ಒಟ್ಟು 585 ಕಡೆಗಳಲ್ಲಿ , 93 ದಾಸರು , 517 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದತೋರೋ ಪದ್ಮಾಕ್ಷ ಬಾರೋ ಪ. ಪಾದಪದ್ಮವ ತೋರೋ ಪದ್ಮಾಕ್ಷ ಬಾರೋ ಆದಿಮಧ್ಯಾಂತ ಸ್ವರೂಪ ಮೈದೋರೋ ಅ.ಪ. ಬಲಿಯನ್ನು ತುಳಿದಂಥ, ಭೂಮಿಯನಳೆದಂಥ ಶಿಲೆಯಾಗಿದ್ದವಳ ಕಲುಷವ ಕಳೆದಂಥ 1 ಶಿಶುರೂಪದಿಂದಲೆ ಶಕಟನ ಒದ್ದಂಥ ಶಶಿಮುಖಿಯಶೋದೆಗೆ ಶಿಶುವೆನಿಸಿ ಮೆರೆದಂಥ 2 ಗೊಲ್ಲರ ಮನೆಮನೆಗೆ ಕಳ್ಳನಂದದಿಪೊಕ್ಕು ನಲ್ಲೆಯರ ಕೈಪಿಡಿಗೆ ನಿಲ್ಲದೋಡುವ ಮುದ್ದು 3 ಕಾಳಿಂಗನ ಫಣೆಯೊಳ್ ಕೋಲಾಹಲದಿ ಕುಣಿದ ಕಾಳಿಂಗನರಸಿಯರಿಗೆ ತಾಲೀ ಭಾಗ್ಯವನಿತ್ತ4 ಕರುತುರುಗಳ ಮರೆಸಿ ದೊರೆ ನಿನ್ನರಸಿದ ಪರಮೇಷ್ಠಿಯೆ ತನ್ನ ಕರದಿಂ ಪೂಜಿಸಿದಂಥ 5 ಮಾವ ಕಂಸನ ಕೊಂದು ತಾಯಿ ದೇವಕಿ ವಸುದೇವಸುತ ವಾಸುದೇವನೆಂದೆನಿಸಿದ 6 ಸಿರಿದೇವಿಯೇ ನಿಜಕರಗಳಿಂದೊತ್ತುವ ಪರಮಪಾವನ ಪದಸರಸೀರುಹ 7 ವರಶೇಷಗಿರಿದೊರೆ ಶರಣರ ಮರೆವರೆ ಶಿರಬಾಗಿ ಬೇಡುವೆ ಭರಿಸೆನ್ನನೆನುವೆ 8
--------------
ನಂಜನಗೂಡು ತಿರುಮಲಾಂಬಾ
ಪಾಲಿಸಯ್ಯಾ ಫಣಿಗಿರಿವಾಸಜೀಯಾ ಪ. ಪಾಲಿಸೈ ಪಾಲಾಬ್ಧಿಶಾಯಿ ಸುಳೀನೀರದನಿಭಶರೀರ ಶ್ರೀ ಕಾಲ ಕಾಮಿತಫಲಪ್ರದಾಯಕ ಅ.ಪ. ಮುನ್ನ ಮಾಡಿದ ಕರ್ಮದಿಂದಲಿ ಬನ್ನಪಟ್ಟೆನು ಶ್ರೀಹರಿ ಇನ್ನು ನಿನ್ನಯ ಚರಣಯುಗವನು ನಿರ್ಣಯದಿ ನಂಬಿದ ಪರಿ ಉನ್ನತೋನ್ನತವಪ್ಪ ತೆರದಲಿ ಮನ್ನಿಪುದು ನೀ ಕೃಪೆದೋರಿ ಬನ್ನ ಪಡುವುದು ಸಾಕು ಸಂತತ ನಿನ್ನನೆ ನೆರೆನಂಬಿದೆನು ಹರಿ 1 ವಾತಪಿತ್ತಕಫಾದಿ ರೋಗದ ವ್ರಾತದಿಂದ ಬಲು ನೊಂದೆನು ಧಾತುಬಲವತಿ ತಗ್ಗಿ ಉಷ್ಣೋಪೇತದಿಂದಲಿ ಬೆಂದೆನು ಚಾತುರ್ಥಿಕ ಜ್ವರಾತಿಶಯದಲಿ ಶೀತಸ್ಥಾನದಿ ನಿಂದೆನು ಈ ತೆರದ ಕಷ್ಟಗಳು ಬಾರದ ರೀತಿಯಲಿ ಪರಿಹರಿಸು ಸಂತತ 2 ನಿನ್ನನೆ ಮರೆಹೋಗುವ ತೆರದಲಿ ನಿನ್ನ ಸ್ಮರಣೆಯ ಮಾಡುವ ನಿನ್ನ ಭಕ್ತರ ಮೇಳದಲಿ ಸಂಪನ್ನನಾಗುತ ಕೂಡುವ ನಿನ್ನ ಮೂರ್ತಿಯ ನೊಡುವದು ಮತ್ತೆನ್ನ ಕಾಮಿತ ಬೇಡುವ ನಿನ್ನನೇ ಧ್ಯಾನಿಸುವ ಮತಿಸಂಪನ್ನವನು ನೀನಿತ್ತು ಕರುಣದಿ3 ಮಾರುತಿಯ ಚರಣಾರವಿಂದದದಿ ಸೇರಿ ನಿನ್ನನು ಧರೆಯಲಿ ಭೂರಿ ಮಹಿಮೆಯ ವರ್ಣಿಸುವ ಸಾಕಾರ ಮತಿಯನು ಎನ್ನಲಿ ಪ್ರೇರಿಸುತ ಕರುಣಾರಸಾಮೃತ ಬೀರಿ ಭೀತಿಯ ಪರಿಹರಿಸುತ್ತಲಿ4 ಕೊಂಚ ಧನವನು ಕೊಟ್ಟು ಎನಗೆ ಪ್ರಪಂಚವಹ ಗೃಹ ಗೈದಿಸಿ ಮುಂಚೆಮಾಡಿದ ಪಾಪವನು ನಿರ್ಲಚದಿಂದಲೆ ಛೇದಿಸಿ ಮಿಂಚಿಯೆನ್ನೊಳು ಮೋದಿಸಿ ಪಂಚಬಾಣನ ಪಿತನೆ ಮಂಗಳ ವಾಂಛಿತವನೆನಗಿತ್ತು ವಿಭವದಿ5 ಕಷ್ಟದಲಿ ನಿನ್ನ ಧ್ಯಾನ ಬಾರದು ತುಷ್ಟಿಯಲಿ ನಾ ಧ್ಯಾನಿಪೆ ಇಷ್ಟವೇ ನೀನಿತ್ತೆಯಾದರೆ ಕಷ್ಟಗಳ ನಾ ದೂಷಿಪೆ ಶ್ರೇಷ್ಠ ಕಾರ್ಕಳ ಪುರದಿ ಭಕ್ತರ ಒಟ್ಟುಗೂಡುತ ತೋಷಿಪೆ ಭ್ರಷ್ಟಲೋಭದ ಬಂಧುಗಳು ಎನ್ನೊಳಿಷ್ಟವಾಗುವ ತೆರದಿ ದ್ರವ್ಯವ6 ಕಾಲಭೈರವ ಪೇಳಿದಂದದಿ ನಾಲಿಗೆಯೊಳು ತಪ್ಪು ನೋಡದೆ ಪಾಲಿಸುತ ಇಷ್ಟಾರ್ಥವನು ಕೈ ಮೇಳವಿಸು ತಪ್ಪು ನೋಡದೆ ನೀಲಗಿರಿ ಸಮನಾಗಿ ಕಾರ್ಕಳದಾಲಯವ ನೀ ಮಾಡಿದೆ ಪಡುತಿರುಪತಿ ಪುರೇಶನೆ 7
--------------
ತುಪಾಕಿ ವೆಂಕಟರಮಣಾಚಾರ್ಯ
ಪಾಲಿಸು ಶ್ರೀಶನೆ ಪರಮ ಪವಿತ್ರನೆ ಪಾವನ್ನ ಚರಿತನೆ ಪಾಲಿಸೆನ್ನ ಪ ಕಾಲಕಾಲಕೆ ನಿನ್ನ ಮಹಿಮೆಯ ತೋರಿಸಲಹುದು ಸರ್ವವ್ಯಾಪಕ ಮಾಯಾದೇವಿಯರಮಣ ಶ್ರೀಪತೆ ಕಾಯೊ ಶ್ರೀಹರಿವಾಸುದೇವನೆಅ.