ಒಟ್ಟು 869 ಕಡೆಗಳಲ್ಲಿ , 104 ದಾಸರು , 708 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಚ್ಚಬೇಡಿ ಪತಿತನಾರಿಯ | ಕಚ್ಚುವ ಹಾವಿನ ಸಂಗವೆನ್ನಿ || ಪ ಮೆಚ್ಚುಗೊಳಿಪಳು ಗುಣಿಸಿ ನೋಡಿ ನಿಚ್ಚದಲಿ ಚಿತ್ತ ಚಂಚಲಳಾಗಿ ಅ.ಪ ಪರಿಯಂತ | ಯಾವದನಿತು ಮೊಗವನೆತ್ತದಲೆ || ಎವೆ ತೆಗೆದು ದಿಕ್ಕುಗಳು ನೋಡದೆ | ಅವನಿಗೆ ಬಾಗಿ ನಡೆಯುತ || ತವರು ಮನೆಯವರನು ಹಳಿದು | ನವÀನವ ಪ್ರಾವರ್ತನವನು ತೋರುತ || ಅವಗುಣಂಗಳಿಲ್ಲ ದೋಷಾದಲಿ | ಲವಕಾಲವನು ಕಳೆವ ನಾರಿಯ 1 ಪ್ರಾಯಾವಸ್ಥೆ ಬಂದು ಪ್ರಾಪ್ತವಾಗಲು | ಆಯುತಾಕ್ಷಿಗಳ ತಿರುಹಿ ಮೆಲ್ಲನೆ || ಬಾಯಲ್ಲಿ ಒಂದೊಂದು ಕ್ರಮಾಸಾರದಿ | ನೋಯ ನೋಯದಂತೆ ವಚನವ || ದಾಯಿಗಳಂತೆ ಮತ್ಸರಿಸಿ ಬಯ್ಯದೆ | ಮಾಯಾವಿ ಕಲ್ಪಿಸಿ ಮುಸಿಮುಸಿ ನಗೆ || ಆಯಕೆ ತಗಲಿ ಕಂಡ ಜನರಿಗೆ | ಘಾಯ ಕಾಣಿಸದಂತೆ ಮಾಳ್ಪಳ 2 ಅತ್ತೆ ಮಾವಗೆ ಅತ್ಯಂತವಾಗಿ ತಾನು | ಪ್ರತಿ ಉತ್ತರ ಪೇಳಲು ಅಂಜಿ ಅಂಜಿದಂತೆ || ಉತ್ತಮರ ಮನೋರಥವ ಕೆಡಿಸಿ | ಅತ್ತಿಗಿ ನಾದುನಿ ಮಿಗಿಲಾದವರೆಲ್ಲ || ಕತ್ತೆ ನಾಯಿ ನರಿಯೆಂಬೊ ಸೊಲ್ಲಲ್ಲಾದೆ | ಎತ್ತಲಾದರು ವಂಚಿಸಿ ಗಂಡನ್ನ || ತನ್ನಂತೆ ಮಾಡಿಕೊಂಡು ಹಗಲಿರುಳು ಥೈ- | ತಥ್ಥಾ ಎಂದಾಡಿಸಿ ಕುಣಿಸುವ ಸತಿಯಳ 3 ಕೊಂಡ ತೆರದಿ | ಪತಿಯ ಸಮಯ ನೋಡದೆ ತಾನು || ಸಥೆಯಿಂದಲಿ ಸಂಸಾರದೊಳಗಿದ್ದು | ಸುತರ ಪಡೆದು ಹಮ್ಮಿಲಿ || ಕಥನವೆಬ್ಬಿಸಿ ಗಂಡನ್ನ ಅಡವಿ | ಪಥವ ಹಿಡಿಸಿ ಹಣದಗೋಸುಗ || ಸತತ ಮನೆಯೊಳಗಿದ್ದ ಬದುಕು | ಮಿತಿಯಿಲ್ಲದೆ ಭಕ್ಷಿಸುವ ನಾರಿಯ 4 ಒಲಿಪಗೆ ನೀವು ಮೋಸಗೊಂಡು | ಒಲಿಯದಿರಿ ಸ್ತ್ರೀಯರಿಗೆ ಸೋತು || ಕಲಿಗೆ ಪ್ರಥಮ ಪಟ್ಟದ ಗದ್ದಿಗೆ | ಸುಲಭವಲ್ಲವೋ ಸುಖವಿಲ್ಲಾ || ಕೆಲಕಾಲ ಮಹಾ ಕಾತರದಿಂದಲಿ | ವಳಗಾಗದಿರು ಒಳಿತು ಪೇಳುವೆ || ಜಲಜಾಕ್ಷ ವಿಜಯವಿಠ್ಠಲನ್ನ ನಂಬಿರೋ | ನಂಬಿರೋ ನಂಬಿರೋ ಚತುರರು 5
--------------
ವಿಜಯದಾಸ
ನೆಲೆಯಾಗಿ ನಿಲಿಸೆನ್ನ ನಿಲಯದಿ ಶ್ರೀಕಾಂತ ಸಿರಿ ಲಲನೆಯರೊಡಗೂಡಿ ಪ. ಸೂಕ್ತ ಪುರಾಣ ಭಾರತಗಳು ಪೊಗಳುವ ಭಕ್ತ ವತ್ಸಲತೆಯ ಬಹುಮತಿಯ ನಿತ್ಯ ಕೊಂಡಾಡುವ ಭೃತ್ಯಜನರ ಬೇಗ ಹೆತ್ತ ತಾಯಿವೊಲೆತ್ತಿ ಪಾಲಿಪ ಹರಿ 1 ವಿಧಿ ವಿಹಿತಗಳಾದ ಸದಮಲ ಕೃತಗಳ ಮುದದಿ ಮಾಡುವ ಸರ್ವ ಬುಧ ಜನರ ಸದನಕ್ಕೆ ಕರತಂದು ವಿಧವಿಧ ಪೂಜೆಯ ಒದಗಿ ಮಾಡುವ ಪೂರ್ಣ ನಿಧಿಮತಿಗಳನಿತ್ತು 2 ಬಂದ ಅತಿಥಿಗಳ ನಿಂದಿಸದಲೆ ಅಭಿ ವಂದಿಸಿ ಸತ್ಕರಿಸುತ ಫಲವ ಕುಂದಿಲ್ಲದಾನಂದ ಸಂದೋಹದಾಯಿ ಮುಕುಂದಗರ್ಪಿಸಿ ಸುಖದಿಂದ ಚರಿಸುವಂತೆ 3 ಅಹಿತಲ್ಪ ಶಯನನೀ ವಹಿಸಿದ ದಾಸರ ಸುರರು ಸಂಗ್ರಹಿಸುವರು ಕುಹಕ ವೈರಿಗಳನ್ನು ಬಹು ದೂರೋಡಿಸಿ ಮಹಾಮಹಿಮ ನೀ ಕರುಣದಿ 4 ಚತುರ ಹಸ್ತಗಳಿಂದ ಚತುರ್ವಿಧ ಫಲರಸ ಸ್ತುತಿಸುವ ದಾಸರೀ ಗತಿ ಬೇಗದಿ ಸತತ ಸುರಿವ ನಾಗಪತಿ ಗಿರಿನಿಲಯ ಶ್ರೀ ಪತಿ ನೀನೆ ಎನಗೆ ಸದ್ಗತಿಯಾಗಿ ಪೊಳವುತ್ತ 5
--------------
ತುಪಾಕಿ ವೆಂಕಟರಮಣಾಚಾರ್ಯ
ನೊಂದು ಬಂದೆನೊ ಕಾಂತೇಶ | ಕೈಯನೆ ಪಿಡಿಯೊ ಮಂದಭಾಗ್ಯಳ ಜೀವೇಶ ಪ. ಅಂದು ಶ್ರೀ ರಾಮರ ಸಂದೇಶವನ್ನೆ ಭೂ- ನಿಂದನೆಗೆ ಅರುಹುತಲಿ ಬಹು ಆನಂದಪಡಿಸಿದ ವಾನರೇಶ ಅ.ಪ. ಶೌರಿ | ಭಕ್ತರ ಕಾಯ್ವ ದುರಿತದೂರನೆ ಉದಾರಿ ಚರಣಕ್ಕೆ ನಮಿಸುವೆ ಹರಿಗೆ ಪರಮಾಪ್ತನೆ ದುರಿತ ತರಿಯುತ ಪೊರೆಯೊ ಗುರುವರ ರಾಮಕಿಂಕರ 1 ಗುರುಕರುಣದ ಬಲದಿ | ಅರಿತೆನೊ ನಿನ್ನ ಚರಣ ನಂಬಿದೆ ಮನದಿ ಪರಿ ಭವಕ್ಲೇಶ ಪರಿಯ ಬಣ್ಣಿಸಲಾರೆ ಹರಿವರನೆ ದಯಮಾಡು ಶ್ರೀ ಹರಿ ದರುಶನವನನವರವಿತ್ತು 2 ಕಾಂತನ ಅಗಲಿರಲು | ಚಿಂತೆಯಲಿ ಭೂ ಕಾಂತೆ ವನದೊಳಗಿರಲು ಸಂತೋಷದಿಂ ರಾಮನಂತರಂಗವನರುಹಿ ಸಂತಸವಪಡಿಸುತಲವನಿಸುತೆಯ ನಿಂತೆ ರಾಮರಿಗ್ಹರುಷ ತೋರಿ 3 ದ್ರುಪದ ಸುತೆಯಳ ಕೀಚಕ | ದುರ್ಮನದಲಿ ಅಪಮಾನಪಡಿಸೆ ದುಃಖ ತಪಿಸಿ ನಿನ್ನನು ಬೇಡೆ ಆ ಪತಿವ್ರತೆ ಸತಿ ಕುಪಿತದಿಂದಲಿ ಖಳನ ಕೊಂದೆ ಅಪರಿಮಿತ ಬಲಭೀಮ ಪ್ರೇಮ 4 ಮಿಥ್ಯಾವಾದದ ಭಾಷ್ಯಕೆ | ಸುಜ್ಞಾನಿಗಳ್ ಅತ್ಯಂತ ತಪಿಸುತಿರೆ ವಾತಜನಕನಾಜ್ಞೆ ಪ್ರೀತಿಯಿಂದಲಿ ತಾಳಿ ಘಾತುಕರ ಮತ ಮುರಿದ ಮಧ್ವನೆ ಖ್ಯಾತಿ ಪಡೆದೆÀ ಸಿದ್ಧಾಂತ ಸ್ಥಾಪಿಸಿ 5 ಪ್ರಾಣಪಾನವ್ಯಾನ | ಉದಾನ ಸ ಮಾನ ಭಾರತಿ ಕಾಂತನೆ ಜ್ಞಾನಿಗಳಿಗೆ ಪ್ರೀತ ಜ್ಞಾನ ಭಕ್ತಿಪ್ರದಾತ ದೀನಜನ ಮಂದಾರ ಕಾಯೊ ದೀನಳಾಗಿಹೆ ಕೈಯ ಮುಗಿವೆ 6 ನೋಯಲಾರೆನೊ ಭವದಿ | ಬೇಗನೆ ತೋರೊ ಧ್ಯೇಯ ವಸ್ತುವ ದಯದಿ ವಾಯುನಂದನ ನಿನ್ನ ಪ್ರಿಯದಿಂ ನಂಬಿದೆ ಕಮಲ ದ- ಳಾಯತಾಕ್ಷನ ಮನದಿ ತೋರಿ7 ಹರಣ ನಿನಗೊಪ್ಪಿಸಿದೆ | ಸುರವಂದಿತ ಕರೆದು ಮನ್ನಿಸಿ ಕಾಪಾಡೊ ಸಿರಿವರನನು ಹೃತ್ಸರಸಿಜದಲಿ ತೋರೊ ಧರೆಯ ವಸ್ತುಗಳ್ ಮಮತೆ ತೊರೆಸು ಹರಿಯ ನಾಮಾಮೃತವನುಣಿಸು 8 ಈ ಪರಿಬಂದೆ ಅನಿಲ | ನಿನ್ನೊಳು ವಾಸ ಗೋಪಾಲಕೃಷ್ಣವಿಠ್ಠಲ ಶ್ರೀಪತಿ ಕೃಪೆಯಿಂದ ನೀ ಪ್ರೀತನಾಗುತ ಕೈಪಿಡಿದು ಸಂತೈಸು ಕರುಣದಿ ಭಾಪುರೇ ಕದರುಂಡಲೀಶ 9
--------------
ಅಂಬಾಬಾಯಿ
ನೋಡಯ್ಯಾ ನಿತ್ಯಾತ್ಮನನ್ನು ನಿಜವಾಗಿ ನಿನ್ನೊಳಗೆ ನೀನು ನೋಡಯ್ಯಾ ನಲಿನಲಿದಾಡಯ್ಯಾ ಎರಡುದಿನಸಂಸಾರಾ ಎರವಾಗಿ ತಂದ ಶರೀರಾ ಸ್ಥಿರವಲ್ಲ ಸ್ವಾಮಿ ಗುರುಬಲ್ಲಾ ನೋಡಯ್ಯಾ 1 ಶರೀರ ಅರ್ಥಪ್ರಾಣ ಮೂರು ಗುರುಮೂರ್ತಿಗರ್ಪಿಸಿ ತೋರು ದೃಢಭಾವಾ ಆತ್ಮಸುಖವೀವಾ ನೋಡಯ್ಯಾ 2 ನರದೇಹಕ್ಕೆ ಬಂದು ನೀನು ಇರುವಂಥಾ ಸಾರ್ಥಕವೇನು ದೃಢ ಭಕ್ತಿಮಾಡಿ ಪಡೆ ಮುಕ್ತಿ ನೋಡಯ್ಯಾ3 ದೊರಕುವುದು ಪರಿಕರ ಸರ್ವಾ ಗುರುಮೂರ್ತಿ ಸಿಕ್ಕುವುದಪೂರ್ವಾ ಬಿಡಬೇಡಾ ವ್ಯರ್ಥ ಕೆಡಬೇಡಾ ನೋಡಯ್ಯಾ 4 ಭಕ್ತಿಯಲಿ ಕೈವಿಡಿದು ಹೋಗು ಭಜಿಸಿ ಜೀವನ್ಮುಕ್ತನಾಗು ಸಾರಿದೆ ಮರ್ಮವ ತೋರಿದೆ ನೋಡಯ್ಯ5 ಯುಕ್ತಿಯಲಿ ಸಾಧಿಸಲು ಬೇಕು ಇಷ್ಟೊಂದು ಸಿಕ್ಕಿದರೆ ಸಾಕು ಚಂದದಿ ಗುರುವಿಮಲಾನಂದದಿ ನೋಡಯ್ಯಾ 6
--------------
ಭಟಕಳ ಅಪ್ಪಯ್ಯ
ನೋಡಿದೆ ಗಿರಿಯ ತಿರ್ಮಲನ ನಿತ್ಯ ಮೂಡಲ ದಿಕ್ಕಿನಲಿಪ್ಪ ನಿರ್ಮಲನಾ ಪ ನೀರೇರ ಕೂಡಾಡಿದವನಾ ದೇವ ನೀರೊಳಗೆ ಸದನವ ಬಿಗಿದವನಾ ನೀರದ ಶ್ಯಾಮ ವರ್ಣನನಾ ಭವ ನೀರಜ ಭವವಂದ್ಯಾ ದಯಾಸಾಗರನಾ 1 ನೀರು ಪಾದದಲಿ ಪೆತ್ತವನಾ ಮಹಾ ನೀರು ದಾಟಿ ಮಕ್ಕಳ ತೋರಿದವನಾ ನೀರಧಿ ಬಿಗಿದ ಪ್ರಬಲನಾ ಅಂದು ನೀರುಪತಿಯ ಭಂಗವ ಮಾಡಿದವನಾ 2 ನೀರು ಕಟದ ನಿಃಸಂಗನಾ ಸರ್ವ ನೀರು ಸೇದುವನಾಗಿ ಜಗವ ಸುತ್ತುವನ ನೀರೊಳಗಾಡುವ ನಿಜನಾ ಓರ್ವ ನೀರೇಳ ನಾರಿಯ ಮಾಡಿದ ಗುಣನಾ 3 ನೀರಜೋದರ ನಿರ್ಮೋಹನನಾ ಏಳು ನೀರಜ ದಳದಲ್ಲಿ ಪೊಳೆವ ಚನ್ನಿಗನಾ ನೀರು ಬಯಲು ಮಾಡಿದವನಾ ಅನ್ನ ನೀರೊಳಗಿದ್ದು ಜಗವ ಪೊತ್ತವನಾ 4 ನೀರಜಪಾಣಿ ವಲ್ಲಭನಾ ತೇಜ ನೀರನ್ನ ತತ್ವ ವ್ಯಾಪಿಸಿಕೊಂಡವನಾ ನೀರೆ ಗತಿಯ ಮಾಡಿದವನಾ ನಮ್ಮ ನೀರಜಾದ್ರಿ ತಿಮ್ಮ ವಿಜಯವಿಠ್ಠಲನಾ 5
--------------
ವಿಜಯದಾಸ
