ಒಟ್ಟು 422 ಕಡೆಗಳಲ್ಲಿ , 63 ದಾಸರು , 380 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಧವ ಮಧುಸೂದನ ತೇರಾ ಚರಣ ಭಜಿಪೆ ಪಾಲೋ ಮೇರಾ ಪ ಹರಿಯೆ ತುಮ್ಹಾರೇ ಚರಣಭಜನ ಕರುಣಾಕರ ಮುಝೇ ಸಿರಿಯರಮಣ ದುರಿತ ಮೇರೇ ಪರಿಹಾರ ಕರ್ಕರ್ ಪಾರಕರ್ ಪರಿಭವಸೇ ದೇವ 1 ರಕ್ಷ ಮೇರೇ ಕೋಯೀ ನಹೀ ಹೈ ಪಕ್ಷಿಗಮನ ತೇರೇ ಶಿವಾಯ ಲಕ್ಷಿಸಿ ಮೊಕ್ಕೆಮೇಸೇ ಪಾರಕರ್ ರಕ್ಷ ತೇರಾ ಗೋಷ್ಮೇ ಲೇಕರ್2 ಸೀತಾಪತೇ ಶ್ರೀರಾಮ ತೂಹೀ ಪಾತಕ ವಿಮೋಚನ ಹೈ ಪ್ರೇಮಸೇ ದೇಖಕೇ ಮುಝಕೋ ಪಾಪಕೂಪಸೇ ಉಠಾ ಲೀಜೀಯೇ 3
--------------
ರಾಮದಾಸರು
ಮಾಯಕಾರಳೆ ಕಾಯೊ ಕರುಣದಿ ಬಾಯಿ ಬಿಡುವೆನೆ ರುದ್ರಾಣಿ ಪ ನೋಯಲಾರದೆ ದೇವಿ ಮರೆಹೊಕ್ಕೆ ನೋವು ಕಳೆಯಮ್ಮ ಭವಾನಿ ಅ.ಪ ಭಕ್ತಜನರಿಗೆ ಆಪ್ತಮಾತೃ ನೀ ನಿತ್ಯೆ ನಿರ್ಮಲರೂಪಿಣೀ ಭೃತ್ಯನೊಳು ದಯವಿತ್ತು ಪೊರೆ ಆದಿ ಶಕ್ತಿ ದೈತ್ಯಸಂಹಾರಿಣಿ 1 ಶುಂಭ ನಿಶುಂಭರೆಂಬ ಖಳರ ಜಂಬ ಮುರಿದೌ ಚಂಡಿಕೆ ಅಂಬೆನಿನ್ನನು ನಂಬಿ ಭಜಿಪೆ ಇಂಬುಗೊಟ್ಟು ಸಲಹಂಬಿಕೆ 2 ಸುರರ ಮೊರೆಕೇಳಿ ದುರುಳÀರ್ಹಾವಳಿ ದೂರಮಾಡಿ ಶೌರಿಯೆ ನೀ(ರಟ)ಸಿದವರಿಗೆ ವರವ ಕರುಣಿಸಿ ಕರುಣ ದೋರಿದೌದರಿಯೆ 3 ಅನ್ನಪೂರ್ಣೆಯೆ ನಿನ್ನ ಪಾದ ವನ್ನು ಭಜಿಸುವೆ ಕಲ್ಯಾಣಿ ಭಿನ್ನವಿಲ್ಲದೆ ನಿನ್ನ ಸುತಗೆ ಸುಖ ವನ್ನು ಕೊಡೆ ನಾರಾಯಣೆ 4 ರಾಮದಾಸರ ಪ್ರೇಮ ಜನನಿಯೆ ನೇಮದಿಂ ನಿನ್ನ ಪಾಡುವೆ ಹೈಮಾವತಿ ಎನ್ನ ಕಾಮಿತಾರ್ಥವ ಪ್ರೇಮದಿಂ ನೀಡು ಕರುಣಿಯೆ 5
--------------
ರಾಮದಾಸರು
ಮಾರಪಿತನ ತೋರಿದಲ್ಲದೆ ನಾ ಬಿಡೆ ನಿನ್ನ ಪಾದವ ಪ ಧೀರ ಹನುಮ ಘೋರ ರೂಪವ ತೋರಿ ಪಾರಲು ದೂರ ನಾ ಸಾರೆನು ಅ.ಪ. ಭಾರ ಧರಿಸಿ ಕೋರೆ ತೋರುತ ಘೋರ ರೂಪದಿ ಪೋರನೆನ್ನಿಸಿ ನಾರಿ ಹತ್ಯದಿ ಚಾರುವನವ ಸೇರಿದವನ 1 ಜಾರನೆನ್ನಿಸಿ ನಾರಿ ಮಾನವ ಸೂರೆಗೊಳ್ಳುತ ಪಾರಿಪೋಗುವ ಶೂರ ತೇಜಿಯನೇರಿ ಮೆರೆದ ವಾರಿಜಾಕ್ಷನ ಧೀರ ಕಲ್ಕಿಯ 2 ದಾರಿ ತೋರದೆ ಸಾರಿ ನಿನ್ನನು ಕೋರಿ ಭಜಿಪೆನು ಬಾರಿ ಬಾರಿಗೆ ಭಾರತೀಶನೆ ತೋರು ಕರುಣದಿ ಸಾರಸಾಕ್ಷ ರಂಗೇಶವಿಠಲನ 3
--------------
ರಂಗೇಶವಿಠಲದಾಸರು
