ಒಟ್ಟು 444 ಕಡೆಗಳಲ್ಲಿ , 83 ದಾಸರು , 381 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಂ ಶ್ರೀಕೃಷ್ಣವೇಣಿಗೆ ಜಯ ಮಂಗಳಂ ಜಗದುದ್ಧಾರಳಿಗೆ ಪ ರಂಗನ ಪಾದದಿ ಗಂಗೆ ಉದ್ಧವಿಸಲು ಅಂಗದಿಂದಾಗಲೆ ತಾನುದಿಸಿ ಬಂದು ಗಂಗಾಧರನ ದೇಹದಿ ಬಂದು ವೇಣಿಯ ಸಂಗಮವಾಗಿ ಬಂದ ದೇವಿಗೆ ಅ.ಪ ಮುನ್ನೂರು ಅರವತ್ತು ನದಿಗಳೆಲ್ಲ ಕೂಡಿ ಕನ್ಯಾರಾಶಿಗೆ ಗುರು ಬಂದಿರಲು ವಾಸವ ಮಾಡಲು ಅವರ ಪಾಪವ ಕಳೆದ ಶ್ರೀ ಕೃಷ್ಣವೇಣಿಗೆ 1 ಇಂದ್ರನ ಪಾಪವ ನದಿಗಳಿಗೆ ಬಿಡಲು ನಿಂದಿತರಾಗಿ ದುಃಖಿಸುತ ಪೋಗಿ ಬಂದ ಕೃಷ್ಣವೇಣಿಗೆ ಗಂಗಾದೇವಿಗೆ 2 ವೇಣುಶೂರ್ಪಗಳಲ್ಲಿ ನಾನಾ ಫಲಗಳ ಇಟ್ಟು ನೇಮದಿಂ ಬಾಗಿನಂಗಳ ಕೊಡಲು ಮಾನಿನಿಯರೆಲ್ಲ ಮೌನದಿಂ ಕೊಡಲು ಮಾಂಗಲ್ಯವಿತ್ತು ಸಲುಹುವ ದೇವಿಗೆ 3 ಕೃಷ್ಣತೀರದಲ್ಲಿದ್ದ ವೃಕ್ಷದೇವತೆಗಳು ಋಷಿಗಳು ಪಾಷಾಣವಾಗಿರಲು ನಕ್ರ ಮೊದಲಾದ ಜಂತುಗಳೆಲ್ಲ ಯಕ್ಷರು ವಾಲೂಕ ಹರಿದ ಧೂಲಿಯಾಗಿಹರು 4 ಇಂದ್ರದಂಡಕ ದಂತ್ರಿಪಾಲ ಸೋಮಕ ಧರ್ಮ ನಂದನ ನಳ ಹರಿಶ್ಚಂದ್ರರೆಲ್ಲ ಬಂದು ಸ್ನಾನವ ಮಾಡೆ ಅವರ ಪಾಪಗಳ ಆ ನಂದದಿಂ ಕಳೆದ ಕೃಷ್ಣವೇಣಿಗೆ 5 ಮಲಾಪಹಾರಿ ಭೀಮೆ ತುಂಗಭದ್ರೆಯು ಮೊ [ಒಲವಿ]ಂದ ಸ್ನಾನಪಾನವ ಮಾಡಿದವರಿಗೆ [ಲೋಲ] ಶ್ರೀನಿವಾಸನ ಪಾದತೋರ್ಪ ಕೃಷ್ಣವೇಣಿಗೆ 6
--------------
ಯದುಗಿರಿಯಮ್ಮ
ಮಂಗಳವೆನ್ನಿರೆ ಮದನಗೋಪಾಲನಿಗೆ ಮಂಗಳವೆನ್ನಿರೆ ಮಾಧವಗೆ ಪ ಮಂಗಳವೆನ್ನಿರೆ ಮಾಮನೋಹರನಿಗೆ ಮಂಗಳವೆನ್ನಿರೆ ಮುರಹರಗೆ ಅ.ಪ ಭುವನಮೋಹನ ಶಾಮಲಸುಂದರಾಂಗಗೆ ಅಮಿತಪರಾಕ್ರಮ ಅಚ್ಚುತಗೆ ನವನವಲೀಲೆಯ ತೋರಿದ ದೇವಗೆ ಸುವಿನಯದಿಂದ ಶ್ರೀ ಶ್ರೀಧರಗೆ1 ಶಂಖು ಚಕ್ರಪೀತಾಂಬರಧಾರಿಗೆ ಬಿಂಕದಿಂದ ಮುರಳಿಯನೂದಿದಗೆ ಶಂಕರಾದಿ ಸುರಸೇವಿತಗೆ ನಿಷ್ಕ- ಳಂಕದಿ ಭಜಿಪರ ಪೊರೆದವಗೆ2 ಪರಿಪರಿ ವಿಧದಲಿ ಹರಿ ಸ್ಮರಣೆಯ ಮಾಡೆ ಪರಾಭವನಾಮ ಸಂವತ್ಸರದಿ ದುರಿತಗಳೆಲ್ಲವ ಪರಿಹರಿಸುತ ಕಾಯ್ವ ಸಿರಿವರ ಕಮಲನಾಭ ವಿಠ್ಠಲನಿಗೆ3
--------------
ನಿಡಗುರುಕಿ ಜೀವೂಬಾಯಿ
ಮಧುಪುರದ ವಿಘ್ನೇಶ ದೇವ ಜಗದೀಶ ಫ ಪುರುಷಪಿತನಮಿತ ಕಮಲ ಗಿರಿಜಾತೆಯಣುಗಾದಿತ್ಯ ಕೋಟಿ ಪ್ರಕಾಶ ಕರಿವದನ ಕರುಣನಿಧಿ ಸಮುದ್ರ ಬಹುಕ್ಷಿಪ್ರ 1 ಭರದಿಂದ ರಕ್ಕಸ ಪುರವನು ದಹನಮಾಡೆ ಹರ ಮೊದಲು ನಿಮ್ಮನು ಅರ್ಚಿಸಿ ಮೆಚ್ಚಿಸಿ ಹರಿ ವಿರಂಚಾದಿಗಳೆಲ್ಲ ಜಯ ಜಯವೆನಲು ವರವಿತ್ತು ಮೆರೆದೆ ಗಣನಾಥ ವಿಖ್ಯಾತ 2 ಅರರೆ ನಿಮ್ಮ ಮಹಿಮೆಯನು ಪೊಗಳಲೆನಗಳವಲ್ಲ ಧರಣಿಯ ಪೊತ್ತಿಹ ಶೇಷಗರಿದು ಹರನಸುಕುಮಾರ ಸಕಲಾಗಮಕೆ ಸಾಕಾರ ಧರೆಯೋಳ್ ಮಧುಪರ ವಿಘ್ನೇಶ 3
