ಒಟ್ಟು 4717 ಕಡೆಗಳಲ್ಲಿ , 123 ದಾಸರು , 3118 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಭೇಧವಿಲ್ಲದವನೆ ನಿಜಜ್ಞಾನಿಯು ತನು ಭಾವವರಿತು ನಡೆಯುವನೆ ನಿಜ ಭಾಗವತನು ಪ ಮಾನ ಅಪಮಾನ ಸಮಕಾಣುವನೆ ಸಜ್ಜನನು ತಾನು ತನ್ನದೆಂಬ ಮಾಯವಳಿದವನೆ ಸಾಧು ಏನು ಕೊಟ್ಟರು ಒಲ್ಲೆನೆಂಬುವನೆ ಸನ್ಯಾಸಿ ದೀನರನು ಕಂಡು ಮನಮರುಗುವನೆ ಭಕ್ತ 1 ನಿಜಧರ್ಮವರಿಯದ ಪಾಮರನೆ ಶೂದ್ರನು ನಿಜವಾಕ್ಯಗಳ ಕೇಳಿ ಅಳಿವವನೆ ಭವಿಯು ಸುಜನರಿಗೆ ತಲೆಬಾಗಿ ನಡೆವವನೆ ಸಿದ್ಧಾಂತಿ ಕುಜನರ ಮಾತಿಗೊಳಪಡುವವನೆ ನರಕಿ 2 ಪಿಡಿದ ವ್ರತನೇಮಗಳ ಬಿಡದವನೆ ಕಡುಗಲಿ ಜಡದೇಹ್ಯಮೋಹವನು ತೊಡೆದವನೆ ಸತ್ಯ ಬಂಟ ಜಗದೊಳಗೆ ಒಡೆಯ ಶ್ರೀರಾಮನಡಿ ದೃಢಯುತನೆ ಮುಕ್ತ 3
--------------
ರಾಮದಾಸರು
ಆವರೀತಿಲಿ ಎನ್ನ ಕಾವದೇವರು ನೀನಿ ನ್ನಾವ ದೈವದ ಬಲವು ನಾನೊಲ್ಲೆ ಸ್ವಾಮಿ ಪ ಆವರೀತಿಲಿ ಬಿಡದೆ ನೀ ಎನ್ನ ಕಾಯೊ ಭಕ್ತರ ಜೀವದರಸನೆ ಭಾವಜಪಿತ ನಿನ್ನ ಬಿಟ್ಟ ನ್ನ್ಯಾವ ದೇವರು ಇಲ್ಲ ಎನಗೆ ಅ.ಪ ಕುಸುಮಾಕ್ಷ ತವಧ್ಯಾನ ನಿಶಿದಿವದೊಳು ಬಿಡದೆ ಹಸನಾಗಿ ಭಜಿಪಂಥ ಕುಶಲಮತಿ ನೀಡಿ ಪುಸಿಯ ಸಂಸಾರದ್ವೆಸನವಳುಕಿಸಿ ಅಸಮ ಸಂತಸಸುಖವ ಕರುಣಿಸಿ ಅಸುವುಪೋದರು ಪುಸಿಯನಾಡದ ಸುಶೀಲ ಮನವಿತ್ತು ಪೋಷಿಸಭವ 1 ಬಿಡದೆಕಾಡುವ ಎನ್ನ ಕಡು ಜಡಮತಿಯನ್ನು ಕಡಿದೊಡನೆ ನುಡಿಯಂತೆ ನಡೆಯನೆನ್ನೊಡಲಿಗೆ ಗಡನೆ ಸ್ಥಿರಮಾಡಿ ಎಡರು ತೊಡರಿನ ಜಡರಿನೊಳಗಿಂದ ಕಡೆಗೆ ನಿಲ್ಲಿಸಿ ಒಡೆಯ ನಿನ್ನ ಅಡಿದೃಢವನಿತ್ತು ಪಿಡಿದು ನೀ ಎನ್ನ ಬಿಡದೆ ಸಲಹೊ 2 ರತಿಪತಿಪಿತ ನೀನೆ ಗತಿಯೆಂಬ ಸಿದ್ಧಾಂತ ನುತಿಯ ಮಂತ್ರವನೆನಗೆ ಹಿತದಿಂ ಪಾಲಿಸು ಸತತ ನಿನ್ನನು ಸ್ತುತಿಪ ಭಕ್ತರ ಹಿತದ ದರುಶನ ಪ್ರಥಮವಿತ್ತೆನ್ನ ಗತಿಸದಂಥ ನಿಜಸ್ಥಿತಿಯ ಸಂಪದ ವಿತ್ತು ರಕ್ಷಿಸೋ ಶ್ರೀರಾಮ ಪ್ರಭುವೆ 3
--------------
ರಾಮದಾಸರು
ಆವಳಿಗೆ ಪೆಣ್ಣೆಂದು ನುಡಿಯುವರೊ ನರರು ಅವಳೆ ಮುರಿದುತಿನ್ವ ರಕ್ಕಸ್ಯೆಂದೆನ್ನಿರೊ ಪ ಮುದ್ದು ಮುಖವನೆ ತೋರಿ ಬುದ್ಧಿನಾಶನ ಗೈದು ಶುದ್ಧಪದ್ಧತಿ ಕೆಡಿಸಿ ಇದ್ದಾಸ್ತಿಯಳಿದು ಬದ್ಧನೆನಿಸಿ ಮುಂದೆ ಬೇಡಿದ್ದು ಕೊಡದಿರೆ ಬಿಡದೆ ಒದ್ದು ನೂಕ್ವದರಿಯದೆ ಶುದ್ಧ ಮೂರ್ಖರಾಗಿ1 ತಂದೆ ತಾಯಿನಗಲಿಸಿ ಬಂಧುಬಳಗ ದೂರೆನಿಸಿ ಮಂದಿ ಮಕ್ಕಳೊಂದುಗಳಿಗೆ ಹೊಂದಿಇರಗೊಡದೆ ತಂದದ್ದೆಲ್ಲ ತಿಂದು ನಿಂದೆಯಾಡುತ ಯಮನ ಬಂಧಕ್ಕಟ್ಟುವುದರಿಯದೆ ಮಂದಮತಿಗಳಾಗಿ 2 ತನುಮನಧನ ಸೆಳೆದು ಘನತೆನಾಶಿಸಿ ಮುಂದೆ ಬಿನುಗರಲಿ ಬಿನುಗೆನಿಸಿ ತಿನುವುದೊಂದಿನದಿ ಮನದರಿತು ನೋಡದಿರು ಘನಮುಕ್ತಿಯನ್ನು ಕೊಡುವ ವನಜಾಕ್ಷ ಶ್ರೀರಾಮನಂ ಘನನೆಂದರಿಯದಲೆ 3
--------------
ರಾಮದಾಸರು
ಆವುದು ಖರೆಯೆಲೊ ಜೀವನೆ ಆವುದು ನಿಜವೆಲೊ ಪ ಆವುದು ಖರೆಯಲೋ ಜೀವ ಜಗದ ಸುಖ ಮಾಯದೆಲ್ಲನು ಭಾವಿಸಿ ನೋಡೋಅ.ಪ ಬಡತನ ನಿಜವೇನೋ ನಿನಗೀ ಕಡುಸಿರಿ ಸ್ಥಿರವೇನು ಮಡದಿ ಮಕ್ಕಳು ನಿನ್ನ ಸಂಗಡ ಕಡೆತನಕಿಹ್ಯರೇನೊ ಹೆಡತಲೆ ಮೃತ್ಯು ಬಂದು ಪಿಡಿದು ಎಳೆಯುವಾಗ ಅಡರಿಕೊಂಡು ನಿನ್ನ ಬಿಡಿಸಿಕೊಂಬುರೇನು 1 ರಾಜ್ಯ ಭಂಡಾರವೆಲ್ಲ ನಿನಗೆ ಸಹಜವಾದದ್ದಲ್ಲ ಗೋಜುಪ್ರಪಂಚ ನಿಖಿಲವಂ ದಿನಮಾಜಿಹೋಗುವುದೆಲೊ ಸೋಜಿಗವಾಗಿ ಮಿಂಚು ತೇಜದಡಗುವಂತೆ ಈ ಜಗ ಸಮಾಜ ನಿಜವಿನಿತಿಲ್ಲೆಲೊ 2 ಕತ್ತೆಯಂತೆ ಕೂಗಿ ಜನ್ಮವ್ಯರ್ಥ ಕಳೆಯಬೇಡೊ ಉತ್ತಮರಿಗೆ ಬಾಗಿ ಸತ್ಯಪಥಕೆ ಹೊಂದು ಪಾಡೊ ನಿತ್ಯ ನಿರ್ಮಲ ಸರ್ವೋತ್ತಮ ಶ್ರೀರಾಮಪಾದ ಭಕ್ತಿಯಿಂ ಪಾಡಿ ಮುಕ್ತಿಯ ಪಡೆಯೊ3
--------------
ರಾಮದಾಸರು