ಮಾರುತಿ ನಿನ್ನಾ ನಿರುತದಿ ಭಜಿಪೆ ತ್ವರಿತದಿ ಹÀರಿ ಸರ್ವೋತ್ತಮನೆಂಬುವ ಸರಸ ವಿಜ್ಞಾನವ ಸರಿ ಇಲ್ಲದೆ ಇತ್ತು ಪರಿಪಾಲಿಸು ಎಂದು ಶಿರಸದಿ ನಮಿಪೆ ಆರಿಸಿ ನೋಡಲು ಆರಾರು ಇಲ್ಲವೊ ಕಾರುಣ್ಯಸಾಗರ ಕರುಣಿಸೆ ನೀ ಎನ್ನಾ ಹರಿ ತಾ ಕರುಣಿಪನೆಂದು ಅರಿತು ನಿನ್ನಯ ದಿವ್ಯ ಚರಣ ಸೇರಿದೆನಯ್ಯಾ ಸರಿಬಂದದ್ದು ಮಾಡೋ ಹರಿ ಕುಲಾವರಿಯಾನೆ ಪರಿಪರಿ ಜನರನ್ನು ಪಾಲಿಸಿ ಎನ್ನನು ದೂರದಿ ಇಟ್ಟರೆ ದೊರೆತನವೇನಯ್ಯಾ ಸಾರುವೆ ಸಾರುವೆ ಸರಸಿಜನಾಭನ ಸುತನೆ ಆರುಮೂರೆರಡೊಂದು ಸಾವಿರಾ ಮೂರೆರಡು ಶತಶ್ವಾಸ ಜಪಗಳನು ಮೂರುಜೀವರಲ್ಲಿ ನೀರಜಜಾಕಲ್ಪ ಪರಿಯಂತರ ಮಾಡಿ ಅವರವರ ಗತಿಯಾ ಮರಿಯದೆ ನೀಡುವಿ ಗಿರಿಶಾನುತಪಾದ ಗುರುಜಗನ್ನಾಥ ವಿಠಲನ್ನ ಅರಿವಂತೆ ಮಾಡೋ ಧೀರಾ ಕರುಣಿಯೇ
--------------
ಗುರುಜಗನ್ನಾಥದಾಸರು
ಮಾಲಕೌಸ್ತುಭ ಸತ್ಯಭಾಮಲೋಲ ನೀಲಶಾಮಸುಂದರ ಕಾಲಕಾಲದಿ ಬಿಡದೆ ಎನ್ನ ಪಾಲಿಸಭವನೆ ಪ ಭುವನವೀರೇಳು ಸೂತ್ರಧಾರ ಭವದರೋಗಕ್ವೈದ್ಯ ಭಕ್ತಭಯ ಪರಿಹಾರ ಸತ್ಯ ಬುವಿಜಾಮನೋಹರ 1 ಕೋಮಲಾಂಗ ಭಜಕಜನರ ಕಾಮಿತಾರ್ಥ ಕೊಡುವ ಸುರ ಕಾಮಧೇನು ಕಲ್ಪವೃಕ್ಷ ಸ್ವಾಮಿ ದಯಾಕರ 2 ಸಾರ ಮಾಯಾಮೋಹವಿದೂರ ಕೇಶವ 3 ಪರಕೆ ಪರಮ ಪರಾತ್ಪರ ಮರಣರಹಿತ ಮಾರಮಣ ಉರಗಶಾಯಿ ಪರಮಪುರುಷ ಶರಣು ಸುಖಕರ 4 ನಿಗಮವೇದ್ಯ ನಿರುಪಮಾತ್ಮ ಅಗಣಿತಗಣಿತಗಮ್ಯಚರಿತ ಸುಗುಣ ಶಾಂತಾಕಾರ ಮೂರು ಜಗದ ಪಾಲಯಾ 5 ಸಕಲವಿಘ್ನದೂರ ನಿನ್ನ ಭಕುತಿಯಿಂದ ಭಜಿಸಿಬೇಡ್ವೆ ಮುಕುತಿಸಂಪದ ನೀಡಿ ಸಲಹು ಭಕ್ತವತ್ಸಲ 6 ಕಂದಮಾಡಿದಪರಾಧಗಳ ತಂದೆ ದಯದಿ ಕ್ಷಮಿಸಿ ಬಂದ ಬಂಧಗಳನು ಪರಿಹರಿಸಯ್ಯ ಸಿಂಧುಮಂದಿರ 7 ನಾನಾಯೋನಿಯೊಳಗೆ ಪುಟ್ಟಿ ಜ್ಞಾನಗೆಟ್ಟು ಬಳಲುವಂಥ ಹೀನ ಬವಣೆ ತಪ್ಪಿಸಯ್ಯ ದೀನಪಾಲ 8 ನಿರುತ ನಿನ್ನ ಚರಣದೆಡೆಗೆ ಬರುವ ಸುಲಭಮಾರ್ಗ ಆವು ದ್ವರವ ಪಾಲಿಸೊಲಿದು ಎನಗೆ ಕರುಣಸಾಗರ 9 ದೋಷದಾರಿದ್ರ್ಯಗಳೆಲ್ಲ ನಾಶಗೈದು ಹರಿಯೆ ನಿಮ್ಮ ದಾಸನೆನಿಸುದ್ಧಾರಮಾಡು ದೋಷನಾಶನ 10 ಮರೆಯಬಿದ್ದ ತರಳನನ್ನು ಕರುಣದೃಷ್ಟಿಯಿಂದ ನೋಡಿ ಸರ್ವಭಯ ಪರಿಹಾರಮಾಡು ಹರಿಸರ್ವೋತ್ತಮ 11 ನಿನ್ನ ಒಲವು ಬಲವು ಎನಗೆ ಅನ್ಯಬಲವ ಒಲ್ಲೆಸ್ವಾಮಿ ಮನ್ನಿಸಬೇಕಿನ್ನು ಮಗನ ಸನ್ನುತಾಂಗನೆ 12 ನಂಬಿ ಭಜಿಪ ಬಕ್ತಜನರ ಇಂಬುದಾಯಕ ನೀನು ಇಂಬುಗೊಟ್ಟು ಸಲಹು ಎನ್ನ ಅಂಬುಜಾಕ್ಷನೆ 13 ಏನುತಪ್ಪು ಇರಲು ನೀನೆ ದಯದಿ ಕ್ಷಮಿಸಿ ಇನ್ನು ನಾನಾಬೇನೆ ಕಳೆದು ಕಾಯೊ ಜಾನಕೀಶನೆ 14 ಚಾರುವೇದ ಪೊಗಳುವಂಥಪಾರ ನಿನ್ನ ದಿವ್ಯಮೂರ್ತಿ ತೋರಿಧನ್ಯನೆನಿಸು ಎನ್ನ ನಾರಸಿಂಹನೆ 15 ಭಾರ ನಿನ್ನದಯ್ಯ ಬಂದ ಘೋರ ತಾಪತ್ರಯಂಗಳಿಂದ ಪಾರುಮಾಡಿ ಕಾಯುವುದು ಕಾರುಣ್ಯ ನಿಧೆ 16 ಪ್ರಾಣಹಾರಿ ಹೋಗಲು ನಿನ್ನ ಧ್ಯಾನವಗಲದಂತೆ ಎನಗೆ ತ್ರಾಣಪಾಲಿಸಯ್ಯ ಮೊದಲು ಧ್ಯಾನದಾಯಕ 17 ದಾಸನರಿಕೆ ದಯದಿ ಪೂರೈಸಿ ಕಾಯಬೇಕು ದೇವ ಘಾಸಿಗೈಯದೆ ರಕ್ಷಿಸಯ್ಯ ದಾಸಪ್ರಿಯನೆ 18 ಕೆಟ್ಟಶಕುನರಿಷ್ಟ ಸ್ವಪ್ನ ತಟ್ಟಬೇಕೆ ನಿನ್ನ ಪಾದ ನಿಷ್ಠೆಯಿಂದ ಭಜಿಪರ್ಗೆ ಸೃಷ್ಟಿಕರ್ತನೆ 19 ನಿತ್ಯ ನಿರ್ಮಲಾತ್ಮ ನಿನ್ನ ನಿತ್ಯಭಕ್ತಿ ಸುಖವನಿತ್ತು ಸತ್ಯಸಂಧನೆನಿಸು ಎನ್ನ ಸತ್ಯರಾಧಾರ 20 ಮರವೆ ತರಿದು ಹರಿಯೆ ನಿಮ್ಮ ಕರುಣ ನೀಡಿ ಮರಣ ಭಯವ ಪರಿಹರಿಸಯ್ಯ ಸಿರಿಯವಲ್ಲಭ 21 ಭಾನುಕೋಟಿಪ್ರಕಾಶ ನಿನ್ನ ಧ್ಯಾನಿಸಿ ಮರೆಹೊಕ್ಕೆ ನಾನಾಬೇನೆ ಗೆಲಿಸಿ ಕಾಯೊ ದಾನವಾಂತಕ 22
--------------
ರಾಮದಾಸರು
ಮುಕ್ತನಲ್ಲವೇ ಭವದಿ ಮುಕ್ತನಲ್ಲವೇ ಪ ಶಕ್ತನಾದ ಹರಿಯ ಪರಮ ಭಕ್ತಿಯಿಂದ ಭಜಿಪ ನರನು ಅ.ಪ. ಮಧುವಿರೋಧಿಯಮಲ ಗುಣವ ನಲಿದು ಪಾಡುವವನು 1 ಕೇಶವಗೆ ರಮಾಬ್ಜಭವ ಸದಾಶಿವ ಶಕ್ರಾದಿ ಸುರರು ದಾಸರು ಎವೆ ಇಡುವ ಶಕ್ತಿ ಲೇಶವಿಲ್ಲವೆಂಬ ನರನು 2 ಒಂದಧಿಕ ದಶೇಂದ್ರಿಯಗಳಿಗಿಂದಿರೇಶ ವಿಷಯವ ಸಮ ಬಂಧಗೈಸಿ ವೈಷಯಿಕ ಸುಖ ತಂದು ಕೊಡುವನೆಂಬ ನರನು 3 ಈ ಪರಿಯಲಿ ತಿಳಿದು ಪುಣ್ಯ ಪಾಪಕರ್ಮ ದುಃಖಸುಖ ಜ ಯಾಪಜಯ ಮಾನಾಪಮಾನ ಶ್ರೀಪ ಕೊಡುವನೆಂಬ ನರನು 4 ವೇದ ಶಾಸ್ತ್ರಗಳಲಿ ಇಹ ವಿರೋಧವಾಕ್ಯಗಳನು ಶ್ರೀ ಪ್ರ ಮೋದ ತೀರ್ಥರುಕ್ತಿಯಿಂದ ಶೋಧಿಸುತಲಿ ಸುಖಿಪ ನರನು 5 ಕರ್ಮ ವಿಹಿತ ಅಸಜ್ಜನರು ಮಾಳ್ಪ ವಿಹಿತವಾದ ಕಾಲಕದು ಅವಿಹಿತವೆಂದು ತಿಳಿಯುವವನು6 ಸ್ವರ್ಗ ಭೂಮಿ ಕರ್ಮ ಹರಿಸುವ ಹರಿಯೆಂಬ ನರನು7 ಪರಮ ಪುರುಷಗರ್ಪಿಸುತಲಿ ಹರುಷ ಬಡುತಲಿಪ್ಪ ನರನು 8 ಈ ಶರೀರದರಸು