ಪ ವಾಸುದೇವನೆ ನಿನ್ನ ಸೋಸಿಲಿ ಭಜಿಪರ ಕ್ಲೇಶಗಳ್ಹರಿಸಿ ಸಂತೋಷವಿತ್ತು ದೋಷದೂರನ ನಾಮ ಆಸೆಯಿಂದ ಭಜಿಪರಸಂಗವನೂ ನೀಡೆನುತ ಬಿನ್ನೈಸುವೆನೂ ಎನ್ನೊಡೆಯ ನೀನೆಂದೆನುತ ಅಡಿಗಳಿಗೆರಗುವೆನೂ ಧೃಡಭಕುತಿ ನಿನ್ನೊಳಗಿರಿಸಿ ರಕ್ಷಿಪುದೆಂದು ಬೇಡುವೆನೂ ನುಡಿನುಡಿಗೆ ನಿನ್ನಯ ನುಡಿಗಳನು ನುಡಿವಂಥ ಭಕ್ತರ ಅಡಿಗಳಾಶ್ರಯ ಕೊಟ್ಟು ಕಾಯ್ವುದು ಬಡವನೆನ್ನಲಿ ಬೇಡ ಎನ್ನನು ಬಡವರಾಧಾರಿ ಶ್ರೀಹರಿ 1 ಶಂಖು ಚಕ್ರವು ಪದ್ಮಗದೆಯು ಹೊಳೆಹೊಳೆಯುತ್ತ ಬಿಂಕದಿಂದಲಿ ನಿಂತು ನೋಡುತಲಿ ಮಂಕುಮತಿಗಳನ್ನು ಶಂಕೆಯೊಳಗೆ ತಳ್ಳಿನೋಡುತ್ತ ನಿನ್ನಯ ಸದ್ಭಕ್ತರ ಶಂಕೆಗಳೆಲ್ಲವನು ಕ್ಷಿಪ್ರದಿ ಕಳೆಯುತ್ತ ಶ್ರೀಹರಿ ನಿನ್ನ ಪಾದ ಪಂಕಜಗಳೆ ಚಿಂತಿಸುವರಿಗೆ ಹರುಷ ನೀಡುತ್ತ ವೈರಿ ನಿನ್ನಯ ವಿಧವಿಧದ ಲೀಲೆಗಳ ತೋರುತ್ತ ಉದಯ ಭಾಸ್ಕರನಂತೆ ಪೊಳೆಯುತ್ತ ಮುದದಿ ಸಿರದಿ ಕಿರೀಟ ಹೊಳೆಯುತ್ತ ಸದಮಲಾತ್ಮಕ ಸತ್ಯಮೂರುತಿ2 ಹೃದ್ಗೋಚರನಾಗು ಪದ್ಮಾನಾಭ ಉದ್ಧರಿಸೆನ್ನನು ಉದ್ಧವಸಖನೆಂದು ನಂಬಿರುವೆ ಮನ್ಮನದ ಭಯಗಳವದ್ದು ಬಿಸುಡುತ ಸಲಹೊ ನರಹರಿಯೆ ಮಮಸ್ವಾಮಿ ನಿನ್ನಯ ಪದ್ಮ- ಪಾದಕೆ ನಮಿಪೆ ಶ್ರೀಹರಿಯೆ ಮೋಹಕ ಬಂಧವ ಬಿಡಿಸಿರಕ್ಷಿಸುತೆನ್ನ ಸಲಹು ಮಾಯಾಪತಿಯೆ ಬಹು ವಿಧದಿ ಪ್ರಾರ್ಥಿಪೆ ತೋಯಜಾಕ್ಷನೆ ತೋರು ನಿನ್ನಯ ಚಾರು ಚರಣಕೆ ಬಾಗಿ ನಮಿಸುವೆ ಕಾಯ್ವುದೆನ್ನನು ಕಮಲನಾಭವಿಠ್ಠಲನೆ ಶ್ರೀಹರಿ ವಾಸುದೇವನೆ 3
--------------
ನಿಡಗುರುಕಿ ಜೀವೂಬಾಯಿ
ಪಾಲಿಸೆನಗೀ ಜ್ಞಾನ ಪಾಲಸಾಗರಶಾಯಿ ಶ್ರೀ ಲೋಲ ನೀ ನಿತ್ಯದಿ ಪ. ಶೀಲಗುಣ ನಿನ್ನ ಏನು ಬೇಡುವುದಿಲ್ಲೊ ಕಾಲರೂಪನೆ ನಿನ್ನನು | ಇನ್ನು ಅ.