ್ಪು ಬಂತಲ್ಲಿ ಕಾಲಕಳೆದೆನು ಪಗಡೆ ಜೂಜಿನಲಿ ಮಲ್ಲಮರ್ದನ ಮಾತುಲಾಂತಕ ಚಲ್ವಸೂಕರ ಪುಲ್ಲಲೊಚನ ಪುಲ್ಲನಾಭನೆನಲ್ಲ ಸರ್ವರ ಬಿಂಬರೂಪನೆ ಎಲ್ಲ ಕಾಲದಿ ಎಲ್ಲಮಾಡುತ ನಿಲ್ಲದೆಜಗ ಸಾರ ಶ್ರೀ ನಲ್ಲ ನಿನ್ನಯ ಎಲ್ಲ ಬಲ್ಲವರಿಲ್ಲ ಎಲ್ಲಿಯೂ ಬುದ್ಧ ಕಲ್ಕಿಯೆ ಸೊಲ್ಲು ಲಾಲಿಸಿ ಒಲಿದು ಬಂದ ನಾರಸಿಂಹನೆ ಇಲ್ಲ ಸಮರು ಅಧಿಕರೈಯ್ಯ ಪೂರ್ಣದೇವನೆ2 ಮೂರು ತಾಪವ ಹರಿಪ ಬಗೆಯೇನೋ ವೈರಿ ಆರರ ಭರದಿ ತರಿ ನೀನೂ ಮೂರು ಋಣಗಳು ಉಳಿಯೆಗತಿಯೇನು ಮೂರು ಕರ್ಮದಿ ಬಿಡಿಸಿ ಹೊರೆಯನ್ನು ಭಕ್ತಸುರಧೇನು ಸಾರಸಜ್ಜನ ಪ್ರಾಪ್ಯ ಶುಭಗುಣ ಸಾರ ಕರುಣಾ ಪೂರ್ಣವಾರಿಧಿ ಮಾರಜನಕನೇ ಋಷಭಮಹಿದಾಸ ತೋರು ಜ್ಞಾನವ ಬಾದರಾಯಣ ಮೀರಲಾರೆನು ವಿಷಯವಾಸನೆ ಭಾರತೀಶನ ಒಡೆಯ ಕೃಷ್ಣನೆ ಭಾರ ನಿನ್ನದು ಎನ್ನ ಪೊರೆವದು ಮತ್ಸ್ಯ ವಾಮನ ಧೀರ ಧೃವನಾ ಪೊರೆದ ವರದನೆ ಬೀರಿ ಭಕ್ತಿ ಜ್ಞಾನ ವೈರಾಗ್ಯ 3 ಎನ್ನ ಯೋಗ್ಯತೆ ನೋಡಿ ಫಲವೇನು ನಿನ್ನ ಘನತೆ ತೋರಿ ಪೊರೆ ನೀನು ನಿನ್ನ ದಾಸನ ಮಾಡು ಎನ್ನನ್ನು ಅನ್ಯಹಾದಿಯ ಕಾಣೆ ನಾ ನಿನ್ನು ಬೆನ್ನು ಬಿದ್ದೆನು ಇನ್ನೂಮುನ್ನೂ ಮಾಧವ ವಿಶ್ವ ತೈಜಸ ಪ್ರಾಜ್ಞತುರಿಯ ಹಂಸ ವಿಷ್ಣುವೇ ಜ್ಞಾನ ಭೋಧಕ ಸನತ್ಕುಮಾರನೇ ಮೌನಿ ದತ್ತಾತ್ರೇಯ ಹಯಮುಖ ದೀನವತ್ಸಲ ಯಜ್ಞ ಧನ್ವಂತ್ರಿ ಶ್ರೀನಿವಾಸ ರಾಮ ಕಪಿಲನೆ ಜ್ಞಾನ ನಿಧಿ ಮುನಿ ನಾರಾಯಣನೆ ನೀನೆ ಅನಿರುದ್ಧಾದಿ ರೂಪನು ಧ್ಯಾನಗೊಚರ ಶಿಂಶುಮಾರನೆ ಸಾನುಕೂಲದಿ ನೀನೆ ವಲಿಯುತ ಕರ್ಮ ಸಂಚಯ4 ಆದಪೊದ ಮಾತು ಏಕ್ಕಯ್ಯ ಮಧ್ವರಾಯರ ಪ್ರೀಯ ಶೃತಿಗೇಯ ಮೋದದಾಯಕ ಮುಂದೆ ಸಲಹೈಯ್ಯ ಪಾದಪದ್ಮದಿ ಶರಣು ಅಲ್ಲದೆ ಏನು ಮಾಡಲಿ ಜೀಯ ಅಯ್ಯ ತಿದ್ದಿ ಮನವನು ಕದ್ದು ಅಘವನು ಒದ್ದು ಲಿಂಗವ ಶುದ್ಧಜ್ಞಾನದ ಸಾಧು ಜಯಮುನಿ ವಾಯುವಂತರ ಮಾಧವ ಶ್ರೀ ಕೃಷ್ಣವಿಠಲನೆ ಪಾದ ಮಧುಪರ ವೃಂದ ಮಧ್ಯದಿ ವೇದ ಸಮ್ಮತ ಗಾನ ಸುಧೆಯನು ಶುದ್ಧಭಕ್ತಿ ಜ್ಞಾನದೊಡಗೂಡಿ ಮೆದ್ದು ಪಾಡುತ ಕುಣಿವ ಭಾಗ್ಯವ ಮುದ್ದು ಕೃಷ್ಣನೆ ನೀನೆ ಎನಗಿತ್ತು 5
--------------
ಕೃಷ್ಣವಿಠಲದಾಸರು
ಯೋಗಿ ನಿತ್ಯಾನಂದ ಭೋಗಿನಾದದಿ ಮಲಗ್ಯಾನೆ ಯೋಗಿನಾದಂ ಝಣಂ ಝಣನಾದಂ ಭಿಣಿಂಭಿಣಿನಾದಸಲೆಯ ವೀಣಾನಾದವ ಕೇಳುತ ಪ ಈಷಣತ್ರಯ ಪಾಪಾತ್ಮರಿರಾ ಎಬ್ಬಿಸಲು ಬ್ಯಾಡಿವಾಸನವೆಂಬ ಆಷ್ಟಕರ್ಮಿಗಳೇ ಒದರ ಬ್ಯಾಡಿಪಾಶವ ಹರಿವುತ ಪಂಚಕ್ಲೇಶದಈಸು ಉಳಿಯದಂತೆ ತರಿದಾಯಾಸದಿ 1 ಅಂತರ ಎಂಬ ಘಾತಕರಿರಾ ಅತ್ತ ಹೋಗಲು ಬ್ಯಾಡಿಭ್ರಾಂತುಯಂದೆಂಬ ಬ್ರಷ್ಟರಿರ ಜಗಳಾಡಲಿ ಬ್ಯಾಡಿಅಂತರಿಸದೆ ಆರು ಶತ್ರುವ ಛೇದಿಸಿಅಂತಿಂತೆನ್ನದೆ ಆಯಾಸದಿಂದಲಿ 2 ಸಂಕಲ್ಪವೆಂಬೋ ಖೋಡಿಗಳಿರಾ ಸದ್ದು ಮಾಡಲಿ ಬ್ಯಾಡಿಮಂಕು ಎಂದೆಂಬ ಮಾಂದ್ಯಗಳಿರ ಮುಂದಕ್ಕಡ್ಡಾಡಬೇಡಿಬಿಂಕದಹಂಕಾರ ಬೇರ ಕಿತ್ತುಓಂಕಾರ ಚಿದಾನಂದ ವಸ್ತು ಆಯಾಸದಿ 3
--------------
ಚಿದಾನಂದ ಅವಧೂತರು
ರಂಗ ಬಾರೋ ರಂಗಯ್ಯ ಬಾರೋ - ನೀ ಪ ಬಾರದಿದ್ದರೆ ಎನ್ನ ಪ್ರಾಣ ಉಳಿಯದು ಅ ಅತ್ತಿಗೆ ಮೈದುನ ಬಾರೊ ಅತ್ತೆಯ ಮಗಳ ಗಂಡಅತ್ತಿಗೆ ಮೇಲತ್ತಿಗೆ ನಾದಿನಿ ಸೊಸೆಯ ಗಂಡ1 ಮಾವನ ಅಳಿಯನೆ ಬಾರೊ ಮಾವನ ಬೀಗನ ತನುಜಮಾವನ ಮಡದಿಯ ಮಗಳ ತಂಗಿಯ ಗಂಡ 2 ಅಂಬುಧಿ ಶಯನನೆ ಬಾರೊ ಆದಿ ವಸ್ತುವೆ ರಂಗಕಂಬದೊಳು ನೆಲಸಿದ ಆದಿಕೇಶವರಾಯ 3
--------------
ಕನಕದಾಸ