ಶ್ರೀನಿವಾಸಾ ಮಾತೆ ಪ್ರಾಣ ಪಾರ್ವ ತೀಶರಿಹರು ಎಂದೀ ದೇಹ ಪೋಷಿಸುತಲಿ ತೋಷಿಸುವನು 9 ಪ್ರಿಯ ವಸ್ತುಗಳೊಳಗೆ ಅನ್ನಮಯನೆ ಪ್ರೀಯನೆಂದು ಅನ್ಯ ಬಯಕೆಗಳನು ಜರಿದು ಹರಿಯ ದಯವ ಬಯಸುತಿಪ್ಪ ನರನ 10 ಶತ್ರುತಾಪಕನುಳಿದು ಅನ್ಯ ಮಿತ್ರರಿಲ್ಲವೆಂದು ಅಹೋ ರಾತ್ರಿಯಲ್ಲಿ ಬಿಡದೆ ಜಗದ್ಧಾತ್ರನ ಗುಣ ತುತಿಪ ನರನು11 ಬಿಂಬನೆನಿಸಿ ಸರ್ವರ ಹೃದಯಾಂಬರದೊಳಗಿದ್ದು ಜನವಿ ಡಂಬನಾರ್ಥ ಕರ್ಮಗಳ ಆರಂಭ ಮಾಳ್ಪೆನೆಂಬ ನರನು 12 ಅಕ್ಷರೇಢ್ಯ ಬ್ರಹ್ಮ ವಾಯು ತ್ರ್ಯಕ್ಷಸುರಪ ಸುರರೊಳಗ ಧ್ಯಕ್ಷ ಸರ್ವ ಕರ್ಮಗಳಿಗೆ ಸಾಕ್ಷಿಯೆಂದು ಸ್ಮರಿಸುವವನು 13 ಅಂಬುಜ ಭವಾಂಡದೊಳು ಮಹಾಂಬರವಿಪ್ಪಂತೆ ಶ್ರೀ ನಿ ತಂಬಿನಿ ಸಹ ಸರ್ವರೊಳಗೆ ತುಂಬಿಹನೆಂದರಿತ ನರನು 14 ಅದ್ವಿತೀಯನಪೇಕ್ಷ ಭಕ್ತ ಹೃದ್ವನಜ ನಿವಾಸಿಯೆನಿಸಿ ಕದ್ದೊಯ್ದವರಘವನುಣಿಪನದ್ವಯತನೆಂಬ ನರನು 15 ಜಾಂಬವತೀರಮಣ ವಿಷಯ ಹಂಬಲವನು ಬಿಡಿಸಿ ತನ್ನ ಕಾಂಬ ಸುಖವನಿತ್ತು ನಿಜ ಕುಟುಂಬದಿಡುವನೆಂಬ ನರನು 16 ಅಣು ಮಹತ್ಪದಾರ್ಥ ವಿಲಕ್ಷಣ ವಿಶೋಕ ಜೀವರೊಡನೆ ಜನಿಸಿ ಪುಣ್ಯ ಪಾಪ ಫಲಗುಳುಣದೆ ಉಣಿಪನೆಂಬ ನರನು 17 ಕರ್ಮ ಸುದತಿಯರೊಡಗೂಡಿ ಸಮಾ ಶೂನ್ಯ ಮಾಳ್ಪನೆಂದು ಪದೇ ಪದೆಗೆ ಸ್ಮರಿಸುವವನು18 ಸ್ವಾತಿವರುಷ ವಾರಿಕಣವ ಚಾತಕ ಹಾರೈಸುವಂತೆ ಶ್ವೇತವಾಹನ ಸಖನ ಕಥೆಯ ಪ್ರೀತಿಯಿಂದ ಕೇಳ್ಪ ನರನು 19 ಲೋಕಬಂಧು ಲೋಕನಾಥ ಲೋಕಮಿತ್ರ ಲೋಕರೂಪ ಲೋಕರಂತೆ ಲೋಕದೊಳು ವಿಶೋಕ ಮಾಳ್ಪನೆಂಬ ನರನು20 ಶಾತಕುಂಭವರ್ಣ ಜಗನ್ನಾಥ ವಿಠಲನೆಂಬ ಮಹ ದ್ಭೂತ ಬಡಕರಾವು ಇವನ ಭೀತಿ ಬಿಡದು ಎಂಬನರನು 21
--------------
ಜಗನ್ನಾಥದಾಸರು
ಮುಕ್ತನಾವನೋ ಜೀವನ್ಮುಕ್ತನಾವನೋ ಪ ಮುಕ್ತನಾವನಿವರ ಪಾದಾಸಕ್ತನಾಗಿ ಸರ್ವಕರ್ಮ ಭಕ್ತಿಯಿಂದ ನೀಡಿ ವಿಷಯಾಸಕ್ತನಾಗದವನಿಗಿನ್ನ ಅ.ಪ ಉದಯಕಾಲದಲ್ಲಿ ಎದ್ದು ನದಿಯಸ್ನಾನಮಾಡಿ ಇವರ ಪದುಮಸಮಪಾದಯುಗಳ ಹೃದಯದಲ್ಲಿ ಭಜಿಪಗಿನ್ನ 1 ವನಿತೆ ಧಾನ್ಯ ಧನುವು ತನಯ ಪ್ರಾಣ ಇವರ ಪಾದವನಜಕರ್ಪಿಸಿರುವಗಿನ್ನ 2 ಊಟ ಕೂಟ ನೋಟಮಾಟ ಪಾಠ ಆಟ ಕಾಟ ಇವರ ಉದಧಿ ದಾಟುವಾವಗಿನ್ನಮತ್ತೆ 3 ಉಕ್ತ ಕರ್ಮದಲ್ಲಿ ಮನ ಸಕ್ತನಾಗಿ ಹರಿಯ ಪಾದ ಭಕ್ತಿಯಿಂದ ಭಜಿಸಿ ಪಾಪಮುಕ್ತನಾಗುವವಗಿನ್ನ 4 ಶಕ್ತಿ ಇದ್ದರೊಳಗೆ ಹರಿಯ ಭಕ್ತಜನರ ಭಜಿಸಿ ಸರ್ವೋ ವಿಭೂತಿ ಮನದಿ ವ್ಯಕ್ತಮಾಡಿದವಗಿನ್ನ 5 ಮೋದತೀರ್ಥ ಶಾಸ್ತ್ರಸಾರ ಸ್ವಾದ ಮನದಿ ತಿಳಿದು ಅವರ ಹಾದಿಹಿಡಿದು ಬುಧರ ದಿವ್ಯ ಪಾದಯುಗಳ ಭಜಿಪಗಿನ್ನ 6 ಶಿರದಿ ಇದ್ದ ಹರಿಯ ರೂಪ ಅರಿದು ಮನಸಿನಿಂದ ನಿತ್ಯ ಶಿರದಿ ಕಾರ್ಯಮಾಡಿ ತಾನು ಹಿರಿದು ಹಿಗ್ಗುವಗಿನ್ನ 7 ನೇತ್ರಮೊದಲಾದ ಸರ್ವಗಾತ್ರದಲ್ಲಿ ಇರುವ ತೀರ್ಥ ಕ್ಷೇತ್ರಮೂರ್ತಿ ತಿಳಿದು ತನ್ನ ಗಾತ್ರನಿರ್ಮಲ ಮಾಳ್ಪಗಿನ್ನ 8 ಈಶ ಹರಿಯು ಸರ್ವ ಜೀವ ದಾಸರೆಂದು ತನ್ನ ಹೃದಯೋ ಪಾಸನಾವ ಮಾಡಿ ವಿಷಯ ಆಶೆಬಿಟ್ಟು ಇರುವಗಿನ್ನ 9 ಎನು ಮಾಳ್ಪ ಕರ್ಮವೆಲ್ಲ ಶ್ರೀನಿವಾಸ ಮಾಳ್ಪನೆಂದು ಜ್ಞಾನದಿಂದ ಸರ್ವರಲ್ಲಿ ಧ್ಯಾನಮಾಳ್ಪ ಮನುಜಗಿನ್ನ 10 ಶ್ವಾನ ಗೋವು ದ್ವಿಜ ಮತ್ತೆ ಅನಿ ಮೊದಲು ಸರ್ವರಲ್ಲಿ ಜ್ಞಾನಗಮ್ಯ ತಾನು (ತಾನೆ) ಸಮಾನನೆಂದವಗಿನ್ನ 11 ಅಮೃತ ವಿಷವು ಎಲ್ಲ ಸ್ವಾದು ಸಮವೆಂದು ಅಲ್ಲಿ ಇಚ್ಚೇ ಮಾಡದವಗಿನ್ನ 12 ವೃತ್ರಸೂದನನುಜ ಸರ್ವಕರ್ತೃ ಎಂಬವಗಿನ್ನ 13 ಪಾದ ದೂತ ನಾನು ಎಂದು ನಿತ್ಯ ಪಾತಕಾರ್ಯ ಮಾಡಿದಾಗ್ಯು ಪೂತನೆನಿಪನವನಗಿನ್ನ 14 ಸಿಟ್ಟು ಶೋಕ ಹರ್ಷ ಮೋಹ ಸುಟ್ಟು ಗುರುಜಗನ್ನಾಥ ವಿಠಲನ್ನ ಭಜಿಸಿ ಜಗದಿ ಶಿಷ್ಟ ನಾಗಿರುವಗಿನ್ನ 15
--------------
ಗುರುಜಗನ್ನಾಥದಾಸರು
ಮುದ್ದು ಮುಖದ ಲಕುಮಿ ಎನಗೆ ಶುದ್ಧ ಜ್ಞಾನವÀ ನೀಡೆ ಪ. ಬಿದ್ದಿಹೆ ನಿನ್ನ ಪದದಲಿ ನಿರುತ ಮದ್ಬಿಂಬನ ತೋರೆ ಅ.ಪ. ಹರಿಸರ್ವೋತ್ತಮ ಸುರರಕ್ಷಕನೆಂಬ ಖರೆಯ ಜ್ಞಾನವ ನೀಡೆ ಕರಕರೆಗೊಳಿಸದೆ ದುರ್ವಿಷಯದಲೆನ್ನ ಹರಿಯ ಧ್ಯಾನವನೀಡೆ 1 ನಗೆಮೊಗ ಚಲುವೆ ಖಗವಾಹನ ಪ್ರಿಯೆ ಜಗದೊಡೆಯನ ತೋರೆ ನಿತ್ಯ ಬಗೆ ಬಗೆ ಲೀಲೆಯ ಸುಗುಣವಂತೆ ತಿಳಿಸೆ 2 ಸೃಷ್ಟಿಕರ್ತಗೆ ಪಟ್ಟದ ನಾರಿಯೆ ದೃಷ್ಟ ಇಂದ್ರಿಯವಳಿಯೆ ಮುಟ್ಟಿ ಭಜಿಪೆ ನಿನ್ನ ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲ ಸತಿಯೆ 3
--------------
ಅಂಬಾಬಾಯಿ
ಮುದ್ದು ಮೋಹನ ಗುರುಗಳಂಘ್ರಿ | ಶ್ರದ್ಧಾ ಭಕುತೀಲಿಬುದ್ಧಿ ಪೂರ್ವಕ ಭಜಿಪ ಜನರ | ನ್ನುದ್ಧರೀಸುವಾ ಪ ಕರ್ಮ ನಿಷ್ಠಾತೃಸುಮ್ಮನಸ ವಿಜಯಗುರವ | ನಮ್ಮಿತುತಿಸುವ 1 ತೀರ್ಥಕ್ಷೇತ್ರ ಚರಿಸೂತ | ಮೂರ್ತಿದರ್ಶನಾಸಾರ್ಥಕವ ಮಾಡಿಕೊಂಡ | ತೀರ್ಥಪಾವನಾ |ಕಾರ್ತಸ್ವರೇತ್ಯಾದಿವಿತ್ತ | ಪಾರ್ಥಿವಸಮಾಶಾಸ್ತ್ರ ಪ್ರಾಕೃತಾದಿ ತಿಳಿಪ | ಹರಿ ಸರ್ವೋತ್ತಮ 2 ಶ್ರೀ ವರರಿಂದುಪದಿಷ್ಟ | ವಿಠಲ ಪ್ರತಿಷ್ಟಓ ವಿಸಾಧೀಸಲು ಹರಿಯೊಳ್ | ಪ್ರಾಯೋಪವಿಷ್ಟ |ಭಾವಿ ಬ್ರಹ್ಮನಲ್ಲಿ ಗುರು ಗೋವಿಂದ ವಿಠಲನಭಾವ ಅಷ್ಟ ಕುಸುಮದಿ | ಸೇವಿಸೀದನ 3
--------------
ಗುರುಗೋವಿಂದವಿಠಲರು
ಮುದ್ದು ಮೋಹನ ದಾಸ | ತಿದ್ದಿಯನ್ನಯ ದೋಷಉದ್ಧರಿಸೊ ಬುಧತೋಷ | ನಮಿಪೆ ನಿನ್ನನಿಶಾ ಪ ದಾಸ ದೀಕ್ಷೆಯ ವಹಿಸಿ | ಕ್ಲೇಶಗಳ ಬಹುದಹಿಸಿದೇಶ ದೇಶವ ಚರಿಸಿ | ಹರಿ ಪ್ರತಿಮೆಗಳ ಭಜಿಸಿ | ಮೀಸಲೆನಿಸಿದ ಮತವ | ವ್ಯಾಸರಿಗೆ ಸಮ್ಮತವದಾಸರಾಯರ ಮಾತ | ಬೀರಿರುವ ಖ್ಯಾತಾ1 ಕರಿಗಿರಿಯ ದುರ್ಗದಲಿ | ವರ ರಥೋತ್ಸವ ಸಮಯನರಸಿಪುರ ಶೇಷಪ್ಪ | ವರ ಕುವರ ನಾಗಾಖ್ಯಗೆಕರುಣಿಸುತ ಲಂಕಿತವ | ಪರಿಸರನ ಮತರಸವಒರೆದು ಸಲಹಿದೆ ಗುರುವೆ | ನೀ ಪರಮ ಗುರುವೇ 2 ಸುಜನ | ಆರ್ತರುದ್ಧರಣಾ 3 ತಂಬ್ರೂಹಿ ಎನುವಂಥ | ತಂಬೂರಿ ನೀ ಕೊಡುತತುಂಬಿ ದ್ವ್ಯೊಭವದಿಂದ | ಪೊರೆದೆ ಮುದದಿಂದಾ |ಉಂಬುಡುವುದೂ ಹರಿಗೆ | ಕೊಂಬ ಸರ್ವವ ಹರಿಗೆಎಂಬ ಜ್ಞಾನವನಿತ್ತು | ಸಂಭ್ರಮವ ಬಿತ್ತೂ 4 ಅಮಿತ ಗುಣ ಪೂರ್ಣಾ |ಸಿರಿಪತಿ ಶ್ರೀಗುರೂ | ಗೋವಿಂದ ವಿಠ್ಠಲನಉರುತರದಿ ಭಜಿಪಂಥ | ಕರುಣಿಸೆಲೊ ಪಂಥ 5
--------------
ಗುರುಗೋವಿಂದವಿಠಲರು
ಮೊರೆ ಕೇಳು ಭಕುತಬಂಧು ಮರೀಬೇಡ ಕರುಣಾಸಿಂಧು ಪ ಮರೆಯಬಿದ್ದು ಸೆರಗನೊಡ್ಡಿ ನಿರುತ ನಿಮ್ಮ ಚರಣ ಭಜಿಪೆ ಶರಣಾಗತರ ವರಪ್ರದಾತ ನಿರುತ ಪರಿಪಾಲಿಸಭವ 1 ಶುದ್ಧ ನಿಮ್ಮ ಭಕ್ತನೆನಿಸೊ ಬದ್ಧನೆನಿಸಿಬೇಡ ದೇವ ಬಿದ್ದು ಬೇಡ್ವೆ ನಿಮ್ಮ ಪದಕೆ ತಿದ್ದಿಕಾಯೋ ಎನ್ನ ತಪ್ಪ 2 ತರಳನ್ಹೊರೆದಿ ಭರದಿ ಬಂದು ನರನ ಕಾಯ್ದಿ ಧುರದಿ ನಿಂದು ಪರಮಸಿದ್ಧಿ ನೀಡು ಈಗ ಚರಣದಾಸಗೆ ವರ ಶ್ರೀರಾಮ 3
--------------
ರಾಮದಾಸರು