ಪ. ಒಂದು ಅಸ್ವತಂತ್ರ ಒಂದು ಸರ್ವಸ್ವತಂತ್ರ ಒಂದು ಮನೆಯೊಳಗೆ ಇದ್ದು ಒಂದೆರಡು ಲೋಕಕ್ಕೆ ಒಂದೆ ದೈವನು ಎನಿಸಿ ಒಂದೊಂದರಲಿ ಇರುವ ಒಂದು ಅಪೇಕ್ಷಿಸದೆ ಒಂದೆರಡು ಗುಣದಿಂದ ಒಂದೆರಡು ಮಾಳ್ಪ ಜಗವ ಇಂದಿರೇಶನೆ ನಿನ್ನ ಈ ವಿಧದ ವ್ಯಾಪಾರ ಒಂದೊಂದು ಮನಕೆ ತೋರೋ | ಸ್ವಾಮಿ 1 ಎರಡು ಮಾರ್ಗಗಳಿಹವು ಎರಡು ಕರ್ಮಗಳಿಂದ ಎರಡು ವಿಧ ಸಮ ತಿಳಿದರೆ ಎರಡು ರೂಪಗಳನು ಒಂದಾಗಿ ಭಾವಿಸುತ ಎರಡೊಂದು ಜೀವ ತಿಳಿದು ಎರಡು ಫಲ ಅನುಭವಿಸಿ ಎರಡು ಹರಿಗರ್ಪಿಸುತ ಎರಡು ವಿಧ ಕರ್ತನೆಂದು ಎರಡು ಎಪ್ಪತ್ತು ಸಹಸ್ರನಾಡಿಗಳಲ್ಲಿ ಎರಡು ರೂಪದಲಿರುವ ಪೊರೆವ 2 ಮೂರು ಅವಸ್ಥೆಯಲಿ ಮೂರು ತಾಪವ ಸಹಿಸಿ ಮೂರು ಮಾರ್ಗದಲಿ ನಡೆದು ಮೂರೆಂಟು ಇಂದ್ರಿಯವ ಮೂಲರೂಪದಿ ಲಯಸಿ ಮೂರಾರು ವಿಧ ಭಕ್ತಿಯಲಿ ಮೂರೈದು ನುಗ್ಗೊತ್ತಿ ಮೂರು ಮೂರು ಅರಿಯ ಮೂರು ಶುದ್ಧಿಯಲಿ ಗೆದ್ದು ಮೂರಾರು ಎರಡೊಂದು ಖೋಡಿ ಮತಗಳ ಮುರಿಸಿ ಮಾರುತಿಯ ಮತದಿ ನೆಲಸಿ | ತಿಳಿಸಿ 3 ವಿೂನ ಕೂರ್ಮನೆ ವರಹ ಶ್ರೀ ನಾರಸಿಂಹನೆ ದಾನಯಾಚಕ ಭಾರ್ಗವ ವಾನರರಿಗೊಲಿದನೆ ವೇಣುಹಸ್ತರೂಪಿ ಮಾನವಿಲ್ಲದ ಕಲ್ಕಿಯೆ ಶ್ರೀನಿವಾಸನೆ ನಿನ್ನ ನಾನಾವಿಧ ರೂಪಗಳು ನಾನು ವರ್ಣಿಸಲು ಅಳವೆ ಮಾನಾಭಿಮಾನದೊಡೆಯನೆ ಕೃಷ್ಣ ಕೈಪಿಡಿಯೊ ಭಾನುಪ್ರಕಾಶ ಹರಿಯೆ | ಸಿರಿಯೆ 4 ಶಿರದಲ್ಲಿ ಕಿರೀಟ ಫಣೆಯಲ್ಲಿ ತಿಲುಕವು ಮೆರೆವ ಕುಂಡಲದ ಕದಪು ಕಿರುನಗೆಯ ಪಲ್ಗಳು ಕೊರಳಲ್ಲಿ ಹಾರಗಳು ಕರದಲ್ಲಿ ಆಯುಧಗಳು ಸಿರಿ ಭೂಮಿ ಎಡಬಲದಿ ಸುರನದಿಯ ಪೆತ್ತಪಾದ ಸಿರಿರಮಣ ಗೋಪಾಲಕೃಷ್ಣವಿಠ್ಠಲ ಎನಗೆ ಪರಿ ಪರಿಯ ರೂಪ ತೋರೊ ಸ್ವಾಮಿ 5
--------------
ಅಂಬಾಬಾಯಿ