ನೋಡಿದೆನು ಉಡುಪೀ ನಿವಾಸನ ನೋಡಿದೆನು ಯಾದವೇಶನ ನೋಡಿದೆನು ಮಾನಿಸ ವೇಷನ ನೋಡಿದೆನೊ ಲಕುಮೇಶನ ಪ ಪರಶುರಾಮನು ಭೂಮಿ ಸುರರಿಗೆ ಸರವು ಧಾರುಣಿ ಧಾರಿಯಾ ಎರದು ಕೇಸರಗಿರಿಯ ಪಡುಮೂಲ ಶರನಿಧಿಯನು ಶರದಲೀ ಭರದಿ ಬಿಡಿಸಿದ ಶೂರ್ಪಕಾರದ ತೆರದಿ ನೆಲ ನೀ ಧರುಣಿಗೆ ಪರಮ ಸಾಹಸ ರಾಮಭೋಜನು ಅರಸನಾದುದು ನೋಡಿದೆ 1 ಯಾಗಗೋಸುಗ ರಾಮ ಭೋಜನು ನೇಗಿಲಿಯ ಕೊನೆಯಿಂದಲಿ ಆಗ ಭೂಮಿಯ ಶೋಧಿಸÀಲು ಬಂದು ನಾಗ ಬಂದಿತು ಮೃತವಾಗಿ ತೂಗಿ ಶಿರವನು ಭೃಗು ಕುಲೇಶಗೆ ಬಾಗಿ ನೆನೆಯಲು ಸಂಕೇತಾ ಸಾಗಿ ಭೂಮಿಪಾಲ ರಿಪು ಚನ್ನಾಗಿ ಒಲಿದದು ನೋಡಿದೆ 2 ತಿಳುಹಿದನು ಪೂರ್ವದಲಿ ಈ ಫಣಿ ಖಳನು ಕಾಣೊ ಇವನಿಂದು ಅಳಿದು ಪೋದದು ಲೇಸು ಭೂಸುರ ಕುಲಕೆ ಸಂತೋಷವಾಯಿತು ಒಲುಮೆಯಲಿ ಸತ್ಕಾರ ವಿಧ ವೆ ಗ್ಗಳವಾಗಿ ಸುಯಾಗವ ಸುಲಭ ಮನದಲಿ ಮಾಡೆನಲು ನಿ ಶ್ಚಲ ಭಕುತಿಲಿ ಸ್ತುತಿಸಲು 3 ಇಂದಿರಾಪತಿ ಕರುಣಿಸೆಂದು ಅಂದಿಗಾ ರಾಮ ಭೋಜನು ಒಂದು ಕ್ರೋಶದ ಅಗಲ ರಜತಾ ಚಂದದಾಸನ ಮಾಡಿಸಿ ತಂದು ದೇವನ ಕುಳ್ಳಿರಿಸಿ ಆ ನಂದದಲಿ ಓಲಾಡುತಾ ಕುಂದದಲೆ ಮೇಧವನು ಮುಗಿಸಿ ಗೋ ವಿಂದನ ಪ್ರೀತಿಪಡಿಸಿದಾ 4 ಭೂತಳದೊಳು ರಜತಪೀಠಾಖ್ಯ ಖ್ಯಾತಿ ಆಯಿತು ಸರ್ವದಾ ಆ ತರುವಾಯದಲ್ಲಿ ಭಾರ್ಗವ ಭೂತನಾಥನ ನಂದದಿ ವಾತ ಭಕ್ಷನ ನಡುವೆ ನಿಂದನು ಮಾತುಯಿದು ಪುಶಿಯಲ್ಲವೊ ಪೂತುರೆ ಮೋಹಕವೆ ತೋರಿದ ಜಾತ ರಹಿತಗೆ ನಮೋ ನಮೋ 5 ಪರಿ ಇರಲು ಗಂಗೆಯ ಕಾಂತ ಮಹಾ ತಪವನೆ ಮಾಡಿ ಸಂತತ ಗೋಪಾಲಕೃಷ್ಣನ ಸಂತೋಷವನು ಬಡಿಸಿದಾ ಚಿಂತೆಯಲಿ ವಿದೂರನಾದನು ಮುಂತೆ ನಡೆದ ಕಥೆ ಕೇಳಿ ಕಂತುಹರನನ ಒಲಿಸಿ ಉಡುಪಾ ಕಾಂತ ವರವನೆ ಐದಿದಾ 6 ಮೂರು ಯುಗದಲಿ ಈ ಪರಿಯಾಗೆ ಮಾರುತ ಮಧ್ಯಗೇಹನ ಚಾರು ಮನೆಯಲಿ ಜನಿಸಿ ವೈಷ್ಣವಾ ಚಾರ್ಯ ಈ ದುಶ್ಯಾಸ್ತ್ರವ ಹಾರಿಸಿದ ಹರುಷದಲಿ ರುಕ್ಮಿಣಿ ದ್ವಾರಕೆಲಿ ಪೂಜೆ ಮಾಡಿದ ಮೂರುತಿಯ ಸ್ಥಾಪಿಸಿದ ಲೀಲೆಯು ಆರು ಬಣ್ಣಿಸಲಾಪರು 7 ಇದೇ ರಜತಪೀಠ ಅಜಕಾನನವಿದೆ ಇದೇ ಉಡುಪಿ ಇದೇ ಶಿವಕುಲ್ಲ್ಯ ಅದರ ಬಳಿಯಲಿಯಿಪ್ಪ ತೀರ್ಥವ ಅದುಭುತವ ವರ್ಣಿಸುವೆನು ಇದೇ ಅನಂತ ಸರೋವರವು ಮ ತ್ತಿದೇ ವಾರುಣ್ಯಚಂದ್ರಮತೀರ್ಥ ಇದಕೆ ಮಧ್ವಸರೋವರ ವೆಂ ಬದು ಕಾಣೊ ಶ್ರುತಿ ಉಕ್ತಿಲಿ 8 ಸಕಲ ದೇಶದ ಜನರು ತ್ರಿವಿಧ ಸುಖವಾರಿಧಿಯೊಳು ಸೂಸುತಾ ಅಖಿಳ ವೈಭವದಿಂದ ಬಪ್ಪ ಅಕಟ ಸಂದಣಿಗೇನೆಂಬೆ ಸೂರ್ಯ ಬಂದ ಕಾ ಲಕೆ ಕೃಷ್ಣನ ನೋಡುವೆನೆಂದು ಚಕ್ಕನೆ ನಿಲ್ಲದೆ ಬಂದು ನೆರದಂದು ಮುಕ್ತಾರ್ಥ ಹರಿಪ್ರೇರಕಾ 9 ಸಜ್ಜನರ ಸಿರಿಚರಣ ರಜದಲಿ ಮಜ್ಜನವ ಗೈವುತ ಹೆಜ್ಜಿಹೆಜ್ಜಿಗೆ ಕೃಷ್ಣ ಕೃಷ್ಣ ಅಬ್ಜನಾಭ ನಾರಾಯಣ ಮೂಜಗತ್ಪತೆ ಎಂದು ಸ್ತೋತ್ರ ನಿ ರ್ಲಜ್ಜನಾಗಿ ಪಠಿಸುತಾ ರಜ್ಜುಪಾಣಿಯ ಬಹಿರದಿಂದ ನಿ ವ್ರ್ಯಾಜ್ಯ ಭಕುತಿಲಿ ನೋಡಿದೆ 10 ಮೊದಲು ನಮಿಸಿದೆ ಚಂದ್ರಶೇಖರ ಪದುಮಗರ್ಭನ ಮಗನೆಂದು ಅದರ ತರುವಾಯದಲ್ಲಿ ಮಾಯಿಯ ಸದಬಡೆದ ಪೂರ್ಣಬೋಧರು ಸದಮಲಾ ಕುಳುತಿಪ್ಪ ಸ್ಥಾನವ ಒದಗಿ ನೋಡಿ ಕೊಂಡಾಡುತಾ ಮದನ ಜನಕಾನಂತ ಸ್ವಾಮಿಯ ಪದಯುಗಳವನು ನೋಡಿದೆ11 ರತುನ ಗರ್ಭದೊಳಧಿಕವಾದ ತೀ ರಥವಿದು ಮಧ್ವಾಖ್ಯದಿ ಸತತ ಬಿಡದಲೆ ಇಲ್ಲಿ ಭಾಗೀ ರಥಿವಾಸ ನದಿಗಳ ಕೂಡಿ ನುತಿಸಿ ಮೆಲ್ಲನೆ ಮುಟ್ಟಿ ಮಿಂದು ಮತ್ತೆ ಕರ್ಮದ ಚರಿಯವ ಹಿತ ಮನಸಿನಲ್ಲಿ ಮಾಡುವಂಥ ಕೃತ ಕಾರ್ಯವನು ನೋಡಿದೆ 12 ಅಲ್ಲಿಂದ ನವರಂಧ್ರಗಳು ಕಂಡು ಪುಲ್ಲಲೋಚನ ಕೃಷ್ಣನ ಸೊಲ್ಲಿನಿಂದಲಿ ಪಾಡಿ ಭಾರತಿ ವಲ್ಲಭನ ಕೊಂಡಾಡುತಾ ಮೆಲ್ಲ ಮೆಲ್ಲನೆ ದ್ವಾರವನೆ ಪೊಕ್ಕು ನಿಲ್ಲದಲೆ ಸಮೀಪಕೆ ಬಲ್ಲವನು ಗುಣಿಸುತ್ತ ಭಕುತ ವ ತ್ಸಲನಂಘ್ರಿ ನೋಡಿದೆ13 ಮೂರು ಬಗೆ ಭೂಷಣವ ಧರಿಸಿದ ಮೂರುತಿ ಇದೇ ಕಾಣಿರೊ ಪಾರುಗಾಣರು ಈತನ ಅವ ತಾರ ಗುಣಕ್ರಿಯೆ ಮಹಿಮೆಯಾ ವಾರಿಜೋದ್ಭವ ಶಿವ ಮುಖಾದ್ಯರು ಸಾರಿ ಹಾಹಾ ಎಂಬರೊ ಧಾರುಣಿಗೆ ಇದೇ ದೈವ ನವನೀತ ಚೋರನ ಕೊಂಡಾಡಿದೆ 14 ತ್ರಾಹಿ ತ್ರಯಾವಸ್ಥೆ ಪ್ರೇರಕ ತ್ರಾಹಿ ತ್ರಯಗುಣ ವಿರಹಿತಾ ತ್ರಾಹಿ ತ್ರಯಧಾಮ ವಾಸ ಸರ್ವೇಶ ತ್ರಾಹಿ ತ್ರಯ ರೂಪಾತ್ಮಕಾ ತ್ರಾಹಿ ತ್ರಯವನು ಗೆದ್ದ ಪ್ರಸಿದ್ಧ ತ್ರಾಹಿ ತ್ರಯವನು ಕೊಡುವನೆ ತ್ರಾಹಿ ತ್ರಯಗಣ್ಣ ವನಪಾಲಕ ತ್ರಾಹಿ ತ್ರಯಲೋಕಾಧಿಪಾ 15 ಪಾಹಿಪರಮಾನಂದ ಗೋವಿಂದ ಪಾಹಿ ಪರತರ ಪರಂಜ್ಯೋತಿ ಪಾಹಿ ಪತಿತ ಪಾವನ್ನ ಮೋಹನ್ನಾ ಪಾಹಿ ಪಾಲಾಂಬುಧಿಶಾಯಿ ಪಾಹಿ ಜಗದತ್ಯಂತ ಭಿನ್ನಾ ಪಾಹಿ ನಿರ್ಭಿನ್ನ ಸ್ವರೂಪ ಪಾಹಿ ನಖಶಿಖ ಜ್ಞಾನ ಪೂರ್ಣನ ಪಾಹಿ ಎನ್ನಯ ಪ್ರೇಮನೆ 16 ನಮೋ ನಮೋ ಚತುರಾತ್ಮ ಗುಣನಿಧಿ ನಮೋ ನಮೋ ಪುನ್ನಾಮಕ ನಮೋ ನಮೋ ವಟಪತ್ರಶಾಯಿ ನಮೋ ನಮೋ ಪುಣ್ಯಶ್ಲೋಕನೆ ನಮೋ ನಮೋ ಸಮಸ್ತ ಸರ್ವಗ ನಮೋ ನಮೋ ಸರ್ವ ಶಬ್ದನೆ ನಮೋ ನಮೋ ಅವ್ಯಕ್ತ ವ್ಯಕ್ತಾ ನಮೋ ನಮೋ ನಾರಾಯಣ 17 ಜಯ ಜಯತು ಕರಿವರದ ವಾಮನ ಜಯತು ನಾರದ ವಂದ್ಯನೆ ಜಯ ಜಯತು ಪ್ರಹ್ಲಾದ ರಕ್ಷಕ ಜಯ ಜಯತು ಪಾರ್ಥನ ಸಾರಥೆ ಜಯ ಜಯತು ಅಂಬರೀಷ ಪರಿಪಾಲಾ ಜಯತು ಪರಾಶರನುತಾ ಜಯ ಜಯತು ಪಾಂಚಾಲಿ ಮಾನ ಕಾಯ್ದನೆ ಜಯ ಜಯತು ಗೋಪಿಕಾ ವಲ್ಲಭಾ18 ಇನಿತು ಬಗೆಯಲಿ ತುತಿಸಿ ದೇವನ ಮನದಣಿಯ ಕೊಂಡಾಡುತಾ ಕ್ಷಣಬಿಡದೆ ತನ್ನ ನೆನೆಸಿದವರಿಗೆ ಹೊಣೆಯಾಗಿ ಪಾಲಿಸುವನು ಜನುಮ ಜನ್ಮದಲಿಂದ ಮಾಡಿದ ಘನದುರಿತ ಪರ್ವತಗಳು ಚಿನಿಗಡೆದು ಸಾಧನವೆಲ್ಲ ವೇಗ ತನಗೆ ತಾ ಮಾಡಿಸುವನು 19 ವ್ಯಾಧ ಭೂಸುರ ವೇಷವು ಭೇದ ಮಾಡಿದ ನಾರಾಯಣಿ ಸುಪ್ರಸಾದ ನಿರ್ಮಲರೂಪವು ಆದಿವಾರವು ವಿಡಿದು ಎರಡು ಐದು ದಿನ ಪರಿಯಂತವು ಶ್ರೀಧರೇಶನು ವೇಷ ಧರಿಸಿದ್ದು ಸಾಧು ಸಂಗಡ ನೋಡಿದೆ20 ಉದಯಕಾಲದ ಪೂಜೆಯಾಗಲು ಮುದ ನಿರ್ಮಾಲ್ಯ ವಿಸರ್ಜನೆ ಇದೆ ಪೂರೈಸಲು ಮತ್ತೆ ಪಂಚ ಸುಧ ಪೂಜೆ ಉದ್ವಾರ್ಥನೆ ಒದಗಿಯಾಗಲು ಮೇಲೆ ಸುಧ ವಿಧುದಂತೆ ಬೆಣ್ಣೆ ಶರ್ಕರ ಇದೆ ಮಹ ಪೂಜೆ ನೋಡಿದೆ 21 ಗಂಧ ಪರಿಮಳ ತುಲಸಿ ಪುಷ್ಪಾ ನಂದ ಭೂಷಣ ಧರಿಸಿಪ್ಪ ಒಂದು ಕೈಯಲಿ ದಾಮ ಕಡಗೋ ಲಂದದಲಿ ತಾಳಿದಾ ಮಂದರಿಗೆ ಇದು ಸಾಧ್ಯವಲ್ಲವು ಮುಂದೆ ಯತಿಗಳು ಮಂತ್ರವ ಮಂದ ನಗಿಯಲಿ ಪೇಳುತಿಪ್ಪ ಚಂದವನು ನಾ ನೋಡಿದೆ 22 ಎತ್ತುವ ಧೂಪಾರತಿಗಳು ಹತ್ತೆಂಟು ಬಗೆ ಮಂಗಳಾ ರುತ್ತಿ ನಾನಾ ನೈವೇದ್ಯ ಷಡುರಸ ಮೊತ್ತಂಗಳು ಪರಿವಿಧಾ ಉತ್ತಮ ಶಾಖಾದಿ ಘೃತದಧಿ ತತ್ತಕ್ರಫಲ ಪಕ್ವವು ಸುತ್ತಲು ತಂದಿಟ್ಟು ಅರ್ಪಿ ಸುತ್ತಲ್ಲಿಪ್ಪುದು ನೋಡಿದೆ 13 ಮಂತ್ರ ಘೋಷಣೆ ಭಾಗವತಜನ ನಿಂತು ಗಾಯನ ಮಾಡಲು ಅಂತವಿಲ್ಲದೆ ವಾದ್ಯಸಂದಣಿ ಚಿಂತಿಸುವ ನಿಜದಾಸರು ವಂತು ವಾಳೆಯಿಲ್ಲದಾ ಜನ ಸಂತೋಷದಲಿ ನಲಿವುತಾ ತಂತ್ರ ಸಾರೋಕ್ತದ ಪೂಜೆ ಅತ್ಯಂತವನು ನಾ ನೋಡಿದೆ 24 ತೀರ್ಥ ಪ್ರಸಾದ ಗಂಧ ಅಕ್ಷತೆ ಅರ್ಥಿಯಲ್ಲಿ ಕೊಡುವರು ವ್ಯರ್ಥವಲ್ಲಿವು ಇಲ್ಲಿ ಒಂದು ಮು ಹೂರ್ತವಾದರು ಎಂದಿಗೂ ಶುಭ ಪ ದಾರ್ಥ ಬಡಿಸಲು ಉಂಡು ಕೃ ತಾರ್ಥನಾದೆನು ಜ್ಞಾನವಧಿಕ ಸಾರ್ಥಕರನ ನೋಡಿದೆ25 ತರಣಿ ಮಕರಕೆ ಬರಲು ಗೋಪಾಲ ಮೆರೆವ ವೈಭವವೆಂಬೆನೇ ಗಜ ತುರಗ ಹರಿ ಗರುಡ ಶ್ರೀ ಹನುಮಂತನಾ ವರ ರೂಢನಾಗಿ ಮೆರೆದು ಆಮೇಲೆ ಮಿರುಗುವ ರಥವನೇ ಏರಿ ಪರಮ ವೇಗದಿ ಚತುರ್ವೀಧಿಯ ತಿರುಗಿ ಬಪ್ಪದು ನೋಡಿದೆ 26 ಓಕಳಿಯ ಸಂಭ್ರಮವೆ ಪೇಳಲು ಗೋಕುಲಕೆ ಸಮನೆನಿಸಿತು ವಾಕು ಕೇಳ್ ಸುರ ಮುನಿಗಳೊಡನೆ ಲೋಕಕ್ಕಾಶ್ಚರ್ಯ ತೋರುತಾ ಸೋಕಿ ಸೋಕದ ಹಾಸೆ ಓಕುಳೀ ಹಾಕಿ ಆಡುವ ಲೀಲೆಯ ಈ ಕಲಿಯುಗದಲ್ಲಿ ಸೋಜಿಗ ಈ ಕಥೆಯಾದುದು ನೋಡಿದೆ 27 ವಾಲಗ ಎಡಬಲದಲಿ ಪಂಜು ಕಟ್ಟಿಕೆಕಾರರು ರಂಜಿಸುವ ಪಲ್ಲಕ್ಕಿ ಸೇವಿಪ ರಂಜಳವಾಗಿ ಒಪ್ಪಲು ಕುಂಜರಾರಿಯ ಪೀಠದಮೇಲೆ ಕಂಜಲೋಚನ ಕುಳ್ಳಿರೆ ನಿ ರಂಜನದಲಿ ಪೂಜಿಸುವ ಮತಿ ಪುಂಜ ಯತಿಗಳ ನೋಡಿದೆ 28 ಶ್ರುತಿ ಪುರಾಣಗಳುಪನಿಕ್ಷತ್ ವೊ ಸತು ಶಾಸ್ತ್ರ ಪ್ರಬಂಧವು ಭಾಗವತ ಸುಸಂ ಗೀತಿಯಲಿ ರಾಗ ಭೇದವು ಶ್ರುತಿ ಕಥಾಭಾಗ ಪದ್ಯ ಅಷ್ಟಕ ಮಿತಿಯಿಲ್ಲದಲಿಪ್ಪ ಪ್ರಸಂಗ ತತುವ ಮಾರ್ಗದಿ ನುಡಿವ ಬಲು ಉ ನ್ನತ ಮಹಿಮರ ನೋಡಿದೆ 29
