ಒಟ್ಟು 513 ಕಡೆಗಳಲ್ಲಿ , 80 ದಾಸರು , 442 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರುತಲಿಹರು ನೋಡಿ ಗುರುವರೇಣ್ಯ ಸುಖತೀರ್ಥ ಯತಿವರರು ಪ ಹರಿದು ಬರುವ ಸುರನದಿಯ ಪ್ರವಾಹದ ತೆರದಲಿ ಪರಿಪರಿ ಪರಿವಾರ ಸಹಿತ ಅ.ಪ ಕರದಲಿ ಪಿಡಿದಿಹ ದಂಡ ಕಮಂಡಲ ಕೊರಳೊಳು ತುಳಸಿಯ ಚಿಗುರಿನ ಮಾಲೆಯು ಅರಿವಾರಿಜ ಲಾಂಛನಗಳಿಂದೊಪ್ಪುವ ವರ ದ್ವಾದಶ ನಾಮಗಳನು ಧರಿಸುತ 1 ಯತಿಗಳು ಗೃಹಿಗಳು ಬ್ರಹ್ಮಚಾರಿಗಳು ಶತಶತ ಸಂಖ್ಯೆಗಳಲಿ ಸೇರಿಹರು ಅತಿ ಸಂಭ್ರಮದಲಿ ನೋಡಲು ಪುರುಷ ರತುನವು ಮಾರ್ಗದ ಖತಿಪರಿಹರಿಸುತ 2 ಅವನಿಸುರರು ಮುಂಬದಿಯಲಿ ತಮ್ಮಯ ಕವಿತೆಗಳಲಿ ಗೋವಿಂದನ ಗುಣಗಳ ನವ ನವ ಸ್ವರದಲಿ ಪಾಡುತ ಕುಣಿಯಲು ಶ್ರವಣ ನಯನಕಾನಂದವ ಬೀರುತ 3 ತ್ವರೆಯಲಿ ಸರಿದು ತಾ ಬರುತಿರೆ ಯುವ ಕೇ- ಸರಿಯ ಧಿಕ್ಕರಿಸುವ ಸಂಭ್ರಮ ಗಮನ ಚರಣಯುಗಳ ಕಾಂತಿಯ ಪಸರಿಸುತಲಿ ಧರಣಿಯ ಪಾವನ ಮಾಡುವ ಬಗೆಯಲಿ 4 ಏನಿರಬಹುದೆಂದು ನೋಡುವರಿಗೆ ಕಾಣಿಸುವುದು ತೇಜದ ಪುಂಜ ಭೂನಿಲಯವ ಬೆಳಗಲು ಅತಿ ನೂತನ ಭಾನು ಉದಯಿಸಿದ ತೆರದಲಿ ಪೊಳೆಯುತ 5 ಪದುಮರಾಗ ಕಾಂತಿಯ ಮೀರಿದ ನಖ ಕೂರ್ಮ ಪ್ರಪದಗಳು ವಿಧಿಭವಮುಖ ಸುರಸೇವಿತ ಜಂಘವು ಮದಗಜ ಕರವನು ಪೋಲುವ ತೊಡೆಗಳು 6 ಪುಷ್ಪ ನಿತಂಬಗಳಲಿ ಪೊಳೆಯುತಲಿಹ ರೇಷ್ಮೆಯ ವಸ್ತ್ರವ ಧರಿಸಿಹರು ಕುಕ್ಷಿಲಲಾಟ ಶಿರೋಧರಗಳಲತಿ ಶ್ರೇಷ್ಠದ ತ್ರಿವಳಿಗಳಿಂದ ರಾಜಿಸುತ7 ಕೆಚ್ಚಿನ ವಕ್ಷಸ್ಥಳವತಿ ಸುಂದರ ಉಚ್ಚ ಪೀವರದ ಸ್ಕಂಧಯುಗಳವು ಸ್ವಚ್ಛದ ಕೆಂಬಣ್ಣದ ಕರತಲದಲಿ ಬಿಚ್ಚಿ ಹಾರುತಿಹ ಧ್ವಜಲಾಂಛನದಿ 8 ಚಂದಿರ ಬಿಂಬವಿದೋ ಪ್ರೇಕ್ಷಕರಾ ನಂದತರಂಗವ ಉಕ್ಕಿಸುತಿಹುದು ಒಂದು ಕಳಂಕವು ಕಾಣದಿರುವ ಅತಿ ಸುಂದರ ಪುರುಷವರೇಣ್ಯರು ಸೊಗಸಿಲಿ 9 ಸುಂದರ ಮಂದಸ್ಮಿತದಿಂ ಶೋಭಿಪ ಕುಸುಮ ತೆರದಲಿ ದಂತಗಳು ಮಂದಿಗಳಿಗೆ ಬಲು ಹರುಷವಿತ್ತು ಅರ ವಿಂದ ನಯನ ಆನಂದತೀರ್ಥ ಮುನಿ 10 ಕಿವಿಯಲಿ ಪೊಳೆಯುವ ತುಳಸಿಯದಳಗಳು ಅವಿರಳ ತೇಜದಿ ಹೊಳೆಯುವ ಕಪೋಲ ಭುವನತ್ರಯಗಳಭೀಷ್ಟವ ನೀಡುವ ಸುವಿಮಲ ಸುಂದರ ಭ್ರಕುಟಿ ವಿಲಾಸದಿ 11 ಅಕಲಂಕ ಶರೀರರು ಬರುತಿಹುದನು ಸಕಲ ಕಲಾಕುಶಲರು ನೋಡಿ ಶಕುತಿಗೆ ಮೀರಿದ ಮಾದರಿಯೆಂದರು ಪ್ರಕೃತಿ ಮಧುರ ಸರ್ವಾಂಗ ಸುಂದರರು 12 ಕಾಂತಿ ಸುಧೆಯ ಪಾನವ ಮಾಡಿರಿ ಸುಖ ಶಾಂತಿ ನಿಲಯರಾಶ್ರಯದಲಿ ಬಾಳಿರಿ ಚಿಂತೆ ಸಂತಾಪಗಳೆಲ್ಲವ ತೊಳೆಯಿರಿ ಸಂತತ ಹರಿದಾಸ್ಯದಲಿ ಪ್ರಸನ್ನರು 13