ಆವುದು ಸ್ಥಿರವೆಲೋ ಮನವೆ ಇದು ಮಾಯವು ಕಾಣೆಲೊ ಪ ಆವದು ಸ್ಥಿರವೆಲೋ ಮಾಯವಿದೆಲ್ಲವು ಭಾವದಿ ಕುದಿಯುತ ನೋಯುವಿ ಯಾಕೆಲೊ ಅ.ಪ ಅರ್ಥವೆಂಬುವುದೆಲ್ಲ ವ್ಯರ್ಥವು ಮೃತ್ಯು ತಿಳಿಯೆ ನಿಖಿಲ ಅರ್ತುವಿಚಾರಿಸು ಸಾರ್ಥಕವಾವುದು ಮರ್ತುಕೆಡದೆ ಭವನಿರ್ತದಿಂ ಗೆಲೆಯೆಲೊ 1 ಸತಿಸುತರಿವರೆಲ್ಲ ಹಿತವಿರಲತಿ ಸೇವಿಪರೆಲ್ಲ ಗತಿಸಲು ಭಾಗ್ಯವು ಹಿತದೋರಿದವರೇ ಅತಿಜರೆಯುತ ನಿನ್ನ ವ್ಯಥೆಯ ಬಡಿಪರೆಲೊ 2 ಒಂದಿನ್ಹೋಗ್ವುದಂತು ತಪ್ಪದು ನೋಯುವುದ್ಯಾಕಿಂತು ಇಂದು ನಾಳೆನ್ನದೆ ತಂದೆ ಶ್ರೀರಾಮನ ಬಂಧುರಂಘ್ರಿಗಳಿಗ್ಹೊಂದಿ ನೀ ಸುಖಿಯಾಗೊ 3
--------------
ರಾಮದಾಸರು
ಆಶಾ ಪಾಶದಲಿ ಬಿದ್ದು ಘಾಸಿಯಾಯಿತು ಜೀವ ವಾಸುದೇವನೆ ನಿಮ್ಮ ಆಶೆಗೆನ್ನ ಮನವಿಲ್ಲ ಪ ಮಡದಿಯಾಗಲು ಮತ್ತೆ ಮನೆಯಾ ಮಾಡುವದಾಶಾ ಒಡಗೂಡಲದು ಮಕ್ಕಳಾಗುವಾಶಾ ಬಿಡದೆ ಕುಟುಂಬ ಪೋಷಣೆಯಾಗುವಾದಾಶಾ ಕಡಲ ಶಯನಾ ನಿಮ್ಮ ಆಶೆಗೆನ್ನ ಮನವಿಲ್ಲ 1 ಅನ್ನವಾಗಲು ವಸ್ತ್ರ ಅಲಂಕಾರದಾಶಾ ಇನ್ನು ಮಕ್ಕಳ ಮುಂಜಿ ಮದುವಿಯಾಶಾ ತನ್ನ ನೆಂಟರಸರಿಯಾ ಮಾಡುವದಾಶಾ ಪನ್ನಗಾಶನವಾಹನಾಶೆಗೇ ಮನವಿಲ್ಲ 2 ನಡೆವಕಾಲಕೆ ದೊಡ್ಡ ಕುದುರೆ ಏರುವದಾಶಾ ಅಡರಲು ರಥದಿಂದ ಆಂದಣಾಶಾ ಕಡಿಗೆ ತೀರದ ಹೊನ್ನು ಹಣದ ಸಂಗ್ರಹದಾಶಾ ಪೊಡವಿಧರನೇ ನಿಮ್ಮ ಆಶೆಗೆ ಮನವಿಲ್ಲ 3 ಒಂದೊದಗಲು ಮತ್ತೆ ಒಂದು ಬಯಸುದಾಶಾ ಎಂದಿಗೇ ಸರಿಯದು ವಿಷಯದಾಶಾ ಕುಂದಿದ ತನುವಿನ ಬಲವಾಗುವದಾಶಾ ಇಂದಿರೇಶನ ಆಶೆಗೆನ್ನ ಮನವಿಲ್ಲ 4 ಆಶೆಯೆಂಬಾ ನದಿಯ ಸುಳಿಯ ಬಿಡಿಸಿ ನಿಜ ದಾಸರಾ ಸಂಗ ಮನವ ತಿದ್ದೀ ಲೇಸಾಗಿ ಮಹಿಪತಿ ಸುತ ಪ್ರಭು ಭಕುತಿಯಾ ಆಶೆ ಹೆಚ್ಚಿಸಿ ಎನ್ನ ದಯದಿ ಪಾಲಿಸೋ ದೇವಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆಶೆಯ ಬಿಡಿಸಿದ್ಯೋ ಎನ್ನಾ ಮುಂದೆ ವಾಸವಾಗದಂತೆ ಕಾಯೋ ಮೋಹನ್ನಾ ವಾಸುದೇವನೆ ನಿನ್ನ ಸ್ಮರಣೆಯೊಳಗೆ ಮನ ಸೂಸದಂತೆ ಸ್ಥಿರ ನಿಜದಲ್ಲಿ ನಿಲಿಸಯ್ಯಾ ಪ ಬೆಂಬಿಡದೆಲೆ ನಿಜದರಿವನ್ನು ಕೊಡುವಾ ಕುಂಭಿಣಿಯೊಳಗೆಲ್ಲಾ ನೀನಲ್ಲದೆ ಎನ್ನಾ ನಂಬಿಗೆ ಕೊಡುವವರ್ಯಾರೋ ನಾರಾಯಣಾ 1 ಬೆಂದೆನು ನಾ ಭವದೊಳಗೆ ಎನ್ನಾ ತಂದೆ ನೀ ಕಾಯೋ ನಿಜಪದದೊಳಗೆ ಹಿಂದಿನ ಪ್ರಾರಬ್ಧ ಬವಣೆಯ ತೀರಿಸಿ ಮುಂದೆ ನೀ ಸಲಹೊ ಪರಮಪುರುಷನೆ ಹರಿ 2 ವಾಸನೆ ಬಂಧವೇ ಜೀವಾ ನಿ ರ್ವಾಸನೆಯನು ಕೊಟ್ಟು ಸಲಹೊ ಮಾಧವಾ ಶೇಷಶಯನನೆ ನಿಜ ಧ್ಯಾನದೊಳಿರಿಸೆನ್ನಾ ಆಶೆಯನು ಸಲಿಸಯ್ಯಾ ಮುರಾರಿ 3 ಅನಂತ ಮಹಿಮಾ ಮೇಘಶ್ಯಾಮಾ ನಿಶ್ಚಿಂತ ನಿಜ ಶಾಂತಿ ಸ್ವಸುಖವೀವಾ ನಂತಪರಾಧವ ಕ್ಷಮಿಸೆನ್ನಾ ಗುರುವೇ 4
--------------
ಶಾಂತಿಬಾಯಿ
ಆಸೆ ತೋರಿಸಿ ಈಶ ನಿರಾಸೆಮಾಳ್ಪರೆ ಲೇಸೋ ನಿನಗೆ ಶೇಷಶಾಯಿ ಶ್ರೀಶ ಅಭಿಲಾಷಿಗಳಿಗೆ ಪ ಬಡಜನರ ಪರ್ವತ ಒಡಲ ಆಸೆಯ ಕೊಡುವೆನೆಂದು ನುಡಿಯಲವರು ಎಡೆಬಿಡದೆ ಬೇಡಿ ಬೇಡಿ ಕಾಡಿ ಕಾಡಿ ಕಡೆಗೆ ನೋಯ್ವರು 1 ಆಡಿದ್ಯಾತಕೊ ವಾಕ್ಯ ಸುಳ್ಳು ಮಾಡಿದ್ಯಾತಕೊ ಖೋಡಿದೈವಿನಾ ಬೇಡುವಂತೆ ನಿನ್ನ ಬೇಡಿಕೊಂಬೆ ಗಾಢಮಹಿಮ ನೋಡದಿರೊಳಿತಿತ್ತಾಡಿದ್ಯಾಕ 2 ರೂಢಿಗಧಿಕನೆ ದಯವ ಮಾಡು ಎನ್ನೊಳು ಮೂಢತನದಿ ನಾ ಮಾಡಿದಂಥ ಕೇಡುಗುಣಗಳೆಣೆಸದೆನ್ನೊ ಳಾಡಿದ್ವಾಕ್ಯ ನೀಡು ಶ್ರೀರಾಮ 3
--------------
ರಾಮದಾಸರು
ಆಸೆಗೆ ಮೇರೆಯನು ನಿರ್ಮಿಸಿದಿಯಿಲ್ಲವೋ ಬೇಸರವೆ ಇಲ್ಲಿದಕೆ ಎಷ್ಟಾದರಕಟ ಪ ಅನ್ನ ಸಿಗದ್ಹೊತ್ತಿನಲಿ ಅನ್ನ ಸಿಕ್ಕರೆ ಸಾಕು ಅನ್ಯಮೇನೊಲ್ಲೆಂದು ನಿನ್ನ ಕೋರುವುದು ಅನ್ನ ಚೆನ್ನಾಗಿ ಸಿಗಲು ತಣ್ಣಗಿರದುಂಡುಟ್ಟು ಹೊನ್ನು ಚಿನ್ನಕೆ ಸೋತು ಬನ್ನಬಡಿವುದಭವ 1 ಕಡುಕ್ಷೇತ್ರ ಮಾನ್ಯತನಗಡವಿ ತುಂಬಿರ್ದರು ಮಿಡುಕುವುದು ತಡೆಯದೆ ಎಡಬಲದಲಿರುವ ಬಡವರಾಸೆಗೆ ಕಂಡು ಪಡೆವ ಲವಲವಿಕೆಯಿಂ ಬಿಡದೆ ಅವರಿಗೆ ಕೆಡುಕು ಹುಡುಕುವುದು ಹರಿಯೆ 2 ಪೊಡವಿಯೆಲ್ಲನು ಒಂದೇ ಕೊಡೆಯಿಂದಾಳಲು ಮತ್ತು ಪಡೆಯಲಿಚ್ಛಿಪುದಿತರ ಪೊಡವಿಪರ ರಾಜ್ಯ ಸುಡುಗಾಡು ಕಡೆತನಕ ಸುಡುಸುಡೀ ಆಸೆಯನು ಬಿಡಿಸೆನ್ನ ರಕ್ಷಿಸೈ ಒಡೆಯ ಶ್ರೀರಾಮ 3