--------------
ವಿಜಯದಾಸ
ನೋಡಿದೆನು ಕೃಷ್ಣನ್ನ | ದಣಿಯ ನೋಡಿದೆನು ಕೃಷ್ಣನ್ನ | ಮನದಣಿಯ ಪ. ಪಾಡಿದೆನು ವದನದಲಿ ಗುಣಗಳ ಮಾಡುತಲಿ ಸಾಷ್ಟಾಂಗ ಕಡು ಕೃಪೆ ಬೇಡಿದೆನು ಹರಿಯ ಅ.ಪ. ಅರುಣ ಉದಯದ ಮುನ್ನ ಯತಿಗಳೂ ಶರಣವತ್ಸಲನನ್ನು ಪೂಜಿಸಿ ಕರದಿ ಕಡಗೋಲನ್ನು ಪಿಡಿದಿಹ ಬಾಲರೂಪನಿಗೆ ತರತರದ ನೇವೇದ್ಯವರ್ಪಿಸಿ ತುರುಕರುಗಳಾರತಿ ಗೈಯ್ಯುತ ಪರಮಪುರುಷಗೆ ವಂದಿಸಲು ಈ ಚರಿತ ಮತ್ಸ್ಯನ್ನಾ 1 ಮಧ್ವರಾಯರ ಹೃದಯವಾಸಗೆ ಮುದ್ದು ಯತಿ ಪಂಚಾಮೃತಂಗಳ ಶುದ್ಧ ಗಂಗೋದಕದ ಸ್ನಾನವಗೈಸಿ ಸಡಗರದಿ ಮಧ್ಯೆ ಮಧ್ಯೆ ನೈವೇದ್ಯವರ್ಪಿಸಿ ಮುದ್ದು ತರಳರಿಗ್ಹೆಜ್ಜೆ ಪಂಕ್ತಿಯು ಅಗಣಿತ ಕೂರ್ಮರೂಪನ್ನಾ2 ಉದಯಕಾಲದಿ ಸರ್ವ ಜನಗಳು ಮುದದಿ ಮಧ್ವ ಸರೋವರದೊಳು ವಿಧಿಯಪೂರ್ವಕ ಸ್ನಾನ ಜಪ ತಪವಗೈದು ಮಾಧವನಾ ಉದಯದಾಲಂಕಾರ ದರ್ಶನ ಪದುಮನಾಭಗೆ ನಮನಗೈವರು ವಿಧಿಕುಲಕೆ ಉದ್ಧಾರಕರ್ತನು ವರಹನೆಂದಿವನಾ 3 ಪಾಲಿಸಲು ಬಾಲನ ಶ್ರೀ ಗೋ ಪಾಲಕೃಷ್ಣನು ಕಂಭದಲಿ ಲೀಲೆಯಿಂದಲಿ ಉದಿಸಿ ಖೂಳನ ಸೀಳೀ ತೊಡೆಯಲ್ಲಿ ಬಾಲೆಯನು ಕುಳ್ಳಿರಿಸಿಕೊಂಡಘ ಜಾಲಗಳ ಸುಡುವಂಥ ದೇವನು ಬಾಲರೂಪವ ಧರಿಸಿ ನಿಂತಿಹ ಲೋಲ ನರಹರಿಯ 4 ಅದಿತಿ ದ್ವಾದಶವರ್ಷ ತಪಸಿಗೆ ವಿಧಿ ಜನಕ ತಾ ಕುವರನಾದನು ಅದರ ತೆರದಲಿ ವ್ರತವ ಗೈದ ವೇದವತಿಗಿನ್ನು ಚದುರ ತನಯನ ವರವನಿತ್ತನು ಯದುಕುಲಾಗ್ರಣಿ ಅವರ ಭಕ್ತಿಗೆ ಒದಗಿ ಬಂದ ಮೂರ್ತಿವಾಮನನೆಂಬ ವಟುವರನ5 ದುಷ್ಟ ಕ್ಷತ್ರಿಯರನ್ನೆ ಕೊಲ್ಲುತ ಅಷ್ಟು ಭೂಮಿಯ ದಾನಗೈಯುತ ದಿಟ್ಟ ತಾನೆಲ್ಲಿರಲಿ ಎಂಬುವ ಯೋಚನೆಯ ತಳೆದು ಅಟ್ಟಿ ಅಬ್ಧಿಯ ಪುರವ ನಿರ್ಮಿಸಿ ಪುಟ್ಟ ರೂಪವ ತಾಳಿ ಬರುತಲಿ ಮೆಟ್ಟಿ ನಿಂತಿಹ ರಜತ ಪೀಠದಿ ಶ್ರೇಷ್ಠ ಭಾರ್ಗವನ 6 ಪಿತನ ಆಜ್ಞೆಯ ಪೊತ್ತು ಶಿರದಲಿ ಸತಿ ಅನುಜ ಸಹಿತದಿ ಜತನದಲಿ ವನವಾಸ ಮುಗಿಸುತ ದಶಶಿರನ ಕೊಂದ ಅತಿ ಸಹಾಯವ ಗೈದ ಶರಧಿಗೆ ಪ್ರತಿಯುಪಕಾರವನು ಕಾಣದೆ ಜತನದಲಿ ತಾ ನಿಲ್ಲೆ ನೆಲಸಿದ ಜಾನಕೀಪತಿಯ7 ಗೋಪಿಯರ ಉಪಟಳಕೆ ಸಹಿಸದೆ ಗೋಪನಂದನರೊಡನೆ ಕಾದುತ ತಾಪಪಡಿಸುವ ಕಂಸರನುಚರರಿಂದ ಕಳದೋಡಿ ಗೋಪಿ ಮೊಲೆ ಕೊಡುತರ್ದದಲಿ ಬಿಡೆ ಈ ಪರಿಯ ತಾಪಗಳ ಸಹಿಸದೆ ತಾಪಸರ ಪೂಜೆಗಳ ಬಯಸುತ ಬಂದ ಗೋಪತಿಯ 8 ವೇದ ಬಾಹಿರರಾದ ದುರುಳರು ವೇದ ಮಾರ್ಗವ ಪಿಡಿಯೆ ಸುರತತಿ ನೀ ದಯದಿ ಸಲಹೆಂದು ಪ್ರಾರ್ಥಿಸೆ ಜಿನ ವಿಮೋಹಕನೂ ವೇದರ್ಥವ ಗುಪ್ತದಲಿ ತಾ ಬೋಧಿಸುತ ಮೋಹಕವ ಕಲ್ಪಸಿ ಬುದ್ಧ ಪ್ರಮೋದನೆಂಬುವನಾ 9 ಚತುರ ಪಾದವು ಕಳದು ಧರ್ಮವು ಅತಿಮಲಿನವಾಗುತಲಿ ಕಲಿಜನ ಚತುರ ಜಾತಿಯ ಕಲೆತು ಕಂಗೆಡೆ ಭಕ್ತವರ್ಗಗಳು ಗತಿಯು ನೀನೆ ಪೊರೆಯೊ ಎಂದೆನೆ ಸತಿಯ ಹೆಗಲೇರುತಲಿ ಖಡ್ಗದಿ ಹತವಗೈಯ್ಯುತ ಖಳರ ಸುಜನರ ಪೊರೆದ ಕಲ್ಕಿಯನು10 ನೋಡಿದೆನು ವರ ಮಚ್ಛ ಕೂರ್ಮನ ನೋಡಿದೆನು ಧರಣೀಶ ನೃಹರಿಯ ನೋಡಿದೆನು ವಾಮನನ ಭಾರ್ಗವ ರಾಮಚಂದ್ರನನೂ ನೋಡಿದೆನು ಕಡಗೋಲ ಕೃಷ್ಣನ ಬುದ್ಧ ಕಲ್ಕಿಯ ನೋಡಿದೆನು ಗುರು ವರದ ಗೋಪಾಲಕೃಷ್ಣವಿಠ್ಠಲನ 11
--------------
ಅಂಬಾಬಾಯಿ
ನೋಡಿದೆನು ತಿರುವೆಂಗಳೇಶನಾ ಮಾಡಿದೆನು ಭಕುತಿಯಲಿ ವಂದನೆ ಬೇಡಿದೆನು ಕೊಂಡಾಡಿ ವರಗಳ ನಾಡೊಳಗೆ ಈಡಿಲ್ಲದಪ್ಪನಾ ಪ ಘನಸುಂದರ ಜ್ಞಾನ ತೀರ್ಥ ಆನಂದ ಧನ ವರಹಾ ವೈರಾಗ್ಯನಿಲಿ ರ ತುನ ಚಂದ್ರಮ ವರಧÀರ್ಮ ನಾರಾ ಯಣ ಭಕುತಿ ಶ್ರೀಕಾಂತಿ ಬ್ರಹ್ಮಾ ರುಣ ವೃಷಭ ಶ್ರುತಿ ಗರುಡ ಸರ್ಪ ಜನತ ಪೂಜಿಪ ಸುರ ಸುಧಾನಂತ ಇನಿತು ಪೆಸರುಳ್ಳ ಪುಷ್ಕರಾದ್ರಿಯಾ1 ಖಗನ ಪೆಗಲಲಿ ನಗವ ತಂದ ಜಗದೊಳು ಸುವರ್ಣಮುಖರಿ ನಿ ಮ್ನಗ ತೀರದಲಿ ಸ್ಥಾಪಿಸಿದ ಸುತ್ತಲು ಝಗಝಗಿಸುದೆ ನೋಳ್ಪ ಜನರಿಗೆ ಹಿಮ್ಮೊಗವಾಗಿ ಪೋದವು ಯುಗ ಯುಗ ಕಥಾಭೇದ ಬಗೆಬಗೆ ಪೊಗಳಿದರೆ ನೆಲೆಗಾಣೆ ಅನುದಿನಾ 2 ಸರಸ್ವತಿಗೆ ಮುನಿಯಿಂದ ಶಾಪವು ಬರಲು ಭರದಲಿ ಬಂದು ವಿರಜಾ ಸರತಿಯೊಳು ಬೆರಸಿದಳ್ ತಪದಲಿ ಹರಿಯ ಕರುಣವ ಪಡೆದು ಪ್ರತಿದಿನ ಸ್ಮರಸಿದವರಿಗೆ ಪುಣ್ಯವೀವುತ ಸರುವ ಸರೋವರಧಿಕವೆನಿಪ ಸುಂ ದರ ಸ್ವಾಮಿ ಪುಷ್ಕರಣಿಯನು ತ್ರಿ ಕರಣ ಬಲು ಒಂದಾಗಿಬಿಡದಲೆ 3 ಎರಡೈದು ಪ್ರಾಕಾರ ಗೋಪುರಾ ಎರಡೈದು ದ್ವಾರಗಳು ಕಟ್ಟಿದಾ ಮಕರ ತೋರಣ ಧರೆಗೆ ಮಟ್ಟಿದ ಎಡಬಲದ ಪೂ ಸರಗಳೊಪ್ಪಲು ದ್ವಾರಪಾಲಕರಿ ರುತಿಪ್ಪರಲ್ಲೆಲ್ಲಿ ಕಾವುತಾ ನಿಕರ ತುಂಬಿರೆ ಪರಿಪರಿಯ ಮಂಟಪಗಳಿಂದಾ 4 ಭಂಗರಹಿತ ಬಂಗಾರಮಯವಾದಾ ತುಂಗ ಆನಂದ ನಿಲಯ ವಿಮಾನಾ ಕಂಗಗಳಿಗೆ ಬಲು ತೇಜಿಃಪುಂಜದಿ ಹಿಂಗದಲೆ ಗೋಚರಿಸುತದೆ ನರ ಸಿಂಗ ಮೂತ್ರ್ಯಾದಿಗಳು ಪ್ರಾಣ ಭು ಜಂಗಧರಾದಿ ದಿಕ್ಪಾಲರೆಲ್ಲರು ಸಂಗ ಮತಿಯಲಿ ವಾಸವಾಗಿರೆ ಮಂಗಳಾಂಗ ಪ್ರಿಯಾಂಗ ಪ್ರಿಯನಾ 5 ಮುಕ್ತಿ ಬೀದಿಗಳೆರಡು ವಿ ರಕ್ತಿ ಜ್ಞಾನ ಸತ್ಕರ್ಮ ಬಲು ದೃಢ ಭಕ್ತಿಯೋಗವು ಯಾವ ತ್ಯಾಗ ಸಂ ವ್ಯಕ್ತ ರಾಗವು ಈಪರಿ ಸು ಉಕ್ತಿ ದ್ವಾದಶ ಸಾಲ ಬೀದಿಗ ಳುಕ್ತ ಜನ ಸಂಚರಿಸುತ್ತಿಪ್ಪರು ಶಕ್ತನೊಬ್ಬನೆ ಜಗದೊಳೀತನೆ ವ್ಯಕ್ತ ಅವ್ಯಕ್ತದಲಿ ಚಿತ್ರವಾ 6 ಲೋಕೇಶ ಲೋಕಪಾಲಕರು ಖಗ ಕಾಕೋದರ ಗಂಧರ್ವ ಸನಕಾದಿ ಲೋಕ ಚಕ್ಷು ಸೀತಾಂಶು ಉದಿಸಿದರು ಏಕಾಂತನು ವಾಯುನಂದನ ಪಾಕಶಾಸನ ಸೌಮ್ಯ ಗುರು ಕವಿ ನಾಕಜನ ಮಿಗಿಲಾದ ಭಕ್ತರು ಏಕಗುಣವಾರಂಭಿಸಿ ಅ ನೇಕ ಗುಣದಲಿ ಭಜಿಸುತಿಪ್ಪುದಾ7 ಸಾರಿದರೆ ನೆಲೆದೋರದು ಕಂ ಸಾರಿ ಚಿನ್ಮಯ ಲೀಲೆಗೆ ಮತ್ತಾರಾದರು ಗಣ್ಯಮಾಳ್ಪರೆ ಧಾರುಣಿಲಿ ಮಧ್ಯದಲಿದಕೆ ಎ ದಿರುಗಾಣೆನು ಎಲ್ಲಿ ಚರಿಸಲು ಮಾರುತನು ತಾನೊಬ್ಬ ಬಲ್ಲ ವಿ ಸ್ತಾರವಿದರ ವಿಚಾರ ಮತಿಯಲಿ8 ಧೀರ ಜಗದೋದ್ಧಾರ ರಿಪು ಸಂ ಹಾರ ನಾನಾವತಾರ ನವನೀತ ಜಾರ ಶಿರೋಮಣಿ ಶ್ರೀ ನಾರಿಯರರಸನೆ ತಾ ಭಕ್ತ ಚ ಕೋರ ಚಂದ್ರಮ ಪೂರ್ಣ ಸುಂದರ ಸಾರ ಭವಾರ್ಣವತಾರ ಕಾರಣ ವೀರ ವಿತರಣ ಶೂರನೆನಿಪನ್ನ ದ್ವಾರದಲಿ ಬಂದು ಸ್ತುತಿಸಿದೆನು ನಿಂದೂ 9 ಈ ವೈಲಕ್ಷಣವುಳ್ಳ ದೊರೆತನ ಈ ವೈಭವ ಸರ್ವೋತ್ತಮನೆಂಬದು ಈ ವೈಭೋಗ ಸಾಕಲ್ಯವಾಗಿದೆ ಈ ವೈಯಾರವು ಈತಗಲ್ಲದೆ ಈ ವೈಕುಂಠನ ನೋಡುವುದು ಮಹಾ ಈ ವೈದಿಕದ ಭಾಗ್ಯಕ್ಕೆಣೆಯೆ ಈ ವೈಧಾತ್ರಿಗೆಯಿವನು ಪೇಳಿದ ಈ ವೈಚಿತ್ರವ ಕೇಳಿ ಮನದಲಿ 10 ರನ್ನಮಯ ಕಿರೀಟ ಕುಂಡಲ ಕರ್ಣ ಕಸ್ತೂರಿನಾಮ ಪಣೆಯಲಿ ಕೆನ್ನೆ ಚಂಪಕ ನಾಸದಂತ ಪ್ರ ಸನ್ನ ವದನಾಂಭೋಜಲೋಚನಾ ಚಿನ್ನಸರ ಉಡುದಾರ ಸರಿಗೆ ಮೋ ಹನ್ನ ಪೀತಾಂಬರ ನೂಪುರಗೆಜ್ಜೆ ಸನ್ನಿಧಿಗೆ ನಡೆತಂದು ದೇವವರೇ ಣ್ಯನಂಘ್ರಿಯ ನೆನೆದೆ ಚೆನ್ನಾಗಿ 11 ಮೆರೆವ ಉತ್ಸವ ವಾಹನಂಗಳು ನೆರೆದ ಪ್ರಜೆದಟ್ಟಡಿಯಾಗಿದೆ ನೋಡಿ ಎರಡೊಂದು ವಿಧದವರುಯಿಲ್ಲಿಗೆ ಬರುವರೈ ಅವರವರ ತಕ್ಕದು ಹರಿಯ ಫಲವನು ಕೊಡುವನಿಲ್ಲದೆ ಅರಮರೆ ಇಲ್ಲಿದಕೆ ಎಂದಿಗು ಮೊರೆವ ನಾನಾ ವಾದ್ಯ ರಭಸ ವಿ ಸ್ತರಿಸ ಬಲ್ಲೆನೆ ನೂತನೂತನಾ 12 ರಥದ ಸಂಭ್ರಮವಾರು ಬಲ್ಲರು ಪ್ರತಿಗಾಣೆ ಈ ಪೃಥ್ವಿಯೊಳಗೆ ಅ ಪ್ರತಿ ಸಾಹಸಮಲ್ಲ ತನ್ನಯ ಸತಿಯೊಡನೆ ಪರುಠವಿಸಿ ಪೊಳೆವುತ್ತ ಚತುರ ಬೀದಿಯ ಸುತ್ತಿ ಸುಮನಸ ತತಿಯ ಸಂಗಡ ಬರುವ ಭರ ಉ ನ್ನತವ ಗುಣಿಸುತ್ತ ನಲಿನಲಿದು ಅ ಚ್ಯುತನ ಕ್ರೀಡೆಯ ಸ್ಮರಿಸಿ ನಮೋ ಎಂಬೆ13 ರಾಜರಾಜೇಶ್ವರ ನಿರಂತರ ರಾಜಿಸುತಿಪ್ಪ ಬಗೆಬಗೆ ಸಂಪೂಜೆಯಲಿ ರಾಜೋಪಚಾರದಿ ಮೂಜಗದೊಳು ಈ ನಿಧಿಯಲಿದ್ದ ಸೋಜಿಗವೆ ಮತ್ತೆಲ್ಲಿಯಿಲ್ಲವು ರಾಜಶೇಖರ ಬಲ್ಲವನೊಬ್ಬನೆ ಮಾಜದಲೆ ಸಜ್ಜನರು ಸತ್ಕರ್ಮ ಬೀಜಮಂದಿ ಮಾಡಿಬಿಡಲೆ 14 ದರ ಸುದರಶನ ಪಾಣಿ ತನ್ನ ಸಂ ದರುಶನವೆಮಗಿತ್ತು ಘನ ಆ ದರ ಪಾಲಿಸಿ ಸಂಚಿತಗಾಮಿ ಪಠಿಸಿ ಪ್ರಾರಬ್ಧವೇ ತೀರಿಸಿ ಕರುಣದಿಂದಲಿ ದಿವ್ಯರೂಪದ ಗುರುತು ತೋರುವ ಅಂತರಂಗದಿ ಪರಮಪಾವನ ವಿಜಯವಿಠ್ಠಲ ಪೊರೆವ ಪ್ರೀತಿಲಿ ಬಂದು ಮರಿಯದೆ15