--------------
ವಿದ್ಯಾಪ್ರಸನ್ನತೀರ್ಥರು
ಬರುವ ಸಂಭ್ರಮವನ್ನು ನೋಡಿ ಪರಮ ಕರುಣಾಕರೆಯ ಪಾಡಿ ಪ. ಹೆದ್ದಾರಿ ಮಧ್ಯದಿ ಸ್ವಾರಿ ಬರುತಾ ದಾರಿದ್ರ್ಯ ದೈನ್ಯವೋಡಿಸುತಾ ಸ್ವರ್ಣಧಾರೆಯನು ಸರ್ವತ್ರ ತರುತಾ ಸಾರಿಸಾರಿಗೆ ವರವ ಕೊಡುತ 1 ಶುಕ್ಲನಭಮಾಸಭೃಗುವಾಸರದಲಿ ಶುಭಲಗ್ನಸಂಜೆ ವೇಳ್ಯದಲಿ ವಿಭವದಲಿಪೂಜಿಸುವುದೆಂದು ವಲ್ಲಭೆಗೆಂದ ವಚನ ತಿಳಿದಿಂದು 2 ಲಕ್ಷ್ಮೀದೇವಿಯನು ತನ್ನ ದಾಸರನು ಮೀಸಲಳಿಯದ ಸೌಖ್ಯಗಳನು ಮೆರೆವುದನು 3
--------------
ತುಪಾಕಿ ವೆಂಕಟರಮಣಾಚಾರ್ಯ
ಬಲು ಚಂದ ಮಹದಾನಂದ ಶ್ರೀಹರಿ ಭಜನೆ ಪ ಬಲು ಚಂದ ಬಲು ಚಂದ ಮಹದಾನಂದ ಜಲಜನಾಭನ ನಾಮ ನಲಿನಲಿದ್ಹೊಗಳ್ವುದು ಅ.ಪ ಬಲಿಯ ಕಾಯ್ದನ ನಾಮ ಬಲು ಚಂದ ಲಲನೆಗೊಲಿದನ ಧ್ಯಾನ ಆನಂದ ಕಲುಷಹರಣ ಕರಿಪಾಲನೆಂದೊದರಲು ಗಳಿಲನೆ ಪರಿಹಾರ ಭವಬಂಧ 1 ಮಾವಮರ್ದನನಾಮ ಬಲು ಚಂದ ಗೋವಳರೊಡೆಯನ ಧ್ಯಾನ ಆನಂದ ಗೋವುಪಾಲನೆಂದು ಭಾವಿಸಿ ಕೂಗಲು ಸಾವು ಹುಟ್ಟು ಇಲ್ಲ ಎಂದೆಂದು 2 ಕಾಮಪಿತನ ನಾಮ ಬಲು ಚಂದ ಕಾಮಿತಾರ್ಥನ ಧ್ಯಾನ ಆನಂದ ಭೂಮಿಗಧಿಕ ನಮ್ಮ ಸ್ವಾಮಿ ಶ್ರೀರಾಮನ ಪಾದ ನೇಮದಿ ನುಡಿಯೆ ಮುಕ್ತಿಪದ ಆನಂದ 3
--------------
ರಾಮದಾಸರು
ಬಲುಕಷ್ಟ ಬರಗಾಲ ಬಂದಿತಯ್ಯ ವೈರಿ ಜನಕೆ ಬರಬಾರದಯ್ಯ ಪ ಶಿಶುಗಳಿಗೆ ಹಾಲಿಲ್ಲ ಪಶುಗಳಿಗೆ ಮೇವಿಲ್ಲ ಉಸರಲು ಬಾಯಿಲ್ಲ ವೃದ್ಧ ಜನಕೇ ಅಶನ ವಸನಕ್ಕಾಗಿ ವ್ಯಸನ ಪೂರಿತರಾಗಿ ನಿಶಿ ಹಗಲು ಜನರೆಲ್ಲ ಉಸುರು ಹಾಕುತಲಿಹರು 1 ಧÀವಸಧ್ಯಾನ್ಯದ ಬೆಲೆಯು ದಿವಸ ದಿವಸಕೆ ಮಹಾ ಪ್ರವಾಹದಂದದಿ ವೃಧ್ಧಿಯಾಗುತಲಿಹುದು ಅವಸರಕೆ ಬೇಡಿದರೆ ಲವಣದೊರೆಯದು ಮೇಲೆ ಶಿವಶಿವಾಯೆಂದು ಭವಣಿಯನನುಭವಿಸುವರು 2 ಶಾರೆ ಕಾಳು ಭಿಕ್ಷೆಕೆರೆಯುವದಕೆ ಗತಿಯಿಲ್ಲಾ ಶರಗೊಡ್ಡಿ ಕರೆದರೂ ಕೊಂಡರೊಬ್ಬರುಯಿಲ್ಲಾ ಅರೆಹೊಟ್ಟಿಯುಂಡು