--------------
ರಾಮದಾಸರು
ಆಸೆಪಡಬೇಡ ಮನುಜ ತಿಳಿಯದೆ ದುರಾಸೆ ಪಡಬೇಡ ಪ ಮೋಸ ಮಾರ್ಗಪಿಡಿದು ಮೂಢರನ್ನು ನೋಡಿ ನೋಡಿ ಅ.ಪ ಚಿಂತಿಸಿ ಭ್ರಾಂತನಾಗಿ ಸಂತೋಷವಿಲ್ಲದೆ ಸದಾ ಶಾಂತಚಿತ್ತರ ಕೂಡದೆ ಸಂತೆ ಕೂಟವನ್ನು ನಂಬಿ 1 ಮುಂದಿನ ಗತಿ ಗೋತ್ರವು ಸಂದೇಹವಾಗುವದೆಲೊ 2 ಶರಣರನಾಶ್ರಯಸದೆ ಕರೆ ಕರೆ ಸಂಸಾರದಿ3
--------------
ಗುರುರಾಮವಿಠಲ
ಆಳ್ವಾರ್-ಆಚಾರ್ಯ ಸ್ತುತಿಗಳು ನೀರಾಟವ ನೋಡಿದೆ ನೀರಜಾಕ್ಷನ ರಾಣಿ ಗೋದಾದೇವಿಯ ಪ ಶ್ರೀವಿಲ್ಲಿಪುತ್ತೂರ ಶ್ರೀತುಳಸಿವನದಲ್ಲಿ ಶ್ರೀವಿಷ್ಣುಚಿತ್ತರಾ ಪುತ್ರಿಯೆಂದೆನಿಸಿ ಸುಪುತ್ರಿಯೆಂದೆನಿಸಿ ಶ್ರೀ ದೇವಿ ತಾನುದಿಸೆ ಬೇಗ ತೀವ್ರ ಹರುಷದಿಂ ಬೆಳೆಯುತ್ತಲಿದ್ದಾಳಲು 1 ಪುತ್ರಿಗೆ ತಕ್ಕಂಥ ವರವಿಲ್ಲವೆನುತಾಲೆ ಚಿತ್ತದೊಳಗೆ ಯೋಚಿಸಿದ ಆಳ್ವಾರರು ಪೆರಿಯಾಳ್ವರರು ಭಕ್ತವತ್ಸಲನಾ ವರಿಸಬೇಕೆನುತಾನೆ ಅರ್ಥಿಯಿಂದಲೆ ನೀರಾಟವನೆನೆದಾಳು 2 ಶ್ರೀಶವಾಸನೆಗಳ ಭಾವಿಸೀ | ಗೊಲ್ಲ ವಾಸನೆಗಳ ಭಾವಿಸೀ ವಾಸುದೇವನಾ ವರಿಸಬೇಕೆನುತಾಲೆ ಉ ಲ್ಲಾಸದಿಂದಲೆ ಹೆಂಗಳ ಕೂಡೆ ಪೊರಟಾಳು 3 ಮುತ್ತು ಮಾಣಿಕದಾಭರಣವನಿಟ್ಟು ಸುತ್ತೆಣೆ ಗಂಟನ್ಹಾಕಿ ದೇವಿ ಸುತ್ತೆಣೆ ಗಂಟನ್ಹಾಕಿ ಉತ್ತಮನಾಗಿದ್ದ ಪುಷ್ಪಗಳನೆ ಮುಡಿದು ಚಿತ್ತದೊಳೊಲ್ಲಭನಪ್ಪಣೆಗೊಂಡು ಪೊರಟಾಳು 4 ಮಾರ್ಗಶಿರ ಮಾಸದಿ ಪೊತ್ತೊಂದು ದಿವಸಾದಿ ಬೇಗ ತಾ ಪೊರಟೂ ಮಹಾಲಕ್ಷಿ ತಾ ಪೊರಟ ಳಾಗ ಬೀದಿಯನು ಸುತ್ತಿ ಮಂಟಪದಲಿ ನಿಂದು ಮಂಗಳಾರತಿಯನೆತ್ತೀ ಮಾರು ವಸ್ತ್ರವ ತೆಗದಾರು 5 ದಂತಧಾವನ ಮಾಡಿ ಕಂತುಪಿತನರಸೀಗೆ ಅಂತರಂಗದ ಭಕ್ತರು ಬೇಗ ಅಂತರಂಗದ ಭಕ್ತರು ಸಂತೋಷದಿಂದಲೆ ಮುಖವನ್ನು ತೊಳೆದು ಶ್ರೀ ಕಾಂತಗೆ ವಸ್ತ್ರದಿಂ ಮುಖವನೊರೆಸಿದಾರು 6 ಭಾಪು