ಮೋಹನಾರ್ಯನೆ ಯೆನ್ನಾ | ಪೀಡಿಸುವ ಭವಮೋಹಕಳೆವುದು ಮುನ್ನಾ | ಹರಿಯಂಘ್ರಿ ಭಜನೆಯಈಹ ಕೊಡುವುದು ಇನ್ನಾ | ಭೂಸುರವರೇಣ್ಯಾ ಪ ದೇಹ ಮಮತೆಯ ದಾಶೆಯಲಿ ಸುಖ | ವಾಹಿನಿಗಳನುಭವಿಸೆ ಬಲುದುರ್‍ದೇಹ ಪೋಷಣೆಗೈದು ಹರಿಪದ | ಈಹಿಸದೆ ಬಲುನೊಂದೆ ಭವದಲಿ ಅ.ಪ. ಜಯದಲುದಿಸುತಲಂದೂ | ತಾರುಣ್ಯವನುನಿರ್‍ಭಯದಿ ಕಳೆದಿಹೆ ಬಂಧೂ | ವಿದ್ವೇಷದೊಳಗ್ಹರಿಹಯನನುಜ ವರ್ತಿಗಳಂದೂ | ಸಲಹಿದರು ಎನ್ನಯ ಭಯ ನಿವಾರಿಸುತಂದೂ | ಕಾರುಣ್ಯ ಸಿಂಧೂ ||ಹಯಮುಖನ ಪದ ಸತ್ಸರೋಜಗಳ್ | ದ್ವಯಭಜಿಪ ಮನವಿರದೆ ವಿಷಯದಹುಯಿಲಿನಲಿ ಬೆಂಡಾಗಿ ತಾಪದ | ತ್ರಯದಿ ಬಲು ಬಳಲಿರುವೆನಯ್ಯ |ಜಯದ ಸಂವತ್ಸರವು ಮರಳಿ | ಬಯಲು ಆಗದ ಮುನ್ನ ಹರಿಪದದ್ವಯಗಳನು ಕಾಂಬಂಥ ಹದನವ | ದಯದಿ ತೋರುತ ಸಲಹೊ ಬಂಧು 1 ಕಾಮಮದ ಮಾತ್ಸರ್ಯಾ | ಅರಿಗಳನಮನನೇಮನಿಷ್ಟಯ ಚರ್ಯಾ | ಕುಂದಿಸುತ ವಿಷಯಸ್ತೋಮ ಕಳೆಯುವರಯ್ಯ | ಈ ಪರಿಯ ಪರಿಭವಸೀಮೆ ಮೀರುವ ಚರ್ಯಾ | ಪರಿಹರಿಸೊ ಜೀಯ ||ಭ್ರಾಮಕತ್ರಯ ಮಾರಿಗೆನ್ನ ಸು | ಹೋಮಿಸುವ ದುರುಳನನು ಸದೆವತಾಮರಸಭವ ಪದಕೆ ಬರುತಿಹ | ಆ ಮಹಾ ಮಾರುತ ನೊಳಿರುವ |ರಾಮ ಚಂದ್ರ ಪದಾರವಿಂದವ |ಕಾಮಿಸುತ ತನ್ಮಹಿಮೆಗಳ ಸನ್‍ನಾಮ ಕೀರ್ತನೆಗೈದು ಮೋದಿಪ | ಪ್ರೇಮಮನವಿತ್ತೆನ್ನ ಸಲಹೋ 2 ನೀರೊಳಾಡುತ ಬಂದಾ | ಬೆನ್ನಿನಲಿ ಬಹುಭಾರ ಪೊತ್ತುದೆ ಛಂದಾ | ಅವನಿಯನು ತನಕೋರೆದಾಡೆಗಳಿಂದಾ | ತರಳನನು ಬಹುಘೋರರೂಪದಲಿಂದಾ | ಸಲಹಿದುದೆ ಛಂದಾ ||ಮೂರು ಪಾದವ ಬೇಡಿ ಬಲಿಯನು | ಭಾರಿ ಕೊಡಲಿಯ ಪೆತ್ತು ಪೆಗಲೋಳು |ಘೋರ ಅಟವಿಯ ತಿರುಗಿ ತಿರುಗಿ | ನಾರೆರೊಲುಮೆಗೆ ಸಿಲ್ಕಿ ತ್ರಿಪುರದನಾರಿಯರ ವ್ರತಗೆಡಿಸಿ ಹಯವನು | ಏರ್ದ ಗುರುಗೋವಿಂದ ವಿಠ್ಠಲಕಾರಣನು ಜಗಕೆಂಬ ಮತಿಯನು | ಧೀರಗುರು ಮೋಹನ್ನ ಕರುಣಿಸು 3
--------------
ಗುರುಗೋವಿಂದವಿಠಲರು
ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ ಗತಿಯನು ಪೊಂದುವರು ರಾಘವೇಂದ್ರ ಪ ಕ್ಷಿತಿಯೊಳಗೆ ದಶಪ್ರಮತಿಗಳ ಸುಖಕರ ಮತದ ಪರಮ ಸಂಗತಿಗಳ ಹರಡಿದ ಅ.