ಹರಕು ಬಟ್ಟಯನುಟ್ಟ ಮರಮರನೆ ಮನದೊಳಗೆ ಮರುಗುವರು ಬಡಜನರೂ 3 ಜೋಳನವಣಿ ಸಜ್ಜಿ ಕಾಳಿಗೇರಿದ ಬೆಲೆಗೆ ತಾಳಿ ಮನದಲಿ ವ್ಯಥಿಯ ಕೂಲಿ ಜನರು ಕೂಳಿಗಾಗದು ಎಂದು ಬಾಳುವೆಯ ಗೈಯುವಂಥ ಕೂಲಿವಲ್ಲೆವು ಎನುತ ಗೋಳಿಡುತಲಿಹರು 4 ಕಡಲೆ ಕಾಣದ ಹರಿಯು | ಕಡಲೊಳಡಗಿದ ಮೃಡನು ಸೊಡರೆಣ್ಣೆಸಿಗದೆಂದು ಸುಡುಗಾಡು ಸೇರಿದಾ ಅಡಕಿ ಸಕ್ಕರೆ ಗೋಧಿ ಕೊಡುವ ಬೆಲೆಯನು ಕೇಳಿ ಮಿಡುಕಿ ಮನದೊಳು ಕಣ್ಣ ಬಿಡುತಿಹರು ಸುಮನಸರು 5 ಮಳೆರಾಯ ಮುನಿದುದಕೆ ಹೊಲ ಬೆಳೆಯದಿದ್ದುದಕೆ ಬಳುತಿಹವು ಬಡಜನರ ಕಣ್ಣಿಂದ ನೀರು ಜಲಹರಿಸುವದು ನೋಡಿ ನಲಿದಾಡಿ ನಗುತಿಹಳುಕ್ಷಾಮದೇವಿ 6 ಕ್ಷಾಮದೇವಿಗೆ ತನ್ನ | ಧಾಮಸೇರುವಂತೆ ನೀಡಿ ಮಾಡಿ ಸಾಕು ನಮ್ಮ ಸಕಲ ಜನಕೇ | ಕ್ಷೆಮ ಸೌಖ್ಯವಗರೆದು | ಪ್ರೇಮದಲಿ ಪೊರೆ ಕರವ ನಾ | ಮುಗಿದು ಪ್ರಾರ್ಥಿಸುವೆ ಶಾಮಸುಂದರ ಸ್ವಾಮಿ 7
--------------
ಶಾಮಸುಂದರ ವಿಠಲ
ಬಾಗಿಲು ತೆಗೆಯಲೆ ಭಾಮತಿ ರನ್ನಳೆ ಈಗ ನಾ ಬಂದೆನು ಇಂದುಮುಖಿ ಪ ನಾಗವೇಣಿಯೆ ನಿನ್ನೀಗಲೆ ನೋಡಲು ಬೇಗನೆ ಬಂದೆನು ತೆಗಿ ಕದವಾ ಅ.ಪ ಯಾರದು ಈ ಸಮರಾತ್ರಿಯ ವೇಳದಿ ಬಾಗಿಲು ತೆಗೆ ಎಂದೆನುತಿಹರು ತೋರದು ಎನಗೊಂದಾಲೋಚನೆ ನಿಮ್ಮ ನಾಮವು ಪೇಳಲು ತೆಗೆಯುವೆನು 1 ನೀಲವೇಣಿಯೆ ಕೇಳೆನ್ನ ಮಾತನು ಬಹಳ ಚಿಂತೆಯಾತಕೆ ಮನದಿ ನೀಲಕಂಠನೆಂದೆನ್ನನು ಕರೆವರು ಕೇಳು ಮನಸು ಚಂಚಲ ಬಿಟ್ಟು 2 ನೀಲಕಂಠನೆಂದರೆ ನೆನಪಾಯಿತು ನವಿಲಿನ ಮರಿ ಬಂದಿಹುದೆಂದು ನಾರಿಯರೆಲ್ಲರು ಹಾಸ್ಯವ ಮಾಳ್ಪರು ಸಾರುತ ವನಗಳ ಚರಿಸೆಂದು 3 ಬೆದರದೆ ತೆರೆ ಕದ ಸುದತಿಮಣಿಯೆ ನಾ ಬದಲೊಂದು ನಾಮವ ಪೇಳುವೆನು ಬುಧ ಜನರೆಲ್ಲರು ಭಕುತಿಲಿ ಸ್ಥಾಣು- ವೆನ್ನುತ ನಾಮವ ಕೊಂಡಾಡುವರು4 ಬೂಟಾಟಿಕೆ ಮಾತುಗಳನ್ನ ಏತಕೆ ಸಾಟಿಯಾರು ಜಗದೊಳಗಿನ್ನು ಮೋಟುಮರಕೆ ಸ್ಥಾಣುವೆನ್ನುತ ಕರೆವರು ಈ ಪೃಥ್ವಿಯ ಮೇಲಿನ ಜನರು 5 ಬಿಸುಜಮುಖಿಯೆ ಇನ್ನೊಂದು ಪೆಸರು ಕೇಳೆ ಪಶುಪತಿಯೆಂದು ಕರೆವರೆನ್ನ ವಸುಧೆಯ ಮೇಲಿನ ಪೆಸರುಗಳಿಗೆ ನೀ ಪ್ರತಿಯಾಗರ್ಥವ ಕಲ್ಪಿಸುವಿ 6 ವೃಷಭರಾಜ ನೀನಾದರೆ ಮುಂದಕೆ ಪಶುಗಳ ಮಂದೆಗೆ ತೆರಳುವದು ಕುಸುಮಗಂಧಿಯರ ಸದನದಿ ಕಾರ್ಯವು ವೃಷಭರಾಜಗಿಲ್ಲವು ಕೇಳೌ 7 ಶೀಲವಾಣಿಯೆ ಸುಶೀಲೆಯೆ ಎನ್ನಯ ವಾಣಿ ಕೇಳಿ ಕದವನು ತೆಗಿಯೆ ಪೇಳುವೆ ಮತ್ತೊಂದು ನಾಮವ ಎನ್ನನು ಶೂಲಿ ಎಂದು ಕರೆವರು ಜನರು 8 ಶೂಲಿಯಾದರೆ ನಿನ್ನ ಬಾಧೆಯ ಕಳೆಯಲು ಯಾರಿಗೆ ಸಾಧ್ಯವು ಜಗದೊಳಗೆ ನಾರಿಯರಿಗೆ ಹೇಳದೆ ಮುಂದಕೆ ನಡೆ ಶೂರರಾದ ವೈದ್ಯರ ಬಳಿಗೆ 9 ಕರಿಯ ಮುಖನ ಮಾತೆಯೆ ತಡಮಾಡದೆ ಕನಕಮಯದ ಕದ ತೆರೆ ಬೇಗ ಕಮಲನಾಭ ವಿಠ್ಠಲನನು ಪಾಡುತ ಶಿವನ ನಮಿಸಿ ತೆಗೆದಳು ಕದವ 10
--------------
ನಿಡಗುರುಕಿ ಜೀವೂಬಾಯಿ
ಬಾಯೊಳು ಉಂಗುಷ್ಟವನಿಟ್ಟಮಾಯವ ನÉೂೀಡಮ್ಮಾ ಪ ಶ್ರೀಯರಸನೀಲಮೇಘಛ್ಛಾಯ ಕೃಷ್ಣರಾಯತನ್ನ ಅ.ಪ. ನಿರಂಜನ ತಾ ಲೀಲೆಯಿಂದ1 ಪುಟಿತ ಹಾಟಕ ಮಣಿಘಟಿತ ಕಂಕಣಾಂಗದಕಟಿಸೂತ್ರಗಳನಿಟ್ಟು ನಟನಂದದಿವಟಪತ್ರ ಶಾಯಿ ಓಷ್ಠಪುಟದಿ ಪಾದವನಿಕ್ಕಿಕಟಬಾಯೊಳಮೃತವ ಸ್ಫುಟವಾಗಿ ಸುರಿಸುತ 2 ನಿತ್ಯ ಮಂಗಳ ದೇವಿಯರಗಂಗೆಯ ಪಡೆದ ಶಿವನಂಗ ಶುದ್ಧಿಗೈಸಿದಾತನ3 ಗೋಪಿ ಗೃಹಕರ್ಮರತಳಾಗಿರಲು ಒಮ್ಮನದಿಂದಅಮರಗಣಾರಾಧೀತ ಕ್ಷಮೆಯನಳೆದ ಪಾದಸುಮ್ಮನೆ ಕರದೊಳೆತ್ತಿ ಕಮ್ಮಗಿಹದೆಂದು ತನ್ನ 4 ಕರಪಲ್ಲವಾಮೃತ ಲೋಕವಂದ್ಯರೂಪ ಫಣಿಶೇ-ಖರಾದ್ರಿವಾಸ ಭಕ್ತನಾಕ ಭೂರುಹ ನೀಕರೆಸಿ ದುರಿತವ ಸೋಕದಂತೆ ನಮ್ಮನೀಗಸಾಕುವ ಪರಮ ಕರುಣಾಕರ ಶ್ರೀಕೃಷ್ಣ 5
--------------
ವ್ಯಾಸರಾಯರು
ಬಾರಯ್ಯ ಗುರು ಸ್ವಾಮಿ ಶ್ರೀಸದ್ಗುರು ಎನ್ನ ಮನೋಮಂದಿರಕೆ ಕರುಣಾನಂದದ ಸುಖ ಬೀರುತ ಬಾರೈ ಆತ್ಮಾನುಭವಕೆ ಧ್ರುವ ಕಣ್ಣು ಹಾರುತಿದೆÀ ಬಲದೆನ್ನ ಖೂನದೋರವ್ಹಾಂಗಿಂದು ಚೆನ್ನಾಗ್ಹೊಳಿಯುತಿ ಸುಚಿಹ್ನ ನೀನೊಲಿಯವ್ಹಾಂಗೆ ಬಂದು ಎನ್ನೋಳೀವ್ಹಾಂಗ ಸನಾತನ ಪಾಲಿಸಿದೆನಗೊಂದು ಧನ್ಯಗೈಸುವ ದಯಾಳು ನೀನಹುದೊ ಕೃಪಾಸಿಂಧು 1 ಏನೊಂದರಿಯೆ ಒಂದು ಸಾಧನ ಧ್ಯಾನಮೌನ ಹ್ಯಾಗೆಂದು ಖೂನಬಲ್ಲೆನೊ ನಿಮ್ಮ ಬಿರುದಿನ ದೀನನಾಥ ನೀ ಎಂದು ನ್ಯೂನಾರಿಸದೆನ್ನೊಳಗಿನ ನೀನೆ ಅನಾಥಬಂಧು ಎನಗುಳ್ಳ ಸ್ವಾಮಿ ಸದೋದಿತ ನೀನಹುದೊ ಎಂದೆಂದು 2 ತಾಯಿ ಶಿಶುಸ್ತನಪಾನಕೆ ಬಾಯಿಯೊಳಗಿಡುವ್ಹಾಂಗ ಸಾಯಾಸವಿಲ್ಲದೀಪರಿ ದಯಮಾಡುವದೆನಗೆ ಶ್ರೇಯಸುಖದಾಯಕೊಬ್ಬನು ನೀನೆ ಭಾನುಕೋಟಿ ಎನಗೆ ಅನುದಿನ ದೀನಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರೆ ಪಾರ್ವತಿ ಸಾರೆ ಸುಖವ ತೋರೆ ನಿನ ದಯವ ಪ ಬಾರಿ ಬಾರಿಗು ಪ್ರಾರ್ಥಿಸುವೆನೆ ಸಾರಸಾಕ್ಷಿಯೆ ಸರ್ಪವೇಣಿಯೆ ಅ.ಪ ದಕ್ಷಕುವರಿಯೆ ಈಕ್ಷಿಸೆನ್ನನು- ಪೇಕ್ಷೆ ಮಾಡದಲೆ ಅಕ್ಷಿತ್ರಯನ ಸತಿಯೆ ಭಕ್ತರ ಕಷ್ಟ ಬಡಿಸುತಲಿ ಸೂಕ್ಷ್ಮ ಮತಿಯನಿತ್ತು ಕೃಷ್ಣನ ಸ್ತೋತ್ರಗಾನದಲಿ ಅ- ಪೇಕ್ಷೆಯೊದಗುವ ಮನವ ಪಾಲಿಸು ರಕ್ಷಿಸೀಗಲೆ ಭಕ್ತವತ್ಸಲೆ 1 ಮಂದಗಮನೆ ಮತ್ತೊಂದು ಪೇಳುವೆ ನಂದಿವಾಹನನಾ ಮುಂದೆ ಸ್ತುತಿಪ ಭಕ್ತವೃಂದ ವಿ- ದೆಂದು ಪೇಳಿದೆ ನಾ ಸುಂದರ ಶ್ರೀ ಹರಿಯ ಸೇವೆಗೆ ಪೊಂದಿಸೆನ್ನ ಮನ ಚಂದದಿಂದ ಪ್ರಾರ್ಥಿಸುವೆನೆ ಸುಂದರಾಂಗಿಯೆ ನಿನ್ನನನುದಿನ 2 ಕಮಲನೇತ್ರೆಯೆ ವಿಮಲ ಸದ್ಗುಣಗುಣಿಯೆ ಪಾರ್ವತಿ ಕಮಲಸಂಭವ ಭವಸುರಾರ್ಚಿತನ ಸ್ಮರಿಸುವ ಮತಿ ಹೃ- ತ್ಕಮಲದೊಳಗೆ ನಿಲಿಸುವಂತೆ ಮಾಡು ಸದ್ಗತಿ ಕಮಲನಾಭ ವಿಠ್ಠಲ ಕೊಡುವ ನೆನುತ ಕೀರುತಿ 3
--------------
ನಿಡಗುರುಕಿ ಜೀವೂಬಾಯಿ
ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವತೋರೋ ಎನಗೆ ಮುಕುಂದ ನಲಿದಾಡು ಮನದಲಿಮಾರಪಿತ ಆನಂದನಂದನ್ನ ಕಂದ ಪ ಭವ ಘೋರ ನಾಶನವಾರಿಜಾಸನ ವಂದ್ಯ ನೀರಜಸಾರ ಸದ್ಗುಣ ಹೇ ರÀಮಾಪತೆ ಅ.ಪ. ನೋಡೋ ದಯದಿಂದೆನ್ನ-ಕರಪದುಮ ಶಿರದಲಿನೀಡೋ ಭಕ್ತಪ್ರಸನ್ನ-ನಲಿದಾಡೊ ಮನದಲಿಬೇಡಿಕೊಂಬೆನೊ ನಿನ್ನ-ಆನಂದ ಘನ್ನಮಾಡದಿರು ಅನುಮಾನವನು ಕೊಂ -ಡಾಡುವೆನು ತವ ಪಾದಮಹಿಮೆಗಳನುಜೋಡಿಸುವೆ ಕರಗಳನು ಚರಣಕೆಕೂಡಿಸೊ ತವ ದಾಸಜನರೊಳು 1 ಹೇಸಿ ವಿಷಯಗಳಲ್ಲಿ-ತೊಳಲ್ಯಾಡಿ ನಾ ಬಲುಕ್ಲೇಶ ಪಡುವುದು ಬಲ್ಲಿ-ಘನಯುವತಿಯರ ಸುಖಲೇಸು ಎಂಬುದನ್ನು ಕೊಲ್ಲಿ-ಆಸೆ ಬಿಡಿಸಿಲ್ಲಿಏಸು ಜನುಮದ ದೋಷದಿಂದಲಿಈಸುವೆನು ಇದರೊಳಗೆ-ಇಂದಿಗೆಮೋಸವಾಯಿತು ಆದುದಾಗಲಿಶ್ರೀಶ ನೀ ಕೈಪಿಡಿದು ರಕ್ಷಿಸು 2 ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆದೀನ ಜನರಿಗೆ ಬಂಧು-ನಾ ನಿನ್ನ ಸೇವಕಶ್ರೀನಿವಾಸ ಎಂದೆಂದು-ಕಾರುಣ್ಯ ಸಿಂಧುಪ್ರಾಣಪತಿ ಹೃದಯಾಬ್ಜಮಂಟಪ-ಸ್ಥಾನದೊಳಗಭಿವ್ಯಾಪ್ತ ಚಿನುಮಯಧ್ಯಾನಗೋಚರನಾಗಿ ಕಣ್ಣಿಗೆಕಾಣಿಸುವೆ ಶ್ರೀರಂಗವಿಠಲ 3