ಛತ್ರಿಚಾಮರ ಸೂರೆಪಾನವಾ ಜನ ಬೀಸಿ ಗೋಪಿ ಮುಕ್ತಿದಾಯಕಿಗಾಗ ಮುಕ್ತಿದಾಯಕಿಗಾಗ ದರ್ಪಣವನು ತೋರಿ ಕಂದರ್ಪನ ಮಾತೆಗೆ ಧೂಪ ದೀಪ ಕರ್ಪೂರದಾರತಿಯೆತ್ತಿದರು 7 ಬೇಗಾದಿಲಕ್ಷಿಗೆ ಆಭರಣ ಸಡುಲಿಸಿ ಆಗ ಮುಡಿಯ ಬಿಚ್ಚಿ ದೇವೀಗೆ ಆಗ ಮುಡಿಯ ಬಿಚ್ಚೀ ಬೇಗಾದಿಂ ಕಂಮೆಣ್ಣೆ ಕಸ್ತೂರಿತೈಲ ಮೈಗೆ ತಾಳಮೇಳದ ಗತಿಯಿಂದಲೊತ್ತಿದ್ದರೂ 8 ಶ್ವೇತವರ್ಣದ ದಿವ್ಯ ನಾಗವಲ್ಲಿಗಳಿಂದ ಖ್ಯಾತಿ ಪಡೆದಿರುವಾ ಕ್ರಮುಕಾ ಬೇಗ ಖ್ಯಾತಿ ಪಡೆದಿರುವಕ್ರಮುಕಾ ನೂತನವಾದ ಕರ್ಪೂರವರ್ಣಗಳಿಂದ ಜಗ ನ್ಮಾತೆಗೆ ತಾಂಬೂಲವ ನೀಡಿದರೂ 9 ಸಣ್ಣವಾದ್ಯದೊಳಗೆ ನುಡಿಸೇ ಬೇಗ ವಾದ್ಯದೊಳಗೆ ನುಡಿಸÉೀ ಹಣೆಯೊಳಗೆ ಬಾಚಿ ಮಣಿಗಂಟನಿಕ್ಕಿ ಉಳಿದ ಎಣ್ಣೆ ಭಕ್ತರಿಗೆಲ್ಲ ಯಿತ್ತಾರು 10 ಮಿಂದು ಮಡಿಯನುಟ್ಟು ಚಂದದಿಂದಲೆ ದೇವಿ ತಂದ ನೈವೇದ್ಯವುಂಡೂ ಬೇಗ ನೈವೇದ್ಯವುಂಡು ಬಂದ ಭಕ್ತರಿಗೆಲ್ಲ ತೀರ್ಥಪ್ರಸಾದವಿತ್ತು ಮಂದಗಮನೆ ತನ್ನ ಮಂದಿರಕೆ ನಡೆದಾಳು 11 ಬೈತಲೆಗೆ ರಾಗಟೆ ಹೆರಳಿಗೆ ಭಂಗಾರಗೊಂಡೆಯವ ನಿತ್ತು ಪಾನುಪಟ್ಟಿಯು ಮುತ್ತಿನಬಟ್ಟೆ ಕಟ್ಟಿ ಬೇಗ ಮುತ್ತಿನಬಟ್ಟೆ ಕಟ್ಟಿ ಕತ್ತುರಿ ಬಾವುಲಿ ಕಮಲಸರಗಳೂ ಮುತ್ತಿನ ಮೂಗುತಿ ಮುಕುರಾವನಿಟ್ಟಳೂ 12 ಹಾರಪದಕ ಹಸ್ತಕಡಗ ಹರಡಿ ವಂಕಿ ಶೀರೆಕುಪ್ಪಸ ತೊಟ್ಟೂ ಬೇಗ ಶೀರೆಕುಪ್ಪಸ ತೊಟ್ಟು ಅಂದುಗೆ ಇಂದೀರಾದೇವಿ ತಾನಿಟ್ಟು ಬಂದಳು ಆಗಾ 13 ಭಾಷ್ಯಕಾರರು ಮೊದಲಾದ ಭಕ್ತರುಯೆಲ್ಲ ಲಕ್ಷ್ಮಿದೇವಿಗೆ ಆಗ ಭಾಗ್ಯಲಕ್ಷ್ಮಿಗೆ ಆಗಾ ಭಾರಿ ಯಾ ಶೀರೆ ಕುಪ್ಪುಸವನಿತ್ತು ಪುಷ್ಪ ಮರ್ಯಾದೆಗಳ ಮಾಡೀ ಕರೆತಂದರು ಬೇಗಾ 14 ಮಂದಗಮನೆ ಅಂದು ಗೋವಿಂದನ ಎದುರಲ್ಲಿ ಆ ನಂದದಿಂದಲೆ ಕುಳಿತೂ ಬೇಗ ಆನಂದದಿಂದಲೆ ಕುಳಿತು ಚಂದದಿಂ ಮಲ್ಲಿಗೆಮಾಲೆಯ ಕಳುಹಲು ಮಂದರೋದ್ದರ ತನ್ನಾ ಮಡಿದೀಗೆ ಕಳುಹಿದ 15 ಕೂಡಾರವಲ್ಲಿಯೆಂತೆಂಬೊ ದಿವಸದಲ್ಲಿ ಕೂಡಿ ಮನ್ನಾರುರಂಗನಾ ಬೇಗ ಮನ್ನಾರುರಂಗನಾ ಕ್ಷೀರಾನ್ನ ಭೋಜನಂಗಳ ಮಾಡಿದರು ಭೋಗಿಯ ದಿನದಿ ಕಲ್ಯಾಣವ 16 ಮಕರ ಸಂಕ್ರಾಂತೀಲಿ ಮಂದರೋದ್ದಾರ ಸಹಿತ ಚೊಕ್ಕ ಪಲ್ಲಕ್ಕಿಯೇರಿ ಬೇಗ ಚೊಕ್ಕ ಪಲ್ಲಕ್ಕಿಯೇರಿ ಪಕ್ಕ ಮೆರವಣಿಗೆಯಲಿ ಬಂದು ಹರುಷದಿಂದ ವೆಂಕಟಕೃಷ್ಣನ ಎಡದಲ್ಲಿ ಕುಳಿತಾಳು 17
--------------
ಯದುಗಿರಿಯಮ್ಮ
ಇ. ಶ್ರೀ ಹರಿಯ ಸ್ತುತಿ ತಿರುಪತಿ ಶ್ರೀನಿವಾಸ ದೇವರು ಎಡ್ಡಂ ತಿಡ್ಡಂ ಮಾತುಗಳಾಡುವಿದಡ್ಡನು ಶಾಣ್ಯಾನೋಗುಡ್ಡದಿ ಸೇರುತ ಬಡ್ಡಿ ಸಹಿತ ಪರದುಡ್ಡು ಸೆಳೆವರೇನೋ ಪ ಕೊಟ್ಟಾದನ್ನುಣ್ಣುತ ದೇಹವ ಪುಷ್ಟಿಸಿ ಕಾದಿರುಶಕಟ್ಟಿದ ಹಣವನು ಕಷ್ಟದಿ ಕೊಡದಿರೆ ಕುಟ್ಟಿ ಸೆಳೆದು ತರುವಿ ಚಾಳಿ ಕೆಟ್ಟದು ಕಲಿತಿರುವಿ 1 ಶಿಷ್ಟರು ಗುಡಿಯೊಳು ಬಂದರೆ ಅವರನು ಅಟ್ಟಿಸಿ ಹೊರಡಿಸುವಿಮೊಟ್ಟೆಯಲಿ ಹಣ ಕಟ್ಟಿದವರು ಬರೆ ದೃಷ್ಟಿಸಿ ಮನ್ನಿಸುವಿಚಾಳಿ ಕೆಟ್ಟದು ಕಲಿತಿರುವಿ 2 ಕಾಳಗ ನಡೆಸಿರುವಿಶ್ರೀಲೋಲನೆ ಮುಖತೋರಿಸು ಎಂದರೆ ಆಲಯಕ್ಹೋಗೆನುವಿಚಾಳಿ ಕೆಟ್ಟದು ಕಲಿತಿರುವಿ 3 ಹುಚ್ಚುನ ತೆರದೆಲೆ ಮಾತುಗಳಾಡುವಿ ನಿಶ್ಚಯ ಒಂದಿಲ್ಲಾತುಚ್ಛಿಸಿ ಎಲ್ಲವ ನಿನ್ನಲಿ ಬಂದರೆ ಮತ್ಸರ ನಡೆಸಿರುವಿಚಾಳಿ ಕೆಟ್ಟದು ಕಲಿತಿರುವಿ 4 ಶುಭ ದಾಸನಾಗಿದ್ದಿಈ ಸಮಯದೀತನು ಪೋಷಿಸಲು ವಿಷಯಾಸೆಯನಾಗಿದ್ದಿಧನರಾಸಿಯೊಳಗೆ ಬುದ್ಧಿ ಇಂದಿರೇಶನೆ ಕಲಿಸಿದ್ದಿ 5
--------------
ಇಂದಿರೇಶರು
ಇ) ಶ್ರೀಮನ್ಮಧ್ವಾಚಾರ್ಯರು ಮರುದಂಶರ ಮತ ಪಿಡಿಯದೆ ಇಹ -ಪರದಲ್ಲಿ ಸುಖವಿಲ್ಲವಂತೆ ಪ ಅರಿತು ವಿವೇಕದಿ ಮರೆಯದೆ ನಮ್ಮಗುರುರಾಯರ ನಂಬಿ ಬದುಕಿರೋ ಅ.ಪ. ಕ್ಷೀರವ ಕರೆದಿಟ್ಟ ಮಾತ್ರದಿ ಸಂಸ್ಕಾರವಿಲ್ಲದೆ ಘೃತವಾಗದಂತೆಸೂರಿಜನರ ಸಂಗವಿಲ್ಲದೆ ಸಾರವೈರಾಗ್ಯ ಭಾಗ್ಯ ಪುಟ್ಟದಂತೆ 1 ಉಪದೇಶವಿಲ್ಲದ ಮಂತ್ರ ಏಸುಜಪಿಸಲು ಫಲಗಳ ಕೊಡದಂತೆಉಪವಾಸ ವ್ರತಗಳಿಲ್ಲದೆ ಜೀವತಪಸಿಯೆನಿಸಿಕೊಳ್ಳಲರಿಯನಂತೆ 2 ಸಾರಮಧ್ವಶಾಸ್ತ್ರವೋದದೆ ಗುರುತಾರತಮ್ಯ ಜ್ಞಾನ ಪುಟ್ಟದಂತೆಶ್ರೀರಂಗವಿಠಲನ ಭಜಿಸದೆ ಮುಂದೆಪರಮಗತಿ ದೊರಕೊಳ್ಳದಂತೆ 3
