ಒಟ್ಟು 780 ಕಡೆಗಳಲ್ಲಿ , 97 ದಾಸರು , 659 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಲಿದೈತಾರೆಂಬೆ ಹೇ ಜಗದಂಬೆ ನಾಂ ಬೇಡಿಕೊಂಬೆ ಪ. ಒಲಿದೈತರೆ ನೀ ನಲವೇರುತ ನಾ ನಲಿದಾರಾಧಿಪೆ ಎನ್ನೊಲಿದಂಬೇ ಅ.ಪ. ಸಿಂಧುನಂದನೆ ಅರವಿಂದನಯನೆ ಇಂದುಸೋದರಿ ಸಿಂಧುರಗಮನೆ ಸುಗುಣಾಭರಣೆ ವಂದಿಪೆ ಶರದಿಂದುವದನೆ ಸುರ ವಂದಿತಚರಣೆ 1 ಅಂದಿಗೆ ಕಾಲುಂಗುರ ಘಲಿರೆನೆ ಇಂದಿರೆ ತವಪದದ್ವಂದ್ವವ ತೋರಿ ವಂದಿಸುವೆನ್ನೀಮಂದಿರ ಮಧ್ಯದಿ ಎಂದೆಂದಿಗು ನೆಲೆಸಿರು ನಂದಿನೀ ಜನನೀ 2 ಕ್ಷೀರಾಂಬುಧಿ ತನಯೆ ಸೌಭಾಗ್ಯದ ನಿಧಿಯೆ ಕ್ಷೀರಾಬ್ಧಿಶಯನನ ಜಾಯೆ ಸಾರಸನಿಲಯೆ ವಂದಿಪೆ ತಾಯೆ ಬಾರೆಂದು ಕೈಪಿಡಿದೆಮ್ಮನು ಕಾಯಿ 3 ಸರಸಿಜಾಸನೆ ಸ್ಮರಮುಖ ಜನನಿಯೆ ಸುರನರಪೂಜಿತೆ ನಾರದ ಗೇಯೆ ಸಾರಗುಣಭರಿತೆ ಸರಸಿಜಪಾಣಿಯೆ ಶ್ರೀರಮಣೀ ಪರಿಪಾಲಿಸು ಜನನಿ 4 ಸೆರಗೊಡ್ಡಿ ಬೇಡುವೆ ಶ್ರೀನಾರೀ ನಿನ್ನೆಡೆ ಸಾರೀ ಪರತರ ಸುಖ ಸಂಪದವನು ಕೋರೀ ಪೊರೆ ಮೈದೋರಿ 5 ಪರಿಪರಿ ವಿಧದಾ ಸಿರಿಸಂಪತ್ತಿಯೋಳ್ ಗುರುದೈವಂಗಳ ಸೇವಾವೃತ್ತಿಯೋಳಿರೆ ಕರುಣಿಸು ದೃಢತರ ಭಕ್ತಿಯನೆಮಗೀಗಳ್ ವರಶೇಷಗಿರೀಶನ ಮಡದಿಯೆ ಮುದದೋಳ್ 6
--------------
ನಂಜನಗೂಡು ತಿರುಮಲಾಂಬಾ
ನವವಿಧ ಭಕುತಿ ಶ್ರವಣದಿಂದಲಿ ಪಾಪಹರಣವಾಗುವುದೆಂದು ಕವಿಗಳೆಲ್ಲರು ಕೂಗಿ ಒದರುತಿಹರು ಕಿವಿಗಳಿಗಾನಂದದಾಭರಣದಂತಿಹುದು ಶ್ರೀ- ಹರಿಯ ದಿವ್ಯನಾಮಾಮೃತದರಸವು ಮಾಧವನ ಮೂರ್ತಿಯನು ನೋಡದಿಹ ಕಂಗಳು ನವಿಲು ಕಣ್ಣುಗಳೆಂದು ಪೇಳುತಿಹರು ಕಮಲನಾಭ ವಿಠ್ಠಲನ ಮಹಿಮೆ ಪೊಗಳೆ ಫಣಿರಾಜನಿಗೆ ವಶವಲ್ಲ ದೇವಾ 1 ಕೀರ್ತನವು ಮಾಡಲು ಪಾತಕವು ಪರಿಹರವು ಮಾತುಳಾಂತಕನ ಮಹಿಮೆ ಘನವು ಶ್ರೀಶನನು ಮನದಣಿಯ ಸ್ತೋತ್ರವನು ಮಾಡಲು ನಾಶಗೈವನು ದುರಿತರಾಶಿಗಳನು ಮಾಡಿದಪರಾಧಗಳ ಮಾಧವನು ಮನ್ನಿಸುವ ಶ್ರೀಧರನ ಸ್ತುತಿಸಿ ಕೊಂಡಾಡುತಿಹರ ಕರುಣಾಕರ ಕಮಲನಾಭವಿಠ್ಠಲ ದುರಿತದೂರನು ಕಾಯ್ವ ಶರಣಜನರ 2 ಸ್ಮರಣೆಯನು ಮಾಡುತಿಹ ಮನುಜರಿಗೆ ಇಹಪರದಿ ಪರಮ ಮಂಗಳನೀವ ಪರಮಾತ್ಮನು ದುರಿತ ದೂರನ ಪಾದಸ್ಮರಣೆ ಮಾಡುವರಿಗೆ ಪರಿಪರಿಯ ಸೌಖ್ಯಗಳ ಕೊಡುವ ದೇವ ಮಧುವೈರಿಯನು ಸ್ಮರಿಸೆ ಮುದದಿ ಸಂಪದವೀವ ಮೂರ್ತಿ ಶ್ರೀಮಾಧವ ಕನಕಗರ್ಭನ ಪಿತನು ಕರುಣಾನಿಧಿಯು ಕಮಲನಾಭ ವಿಠ್ಠಲ ಕಾಯ್ವ ಸುಜನರ3 ಶಿಲೆಯಾದ ಅಹಲ್ಯೆಯ ಪರಿಪಾಲಿಸಿದ ಪಾದ ಧರಣಿ ಈರಡಿಗೈದ ದಿವ್ಯಪಾದ ಫಣಿ ಹೆಡೆಯ ತುಳಿದ ಪಾದ ವರ ಋಷಿಗಳೆಲ್ಲ ವಂದಿಸುವ ಪಾದ ಇಂದಿರಾದೇವಿ ಬಹುಚಂದದಿಂದೊತ್ತುತ ಕಂದರ್ಪನಯ್ಯನಿಗೆ ಪಾದಸೇವ ಚಂದದಿಂದಲಿ ಮಾಡಿ ಮಾಧವನಿಗೆ ನಂದಗೋಪಿಯ ಕಂದ ಸಲಹುಎನಲು ಸುಂದರ ಶ್ರೀ ಕಮಲನಾಭ ವಿಠ್ಠಲನು ಒಲಿವ 4 ಅರ್ಚಿಸುತ ಮೆಚ್ಚಿಸುತ ಸಚ್ಚಿದಾನಂದನನು ಸ್ವಚ್ಛ ಭಕುತಿಲಿ ಸ್ತೋತ್ರ ಮಾಡುತಿಹರ ಅಷ್ಟ ಐಶ್ವರ್ಯಪ್ರದನು ನಿತ್ಯಮುಕ್ತಳ ಕೂಡಿ ಭಕ್ತರ ಹೃದಯದಲಿ ಪೊಳೆವ ದೇವ ಸತ್ಯ ಸಂಕಲ್ಪನಿಗೆ ಕಸ್ತೂರಿ ತಿಲಕವು ಮತ್ತೆ ಪಾವಡಿ ಥಳಥಳನೆ ಹೊಳೆಯೆ ಸುತ್ತ ಬ್ರಹ್ಮಾದಿಗಳ ಸ್ತುತಿಗೆ ದೇವ ಚಿತ್ತವಿಟ್ಟು ಕೇಳ್ವ ಮಾಧವನು ಮುದದಿ ಕರ್ತೃ ಕಮಲನಾಭ ವಿಠ್ಠಲನು ಕಾಯ್ವ 5 ವಂದನೆಯನು ಮಾಡೆ ಮುಕುಂದನು ಒಲಿವನು ಮುದದಿ ಕಂದರ್ಪನಯ್ಯ ಕಮಲಾಕ್ಷ ಹರಿಯೂ ಸುಂದರಾಂಗ ಶ್ರೀಹರಿಗೆ ಗಂಧ ಪೂಸಿದಳಾಗ ಇಂದೀವರಾಕ್ಷಿ ನಸುನಗುತ ಬೇಗ ಇಂದ್ರಾದಿ ಸುರರೆಲ್ಲ ಕೊಂಡಾಡೆ ಮಾಧವನ ವಂದಿಸುತ ಸಿರಬಾಗಿ ಚಂದದಿಂದ ಮಂದಾರ ಪಾರಿಜಾತಗಳ ತಂದು ತಂದೆ ಕಮಲನಾಭ ವಿಠ್ಠಲನ ಮುಡಿಗೆ ಸಂಭ್ರಮದಿ ಮಳೆಗರೆಯೆ ಚಂದದಿಂದ 6 ದಾಸ್ಯವನು ಕೈಕೊಂಬ ದಾಸ್ಯಜನರನು ಪೊರೆವ ಮೀಸಲಾಗಿಹನು ಹರಿದಾಸ ಜನಕೆ ಪೋಷಿಸೆಂದೆನುವವರ ದೋಷಗಳನೀಡಾಡಿ ದೋಷರಹಿತನು ಪೊರೆವ ಸರ್ವಜನರ ಪೂಸಿ ಪರಿಮಳ ದ್ರವ್ಯ ಶ್ರೀಸಹಿತ ಮೆರೆವ ವಾಸುಕೀಶಯನ ಸಜ್ಜನರ ಪೊರೆವ ಮುರಳೀಧರ ಮಾಧವನು ಕರುಣದಿಂದ ಶರಣ ಜನರನು ಪೊರೆವ ಮರೆಯದೀಗ ಕಮಲನಾಭವಿಠ್ಠಲನು ಕಾಯ್ವದೇವ 7 ಸಖ್ಯ ಸ್ನೇಹಗಳಿಂದ ಮುತ್ತಿನ್ಹಾರಗಳನು ಕೃಷ್ಣನ ಕೊರಳಿಗ್ಹಾಕುತಲಿಬೇಗ ಅರ್ಥಿಯಿಂದಲಿ ರತ್ನ ಮುತ್ತಿನ ಚಂಡುಗಳ ವಿಚಿತ್ರದಿಂದಾಡುತಿರೆ ನೋಡಿ ಸುರರು ಮುತ್ತಿನಕ್ಷತೆಗಳನು ಮಾಧವನ ಸಿರಿಮುಡಿಗೆ ಅರ್ಥಿಯಿಂದ ಸುರಿಸುತಿರೆ ಹರುಷದಿಂದ ಅಪ್ರಮೇಯನು ಶ್ರೀಶ ಶ್ರೀನಿವಾಸ ಸರ್ಪಶಯನನು ಕಮಲನಾಭ ವಿಠ್ಠಲ ನಿತ್ಯ ತೃಪ್ತನು ಪೊಳೆವ ಭಕ್ತರ ಹೃದಯದಲಿ 8 ನಿತ್ಯ ತೃಪ್ತಗೆ ಮಾಡಿ ಅರ್ಥಿಯಲಿ ಅಪ್ರಮೇಯನನು ಸ್ತುತಿಸಿ ಮುತ್ತು ಮಾಣಿಕ್ಯ ಬಿಗಿದ ತಟ್ಟೆಯಲಿ ತಾಂಬೂಲ ಅಚ್ಚುತಾನಂತನಿಗೆ ಅರ್ಪಿಸುತಲಿ ಭಕ್ತಿಯಲಿ ವಂದನೆಯ ಭಕ್ತವತ್ಸಲನಿಗೆ ನಿತ್ಯ ಮುಕ್ತಳು ಮಾಡಿ ಹರುಷದಿಂದ ಸತ್ಯ ಸಂಕಲ್ಪ ಶ್ರೀ ಮಾಧವನಿಗೆ ಮುತ್ತಿನಾರತಿ ಬೆಳಗಿ ಅರ್ಥಿಯಿಂದ ಕರ್ತೃ ಶ್ರೀ ಕಮಲನಾಭ ವಿಠ್ಠಲನ ಕೊಂಡಾಡಿ9
--------------
ನಿಡಗುರುಕಿ ಜೀವೂಬಾಯಿ
ನವವಿಧ ಭಕ್ತಿ ಶ್ರವಣ ಪಾವನವಾದ ಹರಿಕಥೆ ಪುರಾಣ ಮೊದ ಲಾದುದನು ಕೇಳುತ್ತಿ ಪರಮಾತ್ಮನನ್ನು ಹೃದಯ ಪೀಠದಲಿರಿಸಿ ಪೂಜಿಸುವ ಭಕ್ತನೇ ಶ್ರವಣ ಫಲ ಹೊಂದಿದವ ಶ್ರವಣಭಕ್ತಿಯಿದು 64 ದಾಸಕೂಟದ ಭಕ್ತರಿಂ ರಚಿತವಾದ ಸು ಶ್ರಾವ್ಯ ಹಾಡುಗಳನ್ನು ಪಾಡಿ ಕುಣಿಯುತ್ತ ದೇವರನು ನೆನೆನೆನೆದು ಧ್ಯಾನಿಸುವ ಭಕ್ತರೇ ಕೀರ್ತನದ ಭಕ್ತರೆಂದರಿ ಮನುಜ ನೀನು 65 ವ್ಯಾಸ ದಾಸರ ಕೂಟದಿಂದರಿತ ದೇವರನು ಮಾನಸದ ಮಂಟಪದಲ್ಲಿರಿಸಿ ಪೂಜಿಸುತ ಅದನೆ ಪೌನಃಪುನ್ಯದಿಂದ ಮೆಲುಕಾಡುವದು ಸ್ಮರಣಭಕ್ತಿಯಿದೆಂದು ತಿಳಿ ಮನುಜ ನೀನು 66 ಅವತಾರ ರೂಪಗಳ ಮೂರ್ತಿಗಳ ರಚಿಸುತಲಿ ನಿನ್ನ ಚಿತ್ತದ ದೇವರನ್ನಲ್ಲಿಯಿರಿಸಿ ಅವನ ಗುಣಗಳ ನೆನೆದು ಪಾದಸೇವೆಯ ಮಾಡೆ ಪಾದಸೇವನಭಕ್ತಿಯೆಂದು ತಿಳಿ ಮನುಜ 67 ಹೂ ತುಳಸಿ ಮೊದಲಾದ ವಸ್ತುಗಳ ಶೇಖರಿಸಿ ದೇವ ಮೂರ್ತಿಗಳನ್ನು ಇದಿರಲ್ಲಿಯಿರಿಸಿ ಷೋಡಶದ ಉಪಚಾರ ಪೂಜೆಗಳ ನಿತ್ಯದಲಿ ಮಾಡುವುದೆ ಅರ್ಚನದ ಭಕ್ತಿಯಿದು ತಿಳಿಯೈ 68 ಎದೆ ಶಿರಸು ಕಣ್ಣು ಮನ ಕೈಕಾಲು ಮೊಣಕಾಲು ವಾಗೆಂಬುದೆಂಟಂಗಗಳನು ಪಾದದೆಡೆಯೀಡಾಡಿ ನಮಿಸುವುದೇ ವಂದನವು ಸಾಷ್ಟಾಂಗನಮನವಿದು ತಿಳಿಯೈ 69 ದಾಸೋಹವೆಂಬುದನು ತಿಳಿದು ನೀನನವರತ ಫಲದ ಬಯಕೆಯ ತೊರೆದು ಸೇವೆಯನು ಮಾಡೆ ಸೇವಕನ ನಿನ್ನನ್ನು ತನ್ನ ಬಳಿಗೊಯ್ಯುವನು ಭವಬಂಧ ತೊರೆಯಿಸುತ ಪಾಲಿಸುವನವನು 70 ಸಚ್ಚಿದಾನಂದ ಸ್ವರೂಪದವ ಪರಮಾತ್ಮ ತನ್ನ ಗುಣಗಳನ್ನೆಲ್ಲ ಭಕ್ತರಿಗೆ ಕೊಡುವ ನೀರು ಹಾಲನು ನಂಬಿದಂತೆ ನಂಬುವನನ್ನು ಭಕ್ತರಕ್ಷಕನವನು ಮುಕ್ತಿದಾಯಕನು 71 ಕೃಷ್ಣನು ಪರಬ್ರಹ್ಮ ಕೃಷ್ಣನನು ವಂದಿಸುವೆ ಕೃಷ್ಣನಿಂದಲೆ ಸಕಲ ವಿಶ್ವಗಳ ಸೃಷ್ಟಿ ಸುಕೃತ ದುಷ್ಕøತವೆಲ್ಲ ಕೃಷ್ಣನಡಿಯಲಿ ಮುಡಿಯು ಕೃಷ್ಣನಲಿ ಮನವು 72 ಕಾಮಹತಕನು ರುದ್ರದೇವನಿಲ್ಲಿಯೆ ಇದ್ದು ಅಷ್ಟಯತಿಗಳ ಶುದ್ಧಮಾನಸರ ಮಾಡಿ ಬಾಲಯತಿಗಳ ಮೂಲಕವೆ ಪೂಜೆಯನು ಪಡೆದು ರಾರಾಜಿಸುವೆ ದೇವ ಕೃಷ್ಣರೂಪದಲಿ 73 ಭಾರ್ಗವೀಪತಿಯಾದ ಸಿರಿವರನು ಮಾಧವನು ಭಾರ್ಗವೀರೂಪವನು ಶುಕ್ರವಾರದಲಿ ತಾಳ್ದು ಭಕುತರ ಹೃದಯವನ್ನರಳಿಸುವೆ ನೀನು ಮೋಹಿನೀರೂಪವದು ಮೋಹಕವದಲ್ತೆ 74 ಬಲ್ಲಾಳ ವಂಶಜರು ಉಡುಪ ಕುಲದವರೆಂದು ಭಕುತ ಗುರುವಾದಿರಾಜರ ಹಸ್ತದಿಂದ ಮೂರು ಅವತಾರ ಚಿಹ್ನೆಯ ತಾಳ್ದ ಮಾರುತಿಯ ಆರಾಧ್ಯ ಭೂವರಾಹರ ಕೊಡಿಸಿ ಪೊರೆದೆ 75 ದುಷ್ಟ ಜನಮರ್ದನ ಜನಾರ್ದನನು ನೀನಿರುವೆ ನಿನ್ನ ರೂಪವೆ ಪಕ್ಷನಾಥ ಸೇವಿತವು ಚಕ್ರ ಶಂಖಾಸಿ ಪಾನದ ಪಾತ್ರೆಗಳ ಧರಿಸಿ ದುಷ್ಟ ಶಿಕ್ಷಣಕಾಗಿ ಕಾಳಿ ಸೇವಿಪಳು 76 ಜಮದಗ್ನಿಪುತ್ರನಾಗವತರಿಸಿ ನೀನೊಮ್ಮೆ ಕೊಡಲಿಯಿಂ ಕಡಿಕಡಿದು ದುಷ್ಟರಾಜರನು ನಕ್ಷತ್ರ ಮಂಡಲವ ಭೂ ಮಂಡಲವ ಮಾಡಿ ಪರಶುರಾಮನು ಎಂಬ ಪೆಸರನ್ನು ಪಡೆದೆ 77 ಪರಶುರಾಮನು ರಾಮ ಪರಶುರಾಮನು ಕೃಷ್ಣ ಒಬ್ಬನೇ ಹಲವಾರು ರೂಪಗಳ ತಾಳಿ ಸಾಸಿರದ ನಾಮದಿಂ ಸ್ತುತಿಸಿಕೊಳ್ಳುವೆ ಹರಿಯೆ ನಿನ್ನ ಮಾಯಾರೂಪ ತಿಳಿದವರು ಯಾರು? 78 ಮೇಘದೆಡೆಯಿರುವ ಮಿಂಚಿನ ಹಾಗೆ ನೀನೆಂದು ತಿಳಿಸಲ್ಕೆ ನೀನು ಮೇಘದ ವರ್ಣದವನು ನೀಲತೋಯದ ಮಧ್ಯದಲ್ಲಿರುವ ವಿದ್ಯುತ್ತಿನಂತಿರುವಿ ಯೆಂದು ಶ್ರುತಿ ಹೇಳುವುದು ತಿಳಿಯೈ79 ಪುರುಷೋತ್ತಮನೆ ನಿನ್ನ ಪುರವೆಯೆನ್ನಯ ದೇಹ ಉತ್ತಮನು ನೀನಿರುವೆ ಅಧಮ ನಾನಿರುವೆ ಅಜ್ಞಾನದಾಚ್ಛಾದಿಕೆಯನೆನಗೆ ಹಾಕುತಲಿ ಬಿಂಬರೂಪದಲಿದ್ದು ಬೆಳಗಿಸುವೆ ನನ್ನ 80 ಶ್ರವಣಮನನಾದಿ ಸಾಧನದ ಬಲದಿಂದ ನಾ ನನ್ನ ಮುಸುಕನು ತೆಗೆದರೂ ನೀನು ಎನ್ನ ಬಳಿಯಲ್ಲಿದ್ದು ಕಾಣದಿಹೆ ಪರಮಾತ್ಮ ನಿನ್ನ ಪರಮಾಚ್ಛಾದಿಕೆಯ ತೆಗೆದು ತೋರು 81 ಗೋವರ್ಧನೋದ್ಧಾರಿ ಸಿರಿವರನೆ ನೀನೊಮ್ಮೆ ನಾಭಿರಾಜನ ಪುತ್ರನಾಗಿಯವತರಿಸಿ ಅಜನಾಭವೆಂಬ ಮೋಡವನು ಸೃಷ್ಟಿಸಿ ನೀನು ಲೋಕದ ಕ್ಷಾಮವನು ಹೋಗಲಾಡಿಸಿದೆ 82 ನೀನೊಮ್ಮೆ ದಕ್ಷಿಣದ ಕರ್ಣಾಟಕಕೆ ಬಂದು ಅಜಗರದ ವೃತ್ತಿಯಲಿ ದೇಹವನು ತೊರೆದು ನಿರ್ವಾಣ ಬೌದ್ಧಮತ ಜೈನಾದಿ ಮತಗಳಿಗೆ ಮೂಲಪುರುಷನದಾಗಿ ಮೆರೆದೆ ಪರಮಾತ್ಮ 83 ಸತ್ವ ರಜ ತಮವೆಂಬ ಮೂರು ಗುಣ ಪ್ರಕೃತಿಯದು ಪ್ರಾಕೃತದ ದೇಹವನು ಹೊಂದಿದಾ ಜನರು ಹುಟ್ಟುಗುಣ ಮೂರರಿಂ ಕರ್ಮವನು ಮಾಡುತ್ತ ಸುಖ ದುಃಖವನು ಹೊಂದಿ ಜೀವಿಸುವರವರು 84 ಸತ್ಯಾತ್ಮಕನು ನೀನು ಚ್ಯುತಿಯಿಲ್ಲ ಸತ್ಯಕ್ಕೆ ಅಚ್ಯುತನ ನಾಮದಿಂ ಪಾಪ ಪರಿಹರಿಪೆ ಅಂತವಿಲ್ಲದುದಾತ್ಮ ಆತ್ಮರಕ್ಷಕನಾಗಿ ನಾಮದಲನಂತನೆನಿಸಿರುವೆ ಶ್ರೀಹರಿಯೇ 85 ವೇದರಕ್ಷಕನಾಗಿ ಗೋವುಗಳ ರಕ್ಷಿಸುತ ಗೋವಿಂದನಾಮವನು ಧರಿಸುತಲಿ ನೀನು ನಾಮತ್ರಯಗಳಿವನು ಕರ್ಮಾಂತದಲಿ ಪಠಿಸೆ ಕರ್ಮದೋಷದ ಪಾಪ ಪರಿಹಾರವಹುದು 86 ಸಚ್ಚಿದಾನಂದಸ್ವರೂಪ ಹರಿ ನೀನಿರುವೆ ನಿನ್ನ ರೂಪಗಳೆಲ್ಲ ಪೂರ್ಣವಾಗಿಹವು ಜ್ಞಾನವಾನೆಂದವನು ಹೆರವರ್ಗೆ ತಿಳಿಸುತಿರೆ ನಮ್ಮಲ್ಲಿ ಹೆಚ್ಚುವವು ಅದರಿಂದ ಪೂರ್ಣ 87 ಹರದಾರಿ ಸಾವಿರಾರಿದ್ದರೂ ನಾದವನು ಚಣದೊಳಗೆಯಾಕಾಶವಾಣಿ ಕೇಳಿಸುವದು ಕಾಣದಿಹ ವಿದ್ಯುತ್ತುರೂಪವನು ತಾಳಿದವ ದೇವನಲ್ಲದೆ ಬೇರೆ ಯಾರ ಮಾಯೆಯಿದು 88
--------------
ನಿಡಂಬೂರು ರಾಮದಾಸ
ನಾಟ್ಯವಾಡಿದ ನಮ್ಮ ನಾರಸಿಂಹನ ಭಕ್ತ ಶಿಷ್ಟೇಷ್ಟ ಜನಪ್ರಿಯ ಶ್ರೀ ಪಾರ್ವತೀಶ ಪ. ಪರಮ ಸಂತೋಷದಲಿ ಉದಯಸ್ತ ಪರಿಯಂತ ಸಿರಿವರ ರಾಮನ ಪರಮ ನಾಮಾಮೃತವ ತರುಣಿ ಗಿರಿಜೆಗೆ ಅರುಹಿ ಮರೆದು ತನುಮನವನ್ನು ಉರುತರದ ಭಕ್ತಿಯಿಂ ಪರಮ ವೈರಾಗ್ಯನಿಧಿ 1 ತರತಮ್ಯ ಜಗಸತ್ಯ ಹರಿಯು ಸರ್ವೋತ್ತಮನು ಸಿರಿಯು ಅನಂತರದಿ ವಾಯು ಜೀವೋತ್ತಮನು ಪರಮ ವೈರಾಗ್ಯ ಹರ ವೈಷ್ಣವೊತ್ತಮನೆನುತ ಉರವಣಿಸಿ ನುಡಿಯುವರ ನುಡಿ ಕೇಳಿ ಹರುಷದಿ 2 ಗೋಪಾಲಕೃಷ್ಣವಿಠಲ ತಾ ಪ್ರೀತಿಯಿಂದಲಿ ಗೋಪತನಯರನೆಲ್ಲ ಸಲಹಲೋಸುಗದಿ ಪಾಪಿ ಕಾಳಿಂಗನ ಫಣೆಯಲ್ಲಿ ಕುಣಿದುದು ಪರಿ ಎಂದೆನುತ ತಾ ಪ್ರೀತಿಯಿಂ ತೋರಿ 3
--------------
ಅಂಬಾಬಾಯಿ
ನಾಮಧ್ಯಾನವ ಮಾಡಿರೋಪ ನಾಮಧ್ಯಾನವ ಮಾಡಿ | ಕಾಮಿತಾರ್ಥವ ಬೇಡಿ || ಶ್ಯಾಮಸುಂದರ ಸು | ಪ್ರೇಮಿ ಶ್ರೀರಾಮನ ಅ.ಪ ಸತಿ | ಹೈಮಾವತಿಯು ಸದಾ|| ಪ್ರೇಮದಿ ಜಪಿಸುವ | ರಾಮಚಂದ್ರನ ಗುಣ 1 ಶಿವನ ಧನುವ ಮುರಿ| ದವನಿಜೆ ಗೊಲಿದಾ|| ರವಿವಂಶಾಬುಧಿ ಸೋಮ| ಭುವನ ವಿಖ್ಯಾತನ 2 ಕಡುಭಕ್ತಿಯಿಂದಿತ್ತ | ಶಬರಿಯುಚ್ಛಿಷ್ಟವ|| ಬಿಡದೆ ಸ್ವೀಕರಿಸಿದ | ಪ್ರಭು ರಾಮಚಂದ್ರನ 3 ಕರಗಳ ಕಡಿದು ಕ| ಬಂಧನ ಶಾಪವÀ|| ಪರಿಹಾರ ಗೈದ ವ| ಸುಂಧರಪಾಲನ4 ಬ್ರಹ್ಮಪದವಿಯನ್ನು | ಅಂಜನೆಸುತಗಿತ್ತ ಬ್ರಹ್ಮಾಂಡನಾಯಕ | ಕಂಜಾಕ್ಷ ರಾಮನ 5
--------------
ವೆಂಕಟ್‍ರಾವ್
ನಾರದ ದೇವಋಷಿಗಳ ನೋಡಿದೆ ಹರಿಪಾದ ಸೇವಕರ ಕೊಂಡಾಡಿದೆ ದೇವಋಷಿ ಹರಿಪಾದ ಸೇವಕರು ನಮ್ಮಾ ್ವಸು- ದೇವಸುತನಂಕದಲ್ಲುದಿಸಿದುತ್ತಮರಿವರು ಪ ವಾಣಿಪತಿಪಿತನ ಚರಣಾಂಬುಜ ಸೇವೆ ಮಾಡೋ ಜನರಲ್ಲೆ ಕರುಣ ಜಾಣ ನಾರಂದ ಜಗದೀಶನ ಗುಣಮಹಿಮೆ ವೀಣಾಪಾಣಿಗಳಿಂದ ಸ್ತುತಿಸಿ ಕೊಂಡಾಡುವರು 1 ಪ್ರೀತಿಯಿಂದ್ಹರಿಯ ನೋಡಿ ಸುರಪಾರಿ- ಜಾತವನು ತಂದು ನೀಡಿ ಮಾತುಳಾಂತಕನ ಮಡದಿ(ಯ)ರಿಗೆ ಕಲಹವನ್ಹೂಡಿ ಭೂತಳಕೆ ಸುರತರುವ ತರಿಸಿದರ್ಹರಿಕರಗಳಿಂದ2 ದಾಸಿಯಲ್ಲುದಿಸಿ ವಿಷಯಗಳು- ದಾಶ(ಸೀ?)ನವ ಮಾಡಿ ಬ್ಯಾಗ ಅಸುರಾಂತಕನ ಅತಿಭಕ್ತಿಯಿಂದಲಿ ಭಜಿಸಿ ಭೀ- ಮೇಶಕೃಷ್ಣನ ಗುಣವ ಪಾಡಿ ಕೊಂಡಾಡುವರು3
--------------
ಹರಪನಹಳ್ಳಿಭೀಮವ್ವ
ನಾರಸಿಂಹ ನಾರಸಿಂಹ ನಾರಸಿಂಹ ಪ ನಿತ್ಯದಲಿ ಬರುವ ಅಪಮೃತ್ಯುವಿನ ಬಾಧೆಯ ಕೃತ್ತಿ ಒತ್ತಿ ಪರಿಹರಿಸಿ ಭೃತ್ಯನಾದ ಜೀವನ್ನ ತೃಪ್ತಿಪಡಿಸುವ ದೇವ ಭಕ್ತವತ್ಸಲ ನಾರಸಿಂಹ 1 ಅಂದು ಸ್ವಪ್ನದಿ ಬಂದೆ ದ್ವಂದ್ವ ಪಾದಕ್ಕೆರಗಿ ನಿಂದು ನಾ ನಿನ್ನ ಬೇಡೆ ಸಂಧಿಸಿ ಕ್ರೂರ ದೃಷ್ಟಿಯಿಂದ ನೋಡಿ ಮಂದೀಗೆ ಕುಂದು ಮಾಡಬ್ಯಾಡೆಂದೆ 2 ಅಂದಿನಾರಭ್ಯ ಬಲು ಬಂಧನಕೆ ಸಿಲ್ಕಿ ನಾ ಪರಿ ಪೇಳಲಾರೆ ಹಿಂದಿನ ಅಘವೆಣಿಸದೆ ಬಂದು ನಾರಿ ಸಹಿತ ತಂದೆ ಈ ಸುತನ ಕಾಯೋ 3 ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ ಎಂದು ಎನ್ನಗಲದೆ ಬಂದು ನೆಲಸೆನ್ನಲ್ಲಿ ಅಜ್ಞಾನ ಕೊಡದಿರು ವಂದಿಸುವೆನು ನಾರಸಿಂಹ 4 ಮುಂದಾದರು ಹೃನ್ಮಂದಿರದಿ ನೆಲೆಗೊಂಡು ಸಂದರ್ಶನವನೀಯೊ ದೇವ ಕಂದರ್ಪಹರ ವಿಜಯ ರಾಮಚಂದ್ರವಿಠಲರೇಯ ವಂದೆ ಭಕ್ತಿಯ ಪಾಲಿಸು 5
--------------
ವಿಜಯ ರಾಮಚಂದ್ರವಿಠಲ
ನಾರಾಯಣನಿನ್ನಪಾರಾಯಣಗೈವ ಧೀರತನವಪಾಲಿಸೋ ಪ ತೀರಕೆನ್ನನು ಸೇರಿಸೋ ಅ.ಪ ಜನ್ಮದಿ ತೊಳಲುತ ಖಿನ್ನನಾಗಿ ವರ್ಣಶ್ರೇಷ್ಠಕುಲದಿ ಬಹುಪುಣ್ಯದಿ ಘನ್ನ ಮಹಿಮನೆ ನಿನ್ನ ಸೇವೆಯೊ ಳುನ್ನತದ ರತಿಯನ್ನು ಪಾಲಿಸಿ 1 ಅಷ್ಟಯೋನಿಗಳಲ್ಲಿ ಹುಟ್ಟಿ ಸಾಯುತ ಬಲು ಕೆಟ್ಟಕರ್ಮವ ಮಾಡಿ ಕಷ್ಟಪಟ್ಟು ಎಷ್ಟು ನಿನಗೆ ಮೊರೆಯಿಟ್ಟು ಬೇಡಲು ಎಳ್ಳಿ ನಷ್ಟು ಕಾರುಣ್ಯವು ಪುಟ್ಟದೇನೋ ಕಟ್ಟಕಡೆಯೊಳು ನಷ್ಟಪಡಿಸುವೆ ದಿಟ್ಟರಾರೈ ಇಷ್ಟ ಮೂರುತಿ 2 ಪರಮೇಷ್ಟಿ ಪುರದೊಳಗಿರಲಾನೊಲ್ಲೆನು ನಿನ್ನ ನಿರುತ ನಿನ್ನಯ ಚರಿತೆಯಲಿ ಮನ ವಿರಲಿ ನಾನಾತೆರದ ಭಕ್ತಿಯೊಳು ಪರಮ ಪುಲಿಗಿರಿ ವರದವಿಠಲ 3
--------------
ವೆಂಕಟವರದಾರ್ಯರು
ನಾರಾಯಣಯೆಂಬೊ ನಾಮವನು ನೆನೆದರೆ ಹಾರಿ ಹೋಹುದು ಜನ್ಮಜನ್ಮದ ಪಾಪಗಳು ಮುಕ್ತಿದೋರಿಸು ಮುರಾರಿ ಪ. ಸಕಲವೇದ ಪುರಾಣ ಶಾಸ್ತ್ರಗಳ ತಿಳಿದೋದಿ ಭಕ್ತಿಯಲಿ ತಾಯತಂದೆಯ ಚಿತ್ತವಿಡಿದವರ ಸುಕುಮಾರನೆನಿಸಿಕೊಂಡು ಪ್ರಕೃತಿಯಲಿ ಹೋಮಕ್ಕೋಸ್ಕರ ಸಮಿದೆ ತರಹೋಗಿ ದುಷ್ಕøತ್ಯದ ಫಲದಿಂದ ಅಂತ್ಯಜಳನು ಕಂಡು ಕಾ- ಅರಿತರಿಯದೆ 1 ನಿಲ್ಲು ನಿಲ್ಲೆಲೆ ಕಾಂತೆ ನಿನಗೊಲಿದೆ ನೀನಾರು ಸೊಲ್ಲಿಸೆನ್ನೊಡನೆ ಸತಿಯರ ಕುಲಕೆ ಕಟ್ಟಾಣಿ ಹುಲ್ಲೆನೋಟದ ಭಾವಕಿ ಸಲ್ಲಿಲಿತ ಗಾತ್ರೆ ಸೊಕ್ಕಾನೆ ಮೆಲ್ಲಡಿಯವಳೆ ಮಲ್ಲಿಗೆಗಂಧಿ ಮದನನ ಕೈಯ ಮಸೆದಲಗೆ ಸೆರಗ ಪಿಡಿದ 2 ವಿಪ್ರ ಕೇಳು ನಾವು ಕುಲಹೀನರೆಮ್ಮನೆಯ ಹೊಲಸಿನ ಮಾಂಸ ಗೋವಿನ ಚರ್ಮದ್ಹಾಸಿಕೆಯು ಹಿಂಡು ಬಲು ಘೋರ ಎನಿಸಿಪ್ಪುದು ಬಲೆಗೆ ಸಿಕ್ಕಿದ ಪಕ್ಷಿ ಬೇಂಟೆಯವಗಲ್ಲದೆ ಕುಲವ ಕೂಡುವದೆ ಕಾಮಿನಿ ಕೇಳು ನಿನ್ನೊಡನೆ ಛಲವೊಂದೆ ಎನಗೆ ಎಂದ3 ವ್ಯರ್ಥ ಎನ್ನೊಡನೆ ಮಾತ್ಯಾಕೆಲೊ ವಿಪ್ರ ಚಿತ್ತವೆನ್ನಲ್ಲಿ ಇದ್ದರೆ ಹೋಗಿ ನೀ ಎನ್ನ ನಿನಗೊಲಿವೆನೆಂ[ದಳು] ಅತ್ತ ಕಾಮಿನಿಯ ಒಡಗೂಡಿ ಆಕೆಯ ಪಿತನ ಹತ್ತಿರಕೆ ಹೋಗಿ ಕೇಳಿದರಾತನಿಂತೆಂದ ಇಂಥ ಮೊತ್ತಕೊಳಗಾಗದಿರೊ 4 ಆಗದಾಗದು ಎನ್ನ ಕುಲಬಂಧು ಬಳಗವÀನು ನೀಗಿ ನಿಮ್ಮೊಡನೆ ಕೂಡುವೆನೆಂಬ ಮತವೆನಗೆ ನಾಗಭೂಷಣನ ಪಣೆಗಣ್ಣಿಂದ [ಲುರಿದನ] ಬಾಣತಾಗಿತೆನ್ನೆದೆಯನೆಂದ ಕೂಗಿ ಹೇಳಿದೆ ನಿನ್ನ ಕುಲವಳಿಯದಿರೆಂದು ಹೋಗಿ ಕೂಡೊ ಹೆತ್ತ ತಾಯಿತಂದೆಗಳ ಅದು ಆಗದಿದ್ದರೆ ಆಚೆ ಮನೆಯೊಳಗೆ ನೀವಿಬ್ಬರಲ್ಲಿರಿ ಹೋಗ್ಯೆಂದನು 5 ಹಾಲಂತ ಕುಲವ ನೀರೊಳಗದ್ದಿಪೂರ್ವದ ಶೀಲವನಳಿದು ಸತಿಯೊಡಗೂಡಿ ತಾನು ಚಾಂ- ಡಾಲತಿಗೆ ಹತ್ತುಮಕ್ಕಳ ಪಡೆದು ತಾನವರ ಲೀಲೆಯನು ನೋಡಿ ಹಿಗ್ಗಿ ಆಲಂಬನದಲಿ ಅಜಾಮಿಳನು ಇರುತಿರಲಾಗ ಕಾಲ ಬಂದೊದಗಿ ಕರೆಯಿರೊ ಪಾತಕಿಯನೆಂದು ಯಮನಾಳುಗಳು ಇಳಿದರಾಗ 6 ಎಡೆಗೈಯ ಪಾಶಗಳು ಹಿಡಿದ ಚಮ್ಮಟಿಗಳು ಒಡನೊಡನೆ ಚವುರಿಗಳು ವಜ್ರದ ಮೋತಿಯ [ಕಾಗಡಿ] ಘುಡು‌ಘುಡಿಸುತಲಿ ನಿಂತರು ಕಡುಹಸುಳೆ ಕಂದನಿವನೆಷ್ಟು ಅಂಜುವನೆಂದು ಗಡಗಡನೆ ನಡುಗಿ ಕಂಗೆಟ್ಟು ಅಜಾಮಿಳ ತಾನು ಲಾಲಿಸಿದ ಸ್ವಾಮಿ 7 ಮರಣಕಾಲದಿ ಶ್ರೀಹರಿಯೆಂಬ ನಾಮವನು ಹರಿವುದಾಕ್ಷಣದಲ್ಲಿ ಕರುಣದಿಂದಜಮಿಳನ ಕರೆತನ್ನಿರಿಲ್ಲಿಗೆಂದ ಉರದೊಳೊಪ್ಪುವ ತುಳಸಿದಂಡೆ ಪೀತಾಂ- ಬರವು ಗದೆ ಶಂಖ ಚಕ್ರ ದ್ವಾದಶನಾಮವನು ಧರಿಸಿ ಕರವೆತ್ತಿ ಅಂಜ ಬ್ಯಾಡೆಲೊ ಎಂದು ಹರಿದಾಸರೈ ತಂದರು 8 ಪುಂಡರೀಕಾಕ್ಷನ ಭೃತ್ಯನ ಭಾಧಿಸುವ ಲಂಡರಿವರ್ಯಾರು ನೂಕಿ ನೂಕಿರೊ ಎಂದು ಯಮನ ದಂಡವನು ಮುರಿದು ಬಿಸಾಡಿ ನಿಮ್ಮಸುವ ಹಿಂಡುವೆವು ಎಂದರಾಗ ಕಂಡ ಹರಿದೂತರಿಗೆ ಯಮನಾಳುಗಳೆರಗಿ ಭೂ- ಮಂಡಲದೊಳಗೆ ಎಮ್ಮೊಡೆಯ ಯಮಧರ್ಮನ ಉದ್ದಂಡರಹುದೆಂದರಾಗ 9 ತಂದೆ ಕೇಳೆಮ್ಮ ಬಿನ್ನಪವ ಲಾಲಿಸಿ ನೀವು ಒಂದು ದಿನ ಹರಿಯೆಂಬ ಧ್ಯಾನವನರಿಯನು ನಾವು ಬಂದೆಳೆಯಲಾತ್ಮಜನ ನಾರಗಾ ಎನಲು ಕುಂದಿತೆ ಇವನ ಪಾಪ ಹಂದಿಕುರಿಗಳಿರ ನಿಮಗಿಷ್ಟು ಮಾತುಗಳ್ಯಾಕೆ ನಿಂದಿರದೆ ಹೋಗ್ಯೆಂದು ನೂಕಿ ಯಮನಾಳ್ಗಳನು ತಂದಪೆವು ದಿವ್ಯ ಪುಷ್ಪಕವನೆಂದೆನುತ ಬಂದರಾ ವೈಕುಂಠಕೆ 10 ಎದ್ದು ಅಜಾಮಿಳನು ಮೂರ್ಛೆಯ ತಿಳಿದು ಎಚ್ಚೆತ್ತು ಬಿದ್ದ ಕಾಯವನು ಭಾದಿಸಿದವರ್ಯಾರು ಉ- ಪದ್ರವನು ಬಿಡಿಸಿದ ದಿವ್ಯ ಸ್ವರೂಪ[ದ] ಸುಧಾತ್ಮರಾರು ಎಂದ ಮದ್ಯಪಾನವ ಮಾಳ್ಪ ಹೆಂಗಸಿನ ಒಡನಾಡಿ ಅದ್ದಿದೆ ನೂರೊಂದು ಕುಲವ ನರಕದೊಳೆಂದು ತಾನತಿ ಮರುಗುತ 11 ವಿಪ್ರ ಕುಲದಲ್ಲಿ ಪುಟ್ಟಿ ವೇದಶಾಸ್ತ್ರವನೋದಿ ಮುಪ್ಪಾದ ತಾಯಿ-ತಂದೆಯ ಬಿಟ್ಟು ಬುಧÀ ಜನರು ಮದನ ಬಾಧೆಗೆ ಸಿಲುಕಿ ದುಷ್ಟ ತಾಪವ ಪೊತ್ತೆ ಜನನಿಂದಕನಾದೆ ಅಪ್ರತಿಮ ಅನಂತಪಾತಕಿ ಭುವನದಲಿ ತಪ್ಪಲಿಲ್ಲವೆ ಪಣೆಯ ಬರದ ಬರಹಗಳು ಇನ್ನು ಭಾಪುರೆ ವಿಧಿ ಎಂದನು 12 ಇಷ್ಟು ದಿನ ಹರಿಯೆಂಬೊ ನಾಮವರಿಯೆನು ನಾನು ದುಷ್ಟಯವÀುದೂತರನು ಕಂಡು ಚಂಡಾಲತಿಗೆ ಪುಟ್ಟಿದ ಮಗನ ನಾರಗನೆಂದು ಕರೆದರೆ ಮುಟ್ಟಿದವೆ ನಿಮಗೆ ದೂರು ಇಷ್ಟು ಅವಗುಣಗಳನು ಎಣಿಸಲಿಲ್ಲವೆ ಸ್ವಾಮಿ ಎಷ್ಟು ಕರುಣಾಕರನೊ ಎಂದು ಸ್ನಾನವ ಮಾಡಿ ಬಿಟ್ಟು ತಾಪತ್ರಯವ ಭಯ ನಿವಾರಣ ಹರಿಯ ಗಟ್ಯಾಗಿ ಧ್ಯಾನಿಸಿದನು 13 ತನ್ನ ನಾಮವ ನೆನೆವ ಭಕ್ತರಾದವರೆಲ್ಲ ಧನ್ಯರಿವರಹುದೆಂದು ಜಗವರಿಯಬೇಕೆಂದು ಉನ್ನತವಾದ ಪುಷ್ಪಕವ ತಾ ಕಳುಹಿದ ಪನ್ನಗಾರಿವಾಹನ ಅನ್ಯಾಯ ಇವಗಿಲ್ಲ ಅವನಿಯೊಳಗುತ್ತಮನು ಎನ್ನಯ್ಯ ಏಳೆಂದು ಕೈಲಾಗವÀನು ಕೊಡಲು ಉನ್ನತವಾದ ಪುಷ್ಪಕವೇರಿ ಅಜಮಿಳನು ಹರಿಯ . ಸನ್ನಿಧಿಗೆ ನಡೆದ 14 ಜಲಜನಾಭನ ದಿವ್ಯನಾಮವನು ನೆನೆದರೆ ಕುಲಕೋಟಿ ದೋಷಗಳಿಲ್ಲ ಕುಂದುಗಿಂದುಗಳಿಲ್ಲ ಸಲುವರಲ್ಲೆಂದ ಯಮನು ನಲವಿಂದ ಹೆಳವನಕಟ್ಟೆ ಶ್ರೀ ವೆಂಕಟನ ನೆಲೆಯರಿತು ನೆನೆದವರ್ಗೆಮನ ಭಾದೆಗಳಿಲ್ಲ ಸಾಯುಜ್ಯ ಪದವೀವ ಬಲು ನಂಬಿ ಭಜಿಸಿ ಜನರು 15
--------------
ಹೆಳವನಕಟ್ಟೆ ಗಿರಿಯಮ್ಮ
ನಾರಾಯಣಾ ಕರುಣಾ ಘನಚರಣಕ್ಕೆರಗುವೇ ಸ್ಮರಣೆಯೊಳಗೆ ಮನ ಒಲಿಯಿಸಿ ಪ್ರೇರಣೆ ಮಾಡುವಾ ಪ ನನ್ನ ನಿಜವನರಿಯದೆ ನಾ ಅನ್ಯ ಯೋನಿಯೊಳಗೆ ತಿರುಗಿ ಬನ್ನ ಬಡುವುದನ್ನು ತಿಳಿದು ನಿನ್ನ ಬಿಡೆನೆನ್ನೆ 1 ಭಾವಭಕ್ತಿಯಿಂದ ಪಿಡಿದು ನೋಯದಂತರದೊಳಗಿಳಿದು ಸಾವಧಾನದಿ ಸೇವೆಮಾಳ್ಪೆ ಭಾವ ಬಲಿದು ನಾ 2 ಎಲ್ಲಿಯೂ ಪರಿಪೂರ್ಣ ನೀನೆ ಸೊಲ್ಪಗೊಡಲಶಕ್ಯ ನಾನೈ ಬಲ್ಲಿದವರಿಂದೆಲ್ಲಾ ಅರಿಶ ಘುಲ್ಲನಾಭನೇ 3 ನಾದದ ಮೊದಲಿನ ಮೂಲದಿ ಭೇದಭಾವವೆಲ್ಲ ಅಳಿದು ಆದಿಶಾಂತಿ ಸುಖವನೀವ ನಾದಿ ಶ್ರೀಗುರು 4
--------------
ಶಾಂತಿಬಾಯಿ
ನಿಖಿಲಾತ್ಮ ನಿಖಿಲಾತ್ಮ ಅಖಿಲಬ್ರಹ್ಮಾಂಡಪತಿ ಸಲಹು ಸರ್ವೋತ್ತಮ ಪ ಮಂದರಧರ ಎನ್ನ ಮಂದಮತ್ಯಳಿದಾ ನಂದ ಮತಿಯಿತ್ತು ಚೆಂದದಿಂ ರಕ್ಷಿಸು 1 ನಿತ್ಯನಿರುಪಮ ಸತ್ತು ಚಿತ್ತ ನಿಮ್ಮ ಭಕ್ತಿ ಭಜನೆ ಎನ್ನ ಚಿತ್ತಕ್ಕೆ ದಯಮಾಡು 2 ಬಗೆದು ಎನ್ನಂತರಂಗzಗಲದೆ ನಿಂತು ನಿಜ ಸುಗುಣವಿತ್ತು ಪೊರೆ ಸುಗುಣಾಂಬುಧಿ 3 ಕಾಮಿತಜನಕಲ್ಪ ಕಾಮಧೇನು ಎನ್ನ ಕಾಮ ಪೂರೈಸಿ ನಿನ್ನ ನಾಮವಿತ್ತು ಕಾಯೊ 4 ಭಕ್ತಿದಾಯಕ ನಿನ್ನ ಭಕ್ತಿಯಿಂ ಭಜಿಸುವೆ ಸತ್ಯ ಶ್ರೀರಾಮ ನಿತ್ಯಮುಕ್ತಿಯಿತ್ತು ಪೊರೆ 5
--------------
ರಾಮದಾಸರು
ನಿಂತ ಭಾವದ ಬಗೆಯನೆಂತು ಬಣ್ಣಿಪೆನುಚಿಂತಾಯಕನೆ ನೀನು ಚಿತ್ಸ್ವರೂಪದಲಿ ಪಸಕಲ ಲೋಕವ ಸೃಜಿಸಿ ಸಕಲದೊಳು ನೀ ನೆಲಸಿಸಕಲವನು ನಿನ್ನೊಳಗೆ ಸಲೆ ಸೇರಿಸಿಪ್ರಕಟಿಸಿದ ಜಗವೆಲ್ಲ ಪರಿಪರಿಯ ಕಲ್ಪದಲಿಪ್ರಕೃತಿಯಲಿ ಲಯವಾಗೆ ಪರಮ ಸದ್ರೂಪದಲಿ 1ಚಿತ್ರಕರ್ಮಗಳಿಂದ ಚರಿಸಿ ನಾನಾತ್ವದಲಿಚಿತ್ರದಂದದಿ ತೋರಿ ಚೈತನ್ಯವಾಗಿಕರ್ತೃಭೋಕ್ತøತ್ವದಲಿ ಕರಣಾದಿ ರೂಪದಲಿಚಿತ್ರರಚನೆಗೆ ಸಾಕ್ಷಿ ಚಿತ್ಸ್ವರೂಪದಲಿ 2ಹರಿ ಹರ ಬ್ರಹ್ಮ ಯಮ ಹರಿ ವರುಣ ಧನದಾದಿಸುರಮುನಿಗಳೊಳಗಿರುವ ಸುಖವೆಲ್ಲ ನಿನ್ನನಿರತಿಶಯ ಸುಖದಲ್ಲಿ ಲೇಶನೀನಿತ್ತವರವರದರವರೆಂದೆನಿಸಿ ಮೆರೆದು ಸುಖರೂಪದಲಿ 3ಈ ವಿಧದ ದೇವತೆಗಳಿರವ ನೋಡಿದರವರುದೇವ ನೀನೊಲಿದು ದಯಮಾಡಿದವರುಭಾವಿಸುತ ನಿನ್ನಂಘ್ರಿಕಮಲವನು ಭಕ್ತಿಯಲಿಭಾವ ನಿನ್ನೊಳು ನಿಲಲು ಭುವನೇಶ ನಿತ್ಯದಲಿ 4ಪರಿಪೂರ್ಣ ಪರಮೇಶ ಪರಮ ಮಂಗಳರೂಪಪರನೆನಿಸಿ ದೇಶಕಾಲಾದಿಗಳಿಗೆಗುರುಮೂರ್ತಿ ಶ್ರೀ ವಾಸುದೇವಾರ್ಯರೆಂದೆನೆಸಿತಿರುಪತಿಯ ವೆಂಕಟನೆ ಹೃದಯಕಮಲದಲಿ 5ಓಂ ಸರ್ವತೀರ್ಥಾತ್ಮಕಾಯ ನಮಃ
--------------
ತಿಮ್ಮಪ್ಪದಾಸರು
ನಿತ್ಯ ನಿರುಪಮ ಚಿದಾನಂದ ಕರುಣಾಬ್ಧಿ ನೀನೆ ದೊರಕೆ ನಿಲುಕೆ ಅಪಮಂಗಳನೆ ಮಂಗಳವನಿತ್ತೆ ಮನಸಿಗೆ ನೀನು ಅಂಗ ಮಂಗಳವಾುತುಹಿಂಗಿದವು ದುರಿತಗಳು ಸಂಗವಿದ್ದರು ಜಡದ ತೊಂಗವವ ಮನ ಮೀರಿತುನುಂಗುತಿದೆ ದೋಷಗಳ ಬಂದಡೊಡಬನ ತೆರದಿ ಭಂಗವೆಂಬುದು ಹೋುತುಅಂಗ ಲಿಂಗದ ಕಾಂತಿ ಹೊಂಗಿ ಹೊರಹೊಮ್ಮುತಿದೆ ರಂಗ ನಿನ್ನೊಲವಾುತು ುನಿತು 1ಹೊನ್ನಿನೊಳಗಿದ್ದ ಮಲಿನವನಗ್ನಿ ಕಳಚಿದರೆ ಮುನ್ನಿನಂದದಿ ಮಲಿನವೆಹೊನ್ನಾದ ಕಬ್ಬಿನವು ಕಬ್ಬಿನದ ಸಂಗದಲಿುನ್ನು ಕಬ್ಬಿನ ಭಾವವೆಬೆಣ್ಣೆ ಕ್ಷೀರದಿ ಬಂದು ಘೃತವಾದ ಬಳಿಕ ತಾ ಬೆಣ್ಣೆಯಲ್ಲದೆ ಕ್ಷೀರವೆನಿನ್ನ ಕೃಪೆುಂದ ಮಂಗಳನಾಮವನು ಸ್ಮರಿಸೆ ನಿನ್ನವಗೆ ದೋಷ ಬಹವೆ ಇಹವೆ 2ಬಾಳೆಯನು ಬಿತ್ತಿ ಪ್ರತಿ ದಿವಸ ನೋಡಿದಡಲ್ಲಿ ನೀಳವಾಗಿಹುದು ಸುಳಿಯುಕಾಲ ಬಂದರೆ ಗೊನೆಯು ಹಾಯ್ದು ಫಲವಾಗಿರಲು ಮೇಲೊಮ್ಮೆಯುಂಟೆ ಯೆಲೆಯುಕಾಲ ಕರ್ಮಾಧೀನವಾಗಿರುವ ಸಂಸಾರ ಲೋಲ ಮನಸಿನ ವೃತ್ತಿಯುಜಾಲದಿಂದಿರಲಲ್ಲಿ ನಿನ್ನಂಘ್ರಿ ಸ್ಮರಣೆುಂಮೇಲುಂಟೆ ಕರ್ಮಗತಿಯು ಸ್ಥಿತಿಯು 3ವೃತ್ತಿ ಮಾಯಾಕಾರ್ಯ ಮಾಯೆ ನಿನ್ನಾಧೀನ ವೃತ್ತಿ ಮಾಯೆಯು ಕಲ್ಪಿತಸುತ್ತಿ ಸುಳಿಸುಳಿದಾಡಿ ಸತ್ಯದಂದದಿ ತೋರಿ ಮತ್ತೆ ನಿನ್ನೊಳಗರ್ಪಿತಚಿತ್ತು ತಾನೆ ನಾಮರೂಪಾದ ಬಗೆುಂದ ಚಿತ್ತು ಚಿತ್ತಾಹುದುಚಿತಸತ್ಯಸಂಧನು ನೀನು ಚಿತ್ತವನು ಬಿತ್ತರಿಸಿ ವೃತ್ತಿಯಾುತು ಬೆಳೆಯುತಾ ಇರುತಾ 