--------------
ಶ್ರೀಪಾದರಾಜರು
ಬಾಳು ಬಾಳು ಹರಿ ಪೂಜಾಲೋಲುಪÁಳೊ ಬಾಳೊ ಮುನಿವಾದಿರಾಜಬಾಳೆಂದಕ್ಷತಿನಿಟ್ಟು ದೇವಕ್ಕಳೆಲ್ಲಬಲು ಕೃಪೆಯಲಿ ಹರಸಿದರೊಪ. ಮಕ್ಕಳ ಮ್ಯಾಲೆಂದೆಂದು ಬಲುಅಕ್ಕರುಳ್ಳ ತಾಯಿ ಬಳಗಅಕ್ಷತಿನಿಕ್ಕಿ ಹರಸುವಂದದಿ ದೇ-ವಕ್ಕಳೆನ್ನ ಹರಸಿದರೊ 1 ಸಾಲಿಗ್ರಾಮ ತೀರ್ಥವನು ಮ್ಯಾಲೆಫಲವೀವ ಕ್ಷೇತ್ರವನುಕಾಲಕಾಲದಿ ಹರಿಸ್ಮರಣೆಯ ಬಿಡದಿರುಕೀಳು ಭವವೆಂಬ ಶತ್ರುವನು 2 ತುಲಸಿ ಪದ್ಮಾಕ್ಷಿಯ ಸರವ ನಿನ್ನಕೊರಳ ರವದಲ್ಲಿ ಮೆರೆವಅಲಸದೆ ಹರಿವಾಸರವನೆ ಬಿಡದಿರುಸುಲಭದಿ ಹರಿ ನಿನ್ನ ಪೊರೆವ 3 ಭ್ರಾಮಕರೊಡನಾಡದಿರು ಕಂಡಕಾಮಿನಿಯರ ಕೂಡದಿರುನೇಮನಿಷ್ಠೆಗಳನ್ನು ಬಿಡದಿರು ಎಂದೆಂದುತಾಮಸನಾಗಿ ಕೆಡದಿರು 4 ಹಯವದನಗೆ ನಮಿಸುತಿರು ನಿ-ರ್ಣಯದ ಶ್ರುತಿಯಸೇವಿಸುತಿರುಪ್ರಿಯ ಪುರಾಣಗಳ ಕೇಳುತಿರು ನಿ-ರ್ಭಯದಿಂದವನ ಪೊಗಳುತಿರು 5 ಹರಿಭಕುತರೊಳೆಂದೆಂದಾಡಿರೊ ನರ-ಹರಿಯ ನಾಮಗಳನು ಪಾಡಿರೊ ಹರಿ ಅರ್ಚನೆಯನು ಮಾಡಿರೊ ಶ್ರೀಹರಿಯ ಮೂರುತಿಯನು ನೋಡಿರೊ 6 ದೂರಕ್ಕೆ ದೂರನು ದಾವನ ಹ-ತ್ತಿರ ಬಂದ ಭಕುತರ ಕಾವನಆರಾಧಿಸಲು ಫಲವೀವನ ಹ-ತ್ತಿರ ಸೇರುವ ಭಾವ ದಾವನ 7 ಕಾಮದೇವನ ಪೆತ್ತ ಕರುಣಿಯ ಸುತ್ತಸೇವಿಪರಘತಮ ತರಣಿಯ- - - - - - - - - - -- - - - - - - - - - -8 ಜಯಿಸಿ ಕಂಸನೆಂಬ ಮಾವನ ಆಶಯವಿತ್ತು ಭಕುತ ಸಂಜೀವನಹಯವದನನಾಗಿ ಪಾವನ ಶ್ರು-ತಿಯ ತಂದ ದೇವರದೇವನ9
--------------
ವಾದಿರಾಜ
ಬಿಟ್ಟು ಬರಲಾರಳಮ್ಮಯ್ಯಪಟ್ಟಮಂಚವ ಭಾವೆಬಿಟ್ಟರೆ ರುಕ್ಮಿಣಿ ಕೃಷ್ಣನ ಬೆರೆದಾಳೆಂಬೊ ಅಂಜಿಕೆಯಿಂದ ಪ. ಪಾದ ಸಿಕ್ಕಿತೋ ಸಿಗದೆಂದುಚಿಕ್ಕ ಚನ್ನಿಗಳ ಕೈವಶಚಿಕ್ಕ ಚನ್ನಿಗಳ ಕೈವಶವಾಗದಂತೆಜಪ್ಪಿಸಿಕೊಂಡು ವಟವಾದಳೆ 1 ಶಂಬರಾರಿ ಪಿತನ ತಂಬುಲಸಿಗದೆಂದು ಚುಂಬನದ ಸಮಯ ಚಿಗಿಳೀತುಚುಂಬನದ ಸಮಯ ಚಿಗಿಳೀತು ಎಂತೆಂಬೊಹಂಬಲದಿ ಒಳಗೆ ಕುಳಿತಳೆ2 ನಲ್ಲೆ ರಂಗಯ್ಯನ ಎಲ್ಲೆಲ್ಲಿ ಬಿಡಲೊಲ್ಲೆಎಲ್ಲ ನಾರಿಯರ ನೆರವಿಕೊಂಡುಎಲ್ಲ ನಾರಿಯರ ನೆರವಿಕೊಂಡು ಮನೆಯೊಳುನಿಲ್ಲಗೊಡರೆಂಬೊ ಭಯದಿಂದ3 