--------------
ವಿಜಯದಾಸ
ನೋಡುವ ಬನ್ನಿ ಸ್ವಾಮಿಯ ಅಂತರ್ಯಾಮಿಯ ಭಕ್ತಿಯ ದೃಢಯುಕ್ತಿಯ 1 ದೇವದೇವನ ಪೂರ್ಣ ನೋಡುವ ಸೇವೆಮಾಡುವ ಸರ್ವದಾ ಕೊಂಡಾಡುವ ನವವಿಧ ಭಕ್ತಿಯ ಮಾಡುವ ಭಾವವಿಡುವ 2 ತನು ಮನಧನ ಅರ್ಪಿಸಿ ಬಿಡುವ ಮನಗೂಡುವ ಪ್ರಾಣಾಯಾಮ ಮಾಡುವ ಅನುದಿನ ಸಾಧಿಸಿ ನೋಡುವ ಘನಗೂಡುವ 3 ಇಡಾಪಿಂಗಳ ಮಧ್ಯ ನೋಡುವ ನಡೆವಿಡುವ ನಡುಹಾದಿಗೂಡುವ ಒಡನೆ ಸ್ವಸುಖ ಪಡೆವ ಗೂಢ ನೋಡುವ 4 ಸವಿಸುಖಸಾರ ಸುರುತದೆ ದ್ರವಿಸುತದೆ ಠವಠವಿಸುತದೆ ರವಿಕೋಟಿಪ್ರಭೆ ಭಾಸುತದೆ ಆವಾಗಲ್ಯದೆ 5 ಏನೆಂದನಬೇಕನುಭವ ಖೂನದೋರುವ ಘನ ಮಳೆಗರೆವ ಸ್ವಾನುಭವದಲಿ ಸೇವಿಸುವ ಅನುಸರಿಸುವ 6 ಜಾಗಿಸುತ್ತದೆ ವಸ್ತುಮಯ ಬಗೆಬಗೆಯ ಯೋಗ ಇದೆ ನಿಶ್ಚಯ ಸುಗಮಸಾಧನ ಮಹಿಪತಿಯ ಸುಜ್ಞಾನೋದಯ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಂಡರಿನಾಥ ಪಾವನ ಸುಚರಿತ ಪ ಪಾಂಡವಪ್ರಿಯದೂತ ಶರಣರ ಕಾದುಕೊಂಡಿಹ ಖ್ಯಾತ ದಾತಅ.ಪ. ಮಾತಾಪಿತನು ಭ್ರಾತನು ಹಿತನು ನಾಥನು ಜ್ಞಾತನು ಸಂತಾರಕನು ಮತಿಯೂ ನೀನೆ ಗತಿಯೂ ನೀನೆ ಕಾತರ ವ್ಯಾತರದು ಬೀತುದು ದೇವ 1 ತನುಮನಧನಗಳ ನಿನಗರ್ಪಿಸಿದೆ ಎನಿತಾದರು ಇಡು ಅನುಮಾನಿಸಿದೆ ಜನರ ನಿಂದನೆ ಮೇಣಾನಂದನೆ ಮಾನ ಅವಮಾನ ನಿನ್ನದು ದೇವ 2 ಚಿಂತೆಯ ಮರೆದೆ ಭ್ರಾಂತಿಯ ತೊರೆದೆ ಸಂತರ ಚರಣವನಾಂತೆ ದೃಢದೆ ಸ್ವಾಂತವು ಮೋದವಾಂತುದು ಶ್ರೀದ ಸಂತತ ಶ್ರೀಕಾಂತ ನಿಶ್ಚಿತ ದೇವ 3
--------------
ಲಕ್ಷ್ಮೀನಾರಯಣರಾಯರು
ಪತಿತ ಪಾವನ ನೀನೆ ಗತಿಯೆನಗೆ ಕೇಳು ಅತಿ ನೀಚ ತರತಮನಾದವಗೆ ಪ. ಸಾರಥಿ ಸ್ಥಿರವಲ್ಲವು ದುರುಳ ದಶೇಂದ್ರಿಯಾಶ್ವಗಳಿರವು ಹುರುಳಿಲ್ಲದಂತೆ ದುರ್ವಿಷಯಾಂಧಕೂಪಕೆ ಸರಿದು ಪೋಗುತಲೆನ್ನ ಕೆಡಹುವವು 1 ಅನ್ಯರಿಗುಸುರೆ ಲಜ್ಜಾಕರದ ಅನ್ಯಾಯ ಕೃತ್ಯದಿಂದಲಿ ನೆರೆದ ಮುನ್ನಿನ ನರಕಯಾತನೆಗಳ ತರಿವದ ನಿನ್ನ ಚರಣಕೊಪ್ಪಿಸಿದೆ ವರದ 2 ದಾಸದಾಸ್ಯವನೆಲ್ಲ ದಯಮಾಡು ಪ- ರೇಶ ಪರಾತ್ಪರ ಮೂರುತಿಯೆ ಲೇಶಾಯಾಸವಿಲ್ಲದೆ ಸಲಹುವ ಜಗ- ದೀಶ ಶೇಷಾಚಲವಾಸಿ ಹರೇ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪತಿಯ ಮಂದಿರದಲಿ ಸುಖವಾಗಿ ಬಾಳಮ್ಮ ಮತಿವಂತೆ ಎನಿಸಿ ಸನ್ಮತಿ ಪಡೆದು ಪ ಚತುರಳೆ ನಿನ್ನ ಸಖಿಯರೆಲ್ಲರು ಅತಿಶಯದಿ ನಿನ್ನ ಪತಿಯ ಗುಣಗಾನ ಕಥನ ಮಾಡುತ ನಿನ್ನೆದುರಿನಲಿ ಸ್ತುತಿಸಿ ಹಿಗ್ಗಿ ಪೊಗಳುವರೆ ಪಾರ್ವತಿ ಅ.ಪ ವಸತಿ ಇಲ್ಲದೆ ಸ್ಮಶಾನದಲಿ ವಾಸಿಪನೆಂದು ಅಪಹಾಸ್ಯ ಮಾಡುವರೆ ವಸನ ಪೀತಾಂಬರವನುಡುವುದನರಿಯದೆ ಹಸಿಯ ಚರ್ಮವನುಡುತಿಹನೆಂಬರೆ ಅಸನಕಿಲ್ಲದೆಗರಳ ವಿಷವನುಂಬುವನೆಂದು ಗುಸುಗುಸು ನುಡಿಯುವರೆ ಅಸಮನೇತ್ರನು ಭಸುಮ ಲೇಪಿಸಿ ವೃಷಭರಾಜನ ಏರಿ ಬರುವನು ಶಶಿಮುಖಿಯೆ ನೀನರಿಯದಲೆ ಈ ಪಶುಪತಿಗೆ ಸತಿಯಾದೆ ಎಂಬರು 1 ಸರಿಸವತಿಯ ತನ್ನ ಸಿರಮೇಲಿರಿಸಿದಿ ಗಿರಿಜೆ ತರವಲ್ಲ ಕೇಳೆ ಪರಿಪರಿ ರತ್ನಾಭರಣಂಗಳರಿಯದೆ ಉರಗಗಳ ಭೂಷಿತನಾದ ನಮ್ಮ ಗÀರಳ ಕಂಠನಿಗೆ ನೀನರಿಯದೆ ಸತಿಯಾದೆ ಎಂದು ತರಳರೆಲ್ಲರು ಹಾಸ್ಯ ಮಾಡುವರೆ ಸರಸವಾಡುತ ನೋಡು ಕಂಠದಿ ಸಿರದ ಮಾಲೆಯ ಧರಿಸಿಕೊಂಡಿಹ ಪರಮ ಆಶ್ಚರ್ಯದಲಿ ನಾವೆಲ್ಲ ಅರುಹಲೀಗ ಬಂದಿಹೆವು ಎನುವರು 2 ಅಂದು ಮೋಹಿನಿ ರೂಪವ ಕಂಡು ಪರಶಿವನು ಇನ್ನೊಮ್ಮೆ ನೋಡಲು ಬೇಡೆ ಪರಮಾತ್ಮನಾ ಸುಂದರಾಕೃತಿಯ ನೋಡುತ ಪಿಡಿಯಲು ಪೋಗಿ ನಂದ ಕಂದನ ರೂಪ ನೋಡಿದನು ಹಿಂದೆ ಮೂಕಾಸುರನೆಂಬ ದೈತ್ಯನ ಕೊಲಿಸಿದ ಇಂದಿರೇಶನಿಗೆ ಸೇವಕನಾದ ಶಿವನು ಇಂದು ಶಿವನನು ನಿಂದಿಸಿದೆವೆಂದೆನಲು ಬೇಡ ಶ್ರೀ- ತಂದೆ ಕಮಲನಾಭ ವಿಠ್ಠಲನ ಚಂದದಲಿ ಭಜಿಸುವನು ಎನುವರು3
--------------
ನಿಡಗುರುಕಿ ಜೀವೂಬಾಯಿ
ಪಂಥ ಬೇಡವೊ ಲಕ್ಷ್ಮಿಕಾಂತ ಎನ್ನಯ ಮನದ ಚಿಂತಿತಾರ್ಥವನೀಯೊ ಸಂತತಂ ಕಾಯೊ ಪ ಚರಣ ಕಮಲವ ಕಂಡು ಶರಣು ಹೊಕ್ಕೆನು ನಾನು ಕರುಣದಿಂದನುದಿನವು ಕಾಯಬೇಕೆನುತ ಸ್ಮರಣೆಪೂರ್ವಕವಾಗಿ ಹರಣವನೆ ಹರಸಿಹೆನು ಹರಿಣನೊಳು ಬಿಲುಗಾರ ಕರುಣ ಬಿಟ್ಟಂತೆ 1 ನರಜನ್ಮವೆಂಬುದಿದು ಕರಕಷ್ಟವಾಗಿರುವ ಉರಿಯ ಮನೆಯನು ಹೊಗುವ ತೆರನಲ್ಲವೆ ಪರಿಪರಿಯ ದುಃಖಗಳು ಬರುವ ಸಮಯಾಂತರದಿ ಮರೆಯಾಗದಿರು ಎನ್ನಸ್ಥಿರದಿ ಮೈದೋರು 2 ತಪ್ಪುಗಳು ಹೊರತಾಗಿ ಅಪ್ಪ ಸೇರುವುದುಂಟೆ ಒಪ್ಪುಗೊಂಬವರಾರು ಸರ್ಪಶಯನ ಬೊಪ್ಪ ಬಹ ದುರಿತಗಳ ತಪ್ಪಿಸಿಯೆ ಕಳೆದೆನ್ನ ಮುಪ್ಪುಗಳ ಪರಿಹರಿಸೊ ಅಪ್ಪಗಿರಿವಾಸ 3 ಉರಗ ಗಿರಿವಾಸ ನಿನ್ಸೆರಗವಿಡಿವೆನು ನಾನು ಕರಗಿ ಹೋಯಿತು ಇರವು ಕಾವರಿಲ್ಲ ಮರುಗಿದರೆ ಧೈರ್ಯವನು ತಿರುಗಿ ಹೇಳುವರಿಲ್ಲ ಕುರಿ(ಗಾ)ಯ್ವ ತೆರನಂತೆ ಕೈಗೆ ಸಿಲುಕಿದೆನು 4 ಇಹಪರದ ಸೌಖ್ಯಗಳ ಕರೆದಿತ್ತು ಕರವಿಡಿದು ಸಹವಾಸವಾಗಿರ್ದು ಸಲಹಿಕೊಂಡು ವಹಿಲದಲಿ ವರವೀವ ವರಾಹತಿಮ್ಮಪ್ಪ ಬಹುಭಾರವನು ತಾಳ್ದು ಸಲಹೆನಿಸೊ ನೀನು 5
--------------
ವರಹತಿಮ್ಮಪ್ಪ
ಪರ ಉಪಕಾರವ ಮರೆಯದಿರೆಚ್ಚರಿಕೆ ಪ ಕೇಡು ನೆನೆಯ ಬೇಡ ನಂಬಿದವರ ಮೇಲೆ ಕೆಡುವೆ ನೀನೆಚ್ಚರಿಕೆ ಅ ಸಿರಿ ಇರುವಾಗ ಬಂಧುಬಳಗಗಳೆಚ್ಚರಿಕೆಹಾಳು ಸಂಸಾರಕ್ಕೆ ಹಲವರ ಬಾಯ್ಗಳ ಬಡಿಯದಿರೆಚ್ಚರಿಕೆ 1 ಮೂಢರ ಒಡನಾಡಿ ಮುಂದೆ ಕೆಡಲು ಬೇಡ ಮೋಸ ನೋಡೆಚ್ಚರಿಕೆನಾಡೊಳು ಸುಜನರ ನೋಡಿ ನಡೆ ಕಂಡ್ಯ ನಟನೆ ಬೇಡೆಚ್ಚರಿಕೆ 2 ಚೆನ್ನಾಗಿ ಬದುಕಿದೆ ಗಳಿಸಿದೆ ನಾನೆಂಬ ಹೆಮ್ಮೆ ಬೇಡೆಚ್ಚರಿಕೆನಿನ್ನಾಯು ಮುಗಿಯಲು ಯಮದೂತರು ಬಂದು ಎಳೆಯುವರೆಚ್ಚರಿಕೆ 3 ಹೆಣ್ಣು ಹೊನ್ನು ಮಣ್ಣು ನಿನ್ನನ್ನಗಲಿ ಹೋಗುವರೆಚ್ಚರಿಕೆಮುನ್ನ ಮಾಡಿದ ಪುಣ್ಯ ಬೆನ್ಹತ್ತಿ ಬರುವುದು ಮುಂದೆ ನೋಡೆಚ್ಚರಿಕೆ 4 ಒಬ್ಬರಂತೆಲ್ಲರ ನೋಡು, ಸತ್ಕರ್ಮದಿ ಉಬ್ಬಬೇಡೆಚ್ಚರಿಕೆಕಬ್ಬುಬಿಲ್ಲನ ಪಿತನ ಏಕಾಂತ ಭಾವದಿ ನೆರೆನಂಬು ಎಚ್ಚರಿಕೆ 5 ತಿಂದೋಡಿ ಬಂಧುಬಳಗ ತಪ್ಪಿಸಿಕೊಂಬರೆಂದು ನೋಡೆಚ್ಚರಿಕೆಎಂದೆಂದು ಅಗಲದ ಬಂಧು ಶ್ರೀಹರಿ ನಮಗೆಂದು ನೋಡೆಚ್ಚರಿಕೆ 6 ಕಾಲನ ದೂತರು ಯಾವಾಗ ಎಳೆವರೊ ಕಾಣದು ಎಚ್ಚರಿಕೆಬೇಲೂರ ಪುರವಾಸ ನೆಲೆಯಾದಿಕೇಶವನಾಳಾಗು ಎಚ್ಚರಿಕೆ 7
--------------
ಕನಕದಾಸ
ಪರಮ ಸಂತೋಷವಿದು| ದುರ್ಗಾ| ಪರಮೇಶ್ವರಿಯನು| ಸೇವಿಸುತಿರುವುದು ಪ ಪರಮ ಕಲ್ಯಾಣಿಯ ಸ್ಮರಿಸುತಲಿ|| ಪರಮಾನಂದದಿ| ಚರಣವ ಸ್ಮರಿಸುತ| ದುರಿತಗಳನು ಪರಿ| ಹರಿಸುತಲಿರುವುದು 1 ಮನವೊಲಿದೆಮ್ಮನು| ಸಲಹುವಳು|| ವಿನಮಿತಶರಣರ | ಜನನಿಯಂತಿರಲು| ತನುಮನಧನವನ್ನರ್ಪಿಸುತಿರುವುದು2 ವಿಂದ ಸಂದೋಹವ | ಚಂದದಲಿ|| ಚಂದಿರಮುಖಿಪದ|ದ್ವಂದ್ವದೊಳರ್ಪಿಸಿ| ವಂದಿಸಿ ದೇವಿಯ| ಪೂಜಿಸುತಿರುವುದು3 ಮಹಿಮೆಯ ಸ್ಮರಿಸುತ | ಭಕುತಿಯಲಿ || ಶಂಕರಿ ದೇವಿಯ | ಕಿಂಕರರಾಗುತ| ಇಹಪರ ಸುಖವನು | ಸಾಧಿಸುತಿರುವುದು 4
--------------
ವೆಂಕಟ್‍ರಾವ್