ಒಟ್ಟು 33 ಕಡೆಗಳಲ್ಲಿ , 4 ದಾಸರು , 30 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಲ್ಲಿದನಲ್ಲೇನು ಶ್ರೀಹರಿ ಬಲ್ಲಿದನಲ್ಲೇನು ಪ ಬಲ್ಲಿದನಲ್ಲೇನು ಖುಲ್ಲಮನವೆ ತಿಳಿ ಎಲ್ಲ ಲೋಕಗಳ ನಲ್ಲನಾಗಿಹ್ಯನೀತ ಅ.ಪ ಕಡುದಯದಿಂದಿನ್ನು ಪಿಡಿದು ಬಿಡದೆ ಪಾಂಡವರನ್ನು ಪೊಡವಿನೆಲ್ಲ ಒಂದೆ ಕೊಡೆಯಿಂದಾಳಿಸಿದ ಎಡರು ತಾರದಂತೆ ಒಡೆಯ ಮುಕ್ಕುಂದನೀತ 1 ಧೂರ್ತ ಹಿರಣ್ಯಕನ ಕರದಿಂ ಭಕ್ತ ಪ್ರಹ್ಲಾದನ್ನ ಸ್ವಸ್ಥದಿಂದ ದಯವಿತ್ತು ಕಾಯ್ದನಿಗೆ ದಾರು ಸರಿ ಅರ್ತುನೋಡಲೀತ 2 ಉರಿಹಸ್ತ ಪಡೆದವನ ಕ್ಷಣದಿಂ ಉರುವಿದ ಮಾರಮಣ ಭರದಿಂ ತ್ರಿಪುರರ ಹರಿದಿಯರ್ವ್ರತ ಕೆಡಿಸ್ಹರನ ಮೊರೆಯ ಕೇಳಿ ಸುರರ ಸಲಹಿದೀತ 3 ಮೀರಿದ ಅಸುರರನು ತರಿದು ಸಾರುವ ಬಿರುದನ್ನು ಅ ಪಾರ ಶೂರ ದನುಜಾರಿ ಭಕ್ತ ಸಹಕಾರಿ ಶೌರಿ ನಿಜ ಮೂರು ಜಗದಿ ಈತ 4 ಜಡಮತಿ ಮಾನವರ ನುಡಿಗಳು ದೃಢಲ್ಲೆಲೊ ಪೂರ ಪೊಡವಿಗಧೀಶ ನಮ್ಮ ಒಡೆಯ ಶ್ರೀರಾಮನಡಿ ದೃಢದಿ ನಂಬು ಭವತೊಡರ ಕಡಿವನೀತ 5
--------------
ರಾಮದಾಸರು
ಬೂಟಾಟಿಗನು ನಾನು ಸತ್ಯಮಾಯ ಝಾಟ ನಾಟಕವಾಡಿ ದಾಟಿ ಬೈಲಿಗೆ ನಿಂತ ಪ ಮಿಥ್ಯ ಪ್ರಪಂಚ ಮರೆದು ಅರ್ತು ನಿತ್ಯಸುಖದಿ ಮನ ಬೆರೆದು ಅರ್ತುಅರಿಯದೆ ಮತ್ರ್ಯದೊರ್ತನದೊಳಗಿರ್ದು ಗುರ್ತಿಟ್ಟು ಪರಲೋಕ ಸುರ್ತುಮಾಡಿಕೊಂಡ 1 ಸಾಧುವರ್ತನದ್ಹಾದಿ ತಿಳಿದು ನಿಜ ಶೋಧಿಸಿ ಕಾಲನ ಬಾಧೆ ಗೆಲಿದು ವಾದಿಮೂರ್ಖರ ಕೂಡಿ ವಾದಿಸದನುದಿನ ಸಾಧಿಸಿ ಪರಸುಖಸ್ವಾದ ಸವಿಯುವಂಥ2 ಕಾಮಕ್ರೋಧಾದಿಗಳಳಿದು ಮಹ ಪ್ರೇಮ ಮೋಹಂಗಳ ತುಳಿದು ಸ್ವಾಮಿ ಶ್ರೀರಾಮನ ಪ್ರೇಮ ಪಡೆದು ಮುಕ್ತಿ ಸಾಮ್ರಾಜ್ಯಸುಖ ಸಂಪಾದಿಸಿಕೊಂಡಂಥ 3
--------------
ರಾಮದಾಸರು
ಬೇಡಿಕೋತೆ ಕೇಳಿ ನೋಡಿ ನಿಜಬಾಳಿ ಗೂಢಗುರುತವ ಮನಗಂಡು ನೆಲೆಗೊಳ್ಳಿ 1 ಒಂದಕೊಂದು ಮಾಡಿ ಒಂದು ಪಥಗೂಡಿ ಹಿಂದ ಮುಂದೆ ನೋಡುವ ಸಂದೇಹವೀಡಾಡಿ 2 ಅರ್ತುಕೊಳ್ಳಿ ಖೂನ ತ್ವರಿತ ಗುರುಜ್ಞಾನ ಕರ್ತು ಮಹಿಪತಿಸ್ವಾಮಿದೋರುವ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳಾರತಿ ಮಾಡಿ ಭಾವದಿಂದ ಮಂಗಳ ಮಹಿಮನಾದ ದೇವಾದಿ ಶ್ರೀದೇವಗೆ ಧ್ರುವ ನೋಡಿರೋ ಬ್ರಹ್ಮಾನಂದ 1 ಕಂಗಳದೆರೆದು ನೋಡಿ ಮಂಗಳಾರತಿ ಪಾಡಿ 2 ಆರ್ತ ಭಾವದಾರತಿ ಅರ್ತು ಮಾಡಿ ನಿತ್ಯಪ್ರತಿ 3 ಸೇವೆ ಇದೆ ಬಲು ಸುಖ ಪಾವನೆಗೈಸುವ ಕೌತುಕ 4 ದೀನ ಮಹಿಪತಿ ಸ್ವಾಮಿ ಭಾನುಕೋಟಿ ತೇಜಗಿನ್ನು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವ್ಯರ್ಥ ನುಡಿವುದೇನು | ಅರ್ತು ಕೊಂಡಿರು ನೀ ಪ್ರಾಣಿ ಪ ಮುಕ್ತಿ ಮಾರ್ಗರಿಯದೇ ಬ್ರಹ್ಮ ನಾನೆಂದು | ಭಕ್ತಿ ಬಿಡುದು ಕುಂದು 1 ಕೂಲಿ ಮಾಡುತ ತಾ ಅರಸನೆಂದರ | ಇಳೆಯೊಳೆಲ್ಲರು ನಗರೇ ಪ್ರಾಣಿ 2 ಈಸಲರಿಯದವ ತೆಪ್ಪ ಬಿಡಲು | ಘಾಸಿಯಾಗನೇ ಹೇಳು ಪ್ರಾಣಿ 3 ಹೆಚ್ಚು ಕುಂದಿನ ಬಡಿವಾರಗಳಿಲ್ಲ | ಇಚ್ಚೆಯಗಳವಿಲ್ಲಾ ಪ್ರಾಣಿ 4 ಮಹಿಪತಿ ಸ್ವಾಮಿಯ ಕಂಡಿರು ಹೀಂಗ ಸಿಹಿಗಂಡ ಮೂಕನ್ಹಾಂಗ ಪ್ರಾಣಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವ್ಯರ್ಥವಲ್ಲವೇ ಜನ್ಮವ್ಯರ್ಥವಲ್ಲವೆ ಪಾದ ಅರ್ತು ಬೆರೆಯದವನ ಜನ್ಮ ಧ್ರುವ ಇಡಾ ಪಿಂಗಳೆರಡು ಥಡಿಯ ಮಧ್ಯಸುಷಮ್ನದಲಿ ಗುಪ್ತವಾಹಿನಿಯ ಸುಸ್ನಾನ ಮಾಡದವನ1 ಪಿಂಡ ಬ್ರಹ್ಮಾಂಡ ಭ್ರೂಮಧ್ಯ ತ್ರಿವೇಣೀಕ್ಷೇತ್ರ ಪುಣ್ಯಸಂಗಮದ ತೀರ್ಥಯಾತ್ರೆ ಮಾಡದವನ ಜನ್ಮ 2 ಆರು ಸೋಪಾನವೇರಿ ಮೂರು ಗೋಪುರವ ದಾಟಿ ಮೂರ್ತಿ ನೋಡದವನ ಜನ್ಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶರಣು ಶರಣುರಾಯಾ | ಸರಸಿ-ಜಾಲಯ ಪ್ರೀಯಾ | ಶರಣು ಪಾವನಕಾಯಾ | ಸಲಹುನಮ್ಮಾ ಪ ಸ್ತುತಿಯ ಮಾಡಲರಿಯೇ | ಯತಿ ಛಲಗುಣ ವರಿಯೇ | ಪಾವನ ದೇವ ದಯಾನಿಧಿಯೇ 1 ಶಿರಿವಧು ರಮಣನಾ ಚರಿತವ ಪೇಳುವೆ | ಕರುಣದಿ ಶ್ರೀಹರಿ ನುಡಿಸಿದಂತೆ | ಕೇಳಿ | ಧರಿಯೊಳು ಭಾಗವತರು ಯಲ್ಲಾ 2 ಬನ್ನಿ ಸಾತ್ವಿಕ ಗುಣ ಸಂಪನ್ನ ಮುತ್ತೈದೇರು | ಅನ್ಯ ಭಾವನೆಗಳಿಗೆ ತೊಡಕದೇ | ಯನುತಲಿ | ಉನ್ನತ ಸಂಭ್ರಮದಿ ನೆರೆದರು 3 ದಿವ್ಯಾಂಬರವನುಟ್ಟು ದಿವ್ಯಾಭರಣನಿಟ್ಟು | ದಿವ್ಯಾಕೃತಿಯಲಿ ವಪ್ಪುತಿಹಾ | ಮುನಿ | ಮದನ ಲಾವಣ್ಯನು 4 ಅನಾದಿ ಮಹಿಮ ಮೋಹನನಾದ ಕೃಷ್ಣನು | ಜ್ಞಾನಾಂಗನೇ ರುಕ್ಮಣಿ ವಧುವಿನಾ | ಈರ್ವರಾ | ಅನುಭವ ದೂಟಣಿಯನ್ನು ಮಾಡಲಾರಿ 5 ಸಡಗರದಿಂದಾ ಹೃದಯಾ ಪೊಡವಿಯೊಳೊಪ್ಪುದಾ | ದೃಢ ವಜ್ರದಿಂದಲಿ ರಚಿಸಿದಾ | ಜಗದಲಿ | ಒಡನೆ ರತಿ ರತ್ನಾಸನ ಹಾಕಿ 6 ಮ್ಯಾಲ ಭಾವಕಿಯರು ಮೂಲೋಕವಂದ್ಯರಾ | ಲೋಲವಧು ವರರನು ಕುಳ್ಳಿರಿಸಿ | ಹರುಷದಿ | ಮೇಲೆನಿಸಿ ಊಟಣಿಯ ಮಾಡಿಸಲು 7 ಶುದ್ಧ ಮತಿವಂತಿಯರು ಅಧ್ಯಕ್ಷರತರಾಗಿ | ಸಿರಿ | ಮುದ್ದು ಶ್ರೀ ಕೃಷ್ಣನು ವಲಿವಂತೇ 8 ನಾನಾ ಗಂಟಗಳುಳ್ಳಾ ಕಠಿಣವಾದಾ ಅಭಿ | ಮಾನ ಅರಿಷಿಣವನು ಸಣ್ಣ ಮಾಡೀ | ಈಗಾ | ಏನುಳಿಯದ್ಹಾಂಗ ವಿವೇಕದಿಂದ 9 ಹಮ್ಮಿನರಿಷಿಣವನು ಸಮ್ಯಜ್ಞಾನದ ಕದಿ | ಕಮ್ಯ ದೋರುವಂತೆ ಕಲಿಸುತಾ | ಶ್ರೀವರ | ಬ್ರಹ್ಮನ ಪಾಪಕ ಅರ್ಪಿಸಿದರು 10 ತ್ವರಿತ ಲಕ್ಷ್ಮೀ ಕಾಲಾ ಪರವಾ ವಪ್ಪಿಲೆ ಹಚ್ಚಿ | ಭರದಿಂದಾಕ್ಷಣ ಕ್ಷಣಕ ರುಕ್ಮಣಿ ಯಾಮುಖದಿಂದ | ಹರಿಯಾ ನಾಮಗಳನು ನುಡಿಸುತಾ 11 ಭಾವನಿಂದ ರಂಜಿಸುವ ಕುಂಕುಮ ಮ್ಯಾಲೆ | ಆ ವಿಮಲ ಮುಕ್ತಿಯ ಶೇಶೇ ನಿಟ್ಟು ಧ್ಯಾನಾ | ಲೇವಿಗಂಧವಾ ಲೇಪಿಸಿದರು 12 ಪರಿಮಳ ಸುವಾಸನೆಯ ಬೇರದ ಸುಮನ ಸರವಾ | ಕೊರಳಿಗೆ ಹಾಕಿದೆ ಪರಿಯಿಂದಾ ಕೃಷ್ಣನಾ | ಕರದಿ ನೇಮಿಸಿದರು ರುಕ್ಮಣಿಗೆ 13 ಆರ್ತ ಜಿಜ್ಞಾಸನು ಧನಾರ್ಥಿಯು ಬೈಲಿ ಘಳಿಗೆ | ಅರ್ತು ಮುಖದಲಿ ಕೊಟ್ಟು ಬಿಸುಡಿದರು ಬುಧರು | ನಿರ್ತದಿಂದಲಿ ನೋಡಿ ಇಬ್ಬರಿಂದ 14 ಮಗುಳೆ ಸಂಕಲ್ಪಾದಾ ಬಗೆದಾ ಕುಪ್ಪಸಿನ | ಬಿಗಿ ಬಿಗಿದು ಕಟ್ಟಿದಾ ಗಂಟವನು ಒಂದೇ | ಜಗದೀಶನಾ ಕೈಯಿಂದ ಬಿಡಿಸಿದರು 15 ಹರಿಯಾ ತೊಡೆಯ ಮ್ಯಾಲ ನಿಂದಿರಿಸಿ ರುಕ್ಮಿಣಿಯನು | ಕರದಿ ಶಾಂತಿ ಅಂಬಿ ಬಿಂಬಿಸಿದರು | ನೋಡಿ | ಧರಿಯೊಳಾನಂದವ ತೋರುವಂತೆ 16 ತನುವಿನಾರತಿಯೊಳು ಘನದೆಚ್ಚರ ದೀಪದಿ | ಮನದಿಂದಾ ಜಯಾ ಜಯಾವೆಂದೂ ಬೆಳಗೀ | ಮರಹು | ಅನುವಾಗಿ ತಾವು ನಿವಾಳಿಸಿದರು 17 ಮರೆವಾ ಪ್ರಕೃತಿ ಪುರುಷರ ಶರಗಂಗಳಾ ಯರಡಾ | ಭರದಿಂದ ಕಟ್ಟಿ ಸುವೃತ್ತಿಂದಾ | ಬಳಿಕಾ | ತ್ವರಿತ ನಿಜ ಮಂದಿರವ ಸಾರಿದರು 18 ಇಂತಿ ಪರಿಯಾಗಿಹ ಅಂತರನು ಭವದಾ | ಕಂತುಪಿತ ಲಕ್ಷ್ಮಿಯ ಚರಿತವನು | ನೋಡಿ | ಸಂತತ ಸುಖವನು ಪಡೆದರೆಲ್ಲಾ 19 ಇನಿತು ಸುಖ ಕರವಾದಾ ಅನುಭವ ದೂಟಣಿಯನು | ಅನುವಾಗಿ ನುಡಿಸಿದಾ ಯನ್ನ ಮುಖದೀ | ಈಗಾ | ಘನ ಗುರು ಮಹಿತಪಿ ಸುತ ಸ್ವಾಮಿ 20 ತಂದೆ ತಾಯಿ ಮಿತ್ರ ಬಂಧು ಬಳಗನಾದಿ | ಎಂದೆಂದೂ ಶರಣರ ಸಲಹುವಾ | ದೇವನೇ | ಇಂದೆನ್ನ ನುದ್ಧರಿಸು ದತ್ತಾತ್ರೇಯಾ 21
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣೆನ್ನಿ ಸಾಧುರಿಂಗೆ | ಹರಿ ಮೆಚ್ಚುಪರಮ ಭಾಗವತರಿಂಗೆ ಪ ತೀರ್ಥ ಕ್ಷೇತ್ರಂಗಳಲ್ಲಿ ಮಿಂದು ಘನ | ಯಾತ್ರೆಯನು ಮಾಡಿ ಬರಲಿ | ಧಾತ್ರಿಯಲಿ ಕೆಲವು ದಿನಕೆ ಆ ಪುಣ್ಯ | ವರ್ಥಿ ಬಹುದಯ್ಯ ಜನಕ | ಅರ್ತು ಸದ್ಭಾವದಿಂದ್ಹೋಗಿ ಸಂತರ ಕಂಡ | ಮಾತ್ರದಲಿ ಸರ್ವ ಸುಖ ಇದಿರಿಡುವದೆಂದು 1 ಮೆರೆವ ಭಾಗವತದಲ್ಲಿ ಉದ್ಭವಗೆ | ಹರಿತಾನೆ ಬೋಧಿಸುತಲಿ | ನೆರೆಯೋಗ ಯಾಗ ವೃತವು ಯನ್ನಹಿಡಿ | ಲರಿಯದಿದು ಸಾಂಖ್ಯ ತಪವು | ನಿರುತೆನ್ನ ಸತ್ಸಂಗ ತೋರಿ ಕೊಡುವಂತನ್ಯ | ಧರಿಯೊಳಗ ಸಾಧನಗಳಿಲ್ಲ ಕೇಳೆಂದಾ 2 ಚಲಮೂರ್ತಿ ಸಂತರುಗಳು ನೋಡಲಾ | ಚಲಮೂರ್ತಿ ಪ್ರತಿಮೆಯಗಳು | ನಲಿದವರ ಪೂಜೆಯಿಂದಾ ಪ್ರೀಯನಾಗಿ | ಸಲಹುವನು ಶ್ರೀ ಮುಕುಂದಾ | ತಿಳಿಯ ದೆಂದಿಗೆ ಅಭಾವಿಕ ವರ ಮಹಿಮೆಗಳು | ವಲಿದು ಗುರುಮಹಿಪತಿ ಸುತಗೆಚ್ಚರಿಸಿದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಕಲವೆಲ್ಲವು ಹರಿಸೇವೆ ಎನ್ನಿ ಯಕುತಿವಂತರು ಹರಿಭಕುತಿ ಯೆನ್ನಿ ಧ್ರುವ ಹುಟ್ಟಿ ಬಂದಿಹ್ಯದೆ ವಿಠ್ಠಲನ ಸುಸೇವೆಗೆನ್ನಿ ಸೃಷ್ಟಿಯೊಳಿಹ್ಯದೆ ಶ್ರೀ ವಿಷ್ಣು ಸಹವಾಸವೆನ್ನಿ 1 ಬದುಕಿ ಬಾಳುದೇ ಇದು ಶ್ರೀಧರ ಉದ್ದೇಶವೆನ್ನಿ ಸಾಧನ ಸಂಪತ್ತು ಶ್ರೀ ಮಾಧವನದು ಎನ್ನಿ 2 ಉಂಬುಂತಿಂಬುದೆಲ್ಲ ಅಂಬುಜಾಕ್ಷನ ನೈವೇದ್ಯವೆನ್ನಿ ಕೊಂಬುಕೊಡುವ ಹಂಬಲ ಶ್ರೀ ಹರಿಯದೆನ್ನಿ 3 ಇಡುವ ತೊಡುವದೆಲ್ಲ ಪೊಡವಿಧರನಾಭರಣವೆನ್ನಿ ಉಡುವ ಮುಡಿವದೆಲ್ಲ ಹರಿಯ ಸಡಗರವೆನ್ನಿ 4 ನುಡಿವ ನುಡಿಗಳೇ ಹರಿಬಿಡದೆ ಕೊಂಡಾಡುದೆನ್ನಿ ಬಡುವ ಹರುಷವೆಲ್ಲ ವಸ್ತುದೇ ಎನ್ನಿ 5 ನಡೆವ ನಡಿಗೆಯಿಲ್ಲ ಹರಿಯ ಪ್ರದಕ್ಷಿಣಿ ಎನ್ನಿ ಎಡವಿ ಬೀಳುದು ಹರಿನಮವೆನ್ನಿ 6 ಏಳುವ ಕೂಡುವದೆಲ್ಲ ಹರಿಯ ಊಳಿಗವೆನ್ನಿ ಹೇಳಿ ಕೇಳುದೆಲ್ಲ ಹರಿಪುರಾಣವೆನ್ನಿ 7 ನೋಡುವ ನೋಟಗಳೆಲ್ಲ ಹರಿ ಸುಲಕ್ಷಣವೆನ್ನಿ ಮಾಡುವ ಮಾಟಗಳೆಲ್ಲ ಹರಿಯದೆನ್ನಿ 8 ಮಲಗಿ ನಿದ್ರೆಗೈವದೇ ಹರಿಯ ಕಾಲಿಗೆರಗುದೆನ್ನಿ ಬಲಕ ಎಡಕ ಹೊರಳುದೇ ಲೋಟಾಂಗಣ(?) ವೆನ್ನಿ 9 ವನಿತೇರ ಸಂಗವೇ ತಾ ಹರಿಯ ಲೀಲೆಯು ಎನ್ನಿ ತನುಮನವೆಲ್ಲಾ ಹರಿಸ್ಥಾನವೆ ಎನ್ನಿ 10 ಸತಿಸುತ ಮಿತ್ರರೆಲ್ಲ ಹರಿಸೇವೆ ದೂತರೆನ್ನಿ ಮತ್ತೆ ಬಂಧುಬಳಗೆಲ್ಲ ಹರಿಯದೆನ್ನಿ11 ಸುಖದು:ಖವೆಂಬುದೇ ಶ್ರೀಹರಿಯ ಸಂಕಲ್ಪವೆನ್ನಿ ನಕ್ಕು ನುಡುವುದೆಲ್ಲ ಹರಿ ಆಖರವೆನ್ನಿ 12 ಹೆಣ್ಣು ಹೊನ್ನಾರ್ಜಿತವೆಲ್ಲ ಹರಿಯ ಕಾಣಿಕೆ ಎನ್ನಿ ನಾನೀನೆಂಬುದೆಲ್ಲ ಹರಿಚೇತನವೆನ್ನಿ 13 ಸ್ವಾರ್ಥ ಹಿಡಿವದೆಲ್ಲ ಪಾರ್ಥನ ಸ್ವಾಮಿಗೆ ಎನ್ನಿ ಅರ್ತು ಮರ್ತು ನಡೆವ ಹರಿಕರ್ತೃತ್ವವೆನ್ನಿ 14 ಅಂತ್ರಬಾಹ್ಯವೆಲ್ಲ ಹರಿಗುರು ಮಾತೃಪಿತೃವೆನ್ನಿ ಗುರ್ತುವಾದದ್ದೆಲ್ಲ ತೀರ್ಥಕ್ಷೇತ್ರವೆನ್ನಿ 15 ಲಾಭಾಲಾಭವೆಲ್ಲ ಹರಿಪಾದಕರ್ಪಿತವೆನ್ನಿ ಶುಭಾ ಶುಭವೆಲ್ಲ ಹರಿಶೋಭೆಯು ಎನ್ನಿ 16 ಕನಸು ಮನಸುಗಳೆಲ್ಲ ಹರಿಯ ನೆನೆವ ಸೇವೆನ್ನಿ ಧೇನಿಸಿ ಬಯಸುದೇ ಹರಿಧ್ಯಾನವೆನ್ನಿ 17 ನಿತ್ಯಕರ್ಮವೆಲ್ಲ ಹರಿಪಾದಕ ಸಮರ್ಪಣವೆನ್ನಿ ಸತ್ಯಾಸತ್ಯವೆಲ್ಲ ಹರಿ ಅಗತ್ಯವೆನ್ನಿ 18 ಹೆಜ್ಜೆಗೊಮ್ಮೆ ಬೆಜ್ಜರ್ಹಿಡಿದು ರಾಜೀವನಯನನೆನ್ನಿ ಸಜ್ಜನರೊಡೆಯ ಗಜವರದ ಎನ್ನಿ 19 ಸೋಹ್ಯ ಸೂತ್ರವೆಲ್ಲ ಹರಿಯ ಮಹಾಮಹಿಮೆ ಎನ್ನಿ ಗುಹ್ಯಗೂಢವೆಲ್ಲ ಹರಿಯಗುರುತ ಎನ್ನಿ 20 ಇಹಪವೆಲ್ಲ ಹರಿಸೇವೆಗನುಕೂಲ ವೆನ್ನಿ ಸೋಹ್ಯ ಮಾಡುದೆಲ್ಲ ಹರಿಯ ದಯವೆನ್ನಿ 21 ಸಕಲ ಧರ್ಮಗಳೆಲ್ಲ ಹರಿಯ ಶಿಖಾಮಣಿಯೆನ್ನಿ ಪ್ರಕಟವಾಗಿ ದೋರುದೇ ಪ್ರತ್ಯಕ್ಷವೆನ್ನಿ 22 ನೇಮನಿತ್ಯ ಇದೇ ಮಹಿಪತಿಯ ಸ್ವಾಮಿಯದೆನ್ನಿ ಪ್ರೇಮದಿಂದ ಒಪ್ಪಿಸಿಕೊಂಬ ದಯಾಳುವೆನ್ನಿ 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತ್ಸಂಗ ಮಾಡೊ ಮನವೆ ಚಿತ್ಸುಖ ನೋಡಲಿಕೆ ಅತಿಸೂಕ್ಷ್ಮಾನಂದ ಸುಪಥ ಅತಿಶಯಾನಂದ ಸದ್ಗತಿ ಸುಮೋಕ್ಷದಾಯಕ ಹಿತದೋರಿಕೊಡುವ ಸದ್ಗುರುನಾಥ ಧ್ರುವ ತೊಡಕಿ ಮಿಡುಕಬ್ಯಾಡ ಹಡಕಿ ವಿಷಯದೊಳು ಗಡಕವಾಗಿ ಕೆಡುಕ ಬುದ್ಧಿಯಿಂದ ಕೆಡುದೇನ ಬಡದ ಭವಣೆ ಬಟ್ಟು ತಾವು ಕೊಡುವರೇನ ಹಾಕಿ ವೈವಯಮನ ಬ್ಯಾಗೆ ಗುರುದಯಕರುಣ 1 ಸಿಲ್ಕಿಮಾಯ ಮಲ್ಕಿನೊಳು ಅಳ್ಕಿ ಆಲಪರಿಯಬ್ಯಾಡ ಬಲ್ಕಿ ಮಾಡಿಕೊಳ್ಳಿ ನೀ ಸುಜ್ಞಾನ ಕ್ಷುಲ್ಲಕ ಬುದ್ಧಿಗಾಗಿ ನಿನ್ನ ತನುವಿನೊಳಗೆ ಖೂನ ನುಲ್ಕಿ ಸುಟ್ಟ ಮಲ್ಕಿನಂತೆ ಜನಕಾಲಂಬ ತೋರಿ ನೀನು ಜಲಕಮಲದಂತಿರನುದಿನ ನಿಲ್ಕಿ ನೆಲೆಗೊಂಬುದಿದು ತಳಕು ತನ್ನೊಳಗದೆಯೆಂದು ನಾಲ್ಕುವೇದ ಸಾರುತಿದೆ ಪೂರ್ಣ2 ಮಾನವ ಜನ್ಮ ನಿರ್ತದಿಂದ ಅರ್ತು ಕೂಡಿ ಕರ್ತು ನಿಜಾನಂದ ಗುರುಬೋಧ ಥರಥರದಿ ತೋರಿ ಪೂರ್ಣ ಸಾರ್ಥಕ ಮಾಡುವದಿದು ತೀರ್ಥಪುಣ್ಯ ಸರ್ವಕ್ಷೇತ್ರವಾದ ಅರ್ಥಿಯಿಂದವಿಡಿದು ಗುರು ಪಡಿಯೊ ನಿನ್ನ ಸ್ವಹಿತದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನೆ ಹೊಗಳಿದರ್ಯಾತಕೀತನ ಪರ ಬ್ರಹ್ಮ ಪರಮಾತ್ಮೆಲ್ಲ್ಹಾನ ಪ ರಮ್ಮೆ ಮಾಡಿ ಬಲುಜಮ್ಮಾಸಿ ಮನುಗಳು ದಿಮ್ಮಾಕಿನಿಂದ ವೇದಸ್ಮøತಿಯನ್ನು ಅ.ಪ ಎಲ್ಲಿ ಕರೆಯಲಿಲ್ಲ್ಯಾನಂತೆ ಸುಳ್ಳೆ ಸಲ್ಲದ ಮಾತ್ಹೇಳಿಹ್ಯರಿಂತೆ ಸೊಲ್ಲು ಸೊಲ್ಲಿಗೆ ನಾನೆಲ್ಲೆಲ್ಲಿಕೂಗಲು ಕಲ್ಲಿಗು ಕಡೆಯಾಗಿರುವ ಪುಲ್ಲನಾಭ 1 ಹೊತ್ತುಕೊಂಡು ಇರುತಿಹ್ಯನಂತೆ ಅರ್ತುಕೊಂಡು ನಾ ನಿರ್ಕಾಗಿ ಭಜಿಸಲು ಸಾರ್ಥಕಮಾಡವಲ್ಲ ಕರ್ತನೆಂಬಂಥವ 2 ಮೊರೆಯಿಟ್ಟು ಭಕ್ತರಪ್ರಿಯಬಂಧು ಮಹ ಕರುಣಾಳು ಶ್ರೀರಾಮನೆ ಎಂದು ಪರಿ ಸ್ಥಿರವಾಕ್ಯವೇ ನರಿತು ಪೊಗಳಿದರು ಪರಮ ಪಾವನರು 3