--------------
ಕವಿ ಪರಮದೇವದಾಸರು
ಮಧ್ವರಾಯರ ಕರುಣ ಪಡೆಯದವ | ಧರೆಯೊಳಗೆ ಇದ್ದರೇನು ಇಲ್ಲದಿದ್ದರೇನು ಪ ಮಧ್ವಮತವೇ ಮತವು ಸಕಲ ಶ್ರುತಿ ಸಮ್ಮತವು | ಮಧ್ವರಾಯರ ಧ್ಯಾನ ಅಮೃತಪಾನ || ಮಧ್ವರಾಯರ ಲೀಲೆ ನವರತುನದಾ ಮಾಲೆ | ಮಧ್ವೇಶನಾ ಸ್ಮರಣೆ ಕುಲಕೋಟಿ ಉದ್ಧರಣೆ 1 ದುರಿತ ಹತ | ಮಧ್ವರಾಯರ ಭಕುತಿ ಮಾಡೆ ಮುಕುತಿ || ಸತ್ಪಾತ್ರ | ಮಧ್ವರಾಯರ ಭಜನೆ ದುಷ್ಕರ್ಮ ತ್ಯಜನೆ 2 ಮಧ್ವರಾಯರ ದಾಸನಾದವನೆ ನಿರ್ದೋಷ | ಬಂಟ ಜಗಕೆ ನೆಂಟ || ಮಧ್ವರಮಣಾ ನಮ್ಮ ವಿಜಯವಿಠ್ಠಲನಾದ |ಮಧ್ವೇಶನಾ ಕರುಣೆ ಪಡೆದವನೆ ಶರಣ 3
--------------
ವಿಜಯದಾಸ
ಮನಕೆ ಬೇಸರ ಬೇಡ ಮಣಿವೆ ಮಾಧವನೆ ಕ್ಷಣಕೊಂದು ಬೇಡುವ ಈ ಪಾಮರನೆಂದೆನುತ ಪ ತಂದೆಯನು ಕೊಲ್ಲೆನಲು ತಕ್ಕ ಶಿಕ್ಷೆಯ ಮಾಡು ಕೊಂದು ಅಣ್ಣನ ರಾಜ್ಯ ಕೊಡು ಎನಗೆ ಎನಲು ಕುಂದಿಟ್ಟು ಮನ್ನಿಸದಿರಲ್ಲದೆ ಎನ್ನ ಬಂಧನದ ಬಲೆಯನ್ನು ಬಯಲೆನಿಸು ಎಂಬೆ 1 ಹೆಣ್ಣಾಗಿ ಬಾರೆನಲು ಕಣ್ಣೆತ್ತಿ ನೋಡದಿರು ಎನ್ನ ಮನೆಯ ಕುದುರೆಯನು ಕಾಯಲು ಗನ್ನಗತಕನೆಂದು ಮನ್ನಿಸಿ ಸಲಹದಿರಲು ಅನ್ಯ ಬೇಡಿದೆನೇನು ಸಂತಸ ನೀಡೆಂಬೆ 2 ನಾಯಾಗಿ ಬಂದು ನಿನ್ನ ಲತ್ತೆತಿನುಯೆಂದೆನಲು ಕಾಯದಿರು ಕರುಣದಿ ದೇವದೇವೇಶ ಆವಾವ ಕಾಲದಿ ಬಾಯಬಿಡಿಸದಿರಲ್ಪ ಮಾಯ ಮೋಹಿಗಳ ಬಳಿಯೆಂದು ಬೇಡುವೆನು 3 ನೀರುಕೊಟ್ಟೆನ್ನ ಕರದಿಂದ್ಹೊಡಿಸಿಕೊಯೆನಲು ಚೋರನು ಇವನೆಂದು ಬಾರದೆ ಇರೆಲೋ ಘೋರಸಂಸಾರ ತಾಪವಾರಿಧಿಯ ಕಷ್ಟದಿಂ ಪಾರುಮಾಡೆಂದೆನುತ ಸಾರಿ ಬೇಡುವೆನು 4 ಸಲಿಸೆನ್ನ ನೈವೇದ್ಯ ಕುಲಗೇಡು ಎಂದೆನುತ ಛಲದಿ ಬೇಡಲು ಎನಗೊಲಿಯದಿರು ಸ್ವಾಮಿ ಬಲು ಹೊಲೆಯ ಪ್ರಪಂಚದ್ಹಲುಬಾಟ ಬಿಡಿಸೆನ್ನ ಮಲಿನತ್ವಳಿಕಿಸಿ ಚೆಲುವ ಸಲಹೆಂಬೆ 5 ತಿಳಿಯದೆ ನಿನ್ನನ್ನು ಕುಲಗೇಡಿಯೆಂದೆನುತ ಕುಲದಿಂದ ಹೊರಹಾಕಲೊಳಿತಾಗಿ ತಳ್ಳೋ ಮಳ್ಳತನ ಬಿಡಿಸೆನ್ನ ಮನಸಿನ ಕಿಲ್ಬಿಷವ ತೊಳದೆ ನಿಜಜ್ಞಾನದ ಪಾಲಿಸು ಎಂಬೆ 6 ನರನ ಭವಗುಣಗಳ ಪರಿಹರಿಸಿ ಬೇಗನೆ ಕರುಣಿಸು ಎನಗೆ ಪರರ ಬೇಡದ್ದನು ಕರುಣಾಳು ಶ್ರೀರಾಮ ಗುರುವೆ ನೀನಾಗೆನ್ನ ಪರಿಭವದ ದು:ಖವನು ತ್ವರಿತದ್ಹರಿ ತಂದೆ 7
--------------
ರಾಮದಾಸರು
ಮನದಧಿಪ ಮಹದೇವ ಮೊರೆಯೆ ಕೇಳೊ ಪ ತಿಮಿರ ಸ್ಥಿತಿಯಲ್ಲಿ ಎದೆ ಒಡೆದು ನಿಂದಿಹೆನು ಅ.ಪ. ಮನಕರಣಗಳು ಎನ್ನ ತಮ್ಮ ಸೆರೆಯಲಿ ಇಟ್ಟು ಘನ ಯಾತನೆಯ ಪಡಿಸಿ ಮೂರ್ಛೆಗೊಳಿಸಿ ಕ್ಷಣ ಬಿಡದೆ ದಣಿಸುವುವು ಮೊರೆ ಇಡಲು ಮುಖವಿಲ್ಲ ಪ್ರಣಿತ ಪಾಲಕರಲ್ಲಿ ಸರಿ ಇಲ್ಲ ನಿನಗೆಂದು 1 ಪವಮಾನ ಪದಕಮಲ ಮಧು ಮತ್ತ ಮಹಭೃಂಗ ಹರಿದಾಸ ಶಿರೋರತ್ನ ಅಭಯದಾಯಿ ಶಿವತಮನೆ ನಿನ್ನಂಘ್ರಿ ರಜಲಕ್ಷ್ಮಿಯನ್ನು ಶಿರ ನಿತ್ಯ ಮಾಡೆನ್ನ ಕೃತಕೃತ್ಯ 2 ಗೌರೀಶ ಗುಣನಿಧಿಯೆ ಗುಪ್ತ ಮಂಗಳ ಮಹಿಮ ಶೌರಿ ಜಯೇಶವಿಠಲ ಧ್ಯಾನಲೋಲ ತಾರಕನೆ ಭವಸಿಂಧು ದಾಟಿಸುವ ಅಂಬಿಗನೆ ಕಾರುಣ್ಯಗರೆದೆನ್ನ ಹರಿಪಾದ ದಡಕೊಯ್ಯೊ 3
--------------
ಜಯೇಶವಿಠಲ
ಮನವ ಶೋಧಿಸದೆಲೆ ಡಂಭದಿ ದಿನದಿನದಲಿ ಕರ್ಮಮಾಡೆ ತನುವಿಗೆ ಬಲು ಕ್ಲೇಶವಲ್ಲದೆ ಅನುಕೂಲವೇನು ಪ ಕಾಮಕ್ರೋಧ ಲೋಭಮೋಹ ಮದ ಮತ್ಸರಗಳನು ಬಿಡದೆ ನಾಮಗಳನು ಬಳೆದು ಮರೆದರೆ ಶ್ರೀ ರಾಮನರಿಯನೆ 1 ಈಶ ಸೇವೆಗೆಂದು ಬಹಳ ಮೋಸದಿಂದ ಧನವ ಗಳಿಸಿ ಈಶನನ್ನು ಮರೆವ ನರನನು ಜಗದೀಶನರಿಯನೆ 2 ಪರಸತಿಯರ ಸರಸಗಳಿಗೆ ಜರಿದು ಮನವ ಮರುಳು ಮಾಡೆ ಸರಳತನದಿ ದಾನ ಮಾಡಲು ನರಹರಿಯು ಅರಿಯನೆ3 ಒಡಲು ಪೊರೆಯೆ ಸಡಗರದಲಿ ಮಡಿ ಮಡಿಯೆಂದು ನುಡಿವ ಮೂಢನ ಪೊಡವೀಶನರಿಯನೆ4 ಪನ್ನಗಾರಿವಾಹನ ಪ್ರಸನ್ನವದನ ಕೃಷ್ಣಮೂರ್ತಿಯ ಉನ್ನತ ಮಹಿಮೆಗಳನರಿತಗೆ ಇನ್ನೇನು ಬೇಕು 5
--------------
ವಿದ್ಯಾಪ್ರಸನ್ನತೀರ್ಥರು
ಮನವೇ ಮರೆವರೇನೊ ಹರಿಯಾ ಪ ಬಹು ಜನುಮಗಳಲ್ಲಿ ಬಟ್ಟ ಬವಣಿಗಳರಿಯಾ ಅ.ಪ. ವಿಷಯ ಚಿಂತನೆ ಮಾಡಸಲ್ಲ ಮೇಷ ವೃಷನನಾದನು ಹಿಂದೆ ಪೌಲೋಮಿ ನಲ್ಲ ಝಷ ಕೇತುವಿನ ಮ್ಯಾಳ ಹೊಲ್ಲ ನಿರಾ ಶಿಷನಾಗು ಯಮರಾಯನೆಂದೆಂದೂ ಕೊಲ್ಲ 1 ಧನವೆ ಜೀವನವೆಂಬಿ ನಿನಗೆ ಸುಯೋ ಧನ ನೋಡು ಧನದಿಂದ ಏನಾದ ಕೊನೆಗೆ ಅನಿರುದ್ಧ ದೇವನ ಮನೆಗೆ ಪೋಪ ಘನ ವಿಜ್ಞಾನವನೆ ಸಂಪಾದಿಸು ಕೊನೆಗೆ 2 ಹರಿದಾಸನಾಗಿ ಬಾಳೋ ಗುರು ಹಿರಿಯರ ಪಾದಕಮಲಕೆ ನೀ ಬೀಳೋ ನರರ ನಿಂದಾಸ್ತುತಿ ತಾಳೋ ದೇಹ ಸ್ಥಿರವಲ್ಲ ಸಂಸಾರ ಬಹು ಹೇಯ ಕೇಳೋ 3 ಹಲವು ತೀರ್ಥಗಳಲ್ಲಿ ಸ್ನಾನ ಮಾಡೆ ಮಲ ಪೋಯಿತಲ್ಲದೆ ನಿರ್ಮಲ ಜ್ಞಾನ ಫಲಿಸದೆಂದಿಗು ಹೀನ ಬುದ್ಧಿ ಕಳೆದು ಸೇವಿಸು ಸಾಧುಗಳನನುದಿನ 4 ಜಿತವಾಗಿ ಪೇಳುವೆ ಸೊಲ್ಲಾ ಹರಿ ಕಥೆಯಲ್ಲಿ ನಿರತನಾಗಿರು ಲೋಹ ಕಲ್ಲಾ ಪ್ರತಿಮೆ ಪೂಜಿಸಿದರೇ ನಿಲ್ಲ ಪರೀ ಕ್ಷಿತನೆಂಬ ರಾಯ ಈ ಮಹಿಮೆಯ ಬಲ್ಲಾ 5 ಜ್ಞಾನೇಚ್ಛಾ ಕ್ರಿಯಾ ಶಕ್ತಿ ತ್ರಯವಾ ತಿಳಿ ದಾನಂದ ಪಡು ಬಯಸದಿರುಭಯವಾ ಸಾನುರಾಗದಿ ಬೇಡು ದಯವಾ ನೀ ಮ ದ್ದಾನೆಯಂದದಿ ಚರಿಸು ಬಿಟ್ಟು ಭಯವಾ 6 ಭಾವ ಕ್ರಿಯಾ ದ್ರವ್ಯಾದ್ವೈತ ತ್ರಯ ಆವಾಗ ಚಿಂತಿಸು ಭೂಮ್ಯಾದಿ ಭೂತಾ ಜೀವಿಗಳೊಳು ಜಗನ್ನಾಥ ವಿಠಲ ಗಾವಾಸ ಯೋಗ್ಯವೆಂದರಿಯೋ ಸಂತತಾ 7
--------------
ಜಗನ್ನಾಥದಾಸರು
ಮನಸಿನ ಮಲಿನವ ಮನಸೀಜನೈಯನೆ ಹನನ ವೈದಿಸದಿರೆ ಬದುಕುವ ದೆಂತೊ ಪ ವನಜ ಸಂಭವ ಜನಕ ತನುಮನ ಪ್ರೇರಕ ಮಾನವ ನಾನು ಶರಣುಹೊಕ್ಕೆನೈಯ ಅ.ಪ ಸ್ನಾನ ಸಂಧ್ಯಾನುಷ್ಠಾನ ವೇನು ಗೈದವನಲ್ಲ ಹೀನ ಸ್ತ್ರೀಯರ ಧ್ಯಾನ ಘಳಿಗೆ ಬಿಟ್ಟವನಲ್ಲ ಧಾನ ಧರ್ಮಗಳೊಂದು ಮಾಡಿಕೊಂಡವನಲ್ಲ ಗಾನದಿಂದಲಿ ಹರಿನಾಮವಾದರು ಪಾಡಲಿಲ್ಲ ದೀನಜನಮಂದಾರ ಕರುಣೋದಾರ ಮಹಿಮನೆ ಮಾನಮತ್ತವಮಾನ ನಿನ್ನಾಧೀನ ವಲ್ಲವೆ ತನುಮನೇಂದ್ರಿಯ ನಾಥ ನಾಯಕ ನೀನೇ ಆಗಿರೆ ಎನ್ನ ದೇನಿದೆಬರಿದೆ ದೂರದೆ ಸಾನುರಾಗದಿ 1 ನೋಡಬಾರದ ನೋಟ ನೋಡಿ ಆಯಿತು ಜೀಯ ಮಾಡಬಾರದ ಬಯಕೆ ಮಾಡಿದ್ದಾಯಿತು ಸ್ವಾಮಿ ಕೂಡಬಾರದ ಕೂಟ ಕೂಡಿದ್ದಾಯಿತು ತಂದೆ ಈಡುಕಾಣೆನು ನನ್ನ ಕೇಡು ಕರ್ಮಕೆ ಇಂದು ಗಾಡಿಕಾರ ನಿಗೂಢ ಹೃದಯಗ ಬೇಡಿ ಕೊಂಬೆನು ಪ್ರೌಡ ಭಕ್ತರಗಾಢ ಪ್ರೇಮದಿ ಕೂಡಿಸುತ ತಿಳಿ ಗೇಡಿಯೆನಿಸದೆ ವೇದ ಸಮ್ಮತ ಗಾನ ಜೋಡಿಸಿ ಹಾಡಿ ಹಾಡಿಸೆ ಭಾಢ ಮಹಿಮೆ ವಿಶೇಷ ನಿನ್ನದು 2 ಮುಂದು ಮಾಡುತ ಹಿಂದೆ ಇಂದು ಕಂದನಲ್ಲವೆ ನಾನು ಎಂದೆಂದು ನಿನಗೆ ಇಂದಿರೇಶನೆ ನಿನ್ನಮೀರಿಕರ್ಮವಮಾಡೆ ಎಂದಿಗಾದರು ಸಾಧ್ಯವಾಹುದೆ ನನಗೆ ತಂದೆ ಜಯಮುನಿವಾಯು ಹೃದಯಗ ನಂದಮಯ ಶ್ರೀ ಕೃಷ್ಣವಿಠಲ ನಿಖಿಳ ವಿಶ್ವಕೆ ಕುಂದುಮಯ ಅಭಿಮಾನ ಮನಸಿಗೆ ತಂದಿಡದೆಯೆಂದೆಂದು ಸಲಹುತ ಕುಂದು ಗೈದವನೆಂದು ನುಡಿಯದೆ ಪಥ 3
--------------
ಕೃಷ್ಣವಿಠಲದಾಸರು
ಮರೆವಾರೆ ಎನ್ನ ರಾಘವೇಂದ್ರ ಗುರುವೆ ಸಂಪನ್ನ ಕರೆದು ಕಾಮಿತಗಳ ಕರವೆ ನಾ ನಿನಗೆಂದು ಪ ದಾರಿಯ ತಪ್ಪಿ ಪೋಗುವ ಧೀರ ಫೋರನ್ನ ದಾರಿಯ ಪಿಡಿಸಿನ್ನು ಪುರವನ್ನೆ ತೋರಿಸೆ ಊರಿನವೊಳಗೆ ಅವನ ಆಗಾ ದೂರ ನೋಡುವರೆ ದೋಷಗಳ ವಿಚಾರಮಾಡುವರೆ ಧೀರರು ಆವ ಪರಿಯಲವನ ಪಾರಗಾಣಿಪರಲ್ಲದೆ 1 ಹಸಿದು ಪರರ ಕೇಳದ ದ್ವಿಜವರಿಯನ್ನ ಶಿಶುವಿನ ನೋಡಿ ದಯದಿಂದ ಕರದಿನ್ನು ಹಸಿದ್ಯಾಕೊ ಎಂದು ಪಾಕವ ಮಾಡಿ ಹಸನಾಗಿ ತಂದು ಬಡಿಸುವ ಅವಸರದಿ ನಿಂದು,ಅವನ ದೋಷ ಪಸರಿಸಿ ಉಣಿಸಿದ ಜನರುಂಟೆ ಧರೆಯೊಳು 2 ಜಲಪಾನಾತುರನಾಗಿ ಜಲವ ಕೇಳಿದ ವಿಪ್ರ- ಕುಲ ತರಳನನು ನೋಡಿ ಕೃಪೆಯಿಂದ ಸುರನದಿ ಜಲವನೀವೆನೆಂದು ಬ್ಯಾಗನೆ ದಿವ್ಯ ಕಲಶವ ತಂದು ಬಾರೆಲೊ ಬಲು ಆಲಸ್ಯವ್ಯಾಕೆಂದು ನಿನ್ನಯ ಪಂಕ ತೊಳಿಯ ಕೊಡುವೆನೆಂದು ತಡವ ಮಾಡುವರೆ 3 ಸುಶರೀರ ತನುವನು ಮನದಲಿ ಬಯಸಿ ತಾ ಉಸರದ ಮುನಿತನಯನ ಕಂಡು ತಾವಾಗಿ ಕುಶಲವ ಕೇಳಿ, ದೇವತ ವೈದ್ಯ ಅಸಮರೆಂದೇಳಿ, ರಸ ಮಾಡೆಂದೇಳಿ, ಅವಗೆ ದಿವ್ಯ ರಸವನು ಪೇಳಿ, ಪಸಿ ನಿನ್ನಲಿದ್ದಾ ಕಿಸರು ಪೋದರೆ ಕೊಡುವೆವೆಂದು ನಿಲುವರೆ 4 ಅರ್ತಿಯ ಭಕುತನ್ನ ನೋಡೀಗ ನಿನ ದಿವ್ಯ ಕೀರ್ತಿಯ ನೋಡಿಕೊ, ವಾಸುದೇವವಿಠಲನ ಮೂರ್ತಿಯ ಭಜಕ ಭಕ್ತರಾಭೀಷ್ಟ ಪೂರ್ತಿಗೆ ಜನಕ ನಿನ್ನಯ ಗುಣ ಸ್ಫೂರ್ತಿಗೆ ಜನಕ, ನಿನ್ನಯ ಗುಣ ಸ್ಫೂರ್ತಿ ಉಳ್ಳನಕ ಪಾಪದ ಲೇಶ ವಾರ್ತಿ ಎನಗೆ ಇಲ್ಲವೆಂದು ನಿಶ್ಚೈಸಿದೆ 5
--------------
ವ್ಯಾಸತತ್ವಜ್ಞದಾಸರು
ಮಹದೇವ ಮದ್ರೋಗ ಮೂಲವಳಿಯೊ ಪ ಮಹದಾದಿಗಳ ದೈವ ಹರಿಯಲ್ಲಿ ರತಿ ನಿಲಿಸಿ ಅ.ಪ. ಸರ್ವಸಿದ್ಧನೆ ವಿಷಯ ಪರ್ವತಕೆ ಮಹಕುಲಿಶ ಕಮಲ ಭೃಂಗ ಮರ್ವೆಂಬ ಮಾರಿಯನು ಅವಳ ನೇತ್ರದಿ ಸುಟ್ಟು ಸರ್ವಾತ್ಮ ಹರಿಧ್ಯಾನಮಗ್ನ ಮನ ನೀಡೆನಗೆ 1 ತಾಳಲಾರೆನೊ ಸ್ವಾಮಿ ಕಾಳ ವಿಷಯದ ದೋಷ ಫಾಲಾಕ್ಷ ಬಿಡಿಸೈಯ್ಯ ಭೋಗದಾಸೆ ಶೀಲ ಮನದಲಿ ಹರಿಯ ಲೀಲೆ ಲಾವಣ್ಯಗಳ ಮೇಲಾಗಿ ನೋಡುವ ಮಹಕರುಣ ಮಾಡೆನ್ನ 2 ಭಾರತೀಶನ ಪಾದಕಮಲ ಮಧುಪನೆ ನಿನ್ನ ಕಾರುಣ್ಯವಾದವನೆ ಶೌರಿವಶನೊ ಮಾರಾರಿ ಮದ್ಭಾರ ವಹಿಸಿ ಪಾಲಿಸು ಎನ್ನ ಧೀರ ತವ ಚರಣಾಬ್ಜ ವಾರಿಜಕೆ ಮೊರೆ ಹೊಕ್ಕೆ 3 ಎನ್ನ ಹೀನತೆ ನೋಡಿ ಘನ್ನ ಭಯಗೊಂಡಿಹೆನೊ ಧನ್ಯರ ಮಾಳ್ಪ ದಯ ನಿನ್ನದಯ್ಯಾ ಪುಣ್ಯತಮ ಮೂರುತಿಯ ಪ್ರತಿಬಿಂಬ ಹರಿಸಖನೆ ಧನ್ಯನಾ ಮಾಡೆನ್ನ ವಿಷಯ ಜಯ ದಯಮಾಡಿ 4 ಅಮಿತ ಮಂಗಳದಾಯಿ ವಿಭವ ವಾಮದೇವ ಮಮತಾದಿ ಅಭಿಮಾನ ದೋಷವರ್ಜಿತ ಮಹಾ ಸಾಮ್ರಾಜ್ಯ ಯೋಗಕ್ಕೆ ಅಧಿನಾಥ ಕರುಣಿಪÀುವುದು 5 ಶಂಭು ಶಂಕರ ತವ ಪದಾಂಬುಜದಿ ಶಿರವಿಟ್ಟು ಹಂಬಲಿಪೆನಿಷ್ಟಪದ ಪಾಲಿಸೆಂದು ತುಂಬಿತ್ವಕ್ಕರಸನ ಹೃದಂಬುಜದೊಳರಳಿಸಿ ಮೂರ್ತಿ ದರುಶನ ನೀಡೊ 6
--------------
ಜಯೇಶವಿಠಲ
ಮಹಾಲಕ್ಷ್ಮಿ ಅಮ್ಮಾ ಲಕುಮಿದೇವಿ ನಿಮ್ಮರಸನ ತೋರೆ ಸುಮ್ಮನೆ ಬಿಡುವದು ಸಮ್ಮತವೇ ನಿನಗೆ ಪ ಹೆತ್ತ ಬಾಲರು ಮಂದಮತಿಗಳಾದರೆ ತಾಯಿ ಸತ್ತು ಹೋಗಲಿ ಎಂದು ಎತ್ತದೆ ಬಿಡುವೊಳೆ 1 ನಿಮ್ಮ ಮಾತಿಗೆ ಹರಿ ಸಮ್ಮತನಾಗುವ ಕುಮತಿಗಳೆಣಿಸದೆ ರಾಮ ಮೂರುತಿ ತೋರೆ2 ಸಿಂಧುತನಯೆ ಎನ್ನ ಬಂಧ ಬಿಡಿಸಿ ಬೇಗ ಪಾದ ಪೊಂದಿರುವಂತೆ ಮಾಡೆ 3 ತತ್ವೇಶರೆಲ್ಲರೂ ನಿತ್ಯಾಧೀನರು ನಿಮಗೆ ಭೃತ್ಯಗೆ ನಿಜ ಹರಿ ಭಕ್ತಿ ಕೊಡುವಂತೆ ಪೇಳೆ 4 ಎನ್ನಲಿರುವ ಹೀನರೋಡಿಸಿ ಬೇಗ ಪನ್ನಗಾಚಲವಾಸ ಶ್ರೀ ನರಹರಿ ತೋರೆ 5
--------------
ಪ್ರದ್ಯುಮ್ನತೀರ್ಥರು
ಮಹಾಲಕ್ಷ್ಮಿ ಏನಂತಿ ಕಮಲನಾಭನ ಪ್ರಿಯಳೆ ಜಗ- ದಾನಂತ ಪದುಮನಾಭನ ಭಾರ್ಯಳೆ ಪ ಸಿರಿ ಎನ್ನ ಮೊರೆ ಕೇಳೆ ಸಿದ್ಧವಾಗೆನಗ್ಹೇಳೆ ಶುದ್ಧ ಮಾರ್ಗವ ತೋರೆ ಬುದ್ಧಿಪೂರ್ವಕವಾಗಿ ಭುವನದೊಡೆಯನ ಪಾದ- ಪದ್ಮದಲ್ಲಾಸಕ್ತೆ ಬುದ್ಧಿ ಕೇಳುವೆ ಶಾಂತಿ1 ಜನಕಾತ್ಮಜಳೆ ನೀ ಜಗದೇಕ ಸುಂದರಿ ಜಗದಾಧಿಪತಿ ವಕ್ಷಸ್ಥಳ ಆಶ್ರಯಳೆ ಕೃತಿ ಸರ್ವಮಂಗಳಕಾರಿ ಪರಮ ಕರುಣದಿ ನೋಡೆ ವರಲಕ್ಷ್ಮಿ ದಯಮಾಡೆ ವರಗಳನೀಡ್ಯಾಡೆ 2 ಭೀಷ್ಮಕನ ಪುತ್ರಿ ಬಿರುದೇನೆ ಸರಸಿಜನೇತ್ರೆ ಮೃಡ ಬ್ರಹ್ಮರೊಡೆಯ ಭೀಮೇಶಕೃಷ್ಣನ ಮಿತ್ರೆ ಪೊಡವಿಗಧಿಕಳೆ ಜಯ ಮೂಡಲಗಿರಿವಾಸಿ ಬಿಡದೆ ಕೈ ಹಿಡಿದೆನ್ನ ಕಡೆಹಾಯ್ಸೆ ಕಮಲಾಕ್ಷಿ 3
--------------
ಹರಪನಹಳ್ಳಿಭೀಮವ್ವ
ಮಾಡಿದಫಲವನುಭವಿಸಣ್ಣ ನೀ ಒಲ್ಲೆಂದರೆ ಬೆನ್ನ ಬಿಡದಣ್ಣ ದೊರಕುವುದ್ಹ್ಯಾಗಣ್ಣ ಪ ಜತೆಯಿಲ್ಲದೆ ನೀ ಮೊದಲ್ಹುಟ್ಟಿ ಮತ್ತು ಜತೆಯಿಲ್ಲದ್ಹೋಗ್ವುದು ಮರೆತುಬಿಟ್ಟಿ ಸತಿಸುತರ್ಹಿತರೆಂದು ಮತಿಗೆಟ್ಟ ಮಂದ ಮತಿಯಾಗಿ ಸಂಸಾರ ತಿಳಿದಿ ಗಟ್ಟಿ ಗತಿಸುವ ದೇಹದ ಸ್ಥಿತಿ ವಿಚಾರಿಸದೆ ಸತತ ಒದ್ದಾಡಿದಸತ್ಯದೊಳಗೆ ಭ್ರಷ್ಟ 1 ಗಳಿಸಲು ತುಸು ಬೇಸರಲ್ಲದ್ಹೋಗಿ ಕೇಳಿದಳುಕಿ ಅಳುಕಿ ಜನರಿಗೆ ಬಾಗಿ ಅಳಿದುಪೋಗುವ ಕಾಸು ಹಣಕಾಗಿ ಕೆಟ್ಟು ಬಳಲಿಬಳಲಿ ದುಡಿದೆಲೆ ಗೂಗಿ ನಳಿನಾಕ್ಷನ ಪೂಜೆ ಒಮ್ಮೆ ಮಾಡೆನ್ನಲು ಅಳುಮೋರೆ ಮಾಡಿದಿ ತಲೆಬಾಗಿ 2 ಕೆಟ್ಟ ಕೃತ್ಯದಿ ನಿನ್ನ ವಯ ಕಳೆದಿ ಮನೆ ಗಿಷ್ಟಮಿತ್ರರು ಬರಲತಿ ನೊಂದಿ ಕೊಟ್ಟದ್ದು ಕೊಡಲಿಕ್ಕೆ ಸಿಟ್ಟಿಗೆದ್ದಿ ನೀ ಶಿಷ್ಟರ ಸಂಗಕೆ ದೂರಾದಿ ಇಷ್ಟದಾಯಕ ನಮ್ಮ ಶಿಷ್ಟ ಶ್ರೀರಾಮನಡಿ ಗಟ್ಟ್ಯಾಗಿ ಭಜಿಸದೆ ಕೆಟ್ಟ್ಹೋದಿ 3
--------------
ರಾಮದಾಸರು
ಮಾಧವ ಗೀತೆ ಶರಣು ಹರಿಗೆ ಶರಣು ಸಿರಿಗೆ ಶರಣು ಬ್ರಹ್ಮವಾಣಿಯರಿಗೆ ಶರುಣು ಭವಗೆ ಶರಣು ಶಿವೆಗೆ ಶರಣು ಬೆನಕಗೆ ಶರಣು ತತ್ವಮಾನಿಗಳಿಗೆ ಶರಣು ಮುನಿ ಸಮೂಹಗಳಿಗೆ ಮಾಧವ 1 ಪರಮಭಕ್ತರಾಗಿ ಮೆರೆದ ಗುರು ಪುರಂದರಾದಿ ಸಾಧು ವರರ ವಚನ ಮಣಿಗಳನ್ನು ಮನದೊಳಾರಿಸಿ ಸರವ ಮಾಡಿ ಶರಣ ಜನರ ಕರುಣದೆಳೆಯೊಳಿದನು ಬಿಗಿಸಿ ಮಾಧವ 2 ಶ್ರೀಯೆ ಸತಿಯು ನಿನಗೆ ಬ್ರಹ್ಮರಾಯ ಹಿರಿಯ ಮಗನು ವೈನ- ತೇಯ ರಥವು ಖಾದ್ರವೇಯೆ ಶಯ್ಯೆ ಛತ್ರವು ಮನೆಯ ದಾಸಿ ಸುರನಿ ಮಾಧವ 3 ಪರ್ವತೇಶನಣುಗಿ ತಂಗಿ ಶರ್ವದೇವ ನರ್ಮ ಸಖಳು ಸರ್ವದುರಿತವಳಿವ ಗಂಗೆ ನಿನ್ನ ಪುತ್ರಿಯು ಸರ್ವಕರ್ತ ಸರ್ವಶಕ್ತ ಸರ್ವಕಾಲ ದೇಶ ವ್ಯಾಪ್ತ ಭೋಕ್ತ ಮಾಧವ 4 ನೀನೆ ತಾಯಿ ನೀನೆ ತಂದೆ ನೀನೆ ಬಂಧು ನೀನೆ ಬಳಗ ನೀನೆ ಸಖಳು ನೀನೆ ಗುರುವು ನೀನೆ ದ್ರವ್ಯವು ನೀನೆ ಧೃತಿಯು ನೀನೆ ಸ್ಮøತಿಯು