ಪಾಲಿಸೆನ್ನ ಲೋಲಲೋಚನ ಬಾಲಗೋಪಾಲ ಪ ಶೌರಿ ಶ್ರೀವನಮಾಲಿ ಶ್ರೀಲೋಲ ಅ.ಪ ಪಾದ ನಿನ್ನ ಭಾವನ | ಸಂಜೀವನ ಪತಿತರಾ ಪೊರೆವೆ 1 ಸತತ ನಿನ್ನ ಚರಣದಿ ಬೇಡುವೆ ಹಿತದೊಳೆರಗುವೆ ಮಾಂಗಿರೀಶ ಕಲುಷನಾಶ ರಂಗ ಸುಪ್ರಕಾಶ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸೆನ್ನನು ಜಾನಕೀ ಅರವಿಂದ ನಾಯಕಿ ಪ. ಫಾಲಲೋಚನನುತೆ ತ್ರೈಲೊಕ್ಯ ವಿಖ್ಯಾತೆ ಬಾಲಾರ್ಕದ್ಯುತಿ ಭಾಸುರಾನನೆ ನೀಲಾಳಕೆ ನಿತ್ಯನಿರ್ಮಲೆ ಅ.ಪ. ಜನನಿಯಲ್ಲವೆ ನೀನು ತನುಭವರೊಳು ಇನಿತು ನಿರ್ದಯವೇನು ಮನಕೆ ತಾರಲು ನೀನಾಕ್ಷಣದೊಳೇ ದೀನನಂ ಅನಘ ಸಂಪದವಿತ್ತು ಮೆರೆಯಿಪ ಘನತೆಯಾಂತವಳಲ್ಲವೇನು 1 ಬಾಗುತೆ ಶಿರವಿಳೆಗೆ ಬೇಡುವ ಬಗೆ ಕೂಗು ಬೀಳದೆ ಕಿವಿಗೆ ಭಾಗವತಾರ್ಚಿತೆ ಭಾರ್ಗವೀ ನಾಮಖ್ಯಾತೆ ಬೇಗೆಯೆಲ್ಲವ ಪರಿದು ಯೆನ್ನ ರಾಗದಿಂದಲಿ ನೋಡು ಭರದಲಿ 2 ನೀನಲ್ಲದನ್ಯರಂ ಕಾಣೆನು ಹಿತರಂ ಮಾನಿತ ಗುಣಯುತರಂ ಆನತರಾಗುವ ಸೂನೃತವ್ರತಿಗಳಿ ಗಾನಂದವಿತ್ತು ಪೊರೆವ ದಾನಿ ಶೇಷಗಿರೀಶರಮಣಿ 3
--------------
ನಂಜನಗೂಡು ತಿರುಮಲಾಂಬಾ
ಪಾಲಿಸೆನ್ನನೂ ರಾಮ ಪಂಥವ್ಯಾತಕೋ ಪ ಕಾಲವೈರಿ ಕಪಟನಾಟಕ | ಆಲಿಸೆನ್ನ ಬಿನ್ನಪವಂ ಚಾಲನೆ ಶ್ರೀಲೋಲನೇ ನೀಂ ಅ.ಪ ರಕ್ಷಕಾಮಣಿ ಸಾಧುಜನ ರಕ್ಷಾಮಣಿ ಅಕ್ಷಯ ಸುಜನರಾಶ್ರಿತÀ ನಿನ್ನ ಭಿಕ್ಷವನಾಂಬೇಡುವೆನೈ ಪಕ್ಷಿವಾಹನ ಜಗದಧ್ಯಕ್ಷನೇ ಸೀತಾರಾಮ 1 ಪಂಡಿತಾಮಣಿ ಜ್ಞಾನಕುಂಡಲಿನಗರೀಶ ನೀ ನಂಡಜ ವಾಹನನಹುದೊ ಪಂಡರಿಪುರನಾಯಕ ಚಾ ಮುಂಡಿ ವರದಾಯಕ ನೀಂ [ಶ್ರೀರಾಮ] 2 ಶಾಶ್ವತ ಜನಭಾಷಾ ಭಾಸ್ಕರಕೋಟಿ ತೇಜಾ ಈಶ್ವರ ಮತ್‍ಗುರು ತುಲಶೀರಾಮಾ 3
--------------
ಚನ್ನಪಟ್ಟಣದ ಅಹೋಬಲದಾಸರು
ಪಾಲಿಸೇ ಪದ್ಮಾಲಯೇ ಪಾಲಿಸೆ ಪ. ಪಾಲಿಸು ನಿನ್ನನೆ ಓಲೈಸಿತಿರುವೀ ಬಾಲೆಯರಭಿಮತ ಪಾಲಿಸುತೊಲವಿಂಅ.ಪ. ಅಂಬುಜನಾಭನ ರಾಣಿ ನಿನ್ನ ನಂಬಿದೆ ಪಲ್ಲವರಾಣಿ ಚನ್ನೆ ಕಂಬುಕಂಧರೆ ಫಣಿವೇಣಿ ಎನ್ನ ಬೆಂಬಿಡದಿರು ಕಲ್ಯಾಣಿ ಜನನೀ ಜಂಭಾರಿ ಪೂಜಿತೆ ಶಂಬರಾರಿಯಮಾತೆ ಶಂಭುವಂದಿತ ಪಾದಾಂಬುಜಕ್ಕೆರಗುವೆ 1 ಘನ ಸತ್ಯವ್ರತ ಪಿಡಿದರಿಯೆ ತಾಯೇ ಮತ್ತೇಭಗಾಮಿನಿ ಮರೆಹೊಕ್ಕೆ ನಿನ್ನನೇ ನಿತ್ಯಸತ್ಯದಿ ನಿನ್ನ ಭಜಿಸುವೆ ಜನನೀ 2 ಘೋರ ಋಣದ ಭಾದೆ ಕಳೆದು ಎನ್ನ ಪಾರುಗಾಣಿಸು ಮೋದವಡೆದು ಮುನ್ನ ದುರಿತವಿದೆನ್ನನು ಬಿಡದು ತಾಯೆ ವರಶೇಷಗಿರಿ ದೊರೆಯರಸಿ ನಿನ್ನಡಿತಾವರೆಗೆನ್ನನಾರಡಿಯೆನಿಸೆಂದು ಬೇಡುವೆ3
--------------
ನಂಜನಗೂಡು ತಿರುಮಲಾಂಬಾ
ಪಾಲಿಸೈ ಗೋಪಾಲರಾಯಾ ಶೀಲ ಭಕುತಿ ಜ್ಞಾನವ ನಿತ್ಯ ಸಲಿಸುತ ಪ್ರಸನ್ನನಾಗಿ ಪ ಓಡಿಸಿ ವಿಷ್ಣುವ ನೀಡು ವೈರಾಗ್ಯವ ಬೇಡುವೆ ನಾ ಕೃಪೆ ಮಾಡಿ ಗತಿ 1 ಆರ್ತರಭೀಷ್ಟೆಯ ಪೂರ್ತಿಪದಾನಿ ಶುಭ ಮೂರ್ತಿಸದಾ 2 ಶಾಮಸುಂದರ ಸ್ವಾಮಿಯ ನಿಜ ದಾಸ ಮೌನಿಯ ಘನ ಪ್ರೇಮಾನಿಸ್ವಿತಾ 3
--------------
ಶಾಮಸುಂದರ ವಿಠಲ
ಪಾಲಿಸೈ ಮುಕುಂದ ಗೋವಿಂದ ಆನಂದದಿಂದ ಪ. ಮಾರಜನಕನೆ ಕೋರಿ ನಿನ್ನೆಡೆ ಸಾರಿ ಬೇಡುವೆನೊ ಗಾರುಗೊಳಿಸದೆ ತೋರು ಕರುಣೆಯ ಮಾರಹರನುತ ವೀರರಾಘವ 1 ಭಾನುಕೋಟಿ ಸಮಾನ ಭಾಸುರ ಜಾನಕೀ ಮನೋಹರ ದಾನವಾಂತಕ ದೀನರಕ್ಷಕ ಮಾನನಿಧಿ ಪೊರೆ ಸುಜ್ಞಾನವಾರಿಧಿ 2 ಪೋಷ ಭವಭಯನಾಶನ ಕ್ಲೇಶಹರಣ ಶ್ರೀಕೇಶವಾಚ್ಚುತ ಲೇಸು ಬೇಡುವೆ (ನಾ) ಮೀಸಲಿರಿಸಿಹೆ 3
--------------
ನಂಜನಗೂಡು ತಿರುಮಲಾಂಬಾ
