ಯಾರು ಬಲ್ಲರು ವೆಂಕಟೇಶ ನಿನ್ನೊಳಿಹ
ಚಾರು ಗುಣಶೀಲವೆಂಬ
ವಾರಿಧಿಯ ಚಿಪ್ಪಿನೊಳು ಮೊಗೆದು ಬತ್ತಿಸುವಂಥ
ವೀರನಾವನು ಜಗದೊಳು ಪ
ಹದಿನಾಲ್ಕು ಲೋಕವನ್ನು, ನೀ ನಿನ್ನ
ಉದರದೊಳಗಿರಿಸಿಕೊಂಡು
ಉದಧಿಮಯವಾಗಿರ್ದ ಕಾಲದೊಳು ನಿನಗೊಂದು
ಉದುರಿದೆಲೆಯೊಳು ನಿದ್ರೆಯಂತೆ 1
ಮಾಯೆ ಕಮಲಾಕರದೊಳು, ನಿನ್ನುದರ-
ದಾಯತದಿ ತೋರಿ ನಿಲಲು
ಮೋಹಿಸಲು ಆ ಕ್ಷಣದಿ ಕಾಯವಾಗಲು ಮೇಲೆ
ಬಾಯಿ ನಾಲ್ಕಾಯಿತಂತೆ 2
ಅಲ್ಲಿ ತೋರಿದ ಸೊಲ್ಲನು, ಖಳನೋರ್ವ
ನೆಲ್ಲವನು ಸೂರೆಗೊಳಲು
ಮಲ್ಲನಾಗಿಯೆ ಜಲದಿ ಘಲ್ಲಿಸಿಯೆ ದೈತ್ಯನನು
ಚೆಲ್ವಸಾರವ ಸೆಳೆದೆಯಂತೆ 3
ಅದರ ಆಧಾರದಿಂದ, ಸನಕಾದಿ-
ಗುದಯವಾದುದುಯೆಲ್ಲವೂ
ಮೊದಲ ಕಾಣದೆ ವೃಕ್ಷವದುರಿ ಬಿದ್ದುದ ನೋಡಿ
ತುದಿಯೊಳಗೆ ಕದನವಂತೆ 4
ಒಳ ಹೊರಗೆ ನೀನೊಬ್ಬನೆ, ಹೊಳೆ ಹೊಳೆದು
ಸುಳಿವ ಪರಿಯನು ಕಾಣದೆ
ಮಲತಾಯಿ ಮಗನೊಳಗೆ ಕಲಹವಿಕ್ಕುವ ತೆರದಿ
ಹೊಲಬುದಪ್ಪಿಯೆ ನಡೆವರಂತೆ 5
ಒಂದಿದರಿಂದೆರಡಾದುದು, ಮೂರಾಗಿ
ಬಂದು ಇದಿರೊಳು ನಿಂದುದು
ಒಂದು ಮಾತಿನೊಳೆರಡು ಸಂದೇಹಗಳ ತೋರಿ
ಮಂದ ಬುದ್ಧಿಯ ಕೊಡುವೆಯಂತೆ 6
ಜಡವಾದ ಅಡವಿಯನ್ನು ಸಂಚರಿಸಿ
ಒಡಲ ಹೊರೆವುದು ಕಡೆಯೊಳು
ಎಡೆಯೊಳೊಪ್ಪಿಸಿ ಕೊಡುವಿಯಂತೆ 7
ನಂಬಿ ಬಂದವರ ನೀನು, ಮನದೊಳಗೆ
ಹಂಬಲಿಸಿಕೊಂಡಿರುತಲೆ
ಇಂಬಾಗಿ ಇಹಪರದಿ ಉಂಬ ಸಂಭ್ರಮವನ್ನು
ಸಂಭವಿಸಿ ತೋರ್ಪೆಯಂತೆ 8
ಭೂಮಿಗೆ ವೈಕುಂಠವೆಂದು, ನಿಂತಿರುವ
ಸ್ವಾಮಿಯೆನ್ನೆಡೆಗೆ ಬಂದು
ಕ್ಷೇಮವನು ವರಾಹತಿಮ್ಮಪ್ಪ ಕರುಣದಿ
ಕಾಮಿತಾರ್ಥವನೀಯೊ ಎಮಗೆ 9