ನೀನೆ ಮತಿಯು ಮಾಧವ 5 ನಿನ್ನ ನಾಮ ಪುಣ್ಯನಾಮ ನಿನ್ನ ರೂಪ ಮಾನ್ಯರೂಪ ಅನ್ಯ ದೈವರನ್ನು ಕಾಣೆ ಘನ್ನ ಭಕ್ತವರ್ಯರಾಣೆ ಮಾಧವ 6 ದೀನ ನಾನು ದಾನಿ ನೀನು ಹೀನ ನಾನು ಮಾನಿ ನೀನು ಏನ ಬಲ್ಲೆನೈಯ ನಾನು ಜ್ಞಾನಪೂರ್ಣನೈಯ ನೀನು ಮಾಧವ 7 ಹೃದಯದಲ್ಲಿ ನಿನ್ನ ರೂಪ ವದನದಲ್ಲಿ ನಿನ್ನ ನಾಮ ಉದರದಲ್ಲಿ ಅರ್ಪಿತಾನ್ನವಿತ್ತು ಅನುದಿನ ಒದಗಿ ಬಂದು ಬದಿಯಲಿದ್ದು ಮದಡ ಬುದ್ಧಿಯನ್ನು ಬಿಡಿಸಿ ಮಾಧವ 8 ಸ್ನಾನ ಮೌನ ಧ್ಯಾನ ತಪಗಳೇನು ಮಾಡಲೇನು ದೇವ ನೀನೆ ಕೃಪೆಯಿನೊಲಿಯದಿರಲು ಜ್ಞಾನ ಬಾರದು ಏನು ಹೀನ ಹಾನಿ ಬರಲು ನೀನು ಮಾತ್ರ ಬಿಡದಿರೆನ್ನ ಮಾಧವ 9 ನಿತ್ಯವಲ್ಲ ದೇಹವಿನ್ನು ವ್ಯರ್ಥವಾಗಿ ಪೋಪುದಾಯು ಮತ್ತೆ ಬರುವುದೇನು ನಿಜವು ಮತ್ರ್ಯಕಾಯವು ನಿತ್ಯ ನಿನ್ನ ಭಜಿಸುತಿಪ್ಪ ಮಾಧವ 10 ಅಂಬುಗುಳ್ಳೆಯಂತೆ ಇರುವ ಡಿಂಬವನ್ನು ನಂಬಿ ಕೆಟ್ಟು ಹಂಬಲಿಸುತ ವಿಷಯಗಳಿಗೆ ಡೊಂಬನಾದೆನು ಕಂಬಳಿಯೊಳು ಕಟ್ಟಿದನ್ನ ತಿಂಬುವನಿಗೆ ದೊರೆವ ಸುಖವು ಮಾಧವ 11 ಹೊಟ್ಟು ತಂದು ಕುಟ್ಟಿ ಕೇರಿ ಕಷ್ಟಪಟ್ಟು ತುಕ್ಕಿ ಬೀಸಿ ಅಟ್ಟಹಾಸದಿಂದ ರೊಟ್ಟಿ ಸುಟ್ಟು ತಿನ್ನಲು ಎಷ್ಟು ಸುಖವೊ ಅಷ್ಟೆಯಿನ್ನು ಭ್ರಷ್ಟ ಭವದಿ ಮಮತೆಯಿಡಲ ಮಾಧವ 12 ಹೊಟ್ಟೆಕಿಚ್ಚು ಪಡುವೆ ದೈವಕೆಷ್ಟು ಪೂಜೆ ಮಾಡೆ ಕರುಣ ಪುಟ್ಟಲೊಲ್ಲದದಕೆ ಬೆಟ್ಟದಷ್ಟು ಕೊಟ್ಟರು ಬೆಟ್ಟು ನೀರೊಳದ್ದಿ ಬಾಯೊಳಿಟ್ಟು ಚಪ್ಪರಿಸಲು ರುಚಿಯ ಮಾಧವ 13 ತಪ್ಪು ಸಾಸಿರಂಗಳನ್ನು ಒಪ್ಪಿಕೊಂಡು ಕಾವದೇವ ಮುಪ್ಪುರಂಗಳನ್ನು ಗೆಲಿಸಿದಪ್ರಮೇಯನೆ ಕಪ್ಪು ಮೇಘಕಾಂತಿಯಿಂದಲೊಪ್ಪುತಿಪ್ಪ ತಿರುಮಲೇಶ ಮಾಧವ 14 ಒರಳ ನೆಕ್ಕಿ ವ್ರತವ ಕೆಟ್ಟ ಮರುಳನಂದವಾಯ್ತು ದೇಹ ಧರಿಸಿದುದಕೆ ನಿನ್ನ ಬಿಟ್ಟು ನರರ ಸ್ತುತಿಸಲು ಹರಕು ಚಿಂದಿ ಬಿಡಿಸಲಿಲ್ಲ ಕರಕು ಅನ್ನ ಹೋಗಲಿಲ್ಲ ಮಾಧವ 15 ಮೊರಡು ತುರುವ ಹಿಡಿದು ಕಟ್ಟಿ ಕರೆದು ಕಷ್ಟ ಪಟ್ಟು ಪಾಲ ನುರಗಗಳಿಗೆ ಎರೆದ ತೆರದಲಾಯ್ತು ನಿನ್ನನು ತರಣಿ ಮುಣಗ ದುಡಿದು ಬಡಿದು ಮಾಧವ 16 ಕೆರವ ತಿಂಬ ನಾಯಿಗಿನ್ನು ಸುರುಚಿಯನ್ನ ಸೊಗಯಿಸುವುದೆ ನರಕ ಭಾಗಿ ಪಾಮರಂಗೆ ನಿನ್ನ ನಾಮವು ಗರಳದಂತೆ ತೋರ್ಪುದೈಯ ಗುರುಗಳಿಲ್ಲ ಹಿರಿಯರಿಲ್ಲ ಮಾಧವ 17 ಕ್ರೂರ ಮಾನವರೊಳುದಾರ ಧೀರ ಶೂರರೆಂದು ಸಾರಿ ಬಾರಿ ಬಾರಿಗಿನ್ನು ಪೊಗಳಿ ಬೊಬ್ಬೆಯಿಟ್ಟರು ಬಾರದವರಿಗೆಂದು ಕರುಣ ಘೋರತನದ ದನುಜರವರು ಶೌರಿ ಮಾಧವ 18 ಹಾಳು ಹೊಲಕೆ ನೀರನೆತ್ತಿ ತೋಳು ಬೀಳು ಹೋದವೋಲು ಖೂಳ ಜನಕೆ ಪೇಳಿಕೊಳ್ಳುತಿಹನು ಬಾಳ್ವೆಯು ದಾಳಿ ಮಾಳ್ಪ ವಿಷಯಗಳನು ಹೂಳಿ ಜ್ಞಾನ ಭಕ್ತಿಯನ್ನು ಮಾಧವ 19 ಎಷ್ಟು ನೀಲಿಯನ್ನು ತೊಳೆಯೆ ಬಿಟ್ಟು ಹೋಗದವರ ಬಣ್ಣ ದುಷ್ಟ ಮಾನವರಿಗೆ ಕರುಣ ಪುಟ್ಟದೆಂದಿಗು ಕಷ್ಟಪಟ್ಟು ಸೇವಿಸುವರ ಹೊಟ್ಟೆಯನ್ನು ಹೊಡೆದು ತಮ್ಮ ಮಾಧವ 20 ನಿರುತ ನಿನ್ನ ಕಥೆಯ ಬಿಟ್ಟು ನರರ ಕಥೆಗಳನ್ನು ಕೇಳಿ ಗುರುಗಳನ್ನು ಹಿರಿಯರನ್ನು ಜರೆಯುತಿಪ್ಪರು ಪೊರೆದ ತಂದೆ ತಾಯ ಮಾತ ಪರಿಕಿಸದಲೆ ತೊರೆದು ತಮ್ಮ ಮಾಧವ 21 ಪಟ್ಟದರಸಿಯನ್ನು ತೊರೆದು ಬಿಟ್ಟು ಪರರ ಸತಿಯ ಕೂಡಿ ಕೊಟ್ಟ ಸಾಲವನ್ನು ಕೊಡದೆ ನುಂಗುತಿಪ್ಪರು ಕರವ ಭಾಷೆಯನ್ನು ಕೊಟ್ಟು ಮೋಸ ಮಾಡುತಿಹರು ಮಾಧವ 22 ಉಂಡ ಮನೆಗೆ ಬಗೆವರೆರಡನವರು ಭಂಡರು ಕಂಡು ನುತಿಸಿ ಬೇಡಿಕೊಂಡರು ದಂಡಿಸುವರ ಕಂಡು ನಡುಗಿ ಮಾಧವ 23 ಕೊಳ್ಳರೊಳಗೆ ಸ್ನೇಹ ಬಹಳ ಸುಳ್ಳರೊಳಗೆ ಸೋಲುತಿಹರು ಒಳ್ಳೆಯವರ ಕಂಡವರ ಟೊಳ್ಳು ಮಾಳ್ಪರು ಬಳ್ಳೆಸುರಿದು ಬಲ್ಲಿದವರಿಗಳ್ಳೆ ಬಿರಿಯಲುಣಿಸಿ ದಣಿಸಿ ಮಾಧವ 24 ಮಾಡಿದಂಥ ಕೃತಿಯು ಮರೆತು ಕೇಡು ಬಗೆದು ಕಾಡುತಿಹನು ನೋಡರೊಮ್ಮೆಗಾದರವರು ಬಡವರೆಂಬುದ ಜಾಡೆಯರಿತು ನಿನ್ನ ನಾಮ ಪಾಡಿ ಪೊಗಳುತಿಹರಿಗೆಂದು ಮಾಧವ 25 ಶಾಕವ್ರತದೊಳೆಲ್ಲ ಶಾಕಂಗಳನ್ನು ಬಿಡುವ ತೆರದಿ ಬೇಕು ಬೇಕು ಎಂಬ ಬಯಕೆ ಬಿಡಲು ಬಾರದು ಸಾಕೆನಿಸದೆ ರತಿಯ ಸುಖದೊಳೇಕ ಚಿತ್ತನಾಗುವಂತೆ ಮಾಧವ 26 ನೇಮ ನಿಷ್ಠೆಯೆಂದು ಪರರ ಧಾಮದನ್ನ ಬಿಡುವವೋಲು ಕಾಮಲೋಭ ಮೋಹಗಳನು ಬಿಡಲು ಬಾರದು ನಿತ್ಯ ಪರರ ಮಾಧವ 27 ಹೇಸಿಗೆಯನು ಕಂಡು ಕರದಿ ನಾಸಿಕವನು ಹಿಡಿಯುವಂತೆ ಹೇಸಿ ವಿಷಯ ವಾಸನೆಯನು ಬಿಡಲು ಸಲ್ಲದು ಘಾಸಿಬಟ್ಟು ಪರರ ಸೇವೆಯಾಸೆಬಟ್ಟು ಮಾಡುವಂತೆ ಮಾಧವ 28 ವಿತ್ತ ಪದವಿ ಕಂಡು ಹರುಷ ಕ್ಲೇಶಗಳಿಗೆ ಸಿಲುಕು- ತಿರುಳು ಹಗಲು ಬಿಡದೆ ಕುದಿದು ತೊಳಲುತಿರುವೆನು ದುರುಳ ವಿಷಯಗಳಿಗೆ ಮನವ ಮಾಧವ 29 ಹೇಸಿ ವಿಷಯ ಸುಖವ ನಾನು ಲೇಸೆನುತ್ತೆ ತಿಳಿದು ಮಮತೆ ಯಾಸೆಯಲ್ಲಿ ಕಟ್ಟುಬಿದ್ದು ಕ್ಲೇಶಪಡುತಿಹೆ ಪಾಶಬಿಡಿಸಿ ದಾಸ ದಾಸ ದಾಸನಾಗಿಸೆನ್ನ ದೋಷ ಮಾಧವ 30 ಆಗದೆನಗೆ ಅಬುಜನಾಭ ಭಾಗವತವ ಕೇಳೆ ಮನಸು ಬೈಗು ಬೆಳಗು ಪೋಗುತಿಹುದು ಸಾಗಿ ಬಾರದು ಭೋಗ ಭಾಗ್ಯಗಳನು ಬಯಸಿ ರಾಗ ಲೋಭಗಳಲಿ ನೆಲಸಿ ಮಾಧವ 31 ಬಂದ ಕಾರ್ಯವಾಗಲಿಲ್ಲ ಎಂದು ಬ್ರಹ್ಮ ದೇಹ ಧರಿಸಿ ಮುಂದ ನೊಂದನರಿಯೆ ಮಾಧವ 32 ದಾಸ ವೇಷವನ್ನು ಹಾಕಿ ದೇಶ ದೇಶವನ್ನು ತುಕ್ಕಿ ಮೋಸಮಾಡಿ ಸುಜನರನ್ನು ಘಾಸಿಗೊಳಿಸಿದೆ
--------------
ಲಕ್ಷ್ಮೀನಾರಯಣರಾಯರು