--------------
ಶ್ರೀಪಾದರಾಜರು
ಇಕೋ ದೇವನೆಂದಾಗಮಗಳು ಪೇಳೆನೀ ಕೋಟಿದೇವರನೇಕೆ ಭಜಿಸುವೆ ಪಸಾಕೊ ಸಂಸೃತಿಯಾಟವಿಷ್ಟರ ಮೇಲೆನೂಕೊ ರಾಗ ದ್ವೇಷಗಳ ಚನ್ನಾಗಿಕಾಕೋದರನಂತೆ ಕಾಡದೆ ಜನರನುಬೇಕೋ ಸಾಧನಗಳ ನೀ ಸಾಧಿಸಲು 1ಏಕೋ ಮೂಢನಂದದಿ ಸುಮ್ಮನಿರುವೆ ವಿವೇಕೋಪಚಯವ ಮಾಡು ಮನದಲಿಲೋಕೋಪಕಾರವ ನಡಸು ನಿಷ್ಕಪಟದಿಈ ಕೋಪವ ಬಿಟ್ಟರಿದಿರಾರು ನಿನಗೆ 2ಫಣ ಕೋಪಮನನಾಗಿ ಪಗಲ ಕಾಣದೆ ನಿನ್ನನಾ ಕೋಪಮೆಗೆ ಪೆಚ್ಚಿದ ನಿಜ ಸುಖವಾತಾಕೋ ಶ್ರೀ ಪಾದವನು ಗೋಪಾಲಾರ್ಯನಕೋ ಕೋ ಎಂದು ಕೊಡುವನು ಮುಕುತಿಯನು 3
--------------
ಗೋಪಾಲಾರ್ಯರು
ಇಕ್ಕೊ ಇಲ್ಲೆ ಹರಿ ಇದ್ದಾನೆ | ಸಿಕ್ಕುವಾ ಸದ್ಗುರು ಕರುಣದಲಿ ಧ್ರುವ ಆದಿ ಅನಾದಿಯ ಹಾದಿ ವಿಡಿದು | ಸಾಧಿಸಿ ನೋಡಿರಯ್ಯ ಸಜ್ಜನರು | ವೇದಾಂತದ ಸುಸಾರವಿದು | ಭೇದಿಸಿದವರಿಗೆ ಭಿನ್ನವಿಲ್ಲ 1 ತನ್ನೊಳಗಾಗಿರಲಿಕ್ಕೆ ಭಿನ್ನವ್ಯಾಕೆ | ಚೆನ್ನಾಗಿ ನೋಡುವದು ಉನ್ಮನದಲಿ | ಇನ್ನೊಬ್ಬರಿಗೆ ತಾ ತಿಳಿಯದು | ಧನ್ಯವಾದರು ಅನುಭವಿಗಳು2 ಸೆರಗು ಸಿಲ್ಕಲಿಲ್ಲ ನಾಲ್ಕರಲಿ | ಅರಹು ಆಗಲಿಲ್ಲ ಆರರಲಿ | ಪೂರಿಸಲಿಲ್ಲ ಭಾವ ಮೂರಾಗಲಿ | ತೋರಿದ ಸದ್ಗುರು ಎನ್ನೊಳಗೆ 3 ಮೋಸಹೋಯಿತು ಜಗ ವೇಷದಲಿ | ವಾಸತಿಳಿಯದೆ ವಾಸುದೇವನ | ಕಾಸಿನ ಆಶೆಗೆ ದಾಸರಾಗಿ | ಘಾಸಿ ಆಯಿತು ಭವಪಾಶದಲಿ 4 ಸಣ್ಣದೊಡ್ಡದರೊಳು ಸಾಕ್ಷವಾಗಿ | ಬಣ್ಣ ಬಣ್ಣದಲಿ ತಾ ಭಾಸುತಿಹ್ಯ | ಕಣ್ಣಾರೆ ಕಂಡು ಗುರು ಕೃಪೆಯಿಂದ | ಧನ್ಯವಾದ ಮೂಢ ಮಹಿಪತಿಯು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು