ನೋಡಲುಬೇಕೇ ಎನ್ನೊಡೆಯನನೂ
ನೋಡಿದಿರೇ ತಾಳಪಾಕಂ ಚಿಣ್ಣೈಯಾ ಪ
ದಿಕ್ಕುಗಳನು ಬೆಳಗುವ ಸುಕೀರಿಟವ
ನಿಕ್ಕಿಹ ಮಾಣಿಕದೋಲೆಯನೂ
ಚೊಕ್ಕಟ ಮೂಗುತಿಯಿಂದೊಪ್ಪುವನ್ನ ಜ
ಗಕ್ಕೆ ಪತಿಯೆನ್ನೆರೆಯ ಚೆನ್ನಿಗನಾ 1
ಕಂಬು ಚಕ್ರಗದೆ ಪದುಮವ ಪಿಡಿದು ಪೀ
ತಾಂಬರದಂಗಿಯ ಧರಿಸಿಕೊಂಡೂ
ತುಂಬಿದ ವಕ್ಷದಿ ರಮೆ ಕೌಸ್ತುಭದಿಂ
ಗಂಭೀರಾರ್ಣವನಾದ ಚೆನ್ನಿಗನ 2
ಸುರರೆಲ್ಲರು ಪೂಜಿಸುವ ಚರಣದೊಳು
ಕಿರುಗೆಜ್ಜೆ ಪೆಂಡೆಯವಿಟ್ಟವನಾ
ವರವೈಕುಂಠ ವೇಲಾಪುರದರಸನ
ಶರಣ ವತ್ಸಲನಾದ ಕರುಣಾಂಬುಧಿಯಾ 3