4ಮನದ ಸಂಶಯ ಬಿಡದು ಶ್ರವಣಮನನಾದಿಗಳನನುದಿನವು ಮಾಡುತಿರಲುಮನಕೆ ಸಾಕ್ಷಿಕನಾದ ನೀನು ಘನಮಾಯೆಯನು ಮನಕೆ ಮರೆಮಾಡುತಿರಲುಚಿನುಮಯನೆ ಮಾಯೆಯನು ಕಡೆಗೆ ತೆಗೆಯಲು ಜ್ಞಾನ ಜನಿಸುವುದು ನೀನು ಕೊಡಲುಇನಕೋಟಿಸಂಕಾಶ ಇಭರಾಜದುರಿತಹರ ಎನಲು ನಿಜವಾಗುತಿರಲು ನಿಲಲು 5ತರಣಿಕಿರಣಗಳಿಂದ ಜನಿಸಿದಾ ಮೇಘಗಳು ತರಣಿಯನು ಮುಚ್ಚಲಳವೆತರಣಿ ತಾನೆನದಿವನು ಹರಹಿ ಹಿಂದಕೆ ತೆಗೆಯೆ ನೆರೆ ಹಿಂಗಿ ಹೋಗದಿಹವೆಪರಮಪುರುಷನು ನೀನು ಸ್ಮರಿಸಿ ಮಾಯೆಯ ಬೀಸಿ ತಿರುಗಿಸಲು ಮಾಯೆಗಿರವೆದುರಿತವಾಗಿರೆ ಜನಕೆ ನೆರೆ ಭಕ್ತಿಯನು ನೀನು ಕರುಣಿಸಲು ಮತ್ತೆ ಭವವೆ ಧ್ರುವವೆ 6ಅರಣಿುಂದುದುಭವಿಸಿದನಲ ಮುನ್ನಿನ ತೆರದ ಅರಣಿಯಾಗಿಯೆ ತೋರ್ಪನೆಅರೆದು ತಿಲವನು ತೆಗೆಯೆ ತೈಲವನು ತಿಲ ಬಳಿಕ ಇರುವದೆ ತೈಲದೊಡನೆಬೆರೆದು ಕರ್ಪುರವಗ್ನಿಯೊಡನಾಡಿ ಬೇರ್ಪಟ್ಟು ಮೆರೆವುದೆಂತಗ್ನಿಯೊಡನೆತಿರುಪತಿಯ ವೆಂಕಟನೆ ನಿನ್ನ ಚರಣದೊಳಿಟ್ಟ ಶರಣ ಮುನ್ನಿನ ಮನುಜನೆಯಹನೆ 7ಓಂ ಪುಣ್ಯ ಶ್ಲೋಕಾಯ ನಮಃ
--------------
ತಿಮ್ಮಪ್ಪದಾಸರು
ನಿತ್ಯ ಮಂದಾರ ತರುವಂತೆಕುಂದದಲ ಭೀಷ್ಟಗಳ ಗರೆವ | ಸುರ ತರುವಾ ಪ ವಾಗೀಶ ಕರಜಾತ | ನಿಗಮಾರ್ಥ ಕೋವಿದರಭೋಗಿಶಯನನ ಭಕುತ | ಭಾಗ್ಯ ದಾತೃಗಳ |ಯೋಗಿ ಕುಲವರ್ಯ ಹೃ | ದ್ರೋಗ ನೀಗುವರಜಾಗು ಮಾಡದೆ ಭಜಿಪ | ಭಕ್ತರನು ಪೊರೆವರನು 1 ಭವ ಭವಣೆ ಹರಿಸು ವರ |ನವ ನವ ಸ್ತೋತ್ರಗಳ | ಕವನ ರೂಪದಿ ಪೇಳಿಪವನಾಂತರಾತ್ಮಕನ | ಪರಿತೋಷ ಗೈದವರಾ 2 ಗರಳ ಅಂಘ್ರಿ ಕಮಲಂಗಳನುನೆರೆನಂಬಿ ಸುಖಿಸುವರ | ಸುರವ ಭಯ ವಿರಹಿತರ 3 ಉಕ್ತಿಯನು ಸ್ವಪ್ನದಲಿ | ಶಕ್ತಹಯಮುಖಪೇಳೆಯುಕ್ತಿಮಲ್ಲಿಕೆ ಮಾಲೆ | ಮೌಕ್ತಿಕವ ನಿತ್ತವರ |ಭಕ್ತಿಪಥ ತೋರಿ | ಕು | ಯುಕ್ತಿಗಳನೇ ಕಳೆದುಮುಕ್ತಿ ಮಾರ್ಗವ ತೋರ್ವ | ಭಕ್ತಿಯೋಗಿಗಳಾ 4 ಮಾಯಿ ಶೈವರು ಶಾಕ್ತ್ಯ | ಅನ್ಯಮತಗಳಗೆದ್ದುಜಯ ಪತ್ರ ಘಂಟೆಗಳ | ವಿಜಯ ಸಾರಥಿಗಿತ್ತು |ಭಯ ವಿನಾಶನು ನಮ್ಮ | ತೋಯಜಾಂಬಕ ಸಿರಿಹಯ ವದನನರ್ಚಿಸುವ | ವಾದಿರಾಜರನೂ 5 ಅದ್ವೈತ ತಮ ಸೂರ್ಯಮೇದಿನೀ ಸುರವಂದ್ಯ | ಶ್ರೀವಾದಿರಾಜರನೂ 6 ಭಾವಿ ಮಾರುತಿಯ | ದಿನ ದಿನದಿ ಪ್ರಾರ್ಥಿಪರಭಾವ ಕೊಲಿಯುತ ತೋರ್ವ | ಹಯ ಮುಖಾತ್ಮಕನು |ಭಾವ ಜನಯ್ಯ ಗುರು | ಗೋವಿಂದ ವಿಠ್ಠಲನಭವ್ಯ ರೂಪವ ಹೃದಯ | ದವಕಾಶದೊಳಗೇ 7
--------------
ಗುರುಗೋವಿಂದವಿಠಲರು
ನಿತ್ಯ ಶುಭಮಂಗಳಂ ಪ ಮಂಗಳಂ ದಶರೂಪಧರನಿಗೆ ಮಂಗಳಂ ವರ ದೂರ್ವಾಪುರದಲಿ ನಿತ್ತ ಕೇಶವಗೇ ಅ.ಪ. ಹರಿಕಥೆಯ ಶ್ರೋತ್ರಗಳು ಆನಂದದಿಂ ಕೇಳೆ ಹರಿಯ ಕೀರ್ತನೆಯನ್ನು ನಾಲಿಗೆಯು ಮಾಡೇ ಹರಿನಾಮ ಸ್ಮರಣೆಯನು ಮನವು ತಾ ಮಾಡುತಿರೆ ಚರಣಗಳ ಭಕ್ತಿಯಲಿ ಭಜಿಸುತ್ತಲಿರಲು 1 ಹರಿಯೆ ಮಹಿಮೆಯ ನಂಬಿ ವಂದನೆಯ ಮಾಡುತಿರÉ ಹರಿಯೆ ರೂಪವ ಕಂಡು ಪೂಜೆಯನು ಮಾಡೇ ಹರಿಯೆ ದಾಸ್ಯತ್ವವನು ಶ್ರದ್ಧೆಯೊಳು ಗಳಿಸುತಿರೆ ಹರಿಯೆ ಮಿತ್ರತ್ವವನು ಪಡೆಯುತ್ತಲಿರಲು 2 ಹರಿ ಚರಣದಲ್ಲಾತ್ಮವನ್ನು ಅರ್ಪಿಸುತಿರಲು ಹರಿ ಸೇವೆ ದಾಸರೀರೀತಿ ಗÉೈಯುತಿರೇ ಹರುಷದಿಂ ಕಾರ್ಯವನು ನೆರವೇರಿಸುತಲೀಗ ಹರಿಯ ಪ್ರೀತಿಗೆ ಸಿಲುಕಿ ಮುಕ್ತಿಯನು ಪಡೆಯೇ 3
--------------
ಕರ್ಕಿ ಕೇಶವದಾಸ