ಇಂದುವದನೆ ಪಾರ್ವತಿಯೆ ನಾ ಇಲ್ಲಿಗೆ
ಬಂದೆನು ಬಾಗಿಲು ತೆಗೆಯೆ ಜಾಣೆ
ಬಂದೆನು ಬಾಗಿಲು ತೆಗೆಯೆ 1
ಬಂದವರ್ಯಾರೀ ವ್ಯಾಳ್ಯದಿ ಬಾಗಿಲು
ಬಂದು ತೆಗೆಯೊರ್ಯಾರಿಲ್ಲ ಈಗ
ಬಂದು ತೆಗೆಯೊರ್ಯಾರಿಲ್ಲ 2
ಅಂಗನಾಮಣಿ ಕೇಳೆ ಗಂಗಾಧರೆನಿಸಿದ
ಚಂದ್ರಶೇಖರ ನಾ ಬಂದೀನೆ ಜಾಣೆ
ಚಂದ್ರಶೇಖರ ನಾ ಬಂದೀನೆ 3
ಸಿಂಧುರಾಜನ ಸತಿಸುತರನ್ಹೊತ್ತಿಲ್ಲಿಗೆ
ಬಂದ ಕಾರಣವೇನು ನೀನು ಅವ
ರಿಂದ ಕಾರಣ ಮತ್ತೇನು 4
ಪಶುಪತಿ ನಾ ಬಂದೆ
ಕುಶಲದಿ ಬಾಗಿಲು ತೆಗೆಯೆ ಜಾಣೆ
ಕುಶಲದಿ ಬಾಗಿಲು ತೆಗೆಯೆ 5
ಪಶುಗಳಿಗೆಲ್ಲ ಪತಿಯಾದರೆ ನಿನ ಕೊಂಬು
ಹಸನಾಗಿ ತೋರಿಸೊ ಎನಗೆ ಕೊಂಬು
ಹಸನಾಗಿ ತೋರಿಸೊ ಎನಗೆ 6
ಸರ್ವಶರೀರದಲ್ಲೆತ್ತಿಕೊಂಡಿರುವಂಥ
ಶ್ರೇಷ್ಠ ಶಿವನು ನಾ ಬಂದೀನೆ ಜಾಣೆ
ಶ್ರೇಷ್ಠ ಶಿವನು ನಾ ಬಂದೀನೆ 7
ಸರ್ವ ಸೇರಿರುವಂಥ ಹುತ್ತ ನೀನಾದರೆ
ಇತ್ತ ಬರುವೋದುಚಿತಲ್ಲ ಪೋಗೊ
ಇತ್ತ ಬರುವೋದುಚಿತಲ್ಲ 8
ಕಾಂತೆ ಪಾರ್ವತಿ ನೀಲಕಂಠ ನಾ ಬಂದೀನಿ
ಸಂತೋಷದಿ ಬಾಗಿಲು ತೆಗೆಯೆ
ಸಂತೋಷದಿ ಬಾಗಿಲು ತೆಗೆಯೆ 9
ಕಂಠದೊಳಗೆ ಕಪ್ಪಿದ್ದರೆ ನೀ ನವಿ-
ಲಂತೆ ಕುಣಿದು ತೋರಿಸೆನಗೆ ನವಿ-
ಲಂತೆ ಕುಣಿದು ತೋರಿಸೆನಗೆ 10
ಫಾಲಾಕ್ಷ ನಾ ರುಂಡಮಾಲೆ ಧರಿಸಿದಂಥ
ಶೂಲಿಯು ನಾನು ಬಂದೀನೆ ತ್ರಿ-
ಶೂಲಿಯು ನಾ ಬಂದೀನೆ11
ಮೂರು ಶೂಲೆಗಳ್ಯಾವ್ಯಾವ ಕಡೆಯಲುಂಟು
ಭಾಳ ಬಲ್ಲವರಲ್ಲೆ ಪೋಗಯ್ಯ ನೀ
ಭಾಳ ಬಲ್ಲವರಲ್ಲೆ ಪೋಗಯ್ಯ 12
ಸ್ಥಾಣು ನಾ ಬಂದೀನಿ
ಜಾಣೆ ನೀ ಬಾಗಿಲು ತೆಗೆಯೆ ಒಳ್ಳೆ
ಜಾಣೆ ನೀ ಬಾಗಿಲು ತೆಗೆಯೆ 13
ಸ್ಥಾಣು ನೀನಾದರೆ ವೇಣುಮದ್ದಲೆ ಮಾಡೊ
ಜಾಣರ ಮನೆಗೆ ನೀ ಪೋಗಯ್ಯ ಒಳ್ಳೆ
ಜಾಣರ ಮನೆಗೆ ನೀ ಪೋಗಯ್ಯ 14
ಗಜ ಚ-
ರ್ಮಾಂಬರಧಾರನು ನಾನೇ ಚ-
ರ್ಮಾಂಬರಧಾರನು ನಾನೇ 15
ವೈರಿ ಭಸ್ಮಾಂಗವ ಧರಿಸಿz À
ಸಾಮಜ ವಸನವ ನೋಡಿ ಇರ-
ಲಾರೆನು ನಿನ್ನೊಡಗೂಡಿ 16
ಭೂತಗಣಂಗಳ ನಾಥನಾಗಿರುವೊ ಪ್ರ-
ಖ್ಯಾತನು ನಾನು ಬಂದೀನೆ ಸದ್ಯೋ-
ಜಾತನು ನಾನು ಬಂದೀನೆ 17
ಭೂತಗಣವ ಕೂಡಿ ಯಾತಕೆ ಬರುವುದು
ಭೀತಿ ಬಡುವೆ ಮುಂಚೆ ಸಾಗೋ ನಾ
ಭೀತಿ ಬಡುವೆ ಮುಂಚೆ ಸಾಗೋ18
ಮಾತಿಗೆ ಮಾತನಾಡುವೋರೆ ಪಾರ್ವತಿ ಕೇಳೆ
ಮೂಕನಂತಿರುವೆನೆ ನಾನು ಇನ್ನು
ಮೂಕನಂತಿರುವೆನೆ ನಾನು 19
ಮೂಕನಂತಿರುವುದ್ವಿವೇಕ ಭೀಮೇಶಕೃಷ್ಣ-
ನ್ನ ಕಾರುಣಕೆ ಪಾತ್ರಳೇನೋ ನಿನಗೆ
ನಾ ಕೈಯ ಮುಗಿವೆ ಬಾ ನೀನು 20