ಪಾಲಿಸೈಯಪಾರ ಮಹಿಮ ಪತಿತ ಪಾವನ ಪ. ನೀಲ ಎನ್ನ ಅ.ಪ. ಇಂದಿರಾ ಮನೋಹರ ಆನಂದ ಮೂರುತಿಯೆ ನಿನ್ನ ವಂದಿಸಿ ಬೇಡುವ ಎನಗೆ ಸಂದರುಶನವೀಯ ರಾಯ ತಂದೆ ಮುಕುಂದ ಮನ್ನಿಸೆಲೊ ಕಂದನಾದೆನ್ನ ಮರೆಯದೆ ಬಂದು ನಿಂದು ಮುಖವ ತೋರೊ ಸುಂದರ ಅರವಿಂದನಯನ 1 ತಾತನಾಗಿ ಎನ್ನೊಳೊಂದ ಮಾತನಾಡದಿರುವರೇನೊ ನಾಥ ನೀನೇ ಕಾಯದಿರಲು ಖ್ಯಾತಿವಂತರನ್ನು ಕಾಣೆ ಪರಾಕು 2 ವಾಸುದೇವ ಕೈಯ ಬರದೆ ದೋಷವ ನಾಶಮಾಡಿ ನಿನ್ನ ದಾಸನೆಂದೆನಿಸೊ ನಿನ್ನ ಬೇಸರಿಸದೆ ಶೇಷಗಿರಿವಾಸ ವೆಂಕಟೇಶ ಪೊರೆಯೊ 3
--------------
ಸರಸ್ವತಿ ಬಾಯಿ
ಪಾಲಿಸೊ ಶ್ರೀನಿವಾಸ ಜಗದೀಶ ಪ ಮೇಲುಗಿರೀಶ ಹೃತ್ಕುಮುದನಿವಾಸ ಸತೀಶ ನೀನೆ ಅವಿನಾಶನೆ ಅನಿಶ ಅ.ಪ ಅನಿಮಿತ್ತ ಬಂಧು ನೀ ನಿನ್ಹೊರತು ಅನ್ಯರುಂಟೇ ಅನಪೇಕ್ಷನು ನೀ ದೀನರಕ್ಷನೆ ನಾನೇನರ್ಪಿಸಬಲ್ಲೆ ನೀ ಬಲ್ಲೆ ಅನುದಿನ ಮನೋವಾಚಕಾಯದಿ ನಾನೆಸಗುವುದು ಬಲ್ಲೆ ಅಲ್ಲಲ್ಲೇ ಘನಮಹಿಮನೆ ಎನ್ನ ಮನದಲ್ಲಿ ಅನುದಿನ ನಿನ್ನ ನೆನೆಯುವುದನೆ ಇತ್ತು ಕೊನೆಗಾಣಿಸು ಇನ್ನು 1 ಸತ್ಯಸಂಕಲ್ಪ ನೀ ನಿತ್ಯನೂತನಪ್ರಭುವೇ ಅತ್ಯಧಿಕದಿ ಭಕ್ತೋತ್ತಮರು ನಿತ್ಯ ಸೇವಿಸುತಿಹರೋ ಅವರ ಭೃತ್ಯನೆನಿಪ ಸಂ- ಪತ್ತನಿತ್ತು ಆಪತ್ತು ಹರಿಸಿ ಭಕ್ತಿಯ ನೀಡಯ್ಯ ಕರ್ಮ ಬೆನ್ಹತ್ತಿ ಹತ್ತಿ ಆಸೆ ಪೊತ್ತು ಕೊನೆಗೆ ನಾ ಉನ್ಮತ್ತನಾದೆ 2 ಪ್ರಣವಸ್ತಗೆ ದೇವಾ ನೀ ಪ್ರಣತ ಕಾಮದ ಕಾವಾ ಪ್ರಣತ ಜನರ ಮುಖ್ಯಪ್ರಾಣಾಂತರ್ಗತ ಫಣಿರಾಜಶಯ್ಯ ಹೇ ಜೀಯ್ಯ ಗುಣಮಣಿ ಶ್ರೀ ವೇಂಕಟೇಶ ಕ- ರುಣಾಕರ ಇನ್ನು ನಿನಗೆಣೆಯ ದೊರೆಯೆ ಮಣಿದು ಬೇಡುವೆ ನಿನ್ನ ದಣಿಸಲಾಗದು ಇನ್ನೂ ಧಣಿಯು ನೀ ಉರಗಾದ್ರಿವಾಸ ವಿಠಲ 3
--------------
ಉರಗಾದ್ರಿವಾಸವಿಠಲದಾಸರು
ಪಾಲಿಸೋ | ಪಾವ9ತಿಯ ಪ್ರಾಣೇಶ | ಪಾಲಿಸೋ ಪ ಪಾಲಿಸೆಮ್ಮನು ಪಶುಪತಿಯೆ | ನಿಜ | ಬಾಲಾಕ9 ಕೋಟಿದೀಧಿತಿಯೆ | (ನಮ್ಮ) | ಏಳಿಗೆಗೊಳಿಪ ಸದ್ಗತಿಯೆ ಎಂಬು || ಮೂಲ ಮೂರುತಿ ಸರ್ವಕಾಲಕಾಲನೆ ತ್ರೀ || ಶೂಲವ ಪಿಡಿದೆನ್ನ ಆಲಸ್ಯ ತ್ಯಜಿಸಿನ್ನು 1 ಪ್ರಮಥ ಪ್ರಜಾಪ್ರಭೂದಾರ | ಧರ್ಮ | ದ್ರುಮ ಸುಮನಸರಿಗಾಧಾರ |ಜಗ | ತ್ಕ್ರಮಜಳಿಂತೆನುವ ವಿಚಾರ | ಸ್ವಾಮಿ | ನಮಿಸಿ ಕೇಳುವೆ ಸವ9ಸಾರ | ಆಹಾ || ಗಾತ್ರ | ದ್ಯುಮಣಿಸನ್ನುತ ನಮೋ | ನಮೋಯೆಂಬೆ ಜಯ ಶಂಭೋ 2 ಶರಣವತ್ಸಲ ಮೃತ್ಯುಂಜಯನೆ | ನಿನ್ನ | ಮರೆಯ ಹೊಕ್ಕೆನು ಕಾಲಾಂತಕನೆ | ಎನ್ನ | ಕರುಣದಿ ಸಲಹೊ ಶಂಕರನೆ | ಶಿರ- ವೆರಗಿ ಬೇಡುವೆ ದಯಾಪರನೆ | ದೇವ || ಕರುಣಾಸಾಗರ ನಿನ್ನ | ತರಳನಾಗಿದೆ9ನ್ನ | ಪರ ಗುರುರಾಯನೆ 3
--------------
ಸದಾನಂದರು
ಪೋಗವಲ್ಲದು ಇಹ್ಯಭೋಗದಾಸೆಯು ಇನ್ನು ನಾಗಶಯನ ನೀನೆ ನೀಗಿಸು ಇದನು ಪ ಏಸು ಸಾರ್ಹುಟ್ಟ್ಹುಟ್ಟಿ ಆಶಪಾಶದಿ ಬಿದ್ದು ನಾಶ ವೊಂದುತ ಬಲು ಬೇಸತ್ತೆ ಹರಿಯೆ 1 ಹೇಯಭರಿತವಾದ ಕಾಯಸುಖಕ್ಕೆ ಮೆಚ್ಚಿ ಪಾವನಪಥ ಮರೆದು ಬವಣೆಬಟ್ಟೆಭವ 2 ಅರಿದು ತವಪದಕ್ಕೆ ಎರಗಿ ಬೇಡುವೆ ಸ್ಥಿರ ವರಮುಕ್ತಿಸುಖ ನೀಡಿ ಪೊರೆಯೊ ಶ್ರೀರಾಮ 3
--------------
ರಾಮದಾಸರು
ಪ್ರಣಾಮ ಗಣರಾಯಾ ಪ್ರ'ೀಣಾ ಪಪ್ರಥಮ ಪ್ರಣಾಮವ ಮೂಡಿ ಬೇಡುವೆ'ಘ್ನರಾಜ ನೀ ನೀಡೆಮಗಭಯಾಅ.ಪಪಾಶಾಂಕುಶಧರ ಮೂಷಕವಾಹನಕೇಶರಗಂಧ 'ಭೂತಾಂಗನೇಶೇಷೋದರ ಉಮೇಶನಂದನಾಯಶವ ನೀಡು ಸತ್ಕಾರ್ಯಗಳಲ್ಲಿ 1ಏಕ'ಂಶತಿ ಮೋದಕ ಪ್ರೀಯಾಏಕದಂತ ಗಜವದನ ಉದಾರಾಕಾಕುಬುದ್ಧಿಗಳ ಬಿಡಿಸಿ ಬೇಗನೇಶ್ರೀಕಾಂತನಲಿ ಏಕಾಂತಭಕುತಿ ಕೊಡು 2ಸಿದ್ಧಿ 'ನಾಯಕಾ 'ದ್ಯಾಸಮುದ್ರಾಬುದ್ಧಿ ಪ್ರದಾಯಕ ಮುದ್ದು ಗಜಾನನಾಶುದ್ಧ ಜ್ಞಾನ ವೈರಾಗ್ಯ ಭಕುತಿಕೊಟ್ಟುಉದ್ಧರಿಸೈ ಭೂಪತಿ'ಠ್ಠಲಪ್ರಿಯಾ 3
--------------
ಭೂಪತಿ ವಿಠಲರು