--------------
ರಾಮದಾಸರು
ಸ್ವಹಿತ ಸುಪಥ ಸಾಧನ ಪಡೆದು ಸ್ವಸುಖಗೂಡಿರೊ ವಿಹಿತ ಮರೆದು ವಿಭ್ರಮಾಚರಿಸಬ್ಯಾಡಿರೋ ಧ್ರುವ ದಾರು ತಿಳಿದು ನೋಡಿರೊ ಜ್ಞಾನ ಹೀನರಾಗಿ ಗರ್ವ ಹಿಡಿಯಬ್ಯಾಡಿರೊ ಸ್ವಾನುಭವಾಮೃತವನ್ನುಂಡು ಸವಿ ಸೂರ್ಯಾಡಿರೊ ನಾನು ನೀನು ಎಂಬ ಬಿನಗುಭ್ರಮ ಈಡ್ಯಾಡಿರೊ 1 ಮನದ ಕೊನಿಯಲಿದ್ದ ಘನದಾಶ್ರಯವು ಮಾಡಿರೊ ತನುವು ಲಂಪಟ್ಹಿಡಿದು ತನ್ನ ಮರಿಯಬ್ಯಾಡಿರೊ ಜನುಮ ಸಫಲವಾಗುವ ಸುಜಾಗ್ರತಿಯ ಪಡೆಯಿರೊ ನೆನವು ನೆಲೆಯಗೊಂಡು ನಿಜದಾಶ್ರಯದಲಿ ನಡೆಯಿರೊ2 ಮರ್ತು ಮೈಯ ವ್ಯರ್ಥ ದಿನವಗಳಿಯಬ್ಯಾಡಿರೊ ನಿರ್ತದಿಂದ ಅರ್ತ ಭಾವದರ್ಥಿ ನೋಡಿರೊ ಕರ್ತು ಭಾನುಕೋಟಿತೇಜನ ಗುರ್ತು ಮಾಡಿರೊ ಅರ್ತು ಮಹಿಪತಿ ಸ್ವಾಮಿಪಾದ ಬೆರ್ತುಕೂಡಿರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹುಚ್ಚು ಹಿಡಿಯಿತು ಎನಗೆ | ಹುಚ್ಚು ಹಿಡಿಯಿತು ಪ ಸ್ವಚ್ಛ ಭಾಗವತವ ಕೇಳಿ | ಅಚ್ಯುತನ್ನ ಮಹಿಮೆ ಎಂಬಮೆಚ್ಯಮದ್ದು ಶಿರಕೆ ಏರಿ | ಹುಚ್ಚು ಹಿಡಿಯಿತು ಅ.ಪ. ಶ್ರವಣ ಸ್ತವನ ಸ್ಮರಣೆ ಸೇವೆ | ಅವನ ಅರ್ಚನೆ ವಂದನೆ ಸಖ್ಯಅವ ದಾಸ್ಯ ಆತ್ಮ ಅರ್ಪಣ | ನವವು ವಿಧದ ಭಕ್ತಿಗಳಿಪ 1 ಸಪ್ತ ದಿನದ ಕ್ಲುಪ್ತಿಯಿಂದ | ಸರ್ಪಶಯನ ಮಹಿಮೆ ಶ್ರವಣಶೃತಿ ಬಧಿರ ವಾಯ್ತು ಆತ್ಮ | ರಿಕ್ತ ವಿಷಯ ಶ್ರವಣಕೆಲ್ಲ 2 ಸ್ತವನ ಮಾಳ್ಪ ಶುಕರ ದೇಹ | ಭವಣೆ ಮರೆತು ಕೀರ್ತಿಸಿದರುಅವರ ಕಂಡು ಲೋಕವಾರ್ತೆ | ಸ್ತವನ ಗೈವರ ದೂಡುವಂಥ 3 ಹರಿಯ ಸ್ಮರಿಸಿ ಪ್ರಹಲ್ಲಾದ | ಹರಿಯ ಕಂಡು ಭವವ ಗೆದ್ದಸ್ಮರಿಸಿ ಸ್ಮರಿಸಿ ಅದನ ನಾನು | ನರರ ನಡುವೆ ಮೂಕನಾಗ್ದ 4 ನಿತ್ಯ ಮಾಳ್ಪ ಹರಿಯ ಸೇವೆಅರ್ತುಸಂತರ ಸೇವೆ ವ್ಯತಿ | ರಿಕ್ತಕೆಲ್ಲ ಪ್ರತಿಯ ಭಟಿಪ 5 ಅಂಬೆ ರಮಣನರ್ಚಿಸೀದ | ಕುಂಬಾರ ಭೀಮನ ಕೇಳಿ ನಾನುಅಂಬುಜಾಕ್ಷನರ್ಚನೆಗಲ್ಲದ | ತುಂಬಿದ್ವ್ಯೊಭವ ಚೆಲ್ಲುವಂಥ 6 ಕೃಷ್ಣ ವಂದನ ಅಕ್ರೂರ ಗೈದು | ಸುಷ್ಠು ಹರಿಯ ರೂಪ ಕಂಡಜಿಷ್ಣು ಸಖನ ನಮಿಸದವರ | ಭ್ರಷ್ರ್ರರೆಂದು ಬೈಯ್ಯುವಂಥ 7 ನಿತ್ಯ ನೆನೆಯದವರ | ಕ್ಷಣವು ಅವರ ಸಂಗಜರಿವ 8 ಪಾರ್ಥ ಸಖ್ಯತನದಿ ಪರಮ | ಅರ್ಥ ಪಡೆದುದನ್ನ ಕೇಳಿನಿತ್ಯ ಸಖನ ಮರೆತ ಜನರು | ವ್ಯರ್ಥರೆಂದು ಅರ್ಥಿಲಿ ನಗುವ9 ಭೃತ್ಯ ಬಲಿಯು ತನ್ನನಿತ್ತಸತ್ಯ ವಾರ್ತೆ ಕೇಳಿ ಕೇಳಿ | ಪ್ರವೃತ್ತಿ ಗೈದಿನ್ಯತ ನೆದಿ 10 ನಿಚ್ಚ ಗುರು ಗೋವಿಂದ ವಿಠಲ11
--------------
ಗುರುಗೋವಿಂದವಿಠಲರು
ಹೊಂದಿ ಸುಖಿಸಿ ಹೊಂದಿ ಸುಖಿಸಿ ಒಂದು ಮನದ ಭಾವದಿಂದಾ ನಂದನೀವ ಜನಕ ನಮ್ಮಗುರುರಾಯನಾ ಪ ದಿಟ್ಟತನದಿ ಸಾಗರಧಿಂ ಮುಟ್ಟಿ ಮುದ್ರೆಯ ಕೊಟ್ಟ ಬಳಿಕ ವನವ ಛೇದಿಸಿ ದುಷ್ಟ ರಾವಣ ತನುಜನಬೆ ನ್ನಟ್ಟಿ ಕುಟ್ಟಿ ಲಂಕೆಯನು ಸುಟ್ಟ ಬಿಟ್ಟ ಬಂದು ಪೊಡ ಮಟ್ಟ ಹನುಮಾ 1 ಆಪ ನೋಡದೆ ಭೂಪರಾಸಭೆ | ಲೋಪಗಡಿ ಮಂಡಿಸಿ ಗೆಲವು | ಲೋಪವಾಗೆ ದ್ರೌಪದಿಯನು ಛಲನೆ ಮಾಡಿದ || ಪಾಪಿಕೌರವ ಧೀಪ ನೆಜ್ಞ ಸ | ಮೀಪಪಶುವಿನೋ ಪಾದಿಯಲಿ ಕೊಪದಿಂದಲಿ ಘಾತಿಸಿದ ಭೂಪಭೀಮನಾ2 ಮತ್ರ್ಯ ದೊಳಗ ಬೆರ್ತು ವಿಷಯ ಅರ್ತುಚರಣ ನಿರ್ತದ್ಹುಗಲು ತೀರ್ಥಚರಣನು ಸಾರ್ಥಕವನು ಮಾಳ್ಪಾನಂದ ಮೂರ್ತಿ ಮರುತನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೋಗುತಾದೋ ಹೊತ್ತು ಹೋಗುತಾದೋ ಸಾಗಿ ಮುಂಚೆ ಮತ್ತೆ ತಿರುಗಿ ಬಾರದಂತೆ ಪ ಹಿಂದಿನ ಸುಕೃತದಿಂದ ಒದಗಿದಂಥ ಸುಂದರಮಾದ್ಹೊತ್ತು ಎಂದೆಂದು ಸಿಗದಂತೆ 1 ಅರ್ತುಕೊಂಡವರಿಗೆ ಸಾರ್ಥಕಗೊಳಿಸುತ್ತ ಮರ್ತಕರಿಗೆ ಮತ್ತೆ ಗುರ್ತು ತೋರದಂತೆ 2 ಎಷ್ಟೆಷ್ಟೋ ಯೋನಿಯೊಳ್ಹುಟ್ಟ್ಹುಟ್ಟಿ ಬಲಗೋ ಳಿಟ್ಟು ಪಡೆದ ಹೊತ್ತು ನಷ್ಟವಾಗುತ ವ್ಯರ್ಥ 3 ಅಘನಾಶಗೊಳಿಸಿ ಬಹು ಮಿಗಿಲಾದ ಪದವೀನ ಸಿಗದಂಥ ವಸ್ತಿದು ಅಗಲಿ ತಾ ಸುಮ್ಮನೆ 4 ನೇಮವಲ್ಲೆಲೋ ಮತ್ತೆ ಆ ಮಹ ಸಮಯವು ಪಡಿ 5
--------------
ರಾಮದಾಸರು