ಪ ಜಯ ಮುನಿಗಳವರ ಗ್ರಂಥಗಳಿಗೆ ಸುಖಮಯ ಟಿಪ್ಪಣಿಗಳನು ರಚಿಸಿ ಚಿನ್ ಮಯ ರಾಮರ ಸೇವೆಯ ಸಂತಸದಲಿ ಗೈದು ಸುಮಂತ್ರಾಲಯದಲಿ ನೆಲೆಸಿದ 1 ಮಂಗಳಕರವಾದ ತುಂಗಾನದಿಯ ತರಂಗಗಳಲಿ ಮಿಂದು ನಿಮ್ಮನು ನಿಸ್ಸಂಗರಾದ ಸಾಧು ಸಂಘವ ಪೊರೆಯುವ 2 ಪರಿಪರಿಯಲಿ ನಿಮ್ಮ ನಮಿಪ ಸೇವಕರಿಗೆ ಸುರಧೇನುವಿನಂತೆ ಸಂತತ ಹರುಷದಿಂದಲಿ ನಿಮ್ಮ ಭಜಿಪ ಸುಜನರಿಗೆ ಸುರತರುವಂತೆ ಪ್ರಸನ್ನರಾಗುವಂಥ 3
--------------
ವಿದ್ಯಾಪ್ರಸನ್ನತೀರ್ಥರು
ಯತಿವರ್ಯ | ಯತಿವರ್ಯ ಪ ಯತಿ ಸುಧೀಂದ್ರಕರ | ಸುತನೆಂದೆನಿಸಿದ ಅ.ಪ. ಪರ | ಮಾರ್ಥವ ಯಾಚಿಪೆ 1 ಪಾದ್ಯ ಹರಿ | ಗುಣ ಸಂಪೂರ್ಣನಗುಣವರ್ಣನ ಸು | ಜ್ಞಾನವ ನೀಯೋ 2 ಪರಿಮಳಾರ್ಯ ತವ | ಚರಣಾರಾಧನೆಕರುಣಿಸಿ ಸುಧೆರಸ | ಎರೆವುದೆನಗೆ ಗುರು 3 ಅನ್ಯನಲ್ಲ ನಾ | ನಿನ್ನವರವನೈಘನ್ನ ಮಹಿಮ ಸಂ | ಪನ್ನ ಪೊರೆಯೊ ಗುರು 4 ಯೋಗಿವರ್ಯ ತವ | ಅಘಹರನಾಮಕೆಮಿಗಿಲಿಲ್ಲವೊ ಗುರು | ಬಾಗಿ ಭಜಿಪೆ ನಿನ 5 ಪರಿ | ಕಾಮ ಫಲಪ್ರದಪಾಮರ ಮನುಜನ | ನೀ ಮಾಣದೆ ಪೊರೆ 6 ಭೂಮಾರ್ಣವ ಗುರು | ಗೋವಿಂದ ವಿಠಲನಕಾಮಿಪೆ ಮೆನ್ಮನ | ಸೀಮೆಯಲಿರಿಸೋ 7
--------------
ಗುರುಗೋವಿಂದವಿಠಲರು
ಯಾಕೆ ದಯಬಾರದೊ ಕಾಂತೇಶ ಪ್ರಾಣೇಶ ಸಾಕಲಾರದೆ ಪೋದೆಯಾ ಎನ್ನನು ಪ. ಏಕಚಿತ್ತದಿ ನಿನ್ನ ಚರಣ ನಂಬಿ ಬರಲು ಭಾರತೀಶ ಅ.ಪ. ತೊಳಲಿ ಬಳಲಿ ಸುಖ ಸುಳಿವೆಂಬೋದರಿಯದೆ ನಳಿನಾಕ್ಷನ ದಾಸ ನಿನ್ನ ಕೀರ್ತಿ ಇಳೆಯೆಲ್ಲ ಪೊಗಳಲು ಸಲಹುವನೆಂತೆಂದು ಬಳಿಗೆ ಬರಲು ಮನಕರಗದೆ ತಂದೆ 1 ಅಂದು ಕನಸಿನಲ್ಲಿ ಶಿರದಲ್ಲಿ ಕರವಿಟ್ಟೆ ಇಂದೆಲ್ಲಿ ಪೋಯಿತೊ ಆ ಕರುಣ ತಂದೆ ಮುದ್ದುಮೋಹನ ಗುರುಗಳ ವಚನವ ಇಂದು ಒಲಿದೆನ್ನ ಕಾಯೊ2 ವಿೂಸಲ ದಾಸ್ಯಕೆ ಆಶೆ ಮಾಡಿದೆನೆಂದು ದೋಷವೆಣಿಸುವರೆ ಎನ್ನಲಿ ನೀ ಶೇಷಶಯನನೆ ಬಲ್ಲೆನೊ ಇದರ ಮರ್ಮ ಘಾಸಿಗೊಳಿಸದೆ ನೀ ಅಭಯವನೀಯೊ 3 ರಾಮದಾಸ್ಯವ ಬಯಸಿ ನೇಮದಿಂದಲಿ ಇದ್ದು ರಾಮನಾಗಮ ಕಂಡು ಎರಗಿ ನಿಂದು ಪತಿ ಪಾದ ದಾಸ ಸಿದ್ಧಿಯ ಪಡೆದು ಭೂಮಿಯೊಳು ಖ್ಯಾತನಾದೆಯೊ ಆಂಜನೇಯ 4 ಚಿತ್ತಿದಿ ಕೃಷ್ಣನ ದಾಸತ್ವ ಸಾಧಿಸಿ ಮತ್ತೆ ಮುನಿಯಾಗಿ ಗ್ರಂಥವ ರಚಿಸಿ ಚಿತ್ತದಿ ಗೋಪಾಲಕೃಷ್ಣವಿಠ್ಠಲನ ಪಾದ ನಿತ್ಯದಿ ಭಜಿಪೆ ನೀ ಮತ್ತೆನ್ನ ಕಾಯೊ 5
--------------
ಅಂಬಾಬಾಯಿ