ಒಗೆತನ ನಗೆಗೀಡಾಯಿತು ನೋಡೆ ಈ ಬಗೆ ಎಲ್ಲೆ ಕಾಣೆ ಜಗದೊಳು ಈ ಬಗೆ ಎಲ್ಲೆ ಕಾಣೆ ಜಗದೊಳು ರುಕ್ಮಿಣಿ ತಗಿ ನಿನ್ನನಡತೆ ತರವಲ್ಲ4 ಅನಂತ ಮಹಿಮಗೆ ಇನ್ನೆಂಥ ಕಾವಲತನ್ನ ನಿಜರೂಪ ಅವರಲ್ಲಿತನ್ನ ನಿಜರೂಪ ಅವರಲ್ಲಿ ರಮಿಸೋದುತನ್ನ ಮನದಲ್ಲಿ ನಿಜ ಮಾಡಿ5 ಸಾಗರಶಾಯಿ ಮನಕೆ ಹ್ಯಾಂಗೆ ಬಂದೀತುಎಂದು ಹೀಗೆ ಕೈ ಮುಗಿದು ತಲೆಬಾಗಿಹೀಗೆ ಕೈ ಮುಗಿದು ತಲೆಬಾಗಿ ರುಕ್ಮಿಣಿಆಗೊಂದು ಮನದ ಬಯಕೆಲ್ಲ6 ಎಷ್ಟು ಜಪಿಸಿ ನೀನು ಠಕ್ಕಿಸಿ ಕೃಷ್ಣನ ಇಟ್ಟಾನೆ ರಮಿಯ ಎದಿಮ್ಯಾಲೆ ಇಟ್ಟಾನೆ ರಮಿಯ ಎದಿಮ್ಯಾಲೆ ರುಕ್ಮಿಣಿ ಇಷ್ಟರ ಮ್ಯಾಲೆ ತಿಳಕೊಳ್ಳ7
--------------
ಗಲಗಲಿಅವ್ವನವರು
ಬಿಡದೆ ಭಜಿಸೊ ಮನವೆ ದೃಢಭಾವದಿ ಪೂರಿಸೊ ಶ್ರೀಪಾದಾರಾಧಿಸೊ ಧ್ರುವ ನಿತ್ಯಾನಿತ್ಯ ಆವದೆಂದುದ್ದಿತ್ಯರ್ಥ ಶೋಧಿಸೊ ಪಥ್ಯವಾಗುವ ಸತ್ಯಶಾಖತ್ವಪಥವ ಸಾಧಿಸೊ ಕೃತ್ಯಾಕೃತ್ಯವಾಗುವ ನಿತ್ಯನಿಜವು ಭೇದಿಸೊ ಉತ್ತಮೋತ್ತಮವಾದ ವಸ್ತುಮಯದೊಳು ನೀ ಸಂಧಿಸೊ 1 ಇದೆ ನೋಡು ಹಿತವು ನಿನ್ನು ಸುಪಥಸಾಧÀನ ಸಾಧಿಸಿಗೊಡುವ ಸ್ವಾಮಿ ಸದ್ಗುರು ಪತಿತಪಾವನ ಭೇದಿಸಿ ನೋಡಲಕ್ಕೆ ನಿನ್ನೊಳಗಾಗುವದು ಉನ್ಮನ ತಾಂ ನಿಧಾನ 2 ಬೆರಿಯೊ ಭಾವಭಕುತಿವಿಡಿದು ಹಿಡಿಯೊ ಹರಿ ಪಾದವ ಸಾರ ಸವಿಯೊ ಸುಖವ ಅನಭವಾಮೃತವ ಹರಿಯೊ ಪಾಶ ಬೀಳುವ ಭವಜನ್ಮಮೃತ್ಯುವ ನೆರಿಯೊ ಮಹಿಪತಿಸ್ವಾಮಿ ವಸ್ತು ಪರಾತ್ಪರವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಿದ್ದೆ ನಿಮ್ಮಯ ಪಾದದಲ್ಲಿ ನಾ ಪ ಮಧ್ವರಾಯರ ಮನದಲ್ಲಿ ಇದ್ದು ವಲಿವ ವೇದವ್ಯಾಸ ಅ.ಪ. ವೇದ ಓದದ ಶುದ್ಧ ಕಳ್ಳನಾ ಮೆದ್ದು ಮೆಲ್ಲುತ ವೃದ್ಧನಾದೆ ಭಲ್ ಗದ್ದ ದಾಸಗೆ ಕರುಣದಿ ತೋರಿ ಉದ್ಧರಿಸುವ ಬಗೆ ಬಲ್ಲೀ 1 ಅನ್ಯದೇವರ ನಾ ನೊಲ್ಲೆ ನಿನ್ನ ಪಾದವ ಬಿಡಲೊಲ್ಲೆ ಘನ್ನಕರುಣಿ ನೀನು ಬಲ್ಲೆ ನಿನ್ನ ಬಿಡಲು ಜಗಕಲ್ಲೇ 2 ಉತ್ತಮೋತ್ತಮ ದೇವ ಸತ್ಯ ಭೃತ್ಯಜೀವನು ಎಂಬೆನಿತ್ಯ ಭಕ್ತ ಪ್ರಥಮ ಪ್ರಾಣನೀನೇ ಮುಕ್ತಿನಿನ್ನಾಧೀನವೇನೇ 3 ವಿಧಿ ಪರಿವಾರ ಎಂದೆಂದಿಗೂ ಭಿನ್ನರೇನೇ ಎಂದೆಂದು ಅಧೀನರೇನೇ 4 ಶ್ರೀಕೃಷ್ಣವಿಠಲ ಏಕ ಸಕಲ ದೋಷ ವಿದೂರ ಪೊರೆಯೋ ಎಂದು ಕೂಗಿ 5
--------------
ಕೃಷ್ಣವಿಠಲದಾಸರು
ಬಿನ್ನೈಪೆ ನಿನಗಾನು ಭಕ್ತ ಬಂಧು ನಿನ್ನ ವಿಸ್ಮøತಿ ದೋಷ ಕೊಡದಿರೆಂದೆಂದು ಪ ಭಾರ ತಾಳುವಾಗಲಿ ಎಡಹಿ ಕಾಲ ಕಾಲಗಳಲ್ಲಿ ಕಾಲನಾಮಕ ನಿನ್ನ ಲೀಲೆಗಳ ಮರೆಯದೆ ನಾಲಿಗ್ಗೆ ಬರುವಂತೆ 1 ನಿಲ್ಲುವಾಗ ಕುಳಿತು ಮೈದೊಳೆವಾಗ ಅನ್ನಗಳ ಮೆಲುವಾಗ ವಿದ್ಯೆಗಳ ಕಲಿವಾಗ ಮಲಗಿ ಸುಖದಿಂದ ನಲಿವಾಗ ಭಕ್ತವ ತ್ಸಲ ನಿನ್ನ ಮಹಿಮೆಗಳ ತಿಳಿವಂತೆ ಮಾಡಯ್ಯ 2 ಖೇದ ಮೋದಗಳು ಸಂತೋಷ ಸಂಪಾದಿಸಿದ ವೈದೀಕವೈದಿಕಗಳು ಸ್ತ್ರೀ ಧನಗಳೆಲ್ಲ ಶ್ರೀಧವನ ಆರಾಧನೆಗೆ ನಿ ವೇದಿಪುದ ತಿಳಿಸೆಂದು 3 ಮೃಗ ಚೋರ ಮುಂತಾದ ಭಯಗಳಲಿ ಭ್ರಾಂತಿಗೊಳಿಸುವ ವಿಷಯ ಸಂತತಿಯಲಿ ಪ್ರಾತಃ ಕಾಲದಿ ರಮಾರಮಣ ನಿನ್ನ ಮೂರ್ತಿ ಚಿಂತನೆಗೆ ಬರಲೆಂದು ಸಂತೋಷದಾತ 4 ಶ್ವಾನ ಸೂಕರ ಜನ್ಮ ಬರಲಿ ಯಮ ದಂಡ ದೂತರ ಪಾಶಕಂಜೆ ನಾನು ಪಾಂಡವ ಪ್ರಿಯ ಜಗನ್ನಾಥ ವಿಠಲನೆ ಪಾ ಷಂಡಿ ಮತಗಳಲಿ ಚೆನ್ನ ಕೊಡದಿರೆಂದು 5
--------------
ಜಗನ್ನಾಥದಾಸರು
ಬಿನ್ನೈಸಲೇನಿನ್ನು ಎನ್ನ ಗುರುವೇ ನಿ ಮ್ಮ ನಿತ್ಯಾನಂದನಿರುವ ಬಗೆಯನ್ನ ಪ. ತನ್ನ ಕಾರ್ಯಗಳನ್ನು ನಿಮ್ಮ ಮೇಲೊರಗಿಸಿ ಬೆನ್ನಿನಂದದಿ ನಿಮ್ಮ ಕಾಡುತಿಹನು ತನ್ನಿಂದಲಾಗದ ಕಾರ್ಯಗಳು ಇನ್ನುಂಟೆ ತನ್ನನೆ ತಾನು ಮರೆತಂತೆ ಇರುತಿಹನು 1 ತನ್ನ ಮಾರ್ಗಕೆ ಬರುವ ಜೀವರುಗಳೆಲ್ಲರನು ನಿಮ್ಮ ವಶಕೊಪ್ಪಿಸಿ ಓರೆಯಾಗಿಹನು ತಾನೊಬ್ಬ ನಿಮ್ಮಿಂದ ತೇರ್ಗಡೆಯಾದಮೇಲ್ ತನ್ನವರ ತಾನು ಸಲಹದಲೆ ಇರುತಿಹರೆ 2 ಬನ್ನಬಡುತಲಿ ಇರುವ ಘನ್ನ ಜೀವರುಗಳನು ಮನ್ನಿಸಿ ಕರೆದು ಅಂಕಿತವಿತ್ತಿರಿ ಇನ್ನಾದರೂ ತಾನು ನಿಮ್ಮ ಕಾರ್ಯಕೆ ನಿಂತು ನಿಮ್ಮ ಸೇವೆಯನು ಮಾಡದಲೆ ಇರುತಿಹನು 3 ಒಂದೊಂದು ಸೇವೆಗೆ ಒಬ್ಬೊಬ್ಬರಿಹರೆಂದು ಮುಂದೆ ತನಗಾವುದೂ ತಿಳಿಯದೆಂದು ಇಂದು ಈ ಪರಿಯಿಂದ ಇರುತಿಹುದು ನ್ಯಾಯವೆ ತಂದೆ ಮುದ್ದು ಮೋಹನಗುರುವೆ ನೀವ್ ಪೇಳಿ 4 ಸಾಕು ನಿಮ್ಮಯ ಶ್ರಮವ ನೋಡಲಾರೆ ನಾನು ಈ ಕಂದನಿಗೆ ಇನ್ನು ವರವ ಕೊಟ್ಟು ಲೋಕಕಾರ್ಯವ ನಡೆಸಿ ನೋಡಿ ಸಂತಸಪಡಿರಿ ಲೋಕೇಶ ಗೋಪಾಲಕೃಷ್ಣವಿಠ್ಠಲ ಪ್ರಿಯರೆ 5
--------------
ಅಂಬಾಬಾಯಿ